28 November 2016

ಇಚ್ಛಾ ಮರಣಿ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ
ನಾಳೆ ಇನ್ನೂ ಕಾದಿದೆ
ಅಧ್ಯಾಯ೧೬

ಮದುವೆ ಮುಗಿದು ಮುಂಬೈಗೆ ಹಿಂದಿರುಗಿದ ಬಳಿಕ, ತಾರ್ದೇವ್ ಅತುಲ್ ಸ್ಪಿನ್ನರ್ಸ್ ವಿಳಾಸದಿಂದ ತಪ್ಪದೆ ಪತ್ರಗಳು ಬರುತ್ತಿದ್ದುವು. ಎಂದೂ ಬದಲಾಗದ ಮುದ್ದಾದ ಮೋಡಿ ಅಕ್ಷರದ ಕೈ ಬರಹ. ನಿಯಮಿತವಾಗಿ ನಾಲ್ಕು ಪುಟಗಳಿರುತ್ತಿದ್ದುವು. ಉತ್ತರಕ್ಕಾಗಿ ಸ್ವವಿಳಾಸದ ಪೋಸ್ಟಲ್ ಕವರ್ ಕೂಡಾ ಇರುತ್ತಿತ್ತು.

ಆಲ್ಡೇಲ್ ಕಣ್ಣಪ್ಪಜ್ಜ, ಮದುವೆಗೆ ಮೊದಲೇ ಹುಡುಗ ಏನು ಮಾಡುತ್ತಿದ್ದಾನೆ, ಎಲ್ಲಿ  ಎಂದೆಲ್ಲ ಕೇಳಿ ಸಮಾಧಾನ ತಾಳಿದ್ದರು. ಮುಂಬೈಯ ರೇಮಂಡ್ಸ್ ಸೋದರ ಸಂಸ್ಥೆಯಾದ ಅತುಲ್ ಸ್ಪಿನ್ನರ್ಸ್, ತಾರ್ದೇವ್ ಕೇಂದ್ರಭಾಗದಲ್ಲಿತ್ತು. ಮೂಲ್ಕಿಯಲ್ಲಿ ಮಾವನ ಮನೆಯಲ್ಲಿ ಬೆಳೆದು, ಮೆಟ್ರಿಕ್ ಮುಗಿಸಿದ ಹದಿನಾಲ್ಕರ ಹುಡುಗ, ಮುಂಬೈಗೆ ತನ್ನಣ್ಣನ ಬಳಿಗೆ ಬಂದು ಸಿಂಧಿಯಾ ಶಿಪ್ಪಿಂಗ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಮೂರ್ನಾಲ್ಕು ತಿಂಗಳ ಕೆಲಸದ ಬಳಿಕ ರೇಮಂಡ್ಸ್ ಸೇರಿ ಅಲ್ಲೂ ಮೂರ್ನಾಲ್ಕು ತಿಂಗಳು ದುಡಿದರು. ರೇಮಂಡ್ಸ್ ಸಿಂಘಾನಿಯಾ ಅವರ ಭಾವಮೈದುನ ಖೈತಾನ್ ಅವರು, ಚುರುಕಾದ ಹುಡುಗನನ್ನು ಕಂಡು, ತಾರ್ದೇವ್ ತಮ್ಮ ಅತುಲ್ ಸ್ಪಿನ್ನರ್ಸ್ ಮಿಲ್ಗೆ ಸುಪರ್ವೈಸರ್ ಆಗಿ ನೇಮಿಸಿ ಕೊಂಡರು. ಸೇರಿದಂದಿನಿಂದ ರವಿವಾರವೆಂದೂ ಇರದೆ, ಒಂದೇ ಒಂದು ದಿನವೂ ರಜೆ ಮಾಡದೆ ದುಡಿಯುವವರು ಬೇರಾರು ತಾನೇ ಸಿಗುವಂತಿತ್ತು?! ಬಾಸ್ ಖೈತಾನ್, ಹುಡುಗನನ್ನು ಮಧು ಎಂದು ಕರೆದರು. ಹೀಗಾಗಿ ಆಫೀಸ್ನಲ್ಲಿ ಅವರು ಮಧು ಭಾಯ್ ಎಂದೇ ಹೆಸರಾದರು. ೧೯೬೪ರಲ್ಲಿ ಮಿಲ್ ಮ್ಯಾನೇಜರ್ ಆಗಿ ನಿಯುಕ್ತಿಯಾಯ್ತು. ಒಮ್ಮೆ ಯಂತ್ರದೆಡೆಯಲ್ಲಿ ಬೆರಳುಗಳು ಸಿಕ್ಕಿ, ಮೂರುದಿನ ಆಸ್ಪತ್ರೆಯಲ್ಲಿ ಇರಬೇಕಾಗಿ ಬಂದಿತ್ತಂತೆ. ಪೆಡ್ಡರ್ ರೋಡಿನ ಪ್ರತಿಷ್ಠಿತ ಡಾ. ಢೋಲಕಿಯಾ ಆಸ್ಪತ್ರೆಯಲ್ಲಿ ಶಸ್ತ್ರಕ್ರಿಯೆ ಹಾಗೂ ಚಿಕಿತ್ಸೆ ನೀಡಲಾಗಿತ್ತಂತೆ. ಇದೀಗ ಮೊದಲ ಬಾರಿಗೆ ಮದುವೆಗಾಗಿ ಪಡೆದ ಏಳು ದಿನಗಳ ರಜೆಯಲ್ಲಿ ಕೊನೆಯ ದಿನ ರದ್ದಾಗಿ ಅಂದೇ ಆಫೀಸ್ ಸೇರಿಕೊಳ್ಳ ಬೇಕಾಯ್ತು. ಇತ್ತ ನನ್ನ ಕಾಲೇಜ್ ದಿನಗಳು ಪುನಃ ಆರಂಭವಾದುವು.
 [ಲೀನಾ ಆಂಟಿ ಎರಿಕ್ ಅಂಕ್ಲ್] 

ಅಣ್ಣ ಮೋಹನ್, ಆಲ್ಡೇಲ್ಗೆ ಅಜ್ಜನ ಬಳಿಗೆ ಸೈಕಲಲ್ಲಿ ಹೋದವನು, ಹಿಂತಿರುಗುವಾಗ ಉದ್ದ, ದಪ್ಪ ಎರಡರಲ್ಲೂ ಅಗಾಧವಾಗಿದ್ದ ಹಲಸಿನ ಹಣ್ಣೊಂದನ್ನು ಸೈಕಲ್ ಮೇಲೆ ಹೇರಿಕೊಂಡು ಬಂದಾಗ ಅವನ ಮುಖವೂ ಹಲಸಿನಂತೆಯೇ ಸಂತಸದಿಂದ ಬಿರಿದಿತ್ತು. ಜೊತೆಗೆ ಒಂದು ಸ್ಟೀಲ್ ಡಬ್ಬದಲ್ಲಿ ಗಾರಿಗೆ ಕೂಡಾ ಬಂದಿತ್ತು.

