08 July 2016

ಪುಸ್ತಕ ಮಾರಾಟದಲ್ಲಿ ರಸಪ್ರಸಂಗಗಳು

ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ  ಹದಿನಾರನೇ ಅಧ್ಯಾಯ
[ಪ್ರಸಕ್ತ ಅಧ್ಯಾಯದಲ್ಲಿ ಸುಳ್ಯದಲ್ಲಿ ನಡೆದ ಅವಿಭಜಿತ ದಕಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾನು ಮಂಡಿಸಿದ ಪ್ರಬಂಧ – ಪುಸ್ತಕ ಮಾರಾಟದಲ್ಲಿ ರಸಪ್ರಸಂಗಗಳು ಮತ್ತು ಕೆಲವು ವೈನೋದಿಕ ಚುಟುಕುಗಳನ್ನು ಸಂಕಲಿಸಿದ್ದೇನೆ. ಇದಕ್ಕೆ ಪೂರಕವಾದ ರೇಖಾಚಿತ್ರಗಳನ್ನು ಆ ಕಾಲದಲ್ಲಿ ಅಜ್ಜನ ಪ್ರೇರಣೆಯಲ್ಲಿ ಅಭಯ ಬರೆದಿದ್ದವನ್ನೂ ಸೇರಿಸಿದ್ದೇನೆ.]

ಐನ್ಸ್ಟೈನರಿಗೆ ದಕ್ಕದ ಡ್ರಾಫ್ಟ್!

ನನ್ನ ಪ್ರಕಾಶನದ `ಆಲ್ಬರ್ಟ್ ಐನ್ಸ್ಟೈನ್’ ಎಂಬ ಪುಸ್ತಕದ ವಿಮರ್ಶೆ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಪ್ರಕಟವಾಯಿತು. ಅದನ್ನು ಓದಿದವರೊಬ್ಬರು ತುಮಕೂರಿನಿಂದ ಪುಸ್ತಕದ ಬೆಲೆ, ಅಂಚೆ ವೆಚ್ಚ ಸೇರಿಸಿ ಡ್ರಾಫ್ಟ್ ಕಳಿಸಿ, ಪ್ರತಿಯೊಂದಕ್ಕೆ ಬೇಡಿಕೆ ಮಂಡಿಸಿದರು. ಆದರೆ ನಾನು ಪುಸ್ತಕ ಕಳಿಸದೆ ಡ್ರಾಫ್ಟ್ ಮರಳಿಸಿದೆ! ಜೊತೆಗೆ ನಾನವರಿಗೆ ಬರೆದ ಪತ್ರ ಹೀಗಿತ್ತು:
“ಸ್ವಾಮೀ ಐನ್ಸ್ಟೈನರು ೧೯೫೫ರಲ್ಲೇ ತೀರಿಹೋಗಿದ್ದಾರೆ. ಜೀವಿತಾವಧಿಯಲ್ಲಿ ಅವರೆಂದೂ ಮಂಗಳೂರಿಗೆ ಬಂದದ್ದಿಲ್ಲ. ಮತ್ತೆ ನಮಗವರ ಉತ್ತರಾಧಿಕಾರ ಒದಗಿದ್ದೂ ಇಲ್ಲ. ಹಾಗಾಗಿ ನೀವು ಆಲ್ಬರ್ಟ್ ಐನ್ಸ್ಟೈನರ ಹೆಸರಿನ ಖಾತೆಗೆ ಪಾವತಿಯಾಗುವಂತೆ ಕಳಿಸಿದ ಡ್ರಾಫ್ಟನ್ನು ಮರಳಿಸಿದ್ದೇನೆ. ಅವರ ಹೆಸರಿನ ಪುಸ್ತಕ ಬೇಕಾದಲ್ಲಿ ನನ್ನ ಅಂಗಡಿಯ ಹೆಸರಿನಲ್ಲಿ ಡ್ರಾಫ್ಟ್ ಕಳಿಸಿ.”

ಸರಳ ಹಾಸ್ಯ ಬೆರಳ ಕುಡಿಗಳ ಲಾಸ್ಯದಂತೆ ನಗೆ ತರಿಸಬಹುದು, ಹಾಗೇ ಉಗುರಮೊನಚಿನ ಘಾಸಿಯಿಂದ ಉರಿ ಹತ್ತಿಸಲೂಬಹುದು. ನನ್ನ ಪತ್ರದ ನಿಜ ಪರಿಣಾಮದ ಅರಿವು ನನಗಿಲ್ಲ. ಆದರೂ ಒಂದೇ ವಾರದೊಳಗೆ ಅಂಗಡಿ ಹೆಸರಿನ ಡ್ರಾಫ್ಟ್ ಬಂತು, ಮರು ಟಪಾಲಿಗೆ ನಾನು ಪುಸ್ತಕ ಕಳಿಸಿದೆ. ಆದರೆ ಎರಡು ವಾರ ಕಳೆದು ಪುಸ್ತಕದ ಕಟ್ಟು ನನಗೇ ಮರಳಿತು! ಲಕೋಟೆಯ ಮೇಲೆ ಅಂಚೆಯಣ್ಣನ ಷರಾ ಇತ್ತು “ವಿಳಾಸದಾರರು ಲಭ್ಯರಿಲ್ಲ. ಕಳಿಸಿದವರಿಗೆ ವಾಪಾಸು.”
ಈಗ ನಗುವ ಸರದಿ ಯಾರದ್ದು?

ಹೆಸರಿನಲ್ಲೇನಿದೆ?

