22 April 2016

ಎನ್.ಬಿ.ಟಿಗೆ ಬಡಿದ ಲಕ್ವ

ಜಿ.ಎನ್.ಅಶೋಕವರ್ಧನನ `ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ
ಅಧ್ಯಾಯ ಒಂಬತ್ತು

[ಜಿ.ಟಿ. ನಾರಾಯಣರಾವ್ ಬರೆದ ಸಂಪಾದಕೀಯ ಟಿಪ್ಪಣಿ: ಅಧಿಕಾರದಿಂದ ವ್ಯಕ್ತಿಗೆ ಗೌರವವೇ? ವ್ಯಕ್ತಿಯಿಂದ ಅಧಿಕಾರಕ್ಕೆ ಪ್ರತಿಷ್ಠೆಯೇ? ಯಾವುದೇ ಕ್ಷೇತ್ರದಲ್ಲಿ ಅರ್ಹತೆಗೆ ಮೊದಲ ಮಣೆ ಸಲ್ಲದಿದ್ದರೆ ಅರ್ಹರು ಅಲ್ಲಿಗೆ ಕಾಲಿಡಲು ಅಂಜುತ್ತಾರೆ, ಹಿಂಜರಿಯುತ್ತಾರೆ. ಅನರ್ಹರಾದರೋ ದೌಡಾಯಿಸಿ ಬರುತ್ತಾರೆ. ಸ್ಥಾನಾಕ್ರಮಣ ಮಾಡುತ್ತಾರೆ. ಮುಂದೆ, ತಮ್ಮ ನಿಜ ಯೋಗ್ಯತೆಯನ್ನು (?) ಲೋಕಕ್ಕೆ ಸಾಬೀತು ಮಾಡಿ ತೋರಿಸಲು ಬಯಲಾಡಂಬರಗಳಿಗೆ ಶರಣಾಗುತ್ತಾರೆ. cosmetic dressingನಲ್ಲಿ ಅಥವಾ ತೋಟ ಶೃಂಗಾರದಲ್ಲಿ ಮೊದಲ ಬಲಿ ಅಧಿಕಾರದ ಮೂಲೋದ್ದೇಶ. ಯಥಾ ರಾಜ: ತಥಾ ಪ್ರಜಾಃಅಧಿಕಾರಿ ಹೇಗೋ ಹಾಗೆ ಅನುಯಾಯಿಗಳು. ಅಂದ ಮೇಲೆ ಇಂಥ ವ್ಯವಸ್ಥಾಪನೆಗಳಿಗೆ ಯಥಾ ಕಾಲದಲ್ಲಿ ಲಕ್ವ ಬಡಿಯುವುದು ಅಥವಾ ಕ್ಯಾನ್ಸರ್ ಕೆಡೆಯುವುದು ನೈಸರ್ಗಿಕ ನಿಯಮ.]

ನ್ಯಾಷನಲ್ ಬುಕ್ ಟ್ರಸ್ಟ್ (ಹ್ರಸ್ವ ರೂಪದಲ್ಲಿ ಎನ್ಬೀಟಿ) ಒಂದು ದಿಲ್ಲಿ ಮೂಲದ ಸರಕಾರೀ ಪುಸ್ತಕೋದ್ಯಮ ಸಂಸ್ಥೆ. ನಾನು ಪುಸ್ತಕೋದ್ಯಮಕ್ಕೆ ಪ್ರವೇಶಿಸಿದ ಆರಂಭದಲ್ಲಿ (೧೯೭೦ರ ದಶಕ) ನನಗಿದರ ಪ್ರಕಟಣೆಗಳಲ್ಲಿ ಕನ್ನಡ ಪುಸ್ತಕಗಳು ಗೀತಾ ಬುಕ್ ಹೌಸ್ನಿಂದಲೂ ಇಂಗ್ಲಿಶ್ ಪುಸ್ತಕಗಳು ಅನ್ಯ ಖಾಸಗಿ ವಿತರಕರಿಂದಲೂ ತರಿಸಿ ಗೊತ್ತಿತ್ತು. ತಿಂಗಳು, ಎರಡು ತಿಂಗಳಿಗೊಮ್ಮೆ ಮಾರಿಹೋದ ಹಳತರಲ್ಲಿ ಬೇಡಿಕೆ ನೋಡಿಕೊಂಡು ತಲಾ ಎರಡು ಮೂರು ಪ್ರತಿಗಳಂತೆ ಮತ್ತೆ ಮತ್ತೆ ತರಿಸಿಕೊಳ್ಳುತ್ತಿದ್ದೆ. ಮರುಮುದ್ರಣ ಬಂದಾಗ ಒಮ್ಮೆಗೇ ಐದೋ ಹತ್ತೋ ತರಿಸಿ ಸಂಭ್ರಮಿಸುತ್ತಿದ್ದೆ. ಏನೇ ಇರಲಿ, ಆರಡಿ ಉದ್ದದ ಕಪಾಟಿನ ಒಂದು ಅಂಕಣವಿಡೀ ಎನ್ಬೀಟಿ ಪ್ರಕಟಣೆಗಳಿಗೆ ಮೀಸಲಿಟ್ಟಿದ್ದೆ. ಸಹಜವಾಗಿ ಗಂಭೀರ ಓದುಗರು (ಇಂಥವರು ಸಾಕಷ್ಟು ಇದ್ದರು) ಬಂದ ಕೂಡಲೇ ನೇರ ಕಪಾಟಿಗೆ ನಡೆಯುತ್ತಿದ್ದರು. ಹಲವು ಇಲಾಖೆಗಳು, ವಿದ್ಯಾಸಂಸ್ಥೆಗಳು ಎನ್ಬೀಟಿ ಪ್ರಕಟಣೆಗಳನ್ನು ಕೊಳ್ಳುವಲ್ಲಿ ತೀರ ನಿಶ್ಚಿಂತರಾಗುತ್ತಿದ್ದದ್ದು ಪರೋಕ್ಷವಾಗಿ ಎನ್ಬೀಟಿಯ ಗುಣಕ್ಕೆ ಸಂದ ಗೌರವ ಎನ್ನಬಹುದು. ಚಟುವಟಿಕೆಗಳ ವಿಸ್ತರಣೆ ವಿಕೇಂದ್ರೀಕರಣ ಇತ್ಯಾದಿಗಳ ಹೆಸರಿನಲ್ಲಿ ಎನ್ಬೀಟಿಯ ಪ್ರಾದೇಶಿಕ ಕಛೇರಿಯೇ ಬೆಂಗಳೂರಿಗೆ ಬಂದಿತು. ಮುಂದೆ ವಿತರಣೆಯಲ್ಲೂ ಏಕಸ್ವಾಮ್ಯ ಕಳೆಯುವಂತೆ ಜಿಲ್ಲೆ ತಾಲೂಕು ಕೇಂದ್ರಗಳವರೆಗೂ ಇದು ಹಲವು ಆಧುನಿಕ ಮಾರುಕಟ್ಟೆ ಆಮಿಷಗಳೊಂದಿಗೆ ತಲಾಷಿ ನಡೆಸಿತು. ೧೯% ಬಡ್ಡಿದರದ ಬ್ಯಾಂಕ್ ಸಾಲದಲ್ಲಿ ವ್ಯಾಪಾರ ನಡೆಸುತ್ತಿದ್ದಂಥ ನನ್ನಿಂದಲೂ ರೂ ೧೦೦೦ ನಿಬಡ್ಡಿ ಠೇವಣಿ ಪಡೆದು, ಪ್ರತಿನಿಧಿ ಸಂಖ್ಯೆ ಏರಿಸಿಕೊಂಡಿತು. ಮಂಗಳೂರಿನಂತಲ್ಲೂ ರಾಷ್ಟ್ರೀಯ ಪುಸ್ತಕ ಮೇಳ ನಡೆಸಿ ಜನರ ಕಣ್ಣು ಕೋರೈಸಿತು. ಆದರೆ ಇದು ನಂದುವ ಜ್ಯೋತಿಯ ಅಂತಿಮ ಹಂತ ಎಂಬ ತಿಳಿವಳಿಕೆ ನನಗೆ ಸ್ಪಷ್ಟವಾಯಿತು. ನನ್ನ ಮಟ್ಟಿಗೆ ಎನ್ಬೀಟಿಗೆ ಬಡಿದ ಲಕ್ವದ ಕತೆ ಹೀಗಿದೆ:


