07 April 2020

ಜೋಗದ ಗಜಾನನ ಶರ್ಮರಿಗೊಂದು ಪತ್ರ

[ಶರಾವತಿ ಸಾಗರದ ದೋಣಿಯಾನಕ್ಕೆ ನಾನು/ವು ಹೊನ್ನೆಮರಡಿಗೆ ಹೋದ ಕತೆ ನಿಮಗೆಲ್ಲ ಗೊತ್ತೇ ಇದೆ. (ಇಲ್ಲವಾದವರು ನೋಡಿ: ಶರಾವತಿ ಸಾಗರದ ಉದ್ದಕ್ಕೆ..) ಅಲ್ಲಿ ಸಂಘಟಕದ್ವಯರಾದ ಎಸ್.ಎಲ್ಲೆನ್ ಸ್ವಾಮಿ, ನೊಮಿತೊ ಕಾಮ್ದಾರ್ ದಂಪತಿಯ ಪ್ರೀತಿಯಲ್ಲಿ ‘ಪುನರ್ವಸು’ ಕಾದಂಬರಿ ನನಗೆ ಸಿಕ್ಕಿತು. ಮುಂದೆ ಕಾದಂಬರಿ ಓದಿದ ಸಂತೋಷದಲ್ಲಿ ಫೇಸ್ ಬುಕ್ ಸಂದೇಶಗಳ ಮೂಲಕ ಲೇಖಕ ಗಜಾನನ ಶರ್ಮರನ್ನು, ಮೊದಲ ಬಾರಿಗೆ ಎಂಬಂತೆ ಸಂಪರ್ಕಿಸಿದ್ದೆ. ಅವರು "ಇಲ್ಲ ನಾ ಮೊದಲು..." ಎಂದೇ ಉತ್ತರಿಸಿದ್ದರು. ಅದಕ್ಕೆ ನಾನು... ]

ಪ್ರಿಯರೇ,
ಐಕೆ ಬೊಳುವಾರು, ದೇರಾಜೆ ಮೂರ್ತಿ ಜತೆ ನೀವು ನನ್ನಂಗಡಿಗೆ ಬಂದಿದ್ದಿರಿ ಎಂಬ ನಿಮ್ಮ ನೆನಪು ನನಗೆ ಕುಶಿಕೊಟ್ಟಿತು. ಆದರೆ ನನ್ನ ನೆನಪಿನ ಭಿತ್ತಿಯಲ್ಲಿ ಅಂಗಡಿಯ ಮೂವತ್ತಾರು ವರ್ಷಗಳ ಸಾವಿರಾರು ಚಿತ್ರಗಳು ಕಲಸಿ ಹೋಗುತ್ತವೆ. ಆದರೆ ಈಗ ನೀವು ಹೇಳಿದ ಕರ್ನಾಟಕಕ್ಕೆ ಬೆಳಕು ಬಂದ ಕುರಿತ ನಿಮ್ಮ ಪುಸ್ತಕ ಚೆನ್ನಾಗಿ ನೆನಪಿದೆ. ಕೆವಿ ಅಕ್ಷರ ಈ ಪುಸ್ತಕ ನನಗೆ ಕಳಿಸುವಾಗ "ಬಹಳ ಮಹತ್ವದ ಪುಸ್ತಕ" ಎಂದು ಒತ್ತೂ ಕೊಟ್ಟಿದ್ದರು. ಆದರೆ ಈಗ ಆ ಪುಸ್ತಕವನ್ನು ಓದಿದ ನೆನಪು ನನಗಿಲ್ಲ, ‘ಪುನರ್ವಸು’ ನನ್ನ ಕೈಗೆ ಬಂದಾಗಲೂ ನೆನಪಾಗಲೇ ಇಲ್ಲ. ಇದು ನನ್ನ ದೊಡ್ಡಸ್ತಿಕೆಯಲ್ಲ, ಮಿತಿ!

ಪುಸ್ತಕ ವ್ಯಾಪಾರಿಯಾಗಿ ಕಾರ್ಗಲ್ಲಿನ (ಸಾಗರ) ರವೀಂದ್ರ ಪ್ರಕಾಶನದ ಸಂಬಂಧ ನನಗಿತ್ತು. ಅವರಿಂದ ಶರಾವತಿ ಮುಳುಗಡೆ ಕತೆಗಳ ಖ್ಯಾತಿಯ ನಾಡಿಸೋಜಾರ ಕೃತಿಗಳನ್ನು ಸಾಕಷ್ಟು ತರಿಸಿಕೊಂಡು ಮಾರಿದ್ದೇನೆ. ನಾಡಿಯವರ ‘ದ್ವೀಪ’ ಮಂಗಳೂರು ವಿವಿನಿಲಯಕ್ಕೆ ಪಠ್ಯವಾಗಿದ್ದಾಗ, ರವೀಂದ್ರ ಪ್ರಕಾಶನದ ಪರವಾಗಿ ನಾನೇ ಏಕೈಕ ವಿತರಣೆಗಾರನೂ ಆಗಿದ್ದೆ. ‘ಉಣ್ಣಿ ಕೆಚ್ಚಲೊಳಿದ್ದೂ....’ ಎಂಬಂತೆ ಸದಾ ವೈವಿಧ್ಯಮಯ ಪುಸ್ತಕಗಳ ಸಂಗದಲ್ಲಿದ್ದೂ ನನ್ನ ಓದು ಕಡಿಮೆ. ಶರಾವತಿ ಅಣೆಕಟ್ಟಿನ ಕರುಣ ಕತೆಗಳು ನನ್ನೊಳಗೆ ಬೇರು ಬಿಡಲಿಲ್ಲ. ಎಲ್ಲಾ ಅಭಿವೃದ್ಧಿ ಕಲಾಪಗಳ ಸಂತ್ರಸ್ತರ ಪಾಡಿನಂತೇ ಇಲ್ಲಿನದೂ ಒಂದು ದಾರುಣ ಕತೆ ಎಂದಷ್ಟೇ ಕಂಡದ್ದಿರಬೇಕು.


ಗಿರೀಶ ಕಾಸರವಳ್ಳಿಯವರು ಯಾವುದೋ ಸಿನಿಮಾ ನೆಪದಲ್ಲಿ ಮಂಗಳೂರಿನಲ್ಲಿದ್ದ ಸಮಯವದು. ನಾನವರ ‘ದ್ವೀಪ’ (ನಾಡಿ ಕಾದಂಬರಿ ಆಧಾರಿತ) ಸಿನಿಮಾದ ‘ಪ್ರದರ್ಶನ ಮತ್ತು ನಿರ್ದೇಶಕನೊಡನೆ ಸಂವಾದ’ವನ್ನು ಮನೆಯಲ್ಲೇ ವ್ಯವಸ್ಥೆ ಮಾಡಿದ್ದೆ. ಆಗ ನಮ್ಮ ಮಗ (ಅಭಯಸಿಂಹ) ಪುಣೆಯಲ್ಲಿ ಸಿನಿಮಾ ನಿರ್ದೇಶಕತನದ ಕಲಿಕೆಯಲ್ಲಿದ್ದ. ಆತ "ನಮ್ಮ ಮನೆಗೇ ನನ್ನ ಆದರ್ಶಮೂರ್ತಿ ಬರುವಾಗ ನಾನಿಲ್ಲದಿದ್ದರೆ ಹೇಗೆ" ಎಂದು ಸಿಕ್ಕ ಬಸ್ ಹಿಡಿದು, ಚಾಲಕನ ಕ್ಯಾಬಿನ್ನಿನಲ್ಲೇ ಕುಳಿತು ಬಂದಿದ್ದ. ಇಪ್ಪತ್ತು-ಮೂವತ್ತು ಗಂಭೀರ ಸಿನಿಮಾಸಕ್ತರ ಕೂಟದಲ್ಲಿ ಕಲಾಪ ತುಂಬ ಚೆನ್ನಾಗಿಯೇ ನಡೆಯಿತು. ಆದರೆ ನಮ್ಮ ಆದ್ಯತೆ ಸಿನಿಮಾ ಕೇಂದ್ರಿತವಾದ್ದರಿಂದ, ಮುಳುಗಡೆಯ ಆಯಾಮಗಳು ನಮ್ಮನ್ನು ಪ್ರಭಾವಿಸಿದ್ದು ಕಡಿಮೆ.

೧೯೮೦ರ ದಶಕದ ಮಳೆಗಾಲದಲ್ಲೊಮ್ಮೆ ನನ್ನ ಸಾಹಸೀ ಬಳಗದೊಡನೆ ಬೈಕೇರಿ ಹೆಗ್ಗೋಡಿಗೆ ಹೋಗಿದ್ದೆ. ದಾರಿಯಲ್ಲಿ, ಮೊದಲ ಬಾರಿಗೆ ತುಮರಿಯ ಲಾಂಚ್ ಸರ್ವೀಸ್ ಬಳಸಿದ್ದೆ. ಮುಂದೆ ಇದರೊಡನೆ ಹಸಿರುಮಕ್ಕಿಯದೂ ಸೇರಿ ಎರಡೋ ಮೂರೋ ಬಾರಿ ಶರಾವತಿ ಸಾಗರವನ್ನು ಅತ್ತಿತ್ತ ದಾಟಿದ್ದೂ ಆಯ್ತು. ಆಗೆಲ್ಲ ಸಣ್ಣ ಪುಟ್ಟ ಮಾತುಗಳಲ್ಲಿ, ಮುಂದೆ ಗೆಳೆಯ ಡಿ.ಎಸ್. ಶ್ರೀಧರರ ಫೇಸ್ ಬುಕ್ಕಿನ ಚದುರಿದ ಟಿಪ್ಪಣಿಗಳಲ್ಲಿ ಹೆಚ್ಚು ಆಪ್ತ ಕಥನಗಳು ಬಂದಾಗ ಮನಸ್ಸು ನಿಸ್ಸಂದೇಹವಾಗಿ ಹೆಚ್ಚು ಕಲಕಿತ್ತು. ಕಾಡು ಬೆಟ್ಟಗಳ ದುರ್ಗಮ ಮೂಲೆಗಳು ನೂರಾರು ವರ್ಷಗಳಲ್ಲಿ ಸ್ವತಂತ್ರವಾಗಿ ಮತ್ತು ಕ್ರಮವಾಗಿ ಏನೋ ಸಾಮಾಜಿಕ ದೃಢ ನೆಲೆಗಳನ್ನು ಕಂಡುಕೊಂಡು ನಡೆದಿದ್ದವು. ಅವೆಲ್ಲವನ್ನು ಲೆಕ್ಕಕ್ಕೂ ತೆಗೆದುಕೊಳ್ಳದೇ ಹತ್ತಿಪ್ಪತ್ತು ವರ್ಷಗಳ ಅಂತರದಲ್ಲಿ, ರಾಜ್ಯಕ್ಕೆ ಬೆಳಕು ಕೊಡುವ ಔದಾರ್ಯಕ್ಕೆ ನೂಕಿದ್ದರು. ಮೂರು ನಾಲ್ಕು ದಶಕ ಕಳೆದ ಮೇಲೂ ಅಲ್ಲಿನ ಜನ, ಜಾನುವಾರು, ಜೀವನ ಅಲ್ಲೋಲಕಲ್ಲೋಲವಾಗಿ ಕನಿಷ್ಠ ನಾಗರಿಕ ವ್ಯವಸ್ಥೆಗಳಿಗೂ ಎರವಾದ ಸ್ಥಿತಿ ಕಂಡು ಮನಸ್ಸು ವ್ಯಗ್ರಗೊಂಡಿತ್ತು.

