01 January 2018

ಹಾಮಾನಾ ಬರೆಯುತ್ತಾರೆ - ಬಾಗಲೋಡಿ ದೇವರಾಯ

(ಮರಣೋತ್ತರ ನುಡಿನಮನಗಳು ೨)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
 (ಭಾಗ ೧೭)
- ಹಾ.ಮಾ. ನಾಯಕ
ಸುಮಾರು ೧೯೪೨-೪೩ರ ಮಾತು. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಇಂಟರ್‍ಮೀಡಿಯೆಟ್ ತರಗತಿಯ ಇಂಗ್ಲಿಷ್ ಪಾಠದ ಅವಧಿ. ದೊಡ್ಡ ಹಾಲು; ಮೂರು ನಾಲ್ಕು ತರಗತಿಗಳ ಹುಡುಗರು ಸೇರಿದ್ದಾರೆ. ಫಾದರ್ ಸಿಕ್ವೇರಾ ಆ ಹೊತ್ತು ತಮ್ಮ ಕಡತದಿಂದ ಆರಿಸಿ ಒಂದು ಪ್ರಬಂಧವನ್ನು ಓದಿದರು. ತಲೆದೂಗುವಂಥ ಬರವಣಿಗೆ. ಜೊತೆಗೆ ಸಿಕ್ವೇರಾ ಅವರ ಓದುಗಾರಿಕೆಯ ಆಕರ್ಷಣೆ. ಹುಡುಗರು ಮಂತ್ರಮುಗ್ಧರಾಗಿ ಕೇಳಿದರು. ಪ್ರಬಂಧವನ್ನು ಓದಿ ಮುಗಿಸಿ, ಸಿಕ್ವೇರಾ ತರಗತಿಯನ್ನು ಪ್ರಶ್ನಿಸಿದರು. "ಈ ಪ್ರಬಂಧವನ್ನು ಬರೆದವರು ಯಾರು?" ಯಾರು ಉತ್ತರ ಕೊಡಬೇಕು? ಕೊನೆಗೆ ಅವರೇ ಹೇಳಿದರು, "ಈ ಪ್ರಬಂಧ ಬರೆದವರು ಇದೇ ತರಗತಿಯ ವಿದ್ಯಾರ್ಥಿ ಬಿ. ದೇವರಾವ್." "ಯಾರು ದೇವರಾವ್?" ಫಾದರ್ ಸಿಕ್ವೇರಾ ಕೇಳಿದರು. ಹುಡುಗರೆಲ್ಲ ಕುತೂಹಲದಿಂದ ಆ ಕಡೆ ಈ ಕಡೆ ಕಣ್ಣಾಡಿಸತೊಡಗಿದರು. ಎದುರು ಸಾಲಿನಲ್ಲಿದ್ದ ಒಬ್ಬ ಸಣ್ಣ ಹುಡುಗ ಎದ್ದು ನಿಂತು ಹೇಳಿದ, "ನಾನೇ ದೇವರಾವ್". ಎಲ್ಲರಿಗೂ ಆಶ್ಚರ್ಯ. ಈ ಪೋರನಿಗೆ ಇಂಗ್ಲಿಷಿನ ಮೇಲೆ ಇಷ್ಟೊಂದು ಪ್ರಭುತ್ವವೇ ಎನ್ನುವುದು ಆಶ್ಚರ್ಯಕ್ಕೆ ಕಾರಣ. ಸಿಕ್ವೇರಾ ಹುಡುಗನನ್ನು ಕೇಳಿದರು, "ಈ ಪ್ರಬಂಧ ನೀನೇ ಸ್ವಂತವಾಗಿ ಬರೆದದ್ದೇ?" ಹುಡುಗ ದೃಢವಾದ ಧ್ವನಿಯಲ್ಲಿ ಹೇಳಿದ. "ಅಫ್ ಕೋರ್ಸ್! ಅನುಮಾನಕ್ಕೆ ಕಾರಣವೇನು?"

