11 April 2022

ಸಸ್ಯ ತಪಸ್ವಿ ಗೋಪಾಲಕೃಷ್ಣ ಭಟ್


ಒಂದು ಪುಸ್ತಕ, ಒಂದು ನಮನಡಾ| ಕಾಕುಂಜೆ ಗೋಪಾಲಕೃಷ್ಣ ಭಟ್ಟರ (ಕೆ.ಜಿ ಭಟ್) ಸಹಜ ಹಸನ್ಮುಖವನ್ನು ಹೊತ್ತ, ಹೊಳಪುಳ್ಳ ಉತ್ತಮ ಕಾಗದದ ನೂರಾ ಹದಿನಾರು ಪುಟಗಳ, ಅಸಂಖ್ಯ ಚಿತ್ರಗಳ ಪುಸ್ತಕ - ಟ್ಯಾಕ್ಸೋನೊಮಿ ಭಟ್ಟರ ಯಾನ. ನಿಜ ‘ಎಲೆಗಳ ಹಿಂದೆ’ ಬೀಳುವ ಗೀಳಿನ ಭಟ್ಟರ ವ್ಯಕ್ತಿತ್ವ ಸಾಮಾನ್ಯ ಲೋಕಮುಖಕ್ಕೆ, ಲೋಕೋಕ್ತಿಯಂತೆ ಎಲೆಯ ಮರೆಯಲ್ಲೇ ಉಳಿದಿತ್ತು. ಆ ಕೊರತೆಯನ್ನು ಕಿರಿದರಲ್ಲಿ ನೀಗಿಸುವ ಪ್ರಾಮಾಣಿಕ ಪ್ರಯತ್ನ ಈ ಪುಸ್ತಕ. ಗೋಪಾಲಕೃಷ್ಣ ಭಟ್ಟರು ಸ್ವಪ್ರಚಾರ ಬಿಡಿ, ಅವಶ್ಯವಿದ್ದಲ್ಲಿ ಯುಕ್ತ ಸ್ವಸ್ಥಾಪನೆಯನ್ನೂ ದೋಷ ಎನ್ನುವಂತೆಯೇ ನಿರಾಕರಿಸಿದ ನಿರ್ಮೋಹಿ. ಪುಸ್ತಕದ ಮುನ್ನುಡಿಕಾರ, ಪ್ರಕಾಶಕ - ಎನ್ ರಾಮನಾಥ್, ಒತ್ತು ಕೊಟ್ಟು ಆಡಿದ ಮಾತುಗಳನ್ನೇ ಉದ್ಧರಿಸುವುದಿದ್ದರೆ, ಲೋಕಮಾನ್ಯ ವಿಜ್ಞಾನಿಗಳು ಬರೆದ ಮೆಚ್ಚುಗೆ ಪತ್ರಗಳು, ಸಂಸ್ಥೆಗಳು ಪ್ರದಾನಿಸಿದ ಪ್ರಶಸ್ತಿ - ಫಲಕಗಳನ್ನೆಲ್ಲ ‘ಆಕ್ಯುಪೇಶನಲ್ ಹೆಜಾರ್ಡ್’ ಎಂದು ರದ್ದಿಗೇ ಹಾಕುವಷ್ಟು ಸ್ಥಿತಪ್ರಜ್ಞರು ಮತ್ತು ಕೀರ್ತಿಪಥ ವಿಮುಖರು - ಗೋಪಾಲಕೃಷ್ಣ ಭಟ್!. ಆದರೆ ಅವರ ಒಡನಾಡಿದ ಹಲವು ಹಿರಿಕಿರಿಯರು ತಡವಾಗಿಯಾದರೂ ಹೀಗೊಂದು ಕೊರತೆಯನ್ನು ತುಂಬುವಂತೆ ಹೃದ್ಯವಾಗಿ ಬರೆದ ಲೇಖನಗಳ ಸಂಕಲನವೇ ಟ್ಯಾಕ್ಸೋನೊಮಿ ಭಟ್ಟರ ಯಾನ. ಈ ಪುಸ್ತಕದ ಮುದ್ರಿತ ಬೆಲೆಗೂ (ರೂ ೧೮೦) ಹೆಚ್ಚಿನ ಮೌಲ್ಯವನ್ನು ತಮ್ಮ ಪ್ರೀತಿ ಮತ್ತು ಗೌರವದ ನುಡಿಗಳಿಂದಲೇ ಬೆಸೆದವರಾದರೂ ಸಾಮಾನ್ಯರೇ....


ಇಲ್ಲೊಂದು ಉಪಕಥೆಯನ್ನು ಚುಟುಕದಲ್ಲಿ ಹೇಳಿಬಿಡುತ್ತೇನೆ. ಸುಮಾರು ಐವತ್ತು ವರ್ಷಗಳ ಹಿಂದೆ, ಮೈಸೂರು ವಿವಿ ನಿಲಯ ನನ್ನ ತಂದೆಗೆ (ಜಿಟಿನಾ) ಸಿವಿ ರಾಮನ್ನರನ್ನು ಸಂದರ್ಶಿಸಿ ಲೇಖನ ಮಾಡಿಕೊಡಲು ಕೇಳಿತ್ತು. ವಿಜ್ಞಾನ ವಿದ್ಯಾರ್ಥಿ (ಗಣಿತ ಅಧ್ಯಾಪಕ) ಮತ್ತು ಕನ್ನಡ ವಿಜ್ಞಾನ ಲೇಖಕ ಎಂಬ ಧೈರ್ಯದಲ್ಲೇ ತಂದೆ ಮೈಸೂರಿನಿಂದ ಬೆಂಗಳೂರಿಸಿ, ರಾಮನ್ನರನ್ನು ಎದುರಿಸಿದ್ದರು. ರಾಮನ್ ಇವರ ‘ಬಿದಿರು ಬಾವಲಿ’, ಶಿಫಾರಸು ಪತ್ರಾದಿಗಳನ್ನು ಬದಿಗೆ ತಳ್ಳಿ, ಕೇಳಿದ ಮೊದಲ ಪ್ರಶ್ನೆ, "ರಾಮನ್ ಪರಿಣಾಮದ ಬಗ್ಗೆ ನಿಮಗೇನು ಗೊತ್ತು?". ಶೇಕಡಾ ತೊಂಬತ್ತೊಂಬತ್ತು ಸಂದರ್ಶಕರಂತೇ ತಂದೆಯೂ ಅದನ್ನು ಸ್ವತಃ ರಾಮನ್ನರ ಬಾಯಿಯಲ್ಲೇ ಹೊರಡಿಸುವ ಭಂಡ ಧೈರ್ಯವನ್ನೇ ಪ್ರದರ್ಶಿಸಿದ್ದರು. ನಿಂತ ಮೆಟ್ಟಿಗೇ "GET OUT" ಕೇಳಿಸಿಕೊಂಡು ಮೈಸೂರಿಗೆ ಮರಳಿದ್ದರು. ವ್ಯಕ್ತಿಯ ನಿಜ ಪರಿಚಯ ಇರುವುದು ಆತನ ಪರಮೋಚ್ಛ ಸಾಧನೆಯಲ್ಲಿ! ಆತನ ಹುಟ್ಟು, ಊರು, ಜಾತಿ, ಭಾಷೆ ಮುಂತಾದ ಆಕಸ್ಮಿಕಗಳಲ್ಲಲ್ಲ, ಏನು ತಿಂದ, ಎಷ್ಟು ಪ್ರಮಾಣಪತ್ರಗಳನ್ನು ಗುಡ್ಡೆ ಹಾಕಿದ, ಎಷ್ಟು ಹಣ ಸವಲತ್ತುಗಳಲ್ಲಿ ಓಲಾಡಿದ ಎಂದಿತ್ಯಾದಿ ವಿವರಗಳಲ್ಲೂ ಅಲ್ಲ. ಇದನ್ನು ತಂದೆ ಅರ್ಥ ಮಾಡಿಕೊಂಡು, ಶ್ರಮ ಮತ್ತು ಛಲಗಳಲ್ಲಿ ಅದಕ್ಕೇ ಸಜ್ಜಾಗಿ ಮಾಡಿದ ಎರಡನೇ ಪ್ರಯತ್ನದಲ್ಲಿ ರಾಮನ್ನರನ್ನು ಪೂರ್ಣ ಜಯಿಸಿದ್ದರು! (ಓದಿ: ಸಿಂಹದ ಗವಿ ಹೊಕ್ಕ ಮೇಕೆ ) ಟ್ಯಾಕ್ಸೋನೊಮಿ ಭಟ್ಟರ ಕುರಿತ ಪುಸ್ತಕವನ್ನು ಸಂಪಾದಿಸಿದ ಅರವಿಂದ ಹೆಬ್ಬಾರರು ಸ್ವತ: ಸಸ್ಯಶಾಸ್ತ್ರಜ್ಞ ಮತ್ತು ಪರೋಕ್ಷವಾಗಿ ಭಟ್ಟರನ್ನು ತನ್ನ ಗುರುವೆಂದೇ ಸ್ವೀಕರಿಸಿ ಧಾರಾಳ ಒಡನಾಡಿದವರು. ಹಾಗಾಗಿ ನನ್ನ ತಂದೆ ಕಷ್ಟದಲ್ಲಿ ಕಲಿತ ಪಾಠವನ್ನು, ಹೆಬ್ಬಾರರು ಸಹಜವಾಗಿ ಇಲ್ಲಿ ದುಡಿಸಿದ್ದಾರೆ.


