10 October 2020

ಅಮರಶಿಲ್ಪ, ಅಮೃತಶಿಲೆ ಮತ್ತು ಬಾಂಧವ್ಯ

(ಭಾರತ ಅ-ಪೂರ್ವ ಕರಾವಳಿಯೋಟ - ೧೦) ಶಿವರಾಮ ಕಾರಂತರು ಸಾರ್ವಜನಿಕಕ್ಕೆ ಹತ್ತೆಂಟು ಮುಖಗಳಿಂದ ವಿಖ್ಯಾತರಿದ್ದಷ್ಟೇ ಗಾಢವಾಗಿ ನಮಗೆ ಕುಟುಂಬದ ಸ್ನೇಹಿತರೂ ಹೌದು. ಅವರು ೧೯೯೫ರ ಸುಮಾರಿಗೆ ಯಾರಿಂದಲೋ ನನ್ನ ಪ್ರಥಮ ಭಾರತ ಯಾನದ ಸುದ್ದಿಯನ್ನು ಕೇಳಿದರಂತೆ. ಮುಂದುವರಿದು, ನಾನು ಎರಡನೇದಕ್ಕೆ ಸಜ್ಜುಗೊಳ್ಳುತ್ತಿರುವುದು ತಿಳಿದ ಕೂಡಲೇ ಅವರ ಸ್ವಭಾವಕ್ಕೆ ಭೂಷಣದಂತೇ ನನಗೆ ಖಡಕ್ ಸಂದೇಶ ಕಳಿಸಿದ್ದರು "...ಖಜುರಾಹೋ ಅವಶ್ಯ ನೋಡಿ..."! ಯೋಜನಾ ಹಂತದಲ್ಲಿ

ಪೂರ್ವ ಕರಾವಳಿಯಲ್ಲೇ ಹೆಚ್ಚು ತೊಡಗಬೇಕಿದ್ದ ನನ್ನ ಪೆನ್ಸಿಲ್‍ನ್ನು ಮಧ್ಯಪ್ರದೇಶದವರೆಗೂ ಎಳೆದಿದ್ದೆ. ಆಗ ಖಜುರಾಹೋ ದಾರಿಯಲ್ಲಿ, ವಿಶೇಷ ಮೋಹವಿಲ್ಲದೆಯೇ ನನಗೆ ಸಿಕ್ಕಿದ್ದು ಈ ಪನ್ನಾ ವನಧಾಮ. ಇದು ಬಹುವಾಗಿ ವಜ್ರ ಗಣಿಗಾರಿಕೆಯಿಂದ ಸಂತ್ರಸ್ತವಾದ ವನ್ಯ ವಲಯ. ೧೯೯೫ರ ಸುಮಾರಿಗೆ ಇದಕ್ಕೆ ಹುಲಿ ಸಂರಕ್ಷಣೆಯ ವಿಶೇಷ ಜವಾಬ್ದಾರಿ ತಗುಲಿಕೊಂಡರೂ ಈಚಿನ ವರ್ಷಗಳಲ್ಲಿ (೨೦೨೦) ಅದರಲ್ಲೂ ತೀರಾ ಅಧೋಗತಿ ಕಂಡ ವನಧಾಮ. ನಮ್ಮದು ೨೪ ವರ್ಷಗಳ ಹಿಂದಿನ ಅನುಭವವಾದರೂ ‘ಬೆಳೆಯ ಸಿರಿ’ ನಾವು ‘ಚೆನ್ನಾಗಿಯೇ’ ಅನುಭವಿಸಿದ್ದೆವು. 

ಕಾಶಿಗೆ ಹೇಸಿ, ಕಾಡು ಕಾಡೆಂದು ಬಡಬಡಿಸುತ್ತ ನಾನೂರು ಕಿಮಿಗೂ ಮಿಕ್ಕು ತಲೆ ಸುಟ್ಟುಕೊಂಡು ಬಂದವರಿಗೆ, ಪನ್ನಾದ ವನ್ಯ ಇಲಾಖೆ ನಿರಾಶೆಮಾಡಿತ್ತು, ಅದು ಪ್ರವಾಸೀ-ಸ್ನೇಹಿಯಾಗಿರಲಿಲ್ಲ. ನಾನು ಮುಂದಾಗಿ ಬರೆದಿದ್ದ ಪತ್ರ ಅವರಿಗೆ ತಿಳಿದೇ

ಇರಲಿಲ್ಲ. ಪ್ರತ್ಯಕ್ಷ ನಮ್ಮ ಕೇಳಿಕೆಗೂ ಉಚಿತ ಸ್ಪಂದನ ಬರಲಿಲ್ಲ. ಖಜುರಾಹೋ ದಾರಿ ಸುಮಾರು ದೂರಕ್ಕೆ ವನಧಾಮದ ಒಳಗೇ ಓಡುತ್ತದೆ. ಅದರಲ್ಲಿ ಸುಮಾರು ೨೫ ಕಿಮೀ ಮುಂದಿನೂರು ಮದ್ಲದಲ್ಲಿ ವನಧಾಮದ ಅತಿಥಿಗೃಹ ಮತ್ತು ಅಧಿಕೃತ ಪ್ರವೇಶವಿದೆ ಎಂದಷ್ಟೇ ನಮಗೆ ತಿಳಿಯಿತು. ನಾವು ಇನ್ನೇನು ಕತ್ತಲಿನಲ್ಲೇ ಅಲ್ಲಿಗೇ ಹೋಗುವ ಯೋಚನೆಯಲ್ಲಿದ್ದೆವು. ಆಗ ನಮ್ಮ ಅದೃಷ್ಟಕ್ಕೆ ಇಲಾಖೆಯದೇ ಕೆಳದರ್ಜೆಯ ನೌಕರನೊಬ್ಬ, ಪೇಟೆಯ ‘ಚೀಪ್ ಅಂಡ್ ಬೆಸ್ಟ್’ ಹೋಟೆಲ್ ಹೆಸರಿಸಿ, ರಾತ್ರಿಗೆ

ಇಲ್ಲೇ ಉಳಿಯಲು ಶಿಫಾರಸು ಮಾಡಿದ್ದ. ನಾವು ಒಪ್ಪಿಕೊಂಡದ್ದೇ ಒಳ್ಳೇದಾಯ್ತು. 

ಬೆಳಿಗ್ಗೆ (೩-೫-೯೬) ದಾರಿಯಲ್ಲೇ ವನ್ಯ ವೀಕ್ಷಣೆಯೂ ಆಯ್ತು ಎಂದುಕೊಳ್ಳುತ್ತ, ಐದೂವರೆ ಗಂಟೆಗೇ ಬೈಕೇರಿದ್ದೆವು. ಖಜುರಾಹೋ ದಾರಿಯ ಹತ್ತನೇ ಕಿಲೋ ಕಲ್ಲಿನ ಬಳಿ, ನಿರ್ಜನ ಪ್ರದೇಶದಲ್ಲಿನ ಒರಟು ಕೈಕಂಬವೊಂದು ಎಡಕ್ಕೆ ವನಧಾಮದ ಸೂಚನೆ ಕೊಟ್ಟಿತು. ನಾವು ನಿರ್ಯೋಚನೆಯಿಂದ ಕವಲಾದೆವು. ಆದರೆ ಆ ಕಚ್ಚಾದಾರಿ ಸುಮಾರು ಹತ್ತು ಕಿಮೀ ನಮ್ಮನ್ನು ಕುಣಿಸಿ ದಣಿಸಿ, ದೂಳೀದೂಸರಿತ ಔದ್ಯಮಿಕ ಕೊಂಪೆಗೆ ಮುಟ್ಟಿಸಿತ್ತು. ಅಲ್ಲಿನ ಕಪ್ಪು ಮಡ್ಡಿಯ ಗುಡ್ಡೆಗಳು ವನಧಾಮದ ಹೆಸರಿಗೇ ದೊಡ್ಡ ಅಪಚಾರ. ನಮ್ಮ ಕೋಲಾರದಲ್ಲಿ ಚಿನ್ನಕಳೆದುಳಿದ ವಿಷದ ಮಹಾಗುಡ್ಡೆಗಳಂತೆ ಇವೂ ಗಣಿಗಾರಿಕೆಯಲ್ಲುಳಿದ ಕಚಡಾ ಗುಡ್ಡೆಗಳು. 

