10 June 2016

ಪುಸ್ತಕೋದ್ಯಮದ ನೆಲಕ್ಕೆ ಮೌಲ್ಯ ಕಚ್ಚಿಸುವ ಹನಿಗಳು

ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ
ಹದಿಮೂರನೇ ಅಧ್ಯಾಯ

೧. ಮನೆಗೊಂದು ಗ್ರಂಥಾಲಯಕ್ಕೆ ಒಂದು ದಿಕ್ಸೂಚೀ ತಿದ್ದುಪಡಿ

ಗ್ರಂಥಾಲಯ ತಜ್ಞ ಕೆ.ಎಸ್. ಉಮಾಪತಿಯವರು ೨೪-೧೧-೯೬ರ ಪ್ರಜಾವಾಣಿಯಲ್ಲಿ `ಮನೆಗೊಂದು ಗ್ರಂಥಾಲಯ’ ಲೇಖನ ಪ್ರಕಟಿಸಿದರು.
ಅದಕ್ಕೆ ನಾನು ಬರೆದು ಕಳಿಸಿದ್ದ ಪ್ರತಿಕ್ರಿಯಾತ್ಮಕ ಟಿಪ್ಪಣಿಯನ್ನೂ ಪ್ರಜಾವಾಣಿ ತನ್ನ ೮-೧೨-೯೬ರ ಸಂಚಿಕೆಯಲ್ಲಿ ಪ್ರಕಟಿಸಿತು. ಅದು ಹೀಗಿದೆ: 

ಉಮಾಪತಿಯವರು ಕೊಟ್ಟ ಆದರ್ಶ ಸರಿ. ಆದರೆ ಅನುಸರಣೆಗೆ ಪರಿಸರ ಸರಿಯಿಲ್ಲ ಎಂಬುದಕ್ಕೆ ಪುಸ್ತಕ ವ್ಯಾಪಾರಿಯ ಕೆಲವು ಮಾತುಗಳು:
೧. ಬಹುಸಂಖ್ಯಾತ ಕನ್ನಡ ರತ್ನಕೋಶ ಎಲ್ಲೂ ಸಹಜ ವಿತರಣೆಗ ಬಂದೇ ಇಲ್ಲ. ಅದರ ಹೊಣೆ ಹೊತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆದಿಯಾಗಿ ಎಲ್ಲ ಇಲಾಖೆ, ಅಕಾಡೆಮಿ, ವಿಶ್ವವಿದ್ಯಾನಿಲಗಳ ಪ್ರಕಟಣಾಂಗಗಳು ಸದಾ ಮಾಹಿತಿ ಮಸಕುವುದರಲ್ಲಿ ಮತ್ತು ನೈಜ ವಿತರಣೆಯನ್ನು ಬಿಟ್ಟು, ಪುಸ್ತಕಗಳನ್ನು `ಮುಗಿಸಿಬಿಡುವುದರಲ್ಲಿ’ ಸ್ಪರ್ಧಿಸುತ್ತಿರುತ್ತವೆ. ಯಾವುದೋ ಕೆಟ್ಟ ಗಳಿಗೆಯಲ್ಲಿ ಸರಕಾರ ಕನ್ನಡ ಪ್ರಕಾಶನರಂಗಕ್ಕೆ ಆಧಾರವಾಗಿ ನಿಲ್ಲುವ ನಿರ್ಧಾರ ತಳೆಯಿತು. ಮುಂದೆ ಆ ಅಧಿಕಾರಕ್ಕೆ ಬಂದೆಲ್ಲರೂ ಅಪ್ರಿಯತೆಯ ಭಯದಲ್ಲಿ ಎಂದೂ ಹಿಂದೆ ನೋಡದೆ, ಆ ತಪ್ಪಿಗೆ ಬಲಕೊಡುತ್ತ ಬಂದಿದ್ದಾರೆ. ಅದೇ ನಿಟ್ಟಿನಲ್ಲಿ ಹೊಸ ಇಲಾಖೆ, ಯೋಜನೆಗಳನ್ನು ಹುಟ್ಟಿಸುತ್ತಲೇ ಇದ್ದಾರೆ. ಇಂದು ಅತಿ ಮುದ್ದಿನಿಂದ ಮಗು ಕೆಟ್ಟಂತೇ ಆಗಿದೆ ಕನ್ನಡ ಪುಸ್ತಕೋದ್ಯಮದ ಸ್ಥಿತಿ. ಪ್ರಕಟಣೆಗಳಲ್ಲಿ ಸತ್ತ್ವವಿಲ್ಲ, ಮಾಡಿದ್ದನ್ನು ಜನರಿಗೆ ಮುಟ್ಟಿಸುವಲ್ಲಿ ಆಸಕ್ತಿಯಿಲ್ಲ. ಅಪಕ್ವ ಬರವಣಿಗೆ, ಕುಲಗೆಟ್ಟ ಮುದ್ರಣ, ತಲೆ ಒಡೆಯುವ ಬೆಲೆ, ಅಲ್ಪಸಂಖ್ಯಾತರಾದ ಕೊಂಡೋದುಗರನ್ನು ಕೀಳ್ಗಳೆಯುವ ಧೋರಣೆ ಇಂದು ರೂಢಿಸಿದೆ.

೨. `ಜ್ಞಾನಗಂಗೋತ್ರಿ’ ಅಥವಾ ಕಿರಿಯರ ವಿಶ್ವಕೋಶದ ಪ್ರತಿಗಳೆಲ್ಲ ಮುಗಿದು ಎಷ್ಟೋ ವರ್ಷಗಳಾದುವು. ಕನ್ನಡ ವಿಶ್ವವಿದ್ಯಾನಿಲಯ ತಂದ `ಕಿರಿಯರ ಕರ್ನಾಟಕ’ವೂ ಇಂದು ಅಲಭ್ಯ. ಸುಮಾರು ಇಪ್ಪತ್ತೇಳು ವರ್ಷಗಳ ಹಿಂದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ (ದೊಡ್ಡವರ) ಕನ್ನಡ ವಿಶ್ವಕೋಶ ಯೋಜನೆಯ ಅಂಕುರಾರ್ಪಣೆಯಾಯ್ತು. ಮೊದಲು ಚೆನ್ನಾಗಿಯೇ ಬೆಳೆಯಿತು. ಸಹಜವಾಗಿ ಸರಕಾರದಿಂದ ಹದಿನಾಲ್ಕು ಸಂಪುಟಗಳ ಮೂಲಯೋಜನೆಯ ಬೆನ್ನಿಗೇ ಮೂವತ್ತು ಸಂಪುಟಗಳ ವಿಷಯ ವಿಶ್ವಕೋಶಕ್ಕೂ ಹಣಕಾಸಿನ ವ್ಯವಸ್ಥೆಗಳೇನೋ ಆದವು. ಆದರೆ ಆರಂಭಿಕರ (ದೇಜಗೌ) ಸಂಕಲ್ಪಶುದ್ಧಿಗೆ ಉತ್ತರಾಧಿಕಾರಿಗಳ (ಹಾಮಾನಾ) ನಿರ್ಲಕ್ಷ್ಯ ಕವಿದಿದೆ. ಇಲಾಖೆ ಸಾಮಾನ್ಯ ವಿಶ್ವಕೋಶದಲ್ಲಿ ಹನ್ನೆರಡನೇ ಸಂಪುಟದಿಂದಾಚೆಗೆ, ಅಂದರೆ ಕಳೆದ ಎಂಟುವರ್ಷಗಳಿಂದ ಕುಸುಮಿಸುವುದನ್ನೇ ಮರತಂತಿದೆ. ಆ ಕಾಲದಲ್ಲೇ ವಿಷಯ ವಿಶ್ವಕೋಶದ ಶಾಖೆಯಲ್ಲೂ ಬಂದಿದ್ದ ಏಕೈಕ ಸಂಪುಟ – `ಕರ್ನಾಟಕ,’ ಇಂದು ಅಲಭ್ಯ. ಆ ಶಾಖೆಯಂತೂ ನ್ಯೂನಪೋಷಣೆಯಲ್ಲಿ ಬಳಲಿ, ಇನ್ನೇನು ಸಾಯುವುದರಲ್ಲಿತ್ತು. ಹಾಗಾಗಿ ಈಚೆಗೆ ಅದನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ಕಸಿ ಮಾಡಿದ ಸುದ್ದಿಗಳಿವೆ. ವಿಶ್ವಕೋಶದ ವ್ಯವಸ್ಥಾಪಕರಿಗೆ ದೋಹದ (ಒದೆಯುವವರು) ಮಾಡುವವರು ಬೇಕಾಗಿದ್ದಾರೆ. 
[ಅನಂತರ ಬರೆದದ್ದು:: ವಿಶ್ವಕೋಶದ ಇಲಾಖೆಯಲ್ಲಿ ವಿಜ್ಞಾನ ಸಂಪಾದಕರಾಗಿದ್ದು, ಆಡಳಿತ ವ್ಯವಸ್ಥೆ ಸದಾ ಕಾಲು ಜಗ್ಗುತ್ತಿದ್ದರೂ ಹದಿನಾಲ್ಕು ಸಂಪುಟಗಳವರೆಗೂ ಅಂದರೆ, ಯೋಜನೆ ಪೂರ್ಣಗೊಳ್ಳುವವರೆಗೂ ಸಂಪಾದಕೀಯ ಕೆಲಸ ಮಾಡಿ ನಿವೃತ್ತರಾದ ನನ್ನ ತಂದೆ – ಜಿಟಿನಾರಾಯಣ ರಾವ್, ಅನಂತರ ವಿಶೇಷ ಬೇಡಿಕೆಯ ಮೇರೆಗೆ ಅವು ಮುದ್ರಣವನ್ನೂ ಕಾಣುವವರೆಗೆ ದುಡಿದ ವಿಚಿತ್ರ ಇಲ್ಲಿ ಓದಿ: ಅಧ್ಯಾಯ ೮೯ ವಿಶ್ವಕೋಶದಲ್ಲಿ ಮರುವುಟ್ಟು ]

೩. “ಮಾರುಕಟ್ಟೆಯಲ್ಲಿ ಕನ್ನಡ-ಇಂಗ್ಲಿಷ್ ಶಬ್ದಕೋಶಗಳು ಬೇಕಾದಷ್ಟು ದೊರೆಯುತ್ತವೆ” – ಇದು ತಪ್ಪು ಹೇಳಿಕೆ. ಕಿಟ್ಟೆಲ್ ಮತ್ತದರ ಸಮಕಾಲೀನ (ಶತಮಾನದ ಹಿಂದಿನವು!) ನಿಘಂಟುಗಳ ಛಾಯಾ ಆವೃತ್ತಿಗಳನ್ನು ಬಿಟ್ಟರೆ ಸಿಗುವ ಏಕೈಕ ಕನ್ನಡ-ಇಂಗ್ಲಿಷ್ ಕೋಶ ಐಬಿಎಚ್ಚಿನದು. ಮರಿಯಪ್ಪ ಭಟ್ಟರು ಪರಿಷ್ಕರಿಸಿ ಕೊಟ್ಟ ನಾಲ್ಕು ಸಂಪುಟಗಳ ಕಿಟ್ಟೆಲ್ ಕೋಶ ಇಂದು ಅಲಭ್ಯ. ಭಾಷಾ ರಾಜಕೀಯದ ಗೊಂದಲದಲ್ಲಿ ಮದ್ರಾಸು ವಿಶ್ವವಿದ್ಯಾನಿಲಯಕ್ಕೆ ಅದನ್ನು ಮರುಮುದ್ರಿಸುವ ಆಸಕ್ತಿ ಇಲ್ಲ. ಅಲ್ಲಿನದು ಎಷ್ಟಿದ್ದರೂ ಕೂಡಿಕೆಯ ಸಂಬಂಧ ಎಂದು ಕರ್ನಾಟಕಕ್ಕೆ ಬಂದರೆ, ಇಲ್ಲಿ ಅದರ ಗುಣವರಿತು ವರಿಸುವ ಗಂಡುಗಳೇ ಇಲ್ಲ!!

