23 October 2017

ವಾಮನಮೂರ್ತಿ ತ್ರಿವಿಕ್ರಮ ಕೀರ್ತಿ

(ಸಹಪಾಠಿ ಮಿತ್ರರು ಕಂಡ ಬಾಗಲೋಡಿ ೩)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
(ಭಾಗ ೭)
- ಜಿ.ಟಿ. ನಾರಾಯಣ ರಾವ್
ದೂರದರ್ಶನ:
೧೯೪೦ರ ದಶಕಾರಂಭದಲ್ಲಿ ಕೊಡಗಿನಲ್ಲಿದ್ದುದು ಕೇವಲ ಮೂರು ಪ್ರೌಢಶಾಲೆಗಳು. ಮಡಕೇರಿಯಲ್ಲಿ ಎರಡು, ವಿರಾಜಪೇಟೆಯಲ್ಲಿ ಒಂದು. ಇವು ಮದ್ರಾಸ್ ಸರ್ಕಾರದ ಶಿಕ್ಷಣ ಮಂಡಳಿಗೆ ಸಂಯೋಜಿತವಾಗಿದ್ದುವು.

ಮಡಿಕೇರಿ ಸೆಂಟ್ರಲ್ ಹೈಸ್ಕೂಲಿನಿಂದ ನಾನು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಕೊಡಗು ಪ್ರಥಮನಾಗಿ ಉತ್ತಾರಿಸಿದೆ (೧೯೪೨). ಅದೇ ಜೂನಿನಲ್ಲಿ ಮಂಗಳೂರು ಸಂತ ಅಲೋಶಿಯಸ್ ಕಾಲೇಜಿಗೆ ದಾಖಲಾದೆ. ಜೂನಿಯರ್ ಇಂಟರ್ಮೀಡಿಯೆಟ್ ಪಿಸಿಎಂ (ಭೌತ - ರಸಾಯನ - ಗಣಿತ ವಿಜ್ಞಾನಗಳು) ಜೋಡಣೆ. ಆಗ ಮೊದಲ ಭ್ರಮನಿರಸನವಾಯಿತು; ಸುಮಾರು ೧೦೦ ಯುವಚೇತನಗಳ ಈ ಸಮುದಾಯದಲ್ಲಿ ನನ್ನ ನೆಲೆ ೫೦ರ ಒಳಗೂ ಇರಲಿಲ್ಲ! ಕೊಡಗು ಪ್ರಥಮ ಮಂಗಳೂರು ಅಂತಿಮ!

ಆ ವೇಳೆಗೆ ನನ್ನ ಕೆಲವು ಕನ್ನಡ ಕತೆಗಳೂ ಕವನಗಳೂ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದುವು. ಸಹಜವಾಗಿಯೇ ನನ್ನಲ್ಲಿ ತುಸು ಜಂಬ ಮೂಡಿತ್ತು. ಇಂಗ್ಲಿಷಿನಲ್ಲಿಯೂ ಉತ್ತಮ ವಿದ್ಯಾರ್ಥಿ ಲೇಖಕನೆಂದು ಮಡಿಕೇರಿಯಲ್ಲಿ `ಖ್ಯಾತ’ನಾಮನಾಗಿದ್ದೆ. ಆದರೆ ಕಾಲೇಜಿನ ಸಾಪ್ತಾಹಿಕ ಭಿತ್ತಿ ಪತ್ರಿಕೆಯಲ್ಲಿ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಲೇಖನಗಳ ಗುಣಮಟ್ಟ ಗಮನಿಸಿದಾಗ `ಎನಗಿಂತ ಕಿರಿಯರಿಲ್ಲ’ ಎಂಬ ಅರಿವು ಮೂಡಿತು. ಇದು ಎರಡನೆಯ ಭ್ರಮನಿರಸನ.

ಇಂಗ್ಲಿಷ್ ಪಾಠದ ವೇಳೆಗೆ ಪಿಸಿಎಂ ಜೊತೆಗೆ ಇತರ ಜೋಡಣೆಗಳವರೂ ಸೇರುತ್ತಿದ್ದೆವು. ೨೦೦ಕ್ಕೂ ಮಿಕ್ಕಿದ ವಿದ್ಯಾರ್ಥಿ ಸಂಖ್ಯೆ. ಉಪನ್ಯಾಸಕರು ಧ್ವನಿವರ್ಧಕವಿಲ್ಲದೇ ಬೋಧಿಸುತ್ತಿದ್ದರು. ವಿಷಯ ಪ್ರಾವೀಣ್ಯ, ನಿರೂಪಣೋಲ್ಲಾಸ ಮತ್ತು ಕಂಠಸೌಖ್ಯ ಅವರ ಆಸ್ತಿ. ನಮ್ಮದೋ? ಜ್ಞಾನದಾಹ, ಶ್ರವಣ ಸೂಕ್ಷ್ಮತೆ ಮತ್ತು ಮೌನ ಏಕಾಗ್ರತೆ.

ನಮ್ಮ ಇಂಗ್ಲಿಶ್ ಗುರುಗಳೊಬ್ಬ ಪಾದ್ರಿ ಮಹಾಶಯರು. ಅವರು ನಮಗೊಂದು ಇಂಗ್ಲಿಶ್ ಪ್ರಬಂಧ ಬರೆದುಕೊಡಲು ಆದೇಶಿಸಿದರು. ಪಾಠಕ್ಕೆ ಸಂಬಂಧಿಸಿದ ವಿಷಯ. ಕಾಲಾವಕಾಶ ಕೇವಲ ಎರಡೇ ದಿನ. ಸರಿ, ಯಥಾ ಕಾಲದಲ್ಲಿ ನಮ್ಮ ಬರೆಹಗಳು ಅವರ ಕೈ ಸೇರಿದುವು.

ಒಂದು ವಾರ ಸಂದಿತು. ಇಂಗ್ಲಿಷ್ ತರಗತಿ, ನಮ್ಮ ಲೇಖನಗಳ ಕಟ್ಟನ್ನು ದೂತ ತಂದು ಮೇಜಿನ ಮೇಲಿಟ್ಟ. ನಮಗೆಲ್ಲ ಆತಂಕ, ತವಕ, ಎಲ್ಲಕ್ಕಿಂತ ಮೇಲೆ ಇದ್ದ ಪ್ರಬಂಧವನ್ನು ಪಾದ್ರಿ ಗುರುಗಳು ಕೈಗೆತ್ತಿಕೊಂಡು ಗಟ್ಟಿಯಾಗಿ ಓದಿದರು ಮಾತ್ರವಲ್ಲ, ಮೆಚ್ಚಿ ವಿವರಿಸಿದರು ಕೂಡ. “ಈ ಸುಂದರ ಲೇಖನ ಬರೆದಾತ ಇದೇ ತರಗತಿಯ ಒಬ್ಬ ಪ್ರಚಂಡ ಪ್ರತಿಭೆ ಎಂಬ ಸಂಗತಿ ನನಗೆ ಅಭಿಮಾನವನ್ನೂ ಆಶ್ಚರ್ಯವನ್ನೂ ತರುತ್ತದೆ. ಆತನ ಹೆಸರು ಬಾಗಲೋಡಿ ದೇವರಾವ್.”

ಯಾರೀತ? ಕತ್ತು ಉದ್ದ ಎತ್ತಿ ತರಗತಿ ಸುತ್ತ ಸಂಪಾತಿ ದೃಷ್ಟಿ ಹರಿಸಿದ್ದಾಯಿತು. ಎಲ್ಲರೂ ಷೋಡಷರೇ, ದೇವದೂತರೇ. ಇವರ ನಡುವೆ “ದೇವ ಬಂದ, ನಮ್ಮ ಸ್ವಾಮಿ ಬಂದನೋ, ದೇವರ ದೇವ ಶಿಖಾಮಣಿ ಬಂದನೋ” (ಪುರಂದರದಾಸ) ಅವನನ್ನೆಲ್ಲಿ ಕಾಣೋಣ!

ನಮ್ಮ ಔತ್ಸುಕ್ಯ ಅರ್ಥವಾದ ಗುರುಗಳೇ ನುಡಿದರು (ಅವರಿಗೂ ಕುತೂಹಲವಿತ್ತಷ್ಟೆ) “Deva Rao! Will you please stand up?”
ಮುಂದಿನ ಸಾಲಿನ ಆ ಹುಡುಗ ಆ ಕ್ಷಣ ತರಗತಿಯ ದೃಷ್ಟಿಕೇಂದ್ರವಾದ. ಆದರೆ ಹತಾಶೆಗೂ ಕಾರಣನಾದ. ದೈತ್ಯಾಕಾರನಲ್ಲ – ನರಪೇತಲ; ಎತ್ತರ ಆಳಲ್ಲ – ಕುಳ್ಳ; ವೈಭವ ಪೋಷಾಕುಧಾರಿಯಲ್ಲ – ಖಾದಿ ಅಡ್ಡ ಬೈರಾಸು, ಮೇಲೊಂದು ಜುಬ್ಬ ತೊಟ್ಟವ. ಕೆದರಿದ ಕೇಶ, ಬೆಳುಕರಿಸಿದ್ದ ಮುಖ, ಕುಳಿತರೂ ನಿಂತರೂ ಒಂದೇ ಎತ್ತರ! ಗುರುಗಳ ಸಹಜ ಪ್ರಶ್ನೆ, ವಿಸ್ಮಯಮಿಶ್ರಿತವಾಗಿ, “Deva Rao! Is it your own?”
“Ofcourse! What doubt is there, Father?”
ಆ ಆತ್ಮವಿಶ್ವಾಸದ ಖಚಿತವಾಣಿ ಮತ್ತು ತನ್ನ ಆರ್ಜವವನ್ನು ಸಂಶಯಿಸಿದ್ದಕ್ಕಾಗಿ ತಂತಾನೇ ಪುಟಿದೆದ್ದ ಆತ್ಮ ಪ್ರತ್ಯಯ ಧ್ವನಿ ಇಂದಿಗೂ (೨೦೦೩) ನನ್ನ ನೆನಪಿನಲ್ಲಿ ಅನುರಣಿಸುತ್ತಿದೆ. ವಾಮನಮೂರ್ತಿ, ತ್ರಿವಿಕ್ರಮ ಕೀರ್ತಿ, ಅಸ್ಮಿತೆ ಅವರ ಪರಮ ಆಸ್ತಿ.

