27 November 2018

ಬಂಡಾಜೆ ಅಬ್ಬಿಯಲ್ಲಿ ಗಂಗಾಧರರು!

(ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ ಭಾಗ ೨)


ದುರ್ಗಕ್ಕೆ ನಾವು ಹತ್ತಿದ ಸಾಹಸವನ್ನು ರೋಮಾಂಚಕ ಕಥನ ಮಾಡಿ, ಅದೇ ಡಿಸೆಂಬರಿನಲ್ಲಿ ನಡೆದ ಪರ್ವತಾರೋಹಣ ಸಪ್ತಾಹದಲ್ಲಿ ಗೆಳೆಯ ಸಮೀರರಾವ್ ಪ್ರಸರಿಸಿದ್ದಾಯ್ತು. ನನಗೆ ಮಾತ್ರ ಬಂಡಾಜೆ ಅಬ್ಬಿ ನೋಡಲಿಲ್ಲ ಎನ್ನುವ ಕೊರಗು ಕಾಡುತ್ತಲೇ ಇತ್ತು. ಮುಂದೊಂದು ದಿನ ಅದಕ್ಕೂ ದಾರಿಯನ್ನು ಹೇಳಿದವರು ‘ಮೈದಾನ ಶಿಖರ’ದ ಕತೆ ಹೇಳಿದ ಬಂದಾರು ಶ್ರೀಪತಿರಾಯರೇ! "ಉಜಿರೆ ಕಳೆದ ಮೇಲೆ ಸಿಗುವ ಎಡಗವಲು, ಕಡಿರುದ್ಯಾವರ - ಕಿಲ್ಲೂರು ದಾರಿ ಅನುಸರಿಸಿ. ಮೂರು ನಾಲ್ಕು ಕಿಮೀಯೊಳಗೇ ಬಲಗವಲಿನಲ್ಲಿ ಸಿಗುವ ವಳಂಬ್ರದ ಎಳ್ಯಣ್ಣ ಗೌಡರನ್ನು ಹಿಡಿಯಿರಿ." ನೆನಪಿರಲಿ, ಅದು ಚರವಾಣಿಯ ಕಾಲವಲ್ಲ. ವಳಂಬ್ರ ಮನೆಗೆ ಸ್ಥಿರವಾಣಿಯೇನೋ ಇದ್ದಿರಬೇಕು. ಆದರೆ ಟ್ರಂಕ್ ಕಾಲ್ ಹಾಕಿ ಗಂಟೆಗಟ್ಟಳೆ ಕಾದರೂ ಸಂಪರ್ಕ ಸಾಧ್ಯವಾಗದ ಕಗ್ಗಾಡಮೂಲೆ; ಬಲ್ಲಾಳರಾಯನ ದುರ್ಗದ ನೇರ ತಪ್ಪಲು, ಬಂಡಾಜೆ ಅಬ್ಬಿಯ ಕಣಿವೆ.
ಕಾರ್ಡು ಬರೆದು ಹಾಕಿದ್ದೆ. ಪ್ರತಿಸ್ಪಂದನೆ ಕಾಣದಾಗ, ಸಹಾಯಕ್ಕೊದಗಿದವರು ಶಂಪಾ ದೈತೋಟ. (ಪರ್ವತಾರೋಹಣ ಸಪ್ತಾಹದ ಸಮಾರೋಪ ಸಭೆಯ ಮುಖ್ಯ ಅತಿಥಿ, ನೋಡಿ: ಯಶಸ್ಸಿನ ಉತ್ತುಂಗದಲ್ಲಿ – ಪರ್ವತಾರೋಹಣ ಸಪ್ತಾಹ) ಶಂಪಾ ಆ ಕಾಲದಲ್ಲಿ ಕಡಿರುದ್ಯಾವರದ ಸಮೀಪದಲ್ಲಿ (ಮುಂಡಾಜೆ) ಕೃಷಿಭೂಮಿಯಲ್ಲಿದ್ದುಕೊಂಡು ಪರಿಸರ ಜಾಗೃತಿಯಲ್ಲಿ ಸಾಕಷ್ಟು ಹೆಸರು ಗಳಿಸಿದ್ದರು. ಅವರು ಎಳ್ಯಣ್ಣ ಗೌಡರ ಸಂಪರ್ಕ ಮಾಡಿ, ನನಗೆ ಅದೊಂದು (೨೫-೪-೮೨) ಬೆಳಿಗ್ಗೆ, ವಳಂಬ್ರಕ್ಕೆ ಮಿತ್ರರನ್ನು ಜತೆ ಮಾಡಿಕೊಂಡು ಬರಲು ಸೂಚಿಸಿದರು. ನನಗೆ ಸಿಕ್ಕ ಏಕೈಕ ಸದಸ್ಯ - ಆಗಿನ್ನೂ ವೈದ್ಯವಿದ್ಯಾರ್ಥಿ, ಇಂದು ಹಿರಿಯ ಮೂತ್ರಾಂಗ ಚಿಕಿತ್ಸಕ ಅಶೋಕ ಪಂಡಿತ್. ನಾವು ಬೈಕೇರಿ ಮುಂಡಾಜೆ, ವಳಂಬ್ರ ಸೇರಿದೆವು. ಅಲ್ಲಿ ಸ್ವತಃ ಶಂಪಾ, ಗೌಡರು ಕೊಟ್ಟ ಮಾರ್ಗದರ್ಶಿಯೊಡನೆ ಕಾದಿದ್ದರು. 