೧೯೯೮ರ ಏಪ್ರಿಲ್ ತಿಂಗಳ ಕೊನೆಯ ವಾರ. `ಸುಧಾವಾರಪತ್ರಿಕೆಯಲ್ಲಿ ಎನ್ಬೀಟಿಯ ಒಂದು ಜಾಹೀರಾತು ಪ್ರಕಟವಾಯಿತು. ಅದರ ಸಾರಾಂಶ: ಭಾರತೀಯ ಭಾಷೆಗಳ ಶ್ರೇಷ್ಠ ಸಾಹಿತ್ಯದ ೩೬ ಕನ್ನಡ ಅವತರಣೆಗಳನ್ನು ಸಾರ್ವಜನಿಕರಿಗೆ ಶೇಕಡ ೨೫ರಿಂದ ೩೫ರವರೆಗೆ ರಿಯಾಯಿತಿ ದರದಲ್ಲಿ, ಉಚಿತ ಸಾಗಣೆ ವ್ಯವಸ್ಥೆಯೊಡನೆ ಎನ್ಬೀಟಿ ಕೊಡುತ್ತದೆ. ಅಲ್ಲಲ್ಲಿಯ ಪುಸ್ತಕ ವ್ಯಾಪಾರಿಗಳಲ್ಲೂ ಇದೇ ರಿಯಾಯ್ತಿ ಲಭಿಸುವ ಭರವಸೆಯೂ ಅಡಿ ಟಿಪ್ಪಣಿಯಲ್ಲಿತ್ತು.

ಇದು ನನ್ನನ್ನೂ ಇತರ ಪುಸ್ತಕ ವ್ಯಾಪಾರಿಗಳನ್ನೂ ಪೂರ್ಣ ಅಜ್ಞಾನದಲ್ಲಿರಿಸಿ ಹೊರಟ ಘೋಷಣೆ. ನಾನು ವಿಳಂಬಿಸದೆ ನೇರ ಅಧ್ಯಕ್ಷರಿಗೆ (ದಿಲ್ಲಿಯಲ್ಲಿದ್ದರೂ ಅಪ್ಪಟ ಕನ್ನಡಿಗ ಮತ್ತು ಪೂರ್ವಪರಿಚಿತರೂ ಆದ ಸುಮತೀಂದ್ರ ನಾಡಿಗರು) ಕನ್ನಡದಲ್ಲೇ ದಿನಾಂಕ --೧೯೯೮ರಂದು ಹೀಗೆ ಪತ್ರಿಸಿದೆ:

ತಾ --೧೯೯೮ರ `ಸುಧಾವಾರಪತ್ರಿಕೆಯಲ್ಲಿ ಎನ್ಬೀಟಿ ಜಾಹೀರಾತು ಗಮನಿಸಿದೆ. ಸಾರ್ವಜನಿಕರಿಗೆ ನೇರ ನೀವು ೨೫%ರಿಂದ ೩೫% ವಟ್ಟಾವನ್ನೂ ಉಚಿತ ಸಾಗಣೆ ವ್ಯವಸ್ಥೆಯನ್ನೂ ಕೊಡುತ್ತಿರುವುದು ನೋಡಿ ಆಶ್ಚರ್ಯವಾಯಿತು. ಸಾಲದ್ದಕ್ಕೆ ಕೊನೆಯಲ್ಲಿ, ಪ್ರತಿಗಳಿಗಾಗಿ ನಿಮ್ಮ ಹತ್ತಿರದ ಪುಸ್ತಕ ವ್ಯಾಪಾರಿಗಳನ್ನು ಸಂಪರ್ಕಿಸಿ ಎಂಬ ಒಕ್ಕಣೆ ನೋಡಿ, ಎನ್ಬೀಟಿಯ ದಾರ್ಷ್ಟ್ಯಕ್ಕೆ (ಅಜ್ಞಾನವೂ ಇರಬಹುದು) ಕೋಪವೂ ಬಂತು. ನಿಮಗೆ ಗೊತ್ತಿರಲಾರದು, ನಾವು ಕೆಲವರು ವಿಭಿನ್ನ ಮೊತ್ತಗಳನ್ನು (ನಾನು ರೂ ಒಂದು ಸಾವಿರ) ಎನ್ಬೀಟಿಗೆ ನಿಬಡ್ದಿ ಠೇವಣಿ ಕೊಟ್ಟು ನೋಂದಾಯಿತರಾಗಿದ್ದೇವೆ. ನಮಗೆ ಸಿಗುವ ವಟ್ಟಾ ೩೩.೩೩% ಮಾತ್ರ. ಇನ್ನು ನಿಮ್ಮ ಸೇವೆಯೋ ವರ್ಷದಿಂದ ವರ್ಷಕ್ಕೆ ಹಾಳಾಗುತ್ತಲೇ ಇದೆ. ಪ್ರಾದೇಶಿಕ ಕಛೇರಿಗೆ ನೇರ ಬರೆದರೆ ಬಟವಾಡೆಗೆ ವಾರಗಟ್ಟಳೆ ವಿಳಂಬ. ಅಧಿಕೃತವಾಗಿ ಪುಸ್ತಕ ಮಾಹಿತಿಯಾಗಲೀ ಪ್ರತಿನಿಧಿ ಭೇಟಿಯಾಗಲಿ ನನಗಿಲ್ಲದೆ ಕೆಲವು ವರ್ಷಗಳೇ ಸಂದಿವೆ. ನಾನು ಬಯಸದೇ ಏಜೆಂಟನೊಬ್ಬ ನಮ್ಮೀರ್ವರ ನಡುವೆ ಜೀವನಯಾಪನೆ ನಡೆಸುತ್ತಿರುವುದರಿಂದ ಏನೋ ಇರುವ ಪುಸ್ತಕಗಳ ಮಾಹಿತಿ ಮತ್ತು ದಿನಗಳ ವಿಳಂಬದಲ್ಲಿ ಬಟವಾಡೆಯಷ್ಟು ಆಗುತ್ತಿದೆ. (ಇದೇ ಖಾಸಗಿ ವ್ಯಕ್ತಿ ಪುಸ್ತಕ ಮೇಳದಲ್ಲೂ ಎನ್ಬೀಟಿ ಮಳಿಗೆಯನ್ನೂ ನಡೆಸಿದ್ದ) ಸಾರ್ವಜನಿಕ ಮಾರುಕಟ್ಟೆಯ ಅಗತ್ಯ ಕೇಳಿ ಮರುಮುದ್ರಣವಾಗುವುದಾಗಲೀ ಚುರುಕಿನ ದಾಸ್ತಾನು ವಿಲೇವಾರಿ ನಡೆಸುವುದಾಗಲೀ ಎನ್ಬೀಟಿಯಲ್ಲಿ ನಾನು ಕಂಡದ್ದೇ ಇಲ್ಲ. ನನಗೆ ಬೇಕಾದ ನಿಮ್ಮ ಇಂಗ್ಲಿಷ್ ಪ್ರಕಟಣೆಗಳು, ದೆಹಲಿಯಿಂದ ದಾಸ್ತಾನು ಬಂದದ್ದಿದ್ದರೆ ಮಾತ್ರ ಕೊಟ್ಟಿದ್ದಾರೆ. ತರಿಸಿ ಕೊಡುವ ಕ್ರಮ ಬಿಡಿ, ಮಾತಾಡಿದ್ದೂ ನಾನು ಕೇಳಿಲ್ಲ. ಅನಿವಾರ್ಯತೆಯಿಂದ ನಾನು ನೇರ ದೆಹಲಿ ಸಂಪರ್ಕವಿರುವ ಇತರ ಖಾಸಗಿ ವಿತರಕರನ್ನು ಅವಲಂಬಿಸುತ್ತಲೇ ಇರುತ್ತೇನೆ. ಇವೆಲ್ಲ ಸರಕಾರೀ ಕೃಪಾಪೋಷಿತ ಮಹಾ ಉದ್ಯಮಿಗಳಲ್ಲಿ ಇರಬೇಕಾದ ಸದ್ಗುಣಗಳೇ ಎಂದು ಸುಧಾರಿಸಿಕೊಂಡಿದ್ದೆ. ಆದರೆ ನೇರ ಗಿರಾಕಿ ಹಿಡಿಯುವ ನಿಮ್ಮ ಹೊಸ ಕ್ರಮ ವಿಪರೀತದ್ದೇ ಸರಿ.

