26 June 2017

ಒಡಿಶಾಕ್ಕೆ ಸ್ವಾಗತ - ಸುಂದರ, ಪ್ರಶಾಂತ, ಉದಾತ್ತ

ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ - ಒಡಿಶಾದ ಒಡಲೊಳಗೆ (೧)

ಅದೊಂದು ಸುಂದರ ಸಂಜೆ. ದೂರದರ್ಶನ ಭಾರತಿಯಲ್ಲಿ (ಡಿಡಿಭಾರತಿ) ನೃತ್ಯೋತ್ಸವವೊಂದರ ನೇರ ಪ್ರಸಾರವಾಗುತ್ತಿತ್ತು. ಲಗುಬಗೆಯಲ್ಲಿ ಮನೆ ಕೆಲಸಗಳನ್ನು ಅರ್ಧಂಬರ್ಧ ಮಾಡಿ ಬಂದು ಕೂತವಳಿಗೆ ಸುಂದರ ಕೆತ್ತನೆಗಳ ದೇಗುಲದ ಹಿನ್ನೆಲೆಯಲ್ಲಿ, ನೂರಾರು ಸಭಿಕರ ಮುನ್ನೆಲೆಯಲ್ಲಿ ಪ್ರದರ್ಶಿತವಾಗುತ್ತಿದ್ದ ಒಡಿಸ್ಸೀ ನೃತ್ಯ ಮೋಡಿಮಾಡಿತ್ತು.
ಒಂದು ನೃತ್ಯ ಮುಗಿದು ಅದರ ಗುಂಗಿನಲ್ಲೇ ಇದ್ದಾಗ ಇನ್ನೊಂದು ಆರಂಭವಾಗುವಷ್ಟರಲ್ಲಿ "ವೆಲ್ಕಂ ಟು ಒಡಿಶಾ: ದ ಸೋಲ್ ಆಫ್ ಇನ್ಕ್ರೆಡಿಬಲ್ ಇಂಡಿಯಾ - ಸೀನಿಕ್, ಸೆರೀನ್, ಸಬ್ಲೈಮ್” ಅಂದರೆ - ಒಡಿಶಾಕ್ಕೆ ಸ್ವಾಗತ: ಅದ್ಭುತ ಭಾರತದ ಮೂಲಚೇತನ - ಸುಂದರ, ಪ್ರಶಾಂತ, ಉದಾತ್ತ, ಎಂಬ ಪ್ರವಾಸೋದ್ಯಮ ಪ್ರಚಾರದ ಸಂದೇಶ ತುಣುಕನ್ನು ತುರುಕಿದರು. ‘ರಸಭಂಗ’ ಎಂದು ಬೈಯುತ್ತೇನೆನ್ನುವಷ್ಟರಲ್ಲಿ
ನೃತ್ಯದಷ್ಟೇ ಮೋಹಕತೆ ಇದರಲ್ಲೂ ಇತ್ತಾಗಿ, "ಎಲಾ! ಸರ್ಕಾರೀ ಯಂತ್ರದಿಂದ ಇಷ್ಟು ಚೆಂದದ ಜಾಹೀರಾತಾ!" ಎಂದುಆಶ್ಚರ್ಯಪಟ್ಟೆ. ಮತ್ತೆಮತ್ತೆ ಅದು ಬಂದಾಗಲೆಲ್ಲಾ ಬಿಡದೇ ನೋಡಿದೆ. “ಟಿ.ವಿಯಲ್ಲಿ ಇಷ್ಟು ಚಂದ ಕಂಡ ಜಾಗ, ಹೋಗಿ ನೋಡಿದರೆ ಹೇಗಿದ್ದೀತು?” ಎಂದು ಮನ ಒಡಿಶಾದೆಡೆಗೆ ಓಡತೊಡಗಿತು.

