(ಜಿ.ಎನ್.ಅಶೋಕವರ್ಧನನ `ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ ಅಧ್ಯಾಯ ಐದು)
[ಜಿ.ಟಿ. ನಾರಾಯಣ ರಾಯರ ಸಂಪಾದಕೀಯ ಟಿಪ್ಪಣಿ:
ಪುಸ್ತಕವನೋದುತ್ತ ಮಸ್ತಕಕ್ಕೇರಿಸುತ
ವಿಸ್ತಾರ ದೃಷ್ಟಿ ತಳೆವವನ ಪದತಲದಲ್ಲಿ
ವಿಶ್ವವೇ ತೆರೆದಿಹುದು ಕಾಣ್ – ಸಗ್ಗವಿಹುದಲ್ಲಿ
“ಈ ಪುಸ್ತಕದ ಬಗ್ಗೆ ನಾನು ಏನು
ಹೇಳಬೇಕೆಂದಿರುವೆನೋ ಅದನ್ನು ಪುಸ್ತಕದ ಒಳಗೆ ಕಾಣಬಹುದು” ಉಲ್ಲೇಖನೀಯ ಐನ್ಸ್ಟೈನ್ನಿಂದ.
ದೇಹಕ್ಕೆ ಆಹಾರದಂತೆ ಬುದ್ಧಿಗೆ ವಿದ್ಯೆ. ಆಹಾರ ಬಲ್ಲಾತ ಆರೋಗ್ಯವಂತ. ವಿದ್ಯೆ ತಿಳಿದಾತ ಪ್ರಜ್ಞಾವಂತ. ಉಭಯ ರುಚಿಗಳನ್ನೂ ಪ್ರಯತ್ನಪೂರ್ವಕವಾಗಿ
ರೂಢಿಸಿ, ಪೋಷಿಸಿ ಬೆಳೆಸಬೇಕು.]
(೧೯೯೮ರ ಸುಧಾ ವಾರಪತ್ರಿಕೆಯಲ್ಲಿ “ಮನುಷ್ಯನ ಕನಿಷ್ಠ ಆವಶ್ಯಕತೆಯಿಂದ
ಬೌದ್ಧಿಕ ಮೇವಿನ ಮಟ್ಟಕ್ಕೆ `ಉಡುಗೊರೆ’ ಬೆಳೆದಿದೆ. ಇದು ಇನ್ನಷ್ಟು ಸಂಕೀರ್ಣಗೊಳ್ಳುವಲ್ಲಿ ಈ ಬಿಡಿ ವಿಶ್ಲೇಷಣೆಗಳು ದಾರಿ
ದೀಪವಾದಾವು” ಎಂಬ ಸಂಪಾದಕೀಯ ಟಿಪ್ಪಣಿಯೊಡನೆ ಪ್ರಕಟವಾದ ಲೇಖನ)
ಉಡುತೊಡುಗಳ ಬಗ್ಗೆ ಶುಚಿ ಸಭ್ಯತೆ ಮಾತ್ರ
ಮಾರ್ಗದರ್ಶಕ ಸೂತ್ರಗಳಾಗಿದ್ದ ಕಾಲಕ್ಕೆ ಸಮಾರಂಭ ಯಾವುದೇ ಇರಲಿ ಕೊಡುವ ಉಡುವ+ಕೊರೆ (=ಬಟ್ಟೆ) ಸಮ್ಮಾನವೇ ಆಗುತ್ತಿತ್ತು. ಇಂದು ಬಟ್ಟೆ ಆಯ್ಕೆ ತೀರಾ ಸಂಕೀರ್ಣವಾಗಿರುವುದರಿಂದ (ದೇಶೀ, ವಿದೇಶೀ, ನಕಲೀ, ಶೈಲಿ, ಬಣ್ಣ, ರಚನೆ ಇತ್ಯಾದಿ) ಅಥವಾ ಕೊಡುವವರ ಸ್ಥಾನನಿರ್ದೇಶನ ಈ ವಿಷಯದಲ್ಲಿ ತೊಡಗಿಕೊಂಡಿರುವುದರಿಂದ
ಸ್ಮರಣಿಕೆಗಳಿಗೆ ಉಡುಗೊರೆ ಎಂಬ ಪದ ಪರ್ಯಾಯವಾಗಿ ಬಳಕೆಯಲ್ಲಿದೆ. ಇಂದು ಉಡುಗೊರೆಯಲ್ಲಿ ನಗದು ಹಣದಿಂದ ಪ್ರವಾಸೀಧಾಮದ ಟಿಕೆಟ್ಟಿನವರೆಗೆ, ಚಮಚಾದಿಂದ ಕಾರು ಚಾವಿಯವರೆಗೆ ಏನೂ ಇರಬಹುದು. ನಾನೊಬ್ಬ ಪುಸ್ತಕ ವ್ಯಾಪಾರಿ. ನನ್ನ ವೃತ್ತಿ ಅನುಭವದಲ್ಲಿ ಕೇವಲ ಪುಸ್ತಕ ಉಡುಗೊರೆಯನ್ನು ವಿಶ್ಲೇಷಿಸುತ್ತೇನೆ.
