26 December 2016

ಗುಡ್ಡೆಮನೆ ಮಡಿಲಿಗೆ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ
ಅಧ್ಯಾಯ೧೯

ನಮ್ಮವರು ಹಾಗೂ ಅವರ ಶೀಲ ಚಿಕ್ಕಮ್ಮನ ಮಗ ರಾಜ ಸದಾ ಜೋಡಿ. ಆರಡಿ ಎತ್ತರದ ರಾಜ ಹಾಗೂ ಗಿಡ್ಡ ದೇಹದ ನಮ್ಮವರನ್ನು ಲಂಬೂಜೀ, ಟಿಂಗೂಜೀ ಎಂದು ಗೆಳೆಯರ ವರ್ತುಲದಲ್ಲಿ ಪರಿಹಾಸ ಮಾಡಲಾಗ್ತಿತ್ತು. ೧೯೩೦ - ೪೦ರ ದಶಕದ ಭಾರತದ ಖ್ಯಾತ ಅತ್ಲೀಟ್ ಆರ್.ಎನ್.ಉಚ್ಚಿಲ್ ಅವರ ಮಗ ರಾಜ. ಈತ ಮೂರು ವರ್ಷದ ಮಗುವಾಗಿದ್ದಾಗ ತಂದೆಯನ್ನು ಕಳಕೊಂಡು, ತಾಯಿಯೊಡನೆ ಊರು ಸೇರಿದ್ದ. ಎಸ್.ಎಸ್.ಎಲ್.ಸಿ. ಮುಗಿಸಿ, ಕಾಲೇಜ್ ಸೇರಲು ಮತ್ತೆ ಮುಂಬೈಗೆ ಬಂದು, ತನ್ನ ತಂದೆಯ ಮನೆಯಾದ ಒಪೆರಾ ಹೌಸ್ ಝವೇರಿ ನಿವಾಸದ ಫ್ಲಾಟ್ನಲ್ಲಿ ಸೋದರ ಮಾವನೊಡನೆ ನೆಲೆನಿಂತ.
ಸ್ಪೋರ್ಟ್ಸಲ್ಲಿ ತಂದೆಯ ಹೆಜ್ಜೆಯಲ್ಲಿ ನಡೆವಂತಿದ್ದ ಮಗನನ್ನು ತಂದೆಯ ಸಹವರ್ತಿಗಳು, ತರಬೇತಿಯ ಅವಕಾಶಕ್ಕಾಗಿ ಮುಂಬೈಗೆ ಕರೆಸಿದ್ದರು. ಬೆಳಗು, ಸಂಜೆಗಳಲ್ಲಿ ಮಲಬಾರ್ ಹಿಲ್, ಮೆರೀನ್ ಡ್ರೈವ್ಗಳಲ್ಲಿ ಓಟದ ಪ್ರಾಕ್ಟೀಸ್ ಮಾಡುತ್ತಿದ್ದ ರಾಜ ಮತ್ತೆ ತಾರ್ದೇವ್ಗೆ, ತನ್ನಣ್ಣನ ಬಳಿಗೆ ಬಂದು, ಹರಟೆ ಹೊಡೆದು ಹಿಂದಿರುಗುತ್ತಿದ್ದ. ಶಮ್ಮಿ ಕಪೂರ್ ಅವನ ಹೀರೋ. ಸದಾ ಅವನ ಹಾಡುಗಳನ್ನು ಅಭಿನಯ ಪೂರ್ವಕ ಹಾಡಿ ನಗಿಸುವವನು.

