27 July 2018

ಕರುಣ ಸಂಜೀವ - ಸಂಜೀವ ಸುವರ್ಣ ಅಭಿನಂದನೆ

ದಿನಪೂರ್ತಿ ನಡೆದ ಅಭಿನಂದನಾ ಕಲಾಪಗಳ ಶುದ್ಧ  ವಿಡಿಯೋ ದಾಖಲೀಕರಣ - ಆರು ಭಾಗಗಳಲ್ಲಿ ಲಗತ್ತಿಸಲಾಗಿದೆ. ಹಾಗಾಗಿ ಈ ಬರಹ ವರದಿಯಲ್ಲ, ನನ್ನ ಅನಿಸಿಕೆಗಳು ಮಾತ್ರ


ಅದ್ವಿತೀಯ ಯಕ್ಷಗಾನ ಗುರು-ಕಲಾವಿದ ಬನ್ನಂಜೆ ಸಂಜೀವ ಸುವರ್ಣರಿಗಂದು (೧೫-೭-೧೮) ಅಭಿನಂದನ ಸಮಾರಂಭ - ಕರುಣ ಸಂಜೀವ. ಉಡುಪಿಯ ಪುರಭವನದಲ್ಲಿ ತುಸು ಬೇಗ ಎನ್ನುವ ಬೆಳಿಗ್ಗೆ ಒಂಬತ್ತೂವರೆ ಗಂಟೆಯ ಮುಹೂರ್ತದ ನಿರೀಕ್ಷೆಯಲ್ಲಿ ಎಲ್ಲೆಲ್ಲಿನ ಕಲಾಪ್ರೇಮಿಗಳು, ಸಂಜೀವರ ಅಸಂಖ್ಯ ಶಿಷ್ಯರು ಮತ್ತು ಅಭಿಮಾನಿಗಳು ಬಂದು ಸೇರುತ್ತಲೇ ಇದ್ದರು. ಮಳೆ ಬಿರಿದ ಲವಲವಿಕೆ, ಎದುರು ಜಗುಲಿಯಲ್ಲಿ ದೊಡ್ಡದಾದ ಹೂವಿನೆಸಳುಗಳನ್ನೇ ತುಂಬಿ ಮಾಡಿದ್ದ ದೊಡ್ಡ ಪುಷ್ಪ ವಿನ್ಯಾಸ, ಪಕ್ಕದ
ಭೋಜನಶಾಲೆಯಲ್ಲಿನ ಸರಳ ಉಪಾಹಾರ, ಎಲ್ಲೆಡೆ ಭಾರಿ ಸಂಭ್ರಮ. ಪ್ರೇಕ್ಷಾಂಗಣದಲ್ಲೂ ಜನ ಗಿಜಿಗುಟ್ಟಿ, ಬಹುತೇಕ ತುಂಬಿದ ಭಾವವೇ ಬಂದರೂ ಯಾಕೋ ನಾವು ಸಾಮಾನ್ಯ ಸಮ್ಮಾನ ಸಮಾರಂಭಗಳಲ್ಲಿ ಕಾಣುವ ಅಲಂಕಾರ ಸಾಮಗ್ರಿಗಳ ಸಂತೆ, ಉದಾರ ಕೊಡುಗೆಯಿತ್ತವರ ಸ್ಮರಣ ತಟ್ಟಿಗಳು, ಬೆಳಕಿನ ಹೊಳೆ ಕಾಣಲೇ ಇಲ್ಲ. ವೇದಿಕೆಯ ಮೇಲೆ ಆಚೀಚೆ ಎರಡು ತುಂಡು ಹಲಿಗೆ ಸರಳವಾಗಿ ಸಂದರ್ಭ ಸೂಚಿಸಿದರೆ, ನಡುವಣ ದೊಡ್ಡ ಹಲಿಗೆಯಲ್ಲಿ ಏನೋ ಅಮೂರ್ತ ಚಿತ್ರ. ಉಳಿದಂತೆ ಮಂಕು ಬೆಳಕಿನ ವೇದಿಕೆ

ಭಣಭಣ. ಕುರ್ಚಿಗಳು, ಅಲಂಕಾರದ ದೀಪ, ನಾಲ್ಕೆಂಟು ಮೈಕಿನ ಕೋಲು, ವಯರು ಎಳೆದಾಡುತ್ತ ಮಿನಿಟಿಗೊಮ್ಮೆ "ಕೊಂಯ್, ಠಕ್, ಠಕ್, ಹಲೋ ಮೈಕ್ ಚಕ್ ಮೈಕ್ ಚಕ್..." ಎನ್ನುವ ತರುಣರು, ಏನೋ ಘನ ಜವಾಬ್ದಾರಿ ಹೊತ್ತಂತೆ ಶತಪಥ ಹಾಕುವ ಸಂಘಟಕರ ಓಟ ಒಂದೂ ಇಲ್ಲ. ಆದರೆ ಸಮಯಕ್ಕೆ ಸರಿಯಾಗಿ ವೇದಿಕೆಯ ಎಡ ಮೂಲೆಯಿಂದ ಸೂಕ್ಷ್ಮವಾಗಿ ಕಲಾಪಗಳ ಮೊದಲ ನುಡಿ ಬಂತು. ಹಿಂಬಾಲಿಸಿದಂತೆ ಬಲಮೂಲೆಯಲ್ಲಿ ಬೆಳಕಿನ ಛತ್ರಿಯಡಿಯಲ್ಲಿ ಸಾಂಪ್ರದಾಯಿಕ ಡೋಲಿಗೆ ಕೋಲು
ಬಡಿಯುತ್ತ ಬಂದ ಜನಪದ ಕಲಾವಿದ, ಶತಾಯುಷಿ ಗುರುವ ಕೊರಗ, ಉದ್ಘಾಟನೆಯ ನುಡಿತವನ್ನೇ ಕೊಟ್ಟರು. ಅವರೇನೋ ಸಾಂಕೇತಿಕವಾಗಿ ಒಂದು ಮಿನಿಟು ನುಡಿಸಿದರೂ ಅದನ್ನು ಮುಂದುವರಿಸಿದ್ದು ಮತ್ತೆರಡು ಡೋಲು, ಕೊಳಲು, ಚಂಡೆ, ಚಕ್ರತಾಳಗಳ ಮೇಳ. ಯಕ್ಷಗಾನ ರಂಗವಾದರೂ ಹೀಗೇ ಅಲ್ಲವೇ! ಹತ್ತಡಿ - ಹತ್ತಡಿ ಚೌಕದೊಳಗೆ ಎಲ್ಲ ಲೋಕಗಳು, ಎಲ್ಲ ಕಥಾನಕಗಳೂ ಪಾತ್ರಧಾರಿಗಳಿಂದಲೇ ಜೀವಪಡೆಯುತ್ತವೆ. ಕೊರಗರ ಮೇಳದ ಅಬ್ಬರ ಏರುತ್ತಿದ್ದಂತೆ, ಮಸಕುಗಟ್ಟಿದ ಆಗಸದ
ಮಿಂಚ ಮಾಲೆಯಂತೆ ಲಯಬದ್ಧ ನಡೆಯಲ್ಲಿ ಪ್ರವೇಶ ಕೊಟ್ಟರು ಬನ್ನಂಜೆ ಸಂಜೀವ ಸುವರ್ಣ. ಅವರು ಸಮ್ಮಾನಕ್ಕಿದ್ದ ವ್ಯಕ್ತಿಯೇ ಆದರೂ ಉಡುಪು ಎಂದಿನ ಸರಳ ಅಭ್ಯಾಸಿಯದು, ನಿಲುವು ಪ್ರಾಯದ ಹಿರಿತನಕ್ಕೇನೂ (ಅರವತ್ತರ ಆಚೀಚೆ) ಜಗ್ಗದ ಮಹಾಗುರುವಿನದು. ಸಂಜೀವರು ಕಲಾಧರ್ಮದಂತೆ ಮೊದಲು ಹಿಮ್ಮೇಳಕ್ಕೆ ವಂದಿಸಿ ಮತ್ತೆ ರಂಗವನ್ನಾಕ್ರಮಿಸಿ, ಮೇಳದ ಲಯಕ್ಕೆ ಯಕ್ಷನಾಟ್ಯವನ್ನು ಸಹಜವೆಂಬಂತೆ ಕೊಡುತ್ತಿದ್ದಂತೆ ಸಭಾವಲಯದ ಭೌತಿಕ ಮಂಕು ಹರಿದೋಡುವಂತೆ ಚಪ್ಪಾಳೆ
ಹರ್ಷೋದ್ಗಾರಗಳ ಹೊನಲೇ ಹರಿದಿತ್ತು. 


ಯಕ್ಷಗಾನದ ಶಾಸ್ತ್ರೀಯ ಸ್ಥಾನದ ಮೂಲದಲ್ಲಿ ಅಸಂಖ್ಯ ಜನಪದ ಕಲೆಗಳಿವೆ. ಅದನ್ನು ಸಂಕೇತಿಸುವಂತೆ, ಕೊರಗರ ಡೋಲಿನ ಲಯ, ಚಂಡೆಯ ಕುಸುರಿಯ ಮಹತ್ತನ್ನು ಸಾರಿ, ಗೌರವಿಸಿತ್ತು ಈ ‘ಪೂರ್ವರಂಗ’. ಕಲಾಪಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕಲಾಮಂಡಲಂ
ಉಷಾದಾತಾರ್ ವಹಿಸಿಕೊಂಡಿದ್ದರು. ಯಕ್ಷಗಾನದ ಸೋದರ ಕಲೆ ಕಥಕ್ಕಳಿಯಿಂದ ಬಂದ ಅವರು, ನಾಲ್ಕೇ ಉದ್ಘಾಟನಾ ನುಡಿಗಳನ್ನಾಡಿ, ಗುರುವ ಕೊರಗರನ್ನು ಗೌರವಿಸಿ, ದಿನದುದ್ದದ ಕಲಾಪಗಳಿಗೆ ಚಾಲನೆ ಕೊಟ್ಟರು. 

