15 July 2016

ದುಡ್ಡು ಕೆಟ್ಟದ್ದು ನೋಡಣ್ಣ

ಪುಸ್ತಕ ಮಾರಾಟ ಹೋರಾಟ (೧೯೯೯) 
ಹದಿನೇಳನೇ ಅಧ್ಯಾಯ

[ಮೂಲದಲ್ಲಿ ರಸಪ್ರಸಂಗಗಳಿಗೆ ಜತೆಗೊಟ್ಟ, ಪುಸ್ತಕ ಮಾರಾಟದ್ದೇ ಕೆಲವು ಬಿಡಿ ಪ್ರಸಂಗಗಳು]

ಹೀಗೊಂದು ಪುಸ್ತಕಾಪಹರಣ ಪ್ರಸಂಗ

ಡಾ|ರಮಾಪತಿ ನನಗೆ ಮಿತ್ರ ಚಿತ್ರಗ್ರಾಹಿ ಮೂಲಕ ಪರಿಚಯಕ್ಕೆ ಸಿಕ್ಕವರು. ಆದರೆ ಈತ ತನ್ನ ನಯವಾದ ಮಾತು, ವಿಸ್ತಾರವಾದ ಪುಸ್ತಕಾಸಕ್ತಿಗಳಿಂದ ಬೇಗ ಆತ್ಮೀಯರಾಗಿದ್ದರು. ಅವರು ಬಂದಾಗೆಲ್ಲ ಅದೂ ಇದೂ ಮಾತಾಡುತ್ತ ಅರ್ಧ ಮುಕ್ಕಾಲು ಗಂಟೆ ಅಂಗಡಿಯೆಲ್ಲ ಓಡಾಡಿ ಏನಾದರೂ ಸಣ್ಣಪುಟ್ಟ ಪುಸ್ತಕ ಕೊಂಡು ಹೋಗುತ್ತಿದ್ದರು. ನಾನು ನನ್ನ ಕೆಲಸ ಮಾಡುತ್ತ ಕುಳಿತಲ್ಲಿಂದಲೇ ಹಗುರವಾಗಿ ಅವರ ಮಾತಿಗೆ ಸೇರಿಕೊಳ್ಳುತ್ತಿದ್ದೆ. ಒಂದು ದಿನ ಅವರು ಹೋದ ಮೇಲೆ, ನನ್ನ ಸಹಾಯಕ ಅನುಮಾನಿಸುತ್ತಲೇ ಅವರ ಬಗ್ಗೆ ಅಪಸ್ವರ ತೆಗೆದ. ನಾನು ಕೆದಕಿ ಕೇಳಿದ ಮೇಲೆ “ಡಾಕ್ಟರ್ ಪುಸ್ತಕ ಕದೀತಾರೋಂತ” ಸಂಶಯ ತೋಡಿಕೊಂಡ. ನನಗೆ ನಂಬಿಕೆ ಬರಲಿಲ್ಲ. ಆದರೆ ಸಹಾಯಕನ ಮಾತು ಖಂಡಿತ ತಳ್ಳಿ ಹಾಕುವಂತದ್ದಲ್ಲ ಅನ್ನಿಸಿ, “ಇನ್ನೊಮ್ಮೆ ಅವರು ಕದ್ದ ಸಂಶಯ ಬಂದಾಗ ನನಗೆ ತಿಳಿಸು. ತನಿಖೆಯ ಅಪ್ರಿಯ ಕೆಲಸ ನಾನೇ ಮಾಡುತ್ತೇನೆ.” ಎರಡು ದಿನ ಕಳೆದು ರಮಾಪತಿ ಬಂದರು.
ಸ್ಕೂಟರ್ ರಿಪೇರಿಗಿಟ್ಟು ಸ್ವಲ್ಪ ಸಮಯ ಕಳೆಯಲು ಬಂದದ್ದೆಂದು ಹೇಳಿದರು. ಎಂದಿನಂತೆ ಹರಟುತ್ತ ಕಪಾಟುಗಳ ಮರೆಯಲ್ಲಿ ಓಡಾಡಿಕೊಂಡಿದ್ದರು, ನಾನೂ ಎಂದಿನಂತೆ ನನ್ನ ಕೆಲಸದಲ್ಲಿ ತಲ್ಲೀನನಂತಿದ್ದೆ. ಓರೆ ಕಣ್ಣಿನಲ್ಲಿ ಸಹಾಯಕನನ್ನು ನೋಡಿಕೊಳ್ಳುತ್ತ, ಅಪಾಯದ ಸೂಚನೆಯನ್ನು ಆತಂಕಿತ ಹೃದಯದಲ್ಲಿ ಕಾದಿದ್ದೆ. ಹತ್ತು ಮಿನಿಟು ಕಳೆದು ಸಹಾಯಕನಿಂದ ಸ್ಪಷ್ಟ ಸೂಚನೆ ಬಂತು. ನಾನು ಸೀದಾ ರಮಾಪತಿ ಇದ್ದಲ್ಲಿಗೆ ಹೋಗಿ “ಎಲ್ಲಿ ಶರಟೆತ್ತಿ” ಎಂದೆ. ಆತನ ಮುಖ ಒಮ್ಮೆಲೇ ಕಪ್ಪಿಟ್ಟಿತು. ಸಾರಿ ಸಾರಿ ಎಂದು ಬಡಬಡಿಸುತ್ತ, ಸೊಂಟಪಟ್ಟಿಯ ಒಳಗೆ ಅರ್ಧಕ್ಕೆ ಮಡಚಿ ತುರುಕಿದ್ದ, ಆ ಕಾಲಕ್ಕೆ ದೊಡ್ಡ ಬೆಲೆಯ ದೊಡ್ಡ ಪುಸ್ತಕವೊಂದನ್ನು ತೆಗೆದು ಕೊಟ್ಟ. ನನಗೆ ಕೋಪ, ಜಿಗುಪ್ಸೆ, ನಿರಾಶೆ ಮುಂತಾದ ಭಾವಮಿಶ್ರಣದಲ್ಲಿ ಮೈ ನಡುಗುತ್ತಿತ್ತು, ಒಮ್ಮೆ ಮಾತೇ ಬರಲಿಲ್ಲ. ಮತ್ತೆ ಗಟ್ಟಿಯಾಗಿ ಹೇಳಿದೆ “ಛೆ, ನಮ್ಮ ಸ್ನೇಹವೆಲ್ಲ ಈ ದರಿದ್ರ ಕಳ್ಳತನಕ್ಕೆ ಬೇಕಾಯಿತಲ್ಲ? ಡಾಕ್ಟರು, ಹೆಂಡತಿ ಮಕ್ಕಳಿರುವ ಜವಾಬ್ದಾರಿವಂತರು ಎಂಬೆಲ್ಲ ಗೌರವಭಾವದೊಡನೆ ನಿಮಗೆ ಸದರ ಕೊಟ್ಟದ್ದಕ್ಕೆ ನನ್ನ ಬಗ್ಗೇ ನನಗೆ ಹೇಸಿಗೆಯಾಗುತ್ತಿದೆ. ಇನ್ನು ಇಲ್ಲಿ ಬರುವ ಎಷ್ಟೋ ಮುಗ್ದ ಮಿತ್ರರನ್ನು ಅನಾವಶ್ಯಕವಾಗಿ ಕಳ್ಳರಿರಬಹುದೇ ಎಂದು ಸಂಶಯಿಸುವಂತೆ ನನ್ನ ಮನಸ್ಸನ್ನೇ ಹಾಳು ಮಾಡಿದಿರಿ. ನಿಮ್ಮ ಹಳೆ ಪಾಪಗಳ ಪಟ್ಟಿ, ಕ್ಷಮಾಯಾಚನೆ ಒಂದೂ ನನಗೆ ಬೇಡ. ಒಮ್ಮೆ ಇಲ್ಲಿಂದ ತೊಲಗಿಹೋಗಿ, ತಿರುಗಿ ಎಂದೂ ಇತ್ತ ತಲೆ ಹಾಕಬೇಡಿ. ನಿಮ್ಮ ಮರ್ಯಾದೆಗೆಟ್ಟ ಜೀವನಕ್ಕೆ ಇನ್ನೆಲ್ಲಾದರೂ ಹಾಳಾಗಿಹೋಗಿ. Get OUT” ಎಂದು ಬೊಬ್ಬೆಯೇ ಹಾಕಿದ್ದೆ.

