21 November 2016

ವಧುವಾಗಿ - ತಲೆಬಾಗಿ .....

ಶ್ಯಾಮಲಾ ಮಾಧವ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ, ಇದರ
ಅಧ್ಯಾಯ - ೧೫

ದೂರದ ಕುಂಬಳೆಯಿಂದ  ರೈಲಿನಲ್ಲಿ ಪಯಣಿಸಿ ಕಾಲೇಜಿಗೆ ಬರುತ್ತಿದ್ದ ಜ಼ೂಹ್ರಾ ನನಗೆ  ತುಂಬ ಅಚ್ಚು ಮೆಚ್ಚು. ಸರಳ ಉಡಿಗೆಯಲ್ಲಿ ದಾವಣಿ ಉಟ್ಟು ಬರುತ್ತಿದ್ದ ಜ಼ೂಹ್ರಾಳ ತಲೆಯ ಮೇಲಿನ ದಾವಣಿಯ ಸೆರಗು, ಕಾಲೇಜ್ ಗೇಟ್ ಹೊಕ್ಕೊಡನೆ ಕೆಳ ಸರಿಯುತ್ತಿತ್ತು. ತುಂಬ ಚೆಲುವಾದ ಪ್ರೌಢ ಕೈ ಬರಹದ ಜ಼ೂಹ್ರಾಳ ಅಕ್ಷರ ಸದಾ ಸ್ಥಿರವಾಗಿರುತ್ತಿತ್ತು. ಕಾಲೇಜ್ ಭಾಷಣ ಸ್ಪರ್ಧೆಯಲ್ಲಿ ಜ಼ೂಹ್ರಾ ಕುರಾನ್ ಬಗ್ಗೆ ಹಾಗೂ ನಾನು ಹಿಂದೂಯಿಸಮ್ ಬಗ್ಗೆ ಮಾತನಾಡಿ ಮೆಚ್ಚುಗೆ ಗಳಿಸಿದ್ದೆವು. ಪಾಲೆತ್ತಾಡಿ ಸರ್, ನನ್ನ ವಿಷಯ ಸಂಗ್ರಹಣೆಯಲ್ಲಿ ನನಗೆ ಮಾರ್ಗದರ್ಶಕರಾಗಿದ್ದರು.


ಪ್ರಥಮ ದರ್ಜೆಯಲ್ಲಿ ಬಿ.ಎಸ್.ಸಿ. ತೇರ್ಗಡೆ ಆಗಿದ್ದ ಜ಼ೂಹ್ರಾ, ಪಾಲ್ಘಾಟ್ನಲ್ಲಿ ಮೆಡಿಕಲ್ ಕಾಲೇಜ್ ಸೇರಿದ್ದಳು. ನಮ್ಮ ಸಾಹಿತಿ ಜಯಂತ್ ಕಾಯ್ಕಿಣಿ ಅವರು ಮುಂಬೈ ಬಿಟ್ಟು ಬೆಂಗಳೂರಿಗೆ ತೆರಳಿ ಭಾವನಾ
ಪತ್ರಿಕೆಯಲ್ಲಿ 'ಕಾಗದದ ದೋಣಿ' ಅಂಕಣಕ್ಕೆ ಬರಹಗಳನ್ನು ಆಹ್ವಾನಿಸಿದಾಗ, ಕುಂಬಳೆ ತೀರದ ನನ್ನ ಕಾಲೇಜ್ ಗೆಳತಿ ಜ಼ೂಹ್ರಾ ನನಗೆ ಥಟ್ಟನೆ ನೆನಪಾಗಿ, ತಕ್ಷಣ ನಾನು ಕಾಗದದ ದೋಣಿಯೊಂದನ್ನು ತೇಲಿ ಬಿಟ್ಟೆ. ಕಾಗದದ ದೋಣಿ ತೇಲಿ ಹಲವು ಹೃದಯಗಳನ್ನು ತಟ್ಟಿ, ಜ಼ೂಹ್ರಾಳ ವರ್ತಮಾನವನ್ನು ನನ್ನೆದುರು ತಂದು ನಿಲಿಸಿತ್ತು. ಕಾಸರಗೋಡಿನ  ತನ್ನ ಸ್ವಂತ ಆಸ್ಪತ್ರೆಯಲ್ಲಿ ಅವಳೀಗ ಖ್ಯಾತ ಗೈನೆಕಾಲಜಿಸ್ಟ್ ಎಂದು ತಿಳಿಯಿತು. ಅಣ್ಣ ಯಶೋಧರ, ಡಾ. ಜ಼ೂಹ್ರಾ ಫೋನ್ ನಂಬರ್ ಕೂಡಾ ಕೊಟ್ಟರು. ಬಹಳ ಸಮಯದ ಬಳಿಕ ನಾವು  ಮಾತನಾಡಿ ಸಂತಸ ಪಟ್ಟೆವು.

