ದೀಪದಡಿಯ
ಕತ್ತಲೆ - ಅಧ್ಯಾಯ
ಇಪ್ಪತ್ತೈದು
ಸೇಕ್ರೆಡ್ ಹಾರ್ಟ್ಸ್ ಬಾಲಿಕಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ “ಒಂದು ಖಾಲಿ ಹುದ್ದೆ ಇದೆ ಬಾ” ಎಂದ ಕೂಡಲೇ ನಿಂತ ನಿಲುವಿಗೇ ಸರಕಾರೀ ಶಾಲೆಯ ಹುದ್ದೆಗೆ ರಾಜೀನಾಮೆ ಪತ್ರ ಬರೆದು ಹಿಂತಿರುಗಿ ನೋಡದೆ ಓಡಿ ಬಂದು ಸೇರಿಕೊಂಡವಳು ನಾನು. ಅಲ್ಲಿಂದ ಕಳಚಿಕೊಳ್ಳುವ ಅವಸರವೂ ಉದ್ವೇಗವೂ ಆಗ ನನ್ನಲ್ಲಿತ್ತು. ಸರಕಾರೀ ಶಾಲೆಗಳಲ್ಲಿ ಗಂಡು ಹೆಣ್ಣು ಮಕ್ಕಳು ಜೊತೆಯಾಗಿದ್ದರು. ಈಗ ಇಲ್ಲಿ ಹೆಣ್ಣುಮಕ್ಕಳು ಮಾತ್ರ. ಅಲ್ಲಿನ ಗೌಜು, ಗದ್ದಲ, ಲವಲವಿಕೆಗಳು ಇಲ್ಲಿ ಮಾಯ.
ಒಂದು ರೀತಿಯ ಮಿಲಿಟರಿ ಶಿಸ್ತಿನಿಂದ ಇಲ್ಲಿನ ತರಗತಿಗಳು ನಡೆಯುತ್ತಿದ್ದವು. ಸಿಸ್ಟರುಗಳು ರೂಢಿ ಮಾಡಿಕೊಂಡ ಕಾನೂನುಗಳು ನಮಗೂ ಅನ್ವಯವಾಗುತ್ತಿದ್ದುದರಿಂದ ನಾವು ಅದನ್ನು ಮೀರಿ ವರ್ತಿಸುವುದು ಸಾಧ್ಯವಿರಲಿಲ್ಲ. ಈ ಶಿಸ್ತು ಕಲಿಕೆಗೆ ಯಾವ ರೀತಿಯಲ್ಲೂ ಪ್ರಯೋಜನವಾದದ್ದು ನಾ ಕಾಣೆ. ಇಲ್ಲಿಗೆ ಬಂದ ಮೇಲೆ ಬರೀ ಹೆಣ್ಣುಮಕ್ಕಳೇ ಎಂಬ ಕಾರಣಕ್ಕೋ ಏನೋ ನನ್ನಲ್ಲಿ ಒಂದು ರೀತಿಯ ದರ್ಪ ಮತ್ತು ಅಹಂಕಾರ ಹೆಚ್ಚಾಯಿತು. ಶಿಕ್ಷಕಿಯರೇ ಹೆಚ್ಚಾಗಿದ್ದುದರಿಂದ ಈ ಹೆಣ್ಣುಮಕ್ಕಳ ಸರ್ವತೋಮುಖ ಅಭಿವೃದ್ಧಿಯನ್ನು ಹೆತ್ತವರು ನಮಗೇ ಗುತ್ತಿಗೆ ನೀಡಿದ್ದಾರೆಂಬ ಭ್ರಮೆಯಲ್ಲಿ ನಾವು ಅಧಿಕಾರ ಚಲಾಯಿಸುತ್ತಿದ್ದೆವು.
