18 April 2018

‘ಸಮುದ್ರ’ದ ತಡಿಯಲ್ಲಿ.... ನೊರೆತೆರೆಗಳಿಗಂಜಿದೊಡೆಂತಯ್ಯಾ

(ಚಿತ್ರ ನಿರ್ಮಾಣದ ಅನಧಿಕೃತ ಕಥನ - ೪) 


‘ಪಡ್ಡಾಯಿ’ (ಪಶ್ಚಿಮ) - ಬರಿಯ ದಿಕ್ಕಲ್ಲ, ಈ ವಲಯದ ಮೀನುಗಾರರ ಜೀವನದ ಅವಿಭಾಜ್ಯ ಅಂಗವೇ ಆದ ಪಶ್ಚಿಮದ ಸಮುದ್ರವೇ ಆಗಿದೆ. ಸಹಜವಾಗಿ ಪಡ್ಡಾಯಿ ಸಿನಿಮಾದಲ್ಲಿ ಸಾಮಾಜಿಕ ಸಂಘರ್ಷದ ಅನಿವಾರ್ಯ ಭಾಗವಾಗಿ ಪ್ರಾಕೃತಿಕ ದೃಶ್ಯಗಳ ಚಿತ್ರಣ ಧಾರಾಳವಿದೆ. ಹಾಗೆಂದು ಚಿತ್ರೀಕರಣವನ್ನು ವಿವಿಧ ಋತುಮಾನಗಳಿಗೆ ಹಂಚಿಕೊಂಡು ದೀರ್ಘ ಕಾಲ ನಡೆಸುವ ಅನುಕೂಲ ಅಭಯನಿಗಿರಲಿಲ್ಲ; ಇದು ‘ಮಿತ ಹಣಕಾಸಿನ ಯೋಜನೆ.’ ಅಭಯ ಮಳೆಗಾಲದ ಕೊನೆಯ ಭಾಗ ಅಥವಾ
ಮೀನುಗಾರಿಕಾ ಋತುವಿನ ಮೊದಲ ಭಾಗ ಆಯ್ದುಕೊಂಡಿದ್ದ. ಮತ್ತು ಒಂದೇ ಹಂತದ ಚಿತ್ರೀಕರಣವನ್ನು ನಡೆಸಿದ. ಅದರಲ್ಲಿ ದೃಶ್ಯಗಳ ವಾಸ್ತವ ‘ವ್ಯವಸ್ಥೆ’ಯನ್ನೇ ತಮ್ಮ ಅನುಕೂಲಕ್ಕೆ ಸಮರ್ಥವಾಗಿ ಬಳಸಿಕೊಳ್ಳುವುದರಲ್ಲೇ ತೃಪ್ತನಾದ. 