ನಮ್ಮ ಪ್ರಬಂಧಗಳೆಲ್ಲವನ್ನೂ ಹಿಂದಿರುಗಿಸಿದರು. ಶೇಕಡಾ ೩೫ಕ್ಕಿಂತಲೂ ಕೆಳಕ್ಕೆ ಇಳಿದಿದ್ದ ಬಹುಸಂಖ್ಯಾತರ ಸಾಲಿನಲ್ಲಿ ನಾನಿರಲಿಲ್ಲವೆಂಬುದೊಂದೇ ಸಮಾಧಾನ. ಹೀಗೆ ಮೂರನೆಯ ಭ್ರಮನಿರಸನವೂ ನನಗಾಯಿತು.

ಅಳುಕು ಕೀಳರಿಮೆಗಳ ಕಾರಣವಾಗಿ ನಾನು ಆ ಎರಡು ವರ್ಷವೂ ದೇವರಾಯರನ್ನು ಮಾತಾಡಿಸಲು ಮುಂದಾಗಲಿಲ್ಲ. ಅವರೋ? ಸದಾ ಏಕಾಕಿ ಮತ್ತು ಏಕಾಂಗಿ (lonely -  ಜನವಿದೂರ. Alone – ಅಂತರ್ಮುಖಿ) ಉಪನಿಷದ್ವಾಕ್ಯದ ಜೀವಂತ ರೂಪ ಎನಿಸುವಂತಿದ್ದರು:
ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ
ತದಂತರಸ್ಯ ಸರ್ವಸ್ಯ ತದುಸರ್ವಸ್ಯಾಸ್ಯ ಬಾಹ್ಯತಃ – ಈಶಾವಾಸ್ಯ (೫)

೧೯೪೪ ಏಪ್ರಿಲ್ ೪ರಂದು (೪-೪-೪೪ – ನಾಕು ನಾಕುಗಳು ನಾಕಾಗಿ ಸೇರ್ದಂದು ಸಾಕುಬೇಕಾಗಿದ್ದ ಜೀವಕ್ಕೆ ನಾಕಸುಖ ಸಿಕ್ಕಂತಾಯಿತು! ೨೦೪೪ ಏಪ್ರಿಲ್ ೪ ರ ತನಕ ಇಂಥ ಚತುಸ್ಸಂಖ್ಯಾಯೋಗ ಸಂಭವಿಸುವುದಿಲ್ಲ ಎಂಬುದನ್ನು ಗಮನಿಸಬೇಕು ಸಂಖ್ಯಾಭವಿಷ್ಯವಾದಿಗಳು!) ದ್ವಿತೀಯ (ಅಂತಿಮ) ಇಂಟರ್ಮೀಡಿಯೆಟ್ ಬರೆದಾದನಂತರ ಗೂಡುಗಳು ಖಾಲಿ, ಹಕ್ಕಿಗಳು ತವರಿನಲ್ಲಿ jolly.

ಫಲಿತಾಂಶ ಪ್ರಕಟವಾದಾಗ ನನಗೆ ಪ್ರಥಮ ದರ್ಜೆ ಬಂದಿತ್ತು. ದೇವರಾಯರಿಗೆ, ಇದರ ಜೊತೆಗೆ ಮದ್ರಾಸು ವಿಶ್ವವಿದ್ಯಾಲಯದಲ್ಲೇ ಉಚ್ಚ ಸ್ಥಾನ ಲಭಿಸಿತ್ತೆಂದು ತಿಳಿದು ಅಭಿಮಾನ ದ್ವಿಗುಣವಾಯಿತು.

ಪ್ರಿಯ ಮಧುರ ಸಮ್ಮಿತ
ಅಂದು ಮದ್ರಾಸಿನ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕೊಡಗಿನ ವಿದ್ಯಾರ್ಥಿಗಳಿಗೆ ತಲಾ ಒಂದು ಸ್ಥಾನ ಮೀಸಲಿತ್ತು. ಪರೀಕ್ಷೆಯಲ್ಲಿ ದರ್ಜೆ, ಸ್ಥಾನ ಮತ್ತು ಸ್ಥಳನಿವಾಸಿತ್ವ ಆಧಾರಗಳ ಮೇಲೆ, ನನಗೆ ಯಾವುದಾದರೊಂದರಲ್ಲಿ ನೆಲೆ ಸಿಕ್ಕಲೇಬೇಕಾಗಿತ್ತು. ಆದರೆ ಕ್ಷುದ್ರ ರಾಜಕೀಯ ಮತ್ತು ಸ್ವಾರ್ಥ ಜಾತೀಯ ಕಾರಣಗಳಿಂದಾಗಿ ನನಗೆ ಯಾವುದೂ ದಕ್ಕಲಿಲ್ಲ. ಹತಾಶನಾಗಿ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಮೊದಲ ವರ್ಷ ಗಣಿತ (ಆನರ್ಸ್) ತರಗತಿಗೆ ದಾಖಲಾದೆ. ಮೂರು ವರ್ಷಗಳ ಶಿಕ್ಷಣಾವಧಿ. ಯಶಸ್ವಿಯಾದರೆ ಬಿ.ಎ (ಆನರ್ಸ್) ಪದವಿ ಪ್ರದಾನಿಸುತ್ತಿದ್ದರು. ಇದು ಎಂಎಗೆ ಸಮಾನವಾದದ್ದು.

ನಾನು ತೀರಾ ತಡವಾಗಿ ಕಾಲೇಜ್ ಸೇರಿದ್ದರಿಂದ ಹಾಸ್ಟೆಲಿನಲ್ಲಿ ನೆಲೆ ದೊರೆಯಲಿಲ್ಲ. ಮದ್ರಾಸು ನಗರದಿಂದ ಸುಮಾರು ೨೦ಕಿಮೀ ದೂರದ ತಾಂಬರಮ್ ಎಂಬಲ್ಲಿಯ ವಿಶಾಲ ವಿಸ್ತಾರದಲ್ಲಿ ಕಾಲೇಜು. ಇದರ ಆವರಣದ ಹೊರಗೆ ಕೊಠಡಿ ಬಾಡಿಗೆಗೆ ಅಲಭ್ಯ. ನಗರದಲ್ಲಿ ನೆಲೆ ಹಿಡಿದು ಕಾಲೇಜಿಗೆ ಪಯಣಿಸುವುದು ನನಗೆ ಆರ್ಥಿಕವಾಗಿ ಅಸಾಧ್ಯ.

ಪರ್ಯಾಯ? ಕಾಲೇಜ್ ಜಗಲಿಯ ಮೂಲೆ ನನ್ನ ಕುಟೀರ. ತಾರಸಿ ಹಾಸಿಗೆ, ಹಾಸ್ಟೆಲಿನಲ್ಲಿ ಊಟ, ಸ್ನಾನ. ನನ್ನ ಬವಣೆಯನ್ನು ವಾರ್ಡನ್ನರಿಗೆ ಮತ್ತೆ ಮತ್ತೆ ನಿವೇದಿಸಿದೆ, ಸದ್ಯದ ಏರ್ಪಾಡನ್ನು ಪ್ರಾಮಾಣಿಕವಾಗಿ ವಿವರಿಸಿದೆ. ಅವರು ಹೊಡೆ ಪ್ರಹಾರ ನನ್ನ ಭವಿಷ್ಯಕ್ಕೇ ಸಂಚಕಾರ. “We do not want any mendicants here. Either you find a dwelling place outside the college or quit the college.”

ಆ ಸಂಜೆ ನಾನು ಹಾಸ್ಟೆಲ್ ಎದುರಿನ ದೊಡ್ಡ ಮರದ ಮರೆಯಲ್ಲಿ ಯಾರಿಗೂ ಕಾಣದಂತೆ ಕುಳಿತಿದ್ದೆ. ಊರಿಗೆ ಮರಳಲೇ? ಬದುಕು ಉಸುಕಿನಲ್ಲಿ ಹುಗಿದು ಹೋಗುತ್ತಿತ್ತು. ಇಲ್ಲೇ ಹೀಗೆಯೇ ಕಾಲ ತಳ್ಳಲೇ? ಕಳ್ಳ ಬಾಳು ಎಷ್ಟು ದಿನ? ಪಾಠ ಓದಲು ಪುರಸೊತ್ತು? ತರಗತಿಯ ಪಾಠಪ್ರವಚನಗಳು ಅರ್ಥವೇ ಆಗುತ್ತಿರಲಿಲ್ಲ ಮುಂದೇನು?