ಮೈಸೂರಿನ ಬೀದಿಯಲ್ಲಿ ಹೋಗುತ್ತಿದ್ದಾಗ ಪುಸ್ತಕದ ಅಂಗಡಿ ಒಂದರ `ಹೊಸತು’ ಬೋರ್ಡು ಬಿ.ವಿ. ವೈಕುಂಠರಾಜುರವರು ಬದುಕಿದ್ದಾಗಲೇ `ಅಂತ್ಯ’ (ಅವರು ಬರೆದ ಕಾದಂಬರಿಯ ಹೆಸರು) ಘೋಷಿಸಿದ್ದು ಕಂಡಿದ್ದೆ. ಮತ್ತು ಯಾರೋ ಹೇಳುವುದೂ ಕೇಳಿದ್ದೆ “ಅಯ್ಯೋ ಪಾಪ, ಸಣ್ಣ ಪ್ರಾಯ!”
ಅದು ನನ್ನ ವಿದ್ಯಾರ್ಥಿ ದೆಸೆಯ ಕತೆಯಾಯ್ತು. ನಾನೇ ಪುಸ್ತಕ ವ್ಯಾಪಾರಿಯಾದ ಮೇಲೆ ಕುಂ. ವೀರಭದ್ರಪ್ಪನವರ `ಆಸ್ತಿ’ಯನ್ನು ಅವರಿವರೆಂದು ನೋಡದೆ ಮಾರಿದ್ದೇನೆ.
ಯು. ಆರ್ ಅನಂತಮೂರ್ತಿಯವರ `ಅವಸ್ಥೆ’ಯನ್ನು ಊರೂರಿನಲ್ಲಿ ಪ್ರಚುರಿಸಿದ್ದೇನೆ.
ತೇಜಸ್ವಿಯವರ ಚಿದಂಬರ ರಹಸ್ಯವನ್ನು ನೂರಾರು ಜನರಿಗೆ ರಟ್ಟು ಮಾಡಿದ್ದೇನೆ. ಇಷ್ಟಾದರೂ....
ನನ್ನ ತಮ್ಮನಿಗೆ ಹುಡುಗಿಯನ್ನು ಅನ್ವೇಷಿಸುತ್ತಿದ್ದಾಗ ಅಂಗಡಿಗೆ ಬಂದ ಮಹಿಳಾಮಣಿಯೊಬ್ಬಳು “ನನ್ನ ತಂಗಿಗೊಂದು ಗಂಡು ಕೊಡಿ” ಎಂದು ಕೇಳಿದಾಗ, ಲಂಕೇಶರ ನಾಟಕ ಎಂದು ನೆನಪಿಸಿಕೊಳ್ಳಲು ನಾನು ತಡವರಿಸಿದ್ದೆ.
ಪ್ರಕಾಶಕನೊಬ್ಬನಿಂದ ಬಂದ ಖೋಟಾ ಬಿಲ್ಲಿನ ಬಗ್ಗೆ ನಾನು ತಲೆ ಬಿಸಿಯಲ್ಲಿದ್ದಾಗ ಗಿರಾಕಿಯೊಬ್ಬ “ಖೋಟಾ ನೋಟಿಗೆ ಮುಂಗಡ ತೆಗೆದುಕೊಂಡೂ ತರಿಸಿಡಲಿಲ್ಲ ಯಾಕೆ” ಎಂದು ಗಟ್ಟಿಯಾಗಿ ಹತ್ತೂ ಜನರೆದುರು ವಿಚಾರಿಸಿದಾಗ, ಅಪಾರ್ಥ ಗ್ರಹಿಸಿ ಜಗಳ ಕಾದಿದ್ದೆ. ವಾಸ್ತವದ ಅರಿವಾದ ಮೇಲೆ, ಕೆ. ಗುಂಡಣ್ಣನವರ ನಾಟಕ – ಖೋಟಾ ನೋಟು ಔಟ್ ಆಫ್ ಪ್ರಿಂಟೆಂದು ತಿಳಿಸಿ, ಮುಂಗಡ ಮರಳಿಸಿ ಸುಖಾಂತಗೊಳಿಸಿದ್ದೆ.
ಶಾಲಾವರ್ಷದ ಕೊನೆಯಲ್ಲಿ ಹತ್ತೆಂಟು ಗೈಡು ಕೇಳಿ ಬಂದವರಿಗೆಲ್ಲ “ಇಲ್ಲ, ಇಲ್ಲ” ಹೇಳಿ ಬೇಸತ್ತು ಆರ್.ಕೆ ನಾರಾಯಣರ ಕಾದಂಬರಿ ಗೈಡ್ ಕೇಳಿ ಬಂದವರಿಗೆ ತಾರಮ್ಮಯ್ಯ ಆಡಿಸಿ, ವ್ಯಾಪಾರವನ್ನೇ ಕಳೆದುಕೊಳ್ಳುವವನಿದ್ದೆ.
ಅಂಗಡಿಯ ಪ್ರವೇಶ ದ್ವಾರದ ಪಕ್ಕ ನನ್ನ ಸ್ಥಾನ. ಸಹಾಯಕ ಒಳಗೆ ಕಪಾಟುಗಳ ಬಳಿ ಎಲ್ಲಾದರೂ ಏನಾದರೂ ಮಾಡಿಕೊಂಡಿರುತ್ತಾನೆ. ಗಿರಾಕಿ ನನ್ನಲ್ಲಿ ಕೇಳಿದ್ದನ್ನು ವಿಮರ್ಶಿಸಿ, ಗಟ್ಟಿಯಾಗಿ ಸಹಾಯಕನಿಗೆ ಹೇಳುವುದು ನನಗೆ ಅಭ್ಯಾಸ. ಆದರಿದು ಯಾಂತ್ರಿಕವಾದಾಗ? ಅಂದರೆ “ಇವರಿಗೆ ಲೈಂಗಿಕ ಶಕ್ತಿ ತೋರ್ಸೋ” (- ವೈದ್ಯ ಚಂದ್ರಶೇಖರ್ ಪುಸ್ತಕ), ಅಥವಾ “ಇವರಿಗೆ ಮಾನವಮೂತ್ರದ ಉಪಚಾರ ಕೊಡೋ” (ವಾಮನರಾವ್ ಹೊದಿಕೆ ಪುಸ್ತಕ), ಅಥವಾ “ಥೂ ಹಲ್ಕಾ (ಎಚ್.ಎಲ್ ಕೇಶವಮೂರ್ತಿ ಪುಸ್ತಕ) ಇಲ್ಲೊಂದು” ಇತ್ಯಾದಿಗಳೆಬ್ಬಿಸಿದ ನಗೆಯಲೆ ಸಾಮಾನ್ಯವಲ್ಲ.
ಹಾಗೇ ಮುಜುಗರರಹಿತವಾಗಿ ನಗೆಯುಕ್ಕಿಸುವ ಇನ್ನೂ ಕೆಲವು ಸಂವಾದ ನೋಡಿ: ಕೀಚಲು ಧ್ವನಿಯ ಪೀಚಲು ಹುಡುಗ ಕೇಳಿದ್ದ “ಬೇಕು ನಮಗೊಬ್ಬ ಕೊಲೆಗಾರ”, ಡುಮ್ಮನೊಬ್ಬ ಓಡೋಡಿ ಬಂದು ಕೇಳಿದ್ದ “ಓಡಬೇಡ ಸಾಯಬೇಡ” (ಎರಡೂ ಪತ್ತೇದಾರಿ ಕಾದಂಬರಿಗಳ ಹೆಸರು). ಫೋಟೋಗ್ರಾಫಿ ಕಪಾಟನ್ನೆಲ್ಲ ಮಗುಚಿಹಾಕಿ ಸುಸ್ತಾದ ಗಿರಾಕಿಯೊಬ್ಬ ಕೊನೆಗೆ ಅತ್ತಿತ್ತ ಕಳ್ಳನೋಟ ಬೀರಿ, ಮೆಲುಧ್ವನಿಯಲ್ಲಿ ಕೇಳಿದ್ದ “ಸೆಕ್ಸ್ ಫೋಟೋಸಿಲ್ವಾ?”

ಗಿರಾಕಿ “ನಾನೂ ಅಮೆರಿಕಕ್ಕೆ ಹೋಗಿದ್ದೆ”. ನಾನು “ಹೌದೇ! ಆದರೆ ನನಗೆ ಯಾಕೆ ಹೇಳ್ತೀರಾ” ಅಂದು ಒಮ್ಮೆಗೆ ಕಾಲೆಳೆದರೂ ಕೃಷ್ಣಾನಂದ ಕಾಮತರ ಪುಸ್ತಕ ಕೊಡದೇ ಕಳಿಸಲಿಲ್ಲ.
ಗಿರಾಕಿ “ಕನ್ನಡದಿಂದ ಮಲೆಯಾಳ ಕಲಿಯಿರಿ ಪುಸ್ತಕ ಕೊಡ್ತೀರಾ?” ನಾನು “ಅದು ಮುಗಿದಿರೋದ್ರಿಂದ ಇಂಗ್ಲಿಷಿನಿಂದ ಮಲಯಾಳ ಕೊಡ್ಲಾ?” ಆತ “ಅಯ್ಯೋ ನನಗೆ ಇಂಗ್ಲಿಷ್ ಬರುದಿಲ್ಲಲ್ಲಾ”. ಅದಕ್ಕೆ ನಾನು “ಚಿಂತಿಸಬೇಡಿ, ಕನ್ನಡದಿಂದ ಇಂಗ್ಲಿಷ್ ಕಲಿಯಿರಿ ಪುಸ್ತಕವನ್ನೂ ಕೊಡುವಾ.”
ನವ ತರುಣನೊಬ್ಬ ಅವಸರದಲ್ಲಿ ಬಂದು ಕೇಳಿದ “ಫಸ್ಟ್ ಬೀಯೇ ಕನ್ನಡ ಇದೆಯಾ?” ನಾನು ಗದ್ಯ, ಪದ್ಯ, ಕಾದಂಬರಿಗಳಲ್ಲಿ ಯಾವುದೆಂದು ಸ್ಪಷ್ಟಪಡಿಸಿಕೊಳ್ಳಲು “ಹೆಸರು” ಎಂದೆ. ಆತ ಸ್ವಲ್ಪ ನಾಚಿಕೊಂಡು “ಸುರೇಶ ಬಿ.ಎಂ” – ಅವನ ಹೆಸರನ್ನೇ ಹೇಳಿದ್ದ!
ಎದುರು ಶಾಲೆಯಿಂದ ಮೂರು ಹುಡುಗಿಯರು ಒಂದಾಗಿ ಓಡಿ ಬಂದು ಚೀಟಿ ಮುಂದು ಮಾಡಿ “ಈ ನಾಟಕ ಕೊಡಿ” ಎಂದರು ಒಕ್ಕೊರಲಿನಲ್ಲಿ. ನನ್ನಲ್ಲಿದ್ದ ಅಸಂಖ್ಯ ನಾಟಕ ಬ್ರಹ್ಮರಲ್ಲಿ ಇದನ್ನು ಯಾರು ಬರೆದಿರಬಹುದೂಂತ ಹೊಳೆಯದೆ ಕೇಳಿದೆ “ಬರ್ದವ್ರು ಯಾರು?” ಥಟ್ಟನೆ ಮೂರು ಒಂದಾಗಿ ಒರಲಿದುವು “ನಂ ಮೇಡಮ್ಮೂ”. ನಿಜದಲ್ಲಿ ಅವರು ಹೇಳಿದ್ದು ಚೀಟಿ ಬರೆದವರ ಪತ್ತೆ ಮಾತ್ರ.
ಗಿರಾಕಿ ಚೀಟಿಯಲ್ಲಿ ಒಂದು ಪುಸ್ತಕದ ಹೆಸರು ಬರೆದು ತಂದಿದ್ದನ್ನು ತೋರಿಸಿ “ಇದೆಯೇ?” ಕೇಳಿದ್ದ. ನನಗೆ ತಲೆ ತುರಿಸಿದರೂ ನೆನಪಾಗಲಿಲ್ಲ. ಎರಡನೇ ಕ್ರಮದಂಟೆ “ಬರೆದವರ್ಯಾರು?” ಎಂದೆ. ಆತ ತುಸು ನಾಚಿಕೊಂಡು, ಬಗ್ಗಿ ಚೀಟಿ ನೋಡುತ್ತಾ “ನಾನೇ ಬರೆದದ್ದು, ಯಾಕೆ ತಪ್ಪು ಬರೆದಿದ್ದೇನಾ”?