ಕುದುರೆಮುಖ ರಾಷ್ಟ್ರೀಯ ಉದ್ಯಾನದ ಹೆಸರಿನಲ್ಲಿ ಮೂಲವಾಸಿಗಳನ್ನು ವನ್ಯಪ್ರದೇಶದಿಂದ ಒಕ್ಕಲೆಬ್ಬಿಸುವ ಪ್ರಕ್ರಿಯೆಯಲ್ಲಿ ನಾನು ಸಣ್ಣದಾಗಿ ಪಾಲುಗೊಂಡಿದ್ದೇನೆ. ಅಲ್ಲೆಲ್ಲ ವನವಾಸಿ ಮನುಷ್ಯರ ಮರುವಸತಿಯ ಅನಿವಾರ್ಯತೆಯನ್ನು ಅವರಿಗಿಂತಲೂ ಕನಿಷ್ಠ ಸ್ಥಿತಿಯಲ್ಲಿರುವ ಮೃಗಗಳಿಗೆ ಹೋಲಿಸಿದ ದೋಷ ನಮ್ಮದು. ನಮ್ಮೊಳಗೆ ಮೂಡುತ್ತಿದ್ದ ವಿಷಾದ ಸುಲಭವಾಗಿ ‘ಅನಿವಾರ್ಯತೆ’ಯ ಮುಸುಕು ಹೊದ್ದಿತ್ತು. ಮರುವಸತಿ ಉನ್ನತ ಸಾಹೋದರ್ಯದ ಸಂಕೇತ ಎಂದು ನಾನೇ ಸಮಾಧಾನಿಸಿಕೊಂಡದ್ದು ಇದೆ. ಈಚೆಗೆ ಕೇವಲ ಸಾಹಸಾಕಾಂಕ್ಷೆಯಿಂದ ಹೊನ್ನೇಮರಡುವಿಗೆ ಬಂದಾಗ ಮತ್ತೊಂದಷ್ಟು ಮುಳುಗಡೆಯ ಕತೆಗಳೇನೋ ಸಿಕ್ಕವು. ಅವು ನಮ್ಮ ಸಾಹಸಕ್ಕೆ ಮಾನವೀಯ ಕಾಳಜಿಯ ಸ್ಪರ್ಷ ಕೊಡುವಷ್ಟರಲ್ಲೇ (ತುಟಿ ಸೇವೆ - ಲಿಪ್ ಸಿಂಪತಿ!) ಮುಗಿಯುವುದಿತ್ತು. ಬಹುಶಃ ನನ್ನಲ್ಲಿ ಈ ಕೊರತೆ ಕಂಡದ್ದಕ್ಕೇ ಇರಬೇಕು ಎಸ್.ಎಲ್.ಎನ್. ಸ್ವಾಮಿ ಮತ್ತು ನೊಮಿತೋ ಕಾಮ್ದಾರ್ ದಂಪತಿ ‘ಪುನರ್ವಸು’ (ಮತ್ತೊಂದು ಪುಸ್ತಕ - ಆನೆ ಕಾಡು) ಕೊಟ್ಟು ಎಚ್ಚರಿಸಿದರು! 

‘ಹುಲ್ಲು ಸಮೃದ್ಧವಾದಾಗ ಕತ್ತೆ ಬಡವಾಗುತ್ತೆ’ ಎಂಬ ಮಾತಿದೆ (ಅದಕ್ಕೆ ತಾನೇನೂ ತಿನ್ನುತ್ತಿಲ್ಲ ಎಂಬ ಭ್ರಮೆಯಂತೆ!). ಅದೇ ಕತೆ ನನ್ನದು. ನನ್ನ ತಿಳಿದವರೆಲ್ಲ - ಇಂಗ್ಲಿಷ್ ಎಂಎ, ವೈವಿಧ್ಯಮಯ ಓದನ್ನೇ ಕೊಡುವ ವ್ಯಾಪಾರಿ, ವೈಚಾರಿಕ ಕೃತಿಗಳ ಪ್ರಕಾಶಕ ಎಂದಿತ್ಯಾದಿ ‘ಸರಿ’ಗಳ ನಡುವೆ, ನಾನೊಬ್ಬ ‘ಮಹಾ ಓದುಗ’ ಎಂದೇ ‘ತಪ್ಪು’ ಗ್ರಹಿಸುತ್ತಿದ್ದರು. ಓದುವ ಬಯಕೆ ನನಗೆ ಬೆಟ್ಟದಷ್ಟಿದ್ದರೂ ಅನ್ಯಾಸಕ್ತಿಗಳು (ಪರ್ವತಾರೋಹಣ, ವನ್ಯಸಂರಕ್ಷಣೆ, ಬರವಣಿಗೆ, ಪ್ರವಾಸ, ಯಕ್ಷಗಾನ, ನಾಟಕ, ಸಂಗೀತ ಇತ್ಯಾದಿ) ಅಷ್ಟೇ ತೀವ್ರವಾಗಿದ್ದುದರಿಂದ ನಿಜದ ಓದು ಕುಂಟಿದ್ದೇ ಹೆಚ್ಚು. ಈಗಲೂ ಹಾಗೇ ಆಗುತ್ತಿತ್ತು. ನಮ್ಮ ನೌಕಾಯಾನದ ಅನುಭವ ದಾಖಲಿಸುವ ಅವಸರದಲ್ಲಿ ಸಿಕ್ಕ ಎರಡೂ ಪುಸ್ತಕಗಳನ್ನು ಮೇಲಿಂದ ಮೇಲೆ ಪುಟ ತಿರುಗಿಸಿ ಬದಿಗೆ ಸರಿಸಿದ್ದೆ. ಆದರೆ ದೇವಕಿ (ನನ್ನ ಜೀವನ ಹಾಗೂ ನೌಕಾಯಾನದ ಸಂಗಾತಿ) ಓದಿನಲ್ಲಿ ಶ್ರದ್ಧಾಳು. ಪುನರ್ವಸುವನ್ನು ಕೆಲವು ಪುಟ ಓದುತ್ತಿದ್ದಂತೇ ಉತ್ತೇಜಿತಳಾಗಿ, ಕಥನದ ಸ್ವಾರಸ್ಯಗಳನ್ನು ಎಡೆ ಸಮಯಗಳಲ್ಲಿ ಹೇಳ ತೊಡಗಿದಳು. ಅದು ಹೆಚ್ಚಾದಾಗ ನನ್ನ ಅನ್ಯಾಸಕ್ತಿಗಳ ವೇಗ ಇಳಿಸಿ, ಪುನರ್ವಸುವಿಗೆ ಸ್ವಲ್ಪ ಸಮಯ ಹೊಂದಿಸಿಕೊಂಡೆ. ಮತ್ತೆ ಏನು ಹೇಳಲಿ, ಜೋಗದ ಅಂಚನ್ನು ಕಳಚಿಕೊಂಡ ಅಖಂಡ ಹೊಳೆಯಂತೆ ನನ್ನನ್ನು ಪೂರ್ಣ ಆವರಿಸಿತು ಪುನರ್ವಸು.

ಕಾದಂಬರಿ ಓದಿದ ಹೊಸತರಲ್ಲಿ, ನಾನಾಗಿಯೇ ಸಂತೋಷದ ವಿಸ್ತೃತರೂಪವನ್ನು ಲೇಖನವಾಗಿ ಶೀಘ್ರದಲ್ಲಿ ಹರಿಸುತ್ತೇನೆ ಎಂದೂ ಹೇಳಿದ್ದೆ. ಹಾಗೇ ಎರಡನೇ ಬಾರಿ ಓದಿಕೊಳ್ಳುತ್ತಾ ಕೆಲವು ಟಿಪ್ಪಣಿಗಳನ್ನೂ ಮಾಡಿದ್ದೆ. ಆದರೆ ಇಲ್ಲಿ ವಿವರಿಸಲಾಗದ ಅನ್ಯ ಕಾರ್ಯ ಒತ್ತಡಗಳಲ್ಲಿ ಎಲ್ಲವೂ ಅಡಿಗೆ ಬಿದ್ದು ಹೋಯ್ತು. ಅಯಾಚಿತವಾಗಿ ಮಾತುಕೊಟ್ಟೂ ನಡೆಸದ ಅಪರಾಧಪ್ರಜ್ಞೆ ನನ್ನನ್ನು ಕಾಡುತ್ತಲೇ ಇತ್ತು. ಅದಕ್ಕೆ ಮೋಕ್ಷ ಕೊಡುವಂತೆ ಈಗ ಒದಗಿದ ‘ಕೊರೋನ ರಜೆ’ಯಲ್ಲಿ, ನಿಮ್ಮ ಜೀವನಾನುಸಂಧಾನವನ್ನು ಕೇವಲ ಸಹೃದಯೀ ಓದುಗನ ನೆಲೆಯಲ್ಲಿ ಸಂಗ್ರಹಿಸುವ ಸಾಹಸ ಮಾಡಿದ್ದೇನೆ. ಸಂದ ಕಾಲದ ಪಿತೂರಿಯಲ್ಲಿ, ‘ಪುನರ್ವಸು’ವಿನ ಮೊದಲ ಓದು ಕೊಟ್ಟ ಸುಖದ ವಿವರಗಳನ್ನು ಪೂರ್ಣ ಆಯಾಮದಲ್ಲಿ ನೆನಪಿಸಿಕೊಳ್ಳಲಾಗಿಲ್ಲ, ಕ್ಷಮಿಸಿ. 


ಇಂತು ವಿಶ್ವಾಸಿ - ಅಶೋಕವರ್ಧನ. 