ಜುಲೈ ಆರು, ತಮ್ಮ ಮುರಲಿಯ ಹುಟ್ಟುಹಬ್ಬದ ದಿನ. ೧೯೬೭ರ ಜುಲೈ ಆರು, ನಮ್ಮ ಕಣ್ಣಪ್ಪಜ್ಜನ ಜನ್ಮದಿನವೆಂದೂ ನಮಗೆ ತಿಳಿದುದು, ಅಂದು ಅಜ್ಜನ ಎಂಭತ್ತನೇ ಜನ್ಮದಿನ ಎಂದು ಅಮ್ಮ ತಿಳಿಸಿದಾಗ. ಅಮ್ಮನ ಮಾತಿನಂತೆ ಅಣ್ಣ ಹೂಗುಚ್ಛವೊಂದನ್ನು ಜನ್ಮದಿನದ ಶುಭಾಶಯದೊಂದಿಗೆ ಅಜ್ಜನಿಗೆ ಇತ್ತಾಗ, ವ್ಯರ್ಥ ಹಣ ಖರ್ಚು ಮಾಡಿದ ಬಗ್ಗೆ ಅಜ್ಜ ಸಿಟ್ಟಾದರಂತೆ. ಮತ್ತೆ ಅದರ ಬೆನ್ನಿಗೇ "ಇರಲಿ; ಇದು ಹೇಗಿದ್ದರೂ ನನ್ನ ಕೊನೆಯ ಜನ್ಮದಿನ; ಮುಂದಿನ ಜನ್ಮದಿನವನ್ನು ನಾನು ಕಾಣಲಿಕ್ಕಿಲ್ಲ", ಎಂದರಂತೆ. ಅದನ್ನು ಕೇಳಿ ಅಣ್ಣ ಮೋಹನನ ಮನಸ್ಸಿಗೆ ನೋವಾದುದನ್ನರಿತು, ಸಾಂತ್ವನ ನುಡಿದ ಅಜ್ಜ, "ನೋಡು ಮೋಹನ್, ಹುಟ್ಟಿದವನು ಸಾಯಲೇಬೇಕು. ನನ್ನ ಆರೋಗ್ಯ ಕ್ಷೀಣಿಸುತ್ತಿದೆ. ನನ್ನ ಅಣ್ಣಂದಿರಾರೂ ಎಂಬತ್ತಕ್ಕಿಂತ ಹೆಚ್ಚು ಬದುಕಲಿಲ್ಲ. ನಿನ್ನ ಅಜ್ಜನಂತೂ ಬಹು ಬೇಗ ಹೋಗಿ ಬಿಟ್ಟ. ಇರಲಿ, ಚಿಂತಿಸ ಬೇಡ; ನಿನ್ನ ಹುಟ್ಟುಹಬ್ಬದ ವರೆಗೆ ಖಂಡಿತ ಬದುಕಿರುತ್ತೇನೆ" ಎಂದರಂತೆ. ಅಜ್ಜನ ಕೊನೆಯ ವರ್ಷಗಳಲ್ಲಿ ಅಣ್ಣ ಅಜ್ಜನ ಊರುಗೋಲಾಗಿದ್ದ.
[ಹಿಲ್ಡಾ ಆಂಟಿ,ಮಕ್ಕಳು,ಎರಿಕ್ ಅಂಕ್ಲ್, ಅಮ್ಮ, ಅಚ್ಚ]
ನಮಗೆ ಉಪಪಠ್ಯವಾಗಿದ್ದ ಡೇವಿಡ್ ಕಾಪರ್ಫೀಲ್ಡ್ ಹಾಗೂ ಒಥೆಲೋ ಕೃತಿಗಳಿಗೆ ನೋಟ್ಸ್ ಮಾಡಿಕೊಳ್ಳಲೆಂದು ಅಜ್ಜನ ಸಹಾಯ ಪಡೆಯಲು ನಾನು ಆಲ್ಡೇಲ್ಗೆ ಹೋದಾಗ ಅಜ್ಜನ ಎರಡೂ ಕಣ್ಣುಗಳಲ್ಲೂ ದೃಷ್ಟಿ ಮಂದವಾಗಿತ್ತು. ಪುಸ್ತಕ ನೋಡದೆಯೇ ಅವರು ನನಗೆ ಪಾಠ ಮಾಡಿದ್ದರು. ಅವರ ಮಕ್ಕಳು ಲೀನಾ ಹಾಗೂ ಫ್ಲೇವಿ ಆಂಟಿಯರು ಅತ್ಯುತ್ತಮ ನೋಟ್ಸ್ ಬರೆದು ನನಗಿತ್ತಿದ್ದರು. ಅಜ್ಜ ಕಣ್ಣಪ್ಪನಿಗೆ ಮೊದಲಿಗೆ ಕೃಷ್ಣಪ್ಪ ಎಂದೇ ನಾಮಧೇಯವಾಗಿತ್ತು. ಕೆಂಪು