17 July 2017

ಅರ್ಕನಿಗೊಂದು ಅಚ್ಚರಿ- ಕೋನಾರ್ಕ!

ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ

ಒಡಿಶಾದ ಒಡಲೊಳಗೆ ಅಧ್ಯಾಯ (೪)

ಪುರಿಯಿಂದ ಬೆಳಿಗ್ಗೆ ಬೇಗನೆ ಹೊರಟು, ಮಹಾನದಿಯ ೨ ಕಿ.ಮೀ ಉದ್ದನೆಯ ಸೇತುವೆ ದಾಟಿ, ಬಂಗಾಳಕೊಲ್ಲಿ ತೀರದಲ್ಲಿ ಪ್ರಯಾಣಿಸುತ್ತಾ ಬಾಲುಕಾಂಡ ವನಧಾಮವನ್ನು ಹಾದು ೩೫ ಕಿ.ಮೀ ದೂರದ ಕೋನಾರ್ಕ ತಲಪಿದೆವು. 

ಕೋನಾರ್ಕ! ಇದನ್ನು ಏನೆಂದು ವರ್ಣಿಸಲಿ? ಅದ್ಭುತವೆಂದೇ? ವಾಸ್ತುಶಾಸ್ತ್ರದ ಉತ್ತುಂಗವೆಂದೇ? ಕಲೆಯಬಲೆಯೆಂದೇ? ಅಧ್ಯಾತ್ಮಶಕ್ತಿಕೇಂದ್ರವೆಂದೇ? ಸಂಪತ್ತಿನ ಆಗರವಾಗಿತ್ತೆಂದೇ? ರೇಖಾಗಣಿತವೆಂದೇ? ಖಗೋಳಶಾಸ್ತ್ರವೆಂದೇ? ಅಯಸ್ಕಾಂತ, ಲೋಹಶಾಸ್ತ್ರಗಳ ಪರಮೋಚ್ಚ ಜ್ನಾನಬಿಂದುವೆಂದೇ? ವಿಜ್ಞಾನದ ಮೇರು ಶಿಖರವೆಂದೇ? ಆಗಮಶಾಸ್ತ್ರ, ಪ್ರತಿಮಾ ಶಾಸ್ತ್ರಗಳ ಸಂಗಮವೆಂದೇ? ಕಲ್ಲಿನ ಕಾವ್ಯವೆಂದೇ? ವ್ಯಥೆಯ ಕಥೆಯೆಂದೇ? ದಾಖಲಾತಿಗಳ ದಾಖಲೆಯೆಂದೇ?

ನೃತ್ಯ, ಸಂಗೀತ, ಜನಜೀವನ, ಪರಿಸರ. ಕುದುರೆ, ಸಿಂಹ, ಆನೆ ಮೊದಲಾದ ದೇಶೀ ಪಶುಗಳು; ಜಿರಾಫೆಯಂತಹ ವಿದೇಶೀ ಪ್ರಾಣಿಗಳು; ಪಕ್ಷಿಗಳು; ವ್ಯಾಲ, ಮಕರ ಮುಂತಾದ ಕಾಲ್ಪನಿಕ ಪ್ರಾಣಿಗಳು, ಹೂ ಬಳ್ಳಿ ಅಲಂಕಾರಿಕ ಕೆತ್ತನೆಗಳು, ರೇಖಾಗಣಿತದ ಚಮತ್ಕಾರಗಳು, ಸ್ತ್ರೀ-ಪುರುಷರ ವಿವಿಧ ಭಾವಗಳು, ಭಂಗಿಗಳು, ಮನುಷ್ಯ ಜೀವನದ ಘಟ್ಟಗಳು, ಸ್ತ್ರೀಯ ಅಲಂಕಾರದ ಕ್ರಮಗಳು, ಜನರ ದಿನಚರಿ, ಜನಪದ ಕತೆಗಳು, ಪುರಾಣ, ನಾಟ್ಯಶಾಸ್ತ್ರ, ಯೋಗಸೂತ್ರ, ಕಾಮಶಾಸ್ತ್ರ, ಯಾತ್ರೆಗೆ ತೆರಳುವುದರಿಂದ ಹಿಡಿದು ವೃದ್ಧ ಮಾತಾಪಿತರ ಸಂರಕ್ಷಣೆವರೆಗೆ ಜನಜೀವನದ ಪ್ರತಿಯೊಂದು ವಿಷಯದ ಕೆತ್ತನೆಯೂ ಇಲ್ಲಿದೆ. ಅಷ್ಟೇ ಏಕೆ? ಈ ದೇವಸ್ಥಾನದ ನಿರ್ಮಾಣಕ್ಕೆ ದಕ್ಷಿಣಭಾರತದಿಂದ ಕಲ್ಲುಸಾಗಿಸುತ್ತಿರುವ ನೌಕೆ, ಆನೆ, ಕಾರ್ಮಿಕರ ಚಿತ್ರಣದ ಕೆತ್ತನೆಯೂ ಇಲ್ಲಿದೆ. ಯಾವ ಡಿಜಿಟಲ್ ಮಾಧ್ಯಮವೂ ಇಲ್ಲದ ೮೦೦ ವರ್ಷಗಳ ಹಿಂದಿನ ದಾಖಲೆ! ಅಷ್ಟೂ ವರ್ಷಗಳಿಂದ ಸಮುದ್ರ ತೀರದಲ್ಲಾಗುವ
ಎಲ್ಲಾ ಪ್ರಾಕೃತಿಕ ವಿಕೋಪ, ಈ ಭಾಗದಲ್ಲಿ ನಡೆದ ಹಲವು ಮುಸಲ್ಮಾನ ರಾಜರುಗಳ ಲೂಟಿ, ವಿದೇಶಿಗರ ದಾಳಿ, ಸರಕಾರೀ ಯಂತ್ರಗಳ ನಿರ್ಲಕ್ಷ್ಯಗಳೆಲ್ಲವಕ್ಕೂ ಸಾಕ್ಷಿಯಾಗಿ ಈಗಲೂ ಭಾರತೀಯ ಪರಂಪರೆ, ಜ್ಞಾನ, ಕೌಶಲಕ್ಕೊಂದು ಖಡಕ್ಕಾದ ಕಲ್ಲಿನ ದಾಖಲೆಯಂತೆ ನಿಂತೇ ನಿಂತಿದೆ; ನಿಜಕ್ಕೂ ನಮ್ಮ ದುರವಸ್ಥೆಯ ಪ್ರತಿರೂಪದಂತೇ. 
ಯುನೆಸ್ಕೊ ಪರಂಪರಾ ತಾಣದ ಪಟ್ಟಿಗೆ ಸೇರಿರುವ, ನಾವೀಗ ನೋಡುತ್ತಿರುವ ಕೋನಾರ್ಕ ದೇವಾಲಯ ನಿಜರೂಪದಲ್ಲಿ ಇದ್ದ ಕೋನಾರ್ಕವಲ್ಲ. ಸಾಧ್ಯವಾದಷ್ಟು ನಾಶ ಮಾಡಿ, ಮುರಿದುಬೀಳಿಸಿ, ಸಂಪತ್ತನ್ನೆಲ್ಲಾ ಸೂರೆ ಮಾಡಿ, ಕದ್ದೊಯ್ದು, ನಿಗಾವಹಿಸದೇ ಬಿಟ್ಟ ದೇವಾಲಯಕ್ಕೇ ಇಷ್ಟೊಂದು ಭವ್ಯತೆ ಉಳಿದಿದ್ದರೆ, ಅದರ ನಿಜ ರೂಪ ಹೇಗಿದ್ದಿರಬಹುದು? ಊಹಿಸಲೂ ಸಾಧ್ಯವಿಲ್ಲ ಯಾಕೆಂದರೆ ಕೋನಾರ್ಕದ ಕತೆಯೂ ಹಾಗೇ ಇದೆ. 

ಶ್ರೀಕೃಷ್ಣನ ಮಗ ಸಾಂಬನಿಗೆ ಕುಷ್ಠರೋಗವಾಗಿತ್ತಂತೆ. ಅದರಿಂದ ಮುಕ್ತಿ ಪಡೆಯಲು ಆತ
ಈ ಜಾಗಕ್ಕೆ ಬಂದು ಇಲ್ಲಿಯ ಸಮುದ್ರಸ್ನಾನ, ಬೇವು ಮತ್ತು ಸೂರ್ಯನ ಪ್ರಥಮ ಕಿರಣಗಳಿಗೆ ಮೈ ಒಡ್ಡುವ ದಿನಚರಿಯನ್ನು ೧೨ ವರ್ಷಗಳ ಕಾಲ ಬಿಡದೇ ಮಾಡಿ ರೋಗಮುಕ್ತನಾದನಂತೆ. ತಾನು ಪಡೆದ ಆರೋಗ್ಯಕರ ಜೀವನದ ದ್ಯೋತಕವಾಗಿ ಇಲ್ಲಿ ಸೂರ್ಯನಿಗೆ ಒಂದು ದೇವಾಲಯವನ್ನು ಮೊದಲು ನಿರ್ಮಿಸಿದ್ದಾಗಿ ಸ್ಥಳಪುರಾಣ.