ಟ್ಯಾಕ್ಸಾನಮಿ ಅಂದರೆ ಸಸ್ಯವರ್ಗೀಕರಣ ಶಾಸ್ತ್ರ, ಇದು ಸುಲಭ ಶಬ್ದಾರ್ಥ. ನಿಜದಲ್ಲಿ ಹಿಡಿದ ಸಸ್ಯದ ಬೇರ ಕುಡಿಯಿಂದ ಹಸಿರಮುಡಿಯವರೆಗೆ, ಕೋಮಲ ಮೊಳಕೆಯಿಂದ ವಿಶ್ವಪ್ರಸಾರದವರೆಗೆ, ಅದರ ಮಣ್ಣು, ನೀರು, ಬೆಳಕು ಎಂದು ಎಲ್ಲವನ್ನೂ ಕರಾರುವಾಕ್ಕಾಗಿ ವಿಶ್ಲೇಷಿಸಿ ವಿವರಣೆ ಕೊಡುವ ಮಹಾದರ್ಶನ. ಸಂಪಾದಕ ಹೆಬ್ಬಾರರು ಪೂರ್ವಭಾವಿಯಾಗಿ ಭಟ್ಟರನ್ನು ಸುಮಾರು ಒಂದೂ ಕಾಲು ಗಂಟೆಗಳ ಕಾಲ ಕ್ಯಾಮರಾದೆದುರು ಔಪಚಾರಿಕ ಸಂದರ್ಶನ ನಡೆಸಿದ್ದರು. (ನೋಡಿ, ಕೇಳಿ: ಕಾಕುಂಜೆ ಗೋಪಾಲಕೃಷ್ಣ ಭಟ್ - ಒಂದು ಸಂದರ್ಶನ) ಮುಂದುವರಿದು, ಅದರ ಆಧಾರದಲ್ಲಿ ಪ್ರಸ್ತುತ ಪುಸ್ತಕದ ಮೊದಲ ಅರ್ಧದಲ್ಲಿ ‘ಗೋಪಾಲಕೃಷ್ಣ ಭಟ್ಟ’ರೆಂಬ ಮಹಾವೃಕ್ಷದ ‘ಟ್ಯಾಕ್ಸಾನಮಿ’ಯನ್ನೇ ಸುಮಾರು ನಲ್ವತ್ತು ಪುಟಗಳಲ್ಲಿ ಹಿಡಿದಿಟ್ಟಿದ್ದಾರೆ. ಭೌತಿಕವಾಗಿ ‘ಗೋಪಾಲಕೃಷ್ಣ’ರೆಂಬ ವ್ಯಕ್ತಿಯ ಹುಟ್ಟು, ಬಾಲ್ಯ, ವಿದ್ಯಾ, ವೃತ್ತಿ, ಕೌಟುಂಬಿಕ ವಿವರಗಳನ್ನು ಮಿಂಚಿಸಿ, ವೈಜ್ಞಾನಿಕ ಸಾಧನೆಯ ಭವ್ಯ ಮೂರ್ತಿಯನ್ನು ಹೆಚ್ಚು ವಿವರಗಳಲ್ಲಿ, ಸುಂದರವಾಗಿ ಬಿಂಬಿಸಿದ್ದಾರೆ. ಅದಕ್ಕೆ ಪೂರಕವಾದ ವಿವರಗಳನ್ನು ಪುಸ್ತಕದ ಉಳಿದ ಭಾಗದಲ್ಲಿ ಹಲವು ಮಹನೀಯರುಗಳ ಮಾತುಗಳಲ್ಲೂ ಸಂಕಲಿಸಿ ಉಪಕರಿಸಿದ್ದಾರೆ....