ಇಂಗ್ಲಿಷ್ ಕನ್ನಡ ನಿಘಂಟು ಎಂದರೇ ಡಿಕೆಬಿ ಎನ್ನುವಂತಿದೆ ಮಾರುಕಟ್ಟೆ. ಡಿಕೆ ಭಾರದ್ವಾಜ ಕೋಶಕ್ಕಿಂತ ಎಷ್ಟೋ ಮೇಲ್ಮಟ್ಟದ ನಿಘಂಟೊಂದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇತ್ತು ಎನ್ನುವುದೇ ಬಲು ದೊಡ್ಡ ವಿದ್ಯಾವರ್ಗಕ್ಕೆ ಇಂದು ತಿಳಿದಿಲ್ಲ. ಅದು ಇದ್ದಾಗಲೂ ಪ್ರಸಾರಾಂಗ ಮರುಮುದ್ರಣ ಮತ್ತು ವಿತರಣೆಯಲ್ಲಿ ಸದಾ ತೂಕಡಿಸುತ್ತಿತ್ತು. ಅದನ್ನು ಹಲವು ಸಂಪುಟಗಳಿಗೆ ವಿಸ್ತರಿಸಿ, ಪರಿಷ್ಕರಿಸಿ ಪ್ರಕಟಿಸುವ ಯೋಜನೆಯಲ್ಲಿ ಮೊದಲ ಸಂಪುಟ – A ಯಿಂದ D ವರೆಗೆ ಅರ್ಥಾತ್ Admission ನಿಂದ Delayವರೆಗೆ (?) ಹೊರಹಾಕಿದ ಮೇಲಂತೂ ಏಕ ಸಂಪುಟ ಕೊಡುವುದನ್ನು ಪೂರ್ತಿ ಕೈ ಬಿಟ್ಟಂತಿದೆ. ಹಾಗೇಂತ ಪರಿಷ್ಕೃತ ಆವೃತ್ತಿಯನ್ನು ಪೂರ್ಣಗೊಳಿಸಲು ಅವಸರಿಸುವುದು ಇದರ ಜಾಯಮಾನದಲ್ಲೇ ಇಲ್ಲ. ಏಳು ವರ್ಷಗಳ ಅನಂತರ ಈಚೆಗಷ್ಟೇ ಎರಡನೇ ಸಂಪುಟ – E ಯಿಂದ L ವರೆಗೆ ಅರ್ಥಾತ್ Eagerness ನಿಂದ Lethargy ವರೆಗೆ ಹೊರಹಾಕಿದೆ. ಸರಣಿ ಪೂರ್ಣಗೊಳಿಸುವ ಸಂಕಲ್ಪ ಶಕ್ತಿ ಯಾರಿಗೂ ಇದ್ದಂತಿಲ್ಲ. M ಅಂದರೆ More ಕೇಳಿದವರಿಗೆ Zzzzz ಗೊರಕೆ ಶಬ್ದ ಕೇಳಿಸುತ್ತದೆ. ಇಲ್ಲೇ ಕನ್ನಡ - ಕನ್ನಡ, ಹಲವು ಸಂಪುಟಗಳ ಬೃಹತ್ ಕೋಶದ ಬಗ್ಗೆ ಒಂದು ಮಾತು. ಕಸಾಪದ ಈ ಯೋಜನೆ ತೀರಾ ಸೀಮಿತ ಚಂದಾದಾರರಿಗೇ ಒಂದಿದ್ದರೆ ಇನ್ನೊಂದಿಲ್ಲ ಎಂಬ ಅವ್ಯವಸ್ಥೆಯಲ್ಲಿ ಮುಟ್ಟಿತು. ಮೊದಲ ಮುದ್ರಣ ಮಾರಿ ಮುಗಿದಿದೆ. ಮರುಮುದ್ರಣ, ಸಮರ್ಥ ವಿತರಣೆ ನಿಭಾಯಿಸುವ ಆಸಕ್ತಿ, ಛಾತಿ ಪರಿಷತ್ತಿಗೆ ಬರಲಿದೆಯೇ?
[ಅನಂತರ ಬರೆದದ್ದು: ಇಂಕನಿ ಪರಿಷ್ಕರಣ ಇಲಾಖೆಯನ್ನೇ ಬರ್ಖಾಸ್ತು ಮಾಡಿದರು. ಆದರೆ ಅದರ ಸದಸ್ಯರು ಅದಕ್ಕೂ ಮೊದಲೇ ತಮ್ಮ ಕಾರ್ಯವನ್ನು ಪೂರೈಸಿದ್ದರಿಂದ ನಿಧಾನಕ್ಕೆ ಕಾಲಾನುಕ್ರಮದಲ್ಲಿ ಎಲ್ಲಾ ಸಂಪುಟಗಳೇನೋ ಬೆಳಕು ಕಂಡವು. ಮುಂದುವರಿದು, ಮುದ್ರಣ ತಂತ್ರಜ್ಞಾನದ ಬಲದಲ್ಲಿ ನಾಲ್ಕೂ ಸಂಪುಟಗಳನ್ನು ಒಂದೇ ಸಂಪುಟದಲ್ಲಿ ಕೊಡುವುದನ್ನೂ ಪ್ರಸಾರಾಂಗ ಮಾಡಿತು. ಇವೆಲ್ಲ ಏನಿದ್ದರೂ `ಟೈಲರ್ ಮೇಡ್ ಜಂಟಲ್‍ಮ್ಯಾನ್’ ಎಂಬ ಜಾಣ್ಣುಡಿಯಂತೆ ಬುದ್ಧಿ ಕಟ್ಟುವ ಕೆಲಸವಲ್ಲ, ವಿಶ್ವವಿದ್ಯಾನಿಲಯ ಮಾಡುತ್ತಿರುವುದು ಕೇವಲ ಪುಟ ಹೊಂದಾಣಿಕೆಯ ಜಾಣ್ಮೆ! ಬೆಳೆಯುತ್ತಿರುವ ಭಾಷೆಗೆ ಸಮಜೋಡಿಯಾಗಿ ನಿರಂತರ ನಡೆಯಬೇಕಿದ್ದ ಹೂರಣ ಪರಿಷ್ಕರಣಕ್ಕೆ ಇಲಾಖೆಯೇ ಇಲ್ಲವಾಗಿದೆ – ಬಾಳ್ ಕನ್ನಡ ತಾಯೀ.]

೪. ಭೂಪಟ, ನಕ್ಷೆಗಳು ಬಿಡಿ, ವಿದ್ಯಾರ್ಥಿ ಆವಶ್ಯಕತೆಯ ಒಂದು ವಿಶ್ವಾಸಾರ್ಹ ಶಾಲಾ ಅಟ್ಲಾಸೂ ಕರ್ನಾಟಕದಲ್ಲಿಲ್ಲ. ಪ್ರಸ್ತುತ ಲೇಖಕರು ಉದಾಹರಿಸಿದ ಆಕ್ಸ್‍ಫರ್ಡ್ ಸ್ಕೂಲ್ ಅಟ್ಲಾಸಿನಲ್ಲೇ ಕರ್ನಾಟಕಕ್ಕಾಗಿ ಒಂದು ಆವೃತ್ತಿ ತಂದಿದ್ದರು. ಅದರಲ್ಲವರು ಮೈಸೂರು-ಮಡಿಕೇರಿಯ ಡಾಮರು ಮಾರ್ಗ ಕಿತ್ತು, ರೈಲು ಹಳಿ ಜೋಡಿಸಿದ್ದರು. ತಪ್ಪಿನರಿವಾದ ಮೇಲೂ ಹಲವು ಮರುಮುದ್ರಣ ಹಾಗೇ ಮಾಡಿ, ಮಾರಿದ್ದಾರೆ – ಗೊತ್ತೇ?
[ಅನಂತರ ಬರೆದದ್ದು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಡಿರೇಖೆಗಳ ಬಗ್ಗೆ ನಾವು ಭಾರೀ ಮಾತಾಡುತ್ತೇವೆ, ಅದಕ್ಕಾಗಿ ಜಾಗತಿಕ ಆಯಾಮವನ್ನೇ ತೆಗೆದುಕೊಳ್ಳಬಹುದಾದ ಯುದ್ಧಕ್ಕೂ ಇಳಿಯುತ್ತೇವೆ. “ಹೊರಗೆ ಮಿಂದು ಒಳಗೆ ಮೀಯದವರ ಕಂಡು..” ಎಂಬ ದಾಸರ ಮಾತಿನಂತೆ ರಾಷ್ಟ್ರಾಂತರೀಯದಲ್ಲಿ ಇಂದೂ (– ಅಂತರ್ಜಾಲದಲ್ಲಿ ಜಗತ್ತಿನ ಯಾವ ಮೂಲೆಯ ನೆಲವನ್ನೂ ಇದ್ದಂತೆ ನಕ್ಷೆಯಾಗಿ ತೋರಬಲ್ಲ ತಂತ್ರಜ್ಞಾನ ಉಚಿತವಾಗಿ ಲಭ್ಯ ಇರುವಾಗಲೂ) ಅದದೇ ತಪ್ಪು ಮುದ್ರಣಗಳು ಮುಂದುವರಿದೇ ಇವೆ!!]

೫. ಕನ್ನಡ ಲೇಖಕರು ಯಾರು – ಏನು ಕೋಶದ ಕೊರತೆ ತೀವ್ರವಾಗಿದೆ. ಖಾಸಗಿ ಪ್ರಕಾಶನದಲ್ಲಿ ವಿಳಾಸದರ್ಶಿನಿ ಕ್ವಿಝ್ ಮಟ್ಟದವು ತೀರಾ ಕಳಪೆಯಾಗಿ ಬಂದದ್ದುಂಟು. ಮೈಸೂರು ವಿಶ್ವವಿದ್ಯಾನಿಲಯದ `ಆಧುನಿಕ ಕನ್ನಡ ಬರಹಗಾರರು’, ವಿಶೇಷ ಪುರಸ್ಕೃತ ಕೆಲವು ಲೇಖಕರ ಬಗ್ಗೆ ಅಲ್ಲಿ ಇಲ್ಲಿ ಬಂದ ಕೈ ಹೊತ್ತಗೆಗಳು ಏನೂ ಸಾಲವು. ಕನಿಷ್ಠ ದಿ. ಚಂದ್ರರಾಜಸೆಟ್ಟಿ ಸಿದ್ಧಕಟ್ಟೆಯವರ `ಬರಹಗಾರರ ಬಳಗ’ದ ಆಶಯ ಗ್ರಹಿಸಬಲ್ಲವರು ಇದ್ದಾರೆಯೇ?
[ಅನಂತರ ಬರೆದದ್ದು: ನವಕರ್ನಾಟಕ ಪಬ್ಲಿಕೇಶನ್ಸ್ ಈ ಕೊರತೆಯನ್ನು ಹೋಗಲಾಡಿಸುವಂತೆ ಬಹಳ ಗಂಭೀರವಾಗಿ ಸಾಹಿತ್ಯ ಸಂಪದ ಮಾಲಿಕೆಯನ್ನು ಹೊರತರುತ್ತಿದೆ]
೬. ಇಂದು ಸರಕಾರಿ ಅರ್ಥಾತ್ ಸಾರ್ವಜನಿಕ ಗ್ರಂಥಾಲಯಗಳೆಂದರೆ ಹಲವು ವಿಧದ ಸಗಟು ಖರೀದಿ ಯೋಜನೆಗಳ ಕಸ ತೊಟ್ಟಿಯಾಗಿದೆ. ಅವು ಸದಸ್ಯರ ಪ್ರಾದೇಶಿಕ ಬೇಡಿಕೆಗಳನ್ನೂ ಪೂರೈಸಲಾರದಷ್ಟು ಪರತಂತ್ರವಾಗಿವೆ. ಮಂಗಳೂರಿನಲ್ಲಿ ಬಿಜಾಪುರ ಜಾನಪದ ಸಿಗಬಹುದು, ಯಕ್ಷಗಾನ ಇರಬೇಕೆಂದಿಲ್ಲ.

೭. ವಿಶ್ವವಿದ್ಯಾನಿಲಯ ಮೊದಲಾಗಿ ಸರಕಾರಿ ಪ್ರಕಟಣಾಂಗಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವ ಸಲಹೆ ಸರಿ. ಆದರೆ ಯಶಸ್ಸಿಗೆ ಭಗೀರಥನೇ ಬರಬೇಕು. ಇಂದು ಗುಣಮಟ್ಟಕ್ಕೂ ಈ ಸಂಸ್ಥೆಗಳು ವಿಶ್ವಾಸಾರ್ಹವಾಗಿ ಉಳಿದಿಲ್ಲ. ಪ್ರತಿ ಪುಸ್ತಕವನ್ನೂ ಸಂಶಯಿಸಿಯೇ ಕೊಳ್ಳುವುದೊಳಿತು. ಹಿರಿಯ ಪ್ರೊಫೆಸರರೊಬ್ಬರು ತಮ್ಮ ವಿದ್ಯಾರ್ಥಿ ದೆಸೆಯ ತಪ್ಪು ಟಿಪ್ಪಣಿಗಳನ್ನೇ ಸಾಹಿತ್ಯ ಪರಿಷತ್ತಿನ ಮೂಲಕ ಪ್ರಕಟಿಸಿಕೊಂಡದ್ದು ಮರೆಯುವುದುಂಟೇ?