ಕೋನ ಮತ್ತು ಅರ್ಕ (ಸೂರ್ಯ) ಶಬ್ದಗಳ ಸಂಗಮ ಕೋನಾರ್ಕ. ನಾವು ನೋಡುತ್ತಿರುವ ಕೋನಾರ್ಕವನ್ನು ೮೦೦ ವರ್ಷಗಳ ಹಿಂದೆ ಗಂಗರಾಜ ಮನೆತನದ ಮೊದಲ ನರಸಿಂಗದೇವ ಎಂಬ ರಾಜ ಕಟ್ಟಿಸಿದನೆಂದು ಚರಿತ್ರೆಕಾರರು ಹೇಳುತ್ತಾರೆ. ಸುಮಾರು ೧೨೦೦ ಕುಶಲಕರ್ಮಿಗಳು ೧೨ ವರ್ಷಗಳ ಕಾಲ ದುಡಿದು ಈ ಅದ್ಭುತವನ್ನು ನಿರ್ಮಿಸಿದರೆಂದು ಹೇಳುತ್ತಾರೆ.ಈ ಸೂರ್ಯ ದೇವಾಲಯ, ಮೊದಲು ಚೆನ್ನಾಗಿ ಹರಿಯುತ್ತಿದ್ದ, ಈಗ ಒಂದು ಕೊಳದ ರೂಪದಲ್ಲಿ ಮಾತ್ರ ಕಾಣ ಸಿಗುವ ಚಂದ್ರಭಾಗಾ ನದಿಯು ಬಂಗಾಳ ಕೊಲ್ಲಿಯನ್ನು ಸೇರುವ ಮುಖಜ ಭೂಮಿಯಲ್ಲಿ ಕಟ್ಟಲ್ಪಟ್ಟಿತ್ತು. ಈಗ ಸಮುದ್ರ ಹಿಂದೆ ಸರಿದು ೩ ಕಿ.ಮೀ.ಗಳಷ್ಟು ದೂರವಿದೆ. ಇಡೀ ದೇವಸ್ಥಾನವನ್ನು ಸೂರ್ಯನ ರಥದಂತೆ ವಿನ್ಯಾಸಗೊಳಿಸಿದ್ದು, ೨೪ ಚಕ್ರಗಳೂ ೭ ಕುದುರೆಗಳೂ ಇರುವಂತೆ ರಚಿಸಿದ್ದಾರೆ. ದೇವಸ್ಥಾನದ ಆವರಣದಲ್ಲಿ ಗರ್ಭಗುಡಿ (ವಿಮಾನ), ಜಗಮೋಹನ, ನಾಟ್ಯಮಂದಿರ, ಭೋಗಮಂಟಪ,
ಪಾಕಶಾಲೆ, ಬಾವಿ, ಮಾಯಾದೇವಿ ಮಂದಿರ, ಇನ್ನೊಂದು ವೈಷ್ಣವ ದೇಗುಲಗಳ ರಚನೆಗಳನ್ನು ಅಥವಾ ಅವುಗಳ ಕುರುಹುಗಳನ್ನು ಕಾಣಬಹುದು. 

ದೇವಸ್ಥಾನದ ಆವರಣವನ್ನು ಪ್ರವೇಶಿಸಲು ಸಿಂಹ, ಗಜ, ಅಶ್ವಗಳೆಂಬ ೩ ದ್ವಾರಗಳಿವೆ. ಸಿಂಹದ್ವಾರದ ಮೂಲಕ ಬಂದಾಗ, ಈಗ ಲಭ್ಯವಿರುವ ೨
ಬೃಹತ್ಕಲ್ಲಿನ ರಚನೆಗಳು ಒಂದು ರಥದ ಆಕಾರವನ್ನು ಕೊಡುತ್ತವೆ. ಎದುರಿಗೆ ಇರುವ ಜಗಮೋಹನ ೧೧೯ ಅಡಿಗಳಷ್ಟು ಎತ್ತರವಿದೆ. ಇದರ ಭವ್ಯತೆಗೇ ಈಗ ನಾವು ಬೆರಗಾಗುತ್ತೇವೆ. ಮೂಲದಲ್ಲಿ ಈ ರಚನೆಯ ಹಿಂದೆ ೨೨೯ ಅಡಿಗಳಷ್ಟು ಎತ್ತರದ ಗರ್ಭಗುಡಿ ಇತ್ತು. ಅಷ್ಟು ಎತ್ತರದ ಭವ್ಯ ರಚನೆ ಇಂದಿಗೆ ಸುಮಾರು ೪ ಶತಮಾನಗಳ ಹಿಂದೆ ಬಿದ್ದು
ಹೋಯಿತು. ಈಗ ೯೦ ಅಡಿ ಮಾತ್ರ ಉಳಿದಿದೆ. ಹೀಗೆ ಇದು ಬೀಳುವುದಕ್ಕೆ ಈ ದೇವಸ್ಥಾನವನ್ನು ನಿರ್ಮಿಸಿದ ಬೆರಗಿನ ತಂತ್ರಗಾರಿಕೆಯ ಅರಿವು ಮುಂದಿನ ಕಾಲದಲ್ಲಿ ಅದನ್ನು ಆಕ್ರಮಿಸಿದ ಪೋರ್ಚುಗೀಸರಿಗೆ ಇಲ್ಲದ್ದೇ ಕಾರಣವಾಗಿರಬಹುದು.

ಗಂಗರಾಜ ಮೊದಲ ನರಸಿಂಗದೇವ ಸುಮಾರು ೧೩ನೇ
ಶತಮಾನದಲ್ಲಿ ಕೋನಾರ್ಕವನ್ನು ಕಟ್ಟಿಸಿದನೆಂದು ಹೇಳಿದೆನಷ್ಟೆ. ಇದೊಂದು ದಿವ್ಯವೂ ಭವ್ಯವೂ ವೈಜ್ಞಾನಿಕವೂ ತಾಂತ್ರಿಕ ಕುಶಲಗಾರಿಕೆಯಲ್ಲಿ ಅತ್ಯಪೂರ್ವವೂ ಆದುದಾಗಿತ್ತು. ಕಪ್ಪು ಕಲ್ಲಿನಿಂದ ಕಡೆಯಲಾಗಿದ್ದ ಸೂರ್ಯದೇವನ ವಿಗ್ರಹ ಮತ್ತು ಆ ವಿಗ್ರಹವಿದ್ದ ಗರ್ಭಗುಡಿ ಈಗ ನಮ್ಮ ಕಲ್ಪನೆಗೆ ಸಿಗುವ ಅಂಶಗಳಲ್ಲೇ
ಅತ್ಯದ್ಭುತವೆನಿಸುವಂತಹುದು. ೨೨೯ ಅಡಿಗಳಷ್ಟು ಎತ್ತರದ ಗೋಪುರವನ್ನು ಹೊಂದಿದ್ದ ಗರ್ಭಗುಡಿಯ ರಚನೆ ಮಾಡಿದ್ದಾದರೂ ಹೇಗೆ? ಕ್ರೇನ್ ಮುಂತಾದ ಯಂತ್ರಗಳ ಸಹಾಯವಿಲ್ಲದೇ ೫ ಹಂತಗಳಲ್ಲಿ ಕಲ್ಲಿನ ಕೆತ್ತನೆಗಳನ್ನು ಒಂದರ ಮೇಲೊಂದು ಇಟ್ಟದ್ದಾದರೂ ಹೇಗೆ? ಈ ಕಲ್ಲುಗಳನ್ನು ಯಾವುದೇ ಸಿಮೆಂಟಿನಂತಹ ವಸ್ತುಗಳನ್ನು ಉಪಯೋಗಿಸದೇ ಜೋಡಿಸಿದ್ದಾದರೂ ಹೇಗೆ? ೨ ಕಲ್ಲುಗಳ ಮಧ್ಯೆ ಕಬ್ಬಿಣದಂತಹ ಲೋಹದ ತೆಳು ಪಟ್ಟಿಗಳನ್ನು ಇರಿಸಿದ್ದಾರೆ. ಅದರ ತಯಾರಿ ಹೇಗೆ? ಅದು ಹೇಗೆ ಇಷ್ಟು ವರ್ಷಗಳಾದರೂ ಚೂರೂ ಹಾಳಾಗದೇ ಹಾಗೇ ಇದೆ?