ಡಾಮರು ದಾರಿಗೆ ಮರಳಿದ ಮೇಲೆ, ಮುಂದೆ ಇನ್ನೊಂದು ಭಾರೀ ಪ್ರವೇಶದ್ವಾರ,

ಕಾವಲುಗಾರರೂ ಇದ್ದರು. ವನಧಾಮದ ಕುರಿತು ಅಂಕಿಸಂಕಿ ಸಹಿತ ಕೊಚ್ಚಿಕೊಳ್ಳುವ, ಅಸಂಖ್ಯ ಪಕ್ಷಿ, ಪ್ರಾಣಿಗಳ ವರ್ಣಮಯ ಚಿತ್ರ ತೋರುವ ದೊಡ್ಡ ದೊಡ್ಡ ಬೋರ್ಡುಗಳೂ ಇದ್ದವು. ಉಳಿದಂತೆ ಅಲ್ಲಿ ಕೊಳ್ಳೆ ಹೋಗುವಂತದ್ದು ಏನೂ ಕಾಣಲಿಲ್ಲ! ಅಧಿಕೃತ ಪ್ರವೇಶದ ಸ್ಥಳ - ಮದ್ಲಾ, ಇನ್ನೂ ಮುಂದೆ ಎಂದರು. ಮದ್ಲಾ ಬಂತು. ಆಸೆ ಏನೂ ಇಟ್ಟುಕೊಳ್ಳದೆ ವನಧಾಮದ ಸೌಕರ್ಯಗಳ ಬಗ್ಗೆ ವಿಚಾರಿಸಿದೆ. ವಸತಿ ಬೇಕಿದ್ದರೆ ೨೫ ಕಿಮೀ ಹಿಂದಿರುವ ಪನ್ನಾಪೇಟೆಯ ಕಛೇರಿಯ ಪತ್ರ ಬೇಕೆಂದರು.

ಗಮನಿಸಿ, ಹಿಂದಿನ ರಾತ್ರಿ ಪನ್ನಾಪೇಟೆಯಲ್ಲಿನ ಅಧಿಕಾರಿಗಳು ನಮಗದನ್ನು ಹೇಳಲೇ ಇಲ್ಲ. ರಾತ್ರಿ ನೇರ ಬಂದಿದ್ದರೆ, ನಾವೂ ‘ಮಂಗ’ಗಳೇ ಆಗುತ್ತಿದ್ದೆವು! ಕಾಡು ಸುತ್ತಾಟಕ್ಕೆ, ಅವರಲ್ಲೇನೂ ವ್ಯವಸ್ಥೆಗಳಿರಲಿಲ್ಲ. ನಮಗೆ ಅದೃಷ್ಟವಿದ್ದರೆ, ಮುಂದಿರುವ ಖಜುರಾಹೋ ಛತ್ರಪುರಗಳ ಕಡೆಯಿಂದ ಖಾಸಗಿ ತಿರುಗಾಟದ ವಾಹನಗಳು ಬಂದರೆ, ಅವುಗಳಲ್ಲಿ ಅವಕಾಶ ಇದ್ದರೆ..ರೆ..ರೆ ನಮ್ಮ ವೀಕ್ಷಣಾಸಕ್ತಿ ಬತ್ತಿ ಹೋಗಿತ್ತು. 

ಛತ್ರಪುರದ ರಸ್ತೆ ಮುಂದೆಯೂ ಸುಮಾರು ದೂರ ವನಧಾಮದೊಳಗೇ ಓಡಿತ್ತು. ಇನ್ನೊಂದು ಕೈಕಂಬ ಅರ್ಧ ಕಿಮೀ ಆಚೆ ‘ಪಾಂಡವ ಜಲಪಾತ’ದ ಎಂದಿತ್ತು. ನುಗ್ಗಿದ್ದಕ್ಕೆ ನಿರಾಶೆಯಾಗಲಿಲ್ಲ. ಅಬ್ಬಿ ಸಣ್ಣದೇ ಇದ್ದರೂ ಆಕರ್ಷಕವಾಗಿತ್ತು. ಅಲ್ಲಿನ ಕೆಲವು ಐತಿಹಾಸಿಕ ಅವಶೇಷಗಳೂ ನೋಡುವಂತವೇ ಇದ್ದವು. ಪ್ರವೇಶಕ್ಕೆ ಅರಣ್ಯ ಇಲಾಖೆ ವಿಧಿಸಿದ್ದ ಸುಂಕಕ್ಕೆ ಸ್ವಲ್ಪ ನ್ಯಾಯ ಸಲ್ಲುವಂತೆ, ಅಲ್ಲಿ ನಾಗರಿಕ ಕಚಡಾ

ಕಡಿಮೆಯಿತ್ತು. ಅಲ್ಲಿನ ಕೊಳದೊಳಗೆ ಒಂದೆರಡೇ ಬಾಟಲ್, ಪ್ಲ್ಯಾಸ್ಟಿಕ್ ಮಾತ್ರ ಉಳಿದಿತ್ತು! 

ಪನ್ನಾ ವನಧಾಮದ ಅಂಚಿನಲ್ಲಿ, ಇನ್ನೊಂದೇ ಕವಲು ದಾರಿಗೆ ಆಹ್ವಾನಿಸುತ್ತಿದ್ದ ಭಾರೀ ಬೋರ್ಡು, ಅಂದು ನಮಗೆ ಭಾರೀ ನಗೆ ತರಿಸಿತ್ತು. ಕಾರಣ ಸರಳ - ‘ಮರದ ಮೇಲಿನ ವಾಸ ವ್ಯವಸ್ಥೆ’ಯಂತೆ - ಟ್ರೀ ಟಾಪ್ ಲಾಜ್, ಮಂಗನ ಮನೆ! ಇನ್ನೂ ದೊಡ್ಡ ಕಾರಣ - ‘ಕಡಲ ಕಿನಾರೆ ವಾಸ’ - ಬೀಚ್ ರಿಸಾರ್ಟ್! ಮಧ್ಯ ಪ್ರದೇಶದಲ್ಲಿ ಕಡಲೇ? ಏನೋ ಒಂದು ನೀರ ಮೂಲ ಎಂದೇ ಇರಲಿ, ನಡುಬೇಸಗೆಯಲ್ಲಿ ವಿಹಾರಕ್ಕೊದಗುವಷ್ಟು ವಿಸ್ತಾರವಿದ್ದೀತೇ? ಹಾಗೂ ಸರಿಯಿದ್ದರೆ, ಉರಿಬೇಸಗೆಯ ೪೫ ಡಿಗ್ರಿ ತಾಪಮಾನದಲ್ಲಿ ಸೂರ್ಯಸ್ನಾನ ಮಾಡುವವರುಂಟೇ? ಕೊನೆಯದಾಗಿ ನಿಜ ಕಡಲ ಕಿನಾರೆಯಿಂದಲೇ ಬಂದ ನಮಗೆ ಇವು ಬೇಕೇ? ಆದರೆ ಇಂದು... 