ವಳಂಬ್ರ ತೋಟ ಬಲ್ಲಾಳ ರಾಯನ ದುರ್ಗದ ದಕ್ಷಿಣ ತಪ್ಪಲಿನ ಪ್ರಥಮ ತೋಟ, ನಾಗರಿಕ ವಸತಿ ಎಂದರೂ ತಪ್ಪಾಗದು. (ಇಂದು ಗೂಗಲ್ ನಕ್ಷೆ ನೋಡುವಾಗ ಪರಿಸ್ಥಿತಿ ಬದಲಾದಂತೆ ಕಾಣಿಸಿತು!) ಸಹಜವಾಗಿ ನಮಗೆ ತೋಟ ಕಳೆದದ್ದೇ ಕಡಿದಾದ ಏರೂ, ದಟ್ಟ ಕಾಡೂ ಸಿಕ್ಕಿತು. ವಿರಳ ಚಾರಣಿಗರ ಮತ್ತು ವನೋತ್ಪತ್ತಿಗಳ ಸಂಗ್ರಾಹಕರ ದಟ್ಟ ಸವಕಲು ಜಾಡು ಅನುಸರಿಸಿದೆವು. ಬೇಸಗೆಯ ಉಗ್ರ ದಿನಗಳು, ಸಾಲದ್ದಕ್ಕೆ ನೀರಿನ ಸಾಮೀಪ್ಯವಿಲ್ಲದ ಬೆಟ್ಟದ ಉಬ್ಬಿದ ಮೈ. ತರಗೆಲೆ, ಹುಡಿಮಣ್ಣಿನಲ್ಲಿ ಆಗೀಗ ತುಸು ಜಾರುತ್ತ ನಡೆದೆವು. ಮಾರ್ಗದರ್ಶಿ ಚುರುಕಾಗಿಯೇ ಇದ್ದ. ಮತ್ತೆ, ನಾವು - ಅಶೋಕದ್ವಯರು, ಕರಾಟೆ ಸಂಗಾತಿಗಳು, ತರುಣರು, ಬೆವರು ಸಿಡಿದರೂ ಏದುಸಿರ ನಗಣ್ಯ ಮಾಡಿ ಹಿಂಬಾಲಿಸುವ ಉಮೇದಿಗಳೇ. ಆದರೆ ಮಾರ್ಗದರ್ಶಿಯ ಬೆನ್ನಿಗೇ ಇದ್ದ ಶಂಪಾ - ಲಯನ್ ಅಧ್ಯಕ್ಷ, ಲೇಖಕ, ಕೃಷಿಕ ಮತ್ತೆ ದಕ ಜಿಲ್ಲಾ ಪರಿಸರ ಸಂರಕ್ಷಣಾ ಸಮಿತಿಯ ಸಕ್ರಿಯ ಕಾರ್ಯಕರ್ತ (ಅಧ್ಯಕ್ಷರೇ ಇದ್ದಿರಬೇಕು. ಗುರುವಾಯನಕೆರೆ ನಾಗರಿಕ ಸೇವಾ ಸಮಿತಿಯ ಸೋಮನಾಥ ನಾಯಕ್ ರಂಜನ್ ರಾವ್ ಎರ್ಡೂರು ಕಾರ್ಯದರ್ಶಿ, ಸಹಕಾರ್ಯದರ್ಶಿ ಎಂದೆಲ್ಲ ನನ್ನ ನೆನಪು.) ಎಂದೆಲ್ಲಾ ಬಿರುದಾಂಕಿತರಾಗಿದ್ದರೂ ಪ್ರಾಯದ ಹಿರಿತನದಿಂದ (ನನ್ನಿಂದ ಕನಿಷ್ಠ ೨೨ ವರ್ಷ ದೊಡ್ಡವರು) ಬಿರುಸಿನ ನಡಿಗೆಗೆ ಒಡ್ದಿಕೊಂಡಂತಿರಲಿಲ್ಲ. ಮಾರ್ಗದರ್ಶಿಯೊಡನೆ ತುಳುವಿನಲ್ಲೂ ನಮ್ಮೊಡನೆ ಕನ್ನಡದಲ್ಲೂ ಸುತ್ತಣ ಮರಗಿಡಬಳ್ಳಿಗಳ ಕುರಿತ ತಿಳುವಳಿಕೆಗಳ ವಿನಿಮಯ ಮಾಡಿಕೊಳ್ಳುವ ನೆಪದಲ್ಲಿ, ನಿಂತು ನಿಂತು ಸಾವಧಾನವಾಗಿ ನಡೆದಿದ್ದರು. 

ಉತ್ತರ-ಪೂರ್ವವಾಗಿ ಬೆಟ್ಟದ ಓರೆಯನ್ನು ಅನುಸರಿಸಿದಂತೆ ಸುಮಾರು ಒಂದು ಗಂಟೆ ಏರಿದ ಮೇಲೆ ನೇರ ಬಂಡಾಜೆ ಕಣಿವೆ ಸೇರಿದ್ದೆವು. ಅಲ್ಲಿ ಗಾಳಿಗೆ ಶೀತ ಕೊಟ್ಟು, ಸಣ್ಣಪುಟ್ಟ ಹಸಿರಿಗೂ ನೆಲೆ ಕೊಟ್ಟು, ವಿಸ್ತಾರ ಪಾತ್ರೆಯ ಸಣ್ಣ ಓಣಿಯಲ್ಲಷ್ಟೇ ಬಂಡೆಗಳ ರಾಶಿಯ ಸಂದುಗೊಂದಿನಲ್ಲೆಂಬಂತೆ ಕಲಕಲಿಸಿ ಹರಿದಿತ್ತು ಬಂಡಾಜೆ ಝರಿ. ಬರಗೇಡಿಗಳಂತೆ ಎಲ್ಲ ಮೊದಲು ಕವುಚಿಬಿದ್ದು, ಹೊಟ್ಟೆ ತುಂಬ ನೀರು ಕುಡಿದುಕೊಂಡೆವು. ಅಷ್ಟರಲ್ಲಿ "ವಲಯ ಮಿತ್ತ ಬಂಡಾಜೆ. ನಿಂತ ನೆಲ ನಾಗಕಂಡ" ಎಂದ ಮಾರ್ಗದರ್ಶಿ. ಮೊದಲು ಜಲಪಾತದ ತಲೆಗೂ ಅನಂತರ ದುರ್ಗಕ್ಕೂ ಹೋಗುವವರು ಅನುಸರಿಸುವ ಸವಕಲು ಜಾಡು ತೊರೆಯನ್ನು ಅಡ್ಡ ದಾಟಿ, ಅತ್ತಣ ಗುಡ್ಡೆಯ ಓರೆಯನ್ನು ಅನುಸರಿಸಿತ್ತು. ಆದರೆ ನಮ್ಮ ಲಕ್ಷ್ಯವಾದರೂ ಝರಿಯನ್ನೇ ಅನುಸರಿಸಿ, ಜಲಪಾತದ ತಳ ಕಾಣುವುದಾಗಿತ್ತು. ಇಲ್ಲಿ ನಿಶ್ಚಿತ ಜಾಡಿಲ್ಲ, ತೀರಾ ವಿರಳರು ಬಯಸುವ ದಿಕ್ಕಿನಲ್ಲಿ ಕಷ್ಟಸಾಧನೆಯೊಂದೇ ದಾರಿ. ಅತ್ತ ಹೊರಡುವ ಮುನ್ನ ಸ್ಥಳನಾಮದ ಕುರಿತು ಮಾರ್ಗದರ್ಶಿಯಲ್ಲಿ ವಿವರಣೆ ಬಯಸಿದ್ದೆವು.

