10 July 2017

ಪುರಿ ಎಂಬ ಬೆರಗಿನಪುರ

ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ 

ಒಡಿಶಾದ ಒಡಲೊಳಗೆ ಅಧ್ಯಾಯ (೩)

ಮಂಗಲ ಜೋಡಿಯಿಂದ ಹೊರಟ ನಾವು, ಅಂದು ಸಂಜೆಯೊಳಗೆ ಪುರಿಯನ್ನು ತಲಪಿ, ಜಗನ್ನಾಥನ ದರ್ಶನವನ್ನು ಪಡೆಯುವವರಿದ್ದೆವು. ಈ ಪ್ರಯಾಣವೂ ಒಡಿಶಾದ ಹಳ್ಳಿಜೀವನದ ದೃಶ್ಯಗಳನ್ನು ತೋರಿಸಿತು. ಕೆಲವು ಕಡೆ ಸರ್ಕಾರಿ ಶಾಲೆಗಳಿಂದ ಮಕ್ಕಳು ಮನೆಗಳಿಗೆ ತೆರಳುತ್ತಿದ್ದರು. ಹೆಚ್ಚಿನವರು ಅದರಲ್ಲೂ ಹೆಣ್ಮಕ್ಕಳು ಸಾಲಾಗಿ ಸೈಕಲ್ಲುಗಳನ್ನು ತುಳಿಯುತ್ತಾ ಸಾಗುತ್ತಿದ್ದ ದೃಶ್ಯ, ಸರಕಾರೀ ಯೋಜನೆಯ ಫಲ, ತಳ ಮುಟ್ಟಿದೆ ಎಂದು ಸೂಚಿಸುತ್ತಿತ್ತು. ಮಕ್ಕಳೆಲ್ಲಾ ಶುಭ್ರವಾದ ಸಮವಸ್ತ್ರಗಳಲ್ಲಿದ್ದರು. ಶಾಲೆ, ಆಸುಪಾಸು, ಹಳ್ಳಿಮನೆಗಳು, ರಸ್ತೆಗಳೆಲ್ಲಾ ಸರಳ, ಸ್ವಚ್ಚ, ಸುಂದರವಾಗಿದ್ದವು. ಹಲವು ಕಡೆ ಪುರಾತನ ದೇವಾಲಯಗಳಿದ್ದವು. ಹಿಂದಿನ ಕಾಲದಲ್ಲಿದ್ದಂತೇ, ಈಗಲೂ ಜನಜೀವನ, ಚಟುವಟಿಕೆ, ಆಚರಣೆಗಳು ದೇವಸ್ಥಾನಗಳಿಗೆ ಅನುಸರಿಸಿಕೊಂಡೇ ನಡೆಯುತ್ತಿವೆಯೇನೋ ಎಂದೆನಿಸಿತು. ಇದಕ್ಕೆ ಒಂದು ಸುಂದರ ಉದಾಹರಣೆಯೇ ಪುರಿಯ ಜಗನ್ನಾಥ.

ಪುರಿ ಪ್ರವೇಶಕ್ಕೆ ಮೊದಲೇ ಒಂದು ಕಡೆ ಸುಂಕ ವಸೂಲಿಗೆ ಸಂಬಂಧಿಸಿದ ಕಟ್ಟಡವಿತ್ತು. ಈ ಕಟ್ಟಡವೇ ಅಲ್ಲದೆ, ಇಲ್ಲಿಯ ಬಸ್ನಿಲ್ದಾಣ, ರೈಲ್ವೆನಿಲ್ದಾಣ, ಇನ್ನಿತರ ನೂತನ ಸರಕಾರೀ ಕಟ್ಟಡಗಳ ಹೊರ ವಿನ್ಯಾಸವನ್ನು ಸುಂದರವಾಗಿ ಹಳೆಯ ದೇವಾಲಯಗಳ ರಚನೆಗಳನ್ನು ಹೋಲುವಂತೆ ಗೋಪುರಗಳನ್ನು ನಿರ್ಮಿಸಿ ಕಣ್ಮನ ಸೆಳೆಯುವಂತೆ ಮಾಡಿದ್ದಾರೆ. ಪುರಿ ದೇವಸ್ಥಾನದ ಬಗ್ಗೆ ಜಾಲತಾಣಗಳಲ್ಲಿ ಸಾಕಷ್ಟು ಮಾಹಿತಿಗಳಿವೆ. ಹಲವಾರು ವೀಡಿಯೋಗಳು ಯೂಟ್ಯೂಬ್ನಲ್ಲಿ ಲಭ್ಯವಿವೆ. ಹೆಚ್ಚಿನವು ಜೂನ್-ಜುಲೈ ತಿಂಗಳಲ್ಲಿ ನಡೆಯುವ ಇಲ್ಲಿನ ಪ್ರಸಿದ್ಧ ರಥಯಾತ್ರೆಗೆ ಸಂಬಂಧಿಸಿದವು.

