02 October 2017

ಆವ ಧೂಳಿನೊಳಾವ ಚೈತನ್ಯ ಕಣವೋ!

ಸೋದರಳಿಯಂದಿರ ಬಂಧ ಸಂಬಂಧಗಳು - ೨
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
(ಭಾಗ ೪)
- ಎಂ. ಅರವಿಂದ ಶರ್ಮ

ಬಾಗಲೋಡಿ ದೇವರಾಯರ ಅಕ್ಕನ (ರಾಜೀವಿ) ಮಗ ನಾನು. ಅವರು ಕಿನ್ನಿಕಂಬಳದ ಶಾಲೆಯಲ್ಲಿ ೮ನೇ ತರಗತಿ ಮುಗಿಸಿ `ಉನ್ನತ ವ್ಯಾಸಂಗ’ ಮಾಡುವ ಸಲುವಾಗಿ ಮಂಗಳೂರಿನ ನಮ್ಮ ಬಾಡಿಗೆ ಬಿಡಾರದ ಗೂಡು ಸೇರಿದರು – ೧೯೩೦ರ ದಶಕದಲ್ಲಿ. ಅಂದಿನ ಎಲ್ಲ ನಿಮ್ನ ಮಧ್ಯಮ ವರ್ಗಗಳವರಂತೆ ನಮ್ಮದು ಕೂಡ ಹಿರಿ ಕುಟುಂಬ. ಕಡಿಮೆ ವರಮಾನ, ಆದರೂ ಸ್ವಾಭಿಮಾನ ಮತು ವಿದ್ಯಾದಾಹದೀಪ್ತ. ನನ್ನ ತಂದೆ ಖಾಸಗಿ ಆಯುರ್ವೇದ ವೈದ್ಯರು. ಇವರ ಮತ್ತು ದೇವರಾಯರ ಅಣ್ಣ ಶ್ರೀಶರಾಯರ ಅಲ್ಪ ಆದಾಯವೇ ಸಂಸಾರದ ಆರ್ಥಿಕ ಆಧಾರ. ಶ್ರೀಶರಾಯರು ಒಂದು ಬಂಡಸಾಲೆಯಲ್ಲಿ ಕಾರಕೂನ.


ನಾವು ನಾಲ್ವರ ಜೊತೆಗೆ ನಮ್ಮ ಮನೆಯಲ್ಲಿ ದೇವರಾಯರ ತಂಗಿ (ಅನಸೂಯಾ ದೇವಿ), ನಮ್ಮ ತಾಯಿಯ ಚಿಕ್ಕಮ್ಮ ಮತ್ತು ಅಕ್ಕನ ಮಕ್ಕಳು ಕೂಡ ಇದ್ದರು. ಯಾವುದೇ ದಿವಸ ಸರಾಸರಿಯಲ್ಲಿ ಐವರು ವಿದ್ಯಾರ್ಥಿಗಳು ನಮ್ಮಲ್ಲಿಯ ಸದಸ್ಯರು. ಇವರ ಜೊತೆಗೆ ಸ್ವಂತ ಕೆಲಸಕ್ಕಾಗಿ ಮಂಗಳೂರಿಗೆ ಬರುತ್ತಿದ್ದ ನಂಟರಿಷ್ಟರ ಭೇಟಿ, ವಾಸ್ತವ್ಯ ಸದಾ ಇದ್ದದ್ದೇ. ಇವಾವುವೂ ನನ್ನ ತಾಯಿಯ ಮತ್ತು ಶ್ರೀಶಮಾವನ ಔದಾರ್ಯ ದೃಷ್ಟಿಗೆ ಸಮಸ್ಯೆಯೇ ಆಗಲಿಲ್ಲ. ಸ್ವತಃ ಆಸ್ತಮಾ ರೋಗಿಯಾಗಿ ದುರ್ಬಲಿಯಾಗಿದ್ದ ಈ ಮಾವ ಅಂದು ತಮ್ಮ ಬಳಿಗೆ ಬಂದವರಿಗೆ ನೀಡಿದ ಅಭಯ ಹಸ್ತ ಅವಿಸ್ಮರಣೀಯ. ಇವರು ಅವಿವಾಹಿತರಾಗಿಯೇ ಉಳಿದರು. ವಸುಧೈವ ಕುಟುಂಬಕಂ ತತ್ತ್ವವನ್ನು ಅನುಷ್ಠಾನಿಸಿದರು.


ಆದರ್ಶ ಉಪಾಧ್ಯಾಯ, ವ್ಯಾಸಂಗಶೀಲ, ಪ್ರಯೋಗಕುಶಲಿ, ಉದಾರಿ ಮತ್ತು ಮೌಲ್ಯನಿಷ್ಠ – ಇವು ದೇವರಾಯರ ತಂದೆ ಬಾಗಲೋಡಿ ಕೃಷ್ಣರಾಯರ ಗುಣಗಳು. ಕಿನ್ನಿಕಂಬಳದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಿವರು – ಅಂದರೆ ಆ ಹಳ್ಳಿಯ ಗುರು! ತೀರ ಎಳವೆಯಲ್ಲೇ ದೇವರಾಯರ ತಾಯಿ ತೀರಿಹೋದದ್ದರಿಂದ ಇವರಿಗೆ ತಂದೆಯೇ ತಾಯಿ, ಗುರು, ಸರ್ವಸ್ವ. ಅಣ್ಣ ಶ್ರೀಶರಲ್ಲಿ ತಂದೆಯವರ ಗುಣಗಳೇ ಇನ್ನಷ್ಟು ಒಲುಮೆಯಿಂದ ಪ್ರಕಟವಾಗುತ್ತಿದ್ದುದನ್ನು ಇವರು ಕಂಡರು.