ಭಟ್ಟರ ಶೈಕ್ಷಣಿಕ ಮಹತ್ವದಿಂದ ಎದ್ದು ಕಾಣುವ ಎರಡು ಹೆಸರುಗಳಲ್ಲಿ ಒಬ್ಬರು - ಪ್ರೊ ಕೆ.ಎಂ. ಕಾವೇರಿಯಪ್ಪ, ಸದ್ಯ ಮಂಗಳೂರು ವಿವಿ ನಿಲಯದ ವಿಶ್ರಾಂತ ಕುಲಪತಿ. ಭಟ್ಟರು ಕಾಲೇಜು ದಿನಗಳಲ್ಲೇ ಸಸ್ಯ ಪಾಂಡಿತ್ಯದಲ್ಲಿ ಬಹಳ ಮುಂದಿದ್ದರು. ಹಾಗೇ ಸ್ನಾತಕೋತ್ತರ ಪದವೀಧರಿಸಿದ್ದೂ ಆಯ್ತು. ಆದರೆ ಸನ್ನಿವೇಶಗಳ ಆಕಸ್ಮಿಕದಲ್ಲಿ ವಿವಿ ನಿಲಯಗಳ ನಿಯಮಾನುಸಾರದ ‘ಸಂಶೋಧನೆ’ ಕೈಗೆತ್ತಿಕೊಳ್ಳುವಲ್ಲಿ ತುಸು ವಿಳಂಬಿಸಿದ್ದರು. ಮುಂದೆ ಅದನ್ನೂ ಗಳಿಸಿದ ಕಾಲದಲ್ಲಿ, ಭಟ್ಟರ ಪಾಂಡಿತ್ಯದ ಬಗ್ಗೆ ಪೂರ್ಣ ಅರಿವಿದ್ದ ಕುಲಪತಿ ಕಾವೇರಿಯಪ್ಪನವರು, ಅದೇ ಮೊದಲೆನ್ನುವಂತೆ, ಪೂರ್ಣಪ್ರಜ್ಞ ಪದವೀ ಕಾಲೇಜಿಗೇ ಸಂಶೋಧನಾ ವಿಭಾಗವನ್ನು ಮಂಜೂರು ಮಾಡಿದ್ದಲ್ಲದೇ, ಭಟ್ಟರಿಗೆ ಮಾರ್ಗದರ್ಶಿಯ ಅರ್ಹತೆಯನ್ನು ಪ್ರದಾನಿಸಿದ್ದರು. ಇದನ್ನವರೇ ಭಟ್ಟರ ಮೇಲಿನ ಗೌರವದೊಡನೇ ಪ್ರಸ್ತುತ ಪುಸ್ತಕದಲ್ಲಿ ಸ್ಮರಿಸಿದ್ದಾರೆ. ಮತ್ತೊಬ್ಬರು, ಮೈಸೂರು ವಿವಿ ನಿಲಯದ ಪ್ರೊ ಸಿ.ಆರ್ ನಾಗೇಂದ್ರನ್. ಇವರು ವಿದ್ಯಾರ್ಥಿ ದೆಸೆಯಲ್ಲಿ ಭಟ್ಟರ ಸಹಪಾಠಿ ಮಿತ್ರ. ಆದರೆ ಮೊದಲೇ ಹೇಳಿದಂತೆ, ಭಟ್ಟರು ವಿಳಂಬಿತ ಸಂಶೋಧನಾ ವಿದ್ಯಾರ್ಥಿಯಾದ ಕಾಲಕ್ಕೆ, ಸ್ಥಾನೋನ್ನತಿ ಪಡೆದಿದ್ದ ನಾಗೇಂದ್ರನ್ ಅವರೇ ಸಂಕೋಚದಲ್ಲೇ ಮಾರ್ಗದರ್ಶಿಯಾಗುವಂತಾಗಿತ್ತು. ಉಳಿದಂತೆ ಪ್ರೊ ಎಂ. ಸುಧಾಕರ ರಾವ್, ಪ್ರೊ ಎನ್.ಎ. ಮಧ್ಯಸ್ಥ, ಪ್ರೊ ಕೆ.ಆರ್ ಚಂದ್ರಶೇಖರ್, ಪ್ರೊ ಪಿ.ಕೆ ರಾಜಗೋಪಾಲ್, ಪ್ರೊ ಬಿ.ಎಂ ಸೋಮಯಾಜಿ, ಪ್ರೊ ಲೀಲಾ ಉಪಾಧ್ಯಾಯ, ಪ್ರೊ ಆರ್ ಪರಿಮಳ, ಡಾ ಗುರುರಾಜ ಕಳ್ಳೀಹಾಳ, ಪ್ರೊ ಅನಂತಪದ್ಮನಾಭ ರಾವ್, ಪ್ರೊ ದೇವೀಪ್ರಸಾದ್ ಕೆ ಎನ್, ಮತ್ತು ಪ್ರೊ ಕೆ ಸದಾಶಿವ ರಾವ್ ಮೊದಲಾದವರು ತಮ್ಮ ಪ್ರೀತಿ, ಗೌರವಗಳ ನುಡಿ ಕುಸುಮದೊಡನೆ ಮೂರ್ತಿಮತ್ತ ವಿಜ್ಞಾನಿ ಗೋಪಾಲಕೃಷ್ಣ ಭಟ್ಟರನ್ನು ಶೃಂಗರಿಸಿದ್ದಾರೆ. ಇವರೆಲ್ಲರ ಕಿರು ಬರಹಗಳು ನಿಸ್ಸಂದೇಹವಾಗಿ ಸಂಕಲನದ ತೂಕ ಹೆಚ್ಚಿಸಿವೆ. ಅಲ್ಲಿ ಮೆರೆಯುವ ಏಕ ಘನಶ್ರುತಿ ಮೆಚ್ಚುಗೆ ಮಾತ್ರ. ಅಂಥ ಬರವಣಿಗೆಗಳಲ್ಲಿ ಅನಿವಾರ್ಯವಾಗಿ ಮರುಕಳಿಸಬಹುದಾದ ವಿಷಯಗಳನ್ನು ಸಂಪಾದಕರ ಕತ್ತರಿ ತುಂಬ ಸಂಯಮದಿಂದ ನಿವಾರಿಸಿರುವುದರಿಂದ ಪುಸ್ತಕದ ಓದು ಎಲ್ಲೂ ‘ಭಜನೆ’ಯಾಗುವುದಿಲ್ಲ. ಅಂಥಾ ಗೋಪಾಲಕೃಷ್ಣ ಭಟ್ಟರು ನನ್ನ ಪರಿಚಯಕ್ಕೆಂದು ಬಂದರೂ ಎಂದಾಲೋಚಿಸುವಾಗ....


ಪೂರ್ಣಪ್ರಜ್ಞ ಕಾಲೇಜಿನ ಪ್ರಾಣಿಶಾಸ್ತ್ರಾಧ್ಯಾಪಕ - ಎನ್.ಎ ಮಧ್ಯಸ್ಥರು (ಗೋಪಾಲಕೃಷ್ಣ ಭಟ್ಟರ ಸಹೋದ್ಯೋಗಿ, ಆತ್ಮೀಯ ಗೆಳೆಯ) ಅಧ್ಯಾಪನದೊಡನೆ ಸಾಮಾನ್ಯರಲ್ಲಿ ವಿಜ್ಞಾನ ಪ್ರಸಾರದಲ್ಲಿ ಸಾಕಷ್ಟು ಕೆಲಸ ಮತ್ತು ಬರವಣಿಗೆ ಮಾಡಿ ಪ್ರಸಿದ್ಧರೇ ಇದ್ದರು. ೨೦೦೩ರ ಸುಮಾರಿಗೆ ಅವರ ಸಹಯೋಗದ ಇಂಡಿಯನ್ ನ್ಯಾಚುರಲಿಸ್ಟ್, ಉಡುಪಿ, ಎಂಬ ಸಂಸ್ಥೆ Flora of Udupi ಎಂದೊಂದು ಮಹಾಗ್ರಂಥ ಪ್ರಕಟಿಸಿದೆ ಎಂದು ಕೇಳಿದೆ. ರಾಯಗಾತ್ರದ ೯೧೩ ಪುಟ, ೨೮೮ ವೈಜ್ಞಾನಿಕ ರೇಖಾಚಿತ್ರ ಹಾಗೂ ೧೬೦ ಸಹಜ ವರ್ಣದ ಪಟಗಳು. ಮೊದಲಲ್ಲಿ ೧೪ ಪುಟಗಳ ವೈಜ್ಞಾನಿಕ ಪರಿವಿಡಿಯಲ್ಲದೆ, ಕೊನೆಯಲ್ಲಿ ೪೨ ಪುಟಗಳ ಸುಲಭ ಪ್ರವೇಶಿಕೆಯನ್ನೂ ಕಲ್ಪಿಸಿದ್ದಾರೆ. ಇಷ್ಟನ್ನೂ ಯಾವುದೇ ಕಾರ್ಯಕ್ಷೇತ್ರಕ್ಕೆ ಒಂದಾಗಿ ಹೊತ್ತು, ಪರಾಮರ್ಶಿಸುವುದಿದ್ದರೆ ತಾಳಿಕೊಳ್ಳುವ ಮತ್ತು ಬಾಳುವ ಯೋಗ್ಯತೆಗೆ ತಕ್ಕ ಕಾಗದ, ಸುಂದರ ಬಂಧವನ್ನೂ ಕೊಟ್ಟಿದ್ದಾರೆ. ಇವೆಲ್ಲದರ ಹಿಂದಿರುವ ಪ್ರತಿಭೆ, ಏಕ ವ್ಯಕ್ತಿಯಾಗಿ ವರ್ಷಗಟ್ಟಳೆ ಅಧ್ಯಯನ, ಅವಿರತ ಶ್ರಮ, ವೈಯಕ್ತಿಕ ಹಣಕಾಸು, ಮುಖ್ಯ ವೃತ್ತಿ ಹಾಗೂ ಬದುಕಿನ ಅನಿವಾರ್ಯಗಳನ್ನೆಲ್ಲಾ ಹೊಂದಾಣಿಸಿಕೊಂಡೇ ನಡೆಸಿದ್ದು ಎಣಿಸಿದರೆ, ಮಾರಾಟ ಬೆಲೆ ರೂ ಒಂದು ಸಾವಿರದ ಇನ್ನೂರು ಏನೂ ಅಲ್ಲ. ಆದರೆ ಪುಸ್ತಕವನ್ನು ಒಂದು ಮಾಲು ಎಂದೇ ಗ್ರಹಿಸುವ ವಿದ್ಯೋದ್ಧಿಮೆಯಲ್ಲಿ, ೧೨೦೦ ರೂಪಾಯಿ ದೊಡ್ಡ ಮೊತ್ತ ಎಂಬ ಅಳುಕಿನಲ್ಲಿ ನಾನು ಮೊದಲು ಕೇವಲ ಮೂರೋ ಐದೋ ಪ್ರತಿಗಳ ಬೇಡಿಕೆಯನ್ನಷ್ಟೇ ಮಧ್ಯಸ್ಥರಿಗೆ ರವಾನಿಸಿದ್ದೆ. ಅವರು "ಲೇಖಕರೇ ತಂದು ಕೊಡ್ತಾರೆ’ ಎಂದಷ್ಟೇ ತಿಳಿಸಿದ್ದರು. ಒಂದೆರಡು ದಿನಗಳಲ್ಲೇ ಬಗಲಿನಲ್ಲಿ, ಭಾರದ ಪುಸ್ತಕಗಳ ಕಟ್ಟು ಹೊತ್ತು, ಉಡುಪಿ ಬಸ್ಸಿಳಿದು ಬಂದು, ಯಾವ ತೋರಿಕೆಯೂ ಇಲ್ಲದೇ ನನಗೆ (ಬಹುಶಃ) ಪ್ರಥಮ ದರ್ಶನ ಕೊಟ್ಟಿದ್ದರು - ಕೆ. ಗೋಪಾಲ ಕೃಷ್ಣ ಭಟ್.