ಸುಬ್ರಾಯರು ವೃತ್ತಿ ರಂಗಕ್ಕಿಳಿದ ಮೇಲೆ
ಪುಸ್ತಕ ಬಿಡಿಸಿ ನೋಡಿದವರಲ್ಲ. ಆದರೆ ಅವರು ನನ್ನಲ್ಲಿಗೆ ಬಂದು “…ಮದುಮಗ ಪುಸ್ತಕ ಕೀಟ.
ಅದರಲ್ಲೂ
ಭೈರಪ್ಪಾಂದ್ರೆ ಮುಗಿದೇ ಹೋಯ್ತು. ಅವರ ಸಾಕ್ಷಿ ಅವನಲ್ಲಿಲ್ಲವಂತೆ. ಅದನ್ನೇ ಕೊಡಿ” ಎಂದು ಒಯ್ದರು. ಉಡುಗೊರೆ ಪಡೆಯುವವನ ಒಲವು ಮತ್ತು ಕೊರತೆ ಅರಿತು ಕೊಡುವ ಪ್ರವೃತ್ತಿ
ಇವರದು. ಇಂದು ಪುಸ್ತಕದಂತೇ ಇವರು ನಾಳೆ ಇನ್ನೊಬ್ಬರಿಗೆ ಜಪಾನೀ ಟೂ ಇನ್ ಟೂ ಕೊಡಬಹುದು.
ಸುರೇಶನಿಗೆ ಉಡುಗೊರೆ ವಿಶ್ವಾಸ
ಪ್ರಕಟಣೆಗೆ ಒಂದು ನೆಪ. ಈತ ಏನಾದರೊಂದು ವಸ್ತು ಕೊಡುವಷ್ಟೇ
ನಿರ್ಭಾವುಕನಾಗಿ ಪುಸ್ತಕವನ್ನೂ ಕೊಡುವುದುಂಟು.
ಆಗೆಲ್ಲ ಅಂಗಡಿಗೆ ಬಂದು
“ಒಂದಿಪ್ಪತ್ತು ರೂಪಾಯಿಯ ಒಳ್ಳೇ ಪುಸ್ತಕ ಕೊಡಿ” ಎಂದು ಖರೀದಿಸುತ್ತಾನೆ. ಇದರಿಂದ ಓದಿನಲ್ಲಿ ದಾರ್ಶನಿಕರ ಬೆನ್ನು ಹತ್ತಿದವರಿಗೆ ಸ್ನೋ ಸೆಂಟುಗಳ
ಕನಸೋ, ಜ್ಯೋತಿರ್ವಿಜ್ಞಾನಿಗೆ ಜಾತಕಫಲ ಸಾರೋದ್ಧಾರವೋ ಉಡುಗೊರೆಯಾಗುವ
ಸಂಭವವಿದೆ. ಸುರೇಶನಂಥವರಿಗೆ
ಉಡುಗೊರೆಯ ಸ್ನೇಹಾಚಾರದ ಅರಿವಿದೆ.
ಆದರೆ ಅದು
ಅರ್ಥವತ್ತಾಗಿರಬೇಕಾದ ಆವಶ್ಯಕತೆ ಕಾಣಿಸುವುದಿಲ್ಲ. ಅದು ಪರಸ್ಪರ ಗೌರವಕ್ಕೆ ಚ್ಯುತಿ ತಂದೀತೆಂಬ ಅಂದಾಜೂ ಇಲ್ಲದಿರುವುದು ಆಶ್ಚರ್ಯ.
