09 April 2018

ಸೈಕಲ್ ಆಗಬೇಕು ಸರಳತೆಯ ಸಂಕೇತ

(ಚಕ್ರೇಶ್ವರ ಪರೀಕ್ಷಿತ ೨೨)
ದೈನಂದಿನ ಸೈಕಲ್ ಸರ್ಕೀಟಿನ ಸಂಗ್ರಹ 


ಸೈಕಲ್ ತತ್ತ್ವಜ್ಞಾನ:
ಸರಳ, ಆರೋಗ್ಯಪೂರ್ಣ, ಮಿತವ್ಯಯಿ ಇತ್ಯಾದಿ ಖ್ಯಾತಿಯೊಡನೆ ಚಲಾವಣೆಗಿಳಿದ ಹೊಸ ತಲೆಮಾರಿನ ಸೈಕಲ್ ಸವಾರಿಯಲ್ಲಿ ದುಬಾರಿ ಸೈಕಲ್ಲುಗಳನ್ನೇನೋ ಗುಣಮಟ್ಟದಿಂದ ಸಮರ್ಥಿಸಿಕೊಳ್ಳಬಹುದು. ಆದರೆ ಚಟುವಟಿಕೆಗಳು – ಕೇವಲ ಕ್ರಮಿಸಿದ ಅಂತರಗಳ ದಾಖಲೆಗಾಗಿ, ತೀವ್ರ ಏರಿಳಕಲುಗಳನ್ನಷ್ಟೇ ಆಯ್ದು `ಜಯಿಸುವುದ'ಕ್ಕಾಗಿ ನಡೆಯುವುದು, ಅದರ `ಬೆಂಬಲ'ಕ್ಕಾಗಿ ಅಸಂಖ್ಯ ಪೆಟ್ರೋಲ್ ವಾಹನಗಳು ಓಡಾಡುವಂತಾಗುವುದು, ಆ ಸವಾರರು ನಿತ್ಯಾಹಾರ ಮೀರಿ ಶಕ್ತಿವರ್ಧಕಗಳನ್ನು
ಆಶ್ರಯಿಸುವುದು ಎಲ್ಲಾ ಸರಿ ಅಲ್ಲ. ಹತ್ತೆಂಟು ಸಲಕರಣೆಗಳನ್ನು ಸೈಕಲ್ಲಿಗೆ ಹೇರಿ ಸ್ವಾನುಭವಕ್ಕೆ ತೆರೆದುಕೊಳ್ಳುವುದಕ್ಕಿಂತ ಸ್ವಮೋಹದಲ್ಲಿ ಕಳೆದುಹೋಗುವುದು ನನಗಂತೂ ಹಿಡಿಸಿದ್ದೇ ಇಲ್ಲ. ಇಲ್ಲೆಲ್ಲ `ಪ್ರಕೃತಿಯೊಡನೆ ಸಂವಾದ' ಎನ್ನುವುದು ಕೇವಲ ಮಾತಿನ ಅಲಂಕಾರ, ವ್ಯಕ್ತಿ ಅಹಂಕಾರದ ಇನ್ನೊಂದು ರೂಪವಾಗಿಯೇ ಸೈಕಲ್ ಕಾಣುತ್ತದೆ. ಚಿತ್ರದಲ್ಲಿ ಹೇಗೋ ಬರವಣಿಗೆಯಲ್ಲೂ ‘ಸ್ವಂತೀ’ಗಳನ್ನು (selfie) ನಿರಾಕರಿಸಿ, ಸ್ವಾನುಭವದ ಮಿತಿಯಿದ್ದರೂ ಲೋಕಹಿತದ ದೃಷ್ಟಿಕೋನದಲ್ಲೇ ನನ್ನ ದೈನಂದಿನ ಸೈಕಲ್ ಸರ್ಕೀಟುಗಳು ರೂಪುಗೊಳ್ಳುತ್ತವೆ.

ಮತ್ತವನ್ನು ಹೆಚ್ಚಿನ ಸೋಸುಗಕ್ಕೆ ಹಾಕಿ ಇಲ್ಲಿಗೂ ಸಂಗ್ರಹಿಸಿ ಹಾಕುತ್ತೇನೆ. ಆ ಸರಣಿಯಲ್ಲಿ ಈಗ ಮತ್ತೊಂದಿಷ್ಟು ಟಿಪ್ಪಣಿಗಳು: 

ಸೈಕಲ್ ತೋರಿಸಿ, ರೈಲು ಬಿಟ್ಟದ್ದು!:
ಕಾಶ್ಮೀರ ಪ್ರವಾಸದ ನೆಪದಲ್ಲಿ ಹದಿನೈದು ದಿನ ಸೈಕಲ್ ದೂರನಾಗಿದ್ದುದಕ್ಕೆ ಕಾಲು ಜಡವಾಗಿತ್ತು. ಪ್ರವಾಸಕ್ಕೆ ವಿದ್ಯಾ ಮನೋಹರ ಉಪಾಧ್ಯರಿಂದ ಕಡ ಒಯ್ದಿದ್ದ ಭಾರೀ ಚಳಿಬಟ್ಟೆಗಳನ್ನು ಮರಳಿ ಕೊಡುವ, ಕೆ.ಎಲ್ ರೆಡ್ಡಿಯವರ ಮೊಮ್ಮಗಳನ್ನು ನೋಡುವ ಮತ್ತೆ ಅತ್ರಿಯ
ಉತ್ತರಾಧಿಕಾರಿಗಳನ್ನು ವಿಚಾರಿಸಿಕೊಳ್ಳುವ ನೆಪದಲ್ಲಿ ಸೈಕಲ್ ತುಳಿದೆ. ಅಲ್ಲೆಲ್ಲ ಕೆಲಸಕ್ಕಿಂತ `ಆತ್ಮಶ್ಲಾಘನೆ' ಮಾಡಿಕೊಂಡದ್ದೇ ಹೆಚ್ಚಾಗದಂತೆ, ಅದಕ್ಕೂ ಮಿಗಿಲಾಗಿ ಅವರ ಸಮಯ ಹಾಳಾಗದಂತೆ ಮುಂದೋಡಿ ಕೇವಲ ಸರ್ಕೀಟ್ ದೊಡ್ಡ ಮಾಡಿ ಮರಳಿದೆ! (೧೯-೫-೨೦೧೫) 

ಟ್ರಾಫಿಕ್ ಜ್ಯಾಮಿಗೆ ಸೈಕಲ್ ಬ್ರೆಡ್ಡಾಗದು:
ನಿನ್ನೆ ಕೂಳೂರು, ನದಿದಂಡೆ ಹಿಡಿದು ತೊಟ್ಟಿಲ್ದಗುರಿ, ದಂಬೇಲ್, ಅಶೋಕನಗರಕ್ಕಾಗಿ ಸ್ವಲ್ಪ ದೊಡ್ಡ ಸುತ್ತು ಹಾಕಿದೆ. ಇಂದು ಕದ್ರಿ ಕಂಬಳಕ್ಕಾಗಿ ನೇರ ಕದ್ರಿಗುಡ್ಡೆ ಏರಿ,
ಯೆಯ್ಯಾಡಿ, ಪದವಿನಂಗಡಿ, ಪಚ್ಚನಾಡಿ, ವಾಮಂಜೂರಿಗಾಗಿ ಪಿಲಿಕುಳ ದ್ವಾರ ಸೇರಿದೆ. ದಾರಿ ಬದಿಯ ಹುಡುಗ ಮಸಾಲೆ ಹಚ್ಚಿ ಹುರಿದು ಕೊಟ್ಟ ಮುಸುಕಿನ ಜೋಳ ಮೆಲ್ಲುತ್ತಾ ಕೊಳದ ವೃತ್ತದವರೆಗೆ ಹೋಗಿ ಮರಳಿದೆ. ಇಲ್ಲಿ ಉದ್ಯಾನಕ್ಕೆ, ಪ್ರಾಣಿಸಂಗ್ರಹಾಲಯಕ್ಕೆ ಪ್ರವೇಶದರ ಸಂಗ್ರಹಿಸುವ ಠಕ್ಕು ಯಾಕೋ ತಿಳಿಯಲಿಲ್ಲ. ಇವೆಲ್ಲಕ್ಕೂ ಸಾರ್ವಜನಿಕರು ಕೊಡುವ ನಿಯಮಿತ ಹಣ ರಾವಣನ ಹೊಟ್ಟೆಗೆ ಕಾಸಿನ ಮಜ್ಜಿಗೆ ಎಂದಷ್ಟೇ ನಿಜ. ಸರಕಾರೀ ಅನುದಾನವೊಂದೇ ಇಲ್ಲಿನ ಜೀವಾಧಾರ. ಹಾಗಿರುವಾಗ ಟಿಕೆಟ್ ಕೌಂಟರ್ (ಈಗ ಮೂರು ಬಂದಿವೆ - ಉದ್ಯಾನ, ಪ್ರಾಣಿಸಂಗ್ರಹ ಮತ್ತು
ತಾರಾಲಯ), ಅದಕ್ಕೆ ಜನ, ಲೆಕ್ಕ ಎಂದೆಲ್ಲ ಸಮರ್ಥನೀಯವಲ್ಲದ ವೆಚ್ಚವನ್ನು ಕಳಚಿದರೆ, ಇನ್ನಷ್ಟು ಕಣ್ಗಾವಲು, ಕಸ ವಿಲೇವಾರಿ ಸಾಧಿಸಬಹುದು. ಆಸನಗಳ ಮಿತಿಯೊಡನೆ ಜನ ನಿಯಂತ್ರಣದ ಅಗತ್ಯಕ್ಕೆ ತಾರಾಲಯಕ್ಕೊಂದೇ ಸಾಂಕೇತಿಕ ಪ್ರವೇಶಧನ ಇಟ್ಟರೆ ಸಾಕು. ಕೊಳದ ಜಲಾನಯನ ಪ್ರದೇಶದ ಪುಟ್ಟ ನಾಲೆಯ ಮೇಲಿನ ದೊಡ್ಡ ಸೇತುವೆಗಾಗಿ (ಆಡಿಯಲ್ಲಿ ನಾನೆಂದೂ ನೀರು ಕಂಡಿಲ್ಲ) ಎಂದಿನಂತೆ ಜೀವವಾಡದ ಜನಪದ ವೃತ್ತಿಕುಶಲಿಗಳಿಗೆ ಮೀಸಲಾದ ಮಳಿಗೆಗಳ ಮುಂದೆ ಸುತ್ತಾಡಿದೆ. ಯಾವುದೇ ಮಳಿಗೆ ತೆರೆಯದಿದ್ದರೂ ಜನ
ದಾರಿತಪ್ಪಿಯೂ ಇತ್ತ ಸುಳಿಯದಿದ್ದರೂ ಸೂರ್ಯನ ಅಭ್ಯಂಜನಕ್ಕೆ ಇನ್ನೂ ಗಂಟೆಯ ವೇಳೆ ಇದ್ದರೂ ಬೀದಿ ದೀಪಗಳು ಡ್ಯೂಟಿ ಶುರು ಮಾಡಿದ್ದೊಂದು ವಿಪರ್ಯಾಸ. ಬಹುಶಃ ದೀಪವನ್ನಾವರಿಸುವ ಹಾತೆ ಹುಳುಗಳ ಬೇಟೆಯಾಡುವಲ್ಲಿ `ಓವರ್ ಟೈಮ್' ಭತ್ತೆ ಹೊಡೆಯುವ ಜಾಣತನ ಇರಬಹುದು. 

