26 July 2020

ಜೈಪುರಕ್ಕೆ ಜೈ ಆಗ್ರಾವೂ ಸೈ

(ಪ್ರಾಕೃತಿಕ ಭಾರತ ಸೀಳೋಟ - ೭) 

‘ಹೊಟ್ಟೆ ಘಟ್ಟಿಯಿರಬೇಕು, ಘಟ್ಟ ಎದುರಾಗಬೇಕು’ ಸಾಹಸ ಯಾತ್ರೆಗಳಲ್ಲಿ ನನ್ನ ಅಭ್ಯಾಸ. ಬೆಳಿಗ್ಗೆ ನಾಲ್ಕು ಗಂಟೆಗೆ ಹೊರಡಬೇಕಾದರೂ ತಿಂಡಿ ಮಾಡಿಕೊಟ್ಟರೆ, ನಾನು ತಿಂದೇ ಹೊರಡುವವ. ಹಾಗೆಂದು ಒಂದೆರಡು ಗಂಟೆ ತಡವಾದರೆ ಕೈಕಾಲೇನು ಬಿದ್ದು ಹೋಗುವುದೂ ಇಲ್ಲ. ಅಂದು (೬-೫-೯೦) ರಣಥೊಂಬರಾ ಕೋಟೆಯನ್ನು ಬೆಳಿಗ್ಗೆ ನೋಡಿ ಬರುವ ಉತ್ಸಾಹದಲ್ಲಿ ತಿಂಡಿ ತಿಂದಿರಲಿಲ್ಲ. ವಾಪಾಸು ಬಂದು ಮುಂದಿನ ಪ್ರಯಾಣಕ್ಕಿಳಿಯುವಾಗ ಮಾತ್ರ (೧೦.೪೫), ಒಂದೆರಡಲ್ಲ ಮೂರ್ನಾಲ್ಕು ಗಂಟೆಗಳೇ ತಡವಾಗಿತ್ತು. ಮೊದಲು ಸಿಕ್ಕ ಧಾಬಾಕ್ಕೇ ನುಗ್ಗಿದೆವು. ಅವನಲ್ಲಿ ಪೂರ್ವ ಸಿದ್ಧತೆಗಳೇನೂ ಇರಲಿಲ್ಲ. ಹಾಗಾಗಿ ನಾವು ಹಳಸಲು ಎಣ್ಣೇಲಿ ಕರಿದ ಪೂರಿ, ಜಿಡ್ಡು ಬಸಿಯುವ ಪರೋಟಾ
ಬಿಟ್ಟು, ರೊಟ್ಟಿ, ಮೊಸರು, ಉಪ್ಪಿನ ಕಾಯಿ ಕೇಳಿದೆವು. "ಬನ್ಜಾಯೆಗಾ" (ಮಾಡ್ಕೊಡಾಣಾ) ಎಂದ. ಆದರೆ ಪುಣ್ಯಾತ್ಮ ಮಾಡಿದ್ದು ಅವನದೇ ಕ್ರಮದಲ್ಲಿ. ಹಿಟ್ಟನ್ನು ಕಲೆಸುವಾಗಲೇ ಧಂಡಿಯಾಗಿ ಎಣ್ಣೆ ಸುರಿದುಬಿಟ್ಟ. ಒಂದೊಂದು ಇಂಚು ದಪ್ಪಕ್ಕೆ ಲಟ್ಟಿಸಿ, ಅದೇನು ತವಾವೋ ಚಪ್ಪಟೆ ಬಾಣಲೆಯೋ ಎನ್ನುವಂತೆ ಎಣ್ಣೇ ಸ್ನಾನ ಮಾಡಿಸಿಯೇ ಕೊಟ್ಟ. ಲೇಟ್ ಫೀ ಪೇಡ್ ಬಿರೇಕ್ ಫಾಸ್ಟ್‍ಗೆ, ಅಡ್ವಾನ್ಸ್ಡ್ ಲಂಚೂ ಸೇರಿಸಿ, ಒಬ್ಬೊಬ್ಬರೂ ಕನಿಷ್ಠ ಆರೆಂಟು ರೊಟ್ಟಿಯಾದರೂ ಹೊಡೀಬೇಕು ಅಂದು ಕೊಂಡಿದ್ದೆವು. ಅವನ ಹಾಳಾದ ರೊಟ್ಟಿ
ಒಳ್ಳೇ ರುಚಿಯೂ ಇತ್ತು. ಆದರೆ ಒಂದೂವರೆ ಎರಡಕ್ಕೇ ಎಲ್ಲ ಸುಸ್ತು! ಭಯ್ಯಾಜೀ ಸುಮ್ಮನಿದ್ದ ಮಾತಾಜೀನ (ದೇವಕಿ) "ಆಪ್ ಭೀ ಖಾಯಿಯೇ..." ಎಂದು ರಮಿಸತೊಡಗಿದಾಗ, ಇವಳು ಹೆದರಿ, ‘ರವಿವಾರ ಉಪವಾಸ ವ್ರತ’ ಹೇಳಿಬಿಟ್ಟಳು! (ಮುಂದೆಲ್ಲೋ ಏನೋ ಹಗುರದ್ದು ತಿಂದು ಬದುಕಿದಳೂ ಎನ್ನಿ.) 

ನಮ್ಮ ಅಂದಿನದೂ ಸುಲಭ ಲಕ್ಷ್ಯ - ಜೈಪುರ, ಸುಮಾರು ಇನ್ನೂರು ಕಿಮೀ ಒಳಗಿನದು. ಇಂದು ನಕ್ಷೆ ಮೂವತ್ತು ಕಿಮೀ
ಉಳಿತಾಯದ ರಾಜ್ಯ ಹೆದ್ದಾರಿ ತೋರಿಸುತ್ತದೆ. ಆದರೆ ಅಂದು ನಾವು ಅನುಸರಿಸಿದ್ದು ‘ಟೊಂಕ್’ ಮೂಲಕ ಹೋಗುವ ರಾಷ್ಟ್ರೀಯ ಹೆದ್ದಾರಿ. (ತಾಪ ೩೭, ತೆ ೨೫% ಔನ್ನತ್ಯ ೧೨೫೦) ಲೆಕ್ಕಕ್ಕೆ ಭಾರತದ ಏಕೈಕ ಮರುಭೂಮಿಯ ರಾಜ್ಯ ರಾಜಸ್ತಾನ. ಆದರೆ ನಮ್ಮ ಓಟ ಬಹುತೇಕ ಮರುಭೂಮಿಯ ಛಾಯೆಯಷ್ಟೇ ಇರುವ ಪೂರ್ವ ಮಗ್ಗುಲಿನದು, ನಸು ಹಸಿರು ಹೊದ್ದ ನೆಲದ್ದು. (ನಿಜ ಮರುಭೂಮಿ ಅನುಭವ ಕಥನಕ್ಕೆ: ಮರುಭೂಮಿಗೇ ಮಾರುಹೋಗಿ) ತುಂಡು ರವಿಕೆಯ ಹೆಂಗಸರು, ಭಾರೀ
ಮುಂಡಾಸು ಮತ್ತು ಭರ್ಜರಿ ಮೀಸೆಯ ಬಡಕಲು ಗಂಡಸರು, ವಿಶಿಷ್ಟ ಗಾಡಿಗೆ ಕಟ್ಟಿದ ಒಂಟೆ, ಜಾಲಿ ಮುಳ್ಳಿನ ಪೊದರು, ಮರ ಎಲ್ಲ ಧಾರಳವೇ ಕಾಣ ಸಿಕ್ಕರೂ ನಿಜ ಮರುಭೂಮಿಯ ದರ್ಶನ ಆಗಲಿಲ್ಲ. ಸಣ್ಣ ಸಣ್ಣ ದೂಳೀ ಸುಳಿಗಾಳಿ ಕಂಬಗಳ ದರ್ಶನವಾದರೂ ನಾವು ಹೆದರುವಂಥ ಅನುಭವಗಳೇನೂ ಆಗಲಿಲ್ಲ. ಮತ್ತೆ ಬಿಸಿಲಿನ ಹೊಡೆತದಲ್ಲೂ ಈ ದಾರಿ (ಖಂಡಿತಾ ತಂಪು ಅಲ್ಲ) ಮಹಾರಾಷ್ಟ್ರ, ಮಧ್ಯಪ್ರದೇಶಗಳಲ್ಲಿ ನಾವು ಹಾಯ್ದು ಬಂದ ಅನುಭವಗಳ ಹೋಲಿಕೆಯಲ್ಲಿ ಹೆಚ್ಚಿನ ಕಷ್ಟದ್ದಾಗಿ ಕಾಣಲಿಲ್ಲ. 