[ಹಿರೇ ಭಾಸ್ಕರ ಅಣೆಕಟ್ಟಿನ ಕುರಿತು ಶರ್ಮರು ತೆಗೆದ ಛಾಯಚಿತ್ರಗಳ ಸಂಕಲನ: https://bit.ly/2Ux56qV ]

ಪುನರ್ವಸು ನನ್ನನ್ನು ಪ್ರಭಾವಿಸಿದ್ದರ ದುರ್ಬಲ ಅಭಿವ್ಯಕ್ತಿ 

ಲಿಂಗನಮಕ್ಕಿ ಅಣೆಕಟ್ಟು, ಅದರ ಪರಿಣಾಮವಾದ ಶರಾವತಿ ಹಿನ್ನೀರ ಜಲಾಶಯ - ನಾವು (ಬಹುತೇಕ ಕನ್ನಡಿಗರು) ತುಂಬ ಮೇಲಿಂದ ಮೇಲೆ ಸಾಕಷ್ಟು ಕೇಳಿದ, ಕಂಡ, ಆದರೆ ಬಹಳ ಸ್ವಲ್ಪ ಅರ್ಥಮಾಡಿಕೊಂಡ, ತಂತ್ರಜ್ಞಾನದ ದೊಡ್ಡ ಸಾಧನೆ. ಅದನ್ನು ಅಧಿಕಾರಯುತವಾಗಿ ಸ್ಪಷ್ಟ ಪಡಿಸುವುದರೊಡನೆ, ತದ್ವಿರುದ್ಧ ದಿಕ್ಕಿನ, ಅಂದರೆ ಸಾಮಾಜಿಕ ಮತ್ತು ಪಾರಿಸರಿಕ ಮೌಲ್ಯಗಳ 


ಲೆಕ್ಕದಲ್ಲಿ, ಅಷ್ಟೇ ದೊಡ್ಡ ಹಿನ್ನಡೆ ಎನ್ನುವುದನ್ನೂ ‘ಪುನರ್ವಸು’ ಕಾದಂಬರಿಯಷ್ಟು ಚಂದಕ್ಕೆ ಇನ್ನೊಂದು ಹೇಳುವುದು ಕಷ್ಟ. ಇದಕ್ಕೆ ಮುಖ್ಯ ಕಾರಣ, ಕಥನಕಾರ - ಡಾ| ಗಜಾನನ ಶರ್ಮ. ಇವರಿಗೆ ಸಾಮಾನ್ಯವಾಗಿ ಇನ್ಯಾವುದೇ ಲೇಖಕನಿಗೆ ಸಿಗದ ಎರಡೂ ಲೋಕದ (ಶರಾವತಿ ಕಣಿವೆಯ ಸಾಮಾಜಿಕ ಹಾಗೂ ಜಲವಿದ್ಯುತ್ ಯೋಜನೆಯ ತಂತ್ರಜ್ಞಾನ) ಪ್ರತ್ಯಕ್ಷ ಹೊಕ್ಕು ಬಳಕೆಯ ಅನುಭವ ಇರುವುದೇ ಆಗಿದೆ. ಇವರ ಬಾಲ್ಯ ಲಿಂಗನಮಕ್ಕಿ ಅಣೆಕಟ್ಟಿನ ಮುಳುಗಡೆ, ಪುನರ್ವಸತಿ ಮತ್ತಿತರ ಅವ್ಯವಸ್ಥೆಗಳ ಭಾಗವಾಗಿತ್ತು. ಇವರ ಓದಿನ ಹಾದಿ ಮತ್ತೆ ಇಂಜಿನಿಯರ್ ವೃತ್ತಿಜೀವನದ ನಡೆಯ ಯಶಸ್ಸಿಗೂ ಅದೇ ಲಿಂಗನಮಕ್ಕಿ ಅಣೆಕಟ್ಟು ಕಾರಣವಾಯ್ತು (ಕೆಪಿಟಿಸಿಎಲ್ ನಿವೃತ್ತ). ಇದನ್ನೇ ಅವರು ಮುನ್ನುಡಿಯಲ್ಲಿ "...ಜೋಗದಷ್ಟು ನನ್ನ ಬದುಕನ್ನು ಪ್ರಭಾವಿಸಿದ ಇನ್ನೊಂದು ಸಂಗತಿಯಿಲ್ಲ. ಅದು ನನ್ನ ಬದುಕನ್ನು ಅರಳಿಸಿದ್ದೂ ಹೌದು, ನರಳಿಸಿದ್ದೂ ಹೌದು...... ಆಂತರ್ಯದ ಆಂತರ್ಯದಲ್ಲಿ ನಾನು ಜೋಗವನ್ನು ಪ್ರೀತಿಸುತ್ತೇನೋ ದ್ವೇಷಿಸುತ್ತೇನೋ ನನಗೇ ಗೊತ್ತಿಲ್ಲ" ಎಂದೇ ಬರೆದಿದ್ದಾರೆ. 

ಲೇಖಕರು ಕಾದಂಬರಿಯನ್ನು ಮುನ್ನುಡಿಯಲ್ಲಿ, "ವಿಶ್ವೇಶ್ವರಯ್ಯನವರು ಶರಾವತಿಯನ್ನು ನೋಡಿದಲ್ಲಿಂದ ಲಿಂಗನಮಕ್ಕಿಯಲ್ಲಿ ನೀರು ತುಂಬುವವರೆಗಿನ ಕಥನ" ಎಂದು ಸರಳಗೊಳಿಸಿದ್ದಾರೆ. ಆದರೆ ಕಥನ ತೆರೆದುಕೊಳ್ಳುವುದೇ ಶರಾವತಿ ಎಂಬ ಕಿವುಡ ಮೂಕ ಹುಡುಗಿ ‘ಪ್ರಬುದ್ಧೆ’ಯಾಗಿದ್ದಾಳೆ ಎಂಬಲ್ಲಿಂದ! ಈಕೆ ಪರೋಕ್ಷವಾಗಿ ಶರಾವತಿ ನದಿಯೂ ಹೌದು. ಸಾವಿರಾರು ವರ್ಷಗಳ ನದೀಜೀವನದಲ್ಲಿ ನೂರಿನ್ನೂರು ವರ್ಷ ಬಾಳಿಕೆಯ ಅಣೆಕಟ್ಟು ಗಣನೀಯವಲ್ಲ. ಅಂದರೆ ಯಾವುದೇ ಸೂಚನೆಗಳನ್ನು ದೀರ್ಘ ಕಾಲಕ್ಕೆ ಉಳಿಸಿಕೊಳ್ಳದ ಮತ್ತು ಗಂಭೀರ ಪ್ರತಿಕ್ರಿಯೆಯನ್ನು ಕೊಡದ ಮಹಾಶಕ್ತಿಯೇ ನದಿ ಶರಾವತಿ. ಅದು ತತ್ಕಾಲೀನವಾಗಿ ಹೊಸದೊಂದು ಆಯಾಮಕ್ಕೆ ತೆರೆದುಕೊಳ್ಳುವ ಸ್ಥಿತಿಯನ್ನು ಘೋಷಿಸಿದಂತೇ ಕೇಳುತ್ತದೆ! ಕಾದಂಬರಿಯ ಕೊನೆಯಲ್ಲಿ ಶರಾವತಿ ಹುಡುಗಿಗಾದ ಅನ್ಯಾಯ ಮತ್ತು ಪೂರ್ಣಗೊಂಡ ಶರಾವತಿ ಯೋಜನೆಯಲ್ಲಿ ಪ್ರಾಕೃತಿಕ ಸ್ಥಿತಿಗಾದ ಘಾಸಿ ಸಣ್ಣದಲ್ಲ ಎನ್ನುವುದನ್ನು ಕಾಣುತ್ತೇವೆ. ಆದರೂ ಅತ್ತ ಶರಾವತಿ ಎಂಬ ಹುಡುಗಿಯನ್ನು ಚಿಕಿತ್ಸೆಗೊಳಪಡಿಸುವ ಮಾತುಗಳೊಡನೆ, ಇತ್ತ ಏರಿ ಬರುತ್ತಿರುವ ನೀರಿಗೆ ಸ್ವಯಂ ಧುಮುಕಿ ಹಳೇ ನೆಲದತ್ತ ಈಜುವ ದನದ ಚಿತ್ರದೊಡನೆ ಲೇಖಕರು ನೋವಿನಲ್ಲೂ ಆಶಾ ಕುಡಿಯನ್ನು ಬೆಳಗಿಸಿ ಕಾದಂಬರಿ ಮುಗಿಸುತ್ತಾರೆ!

ಲಿಂಗನಮಕ್ಕಿ ಅಣೆಕಟ್ಟು, ಅದು ಕೊಡುವ ವಿದ್ಯುಚ್ಛಕ್ತಿ, ವರ್ಷದ ಕೆಲವು ಕಾಲ - ಮಳೆಗಾಲದ ಉತ್ತುಂಗದಲ್ಲೆಲ್ಲೋ ಮರಳುವ ಜೋಗದ ವೈಭವ, ಅಲ್ಲಿ ಪ್ರವಾಸೋದ್ಯಮದ ಸವಲತ್ತುಗಳಿಗೆ ಸೂರೆ ಹೋದ ಸಂಪತ್ತು, ಹೊಳೆಬಾಗಿಲು ಮತ್ತು ಹಸುರುಮಕ್ಕಿಯಲ್ಲಿನ ಲಾಂಚ್ ಪಯಣ ಇತ್ಯಾದಿ ಬಹುಪ್ರಚುರಿತ ವರ್ತಮಾನದ ಮುಖಗಳು. ಆದರೆ ಇವೆಲ್ಲಕ್ಕಾಗಿ ತೀವ್ರ ಪಲ್ಲಟಗೊಂಡ ಪ್ರಾಕೃತಿಕ ಸ್ಥಿತಿ ಮತ್ತು ಕುಸಿದು ಬಿದ್ದ ಸಮೃದ್ಧ ಸಾಮಾಜಿಕ ಬಂಧವನ್ನು ಮನೋಜ್ಞವಾಗಿ ಕಟ್ಟಿ ನಿಲ್ಲಿಸಿ ಸಾರ್ವಕಾಲಿಕ ನೆನಪು ಹುಟ್ಟಿಸುವ ಕೃತಿ ಪುನರ್ವಸು. ಈ ಕಾದಂಬರಿಯಲ್ಲಿ ಉಗ್ರ ಪ್ರಕೃತಿ ಸಂರಕ್ಷಕನ ಆಕ್ರೋಶವಿಲ್ಲ, ಬಡಿವಾರದ ಸಾಮಾಜಿಕ ಕಾಳಜಿಯ ಪ್ರದರ್ಶನವೂ ಇಲ್ಲ. ಅನಿವಾರ್ಯವಾದ ಅಭಿವೃದ್ಧಿಯ ಬೆನ್ನೇರಿ ಬರುವ ಅನಿಷ್ಟಗಳ ವಿಶ್ಲೇಷಣೆ ಇದೆ. ಅದು ಅಪಮೌಲ್ಯಗೊಳಿಸುವ ಸುಂದರ ಪಾರಂಪರಿಕ ಬಂಧದ ಮನಮುಟ್ಟುವ ಚಿತ್ರಣವಿದೆ. ‘ಅಭಿವೃದ್ಧಿ’ಯ ವಿಪುಲ ಸೌಕರ್ಯಗಳನ್ನು ನಿರಾಕರಿಸಲಾಗದೇ ಸವಿಯುವಾಗಿನ ಚಡಪಡಿಕೆಗಳಿವೆ - ತೀವ್ರ ಬೆಳಕು ಕೆಡಹುವ ಗಾಢ ನೆರಳಿನಂತೆ. ಇವೆಲ್ಲಕ್ಕೆ ಭಾರಂಗಿ ಮನೆ, ಅದರ ಅನುಕ್ತ ಯಜಮಾನಿ ತುಂಗಕ್ಕಯ್ಯ ಮತ್ತು ಆಕೆಯ ತಮ್ಮ ದತ್ತಪ್ಪ ಹೆಗಡೆ ಕೇಂದ್ರದಲ್ಲಿದ್ದಂತೆ ವಿಸ್ತರಿಸುವ ಇಡೀ ಕಾದಂಬರಿಯನ್ನೇ ನಾನಿಲ್ಲಿ ಉದಾಹರಿಸಬೇಕಾದೀತು.