ಮುಂದೆ ನನ್ನ ಆರ್ಥಿಕ ಮಿತಿಗೆ ಹೊಂದಿದಂತೆಲ್ಲ ಉಡುಪಿ ಫ್ಲೋರಾ, ಮತ್ತೆ ಬಂದ ಪುಸ್ತಕ - ಪಾಮ್ಸ್‍, ಸಾಕಷ್ಟು ಪ್ರತಿಗಳನ್ನು ತರಿಸಿಕೊಂಡು ಮಾರಿಕೊಟ್ಟಿದ್ದೇನೆ. ಅವರ ಅನ್ಯ ಪ್ರಕಾಶನದ ಪ್ರಕಟಣೆಯನ್ನು ಡೆಹ್ರಾಡೂನಿನ ನೇರ ತರಿಸಿಯೂ ಮಾರಿದ್ದೇನೆ. ಇಂದು ನಾನು ಅಂಗಡಿ ಮುಚ್ಚಿ ಹತ್ತು ವರ್ಷಗಳ ಮೇಲೂ ಯಾರಾದರೂ ನನ್ನನ್ನು ಗುರುತಿಸಿ ವೃತ್ತಿ ಗೌರವ ಕೊಟ್ಟರೆ ನನ್ನ ಮನೋಪೀಠದಲ್ಲಿ ಸದಾ ಘನವಾಗಿ ಮೆರೆವ ಪ್ರಕಾಶಕ ಆಢ್ಯರಾದ ಡಿವಿಕೆ ಮೂರ್ತಿ, ಕೆವಿ ಸುಬ್ಬಣ್ಣ, ಎಂ. ಗೋವಿಂದರಾವ್, ಕೂಡಲಿ ಚಿದಂಬರಂ, ಶ್ರೀರಾಮ್ ಮೊದಲಾದ ಹೆಸರುಗಳಷ್ಟೇ ಆದ್ಯತೆಯಲ್ಲಿ ಕಾಕುಂಜೆ ಗೋಪಾಲಕೃಷ್ಣ ಭಟ್ ಹೆಸರಿಗೂ ಅರ್ಪಿಸುತ್ತಲೇ ಇರುತ್ತೇನೆ.


ಪ್ರಾಕೃತಿಕ ವೈಶಿಷ್ಟ್ಯಗಳನ್ನು ಸಾಮಾನ್ಯನ ನೆಲೆಯಲ್ಲಿ ಅನುಭವಿಸುವ ನನ್ನ ಮಿತಿಗೆ ಒಂದೆರಡು ‘ಗೋಪಾಲಕೃಷ್ಣ ಭಟ್ಟರ ಸಹಯಾನ’ ಯೋಗ ಒದಗಿದ್ದಿತ್ತು. ಆ ಲೆಕ್ಕದಲ್ಲಿ, ಅವರನ್ನು ಬಹುಶಃ ಎರಡು ಬಾರಿ, ಬಿಸಿಲೆಗೆ ಕರೆದೊಯ್ದಿದ್ದೆ. ಆ ಅವಸರದ ಓಟ, ಭೇಟಿಯಲ್ಲೂ ಭಟ್ಟರು ನಮ್ಮ ತಂಡದ ಮೇಲೆ ಬೀರಿದ ಪ್ರಭಾವ ಅಪಾರ. ಆಗ ಜತೆಗೊಟ್ಟಿದ್ದ ಕೆಲವು ತರುಣರು - ವಿದ್ಯಾ ಆಕಸ್ಮಿಕದಲ್ಲಿ ಐಟಿ ವೃತ್ತಿಗಳಲ್ಲಿದ್ದ ದೀಪಿಕಾ, ಸಂದೀಪ್, ವಿವೇಕ್ ಮುಂತಾದವರು ಅನಂತರದ ದಿನಗಳಲ್ಲಿ ನನ್ನಿಂದ ಭಟ್ಟರ ಪುಸ್ತಕ ಖರೀದಿಸಿದ್ದರು. ಒಂದೆರಡು ಬಾರಿ ಉಡುಪಿಗೇ ಹೋಗಿ ಭಟ್ಟರಿಗೇ ತಗುಲಿಕೊಂಡದ್ದೂ ಇತ್ತು. ಬಹುತೇಕ ವಿಜ್ಞಾನಿಗಳು ಜನಸ್ನೇಹಿಗಳಲ್ಲ ಅಥವಾ ಆಗುವುದು ಸಾಧ್ಯವಾಗುವುದಿಲ್ಲ. ವಿಜ್ಞಾನಿಗಳು ಆ ಕೊರತೆಯನ್ನು ಮೀರಿ, ಸಾರ್ವಜನಿಕರಿಗೆ ಪ್ರೇರಣೆ ಕೊಡುವ ದೃಷ್ಟಿಯಲ್ಲಿ ಸ್ವಲ್ಪವಾದರೂ ಜನಪ್ರಿಯ ಮಾಧ್ಯಮಗಳಿಗೆ ಇಳಿಯಬೇಕು ಎಂದೇ ನಂಬಿದವನು ನಾನು. ಬಹುಶಃ ನನ್ನೀ ಮಾತನ್ನು ಒಪ್ಪಿಯೇ ಉಲ್ಲಾಸ ಕಾರಂತ್ ತಮ್ಮ ಹುಲಿ ಅನುಭವಗಳ ಪ್ರಥಮ ಜನಪ್ರಿಯ ಕನ್ನಡ ಪುಸ್ತಕ - ಕಾಡು ಪ್ರಾಣಿಗಳ ಜಾಡಿನಲ್ಲಿ, ಬರೆದು ನನಗೆ ಪ್ರಕಟಿಸುವ ಭಾಗ್ಯ ಕೊಟ್ಟರು. ಹೀಗೇ ನನ್ನ ಸಣ್ಣ ಕೆಣಕು ಮತ್ತು ಯುಕ್ತ ಪ್ರಕಾಶಕರ ಸೂಚನೆಯಿಂದಲೇ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ನಿಜ ರೂವಾರಿ ಕೆ.ಎಂ ಚಿಣ್ಣಪ್ಪನವರ ಆತ್ಮಕಥಾನಕ ಅನುಭವಗಳು - ಕಾಡಿನೊಳಗೊಂದು ಜೀವ, ಕೂಡಾ ಬೆಳಕು ಕಂಡಿತು. (ಚಿಣ್ಣಪ್ಪನವರನ್ನು ದೀರ್ಘ ಸಂದರ್ಶನಗಳಿಗೆ ಈಡು ಮಾಡಿ, ಪಳಗಿದ ಲೇಖನಿಯಲ್ಲಿ ಬಂಧಿಸಿದವರು - ಟಿ.ಎಸ್. ಗೋಪಾಲ್. ಅದರ ಮೊದಲ ಆವೃತ್ತಿಯನ್ನು ಪ್ರಕಟಿಸಿದ್ದು - ಪೂರ್ಣಚಂದ್ರ ತೇಜಸ್ವಿ ಮತ್ತು ಶ್ರೀರಾಮರ ಪುಸ್ತಕ ಪ್ರಕಾಶನ, ಮೈಸೂರು) ಇದೇ ಮಾದರಿಯಲ್ಲಿ "ಕನಿಷ್ಠ ನನಗಾದರೂ ಬರೆದು ಕೊಡಿ, ಜಾಲತಾಣದಲ್ಲಿ ಹಾಕುತ್ತೇನೆ" ಎಂದು ಗೋಪಾಲ ಕೃಷ್ಣ ಭಟ್ಟರನ್ನು ನಾನು ಕೇಳಿಕೊಂಡದ್ದಿತ್ತು.