ಚಿತ್ರ ಉಪಾಧ್ಯರದ್ದು
ಅದೊಂದೆಡೆ ನಮ್ಮ ಮೂರೂ ಬೈಕುಗಳು ಒಮ್ಮೆಗೇ ಅನೂಹ್ಯ ದೃಶ್ಯ ಕಂಡು, ದಿಕ್ಕೆಟ್ಟು ನಿಧಾನಿಸಿದವು. ಕರಿ ಕರೀ ಬೋಳುಮಂಡೆ, ಗೂನು ಬೆನ್ನಿನ ನೂರಾರು ಮುದುಕರು ದಾರಿಗೇ ಮುತ್ತಿಗೆ ಹಾಕಿದಂತಿತ್ತು. ನಿಜದಲ್ಲಿ, ಮೃತ ಒಂಟೆಯೊಂದು ದಾರಿಯ ಮಗ್ಗುಲಲ್ಲಿ ಬಿದ್ದಿತ್ತು. ಅದಕ್ಕೆ ಮುತ್ತಿದ ಅಕ್ಷರಶಃ ನೂರಾರು ರಣ ಹದ್ದುಗಳು ಪಾಲಿಗಾಗಿ ಸರದಿ ಕಾದಿದ್ದವು. ಮುಂಚೂಣಿಯಲ್ಲಿ ತುರುಸಿನ ಸ್ಪರ್ಧೆಯೂ ನಡೆದಿತ್ತು. ತೆರೆದಂಗಳದಲ್ಲಿನ ಕೋಳಿ, ಬೆಕ್ಕು, ಕರು, ಅಪರೂಪಕ್ಕೆ ಸಣ್ಣ ಮಗುಗಳನ್ನೂ ಇವು ಆಹಾರಕ್ಕಾಗಿ
ಹೊತ್ತೊಯ್ಯುತ್ತವೆ ಎಂಬ ರಂಗಿನ ಕತೆಗಳು ನೆನಪಾಗಿ, ಸಣ್ಣ ಭಯದಲ್ಲೇ ಮುಂದುವರಿದೆವು. ರಣಹದ್ದುಗಳು ಬೇಕೋ ಬೇಡವೋ ಎನ್ನುವಂತೆ ಸಣ್ಣದಾಗಿ ಕುಪ್ಪಳಿಸಿ ದಾರಿ ಬಿಟ್ಟುಕೊಟ್ಟವು. 

ವಾಸ್ತವದಲ್ಲಿ ೧೯೯೦ರಿಂದಲೇ ರಣ ಹದ್ದುಗಳ ಸಂಖ್ಯೆ ತೀವ್ರ ಕುಸಿಯುತ್ತ ಬಂದಿದೆ. ಕಾರಣ - ಮತ್ತೆ ನಮ್ಮದೇ ವಿವೇಚನಾರಹಿತ ರಾಸಾಯನಿಕ ಬಳಕೆ. ಪೈಸೆ ಖರ್ಚಿಲ್ಲದೇ ಮೃತ ಜಾನುವಾರುಗಳ ಬಹಳ ದೊಡ್ಡ ಮತ್ತು ಚೊಕ್ಕ ಜಾಡಮಾಲಿಗಳಾಗಿದ್ದವು ಈ ರಣಹದ್ದುಗಳು. ಆದರೆ ಹಾಗೆ ಸತ್ತ ಜಾನುವಾರುಗಳಿಗೆ ನಾವು ‘ಅಪಾರ ಬುದ್ಧಿವಂತಿಕೆ’ಯಲ್ಲಿ - ಹಾಲು ಹೆಚ್ಚಿಸಲು, ಪುಷ್ಟಿಗೆ, ಕಾಯಿಲೆಗೆ ಎಂದಿತ್ಯಾದಿ ಮೈಗೂಡಿಸಿದ ‘ಔಷಧ’ಗಳು, ಈ ಹದ್ದುಗಳಿಗೆ ವಿಷವಾಗಿವೆ. ಅಷ್ಟು ಸಾಲದೆಂಬಂತೆ, ಕೆಲವೆಡೆ ಜನ ಸ್ಪಷ್ಟ ವಿಷವನ್ನೇ ಹಾಕಿ ಹದ್ದುಗಳ ‘ಉಪದ್ರ’ ಕಡಿಮೆ ಮಾಡಿದ್ದೂ ಉಂಟು! ಜೀವ ಸರಪಳಿಯ ಈ ಅಮೂಲ್ಯ ಮತ್ತು ಸ್ವಸ್ಥ ಕೊಂಡಿ ಕಳಚುತ್ತಿದ್ದಂತೆ ಕೊಳೆತ ಕಳೇವರಗಳಿಂದ
ಕಾಯಿಲೆಗಳು ಹೆಚ್ಚಿದ್ದು, ಹುಚ್ಚು ನಾಯಿಗಳು ಮೆರೆದದ್ದು ಇಂದಿಗೂ ದೊಡ್ಡ ಜನವರ್ಗಕ್ಕೆ ತಿಳಿದೇ ಇಲ್ಲ; ಅಜ್ಞಾನಂ ಪರಮ ಸುಖಂ! 