ನಮ್ಮವರು ಬೆಳಿಗ್ಗೆ ಏಳಕ್ಕೆ ಮನೆ ಬಿಟ್ಟರೆ, ಮತ್ತೆ ರಾತ್ರಿ ಹನ್ನೊಂದಕ್ಕೆ ಹಿಂದಿರುಗುವವರು. ರಜಾದಿನ ಎಂಬುದಿರಲಿಲ್ಲ. ಕೆಲವೊಮ್ಮೆ ರಾಜ ಜೊತೆಗೆ ಬರುವುದಿತ್ತು. "ಲಂಬೂಜೀ ಆಯೇ ಥೇ, ಕ್ಯಾ?" ಎಂದವನು ಒಮ್ಮೊಮ್ಮೆ ಕೇಳುವುದಿತ್ತು. ಇವನೇ ಲಂಬೂಜಿ, ಇದೇನು ಕೇಳುತ್ತಿದ್ದಾನೆ, ಎಂದು ಅನಿಸುತ್ತಿತ್ತು. ಇವರ ಆಫೀಸಿಗೆ ಲಂಬೂಜಿ - ಅಮಿತಾಬ್ ಬಚ್ಚನ್, ಬರುತ್ತಿದ್ದ ವಿಷಯ ಮತ್ತೆ ತಿಳಿಯಿತು. ಹಿರಿಯ ಬಚ್ಚನ್ ಹಾಗೂ ಖೈತನ್ ಕುಟುಂಬ ಸ್ನೇಹಿತರು. ಮುಂಬೈಗೆ ಸಿನೆಮಾಗಳಲ್ಲಿ ಅವಕಾಶ ಅರಸಿ ಬಂದ ಅಮಿತಾಭ್ಗೆ, ಖೈತನ್ ಮನೆಯಲ್ಲೇ ವಾಸ. ಆಗೆಲ್ಲ ಅವನ ಕೈಯಲ್ಲೊಂದು ತಂಬೂರಿ. ಸಿನೆಮಾದಲ್ಲಿ ಅವಕಾಶಕ್ಕಾಗಿ ಕರೆ ಬಂದರೆ, ಸಿಧ್ಧವಾಗಿ ಹೋಗ ಬೇಕೆಂದರೆ, ಕಪಾಟಿನ ಬೀಗದ ಕೈಗಾಗಿ ಅಮಿತಾಭ್, ತಾರ್ದೇವ್ ಇವರ ಕಛೇರಿಗೆ ಬರಬೇಕಿತ್ತು. ಅವನನ್ನು ಕರೆತಂದ ಡ್ರೈವರ್, ಒಳ ಬಂದು ಇವರೊಡನೆ " ತಂಬೂರಿವಾಲಾ ಆಯಾ", ಎಂದರೆ, ಇವರು ಜೊತೆಗೆ ಹೋಗಿ ಕಪಾಟು ತೆರೆದು ಕೊಡುತ್ತಿದ್ದರು. ನಾನು ಮುಂಬೈಗೆ ಬಂದಾಗ ಅಮಿತಾಭ್, ಸಿನೆಮಾಗಳಲ್ಲಿ ನೆಲೆ ನಿಂತು, ಮದುವೆಯೂ ಆಗಿ ತಾರಾಪಟ್ಟಕ್ಕೇರಿದ್ದ. ಅವರ ಮೊದಲ ಮಗು ಮಹಾಶ್ವೇತಾ ಹುಟ್ಟಿದಾಗ, ಮಗುವಿಗೆ ಉಡುಗೊರೆಯಾಗಿ ಕೊಡಲೆಂದು ಮುಂಬಯಿ ಖಾದಿ ಭಂಡಾರದಿಂದ  ತೊಟ್ಟಿಲು ಖರೀದಿಸುವಂತೆ ಬಾಸ್ ಖೈತನ್, ನಮ್ಮವರಿಗೆ ಹೇಳಿದ್ದರು. ಅಂತೆಯೇ ಖಾದಿ ಭಂಡಾರಕ್ಕೆ ಹೋಗುವಾಗ ಇವರು ನನ್ನನ್ನೂ ಜೊತೆಗೆ ಕರೆದೊಯ್ದರು. ಅಂದವಾದ ಚಿತ್ತಾರದ ಮರದ ತೊಟ್ಟಿಲು ಆಯ್ಕೆಯಾಗಿ ಮಹಾಲಕ್ಷ್ಮಿಯ ಸಮುದ್ರ ತಡಿಯ ಖೈತನ್ ಅವರ ಮನೆ ಗಂಗಾವಿಹಾರಕ್ಕೆ ಕಳುಹಲ್ಪಟ್ಟಿತು. ಖಾದಿ ಭಂಡಾರದಲ್ಲಿ ಕಣ್ಣಿಗೆ ಬಿದ್ದ, ದಂತದ ಪುಟ್ಟ ಬೆರಳಿನಷ್ಟೇ ಎತ್ತರದ ಕೃಷ್ಣನ ಮೂರ್ತಿಯನ್ನು ನಾನು ನನ್ನದಾಗಿಸಿಕೊಂಡೆ. ನಾಜೂಕು ಚಿತ್ತಾರದ ಪುಟ್ಟ ಕೃಷ್ಣ ಕಳೆದಿಷ್ಟು ವರ್ಷಗಳಲ್ಲಿ ಹಲವು ಬಾರಿ ಬಿದ್ದು ಭಂಜಿಸಲ್ಪಟ್ಟರೂ ಅವನನ್ನು ತೊರೆಯುವುದು ನನ್ನಿಂದಾಗಿಲ್ಲ. ಅಭಿಷೇಕ್ ಹುಟ್ಟಿದ ಬಳಿಕ ತಮ್ಮ ಪೂರ್ಣಕುಟುಂಬದ ಚಿತ್ರವಿರುವ ಪಿಕ್ಚರ್ ಪೋಸ್ಟ್ ಕಾರ್ಡ್ನಲ್ಲಿಡಿಯರ್ ಮಧುಭಾಯ್, ......." ಎಂದು ಸಂಬೋಧಿಸಿ ಅಮಿತಾಭ್ ನಮ್ಮವರಿಗೆ ಬರೆದ ಪತ್ರದ ಕಾರ್ಡ್ ಒಂದು ಬಹುಕಾಲ ನಮ್ಮ ಶೋಕೇಸ್ನಲ್ಲಿ ಇದ್ದುದು, ಈಗ ಕಳೆದು ಹೋಗಿದೆ.