ಸುಲಭ ಘನ ಗಿರಾಕಿ ಹಿಡಿಯುವ ಹುಚ್ಚಿನಲ್ಲಿ, ಸಣ್ಣ ಬಂಡವಾಳಿಗರೊಡನೆ ತಿಮಿಂಗಿಲಗಳೂ (ವಾಸ್ತವವಾಗಿ ಶಾರ್ಕ್ ಆಗಬೇಕು) ಖಾಸಗಿ ಪ್ರಕಾಶಕರೊಡನೆ ಸರಕಾರಿ ಇಲಾಖೆಗಳೂ ನಿರ್ಲಜ್ಜವಾಗಿ ಹೋರಾಡುವುದನ್ನು ಕಂಡಿದ್ದೇನೆ. ಎನ್ಬೀಟಿ ಇದಕ್ಕೆ ಹೊರತಲ್ಲ ಎನ್ನುವಂತೆ ಸಗಟು ಖರೀದಿಗೆ ಅರಳಿದ್ದು ಮತ್ತು ಗ್ರಂಥಾಲಯ ಖರೀದಿಗಳಿಗೆ ಪರಿಮಳಿಸಿದ್ದು ನಾಚಿಕೆಗೇಡು. ನಾನು ದಾಸ್ತಾನು, ಪಾವತಿ ಬಂದೋಬಸ್ತು ನೋಡಿಕೊಂಡು ಬೇಡಿಕೆ ಕಳಿಸಿದರೆ ಪ್ರಿಂಟಿಲ್ಲ ದಾಸ್ತಾನಿಲ್ಲ ಎಂದೆಲ್ಲ ಕೇಳುತ್ತಿದ್ದ ಹಲವು ಶೀರ್ಷಿಕೆಗಳು ಯಾವ್ಯಾವುದೋ ಯೋಜನಾ ಕುಹರಗಳನ್ನು ತುಂಬಿ ಮಿಗತೆಯಾಗಿ ನನ್ನ ಬಳಿಗೆ ಬಂದಾಗ ಆಶ್ಚರ್ಯಪಟ್ಟರೂ ಆದರಿಸಿದ್ದೇನೆ. ಆದರೆ ಇಂದಿನದು ಅತ್ಯಂತ ಕರುಣಾಹೀನ ಕಡಿಗೆ (the most unkindest cut of all!) ನೀವೇ ನಡೆಸುವ ಪುಸ್ತಕ ಮೇಳಗಳಲ್ಲಿಯ ಪ್ರಧಾನ ತಾಕೀತು: ಶೇಕಡಾ ಹತ್ತರನ್ನು ಮೀರಿದ ವಟ್ಟ ಯಾರೂ ಕೊಡಕೂಡದು. ಇದು ವಿಶೇಷ ಮೇಳಕ್ಕೆ ಸರಿ; ನಿತ್ಯಕ್ಕೆ ಮುದ್ರಿತ ಬೆಲೆಯೇ ನ್ಯಾಯ ಬೆಲೆಯಾಗಿರಬೇಕು ಎನ್ನುವವ ನಾನು. ಹೆಸರಿನಲ್ಲಿ ಮಾತ್ರ ಘನ ಆದರ್ಶಗಳ ಮೊತ್ತವಾಗಿ ಕಂಡರೂ ವಾಸ್ತವದಲ್ಲಿ ವೃತ್ತಿಪರ ತರಬೇತಿ ಅಥವಾ ಕನಿಷ್ಠ ಪರಂಪರೆಯನ್ನು ತಿಳಿದು ನಡೆಯುವ ತಿಳುವಳಿಕೆಯೂ ಇಲ್ಲದ ವ್ಯಕ್ತಿ ಅಥವಾ ಸಮೂಹಗಳ ಆಡುಂಬೊಲವಾಗಿರುವ (ruleಗಳಿಗೆ exceptions  ಇರಲೇಬೇಕುಅದು ನೀವೂ ಆಗಬಲ್ಲಿರಿ) ಎಲ್ಲ ಸರಕಾರೀ ಅಥವಾ ಅನುದಾನಿತ ಪ್ರಕಟಣಾಂಗಗಳೂ ಮಾಡುವ ವಿಪರೀತಕ್ಕೆ ನೀವೂ ಇಳಿದಿದ್ದೀರಿ. ನಿಮ್ಮಲ್ಲೇ ಇಡುಗಂಟೆಂಬ ಜುಟ್ಟು ಕೊಟ್ಟು ೩೩.೩೩% ವಟ್ಟವನ್ನು ಮಹಾಪ್ರಸಾದವೆಂದು ಸ್ವೀಕರಿಸಿದವರಿಗೆ ಯಾವ ಸೂಚನೆ ಇಲದೇ ನೇರ ಕೊಳ್ಳುಗರಿಗೆ  ೩೫% ವಟ್ಟ ಕೊಡಿಸುವ ಔದಾರ್ಯ ತೋರುತ್ತಿದ್ದೀರಿ. ಇರುವ ದಾಸ್ತಾನು .೬೭% ನಷ್ಟದಲ್ಲಾದರೂ ಕಳಚಿಕೊಳ್ಳೋಣವೆಂದರೆ ಭಾರೀ ಜಾಹೀರಾತಿನ ಪ್ರಚಾರ ಮತ್ತು ಉಚಿತ ಅಂಚೆಯ ಆಮಿಷ ಕೊಟ್ಟು ನಮ್ಮ ಬೇರ ಮೂಲಗಳನ್ನೆಲ್ಲ ಜಾಲಾಡುವ ಚಾಲಾಕೀ ಮೆರೆದಿದ್ದೀರಿ.