ಸಂಜೆ ನಾಲ್ಕಕ್ಕೆ ಜೈಪುರ ತಲಪಿದ್ದೆವು. ಯೋಜನೆಯಂತೇ ಅಲ್ಲಿನ ಯೂತ್ ಹಾಸ್ಟೆಲ್ಲಿಗೆ ಹೋಗಿದ್ದೆವು, ಅವಕಾಶವೂ ಸಿಕ್ಕಿತ್ತು. ಆದರೆ ಅಲ್ಲೊಂದು ಮದುವೆ ಪಾರ್ಟಿಯ ಗಜಿಬಿಜಿ, ಗದ್ದಲ ನೋಡಿ ಗಾಬರಿಯಾಗಿ, ರೈಲ್ವೇಯವರ ವಿಶ್ರಾಂತಿ ಗೃಹಕ್ಕೋಡಿದೆವು. ಅದೃಷ್ಟಕ್ಕೆ ಕಡಿಮೆ ಖರ್ಚಿನ, ಹೆಚ್ಚು
ವ್ಯವಸ್ಥೆಯ ಅತಿಥಿಗೃಹ - ‘ಸ್ವಾಗತಂ’, ಸಿಕ್ಕಿತು. ಗುಲಾಬೀ ನಗರ, ಐತಿಹಾಸಿಕವಾಗಿ ಹಲವು ಕತೆ, ರಚನೆಗಳ ನೆಲೆ ಎಂದಿತ್ಯಾದಿ ಪ್ರಭಾವಳಿಯಿಂದ ಜೈಪುರ ನಗರದರ್ಶನ ನಮ್ಮ ಆದ್ಯತೆಯ ಪಟ್ಟಿಯಲ್ಲಿತ್ತು. ರಾಜಸ್ತಾನ ರಾಜ್ಯ ಪ್ರವಾಸೋದ್ಯಮ ಇಲಾಖೆ ಅರ್ಧ ದಿನದ ಅಂಥ ಒಂದು ಕಲಾಪವನ್ನೂ ನಡೆಸುತ್ತಿತ್ತು. ನಾವು ಮೊದಲು ಮರು ಬೆಳಿಗ್ಗೆಗೆ ಆರು ಸ್ಥಳ ಕಾಯ್ದಿರಿಸಿ, ಸಂಜೆಗೆ ವಿರಮಿಸಿದೆವು. ಮೊದಲ ಬಾರಿಗೆ ಸಿಕ್ಕ ಆರಾಮದಲ್ಲಿ, ಮಾವ ಗೌರೀಶಂಕರರಿಗೆ ಬರೆದ ಪತ್ರದ ಒಂದು ತುಣುಕು: "....
ಪ್ರಯಾಣ, ಸ್ಥಳ ದರ್ಶನ, ಕೊಚ್ಚೆ ಚರಂಡಿಗಳ ಅಂಚಿನಲ್ಲೂ ಇರಬಹುದಾದ ಜೋಪಡಿಗಳ ಊಟ ಉಪಚಾರ ನಂಬಿ, ೧೪ ದಿನ ಕಳೆದು, ಸುಮಾರು ೩೨೦೦ ಕಿಮೀ ದಾರಿ ಸವೆಸಿಯೂ ಉತ್ಸಾಹ ಇಲ್ಲಿನ ಥರ್ಮಾಮೀಟರಿನಂತೇ ಉನ್ನತದಲ್ಲೇ ಇದೆ...." 
(ಸಂಜೆ ತಾಪ ೩೨, ತೆ ೩೨% ಔನ್ನತ್ಯ ೨೦೦೦, ದಿನದ ಓಟ ೨೧೭ ಕಿಮೀ) 

ಆರು ಗಂಟೆಯೊಳಗೆ ದಾರಿಗೆ ಬೀಳುವುದು ನಿತ್ಯ ಕರ್ಮ. ಆದರೆ ಜೈಪುರದ ಬೆಳಿಗ್ಗೆ ವಿಶಿಷ್ಟ; ಆರಾಮವಾಗಿ ಎದ್ದು (೮-೫-೯೦ ಮಂಗಳವಾರ) ೮ ಗಂಟೆಗೆ ನಗರ ದರ್ಶನದ ಬಸ್ಸೇರಿದ್ದೆವು. ಉಚ್ಚೆ ಹೊಯ್ಯಲಿಕ್ಕೂ ಬೈಕ್ ತೆಗೆಯುತ್ತಿದ್ದವರು ಅರ್ಧ ದಿನ ಬೈಕ್ ಮುಟ್ಟಲೇ ಇಲ್ಲ. ಬಿಸಿಲಿನಲ್ಲಿ ತಲೆಬಿಸಿ, ಸೆಕೆಯಲ್ಲಿ ಮೈ ಧಗೆ ಮತ್ತು ಹರಕು ಮುರುಕು ದಾರಿಗಳಲ್ಲಿ ಉದ್ದಾನುದ್ದ ಬೈಕ್ ಓಡಿಸುತ್ತ ಕುಂಡೆ ಉರಿ - ಎಲ್ಲಕ್ಕು ಅಂದು ಅರ್ಧ ದಿನದ ಶಾಂತಿ. ಸುಖಾಸೀನದ ಬಸ್ಸಿನಲ್ಲಿ, ದಾರಿಯ ವಿಪರೀತಗಳಿಗೆ ನಿರ್ಲಕ್ಷ್ಯರಾಗಿ,
ಯಾರದೋ ನಿರ್ದೇಶನದಲ್ಲಿ ಅರಮನೆ, ವಸ್ತುಪ್ರದರ್ಶನ, ಹವಾ ಮಹಲ್, ಜಂತರ್ ಮಂತರ್ ಎಂದಿತ್ಯಾದಿ ಆರಾಮವಾಗಿ ಸುತ್ತಾಡಿ ನೋಡಿದೆವು, ವಿವರಣೆಗಳನ್ನೂ ಕಿವಿ ತುಂಬಿಕೊಂಡೆವು. ಆದರೆ ಇಂದಿಗೂ ಮನದಲ್ಲುಳಿದ (ಅನಾವಶ್ಯಕ?) ವಿವರಗಳು ಎರಡೇ! 

ಒಂದು ಆನೆಗಳು - ನಗರದ ಅನೇಕ ಮುಖ್ಯ ಸ್ಥಳಗಳ ನಡುವೆ ‘ಆನೆಯೇರಿ ರಾಜಾ ಶೈಲಿ’ ಹೋಗುವ ವ್ಯವಸ್ಥೆಯಿತ್ತು. ಮರುಭೂಮಿಯ ಮಹಾನಗರದ ಉರಿ ಬಿಸಿಲಿನಲ್ಲಿ, ಪೂರ್ಣ
ಡಾಮರು ಕಾಂಕ್ರೀಟುಗಳ ಪರಿಸರದಲ್ಲಿ, ಹೊಗೆ ದೂಳಿನ ವಾತಾವರಣದಲ್ಲಿ ಅವು ಬಳಲುತ್ತಿದ್ದ ಪರಿ ನಿಜಕ್ಕೂ ಹೃದಯವಿದ್ರಾವಕ. ಮತ್ತೊಂದು ಸ್ಮರಣೀಯ ಸಂಗತಿ, ಅಲ್ಲ ಸಂಗಾತಿ - ಇಲಾಖೆಯ ಮಾರ್ಗದರ್ಶಿ. ಹೋದಲ್ಲೆಲ್ಲ ನಮ್ಮ ಹಿತರಕ್ಷಣೆಯ ದೃಷ್ಟಿಯಲ್ಲೆನ್ನುವಂತೆ ಈತ ನಮ್ಮನ್ನು ಸ್ಮರಣಿಕೆ ಇತ್ಯಾದಿ ಖರೀದಿಗಳಿಂದ ದೂರ ಇಟ್ಟಿದ್ದ. ಕೊನೆಯಲ್ಲಿ ನಾವು ನಿರಾಶರಾಗದಂತೆ, ಕೇವಲ ರಫ್ತುಗಾರ ಜವಳಿ ಮಳಿಗೆಯೊಂದಕ್ಕೆ ವಿಶೇಷಾನುಮತಿಯಲ್ಲಿ ಪ್ರವೇಶ ಕೊಡಿಸಿದ. ನಾವು ಮಂಗಳೂರು ಬಿಡುವಂದೇ ಪ್ರವಾಸದಲ್ಲಿ
ಅಂದಂದಿನ ಆವಶ್ಯಕತೆಯನ್ನುಳಿದು ಏನೂ ಖರೀದಿಸಬಾರದು ಎಂದೇ ನಿರ್ಧರಿಸಿದ್ದೆವು. ಆದರೂ ಮಾರ್ಗದರ್ಶಿಯ ಒಳ್ಳೇ ಸಲಹೆಯನ್ನು ಪುರಸ್ಕರಿಸುವಂತೆ ದೇವಕಿ ವ್ರತಭಂಗ ಮಾಡಿ, ವಿಶೇಷ ಸೀರೆ ಖರೀದಿಸಿದ್ದಳು. ಮಂಗಳೂರಿಗೆ ಮರಳಿದ ಮೇಲೆ ತಿಳಿಯಿತು - ಕೊಟ್ಟ ಬೆಲೆ ದುಬಾರಿ ಮತ್ತು ಗುಣಮಟ್ಟ ಖೋಟಾ! ಅನ್ಯರಲ್ಲಿ ಮೋಸ ಹೋಗಬೇಡಿ, ನಮ್ಮಲ್ಲಿಗೆ ಬನ್ನಿ! 