ಗೆಳೆಯ ಚಿತ್ರಗ್ರಾಹಿಗೆ ಕೂಡಲೇ ಫೋನ್ ಮಾಡಿ ವಿವರ ತಿಳಿಸಿದೆ. ಅವರ ಸ್ಟುಡಿಯೋ ಪಕ್ಕದಲ್ಲೇ ರಮಾಪತಿಯ ಅಣ್ಣ – ವಕೀಲರ ಕಛೇರಿಯಿತ್ತು. ಅವರಿಗೂ ಈ ಸೋದರನ ಸಾಹಸ ತಿಳಿಸಲು ಸೂಚಿಸಿದೆ. ಆದರೆ ಚಿತ್ರಗ್ರಾಹಿ ಕರುಣಾಮಯಿ. ಆ ಸೋದರರೊಳಗೆ ಈಗಾಗಲೇ ನಡೆದಿರುವ ಪಾಲುಪಟ್ಟಿಯ ವ್ಯಾಜ್ಯದ ಕುರಿತು ನನಗೆ ತಿಳಿಸಿದರು. ಇನ್ನು ಇದೆಲ್ಲಾದರೂ ಸಾರ್ವಜನಿಕವಾದರೆ ರಮಾಪತಿ ಆತ್ಮಹತ್ಯೆ ಮಾಡಿಕೊಂಡಾರು ಎಂದರು. ಅಷ್ಟು ದೊಡ್ಡ ಶಿಕ್ಷೆ ವಿಧಿಸಲು ನನಗೂ ಮನಸ್ಸಾಗದೇ ನಾನದನ್ನು ಅಲ್ಲಿಗೇ ಮುಗಿಸಿದೆ. ಹಾಗಾಗಿ ಇಲ್ಲಿ ಬಳಸಿದ ಹೆಸರಾದರೂ ನಿಜನಾಮಗಳಲ್ಲ ಎಂದು ಪ್ರತ್ಯೇಕ ಹೇಳಬೇಕೇ?