ಎಪ್ಪತ್ತು, ಎಂಬತ್ತರ ದಶಕದಲ್ಲಿ ಮುಂಬೈಯಲ್ಲಿ ನಮ್ಮ ಸಮುದಾಯದ ಎರಡು  ತಂಡಗಳು ರವಿವಾರಗಳಲ್ಲಿ ಫುಟ್ಬಾಲ್ ಮ್ಯಾಚ್ನಲ್ಲಿ ತೊಡಗಿ ಕೊಳ್ಳುತ್ತಿದ್ದುವು. ಉಚ್ಚಿಲ್ ಯುನೈಟೆಡ್ ಮತ್ತು ಜೈಹಿಂದ್ ತಂಡಗಳಲ್ಲಿನ ನಮ್ಮ ಬಂಧುಗಳ ಆಟ ನೋಡಲು ಹೆಂಗಸರು, ಮಕ್ಕಳೂ ಹೋಗುವುದಿತ್ತು. ನಮ್ಮ ಗುಡ್ಡೆಮನೆ ಮತ್ತು ಹೊಸಮನೆಯ ಹುಡುಗರು, ನಮ್ಮ ತಲೆಬಾಡಿ ಮನೆ ಬಂಧುಗಳು ಹೆಚ್ಚಾಗಿ ಉಚ್ಚಿಲ್ ಯುನೈಟೆಡ್ ತಂಡದಲ್ಲಿದ್ದರು. ಒಲಿಂಪಿಯನ್ ಗೋಲ್ಕೀಪರ್ ಎಸ್.ಕೆ.ಉಚ್ಚಿಲ್ - ನಮ್ಮ ಸಂಜೀವ ಚಿಕ್ಕಪ್ಪ - ನನ್ನಮ್ಮನ ತಂಗಿ, ತಲೆಬಾಡಿ ಮನೆಯ ಶಾರದ ಚಿಕ್ಕಮ್ಮನ ಪತಿ. ಅವರಣ್ಣ ಎನ್.ಕೆ.ಉಚ್ಚಿಲ್, ಖ್ಯಾತ ಅಂತರ್ರಾಷ್ಟ್ರೀಯ ರೆಫ್ರೀ. ಅಂಥವರ ತರಬೇತಿಯಲ್ಲಿ ಆಡುತ್ತಿದ್ದ ಸ್ವಸ್ಥ ಜನಾಂಗ ಅಂದು ನಮ್ಮದಾಗಿತ್ತು. ವೈ.ಎಂ.ಬಿ.. ಸಂಸ್ಥೆ ತುಂಬ ಚಟುವಟಿಕೆಯಿಂದಿದ್ದು 'ಬೆಳ್ಳಿ' ಎಂಬ ಉತ್ತಮ ಪತ್ರಿಕೆಯೊಂದನ್ನು ಹೊರತರುತ್ತಿತ್ತು. ಉತ್ತಮ ನಾಟಕಗಳನ್ನು ರಂಗಕ್ಕೆ ತರುತ್ತಿತ್ತು.