ಎನ್ಬೀಟೀ ಯೋಜನೆಯಲ್ಲಿ ನಾನು ಅಥವಾ ನನ್ನಂಥವರುಅಂದರೆ, ಠೇವಣಿಯಿಟ್ಟು ಕರಾರುಪತ್ರ ಬರೆದುಕೊಟ್ಟಂಥವರು, ಎಲ್ಲಿದ್ದೇವೆ ಎಂದುಕೊಳ್ಳುತ್ತಿರುವಾಗ ಇಂದು ನಿಮ್ಮ ಪ್ರಾದೇಶಿಕ ಕಛೇರಿಯ ೨೭--೧೯೯೮ರ ಸುತ್ತೋಲೆ ಬಂತು. ಎಲ್ಲ ಬಂಡವಾಳಶಾಹಿಗಳಂತೆ ನೀವು ತಳೆದ ಏಕಪಕ್ಷೀಯ ನಿರ್ಧಾರಕ್ಕೆ ಮಾನ್ಯತೆ ಪಡೆಯುವ ಕಣ್ಕಟ್ಟು ಇಲ್ಲಿದೆ. ಕೆಲವು ವರ್ಷಗಳ ಹಿಂದೆ ಶ್ರೀ ಸುಬ್ಬರಾಯರಂಥ ಅನುಭವಿಗಳು ಮೂಲೆ ಮೊಡಕಿನ ನನ್ನಂಥವರನ್ನು ಕಂಡು, ಒಲಿಸಿ ಎನ್ಬೀಟಿಯ ವಿತರಣಜಾಲ ಹೆಣೆದರು. ಇಂದು ಬಂದ ಸುತ್ತೋಲೆಯಲ್ಲಿ ಕಾಣಿಸಿರುವ ಹಲವು slow sellers, ಅಂಥ ವ್ಯವಸ್ಥೆಯಿಂದ ಅಂದು ಮಾರಿ ಹೋಗಿ ಮರುಮುದ್ರಣ ಕಂಡದ್ದನ್ನು ಇಂದಿನವರು ಮರೆಯಬಾರದು. ಈಚಿನ ವರ್ಷಗಳಲ್ಲಿ ಮಿದು ಪೆಡಲಿನ ದೀರ್ಘ ಓಟದ ಸುಖ ಎನ್ಬೀಟಿ ಕಳೆದುಕೊಂಡಿದೆ. ವ್ಯವಸ್ಥೆಯಲ್ಲಿ ದುಡಿಮೆಯ ಪ್ರೀತಿ ಕಳೆದು ಹೋಗಿದೆ. ಅದಕ್ಕೆ ತನ್ನ ಜಾಲದ ಮಿಣಿಗಳು ದುರ್ಬಲಗೊಳ್ಳುತ್ತಿರುವುದನ್ನು (ಕೆಲವು ಕಡಿಹೋಗಿರಲೂಬಹುದು) ಗುರುತಿಸಲಾಗದ ಮಾಂದ್ಯ ಅಡರಿದೆ. ಆತ್ಮಶೋಧನೆ ಆಗಬೇಕಾದಲ್ಲಿ ಮಾರುಕಟ್ಟೆ ಸಮೀಕ್ಷೆ ನಡೆಸಿದಂತಿದೆ. ಹಾಗಲ್ಲ ಎನ್ನುವುದಿದ್ದರೆ, ತಾಳ್ಮೆಯಿಂದ ನನ್ನೀ ಪ್ರಶ್ನಾಮಾಲೆಗೆ ನಿಮಗೆ ನೀವೇ ಉತ್ತರಿಸಿಕೊಳ್ಳಿ.

ನಿಮ್ಮ ಜಾಹೀರಾತು ಬಂದ --೧೯೯೮ರ ಸುಧಾ ವಾಸ್ತವವಾಗಿ ೨೩--೧೯೯೮ಕ್ಕೆ ಜನರ ಕೈ ತಲಪುತ್ತದೆ. ಅಂದಿನಿಂದ ಇಂದಿನವರೆಗೆ ಬಂದ ಗಿರಾಕಿಗಳಿಗೆ (ಸುಮಾರು ಒಂಬತ್ತು ದಿನ) ನಾನೇನು ಮಾಡಬೇಕಿತ್ತು? ನಿಮ್ಮ ಸೂಚನೆಯಂತೆ ಮುಂದೆ ೫೦%ನಲ್ಲಿ ಕೊಂಡವನ್ನು ೩೫%ರಲ್ಲಿ ಮಾರಬಹುದು. ಆದರೆ ನನ್ನ ೩೩.೩೩%ರಲ್ಲಿ ಕೊಂಡ ದಾಸ್ತಾನಿನ ಗತಿ ಏನು? ನಮ್ಮ ೫೦%ಗೆ ನಗದು ವ್ಯವಹಾರ ಮಾತ್ರ ಎಂದು ಮುಖ ಗಂಟಿಕ್ಕಿದ್ದೀರಿ. ನಿಬಡ್ದಿ ಠೇವಣಿ ಪಡೆಯುವಾಗ ಸಾಲದ ಮೇಲೆ ವ್ಯಾಪಾರ ಎಂದು ಪರಸ್ಪರ ಲಾಭಕ್ಕಾಗಿ ಮಾಡಿಕೊಂಡ ಗೌರವಯುತ ಒಪ್ಪಂದ ಎಲ್ಲಿ ತೂರಿದಿರಿ? ಆಯ್ತು, ೩೬ ಸವಕಲು ಸಾಹಿತ್ಯ ತಳ್ಳಿ ಗುದಾಮು ಗುಡಿಸಿದಿರಿ ಎಂದಿಟ್ಟುಕೊಳ್ಳೋಣಮುಂದೇನು? ಉಳಿದವಕ್ಕೂ ಇದೇ ನಿಯಮ? ಇತರ ಭಾಷಾ ಪ್ರಕಟಣೆಗಳಿಗೂ ಜಾಡ್ಯ ಪ್ರಸರಣ? ಅದೆಲ್ಲಾ ಆಗಿ ಮತ್ತೇನುಎನ್ಬೀಟೀ ಬರ್ಖಾಸ್ತೇ? ಸಿಂಬಳ ಸೀಟುವ ಚಳಿಯಲ್ಲಿ ಬೆವರುವ ಸಾಹಿತ್ಯ ತರಬಹುದೇ? ಕಡಲೆಪುರಿ, ಚ್ಯೂಯಿಂಗ್ ಗಮ್ best sellers ಅಲ್ಲವೇ? ಕೂಡಲೇ ಯೋಜನೆಯನ್ನು ರದ್ದುಪಡಿಸಿ, ಅಥವಾ ಪತ್ರವನ್ನೇ ನನ್ನ ಪ್ರತಿನಿಧಿ ನೋಂದಣೆಯ ರದ್ಧತಿ ಪತ್ರವಾಗಿ ಸ್ವೀಕರಿಸಿ, ನನ್ನ ಠೇವಣಿಯನ್ನು ಬ್ಯಾಂಕ್ ಡ್ರಾಫ್ಟ್ ಮೂಲಕ ಮರಳಿಸಲು ವ್ಯವಸ್ಥೆ ಮಾಡಿ.

ಲೇಖಕ, ಪುಸ್ತಕ ಮಾರಾಟಗಾರ ಎಲ್ಲಕ್ಕೂ ಮಿಗಿಲಾಗಿ ವಿಚಾರವಂತ ಹಿರಿಯ ಮಿತ್ರನ ನೆಲೆಯಲ್ಲಿ ನೀವು ನನ್ನನ್ನು ಸರಿಯಾದ ಧ್ವನಿಯಲ್ಲೇ ಅರ್ಥವಿಸಿಕೊಂಡು ನಡೆಸುತ್ತೀರಿ ಎಂಬ ಭರವಸೆಯೊಡನೆ ಇಷ್ಟು ಬರೆದಿದ್ದೇನೆ. ವಿಚಾರ ವಿನಿಮಯ, ಹೆಚ್ಚಿನ ವಿವರಣೆ ಬೇಕಿದ್ದರೆ ಅವಶ್ಯ ತಿಳಿಸಿ. ವಿಷಯ ಕೇವಲ ನಮ್ಮಿಬ್ಬರದಲ್ಲ ಎನ್ನುವ ತಿಳುವಳಿಕೆಯೊಡನೆ ಪತ್ರದ ಪ್ರತಿಗಳನ್ನು ಉದ್ಯಮದ ಇತರ ಪರಿಚಿತರಿಗೂ ನಿಮ್ಮ ಪ್ರಾದೇಶಿಕ ಕಛೇರಿಗೂ ಕಳಿಸುತ್ತಿದ್ದೇನೆಗಮನಿಸಿ.”

ಮೂರು ವಾರ ಕಳೆದು ಅವರಿಗೆ ಕಳಿಸಿದ ನೆನಪಿನೋಲೆ:

ನನ್ನ ತಾ --೧೯೯೮ರ ಪತ್ರದ ಸಂಕ್ಷಿಪ್ತ ರೂಪ ಪ್ರಜಾವಾಣಿಯ --೧೯೯೮ರ ವಾಚಕರ ವಾಣಿಯಲ್ಲೂ ೧೮--೧೯೯೮ರ ಉದಯವಾಣಿಯ ಜನತಾವಾಣಿಯಲ್ಲೂ ೧೩--೧೯೯೮ರ ಪ್ರಜಾವಾಣಿಯಲ್ಲಿ ನವಕರ್ನಾಟಕದ ಶ್ರೀ ರಾಜಾರಾಮರ ಬೆಂಬಲ ಪತ್ರವನ್ನೂ ನೀವು ಗಮನಿಸಬಹುದು.