ಚಿತ್ರದ ವೆಚ್ಚ ಉಳಿಸುವ ಒತ್ತಡದಲ್ಲಿ ನಟವರ್ಗ ಬಹುತೇಕ ಉಡುಪು ತೊಡಪುಗಳನ್ನು ಉದಾರವಾಗಿ ತಾವೇ ಒದಗಿಸಿಕೊಂಡಿತ್ತು. ಚಿತ್ರೀಕರಣ ಸುಮಾರು ಮೂರು ವಾರಗಳ ಅಂತರದಲ್ಲಿ, ಅದೂ ಹೆಚ್ಚಾಗಿ ತಂಡದ ಹೆಚ್ಚಿನ
ಸದಸ್ಯರ ನೆಲೆಯಾದ ಮಂಗಳೂರಿಗೆ ದೂರದ ಮಲ್ಪೆ, ಉಡುಪಿ ಪರಿಸರದಲ್ಲಿ ನಿರಂತರ ನಡೆಯಿತು. ಹಾಗಾಗಿ ಆ ದಿನಗಳಲ್ಲಿ
ಇಡಿಯ ತಂಡಕ್ಕೆ ಯಾವುದೇ ವರ್ಗ (ನಿರ್ದೇಶಕ, ತಂತ್ರಜ್ಞ, ನಟ, ಸಹಾಯಕ ಇತ್ಯಾದಿ) ತಾರತಮ್ಯ ಇಲ್ಲದೆ ಉಡುಪಿಯ ಸಾಮಾನ್ಯ ಹೋಟೆಲೊಂದರ ಆರೆಂಟು ಕೋಣೆಗಳ ವಾಸ್ತವ್ಯ ಮುಕ್ತವಿತ್ತು. ಅನಿಯತ ಮಳೆ, ಕಡಲ ಸಾನ್ನಿಧ್ಯಗಳೊಡನೆ ಇವರ ಉಡುಪುಗಳು ಒದ್ದೆ, ಕೊಳೆಯಾಗುವುದನ್ನೆಲ್ಲ ಕಾಲಕಾಲಕ್ಕೆ ಒಂದು ಮಿತಿಯಲ್ಲಿ ಶುಚಿಗೊಳಿಸಲು ಅಲ್ಲೊಬ್ಬ ಧೋಬಿಯ ವ್ಯವಸ್ಥೆಯೂ ಆಗಿತ್ತು. ಆದರೆ ಚಿತ್ರೀಕರಣ ಹಗಲು ರಾತ್ರಿಯ ಬೇಧ ಎಣಿಸದೆ ಸಾಗಿದ ತೀವ್ರತೆಗೆ, ಬಟ್ಟೆಗಳು ಸಕಾಲಕ್ಕೆ ಒದಗದೇ ಕಷ್ಟವೂ ಆಗುವುದಿತ್ತು. ಚಿತ್ರೀಕರಣದ ಕಲಾಪ ಪಟ್ಟಿ (ಟೈಮ್ ಟೇಬಲ್), ಮತ್ತದರ ಅನುಸರಣೆ ಬಹಳ ಕರಾರುವಾಕ್ಕಾಗಿಯೇ ಇತ್ತು. ಹಾಗಾಗಿ ಬಿಡುವಿರುವ - ಮುಖ್ಯವಾಗಿ ನಟವರ್ಗದ ಮಂದಿ, ಸ್ವಂತ ಬಿಡಾರಗಳಿಗೆ ಹೋಗಿ ಬರುತ್ತಿದ್ದುದರಿಂದ, ಅಷ್ಟಷ್ಟು ದೋಭಿಯ ಹೊರೆ ಕಡಿಮೆ ಮಾಡುತ್ತಿದ್ದರು. ಆದರೂ ಮೂರುವಾರದ ‘ಯುದ್ಧ’ದ ಎಡೆಯಲ್ಲಿ, ಅಭಯ ಎರಡೋ ಮೂರೋ ಸಲ ಮಂಗಳೂರು ವಲಯದ
ಚಿತ್ರೀಕರಣಕ್ಕೆಂದು (ಅವನದೇ ಕಾರು, ಅವನದೇ ಚಾಲನೆಯಲ್ಲಿ), ಮನೆಗೆ ಬಂದಾಗ ಸ್ವಂತದ್ದು ಮಾತ್ರವಲ್ಲ ಎಂಬಂತೆ ರಾಶಿ ಚಂಡಿ, ಕೊಳೆ ಬಟ್ಟೆಗಳನ್ನು ತಂದು ಹಾಕುತ್ತಿದ್ದ. ಆ ಬಟ್ಟೆಗಳನ್ನು ನಾಲ್ಕೈದು ಕಂತುಗಳಲ್ಲಿ ನಮ್ಮ ವಾಶಿಂಗ್ ಮೆಶೀನಿಗೆ ಹಾಕಿದ್ದು, ಮಹಡಿಯ ದೊಡ್ಡ ಕೋಣೆಯಲ್ಲಿ ಉದ್ದಕ್ಕೆ ಮೂರು ನಾಲ್ಕು ಸಾಲು ಹಗ್ಗ ಕಟ್ಟಿ ಹರಗಿದ್ದು, ಬೇಗ ಒಣಗಲೆಂದು ಫ್ಯಾನ್ ಹಾಕಿದ್ದು, ಅನಿವಾರ್ಯವಾದವಕ್ಕೆ ಇಸ್ತ್ರಿಪೆಟ್ಟಿಗೆಯ ಭಾಗ್ಯ ಒದಗಿಸಿದ್ದು ನಮಗೆ ಬಹುಕಾಲಕ್ಕೆ ಮಧುರಸ್ಮೃತಿಗಳೇ ಆಗಿ ಉಳಿಯುತ್ತವೆ. ಇವನ್ನೆಲ್ಲ ಮೀರಿದ್ದು...... 

