13 March 2020

ಅತಿ ಮೋಹಕ ಜಲಪಾತ್ರೆಯ ಉದ್ದಕ್ಕೆ.....

ಮೇಘಾಲಯದ ಗಿರಿಕೊಳ್ಳಗಳಲ್ಲಿ - ೨ 

ಲೈಟ್ರಿಂಗ್ಲ್ಯು (Laitrynglew) ಶಿಬಿರತಾಣ - ಶಾಲಾವಠಾರವನ್ನು, ಕಳಚಿಕೊಳ್ಳುವಾಗ ಗಂಟೆ ಎಂಟೂವರೆ ಕಳೆದಿತ್ತು. ಅಂದು ಚಾರಣದಿನ. ಮೊದಲ ಸುಮಾರು ಕಾಲು ಗಂಟೆಯಷ್ಟೇ ನಾವು ಜನವಸತಿಯ ಹಿಂಚುಮುಂಚು ನಡೆದಿದ್ದೆವು. ಹಿಂದಿನ ದಿನ ಬಸ್ ಬಂದಿದ್ದ ಕಾಂಕ್-ಡಾಮರ್ ದಾರಿಯಲ್ಲಿ ನೇರ ಊರಿಗೇ ನುಗ್ಗಿ, ಹಿಮ್ಮುರಿ ತಿರುವು ತೆಗೆದೆವು. ಅಲ್ಲಿ ಸಿಕ್ಕ ಮೆಟ್ಟಿಲ ಸಾಲಿಳಿದೆವು. ವಾಸ್ತವದಲ್ಲಿ ಇದು ನಾವು ಶಿಬಿರ ಹೂಡಿದ್ದ ಶಾಲೆಯ ಹಿತ್ತಿಲಿನಾಚೆಗೇ
ಇರುವ ಸ್ವಲ್ಪವೇ ತಗ್ಗಿನ ಆದರೆ ವಿಸ್ತಾರ ಕಣಿವೆಯೇ ಆಗಿತ್ತು. ಈ ಸಾದಾಸೀದಾ ಬೋಳು ಗುಡ್ಡ ಇಳಿಯಲು ಹೀಗೆ ಸುತ್ತು ಹೊಡೆಯಬೇಕಿತ್ತೇ? ಅದೂ ಹಿಂದಿನ ದಿನ ಕ್ರೆಂಪುರಿ ಗುಹಾದ್ವಾರದ ಪಾತಾಳಕ್ಕೆ ಕಚ್ಚಾದಾರಿ ಇಳಿದು, ಹತ್ತಿ ಬಂದವರಿಗೆ ಅಸಾಧ್ಯವಾಗುತ್ತಿತ್ತೇ ಎಂದು ಸಣ್ಣ ನಗೆ ಬಾರದಿರಲಿಲ್ಲ. ಆದರೆ ನಡೆಯುತ್ತಿದ್ದಂತೆ ಇಲ್ಲಿನ ದರ್ಶನ ಬೇರೇ ಆಗತೊಡಗಿತ್ತು. 

ಮೆಟ್ಟಿಲ ಸಾಲ ಎಡ ಮಗ್ಗುಲಲ್ಲೊಂದೆಡೆ ಪುಟ್ಟ ಕಾಂಕ್ರೀಟ್ ಮನೆಯಂಥ ರಚನೆಯಿಂದ ಹೆಣ್ಣೊಬ್ಬಳು ಬಕೆಟ್ ಅದ್ದಿ ಶುದ್ಧ ನೀರು ತುಂಬಿಕೊಂಡು ಒಯ್ಯುವುದು ಕಂಡೆ. ಮುಂದೆ ಈ ರಾಜ್ಯದಲ್ಲಿ ಇನ್ನೂ ಒಂದೆರಡು ಕಡೆ ಹೀಗೇ ಪ್ರಾಕೃತಿಕ ಸಹಜ ನೀರ ಬುಗ್ಗೆಗೆ, ಕಲ್ಲು ಸಿಮೆಂಟಿನ ಚೌಕಟ್ಟು ಮಾತ್ರ ಕೊಟ್ಟು ಕೊಳಚೆಯಾಗುವುದರಿಂದ ರಕ್ಷಿಸಿದ್ದು ತಿಳಿಯಿತು. ಅದೇ ನಮ್ಮೂರು ಮಂಗಳೂರಿನಲ್ಲಿ, ಇಂಥವೇ ಶುದ್ಧ ನೀರಿನ ಸಾರ್ವಕಾಲಿಕ ಬುಗ್ಗೆಗಳು ಕನಿಷ್ಠ ಎರಡು (ಕದ್ರಿ ದೇವಳದಲ್ಲಿ ಮತ್ತು ನಂತೂರಿನ ಬಳಿ ಮರೋಳಿ ಕೊಳ್ಳದಲ್ಲಿ)
ಉಳಿದಿರುವುದನ್ನು ನೆನೆಸಿಕೊಂಡೆ. ಅವು ಹುಟ್ಟಿ ನಾಲ್ಕು ಮೀಟರ್ ಕಳೆವಲ್ಲಿ ಕೊಳಚೆಯ ಸ್ಥಾನಕ್ಕಿಳಿಸಿ, ನಿತ್ಯೋಪಯೋಗಕ್ಕೆ "ತುಂಬೆಯ ನೀರು, ಟ್ಯಾಂಕರ್ ನೀರು" ಎಂದು ಬಡಬಡಿಸುತ್ತಿದ್ದೇವಲ್ಲಾ! 

ಮೆಟ್ಟಿಲ ಸಾಲು ಮುಗಿದಲ್ಲಿಗೆ ಸಹಜ ಕಲ್ಲಚೂರು, ಹುಡಿಗಳಲ್ಲೇ ಸವಕಲು ಜಾಡಿನಂತೇ ರೂಪುಗೊಂಡ ಕಚ್ಚಾ ದಾರಿಯೊಂದು ತೊಡಗಿತ್ತು, ಅನುಸರಿಸಿದೆವು. ಸಣ್ಣಪುಟ್ಟ ದಿಣ್ಣೆ, ಹಸಿರಳಿದ ಹುಲ್ಲು, ವಿರಳ ಕುರುಚಲಷ್ಟೇ ಹಬ್ಬಿದ ಬಯಲು ಉದ್ದಕ್ಕೆ ಹಾಸಿಕೊಂಡಂತಿತ್ತು. ಅಯ್ಯೋ ಎಂದು
ಯೋಚಿಸುವ ಮೊದಲು, ಬಲ ಮಗ್ಗುಲ ತುಸು ಹೆಚ್ಚೇ ತಗ್ಗಿದ್ದಲ್ಲಿ ಕನಿಷ್ಠ ಎರಡು ತಿಳಿನೀರ ಕೆರೆಗಳು ಕಾಣಿಸಿದವು. ಇನ್ನೂ ಆಚೆ ಹೆಚ್ಚುವರಿ ಕೆರಗಳೂ ಇದ್ದಿರಬಹುದು. ಅವುಗಳ ರೂಪದಿಂದ ಹೇಳುವುದಿದ್ದರೆ, ಊರವರೇ ಮಾಡಿಸಿಕೊಂಡವಿರಬೇಕು. ಹಾಗೆ ದೃಷ್ಟಿ ದೂರ ಸರಿದಂತೆ, ತುಸು ಅಮರಿಕೊಂಡಂತಿದ್ದ ಕಣಿವೆಯಲ್ಲಿ ಕಡುಗಪ್ಪುಹಸುರಿನ ದಟ್ಟ ಕಾಡು ಕಂಡಾಗಂತೂ ನಮ್ಮ ಶೋಲಾ ಕಾಡಿನದ್ದೇ ಚಿತ್ರ ಮನಸ್ಸಿನಲ್ಲಿ ಮೂಡಿತ್ತು. ಒಟ್ಟಾರೆ ಇವೆಲ್ಲ ತೊರೆಯೊಂದರ ಹುಟ್ಟಿನ ನೆಲವನ್ನೇ ನಮ್ಮೆದುರು ಬಿಡಿಸಿಟ್ಟಂತಿತ್ತು. ಮತ್ತು ಆ ದಿನದ, ನಮ್ಮ
ಬಹುತೇಕ ಲಕ್ಷ್ಯವನ್ನೂ ಸ್ಫುಟಗೊಳಿಸಿತ್ತು - ನಸು ಇಳಿಜಾರಿನದೇ ಜಾಡಿನಲ್ಲಿ ನೀರ ವೈಭವ ದರ್ಶನ..... 