ಭಟ್ಟರಿಗೆ ಸಮೂಹ ಮಾಧ್ಯಮಗಳಿರಲಿ (ಮುದ್ರಣ ಹಾಗೂ ವಿದ್ಯುನ್ಮಾನ), ಜನಪ್ರಿಯತೆಯ ಕುರಿತೇ ಆಸಕ್ತಿ ಇರಲಿಲ್ಲ. ಅವರ ಅನ್ವೇಷಣಾ ಪ್ರವಾಸ ಕಥನ, ಸಸ್ಯಗಳದ್ದೇ ಸಾಮಾಜಿಕ ಅನ್ವಯದ ನೋಟಗಳು (ಬೀಜಿಯೆಲ್ ಸ್ವಾಮಿಯವರಂತೆ)... ಇತ್ಯಾದಿ ಕೇಳಿದಾಗೆಲ್ಲ ಅವರು ಬೀರುತ್ತಿದ್ದದ್ದು ಮುಗ್ಧ ನಗು ಮಾತ್ರ. ಪಾಂಡಿತ್ಯವನ್ನು ಎಂದೂ ನಡೆನುಡಿಗಳಲ್ಲಿ ಮೆರೆಸದ ವಿನಯಮೂರ್ತಿಗೆ ಇದದ್ದು ಒಂದೇ ಜಪ - ಸಸ್ಯ ವರ್ಗೀಕರಣ. ಅದರಲ್ಲಿ ಅವರದು ಅರ್ಜುನ ನಿಷ್ಠೆ! ಮಾರ್ಗಾನುಸಂಧಾನದಲ್ಲಿ ಸುತ್ತುವರಿದ ನೂರೈದು ಮಂದಿ, ಬಯಲ ಅಂಚಿನ ಮರ, ಮರದ ಕೊಂಬೆ, ಕೊಂಬೆಯ ಮೇಲಿನ ಹಕ್ಕಿ ಒಂದೂ ಕಾಣದು. ಭಟ್ಟರಿಗೆ ಆ ‘ಹಕ್ಕಿಯ ಕಣ್ಣ ಮಣಿ’ - ಸಸ್ಯವರ್ಗೀಕರಣ ಶಾಸ್ತ್ರ, ಒಂದೇ ಲಕ್ಷ್ಯ. ನನ್ನ ಮಾತಿಗೆ ಪೂರಕವಾಗಿ....

ಭಟ್ಟರೊಡನೆ ನಮ್ಮ ಬಿಸಿಲೆಯ ಅನುಭವವನ್ನು ನಾನು ಅಂದೇ ಸಂಗ್ರಹಿಸಿ ಪ್ರಕಟಿಸಿದ್ದ ಲೇಖನ - ಡಾ| ಕಾಕುಂಜೆ ಗೋಪಾಲಕೃಷ್ಣ ಭಟ್ (ಅಡ್ಡಹೊಳೆ ಆಸುಪಾಸು - ೨)’ ಅವಶ್ಯ ಓದಿ. ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಗೆಳೆಯ - ಕೆ. ಮಹಾಲಿಂಗ ಭಟ್ಟರೂ ನನ್ನಂತೇ ಗೋಪಾಲಕೃಷ್ಣ ಭಟ್ಟರ ಸಸ್ಯ ನಿಷ್ಠೆ ಮತ್ತು ಜ್ಞಾನಕ್ಕೆ ಮಾರು ಹೋಗಿದ್ದರು. ಹಾಗೆ ಅವರು ವಿಜಯವಾಣಿ ಪತ್ರಿಕೆಗೆ ಭಟ್ಟರನ್ನು ಸಂದರ್ಶಿಸಿ, ಸಹಾಯ ಪಡೆದು ಬರೆದು, ಪ್ರಕಟಿಸಿದ ಲೇಖನವನ್ನೂ ನಾನು ಕೇಳಿ ಪಡೆದು, ನನ್ನ ಜಾಲತಾಣದಲ್ಲಿ ಪ್ರಕಟಿಸಿ, ಜಾಲತಾಣದ ಗೌರವ ಹೆಚ್ಚಿಸಿಕೊಂಡಿದ್ದೇನೆ. (ಓದಿ: ಮೂರು ತಿಂಗಳು ಬಾಳುವ ಹೂವಿನ ಗುಡ್ಡ) ಗೋಪಾಲಕೃಷ್ಣ ಭಟ್ಟರು ನಾಮಕಾವಸ್ಥೆ ಫೇಸ್ ಬುಕ್ ಖಾತೆಯನ್ನು ತೆರೆದಿದ್ದರು. ಅದರಲ್ಲಿ ಅವರು ಸ್ವಾನುಭವವನ್ನೇನೂ ಬರೆಯಲಿಲ್ಲ. ಅಪರೂಪಕ್ಕೆ ನನ್ನ ಕೀಟಲೆಗೋ ಎಂಬಂತೆ ಅದರಲ್ಲೂ ನನ್ನ ಜಾಲತಾಣದಲ್ಲೂ ಕೆಲವು ಪ್ರತಿಕ್ರಿಯೆಗಳನ್ನು ಬರೆದದ್ದಿದೆ, ಅಷ್ಟೆ.

‘ಟ್ಯಾಕ್ಸೋನೊಮಿ ಭಟ್ಟರ ಯಾನ’ದಲ್ಲಿ ಎಲ್ಲರೂ ಹೇಳಿದಂತೆ, ಯಾರೂ ಎಲ್ಲೂ ಸಸ್ಯಪ್ರಪಂಚದೊಳಗಿನ ಸವಾಲುಗಳನ್ನು ಭಟ್ಟರಿಗೆ ಒಡ್ಡಿ ಸಮಾಧಾನವನ್ನು ಪಡೆಯಬಹುದಿತ್ತು. ಅಲ್ಲದಿದ್ದರೂ ಸಸ್ಯಲೋಕದ ದಾಖಲೀಕರಣದ ದೊಡ್ಡ ಕೊರತೆಯನ್ನು ತುಂಬುವಲ್ಲಿ ಭಟ್ಟರ ಪ್ರೀತಿಪೂರ್ಣ ತೊಡಗುವಿಕೆ ನಿರಂತರವಾಗಿ ನಡೆದೇ ಇತ್ತು. ಅವರ ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಲೇಖನಗಳು, ಯೋಜನೆಗಳು ಮುಂತಾದ ವಿವರಗಳನ್ನು ಪುಸ್ತಕದ ಅನುಬಂಧದಲ್ಲಿ ನೋಡಿ ಬೆರಗಾಗುವ ಅವಕಾಶವನ್ನು ನಿಮಗೇ ಬಿಡುತ್ತೇನೆ. ಅವರ ಪ್ರಕಟವಾದ ಉದ್ಗ್ರಂಥಗಳನ್ನಷ್ಟೇ ಪಟ್ಟಿ ಮಾಡುವುದಿದ್ದರೆ - (ಬಹುತೇಕ ಅವಿಭಜಿತ ದಕ ಜಿಲ್ಲೆಗೆ ಸಂಬಂಧಿಸಿದವು) ೧. Sedges and Grasses (ನೊಜೆ, ಹುಲ್ಲುಗಳು, ೨೦೦೧, ನಾಗೇಂದ್ರನ್ ಅವರ ಜತೆ), ೨. Plant resources of W.G (ಪ.ಘಟ್ಟದ ಸಸ್ಯ ಸಂಪನ್ಮೂಲಗಳು ೨೦೦೨, ಬಿವಿ ಶೆಟ್ಟಿ ಮತ್ತು ಕಾವೇರಿಯಪ್ಪರ ಜತೆ), ೩. ಈ ಮೊದಲೇ ಹೇಳಿದ, Flora of Udupi (ಉಡುಪಿ ಸಸ್ಯಗಳು ೨೦೦೩), ೪. Palms of Karnataka (ಕರ್ನಾಟಕದ ತಾಳೆ ವೈವಿಧ್ಯ ೨೦೧೧), ೫. Flora of South kanara & Udupi (ಅವಿಭಜಿತ ದಕದ ಸಸ್ಯಗಳು ೨೦೧೪), Pteridophyts of Karnataka (ಕರ್ನಾಟಕದ ಜರೀ ಗಿಡಗಳು ೨೦೧೬, ರಾಜಗೋಪಾಲ್ ಅವರ ಜತೆ).