ಕಲ್ಲುಗಳ ಮಧ್ಯೆ ಲೋಹದ ಪಟ್ಟಿಗಳನ್ನಿಟ್ಟು ಜೋಡಿಸುವ ವಿಧಾನವನ್ನು ಇಲ್ಲಿ ಬಳಸಿದ್ದು ಕಂಡು ಬರುತ್ತದೆ. ಅಷ್ಟು ಮಾತ್ರವಲ್ಲ, ಬೃಹತ್ ದಾರಂದಗಳು, ನಾಲ್ಕೂವರೆ ಟನ್ ತೂಗುವ ದೇವರ ವಿಗ್ರಹಗಳನ್ನು ಆಧರಿಸಲು ಕೂಡ ಲೋಹದ ಕಂಬಗಳನ್ನು
ಬಳಸಿದ್ದಾರೆ. ೨೦ ಅಡಿ ಉದ್ದದ, ೫ ಟನ್ ತೂಗುವ ಈ ಕಂಬಗಳ ತಯಾರಿ, ಅವುಗಳಲ್ಲಿರುವ ಬೆಸುಗೆ, ಗುಣಮಟ್ಟ ಎಲ್ಲವೂ ಉತ್ಕೃಷ್ಟವೂ ಇಂಜಿನಿಯರಿಂಗ್ ಕೌಶಲ್ಯದ ಅತ್ಯದ್ಭುತವೂ ಆಗಿವೆ. ಇಂತಹ ಭಾರೀ ಗಾತ್ರದ, ಅಷ್ಟೇ ತೂಕದ ಕಲ್ಲು, ಮರ, ಲೋಹದ ಪಟ್ಟಿಗಳನ್ನು ಆ ಎತ್ತರಕ್ಕೆ ಏರಿಸಿದ ವಿಧಾನದ ವಿವರಣೆ ಅಲ್ಲಿನ ಗ್ರಾಮಸ್ಥರು
ಜೋಪಾನವಾಗಿಟ್ಟಿದ್ದ ದೇವಸ್ಥಾನದ ರಚನೆಯ ವಿವರಗಳಿರುವ ಮೂಲ ತಾಳೆ ಪ್ರತಿಗಳಲ್ಲಿ ದೊರಕಿವೆಯಂತೆ. ಆನೆ, ರಾಟೆಗಳು ಮತ್ತು ಮನುಷ್ಯ ಬಲವನ್ನು ಉಪಯೋಗಿಸಿ ಸಂಕೀರ್ಣ, ನಾಜೂಕಿನ ಹೊಂದಾಣಿಕೆಯ ವ್ಯವಸ್ಥೆಯ ಮೂಲಕ ಇದನ್ನು ನಡೆಸಿದ್ದರು. ಈ ಕ್ರಮದ ಕೆತ್ತನೆಯನ್ನೂ ಅಲ್ಲಿ ಕಾಣಬಹುದು. ವಿವರಗಳು ಬೇಕಿದ್ದರೆ:

ಇಷ್ಟುಮಾತ್ರವಲ್ಲ, ಗರ್ಭಗುಡಿಯಲ್ಲಿದ್ದ ಸೂರ್ಯನ ವಿಗ್ರಹ ಭೂಮಿಯನ್ನು ತಾಕುತ್ತಿರಲಿಲ್ಲವಂತೆ, ಮಧ್ಯದ ಅವಕಾಶದಲ್ಲಿ ತೇಲುತ್ತಿರುವಂತೆ ಇರಿಸಲಾಗಿತ್ತು. ಈ ಚಮತ್ಕಾರಕ್ಕಾಗಿ ೧೦ ಟನ್ ತೂಕದ ಅಯಸ್ಕಾಂತವನ್ನು ತಳಭಾಗದಲ್ಲೂ, ೫೩ ಟನ್ ತೂಕದ ಬೃಹತ್ ಅಯಸ್ಕಾಂತವನ್ನು ಗರ್ಭಗುಡಿಯ ಶಿಖರದ ಮೇಲೂ ಇರಿಸಲಾಗಿತ್ತಂತೆ. ಈ ಅಯಸ್ಕಾಂತವು
ಎರಡು ಕಲ್ಲುಗಳ ನಡುವಿನ ಲೋಹದ ಪಟ್ಟಿಗಳನ್ನೂ ಚುಂಬಕ ಶಕ್ತಿಯಿಂದ ಎಳೆದು ಹಿಡಿದಿತ್ತಂತೆ. ಸೂರ್ಯದೇವರ ವಿಗ್ರಹದ ಮಧ್ಯದಲ್ಲಿ ಒಂದು ದೊಡ್ಡ ವಜ್ರವನ್ನು ಇಟ್ಟಿದ್ದರು. ಸೂರ್ಯೋದಯದ ಪ್ರಥಮ ಕಿರಣ, ಇಲ್ಲಿ ಮೊದಲು ಕಟ್ಟಲ್ಪಟ್ಟ ನಾಟ್ಯಮಂದಿರದ ಮೂಲಕ ಗರ್ಭಗುಡಿಗೆ ಬಿದ್ದು, ಅಲ್ಲಿ ಸೂರ್ಯದೇವನ ವಿಗ್ರಹದಲ್ಲಿದ್ದ ವಜ್ರದಲ್ಲಿ ಪ್ರತಿಫಲನ
ಹೊಂದಿ, ಇಡೀ ಗರ್ಭಗುಡಿಯನ್ನು ಬೆಳಗುತ್ತಿತ್ತು. ಪ್ರತಿಫಲಿತ ಬೆಳಕು ಮತ್ತೆ ಜಗಮೋಹನ, ಅದರ ಮುಂದಿರುವ ನಾಟ್ಯಮಂದಿರದ ಮೂಲಕ ಹೋಗುತ್ತಿತ್ತು. ಇದಕ್ಕೇ ಕೋನಾರ್ಕವೆಂಬ ಹೆಸರು! ಇಂತಹ ದಿವ್ಯವೂ ಭವ್ಯವೂ ಆಗಿದ್ದ ಮಂದಿರ ಸುಮಾರು ೩೦೦ ವರ್ಷಗಳ ಕಾಲ ಸುಸ್ಥಿತಿಯಲ್ಲಿದ್ದದ್ದನ್ನು ತಿಳಿಸುವ ಕೆಲವು ಬರಹಗಳು
ಲಭ್ಯವಿವೆಯಂತೆ. ಇಷ್ಟೊಂದು ಕ್ಲಿಷ್ಟ, ಸಂಕೀರ್ಣ, ಬೆರಗಿನ ರಚನೆ ನಾಶವಾದ ಬಗೆ ಮಾತ್ರ ದುಃಖಕರವಾದುದು.

ಮುಂದೆ ೧೬ ನೇ ಶತಮಾನದಲ್ಲಿ ಮುಸಲ್ಮಾನ ದೊರೆಗಳ ಆಕ್ರಮಣದಿಂದ ಕೋನಾರ್ಕದ ಅವನತಿಯ ಶಕೆ ಆರಂಭವಾಯಿತು. ಈ ಆಕ್ರಮಣದನಂತರ ಇಲ್ಲಿ ಪೂಜೆ ನಿಂತು ಹೋಯಿತು. ಇಲ್ಲಿದ್ದ ಸೂರ್ಯನ ವಿಗ್ರಹವನ್ನು ಪುರಿಗೆ
ಒಯ್ಯಲಾಯಿತು. ಈಗ ದೆಹಲಿಯ ನ್ಯಾಶನಲ್ ಮ್ಯೂಸಿಯಮ್ಮಿನಲ್ಲಿ ಇಟ್ಟಿದ್ದಾರೆಂದು ಹೇಳುತ್ತಾರೆ. ಇಲ್ಲಿನ ೩೩ ಅಡಿ ಎತ್ತರದ ಲೋಹದ ಅರುಣಸ್ತಂಭ ಈಗಲೂ ಪುರಿ ದೇವಸ್ಥಾನದ ಸಿಂಹದ್ವಾರದ ಇದಿರು ಸುಸ್ಥಿತಿಯಲ್ಲಿದೆ.