ಈ ದೇವರಾವ್, ಕನ್ನಡ ವಾಚಕರಿಗೆ ಪರಿಚಿತರಾದ, ಮೊನ್ನೆ (ಜುಲೈ ೨೫, ೧೯೮೫) ಬೆಂಗಳೂರಿನಲ್ಲಿ ಹೃದಯಾಘಾತದಿಂದ ತೀರಿಕೊಂಡ ಬಾಗಲೋಡಿ ದೇವರಾಯರು. ದೇವರಾಯರ ಮರಣದ ವಿಚಾರ ಮಾತಾಡುತ್ತಿರುವಾಗ ಇಂಟರ್ ಮೀಡಿಯೇಟ್ ತರಗತಿಯಲ್ಲಿ ಅವರ ಸಹಪಾಠಿಯಾಗಿದ್ದ ಜಿ.ಟಿ.ನಾರಾಯಣರಾಯರು ನನಗೆ ಮೇಲಿನ ಪ್ರಸಂಗವನ್ನು ಹೇಳಿದರು. ಅವರ ಮಾತಿನಲ್ಲಿ, "ದೇವರಾಯರು ಅತ್ಯಂತ ಪ್ರತಿಭಾವಂತರಾದ ವಿದ್ಯಾರ್ಥಿ. ಇಂಗ್ಲಿಷ್ ಭಾಷೆ ಸಾಹಿತ್ಯಗಳನ್ನು ಅದರಲ್ಲೂ ಹಳೆಯ ಇಂಗ್ಲಿಷನ್ನು ಅವರು ಆಳವಾಗಿ ಅಧ್ಯಯನ ಮಾಡಿದ್ದರು." ಸಂತ ಅಲೋಶಿಯಸ್ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಮುಗಿಸಿ ದೇವರಾಯರು ಹೆಚ್ಚಿನ ಅಭ್ಯಾಸಕ್ಕೆಂದು ಮದ್ರಾಸಿಗೆ ಹೋದರು. ಅಲ್ಲಿ ಕ್ರಿಶ್ಚಿಯನ್ ಕಾಲೇಜಿನಲ್ಲಿ ಇಂಗ್ಲಿಷ್ ಆನರ್ಸಿಗೆ ಸೇರಿಕೊಂಡರು. "ಹಳೆಯ ಇಂಗ್ಲಿಷಿನ ಅನೇಕ ಸಮಸ್ಯೆಗಳಿಗೆ ಅವರ ಅಧ್ಯಾಪಕರುಗಳೇ ದೇವರಾಯರನ್ನು ಕೇಳುತ್ತಿದ್ದ"ರೆಂದು ನಾರಾಯಣರಾಯರು ಹೇಳುತ್ತಾರೆ. ಭಾಷೆಗಳ ಅಧ್ಯಯನ ದೇವರಾಯರಿಗೆ ಪ್ರೀತಿಯ ಆಸಕ್ತಿಯ ವಿಷಯವಾಗಿತ್ತು. ಆ ದಿನಗಳಲ್ಲಿ ಮದ್ರಾಸ್ ವಿಶ್ವವಿದ್ಯಾಲಯ ಫ್ರೆಂಚ್, ಜರ್ಮನ್ ಮೊದಲಾದ ಭಾಷೆಗಳ ಡಿಪ್ಲೊಮಾ ಸರ್ಟಿಫಿಕೇಟ್ ತರಗತಿಗಳನ್ನು ನಡೆಸುತ್ತಿತ್ತು. ದೇವರಾಯರು ಇದ್ದ ಜಾಗಕ್ಕೂ ವಿಶ್ವವಿದ್ಯಾಲಯಕ್ಕೂ ಸುಮಾರು ಐವತ್ತು ನಿಮಿಷಗಳ ಟ್ರೈನ್ ಪಯಣ. ದೇವರಾಯರು ಪ್ರತಿನಿತ್ಯ ಆ ತರಗತಿಗಳಿಗೆ ಹೋಗಿ ಬರುತ್ತಿದ್ದರು. ಅವರ ಕೈಯಲ್ಲಿ ಸದಾ ಒಂದಲ್ಲ ಒಂದು ಪುಸ್ತಕ ಇರುತ್ತಿತ್ತು. ಉದ್ದವಾಗಿ ಬೆಳೆಸಿದ್ದ ತಮ್ಮ ಕೈಯುಗುರಿನಿಂದಲೇ ತಮಗೆ ಮೆಚ್ಚುಗೆಯಾದ ಭಾಗಗಳನ್ನು ಪುಸ್ತಕದಲ್ಲಿ ಗುರುತು ಮಾಡುವುದು ಅವರ ಹವ್ಯಾಸವಾಗಿತ್ತು. ತಾವು ಓದಿದ್ದನ್ನು ನಾರಾಯಣರಾಯರೇ ಮೊದಲಾದ ಸ್ನೇಹಿತರೊಡನೆ ಚರ್ಚಿಸುವುದು ದೇವರಾಯರಿಗೆ ಖುಷಿಯ ಕೆಲಸವಾಗಿತ್ತು. ಈ ಸಂದರ್ಭಗಳನ್ನು ನಾರಾಯಣರಾಯರು ಉತ್ಸಾಹದಿಂದ ನೆನೆಯುತ್ತಾರೆ.