ಈ ಟಿಪ್ಪಣಿಗಳು ಮನೆಗೊಂದು ಗ್ರಂಥಾಲಯಕ್ಕೆ ಹೋರಾಡಬಲ್ಲವರಿಗೆ ವಾಸ್ತವದ ದಿಕ್ಸೂಚಿಯಾಗಲಿ. 

೨. ಕೊಳೆಯುವ ಪುಸ್ತಕ ರಾಶಿ:

ಕಸಾಪ ಅಧ್ಯಕ್ಷರು ಕನ್ನಡಿಗರು ಕೊಳ್ಳುಗರಲ್ಲ ಎಂಬರ್ಥದಲ್ಲಿ ಪತ್ರಿಕಾ ಹೇಳಿಕೆ ಕೊಟ್ಟರು. ಅದಕ್ಕೆ ಪ್ರತಿಕ್ರಿಯೆಯಾಗಿ ನಾನು `ಪ್ರಜಾವಾಣಿ’ಗೆ ೧೪-೯-೧೯೯೭ರಂದು ಕಳಿಸಿ, ಪ್ರಕಟವಾಗದ ಪತ್ರ. 
ಕನ್ನಡ ಓದುಗರು ಬೆಂಗಳೂರಿನಿಂದ ಹೊರಗೆ ಎಷ್ಟೋ ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ ಎಂಬ ಸತ್ಯ ಪರಿಷತ್ತಿಗೆ ತಿಳಿದಂತಿಲ್ಲ. ಇಲ್ಲವಾದರೆ ಹೊಸ ಪ್ರಕಟಣೆಗಳ ಬಗ್ಗೆ ಜನರಿಗೆ ತಿಳಿಸುವ ಕ್ರಮ, ಒಟ್ಟು ಪ್ರಕಟಣೆಗಳು ನಗರದ ಹೊರಗೆ ಮಾರಲು ಕ್ರಮಗಳನ್ನೆಲ್ಲ ಕೈಗೊಳ್ಳುತ್ತಿರಲಿಲ್ಲವೇ? ರಾಜ್ಯದ ಎಲ್ಲ ಮೂಲೆಗಳಲ್ಲೂ `ಅಘೋಷಿತ ಪ್ರತಿನಿಧಿ’ಗಳಾಗಿ ದಿನದ ಹನ್ನೆರಡು ಗಂಟೆ ದುಡಿಯುವ ಪುಸ್ತಕ ವ್ಯಾಪಾರಿಗಳು, ಪರಿಷತ್ತು ಕಾಲಕಾಲಕ್ಕೇನು ಪ್ರಕಟಿಸುತ್ತದೆ, ಮಾರಾಟಕ್ಕೆ ಹಾಕುತ್ತದೆ ಎಂದು ತನ್ನಷ್ಟಕ್ಕೇ ತಿಳಿದುಕೊಳ್ಳಲು ತ್ರಿಕಾಲ ಜ್ಞಾನಿಗಳಲ್ಲ!

ಪರಿಷತ್ತಿನ ವ್ಯವಹಾರದ ಕುರಿತು ನಾಲ್ಕು ಮಾತು: ಇವರು ತಮ್ಮ ಪ್ರಕಾಶನದಲ್ಲಿ ಮೊದಲು ಹೆಚ್ಚಿನ ಬೇಡಿಕೆಯವಾದ ನಿಘಂಟುಗಳನ್ನು ಮಾತ್ರ, ಈಗ ಗದ್ಯಾನುವಾದಗಳ ಮಾಲೆಯನ್ನೂ ಸೇರಿಸಿ ವ್ಯಾಪಾರಿಗಳಿಗೆ ೧೦% ರಿಯಾಯ್ತಿಯಲ್ಲಿ ಕೊಡುತ್ತಿದ್ದಾರೆ. ಕಟ್ಟುವ, ಕೂಲಿಯ ಮತ್ತು ಸಾಗಣೆಯ ಖರ್ಚು ವ್ಯಾಪರಸ್ಥರದ್ದೇ. ಇನ್ನು ನಮ್ಮಿಂದ ಪುಸ್ತಕ ಯಾವುದೇ ಇರಲಿ, ಕೊಳ್ಳುವುದು ವಿದ್ಯಾಸಂಸ್ಥೆಯಾದರೆ ಅಥವಾ ಇನ್ಯಾರೋ ಮಾಮೂಲಿ ದೊಡ್ಡ ಗಿರಾಕಿಯಾದರೆ, ನಾವು ಕನಿಷ್ಠ ಶೇಕಡಾ ಆರೂಕಾಲಾದರೂ ರಿಯಾಯಿತಿ ಕೊಡಲೇಬೇಕು. ಸಾಲದ್ದಕ್ಕೆ ಕೊಳ್ಳುವಲ್ಲಿ ನಗದು ತೊಡಗಿಸಿ, ಸಾಂಸ್ಥಿಕ ಮಾರಾಟಗಳಲ್ಲಿ ಕಡ ಕೊಡಲೇಬೇಕು. ಮೇಲೆ ವ್ಯಾಪಾರಿಯ ದೈನಂದಿನ ನಿರ್ವಹಣಾ ವೆಚ್ಚ ಲೆಕ್ಕ ಹಾಕಿದರೆ ಕಸಾಪ ವ್ಯಾಪಾರಿಗಳ ನಷ್ಟದಲ್ಲಿ ಕನ್ನಡ ಸೇವೆ ಮಾಡುವುದು ಸ್ಪಷ್ಟ.

“ಸರಕಾರದಿಂದ ಸಹಾಯಧನ ಪೀಂಕಿಸಿ, ವ್ಯಾಪಾರಿಗಳನ್ನು ನಷ್ಟದ ವ್ಯವಹಾರಕ್ಕೆ ಅಥವಾ ಮುದ್ರಿತ ಬೆಲೆಯನ್ನು ತಿದ್ದಿ ಮಾರಿ ಅಪ್ರಾಮಾಣಿಕ ಎಂದು ಕರೆಸಿಕೊಳ್ಳುವ ಸ್ಥಿತಿಗೆ ತಳ್ಳಿ, ಕೊನೆಗೆ ತನಗೆ ನಷ್ಟಾ ನಷ್ಟಾ ಎಂದು ಹಲುಬುವವರಿಗೆ ಒಂದು ಕಿವಿ ಮಾತು – ಮಾರಲು ಗೊತ್ತಿಲ್ಲದವರು ಪ್ರಕಟಿಸಬಾರದು; ಕನಿಷ್ಠ ಇತರರನ್ನು ದೂರಬಾರದು.

೩. ಸೇವೆ ಮತ್ತು ಪರಿಷತ್ತು:

೨೭-೮-೧೯೭೯ರಂದು ಕಸಾಪ ಅಧ್ಯಕ್ಷರಿಗೆ ನಾನು ಬರೆದ ಒಂದು ಪತ್ರದ ಆಯ್ದ ಭಾಗ:
“ನಾನು ಪುಸ್ತಕದ ಅಂಗಡಿ ತೆರೆದು ನಾಲ್ಕು ವರ್ಷಗಳಾಗುತ್ತ ಬಂತು. ಅಂದಿನಿಂದಲೂ `ನಮ್ಮ’ ವ್ಯವಹಾರ `ನಿಮ್ಮೊಡನೆ’ ನಡೆದೇ ಇದೆಯಾದರೂ ನಿಮ್ಮಲ್ಲಿಂದ ಬರುವ ಪತ್ರಗಳ ಮೇಲಿನ ವಿಳಾಸ ಬರೆಯುವ ಪರಿ ಹೀಗಿದೆ: ಲಲಿತ ಪ್ರಕಾಶನ, ಅತ್ರಿ ಬುಕ್ ಡಿಪೋ, ಬಾಲಮಟ್ಟ, ಮಂಗಳೂರು. ವಾಸ್ತವದಲ್ಲಿ `ಲಲಿತ ಪ್ರಕಾಶನ’ ನನಗೆ ತಿಳಿದೇ ಇಲ್ಲ. ನನ್ನ ಮಳಿಗೆ ಹೆಸರು ಅತ್ರಿ ಬುಕ್ ಸೆಂಟರ್. ಇರುವ ಸ್ಥಳ `ಬಲ್ಮಠ.’

“ನೀವು ನಮಗೆ ಕೊಡುವ ವ್ಯಾಪಾರೀ ವಟ್ಟಾ ದರದ ಕುರಿತು ಕೆಲವು ವಿಚಾರಗಳು. ಪರಿಷತ್ತು ಕಡಿಮೆ ಬೆಲೆ ಆವೃತ್ತಿಗಳನ್ನು ತರುವುದು ಸರಿ. ಇದಕ್ಕೆ ನಿಮಗೆ ಸರಕಾರೀ ಸಹಾಯಧನ ಬಂದೇ ಇರುತ್ತದೆ. ಇತ್ತ ಮುದ್ರಿತ ಬೆಲೆ ಇರುವುದರಿಂದ ಕೊಳ್ಳುಗರಿಗೆ ಕಡಿಮೆ ಬೆಲೆಗೆ ಪುಸ್ತಕ ಸಿಕ್ಕುವುದೂ ಖಾತ್ರಿ. ಮತ್ತೆ ನಿಮ್ಮ ಉದ್ದೇಶವೂ ಅದೇ ಎನ್ನುವುದೂ ಒಪ್ಪುವಂತದ್ದೇ. ಆದರೆ ನಿಮ್ಮ ಮಾರಾಟ ಮಳಿಗೆಯ ಹೊರಗೆ, ಮುಖ್ಯವಾಗಿ ಬೆಂಗಳೂರಿನಿಂದ ದೂರದಲ್ಲಿರುವ ನಾವು ನಿಮ್ಮ ಪ್ರತಿನಿಧಿಗಳಂತೇ ಆ ಪುಸ್ತಕಗಳನ್ನು ಓದುಗರಿಗೆ ಮುಟ್ಟಿಸಿದರೆ ನಮಗೆ ಬಂದದ್ದು ಏನು? ನೀವು ನಮಗೆ ಕೊಡುತ್ತಿರುವ ೧೦% ಸಾಕೇ? ಲಗತ್ತಿಸಿದ ನನ್ನ ೧೪-೯-೧೯೭೮ರ ಇನ್ನೊಂದೇ ಪತ್ರ ನೋಡಿ. ನೂರರ ಸಂಖ್ಯೆಯಲ್ಲಿ ಖಾತ್ರಿ ಮತ್ತು ಚುರುಕಾಗಿ ಮಾರಿಹೋಗುವ ಪಠ್ಯಪುಸ್ತಕಗಳಿಗೂ ೧೫% ವಟ್ಟಾ ಬರುತ್ತದೆ. ಇನ್ನು ಪುಸ್ತಕ ಬಿಡುಗಡೆ, ಭವಿಷ್ಯದ ಯೋಜನೆಗಳ ಬಗ್ಗೆ ನೀವು ನಮ್ಮನ್ನು ಸದಾ ಕತ್ತಲಲ್ಲೇ ಇಡುತ್ತೀರಿ. ಆಯಿತು, ಕನಿಷ್ಠ ಪತ್ರಿಕೆಗಳಲ್ಲಾದರೂ ಜಾಹೀರಾತು ಕೊಟ್ಟು, ಆಸಕ್ತರಿಗೆ ಕೊಳ್ಳಲು ಪ್ರೇರಣೆ ಕೊಡುವ ಶ್ರಮವನ್ನೂ ಮಾಡದೇ ನೀವು ಪುಸ್ತಕ ಪ್ರಕಟಿಸುವುದು ಯಾವ ಪುರುಷಾರ್ಥಕ್ಕೆ? ದಯವಿಟ್ಟು ಸೇವೆಯೊಡನೆ ವ್ಯಾವಹಾರಿಕವಾಗಿಯೂ ನಿಮ್ಮ ಯೋಜನೆಗಳು ಫಲಪ್ರದವಾಗುವಂತೆ 
೧. ಯುಕ್ತ ಪ್ರಚಾರ ಕಾರ್ಯ ನಡೆಸಿ. 
೨. ಕನಿಷ್ಠ ೨೫% ವ್ಯಾಪಾರಿ ವಟ್ಟ ವ್ಯವಸ್ಥೆ ಮಾಡಿ ಅಥವಾ ಖರ್ಚೆಲ್ಲ ಕಳೆದು ಕನಿಷ್ಠ ೧೦% ಆದರೂ ವ್ಯಾಪಾರಿಗೆ ಉಳಿಯುವಂತೆ ನೋಡಿಕೊಳ್ಳಿ. ಯಾಕೆಂದರೆ ಕಟ್ಟು ಮಾಡುವ ವೆಚ್ಚ, ಸಾಗಣೆ ವೆಚ್ಚ, ಬ್ಯಾಂಕ್ ವೆಚ್ಚ, ಕೂಲಿ ವೆಚ್ಚಗಳನ್ನೆಲ್ಲ ಕೊಟ್ಟು ಆತ ಇವನ್ನು ಮಾರಲು ಉಳಿಯಬೇಕಲ್ಲ! ನೀವು ವಿಷಯತಜ್ಞರಿಂದ ಯುಕ್ತ ಗೌರವಧನ ಕೊಟ್ಟು ಬರೆಸುತ್ತೀರಿ, ಮುದ್ರಕರಿಗೆ ಯುಕ್ತ ಶುಲ್ಕ ಕೊಡಲೇಬೇಕು, ಮಾರುವ ವೃತ್ತಿಪರರನ್ನು ಮಾತ್ರ ಯಾಕೆ ದೂರಮಾಡುತ್ತೀರಿ? ಲೇಖಕರಿಗೆ ಹೆಚ್ಚುವರಿ ಬಹುಮಾನ ಯೋಜನೆ, ಮುದ್ರಕನಿಗೆ ಪ್ರಶಸ್ತಿ ಎಲ್ಲ ಇದ್ದಂತೆ ನಮಗೂ ಹೆಚ್ಚಿಗೆ ಕೊಡಿ ಎಂದು ಕೇಳುತ್ತಿಲ್ಲ. ಉತ್ಸಾಹದಿಂದ ತರಿಸಿ, ದಾಸ್ತಾನಿಟ್ಟು ಮಾರುವಷ್ಟು ವಟ್ಟಾದರ ನಿಗದಿಸಿ.” 