ಹಿಂದಿರುಗುವ ದಾರಿಯಲ್ಲಿ ವಾಮಂಜೂರು, ಕುಡ್ಪು, ಕುಲಶೇಖರಕ್ಕಾಗಿ ಮುಂದುವರಿಯುವಾಗ ಬಿಕರ್ನಕಟ್ಟೆಯಲ್ಲೇ ನಂತೂರಿನ ಟ್ರಾಫಿಕ್ ಜ್ಯಾಮಿನ (ಸಂಚಾರ ಗೊಜ್ಜು) ಬಾಲ ನನ್ನನ್ನು ತಡೆಯಿತು. ಆದರೆ ಸೈಕಲ್ಲಿನ ಸೌಕರ್ಯದಲ್ಲಿ ಆ ಜ್ಯಾಮಿಗೆ ನಾನು ಬ್ರೆಡ್ಡಾಗದೆ (ಒಣಕಲು ರೊಟ್ಟಿ) ಬಲದಾರಿಯ ಬಲ ಅಂಚಿನಲ್ಲಿ ಪೆಡಲಿಸಿ, ವೃತ್ತದಲ್ಲಿ ಪಾದಚಾರಿಯ ಠಕ್ಕು ಹೂಡಿ, ಕದ್ರಿಗಾಗಿ ಮನೆ ಸೇರಿದೆ. (೨೧-೫-೨೦೧೫) 

ಮತಾಂತರ ಪ್ರಸಂಗ:
ಇದು ಯಾವ ಆಮಿಷವಿಲ್ಲದೆ, ವ್ಯಕ್ತಿ ತಾನಾಗಿಯೇ ಒಲಿದು ದೀಕ್ಷೆಗೆ ಒಪ್ಪಿಕೊಂಡ ಕತೆ. ಮರಳಿ ಮಾತೃಧರ್ಮಕ್ಕೆ ಎಂದರೆ ತಪ್ಪಾಗದ ಸನ್ನಿವೇಶ. ವಗ್ಗದ ಕಗ್ಗಾಡಮೂಲೆಯ ಅರವಿಂದರ ಬಾಲ್ಯ ತೆಂಗು, ಕಂಗು, ಮಾವು, ಗೇರು ಮರಗಳ ಗೆಲ್ಲಿನ ಮೇಲೆ ಕಾರಿಂಜದ ದಡ್ಡನಿಗೆ ಸ್ಪರ್ಧಿಯಾಗಿಯೇ ಕಳೆದಿರಬೇಕು. ಶಾಲೆಗೆ ಸವಕಲು ಜಾಡೇ ಹೆದ್ದಾರಿ. ಸೈಕಲ್ ಭಾರೀ ಅದ್ದೂರಿ. ಈತ ಕಲಿಕೆಯ ಮೆಟ್ಟಲುಗಳಲ್ಲಿ ದೃಢವಾಗಿ ಮೇಲೆ ಬಂದಾಗ (ಮೈಕ್ರೋಬಯಾಲಜಿಯ ಮಾಸ್ಟರ್ರು) ಇವರ ಕುಟುಂಬ ನಾಮಕ್ಕೂ (ಕೇದಗೆ) ರಾಯತ್ವಕ್ಕೂ
(ರಾವ್) ಬೆಲೆ ಬಂತು. ಆರೋಹಣ ಪರ್ವತಾರೋಹಿಗಳು ಸಾಹಸಿಗಳು ಇದರ ಸಂಪರ್ಕಕ್ಕೆ ಅರವಿಂದ ಬಂದ ದಿನಗಳು, ಅವರ ವೃತ್ತಿ ಜೀವನದ ಆರಂಭದ ದಿನಗಳೂ ಹೌದು. ಜೀವನದ ತಕ್ಕಡಿಯಲ್ಲಿ ವೃತ್ತಿಯ ಅಗತ್ಯ ಮತ್ತು ಹವ್ಯಾಸದ ಬಯಕೆಗಳನ್ನು ಒಂದು ಬಟ್ಟಲಿನಲ್ಲಿಟ್ಟು, ಆರಂಭಿಕನ ಆರ್ಥಿಕತೆಯನ್ನು ಇನ್ನೊಂದು ಬಟ್ಟಲಿಗೆ ಬಳಿಬಳಿದು ತುಂಬಿ ಒಂದು ಹಳೇ ಜಾವಾ (ದಿವಂಗತ ಯೆಜ್ದಿಯ ಅಪ್ಪ!) ಬೈಕ್ ಹೊಂದಿಸಿಕೊಂಡಿದ್ದರು. ಅದನ್ನು ಕುಶಾಲಿನ ಲಹರಿಯಲ್ಲಿ ಅವರೇ `ಜಂಕ್ ಬೈಕ್’ ಎಂದಾಗ ಕಾಲೆಳೆಯುವ ಗೆಳೆಯರ ಬಳಗ ಇವರನ್ನೇ `ಜಂಕೂಸ್’ ಎಂದೇ ಕರೆದಿತ್ತು. ನನ್ನ `ಚಕ್ರವರ್ತಿಗಳು’ ಕೃತಿಯ ಬಹುತೇಕ ಸಾಧನೆಗಳಲ್ಲಿ ಜಂಕೂಸ್ ಪಾಲು ಬಹು ದೊಡ್ಡದು. ಮುಂದೆ ಇವರ ವೃತ್ತಿ ಒತ್ತಡ, ಕೌಟುಂಬಿಕ ಅಗತ್ಯಗಳು, ಅನ್ಯ ಸಾಮಾಜಿಕ ಚಟುವಟಿಕೆಗಳು (ಜೇಸಿ, ಲಯನ್ ಬಳಗದಲ್ಲಿ ವಲಯ ವರಿಷ್ಠನವರೆಗೂ ಏರಿದವರು) ನಮ್ಮ ಒಡನಾಟ ತಪ್ಪಿಹೋದರೂ ಪರಸ್ಪರ ಮಾನಸಿಕ ಅನುಸಂಧಾನ ತಪ್ಪಿದ್ದಿಲ್ಲ. ಹಾಗಾಗಿ ಇವರು ಫೇಸ್ ಬುಕ್ಕಿನಲ್ಲಿ ನನ್ನ ಸೈಕಲ್ ಸರ್ಕೀಟನ್ನು ಅನುಸರಿಸಿ ಬಂದು, ಈಚೆಗೆ ಸೈಕಲ್ ಕೊಂಡೇ
ಬಿಟ್ಟರು. ಮೂರು ದಿನ ಸಣ್ಣ ಸುತ್ತಾಟ ನಡೆಸಿ, ನಿನ್ನೆ ನನಗೊಪ್ಪಿಸಿಕೊಂಡರು! ಹಾಗಾಗಿ ಇಂದು ಸಂಜೆ ನಾಲ್ಕೂ ಕಾಲರ ಶುಭಮುಹೂರ್ತದಲ್ಲಿ, ಕದ್ರಿ ಪಾಲಿಟೆಕ್ನಿಕ್ಕಿನೆದುರಿನ ನಾಯಿಕಟ್ಟೆಯಲ್ಲಿ ಇವರಿಗೆ ದೀಕ್ಷಾವ್ರತ ಕೊಟ್ಟಿದ್ದೇನೆ. ಶಾಲಾ ದಿನಗಳಲ್ಲಿ ಇವರು ಸೈಕಲ್ ಬಳಸಿದವರೇ ಆದ್ದರಿಂದ ಒಂದು ಲೆಕ್ಕದಲ್ಲಿ ಇದು ಮರಳಿ ಮಾತೃಧರ್ಮಕ್ಕೂ ಹೌದು! ನಮ್ಮ ಮತಾಂತರ ಪ್ರಸಂಗಕ್ಕೆ ಬ್ರಹ್ಮತ್ವವನ್ನು (ಸಾಕ್ಷಿ ಎನ್ನಿ) ಮುಂದೆ ಆಕಸ್ಮಿಕವಾಗಿ ಕಾವೂರು ವೃತ್ತದ ಬಳಿ ಸಿಕ್ಕ ಕನ್ನಡ ಪ್ರಾಧ್ಯಾಪಕ ನರಸಿಂಹಮೂರ್ತಿಯವರೇ ವಹಿಸಿದ್ದಾರೆ!!