ಗೂಗಲ್ ನಕ್ಷೆ ವನಧಾಮದ ಅಂಚಿನಲ್ಲಿ ಕೆನ್ ನದಿ ಪಾತ್ರೆಯನ್ನೇನೋ ತೋರಿಸುತ್ತದೆ. ನದಿಯ ನಿಜ ಸಾಮರ್ಥ್ಯ ಏನೇ ಇರಲಿ, ಇಂದು ಅದಕ್ಕೆ (ನಮ್ಮ ಎತ್ತಿನಹೊಳೆಯಂತೆ) ಅಣೆಕಟ್ಟು ಹಾಕಿ ನೀರನ್ನು ದೂರದ ಇನ್ನೊಂದೇ ನದಿಗೆ ಸೇರಿಸುವ ಯೋಜನೆ ಹೊಸೆದಿದ್ದಾರೆ - ‘ಕೆನ್ ಬೆತ್ವಾ ನದಿ ಜೋಡಣೆ’. ಯೋಜನೆ ನೆಲ, ನೀರನ್ನು ಕೆಡಿಸುವುದಷ್ಟೇ ಅಲ್ಲ, ಹಿನ್ನೀರ ಪರಿಣಾಮದಲ್ಲಿ ವನಧಾಮದ ಶೇಕಡಾ ಹತ್ತಕ್ಕೂ ಮಿಕ್ಕು ಕಾಡನ್ನೇ ನುಂಗಿ, ೨೦,೦೦೦ಕ್ಕೂ ಮಿಕ್ಕು ಜನಗಳನ್ನು ಮರುವಸತಿಯ ಸಂಕಟಕ್ಕೂ ತಳ್ಳಲಿದೆ. ಇನ್ನೊಂದು ಮುಖದಲ್ಲಿ... 

ಪನ್ನಾ ವನಧಾಮ, ಹುಲಿ ಸಂರಕ್ಷಣೆಯ ಹೆಚ್ಚುವರಿ ಜವಾಬ್ದಾರಿ (ಅನುದಾನ) ಹೊತ್ತಿದ್ದರೂ ನಿರ್ವಹಣೆ ಚಿಂತಾಜನಕ. ಒಂದು ಕಾಲದಲ್ಲಿ ಅದು ಹುಲಿ ಸಂಖ್ಯೆಯಲ್ಲಿ ಉನ್ನತಿಕೆ ಕಾಣಿಸಿದ್ದು ಎಷ್ಟು ನಿಜವೋ ಒರೆಗೆ ಹಚ್ಚಿದವರಿಲ್ಲ, ಆದರೆ ಕಳ್ಳಬೇಟೆಯ ನೆಪದಲ್ಲಿ ಒಂದೂ ಹುಲಿ ಇಲ್ಲವಾದದ್ದು ಜಗಜ್ಜಾಹೀರಾಗಿತ್ತು. ಮತ್ತೆ ಅನ್ಯ

ವನಧಾಮದಿಂದ ಬೆರಳೆಣಿಕೆಯ ಹುಲಿಗಳನ್ನು ಇಲ್ಲಿಗೆ ಪರಿಚಯಿಸಿದ್ದು, ಎಡವಿದ್ದು... ಓದುತ್ತಿದ್ದರೆ ಮೈ ಉರಿಯುತ್ತದೆ. ನಮಗೆಲ್ಲ ಬಹುತೇಕ ವನ್ಯ ಅಧಿಕಾರಿಗಳ ಉಡಾಫೆ, ಭ್ರಷ್ಟಾಚಾರಗಳ ಅಂದಾಜು ಮಾತ್ರ ಇದೆ. ಆದರೆ ಪನ್ನಾ ಅವನತಿಯ ತನಿಖಾ ವರದಿ ಸ್ಪಷ್ಟವಾಗಿ ಅಧಿಕಾರಿಗಳೇ ಪಾಲುದಾರರು ಎಂದು ಹೆಸರಿಸಿರುವುದನ್ನು ಓದುವಾಗ, ಅಂಥವರನ್ನು ಪೋಷಿಸುವ (ಮತದಾರರಾಗಿ) ನಮ್ಮ ಬಗ್ಗೇ ಇನ್ನಿಲ್ಲದ ಜಿಗುಪ್ಸೆ ಮೂಡುತ್ತದೆ. ಬಿಡಿ, ಖಜುರಾಹೋದತ್ತ ಸಾಗೋಣ. 

ಬಟಾಬಯಲು, ವಿಶೇಷ ವಾಹನ ಅಥವಾ ಜನ ಸಂಚಾರವಿಲ್ಲದ ದಾರಿಯಲ್ಲಿ ಸೂರ್ಯನ ಉರಿಗಣ್ಣಿನಿಂದ ಬಚಾವಾಗುವ ಅವಸರದಲ್ಲಿದ್ದೆವು. ಒಮ್ಮೆಗೇ ಎಡ ದಿಗಂತವನ್ನು ಹತ್ತಿರ ಮಾಡಿದಂತೆ ಎದ್ದ ಗುಡ್ಡದ (ಹೆಸರು - ದತ್ತಲಾ ಬೆಟ್ಟ!) ಮೇಲೊಂದು ಭರ್ಜರಿ ಕೋಟೆ ಸಹಿತವಾದ ಅರಮನೆ ಎದ್ದು ಬಂತು. ಕುತೂಹಲಕ್ಕೆ ಕವಲೊಡೆದು, ಅದರತ್ತ ಬೈಕೋಡಿಸಿದ್ದೆವು. ಒಂದೇ ಕಿಮೀ ಅಂತರದಲ್ಲಿ ಕೋಟೆ

ಸಮೀಪಿಸಿದ್ದೆವು. ಅದು ಸುಸ್ಥಿತಿಯಲ್ಲಿದ್ದಂತೆಯೂ ಹೊರವಲಯದಲ್ಲಿ ಚಲ್ಲಾಡಿದ್ದ ಕಸ ರಾಶಿಯಿಂದ ಯಾವುದೋ ಸಿನಿಮಾದವರು ತಮ್ಮ ಕೆಲಸ ಪೂರೈಸಿಕೊಂಡು ಬಿಟ್ಟುಹೋದಂತೆಯೂ ಕಾಣಿಸಿತು. ನಾವು ಸಣ್ಣದಾಗಿ ಒಳ ಹೊಕ್ಕು ನೋಡೋಣವೆಂದರೆ ಕೋಟೆಯ ದ್ವಾರಗಳು ಮುಕ್ತವಿರಲಿಲ್ಲ, ವಿಚಾರಿಸಲು ಜನರೂ ಇರಲಿಲ್ಲ. ಬಂದಂತೇ ಮುಖ್ಯ ದಾರಿಗೆ ಮರಳಿದೆವು. ಸ್ವಲ್ಪ ಮುಂದಿನ ಊರು ಬಮಿಟಾದಲ್ಲಿ ಔರಂಗಾಬಾದ್ - ಛತ್ರಪುರ ಮುಖ್ಯದಾರಿಯನ್ನು

ಬಿಟ್ಟು, ಬಲಕ್ಕೆ ಹೊರಳಿ ಖಜುರಾಹೋ ಸೇರಿಕೊಂಡೆವು. 

ಸುಮಾರು ಮೂರು ದಶಕಗಳ ಹಿಂದೆ, ‘ವಿಶ್ವ ಪ್ರವಾಸೋದ್ದಿಮೆ ದಿನ’ವನ್ನು ನೆಪ ಮಾಡಿಕೊಂಡು, ನಮ್ಮ ಮಿತ್ರ ಬಳಗ ಒಂದು ವಿಚಾರಗೋಷ್ಠಿ ನಡೆಸಿತ್ತು. (ವಿವರಗಳು ಮುಂದೆಂದಾದರು!) ನಾವೆಲ್ಲ ಅಪ್ಪಟ ಪ್ರವಾಸ ಪ್ರಿಯರೂ ಪ್ರೇರಕರೂ ಹೌದು. ಆದರೆ ವಿಚಾರಗೋಷ್ಠಿ ಮಾತ್ರ ಪ್ರವಾಸೋದ್ದಿಮೆಯ ದುಷ್ಪ್ರಭಾವದ ಗಂಭೀರ ಖಂಡನೆಗೇ ಮೀಸಲಾಗಿತ್ತು. (ನೆನಪಿರಲಿ, ನಾನು ಪುಸ್ತಕ ಪ್ರಕಾಶಕ ಮತ್ತು ವ್ಯಾಪಾರಿಯಾಗಿದ್ದುಕೊಂಡೇ ಸರಕಾರದ ‘ಪುಸ್ತಕೋದ್ಯಮ’ವನ್ನು ಸದಾ ಖಂಡಿಸಿದವ!) ವಿಚಾರಗೋಷ್ಠಿಯ ಭಾಗವಾಗಿ ಯಾರೋ ಸಮಾಜವಿಜ್ಞಾನಿಗಳು ಅಧ್ಯಯನ ಪೂರ್ಣವಾಗಿ ಸಂಯೋಜಿಸಿದ ಸ್ಲೈಡ್ ಪ್ರದರ್ಶನವಿತ್ತು. ಅದರ ವಿಷಯ - ಪ್ರವಾಸೋದ್ದಿಮೆಯಿಂದ ಖಜುರಾಹೋದಲ್ಲಾದ ಪಾರಿಸರಿಕ ಹಾನಿ. ಅದರ ಅಧ್ಯಯನಪೂರ್ಣ ಇಂಗ್ಲಿಷ್ ನಿರೂಪಣೆಯನ್ನು ಮುಂದಾಗಿಯೇ ನಾನು ಕನ್ನಡಿಸಿ,