ನಾನು ಕಾದಂಬರಿಯನ್ನು ಮೂರು ಮುಖಗಳಲ್ಲಿ ಗ್ರಹಿಸಿದೆ. ಒಂದು ಭಾರೀ ತಕ್ಕಡಿಯನ್ನು ಗ್ರಹಿಸಿಕೊಳ್ಳಿ. ಅದರ ಒಂದು ಪಾತ್ರೆಯಲ್ಲಿ ಒಂದು ಪೂರ್ವ ನಿರ್ಧರಿತ ಮತ್ತು ಖಚಿತ ಮಾನಕ - ತೂಕದ ಬಟ್ಟು ಇದೆ. ಅದು, ಸಂಪೂರ್ಣ ಕೃತಕವಾಗಿ ಹೇರುವ ಜಲವಿದ್ಯುತ್ ಯೋಜನೆ. ತಕ್ಕಡಿಯ ಇನ್ನೊಂದು ಪಾತ್ರೆ ತುಂಬಲು ಸಹಜವಾಗಿ ವಿಕಾಸಗೊಂಡ ಶರಾವತಿ ನದಿ, ಅದರ ಕಣಿವೆಯ ಕಾಡು, ಅದನ್ನು ಸಂಸ್ಕರಿಸಿಕೊಂಡು ಬಂದ ಕೃಷಿ, ಜನಜೀವನಾದಿ ಅಪರಿಮಿತ ಪರಿಸರವೇ ಇದೆ. ಅದರ ಪ್ರತಿನಿಧಿತ್ವವನ್ನು ಧಾರಾಳವಾಗಿ ಭಾರಂಗಿ ಮನೆ ವಹಿಸಿಕೊಳ್ಳುತ್ತದೆ ಎನ್ನಬಹುದು. ಎರಡನ್ನೂ ಸಮದೂಗಿಸುವ ತಕ್ಕಡಿಯ ದಂಡ - ಕೃಷ್ಣರಾವ್ ದಂಪತಿ. ಶರಾವತಿ ನದಿ ಪ್ರಕೃತಿಯ ಧಾರಾಳವನ್ನು ಸಂಕೇತಿಸುವುದರೊಡನೆ, ಎಂಥಾ ‘ತಿದ್ದುಪಡಿ’ಯನ್ನೂ ಜೀರ್ಣಿಸಿಕೊಳ್ಳಬಲ್ಲ ಅದರ ಮಹಾಶಕ್ತಿಯ ಅರಿವನ್ನೂ ಬಿಂಬಿಸುತ್ತದೆ. ಆದರೂ ತತ್ಕಾಲೀನವಾಗಿ ಜಲವಿದ್ಯುತ್ ಯೋಜನೆಯ ಏಳು, ಭಾರಂಗಿ ಮನೆಯ ಬೀಳನ್ನು ಸರಿದೂಗಿಸಿದ ಫಲವೆನ್ನುವಂತೆ ‘ಪುನರ್ವಸು’ ಎಂಬ ಮಗು ಬರುತ್ತದೆ. ಇದು ತೋರನೋಟಕ್ಕೆ ಕೃಷ್ಣರಾವ್ ದಂಪತಿಯ ಮಗುವಾದರೂ ಇಡಿಯ ಕಾದಂಬರಿಯ ಭಾವ. ಇದನ್ನು ಸಾರುವಲ್ಲಿ, ಲೇಖಕರ ದ್ವಂದ್ವದ ಅಭಿವ್ಯಕ್ತಿಯೇ ಆದ ದತ್ತಪ್ಪ ಹೆಗ್ಗಡೆ ಕೊಡುವ ಸುಂದರ ವಿವರಣೆ (ನೋಡಿ: ಪುಟ ೨೯೮) ಕೇವಲ ಶಬ್ಧಾರ್ಥವಲ್ಲ, ಒಟ್ಟು ಬಂಧದಲ್ಲಿ ಓದಿಯೇ ಸವಿಯಬೇಕು.

ಜೀವನ ಎಂದೂ ತೀರ್ಮಾನವಲ್ಲ. ಅದು ‘ಕಾಲ’ದಲ್ಲಿ ಅಂತರ್ಗತವಾದ ಪರಿವರ್ತನೆಯೊಡನೆ, ವ್ಯಕ್ತಿಯ ಶಕ್ತಿ ಮತ್ತು ಮಿತಿಗಳ ವಿಕಾಸದ ಹಾದಿ ಎನ್ನುವುದನ್ನೂ ಕಾದಂಬರಿ ತುಂಬ ವಿವರಗಳಲ್ಲಿ ಕಟ್ಟಿಕೊಡುತ್ತದೆ. ಮಹಾಯೋಜನೆಯ ಬೀಸಿನಲ್ಲಿ ಗಣ್ಯವೇ ಆಗದ ವೈಯಕ್ತಿಕ ನಂಬಿಕೆ, ಕೆಟ್ಟು ಹೋಗುವ ಸಾಮಾಜಿಕ ಸೂಕ್ಷ್ಮಗಳ ಬಗ್ಗೆ ಓದುಗರಿಗೆ ಅಪಾರ ಅನುಕಂಪ, ಅಸಹಾಯಕತೆ ಮೂಡುವುದು ನಿಜ. ಆದರೂ ಕಥಾನಕದ ಕೊನೆಯಲ್ಲಿ ತೋರ ನೋಟಕ್ಕೆ ದಕ್ಕುವ ಸೋಲು, ಗೆಲವುಗಳನ್ನು ಮೀರಿದ, "ನನ್ನ ಪಾತ್ರ ಸಮರ್ಥವಾಗಿ ನಿರ್ವಹಿಸಿದೆ" ಎನ್ನುವ ಧನ್ಯತೆ, ದತ್ತಪ್ಪ ಹೆಗಡೆ ಅಥವಾ ಲೇಖಕರದೋ ಆಗಿ ಉಳಿಯುವುದಿಲ್ಲ, ಓದುಗರದೂ ಆಗುತ್ತದೆ. ಭಾರಂಗಿ ಕೇಂದ್ರಿತವಾದ ಸಭ್ಯ ಸಂಸ್ಕೃತಿಯೊಂದರ ಮುಳುಗಡೆಯ ಕುರಿತು ತೀವ್ರ ವಿಷಾದವನ್ನುಳಿಸಿಕೊಂಡೇ ಜಲವಿದ್ಯುತ್ ಯೋಜನೆಯ ಯಶಸ್ಸನ್ನು ಕೊಂಡಾಡಲು ಸಾಧ್ಯವಾಗುತ್ತದೆ. ಹಾಗೇ ಮುಂದೊಂದು ದಿನ ಇದೂ ಕಳಚಿ ಹೋಗಬಹುದು ಎನ್ನುವುದನ್ನು ನಿರ್ವಿಕಾರವಾಗಿ ಗ್ರಹಿಸುವುದೂ ಸಾಧ್ಯವಾಗುತ್ತದೆ. (ಯಾವುದೇ ಮನುಷ್ಯ ರಚನೆಗೂ ಸವಕಳಿ ಅನಿವಾರ್ಯ. ಅಲ್ಲದೆ ಅಣೆಕಟ್ಟುಗಳು ಹೂಳು ತುಂಬಿ ನಿರುಪಯುಕ್ತವಾಗುವುದು, ಆಕಸ್ಮಿಕಗಳಲ್ಲಿ ನಾಶವಾಗುವುದು ಯಾರೂ ತಿಳಿಯದ ಮಾತಲ್ಲ.)

ಕಾದಂಬರಿಯ ಹಲವು ಪಾತ್ರಗಳ ಹೆಸರು ಅಂಕಿತ ನಾಮವೂ ಹೌದು, ಕಥನದ ಭಾವ ಸಂಕೇತವೂ ಹೌದು. ಈ ರೂಪಕ ಮಾಲೆಯಲ್ಲಿ ‘ಶರಾವತಿ’ಯಂತೇ ಎದ್ದು ಕಾಣುವ ಇನ್ನೊಂದು ಹೆಸರು ವಸುಧಾ. ಅದರ ಶಬ್ದಾರ್ಥ ಹೇಳುವಂತೆ ಭೂಮಿಯೇ ಇಲ್ಲಿ ವ್ಯಕ್ತಿರೂಪ ತಳೆದಂತಿದೆ. ಮುಗ್ಧೆ ಶರಾವತಿಗಾದ ಅನ್ಯಾಯ, ನಿಜ ನದಿಯ ಮೇಲಿನ ಕಲಾಪಗಳ ಕುರಿತ ಲೇಖಕರ ತೀವ್ರ ವಿಷಾದದ ಅಭಿವ್ಯಕ್ತಿಯಾದರೆ, ವಸುಧಾ ಪಾತ್ರದ ಕುಸುರಿ, ಕಾದಂಬರಿ ಬಿತ್ತರಿಸುವ ಮಹಾಸಂಘರ್ಷದ ಸಮನ್ವಯ ಕೇಂದ್ರವೆಂದೇ ಹೇಳಬಹುದು. ವಸುಧಾಳಿಗೆ ಮದುವೆಯಾಗಿ ಸುಮಾರು ಹದಿನಾರು ವರ್ಷಗಳು ಬಸಿರು ನಿಲ್ಲದ ಸಮಸ್ಯೆ ಕಾಡುತ್ತದೆ. ಅದಕ್ಕೆ ಸಂವಾದಿಯಾಗಿ ಜಲವಿದ್ಯುತ್ ಯೋಜನೆ ಸಾಕಾರಗೊಳ್ಳುವಲ್ಲೂ ಆರ್ಥಿಕ, ಆಡಳಿತಾತ್ಮಕ ಹಲವು ಜಿಡುಕುಗಳು. ಅವನ್ನು ಬಿಡಿಸುವಲ್ಲಿ ಮೂರು ದಶಕಗಳೇ ಸಂದುಹೋಗುತ್ತವೆ. ವ್ಯಕ್ತಿಯಾಗಿ ವಸುಧಾ ದೃಢಗೊಳ್ಳುವಲ್ಲಿ ಪಾರಂಪರಿಕ ಮೌಲ್ಯಕ್ಕೆ ತುಂಗಕ್ಕಯ್ಯ ನಿಂತಂತೆ, ಜಲವಿದ್ಯುತ್ ಯೋಜನೆ ಭೂಮಿಯಲ್ಲಿ ಕುದುರುವ ತಾಂತ್ರಿಕ ಮೌಲ್ಯಕ್ಕೆ ಕೃಷ್ಣರಾವ್ ಸಹಕಾರಿಯಾಗುತ್ತಾರೆ. ವಸುಧಾ ಜೋಗದ ಸೌಂದರ್ಯ, ಆ ವಲಯದ ಸಾಮಾಜಿಕ ಬಂಧ ಮತ್ತು ಯೋಜನೆಯ ಲಕ್ಷ್ಯಗಳೆಲ್ಲವನ್ನು ಒಂದೇ ಪ್ರೀತಿಯಿಂದ ಒಪ್ಪಿಕೊಳ್ಳುತ್ತಾಳೆ. ವನ್ಯದ ತಿದ್ದುಪಡಿಯೇ ಕೃಷಿ, ಅದರ ತಿದ್ದುಪಡಿಯೇ ಜಲವಿದ್ಯುತ್ ಯೋಜನೆ ಎಂದು ಧನಾತ್ಮಕವಾಗಿ ಗ್ರಹಿಸುತ್ತಾಳೆ. ಹೀಗೆ ವಸುಧೆಯ ತಾಯ್ತನವನ್ನು ಎರಡೂ ನೆಲೆಗಳಲ್ಲಿ ಸಮನ್ವಯಗೊಳಿಸುವುದರಲ್ಲಿ ಕಾದಂಬರಿ ಪೂರ್ಣಗೊಳ್ಳುತ್ತದೆ, ಪೂರ್ಣ ಯಶಸ್ಸನ್ನೂ ದಾಖಲಿಸುತ್ತದೆ.