ವ್ಯಾಪಾರಿ ಬುದ್ಧಿ!
ಆನಂದ ಕುಮಾರ ಬೆಳವಾಡಿ ಆಗಿನ್ನು ಹೊರನಾಡಿನ ಕನ್ನಡಿಗ. ಹವ್ಯಾಸೀ ಪತ್ರಕರ್ತ. ಒಂದು ದಿನ ನನಗಾತನ ಆತ್ಮೀಯ ಮನವಿ ಪತ್ರ ಬಂತು. ಅದರ ಸಾರಾಂಶ ಆತ ಮಾಡಿಸಿಕೊಂಡ ಹೃದಯ ಶಸ್ತ್ರಕ್ರಿಯಾ ಚಿಕಿತ್ಸಾ ಅನುಭವ ಕಥನ ಜನಪ್ರಿಯ ಮಾಸಿಕ – ಕಸ್ತೂರಿಯಲ್ಲಿ, ಪ್ರಕಟವಾಗಿ ಅಪಾರ ಜನಮನ್ನಣೆ ಗಳಿಸಿತ್ತು. ಆತ ಅದನ್ನೇ ವಿಸ್ತರಿಸಿ ಪುಸ್ತಕ ಮಾಡುವ ಯೋಚನೆಯಲ್ಲಿದ್ದ. ಹಲವು ಪರಿಚಿತರನ್ನು ಸಂಪರ್ಕಿಸಿದಂತೆ ಪ್ರಕಟಣಪೂರ್ವ ಸಹಾಯ ಕೋರಿ ನನಗೂ ಆತನ ಪತ್ರ ಬಂತು. ಎರಡು ಮೂರು ತಿಂಗಳೊಳಗೆ ಪೂರ್ಣಗೊಳ್ಳುವ ಯೋಜನೆ ಎಂದೇ ಆತ ಹೇಳಿದ್ದರಿಂದ ನಾನು ನಿರ್ಯೋಚನೆಯಲ್ಲಿ ಹತ್ತು ಪ್ರತಿಗಳಿಗೆ ಮುಂಗಡ, ಮನಿಯಾರ್ಡರ್ ಮೂಲಕ ಕಳಿಸಿದೆ. ರಸೀದಿ ಬಂತು. ತಿಂಗಳುಗಳು ಎರಡಲ್ಲ, ಹನ್ನೆರಡಾಗಿ ವರ್ಷವೇ ಉರುಳಿದರೂ ಪುಸ್ತಕ ಬಾರದಾಗ ಒಂದು ಸವಿನಯ ನೆನಪಿನೋಲೆ ಬರೆದೆ – “ಪುಸ್ತಕ ಏನಾಯಿತು? ಎಂದು ಪ್ರಕಟವಾದೀತು?” ಚುರುಕಾಗಿಯೇ ಉತ್ತರ ಬಂತು “ಕ್ಷಮಿಸಿ, ಅನಿವಾರ್ಯ ಕಾರಣಗಳಿಂದ ನಿಧಾನವಾಗಿದೆ. ಸದ್ಯದಲ್ಲೇ ಬರಲಿದೆ.” ಮತ್ತೆ ತಾಳುವಿಕೆಗಿಂತ ಅನ್ಯ ತಪವಿಲ್ಲ ಎಂದು ಕಾದು ಕುಳಿತೆ. ವರ್ಷಗಳೂ ಎರಡು ಕಳೆದಾಗ ತಡೆಯದೆ ಮತ್ತೆ ಸರಳವಾಗಿ ಬರೆದೆ – “ಕಾರಣ ಏನೇ ಇರಲಿ, ನನ್ನ ಮುಂಗಡ ಮರಳಿಸಿ. ಪುಸ್ತಕ ಬಂದಾಗ ತಿಳಿಸಿ, ವ್ಯಾಪಾರೀ ನಿಯಮದಂತೆ ಹಣ ಕೊಟ್ಟು ಕೊಳ್ಳುವೆ.” ಎರಡು ವರ್ಷಗಳ ಹಿಂದೆ ನಾನು ಮನಿಯಾರ್ಡರಿನಲ್ಲಿ ಕಳಿಸಿದಷ್ಟೇ ಮೊತ್ತ ಮುಂಬೈ ಚೆಕ್ ಮೂಲಕ ಬಂತು. ಜೊತೆಗೆ ವಿನಯದ ಮುಖವಾಡ ಹರಿದು ಬೆಳವಾಡಿಯ ವಕ್ರ ಹಲ್ಲು ಸಣ್ಣ ಚೀಟಿ ಬರಹದಲ್ಲಿ ಹೊರಚಾಚಿತ್ತು “ನಿಮ್ಮ ವ್ಯಾಪಾರೀ ಬುದ್ಧಿ ಕಂಡು ಬೇಸರವಾಯ್ತು.” ನಾನು ಚೆಕ್ ವಟಾಯಿಸಿದ ಮೇಲೆ ಪತ್ರಿಸಿದೆ “ನನ್ನ ವ್ಯಾಪಾರೀ ಬುದ್ಧಿಯನ್ನು ಜಾಗೃತಗೊಳಿಸಿದ್ದಕ್ಕೆ ಕೃತಜ್ಞತೆಗಳು. ಪುಸ್ತಕ ಪ್ರಕಟವಾದ ಮೇಲೆ ಹೇಗೂ ವ್ಯಾಪಾರಿ ವಟ್ಟ ಸಿಗುತ್ತಿದ್ದ ಪುಸ್ತಕಕ್ಕೆ ಪ್ರಕಟಣಪೂರ್ವ ಹಣ ಕೊಟ್ಟಾಗ ನನ್ನ ವ್ಯಾಪಾರೀ ಬುದ್ಧಿಯ ನಿಂದೆಯಾಗಿತ್ತು ಎರಡೆರಡು ನೆನಪಿನೋಲೆ ಬರೆದೂ ಪುಸ್ತಕ ಬಾರದಾಗ ಸಹಿಸಿಕೊಂಡಾಗ ನನ್ನ ವ್ಯಾಪಾರಿ ಬುದ್ಧಿಗೆ ಮಂಕು ಬಡಿದಿತ್ತು. ಮುಂಗಡ ವಾಪಾಸು ಕೇಳಿದಾಗಲೂ ನಿಮ್ಮ ಅನುಕೂಲ ವಿಚಾರಿಸಿಕೊಂಡು ಮುಂದೆಂದಾದರೂ ಪುಸ್ತಕ ಬಂದರೂ ಕೊಳ್ಳುವೆನೆಂದಾಗ ವ್ಯಾಪಾರೀ ಬುದ್ದಿ ಗೈರುಹಾಜರೇ ಆಗಿತ್ತು. ಈಗ ನೀವೇ ಎಚ್ಚರಿಸಿದ್ದರಿಂದ ಕೇಳುತ್ತಿದ್ದೇನೆ. ಎರಡು ವರ್ಷ ನನ್ನ ದುಡ್ಡು ಇಟ್ಟುಕೊಂಡಿದ್ದಿರಲ್ಲ, ಅದರ ಬಡ್ಡಿ ಎಲ್ಲಿ ಸ್ವಾಮಿ? ಹೊರನಾಡಿನ ಚೆಕ್ ವಟಾಯಿಸಿದ್ದರ ವೆಚ್ಚ ಎಲ್ಲಿ? ಶುದ್ಧ ಬುದ್ಧಿಯವರಾದ ನೀವು ಅಷ್ಟು ಮಾಡಿದರೆ ನಾನು ಆಭಾರಿಯಾಗಿರುತ್ತೇನೆ. ಆನಂದ ಕುಮಾರ ಬೆಳವಾಡಿಯಿಂದ ಮತ್ತೆ ಹಣವೂ ಪತ್ರವೂ ಬರಲೇ ಇಲ್ಲ!