ಮುಂಬೈಗೆ ನಾನು ಬಂದ ಮೊದಲ ವರ್ಷವೇ ಆಡಿದ ನಾಟಕ 'ಕದಡಿದ ನೀರು'. ನಮ್ಮಕ್ಕ ರಾಜೀವಿ ಇದರಲ್ಲಿ ನಾಯಿಕೆಯ ಪಾತ್ರ ವಹಿಸಿದ್ದರು. ನನಗೊಂದು ಹೂವಾಡಗಿತ್ತಿಯ ಪುಟ್ಟ ಪಾತ್ರವಿತ್ತು. ನಮ್ಮ ಪ್ರಾಕ್ಟೀಸ್ ನಡೆವಾಗ ಒಂದೆರಡು ಬಾರಿ ರಾಮಚಂದ್ರ ಉಚ್ಚಿಲರೂ ಅಲ್ಲಿಗೆ ಬಂದಿದ್ದರು. ಅಕ್ಕ ಪ್ರಾಕ್ಟೀಸ್ಗೆ ಬೇಗನೇ ಹೋಗುತ್ತಿದ್ದರು. ನಾನು ಅಪರಾಹ್ನದಲ್ಲಿ ಹೋಗುತ್ತಿದ್ದೆ.

ಒಂದಿನ ಹೀಗೆ ಹೊರಟು ಸ್ಟೇಶನ್ಗೆ ಬಂದು ರೈಲು ಹಳಿ ದಾಟುವಾಗ ನನ್ನ ತಲೆ ಎಲ್ಲಿತ್ತೋ ಅರಿಯೆ; ಪ್ಲಾಟ್ಫಾರ್ಮ್ನಲ್ಲಿ  ರೈಲೇರಲು ನಿಂತಿದ್ದ ಜನರ ಹಾಹಾಕಾರದೊಡನೆ ಅದೇ ಆಗ ಹಳಿಯಾಚೆ ಕಾಲಿರಿಸಿದ ನನ್ನ ಬೆನ್ನ ಹಿಂದೆ ರೈಲು ಹಾದು ಹೋಗಿತ್ತು! ಜನರ ಭರ್ತ್ಸನೆಯ ಕಟುನುಡಿಗಳಿಗೆ ನಾನು ಈಡಾಗಿದ್ದೆ! ಆಗಿನ್ನೂ ಓವರ್ಬ್ರಿಜ್ ಆಗಿರಲಿಲ್ಲ. ಅದು ನನ್ನ ಜೀವನದಲ್ಲಿ ತಪ್ಪಿದ ಎರಡನೆಯ ಕಂಟಕವೆನ್ನಬಹುದು.