ಹವಳ ದ್ವೀಪವೊಂದು ಕನಿಷ್ಠ ಐದು ಬಾರಿ ಭೌಗೋಳಿಕ ಜಗ್ಗು-ಗುದ್ದಾಟದಲ್ಲಿ ರೂಪುಗೊಂಡ ನೆಲ ಮೇಘಾಲಯ ಎನ್ನುವುದನ್ನು ಮರೆತಿಲ್ಲವಷ್ಟೆ. ಅದಕ್ಕೆ ಸಹಜವಾಗಿ ಇಲ್ಲಿನ ನೆಲದ ಕಲ್ಲು ಮಣ್ಣಿನ ಬಣ್ಣ, ರಚನೆ ಬಹುಮುಖಿ. ಬಹುಶಃ ಆ ವೈವಿಧ್ಯಮಯ ಕಲ್ಲುಗಳನ್ನು ಭಿನ್ನ ವಾಣಿಜ್ಯ ಉಪಯೋಗಗಳಿಗೆ ಆಯ್ದು ಸಂಗ್ರಹಿಸುವವರೇ ನಾವು ನಡೆದಿದ್ದ ದಾರಿ ರೂಪಿಸಿದಂತಿತ್ತು. ಕಲ್ಲುಗಳಲ್ಲಿ ಮುಖ್ಯವಾಗಿ
ಬಿಳಿ (ಸೇಡಿ, ರಂಗೋಲಿ ಪುಡಿ ಮಾಡುವ ಕಲ್ಲಿನಂತವು) ಮತ್ತು ಕರಿಕಲ್ಲಿನ (ಕಲ್ಲಿದ್ದಲಚೂರೂ ಇರಬಹುದು) ವೈವಿಧ್ಯವನ್ನು ವಿಶೇಷವಾಗಿ ಪ್ರತ್ಯೇಕಿಸಿ, ಕೆಲವೆಡೆ ಸಣ್ಣ ಪುಡಿ ಮಾಡಿ, ಅಳತೆ ಗುಪ್ಪೆ ಹಾಕಿ, ವಂದರಿಯಾಡಿಸಿ ಸಾಗಿಸಿದ್ದು ಎಲ್ಲಾ ಕಾಣುತ್ತಿತ್ತು. ದಾರಿ ನಿಧಾನಕ್ಕೆ ಗುಡ್ಡದ ಮೈಯಲ್ಲಿ ಏರೇರುತ್ತ, ಬಲದ ಕಣಿವೆಯನ್ನು ಸ್ಪಷ್ಟಗೊಳಿಸುತ್ತಿದ್ದಂತೆ, ಕೆಳಗೊಂದು ತೋಡು, ಒತ್ತಿನಲ್ಲಿ ಎಲ್ಲಿಗೋ ಕುಡಿನೀರು ಸಾಗಿಸುವ ಕೊಳವೆ ಸಾಲೂ ಗಮನಿಸಿದೆವು. ಮಾರ್ಗದರ್ಶಿಗಳು ನಮಗದರ ಸಮೀಪ ದರ್ಶನ
ಮಾಡಿಸುವಂತೆ ಇಳಿಸಿದರು. (ಕೊಳವೆ ಸಾಲಿನ ಮೂಲದಲ್ಲಿ ನಾವು ಕಂಡ ಕೆರೆಗಳಿದ್ದವೋ ಪುಟ್ಟ ಅಣೆಕಟ್ಟೆ ಇತ್ತೋ ತಿಳಿದಿಲ್ಲ. ಅದು ಎಂಟು ಹತ್ತು ಕಿಮೀಯ ಕೆಳ ದಿಕ್ಕಿನ ಯಾವುದೋ ಊರಿನ ಕುಡಿನೀರ ಯೋಜನೆಯ ಭಾಗ. ಅಲ್ಲಿ ಇಂದು ಬಳಕೆಯಲ್ಲಿದ್ದ ಹಳೆಯ ಕಬ್ಬಿಣದ ಕೊಳವೆ ಭೀಕರ ಸೋರು ಗಾಯಗಳನ್ನು ಅನುಭವಿಸುತ್ತಿದೆ. ಪರ್ಯಾಯವಾಗಿ ನೀಲಬಣ್ಣದ ಹೊಸ ಕೊಳವೆಯ ಯೋಜನೆ ರೂಪಿಸಿರಬೇಕು. ಆದರೆ ನಮ್ಮೂರುಗಳಂತೇ ಕಾಮಗಾರಿ ಬಹಳಾ ನಿಧಾನದಲ್ಲೇ ನಡೆದಂತಿದೆ. ಯಾಕೆಂದರೆ, ದಿನದ ನಮ್ಮ
ನಡಿಗೆಯುದ್ದಕ್ಕೆ ಎಲ್ಲೂ ಕೆಲಸಗಾರರು ಅಥವಾ ಸದ್ಯ ಕೆಲಸ ನಡೆದ ಸಾಕ್ಷಿಯೂ ನಮಗೆ ಸಿಗಲೇ ಇಲ್ಲ!!) 

ತೊರೆ ಸುವಿಸ್ತಾರ ಹಾಸುಗಲ್ಲಿನ ಪಾತ್ರೆಯಲ್ಲಿ ಕಲಕಲಿಸಿತ್ತು. ಆ ಬಂಡೆ ಅದುವರೆಗೆ ನಾವು ಚೂರುಗಳಲ್ಲಿ ಚದುರಿದಂತೆ ಕಂಡ ವರ್ಣವೈವಿಧ್ಯವನ್ನು ಸುದೀರ್ಘ ನಾದಲಹರಿಯಂತೆ ತನ್ನ ಮೈಯಲ್ಲಿ ಮೆರೆದಿತ್ತು. ಅದರ ರಚನೆಯ ಕೊರತೆಗಳೋ ಹರಿನೀರೂ ಸೇರಿದಂತೆ ನೂರೆಂಟು ಶಿಲ್ಪಿಗಳು ಸವೆಯಿಸಿದ ಕುಹರ ಕುಸುರಿಗಳೋ ನಮ್ಮನ್ನು ಒಮ್ಮೆಗೆ ದಂಗುಬಡಿಸಿತು. ಸ್ಫಟಿಕ ನಿರ್ಮಲ ನೀರು ಆಳದ ಹೊಂಡ ಮರೆಸಿ, ತಳದ ಕಲ್ಲು
ಕಸವೆಲ್ಲವನ್ನೂ ಮೇಲಂಚಿಗೇ ಎತ್ತಿ ಹಿಡಿದಷ್ಟು ಸ್ಪಷ್ಟವಾಗಿ ತೋರುತ್ತಿತ್ತು. ಹೊಂಡತಳದ ವರ್ಣಛಾಯೆ ಮತ್ತು ಕಸವೆಲ್ಲ ಕಲಾಸಂಗತಿಗಳಾಗಿ, ಬಂಡೆಯ ಚೌಕಟ್ಟು ಮತ್ತು ನೀರಗನ್ನಡಿ ಹಿಡಿದಿಟ್ಟ ಸುಂದರ ಚಿತ್ರಗಳೇ ಆಗಿದ್ದವು. ನಾವದಕ್ಕಿಳಿಯುವುದಿರಲಿ, ಮುಟ್ಟಿದರೂ ಎಲ್ಲಿ ಪ್ರಾಕೃತಿಕ ಮಡಿ ಕೆಡುತ್ತದೋ ದೃಶ್ಯಧ್ಯಾನ ಭಂಗವಾಗುತ್ತದೋ ಎಂದೇ ಅಳುಕಿದೆವು. ಹೆದಹೆದರಿಯೇ ಶೀತಲಜಲ ಸಂಪರ್ಕದ ಸಂತೋಷಕ್ಕೆಂಬಂತೆ ಕೈ ಮುಖ ತೊಳೆದೆವು. ಕನಿಷ್ಠ ನೀರ ತಳದ ಕೆಂಪು ಛಾಯೆಯಾದರೂ ಕೆನೆಗಟ್ಟಿದ ಮಣ್ಣು,
ಕದಡೀತು ಎಂದು ಭಾವಿಸಿದ್ದೆವು. ಇಲ್ಲ, ನೀರು ಬಗ್ಗಡವಾಗಲಿಲ್ಲ. ವರ್ಣಛಾಯೆಗಳು ಕಲಕುವುದಿರಲಿ, ಮೆಟ್ಟಿ ಜಗ್ಗಿದರೂ ಯಾವವೂ ಚಕ್ಕೆ ಮುರಿಯದಷ್ಟು ದೃಢವಾಗಿದ್ದವು! ಇವೆಲ್ಲದರ ಕೊನೆಯಲ್ಲಿ, ಒಂದೆರಡು ಹೊಂಡಗಳಲ್ಲಿ ಯಾರೋ ಕುಡಿದೆಸೆದ ಬಾಟಲಿ, ಪ್ಲ್ಯಾಸ್ಟಿಕ್ ಕಸ ಕಾಣ ಸಿಕ್ಕಿದಾಗ ನಮ್ಮ ‘ನಾಗರಿಕತೆ’ಯನ್ನು ಹಳಿದುಕೊಳ್ಳುವುದಷ್ಟೇ ಉಳಿದಿತ್ತು. ನಾವು ಬಿಟ್ಟ ಊರಿನಲ್ಲೂ ಮುಂದೆ ಹಲವು ದುರ್ಗಮ ಪ್ರವಾಸೀ ಜಾಡುಗಳಲ್ಲೂ ಸ್ಥಳೀಯ ಆಡಳಿತವೋ ಜನರೋ ಅಲ್ಲಲ್ಲಿ ಹರಕು
ಗೋಣಿಯನ್ನಾದರೂ (ಅಲಂಕಾರಿಕ ಪ್ಲ್ಯಾಸ್ಟಿಕ್, ಕಾಂಕ್ವುಡ್ ಮಂಗ, ಪೆಂಗ್ವಿನ್ ಗೊಂಬೆಗಳನ್ನು ನಿಲ್ಲಿಸಿ ಮತ್ತೆ ಮರೆತೇ ಬಿಡುವ ನಮ್ಮೂರಿನ ಸೊಕ್ಕು ಇಲ್ಲಿಲ್ಲ ಬಿಡಿ!) ಎದ್ದು ಕಾಣುವಂತೆ ಕಟ್ಟಿ ‘ನಾವು ಹಸಿದಿದ್ದೇವೆ’ ಎಂದೂ ಬರೆದು ಪರಿಸರ ರಕ್ಷಣೆಯ ಜಾಗೃತಿ, ಸೌಕರ್ಯ ಮಾಡಿದ್ದರು. ನಮ್ಮ ಮಾರ್ಗದರ್ಶಿಗಳೂ ತಮ್ಮಷ್ಟಕ್ಕೇ ಕಂಡ ದೊಡ್ಡ ಕಸಗಳನ್ನು ಹೆಕ್ಕಿ, ಗೋಣಿ ಸೇರಿಸುವುದನ್ನೂ ಕಂಡಿದ್ದೇವೆ. ಚಾರಣ ಮುಂದುವರಿಸಿದೆವು. 