ಒಂದುವೀಡಿಯೋದಲ್ಲಿ ‘ಧ್ವಜಬದಲಾವಣೆ’ ಎಂದು ಇಲ್ಲಿ ನಿತ್ಯ ಸಂಜೆ ನಡೆಯುವ ಆಚರಣೆ ಬಗ್ಗೆ ಇತ್ತು. ಈ ಕಾರ್ಯಕ್ರಮವನ್ನು ನೋಡಲು ಅನುಕೂಲವಾಗುವಂತೆ ನಮ್ಮ ಭೇಟಿಯನ್ನು ಅಂದಿನ ಸಂಜೆಗೆ ನಿಗದಿಗೊಳಿಸಿದ್ದೆವು. ಸೀದಾ ಹೋಟೆಲ್ಲಿಗೆ ಹೋಗಿ ಶುಚಿರ್ಭೂತರಾಗಿ ದೇವಸ್ಥಾನಕ್ಕೆ ತೆರಳುವವರಿದ್ದೆವು. "ಧ್ವಜಬದಲಾವಣೆ ಕಾರ್ಯಕ್ರಮ ಎಷ್ಟು ಗಂಟೆಗೆ?" ಎಂದು ಹೋಟೆಲ್ಲಿನ ಸಿಬ್ಬಂದಿಯೊಬ್ಬರಲ್ಲಿ ಕೇಳಿದೆ. "ಅದು ಸಂಜೆಯ ಹೊತ್ತಿಗೆ, ಆದರೆ ನಿಖರವಾಗಿ ಎಷ್ಟು ಗಂಟೆಗೆ ಎಂದು ಗೊತ್ತಿಲ್ಲ, ನೀವು ನಮ್ಮ ಪರಿಚಯದ ಪಾಂಡಾ ಒಬ್ಬರ ಬಳಿ ವಿಚಾರಿಸಿ" ಎಂದು ಪಾಂಡಾರ ವಿಸಿಟಿಂಗ್ ಕಾರ್ಡ್ ಕೊಟ್ಟರು. ಪುರಿಯ ಬಗ್ಗೆ ವಿವರಗಳನ್ನು ಜಾಲತಾಣಗಳಲ್ಲಿ ಓದಿದ್ದೆನಲ್ಲಾ, ಅದರಲ್ಲಿ ಒಂದು ಕಡೆ ‘ಪಾಂಡಾಗಳು ವಿಪರೀತ ಸುಲಿಗೆ ಮಾಡುತ್ತಾರೆ, ಏನೇನೋ ಹೇಳಿ ಹೆದರಿಸಿ ಪೂಜೆ ಮಾಡಿಸುತ್ತಾರೆ, ದೇವಸ್ಥಾನದ ಒಳಗೆ ಪ್ರವೇಶಿಸುವಾಗಲೇ ಜಾಗ್ರತೆಯಿಂದಿರಿ, ಅವರ ಕಡೆ ಕಣ್ಣೆತ್ತಿಯೂ ನೋಡಬೇಡಿ’ ಎಂದೆಲ್ಲಾ ಅಭಿಪ್ರಾಯಗಳಿದ್ದವು. ಓದಿಯೇ ಹೆದರಿದ್ದ ನಾನು ಈಗ ವಿಸಿಟಿಂಗ್ ಕಾರ್ಡ್ ನೆಪಮಾತ್ರಕ್ಕೆ ತೆಗೆದುಕೊಂಡು, ದೇವಸ್ಥಾನದ ಒಳಗೆ ಪ್ಲಾಸ್ಟಿಕ್, ಚರ್ಮದ ಬ್ಯಾಗುಗಳು ನಿಷೇಧವಾದ್ದರಿಂದ ಊರಿನಿಂದ ಬರುವಾಗಲೇ ತಂದಿದ್ದ ಬಟ್ಟೆ ಚೀಲದೊಳಕ್ಕೆ ಇಳಿಸಿದೆ. 

ಜಗನ್ನಾಥಮಂದಿರದಿಂದ ಸುಮಾರು ಒಂದು ಕಿ.ಮೀ ಮೊದಲೇ ವಾಹನ ನಿಲುಗಡೆ. ಅಲ್ಲಿಂದ ನಡೆದು ಇಲ್ಲವೇ ಮಿನಿ ಬಸ್ಸಿನ ಮೂಲಕ ಹೋಗಬೇಕು. ದೇವಸ್ಥಾನದ ಎದುರುಗಡೆ ಕೌಂಟರಿನಲ್ಲಿ ಚಪ್ಪಲಿಗಳನ್ನೂ ಕ್ಯಾಮರಾಗಳನ್ನೂ ಇಡುವ ಲಾಕರ್ ಸೌಲಭ್ಯವಿದೆ. ಇಲ್ಲಿ ಛಾಯಾಚಿತ್ರ ತೆಗೆಯಲು ಅವಕಾಶವಿಲ್ಲ. ಮೆಟಲ್ ಡಿಟಕ್ಟರ್ಗಳ ಮೂಲಕ ಪರೀಕ್ಷೆಗೆ ಒಳಪಟ್ಟು ಹಿಂದೂಗಳು ಮಾತ್ರ ದೇವಸ್ಥಾನದ ಪೂರ್ವ ದಿಕ್ಕಿನ ಸಿಂಹದ್ವಾರದ ಮೂಲಕ ಪ್ರವೇಶಿಸಬಹುದು. ಒಳಹೋಗುವಾಗಲೇ ಅರುಣ ಸ್ತಂಭ ಸಿಗುತ್ತದೆ. ಇದು ಮೂಲತಃ ಕೋನಾರ್ಕ ದೇವಸ್ಥಾನದಲ್ಲಿದ್ದದ್ದು, ಅಲ್ಲಿ ಪೂಜೆ ನಿಂತು ಹೋದಮೇಲೆ ಇಲ್ಲಿಗೆ ಸ್ಥಳಾಂತರಗೊಳ್ಳಲ್ಪಟ್ಟದ್ದು. ಪುರಿ ದೇವಸ್ಥಾನದ ಆರಂಭದಲ್ಲಿ ಸಿಗುವ ಇಪ್ಪತ್ತೆರಡು ಮೆಟ್ಟಲುಗಳು ಭಕ್ತಾದಿಗಳ ಶ್ರದ್ಧೆಯ ಪಾದಧೂಳಿನಿಂದ ಪವಿತ್ರವಾದವುಗಳೆಂಬ ನಂಬಿಕೆಯಿದೆ. ಮುಂದೆ ಎಡಕ್ಕೆ ಬೃಹತ್ತಾದ ಪಾಕಶಾಲೆ, ಬಲಗಡೆ ಆನಂದ ಬಜಾರ ಎಂಬ ಆಹಾರ ವಿತರಣಾ ಕೇಂದ್ರಗಳಿವೆ. ಮುಂದೆ ಸಾಗಿದರೆ ವಿಶಾಲ ಮಂದಿರದ ಆವರಣ. ಈ ಪ್ರಾಂಗಣದಲ್ಲಿ ವಿಶ್ವನಾಥ ಮಂದಿರ, ಲಕ್ಷ್ಮೀಮಂದಿರ, ಸೂರ್ಯಮಂದಿರ, ನರಸಿಂಹ ಮಂದಿರ ಹೀಗೆ ೩೦ ಸಣ್ಣಸಣ್ಣ ಗುಡಿಗಳು, ಒಂದೊಂದರ ರಚನೆ, ಕೆತ್ತನೆಯೂ ಅದ್ಭುತವೇ! ಕತ್ತೆತ್ತಿ ನೋಡಿದರೆ ಜಗನ್ನಾಥ ಮಂದಿರದ ಮೇಲೆ ಎತ್ತರದ ಕಲ್ಲಿನ ಶಿಖರ. ಅದರ ಮೇಲೆ ಅಷ್ಟ ಧಾತುಗಳಿಂದ ತಯಾರಾದ ಬೃಹತ್ ನೀಲಚಕ್ರ. ಅದರ ಮೇಲೆ ಧ್ವಜ ಹಾರಾಡುತ್ತಿರುವ ಸುಂದರ ದೃಶ್ಯ. ನಿತ್ಯ ಸಂಜೆ ಹಳೆ ಧ್ವಜವನ್ನು ಇಳಿಸಿ, ಹೊಸ ಧ್ವಜವನ್ನು ಏರಿಸುವುದು ಗರುಡ ಜನಾಂಗದವರ ಜವಾಬ್ದಾರಿ. ಈ ೨೧೪ ಅಡಿ ಎತ್ತರವನ್ನು ಅವರು ಯಾವ ಹೊರಗಿನ ಸಲಕರಣೆಗಳ ಆಧಾರವೂ ಇಲ್ಲದೇ, ಮನದೊಳಗಿನ ದೇವರ ಮೇಲಿನ ನಂಬುಗೆಯ ಬಲದಿಂದಲೇ ಏರಿಳಿಯುತ್ತಾರೆ. ಇದು ಸುಮಾರು ೧೦೦೦ ವರ್ಷಗಳಿಂದಲೂ ಬಿರುಬಿಸಿಲು, ಚಳಿ, ಮಳೆ, ಬಿರುಗಾಳಿ, ಚಂಡಮಾರುತ, ಇನ್ನಿತರ ಯಾವುದೇ ಪ್ರಕೃತಿ ವಿಕೋಪದ ದಿನದಲ್ಲೂ ಲೋಪವಾಗದಂತೆ ಪಾಲಿಸಿಕೊಂಡು ಬಂದ ಕ್ರಮ. ಇದೊಂದೇ ಅಲ್ಲ, ಪುರಿಯಲ್ಲಿ ಹೀಗೆ ವಂಶಪಾರಂಪರ್ಯವಾಗಿ ನಡೆದುಕೊಂಡು ಬಂದ ಹಲವಾರು ಆಚರಣೆಗಳಿವೆ. ಇವೆಲ್ಲಾ ಬೇರೆಬೇರೆ ಜಾತಿ, ಕುಲ, ಬುಡಕಟ್ಟಿನವರು ನಿಭಾಯಿಸುವ ಜವಾಬ್ದಾರಿಗಳು. ಸುಮಾರು ೩೦ - ೩೫ ಕುಲಕಸುಬುಗಳಿಂದ ಆರಂಭಗೊಂಡಿದ್ದ ಇಲ್ಲಿನ ಆಚರಣೆ, ವಿಧಿವಿಧಾನಗಳು ಈಗ ಇನ್ನೂ ಹೆಚ್ಚಿವೆಯಂತೆ.