ಒದ್ರ, ಉತ್ಕಲ, ಕಳಿಂಗ ಇತ್ಯಾದಿ ಹೆಸರುಗಳಿಂದೆಲ್ಲಾ ಕರೆಯಲ್ಪಡುತ್ತಿದ್ದ ಒರಿಸ್ಸಾ ಇತ್ತೀಚೆಗಷ್ಟೇ ಒಡಿಶಾವಾಗಿ ಬದಲಾದದ್ದು ಗೊತ್ತಿತ್ತು. ಪಟ್ಟಭದ್ರ ಹಿತಾಸಕ್ತಿಗಳ ಕೈಗಳಲ್ಲಿರುವ ಮಾಧ್ಯಮದವರಿಂದ ಬಡತನ, ಪ್ರಕೃತಿವಿಕೋಪ, ಅಭಿವೃದ್ದಿಯನ್ನೇ ಕಾಣದ ಸ್ಥಿತಿ, ಆದಿವಾಸಿಗಳ ಕಷ್ಟಕಾರ್ಪಣ್ಯಗಳಿಗೆಲ್ಲಾ ಉದಾಹರಣೆಯೆಂಬಂತೆ ಒಡಿಶಾದ
ಪ್ರದರ್ಶನವಾಗುತ್ತಿದ್ದುದನ್ನೂ ಗಮನಿಸಿದ್ದೆ. ಯಾವಾಗ ಪ್ರವಾಸೋದ್ಯಮದ ಆ ತುಣುಕನ್ನು ನೋಡಿದೆನೋ ನಮ್ಮ ಪ್ರಕೃತಿ, ಪರಂಪರೆ, ಕಲೆ, ಸಹಜೀವನಕ್ಕೆಲ್ಲಾ ಕನ್ನಡಿ
ಎಂಬಂತೆ ಭಾಸವಾಗತೊಡಗಿತು. ‘ಒಡಿಶಾಕ್ಕೊಮ್ಮೆ ಹೋಗಬೇಕು, ಈ ವೀಡಿಯೋದಲ್ಲಿ ಕಾಣುವುದನ್ನೆಲ್ಲಾ ಅನುಭವಿಸಬೇಕು’ ಎಂಬ ಆಸೆ ಹೆಮ್ಮರವಾಗತೊಡಗಿತು. ಕೂಡಲೇ ವೀಡಿಯೋದಲ್ಲಿದ್ದ ಮಾಹಿತಿ ವಿಳಾಸ- http://www.odishatourism.gov.in/ನ್ನು ಡೈರಿಯಲ್ಲಿ ಬರೆದಿಟ್ಟುಕೊಂಡೆ.

ಕ್ರಿಸ್ತಪೂರ್ವದಿಂದ ಈವರೆಗಿನ ವಾಸ್ತುವಿನ್ಯಾಸಗಳಿಗೆ
ಸಾಕ್ಷಿಯಾಗಿರುವ ಒಡಿಶಾ ಪ್ರವಾಸಕ್ಕೆ ಕೈಕಾಲು ಗಟ್ಟಿಯಿರುವ, ಪ್ರಕೃತಿ, ಕಲೆ, ಕೆತ್ತನೆ, ಹಳ್ಳಿ ಬದುಕಿಗೆ ಸಹ್ಯರಾಗಿರುವ ಸಹೃದಯೀ ಸಹಪ್ರವಾಸಿಗರು ಸಮೀಪದ ಬಂಧುಗಳಲ್ಲೇ ಸುಲಭದಲ್ಲಿ ಸಿಕ್ಕರು. ಹೀಗೆ ೯ ಜನ ತಯಾರಾಗಿ ೨೦೧೬ ರ ನವೆಂಬರ ೨೧ರಿಂದ ನವೆಂಬರ ೨೭ರವರೆಗೆ ಸುತ್ತಾಡಿ ಬಂದ ಅನುಭವ ಸುಂದರ, ಸುಮಧುರ.

