21 June 2016

ಮಾಸ್ತಿಯನ್ನರಸುತ್ತಾ

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ
ದೀಪದಡಿಯ ಕತ್ತಲೆ - ಅಧ್ಯಾಯ ಮೂವತ್ತ ನಾಲ್ಕು

ಕ್ರಿಯಾತ್ಮಕವಾಗಿ ತೊಡಗಿಸಿಕೊಂಡ ಕಾಲ ಎಂದೂ ನಿಷ್ಪ್ರಯೋಜಕವಲ್ಲ. ನನಗೆ ನೆನಪಿರುವಂತೆ ಯಾವುದೇ ಕೆಲಸವಿಲ್ಲದೆ ನಾನು ಕಾಲವನ್ನು ದೂಡಿದ್ದೆಂದೇ ಇಲ್ಲ. ಓದು ಇಲ್ಲವೇ ಬರವಣಿಗೆ ನನ್ನ ಕೈಹಿಡಿದಿತ್ತು. ಏನಾದರೂ ಹೊಸ ಲೇಖನ ಬರೆಯಬೇಕೆಂದೆನಿಸಿದರೂ ಅದಕ್ಕೆ ಬೇಕಾದ ಪೂರಕ ಮಾಹಿತಿಗಳನ್ನು ಸಂಗ್ರಹಿಸುವ ಪ್ರಯತ್ನ ಮಾಡುತ್ತಿದ್ದೆ. ೨೦೦೬ರಲ್ಲಿ ನನ್ನ ಗೆಳತಿ ಶಶಿಲೇಖಾ ನಿವೃತ್ತೆಯಾದರು. ನನ್ನ ಅಪ್ಪ ಮತ್ತು ಶಶಿಲೇಖನ ಅಪ್ಪ ಗುರುವಪ್ಪ ಮಾಸ್ಟರು ಜಿಗ್ರಿ ದೋಸ್ತ್ಗಳು. ನಾನು ಕಾಪಿಕಾಡ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾಗ ನನ್ನ ಸಹೋದ್ಯೋಗಿಯಾಗಿದ್ದು ನನ್ನ ಬರವಣಿಗೆಗೆ ಪ್ರೋತ್ಸಾಹ ನೀಡಿದವರವರು. ಕಾವ್ಯವಾಚನ ಮಾಡಿಸಲು ಉತ್ತೇಜನ ನೀಡಿದ್ದಲ್ಲದೆ ನನ್ನ ಅಪ್ಪನ ಅನುಮತಿ ಪಡೆದು ನನ್ನನ್ನು ಬೇರೆ ಬೇರೆ ಕಡೆಗಳಿಗೆ ಕರೆದೊಯ್ದವರು ಶಶಿಲೇಖಾನ ಅಪ್ಪ ಗುರುವಪ್ಪ ಮಾಸ್ಟರು. ಪ್ರೀತಿಯ ಅಂತರಗಂಗೆ ಮಕ್ಕಳಾದ ನಮ್ಮಲ್ಲೂ ಹರಿಯುತ್ತಿತ್ತು. ಒಂದು ದಿನ ಪತ್ರಿಕೆಯಲ್ಲಿ ಬಂದ ಪ್ರಕಟಣೆಯೊಂದನ್ನು ಕಂಡು ಶಶಿಲೇಖಾ ನನಗೆ ಪೋನ್ ಮಾಡಿ ವಿಷಯ ತಿಳಿಸಿದರು. “ನಾವಿಬ್ಬರೂ ಒಂದು ಸಣ್ಣ ಸಂಶೋಧನೆ ಮಾಡೋಣ. ಪ್ರಕಟಣೆಗೆ ಅರ್ಜಿ ಹಾಕಲಾಎಂದು ಕೇಳಿದರು. ರೋಗಿ ಬಯಸಿದ್ದನ್ನೇ ವೈದ್ಯ ನೀಡಿದಷ್ಟು ಖುಷಿಯಲ್ಲಿ ಸಮ್ಮತಿಸಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಕಟಣೆಗೆ ಅರ್ಜಿ ಹಾಕಿ ಕಾದೆವು. ತಿಂಗಳುಗಳು ಕಳೆದರೂ ಉತ್ತರವಿಲ್ಲದ್ದು ಕಂಡು ನಿರಾಶರಾದದ್ದೂ ಹೌದು. ಅವರು ಕೊಡದಿದ್ದರೇನಂತೆ ಎಂದು ನಿರಾಶರಾಗದೆ `ಇಟ್ಟ ಹೆಜ್ಜೆ ಮುಂದಾಕಾ ಸರಿಯಬೇಡಿ ಹಿಂದಾಕಾ' ಎಂಬ ಹಾಡಿನಂತೆ ದೃಢ ನಿಶ್ಚಯ ಮಾಡಿದೆವು. `ಅಡಿಯ ಮುಂದಿಡೆ ಸ್ವರ್ಗ ಅಡಿಯ ಹಿಂದಿಡೆ ನರಕ’ ಎಂದು ಸರ್ವಜ್ಞನೂ  ಹೇಳಿದ್ದಾನಲ್ಲಾ. ಸರಿ, ಮತ್ತೆ ತಡಮಾಡುವುದೇಕೆ ಎಂದು ಪ್ರತಿ ಗ್ರಾಮಗಳಲ್ಲಿರುವ ಬಿಲ್ಲವ ಸಂಘಗಳಿಗೆ ಒಂದು ಪತ್ರ ಹಾಕಿ ನಿಮ್ಮ ಊರಿನಲ್ಲಿ ಯಾವುದಾದರೂ ಮಾಸ್ತಿಕಲ್ಲುಗಳು ಇವೆಯೇ ಎಂದು ತಿಳಿಸಬೇಕಾಗಿ ವಿನಂತಿಸಿ ನಮ್ಮ ಫೋನ್ ನಂಬ್ರ ನೀಡಿದ್ದೆವು. ಅದರಿಂದ ಹೆಚ್ಚೇನೂ ಪ್ರಯೋಜನವಾಗದಿದ್ದರೂ ಒಂದೊಂದು ಊರಿಗೆ ಹೋದಂತೆಲ್ಲಾ ಅಲ್ಲಿಯ ಜನರು ಇಂತಿಂತಹ ಕಡೆಗಳಲ್ಲಿ ಇವೆ ಎಂಬ ಮಾಹಿತಿ ನೀಡಿದ್ದನ್ನು ಸಂಗ್ರಹಿಸಿಟ್ಟುಕೊಂಡೆವು. ಪ್ರತೀ ವಾರ ಎಲ್ಲೆಲ್ಲಿ ಹೋಗುವುದೆಂದು ಯೋಜನೆ ರೂಪಿಸಿದೆವು.ಮೊದಲು ಕೆಲಸವನ್ನು ಕೈಗೆತ್ತಿಕೊಂಡಾಗ ನಮ್ಮನ್ನು ನಿರಾಶೆಗೊಳಪಡಿಸಿದವರೂ ಇದ್ದರು. ನಮ್ಮ ಜಿಲ್ಲೆಯಲ್ಲಿ ಮಾಸ್ತಿಕಲ್ಲುಗಳು ಸಿಗಲಾರವು. ಅವು ಏನಿದ್ದರೂ ಉತ್ತರ ಭಾರತ ಇಲ್ಲವೇ ಉತ್ತರ ಕರ್ನಾಟಕದಲ್ಲಿ ಮಾತ್ರ ಎಂದು ನಮ್ಮ ಉತ್ಸಾಹಕ್ಕೆ ತಣ್ಣೀರೆರಚಿದವರಿದ್ದರು. ಆದರೆ ನಮ್ಮ ಹುಡುಕಾಟ ಮುಂದುವರಿಯುತ್ತಿದ್ದಂತೆಲ್ಲಾ ನಾವೇ ಬೆರಗಾಗುವಷ್ಟು ಮಾಸ್ತಿಕಲ್ಲುಗಳು, ಮಾಸ್ತಿ ಗುಡಿಗಳು ನಮ್ಮನ್ನು ಸ್ವಾಗತಿಸಿದವು. ಮಂಗಳೂರಿನ ಜನನಿಬಿಡ ಪ್ರದೇಶಗಳಾದ ಕರಂಗಲ್ಪಾಡಿ, ಜಪ್ಪು ಮಾರ್ಕೆಟ್, ಕಾರ್ಸ್ಟ್ರೀಟ್ ರಸ್ತೆಬದಿಯಲ್ಲಿ ಹೀಗೆ ಹಲವು ಕಡೆ ಕಾಣಸಿಕ್ಕಿದಾಗ ಅವುಗಳ ಪೂರ್ವೇತಿಹಾಸ ಹುಡುಕುವುದು ಕಷ್ಟವಾಯಿತು. ಕೆಲವು ಕಡೆ ಅನಾಥವಾಗಿ ಕೆಲವು ಕಡೆ ಪೂಜೆಗೊಂಡು ಮೆರೆಯುವ ಮಾಸ್ತಿಕಲ್ಲುಗಳ ಜೊತೆಯಲ್ಲಿ ವೀರಗಲ್ಲುಗಳನ್ನೂ ದಾಖಲಿಸುವುದಕ್ಕೆ ಸಿದ್ಧರಾದೆವು. ವೀರನ ಜೊತೆಯಲ್ಲಿ ಮಾಸ್ತಿ ಇದ್ದರೂ ಪೂಜೆ ಮಾತ್ರ ಮಾಸ್ತಿಗೇ. ಬರಿಯ ವೀರಗಲ್ಲುಗಳಿಗೆ ಆರಾಧನೆ ಇರುವ ಮತ್ತು ಆರಾಧನೆ ಇಲ್ಲದ ಅನಾಥವಾದ ವೀರಗಲ್ಲುಗಳೂ ನಮ್ಮ ಜಿಲ್ಲೆಯಲ್ಲಿ ಹಲವಾರು ಲಭಿಸಿವೆ.