ಧ್ವನಿಮುದ್ರಿಸಿಯೂ ಕೊಟ್ಟಿದ್ದೆ. ಅದು ತುಂಬ ಒಳ್ಳೆಯದಿತ್ತು, ನನ್ನನ್ನು ಪ್ರಭಾವಿಸಿತ್ತು. ಹಾಗೆ ಖಜುರಾಹೋದ ಬಗ್ಗೆ ಒದಗಿದ ಆಪ್ತತೆಯಲ್ಲಿ, ಅದನ್ನು ನೋಡಲೇಬೇಕೆಂಬ ಕುತೂಹಲವೂ ನನ್ನಲ್ಲಿ ಸುಪ್ತವಾಗಿತ್ತು. ಪ್ರಸ್ತುತ ಪ್ರವಾಸಕ್ಕಾಗುವಾಗ ಕಾರಂತರ ಒತ್ತಾಯವೂ ಸೇರಿಕೊಂಡಿತ್ತು. ೧೯೯೬ರಲ್ಲಿ ಕಣ್ಣಾರೆ ಕಂಡ ಖಜುರಾಹೋ ಇಂದು ವಿವರಗಳಲ್ಲಿ ನನಗೆ ನೆನಪಿಲ್ಲದಿದ್ದರೂ "ಅದ್ಭುತ" ಎಂಬ ಭಾವ ಮಾತ್ರ ಗಟ್ಟಿಯಾಗಿ ಉಳಿದಿದೆ. 

ಸುಮಾರು ಹತ್ತರಿಂದ ಹನ್ನೆರಡನೇ ಶತಮಾನಗಳ ನಡುವೆ ಈ ವಲಯದಲ್ಲಿ ಆಳಿದ ಚಂದೇಲ ರಾಜವಂಶಜರ ಕೊಡುಗೆ - ಖಜುರಾಹೋದ ದೇವಾಲಯಗಳ ಸಮೂಹ. ಮೂಲದಲ್ಲಿ ಸುಮಾರು ೨೫ ಚ.ಕಿಮೀ ವ್ಯಾಪ್ತಿಯಲ್ಲಿ ಸುಮಾರು ೮೫ ದೇವಳಗಳಿದ್ದವೆಂದು ವಿದ್ವಾಂಸರು ಅಂದಾಜಿಸುತ್ತಾರೆ. ಇಂದು ಸುಮಾರು ಆರು ಚ.ಕಿಮೀ ವ್ಯಾಪ್ತಿಯಲ್ಲಿ ೨೫ ದೇವಳಗಳು ಪ್ರದರ್ಶನಯೋಗ್ಯವಾಗಿವೆ. ಇವುಗಳಲ್ಲಿ

ಹಿಂದೂ ಮತ್ತು ಜೈನ ಸಂಪ್ರದಾಯಗಳ ಅನ್ವಯವನ್ನು ವಿದ್ವಾಂಸರು ಕಾಣುತ್ತಾರೆ. ದೇವಳಗಳ ರಚನಾ ಸೌಂದರ್ಯ, ಅದ್ವಿತೀಯ ಕುಸುರಿಯನ್ನು ಹೊಗಳದವರಿಲ್ಲ. ಎಲ್ಲಕ್ಕೂ ಮಿಕ್ಕು ಇವು, ವಿಶ್ವಾದ್ಯಂತ ಆರಾಧನಾ ಕೇಂದ್ರಗಳಿರಲಿ, ಅಪ್ಪಟ ಕಲಾಕೇಂದ್ರಗಳೇ ಇರಲಿ, "ಅಶ್ಲೀಲ" ಎಂದು ಬೊಬ್ಬೆ ಹೊಡೆಯುವವರಿಗೆ ಹೆದರುವ, ಮಿಥುನ ಶಿಲ್ಪ ವೈವಿಧ್ಯವನ್ನು ಧಾರಾಳವಾಗಿ ಹರಿಬಿಟ್ಟಿದೆ. ಆ ದಿಟ್ಟತನ, ಅದರ ಹಿಂದಿನ ತತ್ತ್ವ ನಮ್ಮನ್ನು ಇನ್ನಿಲ್ಲದಂತೆ ಆವರಿಸಿಬಿಡುತ್ತದೆ. ನಾವು ಅಲ್ಲಿ ಕಳೆದ ಸುಮಾರು ಎರಡು ಗಂಟೆಗಳ ಕಾಲದಲ್ಲಿ, ಎರಡು ವಲಯಗಳ

ಒಟ್ಟಾರೆ ನಾಲ್ಕೈದು ದೇವಳಗಳನ್ನು ನೋಡಿರಬೇಕು. ನಾವು ತೆಗೆದ ಪಟಗಳಷ್ಟೇ ಅದಕ್ಕೆ ಸಾಕ್ಷಿ. ಟಿಪ್ಪಣಿ ಮತ್ತು ವಿವರವಾದ ನೆನಪು ನಾಸ್ತಿ! [ಖಜುರಾಹೋದ ಮೇಲೆ ಅಂತರ್ಜಾಲದಲ್ಲಿ ಎಷ್ಟೂ ಮಾಹಿತಿಗಳೂ ವಿಡಿಯೋಗಳೂ ಇವೆ. ನೀವೇ ಆಯ್ದುಕೊಳ್ಳಿ] ಆದರೆ ಆರೋಗ್ಯಪೂರ್ಣ ಪ್ರವಾಸೋದ್ಯಮದ ಕುರಿತು, ನಮಗೆ ಪರೋಕ್ಷವಾಗಿ ಸಿಕ್ಕ ಒಂದು ಅಭಿನಂದನೆಯನ್ನು ಮಾತ್ರ ನಾನಿಲ್ಲಿ ಹೇಳಲೇಬೇಕು. 


ಖಜುರಾಹೋದ ಒಂದು ವಠಾರದ ಹೊರಗೆ ನಾವು (ಅನಿವಾರ್ಯವಾಗಿ) ಗಂಟು ಮೂಟೆಗಳಿದ್ದಂತೇ ಬೈಕುಗಳನ್ನು ಮರದ ನೆರಳಲ್ಲಿ ಬಿಟ್ಟು ಹೋಗಿದ್ದೆವು. ಹಿಂದೆ ಬಂದಾಗ ಅದರ ಬಳಿಯೇ ಸೈಕಲ್ ಹಿಡಿದ ಒಂದು ಫ್ರೆಂಚ್ ದಂಪತಿ ನಮ್ಮನ್ನು ಕಾದು ಕುಳಿತಿತ್ತು. ಅವರು ಹಣ, ಬಿಡುವು ಒದಗಿದಾಗೆಲ್ಲ ಸಣ್ಣ ತುಣುಕುಗಳಲ್ಲಿ ವಿಶ್ವ ಸಂಚಾರ ಮಾಡಿದವರು. ಅವರು ಕಂಡಂತೆ, ಭಾರತ ನಿಸ್ಸಂದೇಹವಾಗಿ ಕಲೆ, ಸಂಸ್ಕೃತಿ, ಪ್ರಕೃತಿವೈಭವಗಳಲ್ಲಿ ಅತ್ಯಂತ ಸಂಪತ್ಭರಿತ ದೇಶವಂತೆ.