ಅಧ್ಯಕ್ಷರಿಂದ ೩೧-೮-೧೯೯೮ರ ಉತ್ತರ ಬಂತು. ಮುಖ್ಯ ಪಾಠ ಹೀಗಿದೆ:
“ನೀವು ಪ್ರಸ್ತಾವಿಸಿದ ರಿಯಾಯಿತಿ ಸಂಬಂಧೀ ವಿಷಯವನ್ನು ಪರಿಶೀಲಿಸುತ್ತಿದ್ದೇವೆ. ಪ್ರಕಾಶಕರ ದೃಷ್ಟಿಯಿಂದ ಮಾರಾಟ ಕ್ರಮವನ್ನು ಪರ್ಯಾಲೋಚಿಸುವ ಅಗತ್ಯವಿದೆಯೆಂದು ನಿಮ್ಮ ಪತ್ರ ಓದಿದ ಮೇಲೇ ಮನವರಿಕೆಯಾಗಿದೆ. ಇನ್ನು ಮುಂದಿನ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಯುಕ್ತ ನಿರ್ಧಾರವನ್ನು ಕೈಗೊಳ್ಳಲಾಗುವುದು.” ಆದರೆ ಅಧ್ಯಕ್ಷರ ಆಶ್ವಾಸನೆಗಳು ಆಚರಣೆಯಲ್ಲಿ ಬರಲೇ ಇಲ್ಲ. ನಿದರ್ಶನವಾಗಿ ೨೪-೧೧-೧೯೭೯ರಂದು ನಾನು ನೇರ ಅಧ್ಯಕ್ಷರಿಗೆ ಬರೆದ ಪತ್ರ ನೋಡಿ: 

ಉಲ್ಲೇಖ: ಮಾರಾಟ ವಿಭಾಗಕ್ಕೆ ನನ್ನೆರಡು ಪತ್ರ ಮತ್ತು ಇಂದು ನಿಮಗೇ ಮಾಡಿದ ಎರಡು ದೂರವಾಣಿ ಕರೆಗಳು. ರಾಜ್ಯೋತ್ಸವಕ್ಕೂ ಮುನ್ನ ನಿಘಂಟುಗಳೊಡನೆ ಕೆಲವು ಪುಸ್ತಕ ಕೋರಿ ಪತ್ರಿಸಿದ್ದೆ. ಪ್ರತಿಕ್ರಿಯೆ ಬರಲಿಲ್ಲ. ನಮ್ಮನ್ನು ಅಣಕಿಸುವಂತೆ ರಾಜ್ಯೋತ್ಸವದಂದು ನಿಮ್ಮ ಜಿಲ್ಲಾ ಶಾಖೆ, ನಗರ ಗ್ರಂಥಾಲಯದಲ್ಲಿ ಒಂದು ಪುಸ್ತಕ ಪ್ರದರ್ಶನ ಮಾರಾಟ ವ್ಯವಸ್ಥೆಮಾಡಿತ್ತು. ಅದರ ಜಾಹೀರಾತಿನ ವೈಖರಿ ನೋಡಿ – “ಈ ಪ್ರದರ್ಶನದಲ್ಲಿ ನಗರದ ಅನೇಕ ಪುಸ್ತಕ ವ್ಯಾಪಾರಿಗಳು ಭಾಗವಹಿಸುವರಲ್ಲದೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಗಳನ್ನೂ ಪ್ರದರ್ಶಿಸಲಾಗುವುದು. ಕಸಾಪ ಪ್ರಕಟಣೆಗಳಾದ ಸಂಕ್ಷಿಪ್ತ ನಿಘಂಟನ್ನು ಪ್ರತಿಯೊಂದರ ರೂ ಐದರಂತೆಯೂ ರತ್ನಕೋಶವನ್ನು ರೂ ಎರಡರಂತೆಯೂ ಮಾರಲಾಗುವುದು. ಅನುಕ್ರಮವಾಗಿ ರೂ ೧೩ ಮತ್ತು ರೂ ೬ರ ಬೆಲೆ ಬಾಳುವ ಈ ಹೊತ್ತಗೆಗಳನ್ನು ಇಷ್ಟೊಂದು ಕಡಿಮೆ ದರದಲ್ಲಿ ಈ ಸಂದರ್ಭದಲ್ಲಿ ಮಾತ್ರ ಮಾರಲಾಗುವುದು...’

ನಾನು ಎರಡೂ ಕೋಶಗಳನ್ನು ಇದುವರೆಗೆ ಮುನ್ನೂರು ನಾನೂರಕ್ಕೂ ಮಿಕ್ಕ ಪ್ರತಿಗಳನ್ನು ಆರ್ಥಿಕ ನಷ್ಟದಲ್ಲೇ ಆದರೂ ಐದು, ಎರಡು ರೂಪಾಯಿಗೇ ಮಾರಿದ್ದೇನೆ. ಈ ಜಾಹೀರಾತು ನನ್ನಂಥವರಿಗೆ ಅಪಮಾನಕಾರೀ ಅಲ್ಲವೇ? ಇದರ ಕುರಿತ ನಮ್ಮ ಪ್ರತಿಭಟನೆಗೆ, ವ್ಯವಸ್ಥಾಪಕ – ಗ್ರಂಥಪಾಲರು, ಅಜ್ಞಾನಪ್ರದರ್ಶನ ಮಾಡಿದರು. ಹೋಗಲಿ, ಸಕಾಲಕ್ಕೆ ನನ್ನ ಬೇಡಿಕೆಯನ್ನಾದರೂ ನೀವು ಪೂರೈಸಿದ್ದರೆ, ನನ್ನಲ್ಲೂ ನಿಘಂಟುಗಳ ದಾಸ್ತಾನಿರುತ್ತಿತ್ತು. ಆಗ ಅಲ್ಲಿ ನಾನೂ ಅದೇ ಬೆಲೆಗೆ ಮಾರಿ ತೋರಿಸಬಹುದಿತ್ತು. ಅದಕ್ಕೂ ಅವಕಾಶ ಮಾಡಿಕೊಡಲಿಲ್ಲ. ಅದು ಮುಗಿದ ಕತೆ ಬಿಡಿ. ಆದರೆ ಇನ್ನೂ ನಿಮ್ಮಿಂದ ಪುಸ್ತಕ ಮಾತ್ರ ಬಂದೇ ಇಲ್ಲ! ಅದನ್ನೇ ಕುರಿತು ಬರುವ ಗಿರಾಕಿಗಳಿಗೆ ಇಂದು ನಾಳೆ ಹೇಳಿ ಸಾಕಾಗಿ ಇಂದು ಎರಡೆರಡು ಬಾರಿ ದೂರವಾಣಿ ಕರೆ ಮಾಡುವ ಸಾಹಸ ಮಾಡಿದ್ದೂ ಹೇಗೆ ವ್ಯರ್ಥ ಆಯಿತು ನೋಡಿ. ಅಪರಾಹ್ನ ಮೂರೂಕಾಲಕ್ಕೆ ಮಾಡಿದಾಗ ಅತ್ತಣಿಂದ ಧ್ವನಿ “ಮಾರಾಟ ವಿಭಾಗದವ್ರೂ ನಾಕ್ ಗಂಟೆಗ್ ಬರ್ತಾರೆ, ಆಗ ಮಾಡಿ” ಎಂದಿತು. ಸರಿ, ನಾನು ನಾಲ್ಕೂ ಇಪ್ಪತ್ತಕ್ಕೆ ಮಾಡಿದಾಗ ಅದೇ ಧ್ವನಿ “ಅವ್ರು ಬರ್ಲೇ ಇಲ್ಲ” ಎಂದಷ್ಟೇ ಹೇಳಿತು. ತಾನು ವಿಷಯ ಗ್ರಹಿಸಿ, ದಾಟಿಸುವ ಉತ್ಸಾಹ ತೋರಿಸದೇ ಇದ್ದದ್ದು ಕನ್ನಡದ ದೇಗುಲಕ್ಕೆ ಶೋಭೆ ತರುವಂತಿರಲಿಲ್ಲ. ಈ ಹಿಂದೆ ರಿಯಾಯಿತಿ ಸಾಲದು, ಮಾಹಿತಿ ಕೊಡುತ್ತಿಲ್ಲ ಎಂದೆಲ್ಲ ದೂರಿಕೊಂಡಿದ್ದೆ. ನೀವು ಪರಿಶೀಲಿಸುವ ಭರವಸೆಯನ್ನೂ ಕೊಟ್ಟಿದ್ದಿರಿ. ಆದರೆ ಅದು ಕಾರ್ಯಾಚರಣೆಗೆ ಬರಲಿಲ್ಲ. ಕನಿಷ್ಠ ನಾವು ಕೇಳಿದ್ದವನ್ನಾದರೂ ಸಕಾಲಕ್ಕೆ ಕೊಡುವ ಕೃಪೆ ಮಾಡಿ ನಮ್ಮ ಉಳಿದಷ್ಟು ಮರ್ಯಾದೆಯನ್ನಾದರೂ ಕಾಪಾಡುತ್ತೀರಾ?”

ಇದಕ್ಕೂ ಪ್ರತಿಕ್ರಿಯೆ ಬಾರದಾಗ ಇನ್ನೊಮ್ಮೆ ಪತ್ರಿಕೆಗೆ ಪತ್ರ ಕಳಿಸಿದೆ. ಆದರೆ ಅದೂ ಅಪ್ರಕಟಿತವಾಗಿಯೇ ಉಳಿಯಿತು. ಇದು ಅಂದಿನ ಪತ್ರಿಕಾ ಹೊಣೆಗಾರಿಕೆಯ ಬಗ್ಗೆಯೂ ಸಾಕಷ್ಟು ಹೇಳುತ್ತದೆ ಎಂದೇ ನನ್ನ ಭಾವನೆ. ಇರಲಿ, ಪತ್ರದ ಸಾರಾಂಶ ಇಷ್ಟು: 
`ವಿಶ್ವವಿದ್ಯಾನಿಲಯಗಳು, ಸಾಹಿತ್ಯ ಪರಿಷತ್ತು ತಮ್ಮ ಪ್ರಸಾರಾಂಗಗಳನ್ನು ಭಾಷೆ ಮತ್ತು ವಿಷಯಗಳ ಪ್ರಸಾರಕ್ಕಾಗಿ ಇರಿಸಿಕೊಂಡಿವೆ ಹೊರತು ಬರಿಯ ಲಾಭ ಅಥವಾ ಸಂಸ್ಥೆಯ ಪ್ರಚಾರಕ್ಕಾಗಿ ಅಲ್ಲ. ಇದಕ್ಕೆ ತದ್ವಿರುದ್ಧವಾಗಿ ಕಸಾಪದೊಡನೆ ನನಗಾದ ಎರಡು ಘಟನೆಗಳನ್ನು ಸೂಕ್ಷ್ಮದಲ್ಲಿ ಹೇಳಿದ್ದೆ. ಅಂದರೆ ಮೊದಲನೆಯದಾಗಿ ಸುಲಭ ಬೆಲೆಯ ಪುಸ್ತಕ ಮಾಡಿ ವ್ಯಾಪಾರಿಗಳ ನಷ್ಟದಲ್ಲಿ ಹೆಸರು, ಪ್ರಚಾರ ಪರಿಷತ್ತು ಪಡೆಯುವ ವಿಚಾರ. ಎರಡನೆಯದಾಗಿ ರಾಜ್ಯೋತ್ಸವದ ಸಂದರ್ಭದಲ್ಲಿ ಮಾಡಿದ ವಿಶ್ವಾಸದ್ರೋಹ. ನನ್ನ ಅಹವಾಲುಗಳು ಕಸಾಪದ ಕಬು ಸೇರಿದಂತೇ ಇನ್ನಷ್ಟು ದೊಡ್ಡ ಕಬುವಿನೊಡನೆ ಸಜ್ಜುಗೊಂಡ ಪತ್ರಿಕಾ ಸಂಪಾದಕರ ಕೋಣೆಯಿಂದ ಹೊರಗೆ ಬರಲೇ ಇಲ್ಲ! ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ! 