ಬಂಗಾಲ ಕೊಲ್ಲಿಯಲ್ಲಿ ವ್ಯಾಪಾರ, ವಹಿವಾಟುಗಳು ಧಾರಾಳವಾಗಿ ನಡೆಯುತ್ತಿದ್ದ ಶತಮಾನಗಳು ಅವು. ಮುಂದೆ ಪೋರ್ಚುಗೀಸರು ತಮ್ಮ ನೌಕೆಗಳನ್ನು ಈ ಜಾಗದಲ್ಲಿ ಹಾಯಿಸಲು ಪ್ರಯತ್ನಿಸಿದಾಗ ಅವರ ದಿಕ್ಸೂಚಿಗಳು ಈ ಗರ್ಭಗುಡಿಯ ಮೇಲಿದ್ದ ಅಯಸ್ಕಾಂತದ ಪ್ರಭಾವಕ್ಕೆ ಒಳಗಾಗಿ ದಿಕ್ಕು ತಪ್ಪಿ ಎಲ್ಲೆಲ್ಲಿಗೋ ಹೋಗಿ ಹೊಡೆಯುತ್ತಿದ್ದವಂತೆ, ಇದರ ಪರಿಹಾರಕ್ಕಾಗಿ ಈ ಅಯಸ್ಕಾಂತವನ್ನು ಡೈನಮೈಟ್ ಮೂಲಕ ಸ್ಪೋಟಿಸಿದರಂತೆ, ಪರಿಣಾಮವಾಗಿ ಗರ್ಭಗುಡಿಯ ಕಲ್ಲುಗಳು ಚುಂಬಕಶಕ್ತಿ ಇಲ್ಲದೆ ಬೀಳತೊಡಗಿದವು. ಕೋನಾರ್ಕ ಜನರಿಂದ ದೂರವಾಯಿತು. ಪಾಳುಬಿದ್ದ
ದೇಗುಲವಾಗಿ ಭೂಗರ್ಭ ಸೇರಿ ಕಾಡುಗಳಿಂದ ಆವೃತವಾಯಿತು. ಸುಮಾರು ೩೦೦ ವರ್ಷಗಳನಂತರ, ೧೯ ನೇ ಶತಮಾನದಲ್ಲಿ ಬಂದರಿನ ನಿರ್ಮಾಣದ ಆಸೆಗಾಗಿ ಬ್ರಿಟಿಷರು ಇಲ್ಲಿ ಕೆಲಸ ಸುರುಮಾಡಿದಾಗ ಮತ್ತೆ ಕಣ್ಣಿಗೆ ಬಿತ್ತು. ಪ್ರಾಚ್ಯ ಮತ್ತು ಪುರಾತತ್ವ ಇಲಾಖೆಯ ಸಾಹಸದಿಂದ ಈಗಿನ ರೂಪು ಪಡೆದಿದೆ.

ಇಷ್ಟೆಲ್ಲಾ ದುರವಸ್ಥೆಗಳನ್ನು ಅನುಭವಿಸಿದ ಈ ಜಾಗದಲ್ಲಿ ಉಳಿದದ್ದಕ್ಕಿಂತ ಎಷ್ಟೋ ಪಾಲು ಕಳೆದುಹೋಗಿದೆ. ಆದರೆ ಈಗ ಉಳಿದ ಭಾಗದ ರಹಸ್ಯಗಳೇ ನೂರಾರು. ಈಗ ಗರ್ಭಗುಡಿಯೂ ಇಲ್ಲ, ಸೂರ್ಯನ ವಿಗ್ರಹವೂ ಇಲ್ಲ. ಬರಿದಾದ ಈ ಜಾಗಗಳನ್ನು ಮೇಲಿನಿಂದ ಬೀಳುವ ಕಲ್ಲುಗಳಿಂದ ರಕ್ಷಿಸಲು ಬ್ರಿಟಿಷರು ಅದರ ತುಂಬಾ ಮರಳಿನ ಚೀಲಗಳನ್ನು ತುಂಬಿಟ್ಟಿದ್ದಾರಂತೆ. ಯಾರಿಗೂ ಒಳಗೆ ಪ್ರವೇಶವಿಲ್ಲ. ಇದನ್ನು ನೋಡಿದಾಗ ನನಗೆ ಒಂದರ್ಥದಲ್ಲಿ
ನಾವೂ ಹೀಗೆಯೇ ಆಗಿದ್ದೇವೆ ಎಂದೆನಿಸಿತು. ತಲೆತಲಾಂತರಗಳಿಂದ ಬಂದ ಜ್ಞಾನಸಂಪತ್ತನ್ನು ಕಳೆದುಕೊಂಡು, ನಮ್ಮ ತಲೆಗಳಿಗೆಲ್ಲಾ ಮರಳಿನ ಚೀಲದ ಮರುಳನ್ನು ತುಂಬಿ ಬಿಟ್ಟಿದ್ದಾರಲ್ಲವೇ? ಅಲ್ಲವಾದರೆ, ದೇವರೆಂದು ಆರಾಧಿಸುತ್ತಿದ್ದ ಸೂರ್ಯನಿಂದ ಸುಲಭವಾಗಿ, ಯಥೇಚ್ಛವಾಗಿ ಸಿಗುವ, ದೇಹದ ಸಕಲ ಕ್ರಿಯೆಗಳಿಗೆ ಪ್ರಚೋದಕವಾದ ವಿಟಮಿನ್ ಡಿಯನ್ನು ನಮಗೆ ಮೀನೆಣ್ಣೆ, ಕ್ಯಾಪ್ಸೂಲ್, ಇಂಜೆಕ್ಷನ್ನುಗಳ ಮೂಲಕ ಪಡೆಯುವ ಅಗತ್ಯ ಬರುತ್ತಿತ್ತೇ? 

ಕೋನಾರ್ಕದ ಇನ್ನೊಂದು ಅದ್ಭುತವೆಂದರೆ ರಥದ ಗಾಲಿಗಳ ರಚನೆ. ೨೪ ಚಕ್ರಗಳಿದ್ದು, ೧೨ ಎಡ ಮತ್ತು ೧೨ ಬಲಬದಿಗಳಲ್ಲಿವೆ. ೧೦ ಅಡಿ ವ್ಯಾಸದ ಗಾಲಿಗಳು. ಇವುಗಳಲ್ಲಿರುವ ಗಾಲಿಯ ಅರಗಳು ಆಕರ್ಷಕ ಕೆತ್ತನೆ ಮಾತ್ರವಲ್ಲದೇ ದಿನದ ಯಾವ ಹೊತ್ತಿನಲ್ಲೂ ಮಿನಿಟಿಗೆ ಸಮೀಪದ ಸಮಯವನ್ನು ನಿಖರವಾಗಿ ತಿಳಿಸುತ್ತವೆ. ನಮ್ಮ ಗೈರ್ ತನ್ನ ಪೆನ್ನನ್ನು ಗಾಲಿಯ ಕೇಂದ್ರ ಬಿಂದುವಿನಲ್ಲಿಟ್ಟು, ಅದರ ನೆರಳನ್ನು
ಗಮನಿಸಿ, ಹನ್ನೊಂದು ಗಂಟೆ ಮೂವತ್ತಾರು ಮಿನಿಟು ಎಂದು ಹೇಳಿದ. ೮೦೦ ವರ್ಷಗಳ ಹಿಂದಿನ ಕಲ್ಲಿನ ಗಡಿಯಾರದ ಸಮಯ ಸರಿಯಾಗಿದೆಯಾ ಎಂದು ಈಗಿನ ಇಲೆಕ್ಟ್ರಾನಿಕ್ ಮೊಬೈಲ್ ಫೋನುಗಳಲ್ಲಿ ಪರೀಕ್ಷಿಸಿದೆವು. ಅದು ೧೧:೩೬ ಎಂದು ತೋರಿಸುತ್ತಿತ್ತು. ಇಲ್ಲಿಯ ಗಾಲಿಗಳ ರಚನೆಯ ಪೂರ್ತಿ ವಿವರಗಳು ಇನ್ನೂ ತಿಳಿದಿಲ್ಲ. ರಾತ್ರಿ ಹೊತ್ತು ಕೂಡಾ ಸಮಯವನ್ನು ತಿಳಿಸಬಲ್ಲ ಗಾಲಿಗಳು ಇವೆ ಎಂದು ಕೆಲವರ ಅಭಿಪ್ರಾಯ. ಆದರೆ ಬಳಕೆ ಹೇಗೆ ಎಂಬುದೇ ಇನ್ನೂ ಒಗಟು. 

