11 March 2016

ಅಣ್ಣನ ಸ್ಮೃತಿಗಾಗಿ ಉರುಳು ಸೇವೆ

.ಪಿ. ತಿಮ್ಮಪ್ಪಯ್ಯ, ಅಂದರೆ ಪುತ್ತೂರಿನಾಚಿನ ಹಳ್ಳಿ ಮರಿಕೆಯಲ್ಲಿದ್ದ ನನ್ನ ದೊಡ್ಡ ಸೋದರಮಾವ, ನಾನು ಸಂಬೋಧಿಸುತ್ತಿದ್ದಂತೆ ಅಣ್ಣ, ಸುಮಾರು ಎರಡು ವರ್ಷದ ಹಿಂದೆ ತೀರಿಹೋದದ್ದರ ನೆನಪಿನ ದಿನವದು (೨೫--೨೦೧೬). (ನೋಡಿ: ಅಸಮ ಸಾಹಸಿ, ಮರಿಕೆಯ ಅಣ್ಣ) ನೆಪದಲ್ಲಿ ಬಾಲ್ಯದ ನೆನಪುಗಳನ್ನು ಮತ್ತೆ ಹೆಕ್ಕುವ, ಆಪ್ತರೊಡನೆ ಒಡನಾಡುವ ಸಂತೋಷಕ್ಕಾಗಿ ಭಾಗಿಯಾಗಲು ಹೊರಟೆ. ದೇವಕಿ ಅನ್ಯ ಕಾರ್ಯನಿಮಿತ್ತ ಹಿಂದುಳಿದಳು. ಅಣ್ಣನ ಬಹುಮುಖೀ ಚಟುವಟಿಕೆಗಳ ಬಹುಭಾಗದ ಓಡಾಟವೆಲ್ಲ ನಡೆದದ್ದು ಸೈಕಲ್ಲಿನಲ್ಲೇ. ಅದರ ಸ್ಮೃತಿಗೂ ನನ್ನ ಚಟ ಹೊಂದಿ ಬಂತೆಂದು ಸೈಕಲ್ಲನ್ನೇ ಏರಿಬಿಟ್ಟೆ.

ಬೆಳಿಗ್ಗೆ ಆರು ಗಂಟೆಗೇ ದೀಪ ಬೆಳಗಿಕೊಂಡು ಪುತ್ತೂರು ದಾರಿ ಹಿಡಿದೆ. ಅಡ್ಯಾರ್ ವಲಯಗಳಲ್ಲಿ ತೆಳು ಮಂಜುಮುಸುಕಿತ್ತು. ತುಂಬೆ ಸಮೀಪಿಸುತ್ತಿದ್ದಂತೆ ಇನ್ನೂ ನಿದ್ರೆಯ ಮಂಪರು ಹರಿಯದ ಸೂರ್ಯ ಎದ್ದ. ಜೋಡುಮಾರ್ಗ ಕಳೆದು, ನೇತ್ರಾವತಿ ಸಂಕದಲ್ಲಿ ಐದು ಮಿನಿಟು ವಿರಮಿಸಿ, ಮುಂದುವರಿದೆ. ಸೈಕಲ್ ಸವಾರಿಗೆ ಮಂಗಳೂರು ಪುತ್ತೂರು ದಾರಿಯಲ್ಲಿ ನರಹರಿ ಪರ್ವತದ ಭುಜ ಹತ್ತುವುದೊಂದೇ ಸಿಗುವ ತುಸು ಕಠಿಣ ಸವಾಲು. ನೇತ್ರಾವತಿ ಸಂಕದ ವಿರಾಮದನಂತರ ನರಹರಿ ಬೆಟ್ಟವನ್ನೂ ನಗಣ್ಯ ಮಾಡಿ, ನನ್ನದು `ತಡೆರಹಿತ ಬಸ್ಸು’! (ಹಿಂದೆ, ಕೆಂಬೋರ್ಡು ಹೊತ್ತು, ಜೋಡುಮಾರ್ಗದಲ್ಲಿ ಮಾತ್ರ ನಿಲುಗಡೆ ಇದ್ದು, ಪುತ್ತೂರು ಮಂಗಳೂರುಗಳ ನಡುವೆ ಓಡಾಡುತ್ತಿದ್ದ ಸರ್ಕಾರಿ ನಾನ್-ಸ್ಟಾಪ್ ಬಸ್ಸುಗಳ ನೆನಪಿಗೆ) ಕಲ್ಲಡ್ಕದ ರಿಂಜಿಂ ಕಾಫಿ ಖ್ಯಾತಿಯ ಲಕ್ಷ್ಮೀ ಹೋಟೆಲ್ ಸೈಕಲ್ಲಿಗರಿಗೆಲ್ಲ ಪ್ರಿಯ ಇಂಧನ ಕೇಂದ್ರ. ಆದರೆ ಬೆಳಗ್ಗಿನ ಐದು ಗಂಟೆಯ ಅವೇಳೆಯಲ್ಲೂ ದೇವಕಿ ಬಿಸಿ ದೋಸೆ, ಕಾಫಿ ಮಾಡಿಕೊಟ್ಟದ್ದರಿಂದ ಈ ಬಸ್ಸಿಗೆ ಇಂಧನದ (`ಡೀಸೆಲ್ ವೆಚ್ಚ’ದ) ಚಿಂತೆಯೂ ಇರಲಿಲ್ಲ.