ನೇಸರು ಕಂತಿತು, ಕತ್ತಲು ಮುಸುಕಿತು. ಚಿಂತೆ ಚಿಂತನೆಗಳು ಚಿತೆಬೆಂತರಗಳಾಗಿ ದಹಿಸಿದುವು. ಅಷ್ಟರಲ್ಲೇ ನನ್ನ ಹಿಂದಿನಿಂದ ಯಾರೋ ಹಠಾತ್ತನೆ ಮುಂದೆ ಬಂದು, “ಹಲೋ ಜೀಟೀ! ನೀವಿಲ್ಲಿ? ಎಂಥ ಸಂತೋಷ.”
“ದೇವರಾವ್! ನೀವೇನು ಇಲ್ಲಿ ಈ ಹೊತ್ತು?”
“ಇಂಗ್ಲಿಷ್ ಆನರ್ಸ್ ಸೇರಿದ್ದೇನೆ. ಇದೇ ಹಾಸ್ಟೆಲಿನಲ್ಲಿ ನನ್ನ ಕೋಣೆ, ನೀವು?”
“ಗಣಿತ ಆನರ್ಸ್, ಆದರೆ ಊರಿಗೆ ಹಿಂತಿರುಗೋಣ ಎಂದು ಯೋಚಿಸುತ್ತಿದ್ದೇನೆ.”
“ಏಕೆ? ಏನು ತೊಂದರೆ?”
ನನ್ನ ಹೀನ ದೀನ ಮ್ಲಾನ ಪರಿಸ್ಥಿತಿ ವಿವರಿಸಿದೆ. ಎರಡನೆಯ ಯೋಚನೆ ಇಲ್ಲದೇ ಅವರೆಂದರು, “ಮಾನವಕೃತ ನಿಯಮಗಳು ಮಾನವೀಯತೆಗೆ ಮಾರಕವಾದಾಗ ಅವನ್ನು ಮುರಿಯುವುದೊಂದೇ ಸರಿಯಾದ ಮಾರ್ಗ. ಊರಿಗೆ ಮರಳುವುದನ್ನು ಮರೆತುಬಿಡಿ. ನನ್ನ ಒಂಟಿ ಕೊಠಡಿ ಸಾಕಷ್ಟು ದೊಡ್ಡದಾಗಿದೆ. ನಿಮ್ಮ ಪೆಟ್ಟಿಗೆ ಪುಸ್ತಕ ಎಲ್ಲ ಅಲ್ಲೇ ಇಡಿ; ಮಲಗಿ, ಓದಿ. ಆದರೆ ವಾರ್ಡನ್ ತಪಾಸಣೆಗೆ ಬರುವ ನಿಶ್ಚಿತ ವೇಳೆಯಲ್ಲಿ ನೀವು ಅಂತರ್ಧಾನವಾಗಿರಬೇಕು.” ಹೃದಯ ತುಂಬಿ ಬಂತು, ಮಾತು ಮೂಕವಾಯ್ತು. ಅವರ ಸೂಚನೆ ನನಗೆ ಅಮೃತಪಾನಾನುಭವ.

ದೇವರಾಯರ ಕೋಣೆ ಒಂದನೆಯ ಮಹಡಿಯಲ್ಲಿತ್ತು. ರಾತ್ರಿ ೮ರ ಮೊದಲು ಹಾಸ್ಟೆಲ್ ಪ್ರವೇಶಿಸಿ ಊಟ ಮುಗಿಸಿ ಸಂವೃತಾವರಣದ ಒಳಗಡೆಯೇ ಕಾಣೆ ಆಗುತ್ತಿದ್ದೆ – ಬಚ್ಚಲೋ ಕಕ್ಕಸೋ ಆಗ ನನ್ನ ಆಶ್ರಯ ತಾಣ. ೮ ಗಂಟೆಗೆ ಸರಿಯಾಗಿ ಹಾಸ್ಟೆಲಿನ ಕದಗಳನ್ನು ಮುಚ್ಚಿ ಬೀಗ ಜಡಿಯುತ್ತಿದ್ದರು. ಮುಖ್ಯದ್ವಾರದಲ್ಲಿ ವಾಚ್ಮನ್ ಎಂಬ ಯಮದೂತ ಕೂತಿರುತ್ತಿದ್ದ. ೮-೧೫ಕ್ಕೆ ಸರಿಯಾಗಿ ವಾರ್ಡನ್ ಯಮರಾಯ ಆ ೧೩೦ ಕೋಣೆಗಳನ್ನೂ ಖುದ್ದು ಪರೀಕ್ಷಿಸಿ ತೆರಳುತ್ತಿದ್ದರು. ವಿದ್ಯಾರ್ಥಿಗಳು ತಮ್ಮ ಕೊಠಡಿ ಕದ ತೆರೆದಿಟ್ಟು ಅಧ್ಯಯನ ಮಗ್ನರಾಗಿರಬೇಕಿತ್ತು.
ದುಷ್ಮನ್ ನಡಿಗೆ ಸಪ್ಪುಳ ಮಾಸಿ ತುಸು ಹೊತ್ತಿನಲ್ಲಿ ನಾನು ದೇವರಾಯರ ಕೋಣೆ ಹೊಕ್ಕು ಪಡಿ ಮುಚ್ಚಿ ಚಿಲಕ ಹಾಕಿ ಓದಲು ಕೂರುತ್ತಿದ್ದೆ. ವರ್ಷಪೂರ್ತಿ ನಾನು ಪರಪುಟ್ಟನಾಗಿಯೇ ಬಾಳಬೇಕೇ ಎಂಬ ಸಂಕೋಚವಾಣಿಗೆ ಅವರ ದೃಢಭರವಸೆ “ನೀವೇ ಈ ಕೊಠಡಿಯ ನಿಜ ಯಜಮಾನ ಎಂದು ನಾನು ತಿಳಿದಿದ್ದೇನೆ.”

ಒಂದು ರಾತ್ರಿ ೯ ಗಂಟೆ ದಾಟಿದೆ. ಕದ ಮುಚ್ಚಿರುವ ಗವಿಯೊಳಗೆ ನಾವಿಬ್ಬರು ಮಿಕಗಳು. ಅಷ್ಟರಲ್ಲೇ ಹೊರಗಡೆ ದುಷ್ಮನ್ ಬೂಟ್ ಸದ್ದು ಒನಕೆ ಪೆಟ್ಟಿನಂತೆ ಕುಟ್ಟುತ್ತಿದೆ. ನನ್ನ ಎದೆ ಡವಡವ. ದೇವರಾಯರ ವದನ ಪ್ರಶಾಂತ – ಸರಳಿರದ ಕಿಟಕಿಯತ್ತ ಹೋಗಿ ಮರೆಯಾಗಲು ಸಂಙ್ಞೆ ನೀಡಿದರು. ಆ ಗಳಿಗೆ ನಾನದನ್ನು ಏರಿ ಹೊರಗೆ ಇಳಿ ಮಾಡಿನ ಮೇಲೆ ಕುಳಿತು ಕತ್ತಲಲ್ಲಿ ಕರಗಿಹೋದೆ.
“Deva Rao! Open the door,” ವಾರ್ಡನ್ನರ ಕಠೋರ ಆಜ್ಞೆ.
ಗವಿಯೊಳಗೆ ಮಿಕವಿಲ್ಲ!
“Are you sure you’re alone here?”
“Ofcourse! What doubt is there, sir?”
ವಾರ್ಡನ್ ಒಳ ಬಂದರು. ಮಂಚವಿಲ್ಲದ ಕೋಣೆ. ಕುರ್ಚಿ ಮೇಜುಗಳಡಿ ತೆರೆ ಜಾಗ. ಒಂದು ಕ್ಷಣ ನಿಂತರು. ನಾನು `ಚಳಿಯೊಳಿರ್ದುಂ ಬೆಮರ್ದೆಂ!’ ಹಾಗೆಯೇ ಹಿಂತಿರುಗಿದರು. ರಾಯರು ಕದವಿಕ್ಕಿದರು. ದಡ ಸೇರಿದೆ ನಾನು.
ದುಷ್ಟ ದುಷ್ಮನನಿಗೆ ಮಿದು ಮಿಕದ ಸಿಂಡು ಹತ್ತಿದೆ. ಇನ್ನು ನಾನಿಲ್ಲಿರುವುದು ಈ ಉಪಕಾರಿ ಸನ್ಮಿತ್ರರಿಗೆ ಅಪಾಯಕಾರಿ ಎಂದು ಬಗೆದು ಮರುದಿನವೇ ತಾಂಬರಮ್ಮಿನ ಆಸುಪಾಸಿನಲ್ಲಿ ಕೊಠಡಿ ಹುಡುಕಿ ಅಲೆದೆ. ಮುಂದಿನ ವಾರ ಆ ಭದ್ರ ನೆಲೆಗೆ ಕಾಲಿಟ್ಟೆ. “ಅಂಜಿಕೆ ಇನ್ಯಾತಕಯ್ಯಾ ಸಜ್ಜನರಿಗೆ, ಭಯವು ಇನ್ಯಾತಕಯ್ಯಾ?” (ಪುರಂದರದಾಸ)