ಪುಸ್ತಕಾತೀತ ಪ್ರಸಂಗವು
ನನ್ನ ಅಂಗಡಿಯಲ್ಲಿ ಅದೊಂದು ಮಧ್ಯಾಹ್ನ. ಶಟ್ಟರ್ ಅರ್ಧ ಎಳೆದದ್ದರ ಹೊರಗೆ ನಾವು ನಿಂತು ಇನ್ನೇನು ಪೂರ್ತಿ ಎಳೆಯಬೇಕು ಎನ್ನುವಷ್ಟರಲ್ಲಿ ಸೈಕಲ್ಲೇರಿ ಬಂದ ಶರವೇಗದ ಸರದಾರ. ಕ್ರೌಂಚವಧಾ ಪ್ರಸಂಗದ ವಾಲ್ಮೀಕಿ ಪೋಸಿನಲ್ಲಿ ಕೈ ಎತ್ತುತ್ತ, ಬೆವರಧಾರೆ ಒರೆಸಿಕೊಳ್ಳದೆ, ಏದುಸಿರು ತಗ್ಗದೇ “ನಿಲ್ಲಿ ನಿಲ್ಲಿ, ಒಂದೇ ನಿಮಿಷಾ....” ಎಂದ. ನನಗೋ ಸಮಯಪಾಲನೆಯ ಹಮ್ಮು. ಆತನ ಮಾತನ್ನು ಪೂರ್ಣ ಕೇಳಲು ಕಿವಿಯಾಗದೇ “ಇಲ್ಲ, ಎರಡೂವರೆಗೆ ಸರಿಯಾಗಿ ಬಾಗಿಲು ತೆರೆಯುತ್ತೇವೆ, ಬನ್ನಿ. ಮತ್ತೆ ರಾತ್ರಿ ಎಂಟು ಗಂಟೆಯವರೆಗೆ ನಿಮಗೆ ಮುಕ್ತ ಅವಕಾಶವಿದೆ” ಎಂದೆ. ಆತ ಪಟ್ಟು ಬಿಡದೆ “ಪ್ಲೀಸ್ ಪ್ಲೀಸ್, ನಾನು ಉರ್ವಾದಿಂದ, ಅಂದರೆ ಸುಮಾರು ಮೂರು ಕಿಮೀ ದೂರದಿಂದ, ಇಲ್ಲಿಗೇಂತಲೇ ಬಂದೆ. ಆಮೇಲೆ ಸಿಕ್ಕಿ ಉಪಯೋಗವಿಲ್ಲ. ಒಂದೇ ನಿಮಿ....” ನನ್ನ ತಲೆಯೊಳಗೆ ನೆನಪಿನ ರೀಲು ಬಿಚ್ಚಿಕೊಳ್ಳುತ್ತಲೇ ಇತ್ತು. ನಾವು ಹಿಂದೆ ಹೀಗೇ ಒತ್ತಾಯಕ್ಕೆ ಕಟ್ಟುಬಿದ್ದು ಅವಕಾಶ ಕೊಟ್ಟದ್ದಿದೆ.  ಹಾಗೆ ಒಳ ಬಂದವರು ಮತ್ತೆ ಅದು ಇದೂಂತ ಸಮಯ ಕಳೆಯುವುದು, ಬಾಗಿಲು ತೆರೆದುಕೊಂಡಿದೆಯಲ್ಲಾಂತ ಬೇರೆಯವರು ನುಗ್ಗಿ ನನ್ನ ಒಂದೂವರೆ ಗಂಟೆಯ ವಿರಾಮ ತುಂಬ ನಷ್ಟವಾದದ್ದಿದೆ. ಹಾಗಾಗಿ ನಾನು ತಗ್ಗುವ ಸಾಧ್ಯತೆ ಇರಲಿಲ್ಲ. ಬದಲಿಗೆ ಆತನ ಬೇಡಿಕೆ ಏನೆಂದು ತಿಳಿದು, ಸುಲಭದಲ್ಲಿದ್ದರೆ ಕೊಟ್ಟು ಸುಧಾರಿಸುವ, ಇಲ್ಲವಾದರೆ ಸಣ್ಣ ಸುಳ್ಳಾದರೂ ಹೇಳಿ ಆತನನ್ನು ಸದ್ಯಕ್ಕೆ ರವಾನೆ ಮಾಡುವ ಯೋಚನೆಯೊಡನೆ “ಅಂದ ಹಾಗೆ ನಿಮಗೇನು ಬೇಕು?” ಕೇಳಿದೆ. ಈಗ ನಾನು ಮತ್ತೆ ಬಾಗಿಲು ಎತ್ತುವವನಂತೆ ನಿಂತದ್ದು ನೋಡಿ ಹರ್ಷಚಿತ್ತನಾದ ಸೈಕಲ್ವಾಲಾ ತಡಬಡಾಯಿಸದೇ ಕೇಳಿದ “ಪೋರ್ಕು ಸಾರ್. ಅರ್ಧವೇ ಕೇಜಿ ಹಂದಿ ಮಾಂಸ!” ನನಗಿಂತಲೂ ಅರ್ಧ ಗಂಟೆ ಮೊದಲೇ ಮುಚ್ಚಿದ್ದ ಪಕ್ಕದಂಗಡಿ – ಕೋಲ್ಡ್ ಸ್ಟೋರೇಜ್ ಅಂಗಡಿಯತ್ತ ನೋಡುತ್ತ ನಗುವುದನ್ನು ಬಿಟ್ಟು ನಮಗೇನೂ ಉಳಿದಿರಲಿಲ್ಲ.