ಹಾಗಾಗಿ ಅವರು ಅತಿ ಹೆಚ್ಚು ಭೇಟಿ ಕೊಟ್ಟ ದೇಶ ಭಾರತವೇ. ಪ್ರತಿ ಸಲವೂ ಅವರು ಫ್ರಾನ್ಸಿನ ದೂರದಿಂದ, ಇಲ್ಲಿನ ಬೇರೆ ಬೇರೆ ವಲಯಕ್ಕೆ ಹಾರಿ ಬಂದು, ಇಲ್ಲಿ ಸೈಕಲ್ ಖರೀದಿಸಿ, ಸವಿವರ ಪ್ರವಾಸ ಕೈಗೊಳ್ಳುತ್ತಿದ್ದಾರಂತೆ. ಅಂದಿನದು ಆರೋ ಏಳನೆಯದೋ ಭೇಟಿ. ಅಷ್ಟೆಲ್ಲ ಅನುಭವಗಳ ಮುನ್ನೆಲೆಯಲ್ಲಿ ಅವರು ನಮ್ಮನ್ನು ಕಂಡದ್ದೇ ಎಸೆದ ಮೊದಲ ಪ್ರಶ್ನೆ "ನೀವು ಯಾವ ದೇಶದವರು?!" ನಾವು ಮುಕ್ತವಾಗಿ ಅವರ ಎಲ್ಲ ಕುತೂಹಲವನ್ನೂ ತಣಿಸಿದೆವು. ಕೊನೆಯಲ್ಲವರು,

"ಬೇಸರಿಸಬೇಡಿ" ಎಂದು ಕ್ಷಮಾಪೂರ್ವಕವಾಗಿಯೇ ಹೇಳಿದರು "ವರ್ತಮಾನದ ಬಹ್ವಂಶ ಭಾರತೀಯರಿಗೆ ತಮ್ಮ ದೇಶದ ಅರ್ಥಪೂರ್ಣ ಅರಿವು ಇದ್ದಂತಿಲ್ಲ. ನಮ್ಮ ಆರೇಳು ಭಾರತ ಭೇಟಿಯಲ್ಲಿ ಇದೇ ಮೊದಲ ಬಾರಿಗೆ, ಭಾರತೀಯರೇ ಸರಳವಾಗಿ ಮತ್ತು ಗಂಭೀರವಾಗಿ ವಿಷಯ ಹಿಡಿದು ಭಾರತಯಾನ ನಡೆಸುತ್ತಿರುವುದನ್ನು ಕಾಣುತ್ತಿದ್ದೇವೆ. ಹಾರ್ದಿಕ ಅಭಿನಂದನೆಗಳು!!" 


ಕ್ರಮಿಸಿದ್ದು ಸ್ವಲ್ಪ, ಬಾಕಿ ಅನಂತ, ಎಂಬ ಅರಿವಿನೊಡನೆ ಹನ್ನೊಂದೂಕಾಲಕ್ಕೆ ಖಜುರಾಹೋ ಬಿಟ್ಟೆವು. ಕತ್ತಲೆಗೆ ಮುನ್ನ ಸುಮಾರು ಇನ್ನೂರೈವತ್ತು ಕಿಮೀ ದೂರದ ಜಬ್ಬಲ್‍ಪುರ ಸೇರುವುದು ನಮ್ಮ ಅಂದಾಜು. ಪನ್ನಾ ಪೇಟೆಯವರೆಗೆ ನಾವು ಹೋದ ದಾರಿಯಲ್ಲೇ ವಾಪಾಸಾದೆವು. ಅಲ್ಲಿ ಚುರುಕಾಗಿಯೇ ಊಟ ಮಾಡಿ ದಕ್ಷಿಣಕ್ಕೆ ಕವಲಾದೆವು. ಇಲ್ಲಿ ಸೂರ್ಯನ ಬಿಸಿಗೆ, ದಾರಿಯ ದೌರ್ಭಾಗ್ಯ ಸೇರಿ ನಮ್ಮ ಲೆಕ್ಕಾಚಾರಗಳು ನಡೆಯಲೇ ಇಲ್ಲ. 


ಶುದ್ಧ ಮಣ್ಣು ದಾರಿಯಾದರೂ ಬೈಕುಗಳ ಒಂದೇ ಸಾಲಿನ ಚಕ್ರಕ್ಕೆ ಎಲ್ಲೋ ಸಪುರ ದೃಢ ಜಾಡು ಇದ್ದೇ ಇರುತ್ತದೆ. ಆದರೆ ಇಲ್ಲಿನದು ಡಾಮರು ಕಿತ್ತ ದಾರಿ. ಕೆಲವೆಡೆಗಳಲ್ಲಂತೂ ದುರುದ್ದೇಶದಿಂದ ಅಡ್ಡಡ್ಡ ಚರಂಡಿ ಹೊಡೆದಷ್ಟು ದುಸ್ಥಿತಿ. ಒಂದೆರಡು ಪಂಚೇರ್ ಆದರೆ ದೊಡ್ಡದಲ್ಲ - ನಮ್ಮಲ್ಲಿ ಬದಲಿ ಟ್ಯೂಬ್‍ಗಳು ಇದ್ದವು. ಆದರೆ ಇದು ಇನ್ನೂ ದೊಡ್ಡ ಸವಾಲು - ಯಾರಿಗಾದರೂ ಬದಲಿ ಸೊಂಟ ಇದೆಯೇ?! ಕೆಲವೆಡೆಗಳಲ್ಲಿ ನಮ್ಮದು ನಡಿಗೆಯದೇ ವೇಗ. ಅದರ ಅರಿವು ಮೂಡಿಸಲು, ದಿನಾಂತ್ಯದವರೆಗೆ ನಾವು ಹಿಂದಿಕ್ಕಿದ ನಾಲ್ಕು ಊರಿನ ಲೆಕ್ಕಾಚಾರ ನೋಡಿ. ಪನ್ನಾದಿಂದ ಅಮ್ಮನ್‍ಗಂಜ್ - ೩೫ ಕಿಮೀ, ಸಮಯ ಒಂದು ಗಂಟೆ. ಮುಂದೆ ಪವಾಯ್ - ೨೨ ಕಿಮೀ, ೩೧ ಮಿನಿಟು, ಟಕರಿಯಾ - ೨೦ ಕಿಮೀ, ೪೫ ಮಿ, ಶಹಾ ನಗರ್ - ೨೦ ಕಿಮೀ, ೪೫ ಮಿ., ಕೊನೆಗೆ ಕತ್ನಿ - ೧೮ ಕಿಮೀ, ೪೫ ಮಿ. ಅಲ್ಲಿಗೆ ಕತ್ತಲು ಎರಗಿತ್ತು. ನಮ್ಮ ಅಂದಾಜಿನ ಜಬ್ಬಲ್‍ಪುರದಿಂದ ಕನಿಷ್ಠ ನೂರು ಕಿಮೀ ಹಿಂದಿದ್ದೆವು. ಅನಿವಾರ್ಯವಾಗಿ ಕತ್ನಿಯ ಹೋಟೆಲ್ ರಾಧಿಕಾಕ್ಕೆ ಶರಣಾದೆವು. (ರಾತ್ರಿ ತಾ ೩೬, ಔ. ೧೯೦೦, ತೇ. ೧೦%, ದಿನದ ಓಟ ೨೫೩ ಕಿಮೀ) 

ಬೆಳಿಗ್ಗೆ (೪-೫-೯೬) ಐದೂವರೆಗೇ ಕತ್ನಿ ಬಿಟ್ಟೆವು. ದಾರಿಯ ಸ್ಥಿತಿ ಉತ್ತಮವಿದ್ದುದರಿಂದ ಏಳೂವರೆಗೇ ಜಬ್ಬಲ್ ಪುರ ತಲಪಿದ್ದೆವು. ಅಲ್ಲಿನ ಪ್ರಥಮ ಪ್ರಾಶಸ್ತ್ಯ ಬೈಕುಗಳ ಆರೋಗ್ಯ ತಪಾಸಣೆ - ಹಿಂದಿನದ ರಸ್ತೆ ಪೆಟ್ಟು, ಮುಂದಿನಗಳ ವನ್ಯ ಜಾಡು ಲೆಕ್ಕ ಹಾಕಿಯೇ ಎಲ್ಲ ಸರಿ ಮಾಡಿಸಿಕೊಂಡೆವು. ಅನಂತರ ಜಬ್ಬಲ್ ಪುರದ ಹೊರವಲಯದಲ್ಲೇ ಇರುವ ನರ್ಮದಾ ನದಿ ಪಾತ್ರೆಯ ಪ್ರಾಕೃತಿಕ ವೈಭವವನ್ನು ಅನುಭವಿಸಲು "ಬೇಲಾಘಾಟ್ ಚಲೋ" ಎಂದಿದ್ದೆವು. 