ಗಣಿಗಾರಿಕೆ ಕುದುರೆಮುಖ ವಲಯದಲ್ಲಿ ನೆಲ ತಿನ್ನತೊಡಗಿದಾಗ, ರೈಲ್ವೇ ಶಿರಾಡಿ ಘಟ್ಟದಲ್ಲಿ ಹಳಿ ಬಿಡಿಸುತ್ತಿದ್ದಾಗ, ಎಮ್ಮಾರ್ಪೀಯೆಲ್ ನಮ್ಮ ನೆರೆಯಲ್ಲೇ ಚಾಪೆ ಹಾಸುವಾಗ... ಸ್ವತಃ ಓಡಾಡಿ ನೋಡಿ ಸಂಭ್ರಮಿಸಿದವ ನಾನು. ಅವನ್ನೇ ಮುಂದುವರಿದ ಕಾಲದಲ್ಲಿ ವಿರೋಧಿಸಿದವನೂ ನಾನೇ. ಈ ಹಂತದ ಪಕ್ವತೆಯಲ್ಲಿ ಇಂದು ಎಲ್ಲೆಲ್ಲೂ ದಾರಿಗಳು ಚತುಷ್ಪಥಗಳಾಗುವಾಗ, ಕಪ್ಪತ್ತ ಗುಡ್ಡವನ್ನೋ ಬನ್ನೇರುಘಟ್ಟವನ್ನೋ ಕುಗ್ಗಿಸುತ್ತಾರೆ ಎಂದು ಕೇಳುವಾಗ, ಹುಬ್ಬಳ್ಳಿ - ಕಾರವಾರ ರೈಲು ಮಾರ್ಗ ಬರುತ್ತದೆನ್ನುವಾಗ... ‘ಪಿತ್ಥ ಕೆದರುವುದೂ’ ಸಹಜವೇ ಆಗುತ್ತದೆ. ಅಂಥವುಗಳ ಭಾಗ ಆಗಿದ್ದೂ ಸಮನ್ವಯದ ಬೆಳಕು ಕಾಣಿಸುವ ಕೃತಿಯಾಗಿ ಪುನರ್ವಸು ನನಗೆ ತುಂಬ ಮಹತ್ವದ್ದಾಗಿ ಪ್ರಭಾವಿಸಿತು. ಅಂಕಿತ ಪ್ರಕಾಶನದ, ೨೦೧೯ರ ಪ್ರಥಮ ಮುದ್ರಣದ, ೫೪೪ ಪುಟಗಳ ಹೆಬ್ಬೊತ್ತಗೆ (ಬೆಲೆ ರೂ ೪೫೦) ನೀವೂ ಕೊಂಡು ಓದಿ, ಹೆಚ್ಚಿನ ಆನಂದಾನುಭೂತಿ ಮತ್ತು ವೈಚಾರಿಕ ಜಾಗೃತಿಯನ್ನು ಪಡೆಯುವಿರಾಗಿ ನಂಬಿ ವಿರಮಿಸುತ್ತೇನೆ.

[ವಿಸೂ: ಕಾದಂಬರಿಯ ವಿಷಯಕ್ಕೆ ಪೂರಕವಾಗಿ ಕೆ.ವಿ. ಅಕ್ಷರ ಬರೆದು, ನಿರ್ದೇಶಿಸಿದ ನೀನಾಸಂ ಪ್ರಯೋಗದ ಈ ಎರಡು ನಾಟಕಗಳನ್ನು ಅವಶ್ಯ ನೋಡಿ: 
ಸ್ವಯಂವರಲೋಕ

  


ಸೇತು ಬಂಧ 


4 comments:

 1. ಎಪಿಕ್ ಮಾದರಿಯ ಕಾದಂಬರಿ ’ಪುನರ್ವಸು’ (ಭಾಗ ಒಂದು)
  ವಿಮರ್ಶಕರು: ಶ್ರೀಪಾದ ಹೆಗಡೆ

  ಶರಾವತಿ ಯೋಜನೆಯಲ್ಲಿ ಮುಳುಗಡೆಯಾದ ಪ್ರದೇಶದ ಮುಳುಗಡೆಯ ಮೊದಲಿನ ಒಂದು ತಲೆಮಾರಿನ ಸಮೃದ್ಧ ಬದುಕಿನ ವಿಸ್ತಾರವಾದ ಚಿತ್ರ ಈ ಕಾದಂಬರಿಯ ಭಿತ್ತಿ. ಶರಾವತಿ ಯೋಜನೆಯಿಂದ ಮುಳುಗಿದ್ದು ಆ ಪ್ರದೇಶದ ಕಾಡು, ಕಣಿವೆ, ಹೊಲ,ಗದ್ದೆ, ತೋಟ, ಮನೆ ಮಠಗಳೊಂದಿಗೆ ಬೆಸೆದುಕೊಂಡಿದ್ದ ಅವರ ಬದುಕು ಮಾತ್ರವಲ್ಲದೆ, ಇಡೀ ಪ್ರದೇಶದ ಜನರ ಜೀವನ ಮೌಲ್ಯವೇ ನಾಶವಾದ ಪರಿಯನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ. ಶರಾವತಿಯಂತಹ ಬೃಹತ್ ಯೋಜನೆಗಳು ತರುವ ನಾಶದ ಜೊತೆಗೆ ದೇಶದ ಅಭಿವೃದ್ಧಿಗೆ ಅವು ಕೊಡ ಮಾಡುವ ಕಾಣಿಕೆಯನ್ನೂ ಪರಗಣಿಸಿ ತೂಗಿ ನೋಡುವ ಪ್ರಯತ್ನವನ್ನೂ ಮಾಡಿ, ದ್ವಂದ್ವ ತರ್ಕವನ್ನು ಉಳಿಸಿಕೊಳ್ಳುವದರ ಮೂಲಕ ಭಾವಾತಿರೇಕಕ್ಕೆ ತಡೆಹಾಕಿ, ಒಂದು ದೂರವನ್ನು ಕಾಪಾಡಿಕೊಳ್ಳುವ ಮತ್ತು ಒಮ್ಮುಖ ಚಿಂತನೆಗೆ ಕಡಿವಾಣ ಹಾಕುವ ಕೆಲಸವನ್ನೂ ಕಾದಂಬರಿಕಾರರು ಸಮರ್ಥವಾಗಿ ಮಾಡಿದ್ದಾರೆ. ಐತಿಹಾಸಿಕ ಘಟನೆಗಳ ಸುತ್ತ ಕಾಲ್ಪನಿಕ ಕಥಾ ಹಂದರವನ್ನು ನೇಯುವ ಈ ಕೃತಿ ಕನ್ನಡ ಭಾಷೆಯ ಕಾದಂಬರಿ ಪ್ರಕಾರದಲ್ಲಿ ರಚನೆಯ ತಾಂತ್ರಿಕ ದೃಷ್ಟಿಯಿಂದಲೂ ವಿಶಿಷ್ಟವಾದದ್ದಾಗಿದೆ. ಇದರಲ್ಲಿ ಬರುವ ಈ ಪ್ರದೇಶದ ಭೌಗೋಲಿಕ ವಿವರಗಳು, ಹಕ್ಕಿಪಕ್ಷಿ, ಕಾಡು ಪ್ರಾಣಿಗಳು, ಗಿಡ ಮರಗಳ ವಿವರಗಳು, ಐತಿಹಾಸಿಕ ದಾಖಲೆಗಳು, ಆಣೆಕಟ್ಟಿನ ತಾಂತ್ರಿಕ ವಿವರಗಳು ಪಶ್ಚಿಮ ಘಟ್ಟದ ಈ ಭಾಗದ ಸಂಪೂರ್ಣ ಚಿತ್ರವನ್ನು ಕಣ್ಣಿಗೆ ಕಟ್ಟುವಂತೆ ನಮ್ಮೆದುರು ಬಿಚ್ಚಿಡುತ್ತವೆ.