ಯೆಯ್ಯಾಡಿ, ಹೆಲಿಪ್ಯಾಡ್, ಕಾವೂರು ದೇವಳ ಮತ್ತೆ ವೃತ್ತಕಾಗಿ ಕೂಳೂರಿಗೆ ಹೋಗುವ ಪ್ರಥಮ ಚರಣದ ಕೊನೆಯಲ್ಲಿ ಅರವಿಂದರಿಗೆ ಹೆಚ್ಚಿನ ವ್ರತಾನುಷ್ಠಾನದ ಆಯ್ಕೆ ಕೊಟ್ಟೆ. ಅವರು ಹೆದ್ದಾರಿಯಲ್ಲಿ ಮರಳಲಿಚ್ಛಿಸದೆ ಹೆಚ್ಚಿನದ್ದನ್ನು ಒಪ್ಪಿಕೊಂಡರು. ಹಾಗಾಗಿ ಕೂಳೂರು ನದಿ ದಂಡೆಯ ದಾರಿಯಲ್ಲಿ ತೊಟ್ಟಿಲ್ದಗುರಿ, ಅಶೋಕನಗರಕ್ಕಾಗಿ ಉರ್ವಸ್ಟೋರ್ಸಿಗೆ ಮುಟ್ಟಿಸಿ, ಮಂಗಳ ಹಾಡಿದೆ. ಅವರು
ಎರಡನೇ ಕೈಯಾಗಿ ಕೊಂಡ ಸೈಕಲ್ (ಮಡಚುವ, ಪುಟ್ಟ ಚಕ್ರಗಳ ಶೋಕೀ ಮಾಲು) ನಮ್ಮ ಧರ್ಮಾನುಷ್ಠಾನದ ಹೆಚ್ಚಿನ ವ್ರತಗಳಿಗೆ ಒಗ್ಗಲಾರದೆಂದು ಅವರಿಗೇ ಮನವರಿಕೆಯಾಗಿದೆ. ಹಾಗಾಗಿ “ಎಂಟೀಬೀ, ೨೧ ಸ್ಪೀಡ್, ಫ್ರಂಟ್ ಶಾಕ್ಸ್, ಕಾರ್ಬನ್ ಸ್ಟೀಲ್....” ಇತ್ಯಾದಿ ಮಹಿಮಾ ವಿಶೇಷಗಳನ್ನು ಕೇಳಿಸಿಕೊಂಡಿದ್ದಾರೆ. “ಮೆರಿಡಾ, ಫಯರ್ ಫಾಕ್ಸ್...” ಮುಂತಾಗಿ ಸಹಸ್ರನಾಮಗಳನ್ನು ನಿರಂತರ ಭಜಿಸುತ್ತಾ ಹೋಗಿದ್ದಾರೆ. “ಶೀಘ್ರ ಫಲಪ್ರಾಪ್ತಿರಸ್ತು” ಎಂದು ನೀವೆಲ್ಲಾ ಆಶೀರ್ವದಿಸುತ್ತೀರಲ್ಲಾ? (೨೨-೫-೨೦೧೫) 
ಸಕಲ ದೇವ ಸಂಗಮಿಸಿಯೂ ಪಾರಿಸರಿಕ ಆರೋಗ್ಯ ನಾಸ್ತಿ:
ಸೈಕಲ್ಲಿಗಿಂದು ಕಾಡುಮಾವಿನ ಸಂಭ್ರಮ. ನನ್ನ ಚಿಕ್ಕಮ್ಮನ ಮನೆಯಿಂದ ಬಂದ `ರಸದೂಟೆ’ಯಲ್ಲಿ ಸಣ್ಣ ಪಾಲನ್ನು ಗೆಳೆಯ ನಿರೇನಿಗೆ ಮುಟ್ಟಿಸಿ ಮುಂದುವರಿಯುವ ಅವಕಾಶ. `ಪಿಜ್ಜಾ-ಬಾಯ್’ ಹಾಗೆ ಡಬ್ಬಿಯಿಲ್ಲದಿದ್ದರೂ ಬೆನ್ನುಚೀಲದಲ್ಲಿ ಸಾಕಷ್ಟು ಹೊರೆ ಹೊತ್ತಿದ್ದೆ. ಯೆಯ್ಯಾಡಿಯಿಂದ ಮುಂದಿರುವ (ಬ್ಲೂಬೆರಿ ಹಿಲ್ಸ್) ನಿರೇನ್ ಮನೆಯೆಂದರೆ ಸತತ ಮೂರನೇ ದಿನವೂ ನೇರ ಕದ್ರಿ ಗುಡ್ಡೆ ಏರುವ ಸನ್ನಿವೇಶ. ಅದನ್ನು ತಪ್ಪಿಸುವಂತೆ ಬಿಜೈವೃತ್ತದ ಸುತ್ತು ದಾರಿ ಹಿಡಿದು ತುಸು ಹಗುರಾದೆ. ಕಾಟು-ಕುಕ್ಕು (ಕಾಡುಮಾವು) ನಿರೇನ್
ಮನೆಯಲ್ಲಿ ಕುಕ್ಕಿ, ಅವರು ನನ್ನುಪಚಾರಕ್ಕೇನಾದರೂ coockಉವ ಮುನ್ನ ಮುಂದುವರಿದೆ. 

ಕಾವೂರು ವೃತ್ತ, ಕುಂಜತ್ತಬೈಲ್, ಗುರುಪುರ ನದಿ ಹಾಯ್ದದ್ದಾಯ್ತು. ಸಂಜೆಯ ಉಳಿದ ಸಮಯದಲ್ಲಿ ಬಜ್ಪೆ ಗುಡ್ಡೆ ಏರಿದರೆ ಕತ್ತಲೆಗೆ ಮುನ್ನ ಮರಳುವುದು ಕಷ್ಟವೆನ್ನಿಸಿ ಒಳದಾರಿ ವಿಚಾರಿಸಿದೆ. ಬಜ್ಪೆ ವಿಮಾನ ನಿಲ್ದಾಣಕ್ಕೇರುವ ದಾರಿಯನ್ನು ಕಳೆದು ತುಸು ಮುಂದೆ, ಕರಂಬಾರಿನ ಶಾಲಾ ಪಕ್ಕದ ನಗಣ್ಯ ದಾರಿ ಹಿಡಿದೆ. ಸಣ್ಣ ದಿಣ್ಣೆ ಏರಿದ್ದೇ ದಿಗಂತಕ್ಕೆ ಚುಚ್ಚಿದ ಎಮ್ಮಾರ್ಪೀಯೆಲ್ಲಿನ ದೀವಟಿಗೆ ಕಾಣಿಸಿತು.
ಸ್ಥಳನಾಮ ಅಡ್ಡಗುಡ್ಡೆಯಾದರೂ ಕಾಲಧರ್ಮದಂತೆ ಅಗಲೀಕರಣದ ನಿಶಾನಿ, ತುಷ್ಟೀಕರಣದ ಅಡ್ಡಾತಿಡ್ಡ ಕಾಂಕ್ರೀಟ್ ರಸ್ತೆಗಳು ಸಂಗಮಿಸುತ್ತಿದ್ದಂತೆ ಸಪುರ ದಾರಿ ಹೇಗೆಂದರೆ ಹಾಗೆ ಬಳಕುತ್ತ, ಏರಿಳಿಯುತ್ತ ಸಾಗಿತ್ತು. ಹಡಿಲುಬಿಟ್ಟ ಗದ್ದೆಯಾದರೂ ಅಕಾಲಿಕ ಮಳೆಗೆ ಚಿಮ್ಮಿದ ಹಸಿರಿನ ಹಿನ್ನೆಲೆಯಲ್ಲಿನ ಉಜ್ವಲ ಹಳದಿ ದೇವಳ, ಮನೆಮಠಗಳ ನಡುವೆ ಉಗ್ರ ಕೇಸರಿ ದೇವಳ ಹಾಯ್ದು ಪೊರ್ಕೋಡಿ ಸೇರಿದೆ. ಪೇಜಾವರ ಮಠದ ಮೂಲತಾಣವಾದ ಇಲ್ಲೆಲ್ಲ ಕಾಸಿಗೊಂದು ಕೊಸರಿಗೊಂದು ದೇವ-ದೈವಸ್ಥಾನ! ಮುಂದೆ ಜೋಕಟ್ಟೆ ಗಲ್ಲಿಗಳ ಊರೇ ಆದರೂ ಭರ್ಜರಿ
ಮಸೀದಿಯ ಶೋಭೆಗೂ ಕೊರತೆಯಾಗಿಲ್ಲ. ರೈಲ್ವೇ ಹಳಿ ದಾಟಿದ್ದೇ ಎಡದ ಹರಕು ದಾರಿ ಹಿಡಿದೆ. ಇತ್ತ ಪೂರ್ಣ ಕೃಷಿ ಮುಂದುವರಿಸಲಾಗದ ಅತ್ತ ಔದ್ಯಮೀಕರಣದ ಕರಾಳ ಹಸ್ತಗಳಿಗೊಪ್ಪಿಸಲು ಮನಸ್ಸಾಗದ ಐದಾರು ಕಿಮೀ ದಡಬಡ ದಾರಿ ಸುತ್ತಿ ಮತ್ತೆ ಗುರುಪುರ ನದಿ ದಂಡೆ ಸೇರಿದೆ. ಮತ್ತೆ ಗೊತ್ತಲ್ಲ – ಕೂಳೂರು ಕೊಟ್ಟಾರ (?), ಕುಂಟಿಕಾನ(ದ), ಬಿಜಯ (ಮುಗಿಸಿ), ಮನೆ. (೨೩-೫-೨೦೧೫) 