ಪಾಕಶಾಲೆಯಲ್ಲಿ ಎಲ್ಲವೂ ಮಣ್ಣಿನ ಮಡಿಕೆಗಳಲ್ಲೇ ತಯಾರಾಗುವ ಕಾರಣ ಮತ್ತು ಒಮ್ಮೆ ಉಪಯೋಗಿಸಿದ ಮಡಿಕೆಯನ್ನು ಇನ್ನೊಮ್ಮೆ ಬಳಸುವುದಿಲ್ಲವಾದ್ದರಿಂದ ಕುಂಬಾರರಿಗೆ ಸದಾ ಕೆಲಸವಿರುತ್ತದೆ. ಸುಮಾರು ಒಂದು ಲಕ್ಷ ಜನರಿಗೆ ಕೆಲವೇ ಗಂಟೆಗಳಲ್ಲಿ ಊಟ ತಯಾರಿಸಬಲ್ಲ ಈ ಮಹಾ ಅಡುಗೆಮನೆಯಲ್ಲಿ ೬೦೦ ಸೌದೆ ಒಲೆಗಳೂ ಅಷ್ಟೇ ಸಂಖ್ಯೆಯ ಬಾಣಸಿಗರೂ ಇದ್ದಾರೆ. ಈ ಒಲೆಗಳಲ್ಲಿ ತಯಾರಾಗುವ ಸಾಂಪ್ರದಾಯಿಕ, ಸಾತ್ವಿಕ ಅಡುಗೆ, ಈ ಅಡುಗೆಗೆ ಬೇಕಾಗುವ ಸಾಮಾಗ್ರಿಗಳ ಪೂರೈಕೆ – ಅಕ್ಕಪಕ್ಕದ ಹಳ್ಳಿಗಳಲ್ಲಿ ರೈತರು ಬೆಳೆದ ತರಕಾರಿಗಳು, ಅವುಗಳ ಮಾರಾಟ ಮಳಿಗೆ, ಸಾಮಾಗ್ರಿ ಪೂರೈಸುವ ವರ್ತಕರು, ಅಡುಗೆ ಸಿಬ್ಬಂದಿ… ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಇನ್ನು ವರ್ಷಂಪ್ರತಿ ನಡೆಯುವ ರಥಯಾತ್ರೆಗಂತೂ ಮರದ ಆಯ್ಕೆ, ಚಕ್ರದ ಕೆತ್ತನೆ, ರಥದ ಬೇರೆಬೇರೆ ಭಾಗಗಳ ತಯಾರಿ, ಅಲಂಕಾರದ ಬಟ್ಟೆ ತಯಾರಿ, ಹೊಲಿಯುವಿಕೆ, ಲೋಹದ ಸಾಮಾಗ್ರಿಗಳ ಪೂರೈಕೆ, ಕಮ್ಮಾರರ ಕೆಲಸ, ೨೫೦ ಅಡಿ ಉದ್ದ ೮ ಇಂಚು ದಪ್ಪದ ತೆಂಗಿನ ನಾರಿನ ಹಗ್ಗದ ತಯಾರಿ, ರಥಯಾತ್ರಾ ಜಾಗದ ಶುದ್ಧೀಕರಣ, ರಥದಲ್ಲಿ ಜಗನ್ನಾಥ, ಬಲಭದ್ರ, ಸುಭದ್ರೆಯರನ್ನು ತಂದು ಕುಳ್ಳಿರಿಸುವ ಕ್ರಮಗಳನ್ನು ನಡೆಸಿಕೊಡುವವರು, ಚಿನ್ನದ ಹಿಡಿಸೂಡಿ ಹಿಡಿದು ರಥವನ್ನು ಸ್ವಚ್ಚಮಾಡುವ ಜಗನ್ನಾಥನ ಪ್ರಥಮ ಸೇವಕನೆಂದು ಪರಿಗಣಿಸಲ್ಪಟ್ಟ ರಾಜ, ಭಜನೆ, ಹಾಡು, ನೃತ್ಯ, ಶಂಖ, ಕೊಂಬು, ಜಾಗಟೆ, ಮದ್ದಳೆ, ತಾಳಗಳ ಮೂಲಕ ಸಂಚಲನ ಮೂಡಿಸುವ ಕಲಾವಿದರು, ಭಕ್ತಿಯ ಸಿಂಚನದಲ್ಲಿ ಮಿಂದೇಳುವ ೧೦ ಲಕ್ಷಕ್ಕೂ ಹೆಚ್ಚಿನ ಭಕ್ತವೃಂದ, ದೇಶವಿದೇಶಗಳ ಪ್ರವಾಸಿಗರು, ಪೋಲೀಸ್ ಸಿಬ್ಬಂದಿಗಳು, ಗೂಢಚಾರರು, ವಸತಿಗೃಹಗಳನ್ನು ನಿಭಾಯಿಸುವವರು, ಮೇಲುಸ್ತುವಾರಿ ನೋಡಿಕೊಳ್ಳುವವರು ಇತ್ಯಾದಿ. ಇಷ್ಟೂ ಚಟುವಟಿಕೆಗಳು ಪರಂಪರಾನುಗತವಾಗಿ, ವಂಶಪಾರಂಪರ್ಯವಾಗಿ ಯಾವ ಬರಹದ ದಾಖಲೆಯ ಅಗತ್ಯವೂ ಇಲ್ಲದೇ, ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸಲ್ಪಟ್ಟು, ಮೌಖಿಕವಾಗಿ ಕಲಿಸಿಕೊಟ್ಟ ಕ್ರಮದಲ್ಲಿ ಸಂಪ್ರದಾಯಬದ್ಧವಾಗಿ ಸಾವಿರ ವರ್ಷಗಳಿಗೂ ಮೀರಿ ನಡೆದುಕೊಂಡು ಬಂದಿದೆ.