ಅದೊಂದು ದಿನ ಮಲ್ಪೆಯಲ್ಲೇ ಹಗಲಿನ ಚಿತ್ರೀಕರಣ ಎಂದಿನಂತೆ ನಡೆಯಿತು. ಹಿಂಬಾಲಿಸಿದಂತೆ ಯಕ್ಷಗಾನದ ಚೌಕಿಯ ಎಷ್ಟೋ ದೃಶ್ಯಗಳನ್ನು ರಾತ್ರಿ ಎರಡೋ ಮೂರೋ ಗಂಟೆಯವರೆಗೆ ಉಡುಪಿಯಲ್ಲಿ ಪೂರೈಸಿಕೊಂಡದ್ದೂ ಆಯ್ತು. ಮತ್ತೆ ಅದೇ ಅಪರಾತ್ರಿಯಲ್ಲಿ ಆಯ್ದ ಸಲಕರಣೆ ಮತ್ತು ತಂತ್ರಜ್ಞರನ್ನಷ್ಟೇ ತನ್ನ ಕಾರಿನಲ್ಲಿ ತುಂಬಿಕೊಂಡು ಅಭಯ ಮಂಗಳೂರಿಗೆ ಧಾವಿಸಿದ್ದ. ಆ ಸಮಯದಲ್ಲಿ ಉಳ್ಳಾಲದಾಚೆ ಕೆಲವೆಡೆಗಳಲ್ಲಿ ಕಡಲಕೊರೆತದ (ಪರೋಕ್ಷವಾಗಿ ಮನುಷ್ಯ ಪ್ರೇರಿತ) ಹಾವಳಿ ನಡೆದಿತ್ತು. ಅದನ್ನು ಸೂರ್ಯೋದಯದ
ಕಾಲದಲ್ಲಿ, ಕ್ಯಾಮರಾದಲ್ಲಿ ಹಿಡಿದಿಟ್ಟುಕೊಳ್ಳುವುದು ಇವನ ಯೋಜನೆ. ಕುಸಿದ ಮನೆ, ಉರುಳಿದ ತೆಂಗು, ಮರಳಿ ಮರಳಿ ಅಪ್ಪಳಿಸುವ ಭಾರಿ ಅಲೆಗಳು, ಭೋರಿಡುವ ಗಾಳಿಯ ವೈವಿಧ್ಯ ಹಿಡಿದಷ್ಟೂ ಮುಗಿಯದು. ಆ ಪ್ರಾಕೃತಿಕ ವಿಕೋಪದೊಡನೆ ನಿರ್ದೇಶಕನ ದೃಶ್ಯ ಬಯಕೆ ಮತ್ತು ಚಿತ್ರಗ್ರಾಹಿ ವಿಷ್ಣುವಿನ ಕೋನದ ಆಯ್ಕೆಗಳನ್ನು ಕೇಳಿಕೊಂಡು (ಬೆಂಗಳೂರಿನಿಂದ ಕ್ಯಾಮರಾದ ಜತೆಗೇ ಬಂದ) ಸಿಬ್ಬಂದಿ ತಿಣುಕಾಡುತ್ತಿದ್ದರು. ಧ್ವನಿಗ್ರಹಣದ ಜೆಮಿಡಿಸಿಲ್ವಾ ಕೂಡಾ ಹಲವು ಪೇಚುಗಳನ್ನು ಸುಧಾರಿಸಿಕೊಳ್ಳುತ್ತಿದ್ದರು. ನಿಮಗೆ
ತಿಳಿದಿರಬೇಕು, ಇವರ ಕ್ಯಾಮರಾ ಸೇರಿದಂತೆ ಯಾವುದೇ ಸಲಕರಣೆಗೂ ನೀರು, ಅದರಲ್ಲೂ ಕಡಲ ಉಪ್ಪು ನೀರಿನ ಸಂಪರ್ಕ ಪ್ರಿಯವಲ್ಲ. ಹೀಗೆ ಒಮ್ಮೆ ಕಡಲಿಗೆ ಬೆನ್ನು ಹಾಕಿ, ಕುಸಿಯುತ್ತಿದ್ದ ಒಂದು ಮನೆಯತ್ತ ದಿಟ್ಟಿ ಹೂಡಿ ಚಿತ್ರೀಕರಣ ನಡೆದಿತ್ತಂತೆ. ಪಾರಂಪರಿಕ ನಂಬಿಕೆಯಂತೆ ಏಳನೆಯ ಅಲೆಯೂ ಇರಬಹುದು - ದೊಡ್ಡದು, ಇವರ ಎಚ್ಚರಿಕೆಯ ಮಿತಿಯನ್ನೂ ಮೀರಿ ಹಿಂದಿನಿಂದ ಅಪ್ಪಳಿಸಿತ್ತಂತೆ. ಸಮಯಪ್ರಜ್ಞೆ ಚೆನ್ನಾಗಿದ್ದ ಕ್ಯಾಮರಾ ಸಿಬ್ಬಂದಿ, ತಾನು ಉಪ್ಪುನೀರು ಕುಡಿದರೂ ಲಕ್ಷ-ಕೋಟಿಗಳ ಕ್ಯಾಮರಾ ಬಿಡೆ ಎಂಬಂತೆ ಪಾರುಗಾಣಿಸಿದ್ದು
ನಿಜಕ್ಕೂ ಸಾಹಸವೇ. 