ನಿರೀಶ್ವರವಾದಿ
ಮೊದಲ ಇಂಗ್ಲಿಷ್ ಆನರ್ಸ್ ವಿದ್ಯಾರ್ಥಿ ವಿ. ಗುರುಮೂರ್ತಿ, ಈತ ತೆಲುಗು ಮನೆ ಮಾತಾಡುವ ಅಪ್ಪಟ ತಮಿಳ. (ತಮಿಳರಲ್ಲಿಯೂ ತೆಲುಗರಲ್ಲಿಯೂ ತಾವು ಕನ್ನಡಿಗರಿಗಿಂತ ಶ್ರೇಷ್ಠ ಎನ್ನುವ ಭಾವ ಪ್ರಚಲಿತವಾಗಿತ್ತು. ಕನ್ನಡಿಗರೋ? ನಿರಭಿಮಾನಿಗಳು) ಹಾಸ್ಟೆಲ್ ನಿವಾಸಿ. ತರಗತಿಯಲ್ಲಿ ದೇವರಾಯರ ಉಜ್ವಲ ಪ್ರತಿಭೆ ಮತ್ತು ನಿರ್ಭಯ ವರ್ತನೆ ಕಂಡು ಇವರತ್ತ ಬಲುವಾಗಿ ಆಕರ್ಷಿತನಾದ. ಹೀಗಾಗಿ ೧೯೪೪-೪೫ ಶೈಕ್ಷಣಿಕ ವರ್ಷದಲ್ಲಿ ದೇವರಾವ್ - ಗುರುಮೂರ್ತಿ - ನಾನು ಗಾಢ ಮಿತ್ರರಾದೆವು. ಸಂಜೆ ವೇಳೆ ತಾಂಬರಮ್ ಸುತ್ತಲಿನ ಬೆಟ್ಟಗುಡ್ಡ ತೆಮರು ಗದ್ದೆ ಎಲ್ಲ ಅಲೆದದ್ದೂ ಅಲೆದದ್ದೇ.

ಆಗ ಬಹಳವಾಗಿ ನಮ್ಮೊಳಗೆ ಚರ್ಚಿತವಾಗುತ್ತಿದ್ದ ವಿಷಯ, “ದೇವರು, ಧರ್ಮ, ಆಚರಣೆ ಮತ್ತು ಪೂಜೆ”. ಕರ್ಮಠ ಬ್ರಾಹ್ಮಣ ಸಂಪ್ರದಾಯದ ಶಿಶುವಾದ ನಾನು ಪೂಜೆ, ಮಂತ್ರಪಠನ, ವಿಧಿ ನಿಷೇಧಗಳು ಮುಂತಾದವುಗಳ ಬಗ್ಗೆ ಆಗ (ವಯಸ್ಸು ೧೮) ಬಹುತೇಕ ಉದಾಸೀನನಾಗಿದ್ದೆ – ನಿರೀಶ್ವರವಾದದತ್ತ ಮಾಲುತ್ತಿದ್ದೆ. ಆದರೆ ಇಂಥ ಚಿಂತನೆಗೆ ಕಾರಣವಾದ ತತ್ತ್ವ ಅಥವಾ ತರ್ಕ ನನಗೆ ತಿಳಿದಿರಲಿಲ್ಲ. ಗುರುಮೂರ್ತಿ ನಿರುದ್ವಿಗ್ನ, ನಿಶ್ಚಿಂತ. ದೇವರಾವ್ ಮಾತ್ರ ಉಗ್ರ ಭಗವಂತ ವಿರೋಧಿ. “ಸ್ವಾರ್ಥಕ್ಕಾಗಿ  ಮಾನವ ದೇವರೆಂಬ ಕಲ್ಪನೆಯನ್ನು ಹುಟ್ಟು ಹಾಕಿ ಇದರ ಸುತ್ತ ಧರ್ಮ, ಆಚರಣೆ ಎಂಬ ಬೇಲಿ ಕಟ್ಟಿದ್ದಾನೆ. ನಾನಂತೂ ಶತ ನಾಸ್ತಿಕ. ಯೋಗ್ಯ ವ್ಯಕ್ತಿಯಾಗಿರಬೇಕೆಂಬುದೇ ನನ್ನ ಬಯಕೆ” ಹೀಗೆ ನಮ್ಮಿಬ್ಬರ ಅಸ್ಪಷ್ಟ ಚಿಂತನೆಗೆ ಅವರು ಸಮರ್ಥ ಮುಖವಾಣಿ ಆಗಿದ್ದರು.

ಒಂದನೆಯ ಆನರ್ಸಿನ ಎಲ್ಲ ವಿಭಾಗಗಳವರೂ Moral Science ಪಾಠದಲ್ಲಿ ಒಟ್ಟು ಸೇರುತ್ತಿದ್ದೆವು. ವಾರಕ್ಕೆ ಒಂದು ಗಂಟೆ ಉಪನ್ಯಾಸವೀಯಲು ಬರುತ್ತಿದ್ದ ರೆವರೆಂಡ್ ಪ್ರಭೃತಿಯೊಬ್ಬರು ಕ್ರಿಶ್ಚಿಯನ್ ಧರ್ಮವನ್ನು ವೈಭವೀಕರಿಸುವ ಭರಾಟೆಯಲ್ಲಿ ಇತರ ಎಲ್ಲ ಧರ್ಮಗಳ ವಿಶೇಷವಾಗಿ ಹಿಂದೂಧರ್ಮದ ವಿರುದ್ಧ ಕಟಕಿ ಆಡುತ್ತಿದ್ದರು. ವಿದ್ಯಾರ್ಥಿಗಳ ಪೈಕಿ ಹೆಚ್ಚಿನವರು ಹಿಂದುಗಳು. ಸಹಜವಾಗಿ ನಮಗೆ ತುಂಬ ಇರುಸುಮುರಸಾಗುತಿತ್ತು. ಆದರೆ ಬಾಯಿಬಿಡಲು ಅಂಜಿಕೆ. ಸರಕೂ ಇರಲಿಲ್ಲ.

ಹೀಗೆ ನಾಲ್ಕೈದು ವಾರಗಳು ಸಂದುವು. ಅಂದು ರೆವರೆಂಡರು Parable of the Sower ಅಧ್ಯಾಯವನ್ನು ವಿವರಿಸಲು ತೊಡಗಿದರು. And that which fell among thorns are they, which when they have heard, go forth, and are choked with cares and riches and pleasures of this life, and bring no fruit to perfection (St. Luke VIII 14)

ಇದರಲ್ಲಿಯ thorns ಮತ್ತು they ಪದಗಳನ್ನು ನೇರ ಇತರ ಧರ್ಮೀಯರಿಗೆ ಚುಚ್ಚುವಂತೆ ವ್ಯಾಖ್ಯಾನಿಸಿದರು. ದೇವರಾಯರೆದ್ದರು. ಬೈಬಲ್ಲಿನ ಆ ಪೂರ್ಣ ಅಧ್ಯಾಯವನ್ನು ನೆನಪಿನಿಂದಲೇ ಹೇಳಿ ಅದರ ವಾಚ್ಯ, ಸೂಚ್ಯ ಮತ್ತು ಧ್ವನಿತ ಅರ್ಥಗಳನ್ನು ಸೌಮ್ಯವಾಗಿ ವಿವರಿಸಿದರು. ರೆವರೆಂಡರಿಗೆ ಪರೋಕ್ಷವಾಗಿ ಮುಖ ಪ್ರಕ್ಷಾಳನೆ. ನಮಗೆಲ್ಲ ಖುಷಿಯೋ ಖುಷಿ.
“ಹಾಗೆಯೂ ವ್ಯಾಖ್ಯಾನಿಸಬಹುದು” ಎಂದು ತಿರಸ್ಕಾರವಾಗಿ ಕುಟುಕುತ್ತ ತೊಲಗಿಯೇ ಹೋದರು. ಮತ್ತೆ ಮರಳಲಿಲ್ಲ. “ದಯೆಯೇ ಧರ್ಮದ ಮೂಲವಯ್ಯಾ!” ಸರಿ, ಹಾಗಾದರೆ “ಭಯವೇ ದೇವರ (ತ್ರಿ)ಶೂಲ”ವಾಗಿರಬಹುದೇ?

ಗಣಿತೋಪನ್ಯಾಸ ಮಾಡಲು ಬರುತ್ತಿದ್ದವರು ಒಂದೋ ಹೀಚು ಕಾಯಿಗಳು ಅಥವಾ ಮುದಿಲೊಡ್ಡುಗಳು. ಉಭಯ ಸನ್ನಿವೇಶಗಳಲ್ಲಿಯೂ ಪಾಠ ಒಂದು ಕಾಟವಾಗಿತ್ತೇ ವಿನಾ ಆಟವಾಗಲೇ ಇಲ್ಲ. ಕ್ರಿಶ್ಚಿಯನ್ ಕಾಲೇಜಿನಲ್ಲಿ ನನ್ನ ಭವಿಷ್ಯ ಕರಾಳ ಶೂನ್ಯ ಎಂಬುದು ಮೊದಲ ಆನರ್ಸ್ (೧೯೪೪-೪೫) ಮುಗಿದ ವೇಳೆಗೆ ಶತಸಿದ್ಧವಾಗಿತ್ತು. ಹರಸಾಹಸ ಮಾಡಿ ಮರುವರ್ಷ ಲಯೋಲಾ ಕಾಲೇಜಿನಲ್ಲಿ ಎರಡನೆಯ ಆನರ್ಸ್ ತರಗತಿಗೆ ದಾಖಲಾದೆ.