ಪುರ ಎಂದರೆ ಜೀವಿಸುವ ಜಾಗ ಎಂಬರ್ಥದಲ್ಲಿ ನಿಜವಾಗಿಯೂ ಉದ್ಯೋಗಖಾತ್ರಿಯೊಂದಿಗೆ ತಲೆ ತಲಾಂತರಗಳಿಂದ ಜನರು ಪುರಿಯನ್ನು ಸಹಬಾಳ್ವೆಯ ಪುರವನ್ನಾಗಿಸಿದ್ದಾರೆನಿಸಿತು. ಇಷ್ಟಿದ್ದೂ ‘ಭಾರತೀಯರಿಗೆ ಸಹಿಷ್ಣುತೆಯಿಲ್ಲ, ಇತಿಹಾಸಪ್ರಜ್ಞೆಯಿಲ್ಲ, ಪರಂಪರೆಗಳ ಬಗ್ಗೆ ಗೌರವಾದಾರಗಳಿಲ್ಲ’ ಎಂಬ ಬಿರುದು ಬಾವಲಿಗಳನ್ನು ಧಾರಾಳವಾಗಿ ಪಡೆದಿದ್ದೇವೆ! 

ದೇವಸ್ಥಾನಕ್ಕೆ ಬರುವ ಭಕ್ತರ ಗುಂಪುಗಳು ಅನುಭವಿಸುವ ಭಾವಪರವಶತೆಯನ್ನು ನೋಡಿಯೇ ತಿಳಿಯಬೇಕು. ನಮ್ಮೊಂದಿಗೇ ದೇಗುಲ ಪ್ರವೇಶಿಸಿದ ಭಕ್ತರ ಗುಂಪೊಂದು ಭಜನೆಯಲ್ಲಿ ಮೈಮರೆತಿತ್ತು. ಸಮವಸ್ತ್ರದಂತೆ ಧರಿಸಿದ್ದ ವೇಷಭೂಷಣಗಳು, ಲಯಬದ್ಧವಾದ ಹೆಜ್ಜೆಗಾರಿಕೆಯಿಂದ ಕೂಡಿದ ಸಂಕೀರ್ತನೆ ಅಲ್ಲಿದ್ದ ಹಲವರನ್ನು ಜತೆಗೂಡುವಂತೆ ಮಾಡಿತ್ತು. ಅರಳಿಕಟ್ಟೆಯಲ್ಲಿ ಕುಳಿತಿದ್ದ ವೃದ್ಧದಂಪತಿ ಛಕ್ಕನೆ ಎದ್ದು ತಾವೂ ಹಾಡುತ್ತಾ ಅವರ ಜತೆಗೆ ತಮ್ಮ ವಯಸ್ಸನ್ನು, ನೋವನ್ನೂ ಮರೆತು ಕುಣಿದದ್ದನ್ನು ನೋಡಿ ಆನಂದಪಟ್ಟೆವು.


ಜಗನ್ನಾಥ ಮಂದಿರದ ಪಕ್ಕದಲ್ಲೇ ‘ಬಿಮಲಾದೇವಿ’ ಎಂಬ ಪಾರ್ವತಿಯ ಮಂದಿರವಿದೆ. ನಾವು ಅಲ್ಲಿದ್ದ ಸಮಯದಲ್ಲಿ ಸುಂದರವಾಗಿ ಅಲಂಕರಿಸಿಕೊಂಡಿದ್ದ ಮಂಗಳಮುಖಿಯೊಬ್ಬರು ತಮ್ಮ ಜನರ ಗುಂಪಿನೊಂದಿಗೆ ಬಂದು ನೇರವಾಗಿ ದೇವರ ಬಳಿ ಸಾಗಿದರು. ಗರ್ಭಗುಡಿಯ ಬಳಿ ಅರ್ಚಕರ ಸಮೀಪ ನಿಂತು ಸುಶ್ರಾವ್ಯವಾಗಿ ಭಾವಪೂರ್ಣವಾಗಿ ದೇವಿಸ್ತುತಿಯನ್ನು ಸುಮಾರು ೫ ನಿಮಿಷಗಳ ಕಾಲ ಹಾಡಿದರು. ಅವರ ಹಾಡಿನ ಮೋಡಿಗೆ ಒಳಗಾದ ಅರ್ಚಕರಾದಿಯಾಗಿ ಎಲ್ಲರೂ ಮೌನವಾಗಿ ಆಲಿಸಿದರು. ಹಾಡಿನ ಕೊನೆಯಲ್ಲಿ ಹಲವರ ಕಣ್ಣುಗಳು ಒದ್ದೆಯಾಗಿದ್ದವು. ಆ ಬಳಿಕವೇ ಅರ್ಚಕರು ಆರತಿ ಎತ್ತಿ, ಗೌರವಪೂರ್ವಕ ಮೊದಲ ಪ್ರಸಾದವನ್ನು ಅವರಿಗೇ ಇತ್ತು ಆಶೀರ್ವದಿಸಿದರು. ಆ ಕ್ಷಣಮನಸ್ಸಿಗೆ, ಮುಂದುವರಿದ ಬೆಂಗಳೂರಿನ ಹೆಬ್ಬಾಳ ವೃತ್ತದಲ್ಲಿ ಚಪ್ಪಾಳೆ ತಟ್ಟಿ ಭಿಕ್ಷೆ ನೀಡಲು ಉಪದ್ರಕೊಡುವ ಮಂಗಳಮುಖಿಯರು, ಅವರಿಂದ ತಪ್ಪಿಸಿಕೊಳ್ಳಲು ಹೆಣಗಾಡುವ ವಾಹನ ಸವಾರರು, ಆವಾಗಾವಾಗ ಕೋಲು ಹಿಡಿದು ಓಡಿಸಿದ ನಾಟಕ ಮಾಡುವ ಪೋಲೀಸರ ದೃಶ್ಯ ನೆನಪಿಗೆ ಬಂದರೂ ಪ್ರಯತ್ನಪೂರ್ವಕ ದೂರ ತಳ್ಳಿದೆ. 