ಮತ್ತೊಮ್ಮೆ ವಿಹಾರ್ ಲೇಕ್ ಸುತ್ತಲು ಹೋದಾಗ, ಕಾಲ್ದಾರಿಯ ಪಕ್ಕದ ಇಳಿಜಾರಿಗೆ ಅಕ್ಕನ ತಮ್ಮಂದಿರು ಇಳಿದುದನ್ನು ಕಂಡು, ನಾನೂ ಅವರನ್ನು ಹಿಂಬಾಲಿಸಿದ್ದೆ. ಅಪಾಯದ ಅರಿವಿರಲಿಲ್ಲ; ಇಳಿಜಾರಿನಲ್ಲಿ ನನ್ನನ್ನೇ ನಾನು ತಡೆಯಲಾಗದೆ ಧಡಬಡನೆ ಉರುಳಿದಂತೆ ಓಡೋಡಿ ಕೆಳಗೆ ಲೇಕ್ ದಡದಲ್ಲಿದ್ದ ಮರಕ್ಕೆ ಹೋಗಿ ಅಪ್ಪಳಿಸಿದ್ದೆ. ಗಾಜಿನ ಬಳೆಗಳೆಲ್ಲ ಒಡೆದು ಹೋದರೆ, ಚಿನ್ನದ ಬಳೆಗಳು ನಜ್ಜುಗುಜ್ಜಾಗಿದ್ದುವು. ಮರ ನನ್ನನ್ನು ಲೇಕ್ನಿಂದ ಉಳಿಸಿತ್ತು. ಇದು ಮೂರನೆಯ ಕಂಟಕ. ಮೂರಕ್ಕೆ ಮುಕ್ತಾಯವಾಗಿರಲಿಲ್ಲ.