೭೦ರ ದಶಕದಲ್ಲಿ ನಾವು ಶಿಕ್ಷಕಿಯರು ಮಕ್ಕಳೊಂದಿಗೆ ವರ್ತಿಸಿದ ರೀತಿಯನ್ನು ಈಗ ನೆನೆಯುವಾಗ ನಮ್ಮ ಮೂರ್ಖತನದ ಬಗ್ಗೆ ನನಗೇ ಆಶ್ಚರ್ಯವಾಗುತ್ತದೆ. ಆಗ ಏಳನೆಯ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುತ್ತಿದ್ದರು. ನಾವು ಶಿಕ್ಷಕಿಯರು ಏಳನೆಯ ತರಗತಿಯ ಮಕ್ಕಳನ್ನು ಒಂದು ರೀತಿಯಲ್ಲಿ ಚಿತ್ರಹಿಂಸೆ ನೀಡುತ್ತಿದ್ದೆವೇನೋ ಎಂದು ಈಗ ಅನಿಸುತ್ತದೆ. ಪ್ರತೀ
ದಿನ ಸಂಜೆ ಆರೂವರೆಯವರೆಗೂ ಶಾಲೆಯಲ್ಲಿ ಪಾಠ ಓದಿಸಿ ಪ್ರಶ್ನೋತ್ತರಗಳನ್ನು ಬಾಯಿಪಾಠ ಮಾಡಿಸುತ್ತಿದ್ದೆವು. ಡಾ. ಸುಕುಮಾರ ಗೌಡರು `ಮುಕ್ಕುವುದು, ಕಕ್ಕುವುದು, ಹೆಕ್ಕುವುದು' ಎಂಬ ಶಿಕ್ಷಣ ಪದ್ಧತಿಯ ಬಗ್ಗೆ ವಿಮರ್ಶಾತ್ಮಕವಾಗಿ ಟೀಕಿಸಿ ಪುಸ್ತಕ ಬರೆದರಲ್ಲಾ ಅದು ನಮ್ಮಂತಹ ಶಿಕ್ಷಕರ ಅಧ್ಯಾಪನದ ಶೈಲಿಯನ್ನು ಕಂಡೇ ಇರಬೇಕು. ಸಂಜೆ ಮಕ್ಕಳನ್ನು ನಿಲ್ಲಿಸಿ ಬಾಯಿಪಾಠ ಮಾಡಿಸುವುದಕ್ಕೆ ನಾವೇ ಶಿಕ್ಷಕಿಯರು ಒಂದು ವೇಳಾಪಟ್ಟಿಯನ್ನು ನಿಗದಿಮಾಡಿ ಇಂತಹ ದಿನ ಇಂತಹ ಪಾಠವೆಂಬ ಶಿಸ್ತಿಗೆ ಬದ್ಧರಾಗಿ ಸಂಜೆ ಶಾಲೆ ಬಿಟ್ಟ ಮೇಲೆ ಮಕ್ಕಳನ್ನು ನಿಲ್ಲಿಸುತ್ತಿದ್ದೆವು. ಇಂಗ್ಲಿಷ್ ಪಾಠ ಮತ್ತು ಗಣಿತ ಮಕ್ಕಳಿಗೆ ಸ್ವಲ್ಪ ಕಷ್ಟವಾದುದರಿಂದ ಆ ಪಾಠದ ಶಿಕ್ಷಕಿಯರು ಹೆಚ್ಚಿನ ದಿನಗಳಲ್ಲಿ ಮಕ್ಕಳನ್ನು ತಮ್ಮ ವಶದಲ್ಲಿರಿಸಿಕೊಂಡು ಕಲಿಸುತ್ತಿದ್ದರು. ಆಗ ಉಳಿದ ಶಿಕ್ಷಕಿಯರಲ್ಲಿ ತಮ್ಮ ಪಾಠದ ಮಹತ್ವವನ್ನು ಕನಿಷ್ಠಗೊಳಿಸಿದರೆಂಬ ಅಸಮಾಧಾನ ಉಂಟಾಗಿ ಶಿಕ್ಷಕಿಯರೊಳಗೇ ವೈಮನಸ್ಸು ಉಂಟಾದ ಘಟನೆಗಳೂ ನಡೆಯುತ್ತಿದ್ದವು. ನಾವು ಶಿಕ್ಷಕಿಯರಿಗೆ ಮಕ್ಕಳು ಎಲ್ಲರೂ ಪಾಸಾಗಬೇಕೆಂಬ ಸದಾಶಯವಿದ್ದುದು ಹೌದಾದರೂ ಶಿಕ್ಷಣದ ನಿಜವಾದ ಉದ್ದೇಶವನ್ನು ಸಂಪೂರ್ಣ ಕಡೆಗಣಿಸಲಾಗಿತ್ತು ಎಂಬ ಸತ್ಯವನ್ನು ತಿಳಿಯಲು ನನಗೆ ಹೆಚ್ಚು ಕಾಲ ಬೇಕಾಗಲಿಲ್ಲ. ಪ್ರಶ್ನಾಪತ್ರಿಕೆಯಲ್ಲಿರುವ ಕನ್ನಡ, ಇಂಗ್ಲಿಷ್, ಹಿಂದಿ ಪದಗಳನ್ನೇ ಮಕ್ಕಳು ಉತ್ತರಪತ್ರಿಕೆಯಲ್ಲಿ ತಪ್ಪಾಗಿ ಬರೆದುದನ್ನು ಕಂಡಾಗ ನಾನು ದೊಡ್ಡ ಸ್ವರದಲ್ಲಿ ಆರ್ಭಟಿಸಿ ಎಚ್ಚರಿಸಿದರೆ, ಮಕ್ಕಳ ಸುಪ್ತ ಮನಸ್ಸಿನಲ್ಲಿ ಬೇರೂರಿದ ಪರೀಕ್ಷೆಯ ಭಯವು ಇನ್ನಷ್ಟು ಹೆಚ್ಚಾಗಿ ತಪ್ಪುಗಳು ಪುನರಾವರ್ತನೆಯಾಗುತ್ತಿದ್ದುದನ್ನು ಕಂಡೆ. ಭಯರಹಿತ ಮುಕ್ತ ವಾತಾವರಣವಿದ್ದರೆ ಮಾತ್ರ ಮಕ್ಕಳಲ್ಲಿ ಏನನ್ನಾದರೂ ಸಾಧನೆ ಮಾಡುವ ಶಕ್ತಿಯು ಹುಟ್ಟಬಹುದೆಂದು ಕ್ರಮೇಣ ನನಗೆ ಮನವರಿಕೆಯಾಗತೊಡಗಿತು.