ನಾವು ಸಂಶೋಧನೆಗೆ ತೊಡಗಿದಾಗ ಮಾಸ್ತಿಕಲ್ಲುಗಳಿರುವ ಪರಿಸರದ ಜನರಲ್ಲಿ ಅದರ ಬಗ್ಗೆ ಮಾಹಿತಿ ಕೇಳಿದಾಗ ಹೆಚ್ಚಿನವರಿಗೆ ಮಾಸ್ತಿಕಲ್ಲುಗಳೇನೆಂದೇ ಗೊತ್ತಿರಲಿಲ್ಲ. ಕೆತ್ತನೆ ಇರುವ ಕಲ್ಲು ಅಷ್ಟೇ. ಗುಡಿಯೊಳಗಿದ್ದರೆ ಅದಕ್ಕೆ ಕಾರಣಿಕ. ರಸ್ತೆಯಲ್ಲಿದ್ದರೆ ಅನಾಥವಾಗಿ ಬಿದ್ದಿರುತ್ತವೆ. ಗಂಡನ ಸಾವಿನೊಂದಿಗೆ ತಾನೂ ಪ್ರಾಣತ್ಯಾಗ ಮಾಡುವವಳ ನೆನಪಿನಲ್ಲಿ ಕಲ್ಲುಗಳನ್ನು ಹಾಕುತ್ತಾರೆ ಎಂದು ಹೇಳಿದಾಗ ಹೌದೇ? ಎಂದು ವಿಸ್ಮಯಪಟ್ಟವರಿದ್ದರು. ಉಡುಪಿ, ಕುಂದಾಪುರಗಳಾಚೆ ಮಾಸ್ತಿ ದೇವಸ್ಥಾನಗಳು, ಮಾಸ್ತಿಕಟ್ಟೆಗಳು ಅನೇಕ ಇವೆ. ಉಡುಪಿ, ಕುಂದಾಪುರದಾಚೆಯ ಮಾಸ್ತಿಕಲ್ಲುಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ಕೆಲವು ಸಲ ನಮ್ಮ ಜೊತೆಗೆ ಬಂದು ಸಹಕರಿಸಿದವರು ಮುಂಬಯಿಯ ಉದ್ಯಮಿ ಬಾಬುಶಿವ ಪೂಜಾರಿಯವರು. ನಮ್ಮ ಸಂಶೋಧನೆಗೆ ಅಧ್ಯಯನಕ್ಕಾಗಿ ಹಲವಾರು ಗ್ರಂಥಗಳನ್ನು ನೀಡಿ ಸಹಕರಿಸಿದವರವರು. ಓರ್ವ ಹೋಟೆಲ್ ಉದ್ಯಮಿಯಾಗಿದ್ದುಕೊಂಡು ಅವರ ಸಂಗ್ರಹದಲ್ಲಿರುವ ಪುಸ್ತಕಗಳನ್ನು ಕಂಡು ಬೆರಗಾದೆವು. ಪುಸ್ತಕ ಸಂಗ್ರಹ ಮಾತ್ರವಲ್ಲ, ಓದಿ ಅವುಗಳ ತಿರುಳನ್ನು ಅರೆದು ಕುಡಿದ ಅವರ ಜ್ಞಾನಕ್ಕೆ ಸರಿಗಟ್ಟುವವರನ್ನು ನಾನಿನ್ನೂ ಕಂಡಿಲ್ಲ. ಯಾವ ವಿಷಯದ ಬಗ್ಗೆ ಪ್ರಶ್ನೆ ಕೇಳಿದರೂ ಅವರ ಮೂಲ ಚೂಲಗಳ ಸಹಿತ ವಿವರಿಸುವ ಪಾಂಡಿತ್ಯಕ್ಕೆ ತಲೆ ಬಾಗಿದ್ದೇನೆ. ಚರಿತ್ರೆಯ ಬಗ್ಗೆ ಕೇಳಿದರಂತೂ ಶಾಸನಗಳ ಇಸವಿ, ದಿನಾಂಕಗಳ ಸಹಿತ ಮಾಹಿತಿ ಅವರ ಸ್ಮೃತಿಕೋಶದಲ್ಲಿ ಸಂಗ್ರಹವಾಗಿವೆ. ಲಕ್ಷ್ಮೀ ಮತ್ತು ಸರಸ್ವತಿಯವರು ನೆಪಕ್ಕಾದರೂ ಜೊತೆಗಿರಲಾರರು ಎಂಬ ಮಾತಿದೆ. ಅವರನ್ನು ಕಂಡಾಗ ಅದು ಸುಳ್ಳು ಎಂದು ಖಾತ್ರಿಯಾಯಿತು.