ದಕ ಜಿಲ್ಲೆಯ ಪೆರ್ಮಾಡಿಯಲ್ಲಿ ಹುಟ್ಟಿದ (ಫೆಬ್ರವರಿ ೨೮, ೧೯೨೭) ಬಾಗಲೋಡಿ ದೇವರಾಯರು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪದವಿ ಪಡೆದ ಮೇಲೆ, ಕೆಲವು ಕಾಲ ಅಲ್ಲೇ ಟ್ಯೂಟರ್ ಆಗಿ ಕೆಲಸ ಮಾಡುತ್ತಿದ್ದರು. ಮುಂದೆ ಮಂಗಳೂರಿನ ಸರ್ಕಾರಿ ಕಾಲೇಜಿಗೆ ಅಧ್ಯಾಪಕರಾಗಿ ಬಂದರು. ಅವರ ವೇಷ ಭೂಷಣಗಳನ್ನು ಕಂಡು ಅವರನ್ನು ಕೀಟಲೆ ಮಾಡಬೇಕೆಂದಿದ್ದ ವಿದ್ಯಾರ್ಥಿಗಳು, ಅವರ ಪಾಠಗಳನ್ನು ಕೇಳುತ್ತಲೇ ಸುಮ್ಮನಾಗಿ ಹೋದರಂತೆ! ತಮ್ಮ ಪಾಂಡಿತ್ಯ ವಾಗ್ಮಿತೆಗಳಿಂದ ಬಹುಬೇಗನೆ ದೇವರಾಯರು ಜನಪ್ರಿಯ ಅಧ್ಯಾಪಕರೆನ್ನಿಸಿಕೊಂಡರು. ವಿದ್ಯಾರ್ಥಿಗಳ ಪ್ರೀತ್ಯಾದರಗಳನ್ನು ಸಂಪಾದಿಸಿದರು. ಆದರೆ ಹೆಚ್ಚು ಕಾಲ ಅವರು ಅಲ್ಲಿ ಉಳಿಯಲಿಲ್ಲ.

ಸ್ವಾತಂತ್ರ್ಯೋತ್ತರ ಭಾರತದ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಅವರು ನಿರ್ಧರಿಸಿದರು. ೧೯೪೯ರಲ್ಲಿ ವಿದೇಶೀ ಸೇವೆಗೆಂದು (ಐಎಫೆಸ್) ಆಯ್ಕೆಯಾದರು. ಅದರಲ್ಲಿ ಅವರು ಎಂಟನೆಯ ಸ್ಥಾನವನ್ನು ಪಡೆದರು. ಮುಂದೆ ದೇವರಾಯರು ಆಕಾಶವನ್ನು ಅಳೆದರು; ಸಪ್ತ ಸಾಗರಗಳನ್ನು ದಾಟಿದರು. ಸುಮಾರು ಮೂವತ್ತು ವರ್ಷಗಳ ತಮ್ಮ ರಾಜತಾಂತ್ರಿಕ ಜೀವನದಲ್ಲಿ ಅವರು ರಷ್ಯಾ, ಇಟಲಿ, ನೈಜೀರಿಯಾ, ನೇಪಾಳ, ಫಿಲಿಪ್ಪೀನ್ಸ್, ಲಾವೋಸ್, ನ್ಯೂಝೀಲ್ಯಾಂಡ್, ಬಲ್ಗೇರಿಯಾ ಮೊದಲಾದ ರಾಷ್ಟ್ರಗಳಲ್ಲಿ ವಿವಿಧ ಹುದ್ದೆಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದರು. ತಮ್ಮ ನಯ, ವಿನಯ, ಭಾಷಾಜ್ಞಾನ ಹಾಗೂ ಮಾತುಗಾರಿಕೆಗಳಿಂದ ಅವರು ಎಲ್ಲರ ವಿಶ್ವಾಸಕ್ಕೂ ಪಾತ್ರರಾಗಿದ್ದರು. ತಾವು ರಾಯಭಾರಿಯಾಗಿದ್ದ ದೇಶಗಳೊಡನೆ ಭಾರತದ ಸಂಬಂಧವನ್ನು ಕುದುರಿಸುವಲ್ಲಿ ಅವರು ವಿಫಲರಾದುದೇ ಇಲ್ಲ.