ಕೆಲವು ಹುಡುಗಿಯರು ಶಿಕ್ಷಕಿಯರು ಇಂಟರ್ವೆಲ್ನಲ್ಲಿ ಚಾ ಕಾಫಿ ಕುಡಿಯುವುದಕ್ಕೆ ಆಕ್ಷೇಪವೆತ್ತಿದ್ದರು. ನಿಮಗೆ ಮಾತ್ರ ಹಸಿವೆಯಾ? ನಮಗೆ ಹಸಿವಿಲ್ಲವಾ? ನೀವು ಕೋಣೆಯೊಳಗೆ ಹೋಗಿ ವಿರಾಮದಲ್ಲಿ ಚಾ ಕುಡಿಯುವಾಗ ನಿಮಗೆ ನಾವು ಯಾಕೆ ನೆನಪಾಗುವುದಿಲ್ಲ? ಸಾಯಂಕಾಲ ನಾವೇ ಕ್ಲಾಸ್ರೂಂ ಗುಡಿಸಬೇಕು, ಒರಸಬೇಕು ಎಂದು ಡ್ಯೂಟಿ ಹಾಕುತ್ತೀರಲ್ಲಾ? ಅದು ನಿಮ್ಮ ಕ್ಲಾಸು ಎಂದಾದರೆ ನೀವ್ಯಾಕೆ ಗಂಟೆಯಾದ ಕೂಡಲೇ ಮನೆಗೆ ಹೊರಟುಹೋಗುತ್ತೀರಿ? ನಿಮ್ಮ ಕ್ಲಾಸನ್ನು ಶುಚಿಗೊಳಿಸುವ ಹೊಣೆ ನಿಮ್ಮದೂ ಅಲ್ಲವೇ? ನಾನು ಓದಿ ಮೂಕವಿಸ್ಮಿತಳಾದ ಒಂದು ಮಾತು ಇದ್ದದ್ದು ಸೌಮ್ಯ ಸ್ವಭಾವದ ಬುದ್ಧಿವಂತ ಹುಡುಗಿಯ ಪತ್ರದಲ್ಲಿ. ಅದರಲ್ಲಿ ಆಕೆ
``ನಾಯಿಗಳು ಮರಿಗಳನ್ನು ಹೆತ್ತು ಬಿಸಾಡಿದ ಹಾಗೆ ನನ್ನ ಅಪ್ಪ ಅಮ್ಮ ನನ್ನನ್ನು ಹುಟ್ಟಿಸಿದ್ದಾರೆ. ಸಾಕಲು ಶಕ್ತಿಯಿಲ್ಲದವರು ಯಾಕೆ ಹುಟ್ಟಿಸಬೇಕಿತ್ತು? ನನಗೆ ಪುಸ್ತಕ, ಪೆನ್ನು ಕೊಡಿಸಲು ಶಕ್ತಿಯಿಲ್ಲದವರು ಶಾಲೆಗೇಕೆ ಕಳಿಸಬೇಕು? ನನಗೆ ಕಲಿಯುವುದೇ ಬೇಡ ಎಂದು ಅನಿಸುತ್ತದೆ'' ಎಂದು ಬರೆದಿದ್ದಳು. ಈ ಮಕ್ಕಳಿಗೆ ತಮ್ಮ ಮನದ ಕಹಿಯನ್ನೆಲ್ಲಾ ಯಾರಲ್ಲಾದರೂ ಹೇಗಾದರೂ ಹೊರಗೆ ಹಾಕಬೇಕೆಂಬ ಒತ್ತಡ ಒಳಗಿಂದಲೇ ಇತ್ತು. ಬರೆಯಿರಿ ಎಂದು ನಾನು ಹೇಳಿದ ಕೂಡಲೇ ಅವು ಹಸಿ ಹಸಿಯಾಗಿ ಹೊರಗೆ ಬಂದಿದ್ದುವು. ಶಿಕ್ಷಕಿಯರನ್ನು ಶಪಿಸಿದ, ಕೆಟ್ಟ ಪದಗಳಿಂದ ಬೈದ ಮಕ್ಕಳೂ ಇದ್ದರು. ಹಾಗೆಯೇ ಶಿಕ್ಷಕಿಯರ ಒಳ್ಳೆಯ ಗುಣಗಳನ್ನು ಗುರುತಿಸಿದವರೂ ಇದ್ದರು. ನನಗೆ ಅವರು ಕಂಡ ಶಿಕ್ಷಕಿಯರ ಕೆಟ್ಟ ಮುಖಗಳು ಯಾವುವೆಂದು ತಿಳಿಯುವ ಹಂಬಲವಿತ್ತು. ಅದನ್ನು ಮಕ್ಕಳು ಯಾವುದೇ ಮುಲಾಜಿಲ್ಲದೆ ಬರೆದು ತಿಳಿಸಿದ್ದರಿಂದ ನನ್ನ ಮೆದುಳಲ್ಲಿ ತುಂಬಿದ ಕಳೆ ಕೊಳೆಗಳನ್ನು ತೊಳೆದು ಶುದ್ಧಗೊಳಿಸುವುದರಲ್ಲಿ ಸಹಕರಿಸಿದವರು ಈ ನನ್ನ ಮಕ್ಕಳು. ನನ್ನ ಮಾತು, ವರ್ತನೆಗಳಲ್ಲಿ ಕ್ರಮೇಣ ಬದಲಾವಣೆಯಾಯಿತು. ಹೀಗೆ ಪತ್ರ ಬರೆಸುವ ಪದ್ಧತಿಯನ್ನು ಪ್ರತೀ ವರ್ಷ ಮಾಡುತ್ತಿದ್ದೆ. ಪ್ರತೀ ವರ್ಷವೂ ನಮ್ಮ ದುರ್ಗುಣಗಳನ್ನು ಮತ್ತೆ ಮತ್ತೆ ಹೇಳತೊಡಗಿದಾಗ ನಾವು ಬದಲಾಗದೇ ನಿರ್ವಾಹವೇ ಇರಲಿಲ್ಲ.
ಮುಂದುವರಿಯಲಿದೆ
ತುಂಬ ಚೆನ್ನಾಗಿದೆ. ವಿದ್ಯಾರ್ಥಿಗಳ ಭಾವನೆಗಳ ಪ್ರಕಟಕ್ಕೆ ಸ್ವಾತಂತ್ರ್ಯ ನೀಡಿದಾಗ ಹಲವು ಸಮಸ್ಯೆಗಳು, ಗೊಂದಲಗಳು ದೂರವಾಗುತ್ತದೆ. ಶಾಲೆ ಅನ್ನುವುದು ಜೈಲಲ್ಲ - ಪರೀಕ್ಷೆಗಳಷ್ಟೇ ಜೀವನವಲ್ಲ.
ReplyDeleteಕಲಿಸುತ್ತಾ ಕಲಿತು ಮಕ್ಕಳ ಮನೋಲೋಕವನ್ನು ತೆರೆದಿಟ್ಟ ನಿಜ ಅರ್ಥದ ಶಿಕ್ಷಕಿಗೆ ವಂದನೆ, ಅಭಿನಂದನೆ..ಅತ್ಯಂತ ಮಹತ್ವಪೂರ್ಣ ಅಧ್ಯಾಯ.
ReplyDeleteಶಿಕ್ಷಕ ವೃತ್ತಿಯಲಿರುವ ಸಮಸ್ತರಿಗೂ ದಾರಿದೀಪವಾಗಬಲ್ಲ ಅಧ್ಯಾಯವಿದು. ವಿಪರ್ಯಾಸವೆಂದರೆ ಇಂದಿಗೂ ಶಿಸ್ತಿನ ಹೆಸರಲ್ಲಿ ಅನಗತ್ಯ ಕಟ್ಟುನಿಟ್ಟಿನ ಸಂಪ್ರದಾಯಗಳೇ ಎಲ್ಲೆಡೆಯೂ (ವಿಶೇಷವಾಗಿ ಪ್ರತಿಷ್ಟಿತ ಖಾಸಗಿ ಶಾಲೆಗಳಲ್ಲಿ) ವಿಜ್ರಂಭಿಸುತ್ತಿರುವುದು!
ReplyDelete