ದೇವರಾಯರು ನಮ್ಮ ಮನೆಯಲ್ಲಿ ಕಲಿಯುತ್ತಿದ್ದಾಗ `ಮುಟ್ಟಿದರೆ ಮುನಿ’ ಎಂಬಂತೆ ಇದ್ದವರು. ತಾವಾಯಿತು ತಮ್ಮ ಕಲಿಕೆಯಾಯಿತು. ಶಾಲಾ ಪಠ್ಯಪುಸ್ತಕಗಳ ಜೊತೆಗ್ರಂಥಾಲಯಗಳಿಂದ ಎರವಲು ತಂದ ಕೃತಿಗಳ ವಾಚನ ಅವರ ಹವ್ಯಾಸ. ಮನೆಯಲ್ಲೇ ಜರಗುತ್ತಿದ್ದ ಹಬ್ಬ ಹರಿದಿನಗಳಲ್ಲಿ ಕೇವಲ ಆಮಂತ್ರಿತರಂತೆ ಇರುತ್ತಿದ್ದರೇ ಹೊರತು ಎಂದೂ ಸಡಗರದಿಂದ ಭಾಗಿಯಾದದ್ದು ಇಲ್ಲ.

ಮಕ್ಕಳೆಂದರೆ ಬಲು ಪ್ರೀತಿ. ತಾವು ಓದಿದ ಪೌರಾಣಿಕ, ಚಾರಿತ್ರಿಕ, ಪಂಚತಂತ್ರ, ಈಸೋಪನ ಕತೆಗಳು ಮುಂತಾದವನ್ನು ನಮಗೆ ವರ್ಣಿಸಿ ಹೇಳುತ್ತಿದ್ದುದು ಈಗಲೂ ನೆನಪಿಗೆ ಬರುತ್ತದೆ. ಅಲ್ಲದೇ ಕೆಲವೊಂದು ಕತೆಗಳನ್ನು ಸಂದರ್ಭ ಸ್ಫೂರ್ತಿಯಿಂದ ಆಗಿಂದಾಗಲೇ ನೇಯ್ದು ನಮಗೆ ಹೇಳಿರಬೇಕೆಂದು ಈಗ ನನಗನ್ನಿಸುತ್ತದೆ. ಅವರೊಂದಿಗೆ ನಾವು ಮಕ್ಕಳು ಬೇಸಗೆ ರಜೆಯಲ್ಲಿ ಕಿನ್ನಿಕಂಬಳದ ಅಜ್ಜನ (ಕೃಷ್ಣರಾಯರು) ಮನೆಗೂ ಪುತ್ತೂರು ಹತ್ತಿರದ ನರಿಮೊಗರಿನಲ್ಲಿದ್ದ ದೊಡ್ಡಮ್ಮನ (ಇಂದಿರಾ) ಮನೆಗೂ ದಾಳಿ ಇಡುತ್ತಿದ್ದೆವು. ಕಾಡುಮೇಡುಗಳಲ್ಲಿ ಅಲೆತ ಸದಾ ನಮ್ಮ ಸಂಗಾತಿಗಳು.