ಎನ್ಬೀಟೀ ವ್ಯಾಪಾರೀ ಧೋರಣೆ ಬದಲಿಸುವಾಗ ನನ್ನಂಥ `ಕಿಂಚಿತ್ ಪಾಲುಗಾರನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲೇ ಇಲ್ಲ. ಅನಿವಾರ್ಯವಾಗಿ ನಾನು ಕಟುಪತ್ರ ಲೇಖಕನಾದೆ. ಪತ್ರಿಕೆಗಳೆಂಬ ಅನೌಪಚಾರಿಕ ನ್ಯಾಯಾಲಯದೆದುರು ಅಹವಾಲನ್ನಿಟ್ಟೆ. ವೈಯಕ್ತಿಕವಾಗಿ ಅಥವಾ ಪತ್ರಿಕೆಯ ಮೂಲಕ ನೀವು ವಿವರಣೆ ಕೊಡಬಹುದಿತ್ತು. ಜವಾಬು-ದಾರಿ ನಿಮಗೆ ಒಂದು ತಿಂಗಳ ಕಾಲಾವಕಾಶದಲ್ಲೂ ಕಾಣಲಿಲ್ಲವಾದರೆ ನಾನೇ ಸೂಚಿಸಿದ್ದ ಪರ್ಯಾಯ ಕ್ರಮವನ್ನಾದರೂ ಕೈಗೊಳ್ಳಬಹುದಿತ್ತು; ನನ್ನ ಠೇವಣಿ ಮರಳಿಸಿ ಮುಗಿಸಬಹುದಿತ್ತು. ಇನ್ನಾದರೂ ಅಷ್ಟು ಮಾಡಿ.

ಅವರು ಮಾಸ್ತರಿಕೆ ಇದ್ದೂ ಪುಸ್ತಕ ಮಳಿಗೆಗೆ ಒಲಿದವರು. ಮಳಿಗೆ ಬಿಟ್ಟರೂ ಬಾಪ್ಕೋ ಪ್ರಕಾಶನದ ಸಹಯೋಗದಲ್ಲಿ ಪುಸ್ತಕ ವ್ಯಾಮೋಹ ಉಳಿಸಿಕೊಂಡವರು... ಎಂದೆಲ್ಲಾ ನಿಮ್ಮ ಎನ್ಬೀಟೀ ಪದಗ್ರಹಣದ ಕಾಲದಲ್ಲಿ, ನನ್ನ ಸುತ್ತಿನವರಿಗೆ ನಿಮ್ಮ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದೆ. ಸದ್ಯದ ಸಮಸ್ಯೆ ತಲೆ ಹಾಕಿದಾಗಲೂ ಮನಸ್ವೀ ತೋಡಿಕೊಳ್ಳಲು ಅಗ್ರಪೀಠದಲ್ಲಿ ಕನ್-ನಾಡಿಗರಿದ್ದಾರೆ ಎಂಬ ಹೆಚ್ಚಿನ ಧೈರ್ಯದಲ್ಲಿ ಇದ್ದೆ. ಆದರೀಗ ಉಳಿದಿರುವುದು ವಿಷಾದ ಮಾತ್ರ.”

ಕೆಲವು ಸಮಯದ ಮೇಲೆ ದಿಲ್ಲಿ ಕಛೇರಿಯ Marketing and Sales Managerರಿಂದ ಅಧ್ಯಕ್ಷರ ಪರವಾಗಿ ಇಂಗ್ಲಿಷ್ ಪತ್ರ ಬಂತು. ಅದರ ಸಾರಾಂಶ – Your letter to our chairman. It is being informed that the Trust has launched this scheme for increasing sale apart from 25 to 35% special discount to readers. The trust is allowing 50% to booksellers. However, you may write to our regional manager, whose address is given below. ಮತ್ತದೇ ಸಮಯಕ್ಕೆ ಬೆಂಗಳೂರಿನ ಪ್ರಾದೇಶಿಕ ಕಛೇರಿಯಿಂದ ಇನ್ನೊಂದು ಪತ್ರವೂ ಬಂತು. ಸಾರಾಂಶ – we have to seek our Director’s approval before terminating an agency. Kindly bear with us. ಕಟುಕ ಬಲಿಯನ್ನು ಕೇಳಿಕೊಂಡಂತೆತಾಳ್ಮೆಯಿರಲಿ, ಕತ್ತಿ ಹರಿತಗೊಳಿಸುತ್ತಿದ್ದೇನೆ.”