ಅಂದು ಮದ್ರಾಸಿನಲ್ಲಿದ್ದುದು ನಾಲ್ಕು ಪ್ರಮುಖ ಕಾಲೇಜುಗಳು. ಕ್ರಿಶ್ಚಿಯನ್, ಲಯೊಲಾ, ಪಚ್ಚಯ್ಯಪ್ಪ ಮತ್ತು  ಪ್ರೆಸಿಡೆನ್ಸಿ. ಸಾಮಾನ್ಯ ನಾಗರಿಕರ ಮಾತಿನಲ್ಲಿ ಅನುಕ್ರಮವಾಗಿ ಸಭ್ಯತೆ, ಗುಲಾಮಗಿರಿ, ರೌಡಿತನ, ರಾಜಮರ್ಜಿ ಈ ಕಾಲೇಜುಗಳ ಲಕ್ಷಣ. ಹೀಗೆ ನಾನು ಕ್ರಿಶ್ಚಿಯನ್ನಿನ ಸಭ್ಯತೆಯ `ಎತ್ತರ’ದಿಂದ (?) ಲಯೊಲಾದ ಗುಲಾಮಗಿರಿಯ `ತಗ್ಗಿ’ಗೆ (?) ಬಿದ್ದೆ ಸ್ವ-ಇಚ್ಛೆಯಿಂದ ಮತ್ತು ಗೆದ್ದೆ!

ಲಯೊಲಾದಲ್ಲಿಯ ಪಾಠ, ಪ್ರವಚನಗಳು ಅದ್ಭುತವಾಗಿದ್ದುವು. ಹಾಸ್ಟೆಲಿನ ವಾಸ್ತವ್ಯ ಅತ್ಯಂತ ಉತ್ತೇಜಕವಾಗಿತ್ತು. ಇತ್ತ ಗುರುಮೂರ್ತಿ ಕ್ರಿಶ್ಚಿಯನ್ನನ್ನು ಬಿಟ್ಟು ಲಯೊಲಾದಲ್ಲಿ ಒಂದನೆಯ ಬಿಎಗೆ ದಾಖಲಾದ. ನಾವಿಬ್ಬರೂ ವಾರಾಂತ್ಯದಲ್ಲಿ ತಾಂಬರಮ್ಮಿಗೆ ಹೋಗಿ ದೇವರಾಯರ ಬೌದ್ಧಿಕ ಸಾಹಚರ್ಯದಿಂದ ಉದ್ದೀಪಿತರಾಗಿ ಮರಳುತ್ತಿದ್ದೆವು.

೧೯೪೭ ಮೇ. ಅಂತಿಮ ಫಲಿತಾಂಶ ಪ್ರಕಟವಾದಾಗ ದೇವರಾಯರು ಪ್ರಥಮ ದರ್ಜೆಯಲ್ಲಿ ಹಿರಿಯ ಸ್ಥಾನ ಗಳಿಸಿದ್ದರು. ನಾನು ದ್ವಿತೀಯ ದರ್ಜೆಯಲ್ಲಿ ಗಣಿತ ವೈತರಣಿಯನ್ನು ಅತಿ ಪ್ರಯಾಸದಿಂದ ಉತ್ತಾರಿಸಿದ್ದೆ. ಒಡನೆ ಅವರಿಗೆ ಮಾತೃಸಂಸ್ಥೆ ಇಂಗ್ಲಿಷ್-ಟ್ಯೂಟರ್ ಹುದ್ದೆಯನ್ನು ಕರೆದುಕೊಟ್ಟಿತು – geniusಗೆ ಸಹಜವಾಗಿ ಸಂದ ಮನ್ನಣೆ. ಅವರ ಲಕ್ಷ್ಯವಿದ್ದದ್ದು Indian Foreign Service ಸೇರುವುದರತ್ತ. ಸ್ವತಂತ್ರ ಭಾರತದ (೧೫-೮-೧೯೪೭) ಪ್ರಥಮ ಸರಕಾರ Indian Foreign Service, Indian Administrative Service ಮುಂತಾದ ಕೇಂದ್ರೀಯ ಸೇವಾಪರೀಕ್ಷೆಗಳನ್ನು ಪ್ರಾರಂಭಿಸಿದ ಪ್ರಥಮ ವರ್ಷವದು. ಮೇಧಾವೀ ಯುವ ಪದವೀಧರರ ಆದ್ಯ ಲಕ್ಷ್ಯ ಈ ಪರೀಕ್ಷೆಗಳು. ಅಲ್ಲಿಯೂ IFS. ಏಕೆ? ಸ್ವಾತಂತ್ರ್ಯ ಬಂದ ಉದ್ದೀಪಕ ಪರಿಸರ, ನವಭಾರತ ನಿರ್ಮಾಣದ ಆದರ್ಶ, ಆ ಹುದ್ದೆಗಳು ಹೊತ್ತಿದ್ದ ಪ್ರತಿಷ್ಠೆ, ಆರ್ಥಿಕ ಸವಲತ್ತು, ಅಧಿಕಾರ ದವಲತ್ತು, ದೇಶ ವಿದೇಶ ಸಂಚಾರಾವಕಾಶ ಎಲ್ಲವೂ IFS ಸುತ್ತ ದೈವಿಕ ಪರಿವೇಷವನ್ನೇ ಸೃಜಿಸಿದ್ದುವು.

ಬಲ್ಲವರು ಕೇಂದ್ರೀಯ ಸೇವೆ ಸೇರಲು ಉತ್ಸುಕರಾಗಿದ್ದುದು ಸರಿ. ಆ ಪ್ರಲೋಭನೆ ನನ್ನಲ್ಲಿಯೂ ತೀವ್ರವಾಗಿತ್ತು ನಿಜ. ಆದರೆ ಸ್ವಸಾಮರ್ಥ್ಯದ (ದೌರ್ಬಲ್ಯದ) ಬಗ್ಗೆ ಯಾವ ಭ್ರಮೆಯೂ ಇರದಿದ್ದ ನಾನು ಅತ್ತ ಕಡೆ ಕಡೆಗಣ್ಣು ಕೂಡ ಹಾಯಿಸಲಿಲ್ಲ. ಮದ್ರಾಸಿನಲ್ಲೇ Indian Overseas Bank Ltd ಎಂಬ ಹಿರಿ ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಕಿರಿ ಕಾರಕೂನನಾಗಿ ಸೇರಿಕೊಂಡೆ – ಅಲ್ಲಿಯ ಎಸ್.ಎಸ್.ಎಲ್.ಸಿ ಅನುಭವೀ ಗುಮಾಸ್ತರ ಮತ್ತು ಅಧಿಕಾರಿಗಳ ನಡುವೆ ನಾನೊಬ್ಬನೇ ಎಂಎ (ಗಣಿತ) ಪದವೀಧರ – “ಕಾಕ ಸಂಘಾತದೊಳ್ ಸಿಲುಕಿರ್ದ ಕೋಗಿಲೆಯ ಮರಿಯಂತೆ” (ಲಕ್ಷ್ಮೀಶ). ರೂಪಾಯಿ – ಆಣೆ – ಪೈಗಳ ಕೂಡು – ಕಳೆ – ಗುಣಿಸು – ಭಾಗಿಸು ವ್ಯವಹಾರಗಳಲ್ಲಿ ಎಲ್ಲರಿಗಿಂತಲೂ ನಾನು ಮುಂದೆ – ಸಂಖ್ಯೆಗಳ ಸಾಲಿನ ಮೇಲೆ ಕಣ್ಣಾಡಿಸುತ್ತಿದ್ದಂತೆ ಉತ್ತರ ಸ್ಫುರಿಸುತ್ತಿದ್ದ ಎಳೆ ಹರೆಯ, ಹೊಸ ಹುಮ್ಮಸ್ಸು. ಇಂಗ್ಲಿಷನ್ನು ನಿರರ್ಗಳವಾಗಿ ಚಲಾಯಿಸುತ್ತಿದ್ದೆ. ಆಗ ನನಗೆ ದೊರೆತದ್ದು ತ್ರಿಫಲ – ಇತರರ ಕೆಲಸ, ಇಂಗ್ಲಿಷ್ ಕರಡುಪತ್ರ ತಯಾರಿಕೆ ಮತ್ತು ಅಸೂಯೆ. ವಾರದ ಏಳು ದಿನಗಳೂ balancing of ledgers ಕೂಡ ನಾನು ಮಾಡಬೇಕಾಗಿತ್ತು. ಇಷ್ಟಾಗಿಯೂ ಬ್ಯಾಂಕ್ ನನಗೆ ಪಾವತಿಸುತ್ತಿದ್ದ ಸಂಬಳ ಪೂರ್ತಿ ಹೊಟ್ಟೆ ತುಂಬಲೂ ಸಾಕಾಗುತ್ತಿರಲಿಲ್ಲ. “ನಾನೇನ ಮಾಡಲಿ ಬಡವನಯ್ಯ!” ಬೇಡುವವರಿಗೆ ಆಯ್ಕೆ ಹಕ್ಕಿಲ್ಲ, ಅಲ್ಲವೇ?