ಕಾಲೇಜ್ ಆರಂಭವಾದ ಮೊದಲಲ್ಲಿ ಒಂದಿನ ನಾನು ಗೆಳತಿ ಪ್ರಭಾ, ಕ್ರಿಸ್ತಿನ್ರೊಂದಿಗೆ ಬಯಲಲ್ಲಿ ಅಡ್ಡಾಡುತ್ತಿದ್ದ ಸಮಯ, ನನ್ನ ಚಂಪಕ ವಿಲಾಸ ಕಲ್ಯಾಣಿ ಅತ್ತೆ ಅಲ್ಲಿ ಪ್ರತ್ಯಕ್ಷರಾದರು. ನನ್ನನ್ನು ಬಳಿ ಕರೆದ ಅವರು, ಅವರ ಪಕ್ಕ ಅಡಗಿದಂತಿದ್ದ ಚಿಕ್ಕ ಗಾತ್ರದ, ಕ್ಷೀಣಕಾಯದ, ಶ್ಯಾಮಲ ವರ್ಣದ, ಮೋಟುಜಡೆಯ ಹುಡುಗಿಯೊಬ್ಬಳನ್ನು ತೋರಿ ಪರಿಚಯಿಸುತ್ತಾ, " ಇವಳು ದಯಾ, ಮಂಗಲ್ಪಾಡಿಯಿಂದ ಬಂದಿದ್ದಾಳೆ. ನಮ್ಮಲ್ಲಿರುತ್ತಾಳೆ. ಇವಳನ್ನು ಜೊತೆ ಸೇರಿಸಿಕೋ", ಎಂದು ನುಡಿದು ಹೊರಟು ಹೋದರು. ಕಾಲೇಜ್ ಬೆಡಗಿಯರ ನಡುವೆ ಅಲ್ಪಜೀವಿಯನ್ನು ಕಂಡು ನನಗೆ ಮುಜುಗರವೇ ಆಗಿತ್ತು. ಕಾಲೇಜ್ನಲ್ಲಿ ಇದ್ದೂ ಇಲ್ಲದಂತಿದ್ದ ದಯಾ, ಕ್ರಮೇಣ ನಮ್ಮ ಗೆಳತಿಯಾದಳು. ಬಿ.ಎಸ್.ಸಿ. ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಮುಂದೆ ಮೈಸೂರಿನಲ್ಲಿ ಎಮ್.ಎಸ್.ಸಿ. ಸೇರಿದಾಗ ಗೆಳತಿ ಕ್ರಿಸ್ತಿನ್ ಕೂಡಾ ಅಲ್ಲಿ ಅವಳಿಗೆ ಜೊತೆಯಾದಳು. ದಯಾ, ಮೈಸೂರು ಮೃಗಾಲಯದ ನಮ್ಮ ರೇಂಜರ್ ಮನಮೋಹನ್ ಅಂಕ್ಲ್ ಮನೆಯಲ್ಲಿದ್ದು ವ್ಯಾಸಂಗ ಮಾಡಿದಳು. ಮುಂದೆ ಹಾಸನದಲ್ಲೂ, ಬಳಿಕ ಮುಂಬೈಯಲ್ಲೂ ಕಾಲೇಜ್ಗಳಲ್ಲಿ ಉಪನ್ಯಾಸಕಿಯಾಗಿದ್ದು ಈಗ ನಿವೃತ್ತಳಾಗಿರುವ ದಯಾ, ಈಗಲೂ ನನ್ನ ಗೆಳತಿ ಹಾಗೂ ಗೈಡ್; ನನ್ನ  ತಮ್ಮ ಸತೀಶನ ಪತ್ನಿ; ನನ್ನನ್ನು ಮೆಚ್ಚುವಷ್ಟೇ ನನ್ನ ಅವಗುಣಗಳನ್ನೂ ಎತ್ತಿ ತೋರುವವಳು; ಎಚ್ಚರಿಸುವವಳು; ನನ್ನ ಬರಹಗಳಿಗೆ ಕಿವಿಯಾಗುವವಳು.