೪. ಪೂರಕವಾಗಿ ಸಂಪಾದಕೀಯ ಉದ್ಧರಣ

ಡಿವಿಜಿ `ವೆಂಕಟನಾರಣಪ್ಪ’ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ: “ಯಾವ ಸಾರ್ವಜನಿಕ ಸಂಸ್ಥೆಯೇ ಆಗಲಿ ಚಿರಕಾಲ ಬಾಳಿ ಕೃತಕೃತ್ಯವೆನಿಸಬೇಕಾದರೆ ಅದಕ್ಕೆ ಮೊದಲು ಬೇಕಾದದ್ದು ತನ್ನಿಷ್ಠರಾದ ಕಾರ್ಯಕರ್ತರು. ಒಬ್ಬನಂತೂ ಹಗಲೂ ರಾತ್ರಿಯೂ ಸಂತತವಾಗಿ ದುಡಿಯುತ್ತಿರಬೇಕು. ಆ ಒಬ್ಬ ಕಾರ್ಯಕರ್ತನು ಮೂಲ ಸ್ತಂಭದಂತೆ ಇರುತ್ತಾನೆ. ಮಿಕ್ಕವರು ಅವನನ್ನು ಅವಲಂಬಿಸಿಕೊಂಡಿರುತ್ತಾರೆ. ಪರಿಷತ್ತಿಗೆ ಹೀಗೆ ೧೯೧೫ರಿಂದ ಇಪ್ಪತ್ತು ವರ್ಷಕಾಲ ಏಕಪ್ರಕಾರವಾದ ನಿಷ್ಠೆಯಿಂದ ಕಾರ್ಯಕರ್ತರಾಗಿ ನಿಂತು ಅವಲಂಬನ ಕೊಟ್ಟವರು ಬೆಳ್ಳಾವೆ ವೆಂಕಟನಾರಣಪ್ಪನವರು. ಅವರು ಬಹುಕಾಲ ಕಾರ್ಯದರ್ಶಿ ಆಗಿದ್ದರು. ಕೆಲವು ಕಾಲ ಕೋಶಾಧಿಕಾರಿಯಾಗಿದ್ದರು. ಇನ್ನು ಕೆಲವು ಕಾಲ ಪತ್ರಿಕೆಯ ಸಂಪಾದಕರಾಗಿದ್ದರು. ಆದರೆ ಅವರಿಗೆ ಗೊತ್ತಾದ ಅಧಿಕಾರ ಸ್ಥಾನವಿರಲಿ ಇಲ್ಲದಿರಲಿ, ಅವರು ಒಂದೇ ರೀತಿಯ ಶ್ರದ್ಧೋತ್ಸಾಹಗಳಿಂದ ಕೆಲಸ ಮಾಡಿದವರು. ಪರಿಷತ್ತು ಎಂದರೆ ವೆಂಕಟನಾರಣಪ್ಪನವರು. ಈ ತೆರನ ತದೇಕನಿಷ್ಠೆ ನಮ್ಮ ದೇಶದಲ್ಲಿ ಈಗ ಕಾಣಬರುತ್ತಿಲ್ಲ. ತನ್ನಿಷ್ಠನಾದ ಕಾರ್ಯಕರ್ತನೊಬ್ಬನಿಲ್ಲದ ನಮ್ಮ ಎಲ್ಲ ಸಂಸ್ಥೆಗಳೂ ಕೆಲವು ಕಾಲದ ಅನಂತರ ಕುಸಿದು ಬೀಳುತ್ತವೆ.” 

೫. ಸಾಂಸ್ಥಿಕ ಖರೀದಿ ಹೇಗಿರಬೇಕು?

ನವಮಂಗಳೂರು ಪೋರ್ಟ್ ಟ್ರಸ್ಟ್ ನಡೆಸುತ್ತಿರುವ ಪ್ರೌಢಶಾಲೆ, ಹೃಸ್ವರೂಪದಲ್ಲಿ ಎನ್ನೆಂಪೀಟೀ ಶಾಲೆಯಿಂದ ೧೯೯೯ರ ಅಕ್ಟೋಬರಿನಲ್ಲಿ ಹೀಗೊಂದು ಪತ್ರ ಬಂತು: “ಲಗ್ತೀಕರಿಸಿದ ಪಟ್ಟಿಯಲ್ಲಿರುವ ಹಿಂದಿ ಪುಸ್ತಕಗಳನ್ನು ಒಂದು ವಾರದೊಳಗೆ ಸರಬರಾಜು ಮಾಡಬೇಕಾಗಿ ಕೋರಲಾಗಿದೆ. ಪುಸ್ತಕಗಳನ್ನು ಸರಬರಾಜು ಮಾಡಿದ ೧೫ ದಿನಗಳೊಳಗೆ ಬಿಲ್ಲಿನ ಮೊಬಲಗನ್ನು ಚೆಕ್ಕಿನ ಮೂಲಕ ಪಾವತಿಸಲಾಗುವುದು.” ಈ ಶಾಲೆಯೊಡನೆ ವ್ಯವಹಾರ ನನಗೆ ಹೊಸದಲ್ಲ. ಹಾಗಾಗಿ ನಾನು ತುಸು ದೀರ್ಘವಾಗಿಯೇ ಹೀಗೆ ಉತ್ತರಿಸಿದೆ:
ಸುಮಾರು ಎರಡು ತಿಂಗಳ ಹಿಂದೆ ನಿಮ್ಮ ಸಂಸ್ಥೆಯ ಅಧ್ಯಾಪಿಕೆಯರು – ಅಂದರೆ, ವಿಷಯ ತಜ್ಞರು ನಮ್ಮಲ್ಲಿಗೆ ಬಂದು, ಅರ್ಧ ದಿನವನ್ನೇ ವೆಚ್ಚಿಸಿ, ಶ್ರಮಿಸಿ, ಪುಸ್ತಕ ಆರಿಸಿದರು. ಜೊತೆಗೇ ಬಂದಿದ್ದ ಗ್ರಂಥಪಾಲೆ ಅವುಗಳ್ಯಾವವೂ ನಿಮ್ಮಲ್ಲಿರುವ ಪುಸ್ತಕಗಳ ಮರುಕಳಿಕೆಯಾಗದಂತೆ ಎಚ್ಚರವನ್ನೂ ವಹಿಸಿದ್ದರು. ಆ ತಂಡಕ್ಕೆ ಸಂಸ್ಥೆಯ ಗ್ರಂಥಾಲಯ ಅನುದಾನದ ಅಂದಾಜು ಮಾತ್ರ ಇತ್ತು. ಹಾಗಾಗಿ “ಸ್ಪಷ್ಟ ನಿರ್ದೇಶನ ಹೊಂದಿದ ಔಪಚಾರಿಕ ಆದೇಶ ಆಡಳಿತ ಮಂಡಳಿಯಿಂದ ಬರುತ್ತದೆ. ಸದ್ಯ ಆಯ್ದ ಪುಸ್ತಕಗಳನ್ನು ಪ್ರತ್ಯೇಕವಿಡಿ, ನಮಗೆ ಅವುಗಳ ಪಟ್ಟಿ ಕೊಡಿ” ಎಂದು ಕೇಳಿ ಒಯ್ದರು. ತುಸು ತಡವಾಗಿ ನಿಮ್ಮ ಹಿಂದಿ ಅಧ್ಯಾಪಿಕೆ ಬಂದು, ಅವರದ್ದಷ್ಟು ಆಯ್ಕೆ ಮಾಡಿ, ಪಟ್ಟಿ ಒಯ್ದಿದ್ದರು. ಒಂದು ವಾರದೊಳಗೆ ನಿಮ್ಮ ಔಪಚಾರಿಕತೆ, ಈ ವ್ಯವಹಾರ ಮುಗಿಯಬೇಕಿತ್ತು. ಆದರೆ ಹಾಗೆ ಆಗಲೇ ಇಲ್ಲ. ಈಗ ತಿಂಗಳುಗಳೇ ಉರುಳಿದ ಮೇಲೆ ನಿಮ್ಮ ಆದೇಶ ಬರುತ್ತಿದೆ. ಅದೂ ಹೇಗೆ – ನಾವು ಒಂದು ವಾರದೊಳಗೇ ಪುಸ್ತಕ ಸರಬರಾಜು ಮಾಡಬೇಕು. ನೀವು ಅನಂತರ ೧೫ ದಿನಗಳೊಳಗೆ ಪಾವತಿ ಕೊಡುವ ಆಶ್ವಾಸನೆ!

ಮೊದಲೇ ಕಂಡಂತೆ, ಹಿಂದಿನ ವರ್ಷಗಳಲ್ಲೂ ನಾನು ಅನುಭವಿಸಿದಂತೆ, ಜವಾಬ್ದಾರಿಯ ಮಿತಿ ಮತ್ತು ಕಾಲ ಪಾಲನೆಯ ಶಿಸ್ತು ನಿಮಗಿಲ್ಲ. ಇದ್ದದ್ದೇ ಆದರೆ ವಿಷಯ ತಜ್ಞರು ಆರಿಸಿದ ಪುಸ್ತಕಗಳ ಪಟ್ಟಿ ನಿಮಗೆ ಯಾಕೆ? ವಾರದೊಳಗೆ ಬರಬೇಕಿದ್ದ ಆದೇಶಕ್ಕೆ ಎರಡು ತಿಂಗಳ ವಿಳಂಬ ಯಾಕೆ? ನಿಮ್ಮ ಕರಾರುಗಳು ನನಗೆ ಸ್ವೀಕಾರಾರ್ಹವಲ್ಲ. ಆದರೆ ಈಗಲೂ ನಿಮಗೆ ಪುಸ್ತಕ ಮಾರುವುದನ್ನು ನಾನು ನಿರಾಕರಿಸುವುದಿಲ್ಲ. ನಿಬಂಧನೆ ಮಾತ್ರ ನನ್ನವು. ಅವೇನೆಂದರೆ ೧. ನಗದು ಅಥವಾ ಚೆಕ್ಕಿನ ಜೊತೆಯಲ್ಲಿ ನಿಮ್ಮ ಆಯ್ಕೆ ಸಮಿತಿ ಬರಬೇಕು. ೨. ತಿಂಗಳ ಹಿಂದೆ ಆಯ್ದ ಪುಸ್ತಕಗಳಲ್ಲಿ ಹೆಚ್ಚಿನವು ಮತ್ತೆ ಸಿಗಬಹುದು. ನಿಮ್ಮ ನಿಧಾನದ್ರೋಹ ನೋಡಿ ಅಂದೇ ನಾನವನ್ನು ಮತ್ತೆ ಮಾರಾಟ ಮುಕ್ತಗೊಳಿಸಿದ್ದೆ. ಹಾಗಾಗಿ ಇಂದು ಕೆಲವು ಅಲಭ್ಯವೂ ಇರಬಹುದು. ಅಂಥಲ್ಲಿ ಹೊಸತು ಬಂದವನ್ನೂ ಸಮಿತಿ ಧಾರಾಳ ಆಯ್ದುಕೊಳ್ಳಬಹುದು. ಒಟ್ಟಾರೆ ಸದ್ಯ ಲಭ್ಯ ಪುಸ್ತಕಗಳಲ್ಲಿ ನಿಮ್ಮ ಅಗತ್ಯ ಪೂರೈಸಿಕೊಳ್ಳುವುದಿದ್ದರೆ ಕೂಡಲೇ ನಗದು ಬಿಲ್ಲಿನೊಡನೆ ಪುಸ್ತಕ ಕೊಡುವುದು ನನಗೆ ಸಂತೋಷದ ಕೆಲಸವೇ ಆಗಿದೆ. ೩. ನಿಮ್ಮ ಸಂಸ್ಥೆಯೊಡನೆ ಸಾಲದ ವ್ಯಾಪಾರ ಮಾಡಲಾರೆ – ಗಮನಿಸಿ. ನನ್ನ ಪತ್ರವನ್ನು ಅಲ್ಲಿಗೆ ನಿಲ್ಲಿಸದೇ ಮುಂದುವರಿಸಿದೆ....