ಸಾಮಾನ್ಯವಾಗಿ ಸಮ್ಮಾನ ಸಭೆಗಳಲ್ಲಿ ಸಂಘಟಕರು ಮತ್ತು ಭಾಗವಹಿಸುವ ಗಣ್ಯರುಗಳ ಉದ್ದೇಶ ಎಷ್ಟೇ ಉದಾತ್ತ ಮತ್ತು ಪ್ರಾಮಾಣಿಕವಿದ್ದರೂ ಮಾತು ಮೆರೆಯುತ್ತದೆ. ಸಮ್ಮಾನಿತರ ಕಲಾಸಾಧನೆ ಒಂದೋ ಕಡಿಮೆ, ಇಲ್ಲಾ ಅತಿ ಬೆಳಕಿನಲ್ಲಿ ಕಾಣಿಸುತ್ತದೆ. ಅನ್ಯ ಸಂದರ್ಭದಲ್ಲಿ ಸಂಜೀವರೇ ಹೆದರಿ
ಹೇಳಿದ ಮಾತು "ಹೊನ್ನಶೂಲಕ್ಕೇ ಏರಿಸಿಬಿಡುತ್ತಾರೆ." ಅದನ್ನಿಲ್ಲಿ ಬಹಳ ಚಂದದಿಂದ ನಿವಾರಿಸಿದ್ದರು. ಮಧ್ಯಾಹ್ನದವರೆಗೂ ಸ್ವತಃ ಸಂಜೀವರೇ ತನ್ನ ಸಾಧನೆಯ ತುಣುಕು ಚಿತ್ರಗಳನ್ನು ಪ್ರಾತ್ಯಕ್ಷಿಕೆಯ ರೂಪದಲ್ಲಿ ಪ್ರದರ್ಶಿಸಿದರು. ಅದೇ ವಿದ್ಯಾರ್ಥಿ ಉಡುಪು, ಹಿಮ್ಮೇಳ ಮತ್ತು ಸಹಕಾರಕ್ಕೆ ಯಕ್ಷಗಾನ ಕೇಂದ್ರದ್ದೇ ಒಡನಾಡಿಗಳು. ಅ ಆ ಇ ಈ ಬಂತು, ಶಬ್ದಗಳು ಮೂಡಿದವು, ಅರ್ಥಗಳು ಧ್ವನಿಸಿದವು, ಕೊನೆಯಲ್ಲಿ ಅತಿಥಿಯಾಗಿ ಬಂದ ಕೃಷ್ಣನನ್ನು ಕಂಡು ಸಂಭ್ರಮಿಸುವ ವಿದುರನ ಸಣ್ಣ ರೂಪಕವನ್ನೇ ಕೊಟ್ಟು
ನಮ್ಮನ್ನು ತಣಿಸಿದರು. ಸುಮಾರು ಮೂರೂವರೆ ಗಂಟೆಯುದ್ದದಲ್ಲಿ, ಶ್ರಮಿಸಿಯೂ ದಣಿಯದಂತಿದ್ದದ್ದಕ್ಕೆ ಅವರ ಹೆಸರು ಸಂಜೀವ! ನೂರಾರು ಮಾತುಗಳ ಕೊನೆಯಲ್ಲೂ ಸಮ್ಮಾನಿತರ ಸಾಧನೆ, ಮಾತುಗಾರರ ಶಬ್ದಾಡಂಬರವಾಗಿಯೇ ಉಳಿಯುವ ಅಭಾಸವನ್ನು ತುಂಬ ಚಂದಕ್ಕೆ ನಿವಾರಿಸಿದ್ದರು. 


ಪ್ರಾತ್ಯಕ್ಷಿಕೆಗಳು ಸಂಜೀವರಿಗೆ ಅವಿರತ ಕಲಾಪವಾಗಬಾರದು, ಸಭಿಕರಿಗೆ ಏಕತಾನತೆ ತರಬಾರದು ಎನ್ನುವಂತೆ ವ್ಯವಸ್ಥೆ ಇತ್ತು. ಸಂಜೀವರ ಪ್ರತಿ ನಾಟ್ಯ ತುಣುಕಿನ ಹಿಂದೆ ಆಹ್ವಾನಿತ ಗಣ್ಯರೋರ್ವರಿಂದ ಸಂಜೀವರ ಕುರಿತು ಮತ್ತು ಸಂದರ್ಭೋಚಿತ ಪುಟ್ಟ ಪುಟ್ಟ ನುಡಿಕಾಣಿಕೆಗಳು ಮೆರೆದವು. ಮಹಾರಾಷ್ಟ್ರದ ಮೂಲೆಯಲ್ಲಿನ ಮರಾಠೀ ದಶಾವತಾರ ವಲಯದಿಂದ ಬಂದವರು ವಿಜಯಕುಮಾರ ಪಾತೆರ್ಪಕರ್. ಇವರು ಉಡುಪಿ ಯಕ್ಷಗಾನ ಕೇಂದ್ರದೊಡನೆ ಶಿವರಾಮ ಕಾರಂತರ ಕಾಲದಿಂದಲೂ
ಒಡನಾಡಿದವರು. ಅವರ ತೀರಾ ಶಿಥಿಲಗೊಂಡ ಜನಪದ ರಂಗಭೂಮಿಗೆ ಗುರು ಸುವರ್ಣರು ಕೊಟ್ಟ ಕಾಯಕಲ್ಪವನ್ನು ಇಲ್ಲಿ ಚುಟುಕಾಗಿ ಸ್ಮರಿಸಿದ್ದಕ್ಕಿಂಥ ದೊಡ್ಡ ಅಭಿನಂದನ ಬೇಕೇ! 

ಹೆಗ್ಗೋಡಿನ ನೀನಾಸಂ ರಂಗಶಿಕ್ಷಣ ಕೇಂದ್ರದ ಪ್ರಾಂಶುಪಾಲರಾಗಿ, ಅಸಂಖ್ಯ ನಾಟಕಗಳ ನಿರ್ದೇಶಕರಾಗಿ ಹೆಸರಾಂತ ಚಿದಂಬರ ರಾವ್ ಜಂಬೆಯವರು ಬಂದಿದ್ದರು. ಸುವರ್ಣರಿಗೆ ಬಿ.ವಿ. ಕಾರಂತರ ನಾಟಕಗಳಿಗೆ ಯಕ್ಷನಡೆಗಳನ್ನು ಕೊಡುವಲ್ಲಿಂದ ತೊಡಗಿ ಇಂದಿನವರೆಗೂ
ಹೆಗ್ಗೋಡಿನ ಒಡನಾಟ ಸಂಜೀವರಿಗೆ ಧಾರಾಳವಿದೆ. ಅಲ್ಲಿನ ವಿದ್ಯಾರ್ಥಿಗಳು, ಕೆಲವು ನಾಟಕಗಳ ಭಾಗ ಸಂಜೀವ ಸ್ಪರ್ಷ ಬಯಸುವುದು, ಕೆಲವೊಮ್ಮೆ ಇವರಲ್ಲಿ ಸಜ್ಜಾದ ವಿದ್ಯಾರ್ಥಿಗಳು ಹೆಗ್ಗೋಡಿನ ವಿದ್ಯಾರ್ಥಿಯಾಗಿ ಮುಂದುವರಿಯುವುದು ಸಹಜವಾಗಿ ನಡೆದು ಬಂದಿದೆ. ಆ ಮುನ್ನೆಲೆಯಲ್ಲಿ ಜಂಬೆಯವರು ತನಗೂ ಗುರುಸದೃಶರಾದ ಸಂಜೀವರ ಸಮಯಪ್ರಜ್ಞೆಯನ್ನಷ್ಟೇ ನೆನೆದು, ಮಾತಿನ ಮಿತಿ ಮೆರೆದು ಗೌರವವನ್ನು ಸಲ್ಲಿಸಿದರು. 

ಕುಶಿ ಹರಿದಾಸ ಭಟ್ಟರಿಂದ ಯಕ್ಷಗಾನ ಕೇಂದ್ರದ
ಗುರುತರವಾದ ಜವಾಬ್ದಾರಿಯನ್ನು ವಹಿಸಿಕೊಂಡವರು ಹೆರಂಜೆ ಕೃಷ್ಣ ಭಟ್ಟರು. ತಂಡ, ತರಬೇತಿ, ಪ್ರದರ್ಶನ, ಅಧ್ಯಯನ ಎಂದೆಲ್ಲ ಸೃಜನಶೀಲ ಆಯಾಮವನ್ನು ಶಿವರಾಮ ಕಾರಂತರು ನೋಡಿಕೊಂಡಾಗ, ಆರ್ಥಿಕ ಮತ್ತು ಸಂಯೋಜನಾತ್ಮಕವಾಗಿ ಗಟ್ಟಿ ನೆಲೆ ಮತ್ತು ಬೆಂಬಲ ರೂಪಿಸಿ, ಮುಂದುವರಿಸುವುದು ಸಣ್ಣ ಕೆಲಸವಲ್ಲ. ಮೂಲತಃ ಎಂಜಿಎಂ ಕಾಲೇಜಿನ ಅಧ್ಯಾಪಕರಾಗಿದ್ದ ಕೃಷ್ಣ ಭಟ್ಟರು ಕಾಲೇಜ್ ಸೇವೆಯಲ್ಲಿದ್ದಾಗಲೂ ನಿವೃತ್ತರಾದ ಮೇಲೂ ಬಹು ದೀರ್ಘ ಕಾಲ ನಿರ್ಮಮವಾಗಿ ಈ ಕಾಯಕವನ್ನು ನಡೆಸಿದ್ದಕ್ಕೆ
ಸಾಕ್ಷಿ - ಇಂದು ಸ್ವಂತ ವಠಾರದಲ್ಲಿ, ಸುಸಜ್ಜಿತ ಮೂರು ಮಾಳಿಗೆಗಳ ಕಟ್ಟಡದಲ್ಲಿ, ನಿರಂತರ ಯಕ್ಷಗಾನವನ್ನೇ ಉಸಿರಾಡುತ್ತಲಿರುವ ಯಕ್ಷಗಾನ ಕೇಂದ್ರ. ಇದು ಮಣಿಪಾಲ ಶಿಕ್ಷಣ ಸಮೂಹದ ಅಂಗ. ಕೇಂದ್ರದ ನಿರ್ದೇಶಕನ ಹೊಣೆಯನ್ನು ತೀರಾ ಈಚೆಗೆ, ವಯೋಭಾರದಿಂದ ಹೆರಂಜೆಯವರು ಬಿಟ್ಟಾಗ, ಮಣಿಪಾಲದಿಂದ ನಿಯುಕ್ತರಾದವರು ವರದೇಶ ಹಿರೇಗಂಗೆ. ಅವರು ಬನ್ನಂಜೆ ಮತ್ತು ಯಕ್ಷಗಾನವನ್ನೂ ನಿಕಟವಾಗಿ ಕಂಡ ಅನುಭವ ಸಣ್ಣದು. ವರದೇಶ್ ಆ ಮಿತಿಯೊಡನೆ ಸಂಜೀವರನ್ನು
ಅಭಿನಂದಿಸುವ ಭರದಲ್ಲಿ ‘ವರನಟ ರಾಜಕುಮಾರ್’ ಹೋಲಿಕೆ ಕೊಟ್ಟದ್ದು ಸರಿ ಅಲ್ಲ. ರಾಜಕುಮಾರ್ ವಹಿಸಿದ ಉದಾತ್ತ ಸಿನಿ-ಪಾತ್ರದ ಗುಣಗಳನ್ನೇ ‘ಭಕ್ತಾದಿಗಳು’ ಅವರ ನಿಜಜೀವನದಲ್ಲಿದೆ ಎಂದು ಭ್ರಮಿಸಿದರು. ಅದಕ್ಕೆ ಸರಿಯಾಗಿ ರಾಜಕುಮಾರ್, ಸಾರ್ವಜನಿಕ ಜೀವನದಲ್ಲಿ ತೋರಿಕೆಯ ‘ಮಾತು, ಅಭಿನಯ’ವನ್ನಷ್ಟೇ ಕೊಟ್ಟರು. ಇದಕ್ಕೆ ವ್ಯಕ್ತಿ ಸ್ವಾರ್ಥಮೂಲವಾಗಿ ಸರಕಾರಗಳು, ಭಾಷೆ - ಸಂಸ್ಕೃತಿಗಳ ದುರ್ಬಳಕೆದಾರರು ಹುಸಿ ಪ್ರಭಾವಳಿ ಹಚ್ಚಿದರು. ನಿಜದಲ್ಲಿ ರಾಜಕುಮಾರ್ ಸ್ವಂತ ಕುಟುಂಬದ ಸಿನಿ-ಉದ್ದಿಮೆ ಗಟ್ಟಿ
ಮಾಡಿಕೊಂಡದ್ದು ಬಿಟ್ಟು, ಸಮಾಜಕ್ಕೆ ಮಾಡಿದ್ದೇನೂ ಇಲ್ಲ. ನಿಜ ವಿನಯ, ಯೋಗ್ಯತಾವಂತ ಬಡಮಕ್ಕಳ ಹೊಟ್ಟೆ, ಬಟ್ಟೆ, ವಿದ್ಯೆಗಳನ್ನೆಲ್ಲ (ಶಾಲಾ ಹಾಗೂ ಯಕ್ಷ) ಯಾವುದೇ ಆವುಟಗಳಿಲ್ಲದೆ ಪೂರೈಸುವ ಬನ್ನಂಜೆ ಸಂಜೀವ ಸುವರ್ಣರನ್ನು ‘ವರನಟ’ನಿಗೆ ಹೋಲಿಸಿದ್ದು ತೀರಾ ತಪ್ಪು. 