ಮೇಘಾಲಯದ ಈ ವಲಯದ ಗೂಗಲ್ ನಕ್ಷೆ ತೆರೆದರೆ,
ನಿಮಗೆ ಹತ್ತೆಂಟು ತೊರೆಗಳೂ ಅದರ ದುಪ್ಪಟ್ಟು ಹೆಸರಿಸಿದ ಜಲಪಾತಗಳೂ ಕಾಣಿಸುತ್ತವೆ. ನಿಜದಲ್ಲಿ ಎಲ್ಲವನ್ನೂ ಒಂದು ದಿನದ ಚಾರಣದಲ್ಲಿ ನೋಡುವುದು ಅಸಾಧ್ಯವೇ ಸರಿ. ಮಾರ್ಗದರ್ಶಿಗಳು ಆಯ್ದ ಒಂದೆರಡು ಜಲಪಾತಗಳ ತಡಿಗಷ್ಟೇ ನಮ್ಮನ್ನು ಒಯ್ದರು. ಅವು ನಿಸ್ಸಂದೇಹವಾಗಿ ಆನಂದದಾಯಿಗಳೇ ಇದ್ದವು. ನೀರಬೀಳಿನ ಎತ್ತರ, ಮೊತ್ತ, ಅಂಚುಗಟ್ಟಿದ ಹಸಿರಿನ ವಿಪುಲತೆ ಮತ್ತದೇ ಜಲಪಾತ್ರೆಯ ಕುಸುರಿ, ಪಾರದರ್ಶಕತೆ ವಿವರಿಸುತ್ತ ಹೋದಲ್ಲಿ ನನ್ನ ಶಬ್ದಭಂಡಾರದ ದಾರಿದ್ರ್ಯವಷ್ಟೇ ಜಾಹೀರಾದೀತು. ಅಲ್ಲಿನ
ಯಾವುದೇ ಜಲಪಾತದ ಅನನ್ಯತೆ, ವೈಭವ ದೊಡ್ಡದೇ! ನಮ್ಮ ಕಣ್ಣೆಂಬ ಅದ್ಭುತ (ಕ್ಯಾಮರಾ ಎಂದು ಸಣ್ಣ ಮಾಡಬೇಡಿ) ಅವನ್ನು ಗ್ರಹಿಸುವ ಶಕ್ತಿಯೂ ಅಷ್ಟೇ ದೊಡ್ಡದು. ಆದರೆ ಅವನ್ನು ಉಳಿಸಿಕೊಳ್ಳುವಲ್ಲಿ ನಮ್ಮ ಮನೋಭಿತ್ತಿ ಸದಾ ಸೋಲುತ್ತದೆ. ಆ ಕ್ಷಣಕ್ಕೆ "ಇದನ್ನು ಆಜನ್ಮ ಮರೆಯಲಾರೆ" ಎಂದೇ ಹೇಳಿಕೊಂಡರೂ ಹೊಸತರ ಭಾರದಲ್ಲಿ ವಿವರಗಳು ಪುಡಿಯಾಗುವುದು ಇದ್ದದ್ದೇ. ಅಂಥಲ್ಲಿ ಸಹಾಯಕ್ಕೊದಗೀತೆಂದು ಫೋಟೋ, ವಿಡಿಯೋಗಳಿಗೆ ತಿಣುಕಾಡುತ್ತೇವೆ. ಹಾಗೂ ಸಮಗ್ರ ಚಿತ್ರಣ ಸೋತ
ಕೆಲವೆಡೆಗಳಲ್ಲಿ, ಮುಂದೆ ನೆನಪಿಗಿಕ್ಕುವ ಮೀಟುಗೋಲಾಗಿಯಾದರೂ ಉಪಯೋಗವಾದೀತು ಎಂಬ ಮರುಳಿನಲ್ಲಿ (ನನಗ್ಯಾವ ಪರಿಣತಿ ಇಲ್ಲದೆಯೂ) ಅವಸರದ ರೇಖಾಚಿತ್ರಗಳನ್ನೂ ಗೀಚಿಕೊಂಡದ್ದಿದ್ದೆ. ಇದು ನನ್ನ ಖಾಸಾ ಪ್ರಕಟಣೆಯೆಂಬ ಭಂಡತನದಲ್ಲಿ ಒಂದೆರಡನ್ನು ಮಾತ್ರ ಫೋಟೋಗಳ ಜತೆ ಹಾಕುತ್ತಿದ್ದೇನೆ, ನಕ್ಕು ಮರೆತುಬಿಡಿ :-) ) 

ನೀರ ಮೊತ್ತ, ಪಾತ್ರೆಯ ಹರಹು ಹೆಚ್ಚಿದಂತೆ ಅಂಚಿನ ಹಸಿರೂ ದಟ್ಟವಾಗುತ್ತಿತ್ತು. ಅವುಗಳ ಸಾಂಗತ್ಯದಲ್ಲಿ ನಡಿಗೆ ನಿಧಾನವಾಗುವುದನ್ನು ನಿವಾರಿಸಲು ತುಸು ಎತ್ತರದ ದಂಡೆಯಲ್ಲಿ, ಒಣಹುಲ್ಲ ಸಾಮ್ರಾಜ್ಯದಲ್ಲಿ, ಸುಲಭಕ್ಕೆ ಬಹುಮಂದಿ ನಡೆದು ರೂಢಿಸಿದ ಜಾಡನ್ನೇ ಅನುಸರಿಸಿದೆವು. ಈ ಮುಂದುವರಿದ ಹಂತದಲ್ಲಿ, ಕಲ್ಲುಕೊರಕಲುಗಳ ರೂಕ್ಷತೆಯನ್ನು ಜವುಗು, ಹುಲ್ಲಿನ ಹೊದಿಕೆ ಮರೆಮಾಡಿತ್ತು. ಹಾಗೇ ಕೆಳಪಾತ್ರೆಗಳತ್ತ ಸರಿದಂತೆ, ‘ಪ್ರವಾಸೀ ಇಲಾಖೆ’ಯ ಅಭಿವೃದ್ಧಿ ಕಲಾಪಗಳ ತಟವಟವೂ ಹೆಚ್ಚು ಹೆಚ್ಚು
ಸಿಗತೊಡಗಿತು. ಎಲ್ಲೋ ದಿಬ್ಬದ ಮೇಲೆ ಪುಟ್ಟ ನೆರಳ ಕೊಡೆ, ಇನ್ನೆಲ್ಲಿಗೋ ಮೆಟ್ಟಿಲ ಸರಣಿ, ಕೊನೆಗೆ ನಾವು ಬಿಟ್ಟೂರಿನಿಂದ ಸೇರುವೂರಿನತ್ತ (ಡೈಂತ್ಲೇನ್) ಸಾಗಿದ್ದ ಡಾಮರು ದಾರಿಯೂ ಬಂದಾಗ, ನಾವು ಮಾರ್ಗ ಸವೆಸುವವರಾದೆವು. 

ಡೈಂತ್ಲೇನ್ ಮಾರ್ಗದಂಚಿನಲ್ಲಿ ನಾವು ಕಂಡಷ್ಟೂ ಉದ್ದಕ್ಕೆ, ಸುಮಾರು ಇಪ್ಪತ್ತು ಮೀಟರ್ ಅಂತರದಲ್ಲಿ ದೃಢವಾದ ಬೋಳು ಉಕ್ಕಿನ ಕಂಬಗಳನ್ನು ಕಾಂಕ್ರೀಟ್ ಬುಡ ಮಾಡಿ ನಿಲ್ಲಿಸಿದ್ದು ಕಾಣುತ್ತದೆ. ಸಾಮಾನ್ಯ ಜನಸಂಚಾರವಿರಲಿ, ವಿರಳವಾಗಿ ವಾಹನಸಂಚಾರವೂ ಇಲ್ಲವೆನ್ನುವ ಆ
ದಾರಿಯಲ್ಲಿ ಅವು ದಾರಿ ದೀಪಗಳಿಗೆ ಇರಲಾರವು. ವಿದ್ಯುತ್ ತಂತಿ ಎಳೆಯುವುದಿದ್ದರೆ ಪರಸ್ಪರ ಅಂತರ ತೀರಾ ಕಡಿಮೆಯೇ ಸರಿ. ಸೂರ್ಯಫಲಕಗಳೋ ಗಿರಿಗಿಟ್ಲೆಗಳೋ ಮುಡಿಗೇರಿ ವಿದ್ಯುತ್ ತಯಾರಿಯ ಯೋಜನೆ ಇರಬಹುದೋ - ಗೊತ್ತಿಲ್ಲ. ನಾವು ಆ ದಾರಿಯಲ್ಲಿ ಸ್ವಲ್ಪ ಮುಂದುವರಿದದ್ದೇ ಎದ್ದುಕಾಣುವ ಸೇತುವೆಯೊಂದರೊಡನೆ ಜಲಜಾಡಿನ ನಿರ್ಣಾಯಕ ಹಂತ, ಅಂದರೆ ಡೈಂತ್ಲೇನ್ ತಲಪಿದ್ದೆವು. 