ಇನ್ನು ಎಷ್ಟೋ ವಿಸ್ಮಯಕಾರಿ ಅಂಶಗಳಿರುವ ಕೋನಾರ್ಕದ ಒಂದೆರಡು ವಿಷಯಗಳನ್ನಾದರೂ ಹೇಳಲೇ ಬೇಕು. ದೇವಸ್ಥಾನದ ಗೋಡೆಯಲ್ಲಿ ಕೆತ್ತನೆಗಳು ೩ ಹಂತಗಳಲ್ಲಿ ಇವೆ. ಇದು ಬಾಲ್ಯ, ಯೌವನ, ಮುಪ್ಪು ಎಂಬುದರ ಸಂಕೇತವಾಗಿದ್ದು, ಅದರ ಮೇಲಿನ ಮೋಕ್ಷವನ್ನೂ ಆಕಾಶವು ಸೂಚಿಸುತ್ತದೆಯಂತೆ. ಇಲ್ಲಿ ಮೂರು
ದಿಕ್ಕುಗಳಲ್ಲಿ ಸೂರ್ಯನ ಸುಂದರವಾದ ವಿಗ್ರಹವನ್ನು ದಕ್ಷಿಣ ಭಾರತ, ಬಹುಶಃ ಚೆನ್ನೈನಿಂದ ತಂದ ಹಸಿರು ಕಲ್ಲಿನಿಂದ ಕೆತ್ತಲಾಗಿದೆ. ಮೂರು ದಿಕ್ಕುಗಳಲ್ಲಿ ಸೂರ್ಯನ ವಿಗ್ರಹ ಬೇರೆಬೇರೆ ರೀತಿಯಾಗಿದೆ. ಸಂಜೆಯ ಕಿರಣಗಳು ಬೀಳುವ ಕಡೆಯಂತೂ ಸುಸ್ತಾದ ಕುದುರೆಯೊಂದಿಗಿನ ಕಣ್ಣುಗಳನ್ನು ಮುಚ್ಚುತ್ತಿರುವ ಸೂರ್ಯನನ್ನು ಕೆತ್ತಲಾಗಿದೆ.

ಸೂರ್ಯ ದೇವಾಲಯದ ಆವರಣದಲ್ಲಿ ಒಂದು ಕಡೆ ಲೋಹದ ಪಟ್ಟಿಗಳ ಅವಶೇಷಗಳನ್ನು ಇಟ್ಟಿದ್ದರು. ೮೦೦ ವರ್ಷಗಳಿಂದ ತೆರೆದ ವಾತವರಣದಲ್ಲಿ, ಸಮುದ್ರತೀರದಲ್ಲಿ ಇದ್ದರೂ ಅವಕ್ಕೆ ಈಗಲೂ ತುಕ್ಕು ಹಿಡಿದಿಲ್ಲ. ದೇವಾಲಯದ ರಿಪೇರಿಗೆಂದು ಬಳಕೆಯಾದ ಇತ್ತೀಚೆಗಿನ ಕಬ್ಬಿಣ ತುಕ್ಕು ಹಿಡಿಸಿಕೊಂಡಿತ್ತು!

ಸೂರ್ಯ ದೇವಾಲಯದ ನೆರಳನ್ನೇ ಹಿನ್ನಲೆಯಾಗಿಟ್ಟು ಛಾಯಾದೇವಿಯ ಆಲಯವೂ
ಇತ್ತೆಂದು ಹೇಳುತ್ತಾರೆ. ಮಾಯಾದೇವಿಯ ಆಲಯವು ಸ್ವಲ್ಪ ಮಟ್ಟಿಗೆ ಉಳಿದಿದ್ದು ಅದು ಕೆಂಪುಕಲ್ಲಿನ ರಚನೆಯಾಗಿದೆ. ಇದು ಸೂರ್ಯದೇವಾಲಕ್ಕೂ ಮುಂಚೆ ರಚಿತವಾದದ್ದೆಂದು ಹೇಳುತ್ತಾರೆ. ಈ ದೇಗುಲದಲ್ಲೂ ಕಾಮಶಾಸ್ತ್ರಕ್ಕೆ ಸಂಬಂಧಿಸಿದ ಹಲವು ಕೆತ್ತನೆಗಳಿವೆ.

ದೇವಾಲಯಗಳ ರಚನೆಯ ಸ್ಥಳ, ವಾಸ್ತು ನಿಯಮಗಳು, ರೇಖಾಗಣಿತದ ಸಂಕೀರ್ಣತೆಗಳು, ಸಂಕೇತಗಳು, ಅರ್ಥಗಳು ಸಾಮಾನ್ಯ ನೋಡುಗರಿಗೆ ಅರ್ಥವಾಗುವುದಿಲ್ಲ. ಇದರ ಬಗ್ಗೆ ತಿಳಿದವರು ವ್ಯಾಖ್ಯಾನಿಸಿದಾಗ ಅದೊಂದು ಅದ್ಭುತ ಕಲ್ಪನೆ ಎಂದು ತಿಳಿಯುತ್ತದೆ. ದೇವಸ್ಥಾನಗಳಲ್ಲಿ ಹೊರ ಆವರಣಗಳಲ್ಲಿ ತುಂಬಾ ಹೆಚ್ಚಿನ ಸಂಖ್ಯೆಯಲ್ಲಿ ಲೌಕಿಕ ಬದುಕಿನ ಕೆತ್ತನೆಗಳು ಇರುತ್ತವೆ. ಒಳಗೆ ಹೋಗುತ್ತಿದ್ದಂತೆ ಗರ್ಭಗುಡಿ ಬಳಿಗೆ ಬರುವಾಗ ಅವು ಕಡಿಮೆಯಾಗುತ್ತಾ ಖಾಲಿ ಜಾಗಗಳು ಹೆಚ್ಚಾಗುತ್ತವೆ – ಲೌಕಿಕದಿಂದ ಅಧ್ಯಾತ್ಮದ ಕಡೆಗಿನ ಪ್ರಯಾಣ ಹೇಗಿರಬೇಕೆಂಬುದರ ಸೂಚನೆಯಂತೆ. ನಾನು, ಸೂರ್ಯನ ಚಲನೆಯನ್ನು ಅನುಸರಿಸಿ ಒಂದು ದೇವಾಲಯದಲ್ಲಿ ಎಷ್ಟೊಂದು ಬೆರಗುಗಳನ್ನು ಮೂಡಿಸಿದ್ದಾರಲ್ಲಾ, ಈ ಬಗ್ಗೆ ಇನ್ನೂ ಹೆಚ್ಚಿನ ವಿವರಗಳನ್ನು ಅಂತರ್ಜಾಲದಲ್ಲಿ ನೋಡುತ್ತಿದ್ದಾಗ, ಒಬ್ಬ ಫ್ರೆಂಚ್ ಮೂಲದ ಭಾರತೀಯ ಮೈಕಲ್ಡ್ಯಾನಿನೊ ಎಂಬವರು, ಭಾರತದ ಮೇಧಾವಿಗಳ ಸಂಸ್ಥೆಯೆಂದೇ ಗುರುತಿಸಲ್ಪಡುವ ಐ.ಐ.ಟಿ ಕಾನ್ಪುರದಲ್ಲಿ ನೀಡಿದ ಉಪನ್ಯಾಸಮಾಲಿಕೆಗಳ ವೀಡಿಯೋವನ್ನು ಯೂಟ್ಯೂಬ್ನಲ್ಲಿ ಕಂಡೆ.

ಇದರಲ್ಲಿ ಅವರು ಹಿಂದಿನವರು ಸೂರ್ಯನ ಬಗ್ಗೆ ಅಪಾರಜ್ಞಾನವನ್ನು ಹೊಂದಿದ್ದ ಅಂಶವನ್ನು ತಿಳಿಸುತ್ತಾ, "ಸಾಮಾನ್ಯಜನರಿಗೆ, ಅದರಲ್ಲೂ ಹಿಂದೂಗಳಿಗೇ ಗೊತ್ತಿರದ ವಿಷಯವೊಂದು ಕಾಶಿಯಲ್ಲಿದೆ. ಕಾಶಿಪಟ್ಟಣವೇ ಒಂದು ಸೂರ್ಯ ದೇವಾಲಯದಂತಿದೆ. ಅಲ್ಲಿ ೧೪ ಆದಿತ್ಯ ಗುಡಿಗಳಿವೆ, ಒಂದೊಂದು ಸಂಕ್ರಮಣದಂದು ಒಂದೊಂದು ಗುಡಿಯಲ್ಲಿರುವ ದೇವರ ಮೇಲೆ ಸೂರ್ಯನ ಪ್ರಥಮ ಕಿರಣ ಬೀಳುವಂತೆ ರಚಿಸಿದ್ದಾರೆ, ಈ ಕಿರಣಗಳ ಗೆರೆ ಎಳೆದು ಚಿತ್ರ ರಚಿಸಿದರೆ ಎಲ್ಲಾ ಗೆರೆಗಳು ಒಂದೇ ಬಿಂದುವಿನಿಂದ ಹೊರಟಂತೆ ಕಾಣುತ್ತದೆ, ಆ ಬಿಂದುವಿನಲ್ಲೂ ಒಂದು ಗುಡಿಯಿದೆ. ಇಂತಹ, ಸೂರ್ಯನ ಚಲನೆಯನ್ನು ಅನುಸರಿಸುವ ಆಲೋಚನೆಗಳು ಸಾಕಾರವಾದ ಬಗ್ಗೆ ಹಂಪಿ, ಚಿತ್ರಕೂಟ ಮತ್ತು ಈಜಿಪ್ಟ್‍ಗಳಲ್ಲೂ ಉದಾಹರಣೆಗಳಿವೆ" ಎಂಬ ಆಶ್ಚರ್ಯಕರ ಮಾಹಿತಿ ನೀಡಿದರು.