ವಿದ್ಯಾಸಂಸ್ಥೆಗಳು ಲೋಕಾನುಭವಕ್ಕೆ ಕುರುಡಾಗಿ, ವ್ಯವಹಾರ ಪ್ರಪಂಚದ ನಿಷ್ಠುರತೆಯನ್ನು ಗ್ರಹಿಸದ ಸ್ಥಿತಿಗೆ ತಲಪಿರುವುದು ಇಂದಿನ ದುರಂತ. ಇದಕ್ಕೆ ನಿಮ್ಮದೂ ಒಂದು ಸಾಕ್ಷಿ. ಪುಸ್ತಕ ಒಯ್ಯಲು ಬಂದ ನಿಮ್ಮ ಸಹಾಯಕರ ಮೂಲಕ, ಹಿಂದೆ ಹಿಂದಿ ಅಧ್ಯಾಪಿಕೆ ಮುಲಕವೂ ನಾನು ಪರಿಸ್ಥಿತಿಯನ್ನು ಸ್ಪಷ್ಟಗೊಳಿಸಿದ್ದೆ. ನೀವು ಫೋನಿಸಿದಾಗಲೂ ವಿವರಿಸಿದ್ದೆ. ನೀವು ಅವನ್ನೆಲ್ಲ ಅವಗಣಿಸಿ ಇಂದು `ಒಂದು ವಾರದೊಳಗೆ ಪುಸ್ತಕ ಒದಗಿಸಿ, ೧೫ ದಿನದೊಳಗೆ ಪಾವತಿ’ ಎಂದು ಪತ್ರ ಬರೆದಿದ್ದೀರಿ! ಸಾಲದ್ದಕ್ಕೆ ಇಂದು ವಿಜ್ಞಾನ ಅಧ್ಯಾಪಿಕೆಯನ್ನು ಪ್ರತ್ಯೇಕ ಕಳಿಸಿ, ಮತ್ತೆ ಪುಸ್ತಕಗಳನ್ನು ಆರಿಸಿಟ್ಟು, ಪಟ್ಟಿ ತರಲೂ ಸೂಚಿಸಿದ್ದೀರಿ! ನೋಯಿಸುವುದು ನನ್ನ ಉದ್ದೇಶವಲ್ಲ – ವಸ್ತುನಿಷ್ಠ ವಿಶ್ಲೇಶಣೆ ಕಟುವಾಗುವುದು ಅನಿವಾರ್ಯ ಎಂದೇ ಪತ್ರ ಮುಗಿಸಿದ್ದೆ.

ಒಂದು ತಿಂಗಳು ಕಳೆದು ಟ್ರಸ್ಟಿನ ಕಾರ್ಯದರ್ಶಿಗಳಿಂದ ಪತ್ರ ಬಂತು. ಬಹುಶಃ ಮಂಡಳಿಯ ಕೆಲವು ತಲೆಗಳು ಒಟ್ಟಾಗಿ ಮಂತ್ರಾಲೋಚನೆ ನಡೆಸಿದ್ದಿರಬೇಕು. “ನೀವು ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಿಗೆ ಬರೆದ ಪತ್ರವನ್ನು ನೋಡಿ ಆಶ್ಚರ್ಯವೂ ಆಯಿತು, ಬೇಸರವೂ ಆಯಿತು. ನಿಮ್ಮ ಪತ್ರವನ್ನು ನೋಡುವಾಗ ಸರಕಾರಿ ಸಂಸ್ಥೆಗಳೊಂದಿಗೆ ವ್ಯವಹಾರವನ್ನು ಮಾಡುವ ಅನುಭವದ ಕೊರತೆ ಎದ್ದು ಕಾಣುತ್ತದೆ. ನಮ್ಮ ಸಂಸ್ಥೆ ಕೇಂದ್ರ ಸರಕಾರದ ಅನುದಾನವನ್ನು ಪಡೆಯುವ ಸಂಸ್ಥೆಯಾದ್ದರಿಂದ ಕೆಲವೊಂದು ನೀತಿ ಸಂಹಿತೆಗಳನ್ನು ಪಾಲಿಸಬೇಕಾದ್ದರಿಂದ ನೀವು ತಿಳಿಸಿರುವಂತೆ ಪುಸ್ತಕಗಳನ್ನು ನಾವು ಗುರುತಿಸಿದ ಬಳಿಕ ಕೆಲವೇ ದಿನಗಳಲ್ಲಿ ಕೊಂಡು ಹೋಗಲು ಅನನುಕೂಲವಾಗಿರುತ್ತದೆ. ಈ ವಿಚಾರ ತಮಗೆ ತಿಳಿದಿಲ್ಲವೆಂದು ನಾವು ಭಾವಿಸುತ್ತೇವೆ. ಪುಸ್ತಕಗಳನ್ನು ಕೊಂಡು ಹೋಗುವಾಗ ನಮ್ಮ ನಿಬಂಧನೆಗಳನ್ನು ತಮಗೆ ಪಾಲಿಸಲು ಆಗದಿದ್ದರೆ, ನೀವು ನಮಗೆ ಪತ್ರ ಮುಖೇನ ನಿಮ್ಮ ಅನನುಕೂಲತೆಗಳನ್ನು ತಿಳಿಸಬಹುದು. ಆದರೆ ಈ ರೀತಿಯಾಗಿ ಬರೆಯುವ ಆವಶ್ಯಕತೆ ಇದ್ದಿರುವುದಿಲ್ಲ. ಆದುದರಿಂದ ನಿಮ್ಮ ಪತ್ರದಲ್ಲಿ ವಿಷಯಗಳನ್ನು ನೋಡಿದಾಗ ತಮಗೆ ವ್ಯವಹಾರಜ್ಞಾನ ಇರುವುದಿಲ್ಲವೆಂದು ನಾವು ಭಾವಿಸುತ್ತೇವೆ. ಇನ್ನು ಮುಂದೆ ನಾವು ನಿಮ್ಮಲ್ಲಿ ಯಾವ ರೀತಿಯ ವ್ಯವಹಾರವನ್ನೂ ಮಾಡಲು ಬಯಸುವುದಿಲ್ಲ.”

ಹಾಗೊಂದು ಪತ್ರ ಪಡೆದ ಮೇಲೆ ಸುಮ್ಮನಿರುವುದಾಗದೇ ನಾನು ಬರೆದ ಮಾರೋಲೆ ನೋಡಿ: ನನ್ನ ವ್ಯವಹಾರಜ್ಞಾನವನ್ನು ನೀವು ಪ್ರಶ್ನಿಸಿದ್ದೀರಿ. ಮತ್ತೆ ಕೇಂದ್ರ ಸರಕಾರದಿಂದ ಅನುದಾನಿತ ಸಂಸ್ಥೆ ಎಂದ ಮಾತ್ರಕ್ಕೆ ಪಾವಿತ್ರ್ಯವನ್ನೂ ವಸ್ತುಸ್ಥಿತಿ ಮೀರಿದ ದೊಡ್ಡಸ್ತಿಕೆಯನ್ನೂ (ದೀನಸ್ಥಿತಿಯೂ ಇರಬಹುದು) ನಿಮ್ಮ ಸಂಸ್ಥೆಗೆ ಆರೋಪಿಸಿಕೊಂಡಿದ್ದೀರಿ. ಸರಳವಾಗಿ ಹೇಳುತ್ತೇನೆ – ಪ್ರಜಾಪ್ರಭುತ್ವದಲ್ಲಿ ಸರಕಾರಕ್ಕೊಂದು ಖಾಸಗಿಗೊಂದು ಎಂಬ ನ್ಯಾಯಬೇಧವಿಲ್ಲ. ವ್ಯವಹಾರ ಪ್ರಪಂಚದಲ್ಲಿ ಖಾಸಗಿ ವ್ಯಕ್ತಿ ಅಥವಾ ಸಂಸ್ಥೆ ಸಂಚಯಿಸಿದ ನಿಧಿ ಸ್ವತಂತ್ರವಾಗಿ ವಿದ್ಯಾಸಂಸ್ಥೆಗಳಲ್ಲಿ ಹೂಡಿಕೆ ಕಾಣಬಹುದು. ಅಥವಾ ಪರೋಕ್ಷ ಮಾರ್ಗದಲ್ಲಿ ಸರಕಾರದ ಅನುದಾನದ ಹೆಸರಿನಲ್ಲಿ ಮತ್ತೆ ವಿದ್ಯಾಸಂಸ್ಥೆಗಳಲ್ಲಿ ತೊಡಗಲೂಬಹುದು. ತತ್ತ್ವತಃ ವಿದ್ಯೆ, ವಿದ್ಯಾರ್ಥಿ, ಸವಲತ್ತು, ಸಿಬ್ಬಂದಿ ಮತ್ತು ಅಂತಿಮ ಪರಿಣಾಮ ಎರಡರಲ್ಲೂ ಒಂದೇ ಇರತಕ್ಕದ್ದು. ನೀತಿ ಸಂಹಿತೆಗಳಲ್ಲಿ ಸರಿ, ತಪ್ಪು ಇರಬಹುದು; ಶ್ರೇಷ್ಠ ಕನಿಷ್ಠ ಸಾಧ್ಯವಿಲ್ಲ. ಆಡಳಿತದಾರರ ದಕ್ಷತೆಯಿಂದ ಏರುಪೇರುಗಳು ಆಗಬಹುದು. ಹಾಗೇ ಅನುಭವಿಸುವವರ ಮಿತಿಯಲ್ಲಿ ಸೆಡವು ಸಂಭ್ರಮಗಳು ಹಣಿಕಬಹುದು. ಅದರೆ ಇವು ಯಾವವೂ ಖಾಯಂ ಅಲ್ಲ. ಕೋಲಾರದ ಸರಕಾರೀ ದೊಡ್ಡಿ ಎನ್ನಿಸಿಕೊಂಡಿದ್ದ ಕಾಲೇಜು, ಪ್ರೊ| ರಾಮಕೃಷ್ಣ ಉಡುಪರ ಪ್ರಾಂಶುಪಾಲತ್ವದಲ್ಲಿ ರ್‍ಯಾಂಕುಗಳ ಸುಗ್ಗಿ ಕಂಡದ್ದು ನಿಮಗೆ ಗೊತ್ತಿಲ್ಲವೇ? (ಇಲ್ಲವಾದರೆ ೨೦-೧೧-೧೯೯೮ರ ಸುಧಾ ನೋಡಿ) ಹಾಗೇ ಅತ್ಯುನ್ನತ ವಿದ್ಯಾಮಟ್ಟ ಪ್ರದರ್ಶಿಸುವ ಸಂಸ್ಥೆಗಳಲ್ಲಿ ನಪಾಸಾಗಿ ಹೊರಬೀಳುವವರೂ ಇದ್ದಾರೆ ಎಂಬುದು ನಿಮಗೆ ಗೊತ್ತೇ ಇದೆ. ಈಗ ನೇರ ಗ್ರಂಥಾಲಯ ಖರೀದಿಯ ವಿಚಾರಕ್ಕೆ ಬನ್ನಿ. 