ಪೀಕು ಕೊಟ್ಟ ಸಂದೇಶ:
“ಪೀಕು ನೋಡಿ ಮಾರಾಯ್ರೆ. ಕೊನೆಯಲ್ಲಿ ನಿಮ್ಮ ಸೈಕಲ್ ಸರ್ಕೀಟ್ ನೆಂಪಾತು” ಮೊನ್ನೆ ಮನೋಹರ ಉಪಾಧ್ಯರ ಚರವಾಣಿ ಕರೆ. ಸರಿ, ನಿನ್ನೆ ಬಿಗ್ ಸಿನಿಮಾಕ್ಕೆ ಹೋಗಿ, ಎಂಬತ್ತೇ ರೂಪಾಯಿ ಸೀಟಿನಲ್ಲಿ ಕುಳಿತು, ಯಾವುದೇ ತೌಡು (ಪಾಪ್ ಕಾರ್ನ್?) ಕಲಗಚ್ಚುಗಳ (ಪೆಪ್ಸಿ?) ಆಮಿಷಕ್ಕೆ ಬಲಿಯಾಗದೆ ನೋಡಿ ಬಂದೆವು. `ಪೀಕು’ ಬೌದ್ಧಿಕ ಹೊರೆ ಇಲ್ಲದ ಕಥಾವಸ್ತುವಿನ ಸುಂದರ ಚಿತ್ರ. ಬ್ಯಾನರ್ಜಿ (ಅಮಿತಾಭ್ ಬಚ್ಚನ್) - ದಿಲ್ಲಿಯಲ್ಲಿ ನೆಲೆಸಿದ ವಯೋವೃದ್ಧ ವಿಧುರ, ನಿವೃತ್ತ ಮತ್ತು ಹೆಮ್ಮೆಯ ಬಂಗಾಳಿ. ಆತನ ವಯೋಸಹಜವಾದ ಹಠಮಾರಿತನ, ಕಾಯಿಲ ಮನಸ್ಕತೆ,
ಅದರಲ್ಲೂ ಮಲಬದ್ಧತೆ ನಮ್ಮನ್ನು ರಂಜಿಸಿ, ರೇಗಿಸಿ, ಮೆಚ್ಚುಗೆ ಗಳಿಸುತ್ತದೆ. ಆತನ ಏಕೈಕ ಮಗಳು ಪೀಕು (ದೀಪಿಕಾ ಪಡುಕೋಣೆ) – ವೃತ್ತಿಯಲ್ಲಿ ಕಾರ್ಯ ಒತ್ತಡವಿರುವ ಆರ್ಕಿಟೆಕ್ಟ್, ಪ್ರವೃತ್ತಿಯಲ್ಲಿ ಸ್ವತಂತ್ರಳಾದರೂ ಅಪ್ಪನ ಕುರಿತು ಇನ್ನಿಲ್ಲದ ಪ್ರೀತಿಯ ಕರ್ತವ್ಯಪರಾಯಣೆ. ಅಪ್ಪ ಮಗಳನ್ನು ದಿಲ್ಲಿಯಿಂದ ಕೊಲ್ಕೊತ್ತಾಕ್ಕೆ ಸ್ವತಃ ಚಾಲಕನಾಗಿ ಮುಟ್ಟಿಸುವ ಅನಿವಾರ್ಯತೆಗೆ ಸಿಕ್ಕಿ ಬೀಳುವ ಖಾಸಗಿ ಟ್ಯಾಕ್ಸಿ ಕಂಪೆನಿಯೊಂದರ ಮಾಲೀಕ (ಇರ್ಫಾನ್). ಈ ಮೂರು ಮುಖ್ಯ ಬಿಂದುಗಳ, ಹಿರಿಯ ಮತ್ತು ಹೆಸರಾಂತ ತಾರಾಗಣ ಯಾವುದೇ ನಿರ್ಣಾಯಕ ಕಲಾಪ ಅಥವಾ ತಾರಾವರ್ಚಸ್ಸಿನ ಹಂಗಿಟ್ಟುಕೊಳ್ಳದೆ ಆತ್ಮೀಯವಾಗಿ ಮನದುಂಬುವ ಸಿನಿಮಾ ಪೀಕು. ಇದರ ಕತೆಯ ಸ್ವಾರಸ್ಯ, ಇನ್ನೂ ಹೆಚ್ಚಿನ ವಿಮರ್ಶೆಗಳು ನನ್ನುದ್ದೇಶವಲ್ಲ. 

ಸೈಕಲ್ ಸರ್ಕೀಟ್ ಅಂಶ – ಸಿನಿಮಾದ ಕೊನೆ ಭಾಗದಲ್ಲಿ ಬ್ಯಾನರ್ಜಿ ಹಳಗಾಲದ ನೆನಪುಗಳ ನವೀಕರಣಕ್ಕೆ ಬಾಲ್ಯದ್ದೇ ಬೇಜವಾಬ್ದಾರಿಯಲ್ಲಿ (ಸಿಕ್ಕ) ಸೈಕಲ್ ಏರಿ ಕುಶಿವಾಸಿ ನಗರ ಸುತ್ತಾಡುತ್ತಾನೆ. ಇಂದು ನನ್ನ ಸೈಕಲ್ ಸರ್ಕೀಟ್ ಆದರೂ ಹಾಗೇ ಆಯ್ತು. ವ್ಯತ್ಯಾಸ ಇಷ್ಟೇ - ನಾನು ಬ್ಯಾನರ್ಜಿಯಷ್ಟು ಮುದುಕ ಅಲ್ಲ, ಬಹಳ ವರ್ಷಗಳ ಮೇಲೆ ಆಕಸ್ಮಿಕವಾಗಿ ಸೈಕಲ್ಲೇರಿದವನೂ ಅಲ್ಲ ಮತ್ತು ಯಾರಿಗೂ ತಿಳಿಯದಂತೆ ಹೋದದ್ದೂ ಅಲ್ಲ! ಇದೇ ಆದಿತ್ಯವಾರ (೩೧-೫-೧೫) ನಡೆಯಲಿರುವ ಧೂಮಪಾನದ ವಿರುದ್ಧ ಸೈಕಲ್ ಅಭಿಯಾನದ ದೀರ್ಘತರ ನಕ್ಷೆಯನ್ನು ಇಂದು ಕಂಡೆ.
ಅದರಲ್ಲಿ ನಾನು ನೋಡದ ದಾರಿಯ ಅಂಶವನ್ನಷ್ಟೇ ಗುರುತಿಸಿ, ಮುಂದಾಗಿ ಕಂಡುಕೊಳ್ಳಲು ಹೊರಟಿದ್ದೆ. ಅಭಿಯಾನ ಮೊದಲ ಹಂತದಲ್ಲಿ ಬಜ್ಪೆ ಗುಡ್ಡೆ ಹತ್ತಿ, ಪೊರ್ಕೋಡಿ ಕವಲಿನಿಂದಲೂ ತುಸು ಮುಂದಿನ ಪೆರ್ಮುದೆ ಕವಲಿನತ್ತ ಹೋಗುತ್ತದೆ. ಇದು ನಾನು ಅನೇಕ ಸಲ ಅನುಭವಿಸಿದ ದಾರಿ. ನಾನು ಅದು ಬಿಟ್ಟು ನೇರ ಕೂಳೂರು, ಎಂಸಿಎಫಿನ ಹಿತ್ತಲ ರಸ್ತೆಗಾಗಿ ಹಾಯ್ದು ಜೋಕಟ್ಟೆಯ ಬಳಿ, ಅಂದರೆ ವಿಶೇಷ ಆರ್ಥಿಕ ವಲಯಕ್ಕಾಗಿ ರಚಿತವಾದ ವಿಶೇಷ ರಸ್ತೆಯಲ್ಲಿ ಪೆರ್ಮುದೆ ಕವಲಿನ ಜಾಡು ಸೇರಿದೆನೆಂದು ಭಾವಿಸಿದೆ. ಒಂದಿಬ್ಬರು ಸ್ಥಳೀಯರಲ್ಲಿ ಸಂಶಯ
ತೋಡಿಕೊಂಡೇ ಮುಂದುವರಿದಿದ್ದೆ. ಆದರೆ ಅನಂತರ ನನಗೆ ಜ್ಞಾನೋದಯವಾಯ್ತು – ಅವರು ವಿಶ್ವಪ್ರಜ್ಞೆಯವರು; ಎಲ್ಲಾ ದಾರಿಗಳೂ ಎಲ್ಲೆಡೆಗೂ ತಲಪಿಸಬಲ್ಲವು! ನಾನು ಕುತ್ತೆತ್ತೂರು, ಕಾನ ಎಂದು ಮನಸ್ಸಿನಲ್ಲೇ ಜಪಿಸುತ್ತ ಬಲು ದೀರ್ಘ ಏರುದಾರಿ ಮುಗಿಸಿದ ಕೊನೆಯಲ್ಲಿ ಬಜ್ಪೆ ಪೇಟೆ ತಲಪಿದ್ದೆ!! ಕುತ್ತ (=ಕಡಿದಾಗಿ) ಏರಿದಲ್ಲೆಲ್ಲ ಕುತ್ತೆತ್ತೂರು ಇಲ್ಲ! ಕಾನ ಕಾಣದಾಗಿದೆ ಎನ್ನುವುದು ನಾಳೆಗೆ ಪ್ರೇರಣೆ. ಯಾಕೆಂದರೆ ಆಗಲೇ ಬೆಂಗದಿರ “ಇಂಥಾ ಸೆಕೆ ಎಂದೂ ಕಾಣಲಿಲ್ಲ” ಎಂದು ಬಿಸುಸುಯ್ಯುತ್ತಾ ಮುಗಿಲ ಟವೆಲ್ಲು ಬೀಸಿ, ಪಡುವಣ ಬಚ್ಚಲಿನತ್ತ ನಡೆದಿದ್ದ. ನಾನು ನೇರ ಮಂಗಳೂರು
ದಾರಿ ಹಿಡಿದು, ಕರಂಬಾರು, ಮರವೂರು, ಮರಕಡ, ಕಾವೂರುಗಳನ್ನು ಕಳೆದು ಮನೆ ಸೇರುವಾಗಲೂ ಸೂರ್ಯನ ಗೊಣಗುಬಾಯಿ ಉಪ್ಪುನೀರು ಮುಕ್ಕುಳಿಸಿರಲಿಲ್ಲ. ನನ್ನ ಇಂಥ ನಿರ್ದಿಷ್ಟ ಆಯ್ಕೆಗಳಿಲ್ಲದ ಸೈಕಲ್ ಸುತ್ತಾಟ ಕಂಡೇ ಉಪಾಧ್ಯರು ಬ್ಯಾನರ್ಜಿಯನ್ನು ನನಗೆ ಶಿಫಾರಸು ಮಾಡಿರಬೇಕು! 