ಮುಂದೆ ಜಗನ್ನಾಥ ಮಂದಿರ ಹೊಕ್ಕು ಮರದ ಬೊಂಬೆಗಳಂತಿದ್ದ ಜಗನ್ನಾಥ, ಬಲಭದ್ರ, ಸುಭದ್ರೆಯರ ದರ್ಶನ ಪಡೆದೆವು. ಇಂದ್ರದ್ಯುಮ್ನ ಎಂಬ ಪರಮ ವಿಷ್ಣುಭಕ್ತ ರಾಜನಿಗೆ ತನ್ನ ಪ್ರೀತಿಯ ದೇವರ ರೂಪವನ್ನು ಕಣ್ಣಾರೆ ಕಾಣಬೇಕೆಂಬ ಆಸೆಯಾಗುತ್ತದೆ. ಇದನ್ನು ಆತ ವಿದ್ಯಾಪತಿ ಎಂಬ ಅರ್ಚಕರಲ್ಲಿ ಹೇಳಿ ತನಗೆ ಇದನ್ನು ಸಾಧ್ಯಮಾಡಿಸಿಕೊಡಲು ಕೇಳಿಕೊಳ್ಳುತ್ತಾನೆ. ವಿಷ್ಣುವನ್ನು ನೀಲಮಾಧವನೆಂಬ ಸುಂದರ ರೂಪದಲ್ಲಿ ವಿಶ್ವವಸು ಎಂಬ ಬುಡಕಟ್ಟು ರಾಜ ಪೂಜಿಸುತ್ತಿರುವುದು ವಿದ್ಯಾಪತಿಗೆ ಗೊತ್ತಾಗುತ್ತದೆ. ನೀಲಮಾಧವನನ್ನು ಹುಡುಕುತ್ತಾ ಆ ರಾಜ್ಯಕ್ಕೆ ಬಂದ ವಿದ್ಯಾಪತಿ, ಬುಡಕಟ್ಟು ರಾಜಕುಮಾರಿಯನ್ನು ಇಷ್ಟಪಟ್ಟು ಮದುವೆಯಾಗುತ್ತಾನೆ ಹಾಗೂ ಮುಂದೆ ಒಂದು ದಿನ ಆಕೆಯ ನೆರವಿನಿಂದ ನೀಲಮಾಧವನನ್ನು ಕಂಡು ನಿಬ್ಬೆರಗಾಗುತ್ತಾನೆ. ಈ ವಿಸ್ಮಯವನ್ನು ತೋರಿಸಲು ತನ್ನ ರಾಜನಾದ ಇಂದ್ರದ್ಯುಮ್ನನನ್ನು ಕರಕೊಂಡು ಬರುವಷ್ಟರಲ್ಲಿ ನೀಲಮಾಧವ ಮಾಯವಾಗಿರುತ್ತಾನೆ. ತೀವ್ರವಾದ ನಿರಾಶೆಗೆ ಒಳಗಾದ ರಾಜನಿಗೆ ಪುರಿಗೆ ತೆರಳಲು ಕನಸಿನಲ್ಲಿ ಆಜ್ಞೆಯಾಗುತ್ತದೆ. ಅಲ್ಲಿ ಆತನಿಗೆ ಮರದ ದಿಮ್ಮಿಯೊಂದು ತೇಲಿಬರುತ್ತಿರುವುದು ಕಾಣುತ್ತದೆ. ಇದರಲ್ಲಿ ವಿಷ್ಣುವಿನ ಪರಿಪೂರ್ಣ ರೂಪವನ್ನು ಕೆತ್ತಿಸಬೇಕೆಂಬ ಅವನ ಆಸೆಗೆ ಸ್ವತಃ ವಿಶ್ವಕರ್ಮ, ಒಬ್ಬ ಸಾಮಾನ್ಯ ಶಿಲ್ಪಿಯಂತೆ ಬಂದು ಸಮ್ಮತಿಸುತ್ತಾನೆ. ತಾನು ಬಾಗಿಲು ಮುಚ್ಚಿ ಕೆಲಸ ಮಾಡುವುದಾಗಿಯೂ, ೨೧ ದಿನಗಳವರೆಗೆ ಯಾರೂ ಬಾಗಿಲು ತೆರೆಯಬಾರದೆಂದೂ ಶಿಲ್ಪಿ ಕರಾರು ವಿಧಿಸುತ್ತಾನೆ. ಇದಕ್ಕೆ ಒಪ್ಪಿದ ರಾಜ ಬಹಳ ಕಾತರದಿಂದ ಕಾಯುತ್ತಾ ಇರುತ್ತಾನೆ. ಮುಚ್ಚಿದ ಬಾಗಿಲಿನಿಂದ ಯಾವಾಗಲೂ ಕೇಳಿಬರುತ್ತಿದ್ದ ಕಟಕಟ ಸದ್ದು ೧೪ ದಿನಗಳ ಬಳಿಕ ಇದ್ದಕ್ಕಿದ್ದಂತೆ ನಿಂತು ಹೋಗುತ್ತದೆ. ಶಿಲ್ಪಿಗೆ ಏನೋ ತೊಂದರೆಯಾಗಿದೆಯೆಂದು ಭಾವಿಸಿ ಬಾಗಿಲು ತೆರೆದಾಗ ಅಲ್ಲಿ ಶಿಲ್ಪಿ ಇರುವುದಿಲ್ಲ. ಈಗ ಪುರಿಯಲ್ಲಿ ನೋಡಲು ಸಿಗುವ ಅಪೂರ್ಣವೆಂಬಂತೆ ಕಾಣುವ ಮರದ ೩ ಬೊಂಬೆಗಳಿರುತ್ತವೆ. ರಾಜ ಅವನ್ನೇ ಸ್ಥಾಪಿಸಿ ಪೂಜಿಸುತ್ತಾನೆ. ಪುರಿಯ ಈ ಮಂದಿರದಲ್ಲಿ ಮೊದಲು ಸ್ಥಾಪನೆಯಾಗಿದ್ದ ನರಸಿಂಗ ಮಂದಿರದ ಪಕ್ಕವೇ ಹೀಗೆ ಜಗನ್ನಾಥನ ಸ್ಥಾಪನೆಯಾಗಿ ಮುಖ್ಯ ದೇವರ ಸ್ಥಾನವನ್ನು ಕೊಡಲಾಯಿತು. 