ಕಲಾವಿಮರ್ಶಕ, ಶಿಕ್ಷಕ ಸದಾನಂದ ಮೆನನ್ ಯಾವುದೇ ಕಲೆಯನ್ನು ‘ದೈವಿಕ’ ಮಾಡಿ, ಕಾಲದ ಅಲೆಗೆ ಅದರ ಸಹಜ ವಿಕಾಸಪಥವನ್ನು ಮುಚ್ಚುವುದಲ್ಲ. ಆಧುನೀಕರಣದ ಭ್ರಮೆಯಲ್ಲಿ ಹಳತನ್ನು ಮರೆತು, ಹೊಸತೇನನ್ನೂ
ಗಳಿಸಲಾಗದ ಸ್ಥಿತಿಗೆ ಮೆನನ್ ವಿಷಾದಿಸಿದರು. ಅದರ ಮುನ್ನೆಲೆಯಲ್ಲಿ ತನ್ನದೇ ಮಾಧ್ಯಮವಾದ ಯಕ್ಷಗಾನದ ಹಿಂದನ್ನು ಇಂದಿಗೆ ಆವಾಹಿಸಿ, ಮುಂದನ್ನೂ ಕಟ್ಟಿಕೊಡುತ್ತಿರುವ ಗುರು ಸಂಜೀವರು ಅಭಿನಂದನೀಯರು. ಅವರನ್ನು ನಾವು ಕೇವಲ ಹೊಗಳಿ ಕೂರುವುದಲ್ಲ, ಧಾರಾಳ ಬೆಂಬಲವನ್ನು ಕೊಡುವವರಾಗಬೇಕು ಎಂದೇ ಆಶಿಸಿದರು. 

ಕೊರಗರ ವಾದ್ಯಮೇಳದ ಯಕ್ಷ-ಕೊಡುಗೆಯನ್ನು ದಿನದ ಮೊದಲಲ್ಲೇ ನಾವು ಕಂಡಿದ್ದೆವು. ಈ ಹಂತದಲ್ಲಿ ಇನ್ನೊಂದೇ ಜನಪದ ಕಲೆಯಾದ ದೈವಾರಾಧನೆ, ಅದರ ಭಾಗವೂ ಆದ
ಪಾಡ್ದನದ ಕೊಡುಗೆಯನ್ನು ಗುರುತಿಸುವ ಸಣ್ಣ ಪ್ರಾತ್ಯಕ್ಷಿಕೆ ನಡೆಯಿತು. ಹಿರಿಯ ಶೀರೂರು ಕೊರಗ ಪಾಣಾರರನ್ನು ಎದುರಿಟ್ಟುಕೊಂಡು, ತರುಣ ದೈವಾರಾಧಕನೋರ್ವ ಮಾತು, ಗಾಯನಗಳ ಕಲಾಪ ನಡೆಸಿದರು. ಆ ಯುವಕನಿಗೆ ಯಕ್ಷಗಾನದ ಪಾಠಗಳೊಡನೆ ರಸದೃಷ್ಟಿಯನ್ನು ಕೊಟ್ಟವರು ಸಂಜೀವ ಸುವರ್ಣ. ಇದರಿಂದ ಆತ ಪಾಡ್ದನಗಳು ಧ್ವನಿಸುವ ಅಥವಾ ಧ್ವನಿಸಬೇಕಾಗಿಯೂ ಕೊರತೆಯಾಗಿರುವ ರಸ ಭಾವಗಳ ವಿಶ್ಲೇಷಣೆಯನ್ನು ಕಂಡುಕೊಳ್ಳಲು ಸಾಧ್ಯವಾಯ್ತು. ಅದನ್ನೇ ಚಿಕ್ಕದರಲ್ಲಿ ಬಿಂಬಿಸುವ ಪ್ರಯತ್ನ ಮಾಡಿದರು. 

ಸಂಸ್ಕೃತ ವಿದ್ವಾಂಸ, ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ, ತಾಳಮದ್ದಳೆಯ ಅರ್ಥಧಾರಿ ಎಂ.ಎ. ಹೆಗಡೆಯವರು ದೈವಾರಾಧಕನ ಪ್ರಸ್ತುತಿಯ ಬೆನ್ನಿಗೆ ಬಂದಿದ್ದರು. ಸಹಜವಾಗಿ ಅವರು ಯಕ್ಷಗಾನದ ಕಲಾಜಗತ್ತು ಮತ್ತು ಭೂತಾರಾಧನೆಯ ಭಕ್ತಿಲೋಕಗಳ ನಡುವಣ ಕೊಳು ಕೊಡೆಯನ್ನೇ ಸಣ್ಣದಾಗಿ ಬಿಡಿಸಿ ನೋಡಿದರು. ಮುಂದುವರಿದು, ತಮ್ಮ ವಿದ್ವತ್ತಿನ ಭಾಗವೇ ಆದ ಭರತನ ನಾಟ್ಯಶಾಸ್ತ್ರದ ಬಲದಲ್ಲೂ ಆರಾಧನಾ ವಲಯದಿಂದ ಯಕ್ಷಗಾನ ಪಡೆದ ಬಲವನ್ನು (ಲೋಕಧರ್ಮೀ ಕಲಾಧರ್ಮೀ
ಆಗುವ ಕ್ರಮ) ಎತ್ತಿ ನುಡಿದರು. ಇಂಥವನ್ನು ಔಚಿತ್ಯಪೂರ್ಣವಾಗಿ ನಿರ್ವಹಿಸುವಲ್ಲಿ ಸಂಜೀವ ಸುವರ್ಣರ ದೊಡ್ಡ ಪಾತ್ರವನ್ನು ಶ್ಲಾಘಿಸಿದರು. 

ವಿ. ಜಯರಾಜನ್ ನಮ್ಮ ಪಕ್ಕದ ಊರೇ ಕಾಞಂಗಾಡಿನಿಂದ ಬಂದ, ಇನ್ನೊಂದೇ ದೈವಾರಾಧನ ಕಲಾಪವೆಂದೇ ನಂಬಲಾದ ಥೈಯ್ಯಂ ಕಲೆಯ ಪಂಡಿತ. ಅವರೂ ಪರೋಕ್ಷವಾಗಿ ಜನರಿಂದ ಬಂದ ಕಲೆಯನ್ನು (ದೇವ) ಆರಾಧನೆಯ ಮುಸುಕಿನಲ್ಲಿ ವಿಸ್ತೃತ ಜನಮಂಡಲದಿಂದ ದೂರ ಇಡುವುದಾಗಲೀ ಅರ್ಥಹೀನ ನಿಷೇಧಗಳನ್ನು
ಹೇರುವುದಾಗಲೀ ತಪ್ಪೆಂದೇ ಹೇಳಿದರು. ಇದನ್ನು ಯಕ್ಷಗಾನದ ಮಟ್ಟಿಗೆ ತುಂಬ ಸಮರ್ಥವಾಗಿ ನಡೆಸುತ್ತ ಬಂದಿರುವ ಸಂಜೀವರಲ್ಲಿ ಅವರು ಕುಲನಾಮ ‘ಸುವರ್ಣ’ವನ್ನು ಗುಣನಾಮವಾಗಿ ಕಂಡು ಅಭಿನಂದಿಸಿದರು. 

ಖ್ಯಾತ ಸಂಸ್ಕೃತಿ ಚಿಂತಕ, ವಿದ್ವಾಂಸ ಲಕ್ಷೀಶ ತೋಳ್ಪಾಡಿಯವರು ತಾಳಮದ್ದಳೆಯ ಅರ್ಥಧಾರಿಯಾಗಿಯೂ ಸಾಕಷ್ಟು ಕೆಲಸ ಮಾಡಿದವರು. ಪೂರ್ವಾಹ್ನ ಕಲಾಪಗಳ ಕೊನೆಯ ನುಡಿಕಾರ ತೋಳ್ಪಾಡಿ.
ಅದಕ್ಕು ಮೊದಲಷ್ಟೇ ಸಂಜೀವರು ಕೊಟ್ಟ ಪ್ರಾತ್ಯಕ್ಷಿಕೆ - ಸಂಧಾನಕ್ಕೆ ಬಂದ ಕೃಷ್ಣ ಅನಿರೀಕ್ಷಿತವಾಗಿ ವಿದುರನ ಮನೆಗಿತ್ತ ಭೇಟಿ ಎಲ್ಲರ ಮನದಲ್ಲಿ ಹಸಿಯಾಗಿತ್ತು. ತೋಳ್ಪಾಡಿ ಅದೇ ಎಳೆಯನ್ನು ಜಗ್ಗಿ, ವಿದುರ ಜನ್ಮದ ಸೂಕ್ಷ್ಮವನ್ನು ಎತ್ತಿ ತೋರಿಸಿದರು. ವಿದುರನ ತಾಯಿ ‘ರಾಣೀ ಯೋಗ’ವನ್ನು ತ್ಯಜಿಸಿದ ದಾಸಿ, ತಂದೆ ಸರ್ವೋನ್ನತ ಮೌಲ್ಯವೊಂದರ ಪ್ರತಿನಿಧಿಯಾದ ಋಷಿ. ಸಂಯೋಗಾನಂತರ ಋಷಿ - ವ್ಯಾಸರು, "ನೀನಿನ್ನು ದಾಸಿಯಲ್ಲ" ಎಂದೇ ಆಕೆಗೆ ಹೇಳಿದ್ದರು. ಹಾಗಾಗಿ ವಿದುರ
ರಾಜನಾಗಲಾರ, ಆದರೆ ರಾಜನಿಂದಲೂ ಮೇಲೆ! ಅಭಿನಯದ ವಿದುರನನ್ನು ತೋಳ್ಪಾಡಿಯವರು ಪಾತ್ರಧಾರಿಯಲ್ಲೇ ಗುರುತಿಸಿದರು. ಸಂಜೀವರು ಜನ್ಮಜಾತಿಯ ಅಂಟಿಲ್ಲದ "ಯಕ್ಷಗಾನದ ನಿಜ ವಾರೀಸುದಾರ" ಎಂದೇ ಲಕ್ಷ್ಮೀಶ ತೋಳ್ಪಾಡಿಯವರು ಘೋಷಿಸಿ, ಅಭಿನಂದಿಸಿದರು. ಹೀಗೆ ತೋಳ್ಪಾಡಿಯವರ ಮಾತಿನ ವಿಸ್ತರಣೆಯಾಗಿ, ನನಗೆ ಸಿಕ್ಕ ಸಂಜೀವ ಒಡನಾಟದ ಕೆಲವೇ ತುಣುಕುಗಳನ್ನು ಸಣ್ಣದರಲ್ಲಿ ಹೇಳುತ್ತೇನೆ. (ಇದನ್ನು ಹೆಚ್ಚಿನ ವಿವರಗಳಲ್ಲಿ ಈಗ ಅಭಿನವ
ಪ್ರಕಾಶನ ಲೋಕಾರ್ಪಣ ಮಾಡಿರುವ ಅವರ ಆತ್ಮಕಥೆ - ಸಂಜೀವನ, ನಿರೂಪಣೆ - ಪೃಥ್ವೀರಾಜ ಕವತ್ತಾರು, ಇದರಲ್ಲಿ ಓದಿಕೊಳ್ಳಿ) 