ನರಿಮೊಗರಿನ ದೊಡ್ಡಮ್ಮನವರಲ್ಲಿ ಮಕ್ಕಳ ಸಂತೆಯೇ ಜಮಾಯಿಸುತ್ತಿತ್ತು. ಈ ಕಪಿಪಾಳ್ಯದ ಸಮರ್ಥ ನಾಯಕರು ದೇವರಾಯರೇ. ನಮ್ಮ ಹುಚ್ಚು ಅಲೆದಾಟ ಕಿರುಚಾಟಗಳಿಗೆ ದೊಡ್ಡಮ್ಮನಿಂದ ದೊರೆಯುತ್ತಿದ್ದುದು ಪುಷ್ಕಳ ತೈಲಾಭ್ಯಂಜನದ `ಶಿಕ್ಷೆ.’ ಮತ್ತೆ ದೊಡ್ಡಮ್ಮ ನಮಗೆ ಸಮೃದ್ಧವಾಗಿ ಉಣಬಡಿಸಿ ತಿಂಡಿ ತಿನ್ನಿಸಿ ಕತೆ ಹೇಳುತ್ತಿದ್ದರು. ಮರುದಿನ ಇದೇ ಕತೆಯನ್ನು ಆಧರಿಸಿದ ನಾಟಕ ಆಡಿಸುತ್ತಿದ್ದರು – ಈ ನಾಟಕಗಳಲ್ಲಿ ಮಾವ ದೇವರಾಯರು ನಿರ್ದೇಶಕರು ಮಾತ್ರ, ಪಾತ್ರಧಾರಿಗಳಲ್ಲ. ಮುಂದೆ ಕನ್ನಡದ ಸುಪ್ರಸಿದ್ಧ ಕತೆಗಾರರಾಗಿ ಅರಳಲಿದ್ದ ಮಾವ ಬೆಳೆದದ್ದು ಈ ನೈಸರ್ಗಿಕ ಮೂಲದ್ರವ್ಯಗಳ ಕನ್ನೆನೆಲದಲ್ಲಿ, ಈ ಪ್ರಕೃತಿ ಸಂಪತ್ತಿನ ಕೊಪ್ಪರಿಗೆಯಲ್ಲಿ.
[ಲಗತ್ತಿಸಿದ ಚಿತ್ರ ಕೃಪೆ: ಕೆ.ಪಿ. ರಾವ್ ಅವರ ಮೂಲಕ ನರಸಿಂಹ ರೈಗಳು]
ಅವರು ಮದರಾಸಿನಲ್ಲಿ ಕ್ರಿಶ್ಚಿಯನ್ ಕಾಲೇಜಿನಲ್ಲಿ ಇಂಗ್ಲಿಷ್ ಆನರ್ಸ್ ವಿದ್ಯಾರ್ಥಿಯಾಗಿ ಸೇರಿದ್ದು, ಅಲ್ಲಿ ಅವರ ಕಥನ ಪ್ರತಿಭೆ ಉತ್ಸರ್ಜಿಸಿದ್ದು, ಮಾಸ್ತಿಯವರೇ ಅವರ ಕತೆಗಳನ್ನು ಮೆಚ್ಚಿ ಜೀವನದಲ್ಲಿ ಪ್ರಕಟಿಸಿದ್ದು ಮುಂತಾದ ವಿವರಗಳು ಇದೇ ಪುಸ್ತಕದ ಇತರ ಲೇಖನಗಳಲ್ಲಿ ಬಂದಿವೆ. ಮುಂದೆ ವಿದೇಶಾಂಗ ಸೇವಾ (IFS) ಸ್ಪರ್ಧಾಪರೀಕ್ಷೆ ಮೂಲಕ ಆಯ್ಕೆಗೊಂಡು ಇಂಗ್ಲೆಂಡ್, ರಶ್ಯಾ ದೇಶಗಳಲ್ಲಿ ಪ್ರೊಬೆಶನರ್ (ವೃತ್ತಿಗೆ ತರಬೇತಿಪಡೆವಾತ) ಆಗಿದ್ದರು. ನಿಮ್ನ ವರ್ಗದ ಈ ಕುಟುಂಬ ಇನ್ನೇನು ದಡ ಹತ್ತಿತು ಎನ್ನುವಷ್ಟರಲ್ಲೇ ನಿಷ್ಕರುಣವ್ಯಾಧಿ ತರಂಗದ ತಾಡನೆಗೀಡಾಗಿ ಕಡಲೊಡಲಪಾಲಾದದ್ದು ಕ್ರೂರವಿಧಿ.

ಮಾವ ರಶ್ಯದಲ್ಲಿದ್ದಾಗ ಬೆನ್ನುಹುರಿ ನೋವು ಅವರನ್ನು ತೀವ್ರವಾಗಿ ಬಾಧಿಸಿತು. ಚಿಕಿತ್ಸೆಗೆ ಬಗ್ಗದೆ ಪರಿಸ್ಥಿತಿ ಉಲ್ಬಣಿಸಿದಾಗ ಅವರನ್ನು ಲಂಡನ್ನಿಗೂ ತರುವಾಯ ಮುಂಬಯಿಗೂ ಸಾಗಿಸಲಾಯಿತು. ದೂರದ ಮುಂಬಯಿಯಲ್ಲಿ ಅವರ ಆರೈಕೆಯ ಸಲುವಾಗಿ ತಂದೆ ಕೃಷ್ಣರಾಯರೇ ಮೊಕ್ಕಾಂ ಹೂಡಿದರು. ಅಂದು ಮುಂಬಯಿಯಲ್ಲಿ ನೆಲಸಿದ್ದ ಸಾಕಷ್ಟು ಪುಣ್ಯವಂತರು ಸಹಾಯ ಮಾಡಿದ್ದಿತ್ತು. ಅಣ್ಣ ಶ್ರೀಶರಾಯರಂತೂ – ಯಾರ ಮುಂದೆ ಎಂದೂ ದೇಹಿ ಹೇಳದ ಈ ಸ್ವಾಭಿಮಾನಿ – ತಮ್ಮ ಈ ಅನರ್ಘ್ಯ ನಿಧಿಯ ಉಳಿವಿಗೆ ಹೇಗೆ ಆರ್ಥಿಕ ಮೂಲ ಒದಗಿಸಿದರೆಂಬುದೊಂದು ಚಿದಂಬರ ರಹಸ್ಯ.