ಜೇಸೀಬೀ ಹಿತಾಚೀಗಳ ಜನಪ್ರಿಯತೆಯೊಡನೆ ದಿಣ್ಣೆ ಸವರುವ, ಕಣಿವೆ ತುಂಬುವ ಕೆಲಸ ಈಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಈ ವಲಯದಲ್ಲಿ ಹಡಿಲು ಬಿಟ್ಟ ಗದ್ದೆಗಳನ್ನು ತುಂಬುವುದರಿಂದಲೂ ಮುಂದೆ ಹೋಗಿ, ಫಲವತ್ತಾದ ತೆಂಗಿನ ಮರಗಳನ್ನು ಅಕ್ಷರಶಃ ಕಂಠಮಟ್ಟ ಮಣ್ಣಿನಲ್ಲಿ ಮುಳುಗಿಸಿರುವುದೂ ಕಾಣಿಸಿತು. ತೊರೆಗಳ ಸಹಜ ಹರಿವುಗಳೆಲ್ಲ ನಿರ್ದೇಶಿತ ಕಾಂಕ್ರೀಟ್ ಚರಂಡಿಗಳಲ್ಲಿ ಒಣಗುತ್ತಿವೆ. ಗುಡ್ಡಬೆಟ್ಟಗಳೆಲ್ಲ ತಮ್ಮ ಚೂಪು ಕಳೆದುಕೊಂಡು, ಬಯಲೇ ಆಗುತ್ತಿವೆ. (ಮಕ್ಕಳು ಮುಂದೆ ಡ್ರಾಯಿಂಗ್ ಬುಕ್ಕಿನಲ್ಲಿ ಎರಡು ಪೀನಕೋನಗಳ ನಡುವೆ ಕೆಂಪು ಗೋಳ ಬರೆದು “ಸೂರ್ಯೋದಯ” ಎಂದು ಹೆಸರಿಸುವುದಾದರೂ ಹೇಗೆ?) ಬಯಲು ಸವಕಳಿಗೀಡಾಗದಂತೆ ಕಾಂಕ್ರೀಟ್ ಟೊಪ್ಪಿಯೋ, ಇಂಟರ್ಲಾಕ್ ಹೊದಿಕೆಯೋ ಧರಿಸುತ್ತಿವೆ. ನೀರಿಂಗಿಸುವ ಪ್ರಾಕೃತಿಕ ನಾಳಗಳೆಲ್ಲ ಹೂತು ಹೋದ ಮೇಲೆ ಒರತೆ, ಜವುಗು ಪ್ರದೇಶಗಳ ಚಿಂತೆಯೇ ಇಲ್ಲ. ಮಳೆ ನೀರನ್ನೆಲ್ಲಾ ಚುರುಕಾಗಿ ಮತ್ತು ವ್ಯವಸ್ಥಿತವಾಗಿ ಚರಂಡಿ, ಹೊಳೆಗಳಿಗಾಗಿ ಸಮುದ್ರ ಸೇರಿಸುವ ಸುಂದರೀಕರಣವೂ ನಡೆದಿದೆ. ಡಜನುಗಟ್ಟಳೆ ಪರ್ಲ್‍ಪೆಟ್ ಬಾಟಲಿಗಳಲ್ಲಿ ಶುದ್ಧ ನೀರು ಕುಡಿಯುತ್ತಾ “ನೇತ್ರಾವತಿ ನಮ್ಮದು” ಜಾಥಾ ನಡೆಸೋಣ ಬಿಡಿ.


ಮಾಣಿಯ ಕವಲುತಾಣದಲ್ಲಿ ಊರ ಜನರ ತಂಡವೊಂದು ಸರಕಾರೀ ಬಸ್ಸನ್ನು ಅಡ್ಡಗಟ್ಟಿ ಗಂಭೀರವಾಗಿ ಏನೋ ವಿಚಾರಣೆ ನಡೆಸಿತ್ತು. ದಾರಿ ಮತ್ತು ಯಂತ್ರಗಳ ಪರಿಷ್ಕರಣ ಮತ್ತು ಹೆಚ್ಚಳ ಅನಿವಾರ್ಯವಿರಬಹುದು. ಸಹಜವಾಗಿ ವೇಗ, ಅಪಘಾತ, ಜಗಳ ಮತ್ತು ಸಾವುನೋವು ಮಾಮೂಲೀ ಸುದ್ದಿಯಾಗಿ ಹೋಗಿದೆ. ಬಹುಶಃ ಇಲ್ಲೂ ಅಂಥದ್ದೇ ಏನೋ ಸಣ್ಣದರಲ್ಲಿ ನಡೆದದ್ದೋ ತಪ್ಪಿದ್ದೋ ಇರಬೇಕು. ತುಸು ಹಿಂದೆ - ಪಾಣೆಮಂಗಳೂರು ಬಳಿ, ನಡುದಾರಿಯಲ್ಲಿ ಹತ್ತಡಿ ಅಂತರದಲ್ಲಿ ಎರಡು ನಾಯಿಗಳು ಅನಾಥವಾಗಿ ಸತ್ತು ಮಲಗಿದ್ದು ನೆನಪಿಗೆ ಬಂತು. ದಾರಿ, ವೇಗ, ಬೆಳಕು, ಕೊನೆಯಲ್ಲಿ ನ್ಯಾಯ ಕೂಡಾ ಎಷ್ಟು ಮನುಷ್ಯಪರ! ನಾನು ನಿರಪಾಯ ಸೈಕಲ್ಲಿಗನ ಬಲದಲ್ಲಿ ವಿಶೇಷ ಯಾರ ಗಮನಕ್ಕೂ ಬೀಳದೆ ಮುಂದುವರಿದೆ.