ಸುಮಾರು ಹದಿನೈದು ವರ್ಷಗಳ ಹಿಂದೆ ನಮ್ಮ ಮಗ - ಅಭಯಸಿಂಹ, ಪುಣೆಯಲ್ಲಿ ಚಿತ್ರ ನಿರ್ದೇಶನದ ಕಲಿಕೆಯಲ್ಲಿದ್ದ. ಅವನ ಅಂತಿಮ ವರ್ಷದ ಪ್ರಾಯೋಗಿಕ ಪರೀಕ್ಷೆಯ ದೊಡ್ಡ ಅಂಗ ಕಿರು ಚಿತ್ರ ನಿರ್ದೇಶನ. ಇವನು ಆರಿಸಿಕೊಂಡ ಕತೆ ಯಕ್ಷಗಾನ ಕಲಾವಿದನದ್ದು. ನಾವು ಸಹಜವಾಗಿ ಯಕ್ಷಗಾನ ಕೇಂದ್ರವನ್ನು ಸಂಪರ್ಕಿಸಿದ್ದೆವು. ಇದಕ್ಕೆ ತಮ್ಮ ವಿದ್ಯಾರ್ಥಿ
ಬಳಗದಿಂದ ನಾಲ್ಕೈದು ಜನರ ಮೇಳ ಹೊರಡಿಸಿಯಾರೆನ್ನುವುದು ನಮ್ಮ ನಿರೀಕ್ಷೆ. ಆದರೆ ಸ್ವತಃ ಸಂಜೀವ ಸುವರ್ಣರು, ಹಿರಿಯ ಕಲಾವಿದ ಚೇರ್ಕಾಡಿ ಮಾಧೂನಾಯ್ಕ, ತನ್ನ ಹಿರಿಯ ಶಿಷ್ಯನೊಬ್ಬ ಮತ್ತೂ ಸಾಲದ್ದಕ್ಕೆ ತನ್ನ ಹೆಂಡತಿ, ಮಗನನ್ನೂ ಮುಮ್ಮೇಳಕ್ಕೆ ಹೊರಡಿಸಿಯೇ ಬಿಟ್ಟರು. ಕೇಂದ್ರದ ಅನುಭವೀ ಗುರುವೃಂದವೇ ಹಿಮ್ಮೇಳ. ಈ ಚಿಕ್ಕಮೇಳ ಬಣ್ಣ, ಹಡಪ ಹೊತ್ತು, ಮಾಮೂಲೀ ಮುಂಬೈ ಬಸ್ಸಿನಲ್ಲಿ ಪಯಣಿಸಿ, ಎರಡೋ ಮೂರೋ ದಿನದ ಅಭಯನ ಪ್ರಯೋಗಕ್ಕೆ
ಬೇಕಾದಂತೆ ಒಡ್ಡಿಕೊಂಡಿದ್ದರು. ಆಗ ನಾವು ಕೊಟ್ಟ ಕಿಂಚಿತ್ ಗೌರವಧನವನ್ನು ಸಂಜೀವ ಬಳಗ ಯಕ್ಷಗಾನ ಕೇಂದ್ರಕ್ಕೆ ಬಿಟ್ಟು, ದೊಡ್ಡ ‘ಥ್ಯಾಂಕ್ಸ್’ನ್ನಷ್ಟೇ ಒಪ್ಪಿಸಿಕೊಂಡಿತ್ತು.

ಯಕ್ಷ ದಾಖಲೀಕರಣದಲ್ಲಿ ಗೆಳೆಯ ಮನೋಹರ ಉಪಾಧ್ಯರೊಡನೆ ನಾವು (ಅಭಯ ಸೇರಿದಂತೆ) ಕೆಲವು ಪ್ರಯೋಗಗಳನ್ನು ಮಾಡಿದ್ದೆವು. ಅದರಲ್ಲಿ ಮೊದಲು ಬಡಗು ತಿಟ್ಟಿನ ಪೂರ್ವರಂಗ ಮತ್ತು ಯಕ್ಷೋತ್ತಮರ ಕಾಳಗವೆಂಬ ಸಣ್ಣ ಪ್ರಸಂಗವನ್ನು ಕೆನರಾ ಕಾಲೇಜಿನ ವಠಾರದೊಳಗೆ
ಮಾಡಿದ್ದೆವು.
ಅನಂತರ ದೀವಟಿಗೆ ಬೆಳಕಿನಲ್ಲಿ, ಪಕ್ಕಾ ಗ್ರಾಮ್ಯ ಪರಿಸರದ ಮುನ್ನೆಲೆಯಲ್ಲಾಗುವಂತೆ ನಮ್ಮದೇ ‘ಅಭಯಾರಣ್ಯ’ದೊಳಗೆ ‘ಅರಗಿನಮನೆ’ ಪ್ರಸಂಗವನ್ನೂ ಮಾಡಿಸಿದ್ದೆವು.
ಎರಡರಲ್ಲೂ ಸಂಜೀವರ ಪೂರ್ವತಯಾರಿ, ಸ್ಥಳ ಹಾಗೂ ಪ್ರದರ್ಶನ ನಿರ್ವಹಣೆಯ ಶಿಸ್ತು, ಕಲಾವಂತಿಕೆ ಎಂದಿನಂತೇ ನಿಸ್ವಾರ್ಥ, ನಿರ್ಮಮ;
ವಿವರಿಸಲು ನನ್ನಲ್ಲಿ ಪದಗಳಿಲ್ಲ. 

‘ಕರುಣ ಸಂಜೀವ’ ಸಮಾರಂಭದ ಭಾಗವಾಗಿ ಮಧ್ಯಾಹ್ನ ಎಲ್ಲರಿಗೂ ಹಿತ ಭೋಜನದ ವ್ಯವಸ್ಥೆಯಾಗಿತ್ತು. ಹಾಗಾಗಿ ಅಪರಾಹ್ನದ ಕಲಾಪಗಳನ್ನು ನಿಶ್ಚಿತ ಸಮಯಕ್ಕೇ ತೊಡಗಿಸಿದ್ದರು. ಇಲ್ಲಿ ಮೂರು ಕಲಾಪಗಳಿದ್ದವು. ಮೊದಲು ಕೃಷ್ಣಮೂರ್ತಿ ಕವತ್ತಾರು ಪ್ರದರ್ಶಿಸಿದ ಏಕವ್ಯಕ್ತಿ ನಾಟಕ - ಕರುಣ ಸಂಜೀವ. ಇದು ಮೇಲೆ ಹೇಳಿದ ಸಂಜೀವರ ಆತ್ಮ ಕಥಾನಕದ್ದೇ ಕೆಲವು ಎಳೆಗಳ ದುರ್ಬಲ ಹೆಣಿಗೆ. ಸಂಜೀವರು ಬೆಳೆದು ಬರುವಲ್ಲಿ ಹಸಿವು, ಬಡತನ, ಜಾತೀಯತೆ,
ನಿರಕ್ಷರತೆ, ನಿರುದ್ಯೋಗಾದಿಗಳು ಕಟು ವಾಸ್ತವಗಳಾಗಿದ್ದವು. ಅವುಗಳ ಒಂದೆರಡು ಅಂಶಗಳನ್ನು ಹೆಕ್ಕಿ, ಆಗೀಗ ಯಕ್ಷ ಹಿಮ್ಮೇಳದ ಧ್ವನಿಗೆ ಸಣ್ಣ ಹೆಜ್ಜೆಗಾರಿಕೆ ಕೊಟ್ಟು, ಅತಿರಂಜಿತ ನಟನೆ ಮತ್ತು ಸ್ಪಷ್ಟ ನೆಲೆಯಿಲ್ಲದ ನಿರೂಪಣೆಯಲ್ಲಿ ಪ್ರಸ್ತುತ ಪಡಿಸಿದರು. ಪ್ರದರ್ಶನವನ್ನು ಕೊನೆಗೊಳಿಸುವಲ್ಲಿ ಸಾಕ್ಷಾತ್ ಸಂಜೀವರನ್ನೇ ರಂಗಕ್ಕೆ ತಂದು ನಿಲ್ಲಿಸಿದ್ದಂತೂ ‘ಸಂಜೀವ ಹವಾ’ದ ಪೂರ್ಣ ಲಾಭ ಪಡೆದಂತೇ ಅನ್ನಿಸಿತು. 