  ಭಾರಂಗಿ ಮನೆಯ ದತ್ತಪ್ಪ ಹೆಗಡೆ, ಅವನ ಅಕ್ಕ ತುಂಗಕ್ಕಯ್ಯ, ಶರಾವತಿ ಯೋಜನೆಯ ಅನುಷ್ಠಾನಕ್ಕಾಗಿ ಜೋಗಕ್ಕೆ ಬಂದ ಇಂಜಿನೀಯರ್ ಕೃಷ್ಣ ರಾವ್ ಮತ್ತು ಅವನ ಹೆಂಡತಿ ವಸುಧಾ ಇವರನ್ನು ಮುಖ್ಯ ಪಾತ್ರವಾಗುಳ್ಳ ಕಾದಂಬರಿಯ ಮುಖ್ಯ ಘಟ್ಟ, ಸರ್ ಎಂ.ವಿ.ಯವರ ಆಶಯದಂತೆ ಜೋಗದಲ್ಲಿ ವಿದ್ಯುತ್ ಉತ್ಪಾದನೆಯ ಯೋಜನೆಯ ಪ್ರಾಥಮಿಕ ತಯಾರಿಗಾಗಿ ಕೃಷ್ನ ರಾವ್ ಜೋಗಕ್ಕೆ ಬರುವದರೊಂದಿಗೆ ಪ್ರಾರಂಭವಾಗುತ್ತದೆ. ತಮ್ಮ ಸರ್ವೆ ಕೆಲಸದ ಸಂದರ್ಭದಲ್ಲಿ ದತ್ತಪ್ಪ ಹೆಗಡೆಯವರನ್ನು ಭೇಟಿಯಾಗುವುದು ಮತ್ತು ಅವರ ಮನೆಯೊಂದಿಗೆ ಅನ್ಯೋನ್ಯತೆಯ ಸಂಬಂಧ ಬೆಸೆದು ನಂತರದಲ್ಲಿ ಕೃಷ್ಣರಾವ್ ಮತ್ತು ಅವನ ಮಡದಿ ವಸುಧಾ ಭಾರಂಗಿ ಮನೆಯವರಿಗೆ ಕೇವಲ ಅತಿಥಿಗಳಾಗಿ ಉಳಿಯದೆ ಬಂಧುಗಳಿಗಿಂತ ಮಿಗಿಲಾದ ಬಾಂಧವ್ಯ ಉಂಟಾಗುತ್ತದೆ. ದತ್ತಪ್ಪ ಹೆಗಡೆ ವಸುಧಾಳನ್ನು ತನ್ನ ಸ್ವಂತ ಮಗಳಂತೆ ಕಾಣುತ್ತಾನೆ. ನಾಲ್ಕಾರು ಸಲ ಗರ್ಭಪಾತವಾಗಿ ಇನ್ನು ಗರ್ಭ ಧರಿಸದಂತೆ ಬೆಂಗಳೂರಿನ ತಜ್ಞ ವೈದ್ಯರಿಂದ ಎಚ್ಚರಿಕೆಯನ್ನು ಪಡೆದಿದ್ದ ಮತ್ತು ಇದರಿಂದಾಗಿ ಖಿನ್ನತೆಯಿಂದ ಬಳಲುತ್ತ ರೋಗಿಷ್ಟೆಯಾಗಿದ್ದ ವಸುಧಾ ಭಾರಂಗಿ ಮನೆಯವರ ಮುತುವರ್ಜಿಯಿಂದಾಗಿ ಹಳ್ಳಿಯ ಔಷಧದಿಂದ ಸಂತಾನ ಪಡೆದು ಹೆಣ್ಣು ಮಗುವಿಗೆ ಜನ್ಮ ಕೊಡುತ್ತಾಳೆ. ಅವಳೆ ದತ್ತಪ್ಪ ಹೆಗಡೆಯಿಂದ ನಾಮಕರಣಗೊಂಡ ಮಗು ಪುನರ್ವಸು. ಹಳ್ಳಿ ಬದುಕಿನ ಅಂದವನ್ನು ಅರಿಯದ, ಜೋಗದ ಕಾಡಿನ ಒಡಲಿನಲ್ಲಿ ಬದುಕುವ ಜನರನ್ನು ಅಸಂಸ್ಕೃತ ಸಮಾಜವೆಂದೇ ಭಾವಿಸಿ ಕೃಷ್ಣ ರಾವ್ ಅಲ್ಲಿಗೆ ಹೋಗದಂತೆ ತಡೆಯಲು ಎಲ್ಲ ಪ್ರಯತ್ನ ಮಾಡಿದ, ಬೆಂಗಳೂರಿನಲ್ಲಿ ವಾಸಿಸುವ ಅವರಿಬ್ಬರ ಮನೆಯವರನ್ನೂ ಒಪ್ಪಿಸುವ ಜವಾಬ್ದಾರಿಯಿಂದ ಹಿಡಿದು ವಸುಧಾಳ ಬಸುರಿ ಬಾಣಂತನದ ಅವಧಿಯ ಆರೈಕೆಯನ್ನು ಭಾರಂಗಿ ಮನೆಯವರು ಅಕ್ಕರೆಯಿಂದ ಮಾಡಿ ಮುಗಿಸುತ್ತಾರೆ. ಇದರಲ್ಲೆಲ್ಲ ತುಂಗಕ್ಕಯ್ಯನ ಪಾತ್ರ ದತ್ತಪ್ಪ ಹೆಗಡೆಯವರಷ್ಟೆ ಮಹತ್ವದ್ದು.
  (ಎರಡನೇ ಭಾಗದಲ್ಲಿ ಮುಂದುವರಿದಿದೆ)

  ReplyDelete
 2. ಎಪಿಕ್ ಮಾದರಿಯ ಕಾದಂಬರಿ ’ಪುನರ್ವಸು’ (ಭಾಗ ಎರಡು)
  ವಿಮರ್ಶಕರು: ಶ್ರೀಪಾದ ಹೆಗಡೆ

  ಇದು ಆ ಪ್ರದೇಶದ ಜನರ ಶಾಂತ ಮತ್ತು ಸಮೃದ್ಧಿಯ ಬದುಕಿನ ಕಾಲಘಟ್ಟವೂ ಹೌದು. ದೂರದ ಮತ್ತು ಕಾಡಿನ ನಡುವಿನ ಈ ಪ್ರದೇಶ ಪ್ರಭುತ್ವದಿಂದ ಯಾವುದೇ ಸೌಕರ್ಯಗಳನ್ನು ಆ ವರೆಗೆ ಪಡೆದಿಲ್ಲವಾದ್ದರಿಂದ ಇಂತಹ ಕೆಲವು ಮಹತ್ವದ ಯೋಜನೆಯಿಂದ ಅಲ್ಪ ಸ್ವಲ್ಪ ನಷ್ಟವಾದರೂ ರಸ್ತೆ, ಶಾಲೆ, ಆಸ್ಪತ್ರೆಯಂತಹ ನಾಗರಿಕ ಸೌಲಭ್ಯ ಲಭ್ಯವಾಗಿ ತಮ್ಮ ಬದುಕಿನ ಕಷ್ಟ ಕಾರ್ಪಣ್ಯದ ಹೊರೆ ತಗ್ಗುವುದೆಂದು ಭಾವಿಸಿ ದತ್ತಪ್ಪ ಹೆಗಡೆಯೂ ಸಹಿತ ಅಲ್ಲಿನ ಸ್ಥಳಿಕರು ಯೋಜನೆಯ ಬಗ್ಗೆ ಉತ್ಸಾಹ ತಳೆದಿದ್ದ ದಿನಗಳವಾಗಿದ್ದವು. ಮುರಾರಿ ಭಟ್ಟನೆಂಬ ಅರೆ ಹುಚ್ಚ ಮಾತ್ರ ಮುಂಬರುವ ಅನಾಹುತದ ದಿನಗಳ ಬಗ್ಗೆ ಒಗಟು ಒಗಟಾಗಿ ಹಲುಬುತ್ತ ಜನರನ್ನು ಎಚ್ಚರಿಸುತ್ತಲೆ ಇದ್ದ. ಜನ ಅವನನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿರಲ್ಲ. ಹಿರೇಭಾಸ್ಕರದಲ್ಲಿ ಶರಾವತಿಗೆ ಆಣೆಕಟ್ಟು ಕಟ್ಟಿ ವಿದ್ಯುದಾಗರವನ್ನು ಪ್ರಾರಂಭಿಸುತ್ತಿದ್ದಂತೆ ಸರಕಾರ ಇಡಿ ಪ್ರದೇಶವನ್ನೇ ಮುಳುಗಿಸುವ ಬೃಹತ್ ಯೋಜನೆ (ಲಿಂಗನ ಮಕ್ಕಿ) ಯನ್ನು ಘೋಷಿಸುತ್ತದೆ. ಇದರಿಂದ ಕಂಗಾಲಾದ ಪ್ರದೇಶದ ಜನ ದತ್ತಪ್ಪ ಹೆಗಡೆಯ ಮುಖಂಡತ್ವದಲ್ಲಿ ಯೋಜನೆಯನ್ನು ವಿರೋಧಿಸುವ ಯತ್ನ ಮಾಡಿದರೂ ಈ ಪ್ರದೇಶದ ಹೊರಗಿನ ಸಾರ್ವಜನಿಕ ಅಭಿಪ್ರಾಯ ಪೂರಕವಾಗಿಲ್ಲದಿದ್ದುದರಿಂದ ಮತ್ತು ಪ್ರಭುತ್ವದ ಇಚ್ಚಾಶಕ್ತಿಯ ಎದುರು ಈ ಯತ್ನ ಬಹು ಬೇಗನೆ ಸೋಲುತ್ತದೆ. ಈ ವಿದ್ಯಮಾನದೊಂದಿಗೆ ಎರಡನೇಯ ಮಹಾಯುದ್ಧದ ದಾರುಣ ಪರಿಣಾಮವೂ ಸೇರಿಕೊಂಡು ಸಮಾಜದ ವಿಘಟನೆ ಪ್ರಾರಂಭವಾಗಿ, ವಂಚನೆ ಮತ್ತು ಅನ್ಯ ಮಾರ್ಗಗಳಿಂದ ಸ್ವಂತಕ್ಕೆ ಲಾಭ ಮಾಡಿಕೊಳ್ಳುವ ಜನರ ಕುಕೃತ್ಯದಿಂದಾಗಿ ಸಮಾಜ ನಲುಗುತ್ತದೆ. ಈ ಎಲ್ಲ ಕೃತ್ಯಗಳಲ್ಲಿ ಅಧಿಕಾರಿಗಳೂ ಭಾಗಿಯಾಗಿ ದತ್ತಪ್ಪ ಹೆಗಡೆ ಸುಳ್ಳು ಆಪಾದನೆಯ ಮೇಲೆ ಮೂರು ವರ್ಷ ಸೆರೆವಾಸ ಅನುಭವಿಸುವಂತಾಗುತ್ತದೆ. ಮುಳುಗಡೆಯಾಗುವುದು ಖಾತ್ರಿಯಾಗುತ್ತಿದ್ದಂತೆ ಜನ ಹೆಚ್ಚು ಹೆಚ್ಚು ಪರಿಹಾರ ಧನ ಪಡೆಯುವದಕ್ಕೋಸ್ಕರ ಅಧಿಕಾರಿಗಳನ್ನು ಶಾಮೀಲು ಮಾಡಿಕೊಂಡು ಎಲ್ಲ ರೀತಿಯ ವಾಮ ಮಾರ್ಗಗಳನ್ನೂ ಅನುಸರಿಸತೊಡಗುತ್ತಾರೆ. ಯಾರದೋ ಆಸ್ತಿ ಮತ್ಯಾರದೊ ಪಾಲಾಗುತ್ತದೆ. ಕಾರ್ಗಲ್ಲು, ಜೋಗ, ಹಿರೇಭಾಸ್ಕರ, ಮಡೆನೂರುಗಳಲ್ಲಿ ಸಮೃದ್ದ ಅರಣ್ಯಗಳನ್ನು ಸವರಿ ಸಾವಿರಾರು ಜನಕ್ಕೆ ಉಳಿಯುವ ಕಾಲೋನಿಗಳು ತಲೆ ಎತ್ತುತ್ತವೆ. ಶಾಲೆ,ಆಸ್ಪತ್ರೆಗಳಂತಹ ಸೌಲಭ್ಯ ಬಂದರೂ ಸ್ಥಳೀಯ ಜನರಿಗೆ ಅದರರಿಂದ ಕಿಂಚಿತ್ ಉಪಯೋಗವೂ ಲಭಿಸುವದಿಲ್ಲ. ಸ್ಥಳೀಯರೆ ಹೊರಗಿನವರಂತಾಗುತ್ತಾರೆ ಮತ್ತು ಅವರನ್ನು ಕೀಳಾಗಿ ನೋಡಿ ಅವಮಾನಿಸಲಾಗುತ್ತದೆ. ಆಣೆಕಟ್ಟು ಕಟ್ಟಲು ಬೇಕಾದ ಕಚ್ಚಾ ಸಾಮಗ್ರಿಗಳಾದ ಗ್ರ್ಯಾನೈಟ್ ಕಲ್ಲು, ಕಟ್ಟಿಗೆ, ಇದ್ದಿಲುಗಳಿಗಾಗಿ ಸುತ್ತಮುತ್ತಲ ಅರಣ್ಯವೆಲ್ಲ ನಾಶವಾಗಿ ಹರಿದ್ವರ್ಣ ಕಾಡುಗಳು ಬಟ್ಟಂಬಯಲಾಗುತ್ತವೆ. ಕಲ್ಲಿನ ಕ್ವೈರಿಗಾಗಿ ಎಲ್ಲೆಂದರಲ್ಲಿ ಗುಡ್ಡ ಬೆಟ್ಟಗಳನ್ನು ಅಗೆದುದರ ಪರಿಣಾಮವಾಗಿ ಪ್ರಕೃತಿ ವಿರೂಪಗೊಳ್ಳುತ್ತದೆ. ಅಧಿಕಾರಿಗಳ ದರ್ಪ ಎಲ್ಲೆ ಮೀರುತ್ತದೆ. ಪರಿಹಾರದ ಹಣ, ಗುತ್ತಿಗೆಯ ಹಣ ಜನರ ಕೈಯಲ್ಲಿ ಒಮ್ಮಿಂದೊಮ್ಮೆಗೆ ಓಡಾಡತೊಡಗಿ ಸಮಾಜ ನೈತಿಕ ಅಧಃಪತನಗೊಳಗಾಗುತ್ತದೆ. ಹೊರಗಿನಿಂದ ಬಂದ ಕಾರ್ಮಿಕರು, ಗುತ್ತಿಗೆದಾರರು ಸ್ಥಳೀಯ ಹೆಂಗಸರ ಮೇಲೆ ಅತ್ಯಾಚರವೆಸಗುವ ಮಟ್ಟಿಗೆ ಇದು ಹೋಗುತ್ತದೆ. ಹುಟ್ಟಾ ಮೂಗಿ ಮತ್ತು ಕಿವುಡಿಯಾದ ತುಂಗಕ್ಕಯ್ಯನ ಮಗಳು ಶರಾವತಿಯ ಮೇಲೆ ಪರ ಊರಿನಿಂದ ಬಂದವರು ಅತ್ಯಾಚಾರವೆಸಗುತ್ತಾರೆ. ಇದು ಶರಾವತಿ ನದಿ ಮತ್ತು ಕೊಳ್ಳದ ಪರಿಸರದ ಮೇಲೆ ಅತ್ಯಾಚಾರವಾದದ್ದರ ಸಂಕೇತವಾಗಿ ಕರುಳು ಹಿಂಡುವಂತೆ ಮೂಡಿ ಬಂದು ಓದುಗರನ್ನು ದಿಗ್ಬ್ರಾಂತರನ್ನಾಗಿಸುತ್ತದೆ.
  (ಮೂರನೇ ಭಾಗದಲ್ಲಿ - ಮುಂದುವರಿದಿದೆ)