ಕೋನಾರ್ಕದ ಭವ್ಯತೆಗೋ, ಅದರ ರಚನೆಯ ಹಿಂದಿರುವ ಸಂಕೀರ್ಣತೆಗೋ ಬೆರಗಾಗಿ ಮೂಕವಿಸ್ಮಿತರಾದೆವು. ಅಷ್ಟು ದೊಡ್ಡ ದೇವಸ್ಥಾನದ ವೀಕ್ಷಣೆಯಿಂದಲೋ, ಬಿಸಿಲಿನ ಝಳಕ್ಕೋ, ಎಲ್ಲಕ್ಕಿಂತ ಹೆಚ್ಚಾಗಿ ನಾವು ಕಳೆದುಕೊಂಡ ಧನ, ಕನಕ, ವಿಗ್ರಹ, ಪರಂಪರೆ ಮತ್ತು ಅದೆಲ್ಲವನ್ನೂ ಮೀರಿದ
ಜ್ಞಾನ ಸಂಪತ್ತಿನ ಅರಿವಾಗಿಯೋ ಬೇಸರ, ಸಂಕಟದಿಂದ ಮನ ಭಾರವಾಯಿತು, ಮುಖ ಮ್ಲಾನವಾಯಿತು. ಅಲ್ಲೇ ಒಂದೆಡೆ ಎಲ್ಲರೂ ಕುಳಿತು ಸ್ವಲ್ಪ ಹೊತ್ತು ಮೌನಕ್ಕೆ ಶರಣಾದೆವು. ನಿಧಾನಕ್ಕೆ ಒಬ್ಬೊಬ್ಬರೇ ಅವರವರ ಅನಿಸಿಕೆಗಳನ್ನು ಹೊರಹಾಕಿದೆವು.
"ನಾವು ಎಡವಿದ್ದು ಎಲ್ಲಿ?"
"ಇಷ್ಟೆಲ್ಲಾ ಇದ್ದ ನಾವು ಈಗ ನಮ್ಮ ಮಕ್ಕಳನ್ನು ಏಕೆ ನಮ್ಮ ಪರಂಪರೆಯಿಂದ ದೂರಾಗುವಂತೆ ಮಾಡಿದ್ದೇವೆ?"
"ವಿದೇಶಿ ಮೋಹ ನಮ್ಮನ್ನಾವರಿಸಿದ್ದು ಹೇಗೆ?"
"ಎಷ್ಟು ಶತಮಾನಗಳ ಹಿಂದೆ ಈ ಕೀಳರಿಮೆಯ ಸೋಂಕು ನಮಗೆ ತಗಲಿರಬಹುದು?"
"ಈ ಪಲಾಯನವಾದಕ್ಕೆ ನಮ್ಮ ಮೇಲೆ ನಡೆದ ಆಕ್ರಮಣ ಕಾರಣವೇ? ನಮ್ಮ ರಾಜಕೀಯ ಕಾರಣವೇ? ಆಧುನಿಕ ವಿದ್ಯಾಭ್ಯಾಸ ಕಾರಣವೇ?" ಇತ್ಯಾದಿ ಪ್ರಶ್ನೆಗಳಿಗೆ ಸರಳ ಉತ್ತರಗಳಿಲ್ಲವೆಂಬುದು ನಮಗೆ ಗೊತ್ತಿತ್ತು. ಆದರೂ ಒಂದೆರಡು ಉದಾಹರಣೆಗಳನ್ನು ಪರಸ್ಪರ ಹಂಚಿಕೊಂಡೆವು.

“ನಾನು ಇತ್ತೀಚೆಗೆ ನಮ್ಮ ಊರಿನ ಪ್ರಖ್ಯಾತ ದಿನಪತ್ರಿಕೆಯಲ್ಲಿ ಒಂದು ದಿನ `ಪಾಶ್ಚಾತ್ಯ ಸಂಗೀತ ವಾದ್ಯಗಳು ಭಾರತದವುಗಳಿಗಿಂತ ಹೆಚ್ಚು ಶ್ರೇಷ್ಠವೂ ವೈಜ್ಞಾನಿಕವೂ ಆಗಿವೆ’ ಎಂಬರ್ಥದ ತಲೆಬರಹವೊಂದನ್ನು ಓದಿದೆ. ಅದು ಮಂಗಳೂರು ನಗರದಲ್ಲಿ ನಡೆದ ವಿಚಾರಸಂಕಿರಣವೊಂದರ ವರದಿ. ಭಾರತೀಯ ಸಂಗೀತವನ್ನು ಸ್ವಲ್ಪ ಮಟ್ಟಿಗೆ ಕಲಿತು, ಹೆಚ್ಚಿನ ಮಟ್ಟದಲ್ಲಿ ಕೇಳಿ, ನಮ್ಮ ಹಲವು ವಾದ್ಯ ಕಲಾವಿದರು ವಿದೇಶಗಳಲ್ಲೇ ನೆಲೆಸಿ ಜಗತ್ಪ್ರಸಿದ್ಧರೂ ಆಗಿರುವುದನ್ನು ತಿಳಿದಿದ್ದ ನನಗೆ ಈ ಸಂದೇಶ ಆಘಾತಕಾರಿ ಮಾತ್ರವಲ್ಲ ಹಲವಾರು ಪ್ರಶ್ನೆಗಳನ್ನೂ ಹುಟ್ಟುಹಾಕಿತು. ಶ್ರೇಷ್ಠವಲ್ಲದ, ಕಡಿಮೆ ಗುಣಮಟ್ಟದ ವಾದ್ಯಗಳನ್ನೇ ನುಡಿಸಿ ಈ ಮಟ್ಟಕ್ಕೆ ಮುಟ್ಟಿದರೇ ಅವರು? ಶ್ರೇಷ್ಠತೆಯ ಮಾನದಂಡ ಯಾವುದು? ವೈಜ್ಞಾನಿಕವೋ, ಅವೈಜ್ಞಾನಿಕವೋ ನಿರ್ಧರಿಸುವವರು ಯಾರು? ಅವರು ಹೇಳುತ್ತಿರುವುದು ವಾದ್ಯದ ವಿನ್ಯಾಸದ ಕಲ್ಪನೆಯ ಶ್ರೇಷ್ಠತೆಯೋ? ಉಪಯೋಗಿಸಿದ ವಸ್ತುಗಳ ಗುಣಮಟ್ಟದಲ್ಲಿ ಶ್ರೇಷ್ಠತೆಯೋ? ಹೊರ ಹೊಮ್ಮುವ ನಾದದ ಗುಣಮಟ್ಟದಲ್ಲಿ ಶ್ರೇಷ್ಠತೆಯೋ?