ಮೊದಲು ನನ್ನ ಸುಮಾರು ೨೫ ವರ್ಷದ ಗಾಢ ಪುಸ್ತಕಾನುಭವ ಕೋಶದಿಂದ ಎರಡೇ ತುಣುಕುಗಳು ನೋಡಿ: (ಹೆಚ್ಚಿನವು ಬೇಕಾದರೆ ಇನ್ನೊಂದು ತಿಂಗಳಲ್ಲಿ ಪ್ರಕಟವಾಗಲಿರುವ ನನ್ನ ಪುಸ್ತಕ – `ಪುಸ್ತಕ ಮಾರಾಟ ಹೋರಾಟ’ದಲ್ಲಿ ಓದಿಕೊಳ್ಳಬಹುದು) ಉದಾಹರಣೆ ೧. ಕಾಸರಗೋಡಿನ ಕೇಂದ್ರೀಯ ವಿದ್ಯಾಲಯ ಸಂ.೧ ತನ್ನ ಮೂರು ಅಧ್ಯಾಪಕರನ್ನು ೨೭-೧೧-೧೯೯೮ರಂದು ಕೇವಲ ಪರಿಚಯ ಪತ್ರದೊಂದಿಗೆ ಕಳಿಸಿತು. ಅವರು ೧೨೦೦ಕ್ಕೂ ಮಿಕ್ಕು ಮೌಲ್ಯದ ಪುಸ್ತಕಗಳನ್ನು, ತಮ್ಮ ಲೆಕ್ಕ ಖಾತೆಗಳಿಗೆ ಹೊಂದುವಂತೆ ನನ್ನಿಂದ ಸಾಲದ ಲೆಕ್ಕದಲ್ಲಿ ಬಿಲ್ಲುಗಳನ್ನು ಮಾಡಿಸಿಕೊಂಡು, ಸ್ವತಃ ಹೊತ್ತೊಯ್ದರು. ತನಿಖೆ, ದಾಖಲಾತಿ ಎಲ್ಲ ಮುಗಿಸಿಕೊಂಡು ಪೂರ್ಣಪಾವತಿಯನ್ನು ೧೦-೧೨-೧೯೯೮ರ ಬ್ಯಾಂಕ್ ಡ್ರಾಫ್ಟ್ ಮೂಲಕ ಕಳಿಸಿಕೊಟ್ಟರು. ಉದಾಹರಣೆ ೨. ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕರಿಗೆ ಪುಸ್ತಕ ಬೇಕು. ಆದರೆ ಆಡಳಿತ ಕಛೇರಿಯ ಅದಕ್ಷತೆ ನನಗೆ ಸದಾ ಹಿಂಸೆಯುಂಟುಮಾಡುತ್ತಿತ್ತು. ಅನಿವಾರ್ಯವಾಗಿ ಈಗ ನಿಮ್ಮ ಮೇಲೆ ಹೇರಿದ ನಿಬಂಧನೆಗಳನ್ನು ಅವರಿಗೂ ಒಡ್ಡಿದೆ. ಅಧ್ಯಾಪಕರು ಗಟ್ಟಿ ನಿಂತರು. ಈಗ ನಿಗದಿತ ಮೊತ್ತಕ್ಕೆ ಚೆಕ್ ಮುಂದಾಗಿ ತಯಾರಾಗಿ ಅಧ್ಯಾಪಕರ ಕೈ ಸೇರುತ್ತದೆ. ಅವರು ಅದನ್ನು ತಂದು ಬೇಕಾದ ಪುಸ್ತಕಗಳಿಗೆ ನನ್ನಲ್ಲಿ ವಟಾಯಿಸಿಕೊಳ್ಳುತ್ತಾರೆ. ಬಿಲ್ಲು, ದಾಖಲಾತಿ ಮುಂತಾದ ಔಪಚಾರಿಕತೆಗಳು ಪಾವತಿಯನ್ನು ಅನುಸರಿಸುವುದು ಇಲ್ಲಿ ಸಂಪ್ರದಾಯವೇ ಆಗಿದೆ!

ಕಳೆದ ಹಲವು ವರ್ಷಗಳಿಂದ ನಿಮ್ಮ ಸಂಸ್ಥೆ ನನ್ನೊಡನೆ ವ್ಯವಹರಿಸಿದೆ. ಅಲ್ಲೆಲ್ಲೂ (ಈಗಲೂ) ನಾನು ವಿಳಂಬಿಸಿದ, ಸತಾಯಿಸಿದ, ವಂಚಿಸಿದ ಸಂದರ್ಭಗಳಿಲ್ಲ – ಗಮನಿಸಿದ್ದೀರಾ? ಪ್ರತಿ ಸಲವೂ ನನ್ನ ಹಣ ತೊಡಗಿರುವ ಮಾಲಿನಲ್ಲಿ, ನೀವು ನಿಮಗೆ ಬೇಕಾದವನ್ನು ಮಾತ್ರ ಆರಿಸಿ, ನಿಮ್ಮದೇ ಅನುಕೂಲ ಮತ್ತು ಸಮಯದಲ್ಲಿ ಪಾವತಿ ಕೊಡುತ್ತ ಬಂದಿದ್ದೀರಿ. ವಾಸ್ತವದಲ್ಲಿ ನಾನು ಪುಸ್ತಕ ಕೊಡುವವನು, ನೀವು ಹಣ ಕೊಡುವವರು, ಅಂದರೆ ನಾವು ಸಮಾನ ಯೋಗ್ಯತೆಯವರು. ಇಲ್ಲಿ ಯಾರು ನಿಧಾನಿಸಿದರೂ ಅದು ಇನ್ನೊಬ್ಬರ ಔದಾರ್ಯದಲ್ಲಿ ಎನ್ನುವುದು ಸ್ಪಷ್ಟ. ನಿಮ್ಮವರು ಬಂದಾಗಲೆಲ್ಲ ನನ್ನ ಮಿತಿಯಲ್ಲಿ ನಾನೆಲ್ಲ ಪುಸ್ತಕಗಳನ್ನು ಪ್ರದರ್ಶಿಸಿದ್ದೇನೆ. ನಿಮ್ಮವರ ಸೂಚನೆಗಳನ್ನು ಕೂಡಲೇ ಪಾಲಿಸಿದ್ದೇನೆ. ಪಟ್ಟಿ ಮಾಡಿಕೊಟ್ಟು ವಾರಗಟ್ಟಳೆ ಅವುಗಳನ್ನು ಪ್ರತ್ಯೇಕ ತೆಗೆದಿಟ್ಟು, ನಿಮ್ಮ ಕಛೇರಿ ಸಹಾಯಕ ಬಂದು ಕೇಳಿದ ಕೂಡಲೇ ಬಿಲ್ಲು ಮಾಡಿ ಕೊಡುತ್ತಿದ್ದೆ. ಮತ್ತೆ ಸಹನೆಯಿಂದ ದಿನಗಳೆಣಿಸಿ, ಎಷ್ಟೋ ಬಾರಿ ನೆನಪು ಹುಟ್ಟಿಸಿ, ಪಾವತಿ ಪಡೆಯುತ್ತ ಬಂದಿದ್ದೇನೆ. ನನ್ನ ಔದಾರ್ಯದ ದುರುಪಯೋಗ ಈ ಬಾರಿ ಹೆಚ್ಚಾದ್ದರಿಂದ ಬಿಗಿ ನಿಲುವು ತಳೆದಿದ್ದೇನೆ. ಅಲ್ಲೂ ಪುಸ್ತಕ ಕೊಡುವುದನ್ನು, ನಿಮ್ಮ ಆಯ್ಕೆಯನ್ನು ನಾನು ನಿರಾಕರಿಸಿಲ್ಲ. ಕಳೆದ ಬಾರಿಯೇ ನನ್ನೀ ಬಿಗಿನೀತಿಗೆ ನೀವು ಒಳದಾರಿ ಹಿಡಿದದ್ದೂ ನನ್ನರಿವಿಗೆ ಬಂದಿದೆ. ಆಗ ನಿಮ್ಮ ಅಧ್ಯಾಪಕರು ನನ್ನಲ್ಲಾರಿಸಿದ ಪುಸ್ತಕಗಳನ್ನು, ಇನ್ನೊಂದೇ ಪುಸ್ತಕ ಮಾರಾಟ ಸಂಸ್ಥೆ - ಸಾಹಿತ್ಯ ಕೇಂದ್ರದ ಮೂಲಕ ನೀವು ತರಿಸಿಕೊಂಡಿರಿ. ಆ ಅವಕಾಶ ಈಗಲೂ ನಿಮಗೆ ಮುಕ್ತವಿದೆ. ಈಗ ನಾನು ಸಕಾರಣ ನಿರಾಕರಿಸಿದ್ದು ಕಡ ಸೌಲಭ್ಯವನ್ನು ಮಾತ್ರ. ನಗದೋ ಚೆಕ್ಕೋ ತಂದರೆ ಈಗಲೂ ನಿಮಗೆ ಬೇಕಾದವನ್ನು ಕೂಡಲೇ ಬಿಲ್ಲು ಮಾಡಿಸಿಕೊಂಡು ಒಯ್ಯಬಹುದು ಎಂದೇ ಹೇಳಿದ್ದೇನೆ. 

ಪುಸ್ತಕ ಒಯ್ಯಲು ಬಂದಿದ್ದ ನಿಮ್ಮ ಪ್ರತಿನಿಧಿಯಲ್ಲಿ ನನ್ನ ನಿರಾಕರಣವನ್ನು ಹೇಳಿದ ಮೇಲೂ ನಿಮ್ಮ ಹಿಂದಿ ಪುಸ್ತಕ ಬೇಡಿಗೆ ಅಂಚೆಯಲ್ಲಿ ಬಂತು. ಅದರಲ್ಲೂ ನನಗೆ ಸರಬರಾಜಿಗೆ ಒಂದು ವಾರದ ಅವಧಿ ಕೊಡುವ ಧಾರಾಳತನ ನಿಮ್ಮದು! ಅದಕ್ಕೂ ಹೆಚ್ಚಿಗೆ ಮತ್ತೆ ನಿಮಗೇ ಹದಿನೈದು ದಿನ ನಿಧಾನಿಸಲು ಅವಕಾಶ ಮಾಡಿಕೊಂಡದ್ದು! ಸ್ವಾಮಿ, `ಬರವಣಿಗೆ ಮನುಷ್ಯನನ್ನು ಖಚಿತಗೊಳಿಸುತ್ತದೆ’ ಎಂದನೊಬ್ಬ ಮೇಧಾವಿ. ಹಾಗಾಗಿ ಮೊದಲು ನಿಮ್ಮ ಅಧ್ಯಾಪಕರುಗಳ ಮೂಲಕ ಮತ್ತೆ ನಿಮ್ಮ ದೂತನ ಮೂಲಕ ಬಾಯ್ದೆರೆ ಹೇಳಿ ಕಳಿಸಿದ್ದನ್ನು ದೂರವಾಣಿಯಲ್ಲಿ ಮುಖ್ಯೋಪಾಧ್ಯಾಯರು ವಿಚಾರಿಸಿದಾಗ ಖಚಿತಪಡಿಸಿದೆ. ಅನಂತರವೂ ಹಿಂದಿ ಪುಸ್ತಕಗಳಿಗೆ ನಿಮ್ಮ ಅಂಚೆ ಆದೇಶ ಬಂದ ಮೇಲೆ ನಮ್ಮೆರಡೂ ಸಂಸ್ಥೆಗಳ ಸಂಬಂಧ ಸ್ಪಷ್ಟನೆಗಾಗಿ ನಾನು ಯೋಚಿಸಿಯೇ ಅಷ್ಟು ಬರೆದೆ. ನೀವು ವಿಚಾರವನ್ನು ಗೌರವಿಸಿ ನಡೆದೀರೆಂಬ ವಿಶ್ವಾಸ ನನ್ನದಿತ್ತು (ನನ್ನ ಲೆಕ್ಕದಲ್ಲಿ ಇನ್ನೂ ತಡವಾಗಿಲ್ಲ). 