ನಿಮಗೇನು ನಷ್ಟ?
೧೯೯೧ರಲ್ಲೊಬ್ಬ ಹತಾಶ ಗಿರಾಕಿ ನನಗೆ ಬರೆದ ಪತ್ರ “ಪ್ರಿಯರೇ ನಾನು ಈ ಕಾಗದ ನಿಮಗೆ ಬರೆಯಬೇಕಾಗಿರಲಿಲ್ಲ. ಆದರೂ ನನ್ನ ಅನಿಸಿಕೆಯನ್ನು ತಿಳಿಸಲೇಬೇಕೆಂದು ತೊಡಗಿದ್ದೇನೆ. ಓದಿ, ಹರಿದು ಬಿಸಾಡಿಬಿಡಿ.

“ನಾನು ನಿಮ್ಮ ಅಂಗಡಿಯಿಂದ ೨೭-೧೧-೧೯೯೧ರಂದು ಬರೆ ೪೯ ರೂಪಾಯಿ ಪುಸ್ತಕ ತೆಕ್ಕೊಂಡಿದ್ದೆ. ಅದರಲ್ಲಿ ಕೆಲವನ್ನು ಬದಲಾಯಿಸಿಕೊಡಬೇಕೆಂದೂ ೫-೬ ದಿನಗಳ ನಂತ್ರ ನಿಮ್ಮಲ್ಲೆ ಕೇಳಿದೆ – ನೀವು ಒಪ್ಪಲಿಲ್ಲ. ಅದಕ್ಕೆ ನೀವು ಕೊಟ್ಟ ಕಾರಣ ಎಲ್ಲರೂ ವಾಪ್ಸು ಕೊಡಬಹುದು ಎಂಬುದು. ಎಲ್ಲರೂ ತೆಕ್ಕೊಳ್ಳುವುದು ವಾಪಾಸು ಕೊಡಲಿಕ್ಕೇ ಎಂದು ಹೇಗೆ ಗ್ರಹಿಸಿದಿರೋ ಗೊತ್ತಾಗಲಿಲ್ಲ.  ಒಂದೊಂದು ಸಂದರ್ಭದಲ್ಲಿ ಮಾತ್ರ ಹಾಗೆ ಮಾಡಬೇಕಾಗುತ್ತದೆ, ಅಷ್ಟೆ!