ಅಕ್ಕನ ತಮ್ಮ ಉಮೇಶ, ಗೆಳೆಯ ರಾಘುವಿನಿಂದ 'ಗಾನ್ ವಿದ್ ವಿಂಡ್' ಪುಸ್ತಕ ಓದಲೆಂದು ಎರವಲು ತಂದಿದ್ದ. ನನ್ನನ್ನು ಸಂಪೂರ್ಣ ಹಿಡಿದಿಟ್ಟ ಪ್ರಿಯ ಕಾದಂಬರಿಯಲ್ಲಿ ನಾನು ರಾತ್ರಿ ಹಗಲೂ ಮುಳುಗಿ ಹೋದೆಒಮ್ಮೆ ನನ್ನ ಓದು, ಯುದ್ಧದಲ್ಲಿ ಹೊತ್ತಿ ಉರಿಯುತ್ತಿದ್ದ  ನಗರವನ್ನು ತೊರೆದು, ಅದೇ ತಾನೇ ಹೆರಿಗೆಯಾದ  ದುರ್ಬಲ ಮೆಲನಿ, ನವಜಾತ ಶಿಶು, ಆಳುಮಗಳು  ಫ್ರಿಸ್ಸಿ, ತನ್ನ ಕಂದ  ವೇಡ್    ಜೊತೆಗೆ ಮುರುಕು ಬಂಡಿಯಲ್ಲಿ  ಕೌಂಟಿಯ ತವರಿಗೆ ಹೊರಟಿದ್ದ  ಸ್ಕಾರ್ಲೆಟ್ ಳನ್ನು, ರೆಟ್  ಬಟ್ಲರ್, ನಡುದಾರಿಯಲ್ಲಿ ತೊರೆದು ಹೋಗುವಲ್ಲಿಗೆ ಬಂದಾಗ ರಾತ್ರಿ ಮೂರು  ಗಂಟೆಯಾಗಿತ್ತು. ಮತ್ತೆ ಹೇಗಾದರೂ ಪುಸ್ತಕ ಮುಚ್ಚಿಟ್ಟು, ಮಲಗಿದ್ದೆ. ಬೆಳಗೆದ್ದು ಗ್ಯಾಸ್ ಒಲೆಯಲ್ಲಿ ಹಾಲು ಕಾಯಿಸಲಿಟ್ಟು, ಬೆನ್ನು ಹಾಕಿ ಒರಗಿ ನಿಂತು ಪುಸ್ತಕ ಕೈಗೆತ್ತಿಕೊಂಡಿದ್ದೆ. ಅದರೊಳಗೆ ಯುದ್ಧದಲ್ಲಿ ಹೊತ್ತಿ ಉರಿವ ಅಟ್ಲಾಂಟಾದಲ್ಲಿ ನಾನು ಮುಳುಗಿ ಹೋದಾಗ, ಹಿಂದಿನಿಂದ ಸೆರಗಿಗೆ ಬೆಂಕಿ ಹತ್ತಿಕೊಂಡಿತ್ತು. ಏತಕ್ಕೋ ಒಳಗೆ ಬಂದ ನಮ್ಮವರು, ಓಡಿ ಬಂದು ನನ್ನನ್ನಿತ್ತ ಎಳೆದು, ಬೆಂಕಿ ನಂದಿಸಿದ್ದರು. ಸೆರಗಿಡೀ ಹೊತ್ತಿ ಹೋಗಿತ್ತು. ಪುಣ್ಯಕ್ಕೆ ಅದು ನೈಲಾನ್ ಸೀರೆಯಾಗಿರಲಿಲ್ಲ. ಮತ್ತೇನು ಹೇಳುವುದು? ನಾಲ್ಕನೆಯ ಕಂಟಕ! ನಮ್ಮವರು ತೀವ್ರ ಸಿಟ್ಟಾಗಿ ಪುಸ್ತಕವನ್ನು ಅಟ್ಟದ ಮೇಲಕ್ಕೆಸೆದಿದ್ದರು. ಮತ್ತೆ ನಾನು ಅತ್ತು ಕರೆದು ಹೇಗಾದರೂ ಪುಸ್ತಕವನ್ನು ಮರಳಿ ಪಡೆದಿದ್ದೆ. ನಂತರದ ವರ್ಷಗಳಲ್ಲಿ, ಗಾನ್ ವಿದ್ ವಿಂಡ್ ಅನುವಾದಕ್ಕೆ ನಾನು ತೊಡಗುವವರೆಗೆ ಎಷ್ಟೋ ಪ್ರತಿಗಳನ್ನು ಕೊಂಡು ಓದಿದ್ದಿದೆ. ಆದರೆ ಉತ್ತಮ ನೋಟ್ಸ್, ಇಂಟ್ರಡಕ್ಷನ್ ಇದ್ದ, ಪ್ಯಾನ್ ಬುಕ್ಸ್ ಪ್ರತಿ ಮಾತ್ರ ಮತ್ತೆಂದೂ ಸಿಗಲಿಲ್ಲ.