ಡೈಂತ್ಲೇನ್ ಸೇತುವೆ ಕಂಡಷ್ಟು ಹಳತೇನಲ್ಲ. ಸಮಸ್ಯೆ - ಸರ್ಕಾರೀ ರಚನೆ ಮತ್ತು ಉಸ್ತುವಾರಿಯ ಉಡಾಫೆ! ಸೇತುವೆ ಕಳೆದದ್ದೇ ಹೊಳೆ ವಿಸ್ತಾರ ಬಂಡೆ ಹಾಸಿನ ಮೇಲೆ ತನ್ನ ಆಧಿಪತ್ಯ ಸ್ಥಾಪಿಸಿದೆ. (ಬಹುಶಃ ಮಳೆಗಾಲದಲ್ಲಿ ತುಂಬಿರುತ್ತದೆ.) ಅದರ ಕೆಳ ಮಿತಿಯಾಚೆ, ಅದಕ್ಕೂ ಅಗಾಧವಾಗಿ, ಅರ್ಧಚಂದ್ರಾಕೃತಿಯಲ್ಲಿ ಮಹಾ ಪ್ರಪಾತ ಬಾಯ್ದೆರೆದಿದೆ. ಅಲ್ಲಿ ವನದೇವಿ ನೇರ ಕೊಳ್ಳದ ಒಂದಷ್ಟು ಕಲ್ಲಗುಂಡುಗಳಷ್ಟೇ ಕಾಣುವಂತೆ ಉಳಿಸಿ, ಇಡೀ ಕಣಿವೆಗೆ ಹಸಿರು ಹೊದೆಸಿ ರೌದ್ರವನ್ನು ಮೋಹಕಗೊಳಿಸಿದ್ದಾಳೆ.
ಪ್ರಪಾತದಂಚಿನ ಉದ್ದಕ್ಕೂ ಸರಕಾರ ಪ್ರವಾಸಿಗಳ ರಕ್ಷಣೆಗೆ ಬಲವಾದ ಕಾಂಕ್ವುಡ್ ಬೇಲಿ ಬಲಿದಿದ್ದಾರೆ. ಇಂದು ನದಿ, ಪುಟ್ಟ ತೊರೆಯಷ್ಟೇ ವಿನಯದಲ್ಲಿ ಆ ಸೀಳಿನ ಸಂದಿನಿಂದ, ಈ ಗುಂಡಿನ ಮರೆಯಿಂದೆಂಬಂತೆ ಒಟ್ಟಾಗಿ, ಒಂದೆಡೆ ಸಣ್ಣದಾಗಿಯೇ ಕೊಳ್ಳ ಹಾರುತ್ತದೆ. ಅಲ್ಲಿ ಪ್ರವಾಸಿಗಳ ಸೌಕರ್ಯಕ್ಕಾಗಿ ನಾಲ್ಕೈದು ದಪ್ಪ ಕಂಬಗಳನ್ನು ಅಡ್ಡ ಹಾಕಿ, ಕಾಲು ಸೇತುವೆಯೂ ಇದೆ. ನೀರು ಕಡಿಮೆಯಿದ್ದರೂ ಒಟ್ಟಾರೆ ನಮ್ಮ ದೃಶ್ಯ ಸೌಂದರ್ಯಕ್ಕೇನೂ ಕುಂದಾಗಲಿಲ್ಲ. ನಮ್ಮ ಒಟ್ಟು ತಂಡ ಬಂಡೆ ಪಾತ್ರೆಯಷ್ಟೂ ವಿಸ್ತಾರಕ್ಕೆ, ಅಂಚುಗಟ್ಟಿದ
ಬೇಲಿಯಷ್ಟೂ ಉದ್ದಕ್ಕೆ ಸಣ್ಣ ದೊಡ್ಡ ಗುಂಪುಗಳಲ್ಲಿ ಹರಡಿಕೊಂಡು, ಸ್ವಂತೀ ಸರ್ಕಸ್ಸು, ಹಾಡು ಹಾಸ್ಯಗಳ ಗದ್ದಲ ನಡೆಸಿತ್ತು. ಮಾರ್ಗದರ್ಶಿಗಳು ಊಟದ ಬಿಡುವನ್ನೇ ಘೋಷಿಸಿದರು. 

ಬೇಲಿ ಸಾಲಿನ ದೂರದ ಮೂಲೆಯಲ್ಲಿ ಕುಳಿತು ನಾವು ಬುತ್ತಿಯೂಟ ಮುಗಿಸಿದೆವು. ಇಲ್ಲಿ, ನಮ್ಮ ಎರಡು ದಿನಗಳ ಅನುಭವದಲ್ಲಿ ಮೊದಲೆನ್ನುವಂತೆ ಒಂದೆರಡು ಚರ್ಮುರಿ ಅಂಗಡಿ, ಡಬ್ಬಿ ಹೋಟೆಲು ಕಾಣಿಸಿದ್ದವು. ಎಷ್ಟೋ ಪ್ರವಾಸೀ ಕೇಂದ್ರಗಳನ್ನು ನೋಡಿದ ಅನುಭವದಲ್ಲಿ, ಯೂಥ್ ಹಾಸ್ಟೆಲ್ಸಿನವರು ಕೊಟ್ಟ ತಿನಿಸು ಮೆಚ್ಚದಿದ್ದರೆ ಅಥವಾ ಸಾಲದಿದ್ದರೆ ಹೋಟೆಲ್ ಅಥವಾ ಗೂಡಂಗಡಿಗಳಲ್ಲಿ ಹಸಿವು ನೀಗಿಯೇವು ಎನ್ನುವ ಸಣ್ಣ ಹಮ್ಮು ನಮ್ಮಲ್ಲಿತ್ತು. ಎರಡು ದಿನಗಳಲ್ಲಿ ಅವೆಲ್ಲ ಸೋತಿದ್ದವು. ಈ ರಾಜ್ಯದಲ್ಲಿ
ಪ್ರವಾಸೋದ್ಯಮ ಇನ್ನೂ ಜನಮನಕ್ಕೆ ಪೂರ್ಣ ಇಳಿದಿಲ್ಲ. ಸುಲಭದ ಪ್ರವಾಸೀ ಕೇಂದ್ರಗಳಲ್ಲೂ ತಿನಿಸು ತೀರ್ಥಗಳ, ಗಿಲೀಟು ಸ್ಮರಣಿಕೆಗಳ ಮಳಿಗೆಗಳು ಇಲ್ಲವೆನ್ನುವಷ್ಟು ಕಡಿಮೆ! ಬಹುಶಃ ಅದರಿಂದಲೇ (ತಿಂದು ಬಿಸುಡಲಾಗದ್ದರಿಂದಲೇ) ಮಾಲಿನ್ಯದ ಮಟ್ಟ ಇನ್ನೂ ಕಣ್ಣಿಗೆ ಕಟ್ಟುವಷ್ಟಿಲ್ಲ ಎನ್ನುವ ಸತ್ಯ ಮರೆಯಬಾರದು. ಧಾರಾಳವಿದ್ದಲ್ಲಿ ದುರ್ಬಳಕೆ ಹೆಚ್ಚೆಂದ ಅತ್ರಿಸೂನಿನಸೂನು! 

ನಾನು ನಾಲಗೆ ಚಪಲಕ್ಕೆ ಅಲ್ಲಿನ ಜೋಪಡಿ ಮಳಿಗೆಯಲ್ಲಿ ಚರ್ಮುರಿಯೊಂದನ್ನು ಖರೀದಿಸಿದೆ. ಮೂಲ ಸಾಮಗ್ರಿ -
ಅಂದರೆ ಪುರಿ, ನೀರುಳ್ಳಿ, ಕೋತಿಮರಿ ಸೊಪ್ಪು, ಉಪ್ಪು, ಕಾರಗಳನ್ನೆಲ್ಲ ನಮ್ಮದರಂತೇ ಹಾಕಿದಳಾ ಮುದ್ದು ಮಗುವಿನ (ಅವಳ ಬೆನ್ನಚೀಲದಲ್ಲಿ ಬೆರಗೇ ಮೂರ್ತಿವೆತ್ತಂತೆ, ಆದರೆ ದಿಟ್ಟವಾಗಿ ಪಿಳಿಪಿಳಿಸಿಕೊಂಡಿತ್ತು) ಸುಂದರ ತಾಯಿ. ಆದರೆ ಎಲ್ಲೋ ನಡುನಡುವೆ ಸಾಸಿವೆ ಎಣ್ಣೆ, ಕರಿಮೆಣಸಿನ ಪುಡಿ, ಮತ್ತೇನೇನೋ ನನಗಪರಿಚಿತವಾದ (ನಗಬೇಡಿ ಎಲ್ಲ ಸಸ್ಯೋತ್ಪನ್ನಗಳೇ ಮತ್ತು ಸಾವಯವಗಳೇ) ಪುಡಿ, ಗೊಜ್ಜು ಹಾಕಿ ಕಪ್ಪು ದುರ್ವಾಸನೆ ಪಿಂಡ ಮಾಡಿಬಿಟ್ಟಳು. ಕೇವಲ ಇಪ್ಪತ್ತು ರೂಪಾಯಿಗೆ ದೊಡ್ಡ ತೊಟ್ಟೆ ತುಂಬಿ ನನ್ನ ಕೈಸೇರಿದ
ಬಣ್ಣಗೇಡಿಯನ್ನು ಕಂಡದ್ದೇ ಅದುವರೆಗೆ ನೀರುಳ್ಳಿ ಪರಿಮಳಕ್ಕೆ ಮೂಗರಳಿಸಿ ಅಂಟಿಕೊಂಡಿದ್ದ ಬಂಧುಗಳೆಲ್ಲ, ಕೈ ಸಣ್ಣ ಮಾಡಿ, "ಛೆ ಛೆ ತುಂಬ ಬೇಡ" ಎಂದು ಉಪಚಾರ ಹೇಳಿ, ಮಾಯವಾದರು. ನಾನು "ವಾತಾಪಿ ಜೀರ್ಣೋದ್ಭವ"ವನ್ನು ತಾರಕ ಮಂತ್ರವಾಗಿಸಿಕೊಂಡು, ಮನದ ಪಿಟೀಲನ್ನು ತಾರದಲ್ಲಿ ಕೊಯ್ಯುತ್ತ "ಅಳುವಾಗ ಯಾರೂ ಇಲ್ಲಾ......" ಎಂದು ಮಹಮ್ಮದ್ ರಫೀಯನ್ನು ಸ್ಮರಿಸಿಕೊಂಡೆ. 