ಹೀಗೆ ವೈದ್ಯರ ಉಪಚಾರ, ಅಣ್ಣ ತಂದೆ ಬಂಧು ಬಾಂಧವರ ಸಹಕಾರ, ಜನರ ಶುಭಹಾರ ಎಲ್ಲವೂ ಬೆಸುಗೆಗೊಂಡು ದೇವರಾಯರು ಪವಾಡಸದೃಶವಾಗಿ ಸಾವನ್ನು ಗೆದ್ದು ಮರಳಿದರು. ದೇಹಸ್ಥಿತಿಯ ಈ ಪರಿವರ್ತನೆ ವೇಳೆ ಅವರ ಮನಸ್ಸು ಆಶ್ಚರ್ಯಕರವೆನಿಸುವ ತೆರನಾಗಿ ಮಾರ್ಪಟ್ಟಿತ್ತು: ಪೂರ್ತಿ ನಿರೀಶ್ವರವಾದಿಯಾಗಿದ್ದ ಅವರು ಮುಂದೆ ಪರಿಪೂರ್ಣ ಈಶ್ವರವಾದಿ ಆಗಿ ಮರುವುಟ್ಟು ಪಡೆದರು. ಇವೆಲ್ಲ ಮನೋದೈಹಿಕ ಪರಿವರ್ತನೆಗಳ ಮೊದಲೂ ಅನಂತರವೂ ಅವರಲ್ಲಿ ಶಾಶ್ವತವಾಗಿ ಉಳಿದಿದ್ದುದು ಅನುಕಂಪ, ಅಂತಃಕರಣ, ಹೃದಯವಂತಿಕೆ – ಇವು ದೇವಮಾವನ ಸ್ಥಾಯೀಭಾವಗಳು.

ಮುಂಬಯಿಯಿಂದ ಕಿನ್ನಿಕಂಬಳಕ್ಕೆ ಬಂದು ವಿಶ್ರಾಂತಿ ಪಡೆಯುತ್ತಿದ್ದ ಅವಧಿಯಲ್ಲಿ ಮಾವ ಕಷ್ಟಪಟ್ಟು ಕೆಲವೊಂದು ಕತೆಗಳನ್ನು ಬರೆದರು. ಖಾಯಿಲೆಯಿಂದ ಪೂರ್ತಿ ವಾಸಿಯಾದ ಬಳಿಕ ಮತ್ತೆ ಸೇವೆಗೆ ದಾಖಲಾಗಲು ಸ್ವಲ್ಪ ತೊಂದರೆಯಿತ್ತು – ಅವರ ಸೇವೆ ಖಾಯಂ ಆಗಿರಲಿಲ್ಲ ಎಂಬುದನ್ನು ನೆನಪಿಡಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ನಾಯಕ ಶ್ರೀನಿವಾಸ ಮಲ್ಯರಿಗೆ ದೇವರಾಯರ ಅರ್ಹತೆ ಸಾಮರ್ಥ್ಯಗಳ ಅರಿವು ಇತ್ತು. ಇತ್ತ ಸರ್ವಪಳ್ಳಿ ರಾಧಾಕೃಷ್ಣನ್ ರಶ್ಯಾದಲ್ಲಿ ರಾಯಭಾರಿ ಆಗಿದ್ದಾಗ ಮಾವ ಅವರ ಜೊತೆ ಕೆಲಸ ಮಾಡಿದ್ದರು. ರಾಯಭಾರಿಗೆ ಈ ಕಿರಿಯ ಅಧಿಕಾರಿಯ ಯೋಗ್ಯತೆಯ ಬಗ್ಗೆ ಸದಭಿಪ್ರಾಯವಿತ್ತು. ಈಗ ರಾಧಾಕೃಷ್ಣನ್ ಉಪರಾಷ್ಟ್ರಪತಿಯವರಾದದ್ದೂ ಅನುಕೂಲವಾಯಿತು. ಹೀಗೆ ಮಾವನ ಆರೋಗ್ಯ, ಸ್ವಾಸ್ಥ್ಯ ಹಲವಾರು ಸಹೃದಯರ ಪ್ರೀತಿ ಪ್ರೋತ್ಸಾಹ ಎಲ್ಲವೂ ಜತೆಗೊಂಡು ಅವರು ಪುನಃ ಐ.ಎಫ್.ಎಸ್‍ಗೆ ಖಾಯಮ್ಮಾಗಿ ಸೇರುವುದು ಸಾಧ್ಯವಾಯಿತು. ನನ್ನ ತಾಯಿಯ ಜ್ಞಾತಿ ಸಂಬಂಧಿ ಶಾರದಾ ಎನ್ನುವವರು ಆಗ ದೆಹಲಿಯಲ್ಲಿದ್ದರು. ಅವರ ಪತಿ ಪತ್ತುಮುಡಿ ವೆಂಕಟರಾಯರು ವಾಯುದಳದಲ್ಲಿ ಜ್ಯೇಷ್ಠ ಅಧಿಕಾರಿ. ಶಾರದಾರ ಅಕ್ಕನೂ ಆಗ ದೆಹಲಿಯಲ್ಲಿದ್ದರು – ಇವರ ಗಂಡ ವಿಶ್ವ ಆರೋಗ್ಯ ಸಂಸ್ಥೆಯ ದೆಹಲಿ ಶಾಖೆಯಲ್ಲಿ ಉನ್ನತ ಅಧಿಕಾರಿ. ಈ ದಂಪತಿಗಳ ಹಿರಿಯ ಮಗಳು ವಿಜಯಲಕ್ಷ್ಮಿ. ಈಕೆ ದೆಹಲಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವೀಧರೆ. ಮಾವನ ಬಗ್ಗೆ ಎಲ್ಲ ಮಾಹಿತಿ ತಿಳಿದಿದ್ದ ವಿಜಯಲಕ್ಷ್ಮಿಯವರು ಒಲಿದು ಒಪ್ಪಿ ಇವರನ್ನು ವರಿಸಿದರು. ಅಂದ ಹಾಗೆ, ವಿವಾಹಪೂರ್ವದಲ್ಲಿ ಮಾವ ದೆಹಲಿಯಲ್ಲಿದ್ದಾಗ ಪತ್ತುಮುಡಿಯವರಲ್ಲೇ ತಂಗಿದ್ದರು. ಮುಂದಿನ ವಿವರಗಳು ನನಗೆ ಲಭ್ಯವಿಲ್ಲ. ಮಾವ, ಅತ್ತೆ ಮತ್ತು ಮಗ ದುರ್ಗಾಪ್ರಸಾದ ಭಾರತಕ್ಕೆ ರಜೆಯಲ್ಲಿ ಬಂದಾಗಲೆಲ್ಲ ಕಟೀಲು ಕ್ಷೇತ್ರಕ್ಕೂ (ದುರ್ಗಾಪರಮೇಶ್ವರಿ ದೇವತೆ) ಕಿನ್ನಿಕಂಬಳಕ್ಕೂ (ತಂದೆ ಕೃಷ್ಣರಾಯರು) ಮಂಗಳೂರಿಗೂ (ಅಣ್ಣ ಶ್ರೀಶರಾವ್) ಭೇಟಿ ನೀಡುತ್ತಿದ್ದರು. ಆದರೆ ನಾನು ಉದ್ಯೋಗ ನಿಮಿತ್ತ ಬೇರೆ ಕಡೆಗಳಲ್ಲಿರುತ್ತಿದ್ದುದರಿಂದ ಅವರನ್ನು ನೋಡಹೋಗಲು ಸಾಧ್ಯವಾಗುತ್ತಿರಲಿಲ್ಲ. ತಾಯಿಯನ್ನು ಮಾತ್ರ ತಪ್ಪದೆ ಮಂಗಳೂರಿಗೆ ಕಳಿಸುತ್ತಿದ್ದೆ.