ಅಂದು ಬೆಳಿಗ್ಗೆ ಸುಮಾರು ಒಂಬತ್ತು ಗಂಟೆಯ ಹೊತ್ತಿಗೆ, ತಂಡ ಪೂರಾ ಒದ್ದೆಯಾಗಿ ಚಳಿ, ಹಸಿವು, ಬಳಲಿಕೆಗಳ ಮೊತ್ತವಾಗಿ ನಮ್ಮನೆಗೆ ಬಂದಾಗಲೇ ನಮಗೆ ಮೇಲಿನ ಘಟನೆ ತಿಳಿದದ್ದು. ಅದರಲ್ಲೂ ಅಲೆ ಹೊಡೆದ ಘಟನೆಯನ್ನು ಅಭಯ ನಮಗೆ ಹೇಳುವಾಗ, ಬೆಚ್ಚನ್ನ ಮನೆಯೊಳಗಿದ್ದೂ ನಾವು ಮರಗಟ್ಟಿದ್ದೆವು. ಅಭಯನಿಗೇನೋ ನಮ್ಮಲ್ಲಿ ಬದಲಿ ಬಟ್ಟೆಗಳಿದ್ದವು. ಹಾಗಿಲ್ಲದ ಒಂದಿಬ್ಬರೂ ತಮ್ಮ ಚಂಡಿ ಕಳಚಿಟ್ಟು, ನಾವು ಒದಗಿಸಿದ ಒಣ ಬಟ್ಟೆಗಳಿಗೆ
ಹೊಂದಿಕೊಂಡದ್ದು ತಮಾಷೆಯಾಗಿತ್ತು. ಹಾಗೆ ಹೊತ್ತುಗೊತ್ತಿಲ್ಲದೆ ಬಂದವರಿಗೆ, ದೇವಕಿ ಅವಸರದಲ್ಲಿ ಕೇವಲ ಚಾ ಕೊಡುವುದಷ್ಟೇ ಸಾಧ್ಯವಾಯ್ತು. ಆಕೆ ತಿಂಡಿ ಮಾಡಿಕೊಡುವಷ್ಟು ಹೊತ್ತು ಕಾದು ಕೂರಲು ಅವರಲ್ಲಿ ಸಮಯವೇ ಇರಲಿಲ್ಲ! ಉಡುಪಿ ದಾರಿಯಲ್ಲೆಲ್ಲೋ ಹೋಟೆಲಿನಲ್ಲಿ ಸುಧಾರಿಸಿಕೊಂಡರಂತೆ. ಇದನ್ನು ತನ್ನ ಆತಿಥ್ಯದ ಕೊರತೆ ಎಂದು ಕೊರಗುವುದೇ ಮಗನ ಕರ್ತವ್ಯಪ್ರಜ್ಞೆ ಎಂದು ಹೆಮ್ಮೆ ಪಡಬೇಕೋ ಎಂಬ ಜಿಜ್ಞಾಸೆ
ದೇವಕಿಗೆ ಇಂದಿಗೂ ಬಗೆಹರಿದಿಲ್ಲ. 