ಪುರಿಯಲ್ಲಿ ಈ ದೇವರುಗಳನ್ನು ಮಾನವರಂತೆ ಪರಿಗಣಿಸಿ, ಸ್ನಾನ, ಅಲಂಕಾರ, ಭೋಜನವೇ ಮೊದಲಾದ ಸೇವೆಗಳನ್ನು ನಡೆಸಲಾಗುತ್ತದೆ. ಮಾತ್ರವಲ್ಲ, ಇಲ್ಲಿ ದೇವರುಗಳಿಗೂ ಜ್ವರ ಬರುತ್ತದೆ ಹಾಗೂ ೮, ೧೨ ಯಾ ೧೯ ವರ್ಷಗಳಿಗೊಮ್ಮೆ ಮೃತಪಟ್ಟು ಮತ್ತೆ ಹೊಸಮೂರ್ತಿಗಳ ರಚನೆಯಾಗುತ್ತದೆ. ‘ನವಕಳೇಬರ’ ಎಂದು ಹೇಳುವ ಹೊಸಶರೀರದಲ್ಲಿ ಅವರ ಪೂಜೆ ಮತ್ತೆ ನಡೆಯುತ್ತದೆ. 

ದೇವರ ಗುಡಿಗಳನ್ನೆಲ್ಲಾ ಹೊಕ್ಕು, ಕೈ ಮುಗಿದು ಹೊರಬರುವಾಗಲೆಲ್ಲ ಸುದರ್ಶನ ಚಕ್ರದ ಸಂಕೇತವಾದ ನೀಲಚಕ್ರದ ಮೇಲಿದ್ದ ಧ್ವಜದ ಕಡೆಗೆ ಕಣ್ಣು ಹಾಯಿಸುತ್ತಲೇ ಇದ್ದೆ. ಕತ್ತಲಾಗುತ್ತ ಬಂದರೂ ಯಾರೂ ಕಂಬ ಏರುವ ಸೂಚನೆ ಕಾಣಲಿಲ್ಲ. ಯಾರನ್ನಾದರೂ ಕೇಳಲು ಹೆದರಿಕೆ. ಪಾಂಡಾಗಳನ್ನು ಕಣ್ಣೆತ್ತಿಯೂ ನೋಡಬೇಡಿ ಎಂಬ ಎಚ್ಚರಿಕೆ ಇತ್ತಲ್ಲಾ, ಆದರೂ ತಡೆಯದೇ ಪ್ರಸಾದ ಮಾರಾಟಕ್ಕೆಂದು ಕುಳಿತಿದ್ದ ಪಾಂಡಾರಲ್ಲಿ ಹಿಂದಿಯಲ್ಲಿ ಧ್ವಜ ಬದಲಾವಣೆ ಎಷ್ಟು ಗಂಟೆಗೆಂದು ಕೇಳಿದೆ. ಅದು ಈವತ್ತು ಸುಮಾರು ೪ ಗಂಟೆ ಸಮಯಕ್ಕೆ ಆಯಿತು, ಹೀಗೇ ಎಂದು ಗಂಟೆಗಳ ಲೆಕ್ಕದಲ್ಲಿ ಹೇಳಲಾಗದು ಎಂದರು. ಸೂರ್ಯನ ಚಲನೆ, ಋತು, ದೇಶ, ಕಾಲಮಾನಕ್ಕನುಗುಣವಾಗಿ ಆಚರಣೆಗಳನ್ನು ನಡೆಸುವ, ಪ್ರಕೃತಿಪರವಾದ, ವೈಜ್ಞಾನಿಕವಾದ, ಸಾಂಪ್ರದಾಯಿಕ ಕ್ರಮಗಳನ್ನು ಪಾಲಿಸುವವರು ಆಧುನಿಕ, ವ್ಯಾವಹಾರಿಕ ಗಂಟೆ, ನಿಮಿಷ, ಸೆಕೆಂಡುಗಳ ಲೆಕ್ಕಾಚಾರಕ್ಕೆ ಬೀಳರು ಎಂಬುದು ಅರ್ಥವಾಯಿತು. ಜಗನ್ನಾಥನಿಗೆ ನಡೆಯುವ ವಿವಿಧ ಸೇವೆ, ಪೂಜೆಗಳ ಕಾಲವನ್ನು ಸುಮಾರು ಇಷ್ಟು ಗಂಟೆಯಿಂದ ಇಷ್ಟು ಗಂಟೆಗಳ ಮಧ್ಯೆ ಎಂದು ಸೂಚಿಸುತ್ತಾರೆ. 