ಕ್ಷತ್ರಿಯ ಸಮುದಾಯದಲ್ಲಿ ಮಾತ್ರ ರೂಢಿಯಲ್ಲಿದ್ದ ಸತಿ ಪದ್ಧತಿ ಎಂದರೆ ಗಂಡನ ಚಿತೆಯಲ್ಲಿ ಹೆಂಡತಿಯನ್ನು ದಹಿಸುವ ಸಂಪ್ರದಾಯವಿದೆಯಲ್ಲಾ ಅದು ೧೭, ೧೮ನೇ ಶತಮಾನಗಳಲ್ಲಿ ಎಲ್ಲಾ ವರ್ಗದ ಅಂದರೆ ಮೇಲ್ವರ್ಗ ಮತ್ತು ಕೆಳವರ್ಗಗಳಲ್ಲೂ ಒಂದು ಸಂಸ್ಕೃತಿಯಾಗಿ ಪ್ರಚಾರಗೊಂಡಿತು. ಎಲ್ಲಿವರೆಗೆಂದರೆ ಸತಿ ಹೋಗಲು ಒಪ್ಪದಿದ್ದರೆ ಅವಳನ್ನು ಒತ್ತಾಯದಿಂದ ಚಿತೆಗೆ ತಳ್ಳುವ, ಚಿತೆಯಿಂದ ಮೇಲೇಳದಂತೆ ಬಿದಿರುಗಳಿಂದ ಒತ್ತಿ ಹಿಡಿಯುವ ಕ್ರೂರ ಕೃತ್ಯವೂ ಸಂಸ್ಕೃತಿಯ ಹೆಸರಿನಲ್ಲಿ ನಡೆಯುತ್ತಿತ್ತು. ವಿಧವಾ ವಿವಾಹಗಳಿಲ್ಲದ ಸಮುದಾಯದಲ್ಲಿ ವಿಧವೆಯನ್ನು ಹೇಗೆಲ್ಲಾ ವಿರೂಪಗೊಳಿಸುತ್ತಿದ್ದರೆಂದೂ ಅವರನ್ನು ಎಷ್ಟು ನಿಕೃಷ್ಟವಾಗಿ ಕಾಣುತ್ತಿದ್ದರೆಂದೂ ನಾವು ಬಲ್ಲೆವು. ಹಿಂಸೆಗಿಂತ ಒಮ್ಮೆಲೇ ಸುಟ್ಟು ಸಮಾಜದಲ್ಲಿ ಆರಾಧನೆಗೊಳಗಾಗುವುದೇ ಲೇಸೆಂದು ಮಹಿಳೆಯರು ಭಾವಿಸಿದರೇ? ಇಲ್ಲವಾದರೆ ೧೯೮೭ರಲ್ಲಿ ಉದ್ಯೋಗಸ್ಥ ಆಧುನಿಕ ಮಹಿಳೆಯಾಗಿದ್ದ ರೂಪ ಕನ್ವರ್ ಸತಿ ಹೋಗುತ್ತಿದ್ದಳೇ? ಆಗ ಭಾರತದಾದ್ಯಂತ ನಡೆದ ಪ್ರತಿಭಟನೆಗಳು ಸರಕಾರ ಸತಿಪದ್ಧತಿ ನಿಷೇಧವನ್ನು ಜಾರಿಗೊಳಿಸುವಂತಾಯಿತು. ಆದರೂ ದೇಶದ ಯಾವುದಾದರೊಂದು ಹಳ್ಳಿ ಮೂಲೆಯಲ್ಲಿ ಸತಿಸಹಗಮನಕ್ಕೆ ಪ್ರಯತ್ನಿಸಿದ ಸುದ್ದಿಗಳು ಪ್ರಕಟವಾಗುವುದಕ್ಕೆ ಕಾರಣಗಳೇನು? ಸಂಸ್ಕೃತಿ ಹೆಣ್ಣಿನ ಮೇಲೆ ಹೊರಿಸಿದ ಹೊರೆಗಳೇ ಅಜ್ಜ ನೆಟ್ಟಾಲಕ್ಕೇ ಜೋತು ಬೀಳುವಂತೆ ಮಾಡುತ್ತವೆ.