ನನ್ನಪ್ಪನ ಅಂಶ: ಮಲಬದ್ಧತೆ ನನ್ನಜ್ಜನಿಗಿತ್ತು, ಅಪ್ಪನಿಗಿತ್ತು, ನನಗಿದೆ, ನಮ್ಮ ಕುಟುಂಬದಲ್ಲಿ ಅನೇಕರಿಗಿದೆ. ಹಾಗಾಗಿ ಪೀಕು ಸಿನಿಮಾದಲ್ಲಿ ಬರುವ ಅನೇಕ ಸನ್ನಿವೇಶಗಳು, ಬ್ಯಾನರ್ಜಿಯ ಸೈಕಲ್ ಸವಾರಿಯಲ್ಲಿ ನಾನಂತೂ ನನ್ನಪ್ಪನನ್ನೇ ಕಂಡೆ; ಅಭಯನಿಗೆ ನನ್ನನ್ನೇ ಕಂಡಂತಿರಬಹುದೇ?!!
ಮಾತುಗಳು ನಮ್ಮ ಕೌಟುಂಬಿಕ ವಲಯಕ್ಕೆ ಯಥಾವತ್ತು ಹೊಂದಿಕೊಳ್ಳುವುದು ತುಂಬ ಮುದನೀಡಿತು. ಅದರಲ್ಲೂ ತೀರಾ ಹತ್ತಿರದವರಿಗೆ ಮಾತ್ರ ಮುಜುಗರ ಉಂಟು ಮಾಡುತ್ತಿದ್ದ ನನ್ನಪ್ಪನ ಬೇಕು, ಬೇಡಗಳು, ಹಠಮಾರಿತನವೆಲ್ಲ ಮೂರ್ತಿವೆತ್ತಂತೆ ಬ್ಯಾನರ್ಜಿಯಲ್ಲಿ ಕಂಡು ಕುಶಿಪಟ್ಟೆ. ಎನ್ಸಿಸಿಯಲ್ಲಿದ್ದಾಗ ಅಲ್ಲಿನ ಕಾರು, ಲಾರಿಯನ್ನೂ ಧಾರಾಳ ಓಡಿಸಿದ್ದವರು ನನ್ನ ತಂದೆ. ವೃತ್ತಿರಂಗದ ಕೊನೆಯ ವರ್ಷಗಳಲ್ಲಿ (೧೯೮೦ರ ದಶಕ) ಸ್ವಂತಕ್ಕೆ ಕಾರು ಇಟ್ಟುಕೊಂಡು ನಿಭಾಯಿಸಬಹುದಾದ ಆರ್ಥಿಕ ಬಲವೂ ತಂದೆಗಿತ್ತು. ಆದರೆ ಇವರು ಸುಮಾರು ಎಪ್ಪತ್ತೈದರ
ಪ್ರಾಯದವರೆಗೂ ಸೈಕಲ್ಲನ್ನೇ ನೆಚ್ಚಿ, ಕೊನೆಗೂ ಹಿತೈಷಿಗಳ ಒತ್ತಾಯಕ್ಕಷ್ಟೇ ತ್ಯಜಿಸಿದ್ದರು.

ಅಡಿಟಿಪ್ಪಣಿ: ಮಲಬದ್ಧತೆಯ ಕುರಿತಂತೆ ವೈಜ್ಞಾನಿಕ ಅಧ್ಯಯನ ನಡೆಸಿ ಗ್ಯುಲಿಯಾ ಎಂಡರ್ಸ್ `ಚಾರ್ಮಿಂಗ್ ಬವೆಲ್ಸ್’ ಎಂಬ ಪುಸ್ತಕ ಬರೆದಿದ್ದಾರೆ. ಅದರ ಕುರಿತು ಬಂದೊಂದು ಸ್ವಾರಸ್ಯಕರ ವಿಮರ್ಶೆಯನ್ನು ಮಾತ್ರ ಗೆಳೆಯ ಇಸ್ಮಾಯಿಲ್ ಇಲ್ಲೇ ಹಾಕಿದ್ದರು. ಸಹಜವಾಗಿ ಅದರ ಇಲ್ಲಿನ ಚರ್ಚೆಯಲ್ಲಿ ತಮಾಷೆಗೆ ಪೀಕು ಸಿನಿಮಾದ ಉಲ್ಲೇಖವೂ ಸೇರಿಕೊಂಡಿತ್ತು. (೨೬-೫-೨೦೧೫) ಇಂದು ಹೆಚ್ಚಿನ ಓದಿಗಾಗಿ ನನ್ನದೇ ಲೇಖನ: ಕಾಯಿಲ ಮನಸ್ಕತೆಗೆ ಪರಮಾನಂದ ದಾರಿ ಕೂಡಾ ಓದಬಹುದು. 

ಚಿತ್ರಾಪುರದ ಸ್ವಾಮಿಗಳು:
ನಿನ್ನೆ ಕಾಣಲಾಗದ `ಕಾನ’ದ ಕನ(ಸು) ಇಂದಾದರೂ ನನಸಾದೀತೇ ಎಂದು ಸಾಕಷ್ಟು ಬಿರುಸಿನಿಂದಲೇ ಪೆಡಲ್ಲಿನಲ್ಲಿ ಚಕ್ರಮಾಲೆಯನ್ನು ಹರಿಯಬಿಟ್ಟಿದ್ದೆ. ಕೊಟ್ಟಾರ, ಕೂಳೂರು ಕಳೆದು ಪಣಂಬೂರು ಕಡಲ ಕಿನಾರೆಗೆ ಹೋಗುವ ಕವಲಿನಲ್ಲಡ್ಡಗಟ್ಟಿತೊಂದು ಭೂತಾಕಾರದ ಲಾರಿ. ಅದು ಹೆದ್ದಾರಿಗೆ ನುಗ್ಗುವ ನಿಧಾನ ಗತಿಗೆ ರೇಗಿ, ನನ್ನ ಹರಿವಿನ ದಿಕ್ಕು ಬದಲಿಸಿ ನೇರ ಕಡಲ ಕಿನಾರೆಗೇ ಹೋದೆ. ಬಹುಶಃ ಬೇಸಗೆಯ ರಜೆ, ಸಹಜವಾಗಿ ಪ್ರವಾಸಗಳ ಧಾರಳತನ ಅಲ್ಲಿ ನನ್ನ ನಿರೀಕ್ಷೆ ಮೀರಿ ಜನಸಂದಣಿ ಕಾಣಿಸಿತು. ಹಿಂದೆ
ಕಿನಾರೆದಾರಿಯ ಬಲಕೊನೆಯಲ್ಲಿ ಕಂಡಿದ್ದ ಅಡಿಪಾಯ, ಆವರಣಗಳ ಮೊಳಕೆ ಏನಾಗಿ ಬೆಳೆದಿದೆಯೆಂದು ಅತ್ತ ಹೋದೆ. 