ಚಿತ್ರದ ಯಶಸ್ಸು ತಾರಾಮೌಲ್ಯದಲ್ಲಿಲ್ಲ! 


ಸಿಟಿ ಸೆಂಟರ್ ಮಾಲ್ ಒಳಗೆ ಪರಿಮಳ ದ್ರವ್ಯಗಳನ್ನು ಮಾರಲೊಂದು ತೆರೆದ ಮಳಿಗೆ ಇದೆ. ಅದರಲ್ಲಿ ‘ಪಡ್ಡಾಯಿ’ಯ ಚಿತ್ರೀಕರಣ ನಡೆದಿತ್ತು. ನಾವು ಕ್ಯಾಮರಾ ಬಳಗದ ಕೈಕಟ್ಟದಷ್ಟು ದೂರದಲ್ಲಿ, ಮತ್ತದರ ದಿಟ್ಟಿರೇಖೆಗೆ ಎಲ್ಲೂ ಸಿಗದಂಥ ಮೂಲೆಯಲ್ಲಿ, ಸಂತೆಯಲ್ಲೊಂದಾಗಿ ನಿಂತು
ನೋಡುತ್ತಿದ್ದೆವು. ‘ಸಿನ್ಮ ಶೂಟಿಂಗ್’ ಸುದ್ದಿ ಸಿಕ್ಕ ಕೂಡಲೇ ಎಲ್ಲ ಕೆಲಸ ಬಿಟ್ಟು ಗಿಜಿಗಿಜಿ ಮುತ್ತುವ ಮಂದಿ ಇದ್ದದ್ದೇ. ಅದರಲ್ಲೂ ಬಹುಮಂದಿ ‘ಮಾಯಾಲೋಕ’ದ ಥಳಕಿನ ಚಿತ್ರಗಳನ್ನೇ ತಲೆಯಲ್ಲಿ ತುಂಬಿಕೊಂಡವರು. ನಾಯಕನ ‘ಗತ್ತು’, ನಾಯಕಿಯ ‘ಸೌಂದರ್ಯ’ವನ್ನಷ್ಟೇ ಈ ಜನ ಅಳೆಯುತ್ತಾರೆ. 