ಮೂರು ತಿಂಗಳು ಮುಗಿಯುತ್ತಿದ್ದಂತೆ ನನ್ನನ್ನು ಕಡಲಾಚೆಯ ಕ್ವಾಲಾಲಂಪೂರಕ್ಕೆ ಗುಮಾಸ್ತನಾಗಿಯೇ ಅದೇ ಸಂಬಳದಲ್ಲಿ ವರ್ಗಾಯಿಸಿದರು – ನಾನು ಬಲು ದಕ್ಷ, ಅತಿ ಕ್ಷಿಪ್ರ ಮತ್ತು ತೀರ ಚೂಟಿ ಎಂಬ ಕಾರಣ ಸಹಿತ! ಗುಲಾಮನನ್ನು ಹೊಗಳಿ ಶಿಲುಬೆಗೇರಿಸಿದಂತೆ ಎಂದುಕೊಂಡೆ. ನನಗೆ ಆಫೀಸರ್ ಹುದ್ದೆಗೆ ಬಡ್ತಿ ನೀಡಿ ವರ್ಗಮಾಡಿರೆಂದು ಲಿಖಿತ ಅರ್ಜಿ ಸಲ್ಲಿಸಿದೆ. ಇದನ್ನು gross indiscipline ಎಂದು ಬಗೆದು ಒಂದು ತಿಂಗಳ ಮುಂಗಡ ಸಂಬಳ ನೀಡಿ ನನ್ನನ್ನು ಹುದ್ದೆಯಿಂದ ಬರಖಾಸ್ತು (dismiss) ಮಾಡಿದರು. ತೊಲಗಿತು ಶನಿ ಎಂದುಕೊಂಡೆ. ಮರುಮುಂಜಾನೆ ದೇವರಾಯರನ್ನು ನೋಡಲೆಂದು ತಾಂಬರಮ್ಮಿಗೆ ಹೋದೆ.

ಬಯಸದೆ ಸಿಕ್ಕಿದ ಉಡುಗೊರೆ
ನನ್ನನ್ನು ಕಂಡು ಅವರಿಗೆ ಪರಮ ಸಂತೋಷ ಮತ್ತು ಆಶ್ಚರ್ಯ, “ನಿಮಗೆ ತುರ್ತು ಕಾಗದ ಬರೆಯಲು ತೊಡಗಿದ್ದೆ, ನೀವೇ ಪ್ರತ್ಯಕ್ಷರಾಗಿಬಿಟ್ಟಿರಿ! ಇಲ್ಲೊಂದು ಗಣಿತ ಟ್ಯೂಟರ್ ಕೆಲಸ ಖಾಲಿ ಇದೆ. ಒಡನೆ ಸೇರಬಲ್ಲಿರಾ?”
“ಈ ಗಳಿಗೆಯೇ ತಯಾರು.”
“ಹಾಗಾದರೆ ಬನ್ನಿ, ಪ್ರಾಂಶುಪಾಲರಲ್ಲಿಗೆ ಹೋಗೋಣ.”
ಹೀಗೆ ಅನಿರೀಕ್ಷಿತವಾಗಿ ಎರಡನೆಯ ಸಲ ಅವರ ಅಭಯ ಪ್ರದಾನ ನನಗೆ ಹೊಸ ಹರವು ಕಾಣಿಸಿತು.
ಫಲಿತಾಂಶವಾಕಸ್ಮಿಕವೆನಿಪುದು ಮನುಜಮಿತಿ-
ಗಳವಡದ ಋತುಲೀಲೆ – ನಡೆವುದು ತಪಶ್ಚರ್ಯೆ
ಜಲಧರದ ಸಂಗ್ರಹಕೆ, ತಂಪಿಸಲು ಕೆಡೆಯುವುದು
ಮಳೆ! ತಿಳಿಯೊ ಕಾರ್ಯಕಾರಣ ಬಂಧ ಅತ್ರಿಸೂನು

ಆ ವೇಳೆಗೆ ಕ್ರಿಶ್ಚಿಯನ್ ಕಾಲೇಜನ್ನು ವಿದ್ಯಾರ್ಥಿಗಳಾಗಿ ಸೇರಿದ್ದವರು ಕುಶಿ ಹರಿದಾಸ ಭಟ್ಟ, ಸೇವನಮಿರಾಜ ಮಲ್ಲ, ಪಿ. ರಂಗನಾಥ ಶೆಣೈ ಮತ್ತು ಎಂ. ಜನಾರ್ದನ. ಬೇಂದ್ರೆ ಹಾಡಿರುವಂತೆ –
ಯುಗಯುಗಗಳ ಹಣೆ ಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ?

ಅಂದರೆ ಅಂದು (೧೯೪೭ರ ಉತ್ತರಾರ್ಧ) ಅಲ್ಲಿ ಕನ್ನಡದ ಆರು ಯುವ ಚೇತನಗಳು ಸಂಗಮಿಸಿದ್ದುವು. ಜ್ಞಾನದ ವಿಯದ್ವಿಸ್ತೀರ್ಣವನ್ನು ಅನುಶೀಲಿಸಿ ಮಾಪಿಸಲು ಉತ್ಸುಕವಾಗಿದ್ದುವು...
ಬಾಗಲೋಡಿ: ಸರ್ವಂಕಷ ವೈದುಷ್ಯ. ಅದಕ್ಕೊಪ್ಪುವ ಸಹಜ ವಿನಯ. ಕನ್ನಡ – ಹಿಂದಿ – ಇಂಗ್ಲಿಷ್ – ಫ್ರೆಂಚ್ – ಜರ್ಮನ್ ಪಂಚಭಾಶಾ ಪ್ರಾವೀಣ್ಯ. ಪಾದರಸಬುದ್ಧಿ, ಒಂಟಿಜೀವ, ವಿದ್ವತ್ಸಮೂಹದಲ್ಲಿ ಎದ್ದು ಕಾಣುವ ಪ್ರಖರ ವ್ಯಕ್ತಿತ್ವ. ಅನುಕಂಪದ ಮೂರ್ತರೂಪ.
ಕುಶಿ: “ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ವಿಧಿ ಕಷ್ಟಗಳ ಮಳೆಸುರಿಯೆ, ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ, ಎಲ್ಲರೊಳಗೊಂದಾಗು ಮಂಕುತಿಮ್ಮ" - ಈ ಮೌಲ್ಯದ ಮನುಷ್ಯರೂಪ. ವೈದುಷ್ಯ ಮತ್ತು ಕುತೂಹಲ ಕುರಿತಂತೆ ಬಾಗಲೋಡಿ ಸಮಾನರು. ಸಮೂಹಜೀವಿ.
ಮಲ್ಲ: ದಿನಕ್ಕೊಂದರಂತೆ ಕಥೆ ಬರೆಯುತ್ತಿದ್ದ ದೈತ್ಯ ಲೇಖಕ. ಜನವಿದೂರ, ಅಂತರ್ಮುಖಿ. ಸಹೃದಯ ಸನ್ಮಿತ್ರ.
ಶೆಣೈ: ಶಿಶು ಆಂಜನೇಯ ಜನಿಸಿದೊಡನೆ ಬಾನಿನಲ್ಲಿಯ ಹಣ್ಣು (ಉದಯಸೂರ್ಯ) ಬಯಸಿ ಅತ್ತ ನೆಗೆದನಂತೆ. ಆ ಗೋತ್ರಜರಿವರು. ಉದಾರ ಹೃದಯಿ, ಉಪಕಾರಿ, ಸದಾ ಕಾರ್ಯಪ್ರವೃತ್ತ.
ಜನಾರ್ದನ: ತತ್ತ್ವಶಾಸ್ತ್ರದ ನೈಷ್ಠಿಕ ವಿದ್ಯಾರ್ಥಿ. ಅತಿ ಮುಗ್ಧ ಮತ್ತು ಹೃದಯವಂತ. ವ್ಯವಹಾರದಲ್ಲಿ ಮೋಸ ಹೋದರೂ ಅದನ್ನು ತಲೆಗೆ ಹಚ್ಚಿಕೊಳ್ಳದ ಋಜುವೇದಾಂತಿ.
ಜಿಟಿ: ಪ್ರಸ್ತುತ ಲೇಖನವೇ ಸಾಕ್ಷಿ.

ಮೊದಲ ಐವರದೂ ಇಂದು ನೆನಪು ಮಾತ್ರ (೨೦೦೩). ಅದು ಹೇಗಿದೆ? ವಿಸೀಯವರ ಅಮರವಾಣಿಯಲ್ಲಿ....
ಸತ್ತ ಮೇಲೆ ಉಳಿವುದೇನು?
ಪುಸ್ತಕವೆ? ವಿದ್ವತ್ತೆ? ನೆನಪೆ? ಗೈಮೆಯೆ?
ಹತ್ತು ಜನಕಿತ್ತ ನೆರವೆ? ನಟ್ಟು
ನಡೆಸಿದ ಸ್ವವ್ಯವಸ್ಥೆಗಳೆ? ಗುಣವೆ?
ಹೊರ ಪ್ರಪಂಚಕೆ ಹಿರಿಯವಿವು ಸರಿಯೆ,
ಅದಕಿಂತ ಚೆಲುವಾದ್ದು ನರನ ಪಾಲಿಗೆ
ಇದೆಯೆ ಎಂದೀರಿ;  ಇದೆ.....
ಕಂಡವರಿಗೆ, ಬಳಿಗೆ ಬಂದವರಿಗೆ
ಯಾವ ತೆರನ ಮನುಜನಿವನೆಂಬ ಇಂಪು.
ಅವನು ಕಾಣಿಸಿದಾ ಆದರ, ಜೀವನೋತ್ಸಾಹ,
ತುಂಬು ನೆಮ್ಮದಿ; ಚಿತ್ತ ಚಾಂಚಲ್ಯವಿಲ್ಲದ್ದು.....
ಲೋಕದ ಕೆಳೆ, ವಿಶ್ವಾಸಗಳಿಗಿಂತ ಬೇರೆ
ಏನಿದೆ?