ಇಂದು ಸಾಮಾನ್ಯವಾಗಿ ಬಳಸಲ್ಪಡುವ ಸರಸ್ವತೀ ವೀಣೆಯ ವಿನ್ಯಾಸ ಮನುಷ್ಯ ದೇಹಕ್ಕೆ ಹೋಲುವಂತೆಯೂ ಸ್ವರ ಮಾನವಸ್ವರಕ್ಕೆ ತೀರಾ ಸಮೀಪದ್ದೂ ಆಗಿದ್ದು, ಹಾಡಿದಂತೆಯೇ ನುಡಿಸಬಲ್ಲ ವಿನ್ಯಾಸವುಳ್ಳದ್ದೂ ಆಗಿದೆ. ಸ್ವರ ಮತ್ತು ತಾಳ ಎರಡೂ ಅಂಶಗಳಿವೆ. ವೀಣೆಯನ್ನು ಹೆಚ್ಚು ಬಳಸಿದಷ್ಟೂ ಅದರ ಮಧುರತೆಯೂ ಹೆಚ್ಚುತ್ತದೆಂದು
ವೈಣಿಕರ ಅನುಭವದ ಮಾತು. ಅಷ್ಟೇ ಅಲ್ಲ, ಹಿಂದಿನ ಕಾಲದಲ್ಲಿ, ವೀಣೆ ತಯಾರಿಗೆ ದೇವಸ್ಥಾನದ ಎದುರಿಗಿದ್ದು, ದೇವಸ್ಥಾನದ ಗಂಟೆಯನ್ನು ಕಟ್ಟಿದ್ದ, ಆ ಗಂಟಾನಾದಕ್ಕೆ ಮಾಗಿದ ಹಲಸಿನ ಮರವನ್ನೇ ಉಪಯೋಗಿಸುತ್ತಿದ್ದರಂತೆ. ನುಡಿಸುತ್ತಾ ನುಡಿಸುತ್ತಾ ಹೋದಂತೆ ತಂತಿಗಳ ಕಂಪಿತದನಾದಕ್ಕೆ ಪಕ್ವವಾಗುತ್ತಾ ಹೋಗುವ ಮರವನ್ನು, ಆ
ಮರದಿಂದ ಹೊಮ್ಮುವ ನಾದಮಾಧುರ್ಯವನ್ನು ವಿಜ್ಞಾನದ ಯಾವ ಉಪಕರಣದಿಂದ ಅಳೆಯುವುದು? ನಾದಕ್ಕೆ ಮಿಡಿಯುವ ಅಂತಃಕರಣ ಸಾಕಲ್ಲವೇ? ಆ ಪತ್ರಿಕೆಯ ವರದಿಗಾರನಿಗೆ ಈ ಅಂಶಗಳೆಲ್ಲಾ ಗೊತ್ತಿದ್ದವೋ, ಇಲ್ಲವೋ, ಹೇಳಿಕೆ ನೀಡಿದ ವಿದ್ವಾಂಸರು ಯಾವ ಅರ್ಥದಲ್ಲಿ ಹೇಳಿದ್ದರೋ ಅದೂ ಗೊತ್ತಿಲ್ಲ. ತಲೆಬರಹ ಓದಿದ ಇಂದಿನ ಮಕ್ಕಳಿಗೆ ಮಾತ್ರ ಭಾರತೀಯವಾದ್ಯಗಳ ಬಗ್ಗೆ, ಕಲಾವಿದರ ಬಗ್ಗೆ ಕೀಳರಿಮೆ ಬರಲು ಇಷ್ಟು ಸಾಕು. ಹೀಗೆ ಒಂದು ಸಂಸ್ಕೃತಿ, ಪರಂಪರೆಗೆ ಸಂಬಂಧಿಸಿದ ಅನೇಕಾನೇಕ ಸೂಕ್ಷ್ಮ, ಸಂಕೀರ್ಣ ವಿಷಯಗಳನ್ನು ‘ಹಂಚಿನಮನೆ ಮೇಲೋ, ತಾರಸಿಮನೆ ಮೇಲೋ’ ಎಂಬಂತಹ ಚರ್ಚಾಕೂಟಗಳ ರೀತಿಯಲ್ಲಿ ಕಲಿಸುವುದನ್ನು ಬಿಟ್ಟು, ನಮ್ಮ ವಿಶ್ವವಿದ್ಯಾಲಯಗಳು ಪ್ರಾಕೃತಿಕ ಅನುಭವಕ್ಕೆ ಒತ್ತು ಕೊಟ್ಟರೆ, ತರ್ಕದ ಬದಲು ತತ್ವಕ್ಕೆ ಬೆಲೆ ಕೊಟ್ಟರೆ ಪರಿಸ್ಥಿತಿ ಸುಧಾರಿಸಬಹುದೇನೋ" ಎಂದೆ. ಇದೇ ರೀತಿಯಲ್ಲಿ ನಮಗೆ ಹೊಳೆದ, ಅನುಭವಕ್ಕೆ ಬಂದ ಇನ್ನಷ್ಟು ಉದಾಹರಣೆಗಳನ್ನು ಹಂಚಿಕೊಂಡು ಹಗುರಾದೆವು. ಆದರೂ ಮನದ ಮೂಲೆಯಲ್ಲಿ ಎಲ್ಲೋ, ನಮ್ಮ ಜ್ಞಾನಸಂಪತ್ತು ಕಳೆದು ಹೋದ, ಹೋಗುತ್ತಿರುವ ಬಗ್ಗೆ ಅತೃಪ್ತಿ, ಅಸಹಾಯಕತೆ, ಚಡಪಡಿಕೆ ಇದ್ದೇ ಇತ್ತು.

ಮನಸ್ಸಿನ ಕಿರಿಕಿರಿಗೆ, ಹೊಟ್ಟೆಯ ಚುರುಚುರು ಸೇರಿದ ಮೇಲೆ ಮತ್ತೆ ಅಲ್ಲೇ ಕುಳಿತುಕೊಳ್ಳಲು ಆಗಲಿಲ್ಲ. ದೇವಾಲಯದ ಹೊರಗೆ ಬೀದಿಯುದ್ದಕ್ಕೂ ಕಲಾತ್ಮಕವಾದ ಸಾಮಾಗ್ರಿಗಳು ಮಾರಾಟಕ್ಕಿದ್ದವು. ಅವುಗಳನ್ನು ನೋಡುತ್ತಾ ಸುಮಾರು ಒಂದು ಕಿ.ಮೀ ದೂರದಲ್ಲಿದ್ದ ಒಡಿಶಾ ಸರ್ಕಾರ ಪ್ರವಾಸೋದ್ಯಮ ಇಲಾಖೆಯವರ ಹೋಟೆಲ್ಲಿಗೆ ಊಟಕ್ಕೆ ಹೋದೆವು. ಸ್ವಚ್ಛವಾದ ಜಾಗ, ರುಚಿರುಚಿಯಾದ ಶಾಕಾಹಾರಿ ಒಡಿಶಾ ಥಾಲಿ, ನಗುನಗುತ್ತಾ ಸೇವೆ ನೀಡುವ ಸಿಬ್ಬಂದಿಯಿಂದ ಮನ ತಣಿಯಿತು. ಇದುವೇ ಅವಕಾಶವೆಂದು "ಇಲ್ಲಿಂದ ಕುರುಮಾ ಎಷ್ಟು ದೂರ? ನಮಗೇ ಹೋಗಲು ಸಾಧ್ಯವೇ?" ಎಂದೆಲ್ಲಾ ಪಶ್ನಿಸಿ ವಿವರ ತಿಳಿದುಕೊಂಡೆ.

ಊಟದ ಹೋಟೆಲ್ಲಿನಷ್ಟೇ ಶುಚಿಯೂ, ವ್ಯವಸ್ಥಿತವೂ ಆಗಿದ್ದ, ಪಕ್ಕದಲ್ಲೇ ಇದ್ದ ಕೋನಾರ್ಕ ಮ್ಯೂಸಿಯಂಗೆ ಭೇಟಿ ಕೊಟ್ಟೆವು. ಇಲ್ಲಿ ಟಿಕೇಟಿನ ಪರಿಶೀಲನೆಯೂ ಗಣಕೀಕೃತವಾಗಿದೆ. ೪ ಹಂತಗಳ ವಿಶಾಲವಾದ ಮ್ಯೂಸಿಯಂನಲ್ಲಿ ಅಲ್ಲಲ್ಲಿ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಯಿದೆ, ಶೌಚಾಲಯಗಳಿವೆ. ಫೋಟೋ ಮತ್ತು ವೀಡಿಯೋ ತೆಗೆಯುವುದನ್ನು ನಿಷೇಧಿಸಲಾಗಿದೆ.