ಪುತ್ತೂರು ಸಮೀಪಿಸುತ್ತಿದ್ದಂತೆ ಶಾಲೆ ಕಾಲೇಜುಗಳ ಮಕ್ಕಳನ್ನು ಸಾಗಿಸುವ ವಾಹನಗಳ ದಂಡು, ಸಂಸ್ಥೆಗಳು ಸಮೀಪಿಸಿದಲ್ಲಿ ಮಕ್ಕಳದೇ ಸೈನ್ಯ. ಕೆಲವರು ನನ್ನ `ಅವತಾರ’ಕ್ಕೆ ಮುಸಿಮುಸಿ ನಕ್ಕರೂ ಪ್ರೋತ್ಸಾಹಕ್ಕೇನೂ ಕೊರತೆಯಿರಲಿಲ್ಲ. ಸುದಾನ ಶಾಲೆ ಕಳೆದದ್ದೇ ಪೇಟೆದಾರಿಯ ಪರ್ಯಾಯ ಮಾರ್ಗ ಅಥವಾ ಬೈಪಾಸನ್ನೇ ಆಯ್ದುಕೊಂಡೆ. ಈ ದಾರಿ ಬಂದು ಒಂದೆರಡು ದಶಕಗಳೇ ಆಗಿದೆ. ಆದರೂ ಇದನ್ನು ಬಳಸುವಾಗೆಲ್ಲ ನನ್ನ ಮನಸ್ಸು ನಾಲ್ಕೈದು ದಶಕಗಳ ಹಿಂದೆ ಜಾರುವುದಿದೆ. ಪುತ್ತೂರಿನ ಪೋಲೀಸು ವಠಾರಗಳ ಕೊನೆಯಲ್ಲಿದ್ದ ನನ್ನಜ್ಜನ ಮನೆಯ ಎತ್ತರಿಸಿದ ಅಂಗಳದ ಅಂಚಿನ ಕಟ್ಟೆಯಲ್ಲಿ ನಿಂತಾಗ ಅಜ್ಜ ಹೇಳುವುದಿತ್ತು. ಕೆಳಗಿನ ತೋಡು, ಗದ್ದೆಗಳ ಹರಹಿನಾಚೆ “ಓ ಅಲ್ಲಿ, ಬೈಪಾಸು ರಸ್ತೇಂತೇನೋ ಮಾಡ್ತಾರಂತೆ!” ಇಂದಿನ ತಂತ್ರಜ್ಞಾನದಲ್ಲಿ ಬೈಪಾಸೇನು ಓವರ್ಪಾಸು, ಅಂಡರ್ಪಾಸು, ಚತುಷ್ಪಥ, ಹೊಸ ನಮೂನೆಯ ಡಾಮರೀಕರಣ, ಕಾಂಕ್ರಿಟೀಕರಣವೆಲ್ಲ ಅಂಟುಜಾಡ್ಯದಂತೆ ವ್ಯಾಪಿಸಿದೆ. ಸರಾಗವಾಗಿ ಬೊಳುವಾರಿನಿಂದ ದರ್ಬೆಯವರೆಗಿನ ಪೇಟೆಯ ನೋಟ ತಪ್ಪಿಸಿ, ನೇರ ಮಡಿಕೇರಿ ದಾರಿಗಿಳಿದೆ. ಸಂಪ್ಯದಲ್ಲಿ ನನ್ನ ಚಿಕ್ಕಮ್ಮ – ಬಂಗಾರಡ್ಕ ಲಲಿತ, ಮಗ ಶ್ರೀಪ್ರಕಾಶನೊಡನೆ ಜೀಪಿನಲ್ಲಿ ನನ್ನನ್ನು ಹಿಂದಿಕ್ಕುವಾಗ ಉದ್ಗಾರ ಕೇಳಿಸಿತು “ಹ್ಹೋ! ಅಶೋಕಣ್ಣಾ!” ಆತ್ಮೀಯರು ಗುರುತಿಸಿದರೆಂದ ಕೂಡಲೇ ಯಾಂತ್ರಿಕ ತುಳಿತಕ್ಕೆ ಮಾಂತ್ರಿಕ ಸ್ಪರ್ಷ ದೊರೆತಿತ್ತು! `ಕಲ್ಲರ್ಪೆ ಚಡಾವು’ ಕ್ಷಣಾರ್ಧದಲ್ಲಿ ಏರಿ, ಅತ್ತಣ ನೀಳ ಇಳಿಜಾರಿನಲ್ಲಿ ಸುಯ್ದದ್ದೇ ಸಾರ್ವಜನಿಕ ರಸ್ತೆಯ ಋಣ ಮುಗಿದಿತ್ತು.

ಸಂಟ್ಯಾರ್ ಶಾಲೆಯ ಎದುರು ಬಲ ಹೊರಳಿದೆ. ಮರಿಕೆ - ನನ್ನಜ್ಜನ ಮೂಲ ಮನೆಗೆ, ಇದು ದಾರಿ. ಹಿಂದಿನ ಕಚ್ಚಾದಾರಿಯಲ್ಲಿನ ಎದ್ದ ಕಲ್ಲುಗಳು, ಬೇರಗಟ್ಟೆಗಳು, ಮಳೆಗಾಲದ ತೊರೆ ಹಾಯ್ದ ಹೊಯ್ಗೆ ಹಾಸು ಎಲ್ಲ ಈಗ ಇಲ್ಲ. ಹಾಗೆಂದು ಪೂರ್ಣ ಸುಖವೂ ಇಲ್ಲ. ಅರೆಬರೆ ಕಾಂಕ್ರೀಟ್ ಹಾಸಿನಲ್ಲಿ ಅರೆವಾಸಿ ಸುಂಯ್ಗುಟ್ಟಿದರೂ ಕೊನೆಯಲ್ಲಿ ಆಯ್ಕೆಯಿಲ್ಲದ ಹೆಚ್ಚುವರಿ ಕಚ್ಚಾ ದಾರಿಯಲ್ಲಿ ಕೆಂದೂಳು, ಕಲ್ಲಪೆಟ್ಟು