“ಒಂದು ಉದಾಹರಣೆ ಕೊಡುತ್ತಿದ್ದೇನೆ. ನಾನು ೨೦-೪-೧೯೯೧ರಂದು ಶ್ರೀರಾಮಾ ಹಾರ್ಡ್ವೇರಿನವರಿಂದ ೩೫೦೦ ರೂಪಾಯಿಯ ಸ್ಪ್ರಿಂಕ್ಲರ್ ಸಾಮಾನು ತೆಕ್ಕೊಂಡಿದ್ದೆ. ಅದನ್ನು ತೋಟಕ್ಕೆ ಹಾಕಿರಲಿಲ್ಲ. ಈಗ ಹಾಕಬೇಕಾದ ಕೆಲವು ಸಾಮಾನು ಬದಲಾಯಿಸುವ ಅಗತ್ಯ ಕಂಡಿತು. ಅಂಗಡಿಯವರನ್ನು ಕೇಳಿದೆ, ಒಪ್ಪಿದರು. ಅದರಲ್ಲಿ ೪೭೬ ರೂಪಾಯಿಯ ಸಾಮಾನು ವಾಪ್ಸು ಕೊಟ್ಟು ೨೪೦ರ ಸಾಮಾನು ತೆಗೆದುಕೊಂಡೆ. ಮತ್ತೆ ಬಾಕಿ ಹಾಗೇ ಇರಲಿ, ಮುಂದೆ ಸಾಮಾನು ಕೊಂಡು ಹೋಗುವೆನೆಂದು ಹೇಳಿದೆ. ಅವರು ಅದಕ್ಕೊಪ್ಪದೆ, ಆಗಲೇ ನೀವು ರೂಪಾಯಿ ಕೊಡಿರಿ. ಈಗ ವ್ಯತ್ಯಾಸವಿರುವ ೨೩೬ ರೂಪಾಯಿ ವಾಪಾಸು ತೆಗೆದುಕೊಳ್ಳಿರೆಂದು ನಗುಮುಖದಲ್ಲೇ ವಾಪಾಸು ಕೊಟ್ಟರು. ಇನ್ನು ನನಗೆ ಸಾಮಾನು ಬೇಕಾದಾಗ ಬೇರೇ ಅಂಗಡಿಗೆ ಹೋದೇನೋ. ನೀವೇ ಗ್ರಹಿಸಿ. ಇದು ಗಿರಾಕಿಗಳನ್ನು ಹಿಡಿದಿಟ್ಟುಕೊಳ್ಳುವ ಕ್ರಮ.”

ನಾನದಕ್ಕೆ ಹೀಗೆ ಉತ್ತರಿಸಿದೆ: “ ನೀವು ಐದಾರು ದಿನಗಳನಂತರ ಬದಲಾಯಿಸಲು ತಂದ ಪುಸ್ತಕಗಳನ್ನು ಸ್ಪ್ರಿಂಕ್ಲರ್ ಸಾಮಾನಿನ ತಪ್ಪು ಹೋಲಿಕೆ ಕೊಟ್ಟು ಸಮಸ್ಯೆ ವಿಶ್ಲೇಷಿಸಿದ್ದೀರಿ. ಯಂತ್ರ ಸಾಮಗ್ರಿಗಳಂಥವು ಬಳಕೆಯಾಗದೆ ಒಂದು ವಾರದ ಮಟ್ಟಿಗೆ ಹೊರಗಿದ್ದು ಬಂದರೆ ವ್ಯತ್ಯಾಸವೇನೂ ಆಗದು. ಆದರೆ ಒಮ್ಮೆ ನೀವು ಆ ಸಾಮಗ್ರಿಯನ್ನು ನೀವು ಬಳಸಿ, ಅದರಲ್ಲಿ ತಯಾರಿಯ ದೋಷವೇನೂ ಇಲ್ಲದಿದ್ದರೂ ಕಳಚಿ ವಾಪಾಸು ಮಾಡಲು ಹೋದರೆ (ಸಾಮಾನ್ಯವಾಗಿ) ಯಾರಾದರೂ ಹಿಂದೆಗೆದುಕೊಂಡಾರೇ? ಪುಸ್ತಕಗಳ ಬಳಸುವಿಕೆ ಇತರ ಸಾಮಗ್ರಿಗಳಂಥಲ್ಲ. ಹಾಗಾಗಿಯೇ ನನ್ನಲ್ಲಿ ಗಿರಾಕಿಗಳಿಗೆ ಒಳ ಬಂದು ಸ್ವತಃ ಪುಸ್ತಕ ಆರಿಸಲು ಅವಕಾಶ ಕಲ್ಪಿಸಿದ್ದೇನೆ. ಆದರೂ ಕೊಂಡವರು ಅದೇ ದಿನ ಮರಳಿ ತಂದಾಗ ಬದಲಾಯಿಸಿ ಕೊಟ್ಟಿದ್ದೇನೆ. ಇದಕ್ಕಿಂತ ಹೆಚ್ಚಿಗೆ ಅವಕಾಶ ಕೊಟ್ಟರೆ ನನ್ನದು ಮಾರಾಟದ ಅಂಗಡಿ ಹೋಗಿ ಗ್ರಂಥಾಲಯ ಆಗುವ ಅಪಾಯವಿದೆ! ಪತ್ರ ಬರೆಯುವಷ್ಟು ಮುಂದುವರಿದ ನಿಮ್ಮ ನೋವು ನನಗೆ ತಿಳಿಯುತ್ತದೆ. ಆದರೆ ಸಾರ್ವಜನಿಕರೊಡನೆ ವ್ಯವಹರಿಸಬೇಕಾದ ನನ್ನ ಕಷ್ಟ ಸೂಕ್ಷ್ಮವಾಗಿಯಾದರೂ ನಿಮಗೆ ತಿಳಿಯಲಿ ಎಂದಿಷ್ಟು ಬರೆದಿದ್ದೇನೆ. ಮುಂದೆ ಇಂಥ ಪ್ರಸಂಗ ಬಾರದಂತೆ ಎಚ್ಚರಿಕೆಯೊಡನೆ ನೀವು ನನ್ನಲ್ಲಿ ಬರುತ್ತಲೂ ಇರಬೇಕು ಎಂದು ಆಶಿಸುತ್ತೇನೆ.” ಅವರಿಂದ ಉತ್ತರ ಬರಲಿಲ್ಲ. ಮುಂದೆ ಅವರು ನನ್ನಂಗಡಿಗೆ ಬರುತ್ತಿದ್ದರೋ ಎಂದೂ ತಿಳಿಯಲಿಲ್ಲ.