ಕೆಂಪಗೆ ಹೊಳೆವ ಒಳ್ಳೇ ಗೌರವರ್ಣದ ಮಗು ಕೃಷ್ಣಪ್ಪನ ಬಳಿಕ ಶ್ಯಾಮಲ ವರ್ಣದ ನಮ್ಮಜ್ಜ ಹುಟ್ಟಿದಾಗ, ಇದೀಗ ಕೃಷ್ಣಪ್ಪ, ಎಂದು ಹಿರಿ ಮಗುವಿನ ಹೆಸರನ್ನು ಕಣ್ಣಪ್ಪನೆಂದು ಬದಲಿಸಲಾಯ್ತು. ಕಣ್ಣಪ್ಪಜ್ಜನ ಮಗ ಆರ್ಥರ್ ಅಂಕ್ಲ್ - ಹಿಲ್ಡಾಂಟಿಯ ಮಗು ಗ್ಲಾಡಿ, ಅಜ್ಜನ ಬಣ್ಣವನ್ನೇ ಪಡೆದು ಬಂದಿದ್ದಳು. ತೊಳೆವ ಮುತ್ತಿನ ಮೈ ಬಣ್ಣದ, ಕೆಂಪಗೆ ಹೊಳೆವ ಕದಪುಗಳ,  ಗುಳಿಬೀಳುವ ಕೆನ್ನೆಯ, ನೀಲ ಕಣ್ಗಳ, ಕಂದು ಕೂದಲ ಚೆಲುವಾದ ಮಗು, ಗ್ಲಾಡಿ. ಒಂದು ದಿನ ಅವರೆಲ್ಲ ಮಗುವಿನೊಂದಿಗೆ ನಮ್ಮಲ್ಲಿಗೆ ಬಂದಾಗ, ಮಗುವಿಗೆ ಆಡಲೆಂದು ಕೊಟ್ಟ ನೀಗ್ರೋ ಗೊಂಬೆಯನ್ನು ಹಿಂದಕ್ಕೆ ಕೊಡಲು ಮಗು ಕೇಳಲೇ ಇಲ್ಲ. ನಮ್ಮ ಬೆಸೆಂಟ್ ಶಾಲೆಯ ರಾಧಾಂಟಿ, ಅಮೆರಿಕಾದಿಂದ ತಂಗಿ ಮಂಜುಳನಿಗೆಂದು ತಂದಿತ್ತ ಪುಟ್ಟ ಗೊಂಬೆಗೆ ಮಣಿಗಳನ್ನು ಕೋದ ಬಿಳಿ ಚರ್ಮದ ಅಂಗಿಯಿತ್ತು; ಎರಡು ಜಡೆಯಾಗಿ ಹೆಣೆದ ಕಪ್ಪು ಗುಂಗುರು ಕೂದಲಿತ್ತು. ಕಾಲಲ್ಲಿ ಕಪ್ಪು ಶೂಗಳಿದ್ದುವು. ಕಡುಕಪ್ಪು ಕಣ್ಣೆವೆಗಳ ಪಿಳಿ ಪಿಳಿ ಹೊಳೆವ ಕಂದು ಕಣ್ಗಳು ಗೊಂಬೆಯನ್ನು ಅಡ್ಡ ಮಲಗಿಸಿದಾಗ ಮುಚ್ಚಿ ಕೊಳ್ಳುತ್ತಿದ್ದುವು. ನೆಟ್ಟಗಾಗಿಸಿದಾಗ ತೆರೆಯುತ್ತಿದ್ದುವು. ಗೊಂಬೆಯನ್ನು ಹಿಡಿದುಕೊಂಡು, ನಾವು ಮಕ್ಕಳೆಲ್ಲ, "ಆಫ್ರಿಕದ ಮಕ್ಕಳು ನಾವು ಕಪ್ಪು ಕರ್ರಗೆ, ಹೊಟ್ಟೆ ನಮ್ಮ ಹೊಟ್ಟೆ ನಮ್ಮ ಡೊಳ್ಳು ಡೊಳ್ಳಗೆ ..... " ಎಂಬ ಹಾಡನ್ನು ಹಾಡುತ್ತಿದ್ದೆವು. ನಮ್ಮ ಪಾಲಿಗೆ ಅಮೂಲ್ಯ ಕೊಡುಗೆಯಾಗಿದ್ದ ಗೊಂಬೆ ನಮ್ಮ ಮನೆಯಿಂದ ಹೊರಟು ಹೋದಾಗ ನಮಗೆಲ್ಲರಿಗೂ ತುಂಬ ವ್ಯಥೆಯಾಗಿತ್ತು. ಆದರೆ, ಪುಟ್ಟ ಚೆಲುವಿನ ಖನಿ ಗ್ಲಾಡಿಗೆ ಇಲ್ಲವೆನ್ನುವುದು ಸಾಧ್ಯವೂ ಇರಲಿಲ್ಲ.