ನಿವೃತ್ತ ಜೀವನವನ್ನು ಬೆಂಗಳೂರಿನಲ್ಲಿ ನಡೆಸಬೇಕೆಂದು ಮಾವ ಬಯಸಿದ್ದರು. ಅತ್ಯಂತ ಪ್ರಾಮಾಣಿಕ ಸೇವಾಜೀವನ ನಡೆಸುತ್ತ ದಾನಧರ್ಮಾದಿಗಳನ್ನು ಹದವರಿತು ಮಾಡುತ್ತ ಬಂದಿದ್ದ ಅವರು ಆರ್ಥಿಕವಾಗಿ ಅಷ್ಟೇನೂ ಗಟ್ಟಿ ಆಗಿರಲಿಲ್ಲ – ನಿವೃತ್ತ ಜೀವನವನ್ನು ತಮ್ಮ ಪ್ರಾವಿಡೆಂಟ್ ಫಂಡ್, ನಿವೃತ್ತಿ ವೇತನದಲ್ಲಿಯೇ ನಿಭಾಯಿಸಬೇಕಾಗಿದ್ದ ಪರಿಸ್ಥಿತಿ.

೧೯೮೫ರ ಫೆಬ್ರುವರಿಯಲ್ಲಿ ಅವರು ನಿವೃತ್ತರಾಗಿ ಬೆಂಗಳೂರಿಗೆ ಬಂದರು. ಪತ್ತುಮುಡಿ ವೆಂಕಟರಾಯರು ವಾಯುಪಡೆಯಿಂದ ಆ ಮೊದಲೇ ನಿವೃತ್ತರಾಗಿ ಬಂದು ಬೆಂಗಳೂರಿನ ಇಂದಿರಾನಗರದಲ್ಲಿ ಬಿಡಾರ ಹೂಡಿದ್ದರು. ಅದೇ ಸುಮಾರಿಗೆ ನಾನೂ ವರ್ಗವಾಗಿ ಬೆಂಗಳೂರು ಸೇರಿದ್ದೆ. ಇವೆಲ್ಲ ಅವಕಾಶಗಳು ಸಂಯೋಗಿಸಿ ದೇವರಾಯರು ಮತ್ತೊಮ್ಮೆ ಕನ್ನಡ ಕಥಾಕ್ಷೇತ್ರವನ್ನು ಪ್ರವೇಶಿಸುವಂತಾಯಿತು.