ನಾನು ಮತ್ತೆ ಬರೆದೆ: “ಮಾನ್ಯರೇ ನೀವೇ ಸೃಷ್ಟಿಸಿದ ಸಮಸ್ಯೆಯ ಎಳೆ ಎಳೆಯನ್ನು ನಾನು ಪತ್ರದಲ್ಲಿ ಬಿಡಿಸಿಟ್ಟೆ. ಇದು ಸಾರ್ವಜನಿಕ ವಿಚಾರವೂ ಹೌದಾದ್ದರಿಂದ ಪತ್ರಿಕೆಗಳಿಗೂ ಬರೆಯುವ ಅನಿವಾರ್ಯತೆಯನ್ನು ನಿಭಾಯಿಸಿದೆ. ಎರಡು ನೆಲೆಗಳಲ್ಲಿ ನಿಮ್ಮ ಪ್ರತಿಕ್ರಿಯೆ ಬರಲಿಲ್ಲ. ನಿಮಗೆ ಮತ್ತೆ ವೈಯಕ್ತಿಕ ನೆಲೆಯಲ್ಲೇ ನೆನಪು ಮತ್ತು ಪ್ರಾದೇಶಿಕ ಕಛೇರಿಗೂ ಒಂದು ನೆನಪಿನೋಲೆ ಬಿಟ್ಟೆ. ನಿಧಾನವಾಗಿ, ಆದರೆ ತಿಳಿವಳಿಕೆಯ ಯಾವುದೇ ಸೋಂಕಿಲ್ಲದಂತೆ, (ಮೇಲೆ ಉಲ್ಲೇಖಿಸಿದ) ಎರಡು ಪತ್ರಗಳು ಬಂದುವು. ದಿಲ್ಲಿಯ ನಿಮ್ಮ ಅನುವರ್ತಿಗೆ (ಅಕನ್ನಡಿಗರಿರಬಹುದು) ನನ್ನ ದೀರ್ಘ ಪತ್ರದ ವಿವರಗಳು ತಿಳಿದಂತಿಲ್ಲ. ಇನ್ನಾದರೂ ನಿಮ್ಮ ಬಿಡುವಿರದ ಕೆಲಸಗಳ ನಡುವೆ, ಕನ್ನಡಕ್ಕಾಗಿ ಕೊಂಚ ಬಿಡುವು ಮಾಡಿಕೊಂಡು, ದಿಲ್ಲಿಯ ನಿಮ್ಮ ಅನುಯಾಯಿಗೆ ಪಾಠಮಾಡುವುದೊಳ್ಳೆಯದು. ಅದರಲ್ಲಿ ಮುಖ್ಯವಾಗಿ . ನೇರ ಗಿರಾಕಿಗೆ ರಿಯಾಯ್ತಿಇ ಕೊಡುವ ಮತ್ತು ವ್ಯಾಪಾರಿಗಳಿಗೆ ವಿಶೇಶ ರಿಯಾಯ್ತಿ ಕೊಡುವ ಬಗ್ಗೆ ನನ್ನ ವಿಚಾರಗಳನ್ನೂ ಮತ್ತೆ . ನಿಮ್ಮ ಪ್ರಾದೇಶಿಕ ಕಛೇರಿಯ ವಿಳಾಸ ಗೊತ್ತಿಲ್ಲದೆ ನಾನು ಹುಡುಕಾಡುತ್ತಿಲ್ಲ ಎಂಬುದನ್ನೂ ತಿಳಿಸಿ. ಇನ್ನು ಬೆಂಗಳೂರಿನವರು ಅರ್ಥ ಆದರೂ ಕನ್ನಡಿಗರೇ ಆದದ್ದಕ್ಕೆ ನನ್ನ ನೆನಪಿನೋಲೆ ಚುಚ್ಚಿದ ಮೇಲೆ ದಿಲ್ಲಿ ಫರ್ಮಾನು ಕಾಯುವ ದೀನಸ್ಥಿತಿಯನ್ನಷ್ಟೇ ತೋಡಿಕೊಂಡಂತಿದೆಬಹುಶಃ ಕನ್ನಡಕ್ಕೇ ಅಂಟಿದ ಜಾಡ್ಯ ನಿಮ್ಮನ್ನು ಅಡರದಂತೆ ನೀವು ಇಂಗ್ಲಿಷ್ ಮುಸುಕು ಹಾಕಿ ಕುಳಿತು “It is informed” ಎಂದು ಬರೆಯುವವರಿಗೆ ನಿರ್ದೇಶನ ಕೊಡುವುದರಲ್ಲೇ ವ್ಯಸ್ತರಾಗಿದ್ದೀರೋ ಎಂದು ನನಗೆ ಸಂಶಯವಿದೆ. ನನ್ನ ಹತಾಶೆಯನ್ನು ತಡೆದುಕೊಂಡು, ಠೇವಣಿ ಮರಳಿಕೆಯನ್ನು ಕಾದೆ. ನಾನು ಠೇವಣಿ ಕೊಡುವಂದು ಮಾಡಿದ ಕರಾರು ಪತ್ರ ನಿರ್ದೇಶಿಸಿದಂತೆ ಒಂದು ತಿಂಗಳು ಕಳೆಯಲೆಂದು ಸುಮ್ಮನುಳಿದೆ. ಇಂದಿಗೆ ನನ್ನ ಎರಡು ಪತ್ರ (- ಮತ್ತು --೧೯೯೮) ಬಿಡಿ, ನಿಮ್ಮದೇ ಪತ್ರಗಳಿಂದಾಚೆಗೂ ತಿಂಗಳು ಒಂದು ವ್ಯರ್ಥ ಕಳೆದಿದೆ. ನಿಮ್ಮಿಂದ ಡ್ರಾಫ್ಟ್ ಬಂದಿಲ್ಲ. ತಪ್ಪು ಆಕಸ್ಮಿಕವೇ ಇರಬಹುದು. ಆದರೆ ಅದಕ್ಷತೆ ಅಕ್ಷಮ್ಯ. ಸ್ಪಷ್ಟ ಮಾತುಗಳಲ್ಲಿ ನೇರ ಕೇಳಿದ್ದೇನೆ. ಈಗ ಇನ್ನೊಮ್ಮೆ ಕೇಳುತ್ತಿದ್ದೇನೆಕೂಡಲೇ ನಮ್ಮ ಸಂಬಂಧ ರದ್ದುಪಡಿಸಿ, ನನ್ನ ಠೇವಣಿ ಮೊತ್ತದ ಡ್ರಾಫ್ಟ್ ಕಳಿಸಿ.”

ದಿನಾಂಕ ೩೦--೧೯೯೮ರ ಬೆಳಿಗ್ಗೆ ದಿಲ್ಲಿಯಿಂದ ಎನ್ಬೀಟಿ ಅಧ್ಯಕ್ಷರ ದೂರವಾಣಿ ಬಂತು. ನನ್ನನ್ನಷ್ಟು ಹೊಗಳಿದರು. ಅನಾವಶ್ಯಕ ದೈನ್ಯದ ಧ್ವನಿಯೊಡನೆನಾನೇ ಕೈಯಾರೆ, ಕನ್ನಡದಲ್ಲೇ ಇವತ್ತು ನಿಮಗೆ ಪತ್ರ ಬರ್ದಿದ್ದೀನಪ್ಪಾ.... ಗೆಳೆಯ ಶಾಂತಿನಾಥ ದೇಸಾಯಿ, ಶ್ರೀನಿವಾಸರಾವ್ ಹೋಗ್ಬಿಟ್ರು...” ಎಂದಿತ್ಯಾದಿ ಗೋಳಾಡಿದರು. ಮುಂದೆ ಬಂದ ಅವರ ಪತ್ರದಲ್ಲಾದರೂ ಮಾತು ಹರಳುಗಟ್ಟುವ ಹದ, ಅಂದರೆ ಯಾವ ಬದ್ಧತೆಯೂ ಇರಲಿಲ್ಲ. ಅದಕ್ಕೆ ಸಾಕ್ಷಿಯಾಗಿ ಪತ್ರದ ಯಥಾಪ್ರತಿ ನೋಡಿ:

ಪ್ರಿಯ ಶ್ರೀ ಅಶೋಕವರ್ಧನ, ನಿಮ್ಮ ಬಿಸಿ ರಕ್ತದ ಪ್ರತಿಕ್ರಿಯೆಗಳನ್ನು ಗಮನಿಸಿದ್ದೇನೆ. `ವ್ಯಾಪಾರಿಗಳು ತಲೆ ಕೆಡಿಸಿಕೊಳ್ಳಬಾರದು. ಸಣ್ಣ ವಿಷಯಗಳನ್ನು ದೊಡ್ಡದು ಮಾಡಬಾರದುಅಂತ ನಾನು ಪುಸ್ತಕ ವ್ಯಾಪಾರಿಯಾಗಿದ್ದಾಗ ಯಾರೋ ಅನುಭವಸ್ಥರು ಹೇಳಿದ್ದರು. ಆದ್ದರಿಂದ ಪ್ರಾದೇಶಿಕ ಕಛೇರಿಯವರಿಗೆ ಮತ್ತು ಇಲ್ಲಿಯವರಿಗೆ, ನಿಮಗೆ ಸಮಾಧಾನವಾಗುವ ಹಾಗೆ ಪತ್ರ ಬರೆಯಿರಿ ಅಂತ ತಿಳಿಸಿದ್ದೆ. ನಾನು ೩೫ ದಿನ ದಿಲ್ಲಿಯಲ್ಲಿ ಇರಲಿಲ್ಲ. ಮೊಮ್ಮಗಳನ್ನು ನೋಡಲಿಕ್ಕೆ ಆಸ್ಟ್ರೇಲಿಯಾಕ್ಕೆ ಹೋಗಿದ್ದೆ. ೨೯ಕ್ಕೆ ವಾಪಾಸಾದೆ. ಈಚೆಗೆ ನನ್ನ ಬರವಣಿಗೆ ಏನೂ ಆಗುತ್ತಿಲ್ಲ. ಇಲ್ಲಿಯೂ ಎನ್ಬೀಟಿಯಲ್ಲಿ ಏನೇನೋ ಮಾಡಬೇಕು ಅಂತ ಕನಸು ಕಾಣುತ್ತ ಎರಡು ವರ್ಷ ಓಡಿ ಹೋದುವು. ಎನ್ಬೀಟಿಯಲ್ಲಿ ಅದಕ್ಷತೆ ಇರಬಾರದು ಅಂತ ಪ್ರಯತ್ನಿಸುತ್ತಲೇ ಇದ್ದೇನೆ. ದೇಶಕ್ಕೇ ಅಂಟಿದ ಜಾಡ್ಯ ಅದು. ಏನು ಮಾಡಲಿ ಹೇಳಿ, ನಿಮ್ಮ ಠೇವಣಿ ಕಳಿಸಲಿಕ್ಕೆ ತಿಳಿಸಿದ್ದೇನೆ. ಕ್ಷಮೆ ಇರಲಿ.”