ಕರಾವಳಿಯ ನಮ್ಮ ಜಿಲ್ಲೆಯ ಯೋಧ ಸಮಾಜಗಳು ಮಾತೃಪ್ರಧಾನ ವ್ಯವಸ್ಥೆಯುಳ್ಳವುಗಳು. ವಿಧವೆಗೆ ಮರುಮದುವೆಗೆ ಅವಕಾಶವಿದೆ. ಹಾಗಿರುವಾಗ ಇಲ್ಲಿ ಮಹಾಸತಿಯರಾಗಿ ಪ್ರಾಣಾರ್ಪಣೆ ಹೀಗೆ ಮಾಡಿದರು ಎಂಬ ಪ್ರಶ್ನೆ ಬರುತ್ತದೆ. ಹೌದು, ಇಲ್ಲಿ ಕುಟುಂಬಕ್ಕಾಗಿ ತ್ಯಾಗ ಮಾಡಿದ, ದುರ್ಮರಣ ಹೊಂದಿದ ಮಹಿಳೆಯರ ನೆನಪಿಗಾಗಿಯೂ ನೆಟ್ಟ ಮಾಸ್ತಿಕಲ್ಲುಗಳಿವೆ. ಹೊಯ್ಸಳ, ವಿಜಯನಗರ, ಕೆಳದಿ ಅರಸರ ಕಾಲದಲ್ಲಿ ನಮ್ಮ ಜಿಲ್ಲೆಗೆ ಬಂದ ಉತ್ತರ ಕರ್ನಾಟಕದ ಯೋಧ ಜನಾಂಗಗಳು ಇಲ್ಲೇ ನೆಲೆನಿಂತವರು ಸತಿಯಾಗಿ ಮಾಸ್ತಿಕಲ್ಲುಗಳಾಗಿದ್ದರು. ಕುಂದಾಪುರ, ಕಾಸರಗೋಡುಗಳಲ್ಲಿ ಇಂತಹ ಹಲವು ಮಾಸ್ತಿಕಲ್ಲುಗಳು ಸಿಗುತ್ತವೆ. ತಮ್ಮ ಮನೆತನದ ಮಹಿಳೆಯೆಂದು ಭಕ್ತಿ ಗೌರವಗಳಿಂದ ಆರಾಧಿಸುತ್ತ ಬಂದ ಸಮುದಾಯವನ್ನು ಭೇಟಿಯಾದೆವು. ಗೋವಾ ಮೂಲದ ಜಿ.ಎಸ್.ಬಿ.ಗಳ ಆರಾಧನೆಗೊಳಗಾದ ಮಹಾಸತಿಯರು ಕಟಪಾಡಿ ಮತ್ತು ಉಡುಪಿಯಲ್ಲಿದ್ದಾರೆ. ಎಷ್ಟೋ ಮಾಸ್ತಿಯರು ಮೂಲದಲ್ಲಿ ದೈವಗಳಾಗಿದ್ದವರು ದೇವಿಯರಾಗಿ ಭಡ್ತಿಗೊಂಡು ವೈದಿಕರ ಮಂತ್ರೋದಕದಿಂದ ಅಭಿಷೇಕಗೊಳ್ಳುತ್ತಿದ್ದಾರೆ.

ನಮ್ಮ ಸಂಶೋಧನೆಯಲ್ಲಿ ನಮಗೆದುರಾದ ಸ್ವಾರಸ್ಯದ ಅನೇಕ ಘಟನೆಗಳಿವೆ. ಅವುಗಳಲ್ಲಿ ಒಂದು ಘಟನೆ ಹೇಳಲೇಬೇಕೆನಿಸುತ್ತದೆ. ಬೆಳ್ತಂಗಡಿಯಾಚೆ ಪ್ರಯಾಣ ಮಾಡುತ್ತಿದ್ದ ಹಾಗೆ ಮಾರ್ಗದ ಬದಿಯಲ್ಲಿ `ಹಾಡಿದೈವ' ಎಂಬ ಬೋರ್ಡು ಕಂಡವರು ಕಾರು ನಿಲ್ಲಿಸಿ ಹುಡುಕಿ ಹೋದಾಗ ಅಲ್ಲೊಂದು ಸಣ್ಣ ಗುಡಿಯಿದೆ. ಪಕ್ಕದ ಮನೆಯಲ್ಲಿ ಅರ್ಚಕರೂ ಇದ್ದರು. ಅರ್ಚಕರಲ್ಲಿ ಹಾಡಿ ದೈವವನ್ನೊಮ್ಮೆ ನಾವು ನೋಡಬಹುದೇ ಎಂದು ಕೇಳಿಕೊಂಡೆವು. ಅರ್ಚಕರು ಹೆಂಗಸರು ಗುಡಿಯಾಚೆ ಕಾಲಿಡಬಾರದೆಂದೂ ಅದು ಬಹಳ ಕಾರಣಿಕದ ದೈವವೆಂದೂ ಪ್ರಶಂಸೆ ಮಾಡಿದರು. ಇಲ್ಲಿವರೆಗೆ ಬಂದು ಯಾವ ದೈವವೆಂದು ನೋಡದೆ ಹಿಂತಿರುಗುವುದು ದೈವಕ್ಕೆ ಮಾಡಿದ ಅವಮಾನವೆಂದು ತಿಳಿದುಕೊಂಡೆವು. ಶಶಿಲೇಖಾನ ಗಂಡ ಬಾಲಕೃಷ್ಣರು ಅರ್ಚಕರಿಗೆ ಒಂದು ಹಸಿರು ನೋಟು ಕೊಟ್ಟರು. ಅದು ಫಲ ನೀಡಿತು. ಗುಡಿಯ ಬಾಗಿಲು ತೆರೆದು ನೋಡಲು ಅನುಮತಿ ಇತ್ತರು. ನಮ್ಮ ಕಣ್ಣನ್ನು ನಾವೇ ನಂಬಲಿಲ್ಲ. ಅದು ಮಾಸ್ತಿಯ ಎಲ್ಲಾ ಲಕ್ಷಣಗಳುಳ್ಳ ಮಾಸ್ತಿ ವಿಗ್ರಹವಾಗಿತ್ತು. ಆದುದರಿಂದ ಅದರ ಫೋಟೋ ತೆಗೆಯಬೇಕೆಂದು ನಾವು ಸಿದ್ಧರಾದಾಗ ಅರ್ಚಕರು ಒಪ್ಪಲೇ ಇಲ್ಲ. ಏನೇನೋ ಕತೆ ಹೇಳಿ ಹೆದರಿಸಿದರು. ಇನ್ನೊಂದು ಹಸಿರು ನೋಟು ಕೊಡುತ್ತಿದ್ದರೆ ಕೆಲಸ ಸುಗಮವಾಗುತ್ತಿತ್ತು. ಮಾಸ್ತಿ ವಿಗ್ರಹವನ್ನು ಹಾಡಿದೈವವೆಂದೂ ಉಳ್ಳಾಲ್ತಿಯೆಂದೂ ಆರಾಧಿಸುತ್ತೀರಲ್ಲಾ ಇದು ಸರಿಯೇ? ಎಂದು ಕೇಳಿದಾಗ ಅರ್ಚಕರು ಪ್ರಾಮಾಣಿಕವಾಗಿ ಹೇಳಿದ ಮಾತು ನೆನಪಿದೆ. ``ಆಕೆ ಹಾಡಿಯಲ್ಲೆಲ್ಲೋ ಅನಾಥವಾಗಿ ಬಿದ್ದುಕೊಂಡಿದ್ದಳು. ಅವಳನ್ನು ಇಲ್ಲಿ ತಂದು ನಿಲ್ಲಿಸಿದೆ. ರಕ್ಷಿಸಿದೆ. ಈಗ ಅವಳು ನನ್ನನ್ನು ರಕ್ಷಿಸುತ್ತಿದ್ದಾಳೆ. ಇದರಲ್ಲಿ ತಪ್ಪೇನಿದೆ''? ಎಂದು ನಮಗೇ ಸವಾಲು ಎಸೆದರು. ಅಲ್ಲಿಗೆ ನಾವು ತೆಪ್ಪಗಾಗಿ ಮರಳಿದೆವು.