ಜೈಪುರದಲ್ಲಿ ಮತ್ತೆ ಅರ್ಧ ದಿನ ಕಳೆಯಲು ನಾವು
ಸಿದ್ಧರಿರಲಿಲ್ಲ. ನಮ್ಮ ವನಧಾಮಗಳ ಸಂಕೋಲೆಯಲ್ಲಿ ಮುಂದೆ ಎರಡು ಆಯ್ಕೆಗಳಿದ್ದವು - ಸಾರಿಸ್ಕಾ ಮತ್ತು ಕೇವಲದೇವಾ. ಎರಡೂ ಜೈಪುರದಿಂದ ಸುಮಾರು ಇನ್ನೂರು ಕಿಮೀ ಒಳಗಿನ ಅಂತರದವು. ಸಾರಿಸ್ಕಾದ ಅಂಕಪಟ್ಟಿ ಆ ಕಾಲಕ್ಕೇ ಬಿದ್ದು ಹೋಗಿತ್ತು. ಈಗಂತೂ ಕೇಳುವುದೇ ಬೇಡ. ವರ್ಷಾನುಗಟ್ಟಳೆ ಅರಣ್ಯ ಇಲಾಖೆ ಲೆಕ್ಕ ಪತ್ರಗಳಲ್ಲೇ ಸಾಕಿ, ಹೆಚ್ಚಿಸಿದ ಹುಲಿ ಸಂಖ್ಯೆ ಭಾರೀ ಗಾಳಿಗುಳ್ಳೆ! ಅಲ್ಲಿ ಒಂದೂ ಹುಲಿ ಇಲ್ಲ ಎನ್ನುವುದು ಜಗಜ್ಜಾಹೀರಾಗಿದೆ! ದಾರಿಯಲ್ಲಿ ನಾವಾಗಲೇ ಮೇಲ್ಘಾಟ್ ಮತ್ತು ಶಿವಪುರಿ ವನಧಾಮಗಳಲ್ಲಿ
ಕಟ್ಟಿಕೊಂಡ ನಿರಾಶೆಯನ್ನು ರಣಥೊಂಬರಾ ಪೂರ್ಣ ಅಳಿಸಿತ್ತು. ಇನ್ನು ಅದರ ರುಚಿ ಕೆಡಿಸಿಕೊಳ್ಳಬಾರದೆಂದು, ಹಕ್ಕಿಗಳಿಗೇ ಮೀಸಲಾದ ‘ಕೇವಲದೇವಾ ಘಾನಾ ರಾಷ್ಟ್ರೀಯ ಉದ್ಯಾನವನ’ದತ್ತ ಬೈಕ್ ಗುಡುಗುಡಾಯಿಸಿದೆವು. 

ಬಾಲ ಯಾನೆ ಬಾಲಕೃಷ್ಣ ಸಣಕಲ. ಸಹಜವಾಗಿ ದಾರಿಯಲ್ಲೆಲ್ಲೋ ಪೋಲಿಸಪ್ಪನಿಗೆ ಸಂಶಯ ಬಂತು, ತನಿಖೆ ಮಾಡಿದ. ಬಹುಶಃ ಈತ ಹೆಸರು ಮತ್ತು ನೋಟಕ್ಕಷ್ಟೇ ಬಾಲ ಎಂದು ಸ್ಪಷ್ಟವಾದ ಮೇಲೆ, ಶುಭಾಶಯ ಹೇಳಿ
ಬೀಳ್ಕೊಂಡಿರಬೇಕು. (ಅಲ್ಲದಿದ್ದರೆ, ಬಾಲ ಹೇಳಬೇಕು!) ಇದು ರಾಷ್ಟ್ರೀಯ ಹೆದ್ದಾರಿಯೇ ಆದ್ದರಿಂದ ನಿರ್ಯೋಚನೆಯಲ್ಲಿ ಸಂಜೆಗೆ ಮುಖ್ಯ ಊರು ಭರತ್ ಪುರ ತಲಪಿದ್ದೆವು. ಅಲ್ಲಿನ ಬಲ ಕವಲಿಗೆ ಏಳೇ ಕಿಮೀ ಅಂತರದಲ್ಲಿ ಹಕ್ಕಿಧಾಮದ ಪ್ರವೇಶ ವಲಯ. ಬಿರುಬೇಸಗೆಯಲ್ಲಿ ವಲಸೆ ಹಕ್ಕಿಗಳು ತುಂಬಾ ವಿರಳವೇ. ಹಾಗಾಗಿ ಅಲ್ಲಿನ ರಾಜಸ್ತಾನ ಪ್ರವಾಸೋದ್ಯಮ ಇಲಾಖೆಯ ಅತಿಥಿಗೃಹವೂ ನಮಗೆ ಸುಲಭವಾಗಿ ಸುಖಾಶ್ರಯವನ್ನೇ ಕೊಟ್ಟಿತು. 
(ರಾತ್ರಿ ತಾ. ೩೩, ತೆ. ೩೦% ಔನ್ನತ್ಯ ೧೦೦೦. ದಿನದ ಓಟ
೧೮೫ ಕಿಮೀ) 

ಸುಮಾರು ೨೫೦ ವರ್ಷಗಳ ಹಿಂದೆ ಭರತಪುರವನ್ನು ಕೇಂದ್ರವಾಗಿಟ್ಟುಕೊಂಡು ರಾಜಾ ಸೂರಜ್ ಮಲ್ಲ ಆಳಿದ್ದನಂತೆ. ಆತನ ಮುತ್ಸದ್ಧಿತನದ ಕುರುಹು ಈ ವನಧಾಮದ ಜಲ ಹಾಗೂ ಜವುಗು ನೆಲ. ಬಾಣಗಂಗೆ ನದಿಗೆ ಹಾಕಿದ ಒಡ್ಡು ಇಲ್ಲಿನ ಪ್ರಾಕೃತಿಕ ತಗ್ಗನ್ನು ತುಂಬಿದ ಫಲವಿದು. ವಿಶ್ವದ ಬಹುತೇಕ ಎಲ್ಲ ವಲಸೆ ಹಕ್ಕಿಗಳೂ ಋತುಮಾನದ ಬದಲಾವಣೆಗಳಿಗೆ ಸರಿಯಾಗಿ ಇಲ್ಲಿಗೆ ಬಂದು, ಇದನ್ನು ವಿಶ್ವಖ್ಯಾತವಾಗಿಸಿದೆ. ಸುಮಾರು
೧೯೭೨ರವರೆಗೂ ಹಕ್ಕಿ ಬೇಟೆಗೂ ಕುಖ್ಯಾತವಾಗಿದ್ದ ಈ ಪ್ರದೇಶಕ್ಕೆ ಸರಕಾರ ೧೯೮೨ರಲ್ಲಿ ರಾಷ್ಟ್ರೀಯ ವನಧಾಮದ ಅಂತಸ್ತು ಕೊಟ್ಟು ಬಿಗಿಮಾಡಿದೆ. 