ಪಿ.ಎಸ್. ಶ್ಯಾಮಲಾ ಬೆಸೆಂಟ್ ಶಾಲೆಯ ಶಾಲಾ ದಿನಗಳಲ್ಲೂ ನನ್ನ ಸಹಪಾಠಿಯೂ, ಗೆಳತಿಯೂ ಆಗಿದ್ದವಳು. ಗಿಡ್ಡ ಹಾಗೂ ಸಪೂರವಿದ್ದು, ಚುಟ್ಟಿ ಶ್ಯಾಮಲಾ ಎಂದು ಕರೆಯಲ್ಪಡುತ್ತಿದ್ದ   ಚುರುಕಾದ ಶ್ಯಾಮಲನ ಮನೆ, ಪಿಂಟೋ ಲೇನ್ ಆರಂಭದ ಬಲಮೂಲೆಯಲ್ಲಿತ್ತು. ವಿಶಾಲ ಹಿತ್ತಿಲಲ್ಲಿ ಪರೀಕ್ಷಾ ದಿನಗಳಲ್ಲಿ ನಾವಿಬ್ಬರೂ ಮರದ ಕೆಳಗೆ ಓದಿ ಕೊಳ್ಳುತ್ತಿದ್ದೆವು. ಶ್ಯಾಮಲನಿಗೂ ತುಂಬ ಬೇಗನೇ ಪಿ.ಯೂ.ಸಿ. ಮುಗಿದೊಡನೆ ಮದುವೆಯಾಗಿತ್ತು. ಕೆಲ ವರ್ಷಗಳ ಬಳಿಕ ಅವಳ ತಮ್ಮ, ಮೆಡಿಕಲ್ ವಿದ್ಯಾರ್ಥಿಯಾಗಿದ್ದ ಪ್ರಕಾಶ, ಮಧ್ಯಾಹ್ನ ಊಟಕ್ಕೆ ಮನೆಗೆ ಬರುತ್ತಿದ್ದಾಗ, ವುಡ್ಲ್ಯಾಂಡ್ಸ್ ಎದುರು ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿದವನು ಚೇತರಿಸಲು ದೀರ್ಘಕಾಲವೇ ಹಿಡಿದಿತ್ತು. ಅಂದಿನ ದಿನಗಳ ಖ್ಯಾತ ಡಾ. ಕೋದಂಡರಾಮ್ ಅವರು ಸರ್ಜರಿ ಮಾಡಿದ್ದರು. ಅಪಘಾತದಿಂದ ಹಿಗ್ಗಿದ್ದ ಮೆದುಳು ಸ್ವಗಾತ್ರಕ್ಕೆ ತಿರುಗಲೆಂದು ತಲೆಯ ಚಿಪ್ಪನ್ನು ತಿಂಗಳ ಕಾಲ ತೆರೆದೇ ಇಡಲಾಗಿತ್ತು. ಮೆಡಿಕಲ್ ವಿದ್ಯಾರ್ಥಿಗಳಿಗೆ ಸ್ಪೆಸಿಮೆನ್ ಆಗಿದ್ದ ಪ್ರಕಾಶ್, ಕೊನೆಗೂ ಚೇತರಿಸಿ ಕೊಂಡರೂ, ಸ್ಮರಣಶಕ್ತಿ ಹಿಂದಿರುಗಲು ಸಮಯ ಹಿಡಿದಿತ್ತು.
        