ಗಿರಾಕಿ ಕೇಳಿದ “ ಅಡಿಕೋಲು ಕೊಡಿ.”
ನಾನು ಉತ್ತರಿಸಿದೆ “ಇಲ್ಲ, ಇಲ್ಲಿ ಪುಸ್ತಕ ಮಾತ್ರ.”
ಗಿರಾಕಿ “ಅಂದ್ರೇ ನೂರು ಪೇಜಿನ ಖಾಲಿ ಪುಸ್ತಕ ಕೊಡಿ.”
ನಾನು “ಇಲ್ಲ, ಇಲ್ಲಿ ಓದೋ ಪುಸ್ತಕ ಮಾತ್ರ”
ಗಿರಾಕಿ “ಹಾಗಾದರೆ ಫೈನಲ್ ಬಿಯೆಸ್ಸಿ ಡೈಜೆಸ್ಟ್.....”
ನಾನು “ಇಲ್ಲಿಲ್ಲ, ಟೆಕ್ಸ್ಟ್, ಗೈಡ್ ನಾವು ಇಡುವುದಿಲ್ಲ. ಬರಿಯ ಜನರಲ್ ಪುಸ್ತಕ ಮಾತ್ರಾ”
ಗಿರಾಕಿ “ಹೋಗಲಿ, ಬಿಜಿಯೆಲ್ ಸ್ವಾಮಿಯವರ ಹಸುರು ಹೊನ್ನು ಕೊಡಿ”
ನಾನು “ಕ್ಷಮಿಸಿ. ಅದು ಔಟ್ ಆಫ್ ಪ್ರಿಂಟು.”
ಗಿರಾಕಿ ರೋಸಿ ಹೋಗಿ “ನೀವ್ಯಾಕೆ ಬಾಗಿಲು ಹಾಕಬಾರದು?”
ನಾನು ಅಷ್ಟೇ ಸಮಾಧಾನದಲ್ಲಿ “ಓಹೋ ಧಾರಾಳವಾಗಿ.... ಆದರೆ ಊಟದ ಸಮಯಕ್ಕೆ ಸರಿಯಾಗಿ.”

ಸರಕಾರೀ ಕಾರ್ಯ ವೈಖರಿ

ಮಂಗಳೂರಿನಲ್ಲಿರುವ ದಕಜಿಪ ತೋಟಗಾರಿಕಾ ಇಲಾಖೆಗೆ ತಾಲೂಕು ನಕ್ಷೆ ತುರ್ತಾಗಿ ಬೇಕಾಯ್ತು. ಗುಮಾಸ್ತ ಹಿಂದೆಲ್ಲೋ ಕಡತದಲ್ಲಿ ಕಂಡ ಸಾಮಾನ್ಯ ನೆನಪಿನ ಬಲದಲ್ಲೇ ಬೇಡಿಕೆ ಪತ್ರವನ್ನು ಹೀಗೊಂದು ವಿಳಾಸಕ್ಕೆ ರವಾನಿಸಿಬಿಟ್ಟ: ಅತ್ರೀ ಪುಸ್ತಕ ಭಂಡಾರ, ಸುಭಾಷ ನಗರ, ಧಾರವಾಡ. ಪತ್ರ ಧಾರವಾಡ ಅಂಚೆ ಕಛೇರಿಯಲ್ಲಿ ಹಾಜರಾದಾಗ ಅಲ್ಲಿನ ಸಾರ್ಟಿಂಗ್ ಪೇದೆ ವಿಳಾಸದಲ್ಲಿ ಸಣ್ಣ ತಿದ್ದುಪಡಿ ಮಾಡಿರಬೇಕು - ಸುಭಾಷದಿಂದ `ನಗರ’ ಕಿತ್ತು ಹಾಕಿ `ರೋಡ’ ಸೇರಿಸಿದ. ಬಟವಾಡೆಗಿಳಿದ ಅಂಚೆಯಣ್ಣ ಆ ವಲಯದ ಕೆಲವು ಪುಸ್ತಕ ಮಳಿಗೆಗಳಲ್ಲಿ ಅತ್ರಿ ವಿಚಾರಿಸಿದಾಗ ನನ್ನ ಪರಿಚಯದವರು ಯಾರೋ “ಅತ್ರೀ ಧಾರವಾಡದ್ದಲ್ಲ, ಮಂಗಳೂರು” ಬರೆಸಿರಬೇಕು. ಅದೃಷ್ಟವಶಾತ್ ಲಕೋಟೆ ಮತ್ತೆ ತಿದ್ದುಪಡಿ ಕೇಳದೇ ನನ್ನಲ್ಲಿಗೆ ಬಂತು. ನಾನು “ಸುಭಾಷವನ್ನೇ ತೆಗೆದು ಬಲ್ಮಠ, ಮತ್ತು ಭಂಡಾರವನ್ನು ಕಿತ್ತು ಕೇಂದ್ರ ಸೇರಿಸಬಹುದಿತ್ತು”  ಎಂದು ಹಾಸ್ಯ ಮಾಡುತ್ತಾ ಲಕೋಟೆ ಒಡೆದೆ, ವಿಷಯ ನೋಡಿ, ಕಸದ ಬುಟ್ಟಿಗೆ ಸೇರಿಸಿದೆ. ಕಾರಣ ಇಷ್ಟೇ - ನಾನು ಬರಿಯ ಪುಸ್ತಕ ವ್ಯಾಪಾರಿ, ನಕ್ಷೆಯೇ ಮೊದಲಾದ ಸಾದಿಲ್ವಾರು ವ್ಯಾಪಾರಿ ಅಲ್ಲ!

ಚಿಂತಾ ಚಿಕಿತ್ಸಾರ್ಥಿ

ಅಂಗಡಿಯಲ್ಲಿ ಅದೊಂದು ಮಧ್ಯಾಹ್ನ. ಊಟ ಮುಗಿಸಿ ಬಂದು ಪೇಪರ್ ಓದುವ ನೆಪದಲ್ಲಿ ಬೆಲ್ಲ ತೂಗುತ್ತಿದ್ದೆ (ಅರ್ಥಾತ್ ತೂಕಡಿಸಿದ್ದೆ). ಸಹಾಯಕ ಅನ್ಯ ಕಾರ್ಯನಿಮಿತ್ತ ಹೊರಗೆ ಹೋಗಿದ್ದ. ಒಬ್ಬ ಗಿರಾಕಿ ಬಂದ. ತನ್ನ ಕೈಚೀಲ ಬಾಗಿಲ ಬಳಿ ಇಟ್ಟು ಒಳಗೆ ಹೋಗಿ ಶೆಲ್ಪುಗಳಲ್ಲಿ ಕರಗಿಹೋದ. ನನ್ನ ಸಣ್ಣ ಜೊಂಪು ಮುಂದುವರಿದಿತ್ತು. ಫಕ್ಕನೆ ತಲೆ ಕೊಡಹಿ, ಕಣ್ಣರಳಿಸಿದೆ – ಗಿರಾಕಿ ಕಾಣಲಿಲ್ಲ. ಹಲವು ಪುಸ್ತಕ ಕಳ್ಳರನ್ನು ಹಿಡಿದ ಅನುಭವದ ಮೇಲೆ ನನಗೆ ಬಂದೆಲ್ಲರ ಮೇಲೂ ಪೋಲಿಸ್ ಕಣ್ಣು. ಸದ್ದಾಗದಂತೆ ಎದ್ದು, ಸರಿದು, ಧುತ್ತೆಂದು ಕಪಾಟಿನ ಮರೆಗಿಣುಕಿದೆ. ಗಿರಾಕಿ ಕುಕ್ಕುರುಗಾಲಿನಲ್ಲಿ ಕೂತಿದ್ದ. ಒಮ್ಮೆಗೆ ನನ್ನನ್ನು ಕಂಡು ಗಾಬರಿಯಲ್ಲಿ ಎದ್ದು ನಿಂತ. ಅವನ ಬುಶ್ ಶರ್ಟಿನ ಮದ್ಯದ ಎರಡು ಗುಂಡಿಗಳು ತೆರೆದಿದ್ದುವು. ಹಾಗೇ ಯಾವುದೋ ಕಪಾಟಿನ ಯಾವುದೋ ಪುಸ್ತಕ ನೋಡುವವನಂತೆ ನಟಿಸುತ್ತ ಎಡಗೈಯಲ್ಲಿ ಗುಂಡಿ ಹಾಕತೊಡಗಿದ. ನಾನು ಆತನ ಕೈ ಹಿಡಿದು ಶರಟೆತ್ತಿಸಿದೆ.ಆತನ ಪ್ಯಾಂಟಿನ ಸೊಂಟಪಟ್ಟಿಯ ಒಳಗೊಂದು ಪುಸ್ತಕ ಅರ್ಧ ಹುದುಗಿದ್ದದ್ದು ಕಾಣಿಸಿತು. ಎಳೆದು ತೆಗೆದೆ. ಕೋಪದಿಂದ ಕುದಿಯುತ್ತ ನಾಲ್ಕು ಏರಿಸಲೋ ಎಂಟು ಆಶೀರ್ವಚಿಸಲೋ ಎಂದು ತಿಳಿಗೊಳ್ಳುತ್ತಿದ್ದೆ. ಆತ “ಸಾರಿ ಸರ್, ಸಾರಿ ಸರ್” ಎಂದು ಗುಣುಗುಣಿಸುತ್ತ ಒಮ್ಮೆಗೇ ನನ್ನನ್ನು ಬದಿಗೆ ನೂಕಿ ಬಾಗಿಲಿನಿಂದಾಚೆಗೆ ಧಾವಿಸಿದ. ಈ ಅನಿರೀಕ್ಷಿತ ಧಾವಂತದಿಂದ ನಾನು ಚೇತರಿಸಿಕೊಳ್ಳುವಾಗ ಆತ ಕೈಮೀರಿದ್ದ. ನಾನು ಅಸಹಾಯಕತೆಯಿಂದ ಬೊಬ್ಬೆ ಹೊಡೆದೆ “ಹಿಡೀರಿ ಹಿಡೀರಿ, ಕಳ್ಳ”