ಹುಂಡಿಗೆ ಹಣ!
ಮನಿಯಾರ್ಡರ್ ಫಾರಂ ತುಂಬುವಲ್ಲಿ ವಿದ್ಯಾವಂತರೂ ಸೋಲುತ್ತಾರೆ ಎನ್ನುವುದಕ್ಕೆ ೧೮-೧೨-೧೯೮೪ರ ತಾರೀಕು ಹೊತ್ತ ಮನಿಯಾರ್ಡರಿನ ಕತೆ ನೋಡಿ. ರೂ ನಲ್ವತ್ತು ಬಂತು. ಸಂದೇಶದ ಸ್ಥಳದಲ್ಲಿ “ಬ್ರ. ಶ್ರೀಬಾಲಶಾಸ್ತ್ರೀ ರಾವಜೀ ಶಾಸ್ತ್ರೀ ಕ್ಷೀರಸಾಗರ ಪ್ರಣೀತರವರ ಸಾರ್ಥ ಷೋಡಷ ಸಂಸ್ಕಾರ ರತ್ನಮಾಲ
ಎಂಬ ಎರಡು ಪುಸ್ತಕಗಳನ್ನು ಕಳುಹಿಸಿ ಕೊಡಿ. ೪೦ ರೂಗಳನ್ನು ಮನಿಯಾರ್ಡರ್ ಮಾಡಿದ್ದೇವೆ. ಮಿಕ್ಕ ಹಣವನ್ನು ಕಟ್ಟಿ ಪುಸ್ತಕ  ಬಿಡಿಸಿಕೊಳ್ಳುತ್ತೇವೆ. ಖಂಡಿತ ಕಳುಹಿಸಿಕೊಡಿ. ಇತಿ ಗುರು..... ಸ್ವಾಮಿಗಳು” ಫಾರಂನ ಕಳಿಸಿದವರ ವಿಳಾಸದ ಜಾಗದಲ್ಲಿ ಕೇವಲ “ಶ್ರೀ ಮಠ” ಎಂದಷ್ಟೇ ನಮೂದಿಸಿದ್ದರು. ಬಹುಶಃ ಮನಿಯಾರ್ಡರು ಹೊರಟ ಊರಿನಲ್ಲಿ ಆ ಮಠ ಏಕೈಕವೂ ಖ್ಯಾತವೂ ಇದ್ದಿರಬೇಕು. ಹಾಗಾಗಿ ಅಂಚೆ ಗುಮಾಸ್ತೆ ವಿವರಗಳಿಗೆ ಗಮನ ಕೊಡದೆ ಕಳಿಸಿದ್ದಿರಬೇಕು. ಸುಮ್ಮನೆ ಕಾಯುವುದೊಂದೇ ನನಗಿದ್ದ ದಾರಿ.

ಮರುದಿನ ಅದೇ ಮಠದಿಂದ ಪ್ರತ್ಯೇಕ ಅಂಚೆಯಲ್ಲಿ ಲಕೋಟೆಯೊಂದು ಪತ್ರ ಬಂತು. ಹಾಗೆಂದು ಲಕೋಟೆ ಮೇಲೆ ಕಳಿಸಿದವರ ಕುರಿತ ಯಾವ ನಮೂದುಗಳೂ ಇರಲಿಲ್ಲ. ಹೆಚ್ಚೇಕೆ ಇಲಾಖೆಯ ಮುದ್ರೆಯೂ ಸ್ಪಷ್ಟವಿರಲಿಲ್ಲ. ಒಳಗೆ ಖಾಲೀ ಕಾಗದದ ಮೇಲೆ ಒಕ್ಕಣೆ ಹೀಗಿತ್ತು “ಶ್ರೀಗುರು .... ಸ್ವಾಮಿನಾಂ ಸನ್ನಿಧಾನೇನಾ. ಬ್ರ.ಶ್ರೀ ಬಾಲಶಾಸ್ತ್ರೀ....... ಪುಸ್ತಕವನ್ನು ಕಳುಹಿಸಿಸಿಕೊಡುತ್ತೀರಾಗಿ ನಂಬಿ ರೂ ನಲ್ವತ್ತು ಎಂಓ ಮಾಡಿರುತ್ತೇನೆ. ಖಂಡಿತಾ ಆದಷ್ಟು ಬೇಗನೆ ಕಳುಹಿಸಿಕೊಡುತ್ತೀರಾಗಿ ಹರಸಿ ಕಳುಹಿಸಿದ ವೇದೋಕ್ತ ಮಹದಾಶೀರ್ವಾದಗಳು. ಇತಿ ಶ್ರೀ ಗುರು.... ಮೊಕ್ಕಾಂ ಶ್ರೀಮಠ”. ಹೆಸರು, ಊರು ಇಲ್ಲೂ ಸಿಗಲಿಲ್ಲ. ಮತ್ತೆ ಕಾಯುವುದೊಂದೇ ನನಗಿದ್ದ ದಾರಿ. ೭-೧-೧೯೮೫ರಂದು, ಅಂದರೆ ಸುಮಾರು ಮೂರು ವಾರ ಕಳೆದು ಅವರಿಂದ ಒಂದು ಕಾರ್ಡು ನೆನಪಿನೋಲೆಯಂತೆ ಬಂತು. ಅದರಲ್ಲಿ ಹಾಸನ ಜಿಲ್ಲೆಯ ಹಳ್ಳಿ ಮೂಲೆಯ ಶ್ರೀಮಠದ ಮೊಹರಿತ್ತು! ಮರುಟಪಾಲಿಗೇ ಪುಸ್ತಕ ಕಳಿಸುತ್ತ, ನನ್ನ ವಿಳಂಬಕ್ಕೆ ವಿವರಣಾಪತ್ರವನ್ನೂ ಬರೆದೆ. ಮೂರನೇ ಅಂಚೆಯಲ್ಲದಿದ್ದರೆ ಅವರ ಹಣ ದೇವರ ಹುಂಡಿಗೆ ಬಿದ್ದ ಹಣದಂತೇ ಆಗುತ್ತಿತ್ತು ಎನ್ನುವುದನ್ನೂ ನನ್ನ ತೃಪ್ತಿಗಾಗಿ ನಿವೇದಿಸಿಕೊಂಡೆ.