ಅವರು ವಿದೇಶೀ ಸೇವೆಗೆ ಆಯ್ಕೆಯಾದಾಗ ಮಾಸ್ತಿಯವರು ಬರೆದಿದ್ದರು. "ಈಚೆಗೆ ಶ್ರೀ ಬಾಗಲೋಡಿಯವರಿಗೆ ನಮ್ಮ ಕೇಂದ್ರ ಸರ್ಕಾರದ ಅಡ್ಮಿನಿಸ್ಟ್ರೇಟಿವ್ ಸರ್ವಿಸಿನಲ್ಲಿ ಒಂದು ಸ್ಥಾನ ದೊರಕಿದೆ. ಇದು ಕನ್ನಡ ಜನಕ್ಕೇ ಸಂತೋಷ ತರಬೇಕಾದ ಸಂಗತಿ. ತಮ್ಮ ಜನಜೀವನವನ್ನು ಸ್ನಿಗ್ಧಭಾವದಿಂದ ನೋಡಬಲ್ಲ ಈ ನಮ್ಮ ಮಿತ್ರರು ಇಂಥಾ ಸೇವಾಕ್ಷೇತ್ರಕ್ಕೆ ಸರ್ವಥಾ ಅರ್ಹರು. ಇವರು ತಮ್ಮ ಅಧಿಕಾರಭೂಮಿಯಲ್ಲಿ ಯಶಸ್ವಿಗಳಾಗುವರೆಂದು ನಾವು ನಿರೀಕ್ಷಿಸಬಹುದು." ಮಾಸ್ತಿಯವರ ನಿರೀಕ್ಷೆ ಹುಸಿಯಾಗಲಿಲ್ಲ. ದೇವರಾಯರು ಯಶಸ್ವಿಯಾಗಿ ತಮ್ಮ ಅಧಿಕಾರದ ಅವಧಿಯನ್ನು ಮುಗಿಸಿ ನಾಡಿಗೆ ಕೀರ್ತಿ ತಂದರು. ಮುಂದುವರಿದು ಮಾಸ್ತಿಯವರು ಹೇಳಿದ್ದರು. "ಇವರ ಪ್ರೇಕ್ಷಣದ ಜೀವನರಂಗ ವಿಸ್ತಾರವಾಗಿ ಇವರ ಸಾಹಿತ್ಯ ಸೇವೆಯೂ ವಿಸ್ತಾರವಾಗಲೆಂದು ನಾನು ಬಯಸುತ್ತೇನೆ." ಈ ಬಯಕೆ ಅಷ್ಟಾಗಿ ಈಡೇರದೇ ಹೋದದ್ದು ದುರ್ದೈವ, ದುಃಖದ ಸಂಗತಿ.
ಸಂಪ್ರತಿಯಿಂದ, ಆಗಸ್ಟ್ ೧೧, ೧೯೮೫

(ಮುಂದುವರಿಯಲಿದೆ)

1 comment:

  1. ಈ ಪುಸ್ತಕದ ಪ್ರತಿಗಳು ಲಭ್ಯವಿದೆಯೇ? ಎ ಪಿ ಭಟ್

    ReplyDelete