ಅಪರಾಹ್ನ ಡೈಂತ್ಲೆನ್ ಜಲಪಾತದ ತಳ ದರ್ಶನದ ಪುಣ್ಯವನ್ನೂ ಮೈಗೂಡಿಸಿಕೊಂಡೆವು. ಡಾಮರ್ ದಾರಿಯಲ್ಲೇ ಸುಮಾರು ಒಂದು ಕಿಮೀ ನಡೆದು, ಮತ್ತೆ ಕ್ರೆಂಪುರಿ ಗುಹಾಜಾಲಕ್ಕಿಳಿದಂಥದ್ದೇ ಕಚ್ಚಾ ಜಾಡು ಹಿಡಿದೆವು. ಮೊದಲ ಸಣ್ಣ ಸುತ್ತಿನಲ್ಲೇನೋ ಡಾಮರ್ ರಸ್ತೆ ಬಳುಕುತ್ತ ಇಳಿದು ಬಂದು ನಮ್ಮನ್ನು ಅಣಕಿಸಿ ಮತ್ತೆ ಕಾಣದಂತೆ ಯಾವುದೋ ಹಳ್ಳಿಗೋಡಿ ಹೋಯ್ತು. ಮುಂದಿನ ಹತ್ತಿಪ್ಪತ್ತು ಮಿನಿಟಿನ ಕಠಿಣ ಜಾಡಿನಲ್ಲಿ ಇಲಾಖೆಯ ಅಭಿವೃದ್ಧಿಯ ಕೆಲವು ಝಲಕುಗಳು ಮಿಳಿತಗೊಂಡದ್ದು ಸರಕಾರೀ
ಯೋಚನಾಕ್ರಮಕ್ಕೆ ಸರಿಯಾಗಿಯೇ ಇದೆ. ಆದರೆ ನಮಗೆ ಭಾರೀ ತಮಾಷೆಯಾಗಿಯೇ ಕಾಣಿಸಿತು. ಸಣ್ಣ ಉದಾಹರಣೆ: ಆ ಕಠಿಣ ಇಳಿಜಾಡಿನಲ್ಲೂ ಒಂದು ಕವಲು ಜಾಡಿತ್ತು. ಅದು ಭಾರೀ ಬಂಡೆಯೊಂದರ ಅಂಚಿನಲ್ಲಿ ಕುರುಡು ಕೊನೆ ಕಾಣುತ್ತದೆ. ಸಣ್ಣ ಲಾಭವೆಂದರೆ, ಅಲ್ಲಿಂದಲೂ ಜಲಪಾತದ ದೂರ ದರ್ಶನ ಲಭ್ಯ. ಯೋಜಕರು ಆ ಬಂಡೆಗಿಳಿವ ಜಾಡಷ್ಟಕ್ಕೆ ಕಾಂಕ್ರೀಟ್ ಮೆಟ್ಟಲು, ಕಬ್ಬಿಣದ ಕೈತಾಂಗು ಮತ್ತು ಬಂಡೆಯ ಮೇಲೆ ಫೆರ್ರೋ ಕಾಂಕ್ರೀಟಿನ ಬಾಲ್ಕನಿಯನ್ನೇ ಬೆಸೆದಿಟ್ಟಿದ್ದಾರೆ. ನಿಜಜಾಡಿಗೆ ಹೆಚ್ಚೆಂದಲ್ಲಿ
ಒಂದು ಮಳೆಗಾಲಕ್ಕಷ್ಟೇ ಬಾಳ್ತನ ಬರಬಹುದಾದ ಆಣಿ ಬಡಿದ ಬಿದಿರ ಏಣಿ, ದಿಮ್ಮಿ ಹೂತ ಒರಟು ಮೆಟ್ಟಿಲ ಸಾಲು ಮಾತ್ರ. 

ನಮ್ಮ ಎರಡು ದಿನಗಳ ಓಡಾಟದಲ್ಲಿ ಕಾಣದಷ್ಟು ಅನ್ಯ ಪ್ರವಾಸಿಗಳನ್ನು, ಅದರಲ್ಲೂ ಮುಖ್ಯವಾಗಿ ಬಹುತೇಕ ಅಸ್ಸಾಂ ಮೇಘಾಲಯ ವಲಯದವರನ್ನೇ ನಾವಿಲ್ಲಿ ಕಂಡೆವು. ಹಾಗಾಗಿ ಒಂದು ಒರಟು ಏಣಿ ಸರಣಿಯಲ್ಲಿ ಇಳಿಯಲು ಸರದಿ ಕಾದಾಗ, ನರೆಗೂದಲಿನ, ತೊಗಲು ನೇಲುವ, ನಡು ಬಗ್ಗಿದ ಮುದುಕಿಯೊಬ್ಬಳು ಬಿದಿರ ಏಣಿಗೂ ತನ್ನ ಊರೆಗೋಲನ್ನು ದಿಟ್ಟವಾಗಿ ಕುಟ್ಟುತ್ತ ಏರಿಬಂದಾಗ ನಮಗೆ ಆಶ್ಚರ್ಯಕ್ಕಿಂತ ಹೆಚ್ಚು ಆಕೆಯ ಜೀವನೋತ್ಸಾಹಕ್ಕೆ ಸಂತೋಷವೇ ಆಯ್ತು. ಜಲಪಾತದ ನೆತ್ತಿಯಲ್ಲೇ ಕಂಡಂತೆ ನೀರ ಮೊತ್ತ ಕಡಿಮೆಯಿದ್ದುದರಿಂದ ಕಣಿವೆಯ ಶಬ್ದಾನುರಣನ ತಗ್ಗೇ ಇತ್ತು. ಎಂದಿನಂತೆ ಬಂಡೆ ಗಿಡಿದ ಹೊಳೆ ಪಾತ್ರೆ ಮುಟ್ಟಿ, ಬಾಗಿ ನಿಂತ ಮರ ಪೊದರುಗಳ ಮರೆ ಹಾಯುವವರೆಗೆ ನಮ್ಮ ಅಬ್ಬಿದರ್ಶನದ ನಿರೀಕ್ಷೆಯೂ ಸಾಮಾನ್ಯವೇ ಇತ್ತು. ಆದರೆ ಒಮ್ಮೆಗೇ ಜನ ಮರುಳಿನ ಘೋಷ, ಮೂರು ನಾಲ್ಕು ಮಜಲಿನ ಜಲಧಾರೆಯ ವೈಭವ ಎದುರು
ತೆರೆದುಕೊಂಡಾಗ ಮತ್ತೆ ಮಾತು ಬಡವಾಗುವ ಸನ್ನಿವೇಶ.