ಮಾರ್ಗದರ್ಶಿ ಸ್ವಲ್ಪ ಕೆಳದಂಡೆಯಲ್ಲಿ, ಒಂದೆಡೆ ಸುಮಾರು ಆಯತಾಕಾರದಲ್ಲಿ ಹಲವು ನಾಗಶಿಲ್ಪಗಳು ನಿಂತಿರುವುದನ್ನು ಸೊಪ್ಪು, ಸೌದೆ ದೂರ ಮಾಡಿ ತೋರಿಸಿದ. ಸ್ಥಳನಾಮ - ನಾಗಕಂಡ (=ನಾಗನ ಗದ್ದೆ, ತುಳು) > ನಾಗಂಡ ಅನ್ವರ್ಥಕವಾಗಿತ್ತು. ಮಳೆಗಾಲಗಳಲ್ಲಿ ಮಾತ್ರ ಅಭಿಷೇಕ, ಉಳಿದಂತೆ ಸಾರ್ವಕಾಲಿಕವಾಗಿ ಮರ ಬಳ್ಳಿಗಳ, ಹಕ್ಕಿ ಪ್ರಾಣಿಗಳ ಅರ್ಚನೆ ಮಾತ್ರ ದಕ್ಕಿಸಿಕೊಂಡು ಯಾವುದೋ ಕಾಲದ ಕತೆಯನ್ನು ಮೌನದಲ್ಲೇ ಹುದುಗಿಸಿಟ್ಟುಕೊಂಡಿದ್ದವು. ನೂರಾರು ಅಡಿಗಳೆತ್ತರಕ್ಕೆ, ಆರೇಳು ಜನಗಳ ತಬ್ಬಿಗೆ ನಿಲುಕದ ಬೇರಗಟ್ಟೆಗಳನ್ನು ಅರಳಿಸಿ ನಿಂತ ವಲಯದಲ್ಲೇ ಸುಮಾರು ಒಂದಾಳೆಳೆತ್ತರದ ಶಿಲಾ ನಾಗ ನಾಗಿಣಿಯರು, ನಾಗಬ್ರಹ್ಮರು ಮಾತ್ರವಲ್ಲ, ನಾದಬ್ರಹ್ಮರೂ ಒಟ್ಟಾದಂತಿತ್ತು. ಮೇಲ್ನೋಟಕ್ಕೆ ಕಾಣುವಂತೇ ಹತ್ತಿಪ್ಪತ್ತು, ಇನ್ನು ಭೂಗತವಾದವು ಎಷ್ಟೋ! ಕಾಣುತ್ತಿದ್ದಂತೆ ಒಂದೊಂದೂ ಸುಮಾರು ಐದಾರು ಅಡಿ ಉದ್ದ, ಎರಡಡಿ ಅಗಲದ ದಪ್ಪನಾದ ಶಿಲಾಫಲಕಗಳು. ಒಂದು ಬದಿಯಲ್ಲಿ ವಿವಿಧ ವಿನ್ಯಾಸಗಳ ಶುದ್ಧ ಹಾವುಗಳಿದ್ದರೆ, ಇನ್ನೊಂದು ಮುಖದಲ್ಲಿ ಆಯುಧ, ಸಂಗೀತಸಾಧನಗಳನ್ನು ಹಿಡಿದಂತೆ ತೋರುವ ತಲೆಯ ಮೇಲೆ ಕಿರೀಟಗಳಂತೆ ನಾಗನ ಹೆಡೆಹೊತ್ತ ನರರೂಪಿ ಉಬ್ಬುಶಿಲ್ಪಗಳು. ಮಳೆಗಾಲದ ಅಬ್ಬಿಯ ಸೊಕ್ಕಿನಲ್ಲಿ ಬುಡ ಕದಲಿ, ಶಿಲಾವಲ್ಕಲ ಕಾಡ ಕಸವೆಲ್ಲ ಮುತ್ತಿ, ಕುರಿತು ಹುಡುಕದೇ ಇದ್ದರೆ ಮರೆಯಾಗಿಯೇ ಉಳಿಯುತ್ತಿದ್ದ ಪ್ರಾಕೃತಿಕ ಪ್ರದರ್ಶನಾಲಯವೇ ಅಲ್ಲಿ ‘ವ್ಯವಸ್ಥೆ’ ಆಗಿತ್ತು. 

ಪ್ರದರ್ಶನಾಲಯ ಎನ್ನುವಾಗ, ನನಗೆ ಜೋಡುಮಾರ್ಗದ ಪ್ರಾಧ್ಯಾಪಕ ತುಕಾರಾಂ ಪೂಜಾರಿಯವರ ನೆನಪಾಗುತ್ತದೆ. ಇವರು ರಾಣಿ ಅಬ್ಬಕ್ಕನ ಹೆಸರಿನಲ್ಲಿ, ಏಕಾಂಗವೀರನಾಗಿ ಸಾಕಷ್ಟು ಒಳ್ಳೆಯ ಖಾಸಗಿ ಸಂರಕ್ಷಣಾಗರವನ್ನೇ ಕಟ್ಟಿದ್ದಾರೆ. ಅವರೊಮ್ಮೆ ಸಿಕ್ಕಾಗ, ಅವರಿಗೆ ತಿಳಿದಿರದ, ಮಿತ್ತ ಬಂಡಾಜೆಯ ನಾಗಕಂಡದ ವಿಚಾರ ಮುಟ್ಟಿಸಿದ್ದೆ. ಆ ವಿಗ್ರಹಗಳ ಕಾಲ ನಿರ್ಣಯ, ಅವುಗಳನ್ನು ಸಂಗ್ರಹಾಲಯಕ್ಕೆ ತಂದು, ಹೆಚ್ಚಿನ ಅಧ್ಯಯನಗಳಿಗೆ ಮುಕ್ತವಾಗಿಸುವ ಕುರಿತೂ ಮಾತಾಡಿದ್ದೆ. ಅವರು ಆಸಕ್ತಿಯನ್ನೂ ತೋರಿದ್ದರು. ಆದರೆ ಮುಂದುವರಿದಂತೆ ಕಾಣಲಿಲ್ಲ. ತಪ್ಪೇನೂ ಇಲ್ಲ, ವ್ಯಕ್ತಿಯ ಮಿತಿಯಲ್ಲಿ ಅದು ಅಸಾಧ್ಯ ಕೂಡಾ ಎಂದೇ ನನಗೆ ಕಾಣುತ್ತದೆ. ಇಂದು ಮಿತ್ತ ಬಂಡಾಜೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಒಳಪಡುತ್ತದೆ. ಮತ್ತೆ ಹಳೆಯ ವಿಗ್ರಹಗಳೆಂದರೆ ಸಹಜವಾಗಿ ಕೇಂದ್ರ ಸರಕಾರದ ಪ್ರಾಚ್ಯ ಇಲಾಖೆಯ ವ್ಯಾಪ್ತಿಗೂ ಸೇರುತ್ತದೆ. ನನಗೆ ತಿಳಿದಂತೆ, ನಾಗಕಂಡದ ಕುರಿತು ಪೂರ್ಣ
ಅಜ್ಞಾನದಲ್ಲಿರುವ ಈ ಎರಡು ಸರಕಾರೀ ಯಂತ್ರಗಳನ್ನು ಅನುಕೂಲಕ್ಕೆ ಒಲಿಸಿಕೊಳ್ಳುವ ಯೋಚನೆಯೇ ಬಹಳ ನಿರುತ್ತೇಜಕ. ಮತ್ತೆ ಆ ನೆಲೆಯಾದರೋ ಅತಿ ಹತ್ತಿರದ ವಾಹನಯೋಗ್ಯ ದಾರಿಗೂ ಕನಿಷ್ಠ ಒಂದೆರಡು ಗಂಟೆಯ ದೂರದ್ದು. ಅದೂ ದಟ್ಟ ಕಾಡು, ದಿಟ್ಟ ಏರು! ವಿಗ್ರಹಗಳಾದರೋ ಒಂದೊಂದೂ ಕನಿಷ್ಠ ಅರ್ಧ ಟನ್ ಭಾರದವು ಮತ್ತು ಎಲ್ಲ ಮಗ್ಗುಲುಗಳಲ್ಲೂ ಕೆತ್ತನೆ ಇರುವುದರಿಂದ ಬಹಳ ನಾಜೂಕಿನಿಂದ ನಿರ್ವಹಿಸಬೇಕಾದವು. ಬಹಳ ಕಷ್ಟದಲ್ಲೇ ತುಕಾರಾಮ ಪೂಜಾರಿಯವರು ಅನುಮತಿ ಪತ್ರ ಮಾಡಿಸಿಕೊಂಡರೂ ಮತ್ತಿನ ಕೆಲಸಕ್ಕೆ ಬೇಕಾದ ಭಾರೀ ಹಣಕಾಸನ್ನು ಅವರು ಕನಸುವುದೂ ಕಷ್ಟ, ಬಿಡಿ. 