ಆವರಣದೊಳಗೆ ನಾಲ್ಕು ಕಾಟೇಜುಗಳಂತೆ! ಕಾವಲಿನವನು ಅದರ ಬಾಡಿಗೆ, ಸಾರ್ವಜನಿಕ ಲಭ್ಯತೆಗಳ ಬಗ್ಗೆ ನಿಗೂಢವಾಗಿ ಅಜ್ಞಾನಿಯಾಗಿದ್ದ. ಇನ್ನೊಂದು ಕೇವಲ ಅಡಿಪಾಯದ ಹಂತದಲ್ಲಿದ್ದದ್ದು ಈಗ ಭಾರೀ ವಿಚಿತ್ರ ರೂಪಿನ ಹೋಟೆಲಾಗಿ ಅರಳುತ್ತಿತ್ತು. ಅದರೆದುರು ಅಷ್ಟೇ ವಿಚಿತ್ರ ರೂಪಿನ ಹಲವು ಸಣ್ಣ ಸಣ್ಣ `ಗಿರಾಕಿ-ಗೂಡು’ಗಳ (ಗುಂಡಿನ ಗೂಡು?) ಕೆಲಸ
ನಡೆದಿತ್ತು. ಇವೆಲ್ಲ ದಿನಕ್ಕೆ ಕೆಲವೊಮ್ಮೆ ಸಾವಿರದ ಲೆಕ್ಕದಲ್ಲೂ ಬರುವ ಸಾರ್ವಜನಿಕ ಹಿತದ ದೃಷ್ಟಿಯ ಅಭಿವೃದ್ಧಿಗಳೇ? ಇನ್ನೂ ಮುಖ್ಯವಾಗಿ ಪ್ರಾಕೃತಿಕ ವೈಪರೀತ್ಯಗಳ ವಿರುದ್ಧ ಅಥವಾ ಕಿನಾರೆಯ ಹಿತರಕ್ಷಣೆಯ ಪರವಾಗಿ ರೂಪುಗೊಂಡ ವಿಶೇಷ ನಿಯಮಗಳಿಗೆ ಅತೀತವೇ? ಕಡಲ ಸಾಮಾನ್ಯ ಅಲೆ ರೇಖೆಯಿಂದ ನಿಗದಿತ ಅಂತರದೊಳಗೆ (ನೂರೋ ಇನ್ನೂರೋ ಮೀಟರ್) ಯಾವುದೇ ಮನುಷ್ಯ ರಚನೆಗಳು ಕೂಡದು ಎಂಬ ನಿಯಮದ ಬಲದಲ್ಲಿ ಉಳ್ಳಾಲ, ಉಚ್ಚಿಲ ಮುಂತಾದೆಡೆಗಳಲ್ಲಿ ಭಾರೀ ರಚನೆಗಳನ್ನು ಹುಡಿಗುಟ್ಟಿದ ಸರಕಾರ ಇಲ್ಲಿ ಸ್ವತಃ ತಾನೇ ಉಲ್ಲಂಘಿಸುವುದು ಯಾವ
ನ್ಯಾಯ? 

`ವೆಂಕು ಪಣಂಬೂರಿಗೆ ಹೋದ ಹಾಗೆ’ ಆಗಬಾರದೆಂದು ಹಾಗೇ ಮೀನುಗಾರಿಕಾ ದಾರಿಯಲ್ಲಿ ಬೈಕಂಪಾಡಿಯತ್ತ ಮುಂದುವರಿದೆ. ಅಲ್ಲಿ ಚಿತ್ರಾಪುರ ದೇವಾಲಯದ ವಠಾರ ಕಂಡಾಗ ನನ್ನ ಮನಸ್ಸಿನಲ್ಲಿ ಅಲ್ಲೇ ಇರಬೇಕಾದ ಚಿತ್ರಾಪುರ ಮಠ ಮತ್ತು ಸ್ವಾಮಿಗಳ ನೆನಪಿನ ಪುಟಗಳು ತೆರೆದುಕೊಂಡವು. ನನ್ನ ಪುಸ್ತಕದಂಗಡಿಗೆ ಸದಾ ದೂರವಾಣಿಸಿ, ಕೆಲವೊಮ್ಮೆ ಶಿಷ್ಯರನ್ನು
ಕಳಿಸಿಯೂ ಪಟ್ಟಿ, ಅನಂತರ ಹಣ ಕಳಿಸಿ ಪುಸ್ತಕಗಳನ್ನು ತರಿಸಿಕೊಳ್ಳುತ್ತಿದ್ದ ಆ ಸ್ವಾಮಿಗಳನ್ನು ನಾನೆಂದೂ ಕಂಡದ್ದಿರಲಿಲ್ಲ. ಕುತೂಹಲದಲ್ಲೇ ದೇವಳದ ಕಛೇರಿಯ ಕದ ತಟ್ಟಿದೆ. ಸ್ವಾಮಿಗಳು ಕರೆಸಿಕೊಂಡರು, ಕುರ್ಚಿ, ಕಾಫಿ ಕೊಟ್ಟು ನಾನಿಚ್ಛಿಸಿದಂತೆ ಲೌಕಿಕ ಮಾತಾಡಿದರು! ಕೆಲವು ಅನಿವಾರ್ಯ ಕೃಷಿಪುಸ್ತಕಗಳನ್ನು ನೋಡಿಯೇ ಕೊಳ್ಳುವುದಕ್ಕಾಗಿ ತಾವು ಒಮ್ಮೆ ನನ್ನಂಗಡಿ ಬಾಗಿಲಿಗೆ ಬಂದು ಕಾರಿನಲ್ಲೇ ಕುಳಿತು ಆರಿಸಿದ್ದನ್ನೂ ನೆನಪಿಸಿಕೊಂಡರು. ಮಾತಿನ ಲಹರಿಯಲ್ಲಿ ನಾನು ವೈಯಕ್ತಿಕವಾಗಿ ದೇವ, (ಅಧ್ಯಾತ್ಮಿಕ) ಗುರು
ಸಂಬಂಧಗಳನ್ನು ನಿರಾಕರಿಸುತ್ತೇನೆ ಎಂದ ಮಾತನ್ನೂ ನಿರ್ವಿಕಾರದಿಂದ ಸ್ವೀಕರಿಸಿ, ಧಾರಾಳ ಮಾತಾಡಿ ಬೀಳ್ಕೊಂಡರು. ಅಲ್ಲಿಂದ ನೇರ ಹೆದ್ದಾರಿಗಿಳಿದು, ಬೈಕಂಪಾಡಿಯ ಒಂಟಿ ರೈಲ್ವೇ ಮೇಲ್ಸೇತುವೆಯ ಗೊಂದಲಗಳನ್ನು ಸೈಕಲ್ ಸಲೀಸಿನಲ್ಲಿ ಹಾಯ್ದು ಮನೆಗೆ ಮರಳಿದೆ. (೨೭-೫-೨೦೧೫) 

ಸಾವಿರದ ಬೆಲೆ ಮೀರಿದ ಕೆರೆಮಣೆ:
ಇಂದು ನಾನು ಹೊರಟದ್ದೇ ತಡ. ನಂತೂರು, ಮರೋಳಿ, ನಾಗುರಿ, ಪಂಪ್ವೆಲ್, ತೊಕ್ಕೊಟ್ಟು, ಕೊಲ್ಯದವರೆಗೂ ಬಿಟ್ಬಿಟ್ಟು ಸೈಕಲ್ ತುಳಿಯುವುದರೊಳಗೆ ನಿತ್ಯ ಪರೀಕ್ಷಾಭವನದ ಮೇಸ್ಟ್ರು – ಸೂರ್ಯನಾರಾಯಣ, “ಕಡೇ ಅವಧಿ ಬಂತೂ...” ಎಂದ. ಆತ ದಿನದ ಮೊದಲಲ್ಲಿ ಕೇವಲ ಗುಡುಗುಡಾಯಿಸಿ ಹೋಗಿದ್ದ ಮಳೆರಾಯನಿಗೆ ಹೆದರಿದಂತೆ ತೆಳು ಕರಿಮುಗಿಲೆಳೆದು ಕತ್ತಲಮನೆ ಸೇರಲು ಸಜ್ಜಾಗಿದ್ದ. ನಾನು ಅಲ್ಲೇ ತಿರುಗಿ, ಹತ್ತಿರದ ದಾರಿ ಹಿಡಿದು ಮರಳಿ ಮನೆ ಸೇರಿಕೊಂಡೆ. 