[ಅಲೋಶಿಯಸ್ ಚಾಪಲ್]

ಕೊನೆಯ ದಿನಗಳಲ್ಲಿ ಕಣ್ಣ ದೃಷ್ಟಿ ಕಳಕೊಂಡ ಅಜ್ಜ, ತಮ್ಮ ಪತ್ರ ವ್ಯವಹಾರಗಳಿಗಾಗಿ ನಮ್ಮಣ್ಣನನ್ನೇ ನೆಚ್ಚಿ ಕೊಂಡಿದ್ದರು. ಸೌತ್ ಕೆನರಾ ಜಿಲ್ಲಾ ವಿದ್ಯಾಧಿಕಾರಿಯಾಗಿದ್ದ ಅವರು ಶಿಸ್ತಿನ ಮೂರ್ತಿಯಾಗಿದ್ದರು. ಖಾಕಿ ಚಡ್ಡಿ, ಬಿಳಿ ಶರ್ಟ್, ಬಿಳಿ ಸಾಕ್ಸ್, ಬ್ರಿಟಿಶ್ ಹ್ಯಾಟ್ ಅಜ್ಜನ ಉಡುಪಾಗಿತ್ತು. ನಮ್ಮಣ್ಣನ ನಡೆನುಡಿಯನ್ನೂ ಅವರು ತಿದ್ದುತ್ತಿದ್ದರು. ಒಮ್ಮೆ ಅಣ್ಣ ಕನ್ನಡಿಯೆದುರು ತಲೆಬಾಚುತ್ತಾ ಕಾಲಕಳೆಯುವುದನ್ನು ಕಂಡು, "ಹೊರಜಗತ್ತಿಗೆ ನೀನು ಹೇಗೆ ಕಾಣುತ್ತೀ ಎಂಬುದು ಮುಖ್ಯವಲ್ಲ; ಆಂತರಿಕವಾಗಿ ನೀನೆಷ್ಟು ಸುಂದರನಾಗಿದ್ದೀ ಎಂಬುದು ಅತಿಮುಖ್ಯ", ಎಂದು ತಿದ್ದಿದವರು! ವೃತ್ತಿಯಲ್ಲಿದ್ದಾಗ ನೀಡಿದ್ದ ಸಾಲ ವಸೂಲಿಗಾಗಿ ನಮ್ಮಣ್ಣನನ್ನು ಕರಕೊಂಡು ಅವರು ಸಾಲಗಾರರ ಬಳಿಗೆ ಅಡ್ಡಾಡಿದರೂ, ಅದಾವುದೂ ಅವರ ಅಂತ್ಯದವರೆಗೆ ಹಿಂದೆ ಬಂದಿರಲಿಲ್ಲ, ಎಂದು ನಮ್ಮಣ್ಣ ನೆನಪಿಸಿಕೊಂಡಿದ್ದಾನೆ. ತೊಕ್ಕೋಟಿನ ಬಳಿ ತಮ್ಮದಾಗಿದ್ದ ಎರಡೂವರೆ ಎಕ್ರೆ ಜಮೀನಿನ ಚಾಲಗೇಣಿದಾರರಿಗೆ ತಮ್ಮ ಅವಸಾನದ ಬಳಿಕ ತೊಂದರೆಯಾಗಬಾರದೆಂದು ಭೂಮಿಯನ್ನು ಮೂಲಗೇಣಿಗೆ ಪರಿವರ್ತಿಸಿ ಕೊಟ್ಟ ಕರುಣಾಮಯರವರು. ಅಲೋಶಿಯಸ್ ಕಾಲೇಜ್ ಕಟ್ಟಡದ ಸ್ಥಾಪಕರ ಯಾದಿಯಲ್ಲೂ, ಫಾ.