ಕಾಸರಗೋಡಿನ ಕೊಂಡಂಕುಯಿ ಎಂಬಲ್ಲಿ ಮಾಸ್ತಿಕಲ್ಲಿದೆ ಅದಕ್ಕೆ ಆರಾಧನೆಯೂ ಇದೆ ಎಂದು ಪ್ರಾಧ್ಯಾಪಕರೂ ಹಿರಿಯ ಲೇಖಕರೂ ಆದ ಡಾ. ಕೆ. ಕಮಲಾಕ್ಷರು ಹೇಳಿದರು. ಅವರ ಜೊತೆಯಲ್ಲಿ ನಾನು ಹೋದೆ. ಅಂದು ದುರ್ಗಾಷ್ಟಮಿ. ಮಾಸ್ತಿ ಪೂಜೆಗೆ ಭರ್ಜರಿ ತಯಾರಿ ನಡೆಯುತ್ತಿತ್ತುತಯಾರಿ ಮಾಡುವವರೆಲ್ಲ ಹೆಂಗಸರು. ಮನೆಗಿಂತ ಸ್ವಲ್ಪ ದೂರದಲ್ಲಿ ಕಾಡಿನಲ್ಲಿ ಮಾಸ್ತಿಕಲ್ಲು ಇರುವ ಸ್ಥಳಕ್ಕೆ ಗಂಡಸರಿಗೆ ಮಾತ್ರ ಪ್ರವೇಶ. ಮೊದಲ ದಿನವೇ ಗಂಡಸರು ಹೋಗಿ ಕಲ್ಲು ಇರುವ ಸ್ಥಳವನ್ನು ಚೊಕ್ಕಟಗೊಳಿಸಿ ಬಂದಿದ್ದರು. ದುರ್ಗಾಷ್ಟಮಿಯಂದು ಪೂಜೆಗೆ ಗಂಡಸರು ಸಿದ್ಧರಾಗಿ ಹೋಗುವಾಗ ಕಮಲಾಕ್ಷರು ಕೂಡಾ ಹೋಗಿ ಕಲ್ಲಿನ ಮತ್ತು ಅಲ್ಲಿಯ ಪರಿಸರದ ಫೋಟೋ ತೆಗೆದುಕೊಂಡು ಬಂದುದರಿಂದ ಅಷ್ಟು ದೂರ ಹೋದದ್ದು ಸಾರ್ಥಕವಾಯಿತು. ಜಪ್ಪು ಮಾರ್ಕೆಟ್ ಪಕ್ಕದ ಮೈದಾನದಲ್ಲಿ ಕೆಲವು ವರ್ಷಗಳ ಹಿಂದೆ ಸೈಕಲ್ ಬ್ಯಾಲೆನ್ಸ್ ಮಾಡುವವನೊಬ್ಬನಿಗೆ ಕನಸಿನಲ್ಲಿ ಏನೋ ಕಂಡಂತಾಯಿತಂತೆ. ಇಲ್ಲೇ ಒಂದು ದೈವದ ಕಲ್ಲಿದೆ ಎಂದು ಹೇಳಿದನಂತೆ. ಅವನು ತೋರಿಸಿದ ಸ್ಥಳವನ್ನು ಅಗೆದಾಗ ಮಾಸ್ತಿಕಲ್ಲು ಸಿಕ್ಕಿತಂತೆ. ಅಷ್ಟರವರೆಗೆ ಭೂಮಿಯೊಳಗಿದ್ದ ಕಲ್ಲು ಈಗ ಗಾಳಿ, ಮಳೆ, ಬೆಳಕು ಕಾಣುವಂತಾಯಿತು. ಸೈಕಲ್ ಬ್ಯಾಲೆನ್ಸ್ ಮಾಡುವವನೇನೋ ಅದೊಂದು ದೈವದ ಕಲ್ಲೆಂದು ಹೇಳಿದ್ದ. ಆದರೆ ಅದನ್ನು ಪರೀಕ್ಷಿಸಿ ನೋಡುವ ಧೈರ್ಯ ಅಲ್ಲಿನ ನೆರೆಕರೆಯವರಲ್ಲಿ ಇರಲಿಲ್ಲವಂತೆ. ನಾವು ಹೋಗುವಾಗ ಆಕಾಶಕ್ಕೆ ಮುಖ ಮಾಡಿ ಬಿದ್ದುಕೊಂಡಿತ್ತು. ಅದೂ ಕೂಡಾ ಒಕ್ಕೈಮಾಸ್ತಿಯ ಒಂದು ಸುಂದರ ಕೆತ್ತನೆಯ ಕಲ್ಲಾಗಿತ್ತು.