ಪಡ್ಡಾಯಿಗೆ ಪ್ರೇರಣೆ ಖ್ಯಾತ ಇಂಗ್ಲಿಷ್ ಸಾಹಿತಿ ಶೇಕ್ಸ್‍ಪಿಯರನ ಅಷ್ಟೇ ಖ್ಯಾತ ನಾಟಕ ಮ್ಯಾಕ್ಬೆತ್. ಅಲ್ಲಿನ ಕನಿಷ್ಠ ಮೂರು ಶತಮಾನಗಳ ಹಿಂದಿನ ಐತಿಹಾಸಿಕ ಕಲ್ಪನೆ,
‘ಪಡ್ಡಾಯಿ’ಯಲ್ಲಿ ವರ್ತಮಾನದ ಮೀನುಗಾರ ಸಮುದಾಯದ ಜೀವಂತ ಭಾಗವಾಗಿದೆ. ಚಿತ್ರೀಕರಣ ನಡೆದಿದ್ದ ಆ ದೃಶ್ಯದಲ್ಲಿ ಪಾಲಿರದ ನಟವರ್ಗವೆಲ್ಲ ಬಿಟ್ಟಿ ವೀಕ್ಷಕ ಮಂದೆಯಲ್ಲಿ ಒಂದಾಗಿದ್ದರು. ಮೀನುಗಾರರ ವಠಾರದೊಳಗೆ ಭಾರಿ ಕಾರುಭಾರಿಯಾಗಿಯೇ ಮೆರೆಯುವ ರಾಕೇಶ (ಅವಿನಾಶ್ ರೈ), ಲೋಕವೆಲ್ಲ ನಡೆದಿರುವುದು ನನ್ನ ಚಾಲಾಕಿನಲ್ಲಿ ಎಂಬ ಗತ್ತಿನೊಡನೆ ಮುಂದೆ ಬಂದ. ಮಾಲ್‍ನ ವೈಭವಕ್ಕೆ ಬೆದರಿದ ಹುಲ್ಲೆಗಳಂತಿದ್ದ ಮೀನು ಮಾರುವ ಸುಗಂಧಿ (ಬಿಂದು ರಕ್ಷಿದಿ) ಮತ್ತು ಪ್ರಮೀಳರು (ಮಲ್ಲಿಕಾ
ಜ್ಯೋತಿಗುಡ್ಡೆ) ವಿನೀತವಾಗಿ ಹಿಂಬಾಲಿಸಿದ್ದರು. ಚಿತ್ರ ಸಹಜಧ್ವನಿಯನ್ನೇ ಅಳವಡಿಸಿಕೊಳ್ಳುವ ವ್ರತ ತೊಟ್ಟದ್ದರಿಂದ ಸಂತೆಯ ಗೌಜು ನಿಯಂತ್ರಿಸುವ ಕೆಲಸ ನಡೆದಿರಲಿಲ್ಲ. ಸಹಜವಾಗಿ ‘ಕುತೂಹಲದ ಸಂತೆ’ಯೊಳಗಿಂದ ಒಂದು ಪಿಸು ಮಾತು ತೇಲಿ ಬಂದು ಮೋಹನ್ ಶೇಣಿ (ಚಿತ್ರದಲ್ಲಿ ನಾಯಕ ಪಾತ್ರಧಾರಿ) ಕಿವಿ ಮುಟ್ಟಿತು "ಪಿಚ್ಚರ್ ಓವಿಯೇ?" ಇವರು ಸಹಜವಾಗಿ "ಪಡ್ಡಾಯಿ" ಎಂದರು. ಹಿಂಬಾಲಿಸಿತು ಪ್ರಶ್ನೆ "ಹೀರೊಯಿನ್ ಏರ್?" ಮೋಹನ್ ಸಹಜವಾಗಿ ಬಿಂದುವಿನತ್ತ ಕೈ ಮಾಡಿದರು. ನೆನಪಿನಂಗಳದಲ್ಲಿ ಅಸಂಖ್ಯ ತಾರೆಯರನ್ನು
ಮಿನುಗಿಸಿಕೊಂಡು ಒಂದಕ್ಕೆ "ವೊವ್" ಕೊಡುವ ಉತ್ಸಾಹದಲ್ಲಿದ್ದಾತ ಗಾಳಿ ಸೋರಿದ ಬುಗ್ಗೆಯಂತೆ "ಪುಸುಕ್" ಎಂದ. ನಿರಾಸೆಯಲ್ಲಿ ಮುಳುಗುತ್ತಿದ್ದವ ಹುಲ್ಲ ಕಡ್ಡಿ ಹಿಡಿದಂತೆ "ಹೀರೋ?" ಎಂದನಂತೆ. ಮೋಹನ್ "ಯಾನೇ" ಎನ್ನಬೇಕಾಯ್ತು! ಐಶ್ವರ್ಯಾ ರೈ, ಸಲ್ಮಾನ್ ಖಾನ್‍ಗಳನ್ನು ಬಿಟ್ಟು ಊಹಿಸಲೂ ತಾಕತ್ತಿರದ ಚಿತ್ರ-ನಿರಕ್ಷರಿ ಜಾಗ ಖಾಲಿ ಮಾಡಿರಬೇಕು. ನಿಜದ ಚಿತ್ರ ಖ್ಯಾತ ತಾರೆಗಳನ್ನು ಸೇರಿಸುವುದರಲ್ಲಿಲ್ಲ. "ಸಿನಿಮಾ ಕತೆಗೆ ಯುಕ್ತ ಪಾತ್ರಧಾರಿಯನ್ನು ಹಿಡಿಯುವುದರಲ್ಲಿ ಅರ್ಧ ಯಶಸ್ಸು ಅಡಗಿದೆ" ಎಂಬ ಖ್ಯಾತ ನುಡಿಮುತ್ತನ್ನು ಈ ಬೆಪ್ಪುತಕ್ಕಡಿಗೆ ಹೇಳುವವರು ಯಾರು! 
***                         ***
ಮೇಲಿನ ತುಣುಕನ್ನು ನಾನು ಫೇಸ್ ಬುಕ್ಕಿನಲ್ಲಿ ಪ್ರಕಟಿಸಿದಾಗ, ಬಿಂದು ರಕ್ಷಿದಿ (ನಾಯಕ ನಟಿ) ಪ್ರತಿಕ್ರಿಯಿಸಿದ್ದು ಹೀಗೆ: ಈ ವಿಷಯ ಬಂದಾಗ ನೆನಪಾಯ್ತು ಸರ್....ಈ ಘಟನೆ ನಡೆದ ನಂತರ ನಮಗೆ ಅರಿವಾಗಿತ್ತು, ನಮ್ಮ ಉತ್ತರ ಯಾವುದಾಗಿದ್ದರೆ ಜನರಿಗೆ ಸಮಾಧಾನವಾಗುತ್ತದೆ ಅಂತ. ಹಾಗಾಗಿ ಹೀರೊ ಯಾರು, ಹೀರೋಯಿನ್ ಯಾರು ಅನ್ನುವ ಪ್ರಶ್ನೆಗೆ ಉತ್ತರ ಹುಡುಕಿ ಇಟ್ಟುಕೊಂಡಿದ್ದೆವು. ಯಾರಾದರು ಕೇಳಿದ ಕೂಡಲೆ - "ಇಲ್ಲ ಅವರುಗಳು ಬಂದಿಲ್ಲ, ಅವರಿಗೆ ಈ ಕಡೆ ಚಿತ್ರೀಕರಣ ಇಲ್ಲ.
ಏನಿದ್ದರೂ ಬೆಂಗಳೂರಿನಲ್ಲಿ ಮಾತ್ರ" ಅನ್ನುವ ಸಿದ್ದ ಉತ್ತರವನ್ನ ಕಡಿಮೆ ಎಂದರೂ ೫೦ಕ್ಕೂ ಹೆಚ್ಚು ಬಾರಿ ಹೇಳಿ ನಾವೇ ನಕ್ಕಿದ್ದಿದೆ. ಅದೇ ರೀತಿ ಮಲ್ಪೆ ಮಾರ್ಕೆಟ್ ಚಿತ್ರೀಕರಣ ಸಂದರ್ಭದಲ್ಲಿ ಚಂಚಲಾ ಭಟ್ ಅವರೇ ಹೀರೋಯಿನ್ ಎಂದು ಹೇಳಿ ನಾವು ತಪ್ಪಿಸಿಕೊಂಡದ್ದೂ ಇದೆ.