ನನ್ನ ದೂರ ಸಂಬಂಧಿ ಕೃಷ್ಣಮೂರ್ತಿ ತಾಳಿತ್ತಾಯರಿಂದ ಒಮ್ಮೆ ನನಗೊಂದು ದೂರವಾಣಿ ಕರೆ ಬಂದಿತು (ಆಗ ಅವರು ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಬಳಗದಲ್ಲಿ ಹಿರಿಯ ಸ್ಥಾನದಲ್ಲಿದ್ದರು): ಪ್ರಜಾವಾಣಿ ಸಂಪಾದಕರಾಗಿದ್ದ ವೈ.ಎನ್.ಕೆಯವರು ತಾಳಿತ್ತಾಯರ ಜೊತೆ ದೇವರಾಯರ ಬಗ್ಗೆ ಪ್ರಸ್ತಾವಿಸಿ ಅವರ ಸದ್ಯದ ನೆಲೆ ಮುಂತಾದ ವಿವರ ತಿಳಿಯಬಯಸಿದರು. ತಾಳಿತ್ತಾಯರು ನನ್ನನ್ನು ಸಂಪರ್ಕಿಸಿದರು.
ಫಲವಾಗಿ ಮುಂದೊಂದು ದಿನ ನಾನು ವೈಎನ್ಕೆಯವರನ್ನು ಭೇಟಿ ಮಾಡಿದೆ. ದೇವರಾಯರ ಇರವಿನ ಬಗೆಗೇ ವೈಯೆನ್ಕೆಯವರಿಗೆ ಭರವಸೆ ಇರಲಿಲ್ಲ. ಮಾವನ ಸೃಜನಶೀಲ ಸಾಹಿತ್ಯ ಪ್ರತಿಭೆ ಅತ್ಯುನ್ನತ ಮಟ್ಟದ್ದು. ಅವರು ವೃತ್ತಿ ಮತ್ತು ವಿದೇಶವಾಸಗಳ ಕಾರಣದಿಂದ ಕನ್ನಡದಲ್ಲಿ ಕೃಷಿ ಮಾಡದಿದ್ದರೂ ಕನ್ನಡ ಅವರನ್ನು ಎಂದೂ ಮರೆಯದು ಎಂದು ಆಶ್ವಾಸನೆ ನೀಡಿದರು. ಅವರ ಅಪಾರ ವೈದುಷ್ಯ, ಅನುಭವ, ವಿದೇಶ ಸಂಚಾರ, ಜನಸಂಪರ್ಕ ಎಲ್ಲವನ್ನೂ ಒಳಗೊಳ್ಳುವ ಲೇಖನಗಳನ್ನು ಬರೆಯಬಹುದಲ್ಲ ಎಂಬ ಸಲಹೆಯಿತ್ತರು. ಕತೆ ಬರೆದರೆ ಬಹಳ ಸಂತೋಷ ಎಂದೂ ದನಿಗೂಡಿಸಿದರು. ಈ ಎಲ್ಲ ಮಾಹಿತಿಗಳನ್ನು ಆಗ ನಿವೃತ್ತಿಯ ಹಂತದಲ್ಲಿ ವಿದೇಶದಲ್ಲಿದ್ದ ದೇವರಾಯರಿಗೆ ಕಾಗದ ಬರೆದು ತಿಳಿಸಿದೆ.
ಇದಕ್ಕೆ ಒಡನೆ ಉತ್ತರ ಬಂದಿತು. ಸುಮಾರು ಅದೇ ಸಮಯದಲ್ಲಿ ಗಿರಡ್ಡಿ ಗೋವಿಂದರಾಜರು ಮಲ್ಲಿಗೆ ಮಾಸಪತ್ರಿಕೆಯಲ್ಲಿ (ಅಕ್ಟೋಬರ್ ೧೯೮೨) ದೇವರಾಯರ ಕತೆ - ಅವರವರ ಸುಖ ದುಃಖವನ್ನು, ವಿಮರ್ಶಿಸಿ ಪುನರ್ಮುದ್ರಿಸಿದ್ದರು. ಈ ಸಂಗತಿ ದೂರದ ಬಲ್ಗೇರಿಯಾದಲ್ಲಿದ್ದ ಮಾವನ ಗಮನಕ್ಕೆ ಬಂದಿತ್ತು. ಆದರೆ ಯಾವ ಪತ್ರಿಕೆಯಲ್ಲಿ ಎಂಬುದು ಗೊತ್ತಿರಲಿಲ್ಲ. ವೈಯೆನ್ಕೆಯವರು ಇದನ್ನು ಪತ್ತೆ ಹಚ್ಚಿ ಆ ಮಲ್ಲಿಗೆ ಸಂಚಿಕೆಯನ್ನು ನನಗೆ ತಲಪಿಸಿದರು. ನಾನದನ್ನು ಮಾವನಿಗೆ ರವಾನಿಸಿದೆ.