ಪ್ರಕೃತಿ, ಪರಂಪರೆ, ಆಚರಣೆ, ನೃತ್ಯ, ಸಂಗೀತ, ಪಶು, ಪಕ್ಷಿ, ಸಸ್ಯಸಂಕುಲ, ಅರಣ್ಯ, ಖಾದ್ಯ ಹೀಗೆ ಪ್ರತಿಯೊಂದರಲ್ಲೂ ವೈವಿಧ್ಯಮಯವಾಗಿರುವ ಒಡಿಶಾವನ್ನು ನಮ್ಮ ಒಂದು
ವಾರದ ಪ್ರವಾಸದಲ್ಲಿ ಇಡಿಯಾಗಿ ನೋಡುವುದು ಅಸಾಧ್ಯದ ಮಾತು. ಪ್ರವಾಸೋದ್ಯಮ ಇಲಾಖೆಯೇ ಅವರವರ ಆಸಕ್ತಿಗೆ ಅನುಕೂಲವಾಗಿ ವನ್ಯಜೀವಿಪ್ರವಾಸ, ಆದಿವಾಸಿಪ್ರವಾಸ, ಪರಂಪರೆಪ್ರವಾಸ, ದೇಗುಲ ಪ್ರವಾಸ ಎಂಬೆಲ್ಲಾ ಹಣೆಪಟ್ಟಿ ಕೊಟ್ಟು ವಿವರಗಳನ್ನು ನೀಡಿದೆ. ಎಲ್ಲದರ ರುಚಿಯೂ ಬರುವಂತೆ ಕಾರ್ಯಕ್ರಮಪಟ್ಟಿ ತಯಾರಿಸುವುದೇ ಸವಾಲಿನ ಕೆಲಸವೆನಿಸಿತು. ಸಾಮಾನ್ಯವಾಗಿ, ಹೆಚ್ಚಿನ ಪ್ರವಾಸಿಗರು
ಹೋಗುವ ಭುವನೇಶ್ವರ – ಪುರಿ – ಕೋನಾರ್ಕ ಎಂಬ ತ್ರಿಕೋನವನ್ನು ಆರಿಸಿಕೊಂಡು, ನಮ್ಮ ಅಭಿರುಚಿ, ಅನುಕೂಲಕ್ಕೆ ಸ್ವಲ್ಪ ಮಾರ್ಪಾಡು ಮಾಡಿಕೊಂಡೆವು.

ಮಂಗಳೂರು – ಬೆಂಗಳೂರು – ಭುವನೇಶ್ವರ ಮತ್ತೆ ಅದೇ ರೀತಿ ವಾಪಾಸು ಬರಲು ವಿಮಾನ ಟಿಕೆಟುಗಳನ್ನು ಎರಡು ತಿಂಗಳುಗಳ ಮೊದಲೇ ಕಾದಿರಿಸಿದೆವು. ಅಂತರ್ಜಾಲದ
ಮೂಲಕ ನಮ್ಮ ಆಯ್ಕೆಯ ಹೋಟೆಲ್ಲುಗಳನ್ನೂ ಹುಡುಕಿಕೊಂಡೆವು. ಪೂರ್ವಕರಾವಳಿಯ ಪ್ರಸಿದ್ಧ ಮತ್ಸ್ಯಾಹಾರದ ಪ್ರಚಾರ ಕಂಡ ನನಗೆ ಶಾಕಾಹಾರಿ ಭೋಜನದ ಲಭ್ಯತೆಯ ಬಗ್ಗೆ ಅನುಮಾನ ಉಂಟಾಗಿ ‘ಶುದ್ಧಸಸ್ಯಾಹಾರಿ’ ಘೋಷಿತ ಹೋಟೆಲ್ಲುಗಳ ವಿಳಾಸವನ್ನೂ ಅಂತರ್ಜಾಲದಲ್ಲಿ ಜಾಲಾಡಿ ಪಡೆದುಕೊಂಡೆ.