ಶಿಸ್ತು ಬದ್ಧ ಕಾರ್ಯ ನಿರೀಕ್ಷೆ ಮಾಡುವುದು ಅನಾವಶ್ಯಕ ತಲೆಹಾಳೇ? ರಾಷ್ಟ್ರ ಮಟ್ಟದ ಒಂದು ಸಾರ್ವಜನಿಕ ಸಂಸ್ಥೆಯ ಧೋರಣೆ ಬದಲಾವಣೆ ಬರಿಯ ಸಣ್ಣ ವಿಷಯವೇ ಅಥವಾ ಅದು ಪ್ರಶ್ನಾತೀತವೇ? ಎಂದು ನನಗೆ ನಿಜ ತಲೆಬಿಸಿ ಮೂಡಿತು. ಅಧ್ಯಕ್ಷನಾದವನ ಖಾಸಗಿ ದುಃಖ, ಸಂತೋಷಗಳು ಆತನ ಕಾರ್ಯನಿರ್ವಹಣೆಗೆ ಎರಡು ವರ್ಷಗಳಷ್ಟು ಉದ್ದಕ್ಕೂ ಕಾಡುತ್ತಿದ್ದರೆ ಬಡ ಅನುಯಾಯಿಗಳಿಂದ ದಕ್ಷತೆಯ ನಿರೀಕ್ಷೆ ಸಾಧುವೇ? ಅಂಥ ಅಧ್ಯಕ್ಷನ ಪ್ರಾಮಾಣಿಕತೆಯಾಗಲೀ ಬರಿಯ ಕ್ಷಮಾಯಾಚನೆಯಿಂದ ಶುದ್ಧವಾಗುವ ಪ್ರಯತ್ನಕ್ಕಾಗಲೀ ಬೆಲೆಯುಂಟೇ? ಇತ್ಯಾದಿ ಯೋಚನೆಗಳು ಬರುತ್ತಿದ್ದಂತೆ ೧೪--೧೯೯೮ರಂದು ಅವರದೇ ಬೆಂಗಳೂರು ಕಛೇರಿಯಿಂದ ಯಾಂತ್ರಿಕ ಒಕ್ಕಣೆಯ ಪತ್ರದೊಡನೆ ನನ್ನ ಠೇವಣಿ ಮರಳಿತು. ಕೊನೆಯಲ್ಲಿದಯವಿಟ್ಟು ರಸೀದಿ ಕಳಿಸಿಎಂದೂ ಸೇರಿಸಿದ್ದರಿಂದ ಮತ್ತೆ ನೇರ ಅಧ್ಯಕ್ಷರನ್ನೇ ಉದ್ದೇಶಿಸಿ ಹೀಗೆ ಬರೆದೆ:

ನೀವು ನಿಬಡ್ಡಿ ಠೇವಣಿ ಕೇಳಿ, ಪಡೆದು, `ಪ್ರತಿನಿಧಿಪಟ್ಟ ಕೊಟ್ಟಿರಿ. ನಿಮ್ಮ ಅನುಕೂಲದಲ್ಲಿ ಮುದ್ರಣ ವಿತರಣೆ ನಡೆಸಿದಿರಿ. ನಿಮ್ಮದೇ ತಿಳಿವಿನಲ್ಲಿ ಮಾರುಕಟ್ಟೆ ಅಳೆದು ನಿರ್ಧಾರ ತಳೆದಿರಿ. ನಿಮ್ಮ ನಿರ್ಧಾರದ ವಿಮರ್ಶೆ ಮಾಡುವ ಹಕ್ಕು ನನಗೆ ಉಂಟೆಂದು ಭ್ರಮಿಸಿ, ನಾನು ಪತ್ರ ಮತ್ತು ಪತ್ರಿಕೆಗಳ ಮೂಲಕ ಪ್ರಕಟವಾದೆ. ಪ್ರಜಾಪ್ರಭುತ್ವ ಜಿಜ್ಞಾಸೆಯನ್ನು ಸ್ವೀಕರಿಸಲೇಬೇಕು. ಆದರೆ ಐವತ್ತು ತುಂಬಿದರೂ ಭಾರತದ ಸಾರ್ವಜನಿಕ ಅಧಿಕಾರಿವರ್ಗ ರಾಜಸತ್ತೆಯ ಪ್ರತಿಬಿಂಬವೇ ಆಗಿ ಉಳಿದಿದೆ. ಇಲ್ಲಿ ಅಧಿಕಾರ ಸಹಿಸುವುದು ವಿಧೇಯತೆಯನ್ನು ಮಾತ್ರ. ನೀವೂ ಅದಕ್ಕೆ ಒಂದು ಉದಾಹರಣೆ ಆಗಿರುವುದು ವಿಪರ್ಯಾಸ. ಮೌನ, ವಿಳಂಬ ಪ್ರಯೋಗಿಸಿದಿರಿ. ಅನುಕಂಪ ತೋರಿ, ಹುಸಿ ಹಿರಿತನ ನಟಿಸಿದಿರಿ. ಅದೃಷ್ಟವಶಾತ್ ಶಿಕ್ಷೆಯ ಅಧಿಕಾರ ನಿಮ್ಮಲ್ಲಿಲ್ಲ. ಹಾಗಾಗಿ ವಿಷಯಾಂತರಿಸಿ, ನಾನು ಹೋರಾಡಿದ್ದೇ ಠೇವಣಿ ಮರಳಿಕೆ ಎಂಬಂತೆ ಡ್ರಾಫ್ಟ್ ಕಳಿಸಿ ಸಂಬಂಧ ಹರಿದುಕೊಂಡಿದ್ದೀರಿ. ಸರಿ, ಇದೇ ನನ್ನ ಸ್ವೀಕೃತಿ ಪತ್ರ. ಆದರೆ ಎನ್ಬೀಟಿಯನ್ನು ಪ್ರಶ್ನಿಸುವ ಹಕ್ಕು ಇನ್ನೂ ನನ್ನಲ್ಲಿ (ಪ್ರತಿ ಭಾರತೀಯನಲ್ಲೂ) ಉಳಿದಿದೆ ಎಂಬುದನ್ನು ಮರೆಯಬೇಡಿ. ಕಟ್ಟುವ, ಬೆಳೆಸುವ, ಕನಿಷ್ಠ ಯಥಾಸ್ಥಿತಿ ಉಳಿಸುವವರ ಸಾಲಿಗೂ ನೀವು ಸೇರದೇ ಕುಟ್ಟಿ ಕೆಡಹುವವರಾದ್ದಕ್ಕೆ (ಕಾಲಧರ್ಮ?) ನನಗೆ ತೀವ್ರ ವಿಷಾದವಿದೆ..”

ಯಥಾಪ್ರತಿಯನ್ನು ಬೆಂಗಳೂರು ಕಛೇರಿಗೆ ಕಳಿಸಿಕೊಡುತ್ತಹೊಸ ಪಟ್ಟಿ ಕಳಿಸಿ, ಬೇಡಿಕೆ ಬ್ಯಾಂಕ್ ಮೂಲಕ ಪೂರೈಸಿಕೊಳ್ಳುವೆಎಂದು ಸೇರಿಸಿದೆ. ಆದರೆ ಇಂದಿನವರೆಗೂ ಎನ್ಬೀಟಿ ಬದುಕಿರುವ ಲಕ್ಷಣಗಳೇನೂ ನನ್ನ ಗಮನಕ್ಕೆ ಬಂದಿಲ್ಲ (ಸೆಪ್ಟೆಂಬರ್ ೧೯೯೮)

ಬಾಲಂಗೋಚಿ: ಮೈಸೂರಿನ ಜ್ಞಾನಯಜ್ಞ!