ಅವರ ಅಂತರಾಳದಲ್ಲಿ ಸದಾ ಪುಟಿಯುತ್ತಿದ್ದ ಸಾಹಿತ್ಯರಸ ಚಿಗುರೊಡೆಯಲು ಇದು ನಿಮಿತ್ತವಾಯಿತು. ಸ್ವಲ್ಪವೇ ಸಮಯದಲ್ಲಿ ಮೃಷ್ಟಾನ್ನ ಎಂಬ ಕತೆ ಕಳಿಸಿದರು. ಬಿಳಿಹಾಳೆಯ ಒಂದೇ ಮಗ್ಗುಲಲ್ಲಿ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಸ್ಫುಟವಾಗಿ ಬರೆದಿದ್ದರು. ಇಲ್ಲಿ ಅಚ್ಚರಿಯ ಸಂಗತಿ ಏನೆಂದರೆ ೨೦ ವರ್ಷಗಳಿಗೂ ಮಿಕ್ಕಿದ್ದ ಅವಧಿಯಲ್ಲಿ ಅವರಿಗೆ ಕನ್ನಡದ ಸಂಪರ್ಕವೇ ಕಡಿದು ಹೋಗಿತ್ತು – ಹೊರಗೂ ಒಳಗೂ. ಆದರೂ ಆ ತಾಯಿಬೇರು ಅದೆಷ್ಟು ಪ್ರಬಲವಾಗಿದ್ದಿರಬೇಕು. ಅವರ ಅನುಭವ ಅದೆಷ್ಟು ಗಾಢವಾಗಿದ್ದಿರಬೇಕು ಮತ್ತು ಕನ್ನಡದ ಬಗೆಗಿನ ಅವರ ಅಭಿಮಾನ ಅದೆಷ್ಟು ಉಜ್ವಲವಾಗಿದ್ದಿರಬೇಕು!

ವೈಯೆನ್ಕೆಯವರಿಂದ ಈ ಪುನರುಜ್ಜೀವನ ಸಾಧ್ಯವಾದದ್ದರಿಂದ ಮೃಷ್ಟಾನ್ನವನ್ನು ನಾನು ಸುಧಾ ಮೂಲಕ ಕನ್ನಡಿಗರಿಗೆ ಉಣಬಡಿಸಿದೆ! ಮುಂದೆ ಹಲವಾರು ಕತೆಗಳನ್ನು ಅವರು ಬಲ್ಗೇರಿಯಾದಿಂದ ನನಗೆ ಕಳಿಸಿದರು. ಅವು ಯಥಾ ಕಾಲ ಸುಧಾ ಮಯೂರ ಮತ್ತು ಪ್ರಜಾವಾಣಿ ಪತ್ರಿಕೆಗಳಲ್ಲಿ ಬೆಳಕು ಕಂಡವು. ತಮ್ಮ ಈ ಕಥಾ ರಚನೆಯಲ್ಲಿ ಪತ್ನಿ ವಿಜಯಲಕ್ಷ್ಮೀಯವರ ಪಾತ್ರ (ಇವರಿಗೆ ಕನ್ನಡ ಬರದಿದ್ದರೂ) ಮಹತ್ತರವಾದುದೆಂದು ಮಾವ ನನಗೆ ಹೇಳಿದರು.

ದೇವರಾಯ ದಂಪತಿಗಳು ನಿವೃತ್ತ ಜೀವನವನ್ನು ಬೆಂಗಳೂರಿನಲ್ಲಿದ್ದು ಸ್ವಯಂಸೇವಾ ಕಾರ್ಯಗಳಲ್ಲಿ ವಿನಿಯೋಗಿಸಲು ನಿರ್ಧರಿಸಿದ್ದರು. ಆದರೆ `ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ’. ಫೆಬ್ರುವರಿ ೧೯೮೫ರಲ್ಲಿ ನಿವೃತ್ತರಾಗಿ ಬಂದರು. ಮುಂದೆ ಅದೇ ಜುಲೈ ೨೫ರಂದು ಚಿರಶಾಂತಿಧಾಮಕ್ಕೆ ನಿರ್ಗಮಿಸಿಯೇಬಿಟ್ಟರು – ಕೇವಲ ೫೮ರ ಹರಯದಲ್ಲಿ.

ಆ ದುರ್ದಿನ ಸಾಧಾರಣ ಮಧ್ಯಾಹ್ನ ೧೨ ಗಂಟೆಗೆ ಪತ್ತುಮುಡಿ ವೆಂಕಟರಾಯರಿಂದ ನನಗೆ ತುರ್ತು ದೂರವಾಣಿ ಕರೆ ಬಂದಿತು. ನಾನು ಮಾವನ ಮನೆ ತಲಪುವ ಮೊದಲೇ ಅವರು ಕೊನೆಯುಸಿರು ಎಳೆದಿದ್ದರು. ಆತುರಾತುರವಾಗಿ ಮನೆಗೆ ಮರಳಿ ಅಮ್ಮನನ್ನು ಕರೆದೊಯ್ದೆ – ತಮ್ಮ ಪ್ರೀತಿಯ, ಮಹಾ ಪ್ರತಿಭಾನ್ವಿತ, ಅಂತಃಕರಣಪೂರಿತ ತಮ್ಮನ ಕಳೇಬರ ನೋಡುವ ಸಲುವಾಗಿ.