ನಾಗಕಂಡ ಒಂದು ಕಾಲದಲ್ಲಿ ತುಂಬ ಜನಬಳಕೆ ಇದ್ದ ಸ್ಥಳವೇ ಆಗಿರಬೇಕು. ಇಂದು ಅದನ್ನು ಕಾಲ ತಿರಸ್ಕರಿಸಿದ ನೆಲ ಎನ್ನುವುದಕ್ಕಿಂತ ಪ್ರಕೃತಿ ಮತ್ತೆ ತಕ್ಕೈಸಿಕೊಂಡ ಪ್ರದೇಶ ಎಂದೇ ಗೌರವಿಸುವುದು ಸರಿ. ಇಲ್ಲವಾದರೆ ಮಸೀದಿ ಕುಟ್ಟಿ, ಮಂದಿರ ಕಟ್ಟುವುದರಿಂದ ಇತಿಹಾಸವನ್ನು ‘ಸರಿಪಡಿಸುವ’ವರ ಗದ್ದಲ, ಇಲ್ಲದ ಭೂಮ ವಿಗ್ರಹಗಳನ್ನು ನಿಲ್ಲಿಸಿ, ಇತಿಹಾಸವನ್ನೇ ‘ನಿರ್ಮಿಸುವ’ವರ ಉತ್ಸಾಹ ಕಲ್ಪಿಸಿದರೇ ಭಯವಾಗುತ್ತದೆ. ಎಲ್ಲ ಸರಿಪಡಿಸುತ್ತೇವೆನ್ನುವವರು ಡೈನೋಸಾರ್ಗಳನ್ನು ಪುನರುಜ್ಜೀವಿಸಬೇಡವೇ? ಅತ್ಯಂತ ಎತ್ತರ ಎಂದು ಮೇಲಾಟಕ್ಕಿಳಿಯುವವರು ಆಕಾಶವನ್ನು ಅಳೆದಾರೇ? ನೇರ ಉಪಯುಕ್ತತೆಯನ್ನು ಸಾರದ ಉತ್ಪ್ರೇಕ್ಷೆಗಳು, ಕಾಳಜಿಯ ತೋರಿಕೆಗಳು. ಹೆಚ್ಚು ಪರಿಸರ ನಾಶವಿಲ್ಲದಂತೆ ನಾಗಕಂಡದ ವಿಗ್ರಹಗಳನ್ನು ಇಂದಿನ ನಾಗರಿಕ ಪ್ರದರ್ಶನಾಲಯಕ್ಕೆ ಸಾಗಿಸುವುದು ಅಸಾಧ್ಯವಾದರೆ ಹಾಗೇ ಮುಂದುವರಿಯಲು ಬಿಡುವುದು ಉತ್ತಮ.

ನಾಗಕಂಡದ ಶಿಲ್ಪಗಳ ಚಂದ ಕೇಳಿ, ಛಾಯಾಚಿತ್ರ ಕುಶಲಿ ಯಜ್ಞರ ಕುತೂಹಲ ಕೆರಳಿ, ಒತ್ತಾಯ ಹೆಚ್ಚಿ, ಎರಡೇ ವಾರದಲ್ಲಿ (೯-೫-೮೨) ನಾನು ಇನ್ನೊಂದೇ ತಂಡ ಹೊರಡಿಸಿದ್ದೆ. ಈ ಬಾರಿ ಬಾಡಿಗೆ ಜೀಪಿನಲ್ಲಿ ನನ್ನೊಡನೆ ಯಜ್ಞ, (ಅಡ್ಡೂರು) ಸೂರ್ಯ (ನಾರಾಯಣ ರಾವ್, ಆಗ ವಿದ್ಯಾರ್ಥಿ), ಪ್ರಕಾಶ ನಾಟೇಕರ್ (ನನ್ನಂಗಡಿ ಸಹಾಯಕ), ವೆಂಕಟ್ರಮಣ ಉಪಾಧ್ಯ (ಅಂದಿನಿಂದ ಇಂದಿಗೂ ಸಾಲಿಗ್ರಾಮದಲ್ಲಿ ವ್ಯಾಪಾರಿ), ಹರ್ಷ (ವರ್ಧನ ಭಟ್, ಚಿತ್ರಗ್ರಾಹಿ, ಕುಶಿ ಹರಿದಾಸ ಭಟ್ಟರ ಮಗ) ಮತ್ತು ಗೋಪಾಲಕೃಷ್ಣ ಬಾಳಿಗಾ (ಆಗ ವಿದ್ಯಾರ್ಥಿ, ಈಗ ಪವರ್ ಮೇಟ್ ಧಣಿ, ಸೈಕಲ್ ಗೆಳೆಯ) ಬಂದಿದ್ದರು. ಮುಂದುವರಿದ ಪ್ರಚಾರದಲ್ಲಿ ಮತ್ತೆ ಒಂದೇ ವಾರದಲ್ಲಿ (೧೬-೫-೮೨), ಇನ್ನೊಂದೇ ತಂಡ ಸಜ್ಜಾದಾಗ ನಾನು ಹಿಂದುಳಿಯಬೇಕಾಯ್ತು. ಆಗಲೂ ಜೀಪಿನಲ್ಲಿ ಹೋದ ತಂಡವನ್ನು, ಪ್ರಕಾಶ ನಾಟೇಕರ್ ಮಾರ್ಗದರ್ಶಿಸಿದ್ದ. ಆ ತಂಡದಲ್ಲಿ ಬಿಕೆ ಶರತ್ (ಆಗ ವಿದ್ಯಾರ್ಥಿ, ಈಗ ಅಮೆರಿಕಾ ಪ್ರೊಫೆಸರ್), (ಆಗ ಇನ್ನೂ ‘ಆಚಾರ್’ ಉಳಿಸಿಕೊಂಡಿದ್ದ ಇಂದಿನ) ಹರೀಶ ಪೇಜಾವರ (ಔಷಧಗಳ ವ್ಯಾಪಾರ ಪ್ರತಿನಿಧಿ), ಎ.ಪಿ. ಸುಬ್ರಹ್ಮಣ್ಯಂ (ಆಗ ವಿದ್ಯಾರ್ಥಿ, ಇಂದು ಕೃಷಿಕ), ಎ.ಪಿ. ಸತೀಶ ರಾವ್ (ಆಗ ವಿದ್ಯಾರ್ಥಿ, ಈಗ ವೈದ್ಯ/ ಕೃಷಿಕ), ಕಿರಣ್ ಕುಮಾರ್ (ಬ್ಯಾಂಕ್ ನೌಕರ), ಮಂಜಪ್ಪ (ಆಗ ಎಂಸಿಎಫ್ ನೌಕರ, ಇಂದು ಬಹರೀನ್ ಉದ್ಯೋಗಿ) ಮತ್ತು ಅರುಣ್ ನಾಯಕ್ (ಕರಾಟೆ ಮಿತ್ರ, ಅಶೋಕ್ ಪಂಡಿತರ ಆತ್ಮೀಯ, ಇಂದು ಜ್ಯೂಸ್ ಜಂಕ್ಷನ್, ಪಂಜಾಬೀಧಾಬಾಗಳ ಮಾಲಿಕ) ಹೋಗಿ ಬಂದಿದ್ದರು. ಅವರಲ್ಲಿ ಬಹುಮಂದಿ ಒಳ್ಳೊಳ್ಳೇ ಚಿತ್ರಗಳನ್ನೇ ತೆಗೆದಿದ್ದರು, ಆದರೆ ಕ್ಷಮಿಸಿ, ಇಂದು ನನ್ನಲ್ಲಿ ಉಳಿದದ್ದು ಇಲ್ಲಿ ಪ್ರದರ್ಶಿಸಿದ ಕೆಲವೇ ಕೆಲವು!