ಬಿ.ಎಸ್.ಸಿ. ಪ್ರಥಮ ವರ್ಷದ ಕೊನೆಗೆ, ನನ್ನ ಹದಿನೇಳರ ಹರೆಯದಲ್ಲಿ ಒಂದಿನ, 'ಮಗು ಮಾಮ' ಎಂದು ನಾವು ಅನ್ನುತ್ತಿದ್ದ ನಾರಾಯಣ ಮಾಮ, ನಮ್ಮಲ್ಲಿಗೆ ಬಂದರು. ನಾವು ಮಕ್ಕಳನ್ನು 'ಮಗೂ', ಎಂದೇ ಅವರು ಸಂಬೋಧಿಸುತ್ತಿದ್ದುದರಿಂದ, ನಾವವರನ್ನು ಮಗು ಮಾಮ ಎನ್ನುತ್ತಿದ್ದೆವು.

ಅವರು, ನಾನು ಮಾಡಿದ ಲಿಂಬೆ ಶರಬತ್ ಕುಡಿದು, ಮುಂಬೈಯಲ್ಲಿ ಇದ್ದ ವರನಿಗೆ, "ಹುಡುಗಿ ಪಾಸ್, ಮಾಧವಾ; ಎಂಥಾ ಶರಬತ್ ಅಂತೀ! ರುಚಿ ಇನ್ನೂ ನನ್ನ ಬಾಯಲ್ಲಿದೆ", ಎಂದು ಹೇಳಿದರಂತೆ. ವರ, ಮೂಲ್ಕಿ ಮಾವನ ಸೋದರಳಿಯ. ಅಂದಿನಿಂದ ಅವರ ವಲಯದಲ್ಲಿ ನಮ್ಮ 'ಮಗು ಮಾಮ' ಹೆಸರು ಶರಬತ್ ಮಾಮ ಎಂದಾಯ್ತು! ಮಗು ಮಾಮ ನನ್ನನ್ನು ನೋಡಿ ವರದಿ ಒಪ್ಪಿಸಲು ಬಂದವರೆಂದು ನನಗೆ ತಿಳಿದಿರಲಿಲ್ಲ. ತಂದೆಯವರ ಸಂಪರ್ಕದಲ್ಲಿ ಅವರು ಆಗಾಗ ನಮ್ಮಲ್ಲಿಗೆ ಬರುತ್ತಿದ್ದವರೇ. ಬಹಳ ಹಾವಭಾವದಿಂದ ಕುತೂಹಲಕರವಾಗಿ ಮಾತನಾಡುತ್ತಿದ್ದರು. ಮೂಲ್ಕಿ ಮಾವನ ಸೋದರಳಿಯಂದಿರು - ಅವರ ಚಿಕ್ಕ ಸೋದರಿಯ ಇಬ್ಬರು ಗಂಡು ಮಕ್ಕಳು - ಮುಂಬೈಯಲ್ಲಿದ್ದು, ಅವರ ಮದುವೆಯ ಮಾತುಕತೆ ನಡೆದಿತ್ತುಬಾಲ್ಯದಲ್ಲೇ ತಂದೆಯನ್ನು ಕಳಕೊಂಡ ನಮ್ಮವರು, ಮಾವನ ಜೊತೆಗೆ ಅವರ ಮನೆಯಲ್ಲೇ ಬೆಳೆದರು. ಮೊದಲು ಎರ್ಮಾಳ್ನಲ್ಲೂ, ನಂತರ ಮೂಲ್ಕಿಯಲ್ಲೂ ಫಿಶರೀಸ್ ಶಾಲೆಯ ಮುಖ್ಯೋಪಾಧ್ಯಾಯರಾಗಿ ನೆಲೆ ನಿಂತ ಮಾವ ಹಾಗೂ ಅಲ್ಲೇ ಟೀಚರಾಗಿದ್ದ ಅತ್ತೆ ಸೀತಮ್ಮ, ತಮ್ಮ ಆರು ಮಕ್ಕಳೊಡನೆ ಇವರನ್ನೂ ಸ್ವಂತ ಮಗುವಿನಂತೆ ಬೆಳೆಸಿದರು. ಅಣ್ಣ ದಯಾನಂದ, ತಾಯಿಯ ಜೊತೆ ಉದ್ಯಾವರದಲ್ಲೇ ಉಳಿದರು. ಅಣ್ಣ ತಮ್ಮಂದಿರಿಬ್ಬರೂ ಮೆಟ್ರಿಕ್ ಮುಗಿಸಿ ಮುಂಬೈ ಸೇರಿ ಉದ್ಯೋಗ ನಿರತರಾಗಿದ್ದರು. ಮಾವನ ಮಗಳು ರಾಜೀವಿ ಅಕ್ಕನನ್ನು ಹಿರಿಯವನಿಗೂ, ನನ್ನನ್ನು ಕಿರಿಯವನಿಗೂ ತಂದು ಕೊಳ್ಳುವುದೆಂದು ಮಾತುಕತೆಗಳು ನಡೆದವು.