ಸತ್ಯಾಜಿರಾಯರು ದೊಡ್ಡ ಕುಳ. ಅವರ ಎಲ್ಲ ಚಟುವಟಿಕೆಗಳಲ್ಲಿ ದೊಡ್ಡತನದ ಪ್ರದರ್ಶನವಿದೆ. ಬಡಪಾಯಿ ಭೀಮಯ್ಯ ಮೇಸ್ಟ್ರು ರಾಯರ ವ್ಯವಹಾರ ಚಾತುರ್ಯದಲ್ಲಿ ಸಾವಿರಾರು
ರೂಪಾಯಿ ಕಳೆದುಕೊಂಡವರಾದರೂ ಇವರ ವಿರೋಧ ಕೇವಲ ಗೊಣಗಾಟಕ್ಕಷ್ಟೇ ಸೀಮಿತವಾಗಿತ್ತು. ಮಾಸ್ಟ್ರ ಮದುವೆಗೆ ರಾಯರ ಉಡುಗೊರೆ ನಾನೂರು ರೂಪಾಯಿ ಬೆಲೆಯ
ವಿಶ್ವಕೋಶದ ಸಂಪುಟಗಳು. ಸಹಜವಾಗಿ ಸಾರ್ವಜನಿಕರಿಂದ ರಾಯರ
ಗುಣಗಾನ, ಮೇಸ್ಟ್ರ ಹಳೇ ಗೊಣಗಾಟದ ಬಗ್ಗೆ ತಿರಸ್ಕಾರ ಮೂಡಿಬಂತು! ವಿಶ್ವಕೋಶ ರಾಯರ ವ್ಯವಹಾರ ಚದುರಂಗದಲ್ಲೊಂದು ಕುದುರೆನಡೆ.

ಸಾಯಿಕೃಪಾ ನಿಲಯದ ಮರ್ತುಪೈಗಳ
ಷಷ್ಟ್ಯಬ್ದಿಗೆ ಕೋವೂರರ ಬಿಗಾನ್ ಗಾಡ್ಮೆನ್ ಪುಸ್ತಕದ ಉಡುಗೊರೆ, ವಿಚಾರವಾದೀ ಸಂಘದ ಸುರೇಂದ್ರ ನಾಯಕರ ರಿಜಿಸ್ಟರ್ ಮದುವೆಯಲ್ಲಿ, ಉಡುಗೊರೆ ನಿಷೇಧದ ಸೂಚನೆಯಿದ್ದಾಗಲೂ ಬಲವಂತವಾಗಿ ದೇವರನ್ನು ನಂಬುವ
ಹಿಡಿಸುವುದು ಅವಮಾನಕಾರಿ. ಇಲ್ಲಿ ಉಡುಗೊರೆ ರಣವೀಳ್ಯವೇ ಸರಿ.
ಮೂಲ್ಕಿಯ ಭಟ್ಟರೂ ಪಾಂಗಾಳದ ನಾಯಕರೂ
ಅಪರಿಮಿತ ಪುಸ್ತಕ ಪ್ರೇಮಿಗಳು. ಪರಸ್ಪರ ಪುಸ್ತಕ ವಿನಿಮಯಿಸಿಕೊಂಡು
ರುಚಿಯನ್ನು ಹಂಚಿಕೊಂಡವರು, ಮೈತ್ರಿಯನ್ನು ಬೆಳೆಸಿದವರು. ಇವರ ನಡುವೆ ಉಡುಗೊರೆ ಸಂದರ್ಭ ಬೇಡುವುದಿಲ್ಲ, ಆ ಔಪಚಾರಿಕತೆಗೆ ಇವರು ಅತೀತರು.