ಅನುಭವಿಸಿದ್ದೆ. ಹಿಂದೆಲ್ಲ ವೆಂಕಪ್ಪು ಮನೆ ಬಳಿಯ ತೋಡಿಗೆ ಅಡಿಕೆ ಮರದ ಪಾಲವೋ ನೀರಿಗಿಳಿದು ಚಪ್ಪಡಿ ಜಾರಿದರೆ ನೀರುಪಾಲೋ ಎಂಬ ದ್ವಂದ್ವವಿತ್ತು. ಮರಿಕೆ ಮನೆಯಾಚಿನ ಹಿಂದುಳಿದ ವರ್ಗಗಳ ಹೆಸರಿನಲ್ಲಿ ಸಾರ್ವಕಾಲಿಕ ಸೇತುವೆ ಬಂದು ವರ್ಷಗಳು ಕೆಲವಾದವು. ಇನ್ನು ಕೆಲದಿನಗಳಲ್ಲಿ ಈ ಸಾರ್ವಕಾಲಿಕ ಸೇತುವೆಗಾಗಿ ತೋಡನ್ನು ಪುನರುಜ್ಜೀವಿಸಬೇಕಾಗಿ ಬಂದರೆ ಆಶ್ಚರ್ಯಪಡಬೇಕಿಲ್ಲ! ಈ ಮಾರ್ಗದ ಕೊನೆಯ ಲಕ್ಷಣ - ಸಣ್ಣ ಮಾಷ್ಟ್ರ ಮನೆ, ಕಳೆದು ಮರಿಕೆ ಮನೆ ಸೇರಿದೆ. ನಾನು ಆಶ್ಚರ್ಯ ಹುಟ್ಟಿಸಬೇಕೆಂದು ಅಂದುಕೊಂಡದ್ದನ್ನು ಚಿಕ್ಕಮ್ಮ ಲಲಿತ ರಟ್ಟು ಮಾಡಿದ್ದು ಬಿಟ್ಟರೆ, ಬಂಧುಗಳ ಸಂಭ್ರಮಕ್ಕೆ ಏನೂ ಕೊರತೆಯಾಗಲಿಲ್ಲ. “ಆಗಬಹುದು, ಹುಚ್ಚು, ಹೊರಟದ್ದೆಷ್ಟಕ್ಕೆ, ಎರಡುಮುಕ್ಕಾಲು ಗಂಟೆ ಸಾಕಾಯ್ತಾ, ಇದಕ್ಕೆ ಬೆಲ್ ಬೇಡ್ವಾ, ಸ್ಟ್ಯಾಂಡ್ ಎಲ್ಲಿ, ಎಷ್ಟು ಹಗುರ ಮಾರಾಯಾ, ಗೇರ್ ಹಾಕಿದರೆ ತುಳಿಯುದೇ ಬೇಡವಾ....” ಅಯ್ಯೋ ಅಯ್ಯೋ! ಅಣ್ಣನ ಅಳಿಯ ಕೆದಿಲ ವೆಂಕಟ್ರಮಣನಿಗೆ ಹೆಚ್ಚಿನ ಉಮೇದು ಬಂತು. “ಪುಳ್ಳಿ ಚಿನ್ಮಯನ (ಚಿನ್ಮಯ ದೇಲಂಪಾಡಿ) ಸೈಕಲ್ ಮುಟ್ಟಿ ನೋಡಿದ್ದೇನೆ. ಎಲ್ಲಿ ಇದು ಒಂದು ಸುತ್ತು..” ಎಂದು ಸವಾರಿ ಮಾಡಿ ನೋಡಿದ್ದೂ ಆಯ್ತು. ಎಲ್ಲರ ಬಿಸಿ ಇಳಿದ ಮೇಲೆ, ನಾನು ಉಪಚಾರಗಳನ್ನೆಲ್ಲ (ಸ್ನಾನ, ಉಪಾಹಾರಾದಿ) ಸ್ವೀಕರಿಸಿ ನವಚೇತನಿಯಾದೆ.

ಬಲ್ಲೇರಿಕಾಡು ಮತ್ತು ಬೆಟ್ಟದ ಒಂದು ಮಗ್ಗುಲಿನ ಸುವಿಸ್ತಾರ ಮರಿಕೆಬೈಲು ಐತಿಹಾಸಿಕ ಕಾಲದಲ್ಲಿ ಕೊಡಗು ಅರಸರಿಂದ ಕರಣಿಕ ಕುಟುಂಬದ ಒಂದು ಕವಲಿಗೆ ದತ್ತವಾದದ್ದು. ಅದರ ಕೃಷಿ ಆದಾಯವನ್ನೇ ನೆಚ್ಚಿ ಕೊಡಗಿನಿಂದ ಇಳಿದು ಬಂದವರು ನನ್ನಜ್ಜ ಎ.ಪಿ.ಸುಬ್ಬಯ್ಯ. ಆದರೆ ಅವರು ದೈಹಿಕ ಅಸಾಮರ್ಥ್ಯ ಹಾಗೂ ಮಕ್ಕಳ ಶಿಕ್ಷಣದ ಉದ್ದೇಶದಿಂದ ನಾಲ್ಕು ಮೈಲಂತರದ ಪುತ್ತೂರು ಪೇಟೆಯಲ್ಲಿ ಮನೆ ಮಾಡಿ ನಿಂತರು. ತೋಟ ನೋಡಿಕೊಳ್ಳುವ ಜವಾಬ್ದಾರಿಯನ್ನು ಸಹಜ ಒಲವಿದ್ದ ಹದಿಹರಯದ ಹಿರಿಮಗ (ಅಣ್ಣ) ತಿಮ್ಮಪ್ಪಯ್ಯನಿಗೆ ವಹಿಸಿ, ಅಲ್ಲೇ ನೆಲೆಸುವಂತೆ ಮಾಡಿದರು. ಪ್ರಾಕೃತಿಕ ಮುಖದಲ್ಲಿ - ಸಣ್ಣ ಸಾಂಪ್ರದಾಯಿಕ ತೋಟ, ಸ್ವಲ್ಪ ಗದ್ದೆ, ಬಹುತೇಕ ಗುಡ್ಡಕಾಡು, ಋತುಮಾನದ ವೈಪರೀತ್ಯಗಳು, ಪೀಡೆ ಪುಕಾರುಗಳಿಗೆಲ್ಲ ಜಗ್ಗದ ಸಾಹಸಿ ಈ ತರುಣ.  