೧೯೬೯ರಲ್ಲಿ ಜಬ್ಬಲ್ ಪುರಕ್ಕೆ ನಾನೊಂದು ಚುರುಕಿನ ಭೇಟಿ ಕೊಟ್ಟಿದ್ದೆ (ನೋಡಿ: ಅರೆ ಸೈನಿಕನ ರೂಪಣೆಯಲ್ಲಿ). ಆಗ ಟಂಟಂ ಸರ್ವಿಸ್ (ಮೋಟಾರ್ ಬೈಕ್ ಹೂಡಿದ ಆಟೋರಿಕ್ಷಾ) ಒಯ್ದಂತೆ ಬೇಲಾಘಾಟ್ (ಹಿಂದೀಯರ ಉಚ್ಛಾರಣಾ ವಿಚಿತ್ರಗಳಲ್ಲಿ ಅದನ್ನು ಬೇಡಾ/ಧಾ ಎಂದೆಲ್ಲಾ ಹೇಳುವುದನ್ನೂ ಕೇಳಿದ್ದೇನೆ) ಎಂಬಲ್ಲಿ ನರ್ಮದಾ ನದೀಪಾತ್ರೆಯನ್ನು ವಿಶೇಷವಾಗಿ ನೋಡಲು ಹೋಗಿದ್ದೆ. ಅಲ್ಲಿ ಬಿಳಿ ಬೂದು ಬಣ್ಣದ ಕಲ್ಲಿನ ಮಹಾ ಗುಂಡುಗಳೂ ಸೇರಿದಂತೆ ಹಾಸು ಪಾದೆಯದೇ ಗುಡ್ಡ ಮೈಚಾಚಿ ಬಿದ್ದಂತಿತ್ತು. ಇತರ ಪ್ರವಾಸಿಗಳಂತೆ ಆ ಗುಡ್ಡದ ತಪ್ಪಲಿಗೆ ಅಂಗಡಿ ಮುಂಗಟ್ಟೆಗಳ ನಡುವೆ ಇಳಿದ ಮೆಟ್ಟಲ ಸಾಲನುಸರಿಸಿ ನರ್ಮದಾ ನದಿ ದಂಡೆ ತಲಪಿದ್ದೆ. ನರ್ಮದೆ ಆ ವಲಯದ ಹಾಸುಗಲ್ಲುಗಳ ಗುಡ್ಡೆಯನ್ನು ಯುಗಾಂತರಗಳಲ್ಲಿ ಕೊರೆದು, ಆಳದ ಕೊರಕಲು ಮಾಡಿ, ನಿಶ್ಚಲೆಯಂತೆ ತುಂಬಿ ನಿಂತಿದ್ದಳು. ನಿಜದಲ್ಲಿ ಬಂಡೆಯ ವಲಯದಿಂದ ಈಚೆಗೆ ರಭಸದಿಂದ ಹರಿದೇ ಇದ್ದಳು. ಅಲ್ಲಿನ ಮಡು ಆಳವಿದ್ದರೂ ನೀರು ಸ್ಫಟಿಕ ನಿರ್ಮಲವಿದ್ದು ತಳ ಕಾಣಿಸುತ್ತಿತ್ತು. 

ನರ್ಮದೆಯ ಮಡುವಿನಲ್ಲಿ ಹಲವು ನಮೂನೆಯ ದೋಣಿ ಹರಿಗೋಲುಗಳು ಜನರನ್ನು ವಿಹಾರಕ್ಕೊಯ್ಯಲು ಸಜ್ಜಾಗಿ ಕಾದಿದ್ದವು. ಅವುಗಳೆಡೆಯಲ್ಲಿ ಅನೇಕ ಪುಟ್ಟ ಪೋರರು ಈಜುತ್ತಲೋ ದಂಡೆ ದೋಣಿಗಳ ಮೇಲೆ ನಿಂತೋ "ಬಾಬೂ ಪೈಸೆ ಫೇಂಕಿಯೇ (ಯಜಮಾನ್ರೇ ನಾಣ್ಯ ಬಿಸಾಕೀ)..." ಎಂದು ಅರಚಾಡುತ್ತಿದ್ದರು. ಇದೇನು ತಮಾಷೆ ಎನ್ನುವುದರೊಳಗೆ, ಕೆಲವರು ನದಿಗೆ ನಾಣ್ಯಗಳನ್ನು ಎಸೆದದ್ದು ನೋಡಿದೆ. ‘ಪವಿತ್ರ’ ನದಿಗಳಿಗೆ (ತೀರ್ಥ) ಭಕ್ತರು ‘ಕಾಣಿಕೆ’ ಹಾಕುವುದು ನಾನು ನೋಡದ್ದೇನೂ ಅಲ್ಲ. ಆದರಿಲ್ಲಿನ ಕತೆ ಬೇರೇ. ಎಸೆದವರ ಉದ್ದೇಶ ಮೋಜು. ನಾಣ್ಯದ ಬೆನ್ನಿಗೇ ಆ ಬಾಲಕರು ನೀರಿಗೆ ಧುಮುಕಿ, ಅದು ತಳ ಮುಟ್ಟುವ ಮುನ್ನ ಹಿಡಿದು ಮೇಲೇಳುತ್ತಿದ್ದರು. ಅದು ತಮ್ಮ ಸಾಹಸೀ ಗಳಿಕೆ ಎಂಬಂತೇ ಎಸೆದವರಿಗೆ ತೋರುತ್ತ, ಮತ್ತಷ್ಟು ನಾಣ್ಯ ಎಸೆಯಲು ಮೊರೆಯಿಡುತ್ತಲೇ ಇದ್ದರು! 