ಪುರಿಯ ವಿಶೇಷವೇ ಜಗನ್ನಾಥನಿಗೆ ಅರ್ಪಿಸುವ ಭೋಗ. ಸಹಸ್ರ ವರ್ಷಗಳಿಂದ ಪಾಕಶಾಲೆಯಲ್ಲಿ ತಯಾರಾದ ವಿಧವಿಧದ ಸುಮಾರು ೫೬ ಭಕ್ಷ್ಯವ್ಯಂಜನಗಳಿಂದ ದಿನಕ್ಕೆ ಐದಾರು ಬಾರಿ ಜಗನ್ನಾಥನಿಗೆ ಭೋಜನಸೇವೆ ನಡೆಯುತ್ತದೆ. ದೇವರ ಕಲ್ಪನೆ, ಪೂಜಿಸುವ ವಿಧಿವಿಧಾನಗಳು ಬೆಳೆದು ಬಂದ ಬಗೆಯೇ ಒಂದು ವಿಸ್ಮಯ. ದೇವತಾರಾಧನೆಯ ಕ್ರಮಗಳಲ್ಲಿ ಹಲವು ಸಹಸ್ರಮಾನಗಳಲ್ಲಿ ಆದ ಬದಲಾವಣೆಗಳು, ಬದಲಾಗದೇ ಉಳಿದ ಕ್ರಮಗಳು ಅದಕ್ಕೆ ಸರಿಯಾಗಿ ದೇವಸ್ಥಾನಗಳ ರಚನೆಗಳಲ್ಲಿ ಆದ ವ್ಯತ್ಯಾಸ, ಬೆಳವಣಿಗೆ ಹೀಗೆ ಎಲ್ಲವನ್ನೂ ಅರ್ಥಮಾಡಿಕೊಳ್ಳಲು ಆಗಮ ಶಾಸ್ತ್ರ ತಿಳಿದ ವಿದ್ವಾಂಸರ ಸಹಾಯಬೇಕು. ಸಮಯಬೇಕು. ಆಸಕ್ತಿ, ಶ್ರದ್ಧೆಬೇಕು. ಮುಖ್ಯವಾಗಿ ಹಲವಾರು ಪೂರ್ವಗ್ರಹಗಳನ್ನು ಬಿಡಬೇಕು. ಇದೆಲ್ಲಾ ನನ್ನ ಅರಿವಿಗೆ ಬಂದದ್ದು ಪುರಿಯಿಂದ ವಾಪಾಸು ಬಂದ ಮೇಲೆ ಯೂಟ್ಯೂಬ್ನಲ್ಲಿ ನೋಡಿದ ಭಾರತದ ದೇವಸ್ಥಾನಗಳ ವಾಸ್ತುವಿನ್ಯಾಸಗಳ ಬಗ್ಗೆ ಶ್ರೀನಾಗಸ್ವಾಮಿ ಎಂಬ ವಯೋವೃದ್ಧರು ನೀಡಿದ ವಿದ್ವತ್ಪೂರ್ಣ ಉಪನ್ಯಾಸದ ಮೂಲಕ.
ಪುರಿಯಲ್ಲಿ ಅನ್ನಬ್ರಹ್ಮನಿಗೆ ವಿಶೇಷ ಸ್ಥಾನವಿದೆ ಎಂದು ತಿಳಿದಿದ್ದೆವಾದ್ದರಿಂದ ಅಲ್ಲಿನ ಊಟದ ಪ್ರಸಾದ ಸ್ವೀಕರಿಸಿಯೇ ಬರುವ ನಿರ್ಧಾರಮಾಡಿದ್ದೆವು. ನಾವು ಸಂಜೆಯ ವೇಳೆಗೆ ಹೋದದ್ದರಿಂದ ರಾತ್ರಿಯ ಭೋಜನ ಪ್ರಸಾದಕ್ಕೆ ಕಾಯಬೇಕಿತ್ತು. ಆನಂದಬಜಾರದಲ್ಲಿ ಮಡಿಕೆ ಅನ್ನ, ತೊವ್ವೆ ತರಹದ ವ್ಯಂಜನ, ಹಾಲಿನ ವಿವಿಧ ಭಕ್ಷ್ಯಗಳನ್ನು ಕೊಂಡು ಎಲೆಗಳಿಂದ ಮಾಡಿದ್ದ ತಟ್ಟೆಗಳಲ್ಲಿ ಉಂಡೆವು. ಪ್ರಸಾದದ ರೂಪದಲ್ಲಿ ಕೊಡುವ ಸಿಹಿತಿನಿಸುಗಳ ಕಟ್ಟೊಂದನ್ನು ಕೊಂಡೆವು; ಇವು ಬಹಳ ರುಚಿಯಾಗಿದ್ದವು. ಆಹಾರವನ್ನು ಕೊಂಡು ಊಟ ಮಾಡುವ ಜಾಗವನ್ನು ಹುಡುಕುತ್ತಿದ್ದಾಗ ಅಂಗಡಿಯಾತ ಹೇಳಿದ "ಇಲ್ಲಿ ಎಲ್ಲಿ ಬೇಕಾದರೂ ಯಾರು ಬೇಕಾದರೂ ಊಟ ಮಾಡಬಹುದು. ಶತಶತಮಾನಗಳಿಂದ ಚಾಂಡಾಲನೂ ಬ್ರಾಹ್ಮಣನೂ ಒಟ್ಟಿಗೇ ಕುಳಿತು ಉಣ್ಣುವ ಜಾಗವಿದು". ನಮ್ಮ ಆಧುನಿಕ, ಜಾತ್ಯತೀತ ವಿಶ್ವವಿದ್ಯಾಲಯಗಳಲ್ಲಿ ಎಷ್ಟೋ ಬಾರಿ ಶಿಕ್ಷಕ ಸಿಬ್ಬಂದಿ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಒಟ್ಟಿಗೇ ಕುಳಿತು ಊಟ ಮಾಡುವುದಿಲ್ಲ ಎಂಬುದು ನೆನಪಾಯಿತು. ಹಾಗಾದರೆ ನಾವು ಅನುಕರಣೆ ಮಾಡುತ್ತಿರುವುದು ಯಾರನ್ನು? ಎಂಬ ಪ್ರಶ್ನೆ ಮೂಡುತ್ತಲೇ ಇತ್ತು. 

ಜಗನ್ನಾಥ ಮಂದಿರದಿಂದ ವಾಪಾಸು ಬರುವಾಗ ದಾರಿಯುದ್ದಕ್ಕೂ ಇದ್ದ ಅಂಗಡಿಗಳಲ್ಲಿ ವ್ಯಾಪಾರ ಮಾಡುತ್ತಲೇ ಬಂದೆವು. ಅಲ್ಲಿನ ಹಳ್ಳಿಗರು ತಾವು ಬೆಳೆದ ಹಣ್ಣು, ತರಕಾರಿ, ಕುಸುರಿ ವಸ್ತುಗಳು, ಚಿಪ್ಪಿನ ಆಭರಣಗಳು, ಪಂಚೆ, ಶಾಲು, ಸೀರೆಗಳು, ಸಿಹಿತಿಂಡಿಗಳು ಮುಂತಾದವುಗಳನ್ನೆಲ್ಲಾ ಮಾರಾಟಕ್ಕೆ ಇಟ್ಟಿದ್ದರು. ದನ, ಎತ್ತು, ನಾಯಿಗಳೂ ಹಾಯಾಗಿ ಮಲಗಿ ಸುಖದಿಂದಿದ್ದವು. ಎಲ್ಲವೂ ಶಾಂತವಾಗಿ ನಡೆಯುತ್ತಿದ್ದ ಈ ರಸ್ತೆಗಳಲ್ಲಿ ಸಹಿಸಲಸಾಧ್ಯವಾದದ್ದು ಮಾತ್ರ ಸ್ಕೂಟರ್, ಬೈಕ್ಸವಾರರ ದಾಳಿ. ಕರ್ಕಶವಾದ ಹಾರ್ನ್ಗಳನ್ನು ಎಡೆಬಿಡದೇ ಬಾರಿಸುತ್ತಾ ವೇಗವಾಗಿ ಬರುತ್ತಿದ್ದ ಇವರು ಪುರಿಯಲ್ಲಿ ಮಾತ್ರವಲ್ಲ, ಭುವನೇಶ್ವರದ ಅಗಲವಾದ ಫುಟ್ಪಾತ್ಗಳಲ್ಲೂ ಹೀಗೇ ಸಂಚರಿಸುತ್ತಿದ್ದು ಪಾದಚಾರಿಗಳನ್ನು ಕಂಗೆಡಿಸಿಬಿಡುತ್ತಿದ್ದರು. ಸೌಮ್ಯ, ಶಾಂತ, ಲಾಸ್ಯದ ಸುಂದರ ಮುಖದಲ್ಲೊಂದು ಎದ್ದುಕಾಣುವ ಕಪ್ಪುಬೊಟ್ಟು!