ನನಗೀಗಲೇ ಮದುವೆ ಬೇಡ ಎಂದು ನಾನಂದಾಗ, ನಿನ್ನನ್ನು ಯಾರು ಕೇಳಿದರೀಗ, ಎಂದು ನಕ್ಕರು, ನಮ್ಮಮ್ಮ. ಹುಡುಗನನ್ನು ನಾನು ನೋಡಿರಲಿಲ್ಲ. ನನ್ನ ತಾಯ್ತಂದೆಯೂ ಕಂಡಿರಲಿಲ್ಲ. ಹುಡುಗ ತುಂಬ ಬೆಳ್ಳಗೆ, ಎಂದಷ್ಟೇ ತಿಳಿದಿತ್ತು. ನಮ್ಮ ತಂದೆಯ ಮದರಾಸ್ ಚಿಕ್ಕಮ್ಮನ ಮಗಳು ರೋಹಿಣಿ ಅತ್ತೆಯ ಗಂಡ ರಾಮಪ್ಪ ಮಾವ, ಹುಡುಗನ ಚಿಕ್ಕಪ್ಪ; ಅವರದೇ ಬಣ್ಣ, ಎಂದರು, ಇನ್ಯಾರೋ.
ಉಚ್ಚಿಲದ ನಮ್ಮಜ್ಜಿ ಮನೆ ಗುಡ್ಡೆಮನೆಯಿಂದ ಮುಸ್ಸಂಜೆಗೆ ದಿಬ್ಬಣ ಹೊರಟು ಉಚ್ಚಿಲ ಶಾಲೆಯಲ್ಲಿ ಉದ್ಯಾವರದಿಂದ ಬಂದ ವರನ ದಿಬ್ಬಣದೊಂದಿಗೆ ಚಪ್ಪರ ಸೇರಿತ್ತು. ವರರಿಬ್ಬರು ಹಾಗೂ ಹಿರಿಯ ವಧುವಾದ ರಾಜೀವಿ ಅಕ್ಕ, ಉದ್ಯಾವರದ ಅವರ ಮನೆಯಿಂದ ದಿಬ್ಬಣದಲ್ಲಿ ನಡೆದು ಬಂದಿದ್ದರು. ತಂದೆಯ ಸೋದರಿ, ಅಡ್ಕ ಕೈಕಂಬದ ಪುತ್ಥಮ್ಮತ್ತೆ, ಸುಮುಹೂರ್ತದಲ್ಲಿ ನನಗೆ ಬಳೆಗಳನ್ನೂ, ಕರಿಮಣಿಯನ್ನೂ ತೊಡಿಸಿದರು. ನನ್ನ ಹೊರೆಗೂದಲಿಗೆ ಸೊಂಪಾದ, ಸಮೃದ್ಧ ಮಂಗಳೂರು ಮಲ್ಲಿಗೆಯ ಜಲ್ಲಿ ತೊಡಿಸಲು ಚೌರಿಯ ಅಗತ್ಯವೇ ಬಿದ್ದಿರಲಿಲ್ಲ. ಜೋರಿನ ಅಜ್ಜಿ ಎಂದೇ ಖ್ಯಾತರಾಗಿದ್ದ ನಮ್ಮ ಸಂಕದಜ್ಜಿ, ಅಲಂಕೃತಳಾಗಿ ಕುಳಿತ ನನ್ನ ಬಳಿ ಬಂದು, ನನ್ನ ತಲೆಯನ್ನು ಬಗ್ಗಿಸಿ, ಎದೆಯ ಮೇಲೆ ಪವಡಿಸಿದ್ದ ತಾಳಿಯನ್ನು ತೋರಿ, "ದೃಷ್ಟಿ ಇದರಲ್ಲೇ ಇರಬೇಕು; ತಲೆ ಎತ್ತಿದೆಯಾ, ಜಾಗ್ರತೆ! " ಎಂದು ಎಚ್ಚರಿಸಿ ಹೋದರು.
ನಾನು ತಲೆಯೆತ್ತಲೇ ಇಲ್ಲ. ಸಪ್ತಪದಿ ನಡೆವಾಗ ಎದುರಿಗೆ ಬೆಳ್ಳಗಿನ ಕಾಲ ಹಿಮ್ಮಡಿ ದೃಷ್ಟಿಗೆ ಬಿದ್ದಿತ್ತು. ಹಾರ ಹಾಕುವಾಗ ಅರೆಕ್ಷಣ ಮುಖ ಕಂಡಿತ್ತು. ಮಂಗಳೂರಿಂದ  ಮದುವೆಗೆ ಬಂದ ಗೆಳತಿಯರನ್ನು ಮಾತನಾಡಿಸುವುದಿರಲಿ, ತಲೆಯೆತ್ತಿ ನಾನು ನೋಡಲೂ ಇಲ್ಲ. ಗೆಳತಿ ಕ್ರಿಸ್ತಿನ್, ಉಡುಗೊರೆ ಕೈಗಿಡುವಾಗ ಸಿಟ್ಟಿನಿಂದ ಜೋರಾಗಿ ನನ್ನ ಕೈ ಚಿವುಟಿ ಮರೆಯದ ಕಾಣಿಕೆಯಿತ್ತಳು!       