ಸುವಿಸ್ತಾರ ಅರ್ಧ ಚಂದ್ರಾಕೃತಿಯ ಐವತ್ತು-ನೂರು ಭಾರೀ ಬಳೆಗಳನ್ನು ಮೂರು ನಾಲ್ಕು ಕಂತುಗಳಲ್ಲಿ ಹಿಂದಿಂದೆ ಪೇರಿಸಿಟ್ಟಂತೆ ಹಾಸುಗಲ್ಲಿನ ಹೊಳೆಪಾತ್ರೆ ತೆರೆದುಕೊಂಡಿತು. ಮೂಲ ಹವಳ ದ್ವೀಪದ ನೆನಪು ಹುಟ್ಟಿಸುವಂತೆ, ಬಂಡೆಗಳೆಲ್ಲ ಪೊಳ್ಳುಪೊಳ್ಳಾಗಿದ್ದವು. ಅವು ದಂಡೆಯ ಹಸಿರಿನಿಂದ ಸಂತೈಸಿಕೊಂಡರೂ ಕಪ್ಪು ಬಿಳಿಯಿಂದ ತೊಡಗಿ, ಕಂದು, ಕೆಂಪು, ಹಳದಿ ವರ್ಣಛಾಯೆಗಳಲ್ಲಿ ಬದಲುತ್ತ ನೀರ ಮಡುವಿನಲ್ಲಿ ಜೇನುಗಟ್ಟಿದ ಎರಿಯಂತೆ, ಸ್ಫಟಿಕ ನಿರ್ಮಲ
ನೀರನ್ನು ತೋರುವಲ್ಲಿ ನೀಲ ಮಣಿಯಂತೇ ಮೆರೆದದ್ದು ನಿಜಕ್ಕೂ ಅಪೂರ್ವ. ನಾವು ನೆತ್ತಿಯಿಂದ ಕಂಡ ಡೈಂತ್ಲೆನ್ನಿನ ಅಬ್ಬಿಯ ತಳ ತುಸು ಮೇಲಿದ್ದಿರಬೇಕು, ನಮಗೆ ಅಗೋಚರವಿತ್ತು. ಆದರೆ ಆ ಬೀಳಿನ ರೋಷ ಕಳೆದುಕೊಂಡ ನೀರು, ಇಲ್ಲಿ ಜೇನ ಎರಿಗಳನ್ನು ಸುಮಾರು ಮೂರು ಹಂತದ ಸುವಿಸ್ತಾರ ಹರಹಿನಲ್ಲಿ ಮನಸಾ ಹರಡಿಟ್ಟು, ಎಲ್ಲೆಡೆ ಸುಳಿಯುತ್ತ, ತೊಟ್ಟು, ಧಾರೆ, ಸ್ರೋತವಾಗಿ ಇಳಿವ ಚಂದವೇ ಚಂದ. ನಾನಂತೂ ಎಲ್ಲಾ ಮಗ್ಗುಲುಗಳಿಗೋಡೋಡಿ, ಎರಡು ಹಂತಗಳಿಗೆ ಏರಿಳಿದು ಇನ್ನಿಲ್ಲದಂತೆ ಅನುಭವಿಸಿದೆ.
ಅನಿವಾರ್ಯವಾಗಿ, ಸ್ಥಳ ಸಮಯ ನಮ್ಮದಲ್ಲವೆಂಬ ಅರಿವಿನೊಡನೆ ಆ ಮಜಲೋಟದ ಅಬ್ಬಿಯನ್ನೂ ಅಗಲಬೇಕಾಯ್ತು. 

"ಮೇಲೆ ಮಾರ್ಗದಂಚಿನಲ್ಲಿ ಸಣ್ಣ ವ್ಯಾನ್ ನಿಮ್ಮನ್ನು ಕಾದಿರುತ್ತದೆ. ಬೇಗ ಹೋದವರನ್ನು ಮೊದಲು, ಉಳಿದವರನ್ನು ಎರಡನೇ ಟ್ರಿಪ್ಪಿನಲ್ಲಿ ಅದು ಮುಂದಿನ ಶಿಬಿರತಾಣಕ್ಕೆ ಮುಟ್ಟಿಸುತ್ತದೆ" ಎಂದು ಮಾರ್ಗದರ್ಶಿಗಳು ಸೂಚಿಸಿದ್ದರು. ನಾವು ಚುರುಕಾಗಿಯೇ ಮೇಲೇರಿದ್ದೆವಾದರೂ ವ್ಯಾನ್ ಬಂದಿರಲಿಲ್ಲ. ಆಗ ಅಲ್ಲೇ ಪಕ್ಕದಲ್ಲಿ ಹಾಳು
ಸುರಿದುಕೊಂಡಿದ್ದ ಒಂದೆರಡು ಎಕ್ರೆ ವಠಾರದಲ್ಲಿ, ಏನೋ ಸರಕಾರೀ ಕಾಮಗಾರಿ ನಡೆದದ್ದರ ಕುರುಹಾಗಿ ಮುಕ್ಕಾದ ಕಬ್ಬಿಣ ಬೇಲಿ, ಜಾನುವಾರು ತಡೆಯ ಸೇತುವೆಗಳೆಲ್ಲ ನನ್ನ ಗಮನ ಸೆಳೆಯಿತು. ಒಳಗೊಂದಷ್ಟು ಸುತ್ತಾಡಿ ಬಂದೆ. ಅದೇನೋ ಇತಿಹಾಸ ಸಾರುವ (ಶಾಸನಗಳೇನೂ ಇರಲಿಲ್ಲ) ಕೆಲವು ಒರಟು ಕಲ್ಲ ಕಂಬಗಳು (ವೀರಗಲ್ಲುಗಳೇ?) ಅಲ್ಲಲ್ಲಿ ನಿಂತಿದ್ದವು. ಹಳೆಯ ಒಂದೆರಡು ಕಲ್ಲ ಬಾನಿಗಳನ್ನು ರಕ್ಷಣೆಗೆಂಬಂತೆ ಸಿಮೆಂಟ್ ಟಾಂಕಿ ಕಟ್ಟಿ ಪ್ರತ್ಯೇಕಿಸಿಯೂ ಇಟ್ಟಿದ್ದರು. ಎಲ್ಲಕ್ಕೂ ಮುಖ್ಯವಾಗಿ ಅಲ್ಲಿ ಅಲೆದಾಡುವ
ಆಧುನಿಕ ದೇಹಗಳ ಸೌಕರ್ಯಕ್ಕೆನ್ನುವಂತೆ ‘ಸುಂದರ’ ನಡೆಮಡಿ, (ಸದ್ಯ ಮುಕ್ಕಾಗಿದೆ, ಹುಲ್ಲು ಮುಚ್ಚಿದೆ) ಸಿಮೆಂಟ್ ಸೋಫಾಗಳನ್ನು ಸಜ್ಜುಗೊಳಿಸಿದ್ದರು. ಆದರೆ ಅಂತಿಮವಾಗಿ, ಅನುದಾನದ ಕೊರತೆಯೋ ಸರಕಾರೀ ವಿಧ್ವಂಸರ ಜಾಣ್ಮೆಯೋ ತೀರಾ ಅಗತ್ಯವಾದ ಬೋರ್ಡು, ಬರಹಗಳು ಮಾತ್ರ ಎಲ್ಲೂ ಇರಲಿಲ್ಲ! ಇದರ ಕುರಿತು ನಮ್ಮ ವ್ಯಾನ್ ಬಂದಾಗ ಸ್ಥಳೀಯ ಮಾರ್ಗದರ್ಶಿಗಳನ್ನು ವಿಚಾರಿಸಿದರೂ ಹೊಸ ಬೆಳಕು ಮೂಡಲಿಲ್ಲ. 

ಸಂಜೆಗೆಂಪು ಆರುವ ಮೊದಲು ಅಂದಿನ ಶಿಬಿರತಾಣ -
ಸೊಹ್ರಾ ಅಥವಾ ಚಿರಾಪುಂಜಿಯಲ್ಲಿದ್ದೆವು. ಡಾನ್ ಬಾಸ್ಕೋ ಇಗರ್ಜಿ ಪೋಷಿತ, ಜಾನ್ ಬಾಸ್ಕೋ ಪ್ರೌಢಶಾಲೆಯ ವಿಸ್ತಾರವಾದ ಕೊಠಡಿಗಳು ನಿನ್ನಿನಂತೇ ನೆಲಹಾಸು, ಚಾಪೆ, ಮಲಗುಚೀಲಗಳಿಂದ ಸಜ್ಜಾಗಿದ್ದವು. ಎರಡನೇ ಟ್ರಿಪ್ಪು ಬರುವುವರೆಗೆ ನಮಗೆ ಸ್ವಲ್ಪ ಸುತ್ತಾಡಲು ಸಮಯ ಸಿಕ್ಕಿತು. ಚಿರಾಪುಂಜಿ ಪೇಟೆಯನ್ನು ಸ್ವಲ್ಪ ಸುತ್ತಾಡಿ ನೋಡಿದೆವು. ಚಿರಾಪುಂಜಿ ಭಾರತದ ಅತಿ ಹೆಚ್ಚಿನ ಮಳೆ ಕೇಂದ್ರ ಎಂದೇ ಬಾಲ್ಯದಲ್ಲಿ ನಾವು ಬಾಯಿಪಾಠ ಮಾಡಿದ್ದೆವು. ಆದರೆ ಸದ್ಯ ಆ ಖ್ಯಾತಿ ಪಕ್ಕದ ಹಳ್ಳಿ ಮೌಸಿನ್ರಾಂಗೆ
ವರ್ಗಾವಣೆಗೊಂಡಿದೆಯಂತೆ. ಮತ್ತೆ ಊರ ಹೆಸರು ಚಿರಾಪುಂಜಿಯ ಕುರಿತು ಕಳೆದ ವರ್ಷ ಇದೇ ಪ್ರವಾಸ ಕೈಗೊಂಡಿದ್ದ ಹೇಮಮಾಲ ಅವರ ಕಥನದಲ್ಲಿ ಬರೆಯುತ್ತಾರೆ. "‘ಚಿರಾಪುಂಜಿ’ ಹೆಸರು ಕೊಟ್ಟದ್ದು ಬ್ರಿಟಿಷರು. ನಮ್ಮದು ಸೋಹ್ರಾ" ಎಂದು ಅಸಹನೆಯಲ್ಲೇ ಹೇಳುತ್ತಾರಂತೆ! ಏನೇ ಇರಲಿ, ಒಂದೆಡೆ ಯಾರೋ ಕೆಳ ಕೊಳ್ಳದಿಂದ ಬಕೆಟ್ಟುಗಳಲ್ಲಿ, ರಸ್ತೆಯ ಮೇಲಂಚಿನಲ್ಲಿದ್ದ ಮನೆಗೆ ನಿತ್ಯ ಬಳಕೆಯ ನೀರು ಹೊರುತ್ತಿದ್ದದ್ದು, ಇನ್ನೊಂದೆಡೆ ‘ಕುಡಿ ನೀರ ಟ್ಯಾಂಕರ್’ ಕೂಡಾ ಕಾರ್ಯಾಚರಣೆ ನಡೆಸಿದ್ದದ್ದು, ಚಿತಾಪುಂಜಿ
ಆರೋಗ್ಯ ಸರಿಯಿಲ್ಲ ಎಂದು ತೋರಿಸಿತ್ತು. ಒಂದು ಗಲ್ಲಿಯ ಕಾಂಕ್ರೀಟ್ ಮೆಟ್ಟಿಲ ಸರಣಿಯಲ್ಲಿ ತುಸು ದೂರ ಇಳಿದಿದ್ದೆ. ಅಲ್ಲಿ ಪ್ರಾಕೃತಿಕ ಹಳ್ಳವೊಂದಕ್ಕೆ ಬಿದಿರು ಮುಳ್ಳಿನ ದಟ್ಟ ಮರೆ ಕಟ್ಟಿ ಬೋರ್ಡು ಹಚ್ಚಿದ್ದರು: ‘ಕಸ ಹಾಕಿದವರಿಗೆ ರೂ ಐನೂರು ದಂಡ’. ಸಂಶಯದಲ್ಲೇ ಬೇಲಿಯ ಕಿಂಡಿಯೊಂದರಿಂದ ಇಣುಕಿ ನೋಡಿದೆ - ನನ್ನ ಮೂಗು ಸುಳ್ಳಾಡಲಿಲ್ಲ. ನಮ್ಮ ಜನ ದುರ್ಬುದ್ಧಿಯಲ್ಲಿ ಪ್ರವೀಣರು - ಬೇಲಿ ಎತ್ತರವನ್ನೂ ಹಾರಿಸಿ ಹಳ್ಳವನ್ನು ಹಾಳಮೂಳಗಳ ಕೊಳಚೆಯಾಗಿಸಿದ್ದರು!! ಇಷ್ಟೆಲ್ಲ ಅವ್ಯವಸ್ಥೆಯ ಊರಿನಲ್ಲಿ ನಮ್ಮ ವಾಸ್ತವ್ಯದ ವ್ಯವಸ್ಥೆ
ಪರಿಶೀಲಿಸಿಕೊಳ್ಳುವ ತುರ್ತು ನನಗೆ ಬಂತು. 