ಓಹ್! ಉಪಕತೆಯಲ್ಲಿ ತುಂಬ ದೂರ ಹೋಗಿಬಿಟ್ಟೆ, ಬನ್ನಿ ಬನ್ನಿ, ಅಬ್ಬಿಯ ತಳಕ್ಕೆ ಜಾಡು ಹುಡುಕೋಣ. ಮಳೆಗಾಲಗಳಲ್ಲಿ ಮೈದಾನ ಶಿಖರದ ವಿಸ್ತಾರದಿಂದ ಬಹುತೇಕ ನೀರು ಈ ಕಣಿವೆಯನ್ನೇ ಪಾತ್ರೆ ಮಾಡಿಕೊಂಡಿದೆ. ಸಹಸ್ರಾರು ವರ್ಷಗಳ ಆ ಮಹಾಪ್ರವಾಹ ಇಲ್ಲಿನ ಮೇಲ್ಮೈಯ ಮಣ್ಣನ್ನೆಲ್ಲ ಕಳೆದು, ಎದ್ದು ಕಾಣುವ ಬಂಡೆ ಗುಂಡುಗಳನ್ನೆಲ್ಲ ತೊಳೆದು, ಕಾಲದಿಂದ ಕಾಲಕ್ಕೆ ಅವನ್ನು ವಿವಿಧ ವಿನ್ಯಾಸಗಳಲ್ಲಿ ಜರಿಸಿ, ಜೋಡಿಸಿಟ್ಟಿದೆ. ಅವನ್ನು ದೃಢವಾಗಿಸುವಲ್ಲೂ ಸ್ಥಳಾಂತರಿಸುವಲ್ಲೂ ಪರಿಸರದ ಮರಬಳ್ಳಿಗಳೂ ಸಾಕಷ್ಟು ಸಹಕರಿಸಿರುವುದನ್ನೂ ಕಾಣುತ್ತೇವೆ. ಪ್ರಾಯಕ್ಕೆ ಬಂದ ಶಿಶು ಪೋಷಕರನ್ನೇ ಮೀರುವಂತೆ, ದಂಡೆಗಳಲ್ಲಿ ದಟ್ಟವಾಗಿ, ಪಾತ್ರೆಯಲ್ಲಿ ವಿರಳವಾಗಿ ಸಾಕಷ್ಟು ಬಲವಾದ ಮರಗಳು ಬೇರೂರಿವೆ. ಅವು ಬಂಡೆಗಳನ್ನು ತಮ್ಮ ಬೇರ ಜಾಲದಲ್ಲಿ ಬಿಗಿ ಹಿಡಿದಿಡುತ್ತವೆ. ಹಾಗೂ ಋತುಮಾನಗಳ ವಿಪರೀತದಲ್ಲಿ ನೀರ ಕೊರೆತಕ್ಕೆ ತಾನೇ ಅಡಿ ಮಗುಚಿದಾಗ, ಬುಡದ ಕಲಕಿನೊಡನೆ, ತಲೆಯಲ್ಲಿ ಹೊತ್ತ ಬಳ್ಳಿ ಬೀಳಲುಗಳ ಕಂತೆಯನ್ನು ಎಳೆದಾಡಿ, ವ್ಯವಸ್ಥೆಯನ್ನು ಬೇರೊಂದೇ ಹದಕ್ಕೆ ಮುಟ್ಟಿಸುತ್ತವೆ. ಹಾಗೇ ಇನ್ನೆಲ್ಲಿಂದಲೋ ಕೊಚ್ಚಿಕೊಂಡು ಬಂದು ಬಂಡೆಗಳ ನಡುವೆ ಅಡ್ಡ ಸಿಕ್ಕಿಕೊಂಡ ಸಣ್ಣ ಮರಗಳೋ ಕಳಚಿಬಿದ್ದ ಕೊಂಬೆಗಳೋ ನೇಯ್ದ ಶುದ್ಧ ಪ್ರಾಕೃತಿಕ ಕೋಟೆಯಲ್ಲಿ, ನಾವು ಹುಲು ಮಾನವಮಿತಿಗೆ ದಕ್ಕುವ ಜಾಡುಗಳನ್ನು ಕಂಡುಕೊಳ್ಳುತ್ತ, ಅಲ್ಪಸ್ವಲ್ಪ ಬಿಡಿಸಿಕೊಳ್ಳುತ್ತ ಏರೇರಿ ನಡೆದೆವು.

ನೀರ ಸಂಪರ್ಕದಿಂದ ಪಾಚಿಗಟ್ಟಿದ ಬಂಡೆಗಳನ್ನು ನಿವಾರಿಸುತ್ತ, ಸಣ್ಣ ಬಂಡೆಗಳ ಬುಡಸ್ಥಿರವನ್ನು ಖಚಿತಪಡಿಸಿಕೊಳ್ಳುತ್ತಲೇ ಪಾದ ಬೆಳೆಸಿದೆವು. ಭಾರೀ ಹಾಸುಬಂಡೆಗಳೂ ಇದ್ದವು. ಆದರೆ ಅವೂ ದರಗು ಹೊದ್ದು ಕೆಲವೆಡೇ ನಿಗೂಢವಿರುತ್ತಿತ್ತು, ಜಾರುಬಂಡೆಯೋ ಆನೆ ಕರ್ಪೋ ಆಗುವ ಅಪಾಯವೂ ಇತ್ತು. ತೊರೆ ಎಡಬಲ ತಿರುವು ಕಂಡಂತೇ ನಮ್ಮ ಏರು ಜಾಡೂ ಮಗ್ಗುಲುಗಳನ್ನು ಬದಲಿಸುತ್ತಲೇ ಸಾಗಬೇಕಾಗುತ್ತಿತ್ತು. ಅಂಥಲ್ಲೆಲ್ಲ ಒಣ ಬಂಡೆಗಳ ಸರಣಿಯನ್ನೇ ಮುಂದಾಗಿ ಕಂಡುಕೊಳ್ಳುತ್ತ ಏರಿ, ಕುಪ್ಪಳಿಸಿ ಸಾಗುತ್ತಿದ್ದೆವು. ಕೆಲವೆಡೆಗಳಲ್ಲಿ ಅಡ್ಡ ಬಿದ್ದ ಮರದ ಬೊಡ್ಡೆಗಳನ್ನು ಪ್ರಾಕೃತಿಕ ಪಾಲವೆಂದು ಬಳಸಿದ್ದೂ ಇತ್ತು. ಹಾಗೆಂದು ಬಿದ್ದ ಎಲ್ಲ ಮರಗಳನ್ನು ನಂಬುವಂತಿಲ್ಲ; ಕುಂಬಾಗಿರಬಹುದು! ಕೆಲವೊಂದು ಕೊನೆಯಲ್ಲಿ ಅನಂತರ ಹಬ್ಬಿದ ಬಳ್ಳಿ ಪೊದರುಗಳಲ್ಲಿ ಮುಳ್ಳಿರಬಹುದು, ಕಟ್ಟಿರುವೆ ಕಣಜಗಳ ಮೂಟೆಯಂತೂ ಮರೆಯಲೇಬಾರದು. ಪ್ರತಿ ಕ್ಷಣದಲ್ಲೂ ವನ್ಯವೆಂದರೆ ನಾಗರಿಕ ವಿಹಾರದ ಉದ್ಯಾನವಲ್ಲ ಎಂಬ ಎಚ್ಚರ, ಶ್ರಮವಷ್ಟೇ ಇಲ್ಲಿನ ಯಶೋಮಂತ್ರ.