ನಮ್ಮ ಕಟ್ಟಡದಲ್ಲಿ ಒಬ್ಬ ಸಣ್ಣ ಮಟ್ಟದ ಪೆಟ್ಟಿಸ್ಟ್ (ಗೂಂಡಾ) ಭೀಮಕಾಯನಿದ್ದ. ಆತ ಪುಟ್ಟಪಥದಲ್ಲಿ ತನ್ನ ಬೈಕಿಗೊರಗಿ ನಿಂತು ಮಿತ್ರನೊಡನೆ ಹರಟುತ್ತಿದ್ದ. ನನ್ನ ಗಲಾಟೆ ಕೇಳಿದ್ದೇ ಓಡಿ ಬಂದು “ಎಲ್ಲಿ, ಯಾರು...” ದಡಬಡನೆ ಪ್ರಶ್ನೆ ಹಾಕಿ, ಉತ್ತರ ಪಡೆದ. ತನ್ನ ಮಿತ್ರನನ್ನು ಬೈಕಿನ ಹಿಂದೇರಿಸಿಕೊಂಡು ಕಳ್ಳ ಓಡಿದ ಓಣಿಗೇ ಬೈಕ್ ಓಡಿಸಿದ. ಐದೇ ಮಿನಿಟಿನಲ್ಲಿ ಭೀಮಕಾಯನೊಬ್ಬನೇ ಬಂದು, ಅಂಗಿಯ ತೋಳೇರಿಸಿ ಸಜ್ಜಾದ. ಹಿಂದೆಯೇ ಒಂದು ರಿಕ್ಷಾ. ಒಳಗೆ ಮೂವರಿದ್ದರು. ಮೊದಲಿಳಿದವ ಭೀಮಮಿತ್ರ. ಮತ್ತೊಬ್ಬ ಇಳಿಯುತ್ತಿದ್ದಂತೆ ಭೀಮ ಅವನ ಶರ್ಟಿಗೇ ಕೈ ಹಾಕಿದ್ದ. ಮಿತ್ರ ಮಧ್ಯೆ ಪ್ರವೇಶಿಸಿ, “ಇಲ್ಲ ಇಲ್ಲ, ಇವರು ದಾರಿಹೋಕ. ಕಳ್ಳನನ್ನು ಹಿಡಿಯಲು ನನಗೆ ಸಹಾಯ ಮಾಡಿದವರು” ಎಂದು ತಪ್ಪಿಸಿದ. ಭೀಮನಿಗೆ ತನ್ನ ದುಷ್ಟ ಶಿಕ್ಷಣ ಕಾರ್ಯದಲ್ಲಿ ದಾರಿಹೋಕ ಸಿಕ್ಕಿದ್ದೇ ತಪ್ಪು ಅನಿಸಿರಬೇಕು. ಆತನನ್ನು ಅತ್ತ ತಳ್ಳಿ, ನಿಜ ಕಳ್ಳನ ಶರ್ಟಿಗೇ ಕೈ ಹಾಕಿ ಮುಕ್ತಾಫಲಗಳನ್ನು ಉದುರಿಸುತ್ತಾ ಎಳೆದ. ಬಡಕಲು ಶರೀರಿ ಕಳ್ಳ ದೀನನಾಗಿ, ಕೈ ಜೋಡಿಸುತ್ತ sorry sorry ಜಪಮಾಡುತ್ತ ತೂರಾಡಿಹೋದ. ಅಷ್ಟರಲ್ಲಿ ದಾರಿಹೋಕನ ಆತ್ಮಗೌರವ ಜಾಗೃತವಾಯ್ತು. ಕಳ್ಳನನ್ನು ಹಿಡಿದವ ತಾನು. ಅವನನ್ನು ಮೊದಲು ವಿಚಾರಿಸುವ ಹಕ್ಕೂ ತನ್ನದು. ಅಂಥ ತನ್ನನ್ನು ಅಗೌರವಿಸಿ, ಹಕ್ಕನ್ನೂ ಕಸಿದುಕೊಂಡ ಭೀಮನ ಮೇಲೆ ಕೆರಳಿ ಮುನ್ನುಗ್ಗಿದ. ಕಳ್ಳನ ಕೈ ಹಿಡಿದೆಳೆದು ಭೀಮನಿಗೆ ಸೆಡ್ಡು ಹೊಡೆದ. ಈ ಬೆಳವಣಿಗೆ ನನಗೆ ಅನಿರೀಕ್ಷಿತವಾದ್ದರಿಂದ ಶಾಂತಿ ಸ್ಥಾಪನೆಗಾಗಿ ನಾನೂ ಆಖಾಡಕ್ಕಿಳಿಯಬೇಕಾಯ್ತು. ಕಳ್ಳ ನನ್ನ ಕಾಲು ಕಟ್ಟಿಕೊಳ್ಳಲು ಬಂದ. ಅವನನ್ನು ದೂರ ನೂಕಿ ನಾನು ಭೀಮ ಹಾಗೂ ದಾರಿಹೋಕರ ನಡುವೆ ಸಂಧಾನಕಾರನಾದೆ. ದಾರಿಹೋಕನಿಗೆ ಕಳ್ಳತನದ ವಿವರವಾಗಲೀ ನನ್ನ ಪರಿಚಯವಾಗಲೀ ಇರಲಿಲ್ಲ. ಸಹಜವಾಗಿ ಆತ ಭೀಮನನ್ನಷ್ಟೇ ವಿಚಾರಿಸಿಕೊಳ್ಳಲು ಆಚೀಚೆ ಇದ್ದ ತನ್ನ ಮಿತ್ರರ ಬಲ ಕಟ್ಟತೊಡಗಿದ. ಭೀಮನಿಗೋ ಸ್ವಂತ ನೆಲ, ಅವನ ತಂಡ ಸಣ್ಣದಾಗುವುದು ಸಾಧ್ಯವಿರಲಿಲ್ಲ. ಆದರೆ ನನ್ನ ಅದೃಷ್ಟಕ್ಕೆ ಆ ಎರಡೂ ಬಳಗ ವ್ಯಾಜ್ಯ ಅರ್ಥಮಾಡಿಕೊಂಡು ನಾಯಕಮಣಿಗಳನ್ನು ಹಿಂದೆಳೆದು ಸಮಾಧಾನಿಸತೊಡಗಿದರು. ಉಸ್ಸಪ್ಪಾಂತ ನಾನು ಹಿಂದೆ ಸರಿದು, ಮುಖ್ಯ ವಿಷಯ – ಕಳ್ಳ, ಎಲ್ಲೆಂದು ಅತ್ತಿತ್ತ ನೋಡಿದೆ. ಅವನು ಮತ್ತೆ ಓಡಿಹೋಗಿದ್ದ!