ಅನಂತರದ ಕಲಾಪ - ಆಮಂತ್ರಣದಲ್ಲಿ ಮುದ್ರಿಸಿದಂತೆ, ಅಭಯಸಿಂಹ ನಿರ್ಮಿಸಿದ ಸಂಜೀವರ ಕುರಿತ ಸಾಕ್ಷ್ಯಚಿತ್ರ. ಇದೂ ಸಂಜೀವರ ಆತ್ಮಕಥಾನಕದ್ದೇ ಕೆಲವು ಎಳೆಗಳನ್ನು ಬಹುತೇಕ ಅವರದ್ದೇ ನಿರೂಪಣೆಯಲ್ಲಿ, ಕೆಲವೇ ವರ್ತಮಾನದ ದೃಶ್ಯಗಳೊಡನೆ ಕಲಸಿಟ್ಟ ಅವಸರದ ಅಡುಗೆ. ಅಭಯ ನಮ್ಮವನೇ ಆದ್ದರಿಂದ ಈ ಕುರಿತು ಸಣ್ಣ ವಿವರಣೆ ಕೊಡುವುದು ನನಗೆ ಕರ್ತವ್ಯವೂ ಹೌದು. ಸಮ್ಮಾನ ಸಮಿತಿ ಎರಡು ವಾರದ ಹಿಂದಷ್ಟೇ ಈ ಜವಾಬ್ದಾರಿಯನ್ನು
ಅಭಯನಿಗೆ ಒಪ್ಪಿಸಿತು. (ನಮ್ಮೊಳಗಿನ ಸಂಬಂಧಗಳ ಬಂಧದಲ್ಲಿ ಇಲ್ಲಿ ನಿರಾಕರಣೆಯ ಮಾತು ಸಾಧ್ಯವಿರಲಿಲ್ಲ.) ಆದರೆ ಈತ ಕಳೆದ ಒಂದು ವರ್ಷದಿಂದ ಶ್ರಮಿಸಿ ತಂದ ತುಳು ಚಿತ್ರ ‘ಪಡ್ಡಾಯಿ’ಯನ್ನು ಚಿತ್ರಮಂದಿರಗಳಿಗೆ ಬಿಡುಗಡೆ ಮಾಡುವ (೧೩-೭-೧೮) ಅತೀವ ಒತ್ತಡದಲ್ಲಿದ್ದ. ಹಾಗಾಗಿ ಕೇವಲ ತನ್ನ ಕ್ಯಾಮರಾದವರನ್ನಷ್ಟೇ ಕಳಿಸಿ, ಸಂಜೀವರಿಗೂ ಪೃಥ್ವೀರಾಜ್ ಕವತ್ತಾರರಿಗೂ ಅಷ್ಟು ‘ಹಿಂಸೆ’ ಕೊಟ್ಟು, ಬಹುತೇಕ ನಿರೂಪಣೆ, ಕೆಲವೇ ದೃಶ್ಯಗಳನ್ನು ತರಿಸಿಕೊಂಡ. ಅಷ್ಟನ್ನೇ ಸಮಾರಂಭದ ತತ್ಕಾಲೀನ ಬಳಕೆಗೆಂಬಂತೆ ಒಂದು
ಚೌಕಟ್ಟಿನಲ್ಲಿ ಕೂರಿಸಿ, ಪ್ರದರ್ಶಿಸಿದ್ದ. ಅಭಯನದ್ದೇ ಮಾತಿನಲ್ಲಿ ಹೇಳುವುದಾದರೆ "ಇದು ಬನ್ನಂಜೆ ಸಂಜೀವಸುವರ್ಣರ ಸಾಕ್ಷ್ಯಚಿತ್ರವಲ್ಲ. ಇದು ಅವರ ಜೀವನಕ್ಕೆ, ಸಾಧನೆಗೆ ನಾನು ನಿಜದಲ್ಲಿ ಸಲ್ಲಿಸುವ ನ್ಯಾಯವೂ ಅಲ್ಲ. ಇದನ್ನು ಒಂದು ಕಚ್ಚಾ ಮಾಲು ಎಂದಷ್ಟೇ ಪರಿಗಣಿಸಿ, ಮುಂದೆ ಸರಿಯಾದ ಸಾಕ್ಷ್ಯಚಿತ್ರವನ್ನು ಕೊಡುವ ಭರವಸೆಯನ್ನು ಅವಶ್ಯ ಕೊಡುತ್ತೇನೆ." 

[ವಿ.ಸೂ: ಮೇಲೆ ಹೇಳಿದ ಕಾರಣಕ್ಕಾಗಿ ‘ಸಾಕ್ಷ್ಯಚಿತ್ರ’ ಇಲ್ಲಿ ಕೊಡುತ್ತಿಲ್ಲ] 

ಜರ್ಮನಿಯ ಕತ್ರೀನ್ ಬೈಂದರ್ ಇಂಡಾಲಜಿ ವಿದ್ಯಾರ್ಥಿನಿ. ಸಂಸ್ಕೃತ, ಪುರಾಣ, ಸಂಗೀತ, ನಾಟಕಾದಿಗಳು ಇವರ ಆಸಕ್ತಿಯ ವಿಷಯಗಳು. ಕತ್ರೀನ್ ೨೦೦೧ರ ಸುಮಾರಿಗೆ ಸಂಸ್ಕೃತದ ಹೆಚ್ಚಿನ ಅಧ್ಯಯನ ಉದ್ದೇಶದಿಂದ ಭಾರತಕ್ಕೆ ಬಂದರು. ಆದರೆ ಸನ್ನಿವೇಶಗಳ ಆಕಸ್ಮಿಕದಲ್ಲಿ ಸ್ನಾತಕೋತ್ತರ ಸಂಶೋಧನಾ ವಿಷಯವಾಗಿ ಯಕ್ಷಗಾನವನ್ನೇ ಆರಿಸಿಕೊಂಡರು. ಅದರ ಮುಂದುವರಿಕೆಯಾಗಿ ಬನ್ನಂಜೆ ಸಂಜೀವ ಸುವರ್ಣರ ಶಿಷ್ಯತ್ವದಲ್ಲಿ ಯಕ್ಷಗಾನವನ್ನು ಎಲ್ಲ ಮುಖಗಳಲ್ಲೂ ಕಲಿತರು.
ಇದಕ್ಕೆ ಸಾಕ್ಷಿ - ಯಕ್ಷಗಾನದ ಕುರಿತ ಇವರು ಜರ್ಮನ್ ಭಾಷೆಯಲ್ಲಿ ಪ್ರಕಟಿಸಿರುವ ಸಂಶೋಧನ ಗ್ರಂಥ ಮತ್ತು ಅಭಿಮನ್ಯು ಕಾಳಗ ಪ್ರಸಂಗ. ಯಕ್ಷಗಾನದ ಉಪೋತ್ಪತ್ತಿಯಾಗಿ ಕತ್ರೀನ್ಗೆ ಸಿದ್ಧಿಸಿದ ಕನ್ನಡದಿಂದ (ಹೆಚ್ಚಿನದ್ದಕ್ಕೆ ಸಹಕರಿಸಿದವರು ಪ್ರೊ| ಎನ್.ಟಿ. ಭಟ್ ಮತ್ತು ಬಿಎ ವಿವೇಕರೈ.) ಅನಂತಮೂರ್ತಿ, ತೇಜಸ್ವಿಯಂಥವರ ಸಾಹಿತ್ಯ ಕೃತಿಗಳೂ ಜರ್ಮನ್ ರೂಪ ಪಡೆದದ್ದು ಕನ್ನಡದ ಭಾಗ್ಯವೆನ್ನಬೇಕು. ತಾಯಿನಾಡಿನಲ್ಲೇ ಅದನ್ನು ಉಪೇಕ್ಷೆಗೆ ಈಡು ಮಾಡುತ್ತಿರುವ ನಮಗೆ ಇದು ಪಾಠವೂ ಹೌದು. 

ಕತ್ರೀನ್ ಅವರೊಡನೆ ಅಜೀಂ ಪ್ರೇಮ್ಜಿ ವಿವಿ ನಿಲಯದ ಉದ್ಧಾಮ ಅಧ್ಯಾಪಕ ಕೆ. ನಾರಾಯಣ ಸಂವಾದ ನಡೆಸಿಕೊಟ್ಟರು. ಕತ್ರೀನ್ ಅವರ ಬುದ್ಧಿಪೂರ್ವಕ ಕನ್ನಡ ಸಾಧನೆ, ಸಹಜ ಸಂಭಾಷಣೆಗೊದಗುವಷ್ಟು ಶಕ್ತಿಯುತವಾದ್ದಲ್ಲ. ಹಾಗಾಗಿ ನಾರಾಯಣ ಅವರ ಪ್ರಶ್ನೆಗಳು ಬಯಸಿದಷ್ಟು ಸಮಾಧಾನಗಳನ್ನು ತರಲಿಲ್ಲ. ಕತ್ರೀನ್ ಹಿಂದೆ ಇಲ್ಲಿ ಅಧ್ಯಯನ ನಡೆಸುತ್ತಿದ್ದ ಕಾಲದಲ್ಲಿ ನನ್ನ ಅಂಗಡಿಗೆ ಹಲವು ಬಾರಿ ಬಂದಿದ್ದರು. ನಮ್ಮಲ್ಲಾದ ಮೊದಲ ದೀವಟಿಗೆ ಆಟಕ್ಕೆ ಆಕೆ ಸಾಕ್ಷಿಯಾಗಿದ್ದರು. ಒಂದೆರಡು ಸಂದರ್ಭಗಳಲ್ಲಿ
ಆಕೆ ಯಕ್ಷ ವೇಷದಲ್ಲಿ ಪಾತ್ರ ನಿರ್ವಹಣೆ ಮಾಡಿದ್ದನ್ನೂ ನಾನು ಕಂಡಿದ್ದೇನೆ. ಪ್ರಸ್ತುತ ಸಂವಾದದ ಪ್ರೇಕ್ಷಕರಿಗೂ ಅವರ ನಾಟ್ಯದ ಪರಿಚಯವಾಗುವಂತೆ ನಾರಾಯಣ್ ಕೋರಿದರು. ಆಕೆ ಮನ್ನಿಸಿ ನಾಲ್ಕು ಹೆಜ್ಜೆ ಹಾಕಿದರು. ಕತ್ರೀನ್‍ಗೆ ಸಂಜೀವರು ಗುರು ಮಾತ್ರವಲ್ಲ, ವಾಸಕ್ಕೆ ತಮ್ಮ ಹೆಂಡತಿ - ವೇದಾವತಿ, ಮತ್ತು ಮಕ್ಕಳಾದ - ಶಾಂತನು, ಶಿಶಿರರ ಜತೆಗಿನ ಮನೆಯ ಭಾಗವನ್ನೇ ಹಂಚಿಕೊಂಡ ಪಿತೃ ಸಮಾನರೂ ಹೌದು. ಇದನ್ನು ಸಮರ್ಥಿಸುವಂತೆ ಮುಂದೊಂದು ದಿನ ಆಕೆ ಜರ್ಮನಿಗೆ ಮರಳಿದ್ದವರು ತಾನು ಬಯಸಿದವನನ್ನು ಉಡುಪಿಗೆ ಕರೆತಂದು, ಸಂಜೀವ-ವೇದಾವತಿಯವರ ಹಿರಿತನದಲ್ಲಿ ಮದುವೆಯಾಗಿದ್ದರು! ಹಾಗೆ ಸಂವಾದದ ಕೊನೆಯಲ್ಲಿ ವೇದಾವತಿಯವರೂ ವೇದಿಕೆಗೆ ಬಂದು ಸೇರಿಕೊಂಡದ್ದು ಪ್ರೇಕ್ಷಕರಿಗೆ ಬಯಕೆ ಸಂದಾವಣೆಯ ಕುಶಿ ಕೊಟ್ಟಿತು. 