ಸಾಮಾಜಿಕ ಮುಖದಲ್ಲಿ ಕೂಲಿ ಒಕ್ಕಲುಗಳು, ಅಸಂಖ್ಯ ಗೇಣಿದಾರರು, ಜಾನುವಾರು, ಹಳ್ಳಿಯ ಮನೆವಾರ್ತೆ, ಮಾರುಕಟ್ಟೆಗಳೆಲ್ಲದರ ಸಮರ್ಥ ನಿರ್ವಹಣೆಗೂ ಸೋತೆ ಎನ್ನದ ಸರದಾರ ಅಣ್ಣ. ಮೊದಮೊದಲು ನಿತ್ಯದಲ್ಲಿ ಅಣ್ಣನಿಗೆ ಜತೆಗಾತಿ – ಅಮ್ಮಯ್ಯ, ಖಾಸಾ ಅಜ್ಜಿ. ಕಾಲಾನಂತರದಲ್ಲಿ ಹೆಂಡತಿ (ಅತ್ತೆ – ನಾನು ಸಂಬೋಧಿಸುವಂತೆ ಅತ್ತಿಗೆ) ಐದು ಮಕ್ಕಳ ಸಂಸಾರ. (ಆ ಕತೆ ಇಲ್ಲಿ ವಿಸ್ತರಿಸುವುದಿಲ್ಲ.) ಪೇಟೆ ಮನೆಯಲ್ಲಿ ಅಪ್ಪ, ಅಮ್ಮ, ಮೂರು ತಮ್ಮ ಮತ್ತು ಆರು ತಂಗಿಯರೇನೋ ಇದ್ದರು. ಆದರೆ ನಿತ್ಯಪೂಜೆಯ ಮನೆದೇವರು (ದುರ್ಗೆ), ಒಂಬತ್ತು ದಿನಗಳುದ್ದಕ್ಕೆ ದೊಡ್ಡದಾಗಿಯೇ ನಡೆಯುವ ನವರಾತ್ರಿಯಿಂದ ತೊಡಗಿ ಎಲ್ಲಾ ವಿಶೇಷಪೂಜೆಗಳು, ತಮ್ಮ ತಂಗಿಯಂದಿರ ಉಪನಯನ, ಮದುವೆಯಾದಿಗಳು ದೊಡ್ಡದಾಗಿಯೇ ನಡೆಯುತ್ತಿದ್ದದ್ದು ಮರಿಕೆಯಲ್ಲೇ ಎಂದ ಮೇಲೆ ವ್ಯವಸ್ಥಾಪಕ ಅಣ್ಣ ಎಂದು ಪ್ರತ್ಯೇಕ ಹೇಳಬೇಕೇ.

ಕಾಲಧರ್ಮದಲ್ಲಿ ತಂಗಿಯರಿಗೆ ಮದುವೆ ಮತ್ತೆ ತವರ್ಮನೆಯ ಬಿಸುಪು ಈ ಅಣ್ಣನಲ್ಲಿ ಎಂದೂ ಕಡಿಮೆಯಾದದ್ದಿಲ್ಲ. ಗಂಡು ಮಕ್ಕಳಲ್ಲಿ ಆಸ್ತಿಯ ಪಾಲುಪಟ್ಟಿ ನಿರ್ವ್ಯಾಜವಾಗಿ, ಅಜ್ಜನ ಸಮದರ್ಶಿತ್ವದಲ್ಲೇ ಆಯ್ತು. ಆದರೆ ತಮ್ಮಂದಿರ ಪಾಲಿಗೆ ಯೋಜನಾಬದ್ಧ ಕೃಷಿಯ ವಿಸ್ತರಣೆ, ಅಲ್ಲಲ್ಲಿ ಅವರಿಗೆ ಮನೆ ಮತ್ತು ನಿರಂತರ ಹಿರಿತನದ ಪ್ರೀತಿ, ಸಹಕಾರಗಳ ಬತ್ತದ ತೊರೆ ಈ ಅಣ್ಣ. ನನ್ನ ಬಾಲ್ಯದುದ್ದಕ್ಕು ಮರಿಕೆ ನೋಡದ ರಜಾದಿನಗಳೇ ಇಲ್ಲವೆಂದರೆ ಅತಿಶಯೋಕ್ತಿಯಲ್ಲ. ವೃತ್ತಿ ಆಕಸ್ಮಿಕದಲ್ಲಿ ನಾನು ಮಂಗಳೂರಿನಲ್ಲಿ ನೆಲೆಸಿದ್ದರಿಂದ ಈ ಒಡನಾಟ ಹೆಚ್ಚೇ ಆದದ್ದು ನನ್ನ ಹಿಂದಿನ ಬರಹದಲ್ಲಿ ಕಂಡ ನಿಮಗೆ ಮತ್ತೆ ವಿವರಿಸುವುದಿಲ್ಲ. ಈ ವಿಸ್ತೃತ ಅಣ್ಣನ ಕಾರ್ಯಕ್ಷೇತ್ರದಲ್ಲಿ ಓಡಾಡುವುದು, ನೋಡುವುದು ನನಗೆ ಸದಾ ರಮ್ಯ ಅನುಭವ. ಹಾಗಾಗಿ ಅಂದೂ ನಡಿಗೆಯಲ್ಲಿ ಒಂದು ಸುತ್ತು ಎಂದು ಮೇಲಿನ ಅಡಿಕೆ ಜಾಲಿನ ಒತ್ತಿನಲ್ಲಿ, ತೋಡಿನ ಪಕ್ಕದಲ್ಲಿ ಸಾಗುವ ಜಾಡಿಗಿಳಿದೇಬಿಟ್ಟೆ.