ಕರಂಗಲ್ಪಾಡಿಯ ಮಾಸ್ತಿಕಟ್ಟೆಯಲ್ಲಿ ಪ್ರತಿಷ್ಠಾಪನೆಗೊಂಡ ಕಲ್ಲಿನ ಕತೆಯೂ ಸ್ವಾರಸ್ಯವಾಗಿದೆ. ರಾಜಸ್ಥಾನದ ವ್ಯಾಪಾರಿಯೊಬ್ಬರಿಗೆ ಜೀವನದಲ್ಲಿ ಆಪತ್ತುಗಳೆದುರಾದುವಂತೆ. ಅದಕ್ಕೆ ಪರಿಹಾರವಾಗಿ ಮಾಸ್ತಿಯನ್ನು ಆರಾಧಿಸಬೇಕೆಂದು ಹೇಳಿದರಂತೆ. ವ್ಯಾಪಾರಿ ತಿಂಗಳುಗಳ ಕಾಲ ಹುಡುಕಿದ ಬಳಿಕ ಎಲ್ಲೋ ಬಿದ್ದಿದ್ದ ಕಲ್ಲು ಕಾಣಸಿಕ್ಕಿತು. ಅದನ್ನು ಎತ್ತಿ ನಿಲ್ಲಿಸಿ ಅದಕ್ಕೊಂದು ಕಟ್ಟೆ ಮತ್ತು ಕವಚ ನಿರ್ಮಿಸಿ ಪೂಜೆಗೆ ವ್ಯವಸ್ಥೆ ಮಾಡಿದರಂತೆ. ಆಮೇಲೆ ಅವರು ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಿದರೆಂದೂ ಕುನಿಲ್ ಕಾಂಪ್ಲೆಕ್ಸ್ನಲ್ಲಿರುವ ಸೇಟ್ ಅದರ ಮಾಹಿತಿ ನೀಡಿದರು. ಹೀಗೆ ಮಾಸ್ತಿ ನಂಬಿದವರಿಗೆ ವರ ನೀಡುವ, ಪುತ್ರಭಾಗ್ಯ ನೀಡುವ ದೇವತೆಯಾಗಿ ಕರಾವಳಿಯಲ್ಲೆಲ್ಲ ಪೂಜೆಗೊಳ್ಳುತ್ತಾಳೆ.