ಬನ್ನಂಜೆ ಸಂಜೀವ ಸುವರ್ಣರದು ಬಹಳ ಸಂಘರ್ಷಪೂರ್ಣ ಜೀವನ. ಕಡು ಬಡತನ, ಸಹಜವಾಗಿ ಓದಿನಿಂದ ವಂಚನೆ, ಜಾತಿಯ ತಡೆಗಟ್ಟೆಗಳು ಸಾಕಷ್ಟು ಬಾಧಿಸಿವೆ. ಆದರೆ ಮೊದಲಲ್ಲಿ ಗುಂಡಿಬೈಲು ನಾರಾಯಣ ಶೆಟ್ಟರು, ಮುಂದುವರಿದ ಕಾಲದಲ್ಲಿ ಶಿವರಾಮ ಕಾರಂತರು ಇವರಿಗೆ ಬಹಳ ದೊಡ್ಡ ಅವಕಾಶಗಳನ್ನು ಮಾಡಿಕೊಟ್ಟರು. ಅಲ್ಲೆಲ್ಲ ಕಲೆಯಿಂದ ತತ್ಕಾಲೀನ ಜೀವನಕ್ಕೆ ಉಪಯುಕ್ತತೆಯನ್ನು ಕಂಡುಕೊಳ್ಳುವುದು ಬಿಟ್ಟು, ಮತ್ತಷ್ಟು ಕಲಿಕೆಯ ಅವಕಾಶಗಳನ್ನು ಬೆಂಬತ್ತಿ, ದಕ್ಕಿಸಿಕೊಳ್ಳುತ್ತ ಬೆಳೆದದ್ದು, ಸಂಜೀವರ ಸಾಧನೆ. ಹಾಗೆ ಕಲಿತದ್ದನ್ನು ಕೇಳಿ ಬಂದವರಲ್ಲೆಲ್ಲ ನಿಶ್ಶರ್ತವಾಗಿ ಹಂಚಿಕೊಂಡದ್ದು ಸಂಜೀವರ ಔದಾರ್ಯ. ತನ್ನ ಬಾಲ್ಯದಂತೆ ಯೋಗ್ಯತೆಯಿದ್ದೂ ಬಡತನ, ಜಾತಿಯ ಹಿಂದುಳಿಯುವಿಕೆಗಳಿಂದ ಕಳೆದು ಹೋಗಲಿದ್ದ ಕೆಲವೇ ಮಕ್ಕಳಿಗಾದರೂ ಇಂದು ಯಕ್ಷಗಾನ ಕೇಂದ್ರದ ಬಾಗಿಲು ತೆರೆದಿಟ್ಟು, ಜತೆಗೇ ಔಪಚಾರಿಕ ಶಾಲಾಶಿಕ್ಷಣವನ್ನೂ ವ್ಯವಸ್ಥೆ ಮಾಡುವ ಮಟ್ಟಕ್ಕೆ ಬೆಳೆದದ್ದು ಸಂಜೀವರ ದೊಡ್ಡಸ್ತಿಕೆ. ಸರಳ ಜೀವನ ನಿರ್ವಹಣೆಗೆ ಸಂಸ್ಥೆಯ ವೇತನವೊಂದನ್ನುಳಿದು, (ಅಪ್ರಯತ್ನದಿಂದ) ಬಂದೆಲ್ಲ ಪ್ರಶಸ್ತಿ, ಪುರಸ್ಕಾರಗಳನ್ನು ಸಂಜೀವರು ಯಕ್ಷಗಾನ ಕೇಂದ್ರಕ್ಕೆ ಕೊಡುತ್ತ ಬಂದಿದ್ದಾರೆ. ಸಣ್ಣ ಒಂದೇ ಉದಾಹರಣೆ: ನಮ್ಮಲ್ಲಿ ಬಹುಮಂದಿ ಹಲವು ಸರ್ಕಸ್ಸುಗಳೊಡನೆ ಬೆಂಬತ್ತುವುದು - ವಾರ್ಷಿಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ. ಇದು ಯಾವುದೇ ಪ್ರಯತ್ನ ಮಾಡದೆಯೂ ಬರುತ್ತದೆ ಎನ್ನುವಾಗ, ಹೆಚ್ಚು ಕಡಿಮೆ ಐದು ಸಲ ಸ್ಪಷ್ಟ ನಕಾರ ಕೊಟ್ಟವರು ಸಂಜೀವ ಸುವರ್ಣ. ಆದರೂ ಒಂದು ಹಂತದಲ್ಲಿ, ಇವರು ಅಭಿಮಾನೀ ವರ್ಗದ ಒತ್ತಡದಲ್ಲಿ ಆ ಪ್ರಶಸ್ತಿ ಸ್ವೀಕರಿಸಲೇಬೇಕಾಯ್ತು. ಆಗ ಇವರು ಮಾಡಿದ್ದೇನು - ಪ್ರಶಸ್ತಿ ಮೊತ್ತಕ್ಕೆ ಪದಕವನ್ನೂ ಮಾರಿ ಬಂದ ಮೊತ್ತ ಸೇರಿಸಿ, ಯಕ್ಷಗಾನ ಕೇಂದ್ರಕ್ಕೇ ಉಡುಗೊರೆ! 

ಉಡುಪಿಯದೇ ಬಹುಖ್ಯಾತಿಯ ಯಕ್ಷಗಾನ ಕಲಾರಂಗಕ್ಕೆ ಇದುವರೆಗೆ ಬಡಗು ತಿಟ್ಟು ಯಕ್ಷಗಾನದ ಅದ್ವಿತೀಯ ಗುರು ಬನ್ನಂಜೆ ಸಂಜೀವ ಸುವರ್ಣರಿಗೆ ಪ್ರಶಸ್ತಿ ಕೊಟ್ಟಿಲ್ಲ ಎನ್ನುವ ಒಂದು ಕೊರಗು ಉಳಿದಿತ್ತು. ಕಾರಣ ಒಂದೇ - ಪ್ರಸ್ತಾವ ಬಂದಾಗೆಲ್ಲ ಸಂಜೀವರ ನಕಾರ. ಬನ್ನಂಜೆಯವರ ಶಿಷ್ಯಕೋಟಿಯಲ್ಲಿ ಪ್ರಾಯದಲ್ಲಿ ಹಿರಿಯರೇ ಆದ ಡಾ| ಭಾಸ್ಕರಾನಂದ ಕುಮಾರ್ ಕೂಡಾ ಒಬ್ಬರು. ಈ ಸಲ ಬನ್ನಂಜೆ ಶಿಷ್ಯ ಹಾಗೂ ಅಭಿಮಾನೀ ಬಳಗ ಭಾಸ್ಕರಾನಂದರ ನೇತೃತ್ವದಲ್ಲಿ ತತ್ಕಾಲೀನ ಸಮಿತಿ ಮಾಡಿ, ತಪ್ಪಿಸಿಕೊಳ್ಳಲಾಗದ ಒತ್ತಡ ತಂದದ್ದಕ್ಕೇ ವ್ಯವಸ್ಥೆಗೊಂಡಿತ್ತು - ‘ಕರುಣ ಸಂಜೀವ’ ಹೆಸರಿನ ಸಮ್ಮಾನ ಸಮಾರಂಭ. ಯಕ್ಷಗಾನ ಕಲಾರಂಗದ ‘ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ’ ಪ್ರದಾನವನ್ನೂ "ನಭೂತ" ಎನ್ನುವಂತೆ ಇದಕ್ಕೆ ಸೇರಿಸಿದರು. ಹಾಗೆ ದಿನದ ಮೂರನೇ ಅವಧಿಯ ಪ್ರಧಾನ ಕಲಾಪ ಗುರು ಬನ್ನಂಜೆ ಸಂಜೀವ ಸುವರ್ಣ ಅಭಿನಂದನೆ. 

ಸಂಜೀವರು ತನ್ನ ಸಾರ್ವಕಾಲಿಕ ಗುರುವನ್ನಾಗಿ ಗುರುತಿಸುವಲ್ಲಿ ಮೊದಲಿಗೆ ಗುಂಡಿಬೈಲು ನಾರಾಯಣ ಶೆಟ್ಟರಿದ್ದರೆ, ಅದ್ವಿತೀಯರು - ಶಿವರಾಮ ಕಾರಂತ! ಕಾರಂತರ ಕೊನೆಗಾಲದವರೆಗೂ ಮನೆ ಮಗನಂತೇ ಇದ್ದ ಸಂಜೀವರಿಗೆ ಗುರುಪುತ್ರಿ, (ಸಂಜೀವರೇ ಹೇಳಿಕೊಳ್ಳುವಂತೆ ಅಕ್ಕ,) ಸ್ವತಃ ಒಡಿಸ್ಸಿ ನೃತ್ಯ ವಿದುಷಿ ಕ್ಷಮಾ (ಕಾರಂತ) ರಾವ್ ದೂರದ ಚೆನ್ನೈಯಿಂದ ಬಂದದ್ದೇ ದೊಡ್ಡ ಸಮ್ಮಾನ. ಕ್ಷಮಾ ಅಷ್ಟೇ ಆತ್ಮೀಯತೆಯಿಂದ ಅಭಿನಂದಿಸಿದರು. ಸಂಜೀವರ ಆತ್ಮಕಥೆಯನ್ನು ಧಾರಾವಾಹಿಯಾಗಿ ಪ್ರಕಟಿಸಿದ್ದು ಪ್ರಜಾವಾಣಿ ದಿನಪತ್ರಿಕೆ. ಆ ನೆಲೆಯಲ್ಲಿ ಬರಲೊಪ್ಪಿದ್ದ ಪ್ರಧಾನ ಸಂಪಾದಕ ಶಾಂತಕುಮಾರ್ ಕಡೇ ಗಳಿಗೆಯ ತುರ್ತಿನಲ್ಲಿ ಬಾರದುಳಿದಿದ್ದರು. ಆದರೆ ಸಮರ್ಥ ಪ್ರತಿನಿಧಿಯಾಗಿ ಎನ್.ಎ.ಎಂ ಇಸ್ಮಾಯಿಲ್ ಅವರೊಡನೆ ಶುಭ ಸಂದೇಶ ಕಳಿಸಿದ್ದರು. 

ಕರ್ನಾಟಕ ಸಂಗೀತದ ಮಹಾನ್ ಚಿಂತಕ, ಕಲಾಕಾರ ಟಿ.ಎಂ ಕೃಷ್ಣ, ಸಂಜೀವರ ಹಿರಿತನವನ್ನು ಸರಿಯಾಗಿಯೇ ಗುರುತಿಸಿ, ದಿನದ ಕೊನೆಯ ಕಲಾಪವಾಗಿ ತಮ್ಮ ಕಲಾಪ್ರಸ್ತುತಿಯನ್ನು ಉಚಿತವಾಗಿಯೇ ಕೊಡಲು ಬಂದವರಿದ್ದರು. ಸಮ್ಮಾನ ಕಲಾಪಪಟ್ಟಿಯಲ್ಲಿ ಅವರ ಹೆಸರಿರಲಿಲ್ಲ. ಆದರೂ ಅವರು ಸ್ವಾತಂತ್ರ್ಯ ವಹಿಸಿ, ಸಂಜೀವ ಸಮ್ಮಾನಕ್ಕೆ ಕಳಶವಿಡುವ ಮಾತಾಡಿದರು. ಯಾವುದೇ ವ್ಯಕ್ತಿ ಅದೆಷ್ಟೇ ಉತ್ತಮವಾಗಿ ಕಲಾಪ್ರಸ್ತುತಿ ಮಾಡಿದರೂ ದೊಡ್ಡವನಾಗಬೇಕೆಂದಿಲ್ಲ. ಬದಲಿಗೆ ಆತ ಆಯ್ದುಕೊಂಡ ಕಲೆಯಲ್ಲಿ ಪೂರ್ಣ ಮುಳುಗಿದರೆ ನಿಜದ ಸಾಧಕನೆನಿಸಿಕೊಳ್ಳುತ್ತಾನೆ (Do art ಮತ್ತು live art). ಕಲೆಯಲ್ಲಿ ‘ಸಂಪ್ರದಾಯ’ ಎಂದು ಭ್ರಮಿಸುವ ಬಹುತೇಕ ಅಂಶಗಳು ನಿಜದಲ್ಲಿ ಹೇರಿದ ಅಲಂಕಾರಗಳು. ಅವನ್ನು ಮೀರಿ ಕಲೆಯ ನಿಜ ಸತ್ತ್ವವನ್ನು ಗ್ರಹಿಸಿ, ತೊಡಗಿಸಿಕೊಳ್ಳುವಲ್ಲಿ ಸಂಜೀವರನ್ನು ಟಿ.ಎಂ. ಕೃಷ್ಣ ಗುರುತಿಸಿ, ಅಭಿನಂದಿಸಿದರು. 