(ಮುಂದುವರಿಯಲಿದೆ)

4 comments:

 1. ಮೌನ ಓದು, ಧ್ವನಿ ಓದುಗಳ ಬಗ್ಗೆ ನೀವು ನಡೆಸುತ್ತಿರುವ ಪ್ರಯೋಗಗಳು ಕುತೂಹಲಕರವಾಗಿವೆ. ಹಲವು ಲೇಖಕರು ಬರವಣಿಗೆಯಲ್ಲಿ ಬಳಸಿರುವ ಧ್ವನ್ಯರ್ಥವನ್ನು ಅವರೇ ಬಾಯಾರೆ ಓದುವಾಗ ತರಲು ಯಶಸ್ವಿಯಾಗದಿರುವುದೂ ಉಂಟು‌. ಚದುರಂಗರಂಥ ಹಿರಿಯ ಲೇಖಕರೇ ತಮ್ಮ ಕೃತಿತನ್ನು ಜಿ.ಎಚ್. ನಾಯಕರಂಥ ವಿಮರ್ಶಕರು ಸೂಕ್ಷ್ಮವಾಗಿ ಓದಿ ಅಲ್ಲಿರುವ ಧ್ವನಿ ಪದರಗಳನ್ನು ತೋರಿದುತ್ತಿದ್ದಾಗ ಕೇಳುತ್ತವಕ ಕುಳಿತಿದ್ದ ಚದುರಂಗರು ಹೊಸ ವಿಷಯವನ್ನು ಕೇಳಿದವರಂತೆ ಬೆರಗನ್ನು ವ್ಯಕ್ತಪಡಿಸುತ್ತಿದ್ದರು. ಇದನ್ನು ಬರೆಯುವಾಗ ಇಷ್ಟೆಲ್ಲ ಅರ್ಥಗಳು ಹೊಳೆದಿರಲಿಲ್ಲ ಎಂದು ಹೇಳುತ್ತಿದ್ದುದನ್ನು ಕೇಳಿದ್ದೇನೆ. ಲೇಖಕರೇ ಧ್ವನಿ ನೀಡಿದ ಓದು ಪರಿಣಾಮಕಾರಿಯಾಗಲು ಲೇಖಕ ಸೂಕ್ಷ್ಮ ಓದುಗರೂ ಆಗಿರುವುದು ಅಗತ್ಯವಾಗುತ್ತದೆ. ಒಂದೇ ಸಾಲನ್ನು ಓದುವಾಗ ಪುನರಾವರ್ತನೆಯ ಹಿಂದೆ ಪ್ರತಿ ಓದಿನಲ್ಲೂ ಹೊಸ ಹೊಸ ಅರ್ಥ ಸೂಕ್ಷ್ಮಗಳನ್ನು ಉಚ್ಚಾರಣೆಯ ವೈವಿಧ್ಯಗಳನ್ನು ಬಳಸಿ ಸೂಚಿಸಬಹುದು. ವಿದ್ಯಾ ಅವರ ಕೇಳುವ ಓದನ್ನು ಕೇಳಿ ಮತ್ತೆ ಪ್ರತಿಕ್ರಿಯಿಸುವೆ.

  ReplyDelete
 2. ವಿದ್ಯತ್ತೆ. ನೀನು ಬರದ್ದರ ಆನು ಹೆಚ್ಚು ಓದಿದ್ದಿಲ್ಲೆ. ಇದರ ಓದಿದೆ. ಮೊದಲೇ ಎಲ್ಲವನ್ನೂ ಒದೆಕ್ಕಾತು ಹೇಳಿ ಕಂಡತ್ತು. ಈಗೀಗ ನಾವು 'ಲರ್ನೆಡ್' ಆಗಿ ದೇವಸ್ಥಾನಂಗೊಕ್ಕೆ ಹೋದರೆ ತಪ್ಪು ಕಾಂಬದಲ್ಲಿ ಕಳಿತ್ತು. 'ನಮ್ಮ ಪೂರ್ವಾಗ್ರಹ' ಹೇಳಿ ಬರದ್ದು ಬಹಳ ಸೂಕ್ತವಾಗಿ ಇದ್ದು.
  ನಿಂಗೊ ಮೂರು ಜನಕ್ಕೆ(ಅಪ್ಪ, ಅಮ್ಮ ಮಗ) ಒಂದು ಸುತ್ತು ಬಂದರೆ ಪ್ರಪಂಚ ಪರ್ಯಟಣೆ ಹೋಗಿ ಬಂದ ಹಾಂಗೆ ಅಕ್ಕು (ಗಣಪತಿ ವಿಶ್ವ ಪರ್ಯಟನೆ ಮಾಡಿದ ಹಾಂಗೆ)

  ReplyDelete
 3. ವಿವರಣೆ ಬಹು ಆಕರ್ಷಕವಾಗಿದೆ... ಓದಿಸಿಕೊಂಡು ಹೋಗುತ್ತಿದೆ.

  ReplyDelete
 4. ಮೂರ್ತಿ ಬದಲಾವಣೆ ಬಗ್ಗೆ ಫೇಸ್ ಬುಕ್ಕಿನಲ್ಲಿ ಓಡಿಶ ದ ಮಿತ್ರರೊಬ್ಬರು ಹಿಂದಿನ ವರ್ಷ ಬರೆದದ್ದು ನೆನಪಿಗೆ ಬಂತು "ನಮ್ಮ ಆಧುನಿಕ, ಜಾತ್ಯತೀತ ವಿಶ್ವವಿದ್ಯಾಲಯಗಳಲ್ಲಿ ಎಷ್ಟೋ ಬಾರಿ ಶಿಕ್ಷಕ ಸಿಬ್ಬಂದಿ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಒಟ್ಟಿಗೇ ಕುಳಿತು ಊಟ ಮಾಡುವುದಿಲ್ಲ ಎಂಬುದು ನೆನಪಾಯಿತು. ಹಾಗಾದರೆ ನಾವು ಅನುಕರಣೆ ಮಾಡುತ್ತಿರುವುದು ಯಾರನ್ನು? " ನಮ್ಮಲ್ಲಿ ಹಂತ ಹಂತ ದಲ್ಲಿ ಮನುಷ್ಯರ ನಡುವೆ ಒಂದಲ್ಲ ಒಂದು ಭೇದ ವಿದೆ !!

  ReplyDelete