ಬಂಡಾಜೆ ಪಾತ್ರೆಯಲ್ಲಿನ ಶಬ್ದಪ್ರಪಂಚದ ಶ್ರುತಿ ಮತ್ತು ಪಲುಕುಗಳೆರಡೂ ನೀರ ಹರಿವಿನ ವೈವಿಧ್ಯವೇ ಆಗಿವೆ. ಬೇಸಗೆಯ ದಿನಗಳಲ್ಲಿ ಈ ಜಾಡಿನಲ್ಲಿ ನಮಗೆ ಕನಿಷ್ಠ ಎರಡು ಮೂರು ಕಡೆಗಳಲ್ಲಿ ಭಾರೀ ಕಾಡು ಮಾವಿನ ಮರಗಳು ಕೊಟ್ಟ ಸಮ್ಮಾನ ಅನ್ಯತ್ರ ದೊರಕಿದ್ದಿಲ್ಲ. ಮತ್ತೆ ಆ ಕಾಲದಲ್ಲಿ ಘಟ್ಟಗಳಲ್ಲಿ ನಾವು ಅನುಸರಿಸಿದ ಹೆಚ್ಚು ಕಡಿಮೆ ಎಲ್ಲಾ ಜಲಧಾರೆಗಳಂತೆ ಇಲ್ಲೂ ಬಾಯಾರಿದಾಗ ತೊರೆಗೇ ಬಾಯಿ ಹಚ್ಚಿ ಕುಡಿಯುತ್ತಿದ್ದ ಸಂಭ್ರಮ, ಬಹುಶಃ ಈ ದಿನಗಳಲ್ಲಿ ಅನುಸರಿಸುವುದು ಆರೋಗ್ಯಕರವಾಗದು! (ಇಲ್ಲಿಂದ ಮೇಲಿನ ಬಂಡಾಜೆ ಪಾತ್ರೆಯಲ್ಲಿ ಯಾವುದೇ ನಾಗರಿಕ ವ್ಯವಸ್ಥೆಗಳಿಲ್ಲ. ಆದರೂ ನಮ್ಮ ಬಹುತೇಕ ಚಾರಣಿಗರ ಅಶಿಸ್ತು ಸಾಕಷ್ಟು ಕಂಡಿರುವುದರಿಂದ ಎಚ್ಚರಿಕೆ ಹೇಳಲೇಬೇಕಾಗುತ್ತದೆ.) ಸುಮಾರು ಎರಡು ಗಂಟೆಯ ಸಾಹಸದ ಏರಿಕೆಯಲ್ಲಿ ಜಲಪಾತದ ತಳ ತಲಪಿದ್ದೆವು. 

ಬಂಡಾಜೆ ಅಬ್ಬಿಯ ತಳ ಸಮತಟ್ಟಾಗಿಲ್ಲ. ಹಾಗಾಗಿ ಇತರ ಜಲಪಾತಗಳಲ್ಲಿ ಹೆಚ್ಚಾಗಿ ಕಾಣುವಂಥ ಮಡು ಇಲ್ಲಿಲ್ಲ. ಮೇಲೆ ಬೆಟ್ಟದಂಚಿನಿಂದ ಧುಮುಕುವ ನೀರ ಮೊತ್ತ ಸಾಕಷ್ಟಿದ್ದರೂ ಕೆಲವು ಸೀಳಾಗಿ, ಬಂಡೆ ಚಾಚುಗಳಲ್ಲಿ ಪುಟಿದೆದ್ದೂ ಬುಡದಲ್ಲಿ ಸುಮಾರು ಹದಿನೈದಿಪ್ಪತ್ತಡಿ ಅಗಲಕ್ಕೆ ವೈವಿಧ್ಯಮಯ ರೂಪದಲ್ಲಿ, ಧಾರೆಗಳಲ್ಲಿ ಬೀಳುತ್ತವೆ. ಅದು ಹತ್ತೆಂಟು ಬಂಡೆ ಗುಂಡು ಅಥವಾ ಹೋಳುಗಳನ್ನು ನಿರಂತರ ಕಟೆಯುವ ಶಿಲ್ಪಶಾಲೆ. ಆ ಐವತ್ತು ನೂರಡಿಯ ಹರಹಿನಲ್ಲಿ ಝರಿಯ ಪಾತ್ರೆ ಸಾಕಷ್ಟು ವಿಸ್ತಾರಕ್ಕೆ ಮರಗಿಡಾದಿಗಳಿಂದ ಮುಕ್ತವಾಗಿ, ನಮ್ಮ ಏರಿಬಂದ ಶ್ರಮಕ್ಕೆ ಯೋಗ್ಯ ದೃಶ್ಯ ವೈಭವವನ್ನೇ ಪ್ರದರ್ಶಿಸುತ್ತದೆ. ನಾವು ವಿರಾಮದಲ್ಲಿ, ಸ್ನಾನಕ್ಕೆ ತಕ್ಕಂತೆ ಬಟ್ಟೆ ಬದಲಾಯಿಸಿ, ಜಲಧಾರೆಯನ್ನು ಸಮೀಪಿಸಿದೆವು. ನೀರಿನ ನಿರಂತರ ಹೊಡೆತದಿಂದ ಬಂಡೆ ತುಂಡುಗಳಲ್ಲಿ ಪಾಚಿ ಮತ್ತೆ ಜಾರಿಕೆ ಇರಲೇ ಇಲ್ಲ. ಬಹುತೇಕ ಬಂಡೆಗಳು ದೃಢವಾಗಿಯೇ ಕುಳಿತಿದ್ದುದರಿಂದ ನಮ್ಮ ಧಾರಣಾ ತಾಕತ್ತಿಗನುಗುಣವಾದ ಧಾರೆಯನ್ನಷ್ಟೇ ಆಯ್ದುಕೊಂಡು, ‘ಗಂಗಾಧರ’ರಾದೆವು! ಅದುವರೆಗಿನ ಏರಿಕೆಯ ಸೆಕೆ, ಬೆವರು, ಬಳಲಿಕೆಗಳನ್ನೆಲ್ಲ ಶೀತಲ ಶುಭ್ರ ನೀರು ಒಂದೇ ಪೆಟ್ಟಿಗೆ ಹೊಡೆದು ಕಳೆದುಬಿಟ್ಟಿತು. ಮೈಯ್ಯ ಮೂಕನೋವುಗಳನ್ನೆಲ್ಲ ಕ್ಷಣದಲ್ಲಿ ಮರೆಯಿಸಿ ಚಳಿಯನ್ನೇ
ಹಿಡಿಸಿತು ಎಂದರೂ ತಪ್ಪಲ್ಲ. ಆಗೀಗ ತಲೆಯೊಳಗಿನದ್ದೆಲ್ಲ ಕರಡಿ ಹೋದರೆ ಎಂಬ ಭಯವೂ ಆದದ್ದಿದೆ. ಅಲ್ಲಿ ಇಲ್ಲಿ ಓಡಾಡಿ, ಹದವಾದ ನೀರ ಎಳೆ ಹುಡುಕಿ, ಪ್ರಶಸ್ತ ಬಂಡೆ ಹಾಸಿನ ಮೇಲೆ ಗಟ್ಟಿಯಾಗಿ ಕುಳಿತು, ಸಹಸ್ರಾರು ವರ್ಷಗಳ ನಿರಂತರ ಸ್ರೋತದಲ್ಲಿ (ಸ್ತೋತ್ರ?) ಕಾಲರ್ಧ ಗಂಟೆಗಾದರೂ ಒಂದಾಗುವ ಯೋಗ ಎಂದೂ ಮರೆಯುವಂತದ್ದಲ್ಲ. ಮನೆಗಳಲ್ಲಿ, ಹತ್ತೆಂಟು ಯೋಚನೆಗಳಲ್ಲಿ ಮೀಯುವ ಧಾವಂತ ಮುಗಿದಾಗ ನೀರು ಸುರಿದುಕೊಂಡದ್ದೆಷ್ಟು, ಚೆಲ್ಲಿದ್ದೆಷ್ಟು ಎಂಬ ಪರಿವೆ ಇರುವುದಿಲ್ಲ. ಕೆಲವೊಮ್ಮೆ ಹಚ್ಚಿದ ಸಾಬೂನಿನ ನೊರೆ ತೊಳೆಯಲೂ ಮರೆಯುವುದುಂಟು. ಆದರಿಲ್ಲಿ (ಸಾಬೂನು ನಿಶಿದ್ಧ!) ತಲೆ ಕುಟ್ಟಿ, ಮೈಯುಜ್ಜಿ ಸಾಗುವ, ಆಗೀಗ ನಿರ್ಯೋಚನೆಯಿಂದ ಹೊಟ್ಟೆಯನ್ನೂ ಸೇರಿಕೊಳ್ಳುವುದು (ಸಚೇಲ ಪಾನ/ ಸಸ್ನಾನಪಾನ!) ನೀರಲ್ಲ - ಅಮೃತ, ಪ್ರತಿ ಕ್ಷಣದಲ್ಲೂ ನಮ್ಮ ಪ್ರಜ್ಞೆಯನ್ನು ಜಾಗೃತದಲ್ಲೇ ಇರಿಸುತ್ತದೆ. ಈ ಅನಂತದಲ್ಲಿ ನಮ್ಮ ಕಾಲ ಎಷ್ಟು ಸಣ್ಣದು ಎಂಬ ತಿಳಿವು ಸ್ಪಷ್ಟವಿಲ್ಲದಿದ್ದರೆ ಅಂದೇನು, ಇಂದಿಗೂ ನಾವು ಯಾರೂ ಬಂಡಾಜೆ ಅಬ್ಬಿ ಬಿಟ್ಟು ವಾಪಾಸಾಗುತ್ತಲೇ ಇರಲಿಲ್ಲ!