‘ಬನ್ನಂಜೆ’ ಹೆಸರಿನೊಡನೆ ಸೇರಿ ಬರುವ ಇನ್ನೋರ್ವ ಖ್ಯಾತಿವಂತ - ಬನ್ನಂಜೆ ಗೋವಿಂದಾಚಾರ್ಯ. ಲೆಕ್ಕಕ್ಕೆ ಇವರದು ಅಧ್ಯಕ್ಷೀಯ ನೆಲೆಯಾದರೂ ನಿರ್ವಹಣೆ ಮತ್ತು ಮಾತು ಸಂಜೀವರಿಗೆ ತೀರಾ ಆಪ್ತವಾಗಿತ್ತು. ಅವರು ವೈಯಕ್ತಿಕವಾಗಿ ಸಂಜೀವರಿಗೆ ಪ್ರತ್ಯೇಕ ಶಾಲು ಹೊದಿಸಿ, ಪಕ್ಕದಲ್ಲೇ ಕುಳಿತಿದ್ದ ಸಂಜೀವರನ್ನೇ ಉದ್ದೇಶಿಸಿ ಮಾತಾಡಿದಂತನ್ನಿಸಿದ್ದು ಕೇಳುಗರೆಲ್ಲರಿಗೂ ಆತ್ಮೀಯವೇ ಆಗಿತ್ತು. ಹಾಗೇ ದಿನದ ವಿವಿಧ ವೇಳೆಗಳಲ್ಲಿ ಸಮಿತಿ ಹಾಗೂ ಕಲಾರಂಗದ ವಿವಿಧ ಪದಾಧಿಕಾರಿಗಳು ನಿರ್ವಹಣೆ, ನಿರೂಪಣೆಗಳಿಗಷ್ಟೇ ನಿಂತರೂ ಯಥೋಚಿತವಾಗಿ ನಡೆಸುತ್ತಿದ್ದ ಸಂಜೀವಸ್ತುತಿಯಾದರೂ ಭಾವಪೂರ್ಣವೇ ಇರುತ್ತಿತ್ತು ಎಂದಷ್ಟೇ ಹೇಳಬಲ್ಲೆ. 

ಈಚೆಗೆ ಯಾವುದೋ ಟೀವೀ ಛಾನೆಲ್ಲಿನಲ್ಲಿ, ಹಿಂದಿ ಸಿನಿ-ಹಾಡಿಗೆ ಯಕ್ಷ-ವೇಷಗಳು ಕುಣಿದವು. ಇದು ಯಕ್ಷ-ಸಂಪ್ರದಾಯಕ್ಕೆ ವಿರುದ್ಧವಾದದ್ದು ಎಂದೇ ಭಾರೀ ಪ್ರತಿಭಟನೆಯ ಅಲೆ ಎದ್ದಿದೆ. ತಮಾಷೆ ಎಂದರೆ ಇಂಥವೇ ಹಲವು ಪ್ರಯೋಗಗಳು ಯಕ್ಷಗಾನ ವೃತ್ತಿಮೇಳ ಮತ್ತು ರಂಗಗಳಲ್ಲೇ ಆಗುತ್ತಿವೆ. ಬರಿಯ ಹಾಡಿನ ತುಣುಕಲ್ಲ, ಇಡಿ ಇಡೀ ಸಿನಿಮಾವೇ ಯಕ್ಷಾವತಾರ ಎತ್ತುವುದನ್ನು ಕೇಳಿದ್ದೇವೆ, ಕಂಡಿದ್ದೇವೆ. ಅವಕ್ಕೆಲ್ಲ ಸಣ್ಣ ಪುಟ್ಟ ವಿರೋಧಗಳು ಬಂದದ್ದೂ ಆಗಿದೆ. ಆದರೆ ಇನ್ನೊಂದು ಮುಖದಲ್ಲಿ, ಅಂಥವೇ ಪ್ರಯೋಗಗಳಾದ ಶಿವರಾಮ ಕಾರಂತರ ಯಕ್ಷಗಾನ (ಬ್ಯಾಲೇ), ಶತಾವಧಾನಿ ಗಣೇಶ್ ಮತ್ತು ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತೀ, ರಂಗಭೂಮಿಯಲ್ಲಿ (ನೀನಾಸಂ, ರಂಗಾಯಣ....) ಕೆಲವು ಆಧುನಿಕ ನಾಟಕಗಳು ಪಡೆಯುವ ಯಕ್ಷಗಾನ ನಡೆಗಳನ್ನೂ ನಾವು ಮರೆಯುವಂತಿಲ್ಲ. ಇವುಗಳನ್ನೂ ಸಾಕಷ್ಟು ಮಂದಿ ಮತ್ತೆ ಸಂಪ್ರದಾಯದ ಹೆಸರಿನಲ್ಲೇ ವಿರೋಧಿಸಿದ್ದಾರೆ. ನಿಜದಲ್ಲಿ ಆಗಬೇಕಾದದ್ದು ಪ್ರಯೋಗಗಳ ಹಿನ್ನೆಲೆಯಲ್ಲಿರುವ ಅಧ್ಯಯನ ಮತ್ತು ಕಲಾಕಾಳಜಿಯ ಮೌಲ್ಯಮಾಪನ. ನಿರೀಕ್ಷೆಗೆ ಬರಲಿಲ್ಲವೆಂದರೆ ಬೊಬ್ಬೆಯಲ್ಲ, ಉಪೇಕ್ಷೆ. ಇದು ಬನ್ನಂಜೆ ಸಂಜೀವ ಸುವರ್ಣರ ನಿಲುವು. ಇಂದು ಬನ್ನಂಜೆಯವರು ರಾಷ್ಟ್ರೀಯ ನಾಟಕ ಶಾಲೆ, ಮರಾಠೀ ದಶಾವತಾರ ಮೇಳ, ಅಕ್ಷಯಾಂಬರ ಎನ್ನುವ ಯಕ್ಷಗಾನ ವೃತ್ತಿರಂಗವನ್ನೇ ತೀವ್ರ ವಿಮರ್ಶೆಗೊಳಪಡಿಸುವ ನಾಟಕಗಳಿಗೆಲ್ಲ ಯಾವ ಹಿಂಜರಿಕೆಯಿಲ್ಲದ ತರಬೇತುದಾರನಾಗಿದ್ದಾರೆ. ಮಗುವಿನಿಂದ ಮುದುಕನವರೆಗೆ ಬಯಸಿ ಬಂದ ಯಾರಿಗೂ ಯಾವುದೇ ವೇಳೆಯಲ್ಲೂ ಸ್ವತಃ ತಾವೇ ಹಾಡು, ವೇಷ, ಬಣ್ಣ, ಪ್ರದರ್ಶನಗಳಿಗೆ ನಿಂತು ಅಸಂಖ್ಯ ಪ್ರಯೋಗ ಮಾಡುವಲ್ಲಿ ಸಂಜೀವರಿಗೆ ಯಾವ ಹಿಂಜರಿಕೆಯೂ ಇಲ್ಲ. ಹಾಗೆಂದು ವೈಯಕ್ತಿಕ ಆದಾಯ, ಕನಿಷ್ಠ ನಿಜದ ಹೊಗಳಿಕೆಯನ್ನು ಸಂಜೀವರು ಒಪ್ಪರು. 

ಅಭಿನಂದನಾ ಸಭೆಗಳೆಲ್ಲ ವ್ಯಕ್ತಿಪೂಜೆಗಳು. ಸಾಮಾನ್ಯವಾಗಿ ನಡೆಯುತ್ತಿರುವುದೆಲ್ಲ ಸಂಘ ಕಟ್ಟಿದ್ದಕ್ಕೆ ಕಲಾಪ ಹೊಸೆಯುವ ಅನಿವಾರ್ಯತೆ, ದಾನಿಗಳನ್ನು ಹಿಂಡಿದ್ದಕ್ಕೆ ಪ್ರಶಸ್ತಿ, ಪುರಸ್ಕಾರಗಳನ್ನು ವರ್ಷಾವಧಿ ವಿನಿಯೋಗವಾಗಿಸುವ ಹರಕೆಗಳು. ಇದು ಕೊಡುವವರ ಅಧಿಕಾರದ ಬಲ, ಪ್ರಚಾರಪ್ರೀತಿಯನ್ನು ತಣಿಸುವುದರೊಂದಿಗೆ, ಪಡೆಯುವವರಿಗೆ ತತ್ಕಾಲೀನ ಧನ್ಯತೆಯನ್ನು (ಆರ್ಥಿಕವಾಗಿಯೂ) ತರುವುದೂ ನಿಜ. ಆದರೆ ಅಗತ್ಯ, ಔಚಿತ್ಯಗಳನ್ನು ಹೆಚ್ಚಾಗಿ ಮರೆತೇ ನಡೆಯುವ ಇಂಥ ಕಲಾಪಗಳು ಸಂಜೀವರಿಗೆ ಹಿಡಿಸದು. ಹಾಗಾಗಿ ಸಂಜೀವರು ‘ಕರುಣ ಸಂಜೀವ’ದಲ್ಲಿ ಹಣ ಯಕ್ಷಗಾನ ಕೇಂದ್ರಕ್ಕೆಂದೂ ಸಮ್ಮಾನ ಯಕ್ಷ ಕಲಾಪ್ರಸರಣಕ್ಕೆಂದೂ ಸಂಕಲ್ಪಿಸಿದಂತೇ ದಿನದ ಕಲಾಪಗಳೆಲ್ಲ ನಡೆದವು. ನನ್ನ ಈ ವಿರಾಮದ ಬರವಣಿಗೆಯಲ್ಲಿ ದಿನದ ಒಟ್ಟಾರೆ ಕಲಾಪಗಳು ಟಿ.ಎಂ. ಕೃಷ್ಣರ ಮಾತಿಗೊಂದು (ಸಂಪ್ರದಾಯ ನಿಜಸತ್ತ್ವಕ್ಕೆ ಹೇರಿದ ಅಲಂಕಾರ) ಪ್ರಾಯೋಗಿಕ ನಿದರ್ಶನದಂತೇ ಭಾಸವಾಗುತ್ತದೆ. 