ಮರು ಮುಂಜಾನೆ, ಅಂದರೆ ೯-೫-೯೦ ಬುಧವಾರ, ಬೆಳಕು ಹರಿಯುವ ಮುನ್ನ ನಾವು ಹಕ್ಕಿಧಾಮದ ಪ್ರವೇಶದ್ವಾರದಲ್ಲಿದ್ದೆವು. ಉದ್ಯಾನವನದೊಳಗೆ ಬಹುತೇಕ ರಸ್ತೆಯ ಜಾಲ ಚೆನ್ನಾಗಿಯೇ ಇದೆ. ಆದರೆ ಪ್ರವಾಸಿಗಳಿಗೆ ಇಲ್ಲಿ ಕೇವಲ ನಡಿಗೆ ಅಥವಾ ಸೈಕಲ್ ಸವಾರಿಗಷ್ಟೇ ಅವಕಾಶ.
ನಾವು ಆರರಿಂದ ಎಂಟು ಗಂಟೆಯವರೆಗೆ ಇದರ ವಿವಿಧ ಕವಲುಗಳನ್ನೆಲ್ಲ ನಡೆದೇ ನೋಡಿ ದಣಿದೆವು. ನೀರು ತುಂಬಾ ಕಡಿಮೆಯಾಗಿ, ಜವುಗು ಪ್ರದೇಶದ ಹುಲ್ಲು ಪೊದರುಗಳೂ ಬಳಲಿ "ನಾವೇನು ತೋರಿಸೋಣ" ಎನ್ನುವಂತಿದ್ದವು. ಇದ್ದ ಕೆಲವೇ ಹಕ್ಕಿ, ಜಿಂಕೆ, ಕಡವೆ, ಹಂದಿಗಳು ದರ್ಶನವನ್ನೇನೋ ಕೊಟ್ಟವು. ಆದರೆ ನಾವ್ಯಾರೂ ಹಕ್ಕಿ ಹವ್ಯಾಸದವರಲ್ಲ. ಅಂದಂದಿನ ನೋಟ, ರೋಮಾಂಚನದೊಡನೆ ಸುಸ್ತಾದ್ದರಲ್ಲೇ ತೃಪ್ತಿ ಕಂಡೆವು. ಅತಿಥಿಗೃಹದ ಮೇಟಿ "ಆಟ್ ಬಜೆ ಬ್ರೇಕ್ ಫಾಸ್ಟ್ ಲಗಾವೂಂಗ ಸಾಬ್" ಎಂದದ್ದನ್ನು ಹೆಚ್ಚು
ನೆನೆಯುತ್ತ ವಾಪಾಸು ಬಂದೆವು. ಪುಣ್ಯಾತ್ಮ ನಮ್ಮ ರಣ ಹಸಿವಿಗೆ ಹತ್ತೆಂಟು ಕಟ್ಲೇರಿ ಸದ್ದಿನಲ್ಲಿ ನಾಲ್ಕು ಬ್ರೆಡ್ ಹರಕು, ಉಗುರು ಬೆಚ್ಚನ್ನ ಚಾ ಕೊಟ್ಟ. ಆದರೆ ಇಲಾಖಾ ದರದ ಬಿಲ್ ಆ ಕಾಲಕ್ಕೆ ವಿಪರೀತವೇ ಇದ್ದಿರಬೇಕು: "ರೂ ಐದು, ಶುದ್ಧ ದಂಡ" ಎನ್ನುತ್ತದೆ ನನ್ನ ದಿನಚರಿ ನಮೂದು! 

ದಿಲ್ಲಿ ಶಿಖರದಲ್ಲಿದ್ದಂತೆ, ಜೈಪುರ - ಆಗ್ರಾ ತಳದ ಅಡ್ಡ ರೇಖೆಯಂತೆ ಕಾಣುವ ಹೆದ್ದಾರಿಯ ಚಿತ್ರ ಮುಖ್ಯ ಪ್ರವಾಸೀ ತ್ರಿಕೋನ. ನಾವು ತಳ ರೇಖೆಯಲ್ಲಿ ಮುಂದುವರಿದಂತೆ,
ಭರತಪುರದಿಂದ ಇಪ್ಪತ್ತೇ ಕಿಮೀಯಲ್ಲಿ ಸಿಕ್ಕ ಮುಂದಣ ದರ್ಶನೀಯ ಸ್ಥಳ - ಫತೇಪುರ ಸಿಕ್ರಿ. ಬಾಬರ್ ಹುಮಾಯೂನರಿಂದಲೇ ರಾಜಧಾನಿ ಆಗ್ರಾದ ನಿಬಿಡತೆಯಿಂದ ದೂರ, ಆಡಳಿತಕ್ಕೆ ಸಮೀಪ ಎಂದೇ ಆಯ್ಕೆಗೊಂಡ ಸ್ಥಳ ಸಿಕ್ರಿ. ಅರೆಬರೆ ಮೊಗಲ್ ಆಧುನಿಕತೆಯನ್ನು ಹೊದೆಸಿದ್ದರು. ಅಕ್ಬರ್ ಅದನ್ನು ತನ್ನ ಮಕ್ಕಳು ಹಾಗೂ ಕೌಟುಂಬಿಕ ವೈಭವಕ್ಕೆ ತಕ್ಕಂತೆ ಅರಮನೆಯುಕ್ತ ಕೋಟೆಯಾಗಿ ಬೆಳೆಸಿದ. ಮತ್ತೆ ಆತ ಗುಜರಾತ್ ಮೇಲಿನ ಮಹಾಯುದ್ಧದಲ್ಲಿ ಸಾಧಿಸಿದ ವಿಜಯದ
ನೆನಪಿಗೆ ಫತೇಹ್ ಪುರ್-ಸಿಕ್ರಿ ಎಂದೇ ಹೊಸ ನಾಮಕರಣವನ್ನೂ ಮಾಡಿದನಂತೆ. ಆದರೆ ಇತಿಹಾಸಕ್ಕೆ ಇನ್ನೂ ವಿವರಿಸಲಾಗದ ಸತ್ಯ, ಮುಂದೊಂದು ದಿನ ಅಕ್ಬರ್ ಇದನ್ನು ಸಂಪೂರ್ಣ ತ್ಯಜಿಸಿ, ಹಾಳುಬಿಟ್ಟನಂತೆ. ಅಲ್ಲಿನ ಭಾರೀ ಹುಮಾಯೂನ್ ಸ್ಮರಣ ಕಟ್ಟಡ, ಕೋಟೆಯಾದಿಗಳನ್ನು ನಾವು ಸುಮಾರು ಎರಡು ಗಂಟೆಗಳ ಕಾಲ ಸುತ್ತಾಡಿ, ನಮ್ಮ ದಿನದ ‘ಫತೇಹ್ ಪುರ’ ಹೆಸರನ್ನು ಆಗ್ರಾಕ್ಕೆ ಕೊಡಲು ಮುಂದುವರಿದೆವು. 