ಕಲ್ಲುಗಳೇನೋ ಸುಮಾರು ೨೦೦ಕ್ಕೂ ಹೆಚ್ಚು ಸಿಕ್ಕಿದವು. ಇವುಗಳ ಕಾಲ ಮತ್ತು ಶಿಲ್ಪದ ಬಗ್ಗೆ ನಿರ್ಧರಿಸುವುದಕ್ಕಾಗಿ ಶಿರ್ವದ ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾದ ಮುರುಗೇಶಿಯವರು ಸಹಾಯ ಮಾಡಿದರು. ಹಲವು ಕಡೆಗಳಿಗೆ ನಮ್ಮೊಂದಿಗೆ ಬಂದು ಕಲ್ಲುಗಳ ಕಾಲನಿರ್ಣಯಕ್ಕೆ ಸಹಕರಿಸಿದರು. ಅಷ್ಟು ಮಾತ್ರವಲ್ಲದೆ ಪುಸ್ತಕ ಬಿಡುಗಡೆಯ ಸಮಾರಂಭವನ್ನು ಪಡುಬಿದ್ರೆಯಲ್ಲಿ ವಿನೂತನ ರೀತಿಯಲ್ಲಿ ಮಾಡಿ ನಮ್ಮನ್ನು ಪ್ರೋತ್ಸಾಹಿಸಿದ ರೀತಿಗೆ ನಾವು ಶಿರಬಾಗಿ ನಮಿಸಿದೆವು. ಹೀಗೆ ಒಂದಷ್ಟು ಅನುಮಾನದಿಂದಲೇ ನಾವು ಕೆಲಸ ಪ್ರಾರಂಭ ಮಾಡಿದರೂ ಮೂರು ವರ್ಷಗಳ ಕಾಲ ಸುತ್ತಾಡಿ ವಿಷಯ ಸಂಗ್ರಹಿಸಿ ಕೃತಿರೂಪದಲ್ಲಿ ಬಂದಾಗ ಉಂಟಾದ ತೃಪ್ತಿಯನ್ನು ವರ್ಣಿಸಲು ಪದಗಳಿಲ್ಲ. ಉದ್ದೇಶಕ್ಕಾಗಿ ನಾವು ಹಲವು ಅಮೂಲ್ಯ ಗ್ರಂಥಗಳನ್ನು ಅಧ್ಯಯನ ಮಾಡಿದ್ದು ಕೂಡಾ ಒಂದು ಸೌಭಾಗ್ಯವೆಂದೇ ಭಾವಿಸಿದ್ದೇವೆ. ದಕ್ಷಿಣಕನ್ನಡದ ಮಾಸ್ತಿಕಲ್ಲುಗಳು ಮತ್ತು ವೀರಗಲ್ಲುಗಳೆಲ್ಲವನ್ನೂ ನಾವು ಹುಡುಕಿದ್ದೇವೆಂದು ಹೇಳಲಾರೆವು. ಇನ್ನೂ ಭೂಗತವಾದ ಮತ್ತು ಮರೆಯಲ್ಲಿರುವ ಕಲ್ಲುಗಳಿರಬಹುದು. ಮುಂದೆ ಯಾರಾದರೂ ಅಧ್ಯಯನ ಮಾಡುವವರಿಗೆ ಇದೊಂದು ಆಕರಗ್ರಂಥವಾಗಬಹುದು ಎಂಬ ವಿಶ್ವಾಸ ನಮಗಿದೆ.


(ಮುಂದುವರಿಯಲಿದೆ)

3 comments:

  1. ಬಿ. ಎಮ್. ರೋಹಿಣಿಯವರ ಇನ್ನೊಂದು ಪ್ರತಿಭೆಯ ಪರಿಚಯವಾಯಿತು.

    ReplyDelete
  2. ಮಾಸ್ತಿಕಲ್ಲುಗಳ ಅನ್ವೇಷಣೆಯತ್ತ ಸಾಗುತ್ತಾ ರೂಪ್ ಕುಂವರ್ ’ಸಹಗಮನ’ ವನ್ನು ನೆನಪಿಸಿದ ರೋಹಿಣಿ ಅವರು ಸಂಸ್ಕೃತಿಯ ನೆಪದಲ್ಲಿ ಆಗುವ ಘೋರ ಅಪರಾಧಗಳತ್ತ ಗಮನ ಸೆಳೆದು ನಮ್ಮನ್ನು ಮತ್ತೆ ಚಿಂತನೆಗೆ ಒಯ್ದಿದ್ದಾರೆ. ಅವರ ಬರಹ ಎಂದಿನಂತೆ ಮನೋಜ್ಜವಾಗಿ ಬರುತ್ತಿದೆ.-ಟಿ.ಆರ್.ಭಟ್

    ReplyDelete
  3. ಈ ಪುಸ್ತಕಕ್ಕೆ ಬರೆದ ಅಮೂಲ್ಯ,ಪ್ರಸ್ತಾವನೆಯೇ ಲೇಖಕಿಯ ಪ್ರಚಂಡ ,ಸ್ತ್ರೀಶಕ್ತಿಗೆ, ಮಾನವೀಯ ಮೌಲ್ಯಗಳ ಪ್ರಖರ ವಿಚಾರಧಾರೆಗೆ ಸಾಕ್ಷಿ.

    ReplyDelete