ಭಾರೀ ಇಗರ್ಜಿ, ವಿಸ್ತಾರ ವಠಾರ, ಹಳೆಗಾಲದ ದೃಢ ರಚನೆಗಳು ಎಲ್ಲಾ ಸರಿ. ಆದರೆ ಅದು ವಸತಿ-ಶಾಲೆ ಅಲ್ಲದ್ದಕ್ಕೋ ಏನೋ ನನಗೆ ತೀರಾ ಅಪ್ತವಾದ ಕಕ್ಕೂಸ್ ಸಮಸ್ಯೆ ಕಠಿಣವಾಗಿಯೇ ಇತ್ತು. ಮಹಿಳೆಯರಿಗೆ ಲಗತ್ತಿಸಿದ ಕೋಣೆಯಲ್ಲೇ ಎರಡು ಕಕ್ಕೂಸಿತ್ತಂತೆ, ಚಿಲಕ ಮಾತ್ರ ನಾಸ್ತಿ. ನಾವು ಅಂಗಳಕ್ಕಿಳಿದು, ವಠಾರದ ಕೊನೆಗೆ ನಡೆಯಬೇಕು. ಮತ್ತಲ್ಲಿ ಹಿತ್ತಿಲ ಕೊಳಚೆ ಕಣಿವೆಗಿಳಿವ ಸಾಲು ಮೆಟ್ಟಿಲುಗಳಲ್ಲಿ, ಅಡುಗೆಮನೆಯ ಹಂತವನ್ನೂ ಕಳೆದಿಳಿದ ಪಾತಾಳದಲ್ಲಿ,
ಎರಡು ಕಕ್ಕೂಸ್ ಮತ್ತು ಒಂದು ಬಚ್ಚಲು ಇದ್ದವು. ಅಲ್ಲಿ ದೀಪ ಸಂಪರ್ಕ, ಬಿಸಿ ನೀರ ವ್ಯವಸ್ಥೆ ಇರಲೇ ಇಲ್ಲ. ನಾನು ಮೂರನೇ ದಿನಕ್ಕೂ ಸ್ನಾನಕ್ಕೆ ರಜಾಘೋಷಣೆ ಮಾಡಿಬಿಟ್ಟೆ. ಉಳಿದಂತೆ ಅನಿವಾರ್ಯಂ - ಅನುಭೋಕ್ತಂ :-( (ಗಣಪತಿ ಭಟ್ ದಂಪತಿ ಶಿಲ್ಲಾಂಗಿನಲ್ಲೂ ಇಲ್ಲೂ ಸ್ವಂತ ವ್ಯವಸ್ಥೆಯಲ್ಲಿ ಯಾವುದೋ ಹೋಂ ಸ್ಟೇ ಸೇರಿಕೊಂಡು ಬಚಾವಾದರು!) ಉಳಿದಂತೆ - ಅಂದರೆ ಚಾ, ಊಟ, ಮರು ಬೆಳಗ್ಗಿನ ತಿಂಡಿ, ಬುತ್ತಿಗಳೆಲ್ಲ ಚೆನ್ನಾಗಿಯೇ ಇದ್ದವು. ಅವೆಲ್ಲವನ್ನೂ ಮೀರುವಂತೆ ಮರುದಿನದ ಕಲಾಪ ಪಟ್ಟಿಯೂ ಇತ್ತು. 

(ಮುಂದುವರಿಯಲಿದೆ)

6 comments:

 1. ಪದ್ಮ ಕುಮಾರಿ FBಯಲ್ಲಿ ಬರೆಯುತ್ತಾರೆ:

  ಇವತ್ತು ಇನ್ನೂ ಒಮ್ಮೆ ಓದಿ,ಪಟಗಳನ್ನು ನೋಡಿ ಕಣ್ತುಂಬಿಕೊಂಡೆ.ಎರಡು ದಿನಗಳಿಂದ ಆಸಿಡಿಟಿ ಜೋರು(ಹೊಟ್ಟೆ ಕಿಚ್ಚಿನ ಕಾರಣ). ಕಣ್ಣು ತಂಪು ತಂಪು.

  1993ರಲ್ಲಿ ಉತ್ತರ ಭಾರತ ಪ್ರವಾಸದಲ್ಲಿ, ಊಟ ತಿಂಡಿ ಯದೇ ಸಮಸ್ಯೆ ಆಗಿತ್ತು ನಮ್ಮಿಬ್ಬರಿಗೆ. ನಾವು ಯೋಜಿಸಿಕೊಂಡಿದ್ದ ಪ್ರವಾಸ, ಸಿಕ್ಕ ಬಸ್ಸ್ ಹತ್ತೋದು, ಸುತ್ತೋದು, ಅನುಕೂಲವಾದ ಸ್ಥಳದಲ್ಲಿ ತಂಗೋದು ಆಗಿತ್ತು. ಇಲ್ಲಿಂದ ಡೆಲ್ಲಿಗಷ್ಟೇ ರೇಲಲ್ಲಿ ರಿಜರ್ವೇಶನ್. ಸಾಸಿವೆ ಎಣ್ಣೆಯಲ್ಲಿ ಮಾಡಿದ್ದ ಖಾದ್ಯಗಳು ವಾಕರಿಕೆ ತರಿಸ್ತಾ ಇತ್ತು. ಜೋಷಿಮಠದ ಹಾದಿಯಲ್ಲಿ ಲ್ಯಾಂಡ್ ಸ್ಲೈಡ್ ಆಗಿ ರಸ್ತೆ ಬಂದ್ ಆಗಿದ್ದರಿಂದ ಅಂದು ಅಲ್ಲೇ ಉಳಿಯಲು ನಿರ್ಧರಿಸಿದೆವು. ರಸ್ತೆ ಬದಿಯಲ್ಲಿ ಏನೇನೋ ತಯಾರಿಸುತ್ತಿದ್ದ ಒಂದು ಅಂಗಡಿ, ಸಸ್ಯೋತ್ಪನ್ನವೇ, ನೋಡ್ತಾ ನಿಂತೆವು. ಅವನ ಕೆಲ್ಸ ಮುಗಿದ ಮೇಲೆ ನಾವು ಹೇಳಿದ ಮಸಾಲೆಗಳನ್ನಷ್ಟೇ ಹಾಕಿ (ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ, ಕೊತ್ತಂಬರಿ, ಉಪ್ಪು) ಟೊಮೆಟೊ ಪಲ್ಯ ಮಾಡಿಸಿಕೊಂಡೆವು, ರೀಫೈನ್ಡ್ ಎಣ್ಣೆ ಉಪಯೋಗಿಸಿ. ಅದಕ್ಕೆ ರೋಟಿ, ಗಟ್ಟಿ ಮೊಸರು - ಸ್ವರ್ಗ ಸಮಾನವಾಗಿತ್ತು. ನಂತರದ ದಿನಗಳಲ್ಲಿ ನಮ್ಮದು ಇದೇ ಮೆನು ಆಯ್ತು. ಹೆಚ್ಚೆಂದರೆ ಒಮ್ಮೊಮ್ಮೆ ದಾಲ್ ಜೊತೆಗೆ. ನೀವೂ ಚುರುಮುರಿಗೆ ಬರೀ ಈರುಳ್ಳಿ, ಟೊಮೆಟೊ, ಕೊತ್ತಂಬರಿ ಅಷ್ಟನ್ನೇ ಹಾಕಿಸಿಕೊಳ್ಳಬೇಕಿತ್ತು. ಅಪರೂಪಕ್ಕೆ, ದೂರದ ಊರಿಂದ ಬಂದಿದ್ದಾರೆ ರುಚಿ ರುಚಿಯಾಗಿ ಮಾಡಿಕೊಡೋಣವೆಂದು ಪಾಪ ಆ ಹೆಂಗಸು ಎಷ್ಟು ಶ್ರಮ ತೆಗೆದುಕೊಂಡಿಲ್ಲ.