ಆಗ್ರಾ ತಲಪುವಾಗ ಮಟ ಮಟ ಮಧ್ಯಾಹ್ನ ಹನ್ನೆರಡೂವರೆ.
(ತಾ.೩೪ ತೆ. ೩೦%) ಸಣ್ಣದಾಗಿ ಚೌಕಾಸಿ ಮಾಡಿ, ಹೋಟೆಲ್ ಸಾರಂಗಿನಲ್ಲಿ ಹೊರೆ ಇಳಿಸಿ, ಊಟ ಮಾಡಿ, ನೇರ ನಗರ ಸುತ್ತಾಟಕ್ಕೆ ಇಳಿದೆವು. ಆಗ್ರಾದ ಕುರಿತು ಬಂದಿರುವ (ಬರುತ್ತಲೂ ಇರುವ) ಸಮೂಹ ಮಾಧ್ಯಮ ಹಾಗೂ ಪುಸ್ತಕಗಳ ಹೊರೆಯಲ್ಲಿ (ಕುಮಾರವ್ಯಾಸನ ಸ್ಮರಿಸಿ) ‘ತಿಣುಕುವನು ಫಣಿರಾಯ!’ ಹಾಗಾಗಿ ನಾನು ‘ಸಂಶೋಧನೆ’ ಮಾಡಿ ಏನೂ ಬರೆಯುವುದಿಲ್ಲ. ಹಾಗೂ ಏನಾದರೂ ಇದ್ದರೆ ನಮ್ಮ ಚಿತ್ರಗಳಲ್ಲಿ ಕಂಡುಕೊಳ್ಳಿ. ನಾವು ತಾಜ್ ಮಹಲ್ ಮತ್ತು ಸಮೀಪದ ಸಿಕಂದ್ರಾಗಳ ಒಳ-
ಹೊರಗೆ ಸುತ್ತಾಡಿ, ರಾತ್ರಿಗೆ ಹೋಟೆಲ್ ಸೇರಿಕೊಂಡೆವು. ಮುಂದೊಂದು ಕಾಲದಲ್ಲಿ ಝೀಟೀವಿ, ೫೬೬ ಕಂತುಗಳ ಸುಂದರ ಮಾಲೆಯಲ್ಲಿ, ‘ಜೋಧಾ ಅಕ್ಬರ್’ ಕೊಟ್ಟಾಗ ನಾನಂತೂ ಈ ಸ್ಥಳಗಳಲ್ಲಿ ಮತ್ತೊಮ್ಮೆ ವಿಹರಿಸಿದ್ದೆ! 
(ದಿನದ ಓಟ ೧೦೧ ಕಿಮೀ) 
(ಮುಂದುವರಿಯಲಿದೆ)

8 comments:

 1. ಸಧ್ಯ ನಾನೇನೂ ಬರೆಯದೇ ಬಚಾವಾದೆ. ಎರಡುಬಾರಿ ಪ್ರವಾಸ ಹೋಗಿದ್ದೇವಲ್ವೇ. ಎರಡೂ ಬೆರಕೆಯಾಗಿ ಗೊಂದಲವುಂಟಾಗುವುದು ತಪ್ಪಿತು.

  ReplyDelete
 2. ಜೈಪುರದ ನೆನಪುಗಳು:

  ಮೊದಲ ಬಾರಿ ಹೋದಾಗ ಪೂರ್ವ ಯೋಜನೆಯಂತೆ ನಾವು ರಾಜಸ್ಥಾನ ಪ್ರವಾಸಿ ಮಂದಿರದಲ್ಲಿ ಉಳಿಯಬೇಕಿತ್ತು.ರಿಕ್ಷಾದವನಿಗೆ ಹೇಳಿ ರಿಕ್ಷಾ ಹತ್ತಿದೆವು.ಆಗೇನೂ ಗೂಗಲ್ ಇರಲಿಲ್ಲ.ಅವ ಎಲ್ಲಿ ಕರೆದುಕೊಂಡು ಹೋಗುವನೋ ಗೊತ್ತಾಗುವಂತಿರಲಿಲ್ಲ.ಸ್ವಲ್ಪ ದೂರ ಹೋದ ಮೇಲೆ ಯಾವುದೋ ಹೋಟೆಲ್ಗೆ ಕರೆದೊಯ್ಯುವುದಾಗಿಯೂ ಅದು ತುಂಬಾ ಚೆನ್ನಾಗಿದೆ ಎಂದು ಶುರು ಮಾಡಿದ.ನಾವೋ ,ಇಲ್ಲ ನಾವು ಹೇಳಿದಲ್ಲಿಗೇ ಕರೆದುಕೊಂಡು ಹೋಗಲು ಒತ್ತಾಯಿಸಿದೆವು‌.ಈ ಗಿರಾಕಿಗಳು ಒಪ್ಪುತ್ತಿಲ್ಲ ವೆಂದು,ತಾನು ಅಲ್ಲಿಗೆ ಬರಲಾರೆ ಅರ್ಧದಲ್ಲೇ ಇಳಿಯಿರಿ ಎಂದು ಶುರು ಮಾಡಿದ.ಗಾಡಿಯನ್ನು ದಾರಿಯಲ್ಲೇ ನಿಲ್ಲಿಸಿದ.ನಾವೂ ಭಂಡರು,ಇಳಿಯದೇ ತುಂಬಾ ತಗಾದೆ ಮಾಡಿ ಅಂತೂ ಗಮ್ಯ ತಲುಪಿದೆವು.ದಾರಿ ಉದ್ದಕ್ಕೂ ಗೊಣಗಿಕೊಂಡೇ ಬಂದ.ಅವನು ಹೇಳಿದ ಸ್ಥಳಕ್ಕೆ ಹೋಗಲಾಗಿಲ್ಲವೆನ್ನುವ ಹೊಟ್ಟೆ ಉರಿ ಗೆ ಸ್ವಲ್ಪ ಜಾಸ್ತಿ ಛಾರ್ಜ ಕೇಳಿ ಪಡೆದುಕೊಂಡ.
  2.ಈ RTDC ಲಾಡ್ಜಗಳು ಹಿಂದೊಮ್ಮೆ ಹೇಳಿದಂತೆ ದೊಡ್ಡ ಮಹಲುಗಳನ್ನು ರೂಂಗಳಾಗಿ ಬದಲಾಯಿಸಿರುವ ವ್ಯವಸ್ಥೆ ಗಳು.ದೊಡ್ಡ ಹಜಾರದಲ್ಲಿ ಮಂಚ, ಅಷ್ಟೇ ದೊಡ್ಡ ದಾದ ಹಜಾರದಲ್ಲಿ ಟಾಯ್ಲೆಟ್.ಈ ರೂಮಿಗೆ ಮೂರೂ ದಿಕ್ಕಿನಲ್ಲಿ ಬಾಗಿಲು.ಎಲ್ಲಾ ಬಂದೋಬಸ್ತ್ ಇದೆಯಾ ನೋಡಿ ಹೋಗಬೇಕಿತ್ತು.ಆ ಬಾಗಿಲುಗಳು ಬೇರೆ ಕೊಠಡಿಗೆ ತೆರೆದುಕೊಳ್ಳುತ್ತಿತ್ತು.ಸರ್ಕಾರಿ ವ್ಯವಸ್ಥೆ ಎಂದ ಮೇಲೆ ಇದೆಲ್ಲಾ ಸಹಿಸಬೇಕು ತಾನೇ.ಅಲ್ಲಿ ಸುರಕ್ಷಿತ ಭಾವ ಮುಖ್ಯ ವಾಗಿತ್ತು.ಅದಕ್ಕೆ ತೊಂದರೆ ಆಗಲಿಲ್ಲ.
  3.ಅಲ್ಲಿನ ರಿಕ್ಷಾ ಡ್ರೈವರ್ ಗಳೂ ಆ ಕಾಲಕ್ಕೆ (1994,)ಹೆಚ್ಚಿನವರು ಇಂಗ್ಲೀಷ್ ನಲ್ಲಿ ವ್ಯವಹರಿಸುತ್ತಿದ್ದರು-ವಿದೇಶೀ ಪ್ರವಾಸಿಗರ ಪ್ರಭಾವ