****
ವಿದ್ಯೆಗೆ ಪರ್ಯಾಯ ಶಬ್ದವೇ ಪುಸ್ತಕ
ಎನ್ನುವ ಮಾತುಂಟು. ವಿದ್ಯಾಸಂಸ್ಥೆಯ ಅನುಗ್ರಹಗಳು ಪುಸ್ತಕವೇ ಆಗುವುದು ಶೋಭೆಯ ವಿಚಾರ. ಹರಕೆ ಸಲಾವಣೆಯ ಸಂಸ್ಥೆಗಳು ಪ್ಲ್ಯಾಸ್ಟಿಕ್ ಡಬ್ಬಿಯೋ ಜಂಭದ ಬಿಲ್ಲೆಯೋ
ಕೊಟ್ಟು ಸುಧಾರಿಸಿಯಾವು. (ಮರೆಯಬೇಡಿ, ಇಂದು ವಿದ್ಯಾರಂಗವೂ ಹಣ ಮಾಡುವ ದಂಧೆಯೇ ಆಗಿದೆ.) ಅವಕ್ಕೂ ಒಂದು ಕೈ ಉತ್ತಮರು, ತಲ ಹತ್ತು ಸಣ್ಣ,
ಹದ ಮತ್ತು ದೊಡ್ಡ
ನಿಘಂಟೋ ಸಾಮಾನ್ಯಜ್ಞಾನದ ಪುಸ್ತಕವನ್ನೋ ಅಲಂಕಾರದ ಹಾಳೆಯಲ್ಲಿ ಕಟ್ಟಿಸಿಯಾರು. ಇಂಥವರು ತಮ್ಮ ವೃತ್ತಿ ಆರಂಭದ ದಿನಗಳಿಂದ ಬದಲದ ನೋಟ್ಸು, ವರ್ತಮಾನಕ್ಕಳವಡದ ಪ್ರವಚನ ವೈಖರಿ, ಅಸಂಗತ ವಿಧಿ ನಿಷೇಧಗಳ ಆಡಳಿತೆಯನ್ನೆಲ್ಲ ರೂಢಿಸಿಕೊಂಡಂತೆ ಬಹುಮಾನಗಳ
ಬಗ್ಗೆಯೂ ಏನೋ ಅಚಲ ನಿರ್ಧಾರಕ್ಕೆ ಬದ್ಧರಿರುತ್ತಾರೆ. ನಾವು ಅವರಿಗೆ ವೈವಿಧ್ಯ, ಹೊಸತನ ಸೂಚಿಸುವುದೆಂದರೆ ವ್ಯಾಪಾರ ಕಳೆದುಕೊಂಡಂತೆಯೇ ಸರಿ. ನಾವು ಸುಮ್ಮನಿದ್ದರೋ ಹೆಚ್ಚು ಬಹುಮಾನಿತರಾದವರು ಹಿಂದಿನಿಂದ ಬಹುಮಾನವನ್ನು
ನಗದುಗೊಳಿಸಲು ದಾರಿ ಹುಡುಕುವುದನ್ನು ನೋಡಬೇಕಾಗುತ್ತದೆ. ಅದನ್ನು ತಪ್ಪಿಸಲು ನಾನು ಮಾಡಿದ ಕೆಲವು ಪ್ರಯೋಗಗಳನ್ನು ನೋಡಿ.
ಬಹುಮಾನದ ಆಯ್ಕೆಗಾರರು ಯಾವುದೇ ಪುಸ್ತಕದ
ಹೆಚ್ಚುವರಿ ಪ್ರತಿಗಳನ್ನು ಕೇಳಿದಾಗ (ಇವು ಸಾಧಾರಣವಾಗಿ ಸುಲಭ ಬೆಲೆಯ ಗಜ
ಗಾತ್ರದವೇ, ಅಂದರೆ ಶ್ರೀ ರಾಮಾಯಣದರ್ಶನಂ, ಸಂಕ್ಷಿಪ್ತ ನಿಘಂಟು,
ಶ್ರೀ ಸಾಹಿತ್ಯ
ಇತ್ಯಾದಿ) ನಾನು ಸುಳ್ಳೇ “ಇಲ್ಲ” ಅಂದಿದ್ದೇನೆ. ಅನಿವಾರ್ಯತೆಯಿಂದ ಅವರು ವೈವಿಧ್ಯಗಳಿಗೆ
ಮನಸ್ಸು ಓಡಿಸುವಂತೆ ಮಾಡಿದ್ದೇನೆ. ವಿದ್ಯಾ ಸಂಸ್ಥೆಗಳಲ್ಲೇ ಆರಿಸಲು
ಅನುಕೂಲವಾಗುವಂತೆ ಅಗತ್ಯಕ್ಕಿಂಥ ಹೆಚ್ಚು ಮೊತ್ತದ ಪುಸ್ತಕಗಳನ್ನು ಕಳಿಸಿ, ಕಾದು, ಉಳಿದವನ್ನು ವಾಪಾಸು ಪಡೆದಿದ್ದೇನೆ. ಸಮಾರಂಭದ ಅನಂತರ ಬಹುಮಾನಿತರಿಗೆ ಪುಸ್ತಕಗಳನ್ನು ಅವರಿಚ್ಛೆಯಂತೆ ಬದಲಿಸಿಕೊಳ್ಳಲು
ಅವಕಾಶ ಕೊಟ್ಟಿದ್ದೇನೆ. ಅಂಗಡಿಯ ಅಧಿಕೃತ ಉಡುಗೊರೆ ಚೀಟಿ, ಸಂಸ್ಥೆಗಳೇ ಕೊಡುವ ಬಹುಮಾನ ಚೀಟಿ ಚಲಾವಣೆಗೆ ಅನುಕೂಲಿಸಿದ್ದೇನೆ. ವಿದ್ಯಾರ್ಥಿಗಳಿಗೇ ಹಣ ಕೊಟ್ಟು, ಎಲ್ಲಿಂದಾದರೂ ಪುಸ್ತಕ ಕೊಂಡು, ಬಿಲ್ಲು ತನ್ನಿ ಎಂದು ವಿಕೇಂದ್ರೀಕರಣ ಜಾರಿಗೊಳಿಸಿದ ಸಂಸ್ಥೆಗಳಿಗೂ
ಮನ್ನಣೆ ಕೊಟ್ಟಿದ್ದೇನೆ.