ಸುವರ್ಣರು ಅಭ್ಯಾಸಿಯ ಮುಕ್ಕಾಲು ಪ್ಯಾಂಟಿನ ಮೇಲೊಂದು ಅಂಗಿಯನ್ನಷ್ಟೇ ಹಾಕಿ ಸಮ್ಮಾನ ಸ್ವೀಕರಿಸಿದರು. ಅನಂತರದ ಒಂದೆರಡು ದಿನಗಳಲ್ಲೇ ಸಂಜೀವರು ಪ್ರಶಸ್ತಿಯೊಡನೆ ಬಂದ ಹಣಕ್ಕೆ ತನ್ನ ದೇಣಿಗೆಯ ಅಂಶವನ್ನೂ ಸೇರಿಸಿ ಯಕ್ಷಗಾನ ಕೇಂದ್ರಕ್ಕೆ ಕೊಟ್ಟದ್ದನ್ನು ನಾವೆಲ್ಲ ಪತ್ರಿಕೆಗಳಲ್ಲಿ ನೋಡಿದ್ದೇವೆ. 
ಒಟ್ಟು ಸಮಾರಂಭಕ್ಕೆ ಸುಂದರ ಮಂಗಳಗೀತಗಳನ್ನೇ ಕರ್ನಾಟಕ ಶಾಸ್ತ್ರೀಯ ಶೈಲಿಯಲ್ಲಿ, ದಿನದ ಕೊನೆಯ ಕಲಾಪವಾಗಿ ಕೊಟ್ಟವರು ಟಿ.ಎಂ. ಕೃಷ್ಣ. ಅವರ ಗಾನಯಾನದ ಸಹಯಾನಿಗಳಾದ ಪಿಟಿಲಿನ ಅಕ್ಕರೈ ಶುಭಲಕ್ಷ್ಮಿ, ಮೃದಂಗದ ಜಯಚಂದ್ರ ರಾವ್ ಮತ್ತು ಖಂಜಿರದ ಜಿ. ಗುರುಪ್ರಸನ್ನರು ಸಭೆಯ ಶ್ರವಣ ಸುಖವನ್ನು ಅಪೂರ್ವವಾಗಿ ವರ್ಧಿಸಿದರು. 

ಸಂಜೀವರು ತನ್ನ ಬಾಲ್ಯದ ಹಂತ ಮತ್ತು ಸ್ಥಿತಿಯಲ್ಲಿರುವ ಇಂದಿನ ಮಕ್ಕಳಿಗೆ, ತಾನು ಕಂಡುಕೊಂಡ ಜೀವನದ ದಾರಿಯನ್ನು ತೋರುವಲ್ಲಿ, ಹಸಿವಿನ ಕಷ್ಟ ಬಾಧಿಸದಂತೆ, ಆಶ್ರಯದ ಭಯ ಕಾಡದಂತೆ, ನಿರ್ವಿದ್ಯೆಯ ಕೊರಗು ಉಳಿಯದಂತೆ ತನ್ನೆಲ್ಲ ಮಿತಿಗಳಲ್ಲಿ ಪ್ರಯತ್ನಿಸುತ್ತಿರುವುದಕ್ಕೇ ಒಟ್ಟು ಸಮಾರಂಭವನ್ನು ‘ಕರುಣ ಸಂಜೀವ’ ಎಂದು ಹೆಸರಿಸಿ, ನಡೆಸಿದ್ದು ಸಾರ್ಥಕ. ಸಾಹಿತ್ಯದ ಒಡನಾಟ ಏನೂ ಇಲ್ಲದ ಬನ್ನಂಜೆ ಸಂಜೀವ ಸುವರ್ಣರ ಆತ್ಮಕಥನಕ್ಕೆ ಪೃಥ್ವೀರಾಜ್ ಕವತ್ತಾರು ‘ನಿರೂಪಕ’ ಎನ್ನುವುದು ತೀರಾ ವಿನಯದ ಮತ್ತು ಸಾಮಾನ್ಯ ಬಳಕೆಯಲ್ಲಿರುವ ಶಿಷ್ಟ ಹೆಸರು ಮಾತ್ರ. ಮೊದಲಲ್ಲಿ ಸರಿ ಸುಮಾರು ಅರವತ್ತು ವರ್ಷಗಳ (೬೦ ಗುಣಿಸು ೩೬೫ ಗುಣಿಸು ೨೪ ಗುಣಿಸು ಅರವತ್ತು ಗುಣಿಸು ಮತ್ತೆ ಅರವತ್ತು ಕ್ಷಣಗಳ), ಕನಿಷ್ಠ ಅರವತ್ತು ಪ್ರದೇಶಗಳ (ಸಭೆಯಲ್ಲಿ ಹೇಳಿದಂತೆ ಸುಮಾರು ಐವತ್ತಕ್ಕೂ ಮಿಕ್ಕು ವಿದೇಶಗಳೇ ಇವೆ!), ಅಸಂಖ್ಯ ಒಡನಾಟಗಳ, ಅಡ್ಡಾದಿಡ್ಡೀ ಚದುರಿಹೋದ ನೆನಪುಗಳ ಸಂಗ್ರಹ ಸಣ್ಣ ಕೆಲಸವಲ್ಲ. ಮತ್ತೆ ಅವುಗಳ ಮೇಲಿನ ಕಾಲಪ್ರಭಾವವನ್ನು (ದೂಳು, ಸವಕಳಿ...) ತೊಡೆದು, ಮಹಾ ‘ಜಿಗ್ಸಾ ಪಝಲ್ಲಿ’ನಂತೆ (ದೊಡ್ಡ ಚಿತ್ರವೊಂದನ್ನು ಹತ್ತೆಂಟು ಚೂರು ಮಾಡಿ, ಕಲಸಿ, ಮಕ್ಕಳಿಗೆ ಜೋಡಿಸಲು ಕೊಡುವ ಆಟ) ಒಂದು ಬಂಧಕ್ಕೆ ತಂದು, ಲೋಕಾರ್ಪಣೆಗೆ ತಕ್ಕ ಭಾಷೆ, ವಿಷಯಕ್ಕೆ ನ್ಯಾಯ ತಪ್ಪದಂತೆ ಸಂಗ್ರಹ ಮಾಡಿ, ಕೊನೆಯಲ್ಲಿ ಒಂದು ಬಂಧದಲ್ಲಿ, ಸುಂದರ ಮುದ್ರಣದಲ್ಲಿ ತರುವ ಜವಾಬ್ದಾರಿ ಯಾವ ಸೃಜನಾತ್ಮಕ ಬರವಣಿಗೆಗೆ ಕಡಿಮೆಯದ್ದಲ್ಲ, ಬಹಳ ದೊಡ್ಡದು. ಇದನ್ನು ಸಮರ್ಥವಾಗಿಯೇ ಪೃಥ್ವೀರಾಜ ಕವತ್ತಾರು ನಡೆಸಿದ್ದಾರೆ. ಹಾಗೆ ಒಂದು ತರದಲ್ಲಿ ಬನ್ನಂಜೆಯವರ ನಾಡಿಮಿಡಿತ ತಿಳಿದಿರುವುದರಿಂದಲೇ ಪೃಥ್ವೀರಾಜ್‍ಗೆ ‘ಕರುಣ ಸಂಜೀವ’ ಸಮಾರಂಭವನ್ನು ಪೂರ್ಣ ಮುಂಗಂಡು, ಯಶಸ್ವಿಯಾಗಿ ನಡೆಸುವುದು ಸಾಧ್ಯವಾಗಿದೆ. ಅವರಿಗೆ ನಮ್ಮೆಲ್ಲರ ಅನಂತ ಧನ್ಯವಾದಗಳು.

6 comments:

 1. Very meaningful, exclusive, critical review of an historic programme. I am lucky , I participated and enjoyed the whole programme. Thank you.

  ReplyDelete
 2. ವರ್ಧನರೇ..... ಕಾರ್ಯಕ್ರಮದ ಬಗ್ಗೆ ನೀವು ಬರೆದ ವಿವರಣೆಗಳು ತುಂಬಾ ಮಾರ್ಮಿಕ....ಕಾರ್ಯಕ್ರಮವೇ ಹಾಗಿತ್ತು...ಕಾರ್ಯಕ್ರಮ ಮುಗಿಸಿ ಹೊರಬರುವಾಗ ಏನೋ ಒಂದು ಶಕ್ತಿ ಸಂಚಾರ ಆಗಿದ್ದು ನನ್ನ ಅನುಭವ....

  ReplyDelete
 3. ಧನ್ಯವಾದಗಳು.ಸಮಾರಂಭಕ್ಕೆ ಬರಲಾಗದಿದ್ದರೂ ಬಂದಂತೆ ಅನಿಸಿತು.ಸಂಜೀವರ ಸಾಂಪ್ರದಾಯಿಕ ಹೆಜ್ಜೆಗಳ ಕುಣಿತಗಳು,ಕುಣಿತಗಳ ಬಿಡ್ತಿಗೆಗಳು--ಎಲ್ಲವೂ ಗಮನಾರ್ಹ.ಇಡೀ ಸಮಾರಂಭವೇ ಅರ್ಥಪೂರ್ಣವಾಗಿದೆ.ವಿಡಿಯೋ ಗಳನ್ನು ತಿರುತಿರುಗಿ ನೋಡಿ ಮನನ ಮಾಡುವಂತಿದೆ.

  ReplyDelete
 4. Ashok, wonderful commentary on Sanjeeva Suvarna felicitation. Reminded me of my father dancing on his 90th birthday felictation with Hiiriadka Gopala Rao playing Maddale and a respected Uttara Kannada Bhagavatha singing.. In Kota High school.. Sanjeevas memoirs with accounts of how KSK mentored him are so moving and heartfelt. Thanks for sharing. Best.

  ReplyDelete
 5. very nice sir.... thank you so much for this valuable information...

  ReplyDelete
 6. ಲೇಖನವನ್ನು ಸ್ವಲ್ಪ ತಡವಾಗಿ ಓದಿದೆ. ಕಲಾಗುರು, ಸಮರ್ಥ ಸಾಧಕ ಬನ್ನಂಜೆ ಸಂಜೀವ ಸುವರ್ಣರು, ಹಾಗೂ ಇಂತಹ ನೈಜ ಸಾಧಕನ ನಿರಾಡಂಬರ ಸನ್ಮಾನಕ್ಕೆ ಶ್ರಮಿಸಿದವರು ಅಭಿನಂದನಾರ್ಹರು. ಕಾರ್ಯಕ್ರಮದ ವಿವರಣೆಯನ್ನು ತಮ್ಮದೇ ಶೈಲಿಯಲ್ಲಿ ಅಭಿಪ್ರಾಯಗಳೊಂದಿಗೆ ನಮ್ಮ ಮುಂದೆ ತೆರೆದಿಟ್ಟ ಅಶೋಕವರ್ಧನರಿಗೆ ಧನ್ಯವಾದಗಳು.

  ReplyDelete