ಸಂದಣಿಯಲ್ಲಿನ ಹೊಸ ಉತ್ಸಾಹಿಗಳು ಮತ್ತೆ ಕಳ್ಳನ ಬೆನ್ನು ಹಿಡಿಯುವವರಿದ್ದರು. ಅಷ್ಟರಲ್ಲಿ ಮೂರು ಮಳಿಗೆಯಾಚಿನ ನನ್ನೊಬ್ಬ ಕಿರಿಯ ಗೆಳೆಯ, ನನ್ನನ್ನು ಪ್ರತ್ಯೇಕ ಕರೆದು ಹೇಳಿದ “ಕಳ್ಳ ನನ್ನ ಸಹಪಾಠಿ. ಆತ ಬಡವ, ಮಾನಸಿಕ ರೋಗಿ, ಈ ಗೂಂಡಾಗಳ ವಿಚಾರಣೆಯ ಭಾರ ತಡೆದುಕೊಳ್ಳಲಾರ.” ಇಷ್ಟರಲ್ಲಿ ಇದು ನನ್ನ ನಿಯಂತ್ರಣದಿಂದ ತಪ್ಪಿ ಹೋಗಿದೆ ಎನ್ನುವ ಭಾವ ನನಗೂ ಬಂದಿತ್ತು. ಆ ದಾರಿಹೋಕನಿಲ್ಲದಿರುತ್ತಿದ್ದರೆ ಭೀಮನ ಅತಿ-ನ್ಯಾಯದಲ್ಲಿ ಕನಿಷ್ಠ ಒಂದು ಹಲ್ಲಿಗಾದರೂ ಎರವಾಗಬಹುದಾಗಿದ್ದ ಮಾನಸಿಕ ರೋಗಿಯೋರ್ವನ ಚಿತ್ರ ನನ್ನ ಮನದಲ್ಲಿ ಬಂದದ್ದೇ ಭಯವಾಯ್ತು. ಎಲ್ಲರ ಕಳ್ಳನನ್ನು ಹುಡುಕುವ ಯೋಚನೆ ಬಿಡಿಸಿ, ಅಂಗಡಿಗೆ ಮರಳಿದೆ. ಬಾಗಿಲ ಪಕ್ಕದಲ್ಲೇ ಕಳ್ಳ ಬಿಟ್ಟ ಕೈಚೀಲ ಅನಾಥವಾಗಿ ಬಿದ್ದಿತ್ತು. ಎತ್ತಿ ನೋಡಿದೆ. ಒಳಗೊಂದು ಸ್ಟೀಲಿನ ಡಬ್ಬಿ, ತೆರೆದರೆ ನಾಲ್ಕು ಸಿಹಿ ತಿಂಡಿ. ಹಾಗೇ ಮುಚ್ಚಿ, ಒಳಗಿಟ್ಟೆ. ಕಪಾಟಿನ ಬಳಿ ಕಳ್ಳ ಎಸೆದು ಓಡಿದ್ದ ಪುಸ್ತಕ ಬಿದ್ದಿತ್ತು. ಅದನ್ನು ಎತ್ತಿ, ದೂಳೊರಸಿ ಹೆಸರು ನೋಡುತ್ತೇನೆ – how to stop worrying and start living!

ಅದಲಿ ಬದಲಿ
ಎದುರು ಶಾಲೆಯ ಟೀಚರಮ್ಮನಿಗೆ ವಾರ್ಷಿಕೋತ್ಸವದ ಗಡಿಬಿಡಿ. ಬಹುಮಾನವಾಗಿ ಕೊಡಲು ಪುಸ್ತಕಗಳ ಪಟ್ಟಿ ಮಾಡಿಟ್ಟದ್ದನ್ನು ಕೊಟ್ಟು “ಬಿಲ್ಲು ಮಾಡಿ ಕಟ್ಟಿಡಿ. ಗಂಟೆ ಬಿಟ್ಟು ಬರ್ತೇನೆ” ಎಂದವರೇ ಬೇರೆಲ್ಲಿಗೋ ಧಾವಿಸಿದರು. ನಾನು ಚೀಟಿಯನ್ನು ಹಾಗೇ ಸಹಾಯಕನಿಗೆ ದಾಟಿಸಿ, ನನ್ನ ಇನ್ಯಾವುದೋ ಕೆಲಸದಲ್ಲಿ ಮುಂದುವರಿದೆ. ಅರ್ಧ ಗಂಟೆಯಲ್ಲೇ ಟೀಚರಮ್ಮ ಮತ್ತೆ ಓಡಿ ಬಂದರು. ನಾನು ಅವಸರ ನಟಿಸಿ, ”ಶಾಂತ್ರಾಮಾ ಎಲ್ಲೋ ಇವರ ಪುಸ್ತಕ” ಅಂದೆ. ಅವನು ಎಂದೋ ಚೀಟಿ ನೋಡಿ ಮುಗಿಸಿದ್ದಕ್ಕೆ, ಕಿರು ನಗೆ ಬೀರುತ್ತ ಸೋತ ಧ್ವನಿಯಲ್ಲಿ “ಇದರಲ್ಲಿ ಯಾವುದೂ ನಮ್ಮಲ್ಲಿಲ್ಲ” ಎಂದುಬಿಟ್ಟ. ಅವನ್ಯಾಕೆ ನಗಬೇಕು, ಒಂದಾದರೂ ಪುಸ್ತಕ ನಮ್ಮಲ್ಲಿಲ್ಲದಾಗುತ್ತದೆಯೇ ಎಂದು ಆಶ್ಚರ್ಯಪಡುತ್ತ ನಾನು ಚೀಟಿ ಹಿಡಿದು ಓದತೊಡಗಿದೆ “ಉಷಾ, ಶಾಂತಾ, ಮೆಹರುನ್ನೀಸಾ, ಕ್ರಿಸ್ತೀನಾ....” ನಾನು ಪೂರ್ಣಗೊಳಿಸುವ ಮೊದಲು ಟೀಚರಮ್ಮ ಪಟ್ಟಿ ಕಿತ್ತುಕೊಂಡರು. ನಾಚಿಕೆಯ ಧ್ವನಿಯಲ್ಲಿ “ಸಾರಿ ಸಾರಿ, ಅದು ನಾಟಕದಲ್ಲಿರುವ ಪಾತ್ರಧಾರಿಗಳ ಹೆಸರಿನ ಪಟ್ಟಿ, ಅಂದ್ರೆ ನಾನು ಬುಕ್ ಲಿಸ್ಟ್ ಡ್ರಾಮಟಿಕ್ಸ್ ಟೀಚರ್ ಕೈಗೆ ಕೊಟ್ಟಿರಬೇಕು” ಎಂದವರೇ ಇಮ್ಮಡಿಸಿದ ವೇಗದಲ್ಲಿ ದುಡುದುಡಾಯಿಸಿದರು.