ಇಲ್ಲೆಲ್ಲ
ಸಾಮಾನ್ಯವಾಗಿ ಅಧ್ಯಾಪಕರಿಗೆ ಹೊಣೆ ಕಡಿಮೆಯಾದದ್ದಕ್ಕೆ ಸಂತೋಷ, ಬಹುಮಾನಿತರಿಗೆ ತಮ್ಮ ರುಚಿ ನಿರ್ಧರಿಸುವ ಸ್ವಾತಂತ್ರ್ಯ
ಸಿಕ್ಕಿದ್ದಕ್ಕೆ ಸಂಭ್ರಮ ತೋರುತ್ತವೆ. ಹೆಚ್ಚಿನ ಬಹುಮಾನಿತರು ಸಂಸ್ಥೆ ಕೊಟ್ಟ
ಹಣದ ಮಿತಿಗೆ ತಮ್ಮದಷ್ಟನ್ನು ಸೇರಿಸಿ ಪುಸ್ತಕ ಆರಿಸಿದ್ದಿದೆ. ಆದರೆ ಇಲ್ಲೂ ಮೊಳೆತ ಕೆಲವು ಹುಳುಕುಗಳನ್ನು ನೋಡಿ.
ಆಯ್ಕೆಗೆ ಹೋಗಿ ಬಂದ ಪುಸ್ತಕದ ಹೊದಿಕೆಯೋ
ಪುಟವೋ ಹರಿದು ಬರುವುದು, ಅವಸರದ ಓದುಗೆಯಿಂದ ಹುಡಿಯಾಗುವುದು, ಒಳ್ಳೊಳ್ಳೆ ಚಿತ್ರಗಳು
ಮಾಯವಾಗುವುದು ಇದೆ! ಉಡುಗೊರೆ ಚೀಟಿಯನ್ನು ೫೦% ಕಡಿತಕ್ಕೊಳಪಡಿಸಿಯಾದರೂ ನಗದು ಪಡೆಯಬಹುದೇ, ನಗದೇ ಪಡೆದು ಬಂದವರು ಮತ್ತೆ ಕಮಿಶನ್ ಆಧಾರದಲ್ಲೇ ಹುಸಿ ಬಿಲ್
ಸಿಕ್ಕೀತೇ ಎಂದು ಪ್ರಯತ್ನಿಸಿದ್ದು ಇದೆ. ಮನೆಯ ಹಿರಿಯರ ಓದುವಣಿಗೆಗೆ ಮಕ್ಕಳ
ಬಹುಮಾನ ಬಲಿಯಾಗುವುದು ತೀರಾ ಸಾಮಾನ್ಯ. ಇಲ್ಲವಾದರೆ Cricket coaching manual ನೋಡಿಟ್ಟು ಹೋದ ಹುಡುಗನ ಉಡುಗೊರೆ ಚೀಟಿ
ಹಿಡಿದು ಬಂದ ತಂದೆ ಗೀತಾಭಾವಧಾರೆ ಒಯ್ಯುವುದುಂಟೇ? ವಿದ್ಯಾರ್ಥಿ ದೆಸೆಯ ಸ್ಮರಣಿಕೆಯಾಗಿ ಹಲವು ಕಾಲ ನಿಲ್ಲಬೇಕಾದ ಪುಸ್ತಕ
ಹಾಲೀ ವರ್ಷದ ಗೈಡಿಗೋ ಬರುವ ವರ್ಷದ ಪಠ್ಯಕ್ಕೋ ಬರವಣಿಗೆಯ ಸಾಮಗ್ರಿಗಳಿಗೋ ವಿನಿಯೋಗವಾಗುವುದೂ
ಇಲ್ಲದಿಲ್ಲ.