ಸೂರ್ಯ ದೇವಾಲಯದ ಸುತ್ತಮುತ್ತಲಿನ ಶಿಲ್ಪಗಳಲ್ಲದೇ ಪ್ರಾಚ್ಯ ಇಲಾಖೆಯವರು ಸಂಗ್ರಹಿಸಿದ ಹಲವಾರು ಕಡೆಗಳ ವಸ್ತುಗಳು ಇಲ್ಲಿವೆ. ಕರ್ನಾಟಕದ ಲಕ್ಕುಂಡಿಯಲ್ಲಿ ಸಿಕ್ಕಿದ ಶಿಲ್ಪವೂ ಇತ್ತು. ಶಿಲ್ಪಗಳ ಜತೆಗೇ ವಿವರಗಳನ್ನೂ ಒಪ್ಪ ಓರಣವಾಗಿ ಬರೆದಿಟ್ಟಿದ್ದಾರೆ. ಕೋನಾರ್ಕದ ಸೂರ್ಯರಥದ ಗಾಲಿಯ ಪ್ರತಿಕೃತಿಯನ್ನು ಮಾಡಿಟ್ಟಿದ್ದಾರೆ. ಅಲ್ಲಿ ಭಾರತದ ಭೂಪಟದಲ್ಲಿ ಪ್ರಾಚ್ಯ ವಸ್ತುಗಳು ಸಿಕ್ಕಿದ ಜಾಗಗಳನ್ನೆಲ್ಲಾ ಗುರುತಿಸಿದ್ದಾರೆ. ಈ ಮ್ಯೂಸಿಯಂನಲ್ಲಿದ್ದ ಶಿಲ್ಪಗಳಲ್ಲಿ ಕೆಲವು ವಿಶೇಷವಾಗಿ ಗಮನ ಸೆಳೆದವು – ರಾಜನ ವಿಗ್ರಹದಲ್ಲಿ ಆತನ ತಲೆ ಕಡಿಯಲಾಗಿತ್ತು. ರಾಜಕುಮಾರಿಯ ವಿವಾಹ ಸಮಾರಂಭದ ಶಿಲ್ಪದಲ್ಲಿ ಆಕೆ ತನ್ನ ತಂದೆಯ ತೊಡೆಯ ಮೇಲೆ ಕುಳಿತಿದ್ದಳು. ಆಕೆ ಬಾಲಕಿಯಲ್ಲ, ಪ್ರಾಯಪ್ರಬುದ್ಧೆಯಾಗಿದ್ದಳು ಹಾಗೂ ಆಕೆಯ ತಂದೆಗೂ, ಪುರೋಹಿತರಿಗೂ ಉದ್ದನೆಯ ಗಡ್ಡವಿತ್ತು. ಹಲವು ಪ್ರಾಣಿಗಳು ಸಂಕರವಾಗಿರುವ ಕಾಲ್ಪನಿಕ ಪ್ರಾಣಿಯ ಬಗೆಗೂ ವಿವರಗಳಿದ್ದವು. ವ್ಯಾಲ ಎಂದು
ಕರೆಯಲ್ಪಡುವ ಅದರಲ್ಲೂ ಹೆಚ್ಚಾಗಿ ಸಿಂಹ ಮತ್ತು ಆನೆ ಸೇರಿದಂತೆ ಇದ್ದ ಶಿಲ್ಪಗಳು ತುಂಬಾ ಇದ್ದವು. ಜನಿವಾರ ಧರಿಸಿದ್ದ ಸ್ತ್ರೀ ವಿಗ್ರಹವನ್ನೂ ನೋಡಿದ ನೆನಪು.

ಸಾಕಷ್ಟು ಸಮಯ ಅಲ್ಲಿ ಕಳೆದ ಮೇಲೆ ಹೊರಡುವ ಮೊದಲು ಅಲ್ಲಿದ್ದ ಸಿಬ್ಬಂದಿಯ ಬಳಿಯೂ ಕುರುಮಾ ಎಂಬ ಜಾಗದ ಬಗ್ಗೆ ಕೇಳಿದೆ. ಅವರು ಕೊಟ್ಟ ದಾರಿಯ ವಿವರಗಳನ್ನು ಸಂತೋಷನಿಗೆ ದಾಟಿಸಿದೆ.

(ಮುಂದುವರಿಯಲಿದೆ)

6 comments:

 1. ವಿದ್ಯಾ ಮನೋಹರರಿಗೆ ಅನ್ನಿಸಿದ ನೋವು ದೋಚಿ ಬಾಚಿ ಹಾಳು ಕೆಡಹಿಡಿದ ದಾಳಿಕೋರರ ಲ್ಲಿ ಇಲ್ಲದೆ ಇರುವುದೇ ಈ ದುರಂತಕ್ಕೆ ಕಾರಣ...ಭಾರತದ ಸಂಪತ್ತನ್ನು ಲೂಟಿ ಮಾಡಿದ್ದರೆ ತೊಂದರೆ ಇರಲಿಲ್ಲ...ಭಾರತೀಯತೆಯನ್ನೇ ಲೂಟಿ ಮಾಡಿ ಚರಿತ್ರೆಯನ್ನು ಓದಿದಾಗೆಲ್ಲ, ನೋಡಿದಾಗ,ನೋವೇ ಅನುಭವವಾಗುವುದು ಸತ್ಯ...ಕೋನರ್ಕ್ ಪ್ರತ್ಯಕ್ಷ ನೋಡಿದಾಗೆ ಆಯಿತು ...

  ReplyDelete
 2. ಸೊಗಸಾದ ವಿವರಣೆ.... ತಾಂತ್ರಿಕ ಜ್ಞಾನದ ಔನ್ನತ್ಯವನ್ನು ಕಳೆದುಕೊಂಡು ಏನೇನೋ ಅನಗತ್ಯವಾದುದನ್ನು ಬೆಳೆಸಿಕೊಂಡಿರುವ ಇಂದಿನ ನಮ್ಮ ಈ ಪರಿಸ್ಥಿತಿಗೆ ಯಾರನ್ನು ಹೊಣೆ ಮಾಡುವುದು ಹೇಳಿ....

  ReplyDelete
 3. ನಮ್ಮಲ್ಲಿ ಕೀಳರಿಮೆ ಬಿತ್ತಿದ ಕೀರ್ತಿಯ ಬಹುಪಾಲು ಸಲ್ಲಬೇಕಾದ್ದು ನಮ್ಮ ರಾಜಕೀಯ ವ್ಯವಸ್ಥೆ, ಶೈಕ್ಷಣಿಕ ವ್ಯವಸ್ಥೆಗೇ ಅಲ್ಲವೆ.

  ReplyDelete
 4. ನಮ್ಮ ಪುರಾತನ ಜ್ಞಾನ ಮತ್ತು ಸಾಂಸ್ಕೃತಿಕ ಸಂಪತ್ತನ್ನು ಲೂಟಿ ಮಾಡಿ ಒಂದು ಎಡಬಿಡಂಗಿ ಸಂಸ್ಕೃತಿಯೊಂದನ್ನು ಹುಟ್ಟು ಹಾಕಲು ವ್ಯವಸ್ಥಿತವಾದ ಪಿತೂರಿ ನಡೆಯುತ್ತಿದ್ದು ಅದು ಬಹುತೇಕ ಸಫಲವಾಗಿದೆ. ಇದರಲ್ಲಿ ಚರ್ಚ್, ವಿವಿಧ ವಿದೇಶಿ ಹಾಗು ದೇಶೀ ಸಂಸ್ಥೆಗಲು, ಇಸ್ಲಾಮಿಕ್ ಉಗ್ರಗಾಮಿ ಸಂಘಟನೆಗಳು, ಮಾರ್ಕ್ಸ್ ವಾದಿಗಳು ಸೇರಿಕೊಂಡಿದ್ದು ಒಂದು ವಿಷವರ್ತುಲ ನಿರ್ಮಾಣವಾಗಿದೆ. ಮತ್ತೂ ವಿಷಾದ ಸಂಗತಿಯೆಂದರೆ ನಮಗೆ ಇನ್ನೂ ಈ ಬಗ್ಗೆ ಎಚ್ಚರವೆ ಇಲ್ಲ. ಇನ್ನು ಸಂಘಟಿತವಾಗಿ ಹೊರಡುವುದು ಯಾವಾಗ? ಈ ಬಗ್ಗೆ ಇನ್ನೂ ವಿವರಗಳಿಗಾಗಿ ರಾಜೀವ್ ಮಲ್ಹೋತ್ರಾ ಅವರ ಬ್ರೇಕಿಂಗ್ ಇಂಡಿಯಾ ಎಂಬ ಪುಸ್ತಕ ಓದಿ ನೋಡಿ.

  ReplyDelete
  Replies
  1. `ನಮ್ಮ' ಎನ್ನುವ ಜಾಗೃತಿಯೇ ನಮ್ಮ ಬಹುದೊಡ್ಡ ವರ್ಗಕ್ಕಿಲ್ಲ. ಎಲ್ಲವೂ `ನನ್ನ' ಅಥವಾ ಸ್ವಾರ್ಥಮೂಲವಾಗಿಯೇ ವಿಸ್ತರಿಸುತ್ತಿರುವುದರಿಂದ, ಫಿತೂರಿ, (ನಾವೇ ಚುನಾಯಿಸಿಕೊಂಡ - ಲೆಕ್ಕವಿಲ್ಲದ ದುಡ್ಡು ಸುರಿದರಷ್ಟೇ ಗೆಲ್ಲುವ ವ್ಯವಸ್ಥೆಗೆ ಪರ್ಯಾಯನಾಮ) ಸರಕಾರ, (ನಾವೇ ಆಯ್ದುಕೊಂಡ ನೆಲಮೂಲವಲ್ಲದ) ಶಿಕ್ಷಣ ವ್ಯವಸ್ಥೆ ಎಂದು ಹೆಸರಿಸುವುದು ಸರಿಯಲ್ಲ.

   Delete
 5. ಯಾವುದೇ ಬೃಹತ್ ಯಂತ್ರ ಗಳ ಸಹಾಯವಿಲ್ಲದೇ ಇಂತಹ ಅದ್ಭುತ ರಚನೆ ನೋಡಿಯೇ / ಕೇಳಿಯೇ ನಂಬುವಂತದ್ದು - ನಮ್ಮ ಊಹೆಗೂ ನಿಲುಕದು

  ReplyDelete