ಪ್ರೈವೇಟ್ ಟಾಕ್!
ಫ್ಯಾಶನ್ ಸಾಗರದಿಂದ ಸಿಡಿದ ಮರಿಮೀನಿನಂತೆ ಅಂಗಡಿಯೊಳ ಸುಳಿದಾಡಿದಳೊಬ್ಬ ತರುಣಿ. ಹುಸಿನಗೆಯ ಮಿಂಚಿನಲ್ಲಿ, ರಂಗು ಸೆಂಟುಗಳ ಅಲೆಯಲ್ಲಿ ಮಾತಿನ ಮುತ್ತು ಉದುರಿಸಿದಳು “ಇಲ್ಲಿ ಸ್ವಲ್ಪ ಜಾಗವಿದೆಯೇ ಪ್ರೈವೇಟ್ ಟಾಕಿಗೆ?”  ಅನ್ಯ ಗಿರಾಕಿ ಇಲ್ಲದ ವೇಳೆ, ಸಹಾಯಕನನ್ನು ದೂರವಿರಲು ಹೇಳಿ, ಇದ್ದಲ್ಲೇ ಗುಪ್ತ ಸಮಾಲೋಚನೆಗೆ ಮಾಡಿಕೊಟ್ಟೆ ಜಾಗೆ. ಮತ್ತೆ ಆಕೆಯ ದಂತಕಾಂತಿಯ ಸೆಳಕು, ರಾಗರಂಗಿನ ಛಳಕಿನೊಡನೆ ಇನ್ನೇನು ತುಳುಕುತ್ತೋ ಅವಳ ಭವ್ಯ ಭಾವದ ಝಲಕ್ಕು ಎಂದು ಕಿವಿ ನಿಮಿರಿಸಿದ್ದೆ. “ನಿಮ್ಮಲ್ಲುಂಟೇ? ಸೊಸಾಯಿಟಿಯಲ್ಲಿ ಮೂವ್ ಮಾಡಲು ಇಂಗ್ಲಿಷ್ ಕಲಿಸುವ ಬುಕ್ ನಿಮ್ಮಲ್ಲುಂಟೇ?”
ಇನ್ನೊಮ್ಮೆ ಎರಡು ಪಡ್ಡೆ ಹುಡುಗರು ಅಂಗಡಿ ತುಂಬ ಸಂಶಯಾಸ್ಪದವಾಗಿ ಅಡ್ಡಾಡುತ್ತ ಕಪಾಟುಗಳಿಂದ ಯಾವ್ಯಾವುದೋ ಪುಸ್ತಕ ಎಳೆದು, ಬುರ್ರೆಂದು ಪುಟ ಹಾರಿಸಿ, ಮರಳಿ ತುರುಕುತ್ತಿದ್ದರು. ವಿಚಾರಿಸಿದಾಗ ಹಾರಿಕೆ ಉತ್ತರ ಕೊಟ್ಟರು. ಪುಸ್ತಕ ಕಳ್ಳರನ್ನು ಹಿಡಿದ ಸಾಕಷ್ಟು ಅನುಭವದ ಶಾಂತಾರಾಮ ಪತ್ತೇದಾರನ ಶೈಲಿಯಲ್ಲಿ ಇನ್ನೇನು ಹಿಡಿಯುತ್ತಾನೆ, ಉಚ್ಛಾಟನಾ ಮಂತ್ರ ಶುರು ಮಾಡಬೇಕು ಎಂದೆಲ್ಲ ನಾನು ಯೋಚಿಸುತ್ತಿರುವಾಗ, ಒಮ್ಮೆಗೆ ಅಂಗಡಿಯಲ್ಲಿದ್ದ ಜನರೆಲ್ಲ ಖಾಲಿಯಾದರು. ಹುಡುಗರು ನನ್ನಲ್ಲಿಗೆ ಧಾವಿಸಿ, ಭಾರೀ ಧೈರ್ಯ ತಂದುಕೊಂಡು, ಮೆಲು ಧ್ವನಿಯಲ್ಲಿ ಕೇಳಿದರು “ಸೆಕ್ಸ್ ಬುಕ್ಸ್ ಎಲ್ಲಿದೆ?”ಅತಿಪರಿಚಿತರು
ಒಬ್ಬ ಪ್ರೌಢೆ ನರ್ಸರಿ ರೈಮ್ಸ್ ಕೇಳಿ ಬಂದರು. ತೋರಿಸಿದ್ದೆಲ್ಲಕ್ಕೂ “ಇದಿದೆ, ಇವಲ್ಲ, ಇದೊಲ್ಲೆ, ಇದಾಗದು, ಬೇರೆ ಒಳ್ಳೆದಿಲ್ಲವಾ” ಎಂದು ಕೇವಲ ಪ್ರತಿಷ್ಠೆ ಮೆರೆಯಲು ತೊಡಗಿದರು. ಆಕೆಯ ಆದರ್ಶದ ಪುಸ್ತಕ ಕೊಡಲಾಗದ್ದಕ್ಕೆ ಚಿಂತೆ ನನ್ನಲ್ಲೂ ಪಡೆಯಲಾಗದ್ದಕ್ಕೆ ಅತೃಪ್ತಿ ಆಕೆಯಲ್ಲೂ ಹೆಚ್ಚುತ್ತ ಹೋಯ್ತು. ಒಂದು ಹಂತದಲ್ಲಿ ನಾನು ಕೈಚೆಲ್ಲಿ ಸುಮ್ಮನಾದೆ. ಆಕೆ ತಾನೇ ಮತ್ತಷ್ಟು ಪುಸ್ತಕ ಅಟ್ಟಿಗಳನ್ನು ಮಗುಚಿ, ಯಾವುದೋ ಎರಡನ್ನು ವಿಜಯದ ನಗೆಯೊಡನೆ ಹಿಡಿದು ತಂದರು “ಇದೇ ನೋಡಿ ನನಗೆ ಬೇಕಾದ್ದು. ನಾನು ಎಯ್ತ್ ಸ್ಟ್ಯಾಂಡರ್ಡಿನಲ್ಲಿದ್ದಾಗ ನನ್ನ ತಂಗಿಗೆ ಇದನ್ನೇ ಇಲ್ಲಿಂದ ಒಯ್ದಿದ್ದೆ” ಎಂದು ರಾಜೀ ಮಾಡಿಕೊಳ್ಳುವ ಧ್ವನಿ ತೆಗೆದರು. ನಾನು ಹೂಂ ಹಾಂ ಹೇಳದೆ ಪುಸ್ತಕವನ್ನು ಬಿಲ್ಲಿಸಿ, ಕವರಿಸಿ ಹಣ ಪಡೆದೆ. ಆಕೆ ಪ್ರದರ್ಶನ ಚಾಳಿಯ ಎರಡನೇ ಸುತ್ತಿಗಿಳಿದಳು. ಆಕೆ ತನ್ನ ಮತ್ತು ಈ ಅಂಗಡಿಯ ಸಂಬಂಧವನ್ನು ಶ್ರುತಪಡಿಸುವ ಹಠ ತೊಟ್ಟಂತಿತ್ತು. ಮಾತು ಮುಂದುವರಿಸಿ “ನಾನು ಚಿಕ್ಕವಳಿದ್ದಾಗ ಇಲ್ಲೊಬ್ಬರು ಪ್ರಾಯದವರಿದ್ದರು, ಅವರಿಗಾದರೆ ಸೆಲೆಕ್ಷನ್ ಗೊತ್ತಾಗ್ತಿತ್ತು” ಎನ್ನಬೇಕೇ! ನಾನು ಶಿಷ್ಟಾಚಾರದ ಮಾತುಗಳನ್ನು ಬಿಟ್ಟು ಅಂಗಡಿ ಸುರುಮಾಡಿದವನು ನಾನೇ. ಇಲ್ಲಿ ನನಗಿಂತ ಪ್ರಾಯದವರು ಯಾರು ಇರಲಿಲ್ಲ” ಎಂದೆ. ಆಕೆ ಭಂಡತನದಲ್ಲಿ ಗಟ್ಟಿಯಾಗಿ ಮುಂದುವರಿಸಿದಳು “ನಾನು ಎಯ್ತ್, ಅಂದರೆ ಈಗ ಮ್ಯಾರೇಜ್ ಆಗಿ ಟ್ವೆಲ್ವ್, ಅದಕ್ಕೂ ಮೊದಲು ಸೆವೆನ್....” ಎಂದೆಲ್ಲಾ ಓಪನ್ ಥಾಟಿಗಿಳಿದಾಗ ನಾನು ಕಟ್ ಮಾಡಿ “ಈ ಅಂಗಡಿ ಏಜ್ ಫಿಫ್ಟೀನ್ ಯಿಯರ್ಸ್ ಮಾತ್ರ. ಮತ್ತೆ ನನಗೆ ಪ್ರಾಯ ಹೆಚ್ಚಾಗುವುದೇ ವಿನಾ ಕಡಿಮೆಯಲ್ಲ” ಎಂದು ಆಕೆಯ ಅತಿಪರಿಚಯವನ್ನು ಫಿನ್ನಿಶ್ ಮಾಡಿದ್ದೆ!