ನಮ್ಮೊಳಗಿನ ಪರಸ್ಪರ ಸಂಬಂಧಗಳು ಪರಿಶುದ್ಧ ಮೈತ್ರಿಯ ಭದ್ರ ತಳಪಾಯದ ಮೇಲೆ ಅರಳಿದ ಗೌರವ, ಜೀವನಾಸಕ್ತಿ ಮತ್ತು ಅನ್ವೇಷಣ ಕುತೂಹಲ, ದೇವರಾಯರು ಮಿದುಳು, ಕುಶಿ ಹೃದಯ, ಉಳಿದ ನಾವು ನಾಲ್ವರು ಅಂಗೋಪಾಂಗಗಳು. ಹೀಗೆ ಕ್ರಿಶ್ಚಿಯನ್ ಕಾಲೇಜಿನ ದ್ವೀಪದೊಳಗೆ "ಹಚ್ಚೇವೆ ಕನ್ನಡದ ದೀಪ." ನಮ್ಮ ಮಂತ್ರ "ಬಾರಿಸು ಕನ್ನಡ ಡಿಂಡಿಮವ ಹೇ ಕರ್ನಾಟಕ ಹೃದಯಶಿವ" (ಕುವೆಂಪು), ಇಂಗ್ಲಿಷ್ ಸಾಹಿತ್ಯವನ್ನು ದೇವರಾವ್ ಪ್ರಭಾವದಲ್ಲಿ ಆಳವಾಗಿ ಓದಿದೆವು. ಸ್ವಾತಂತ್ರ್ಯ ಅದಾಗ ತಾನೇ ಉದಯಿಸಿ ಸರ್ವತ್ರ ನವಚೈತನ್ಯ ಹೊಸ ಹುರುಪು ವ್ಯಾಪಿಸಿದ್ದುವು. ನಮ್ಮ ಅಸ್ಮಿತೆಗೆ ಕೋಡು ಮೂಡಿತ್ತು. ಸಹಜವಾಗಿ "ಓ ಭರತಮಾತೆಯ ವರ ಪುತ್ರ! ಪರರ ಕಣ್ಣ ಕನ್ನಡಕದಲ್ಲಿ ಜಗದಿರವ ನೋಡುವುದ ತೊರೆ. ಶ್ರೀ ಹೃದಯ ಶಾರದೆಯ ಭಜಿಸಿ  ಪಡೆದವಳ ಕರದ ಪುಸ್ತಕವ ತೆರೆ (ಸೇಡಿಯಾಪು) ನಮ್ಮ ದೀಕ್ಷೆಯಾಯಿತು.

ಟ್ಯೂಟರುಗಳಾಗಿದ್ದ ದೇವರಾಯರೂ ನಾನೂ ವಾರದಲ್ಲಿ ತಲಾ ೬ ಗಂಟೆ ಮಾತ್ರ ಪಾಠ ಮಾಡಬೇಕಾಗಿತ್ತು. ಮಿಕ್ಕ ವೇಳೆ ವಾಚನ, ಅಧ್ಯಯನ, ವಿಚಾರ ಮಂಥನ, ಲೇಖನ, ಗುಡ್ಡಕಾಡು ಪರ್ಯಟನ, ಮತ್ತು ವಾರಕ್ಕೊಮ್ಮೆ (ನನಗೆ) ಕಡ್ಡಾಯ ಸಂಗೀತ ಶ್ರವಣ. ನನ್ನ ಸಂಗೀತ ಹುಚ್ಚು ಮತ್ತು ವರ್ಣನೆಗಳಿಗೆ ಮನಸೋತ ಬಾಗಲೋಡಿ ಮತ್ತು ಕುಶಿ ಆಗ ಈಗ ನನ್ನ ಜೊತೆ ಜಿಎನ್‍ಬಿ, ಮಧುರೆ ಮಣಿ, ಎಂಎಸ್, ದ್ವಾರಂ, ಮಾಲಿ ಮೊದಲಾದ ಸಂಗೀತ ದಿಗ್ಗಜರ ಸಂಗೀತ ಕಛೇರಿಗಳಿಗೆ ಬರುತ್ತಿದ್ದರು. ಕ್ರಮೇಣ ಅವರಿಗೂ ಈ ಗೀಳು ಅಂಟಿತು. ಅಂದು ಕುಶಿ ಮನದಲ್ಲಿ ಬಿತ್ತಿದ ಈ ಸಂಗೀತ ಬೀಜ ಮುಂದೆ ಉಡುಪಿಯನ್ನು ಕರ್ನಾಟಕ ಸಂಗೀತದ ಒಂದು ಪ್ರಮುಖ ಆಡುಂಬೊಲವಾಗಿ ಅರಳಿಸುವುದರಲ್ಲಿ ಸಮೃದ್ಧ ಫಸಲು ನೀಡಿತು.

ಬಿತ್ತುವುದು ಪರಿಶುದ್ಧ ಬೀಜವನು ಫಲವಂತ
ಹಿತ್ತಲಲಿ ನಿನ್ನ ಹೊಣೆ, ಹಿಂತಿರುಗಿ ನೋಡದಿರು -
ಚಿತ್ತದಲಿ ಮೂಡೀತಹಂಕಾರ, ಜಗಕೆ ಬಿಡು
ಉತ್ತಮ ಫಲ, ನಿಮಿತ್ತ ನೀನೆಲೋ! ಅತ್ರಿಸೂನು

ಸೋಮವಾರದಿಂದ ಶುಕ್ರವಾರದ ತನಕ ಪ್ರತಿಸಂಜೆ ಆ ಎರಡೂ ವರ್ಷ (೧೯೪೭ - ೪೯) ದೇವರಾಯರು ದೂರದ ಮದರಾಸು ವಿಶ್ವವಿದ್ಯಾಲಯಕ್ಕೆ ಹೋಗಿ ಫ್ರೆಂಚ್ ಮತ್ತು ಜರ್ಮನ್ ಭಾಷೆಗಳನ್ನು ಕಲಿತು ಡಿಪ್ಲೊಮ ಪದವೀಧರರಾದರು. ನಾನು ಆರಂಭಶೂರತ್ವ ಪ್ರದರ್ಶಿಸಿ ಸ್ಟ್ಯಾಟಿಸ್ಟಿಕ್ಸ್ ಡಿಪ್ಲೊಮಕ್ಕೆ ದಾಖಲಾದೆ. ಆದರೆ ನನ್ನ ಬೊಗಸೆ ಬಲು ಚಿಕ್ಕದು. ನಡುವಿನಲ್ಲೇ ಕೈ ಚೆಲ್ಲಿದೆ. "ಕಡಲೇಳಂ ಮಗುಚಿಟ್ಟೊಡಂ, ಕಲಿಯೆ ನಾನಾ ಹೃದ್ಯ ವಿದ್ಯಂಗಳಂ, ಪಡೆದಷ್ಟಲ್ಲದೆ ಬರ್ಪುದೇ ಹರಹರಾ ಶ್ರೀ ಚೆನ್ನಸೋಮೇಶ್ವರಾ?"

ತಾಂಬರಮ್ಮಿನಿಂದ ವಿಶ್ವವಿದ್ಯಾಲಯಕ್ಕೆ ಹೋಗಿ ಮರಳಲು ಸುಮಾರು ೨ ತಾಸು ರೈಲು ಪ್ರಯಾಣ ಮಾಡಬೇಕಾಗಿತ್ತು. ಅಷ್ಟರಲ್ಲೇ ದೇವರಾಯರು ಸುಮಾರು ೩೦೦ ಪುಟಗಳ ಬೃಹದ್ಗ್ರಂಥ ಓದಿ, ಅದರ ಬಗ್ಗೆ ಗಹನ ವಿಮರ್ಶೆ ಮಾಡುತ್ತಿದ್ದರು. ನಮಗೆ ಅದರ ಸಾರವನ್ನು ಉಲ್ಲೇಖನ ಸಹಿತ ವಿವರಿಸುತ್ತಿದ್ದರು. ಅಪೂರ್ವ ಧೀಶಕ್ತಿ, ಅತಿಶಯ ಆಸಕ್ತಿ, ನಿಶಿತ ಮತಿ ಮತ್ತು ಖಚಿತ ಅಭಿವ್ಯಕ್ತಿ ಇವುಗಳ ಅದ್ಭುತ ಮೇಳನ ಅವರಾಗಿದ್ದರು.