ಬಂಡಾಜೆ ಅಬ್ಬಿಯ ಈ ಸ್ನಾನದ ವಿವರಗಳೇ ನಮ್ಮ ಮತ್ತಿನ ಬಹುತೇಕ ಮಿತ್ರರನ್ನು ಈ ಸಾಹಸಕ್ಕೆ ಎಳೆಯುತ್ತಿತ್ತು. ನನ್ನ ಕಡತದ ಉಲ್ಲೇಖಗಳನ್ನು (ಎರಡನ್ನು ಮೇಲೇ ಹೇಳಿದ್ದೇನೆ) ಮೀರಿಯೂ ಕೇಳಿ ಬಂದ ಅಸಂಖ್ಯ ತಂಡಗಳಿಗೆ, ಆ ದಿನಗಳಲ್ಲಿ ನಾನು ಚಿತ್ರ ಸೂಚನೆ ಕೊಟ್ಟು ಕಳಿಸಿದ್ದಿತ್ತು. ಅವರಲ್ಲಿ ಬಹುತೇಕ ಮಂದಿ ನಿಜ ಕಾಡು, ಘಟ್ಟದ ಔನ್ನತ್ಯ, ಶ್ರಮದ ಪರಾಕಾಷ್ಠೆಗಳನ್ನೆಲ್ಲ ಇಲ್ಲೇ ಮೊದಲೂ ಕೊನೆಯ ಬಾರಿಗೂ ಕಂಡವರು! ಗಾಯ, ಉಳುಕು, ಜಾಡು ತಪ್ಪಿ ಅಲೆದದ್ದು ಎಂಬಿತ್ಯಾದಿ ಚಿಲ್ಲರೆ ಕತೆಗಳೂ ಸಾಕಷ್ಟಿವೆ. ಪೂರ್ವ ಸಂಸ್ಕಾರ ಅಥವಾ ಮಾನಸಿಕ ಅನುಸಂಧಾನ ಇಲ್ಲದೇ ಹೋಗಿ ಕೇವಲ ಕೂಳು-ಧ್ವಂಸಿಗಳಾಗಿ "ಎಂಥ ಇದೆ, ನೀರು ಬೀಳದನ್ನ ನೋಡಕ್ಕೆ" ಎಂದವರೂ ಇದ್ದಾರೆ! ಜಲಪಾತ ಬಿಟ್ಟು ತಪ್ಪಲಿಗೆ ಎಲ್ಲಿ ಇಳಿದರೂ ನಾಗರಿಕತೆ ತೊಡರಿಕೊಳ್ಳುವುದರಿಂದ ದೊಡ್ಡ ದುರಂತಗಳೇನೂ ಆದಂತಿಲ್ಲ. ಆದರೂ ಅವರೆಲ್ಲ ಬಹುಕಾಲಕ್ಕೆ ಉಳಿಸಿಕೊಂಡ ದಟ್ಟ ನೆನಪೇನಿದ್ದರೂ ಬಂಡಾಜೆ ಅಬ್ಬಿಯ ಸ್ನಾನ! 