೧೯೭೦ರ ಉತ್ತರಾರ್ಧದಲ್ಲಿ ನನ್ನ ದೇಹಸ್ಥಿತಿಯಲ್ಲಿ ಬದಲಾವಣೆಯಾಗಿ ಪ್ರಥಮ ಬಸಿರಿನ ಅನುಭವ ತೆರೆದುಕೊಂಡಿತು. ಬಸಿರಿನ ಆರಂಭದ ಸಂಕಟವೆಲ್ಲ ಕಳೆದು ಹಗುರಾದರೂ, ಸಂತಸವನ್ನು  ಅನುಭವಿಸಲಾಗದಂತೆ ಕಾಲದ ಯಾವುದೋ ದುರ್ಘಟನೆಯೊಂದರ ನೋವು ಹೃದಯದ ಮೇಲೆ ಬರೆ ಎಳೆದಂತೆ ಉಳಿದು ಹೋಯ್ತು. ಸೀಮಂತ ಹಾಗೂ ಹೆರಿಗೆಗಾಗಿ ತವರಿಗೆ ಪಯಣ ನನ್ನ ಮೊದಲ ವಿಮಾನಯಾನವಾಗಿತ್ತು. ಮಂಗಳೂರಿನ ಬಾಡಿಗೆ ಮನೆ ತೊರೆದು ಊರಲ್ಲಿ ಅಜ್ಜಿಯ ಗುಡ್ಡೆಮನೆಯಲ್ಲಿ ನೆಲಸುವ ತಂದೆಯವರ ಯೋಚನೆ ನನಗೆ ತುಂಬ ಪ್ರಿಯವಾಯ್ತು. ಅಂತೆಯೇ ಪ್ರೀತಿಯ ಅಜ್ಜಿಮನೆಗೆ ನಮ್ಮ ವಾಸ ಬದಲಾಯ್ತು. ಶಾರದತ್ತೆ, ಚಿಕ್ಕಮ್ಮ, ಮಕ್ಕಳ ಜೊತೆ ನಾವೂ ಸೇರಿಕೊಂಡೆವು. ಸುತ್ತ ಪ್ರಕೃತಿ ನಗುತ್ತಿತ್ತು. ಪೈರಿನ ಕಂಪು ಹೊತ್ತ ತಂಗಾಳಿ ಬೀಸುತ್ತಿತ್ತು. ತೆಂಗುಗಳು ಚಾಮರ ಬೀಸುತ್ತಿದ್ದುವು. ಪ್ರೀತಿಯ ನಾಯಿಗಳು ಟೈಗರ್, ಸಿಂಗ, ಮುದ್ದಿನ ಬೆಕ್ಕು ಮಂಗಣ್ಣ ಜೊತೆಗಿದ್ದವು. ಸ್ಫಟಿಕ ಸ್ವಚ್ಛ ನೀರಿನ ಉಚ್ಚಿಲ ಹೊಳೆ, ಮೀನಮರಿಗಳೊಡನೆ ಜುಳು ಜುಳು ಹರಿಯುತ್ತಿದ್ದಂತೆ ಹೆರಿಗೆಯ ದಿನ ಸಮೀಪಿಸುತ್ತಿತ್ತು


(ಮುಂದುವರಿಯಲಿದೆ)

2 comments:

  1. ಕಥೆಯು ಸಂಪೂರ್ಣವಾಗುವವರೆಗೆ ಅಭಿಪ್ರಾಯಗಳನ್ನು ಬರೆಯುವುದು ಸರಿಯಲ್ಲ. ಅರ್ಧಂಬರ್ಧ ಓದಿ ನನ್ನ ಅಭಿಪ್ರಾಯವನ್ನೂ ಅರೆಬರೆ ಮಾಡಲಾರೆ.

    ReplyDelete
  2. ಹೇಮಾಪತಿಯವರೇ ಇದು ಯಾವುದೇ ಯೋಜನೆಗಳಿಲ್ಲದೇ ಅಥವಾ ಮಾಡಿಕೊಂಡರೂ ಹಾಗೇ ಹೋಗಬೇಕಿಲ್ಲದ, ಬಂದಂತೆ ಸರಿದೂಗಿಸಿಕೊಂಡು ಹೋದ ಆತ್ಮಕಥೆ. ಹಾಗೇ ಆಯಾ ತುಣುಕಿಗೆ ಓದುಗರೂ ತಮಗೆ ಸರಿ ಕಾಣಿಸಿದ್ದನ್ನು ಬರೆದರೆ ತಪ್ಪೇನಿಲ್ಲ ಎಂದು ನನ್ನ ಭಾವನೆ

    ReplyDelete