ಒಂದು ಶಾಲೆಯವರು ಬಹುಮಾನಿತರಿಗೇ ಹಣ
ಕೊಟ್ಟು ಖರೀದೀ ಸ್ವಾತಂತ್ರ್ಯ ಕೊಟ್ಟರು. ಅದೇ ಶಾಲೆಯ ಅಧ್ಯಾಪಕನೊಬ್ಬ ಗುಟ್ಟಾಗಿ ನನ್ನಲ್ಲಿಗೆ ಬಂದು “ಹತ್ತು ಅಂಗಡಿಗಳಿಗೆ ಹಂಚಿಹೋಗಬಹುದಾದ ಮಕ್ಕಳನ್ನು ನಾನಿಲ್ಲಿಗೇ ತಂದು
ವ್ಯಾಪಾರ ಮಾಡಿಸುತ್ತೇನೆ. ನನಗೆಷ್ಟು ಕಮಿಶನ್ ಕೊಡ್ತೀರಿ” ಎಂದು ನಿರ್ಲಜ್ಜನಾಗಿ ಕೇಳಿದ್ದ. ನಾನು ಒಪ್ಪಲಿಲ್ಲವಾದರೂ ಈ ತಲೆಹಿಡುಕ ಎಲ್ಲೆಡೆಗಳಲ್ಲೂ ಸೋತಾನು ಎಂದು
ನನಗನ್ನಿಸುವುದಿಲ್ಲ!
ಬಾಯಿಪಾಠದ ತಾಕತ್ತೇ
ಬುದ್ಧಿವಂತಿಕೆಯೆಂದು ಭ್ರಮಿಸಿದ ಕೆಲವು ಬಹುಮಾನಿತರು ಅಥವಾ ಅವರ ಹಿರಿಯರು ಪಠ್ಯೇತರ
ಪುಸ್ತಕಗಳನ್ನು ಹಳಿದದ್ದಿದೆ. ಇದಕ್ಕವಕಾಶ ಮಾಡಿಕೊಟ್ಟ ಸಂಸ್ಥೆಯನ್ನೂ
ನನ್ನನ್ನೂ ಸೇರಿಸಿ ಶಪಿಸಿದ್ದಿದೆ. ಅವಕಾಶವನ್ನೇ ಹಾಳುಗೆಡವಿಕೊಂಡದ್ದೂ ಇದೆ!
ಕನ್ನಡಿಗ ಧನಿಕರೊಬ್ಬರಿಗೆ ಹಳ್ಳಿ
ಪ್ರಧಾನವಾದ ತಮ್ಮ ತಾಲೂಕಿನ ಎಲ್ಲ ಶಾಲೆಗಳಲ್ಲಿ ಇಂಗ್ಲಿಷ್ ಬೆಳೆಸುವ ಉಮೇದು ಬಂತು. ಇವರು ಒಂದು ಮೊತ್ತ ನಿಗದಿ ಮಾಡಿ, ಅಷ್ಟು ಇಂಗ್ಲಿಷ್ ಪುಸ್ತಕ ಖರೀದಿಸಿದ ಎಲ್ಲ ಶಾಲೆಗಳಿಗೂ ತಾವು
ಒಂದೊಂದು ಕಪಾಟು ದಾನ ಮಾಡುವುದಾಗಿ ಘೋಷಿಸಿದರು. ಖರೀದಿಯೋಗ್ಯ ಪುಸ್ತಕಗಳ ಪಟ್ಟಿ, ವಿದ್ಯಾ ಇಲಾಖೆಯ ಒತ್ತಾಯ, ಶಾಲಾಭಿವೃದ್ಧಿ ಸಮಿತಿಗಳ ಕೀಳರಿಮೆ ಮುಪ್ಪುರಿಗೊಂಡು ಪುಸ್ತಕ
ವ್ಯಾಪಾರ ಚೆನ್ನಾಗಿಯೇ ನಡೆಯಿತು. ಶಾಲಾ ದಿನಾಚರಣೆಗೆ ಆಡುವ ನಾಲ್ಕು ಕನ್ನಡ