  4.ಪ್ರವಾಸದಲ್ಲಿ ನಮ್ಮದೂ ಶಾಪಿಂಗ್ ಅಂತ ಏನೂ ಇರುತ್ತಿರಲಿಲ್ಲ.ಆದರೆ ನಾಲ್ಕಾರು ವರ್ಷಗಳ ಹಿಂದೆ ಮೂರನೇ ಬಾರಿಗೆ ಅಂತ ಜೈಪುರಕ್ಕೆ ಹೋದಾಗ ರಜಾಯಿ ತೆಗೆದುಕೊಳ್ಳುವುದೆಂದುಕೊಂಡು ಕೊಂಡೆವು.ಜೈಪುರಕ್ಕೆ ಮೊದಲ ಬಾರಿ ಪ್ರವಾಸ ಕ್ಕೆ ಬಂದಿದ್ದವರು ಸುಮಾರು ಶಾಪಿಂಗ್ ಮಾಡಿ ತಮ್ಮ ತಮ್ಮ ಊರಿಗೆ ಪಾರ್ಸೆಲ್ ಕಳಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಂಡಿದ್ದರು,ನಮಗದು ತಿಳಿದಿರಲಿಲ್ಲ..ನಾವು,ಹೇಗೂ ನಮ್ಮ ದೊಡ್ಡ ಸೂಟ್ ಕೇಸ್ ಖಾಲಿ ಇದೆಯಲ್ಲಾ ಎಂದು ಅದರಲ್ಲೇ ತುರುಕುವ ಕೆಲಸ ಮಾಡಲು ಹೋಗಿ, ಸೂಟ್ ಕೇಸ್ ನ ಝಿಪ್ ಕಿತ್ತು ಮುಚ್ಚಲು ಬಾರದೆ,ಹಗ್ಗ ಬಿಗಿದೆವು.ಮುಂದಿನ ಊರು ಉದಯಪುರದಲ್ಲಿ ಬೀದಿ ಅಲೆದು ಹೊಸ ಸೂಟ್ಕೇಸ್ ಕೊಂಡು ಅದಕ್ಕೆ ವರ್ಗಾಯಿಸಿದೆವು.ಪ್ರವಾಸದಲ್ಲಿ ಮತ್ತೊಂದು ಪಾಠ ಕಲಿತೆವು.

  5.ದೇವಕಿಯವರಂತೆ ನಾನೂ ಆಸೆಗೆ ಬಿದ್ದು, ನಾಲ್ಕು ಕೋಟಾ ಚೆಕ್ಸ್ ಸೀರೆಗಳನ್ನು ಖರೀದಿಸಿದೆ.ಆದರೆ ಅದು ಖೋಟಾ ಆಗಿತ್ತು ಎಂದು ಊರಿಗೆ ಬಂದ ಮೇಲೆ ತಿಳಿಯಿತು.

  ಮೂರು ಬಾರಿ ರಾಜಸ್ಥಾನ ಪ್ರವಾಸ ಹೋಗಿದ್ದರೂ ನಾವೂ ನಿಜವಾದ ಮರುಭೂಮಿ ರಾಜಸ್ಥಾನ ನೋಡಲಿಲ್ಲ.ಮೂರನೇ ಬಾರಿ ಪ್ರವಾಸದಲ್ಲಿ ಜೋಧ್ಪುರಕ್ಕೂ ಹೋದೆವು.ಅಲ್ಲೆಲ್ಲೊ ಒಂದು ಕಡೆ ಸಣ್ಣ ಮರಳು ಗುಡ್ಡವನ್ನು ನೋಡಿದ ಹಾಗಾಯಿತು.ನಮ್ಮ ತಲಕಾಡಿನ ಮರಳು ರಾಶಿ ಅದಕ್ಕಿಂತ ದೊಡ್ಡದೇ ಇದೆ.
  ಹಾಗಾಗಿ ನಿಜವಾದ ರಾಜಸ್ಥಾನ ನೋಡಲು ಜೈಸಲ್ಮೇರ್ ಹಾಗೂ ಬಿಕಾನೇರ್ ಬಾಕಿ ಉಳಿದಿದೆ.

  ನಿಮ್ಮ ಪ್ರವಾಸದ ಚಿತ್ರ ಗಳು ಸುಂದರವಾಗಿ ಮೂಡಿ ಬಂದಿದೆ.ಎಲ್ಲಿಯದಿರಬಹುದು ಎಂದು ಪ್ರಶ್ನೆ ಹಾಗೇ ಉಳಿದುಬಿಡುತ್ತದೆ.ವಯಸ್ಸಾಯಿತು,ನೆನಪು ಮಾಸಿತು

  ReplyDelete
  Replies
  1. ಒ ಓ ಮೂರು ಬಾರಿ ಹೋದವರು! ಲೆಕ್ಕಕ್ಕೆ ನಾನೂ ರಾಜಸ್ತಾನ ಮೂರು ಬಾರಿ ನೋಡಿದವನೇ - ಅಜ್ಮೀರ್ ಬಳಿಯ ನಾಸಿರಾಬಾದ್ - ೧೯೬೯, ಇದು ೧೯೦೦ ಮತ್ತೆ ಕಾಡಿನಲ್ಲಿ ಪೆಡಲಿ ೨೦೧೮ - ಎಲ್ಲವೂ ಹಾಕಿದ ಗೆರೆಯಿಂದಾಚೆ ಚೂರೂ ನೋಡಲಿಲ್ಲ. ಅದಕ್ಕೆಲ್ಲ ವಿದ್ಯಾ ಮನೋಹರ ಉಪಾಧ್ಯರ ಅನುಭವ ಕಥನ ಒಂದೇ ಉತ್ತಮ ಪರಿಹಾರ. ನಮ್ಮ ಎರಡನೇ ಸಾಹಸಯಾನದಲ್ಲಿ ಮೊದಲೇ ಅಂದಾಜಿಸಿದ್ದಂತೆ ಕೊಲ್ಕತ್ತಾದಿಂದ ಸೀರೆಗಳನ್ನು ಖರೀದಿಸಿ, ಅವರದೇ ವ್ಯವಸ್ಥೆಯಲ್ಲಿ ಮಂಗಳೂರಿಗೆ ರವಾನಿಸಿಕೊಂಡಿದ್ದೆವು. ಮೋಸವಾಗಲಿಲ್ಲ.