ಬಂಡಾಜೆ ವಲಯದ ನಾಗಪ್ರತಿಮೆಗಳ ಪುರಾತತ್ವದಂತೇ ಜೀವಾಜೀವವೈವಿಧ್ಯದ ಅಧ್ಯಯನಕ್ಕೂ ಹೋಗಿ ಬಂದವರ ಕತೆಗಳನ್ನು ನಾನು ಕೇಳಿದ್ದುಂಟು. ಅದರಲ್ಲೂ ಓರ್ವ ವಿದೇಶೀಯನ ಕಥನವನ್ನು ನಾನು ಸಣ್ಣದಾಗಿಯಾದರೂ ಇಲ್ಲಿ ದಾಖಲಿಸದಿರಲಾರೆ. ಆತ ಓರ್ವ ಜೀವವಿಜ್ಞಾನಿಯಂತೆ. ಸರಕಾರ, ಇಲಾಖೆಗಳಿಂದ ಸೂಕ್ತ ಅನುಮತಿ, ಅವಕಾಶವೆಲ್ಲ ಮಾಡಿಕೊಂಡವನೇ. ಆತ ಅಬ್ಬಿಯ ತಳದ ಸಮೀಪದಲ್ಲೆಲ್ಲೋ ಸಣ್ಣ ತಟ್ಟು ಹುಡುಕಿ, ಗುಡಾರ ಹಾಕಿ ತಿಂಗಳುಗಟ್ಟಳೆ ಅದೇನೋ ಸಂಶೋಧನಾ ಕೆಲಸ ನಡೆಸಿದ್ದನಂತೆ. ನೆನಪಿರಲಿ, ಇದು ಸುಮಾರು ಮೂವತ್ತು ವರ್ಷಗಳ ಹಿಂದಿನ ಸ್ಥಿತಿ. ಅವನ ಆಹಾರ, ಸಂಪರ್ಕ ಇತ್ಯಾದಿಗಳನ್ನು ಜನ ಓಡಾಡಿಯೇ ಪೂರೈಸಬೇಕಾಗುತ್ತಿತ್ತು. ಸಹಜವಾಗಿ ಆತ ಬೆಳ್ತಂಗಡಿಯ ಒಂದೆರಡು ಕೂಲಿಗಳನ್ನು ಸಂಬಳಕ್ಕೆ ಇಟ್ಟುಕೊಂಡಿದ್ದನಂತೆ. ಆದರೆ ಆ ಕೂಲಿಗಳು ಅವನ ಹೆಚ್ಚಿನ ಹಣಕಾಸಿನ ಮೋಹಕ್ಕೆ ಬಿದ್ದು, ಆತನನ್ನೇ ಕೊಲೆ ಮಾಡಿಬಿಟ್ಟರು. ಅಕ್ಷರಶಃ ಚಿನ್ನದ ಮೊಟ್ಟೆಯಿಡುವ ಬಾತಿನ ಹೊಟ್ಟೆಗೆ ಚೂರಿ! ಅದು ತಡವಾಗಿ ಬಯಲಾಗಿ, ಆರೋಪಿಗಳ ಬಂಧನವಾಗಿ, ವ್ಯಾಜ್ಯವಾಗಿ, ಪತ್ರಿಕಾ ವರದಿಯಾದಾಗ ನನ್ನ ನೆನಪಿನಕೋಶ ಸೇರಿತ್ತು. ಈ ದುರಂತ, ನನಗೆ ದಟ್ಟ ಕಾಡು ಬೆಟ್ಟಕ್ಕೆ ಹೋಗುವಾಗ, ವನ್ಯ ಜೀವಿಗಳಿಗಿಂತ ಹೆಚ್ಚಿನ ಅಪಾಯವಾಗಿ ಕಾಣುತ್ತದೆ, ಇಂದಿಗೂ ಜೀರ್ಣಿಸಿಕೊಳ್ಳಲಾಗದ ಸತ್ಯವಾಗಿ ಕಾಡುತ್ತದೆ. (ಅಪರಾಧಿಗಳಿಗೆ ಶಿಕ್ಷೆ ಇತ್ಯಾದಿ ಮುಂದಿನ ವಿವರಗಳು ನನಗೆ ತಿಳಿದಿಲ್ಲ) 

ಬಂಡಾಜೆ ಅಬ್ಬಿ ತಳದ ನಮ್ಮ ಮೊದಲ ಭೇಟಿ, ಬಹುಶಃ ಒಂದು ಗಂಟೆಯ ಅವಧಿಯದ್ದಿರಬೇಕು. ಸ್ನಾನ ಮುಗಿಸಿ, ಬುತ್ತಿಯುಂಡು, ಹೋದ ದಾರಿಯಲ್ಲೇ ಇಳಿಮುಖರಾದೆವು. ಏರುದಾರಿಯ ಶ್ರಮದಲ್ಲಿ ಶಂಪಾ ದೈತೋಟ ತಮ್ಮ ಅಂಗಿಗೆ ಚುಚ್ಚಿಕೊಂಡಿದ್ದ ಲಯನ್ ಕ್ಲಬ್ಬಿನ ಸಂಕೇತ ಬಿಲ್ಲೆಯನ್ನು ಅದೆಲ್ಲೋ ಬೀಳಿಸಿಕೊಂಡಿದ್ದರು. ಅದೃಷ್ಟವೆಂದರೆ ಅದು ನಮಗೆ ಮರಳುವ ದಾರಿಯಲ್ಲಿ ಸ್ಪಷ್ಟವಾಗಿ ಕಾಣಸಿಕ್ಕಿತ್ತು! "ಸಂಜೆ ವಳಂಬ್ರ, ರಾತ್ರಿಗೆ ಮಂಗಳೂರು" ಎಂದೇನೋ ಅಧ್ಯಾಯವನ್ನು ಮುಗಿಸಬಹುದು. ಆದರೆ ಈ ವಲಯ, ಅಂದರೆ ಮೊದಲನೆಯದಾಗಿ ಬಲ್ಲಾಳರಾಯನ ದುರ್ಗ ಮತ್ತೆ ಬಂಡಾಜೆ ಅಬ್ಬಿಯ ತಳ, ಮುಂದೆ ನನಗೆ ತೆರೆದು ಕೊಟ್ಟ ಅಸಂಖ್ಯ ಸಾಹಸಾವಕಾಶಗಳನ್ನು ನೆನೆಸಿಕೊಳ್ಳುತ್ತ ಹೇಳುತ್ತೇನೆ "ಇಲ್ಲ, ಇಲ್ಲ! ಬರಲಿದೆ ಇನ್ನೂ ದೊಡ್ಡ ಅನುಭವಗಳು, ಕಾದಿರಿ, ಕಾದಿರಿ."
ವಿಶೇಷ ಸೂಚನೆ: ಬಳಸಿದ ಹೆಚ್ಚಿನ ಚಿತ್ರಗಳು ಯಜ್ಞ, ಮಂಗಳೂರು ತೆಗೆದವು. ಆ ಹಳೆಗಾಲದ ಪ್ರತಿಗಳೇ ಆದರೂ ಒಳ್ಳೆಯದರಲ್ಲಿಟ್ಟುಕೊಂಡು ಕೊಟ್ಟವರು ಗೋಪಾಲಕೃಷ್ಣ ಬಾಳಿಗಾ.

(ಮುಂದುವರಿಯಲಿದೆ)

8 comments:

 1. ಅನುಭವಕಥನ ಚೆನ್ನಾಗಿ ಮೂಡಿ ಬಂದಿದೆ....
  ಅಶೋಕಣ್ಣ.

  ReplyDelete
 2. Excellent description .... If possible Would love to visit one day 😊👍

  ReplyDelete
 3. ಆಗೀಗ ತಲೆಯೊಳಗಿನದ್ದೆಲ್ಲ ಕರಡಿ ಹೋದರೆ ಎಂಬ ಭಯವೂ ಆದದ್ದಿದೆ.
  ಕರಡಿ ಹೋದರೆ ಎ೦ದರೇನು?

  ReplyDelete
 4. ಕರಡು = ಕದಡು, ಕಲಕು. ಬೆಂಗ್ಳೂರು ಕನ್ನಡದಲ್ಲಾದರೆ ಮಿಕ್ಸ್ ಆಗೋದ್ರೀ :-)

  ReplyDelete
 5. ವಾಹ್! ಶುದ್ಧ ಸ್ನಾನವಾಯಿತು. ಇದನ್ನು ಓದಿಯೇ.

  ReplyDelete
 6. ವಾವ್.. ನಮ್ಮನ್ನೂ ಬುಡಕ್ಕೆ ಕರ್ಕೊಂಡೋಗಿಬಿಟ್ರಿ..

  ReplyDelete
 7. ಓ ನನ್ ಹೆಸ್ರೂ ಬಂದ್ ಬಿಟ್ಟಿದೆ ಸಹ ಆರೋಪಿಯಾಗಿ

  ReplyDelete