ಅಣ್ಣನ ಮೂರನೇ ಮಗ, ಹಾಲೀ ಮರಿಕೆ ಮನೆ ಯಜಮಾನ – ಎ.ಪಿ.ಸದಾಶಿವ, “ಅಶೋಕಭಾವಾ ಅಲ್ಲಿ ದಾರಿ ಇಲ್ಲ. ಮುಳ್ಳಬಲ್ಲೆ ಬೆಳೆದು ಮುಚ್ಚಿಹೋಗಿದೆ. ನಮ್ಮೊಳಗಿನ ಓಡಾಟವೆಲ್ಲ ಬೈಕ್ ಕಾರುಗಳಲ್ಲೇ” ಗಹಗಹಿಸಿದ. ಎರಡನೇ ಯೋಚನೆಯಲ್ಲಿ “ಬೇಕಾದರೆ ಬಲಕ್ಕೆ ಬಲ್ಲೇರಿಕಾಡಿನತ್ತ ಹೋಗುವ ಜಾಡು ಹಿಡಿ. ಮತ್ತೆ ಸಿಗುವ ಬ್ಯಾರಿ ಮನೆಯಂಗಳದಿಂದ ನೇರ ಇಳಿದರೆ ತಮ್ಮಣ್ಣನ ತೋಟ” ಎಂದ.

ತಮ್ಮಣ್ಣ ಅರ್ಥಾತ್ ಎ.ಪಿ. ಸುಬ್ರಹ್ಮಣ್ಯಂ, ನನ್ನ ಮೂರನೇ ಸೋದರಮಾವ ಎ.ಪಿ. ಗೌರೀಶಂಕರರ ಮಗ. ಅಜ್ಜನ ಕಾಲದಲ್ಲಿ ಬಲ್ಲೇರಿ ಕಾಡಿನಿಂದ ಬಂದ ಹುಲಿ ಕೊಟ್ಟಿಗೆಯ ದನ ಹೊತ್ತ ಕತೆ ಸಾಕಷ್ಟು ಕೇಳಿದ್ದೆ. ನವರಾತ್ರಿ ಪೂಜೆಯ ದಿನಗಳಲ್ಲಿ ಆ ಮೂಲೆಯಿಂದ ಬರುತ್ತಿದ್ದ ಪರಮೇಶ್ವರ ಮಯ್ಯರು ನನ್ನ ಬಾಲಮನಸ್ಸನ್ನು ಕೇಳಿದ್ದರೆ ಆ ಭಯಾನಕ ತಾಣದಲ್ಲಿ ನೆಲೆಸಿದ್ದೇ ತಪ್ಪು! ಬಹುಶಃ ನನ್ನ ಕಾಲೇಜಿನ ದಿನಗಳ ರಜೆಯಲ್ಲೆಲ್ಲೋ ಒಂದು ಸಂಜೆ ಅಣ್ಣ ಬಲ್ಲೇರಿ ಬೆಟ್ಟಕ್ಕೆ ಆಸಕ್ತ ಬಾಲರ ಹಿಂಡು ಕರೆದೊಯ್ದಾಗಲೇ ನಾನೂ ಅದನ್ನು ನೋಡಿದ್ದು. ಆಗಲೇ ಕಾಡು ಬಳಲಿತ್ತು. ಈಗ ಬಿಡಿ, ಅತ್ತ ಪಾಣಾಜೆ ರಸ್ತೆಯಲ್ಲಿ ಬಸ್ಸಿನಲ್ಲಿ ಹೋಗುವಾಗ ಅರಣ್ಯ ಇಲಾಖೆಯ ಭರ್ಜರಿ `ಟಿಂಬರ್ ಯಾರ್ಡ್’ ಕಾಣುತ್ತದೆ! ದಟ್ಟ ಕಾಡಿನ ಎಡೆಯಲ್ಲಿ ಚರಪರ ತರಗೆಲೆ ನುರಿಯುತ್ತಿದ್ದಂತೆ ಬ್ಯಾರಿ ಮನೆ ಕಾಣಿಸಿತು. ಇನ್ನೇನು ಅಂಗಳ ಬಂತೆನ್ನುವಾಗ ಪೊದರುಗಳ ನಡುವೆ ಅಡ್ಡಕ್ಕೆ ಎರಡಂತರದಲ್ಲಿ ಬಿಗಿದ ವಯರ್ ತೊಡರಿ ತಡವರಿಸಿಬಿಟ್ಟೆ. ಮುಗ್ಗರಿಸಿ ಬೀಳಲಿಲ್ಲ ಪುಣ್ಯಕ್ಕೆ ಎಂದುಕೊಳ್ಳುತ್ತಾ ನಿಧಾನಕ್ಕೇ ಅಂಗಳ ಸೇರಿದೆ. ನಾನು ಬಂದ ದಿಕ್ಕು ಮತ್ತು ನನ್ನ ಚಹರೆಯಲ್ಲೇ `ಮರಿಕೆ’ಯವನು ಎಂದು ಗುರುತಿಸಿದ ಮನೆಯವರು ಸ್ನೇಹದಲ್ಲೇ ತಮ್ಮಣ್ಣನ ತೋಟದ ದಾರಿ ತೋರಿದರು. ಬೇಲಿಯಲ್ಲಿ ಎಡೆನೋಡಿ ದಾಟಿ `ಜಿಂಕೆಮನೆ’ ಸೇರಿದ್ದೆ.