ಊಟ, ಕನ್ಯಾದಾನ ಮುಗಿದು ವರನ ಊರಿಗೆ ದಿಬ್ಬಣ ಹೊರಟಾಗ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ ನನ್ನ ಅಳು, ದಾರಿಯುದ್ದಕ್ಕೂ ನಿಲ್ಲಲೇ ಇಲ್ಲ. ನನ್ನ ಅತ್ತೆಮನೆ ಪರಿಸರದ ದೊಡ್ಡ ಗಿರಿಜತ್ತೆ ಎಂಬವರು ಬಹಳ ವಿನೋದಶೀಲೆಯಾಗಿದ್ದು ನನ್ನನ್ನು ನಗಿಸಲು ದಾರಿಗುಂಟ ಏನೇನೋ ಹಾಸ್ಯ ಚಟಾಕಿ ಸಿಡಿಸುತ್ತಿದ್ದರು. ಆದರೆ ಗ್ರಾಮ್ಯ ಪರಿಸರದ ಆಡು ಮಾತುಗಳ ಪರಿಚಯವಿರದ ನಾನು ಮತ್ತೂ ಕಂಗಾಲಾಗುವಂತಾಯ್ತು. ನಡೆದೂ ನಡೆದೂ ಉದ್ಯಾವರ ಹತ್ತನೇ ಮೈಲುಕಲ್ಲಿನ ಮನೆ ತಲುಪುವಾಗ ಸಂಧ್ಯೆಯ ಇಳಿಹೊತ್ತು. ಇಳಿಹೊತ್ತಿನ ಮಬ್ಬಿನಲ್ಲಿ ಅಂದು ಕವಿದ ಮ್ಲಾನತೆ, ಮುಂದೆ ವರ್ಷಗಳವರೆಗೂ ಮನೆಯಲ್ಲಿರುವಾಗಲೆಲ್ಲ ಮುಸ್ಸಂಜೆ ಸಮೀಪಿಸಿದಂತೆ ನನ್ನನ್ನು ಕಾಡುತ್ತಿತ್ತು. ಹಗಲು ಸಂಜೆಗೆ ತಿರುಗಿದಂತೆ ಮನದಲ್ಲಿ ಕತ್ತಲೆ ಕವಿಯುತ್ತಿತ್ತು.
    