ಮಾಸ್ತಿಯಿತ್ತ ದೀಕ್ಷೆ
ಆ ಒಂದು ದಿನ ಮಾಸ್ತಿಯವರು ಮದ್ರಾಸಿಗೆ ಬರಲಿದ್ದಾರೆಂಬ ಸುದ್ದಿ ತಿಳಿಯಿತು. ಕುಶಿಯವರ ವ್ಯವಸ್ಥಾಪನ ಕೌಶಲ ಮತ್ತು ಸಾರ್ವಜನಿಕ ಸಂಪರ್ಕ ಫಲವಾಗಿ ಮಾಸ್ತಿ ನಮ್ಮ ಕ್ರಿಶ್ಚಿಯನ್ ಕಾಲೇಜ್ ಕನ್ನಡ ಸಂಘಕ್ಕೆ ಬಂದೇ ಬಂದರು. ಸುಮಾರು ಎರಡು ತಾಸು ಭಾಷಣ ಸಂಭಾಷಣ ಮಗ್ನರಾಗಿದ್ದು ನಮಗೆ "ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು" (ಅಡಿಗ) ಯಜ್ಞದೀಕ್ಷಾಪ್ರದಾನ ಮಾಡಿದರು. (ಕರ್ನಾಟಕ ಏಕೀಕರಣವಾದದ್ದು ನವೆಂಬರ್ ೧, ೧೯೫೬). ಸಮಾರಂಭದಲ್ಲಿ ಪ್ರಾರ್ಥನೆ ಹಾಡಬೇಕೆಂದು ಮಾಸ್ತಿ ತಮ್ಮ ವಿಶಿಷ್ಟ ನವುರು ಧಾಟಿಯಲ್ಲಿ ಸೂಚಿಸಿದರು. ನಾವು ಯಾರೂ ಹಾಡಿದವರಲ್ಲ. ಏನು ಮುಂದಿನ ದಾರಿ? ವ್ಯವಸ್ಥಾಪಕ ಕುಶಿ ಜಿಗಿದೆದ್ದರು. ತಮಗೆ ತಿಳಿದಿದ್ದ ಜಾನಪದ ಶೈಲಿಯಲ್ಲಿ ಅರ್ಥಕ್ಕೆ ಅವಧಾರಣೆಯಿತ್ತು ‘ಹಾಡಿ’ದರು (ಕುವೆಂಪು ಕವನ):
ಮನ್ಮನೋಮಂದಿರಕೆ, ಓ
ಲೋಕ ಗುರುಗಳೆಲ್ಲ ಬನ್ನಿ!
ಬನ್ನಿ ಬನ್ನಿ ಬನ್ನಿ!
ತುಳಿಯೆ ನಿಮ್ಮ ಪದತಲ
ದಲದಲದಲ ಅರಳ್ವುದೆನ್ನ
ಶಿರಃಕಮಲ ಕುಟ್ಮಲ
ತಮೋತಿಮಿರವಳಿಯಲಲ್ಲಿ
ಪರಂಜ್ಯೋತಿ ಬೆಳಗಲಿ
ಋತದ ಶಿವದ ಆನಂದದ
ಚಿದ್ವಿಭೂತಿ ತೊಳಗಲಿ
ಮನ್ಮನೋಮಂದಿರಕೆ, ಓ
ಲೋಕ ಗುರುಗಳೆಲ್ಲ ಬನ್ನಿ!
ಬನ್ನಿ ಬನ್ನಿ ಬನ್ನಿ!

ಮಾಸ್ತಿ ಮೆಚ್ಚಿದರು - ಆಶಯ ಮತ್ತು ಸಂದರ್ಭ ಗ್ರಹಿಸಿ, ಅವಿಸ್ಮರಣೀಯ ರಸಸನ್ನಿವೇಶ ಸೃಜಿಸಿದರು. "ನೀವೆಲ್ಲ ಕನ್ನಡದ ಆಸ್ತಿ. ಭವಿಷ್ಯ ನಿರ್ಮಾಪಕರು" ಎಂದು ಸ್ವಸ್ತಿ ನುಡಿ ಹರಸಿದರು.

ಅಂದು ಮಾಸ್ತಿ ಹೇಗೆ ಕತೆಗಾರ ದೇವರಾಯರನ್ನು ಆವಾಹಿಸಿ ಪ್ರತಿಷ್ಠಾಪಿಸಿದರೆಂಬುದು ಈಗ ಇತಿಹಾಸ. ಶೆಣೈ ಕೂಡ ಆಗ ದೀಕ್ಷೆ ಪಡೆದರು. ಕುಶಿ, ಮಲ್ಲ ಮತ್ತು ನಾನು ಆ ಮೊದಲೇ ಕಥಾಕ್ಷೇತ್ರದಲ್ಲಿ ಲಾಗ ಹೊಡೆದಿದ್ದೆವು. ನಮ್ಮೆಲ್ಲರ ಸಣ್ಣ ಕತೆಗಳಿಗೆ ಮಾಸ್ತಿ ತಮ್ಮ ‘ಜೀವನ’ ಮಾಸ ಪತ್ರಿಕೆಯಲ್ಲಿ ಅವಕಾಶ ಒದಗಿಸಿ ಕೊಟ್ಟು ಪ್ರೋತ್ಸಾಹಿಸಿದರು. ಹೊಸ ಚಿಗುರುಗಳಿಗೆ ಉಸಿರೂಡಿದ ಹಳೆ ಬೇರು ಅವರು.

ದೇವರಾಯರ ಪ್ರಥಮ ಕಥಾಸಂಕಲನ ಹುಚ್ಚ ಮುನಸೀಫ ಮತ್ತು ಇತರ ಕತೆಗಳು (೧೯೪೯). ಇದನ್ನು ಮಾಸ್ತಿಯವರೇ ‘ಜೀವನ’ ಕಾರ್ಯಾಲಯದ ಮೂಲಕ ಪ್ರಕಾಶಿಸಿದರು. ಈ ಪುಸ್ತಕಕ್ಕೆ ಅವರು ಬರೆದಿರುವ ಹರಕೆ ನುಡಿ ಮಾರ್ಮಿಕವಾಗಿದೆ. "ಎರಡು ವರ್ಷದ ಹಿಂದೆ ನಾನು ಮದರಾಸಿಗೆ ಹೋಗಿದ್ದ ವೇಳೆ ಅಲ್ಲಿಯ ಕ್ರಿಶ್ಚಿಯನ್ ಕಾಲೇಜಿನಲ್ಲಿ ಭಾಷಣ ಮಾಡಬೇಕಾದ ಸಂದರ್ಭದಲ್ಲಿ ಆಗ ಆ ಕಾಲೇಜಿನಲ್ಲಿ ಆಂಗ್ಲ ಅಧ್ಯಾಪಕರಾಗಿದ್ದ ಶ್ರೀ ಬಾಗಲೋಡಿ ದೇವರಾಯರ ಪರಿಚಯ ಲಾಭವನ್ನು ಪಡೆದೆನು. ಶ್ರೀಯುತರು ಕನ್ನಡ ಲೇಖಕರು ಎಂದು ಮಿತ್ರರಿಂದ ತಿಳಿದು ಇವರಿಂದ ಜೀವನ ಪತ್ರಿಕೆಗೆ ಲೇಖನಗಳನ್ನು ಬೇಡಿ ಬಂದೆನು. ಇಂಥ ಬೇಡಿಕೆ ನೂರು ಕಿವಿಗೆ ಬಿದ್ದರೆ ಒಂದು ಮನಸ್ಸನ್ನು ಮುಟ್ಟುತ್ತದೆ. ಬಾಗಲೋಡಿಯವರು ನನ್ನ ಬೇಡಿಕೆಯನ್ನು ಮನಸ್ಸಿಗೆ ತೆಗೆದುಕೊಂಡರು; ಸ್ವಲ್ಪ ಕಾಲದಲ್ಲೇ ಒಂದು ಕತೆಯನ್ನು ಕಳಿಸಿದರು. ಅದರ ಹೆಸರು ಶುದ್ಧ ಫಟಿಂಗ. ಅದು ಈ ಸಂಕಲನದಲ್ಲಿದೆ. ಅದು ನನಗೆ ಬಹು ಒಪ್ಪಿಗೆಯಾಯ್ತು. ಅದನ್ನು ಜೀವನದಲ್ಲಿ ಪ್ರಕಟಿಸಿದೆನು. ಅದು ಮೊದಲು ಈ ಮಿತ್ರರು ಆ ಪತ್ರಿಕೆಯಲ್ಲಿ ಪ್ರಕಟವಾಗಲು ಹಲವು ಕತೆಗಳನ್ನು ಕಳುಹಿಸಿದ್ದಾರೆ. ಹಲವು ಈಗಾಗಲೇ ಪ್ರಕಟವಾಗಿವೆ. ಉಳಿದವು ಮುಂದೆ ಪ್ರಕಟವಾಗಲಿವೆ. ಹೀಗೆ ಮೊದಲಾಗಿ ಬೆಳೆದು ಬಂದಿರುವ ನಮ್ಮ ಬಾಂಧವ್ಯ ಈಗ ನನಗೆ ಈ ಕಥಾಸಂಕಲನದ ಪ್ರಕಾಶಕನಾಗುವ ಗೌರವವನ್ನು ತಂದುಕೊಟ್ಟಿದೆ." ಪೂರ್ಣಪಾಠ ಮತ್ತು ದೇವರಾಯರ ಕತೆಗಳಿಗೆ ನೋಡಿ ಬಾಗಲೋಡಿ ದೇವರಾಯ ಸಮಗ್ರ ಕತೆಗಳು (ಪ್ರಿಸಮ್ ಪ್ರಕಾಶನ, ೨೦೦೦).
(ಉತ್ತರಾರ್ಧಕ್ಕೆ ಮುಂದುವರಿಯಲಿದೆ)

2 comments:

  1. ಇಂಥಾ ಅದ್ಭುತ ಪ್ರತಿಭೆಯ ಮಾನವೀಯ ಚೈತನ್ಯವನ್ನು ಈಗಲಾದರೂ ಓದಿ ಕೇಳಿ ಅರಿವ ಭಾಗ್ಯವಿತ್ತ ಅತ್ರಿಗೆ ಶತನಮನ.

    ReplyDelete
  2. ಮನಸು ಮೂಕವಾಗಿದೆ ಜಿ ಟಿ ನಾ ದೆವಾರಾಯರ. ಬಗ್ಗೆ ಅದ್ಬುತಾವಾಗಿ ಬರೆದಿದ್ದಾರೆ

    ReplyDelete