   Delete
  2. ಮೊದಲ ಬಾರಿ ಬರೀ ಜೈಪುರ್ ಮಾತ್ರ.ಅದು ಡೆಲ್ಲಿ,ಆಗ್ರಾ,ಮಥುರಾ,ಜೈಪುರ್.ಎರಡನೇ ಬಾರಿ ಅದೇ ಮುಂದುವರೆದು ಜೈಪುರ,ಉದಯಪುರ,ಅಜ್ಮೀರ್,ಪುಷ್ಡ್ಕರ್,ಚಿತ್ತೋರ್ಗಡ್.ಮೂರನೇ ಬಾರಿ ಆಗ್ರಾದಿಂದ ಜೈಪುರ್,ಉದಯ್ ಪುರ್,ಅಜ್ಮೀರ್,ಪುಷ್ಕರ್,ಜೋಧ್ಪುರ.ನಿಮ್ಮ ಹಾಗೆ ಸಾಹಸದ ಪ್ರವಾಸ ವೇನಲ್ಲ.ಆದರೆ ಪ್ರವಾಸದ ಅನುಭವ ನಮ್ಮ ಮಟ್ಟಿಗೆ ಅನನ್ಯ.ಪಟ್ಟಿಯಿಂದ ಬಿಟ್ಟು ಹೋಗಿರುವುದು ಎಷ್ಟೋ ಇದೆ.ನಮ್ಮದೇನಿದ್ದರೂ ಸ್ಥಳ ವೀಕ್ಷಣೆ.ಎರಡು ನಮ್ಮದೇ ಯೋಜನೆಯಲ್ಲಿ,ಇನ್ನೊಂದು ನಿರ್ಮಲಾ ಟ್ರಾವೆಲ್ಸ್ನಲ್ಲಿ . ಹಾಗಾಗಿ ವಿಶೇಷವೇನಿಲ್ಲ.

   Delete
 3. ೨೦೧೬ ನವೆಂಬರ್- ಡಿಸೆಂಬರ್ ತಿಂಗಳಲ್ಲಿ ನಮ್ಮ ಮೊದಲ ರಾಜಾಸ್ಥಾನ ಬೈಕ್ ಯಾನ.

  ನಾನು ಮತ್ತು ನನ್ನ ಗೆಳೆಯ ಬೆಂಗಳೂರಿಂದ ಹೊರಟು ಮುಂಬೈ ಗುಜರಾತ್ ಹಾದು, ಉದಯಪುರ ಕುಂಭಲ್ ಘರ್ ಚಿತ್ತೋರ್ ಘರ್ ಕೋಟೆ ಸುತ್ತಿ, ಮಧ್ಯಾಹ್ನ ಜೈಪುರ ತಲಪಿದ್ದೆವು. ಜಂತರ್ ಮಂತರ್, ಅದರ ಪಕ್ಕದಲ್ಲಿನ ಅರಮನೆ, ನೋಡಿ ಮಾರುಕಟ್ಟೆ ಸುತ್ತಿ ನಂತ್ರ ನಾನೂ ಅಮ್ಮನಿಗೆ ಅಂತ ಒಂದು ಸೀರೆ ಕೊಂಡಿದ್ದೆ. ರಾತ್ರಿ ಮದ್ಯಾಹ್ನ ರೋಟಿ ಪರಾಠಾ ಭಕ್ಷಿಸಿದ್ರೂ, ಬೆಳಗ್ಗೆ ಮಾತ್ರ ನಾವು ಹುಡುಕುತ್ತಿದ್ದದ್ದು ಪೋಹಾ + ಚಾಯ್ ಗೆ. ಎರಡನೇ ದಿನ ಊರ ಹೊರಗಿನ ಗುಡ್ಡದ ಮೇಲಿನ ಎರಡು ಕೋಟೆ ಅರಮನೆ ನೋಡಿ ನಮ್ಮ ಯಾತ್ರೆಯನ್ನು ಜೈಪುರದಿಂದ ತಿರುಗಿಸಿ ಪುಷ್ಕರ್ ಜೋಧಪುರ ಪೋಖ್ರಾನ್ ಹಾದೂ ಜೈಸಲ್ಮೇರ್ ಬಳಿಯ ಹಳ್ಳಿಯೊಂದರಲ್ಲಿ ಮೊದಲೆ ಮಾತಾಡಿ ವ್ಯವಸ್ಥೆ ಮಾಡಿಕೊಂಡಂತೆ ಒಂಟೆ ಏರಿ ಮರುಭೂಮಿ ಮಧ್ಯೆ ಸೂರ್ಯಾಸ್ತ ನೋಡಿ, ಊಟ ಮಾಡಿ, ರಾತ್ರಿ ಕಳೆದು ಮರುದಿನ ಬೆಳಗ್ಗೆ ಅದೇ ಒಂಟೆಗಳ ಮೇಲೆ ಹಳ್ಳಿಗೆ ಬಂದು ಅಲ್ಲಿ ಮಿಂದು, ಉಂಡು, ಹೊರಟು ರಾತ್ರಿಗೆ ವೇಳೆ ಪುನಃ ಗುಜರಾತ್ ನ ಥರಾಡ್ ಎಂಬ ಊರಿಗೆ ಸೇರಿದ್ದೆವು.

  ReplyDelete
  Replies
  1. ನೀವು ಅವಸರದಲ್ಲೇ ಅನುಭವಿಸಿರಬಹುದು. ಆದರೆ ನಾಲ್ಕು ವರ್ಷಗಳ ಹಿಂದಿನ ನೆನಪು ಕೊಡುವಾಗಲೂ ಯಾಕೆ ‘ಬ್ರೆತ್ ಲೆಸ್ ಸಾಂಗ್’ನ ಹಾಗೆ ಬುರ್ರ್ ಅಂತ ಹೇಳ್ತೀರಿ? ನಾಲ್ಕು ಮಾತುಹೆಚ್ಚು ಸೇರಿಸಿದರೆ ನಿಮಗೆ ಯಾರೂ ದಂಡ ಹಾಕುವುದಿಲ್ಲ ಬದಲಿಗೆ ಥ್ಯಾಂಕ್ಸ್ ಎದುರು ಸೋ ಮಚ್ ಸೇರಿಸಿಯಾರು ಗಿರೀ :-)

   Delete
  2. ಮೊದಲಿಂದಲೂ ನೀವೇ ಹೇಳಿದಂತೆ, ಯಾಕೋ ಪದ ಪೋಣಿಸುವಲ್ಲಿ ಯಾಕೋ ತುಂಬಾ ಕಂಜೂಸು.. ಎಲ್ಲ ಬಿಡಿಸಿ ಬರೆಯಬೇಕು ಇನ್ನೊಮ್ಮೆ.

   Delete
 4. "ಬನ್ಜಾಯೆಗಾ"

  ಧಾಭಾಗಳಲ್ಲಿ ನಾವೇನೇ ಕೇಳಿದರೂ ಅವರ ಉತ್ತರ ಒಂದೋ "ಹೈ ನಾ" ಅಥವಾ "ಬನ್ಜಾಯೆಗಾ"..

  ReplyDelete