[ಚಿತ್ರೀಕರಣದ ದಿನಗಳಲ್ಲಿ ಮೂರೋ ನಾಲ್ಕು ಸಲ, ಅದೂ ಕೆಲವು ಗಂಟೆಗಳ ಕಾಲ, ಹೊರಗಿನವನಂತೇ ನೋಡಿ ಬಂದ ನಾನು, ಚಿತ್ರ ನಿರ್ಮಾಣದ ಪೂರ್ಣ ಕತೆಗಳನ್ನು ಹೇಳಲು ಶಕ್ತನಲ್ಲ. ಮುಂದೆಂದಾದರೂ ಅಭಯನೇ ಅನುಕೂಲ ಒದಗಿ ಹೇಳಿದರೆ ಕೇಳುವಲ್ಲಿ ನಾನೂ ಇದ್ದೇನೆ! 

ವಿಶೇಷ ಸೂಚನೆ: ಆಸಕ್ತರು ನನ್ನ ಜಾಲತಾಣದೊಳಗಿನ ‘ಪಡ್ಡಾಯಿ’ (ಇಲ್ಲಿ ಚಿಟಿಕೆ ಹೊಡೆಯಿರಿ) ಕಥನದ ಎಲ್ಲ ತುಣುಕುಗಳನ್ನು ಈ ಸೇತು ಬಳಸಿಯೂ ಓದಿಕೊಳ್ಳಬಹುದು]

No comments:

Post a Comment