ಭವರೋಗವೈದ್ಯ
ಮಲಯಾಳೀ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಅವಸರವಸರವಾಗಿ ಬಂದು ಇಂಗ್ಲಿಷಿನಲ್ಲೇ ಕೇಳಿದ “ಯಾವುದಾದರೂ ಸ್ಥಳೀಯ ಪಂಚಾಂಗ ಉಂಟೇ?” ವೈಜಯಂತೀ ಪಂಚಾಂಗ ಇತ್ತು, ಕೊಟ್ಟೆ. ಕುತೂಹಲ ತಡೆಯದೆ ಕೇಳಿದೆ “ನಿಮಗೆ ಕನ್ನಡ ಬರೋದಿಲ್ವಲ್ಲಾ, ಇದನ್ನೇನು ಮಾಡ್ತೀರಿ?” ಆತ ಗಂಭೀರವಾಗಿ “ನಾನು ವೈದ್ಯಕೀಯ ಮಹಾಪ್ರಬಂಧ ಹಾಜರು ಪಡಿಸುತ್ತಿದ್ದೇನೆ. ಅದಕ್ಕೆ ನನ್ನ ಕನ್ನಡ ಬರುವ ಪ್ರೊಫೆಸರ್ ಇದರಿಂದ ಒಳ್ಳೇ ಮುಹೂರ್ತ ನೋಡಿ ಹೇಳಲಿದ್ದಾರೆ.”ಕೊನೆಯದಾಗಿ - ವ್ಯಾಪಾರ -  ಒಂದು ಮಿನಿಕತೆ!
ವಠಾರದ ಹೊಸ ಅಂಗಡಿಗೆ ಸುಗುಣೆ – ಕಿರುಬಾಲೆ, ಚಿಕ್ಕಪ್ಪನ ಕೈ ಹಿಡಿದು ತಪ್ಪಡಿಗಳನ್ನು ಇಡುತ್ತ ಬಂದಳು. ಹುಟ್ಟು ಹಬ್ಬದ ಉಡುಗೊರೆಯಾಗಿ ಅಕ್ಷರ-ಚಿತ್ರ ಪುಸ್ತಕ ಪಡೆದಳು. ಮುಂದಿನ ವರ್ಷಗಳಲ್ಲಿ ಅಮರಚಿತ್ರ ಕತೆ, ದಿನಕ್ಕೊಂದು ಕತೆಗಳಿಂದ ಹಿಡಿದು ವಿಜ್ಞಾನ ನೋಡು ಕಲಿಗಳವರೆಗೆ ಪುಸ್ತಕ ಪೂರವೇ ಸುಗುಣಾ ಭಂಡಾರಕ್ಕೆ ಹರಿಯುತ್ತ ಹೋಯ್ತು. ಮಕ್ಕಳ ದಿನಾಚರಣೆಯ ಭಾಷಣಕ್ಕೆ ಬಹುಮಾನ, ಬರೆಯುವ ದಾರಿ ಸಿದ್ಧಿಸಿದ್ದಕ್ಕೆ ಪಾರಿತೋಷಕ, ಕೋಕಿಲಗಾನಕ್ಕೆ ಇನಾಮು ಎಲ್ಲವು ಸುಗುಣೆಯ ಪುಸ್ತಕ ಸಂಗ್ರಹಕ್ಕೆ ಆಪ್ತ ನೆಪಗಳಾಗುತ್ತಿತ್ತು. ಅವಳ ಆಯ್ಕೆಯಲ್ಲಿ ವಿಜ್ಞಾನ, ಕಲೆ, ಸಾಹಿತ್ಯಗಳೆಂಬ ಭೇದವಿರುತ್ತಿರಲಿಲ್ಲ. ಕಾಲ ಸಂದದ್ದನ್ನು ನೆನಪಿಸುವಂತೆ ಚಿಕ್ಕಪ್ಪ ಸುಗುಣೆಗೆ ಕೇಳು ಕಿಶೋರಿ ಉಡುಗೊರೆ ಕೊಟ್ಟರು. ಮುಂದೊಂದು ದಿನ ಕಲ್ಯಾಣ ಮಂಟಪಕ್ಕೆ ಹೊರಟ ಸುದತಿಯರು “ಸುಗುಣೆಗಾಗಿ” ಎಂದು ಬರೆಸಿಕೊಂಡು ವಧುವಿಗೆ ಕಿವಿಮಾತು ಮತ್ತು ದಾಂಪತ್ಯ ದೀಪಿಕೆ ಕೊಂಡುಕೊಂಡರು. ಮತ್ತೊಂದು ದಿನ ಕರಿಮಣಿಧಾರಿಣಿ ಸುಗುಣೆ ಅನ್ಯಮನಸ್ಕಳಾಗಿಯೇ ಬಂದು `ಸ್ತ್ರೀ ಸ್ವಾಸ್ಥ್ಯ ಸಂಹಿತೆ’ ಒಯ್ದಳು. ಏನಾಯ್ತಪ್ಪಾಂತ ನನ್ನ ಯೋಚನೆಗೆ ಕೆಲವೇ ತಿಂಗಳಲ್ಲಿ ಉತ್ತರ ಸಿಕ್ಕಿತು – ಸುಗುಣಾಪತಿ ಬಂದು `ಹೊಸ ಜೀವದ ಹುಟ್ಟು’ ಕೊಂಡ. ಮತ್ತೆ ಹತ್ತೇ ದಿನದಲ್ಲಿ ಆತ ಪುನಃ ಬಂದು ಅರ್ಥಪೂರ್ಣ ಹೆಸರುಗಳ ಪುಸ್ತಕ ಆರಿಸಿದ. ಜೊತೆಗೇ ಆರೋಗ್ಯಭಾಗ್ಯಕ್ಕೆ ವ್ಯಾಯಾಮ, ಶಿಶುವೈದ್ಯ ದೀಪಿಕೆಗಳನ್ನು ಖರೀದಿಸಿದ. ಈಗ ನಾನು ಕಾದಿದ್ದೇನೆ – ಚಿಕ್ಕಜ್ಜನ ಕೈ ಹಿಡಿದು ತಪ್ಪಡಿಯಿಡುತ್ತ ಬರಲಿರುವ ಸುಗುಣಾಮರಿ, ಮತ್ತವಳ ಅಕ್ಷರಚಿತ್ರಪುಸ್ತಕ ಹಾಗೂ ಅಂಗಡಿಯ ಬೆಳ್ಳಿ ಹಬ್ಬವನ್ನು.
(ಮುಂದುವರಿಯಲಿದೆ)

3 comments:

 1. ನಿಮ್ಮ ಅನುಭವ ಕಥನ ಬಹಳ ಇಷ್ಟ ಆಯ್ತು ಸರ್. ಅತ್ರಿ ಇವಾಗ ಕೂಡ ಇರಬೇಕಿತ್ತು.

  ReplyDelete
 2. ಗೋಪಾಲ್ ಟಿ.ಎಸ್.16 July, 2016 18:14

  ಸೊಗಸಾಗಿದೆ.ಅನುಭವದ ಬರಹ ಹೇಗಿರಬೇಕೆಂದು ಯಾರಾದರೂ ಕೇಳಿದರೆ ಇದಕ್ಕಿಂತ ಒಳ್ಳೆಯ ಮಾದರಿ ಸಿಕ್ಕಲಿಕ್ಕಿಲ್ಲ..

  ReplyDelete
 3. ಬಹಳ ಚೆನ್ನಾಗಿದೆ ಸರ್

  ReplyDelete