ನಿಮ್ಮ ಪತ್ರಲೇಖನ ಕೇವಲ ಮುಖ ಉಳಿಸಿಕೊಳ್ಳುವ ತಂತ್ರವಾಗಿ ಕಾಣುತ್ತಿದೆ. ಅದರಲ್ಲೂ ಎರಡು ತಿಂಗಳ ಹಿಂದೆ ನಿಮ್ಮವರೇ ಆಯ್ದಿಟ್ಟ ಪುಸ್ತಕ ಒಯ್ಯಲು ಆದ ಅನನುಕೂಲ ಏನೆಂದು ವಿವರಿಸಬಹುದಿತ್ತಲ್ಲ. ಆಡಳಿತದವರಿಗೆ ವಿಷಯ ತಜ್ಞರು ಆರಿಸಿದ ಪುಸ್ತಕಗಳ ಪಟ್ಟಿ ನೋಡುವ ಕ್ರಮ ಜವಾಬ್ದಾರಿಯುತ ನಾಗರಿಕ ಸಮಾಜದಲ್ಲಿ ಎಲ್ಲೂ ಬರುವುದಿಲ್ಲ, ಗೊತ್ತೇ? ಮಿಲಿಟರಿ ಆಡಳಿತದಲ್ಲೋ ರಾಷ್ಟ್ರೀಯ ಭದ್ರತೆಯ ಪ್ರಶ್ನೆ ಬರುವಲ್ಲೋ ಇಂಥವನ್ನು ಕೇಳಿದ್ದೇನೆ. ಮತ್ತೆ ನನ್ನ ಹಣಕಾಸಿನ ವಿಲೇವಾರಿ ಹೇಗಾಗಬೇಕೆಂದು ಇನ್ನೊಬ್ಬರಿಂದ ಪಾಠ ಹೇಳಿಸಿಕೊಳ್ಳಲು ಮಾಡಿದ ಪ್ರಯತ್ನವಂತೂ ಇದು ಖಂಡಿತಾ ಅಲ್ಲ. ವೈಯಕ್ತಿಕ ಮಾನಾಪಮಾನಗಳ ನೆಪ ಹಿಡಿದು ಸಂಸ್ಥೆಗಳ ಹಿತಕ್ಕೆ ನಷ್ಟ ಬಾರದಿರಲಿ ಎಂಬುದಷ್ಟೇ ನನ್ನ ಆಶಯ. ನಾನು ಸ್ನಾತಕೋತ್ತರ ಪದವಿ ಮುಗಿಸಿದ ಮೇಲೆ ಬಯಸಿ ಪುಸ್ತಕ ವ್ಯಾಪಾರಿಯಾದದ್ದು ಕೇವಲ ಹೊಟ್ಟೆ ಹೊರೆಯುವ ಉದ್ದೇಶದಿಂದಲ್ಲ. ತಾಪೇದಾರಿಯಿಂದ ದೂರವಿರಬೇಕು ಎಂಬ ಸ್ವತಂತ್ರ ಮನೋಭಾವದ ಜೊತೆಗೆ, ಗೌರವಯುತ ಜೀವನಯಾಪನೆಯೊಡನೆ ಸಮಾಜಕ್ಕೆ ಮೌಲಿಕವಾದದ್ದು ಏನಾದರೂ ಕೊಡಬೇಕು ಎಂಬ ಆಂತರ್ಯವೂ ಇತ್ತು. ಹಾಗಾಗಿ ನೀವು ಗಮನಿಸಿರಬಹುದು - ಅನ್ಯ ವ್ಯಾಪಾರಿಗಳಂತೆ ನಾನು ನಿಮ್ಮ ಅಥವಾ ಇನ್ಯಾವುದೇ ಸಂಸ್ಥೆ ಅಥವಾ ವ್ಯಕ್ತಿಯ ಬಳಿ ವ್ಯಾಪಾರಕ್ಕೆ ಯಾಚನೆ ನಡೆಸಿ ಹೋದದ್ದಿಲ್ಲ. ನನ್ನ ಮಿತಿಗೆ ನಿಲುಕಿದಷ್ಟು ಒಳ್ಳೆಯ ಪುಸ್ತಕಗಳನ್ನು ನೆರಹಿ, ಬಯಸಿ ಬಂದವರೊಡನೆ ಪರಸ್ಪರ ಗೌರವಕ್ಕೆ ಕುಂದುಂಟಾಗದಂತೆ ವ್ಯವಹಾರ ನಡೆಸಿದ್ದೇನೆ. ಮುಂದೆಯೂ ನಡೆಸುವವನಿದ್ದೇನೆ. ಅಷ್ಟನೊಪ್ಪಿ ನೀವು ನಿಮ್ಮ ಸಂಸ್ಥೆಯೂ ಸಂಬಂಧ ಮುಂದುವರಿಸಿದರೆ ಸಂತೋಷ. ಬಾರದಿದ್ದರೆ ನನ್ನ ಸಂತೋಷದ ಚಷಕದಲ್ಲಿ ಅಷ್ಟು ಕೊರತೆ ಸದಾ ಉಳಿಯುತ್ತದೆ. ಆತ್ಮ ವಿಮರ್ಶೆಗೆ ಅನುವು ಮಾಡಿಕೊಟ್ಟದ್ದಕ್ಕೆ ಕೃತಜ್ಞತೆಗಳು.”
[ಇಂದಿನ (೨೦೧೬) ಮಾತು: ಅಂದು ಮತ್ತೆ ಅವರಿಂದೇನೂ ಬರಲಿಲ್ಲ. ಆದರೆ ಸ್ವಲ್ಪೇ ಸಮಯದಲ್ಲಿ ಎನ್ನೆಂಪೀಟೀ ಪ್ರೌಢಶಾಲೆಯ ಆಡಳಿತ ಮಂಡಳಿಯ ಸದಸ್ಯರು ಬದಲಿದರು. ಆಗ ಪುಸ್ತಕಗಳ ನಿಜ ಒಲವಿನ ಜಯಲಕ್ಷ್ಮೀ ಕಾರಂತ ಮುಂತಾದ ಅಲ್ಲಿನ ಶಿಕ್ಷಕ ಬಳಗದ ಒತ್ತಾಯಕ್ಕೆ ಮತ್ತೆ ಶಾಲಾ ಗ್ರಂಥಾಲಯ ಪುಸ್ತಕಗಳಿಗೆ ನನ್ನಲ್ಲಿಗೆ ಬರುತ್ತಿತ್ತು. ಪಾವತಿ ಕೊಟ್ಟು ಪುಸ್ತಕ ಒಯ್ಯುವುದನ್ನು ರೂಢಿಸಿಕೊಂಡಿತ್ತು!]

೬. ಆದರ್ಶ ವಿದ್ಯಾಸಂಸ್ಥೆ ಹೀಗೂ ಇರಬೇಡವೇ?

ಫಲಿಮಾರಿನ ಪದವಿಪೂರ್ವ ಕಾಲೇಜು ನನ್ನಿಂದ ಪುಸ್ತಕಗಳನ್ನು ಕಡಪಟ್ಟಿಯೊಡನೆ ಖರೀದಿಸಿತು. ಒಂದು ತಿಂಗಳ ಬಳಿಕ ಅವರು ನನ್ನ ಬಿಲ್ಲಿನ ನಿವ್ವಳ ಮೊತ್ತದಲ್ಲಿ `ಬ್ಯಾಂಕ್ ಡ್ರಾಫ್ಟ್ ಬಾಬ್ತು ವೆಚ್ಚ’ ಎಂದು ನಮೂದಿಸಿ ರೂ ಹನ್ನೆರಡು ಕಳೆದು ಕಳಿಸಿದ್ದರು. ಅದಕ್ಕೆ ರಸೀದಿಯೊಡನೆ ನಾನು ಹೀಗೊಂದು ಪತ್ರ ಬರೆದೆ: ನನ್ನ ಬಿಲ್ಲಿನ ಪೂರ್ಣ ಪಾವತಿ ಎಂಬಂತೆ ನೀವು ಕಳಿಸಿದ ಡ್ರಾಫ್ಟ್ ಮುಟ್ಟಿದೆ. ಅದರಲ್ಲಿ ಡ್ರಾಫ್ಟ್ ವೆಚ್ಚ ನೀವು ವಜಾ ಮಾಡಿರುವುದು ಸರಿಯಲ್ಲ. ಹಾಗಾಗಿ ಆಂಶಿಕ ಪಾವತಿ ರಸೀದಿ ಕಳಿಸುತ್ತಿದ್ದೇನೆ. ದಯವಿಟ್ಟು ಕೆಳ ಒಕ್ಕಣೆ ಗಮನವಿಟ್ಟು ಓದಿ.

ಕೊಳ್ಳುಗರಿಗೆ ಸದಾ ಒದಗುವಂತೆ ನನ್ನದೇ ವೆಚ್ಚದಲ್ಲಿ ಪುಸ್ತಕ ಸೇರಿಸಿ, ಸಾರ್ವಜನಿಕ ಅನುಕೂಲದ ಸ್ಥಳ ಮತ್ತು ಸಮಯದಲ್ಲಿ ಅವನ್ನು ಪ್ರದರ್ಶಿಸಿ ಕುಳಿತಿರುವವನು ನಾನು. ಅಲ್ಲಿಗೆ ನಿಮ್ಮ ಇಷ್ಟದಲ್ಲೇ ನೀವು ಬಂದು, ನಿಮ್ಮ ಇಚ್ಛೆಯಂತೇ ಪುಸ್ತಕ ಆರಿಸಿದಿರಿ. ಆದರೆ ಅವನ್ನು ವಿದ್ಯಾಸಂಸ್ಥೆಯ ಗೌರವಕ್ಕೆ ತಕ್ಕಂತೆ ರಿಯಾಯಿತಿ ದರದಲ್ಲಿ ಮತ್ತು ಸಾಲದಲ್ಲಿ ಬಿಲ್ ಮಾಡಿ, ಕಟ್ಟು ಕಟ್ಟಿ, ಲಾರಿ ತುಂಬಿ, ಸಾಗಣೆ ವೆಚ್ಚವನ್ನೂ ಭರಿಸಿ ಕಳಿಸಿಕೊಟ್ಟದ್ದಲ್ಲದೆ, ಪಾವತಿಗಾಗಿ ಅನಿರ್ದಿಷ್ಟಕಾಲ ಕಾದು ಕುಳಿತವನು ನಾನು. ಇಷ್ಟರ ಕೊನೆಯಲ್ಲಿ ಬಿಲ್ ನಮೂದಿಸಿದ ಮೊತ್ತವನ್ನು ಆದಷ್ಟು ಬೇಗನೇ ಮತ್ತು ಪೂರ್ತಿ ತಲಪಿಸುವ ಜವಾಬ್ದಾರಿ ನಿಮ್ಮದಾಗಬೇಕಿತ್ತು. ಬದಲು ಬ್ಯಾಂಕ್ ವೆಚ್ಚವನ್ನು ನೀವು ನನ್ನದೇ ಮೊತ್ತದಲ್ಲಿ ವಜಾ ಮಾಡಿದ್ದು ಅನ್ಯಾಯ. ಈ ಧೋರಣೆ ಮುಂದುವರಿದರೆ, ನಾಳೆ ಲಾರಿ ಆಫೀಸಿನಿಂದ ಕಾಲೇಜಿಗೆ ತರಿಸಿಕೊಂಡ ಆಟೋ ವೆಚ್ಚ, ಡ್ರಾಫ್ಟ್ ರವಾನೆಮಾಡಲು ನೊಂದಾಯಿತ ಅಂಚೆ ವೆಚ್ಚವನ್ನೂ ನನ್ನ ಮೇಲೇ ಹೇರುವುದು ಅಸಾಧ್ಯವೇನಲ್ಲ! ಆದಾಯ ವೆಚ್ಚಗಳ ಲೆಕ್ಕಾಚಾರದಲ್ಲಿ ಒಂದು ಶಿಕ್ಷಣ ಸಂಸ್ಥೆ ಹೀಗೆ ವಿವೇಚನೆ ಇಲ್ಲದೆ ವರ್ತಿಸುವುದು ಬರಿಯ ಒಂದು ವ್ಯಾಪಾರಿ ಸಮುದಾಯಕ್ಕೆ ಎಸಗುವ ಅನ್ಯಾಯ ಮಾತ್ರವಲ್ಲ, ವಿದ್ಯಾರ್ಥಿ ವರ್ಗಕ್ಕೂ ಅಂದರೆ ಭವಿಷ್ಯದ ಪ್ರಜೆಗಳಿಗೂ ಹಾಕುವ ಕೆಟ್ಟ ಆದರ್ಶ.

ಯಾವುದೇ ಪಕ್ವ ಮನಸ್ಸು ವಿದ್ಯೆಗೆ ಪರಮ ಗೌರವ ಕೊಡುತ್ತದೆ ನಿಜ. ಆದರೆ ವಿದ್ಯೆ ಕೇವಲ ಪಾಠಪಟ್ಟಿ ನಿರ್ವಹಣೆ ಮಾತ್ರ ಎಂಬ ನೆಲೆಯಲ್ಲಿ ಯೋಚಿಸಿ ವರ್ತಿಸುವ ಸಂಸ್ಥೆಗಳು ಲೋಕವಿದ್ಯೆಯನ್ನು ಮರೆತ ಶಾಪಕ್ಕೆ ಪಕ್ಕಾಗುತ್ತವೆ. ಅಂಥಲ್ಲಿ ವಿದ್ಯಾರ್ಥಿಗಳು ಜ್ಞಾನಸಂಪಾದನೆಯ ಗುರಿಯನ್ನು ಮರೆತು ಪದವಿ ಮೋಹಿಸುತ್ತಾರೆ. ಹೊರಗೆ ಬಂದಾಗ ಸ್ವಾರ್ಥ ನೋಡುತ್ತಾರೆ. ತಾವು ಕಲಿತ ಸಂಸ್ಥೆಯ ಬಗ್ಗೆ ಗೌರವ ಪ್ರೀತಿ ಎಂದೂ ಅವರಲ್ಲಿ ಬಾರವು. ಕಾಸೆಸೆದು ಮಾಲೊಯ್ಯುವ ಸಂತೆಯಂತಾಗಬಾರದು ಕಾಲೇಜು. ಇದರ ಕೊಡು, ಕೊಳು ಎರಡಕ್ಕೂ ಅರ್ಥ ಇರಲೇಬೇಕು. ಇದನ್ನು ಮನಗಂಡು ನೀವು ರೂ ಹನ್ನೆರಡು ಕೂಡಲೇ ಕಳಿಸಿಕೊಡುವಿರಾಗಿ ನಂಬಿದ್ದೇನೆ.

ಪ್ರಾಂಶುಪಾಲರ ಕ್ಷಮಾ ಪತ್ರದೊಡನೆ ಮುಂದಿನ ಖರೀದಿ-ಪಾವತಿಯೊಡನೆ ಇದನ್ನು ಸರಿಪಡಿಸಿಕೊಡುವ ಆಶ್ವಾಸನೆ ಬಂತು; ಮಾಡಿದರು. 

(ಅನಿಯತವಾಗಿ ಮುಂದುವರಿಯಲಿದೆ)

No comments:

Post a Comment