ಇತರ ಪ್ರವಾಸಿಗಳೊಡನೆ ನಾನೂ ಒಂದು ಹುಟ್ಟು ಹಾಕುವ ದೋಣಿ ಏರಿದ್ದೆ. ಅದು ಕಲ್ಲ ಕೊರಕಲ ನಡುವೆ ಮೇಲ್ಮುಖವಾಗಿ ಯಾನಾರಂಭ ಮಾಡಿತ್ತು. ಎರಡೂ ಬದಿಗೆ ಮೂವತ್ತು ನಲ್ವತ್ತಡಿ ಎತ್ತರದ ಕಲ್ಲ ಗೋಡೆಯನ್ನೇ ಕಟೆದು ನಿಲ್ಲಿಸಿದ ನದಿ ಸುಂದರ ಬಳಕುಗಳಲ್ಲಿ ಹರಿದಿತ್ತು. ಕೊರಕಲು ಸಾಮಾನ್ಯ ಸುಮಾರು ೨೦-೩೦ ಅಡಿಗಳಷ್ಟು ಅಗಲವೇ ಇತ್ತು. ಎಲ್ಲೋ ಒಂದೆರಡು ಜಾಗಗಳಲ್ಲಿ ಮಾತ್ರ ದಂಡೆಗಳು ಹತ್ತು ಹದಿನೈದು ಅಡಿಗಳಷ್ಟು ಸಮೀಪಿಸಿತ್ತು. ಅಂಥಲ್ಲಿ ಮಂಗಗಳು ಅಪರೂಪಕ್ಕೆ ಅಡ್ಡಕ್ಕೆ ಹಾರಿ ದಾಟುವುದನ್ನು ನೋಡುವುದೇ ಒಂದು ರೋಮಾಂಚನ ಎಂದು ಅಂಬಿಗ ಹೇಳಿದ್ದ. (ಪನ್ನಾದಲ್ಲಿ ಕಡಲು ಸಿಕ್ಕಿದಂತೆ, ಬೇಲಾಘಾಟಿನಲ್ಲಿ ಆಂಜನೇಯನ ಸಾಗರೋಲ್ಲಂಘನ!) ಅಂಬಿಗನ ವಿವರಣೆ ಕೇಳಿದ ಮೇಲೇ ಅಲ್ಲಿದ್ದದ್ದೆಲ್ಲ ಸಾಮಾನ್ಯ ಬಂಡೆಯಲ್ಲ, ವಿವಿಧ ವರ್ಣಛಾಯೆಗಳ ಅಮೃತಶಿಲೆ ಎನ್ನುವುದು ನನಗೆ ಸ್ಪಷ್ಟವಾಗಿತ್ತು. ಅಲ್ಲಿ ಹುಣ್ಣಿಮೆ ರಾತ್ರಿಗಳ ದೋಣಿವಿಹಾರ ಅವಿಸ್ಮರಣೀಯ ಅನುಭವ ಎಂದೂ ಅಂಬಿಗ ‘ಮಾರ್ಕೆಟಿಂಗ್’ ಮಾಡುತ್ತಿದ್ದ. ಪೂರಕವಾಗಿ ಅಲ್ಲಿ ಚಿತ್ರೀಕರಣಗೊಂಡ ಅಸಂಖ್ಯ ಸಿನಿಮಾ ಹಾಡು ಮತ್ತು ದೃಶ್ಯಗಳು, ಭಾಗವಹಿಸಿದ ತಾರಾಮಣಿಗಳ ಪಟ್ಟಿಯನ್ನೂ ಸಾಂದರ್ಭಿಕವಾಗಿ ಉದುರಿಸುತ್ತಲೇ ಇದ್ದ. ಏನಲ್ಲದಿದ್ದರೂ ಸುಮಾರು ಒಂದು ಗಂಟೆಯ ಆ ದೋಣಿಯಾನ ಎಲ್ಲರೂ ಸವಿಯುವಂತದ್ದೇ ಆಗಿತ್ತು. 


ಪ್ರಸ್ತುತ ಬೈಕ್ ಯಾನದ ಕಾಲಕ್ಕಾಗುವಾಗ (ಗಮನಿಸಿ ೨೭ ವರ್ಷಗಳನಂತರ) ಅಲ್ಲಿ ನರ್ಮದೆಯ ಇನ್ನೊಂದು ಮುಖವನ್ನೂ ನೋಡುವ ಅವಕಾಶ ಒದಗಿತು. ನದಿ ಅಮೃತಶಿಲಾ ಕೊರಕಲನ್ನು ಪ್ರವೇಶಿಸುವ ಮುನ್ನ, ವಿಸ್ತಾರ ಪಾತ್ರೆಯಲ್ಲಿ ಝರಿ, ಕಿರು ಜಲಪಾತಗಳಾಗಿಯೂ ವಿಜೃಂಭಿಸುತ್ತದೆ. ಅದು ದೂಹಿ ಸಾಗರ್ ಎಂದೇ ಪ್ರಸಿದ್ಧಿಯಲ್ಲಿದೆ. (ನನ್ನ ಮೊದಲ ಭೇಟಿ ಕಾಲದಲ್ಲಿ ಅದು ಪ್ರಚಾರದಲ್ಲಿದ್ದಿರಲಾರದು) ನಾವು ಅದನ್ನು ಕಚ್ಚಾ ಜಾಡುಗಳಲ್ಲಿ ನಡೆದು, ವಿಪರೀತ ಜನಸಂದಣಿಯೊಡನೆ ನೋಡಿ, ಸಂತೋಷಿಸಿದ್ದೆವು. ಮತ್ತೆ ದೋಣಿ ವಿಹಾರವನ್ನೂ ನಡೆಸಿದೆವು. ಈ ಲೇಖನ ಬರೆಯುವಂದು (೨೪ ವರ್ಷಗಳ ಅಂತರದಲ್ಲಿ) ಇನ್ನೇನೇನಾಗಿದೆಯೋ ಊಹಿಸುವುದು ಕಷ್ಟ. 

ಜಾಲದಲ್ಲಿ ಸಿಕ್ಕುವ ವಿಡಿಯೋಗಳನ್ನು ನೋಡಿದರೆ (ಒಂದನ್ನು ಇಲ್ಲಿ ಉದ್ಧರಿಸಿದ್ದೇನೆ ಗಮನಿಸಿ) ಬೇಲಾ ಘಾಟಿನ ಎಲ್ಲ ಭಾಗಗಳಿಗೂ ಕಾಂಕ್ರೀಟ್ ನಡೆಮಡಿಗಳು, ಸೋಪಾನಗಳೂ ಬಂದಿರುವುದನ್ನು ಕಾಣುತ್ತೇವೆ. ಜನ ಸಾಗರ ಎಲ್ಲೆಡೆಗಳಲ್ಲೂ ಗಿಜಿಗುಡುತ್ತಿರುವುದನ್ನೂ ಕಾಣುತ್ತೇವೆ. ಈ ನಿತ್ಯ ಜಾತ್ರೆಯ ನೂರೆಂಟು ಇತರ ಪೂರೈಕೆಗಳನ್ನು ಸುಧಾರಿಸುವಲ್ಲಿ ನಗರಾಡಳಿತ, ಪ್ರವಾಸೋದ್ಯಮ, ಅರಣ್ಯ, ನೀರಾವರಿ, ಪರಿಸರ ಇತ್ಯಾದಿ ಹೆಣಗಾಟ ಖಂಡಿತಕ್ಕೂ ಸಣ್ಣದಲ್ಲ. ಇನ್ನೂ ದೊಡ್ಡ ಸಮಸ್ಯಾ ಮುಖ -

ಇಡಿಯ ನರ್ಮದೆಯ ನೀರನ್ನು ಪಳಗಿಸುವ ಹುಚ್ಚು. ಅದಕ್ಕೆ ಹುಟ್ಟಿನಿಂದ ಸಮುದ್ರ ಸೇರುವವರೆಗೂ ಅಸಂಖ್ಯ ಅಣೆಕಟ್ಟುಗಳನ್ನು ಕಟ್ಟಿ ನೀರು ನಿಲ್ಲಿಸುವ, ಇರುವ ಊರುಗಳನ್ನು ಮುಳುಗಿಸುವ, ಇಲ್ಲದ ಊರುಗಳಲ್ಲಿ ಬರ ನೀಗಿಸುವ ಅಧ್ವಾನ. ಮೇಧಾ ಪಾಟ್ಕರ್, ಬಾಬಾ ಅಮಟೆಯಂಥವರು ನಡೆಸಿದ ‘ನರ್ಮದಾ ಬಚಾವ್ ಆಂದೋಲನ’ದ ಸೋಲು ಪ್ರಜಾಸತ್ತೆಯ ಸೋಲು. ಈಚೆಗೆ ಗುಜರಾಥಿನ ನರ್ಮದಾ ಸಾಗರ ಅಣೆಕಟ್ಟಿನ ದರ್ಶನ ಮಾಡಿ ಬಂದ ಮೇಲಂತೂ (ನೋಡಿ:ಮೂರು ಸಾವಿರ ಕೋಟಿ...  ) ಬೇಲಾ ಘಾಟಿಗೆ ಮುಂದಿನ ದಿನಗಳಲ್ಲಿ ನೀರು ಪಂಪ್ ಮಾಡುವ ಯೋಜನೆ ಬಂದರೆ ಆಶ್ಚರ್ಯವಿಲ್ಲ. ದುರಂತ ಎಂದರೆ ನಮ್ಮ ‘ಅಭಿವೃದ್ಧಿ ಯೋಜನಾ ಬ್ರಹ್ಮ’ರುಗಳಿಗೆ ಎಂದೂ ಸಮಗ್ರ ಅಭಿವೃದ್ಧಿಯ ದೃಷ್ಟಿ ಬಂದದ್ದೇ ಇಲ್ಲ. 