  ReplyDelete
 3. ಎಪಿಕ್ ಮಾದರಿಯ ಕಾದಂಬರಿ ’ಪುನರ್ವಸು’ (ಭಾಗ ಮೂರು)
  ವಿಮರ್ಶಕರು: ಶ್ರೀಪಾದ ಹೆಗಡೆ

  ಆಣೆಕಟ್ಟೆಯಲ್ಲಿ ನೀರು ಸಂಗ್ರಹವಾಗತೊಡಗಿದಂತೆ ಊರು ಕೇರಿಗಳು ಮುಳುಗಲು ಪ್ರಾರಂಭವಾಗುತ್ತವೆ. ತಲತಲಾಂತರದಿಂದ ವಾಸಿಸುತ್ತಿದ್ದ ಜನ ಬೇರು ಹರಿದುಕೊಂಡು ರೋಧಿಸುತ್ತ ಊರು ಬಿಡುವ ದೃಶ್ಯವನ್ನು, ಅದೆಷ್ಟೊ ಜನ ಹುಚ್ಚರಾದದ್ದನ್ನು, ಬೇರನ್ನು ಹರಿದುಕೊಳ್ಳುವ ನೋವನ್ನು ಸಹಿಸಲಾಗದೆ ಸಾವಿಗೆ ಶರಣಾದದ್ದನ್ನು ಕಾದಂಬರಿ ಭಾವ ತೀವ್ರತೆಯೊಂದಿಗೆ ಕಟ್ಟಿಕೊಡುತ್ತದೆ. ದತ್ತಪ್ಪ ಹೆಗಡೆಯ ಮಗ ಗಣೇಶ ಆಗಲೇ ಆಣೆಕಟ್ಟಿಗೆ ಸಂಬಂದಿಸಿದ ಕೆಲಸದ ಗುತ್ತಿಗೆಯನ್ನು ಹಿಡಿದಿರುತ್ತಾನೆ ಮತ್ತು ಅದರಿಂದ ಬಂದ ಹಣದಿಂದ ಭದ್ರಾವತಿಯಲ್ಲಿ ಜಮೀನು ಖರೀದಿಸಿ ಮನೆ ಕಟ್ಟಿಸಲಾರಂಬಿಸಿರುತ್ತಾನೆ ಮತ್ತು ಊರಿನ ನೆಲದೊಂದಿಗೆ ಭಾವನಾತ್ಮಕ ಸಂಬಂಧವನ್ನು ಕಳಚಿಕೊಂಡಿರುತ್ತಾನೆ. ಮಗನ ಈ ನಡತೆಯಿಂದ ನೊಂದ ದತ್ತಪ್ಪ ಹೆಗಡೆ ಆಗಾಗಲೇ ಅವನಿಂದ ಒಂದು ಅಂತರವನ್ನು ಕಾದುಕೊಂಡಿರುತ್ತಾರೆ. ದತ್ತಪ್ಪ ಹೆಗಡೆ, ತುಂಗಕ್ಕಯ್ಯ ಮತ್ತು ಶರಾವತಿಯನ್ನು ಮನವೊಲಿಸಿ ತಾನಿದ್ದಲ್ಲಿಗೆ ಕರೆದು ಕೊಂಡು ಹೋಗುವಲ್ಲಿ ದತ್ತಪ್ಪ ಹೆಗಡೆಯ ಮಗ ಗಣೇಶ ವಿಫಲನಾಗುತ್ತಾನೆ ದತ್ತಪ್ಪ ಹೆಗಡೆ ತನಗೆ ಬಂದ ಪರಿಹಾರದ ಹಣವನ್ನು ಮಗ ಮತ್ತು ತನ್ನನ್ನೇ ನಂಬಿ ಬದುಕಿದ ಆಳುಕಾಳುಗಳೂ ಸಹಿತ ಇತರರಿಗೆ ಹಂಚಿ ಬಿಡುತ್ತಾರೆ. ಶರಾವತಿಯನ್ನು ಸಲುಹುವ ಜವಾಬ್ದಾರಿಯನ್ನು ಮುರಾರಿಗೆ ವಹಿಸಿ ಮುಳುಗಡೆಯಾಗದೇ ಇದ್ದ ಪ್ರದೇಶದಲ್ಲಿದ್ದ ತಮ್ಮ ಜಮೀನನ್ನು ಅವರ ಪಾಲಿಗೆ ಕೊಡುತ್ತಾರೆ. ನೀರು ಏರುತ್ತ ಬಂದು ಭಾರಂಗಿಗೆ ಜಲ ದಿಗ್ಭಂಧನವಾಗುತ್ತದೆ. ತುಂಗಕ್ಕಯ್ಯ ನಿದ್ದೆಯಲ್ಲಿ ಸುಖ ಮರಣ ಹೊಂದುತ್ತಾಳೆ. ಊರವರೆಲ್ಲರ ಕಷ್ಟ ದುಃಖಗಳಿಗೆ ಒದಗಿ ಬಂದ ತುಂಗಯ್ಯನ ಹೆಣ ಹೊರಲು ಊರಿನಲ್ಲಿ ನಾಲ್ಕು ಜನರೂ ಇರುವುದಿಲ್ಲ. ಹಿತ್ತಿಲಲ್ಲಿ ಅವಳ ಅಂತ್ಯಸಂಸ್ಕಾರ ಮಾಡಿ ಬಂದ ದತ್ತಪ್ಪ ಹೆಗಡೆ ಶರಾವತಿಯನ್ನು ಮುರಾರಿಗೊಪ್ಪಿಸಿದ ರಾತ್ರಿಯೇ ಕಾಣೆಯಾಗುತ್ತಾರೆ. ಅತ್ಯಾಚಾರದಿಂದಾಗಿ ಗರ್ಭ ಧರಿಸಿದ್ದ ಶರಾವತಿಗೆ ಗರ್ಭ ಪಾತವಾಗುತ್ತದೆ. ಇವರೆಲ್ಲರನ್ನು ಕರೆದೊಯ್ಯುವ ಪ್ರಯತ್ನವಾಗಿ ಮತ್ತೊಮ್ಮೆ ಮನೆಗೆ ಬಂದ ಗಣೇಶ ಶರಾವತಿಯನ್ನು ದೋಣಿಯಲ್ಲಿ ಹೊಳೆ ದಾಟಿಸಿ ಸಾಗರದ ಆಸ್ಪತ್ರೆಗೆ ಹೊತ್ತೊಯ್ಯುವದರೊಂದಿಗೆ ಮತ್ತು ದೋಣಿಯ ಸಂಗಡವೆ ಹೊಳೆ ದಾಟಿಸಿದ್ದ ದತ್ತಪ್ಪ ಹೆಗಡೆ ಪ್ರೀತಿಯಿಂದ ಸಾಕಿದ ದನ ಮಂಗಳ ಗೌರಿ ತಪ್ಪಿಸಿಕೊಂಡು ಹೊಳೆಗೆ ಹಾರಿ ಭಾರಂಗಿಯತ್ತ ಈಜ ತೊಡುಗುವದರೊಂದಿಗೆ ಕಾದಂಬರಿ ಮುಗಿಯುತ್ತದೆ.