ನಾಟಕಗಳ ಕನಿಷ್ಠ ಸಂಗ್ರಹವೂ ಇಲ್ಲದ ಶಾಲೆಗಳಿಗೆ ಇಂಗ್ಲಿಷ್ ವ್ಯಾಕರಣದ, ನುಡಿಗಟ್ಟಿನ ಪ್ರಗಲ್ಭ ಹೊತ್ತಗೆಗಳು, ರಂಪಲ್ ಸ್ಟಿಲ್ಟ್ ಸ್ಕಿನ್, ಹಂಪ್ಟಿ ಡಂಪ್ಟಿಗಳು ಸದೃಢ ಕಪಾಟಿನೊಡನೆ ಸೇರಿದುವು. ಕೊಡುಗೈ ದಾನಿಗಳಿದ್ದಾರೆ, ಪಡೆಯಲು ದೀನರೂ ಇದ್ದಾರೆ.ಆದರೆ ಔಚಿತ್ಯ ತೋರಿ ನುಡಿಯುವ ಕಲೆಗಾರರಿಲ್ಲದೆ ಇಲ್ಲಿ ಅತಿಸಾರದವನಿಗೆ
ಈಂದ ಹಸು ಕೊಟ್ಟಂತಾಯ್ತು ದಾನ.
ವರ್ತಮಾನದ ಅಂದರೆ ೨೦೧೬ರ ಅಡಿಗೀಟು: ಲಿಪಿಯುಕ್ತ ಭಾಷೆ ತೀವ್ರ ಸವಕಳಿಗೆ ಸಿಕ್ಕಿದೆ. ಸಂಸ್ಕೃತಿಯ ಅಭಿವ್ಯಕ್ತಿಯಾಗಿ ರೂಪುಗೊಂಡ ಎಷ್ಟೋ ಪದಗಳು, ನುಡಿಗಟ್ಟುಗಳು ನೆಲೆಯನ್ನೂ ಅರ್ಥವನ್ನೂ ಕಳೆದುಕೊಂಡಿವೆ. ಇದರಿಂದ ಮುದ್ರಿತ ಪುಸ್ತಕವೆನ್ನುವುದೇ ಅಳಿವಿನಂಚಿನ
ಮಾಧ್ಯಮವಾಗಿರುವಾಗ ಪುಸ್ತಕ ಉಡುಗೊರೆ ಹಾಸ್ಯಾಸ್ಪದ ಸಂಗತಿ, ಹೆಚ್ಚೆಂದರೆ ಪರಂಪರೆಯ ಪಳೆಯುಳಿಕೆ. ನಾಲ್ಕೈದು ದಶಕಗಳ ಹಿಂದಿನ ಮಾತು: ಮಂಜೇಶ್ವರ ಗೋವಿಂದಪೈಗಳ ಗ್ರಂಥ ಭಂಡಾರ ದಾನಕ್ಕೆ ಸಿಗುತ್ತದೆ ಎಂದಾಗ
ಉಡುಪಿಯ ಕುಶಿ ಹರಿದಾಸ ಭಟ್ಟರು ಅವರಿವರನ್ನು ಬೇಡಿ ಅವಕ್ಕೆ ಸಾಗಣೆ ವ್ಯವಸ್ಥೆ ಹೊಂದಿಸಿ, ಎಂಜಿಎಂ ಕಾಲೇಜಿನ ಆಶ್ರಯದಲ್ಲಿ ಒಂದು ಸಂಶೋಧನಾ ಕೇಂದ್ರದ ನೆಲೆಯನ್ನೇ
ಸ್ಥಾಪಿಸಿ ಸಂಭ್ರಮಿಸಿದರು. ಅದೇ ಈಚೆಗೆ ಬಹುದೊಡ್ಡ
ಪುಸ್ತಕಪ್ರೇಮಿಯೊಬ್ಬರು ತಮ್ಮೆಲ್ಲ ಪುಸ್ತಕಗಳನ್ನು ಮಂಗಳೂರಿನ ಹಿರಿಯ ವಿದ್ಯಾಸಂಸ್ಥೆಯೊಂದಕ್ಕೆ
ದಾನ ಮಾಡುತ್ತೇನೆ ಎಂದಾಗ ಸಂಸ್ಥೆಯ ವರಿಷ್ಠರು ಮೊದಲು ಕಪಾಟಿಲ್ಲವೆಂದರು. ಅನಂತರ ಜಾಗವಿಲ್ಲವೆಂದು ತಿರಸ್ಕರಿಸಿದರು!