ಮುದ್ರಾ ಧಾರಣೆ
ನಾನು ಅತ್ರಿಯಲ್ಲಿ ಮಾರಿದ ಪುಸ್ತಕಗಳಿಗೆಲ್ಲ ಪ್ರಕಾಶಕರ ಹೆಸರಿನ ಬಲಮೂಲೆಯಲ್ಲಿ ನಮ್ಮ ಮಳಿಗೆಯ ರಬ್ಬರ್ ಮೊಹರನ್ನು ಒತ್ತುವ ಅಭ್ಯಾಸ ಇಟ್ಟುಕೊಂಡಿದ್ದೆ. ಅದಕ್ಕೆಂಬಂತೆ ೧೪-೧೧-೧೯೯೫ರ ಉದಯವಾಣಿಯಲ್ಲಿ ಮಣಿಪಾಲದ ಎಸ್. ಶ್ರೀನಿವಾಸ ಎಂಬವರು ಬರೆದ ಪತ್ರದ ಸಾರಾಂಶ ನೋಡಿ: ನಾವು ದುಡ್ದುಕೊಟ್ಟು ಖರೀದಿಸುವ ಪುಸ್ತಕಗಳ ಮೇಲೆ ಮಾರಾಟ ಮಾಡುವ ಅಂಗಡಿಯವರ ಮುದ್ರಾಧಾರಣೆ ಎಷ್ಟು ಸರಿ?

೩೦-೧೧-೧೯೯೫ರಂದು ಪ್ರಕಟವಾದ ನನ್ನುತ್ತರ ಹೀಗಿತ್ತು: ನಾನೂ ಒಬ್ಬ ಪುಸ್ತಕ ವ್ಯಾಪಾರಿ. ನಾನು ಮಾರುವ ಪುಸ್ತಕಗಳಿಗೆ ಆದಷ್ಟು ಸಣ್ಣದಾಗಿ ನನ್ನ ಮುದ್ರೆಯನ್ನು ಒತ್ತುತ್ತೇನೆ. ಆದರೆ ಕೊಳ್ಳುಗರ ವಿರೋಧವಿದ್ದರೆ ಖಂಡಿತ ಒತ್ತುವುದಿಲ್ಲ. ಮುದ್ರಾಧಾರಣೆ ಬಗ್ಗೆ ನನ್ನ ಕೆಲವು ಅನಿಸಿಕೆಗಳು ಹೀಗಿವೆ. ಲೇಖಕ ಮತ್ತು ಓದುಗರ ನಡುವೆ ಮುದ್ರಕ ಮತ್ತು ಪ್ರಕಾಶಕರಷ್ಟೇ ಅನಿವಾರ್ಯ ಕೊಂಡಿ ಮಾರಾಟಗಾರ. ಆ ಮಧ್ಯವರ್ತಿಗಳಿಗೆ ಅಚ್ಚಿನಲ್ಲೇ ಜಾಹೀರಾತು ದೊರೆಯುವುದು ಸರಿಯಾದರೆ, ಮಾರಾಟಗಾರನಿಗೆ ಮುದ್ರೆಯ ಮೂಲಕ ಸಣ್ಣ ಪಾಲು ಯಾಕಿರಬಾರದು?

ಕೆಲವು ಪುಸ್ತಕಗಳ ತಯಾರಿಯಲ್ಲಿ ದೋಷಗಳು ನುಸುಳಿರುತ್ತವೆ. ಇವನ್ನು ಅರಿವಿಲ್ಲದೇ ಮಾರಿರುತ್ತೇವೆ. ಕೆಲವೊಮ್ಮೆ ಕೊಳ್ಳುಗರೂ ಎಷ್ಟೋ ಕಾಲದ ಮೇಲೆ ತಪ್ಪನ್ನು ಗುರುತಿಸುವುದಿದೆ. ಹಾಗೆ ಮರಳಿಸಿದಾಗಲೂ ನನ್ನ ಜವಾಬ್ದಾರಿಯನ್ನು ಎಚ್ಚರಿಸುವಲ್ಲಿ ಮುದ್ರೆ ಸಹಕಾರಿ. ನಾನು ಪುಸ್ತಕಗಳಿಗೆ ಉಚಿತ ಬದಲಿ ಪ್ರತಿ ಕೊಟ್ಟಿದ್ದೇನೆ, ಮುಂದಕ್ಕೂ ಕೊಡುತ್ತೇನೆ. ಗಮನಿಸಿ, ಇಲ್ಲಿ ಪುಸ್ತಕ ಬದಲಿಗೆ ಕೇಳುವವರು ನನಗೆ ಅಪರಿಚಿತರಿರಬಹುದು ಮತ್ತು ನಾನು ಕೊಟ್ಟ ಬಿಲ್ಲು ಕಳೆದುಕೊಂಡಿರಲೂಬಹುದು.