ಮದುವೆಗೆಂದು ಏಳು ದಿನಗಳ ರಜೆಯಲ್ಲಿ ಊರಿಗೆ ಬಂದಿದ್ದ ನಮ್ಮವರು, ನಾಲ್ಕನೇ ದಿನ ಹೊರಡುವವರಿದ್ದರು. ಮದುವೆಯ ಮರುದಿನ ತವರಿನಲ್ಲಿ ಸಮ್ಮಾನದೂಟ, ಅದರ ಮರುದಿನ ವರನ ಮನೆಯಲ್ಲಿ ಔತಣದೂಟ ಎಲ್ಲ ನಡೆದರೂ ನಾನವರ ಮುಖವನ್ನು ಸರಿಯಾಗಿ ಕಂಡಿರಲಿಲ್ಲ. ಮೂರನೇ ರಾತ್ರಿ ಒಂದಿಗಿರಬೇಕಾದಾಗ ಮೊದಲಬಾರಿಗೆ ನಮ್ಮಲ್ಲಿ ಮಾತುಕತೆ ನಡೆಯಿತು. ಕಾಲೇಜ್ ಮುಂದುವರಿಸುವಂತೆಯೂ, ಮುಂಬಯಿಯಿಂದ ಪತ್ರಗಳನ್ನು ಬರೆಯುತ್ತಿರುವುದಾಗಿಯೂ ಇವರು ಹೇಳಿದರು. ಮರುಬೆಳಗು, ಸಮುದ್ರ ತೀರದಲ್ಲಿದ್ದ ತಮ್ಮ ಚಿಕ್ಕಮ್ಮನ ಮನೆಗೆ ನನ್ನನ್ನೂ ಜೊತೆಗೊಯ್ಯಲು ಇವರು ತಮ್ಮಮ್ಮನ ಅನುಮತಿ ಕೇಳಿದಾಗ, "ಇಲ್ಲ; ಬೇಡ; ಓಣಿಯಲ್ಲಿ ಮಾಪಿಳ್ಳೆ ಹೆಂಗಸರ ಕಣ್ಣ ದೃಷ್ಟಿ ತಾಗುವುದು", ಎಂದು ಅತ್ತೆ ನಿರಾಕರಿಸಿದರು. ಮರು ದಿನ ಮಂಗಳೂರಿಗೆ ಮನೆಗೆ ಬಂದು, ಅಲ್ಲಿಂದ ಮುಂಬಯಿಗೆ ಪಯಣ. ಹೊಸಮದುಮಕ್ಕಳಾದ ನಮ್ಮ ಅಕ್ಕ, ಭಾವ; ನನ್ನ ದೊಡ್ಡಜ್ಜ, ಧಡೂತಿ ದೇಹದ ಅಜ್ಜಿ, ಮಗು ನಳಿನಿ; ನನ್ನ ಸೋದರತ್ತೆ, ಮಾವ, ಇಬ್ಬರು ಮಕ್ಕಳು, ಮತ್ತು ಮಗು ಮಾಮ! ಇಷ್ಟು ಮಂದಿ ಒಂದು ಅಂಬಾಸಿಡರ್ ಕಾರಿನಲ್ಲಿ ಮುಂಬೈ ರೈಲಿಗಾಗಿ ಕಡೂರಿಗೆ ಪಯಣಿಸಿದವರು! ಬಾಸ್ ಖೈತಾನ್ ಅವರ ಟೆಲಿಗ್ರಾಮ್ ಬಂದುದರಿಂದ ನಮ್ಮವರು ಏರ್ಪೋರ್ಟ್ ದಾರಿ ಹಿಡಿಯ ಬೇಕಾಯ್ತು.

(ಮುಂದುವರಿಯಲಿದೆ)

No comments:

Post a Comment