ಅಂದ ಹಾಗೇ ತಡವೇಕಾಯ್ತು? ಬಿಟ್ಬಿಟ್ಟು ಪೆಡಲ್ ತುಳಿದದ್ದು ಯಾಕೇಂತ ನೀವು ಕೇಳದಿದ್ದರೂ ನಾನು ಹೇಳಲೇಬೇಕಲ್ಲಾ J ಈ ತಿಂಗಳ ಅಡಿಕೆ ಪತ್ರಿಕೆಯಲ್ಲಿ ನನ್ನದೊಂದು ಲೇಖನ ಬಂದಿದೆ – ಗೆಳೆಯ ವೆಂಕಟ್ರಮಣ ಉಪಾಧ್ಯರ ಒಂದು ಗೃಹೋಪಯೋಗೀ ಸಲಕರಣೆಯ ಹೊಸ ಅವತಾರದ ಕುರಿತು. ಅನಂತರ ಅಡಿಕೆ ಪತ್ರಿಕೆ ಸಿಗದವರ ಅನುಕೂಲಕ್ಕಾಗಿಯೂ ಅಂತರ್ಜಾಲದ ಸ್ಥಳಸಂಕೋಚವಿಲ್ಲದ ಧೈರ್ಯದಲ್ಲಿಯೂ ಅದೇ ಲೇಖನವನ್ನು ಇನ್ನಷ್ಟು ವಿಸ್ತರಿಸಿ ನನ್ನ ಜಾಲತಾಣದಲ್ಲಿ ಪ್ರಕಟಿಸಿದ್ದೇನೆ (ನೋಡಿ: ಉಪಾಧ್ಯ ಕೆರೆಮಣೆ -೨೦೧೫), ಬಿಡಿ. ಆ ಸಲಕರಣೆಯೊಂದನ್ನು ಮರೋಳಿ ಮನೆಯೊಂದಕ್ಕೆ ಉಚಿತವಾಗಿ ತಲಪಿಸುವ ಮಿತ್ರಕಾರ್ಯವನ್ನು ನಾನು ವಹಿಸಿಕೊಂಡಿದ್ದೆ. ಸದ್ಯ ಆ ಸಲಕರಣೆಯ ಚಿತ್ರ ಮಾತ್ರ ನಿಮ್ಮ ಗಮನದಲ್ಲಿರಲಿ; ಬೆಲೆ ಸಾವಿರದ ಮೇಲಾದರೂ ಉಪಾಧ್ಯರಿಗೆ ಪೂರೈಸಲಾಗದಷ್ಟು ಬೇಡಿಕೆ ಬೆಳೆದಿದೆ! (೧-೬-೨೦೧೫) 

ಪೆಡಲು ಹೆಚ್ಚು, ಮಾತು ಕಡಿಮೆ:
ಸರ್ಕೀಟಿಗಿಂದು ಹ್ಯಾಮ್ಲೆಟೀಯನ್ ದ್ವಂದ್ವ – ಹೋಗೋದೇ ಬಿಡೋದೇ - ಮಳೆ ಮೋಡ ದಟ್ಟವಾಗುತ್ತಲೇ ಇತ್ತು. ಮಳೆ ಬಂದರೆ ಸಬಕಾರರಹಿತ ಬಯಲಸ್ನಾನ, ಇಲ್ಲಾಂದ್ರೆ ಹಿತಹವೆಯ ಸವಾರಿ ಎಂದು ಏರಿಯೇ ಬಿಟ್ಟೆ. ಪಂಪ್ವೆಲ್, ಪಡೀಲ್, ಫರಂಗಿಪೇಟೆಗಾಗುವಾಗ ಮತ್ತೊಂದು ದ್ವಂದ್ವ. ದೇವಂದ ಬೆಟ್ಟದಲ್ಲಿ ಮುಗಿದ ಉತ್ಸವದ ಪರಿಣಾಮ ಕಾಣಲೇ ಅಥವಾ ಮೊದಲ ಮಳೆಗೆ ತುಂಬೆಯಲ್ಲಿ ಕೊಚ್ಚಿಹೋದ `ಸಂಪತ್ತು’ಗಳ ಕಣ್ಣಂದಾಜು ಮಾಡಲೇ. ಎರಡನ್ನೂ ಒಂದಾಗಿ ನೋಡುವಂತೆ ಅಲ್ಲೇ ನೇತ್ರಾವತಿ ಕಡವಿಗೆ
ಹೋದೆ. ಬೆಟ್ಟದ ಉತ್ಸವಕ್ಕೆಂಬಂತೆ ಹೊಸರೂಪ ತಳೆದಿದ್ದ ಕಟ್ಟೆಯೇನೋ ಉಳಿದಿತ್ತು. ಆದರೆ ಅದಕ್ಕೆ ಸೇರಿದಂತೆ ಸುಮಾರು ಉದ್ದಕ್ಕೂ ಎತ್ತರಕ್ಕೂ ಮಣ್ಣು ಹಾಕಿ ಸಜ್ಜುಗೊಳಿಸಿದ್ದ ದಂಡೆ ಮಾತ್ರ ತುಂಬ ಕೊರೆದು ಹೋಗಿತ್ತು. ಮರಳ ಚೀಲಗಳ ಅವ್ಯವಸ್ಥೆಯ ನಡುವೆ ಈ ದಡ-ಆ ದಡ ಮಾಡುವ ಹಾಯಿ ದೋಣಿಯ ಅನಿವಾರ್ಯ ಸೇವೆ ನಡೆದೇ ಇತ್ತು. 

ಇಂದಿಗೆ ಸಾಕು ಎಂದು ಹಿಂದೆ ಹೊರಟವ ಸಣ್ಣ ಕುತೂಹಲದಲ್ಲಿ ಅರ್ಕುಳ ಕಡವಿಗೊಂದು ಇಣುಕು ಹಾಕಿದೆ. ದೋಣಿಯ ಸಾಯ್ಬ ಗುರುತಿನ ನುಡಿಯಂತೆ “ಇವತ್ತು ಬರ್ತೀರಾ ಆಚೆಗೆ” ವಿಚಾರಿಸಿಕೊಂಡ. ದೋಣಿಯಿಳಿದು ಬರುತ್ತಿದ್ದವರೊಬ್ಬರು ತನಗೂ ನನ್ನ ಪರಿಚಯವುಂಟೆಂಬಂತೆ “ಮತ್ತೊಮ್ಮೆ ದೇವಂದಬೆಟ್ಟಕ್ಕೂ ಹೋಗಿಬರಬಹುದು.” ನಯವಾಗಿ ನಿರಾಕರಿಸಿ ಮುಂದುವರಿದು, ಅಡ್ಯಾರ್ ಕಟ್ಟೆಯ ಕಡವಿಗೂ ನುಗ್ಗಿದೆ. ಸಮುದ್ರದ ಇಳಿತದ ಪರಿಣಾಮ ಅಲ್ಲಿ ನೀರು ಕಡಿಮೆಯಾಗಿ ಜನ ಕಟ್ಟೆ ಬಿಟ್ಟು ಆಚೆ ನೇರ ದಂಡೆಯಲ್ಲೇ ನಿಂತಿದ್ದರು. ಆದರಿಲ್ಲಿ ಕಟ್ಟೆಯಲ್ಲಿ ಹೀಗೇ
ವಾಯುಸೇವನೆಗೆಂಬಂತೆ ನಿಂತಿದ್ದವರಲ್ಲಿ ಒಬ್ಬರು – ಡೆರಿಲ್ ಟೌರೋ - ಪರಿಸರದ ಬಗ್ಗೆ ಕಾಳಜಿಯುಳ್ಳವರು ನನ್ನನ್ನು ಗುರುತಿಸಿ ಮಾತಾಡಿದರು. ಸ್ವಾರಸ್ಯ ಹೆಚ್ಚುವಂತೆ ಜತೆಗಿದ್ದ ಅವರ ತಂದೆ, ಸೋದರ ಸಂಬಂಧಿಯೆಲ್ಲಾ ಸೇರಿಕೊಂಡರು. ಮಾತಿನ್ನು ಆತ್ಮಕಥಾನಕದತ್ತ ಹೊರಳಿದರೆ ಹಗಲು ಹೊರಳುವ ಪರಿವೆ ತಪ್ಪೀತೆಂದು ಜಾಗೃತನಾದೆ. ಮತ್ತೆ ದಾರಿಗಿಳಿದು ಒಂದೇ ಉಸಿರಿನಲ್ಲಿ ಅಷ್ಟೂ ದಾರಿಯನ್ನು ಅಳತೆಗೆ ಹೊರಟವನ ನಿಷ್ಠೆಯಲ್ಲಿ ತುಳಿದು ಮನೆ ಸೇರಿದೆ. (೨-೬-೨೦೧೫) 

ಸೋಮೇಶ್ವರಕ್ಕೆ ಹೋಗಿ ಅಮೃತರನ್ನು ನೋಡದಿರುವುದೇ….
ನಿನ್ನೆ ಮಳೆಗಾಲದ ಉದ್ಘಾಟನೆಗೆ ಅದೆಷ್ಟು ಗರ್ನಾಲು, ಎಂತೆಂಥಾ ದೀಪಗಳ ಛಳಕ್ಕು! ಹಿಂಬಾಲಿಸಿದಂತೆ ಇಂದು ನಿಜಕಲಾಪ, ಸಾರ್ಥಕ `ಪರಿಸರ ದಿನ’ ಎಂದುಕೊಂಡರೆ ನಮ್ಮೆಲ್ಲಾ ಗೋಷ್ಠಿ, ಸಮ್ಮೇಳನಗಳ ಹಾಗೆ ಸಭೆ ಖಾಲಿ; ಮಳೆ ಇಲ್ಲ. ನಾನು ಮೈಕಿನವನ ನಿಷ್ಠೆಯಲ್ಲಿ, ನಿನ್ನೆ ಮಳೆಗೆ ಉಚ್ಚಿಲದ ಅಳಿವೆ ತೆರೆದಿರಬೇಕಲ್ಲಾಂತ ಒಂದೇ ದಮ್ಮಿನಲ್ಲಿ ಸೈಕಲ್ಲೋಡಿಸಿದೆ. ಕಂಕನಾಡಿ, ಜೆಪ್ಪು, ಮಹಾಕಾಳಿ ಪಡ್ಪು, ತೊಕ್ಕೊಟ್ಟು, ಸಂಕೊಳಿಗೆ, ಉಚ್....! ಕರ್ಣ ನಾಗಶರವನ್ನು
ಆಕರ್ಣಾಂತ ಎಳೆದು ಇನ್ನೇನು ಬಿಡಲಿದ್ದಾಗ ಶಲ್ಯಭೂಪ “ತಡೆ” ಎಂದಂತೆ ರೈಲ್ವೇ ಗೇಟ್ ಹಾಕಿತ್ತು. ಕರ್ಣನಂತೆ ನಾನೂ ತಳುವಲಿಲ್ಲ – ಆಚೀಚೆ ನೋಡಿ, ರೈಲು ಸಮೀಪದಲ್ಲೆಲ್ಲೂ ಇಲ್ಲದ್ದನ್ನು ಖಾತ್ರಿಪಡಿಸಿಕೊಂಡು, ತಡಿಕೆ ಸಂದಿನಲ್ಲಿ ಸೈಕಲ್ ನುಗ್ಗಿಸಿ ದಾಟಿ ಉಚ್ಚಿಲ, ಮತ್ತೆ ಅದರ ಬಟಪಾಡಿ ಕೊನೆ ಸೇರಿಯೇ ಬಿಟ್ಟೆ. 