ದೇವರಾಯರ ಸಂಬಂಧಿಕರು ಸಾಕಷ್ಟು ಮಂದಿಯಿದ್ದರೂ ಬೆಂಗಳೂರಿನಲ್ಲಿ `ಕುಟುಂಬ’ದವರು ಯಾರೂ ಇರಲಿಲ್ಲ – ಅಳಿಯನಾಗಿ ನಾನು ಮತ್ತು ಅವರ ಅಕ್ಕ (ನನ್ನ ತಾಯಿ) ಮಾತ್ರ. ಅವರಿಗಿಂತ ಆರೇಳು ವರ್ಷ ಕಿರಿಯವನಾದ ನಾನೇ ಮುಂದೆ ನಿಂತು ಅಂತಿಮ ಸಂಸ್ಕಾರ ಮಾಡಬೇಕಾಯಿತು – ಕಿನ್ನಿಕಂಬಳದ ಈ ನಿಧಿ ಮತ್ತೆ ಭೂತಾಯ ಮಡಿಲು ಸೇರಿತು.

ಆವಗಾಳಿಯದಾವ ಧೂಳ್ಕಣವ ಪೊತ್ತಿಹುದೊ!
ಆವಧೂಳಿನೊಳಾವ ಚೈತನ್ಯ ಕಣವೋ!
ಜೀವವಿಂತಜ್ಞಾತಸೂತ್ರದಾಟದ ಬೊಂಬೆ
ಭಾವಿಸಾಸೂತ್ರಗಳ ಮಂಕುತಿಮ್ಮ
ಬಾಗಲೋಡಿ ದೇವರಾಯ ಸಂಕ್ಷೇಪ ವ್ಯಕ್ತಿಜೀವನ ಸೂಚಿ
೨೭-೯-೧೯೪೯ – ವಿದೇಶಾಂಗ ಸೇವೆಗೆ ದಾಖಲಾತಿ
೧೯೫೬ರ ತನಕ – ತರಬೇತಿ, ಅನಾರೋಗ್ಯ, ಮರುನೇಮನ
೧೯೫೬-೫೯ – ವಿದೇಶ ವ್ಯವಹಾರಗಳ ಮಂತ್ರಾಲಯ, ನವದೆಹಲಿಯಲ್ಲಿ ಅಧೀನ -, ಬಳಿಕ ಉಪ- ಕಾರ್ಯದರ್ಶಿ
೧೯೫೯-೬೩ – ರೋಮ್ ಇಟಲಿಯಲ್ಲಿ ರಾಯಭಾರಿಗೆ ಪ್ರಥಮ ಕಾರ್ಯದರ್ಶಿ
೧೯೬೩-೬೫ – ನೈಜೀರಿಯಾ ಹೈಕಮಿಶನರ್ ಅವರ ಪ್ರಥಮ ಕಾರ್ಯದರ್ಶಿ
೧೯೬೫-೬೬ – ವಿದೇಶಾಂಗ ಮಂತ್ರಾಲಯ ನವದೆಹಲಿಯಲ್ಲಿ ಪಾಕಿಸ್ತಾನ್ `ಡೆಸ್ಕ್’ ವಿಭಾಗ
೧೯೬೬ – ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ನವದೆಹಲಿಯಲ್ಲಿ ಎರವಲು ಸೇವೆ
೧೯೬೭-೭೦ – ನೇಪಾಲ ರಾಯಭಾರಿ ಕಛೇರಿಯಲ್ಲಿ ಕೌನ್ಸೆಲರ್
೧೯೭೦-೭೩ – ಮನಿಲಾ ಫಿಲಿಪ್ಪೀನ್ಸಿನಲ್ಲಿ ರಾಯಭಾರಿ
೧೯೭೩-೭೬ – ಲಾವೋಸಿನಲ್ಲಿ ರಾಯಭಾರಿ
೧೯೭೬-೭೯ – ನ್ಯೂಝೀಲ್ಯಾಂಡಿನಲ್ಲಿ ಹೈಕಮಿಶನರ್, ಜೊತೆಗೆ ಸಮೋವಾದಲ್ಲಿ ರಾಯಭಾರಿ
೧೯೮೦-೮೫ – ಬಲ್ಗೇರಿಯಾದಲ್ಲಿ ರಾಯಭಾರಿ
೨೮-೨-೧೯೮೫ – ನಿವೃತ್ತಿ
(ಭಾರತ ವಿದೇಶಾಂಗ ಸೇವೆಯನ್ನು ೧೯೫೦ರಲ್ಲಿ ಸೇರಿದ ಎನ್. ಕೃಷ್ಣನ್ ಅವರು ಒದಗಿಸಿದ ಮಾಹಿತಿಯನ್ನು ಪ್ರಕಟಣೆಗೆ ಸಿದ್ಧಗೊಳಿಸಿದವರು ಎಂ. ಅರವಿಂದ ಶರ್ಮ)
(ಮುಂದುವರಿಯಲಿದೆ)


No comments:

Post a Comment