ಅಶೋಕವನ, ಕಪ್ಪೆ ಶಿಬಿರಗಳ ವಿವರಗಳನ್ನು ನಾನೇ ಕೆಲವು ಬಾರಿ ಭಟ್ಟರ ಗಮನಕ್ಕೆ ತಂದದ್ದಿತ್ತು. ಅವರಿಗೆ ಉತ್ಸಾಹ ಎಂದೂ ಕಡಿಮೆಯಾದದ್ದಿಲ್ಲ. ಆದರೆ ಬಿಡುವಿನ ಮತ್ತೆ ಈಚಿನ ಕೆಲವು ಕಾಲ ಅವರ ದೇಹಾರೋಗ್ಯದ ಸಮಸ್ಯೆಗಳು ಅವಕಾಶವನ್ನು ಕೊಡಲಿಲ್ಲ. ಮೊದಲೊಮ್ಮೆ ತನ್ನಿಂದಾಗದ್ದನ್ನು ಶಿಷ್ಯ ಬಳಗದ ತರುಣ - ಹರೀಶ್ ಭಟ್, ಸ್ವಂತ ಉಮೇದಿನಲ್ಲಿ ನಡೆಸಲಿದ್ದಾರೆ ಎಂದು ತಿಳಿದು ಸಂತೋಷಿಸಿದ್ದರು. ನಮ್ಮ ದುರದೃಷ್ಟಕ್ಕೆ ಹರೀಶ ಭಟ್ ಅಕಾಲ ಮರಣ ಕಂಡರು. ಅನ್ಯ ಶಿಷ್ಯವರ್ಗವಾದರೂ ಗೋಪಾಲಕೃಷ್ಣ ಭಟ್ಟರ ಅವಿರತ ಮಹಾಯಜ್ಞ ಶಾಲೆಯಲ್ಲಿ ಸುಳಿದಾಡಿದ ಬಲದಲ್ಲೋ ಸಮಿತ್ತು ಪೂರೈಸಿದ ಬಲದಲ್ಲೋ ಸಾರ್ವಜನಿಕ ಪ್ರೇರಕ ಆಖ್ಯಾಯಿಕೆಗಳ ಮಾಲೆ ಹರಿಸಿಯಾರು ಎಂದು ನಾನು ಕಾದೇ ಇದ್ದೆ. ಒಮ್ಮೆ ಮಧ್ಯಸ್ಥರು ಭಟ್ಟರನ್ನು ಸೇರಿಸಿಕೊಂಡು ಗೋವಾದ ಕ್ಯಾಸ್ಲ್ ರಾಕ್ ಕಗ್ಗಾಡಮೂಲೆಗೆ ಹೋದ ರಮ್ಯ ಪ್ರವಾಸ ಕಥನವನ್ನು ಚುಟುಕದಲ್ಲಿ ಬರೆದದ್ದು ಇಲ್ಲೇ ಪೇಸ್ ಬುಕ್ಕಿನಲ್ಲಿ ಓದಿದ್ದೆ. ಪ್ರಸ್ತುತ ಪುಸ್ತಕದಲ್ಲಿ ಅರವಿಂದರು ಕೆಲವು ಭಟ್ಟರ ರಸಪ್ರಸಂಗಗಳ ಸೂಚನೆಯನ್ನಷ್ಟೇ ದಾಖಲಿಸಿದ್ದಾರೆ. ಉಳಿದಂತೆ ಖಾಲಿ ಖಾಲಿ ಎನ್ನುತ್ತಿರುವಂತೇ...


‘ಟ್ಯಾಕ್ಸೋನಮಿ ಭಟ್ಟರ ಯಾನ’ದ ಲೋಕಾರ್ಪಣ ಸುದ್ದಿ ಸಿಕ್ಕಾಗ ನನಗೆ ಇನ್ನಿಲ್ಲದ ಸಂತೋಷವಾಗಿತ್ತು. ನಿಂತ ಮೆಟ್ಟಿಗೇ ಹೋಗುವುದೆಂದೂ ನಿರ್ಧರಿಸಿದ್ದೆ. ಆದರೆ ಆಮಂತ್ರಣದಲ್ಲಿ ಎರಡೆರಡು ಅಧ್ಯಾತ್ಮಿಕ ‘ಗುರು’ಗಳ ಹೆಸರು ಕಂಡದ್ದೇ ಮನಸ್ಸು ಹಿಂಜರಿಯಿತು. ನೇರ ಭಟ್ಟರಿಗೇ ಕರೆ ಮಾಡಿ, ಬರಲಾಗದುದಕ್ಕೆ ಕ್ಷಮೆ ಕೇಳಿ, ಪುಸ್ತಕವನ್ನು ಮಂಗಳೂರ ಮಳಿಗೆಯಿಂದ ಕೊಳ್ಳುವೆ ಎಂದಿದ್ದೆ. ಭಟ್ಟರು ಸಹಜ ಪ್ರೀತಿಯಿಂದ "ಇಲ್ಲ, ನಿಮ್ಮ ಮನೆ ವಿಳಾಸ ಕೊಡಿ, ಗೌರವ ಪ್ರತಿ ಕಳಿಸುತ್ತೇನೆ" ಎಂದರೂ ಸವಿನಯ ನಿರಾಕರಿಸಿದ್ದೆ. ಲೋಕಾರ್ಪಣದ ಕಲಾಪ ಮುಗಿದ ಕಾಲಕ್ಕೆ, ನವಕರ್ನಾಟಕ ಪುಸ್ತಕ ಮಳಿಗೆಗೆ ಅರವಿಂದ ಹೆಬ್ಬಾರರ ಸಂಪರ್ಕ ಮಾಡಿಸಿ, ನನಗೊಂದು ಪ್ರತಿ ಕೊಂಡೆ, ಓದಿ ಸಂತೋಷಪಟ್ಟೆ. ಪುಸ್ತಕ ನಿಜಕ್ಕೂ ಒಳ್ಳೆಯದೇ ಆಗಿದ್ದರೂ ನನ್ನ ನಿರೀಕ್ಷೆಯ ದೋಷದಿಂದ, ತುಸು ಬೇಸರವನ್ನು ಮೂಡಿಸಿತ್ತು. ಭಟ್ಟರಿಗೆ ಎಷ್ಟು ಹೊಗಳಿಕೆ ಸಂದರೂ ಕಡಿಮೆಯೇ. ಆದರೆ ಅವರ ತಾಂತ್ರಿಕ ಸಾಧನೆಗಳ ದಾರಿಯ ವಿವರಗನ್ನು ಇದು ಹಿಡಿಯಲಿಲ್ಲವಲ್ಲಾ ಎನ್ನುವುದು ನನ್ನ ಕೊರಗು. ಇನ್ನಾದರೂ ಭಟ್ಟರ ಅಸಂಖ್ಯ ಶಿಷ್ಯವರ್ಗ ನೆನಪಿನಿಂದ ಮತ್ತೆ ಭಟ್ಟರನ್ನು ಪೀಡಿಸಿಯಾದರೂ ನನ್ನಂಥ ಬಹುದೊಡ್ಡ ಸಾಮಾನ್ಯರ ನಿರೀಕ್ಷೆಯನ್ನು ಪೂರೈಸುವಂತೆ ಮಾಡಿಸಿಕೊಳ್ಳಬೇಕೆಂದು ಯೋಚಿಸುವುದರಲ್ಲೇ ದಿನಗಳು ಕಳೆದುಹೋದವು. ಮೊನ್ನೆ (೨೦೨೨) ಏಪ್ರಿಲ್ ಏಳರ ಮುಂಜಾನೆ ಎನ್.ಎ. ಮಧ್ಯಸ್ಥರ ಫೇಸ್ ಬುಕ್ ಗಾಢ ವಿಷಾದದೊಡನೆ ಘೋಷಿಸಿತು - ಡಾ| ಕಾಕುಂಜೆ ಗೋಪಾಲಕೃಷ್ಣ ಭಟ್ಟರು ಇನ್ನಿಲ್ಲ.