ಮುಲ್ಲರ್ಸ್ ಸೇವಾಸ್ಪತ್ರೆಯ ಕಟ್ಟಡವೊಂದರ ಪೋಷಕರ ಯಾದಿಯಲ್ಲೂ ಅಜ್ಜ ಅಲೋಶಿಯಸ್ ಯು.ಕಣ್ಣಪ್ಪ ಅವರ ಹೆಸರು ಕೆತ್ತಲಾಗಿದೆ. ಫಾ.ಮುಲ್ಲರ್ಸ್ ಸಂಸ್ಥೆಯ ಆಡಳಿತ ಸಮಿತಿಯ ಸದಸ್ಯರಾಗಿ, ಮಂಗಳೂರು ಹಾಲು ಮಾರಾಟ ಫೆಡರೇಶನ್ ಸ್ಥಾಪಕಾಧ್ಯಕ್ಷರಾಗಿ, ಎಂ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ, ಕೆಥೋಲಿಕ್ ಕ್ಲಬ್ ಆಡಳಿತಗಾರರಾಗಿ ಹೀಗೆ ಹತ್ತು ಹಲವು ಸಂಸ್ಥೆಗಳಲ್ಲಿ ದುಡಿದವರವರು. ಮಂಗಳೂರಲ್ಲಿ ಕಲಿವ ಉಚ್ಚಿಲದ ಜಾತಿ ಬಾಂಧವರಿಗಾಗಿ ಫಳ್ನೀರ್ ಹೈಲಾಂಡ್ಸ್ನಲ್ಲಿ ಹಾಸ್ಟೆಲ್ ಒಂದನ್ನು ಅವರು ಆರಂಭಿಸಿದ್ದರು. ನಿಷ್ಠಾವಂತ ಕ್ರೈಸ್ತರಾಗಿ ಪೋಪ್ರಿಂದ ಶೆವಲಿಯರ್ ಎಂಬ ಅಭಿದಾನದೊಂದಿಗೆ ನೈಟ್ ಆಫ್ ಸೇಂಟ್ ಗ್ರೆಗರಿ ಎಂಬ ಬಿರುದಿಗೆ ಪ್ರಾಪ್ತರಾಗಿದ್ದರೂ, ಹೊಸದಾಗಿ ಮತಾಂತರಗೊಂಡವರನ್ನೂ, ಅವರ ಕುಟುಂಬದವರನ್ನೂ ಕ್ರೈಸ್ತ ಸಮಾಜ ಭಿನ್ನವಾಗಿ ಕಾಣುವ ಬಗ್ಗೆ ಅವರಲ್ಲಿ ನೋವಿತ್ತು.