ಹೊಳೆಯಂಚಿನ ಹುಲ್ಲು ಪೊದರು ಎಲ್ಲ ಕಳೆದು ಸರೋವರ ಮನೋಹರವಾಗಿಯೇ ಕಂಗೊಳಿಸಿತು. ನೀರು ಹೆಚ್ಚಿತ್ತು. ಕೊಳಚೆ ಕೆನೆ ಕರಡಿಹೋಗಿ ದುರ್ನಾತ ಕಡಿಮೆಯಾಗಿತ್ತು,
ಸಾಕಷ್ಟು ತಿಳಿಯಾಗಿಯೇ ಕಾಣಿಸಿತು. ಆದರೆ ಅಳಿವೆ ತೆರೆದುಕೊಂಡಿರಲಿಲ್ಲ. ಈ ಕೊನೆಯಲ್ಲಿ ತನ್ನ ದೋಣಿಯನ್ನು ಅಂಚಿನಲ್ಲೇ ನಿಲ್ಲಿಸಿಕೊಂಡು ಬಲೆ ಬೀಸಲು ಸುಮುಹೂರ್ತ ಕಾದಿದ್ದರು ಬ್ಯಾಪ್ಟಿಸ್ಟ್ – ಕಣ್ವತೀರ್ಥದ ಬದಿಯ ಮೀನುಗಾರ. ಬಟಪಾಡಿ ವಲಯದ ನೀರಿನ ಶುದ್ಧದ ಕುರಿತು ಮಾತಾಡಿಸಿದೆ, ಬಾಯ್ತುಂಬ ಮಾತಾಡಿದರು. “ಎಂಥ ಸ್ವಚ್ಛಭಾರತ? ಸರಕಾರ ಮಾಡುದಲ್ಲ, ನಾವೇ ತಿಳಕೊಳ್ಳಬೇಕು. ಊರವರೆಲ್ಲ ತಲಪಾಡಿ ಸೇತುವೆಯಲ್ಲಿ ಬೇಡದ್ದನ್ನು, ಕೊಳೆತದ್ದನ್ನು ಹೊಳೆಗೆ ಹಾಕದಿದ್ದರೆ, ಹೊಳೆದಂಡೆಯ ಮನೆಯವರು ಪಾಯಖಾನೆ ಇದಕ್ಕೆ
ಬಿಡದಿದ್ದರೆ ಆಯ್ತು. ಮತ್ತೆ ಯಾರೂ ಎತ್ತಬೇಕೆಂದಿಲ್ಲ, ಮಳೆಗಾಲದ ಒಂದು ಬೊಳ್ಳಕ್ಕೆ ಈಗಿನ ಎಲ್ಲ ಕೊಳಚೆ ಕೊಚ್ಚಿ ಹೋಗುದಿಲ್ವಾ.” “ಇದರಲ್ಲಿನ್ನೂ ಮೀನಿದೆಯೇ?” ನನ್ನ ಸಂಶಯ. “ಓ ಧಾರಾಳ ಇದೆ. ಸೂರ್ಯ ಇನ್ನೂ ಇಳಿಯಲೀಂತ ಕಾದಿದ್ದೇನೆ. ನಮಗೆ ಹೊಟ್ಟೆಪಾಡು. ನಮಗೆ ನಿತ್ಯ ಅಭ್ಯಾಸದಿಂದ ಈ ನೀರು ತೊಂದರೆ ಮಾಡುದಿಲ್ಲ. ಆದರೆ ಮೊನ್ನೆ ನನ್ನ ಮೊಮ್ಮಗಳು ಇಲ್ಲಿ ಬಂದವಳು ನೀರು ಮುಟ್ಟಿದ್ದಕ್ಕೆ ಭಯಂಕರ ತುರಿಸಿಕೊಳ್ಳತೊಡಗಿ ಔಷಧ ಮಾಡಬೇಕಾಯ್ತು....” ಅಂದು ಸ್ವಯಂಸೇವಕರು ಅಳಿವೆ ಬಾಗಿಲು ಬಿಡಿಸುತ್ತಿದ್ದುದನ್ನು ಕಂಡದ್ದು ತಿಳಿಸಿದೆ. “ಸ್ವಯಂ
ಸೇವೆ ಎಲ್ಲ ಸುಳ್ಳು. ಎಷ್ಟು ಸಲ ಅಳಿವೆ ಬಿಡಿಸಿದರೂ ಪಂಚಾಯತ್ ಅದಕ್ಕೆ ದುಡ್ಡು ಕೊಡುವ ವ್ಯವಸ್ಥೆ ಇದೆ. ನಿನ್ನೆ ಮಳೆಗೆ ನೀರು ಹೆಚ್ಚಾದರೂ ಮೇಲ್ದಂಡೆಯಲ್ಲಿ ಮನೆ, ತೋಟಕ್ಕೆಲ್ಲ ನುಗ್ಗುವಷ್ಟು ಆಗಿಲ್ಲ. ಸರಿಯಾದ ಮಳೆ ಶುರುವಾದರೆ ಸಾಕು, ಕೆಂಪುನೀರು ಬಂದು, ತನ್ನಿಂದ ತಾನೇ ಅಳಿವೆ ತೆರೆದುಕೊಳ್ಳುತ್ತದೆ.” 

ಪ್ರಕೃತಿ ಪಾಠದ `ಪೀರಿಯಡ್’ ಮುಗಿಯಿತೆಂಬಂತೆ ಸೂರ್ಯ ತಗ್ಗಿದ, ಬ್ಯಾಪ್ಟಿಸ್ಟ್ ಬಲೆ ಸಜ್ಜುಗೊಳಿಸತೊಡಗಿದರು, ನಾನು ವಾಪಾಸಿನ ದಾರಿ ನೋಡಿದೆ. ಮೀನುಗಾರಿಕಾ ರಸ್ತೆ ಹೊಸ ಡಾಮರು ಕಂಡಿತ್ತು. ಹಾಗಾಗಿ ನೇರ ಉಳ್ಳಾಲ ರೈಲ್ವೇ ನಿಲ್ದಾಣದವರೆಗೂ ಅದನ್ನೇ ಅನುಸರಿಸಿದೆ. ಅಷ್ಟು ಹೋದ ಮೇಲೆ ಅಮೃತ ಸೋಮೇಶ್ವರರಿಗೊಂದು ಪ್ರೀತಿಯ ನಮಸ್ಕಾರ ಹೇಳದೇ ಮುಂದುವರಿಯುವುದು ಹೇಗೆ. ಐದೇ ಮಿನಿಟಿನಲ್ಲಿ ಉಭಯ ಕುಶಲೋಪರಿ ಮುಗಿಸಿದೆ. ಮನೆಯವರ ಸತ್ಕಾರದ ಸೂಚನೆಗಳು ಆಗ್ರಹವಾಗುವ ಮೊದಲು ಮತ್ತೆ ದಾರಿಗಿಳಿದೆ. ಅಬ್ಬಕ್ಕ ವೃತ್ತದಲ್ಲಿ ಬಲ
ಹೊರಳಿ, ತೊಕ್ಕೊಟ್ಟಿಗಾಗಿ ಮತ್ತೆ ಉಳ್ಳಾಲ ಸಂಕ ಮುಟ್ಟಿದೆ. ದಿನದ ಕೊನೆಯನ್ನು ಸೂರ್ಯ ಮೇಲಿನಿಂದ ಕತ್ತಲ ಪರದೆ ಎಳೆದು ಮುಗಿಸುವಂತಿದ್ದ. ಅಲ್ಲೊಂದು ರೈಲು, ತನ್ನ ತಾಕತ್ತಿನಲ್ಲಿ ಸೇತುವೆಯ ಮೇಲೆ ಉಳ್ಳಾಲದ ದಂಡೆಯಿಂದ ಮಂಗಳೂರು ದಂಡೆಗೆ ಕತ್ತಲ ಪರದೆಯನ್ನು ಅಡ್ಡಕ್ಕೆ ನೂಕುತ್ತ ತರುವ ಪ್ರಯತ್ನ ನಡೆಸಿತ್ತು. ಇದರ ಚಂದ ಹೆಚ್ಚು ನೋಡಿದರೆ ನನ್ನ ಮಾರ್ಗಕ್ರಮಣದ ಚಂದ ಕೆಟ್ಟೀತೆಂದು ಸೀದ ಪಂಪ್ವೆಲ್, ಜ್ಯೋತಿಗಾಗಿ ಮನೆ ಮುಟ್ಟುವಾಗ ಗಂಟೆ ಏಳು! (೫-೬-೨೦೧೫)

(ಅನಿಯತವಾಗಿ ಮುಂದುವರಿಯಲಿದೆ)

No comments:

Post a Comment