ನವೆಂಬರ ೨೧ರ (೨೦೧೬) ಸೂರ್ಯೋದಯದ ಆನಂದವನ್ನು ಹೀರುತ್ತಾ ಮಂಗಳೂರಿಂದ ಹೊರಟೆವು. ‘ಮಂಜುಮುಸುಕಿದರೆ...,’ ‘ಬೆಂಗಳೂರಿನ ವಿಮಾನ ವಿಳಂಬವಾದರೆ....’, ‘ಮುಂದಿನ ಪ್ರಯಾಣಕ್ಕೆ ತೊಂದರೆಯಾದರೆ....’ ಎಂಬೆಲ್ಲಾ ‘ರೆ’ಗಳು ಇಲ್ಲವಾದವು. ಬೆಂಗಳೂರಿನಲ್ಲಿ ಒಂದೆರಡು ಗಂಟೆಗಳ ಕಾಲ ಕಳೆದು
ಭುವನೇಶ್ವರದ ವಿಮಾನ ಹತ್ತಿದೆವು. ಸಂಜೆಯ ೫.೧೫ಕ್ಕೆ ಒಡಿಶಾದ ನೆಲ ಮುಟ್ಟುತ್ತಿದ್ದಂತೆ ಆಗಲೇ ಅಸ್ತಮಿಸುತ್ತಿದ್ದ ಸೂರ್ಯ, ವಿಮಾನ ನಿಲ್ದಾಣದಲ್ಲೇ ತಯಾರಾಗಿದ್ದ ಸುದರ್ಶನ ಪಟ್ನಾಯಕರ ಮರಳು ಕಲಾಕೃತಿ, ಅಲ್ಲೇ ಹೊರಗೆ ಹಸಿರು ಹುಲ್ಲುಗಾವಲಿನಲ್ಲಿ ಮೇಯುತ್ತಿದ್ದ ಶುಭ್ರ ಬಿಳಿಯ ಹಸುಗಳೆಲ್ಲಾ ಜತೆಗೂಡಿ "ಒಡಿಶಾಕ್ಕೆಸ್ವಾಗತ - ಸುಂದರ, ಪ್ರಶಾಂತ, ಉದಾತ್ತ” ಎಂದು ಹೇಳುತ್ತಿರುವಂತೆ ಸುತ್ತಲಿನ ಸೊಬಗು ಗೋಚರಿಸತೊಡಗಿತು. 

(ಮುಂದುವರಿಯಲಿದೆ)
9 comments:

 1. ಸಚಿತ್ರ ಲೇಖನ ಅದ್ಭುತವಾಗಿ ಆರಂಭವಾಗಿದೆ. ಮುಂದಿನ ಕಂತುಗಳಿಗೆ ಕಾಯುತ್ತದ್ದೇನೆ

  ReplyDelete
 2. ತುಂಬಾ ಚೆನ್ಬಾಗಿದೆ. ಮುಂದಿನ ಕಂತಿಗಾಗಿ ಕಾಯುತ್ತಿದ್ದೇನೆ

  ReplyDelete
  Replies
  1. Super sir good narration

   Delete
  2. ಪ್ರವಾಸ ಕಥನ ನಮ್ಮನ್ನೂ ಆಕರ್ಷಿಸುವಂತಿದೆ

   Delete
 3. ಸುಂದರ ಲೇಖನ. ಮುಂದಿನ ಲೇಖನದ ಕೊಂಡಿ ನೀಡಿ

  ReplyDelete
  Replies
  1. ಇದು ಸಾಪ್ತಾಹಿಕ ಧಾರಾವಾಹಿಯ ಮೊದಲ ಕಂತು. ಮುಂದಿನ ಕಂತುಗಳು ಮುಂದಿನ ಸೋಮವಾರಗಳಲ್ಲಿ :-)

   Delete
 4. ರಸದೌತಣಕ್ಕೆ ಕೂತು ಎಲೆಯ ತುದಿಯಲ್ಲಿ ಮೊದಲು ಬಡಿಸಿದ (ಸಣ್ಣ ಚಮಚ )ಪ್ರಥಮವನ್ನು ಸವಿದು ಮುಂದಿನ ಸ್ವಾದಿಷ್ಟ ತಿನಿಸು / ಪದಾರ್ಥ ಗಳಿಗೆ ಕಾಯುವುದು ಬಹಳ ಕಷ್ಟಕರ ..ಉತ್ತಮ ಆರಂಭ ಮುಂದಿನ ಕಂತಿಗೆ " ಬಾಯಿ ಚಪ್ಪರಿಸಿ ಕೊಂಡು " ಕಾಯುತ್ತಾ ಇರಬೇಕಾಗಿದೆ

  ReplyDelete
 5. ತುಂಬ ಸುಂದರವಾದ ಕವನ:) ಮುಂದಿನ ಕಂತು ಬೇಗನೆ ಬರಲೆಂದು ಆಶಿಸುತಿದೇನೆ.

  ReplyDelete