  ಇದು ಕತೆಯ ಸ್ಥೂಲವಾದ ವಿವರ ಮಾತ್ರ. ಇಲ್ಲಿ ಹೇಳದೇ ಉಳಿದ ಅದೆಷ್ಟೋ ಸೂಕ್ಷ್ಮಗಳು ಮತ್ತು ಒಳನೋಟಗಳು ಕಾದಂಬರಿ ಒಳಗೊಂಡಿದೆ. ಅವುಗಳನ್ನು ಓದಿಯೇ ಅರಿಯಬೇಕು. ಜೋಗ ಜಲಪಾತದ ರಾಜ, ರೋರರ್, ರಾಕೆಟ್, ರಾಣಿ ಎಂಬ ನಾಲ್ಕು ಜಲಧಾರೆಗಳ ಸಾದೃಶ್ಯದಂತೆ ನಾಲ್ಕು ಧಾರೆಗಳಲ್ಲಿ ಈ ಬೃಹತ್ ಕೃತಿಯನ್ನು ರಚಿಸಲಾಗಿದೆ. ಭಾವನಾತ್ಮಕ ನೆಲೆ, ಸಾಮಾಜಿಕ ನೆಲೆ, ವೈಚಾರಿಕ ನೆಲೆ ಮತ್ತು ವೈಜ್ಞಾನಿಕ ಅಥವ ತಾಂತ್ರಿಕ ವಿವರದ ನೆಲೆ ಎಂಬ ನಾಲ್ಕು ಧಾರೆಗಳು ಕಾದಂಬರಿಯ ತುಂಬ ಧುಮ್ಮಿಕ್ಕುತ್ತವೆ. ದತ್ತಪ್ಪ ಹೆಗಡೆ,ತುಂಗಕ್ಕಯ್ಯ, ಕೃಷ್ಣರಾವ್ ಮತ್ತು ಅವನ ಹೆಂಡತಿ ವಸುಧಾ ಈ ನಾಲ್ಕು ಪಾತ್ರಗಳ ಸುತ್ತ ಕಾದಂಬರಿಯ ಪೂರ್ತಿ ಕತೆ ನೇಯಲಾಗಿದೆ. ನಿರ್ಮಾಣ ಮತ್ತು ನಿರ್ನಾಮದ ನಡುವಿನ ಸಂಘರ್ಷ ಕಾದಂಬರಿಯುದ್ದಕ್ಕೂ ಹರಿಯುವ ಧಾರೆ. ಕೃಷ್ಣರಾವ್ ತನ್ನ ವೃತ್ತಿ ಜೀವನಕ್ಕೆ ನಿಷ್ಠನಾದ ಪ್ರಾಮಾಣಿಕ ವ್ಯಕ್ತಿ. ದೇಶದ ಹಸಿವು ಬಡತನವನ್ನು ತೊಲಗಿಸಲು ಕೈಗಾರಿಕೆಗಳ ನಿರ್ಮಾಣದಿಂದ ಮಾತ್ರ ಸಾಧ್ಯವೆಂದು ಬಲವಾಗಿ ನಂಬಿದವ ಹಾಗಾಗಿ ಇಂತಹ ಬೃಹತ್ ಯೋಜನೆಗಳು ನೀಡುವ ಲಾಭದ ಮುಂದೆ ಅವು ಮಾಡುವ ವಿನಾಶ ನಗಣ್ಯ ಎನ್ನುವ ದೃಢವಾದ ನಿಲುವು ಅವನದು. ದೇಶದ ಏಳ್ಗೆಗಾಗಿ ಭಾರಂಗಿ ಮುಳುಗುವುದು ಅನಿವಾರ್ಯ ಮತ್ತು ಅದಕ್ಕಾಗಿ ಭಾವನಾತ್ಮಕ ನೆಲೆಯನ್ನು ತ್ಯಜಿಸಿ ಯೋಚಿಸಬೇಕೆನ್ನುವ ವಾದ ಅವನದು. ಜೋಗದ ಜಲ ವಿದ್ಯುತ್ ಯೋಜನೆಯನ್ನು ಪೂರ್ಣಗೊಳಿಸುವುದು ತನ್ನ ಜೀವನದ ಪರಮೋದ್ದೇಶವೆಂದು ತಿಳಿದು ದುಡಿಯುತ್ತಿರುವವನು. ದತ್ತಪ್ಪ ಹೆಗಡೆ ಸಮಗ್ರವಾಗಿ ಯೋಚಿಸುವವನು ಮತ್ತು ಗಾಂಧಿಯ ಆದರ್ಶಗಳನ್ನು ಬದುಕುವವನು. ಪ್ರಗತಿಯ ಹೆಸರಿನಲ್ಲಿ ಉಪಭೋಗಗಳು ನಿಯಂತ್ರಣ ಮೀರಿದರೆ ಸಮಾಜದ ಅವನತಿ ಖಂಡಿತ. ಹಾಗಾಗಿ ಅದಕ್ಕೆ ಎಡೆ ಇರಬಾರದೆಂದು ನಂಬಿದವ. ಅಭಿವೃದ್ಧಿ ಎಂಬ ಮಾಯ ಜಿಂಕೆಯ ಹಿಂದೆ ಓಡತೊಡಗಿದಾಗ ಅದಕ್ಕೆ ಕೊನೆಯಿಲ್ಲ - ಮೊದಲು ಹಿರೇಭಾಸ್ಕರ, ಹಿರೇಭಾಸ್ಕರದ ನಂತರ ಲಿಂಗನಮಕ್ಕಿ ಅದಾದ ಮೇಲೆ ಇನ್ನೊಂದು ಹೀಗೆ ಈ ವಿನಾಶದ ಸರಣಿಗೆ ಕೊನೆ ಇರದು ಎನ್ನುವ ವಾಸ್ತವದ ಅರಿವಿರುವ ವಿವೇಕಿ. ಪ್ರಭುತ್ವದ ಇಚ್ಚಾಶಕ್ತಿಯ ವಿರುದ್ಧ ಸೋತು ನಿರಾಶನಾದ ದತ್ತಪ್ಪ ಹೆಗಡೆ ಭಾರಂಗಿಯ ಮುಳುಗಡೆ ವಾಸ್ತವದಾಗ ಯಾವ ಸ್ಥಾವರವೂ ಶಾಶ್ವತವಲ್ಲವೆನ್ನುವ ಆಧ್ಯಾತ್ಮ ತತ್ವದಲ್ಲಿ ಸಮಾಧಾನ ಪಡೆಯುತ್ತಾನೆ.

  ತುಂಗಕ್ಕಯ್ಯ ಮತ್ತು ದತ್ತಪ್ಪ ಹೆಗಡೆಯ ಪಾತ್ರ ಚಿತ್ರಣದ ಬಗ್ಗೆ ಎರಡು ಮಾತು. ಎಳೆ ವಯಸ್ಸಿನಲ್ಲಿಯೇ ಮೂಕಿ ಮತ್ತು ಕಿವುಡಿಯಾದ ಮಗಳನ್ನು ಹಡೆದು, ಗಂಡನನ್ನೂ ಕಳೆದುಕೊಂಡು ತವರು ಮನೆ ಸೇರಿದ ತುಂಗಕ್ಕಯ್ಯ ಬಹು ಗಟ್ಟಿಗಿತ್ತಿ, ಅಷ್ಟೇ ದಯಾಪರಳು. ತಮ್ಮನಾದ ದತ್ತಪ್ಪ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದಾಗ ಮೂರು ವರ್ಷಗಳ ಅವನ ಅನುಪಸ್ಥಿತಿಯಲ್ಲಿ ಭಾರಂಗಿ ಮನೆಯನ್ನು ನಡೆಸಿಕೊಂಡು ಹೋದವಳು. ದತ್ತಪ್ಪ ಇವಳೊಡನೆ ಸಮಾಲೋಚಿಸಿಯೇ ಮನೆಯ ವ್ಯವಹಾರಗಳನ್ನು ಮುಂದೆಯೂ ನಡೆಸಿಕೊಂಡು ಹೋಗುತ್ತಾನೆ.
  ದತ್ತಪ್ಪ ಹೆಗಡೆ ಇಡೀ ಪ್ರಾಂತ್ಯಕ್ಕೇ ಹೆಸರಾದ ಸಾಮಾಜಿಕ ಹೋರಟಗಾರ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದವನು ಮತ್ತು ಮೂರು ವರ್ಷಗಳ ಕಾಲ ಗಾಂಧೀಜಿ ಜೊತೆ ಇದ್ದು ಬಂದವನು. ಸಮಾಜದಲ್ಲಿ ದೊಡ್ಡ ಗೌರವ ಹೊಂದಿರುವವನು. ಹೀಗೆ ದತ್ತಪ್ಪ ಹೆಗಡೆಯನ್ನು ಆದರ್ಶ ಪುರಷನಾಗಿ ಕಟ್ಟಿಕೊಟ್ಟರೂ, ಅವನೂ ಸಹ ಮನುಷ್ಯ ಸಹಜ ದೌರ್ಬಲ್ಯಕ್ಕೆ ಒಳಗಾದ ಸಂದರ್ಭವನ್ನು ಸೃಷ್ಟಿಸಿ ಅವನ ವ್ಯಕ್ತಿತ್ವದ ಸಹಜತೆಯನ್ನು ಕಾಪಾಡಿಕೊಳ್ಳುವ ಪ್ರಯತ್ನವನ್ನು ಕಾದಂಬರಿಕಾರರು ಮಾಡಿರುವದು ಈ ಪಾತ್ರಕ್ಕೆ ಹೆಚ್ಚು ನೈಜತೆಯನ್ನು ತಂದಿದೆ.
  (ಮುಗಿಯಿತು)

  ReplyDelete
 4. ನಿಮ್ಮ ಅನ್ನಿಸಿಕೆಗಳು, ಜೊತೆಗಿದ್ದ ವಿಮರ್ಶೆ ಎಲ್ಲವನ್ನೂ ಓದಿದೆ. ಮಾಹಿತಿಗೆ ಇನ್ನಷ್ಟು ಹೊಳಪು ಸಿಕ್ಕಿತು. ನಾ ಡಿಸೋಜಾರ ಪುಸ್ತಕಗಳನ್ನೂ ಓದುತ್ತೇನೆ - ಎ.ಎಂ ನರಹರಿ ಫೇಸ್ ಬುಕ್ಕಿನಲ್ಲಿ

  ReplyDelete