ಪುಸ್ತಕ ಉಡುಗೊರೆಯ ಬಗ್ಗೆ ಹಲವು ಮಜಲುಗಳನ್ನು ವಿವರಿಸಿದ್ದಕ್ಕೆ ಧನ್ಯವಾದಗಳು.. ಬಹುಷಃ ಶಾಲೆಗಳಲ್ಲಿ ವಿದ್ಯಾರ್ಥಿಯ ಆಯ್ಕೆಗೆ ಬಿಟ್ಟರೆ ಒಳ್ಳೆಯದು..ಇಲ್ಲವಾದಲ್ಲಿ ಅದು ಧೂಳುಹಿಡಿದು ಮೂಲೆಗುಮ್ಪಾಗಬಹುದಷ್ಟೇ .. ಅಧ್ಯಾಪಕರು ಸಮಾಜದ ಒಂದು ಮುಖ ಹಾಗಾಗಿ ಇಂದು ನಿಸ್ವಾರ್ಥ ಸೇವೆಯ ವ್ಯಕ್ತಿಗಳು ವಿರಳ
ReplyDeleteಕೆಲ ವರ್ಷಗಳ ಹಿಂದೆ ಪಿ. ಯು. ಸಿ. ಯಲ್ಲಿ ಓದುತ್ತಿದ್ದ ಹುಡುಗಿಯೋರ್ವಳ ಜನ್ಮ ದಿನಾಚರಣೆಗೆ ಆಹ್ವಾನಿತನಾಗಿದ್ದೆ. ಉಡುಗೊರೆಯ ವಿಷಯದಲ್ಲಿ ತತ್ಕಾಲಕ್ಕೆ ನನಗೆ ಬೇರೇನೂ ತೋಚದೆ ವಿಮಾನ ನಿಲ್ದಾಣದ ಅಂಗಡಿಯಿಂದ ಮಾಜಿ ರಾಷ್ಟ್ರಪತಿ ಕಲಾಂ ರ "Wings of Fire" ಪುಸ್ತಕವನ್ನು ಆಯ್ದು ಉಡುಗೊರೆ ಕೊಟ್ಟಿದ್ದೆ (ಅದಕ್ಕೊಂದು ಹೊದಿಕೆಯೂ ಇಲ್ಲದೆ). ಅಲ್ಲಿ ಬೇರೆ ಉಡುಗೊರೆಗಳ ರಾಶಿಯನ್ನು ಕಂಡಾಗ ನನ್ನ ಉಡುಗೊರೆ ಏನೂ ಅಲ್ಲವೆಂದು ನನಗನ್ನಿಸಿತ್ತು. ಕಾರ್ಯಕ್ರಮ ಕಳೆದು ಎರಡು ದಿನಗಳ ನಂತರ ಆ ಹುಡುಗಿ ಸಹಜ ಖುಷಿಯಿಂದ (ತೋರಿಕೆಗಾಗಿ ಅಲ್ಲ) " ಅಂಕಲ್ ನಿಮ್ಮ ಉಡುಗೊರೆಯಷ್ಟು ಒಳ್ಳೆಯ ಉಡುಗೊರೆ ಬೇರೆ ಯಾವುದೂ ನನಗೆ ಸಿಕ್ಕಿಲ್ಲ" ಎಂದಾಗ ನನಗಾದ ಖುಷಿಯನ್ನು ಮರೆಯಲಾಗದು.
ReplyDeleteGood angle.BUT--printed book will not be fossil or oudated for a long time to come
ReplyDeleteನಿಮ್ಮ ಬರಹ ತುಂಬಾ ವಿಚಾರಗಳನ್ನು ತಿಳಿಸಿ ಕೊಟ್ಟಿತು..ಮುಂದೆ ಪುಸ್ತಕ ಬಹುಮಾನ ಕೊಡುವಾಗ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ಬಿಡುವೆ
ReplyDelete