  ಕಲ್ಲು ಸಿಮೆಂಟ್ ನ ಹಾದಿಯಾದರೂ ಸ್ವರ್ಗ ಸಮಾನ ನೋಟಗಳು ನಿಮಗೆ ದಕ್ಕಿತಲ್ಲಾ? ಗುಹೆಗಳ ಹೊರತಾಗಿ ಮಳೆಗಾಲದಲ್ಲಿ ಒಮ್ಮೆ ಈ ಸ್ಥಳಗಳಿಗೆ ಹೋಗಿ ಪಟ ಹಾಕಿ.

  ಬಿದಿರಿನ ಏಣಿ ಹತ್ತಿದ ಆ ಅಜ್ಜಿಯ ಜೀವನೋತ್ಸಾಹ ನನಗೂ ಖುಷಿ ನೀಡಿತು.

  ಅಂದ ಹಾಗೆ ನಿಮ್ಮ ಸ್ನಾತಕೋತ್ತರ ಪದವಿ ಆಂಗ್ಲ ಭಾಷೆಯ ದೋ, ಕನ್ನಡದ್ದೋ ಅಂತ ಸಂದೇಹ ಆಯಿತು. ನೀವು ಬಳಸುವ ಕನ್ನಡ ಪದಗಳು ಓದಲು ಮುದ ನೀಡುತ್ತದೆ. ಧನ್ಯವಾದ ಎಲ್ಲದಕ್ಕೂ, ಚೆಂದದ ಪಟ, ವಿವರಣೆ ಇತ್ಯಾದಿ, ಇತ್ಯಾದಿಗೆ

  ReplyDelete
 2. ೧೯೮೦ರ ದಶಕದ ನಮ್ಮ ಮೋಟಾರ್ ಸೈಕಲ್ಲೇರಿದ ಎರಡೂ ಭಾರತ ಸುತ್ತಾಟಗಳಲ್ಲಿ (ಮೊದಲನೇದು ನಡುಭಾರತಕ್ಕಾಗಿ ಚತುರ್ಧಾಮ, ಎರಡನೇದು ಪೂರ್ವ ಕರಾವಳಿ ಹೆಚ್ಚು ನೆಚ್ಚಿದಂತೆ ಡಾರ್ಜಿಲಿಂಗ್) ಪ್ರಧಾನ ಪೋಷಕರು - ಎಲ್ಲೆಂದರಲ್ಲಿ ಸಿಗುತ್ತಿದ್ದ ಧಾಬಾಗಳೇ. ಆದರೆ ನಾವು ಸಸ್ಯಾಹಾರ ಕಡ್ಡಾಯ, ಉಳಿದಂತೆ ಆಗೀಗ "ಮಿರ್ಚ್ ಕಮ್, ತೇಲ್ ಕಮ್" ಎಂದಷ್ಟೆ ಸೂಚನೆ ಕೊಟ್ಟು ಧಾರಾಳ ಸುಧಾರಿಸಿಕೊಂಡೆವು. ನಮ್ಮ ಬಹುತೇಕ ಜತೆಗಾರರು ಮಾತ್ರ (ಮೊದಲು ಇನ್ನೆರಡು ಬೈಕುಗಳಲ್ಲಿ ನಾಲ್ಕು ಯುವಕರು, ಇನ್ನೊಮ್ಮೆ ಒಂದು ಬೈಕಿನಲ್ಲಿ ಎರಡು ಯುವಕರು) ಕಷ್ಟದಲ್ಲೇ ನಿಭಾಯಿಸಿದ್ದರು! ಚಳಿಗಾಲದ ಪ್ರಭಾವ ಉಳಿಸಿಕೊಂಡ ಇಂದು ಅಲ್ಲಿ ನಾಲ್ಕು ಡಿಗ್ರಿ ಇದ್ದರೂ ಮಳೆಗಾಲದಲ್ಲಿ ಚಂಡಿಯಾಗುವ ಕಷ್ಟವಿದ್ದರೂ ತಾಪಮಾನ ೧೫ ಡಿಗ್ರಿಯ ಆಚೀಚೆ ಇರುತ್ತದಂತೆ. ನಾವಿರಲಿ, ನೀವ್ಯಾಕೆ ಪ್ರಯತ್ನಿಸಬಾರದು :-)

  ReplyDelete
 3. ಪದ್ಮ ಕುಮಾರಿ ಮತ್ತೆ FBಯಲ್ಲಿ ಬರೆಯುತ್ತಾರೆ:
  ನನಗೆ ಹೋಗಲು ತುಂಬಾ ಆಸೆ ಇದೆ. ಆರೋಗ್ಯ ಕೈ ಕೊಟ್ಟರೆ ಅಂತ ಅಧೈರ್ಯ. ಈಶಾನ್ಯ ಭಾರತ ಪ್ರವಾಸ ನನ್ನ ಬಹುದಿನಗಳ ಕನಸು. ಹಾಗಾಗಿ ನಿಮ್ಮ ಲೇಖನಗಳನ್ನು ಮನಸಾರೆ ಓದಿ ಆನಂದಿಸುತ್ತಿರುವೆ. ಫೋಟೋ,ಬರಹ ಎಲ್ಲಾ ನಾನು ಅಲ್ಲೇ ಓಡಾಡುತ್ತಿರುವ ಅನುಭವ ನೀಡುತ್ತಿದೆ. ನಂತರ ಮತ್ತೊಂದು ಕಂತು ಬರುವವರೆಗೂ ಅದರದೇ ಗುಂಗು.

  ಮತ್ತೆ ಅರವತ್ತೆರಡರ ಈ ವಯಸ್ಸಿನಲ್ಲಿ ಅಲ್ಲಿನ ಚಳಿಯನ್ನು ತಾಳಬಲ್ಲೆನೆನ್ನುವ ಧೈರ್ಯ ಇಲ್ಲ.ನೋಡೋಣ ಅನುಕೂಲವಾದರೆ ಸುಮ್ಮನೆ ಒಂದು ಪ್ರವಾಸ ಹೋಗಿ ಬಂದೇನು.

  ReplyDelete
 4. ರಂಜನ್ ಶ್ಯಾಮ್ ಮಾಯ್ಲಂಕೋಡಿ FBಯಲ್ಲಿ ಬರೆಯುತ್ತಾನೆ:
  ತುಂಬಾ ಚೆನ್ನಾಗಿ ಬಂದಿದೆ. ಓದಿ ಖುಶಿ ಆಯಿತು.

  ನಾವು ಮೇಘಾಲಯಕ್ಕೆ ಎರಡು ವರ್ಷಗಳ ಮೊದಲು ಹೋಗಿದ್ದೆವು. ನೊಂಗ್ರಿಯಟ್ ಕಾಮನಬಿಲ್ಲು ಜಲಪಾತ ಚಾರಣ ಮಾಡಿದ ಆ ಸಾಹಸ ನಿಮ್ಮ ಸಾಹಸಗಳ ಎದುರು ಬೂರ್ನಾಸ್ ಅಂತ ಅನಿಸಿತು. ನಿಮ್ಮ ಕಕ್ಕುಸು ಸ್ನಾನ ಕಥೆ ಓದಿ ನಗುವೊ ನಗು.

  ಭೂತ್ ಝಲೋಕ ಉಪ್ಪಿನಕಾಯಿ ತಂದು, ಊಟ ಮಾಡುವಾಗ ಅದನ್ನು ಹಿಚುಕಿ, ರಸ ನನ್ನ ಕಣ್ಣಿಗೆ ರಟ್ಟಿ ಅಪಘಾತವಾದ ಘಟನೆ ನೆನಪಾಗುತ್ತಿದೆ.

  ಸೊಹ್ರಾ ದಲ್ಲಿ ಒಬ್ಬಳು ನಾವು ಚೀರಾಪುಂಜಿ ಹೇಳಿದಕ್ಕೆ ಗದರಿಸಿದಳು. ಚೀರಪುಂಜೀ ಅಸ್ಸಾಮಿಗಳು ಇಟ್ಟ ಹೆಸರಂತೆ. ಹೀಗೆ ಹೊರಗಿನವರು - ನಮ್ಮವರು ಎಂಬ ಭಾವನೆ ಹೊಸಬರಿಗೆ ಮಾತ್ರ ಕಾಣಬಹುದೋ ಏನೋ.

  ReplyDelete
 5. No other reaction to your second episode: JEALOUSY PART 2!!!

  Devu Hanehalli

  ReplyDelete