ಅಜ್ಜ ಹಾಕಿಕೊಟ್ಟ ಸೂತ್ರದಲ್ಲೇ ಅಣ್ಣನೇನೋ ಮೂರೂ ತಮ್ಮಂದಿರ ಆಸ್ತಿ ವಿಲೇವಾರಿ ಮಾಡಿದ್ದು ಸರಿ. ಆದರೆ ಎಲ್ಲ ಅವರವರ ಪಾಲನ್ನು ರೂಢಿಸಿಕೊಂಡ ಕ್ರಮ ಸ್ವಲ್ಪ ಭಿನ್ನ. ಅವರಲ್ಲಿ ಕೊನೆಯಾತ – ರಾಮನಾಥ (ಎ.ಪಿ. ರಮಾನಾಥ ರಾವ್ – ೮೧ ವರ್ಷ), ಪಶುವೈದ್ಯರಾಗಲು ಒಮ್ಮೆ ಮನಸ್ಸು ಮಾಡಿದ್ದಿತ್ತು. ಆದರೆ ಮದ್ರಾಸಿನಲ್ಲಿ ಮೊದಲ ಹಂತದಲ್ಲೇ ಪ್ರಾಣಿಹಿಂಸೆ ನೋಡಲಾಗದೇ ವಾಪಾಸು ಬಂದರು, ಪಾಲಿಗೆ ಬಂದ ಕೃಷಿಕತನವನ್ನು ಪ್ರೀತಿಯಿಂದಲೇ ಒಪ್ಪಿಕೊಂಡರು. ಇವರದ್ದು ಭೂತಗುರಿ ಎಂಬ ಪ್ರದೇಶದಲ್ಲಿರುವ ಮನೆ. ಎರಡನೆಯಾತ – ಗೋವಿಂದ, (ಎ.ಪಿ. ಗೋವಿಂದಯ್ಯ – ೮೪ ವರ್ಷ) ಓದು ಮತ್ತು ಸಾಹಿತ್ಯಪ್ರೀತಿಯೊಡನೆ ವೃತ್ತಿ ಜೀವನದ ಮೊದಲ ದಿನಗಳಲ್ಲಿ ಶಿಕ್ಷಕರಾಗಿ ಮಡಿಕೇರಿಯಲ್ಲಿದ್ದರು. ಆದರೆ `ಬಡ ಉಪಾಧ್ಯಾಯ’ತನವೂ ಅಣ್ಣನ ಹೊರೆ ಕಡಿಮೆ ಮಾಡಬೇಕಾದ ಅನಿವಾರ್ಯತೆಯೂ ಸೇರಿ ಮರಳಿಮಣ್ಣಿಗೆ ಬಂದಿದ್ದರು. ಪಾಣಾಜೆ ಕವಲಿನ ಬಳಿ ಚೇತನ ಇವರ ಮನೆ.

ಮೂರನೆಯಾತ – ಶಂಕರ, (ಎ.ಪಿ. ಗೌರೀಶಂಕರ – ೮೨ ವರ್ಷ) ಕಲಿಕೆ ಮತ್ತು ಅಭ್ಯಾಸದಲ್ಲಿ ವಕೀಲರು. ಮೊದಲು ಪುತ್ತೂರಿನಲ್ಲಿ ಅನಂತರ ಮಂಗಳೂರಿನಲ್ಲೇ ನೆಲೆಸಿದ್ದಾರೆ. ತನ್ನ ಪಾಲಿನ ನೆಲವನ್ನು ಮಾನಸಿಕ ಒಪ್ಪಂದದಲ್ಲಿ ಅಣ್ಣನದೇ ಉಸ್ತುವಾರಿಗೆ ಬಿಟ್ಟಿದ್ದರು. ಆದರೆ ಇವರ ಮಗ – ತಮ್ಮಣ್ಣನಿಗೆ (ಎ.ಪಿ. ಸುಬ್ರಹ್ಮಣ್ಯಂ) ಬಾಲ್ಯ, ಕಲಿಕೆ ಮತ್ತೆ ಗಟ್ಟಿ ವೃತ್ತಿಯೂ ನಗರದ್ದೇ ಇದ್ದರೂ ನೀರಿನ ಋಣ ತೋಟಕ್ಕೆ ಎಳೆದಿತ್ತು. ಚಂದೀಗಢ, ಚೆನ್ನೈ, ಬೆಂಗಳೂರು, ಮಂಗಳೂರಿನಲ್ಲಿ ವಿವಿಧ ಪ್ರಯೋಗಗಳನ್ನು ಮಾಡಿ ಕೊನೆಯಲ್ಲಿ ಗಟ್ಟಿಯಾದದ್ದು ಪಿತ್ರಾರ್ಜಿತ ಕೃಷಿಭೂಮಿಯಲ್ಲಿ. ಸ್ವಲ್ಪ ತಡವಾಗಿ ಈತ ಅಪ್ಪನ ಪಾಲಿನ ಜಾಗವನ್ನು ದೊಡ್ಡಪ್ಪನಿಂದ (ಅಣ್ಣನಿಂದ) ವಹಿಸಿಕೊಂಡು, ಮನೆ ಕಟ್ಟಿ ನೆಲೆಸಿದ್ದಾನೆ. ಈಚೆಗೆ ಶಂಕರ ವೃದ್ಧಾಪ್ಯ ಬೇನೆಯಲ್ಲಿ ತುಸು ಹೆಚ್ಚೇ ಬಳಲಿ, ಚೇತರಿಸಿಕೊಳ್ಳಲೆಂದು ತಮ್ಮಣ್ಣನಲ್ಲಿದ್ದರು. ಅವರೆಲ್ಲರನ್ನು ಮಾತಾಡಿಸಿ, ಯಥೋಪಚಾರಗಳನ್ನು ಸ್ವೀಕರಿಸಿದ್ದಾಯ್ತು. ಮೊದಲೇ ಸದಾಶಿವ ಹೇಳಿದಂತೆ, ಅವರೆಲ್ಲರು ಕಾರೇರಿ ಮರಿಕೆ ಮನೆಗೆ ಹೊರಡುತ್ತಿದ್ದಂತೆ ನಾನು ಪಾದಯಾತ್ರೆಯನ್ನು ಭೂತಗುರಿ ಮನೆಯತ್ತ ಬೆಳೆಸಿದೆ.“ಕೆರೆಯಾಚೆ ತೋಡಿಗಿಳಿದು ನಡೆದರೆ ರಾಮ್ನಾತ್ಮಾವನ ಕಟ್ಟ ಸಿಗ್ತದೆ” ಶ್ರೀದೇವಿ – ತಮ್ಮಣ್ಣನ ಹೆಂಡತಿ, ಹೇಳಿದ್ದಳು. ಆಕೆ ಹೇಳಿದ ಭೂಲಕ್ಷಣವೇನೋ ಸರಿ ಇತ್ತು, ಆದರೆ ವಾಸ್ತವ ಬೇರೇ ಇತ್ತು! ತಮ್ಮಣ್ಣ ತೋಡು ದಾಟಲು ಎರಡು ಗುರ್ಜಿ ಹಾಕಿಸಿದ್ದ, ಒಂದು ಕುಸಿದಿತ್ತು. ಅದರ ಪಕ್ಕದಲ್ಲೇ ನಾನು ತೋಡಿಗೆ ಇಳಿದೆ. ಆದರೆ ಚರಳು ಕಲ್ಲ ಒಣಪಾತ್ರೆಯಲ್ಲಿ ಮೊದಲು ಎಡವಿದ್ದೇ ಭಾರೀ ಒಡಕು ಕುಪ್ಪಿ. ಬಾಲ್ಯದಲ್ಲಿ ನಾವು ನೀರಾಟವಾಡಿದ ತೋಡೆಂಬ ಪ್ರೀತಿ ಒಮ್ಮೆಲೇ ತೊಡೆದುಹೋಯ್ತು.