13 comments:

 1. ಗೋಪಾಲಕೃಷ್ಣ ಬಾಳಿಗರು ಮೊನ್ನೆ ಎಫ್ಬಿಯಲ್ಲಿ ಇವರ ನಿಧನದ ಬಗ್ಗೆ ಬರೆದಾಗ, ನೀವಿನ್ನೂ ಯಾಕೋ ಬರೆದಿಲ್ಲ ಎಂದುಕೊಳ್ಳುತ್ತಿದ್ದೆ.ಇವರ ಹೆಸರನ್ನು ದ.ಕ.ದ ಒಂದು ಸಸ್ಯ ಪ್ರಭೇದಕ್ಕೆ ಇಟ್ಟ ಸುದ್ದಿಯನ್ನು ತುಂಬಾ ಹಿಂದೆ ಓದಿದಾಗ ತುಂಬಾ ಹೆಮ್ಮೆ ಆಗಿತ್ತು.ಅತ್ರಿ ಹೋಗಿ ನವ ಕರ್ನಾಟಕ ಬಂದ ಕೆಲವು ದಿನಗಳಲ್ಲೇ ನಾನು ನಿಮ್ಮ (��) ಅಂಗಡಿಗೆ ಭೇಟಿ ಇತ್ತಿದ್ದೆ.ಕ್ಯಾಷ್ ಕೌಂಟರಿನ ಪಕ್ಕದಲ್ಲಿ ಟ್ಟಿದ್ದ ಪುಸ್ತಕಗಳ ಮೇಲೆ ಕಣ್ಣಾಡಿಸುತ್ತಿದ್ದಾಗ ಅವರು ಬರೆದ ದೊಡ್ಡ ಪುಸ್ತಕ ಕಣ್ಣಿಗೆ ಬಿತ್ತು.ಸಾವಿರದ ಮೇಲೆ ಬೆಲೆ ಇತ್ತು.ಅದೇನೂ ನನಗೆ ದೊಡ್ಡ ಮೊತ್ತ ವಾಗಿರಲಿಲ್ಲ.ಮನಸ್ಸು ಡೋಲಾಯಮಾನವಾಗಿ ನಾನು ಆಗ ಪುಸ್ತಕವನ್ನು ಖರೀದಿಸಲಿಲ್ಲ.ಒಳ ಪುಟಗಳಲ್ಲಿ ಕಣ್ಣಾಡಿಸಿದ್ದಾಗ ಅದರಲ್ಲಿರುವ ಅಗಾಧ ಮಾಹಿತಿ ಸಂಶೋಧನಾ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯೋಗವಾದೀತು ಎಂದು ನನಗನ್ನಿಸಿತ್ತು.ಯಾವುದಾದರೂ ಶಾಲಾ ಕಾಲೇಜಿನವರು ಖರೀದಿಸಿದರೂ ಹೆಚ್ಚು ವಿದ್ಯಾರ್ಥಿಗಳಿಗೆ ಉಪಯೋಗವಾದೀತು ಎಂದೇ ನನಗನ್ನಿಸಿದ್ದು.ಜೊತೆಗೆ ಗಿಡ ಮರ ಎಂದು ಸುತ್ತುವ ನನ್ನ ತಿರುಗಾಟವೂ ಕಡಿಮೆಯಾಗಿದ್ದೂ ಮತ್ತೊಂದು ಕಾರಣ.ಬಹುಶಃ ಆ ಪುಸ್ತಕವನ್ನು ನನ್ನ ಹಾಗೇ ಕಣ್ಣಾಡಿಸಿ ಹೋದವರೇ ಜಾಸ್ತಿ ಇದ್ದರೇನೋ;ಅದು ನೋಡಲು ಹಳತಾಗಿ ಧೂಳು ಮೆತ್ತಿಕೊಂಡು ಕೂತಿತ್ತು.ಅಗಲಿದ ಚೇತನಕ್ಕೆ ನನ್ನ ನಮನಗಳು��.

  ReplyDelete
 2. "ವಿಜ್ಞಾನಿಗಳು ಸಾರ್ವಜನಿಕರಿಗೆ ಪ್ರೇರಣೆ ಕೊಡುವ ದೃಷ್ಟಿಯಲ್ಲಿ ಸ್ವಲ್ಪವಾದರೂ ಜನಪ್ರಿಯ ಮಾಧ್ಯಮಗಳಿಗೆ ಇಳಿಯಬೇಕೆಂದು ನಂಬಿದವನು ನಾನು" ನಿಮ್ಮ ಮಾತು ಇಷ್ಟವಾಯಿತು. ಸಂಶೋಧಕರು, ಪಂಡಿತ ಪರಂಪರೆಯವರನ್ನು ಕೂಡಾ ಸೇರಿಸಬೇಕು. ಅಂತೆಯೇ ಸಾಹಿತ್ಯದ ಓದುಗರು (ಅಕಾಡೆಮಿಕ್ ಅಲ್ಲದ) ಕೂಡಾ ತಮ್ಮಷ್ಟಕ್ಕೇ ತಾವು....

  ReplyDelete
 3. ನನಗೆ ಅವರು ಕಾಲೇಜಿನಲ್ಲಿ ಕಲಿಸಿದ ಗುರುಗಳಾಗಿರಲಿಲ್ಲ. ಆದರೆ ಸಸ್ಯ ಪ್ರಭೇದಗಳನ್ನು ಗುರುತಿಸಲು ಅವರು ಅನುಸರಿಸುತ್ತಿದ್ದ ಕ್ರಮಗಳು ಶಾಸ್ತ್ರೀಯವಾಗಿ ಬಹಳಷ್ಟು ನಿಖರವಾಗಿ ಇದ್ದವು. ನಾನು ಮತ್ತು ಕೆ.ಕೆ ಸರ್ ಹೆಸರಿಸಿದ ಒಂದು ಸಸ್ಯವು Eriocaulon gopalakrishnanum ಎಂದು ಕರೆಯಲ್ಪಡುತ್ತದೆ..ಕಳೆದ ತಿಂಗಳು ಕರೆ ಮಾಡಿದಾಗ ಹಲವು ಹೊಸ ಬರವಣಿಗೆಗಳಲ್ಲಿ ತೊಡಗಿಸಿಕೊಂಡಿದ್ದ ಭಟ್ ಸರ್ ಅಪರೂಪದ ಊರ ತರಕಾರಿ ಬೆಳೆಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡಿದ್ದರು. ಅಳೆದು ತೂಗಿ‌ ಮಾತನಾಡುತ್ತಿದ್ದ ಅವರ ವಿಷೇಶತೆಗಳು ಹಲವಾರಿವೆ. ಎಷ್ಟೇ ಕಿರಿಯ ವ್ಯಕ್ತಿ ಯಾದರೂ ಅವರಿಗೆ e-mail ಸಂದೇಶಗಳಲ್ಲಿ ಮತ್ತು ಅಥವಾ ಕಾಗದ ಪತ್ರಗಳಲ್ಲಿ ಬಹಳಷ್ಟು ಗೌರವ ಕೊಟ್ಟು ಸಸ್ಯ ಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು.
  ಪಶ್ಚಿಮ ಘಟ್ಟದ ಸಸ್ಯಗಳ ಬಗ್ಗೆ ಆಳವಾದ ಜ್ಞಾನ ಇದ್ದ KG Bhat Sir ಇನ್ನು ನಮಗೆ ಅವರ ಪುಸ್ತಕಗಳ ಮೂಲಕ ತಲುಪುತ್ತಾರೆ.