ಪಂಚ ಕುಲಪತಿಗಳ ದಿವ್ಯ ಸನ್ನಿಧಿಯಲ್ಲಿ (ಮೈಸೂರು, ಕುವೆಂಪು, ಬೆಂಗಳೂರು, ಕರ್ನಾಟಕ ಮತ್ತು ಮಂಗಳೂರು ವಿವಿ ನಿಲಯ) ವಿದ್ಯಾ ಸಚಿವರ ಹೋತೃತ್ವದಲ್ಲಿ ದಿನಾಂಕ --೧೯೯೧ರಂದು ಮೈಸೂರಿನಲ್ಲೊಂದು ಜ್ಞಾನಯಜ್ಞ! ಯಾರ ಪ್ರಯತ್ನವೂ ಇಲ್ಲದೆ ಮೈಸೂರು ವಿವಿನಿಲಯಕ್ಕೆ ಅರುವತ್ತು ವರ್ಷ ತುಂಬಿದ ನೆಪಕ್ಕೊಂದು ಸಮಾರಂಭ ಮತ್ತು ಇಂಗ್ಲಿಷ್ ಕನ್ನಡ ನಿಘಂಟಿನ ಪರಿಷ್ಕೃತ ಆವೃತ್ತಿಯ ಮೊದಲ ಸಂಪುಟದ ಬಿಡುಗಡೆ. ಪಂಚಗ್ರಹಕೂಟದ ಸುಮುಹೂರ್ತಕ್ಕಾಗಿ ಎಂದೋ ನಿಜ ಬಿಡುಗಡೆಗೆ ಸಿದ್ಧವಾಗಿದ್ದ (ಅಂದರೆ ಅಚ್ಚಿನ ಮನೆಯಿಂದ ಹೊರಬಿದ್ದ) ನಿಘಂಟು ದಾಸ್ತಾನುಮನೆಯಲ್ಲೇ ಉಳಿದಿತ್ತಂತೆ. ಅದಕ್ಕೂ ಹೆಚ್ಚಿನ ತಮಾಷೆ ಎಂದರೆ ನಿಘಂಟಿನ ಮುಂದಿನ ಸಂಪುಟಗಳ ಪರಿಷ್ಕಾರಕ್ಕೆ ಇರಬೇಕಾದ ತಜ್ಞರ ಸಮಿತಿ ಬರ್ಖಾಸ್ತುಗೊಂಡು ಕೆಲವು ವರ್ಷಗಳೇ ಕಳೆದಿವೆ. ಇದರ ಅರ್ಥ - `ಪ್ರವಾಸೀ ಕಂಡ ಇಂಡಿಯಾ’, `ಮಹಾತ್ಮ’, ತೋಟಗಾರಿಕೆ’, `ಯುಗಯಾತ್ರೀ ಭಾರತೀಯ ಸಂಸ್ಕೃತಿ’, ಧರ್ಮಶಾಸ್ತ್ರದ ಇತಿಹಾಸ’, `ಕನ್ನಡ ಸಾಹಿತ್ಯ ಚರಿತ್ರೆ’, ವಿಶ್ವಕೋಶಇತ್ಯಾದಿ ಅಪೂರ್ಣ ಮಾಲಿಕೆಗಳಂತೆ ನಿಘಂಟೂ ಕೊನೆ ಮುಟ್ಟುವುದು ನಿಘಂಟಿಲ್ಲ (ಖಚಿತವಿಲ್ಲ)!

ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಾಂಗದ ಆರಂಭ ಉಚ್ಛ್ರಾಯಗಳಲ್ಲಿ, ತಾನು ಪಾಠ ಪಟ್ಟಿ ಮತ್ತು ಪದವೀಪ್ರದಾನಕ್ಕೆ ಪರ್ಯಾಯಪದ ಅಲ್ಲ ಎಂದು ತಿಳಿದಿತ್ತು. ಹಾಗಾಗಿ ಹೊಸ ಹೂಡಿಕೆಗೆ ಅಥವಾ ತನ್ನ ಉಳಿವಿಗೆ ಪ್ರಸಾರಾಂಗದ ಮಾರಾಟವನ್ನು ಎಂದೂ ಪ್ರಮಾಣವಾಗಿ ಇಟ್ಟುಕೊಳ್ಳದೆ ಬೆಳೆಯಿತು. ಆದರೆ ಈಚೆಗೆ `ಪುರಾಣನಾಮಚೂಡಾಮಣಿ’, `ಭಾರತೀಯ ಕಾವ್ಯಮೀಮಾಂಸೆ’, `ಯೋಗಾಸನಗಳುಅಂಥ ಸಾರ್ವಕಾಲಿಕ ಬೇಡಿಕೆಯುಳ್ಳ ಪುಸ್ತಕಗಳನ್ನೂ ಆರ್ಥಿಕ ಅಪಯಶಸ್ಸಿನ ನೆಪದಲ್ಲಿ ಪುನರ್ಮುದ್ರಣ ಕಾಣಿಸದುಳಿದಿದೆ. ಹಾಗೆಂದು ಸುಮ್ಮನೇ ಕುಳಿತಿಲ್ಲ. ಎಂಟ್ನೂರು ಪುಟಗಳ ಸಾದಾ ಮುದ್ರಣ, ತೂಕಕ್ಕೆ ಕಳಪೆ ಹೊದಿಕೆಯಲ್ಲಿ `ಬತ್ತೀಸ ಪುತ್ಥಳಿಎಂಬ ಹೊಸ ಪುಸ್ತಕ ಪ್ರಕಟಿಸಿದರು. ಅದಕ್ಕೆ ೨೨೫ರ ಮಹಾಬೆಲೆ. ಇಲ್ಲಿ ಹೋಲಿಕೆಗೆ ಡಿವಿಕೆ ಮೂರ್ತಿ ಪ್ರಕಾಶನದ `ಶ್ರೀ ಕರ್ನಾಟಕ ಭಕ್ತ ವಿಜಯಉಲ್ಲೇಖಿಸಲೇಬೇಕು. ೫೮೦ ಪುಟ, ಕ್ಯಾಲಿಕೋ ಮತ್ತು ಹೊಳಪು ಕಾಗದದ ಹೊದಿಕೆಯಾಗಿಯೂ ಬೆಲೆ ರೂಪಾಯಿ ನಲ್ವತ್ತು ಮಾತ್ರ. ಪ್ರಸಾರಾಂಗ ಹೇಗಾದರೂ ಹಣ ಮಾಡುವ ಮಟ್ಟಕ್ಕಿಳಿದಿದೆ. ಹಿಂದಿನವರು ನ್ಯಾಯ ಬೆಲೆಗೆ ತಂದ ಪುಸ್ತಕಗಳನ್ನು ಸಾಹಿತ್ಯ ಸಮ್ಮೇಳನದಂಥ ಜಾತ್ರೆಗಳಿಗೆ ಹೊತ್ತೊಯ್ದು, ಅರ್ಧ ಬೆಲೆಗೆ ಮಾರಿ ಹಣ ಮಾಡುವಷ್ಟು ದಿವಾಳಿ ಎದ್ದಿದೆ. ವಿಶ್ವಕೋಶದ ಸಂಪುಟಗಳಿಗೆ ಪ್ರಕಟಣಪೂರ್ವ ಹಣ ಪಡೆದು ನಿಧಾನ ದ್ರೋಹ ಎಸಗುತ್ತಿರುವುದಕ್ಕೆ ಬಳಕೆದಾರರ ನ್ಯಾಯ ಮಂಡಲಿಯಲ್ಲಿ ಅಪರಾಧಿಯಾಗಿಯೂ ನಿಂತಿದೆ.

ಇಷ್ಟರ ಮೇಲೆ ನಡೆಯುವ ಇಂಥ ಸಮಾರಂಭಗಳು ಜ್ಞಾನಯಜ್ಞವೇ? ವಾಮಾಚಾರವೇ? ಗಂಜಿ ಕುಡಿಯುವವನ ಮೀಸೆಗೆ ಅಂಟಿದ ಗಂಧಶಾಲೀ ಅಗುಳು! (೧೪--೧೯೯೧ರಂದು ಉದಯವಾಣಿಯಲ್ಲಿ ಪ್ರಕಟವಾದ ಪತ್ರ)

No comments:

Post a Comment