ಸೌರ ಕುಲುಮೆ ನಿಗಿನಿಗಿ ಎನ್ನುವ ಒಂದು ಗಂಟೆಯ ಸುಮಾರಿಗೇ ಜಬ್ಬಲ್ಪುರ ಬಿಟ್ಟೆವು. ವಾಸ್ತವದಲ್ಲಿ ನಾವು ಕತ್ನಿಯಲ್ಲಿ ಒಂದು ಕಾಲ್ಪನಿಕ ತ್ರಿಕೋನದ ಶೃಂಗದಲ್ಲಿದ್ದೆವು. ಅಲ್ಲಿಂದ ತ್ರಿಕೋನದ ಬಲ ಭುಜದ ಕೊನೆಯಲ್ಲಿ ಜಬ್ಬಲ್ ಪುರವಿತ್ತು. ಈಗ ಅದರ ತಳ ರೇಖೆಯಲ್ಲಿ ಕುಂಡಂ ಮೂಲಕ, ಎಡ ಭುಜದ ಕೊನೆಯ ಶಹಾಪುರ ಮುಟ್ಟಿದೆವು. ಮತ್ತೆ ತ್ರಿಕೋನದ ಎಡ ಭುಜದಲ್ಲಿ ಅರೆವಾಸಿ ಏರಿ ಉಮರಿಯಾ ಜಿಲ್ಲಾ ಕೇಂದ್ರವನ್ನು ತಲಪಿದೆವು. ನಮ್ಮ ಅಪರಾಹ್ನ ಸೂರ್ಯನ ಪೂರ್ಣ ಬಾಂಧವ್ಯ ಮುಗಿಸಿಕೊಂಡೇ (ಸಂಜೆ ಐದು ಗಂಟೆ) ‘ಬಾಂಧವಘರ್‍ ರಾಷ್ಟ್ರೀಯ ಉದ್ಯಾನವನ’ದ ವಲಯ ಕಛೇರಿ ದ್ವಾರ ಕಟಕಟಾಯಿಸಿದ್ದೆವು. 

ಮುಂದಾಗಿ ಎಲ್ಲ ವನಧಾಮಗಳಿಗೆ ಬರೆದಂತೇ ಬಾಂಧವಘರ್‍ಗೂ ನನ್ನ ಪತ್ರ ಹೋಗಿತ್ತು. ಆದರೆ ವಲಯ ಕಛೇರಿ ತಮಗೇನೂ ಸಂಬಂಧವಿಲ್ಲದಂತೆ, ವನಧಾಮದ ಪ್ರವೇಶ ಕಛೇರಿ - ತಾಲಕ್ಕೆ, ಹೋಗಲು ಸೂಚಿಸಿ ಕೈ ತೊಳೆದುಕೊಂಡರು. ದಡಬಡ ಕೆಟ್ಟ ರಸ್ತೆಯಲ್ಲಿ ಮತ್ತೆ ಮೂವತ್ತು ಕಿಮೀ ಹೋಗಬೇಕಾದರೆ ನಮಗೆ ಒಂದು ಗಂಟೆಯೇ ಹಿಡಿಯಿತು, ಕತ್ತಲಾಗಲೇ ಹಗುರಕ್ಕೆರಗಿತ್ತು. ನಮಗೆ ದೊಡ್ಡ ನಿರೀಕ್ಷೆ ಏನೂ ಇರಲಿಲ್ಲ. ಅದಕ್ಕೆ ಸರಿಯಾಗಿ ತಾಲದ ಕಚೇರಿಯೂ ಪತ್ರ ತಲಪಿಲ್ಲ ಎಂದೇ ಸಾಧಿಸಿ, ದಿವ್ಯ ನಿರ್ಲಕ್ಷ್ಯ ತೋರಿತು. ನಮ್ಮ ವನ್ಯಪ್ರೀತಿಯ ಸಾಹಸಯಾನವೂ ಅವರನ್ನು ಪ್ರಭಾವಿಸಲಿಲ್ಲ. ನಾನು ಅವರ ಸತ್ತ್ವ ಪರೀಕ್ಷೆಯನ್ನು ಪೂರ್ಣಗೊಳಿಸುವಂತೆ ಒತ್ತಾಯ ಹೇರಿದೆ. ಅದಕ್ಕೆ ತುಸು ಮಣಿದಂತೆ ಮಾಡಿ, ಅವರು ತೋರಿದ ಅತಿಥಿಗೃಹದ ಚಂದವನ್ನು ಏನು ಹೇಳಲಿ!! ಅದು ಹೊಸತು ಮತ್ತು ನಮ್ಮಂಥವರಿಗೆ ಹೇಳಿ ಮಾಡಿಸಿದಂತೇ ಇರುವ ಎರಡು ಕೋಣೆಗಳ ಪುಟ್ಟ ಮನೆಯೂ (ಡಾರ್ಮಿಟರಿ) ಹೌದು. ಆದರೆ ವಸ್ತು ಸ್ಥಿತಿ ಜಿಗುಪ್ಸೆ ಮೂಡಿಸುವಂತಿತ್ತು - ಎಲ್ಲ ವಿದ್ಯುತ್ ಸಂಪರ್ಕವನ್ನು ಕಳ್ಳರು ಕಿತ್ತು ಹಾಕಿದ್ದರು. ಮುರುಕು ನಲ್ಲಿ, ಮುಂತಾದ ಸವಲತ್ತುಗಳು ಕೂರಿಸಿದಂದಿನಿಂದ ನೀರಹನಿ ಕಂಡಂತೇ ಇರಲಿಲ್ಲ, ಕಿಟಕಿ ಬಾಗಿಲುಗಳು ಗೆದ್ದಲಿನ ಹಪ್ಪಳ ಮತ್ತು ನೆಲ ನಾವು ಬಂದ ದಾರಿಗೆ ಸ್ಪರ್ಧಿ! ಅವರಿಗಿಲ್ಲದ ನಾಚಿಕೆಯಲ್ಲಿ ನಾವು ಕುಗ್ಗಿ, ಹೊರನಡೆದು, ಖಾಸಗಿ ವಾಸವ್ಯವಸ್ಥೆಯನ್ನರಸಿಕೊಂಡು ರಾತ್ರಿಗೆ ವಿಶ್ರಮಿಸಿದೆವು. (ತಾ. ೩೮, ಔ. ೧೮೦೦, ತೇ ೧೫% ದಿನದ ಓಟ ೩೧೧ ಕಿಮೀ)
(ಮುಂದುವರಿಯಲಿದೆ)

1 comment:

  1. ವಿದೇಶಗಳಲ್ಲಿ (ನಾನು ನೋಡಿದ ಒಂದೇ ಪರದೇಶ,ಅಮೆರಿಕ)ಪ್ರವಾಸಿಗಳಿಗಿರುವ ಸೌಲಭ್ಯ ಗಳನ್ನು ನೋಡಿದರೆ ಮತ್ತೆ ಮತ್ತೆ ಪ್ರವಾಸ ಹೋಗೋಣ ಅನ್ನಿಸುತ್ತೆ.ನಮ್ಮಲ್ಲಿಯ ಅವ್ಯವಸ್ಥೆ ಗಳು,ಅದರ ಸಹವಾಸವೇ ಬೇಡ ಎನ್ನುವಷ್ಟು ಅಧ್ವಾನ.ಮತ್ತೆ ವ್ಯವಸ್ಥಿತವಾಗಿರುವುದು,ಮೋಜು ಮಸ್ತಿ ಮಾಡುವವರಿಗೆ ಮೀಸಲು ಅಂತಾಗಿದೆ.

    ReplyDelete