  ReplyDelete
 4. ನಾನು ಪಿಪಿಸಿಯ ವಿದ್ಯಾರ್ಥಿ ಆಗಿದ್ದಾಗ ಗಮನಿಸಿದ್ದು. ನಾವು ಕರೆಯುತ್ತ ಇದ್ದದ್ದು ಚಪ್ಪೆ ಭಟ್ರು ಅಂತ. ಅಷ್ಟು ಥಂಡಾ. ಅಲ್ಲಿಂದ ಹೊರ ಬಿದ್ದ ನಂತರವೇ ಗೊತ್ತಾದದ್ದು ಅವರ ಬೆಲೆ.

  ReplyDelete
 5. I know he was inspirational to many in the field.
  I had met him once, but couldn't go out in field with him.

  ReplyDelete
 6. ಕಾಕುಂಜೆ ಗೋಪಾಲಕೃಶ್ಣ ಭಟ್ಟರ ಕುರಿತ ಬರೆದ ಲೇಖನವನ್ನ ಓದುತ್ತಲೇ ಸಂದರ್ಶನವನ್ನೂ ನೋಡಿದ್ದಾಗಿತ್ತು. ೨೦೧೦ರ ಬಿಸಿಲೆಯ ಭೇಟಿಯನ್ನ ಮೆಲುಕು ಹಾಕಿದ್ದೂ ಆಗಿತ್ತು.
  ಲೇಖನದ ಕೊನೆಯಲ್ಲಿ ಭಟ್ಟರ ಅಗಲುವಿಕೆಯ ವಿವರ ತಿಳಿದು ಅತೀವ ಬೇಸರವಾಯಿತು.

  ReplyDelete
 7. Happy to read this Ashok, well done!.. he was truly a remarkable botanist we should be proud of him...

  ReplyDelete
 8. ನನಗೆ ಗುರುಸಮಾನರು. ಬಹು ಗೌರವಾನ್ವಿತ ಸಸ್ಯಶಾಸ್ತ್ರಜ್ನ; ಅಷ್ಟೇ ಘನತೆಯ ವ್ಯಕ್ತಿತ್ವ ಸಹ ಅವರದು...ಕಳೆದ ಸುಮಾರು ಮೂರು ದಶಕಗಳಲ್ಲಿ ಅವರ ಒಡನಾಟ ಮಿತವಾಗಿಯಾದರೂ ನನಗೆ ದೊರಕಿದ್ದು ನನ್ನ ಅದೃಷ್ಟ. ಅದಕ್ಕಾಗಿ ಸದಾ ಋಣಿ..... ಅವರ ಆತ್ಮಕ್ಕೆ ಸದ್ಗತಿ ದೊರಕಲಿ.

  ReplyDelete
 9. Karthick Bala and I were part of this fieldwork at Arasina Gundi falls in Nov 2011. Prof. KG Bhat joined us with his bag on the side. I was wondering all along the trekking path whether Prof. Bhat will make it or not to the waterfall looking at his slow pace while discussing plant species on the way and his age. No doubt, I was wrong.

  ReplyDelete
 10. ನಾನು ಉಜಿರೆ SDM ಲ್ಲಿ Bsc ಓದುತ್ತಿರುವಾಗ ಒಂದು ಸಲ ಬಾಟನಿ ಲೆಕ್ಚರ್ ಕೊಡಲು ಬಂದಿದ್ದರು. ನಮ್ಮ ಮೇಡಂ ಮೊದಲೇ ತಿಳಿಸಿದ್ದರು- ಸಸ್ಯಗಳ ಬಗ್ಗೆ ತುಂಬಾ ಜ್ನಾನ ಇರುವ ವ್ಯಕ್ತಿ ಆದರೆ ಅವರು ಮಾತನಾಡುವುದು ಕಡಿಮೆ, ನೀವು ಪ್ರಶ್ನೆ ಕೇಳಿದರೆ ಮಾತ್ರ ಉತ್ತರಿಸುತ್ತಾರೆ ಎಂದು. ಅವರ ನಿಜವಾದ ಬೆಲೆ ತಿಳಿದದ್ದು ಎಷ್ಟೋ ವರ್ಷಗಳ ನಂತರ.

  ReplyDelete
 11. ಅದ್ಭುತ ಪ್ರತಿಭೆಯೊಂದನ್ನು ಪರಿಚಯಿಸಿದ್ದೀರಿ.ಧನ್ಯವಾದ.

  ReplyDelete
 12. Palms... ಪುಸ್ತಕದ ಮುಖಪುಟದ ಮರ ಅರವತ್ತು ವರ್ಷಕ್ಕೆ ಒಮ್ಮೆ ಹೂ ಬಿಡುವುದು.ನಾವು ಊರಿಗೆ ಹೋಗಿದ್ದ ಒಂದು ವರ್ಷದಲ್ಲಿ ಅದು ಹೂ ಬಿಟ್ಟಿದ್ದು ಕಾಲು ಕಿಮೀ ದೂರದಿಂದ ಮನೆಯಂಗಳಕ್ಕೇ ಕಾಣುತ್ತಿತ್ತು.ದುರದೃಷ್ಟವೆಂದರೆ ಆ ಬಾರಿಯೇ ನಾವು ಕ್ಯಾಮೆರಾ ತೆಗೆದುಕೊಂಡು ಹೋಗದೆ ಕೈಬೀಸಿಕೊಂಡು ಹೋಗಿದ್ದೆವು.ಅದರ ಬಗ್ಗೆ ಇಂದಿಗೂ ಪಶ್ಚಾತ್ತಾಪ ಇದೆ.ಈ ಮರದ ಕಾಂಡದ ಒಳಗೆ ದೊರೆಯುವ ಪುಡಿಯಿಂದ ಮಾಡುವ ಸಂಡಿಗೆ ಬಾಯಲ್ಲಿಟ್ಟರೆ ಕರಗಿ ಹೋಗುವಷ್ಟು ಮೃದು,ರುಚಿ.ವರ್ಷಗಟ್ಟಲೆ ಸಂಗ್ರಹಿಸಿ ಇಟ್ಟಿದ್ದರೂ ಪುಡಿ ಹಾಳಾಗದು.

  ReplyDelete
 13. ನಾನು ಕಾಡಲ್ಲಿಯೇ ಹುಟ್ಟಿ ಬೆಳೆದವನು, ಆದರೆ ಕಾಡಿನ ಮರಗಿಡಗಳ ಒಂದೆರಡು ಹೆಸರು ಬಿಟ್ಟರೆ ಮತ್ತೇನೂ ಗೊತ್ತಿಲ್ಲ. ಡಾ. ಕಾಕುಂಜೆ ಗೋಪಾಲಕೃಷ್ಣ ಭಟ್ಟರಂಥ ಮೇಧಾವಿಗಳ ಪರಿಚಯ ಇಲ್ಲದೇ ಹೋಯಿತು. ನಷ್ಟ ನನಗೆ. ಪರಿಚಯಿಸಿದ ನಿಮಗೆ ಕೃತಜ್ಙತೆಗಳು

  ReplyDelete