ಹಣ, ಹೆಣ್ಣಿನಂತೆ ಪುಸ್ತಕವೂ ಖಾಸಗಿ ಸೊತ್ತು ಎನ್ನುತ್ತದೆ ಸುಭಾಷಿತ. ಅದನ್ನು ಕೊಟ್ಟು ಕಳೆದುಕೊಳ್ಳುವುದಕ್ಕಿಂತ ಮುದ್ರೆಯಾಧಾರದ ಮೇಲೆ ಎರವಲಾಚಿಯನ್ನು ಅತ್ತ ತಳ್ಳಿ, ಸೊತ್ತುಳಿಸಿಕೊಳ್ಳುವ ಅವಕಾಶ ಕ್ಷೇಮಕರವಲ್ಲವೇ?
ಪುಸ್ತಕದ ಗುಣಮಟ್ಟದೊಡನೆ ಮುದ್ರೆ ಮಾರಿದಾತನಿಗೆ ಪ್ರಚಾರ ಲಾಭ ತರುವಂತೆಯೇ ಅವಗುಣದೊಡನೆ ನಷ್ಟ ತರುವುದೂ ಇದೆ. `ನಿರಾಕರಣ’ – ಜಯಪ್ರಕಾಶ ಮಾವಿನಕುಳಿ ಬರೆದ ನಾಟಕಕ್ಕೆ ಕಾನೂನು ತಡೆ ಬಂದಾಗ ನನ್ನಿಂದ ಮಾರಿ ಹೋದಷ್ಟೂ ಪ್ರತಿಗಳನ್ನು ಪೋಲಿಸರು ಹೀಗೆ ಗುರುತಿಸಿ, ವಶಪಡಿಸಿಕೊಳ್ಳುವಲ್ಲಿ ಶಕ್ತರಾಗಿದ್ದರು.
ಹಳ್ಳಿಯ ಪುಸ್ತಕಪ್ರೇಮಿಯೊಬ್ಬರು ನನ್ನಲ್ಲಿ ಕೊಂಡ ಪುಸ್ತಕ ಚೀಲಕ್ಕೆ ಸೇರಿಸಿ ಇನ್ನೊಂದು ಮಳಿಗೆಗೆ ಹೋಗಿದ್ದರು. ಅಲ್ಲಿನ ವ್ಯಾಪಾರಿಯ ಗೃಧ್ರ ದೃಷ್ಟಿಗೆ ಇವರ ಚೀಲದೊಳಗಿನ ಪುಸ್ತಕ ತಮ್ಮ ಅಂಗಡಿಯದೇ ಕಳ್ಳ ಮಾಲಿರಬೇಕೆಂದು ಗುಮಾನಿ ಬಂತಂತೆ. ಆಗ ಇವರನ್ನು ಬಚಾಯಿಸಿದ್ದು ನನ್ನಂಗಡಿಯ ಮುದ್ರೆ!

ಮುದ್ರೆ ಕಳೆದುಕೊಂಡು ಶಕುಂತಲೆಯ ವೇದನೆ ಹಾರೈಸದಿರಿ!

(ಮುಂದುವರಿಯಲಿದೆ)


2 comments:

  1. ಅಶೋಕ ಭಾವ , ಓದಿದೆ. ನೀನು ಬರೆದ ಬೆಳವಾಡಿ (!) ದಿವಂಗತ ಸಂಪಾದಕರಾ ?
    ಹೌದು , ಪುಸ್ತಕಗಳನ್ನು ಖರೀದಿಸಿದ ಮಾರನೇ ದಿನವೇ ಕೊಂಡುಹೋದರೂ ಬದಲಾಯಿಸಿ ಕೊಡುವುದಿಲ್ಲ .

    ReplyDelete
  2. ನಿಮ್ಮ ಶಿಸ್ತಿನ ಸ್ವಭಾವ ನನಗೆ ಪರಿಚಿತ. ನೀವು ಕರಾರುವಾಕ್ಕು ವ್ಯಕ್ತಿ. ನನಗೆ ಹಲವು ಬಗೆಯಲ್ಲಿ ಮಾರ್ಗದರ್ಶನ ಮಾಡಿದ್ದೀರಿ . ಲೆಕ್ಕ ತಪ್ಪು ಮಾಡಿದಾಗ, ಕವರ್ ಪೇಪರ್ ದಂಡ ಮಾಡಿದಾಗ ಬುದ್ಧಿ ಹೇಳಿದ್ದೀರಿ. ವಂದನೆಗಳು. ಹಿರಿಯಣ್ಣನ ಧೋರಣೆ ನನಗೆ ಇಷ್ಟವಾಯಿತು. ನಿಮ್ಮ ಪುಸ್ತಕ ಮಾರಾಟದ ಲೋಕಾನುಭವ ತುಂಬಾ ಆಸಕ್ತಿಕರವಾಗಿದೆ. ಲೋಕೋ ಭಿನ್ನ ರುಚಿ. ನಿಷ್ಠೂರವಾದರೂ ಚಿಂತೆ ಇಲ್ಲ. ನೀವು ಖಚಿತವಾಗಿದ್ದೀರಿ. ವಂದನೆಗಳು ಅಣ್ಣಾ

    ReplyDelete