[ಅಜ್ಜ ಕಣ್ಣಪ್ಪ] 
೧೯೬೮ರ ಜನವರಿ ಮೂವತ್ತರಂದು ಅಣ್ಣನ ಹುಟ್ಟುಹಬ್ಬದ ದಿನ, ಅಮ್ಮ ಅಣ್ಣನನ್ನು ಕರಕೊಂಡು ಅಜ್ಜನ ಬಳಿಗೆ ಹೋದರು. ಅಜ್ಜ ತಮ್ಮ ಕೊನೆಯ ದಿನಗಳನ್ನು ಎಣಿಸುತ್ತಿದ್ದರು. ಡಿಸೆಂಬರ್ ತಿಂಗಳ ಆರಂಭದಲ್ಲೇ ಒಂದಿನ, ಕಿಟಿಕಿಯ ಹೊರಗೆ ದಿಟ್ಟಿಸುತ್ತಾ, ಮಗಳೊಡನೆ "ನೋಡು, ತಮ್ಮ ಕೃಷ್ಣಪ್ಪ ಅಲ್ಲಿ ನನ್ನನ್ನು ಕರೆಯುತ್ತಿದ್ದಾನೆ", ಎಂದಿದ್ದರು! ಅಮ್ಮನೊಡನೆ ಬಳಿ ಬಂದ ಅಣ್ಣನನ್ನು ಕಂಡು "! ಗಾಂಧಿ ಹ್ಯಾಸ್ ಕಮ್ !" ಎಂದ ಅಜ್ಜನ ಬಳಿ, ಅವರ ಲೇನ್ ಕಾಟೇಜ್ ಅಣ್ಣನ ಮಗ ಡಾ. ರಾಧಂಕ್ಲ್ ಇದ್ದರು. ಮಿದುಳಿನ ರಕ್ತಸ್ರಾವ ಆರಂಭವಾಗಿದೆ ಎಂಬ ಕಹಿಸತ್ಯವನ್ನು ಡಾ. ರಾಧಂಕ್ಲ್ ಅಮ್ಮನಿಗೆ ತಿಳಿಸಿದರು. ಅಂದು ರಾತ್ರಿಯೇ ಅಜ್ಜನ ಪರಿಸ್ಥಿತಿ ವಿಷಮಿಸಿ ಆಸ್ಪತ್ರೆಗೆ ಸೇರಿಸಲ್ಪಟ್ಟಿದ್ದರು. ಮರುದಿನ ರಾತ್ರಿ ಕೋಮಾದಲ್ಲಿದ್ದ ಅಜ್ಜನ ಬಳಿ ಅಮ್ಮ, ಅಣ್ಣನೂ ಇದ್ದರು. ಹನ್ನೊಂದು ಗಂಟೆಗೆ ಮೈ ಅದುರಲಾರಂಭಿಸಿದಾಗ ಮಕ್ಕಳೆಲ್ಲ ಪ್ರಾರ್ಥನೆ ಆರಂಭಿಸಿದರು. ತಕ್ಷಣ ಪ್ರಾರ್ಥನೆಯನ್ನಾಲಿಸುತ್ತಿರುವರೋ ಎಂಬಂತೆ ಮೈ ಅದುರುವಿಕೆ ನಿಂತು, ಪ್ರಾರ್ಥನೆ ನಿಂತೊಡನೆ ಪುನಃ ಅದುರಲಾರಂಭಿಸಿತು. ಹೀಗೆ ಮೂರನೆಯ ಬಾರಿ ಪ್ರಾರ್ಥನೆಯ ಕೊನೆಗೆ ಹೊರಟ ದೀರ್ಘ ಉಸಿರಿನೊಂದಿಗೆ ಅಜ್ಜ ಕ್ರಿಸ್ತೈಕ್ಯರಾದರು. ಅಣ್ಣನಿಗೆ ಮಾತಿತ್ತಂತೆ ಅವನ ಹುಟ್ಟುಹಬ್ಬದ ವರೆಗೂ ಜೀವಿಸಿದ್ದ ಇಚ್ಛಾಮರಣಿ ಅವರು! ಇಂಥ ಶ್ರೇಷ್ಠ ವ್ಯಕ್ತಿತ್ವಗಳು ಈಗೆಲ್ಲಿ?

(ಮುಂದುವರಿಯಲಿದೆ)

No comments:

Post a Comment