ಗಮನವಿಟ್ಟು ನೋಡಿದರೆ ಆ ಒಣ ಪಾತ್ರೆಯಲ್ಲಿ ಇಲ್ಲದ ನಾಗರಿಕ ಕಸವಿಲ್ಲ ಎನ್ನುವಂತಿತ್ತು! ಆದರೂ ಮಂಗಳೂರಿನಲ್ಲಿ ವಸತಿ ಸಮೂಹಗಳ ಪಕ್ಕದಲ್ಲಿ ಕೊಳಚೆಹೊಂಡ ಪಂಪಾಗುವ ಸಮಯಗಳಲ್ಲಿ ಬರುವ ಸಾರ್ವಜನಿಕ ಅಂಡು ಅರಳಿದ ನಾತ, ಕಂಬಳ ತೋಡಿನ ಪಕ್ಕದಲ್ಲಿ ನಿತ್ಯ ಮುಕುರುವ ಹಳಸಲು ಘಾಟು, ಹೆದ್ದಾರಿಯ ಇಕ್ಕೆಲಗಳಿಂದ ಗಾಳಿ ಎಂದೂ ಮುಖಕ್ಕೆ ರಾಚಬಹುದಾದ ಕೊಳೆತದ್ದನ್ನು ಕಕ್ಕಿ ಹಗುರಾದ ಪ್ಲ್ಯಾಸ್ಟಿಕ್ ಮುಜುಗರಗಳಿಗಿಂತ ಆಗಬಹುದು ಎಂದು ಮತ್ತೂ ನಾಲ್ಕು ಹೆಜ್ಜೆ ಹಾಕಿದೆ. ನಾಲ್ಕೇ, ಹೆಚ್ಚು ಹೋಗುವಂತೇ ಇರಲಿಲ್ಲ. ಒಂದಷ್ಟು ಉದ್ದಗಲಕ್ಕೆ ನವರಂಗಿನ ನೀರು ಮಡುಗಟ್ಟಿತ್ತು. ಆಳ ಹೆಚ್ಚಿದ್ದಿರಲಾರದು, ಆದರೆ ಅದು ಮರೆಮಾಡಿದ ಹಾನಿಗಳ ಲೆಕ್ಕ ಹಿಡಿಯುವುದು ಕಷ್ಟ. ಅಂಚುಗಳಲ್ಲಿ ನುಗ್ಗೋಣವೆಂದರೆ ಸೊಂಟಮಟ್ಟದ ಹಸುರು ಕಳೆಗಿಡಗಳು ಸೊಕ್ಕಿದ್ದುವು. ಸುಮಾರು ಒಂದು ತಿಂಗಳಿನಿಂದ ಈ ವಲಯದಲ್ಲೊಂದು ಕಾಳಿಂಗ ಸರ್ಪ ಠಳಾಯಿಸಿದೆ ಎಂಬ ಸುದ್ದಿಯೂ ನನ್ನಲ್ಲಿತ್ತು. ಈ ತೋಡಿನ ಪಾತ್ರೆ ಅದರ ಪ್ರಿಯ ಜಾಡು ಎಂದದ್ದೂ ನೆನಪಾದ ಮೇಲೆ ಪೊದರು ನುರಿದು ನಡೆಯುವ ಧೈರ್ಯ ಬರಲಿಲ್ಲ. ಹಿಂದೆ ಹೋಗಿ ತೋಟದ ಇನ್ನೊಂದಂಚಿಗೆ ನಡೆದು ಬೇರೊಂದು ಸಣ್ಣ ತೋಡು ಕಂಡೆ. ಇದರೊಡನೆ ಮತ್ತೆ ಅಣ್ಣನ ನೆನಪು ಸಣ್ಣದಾಗಿ ಬಂತು.


ಅಣ್ಣ ಈ ವಲಯದಲ್ಲಿ ಹೊಸದಾಗಿ ಅಡಿಕೆ ತೋಟ ವಿಸ್ತರಿಸುತ್ತಿದ್ದ ಕಾಲವದು. ಇಲ್ಲಿನ ಸಸಿಗಳಿಗೆ ಮನೆ ಸಮೀಪದ ಕೊಟ್ಟಿಗೆಯಿಂದ ಗೊಬ್ಬರ ಸಾಗಿಸುವ ಕಷ್ಟ ತಪ್ಪಿಸಲು ಇಲ್ಲೊಂದು ತತ್ಕಾಲೀನ ಸೋಗೆ ಕೊಟ್ಟಿಗೆ ಕಟ್ಟಿದ್ದ. ಕಡಸುಗಳು, ಕರಾವು ನಿಲ್ಲಿಸಿದ ಜಾನುವಾರು, ಕೋಣವನ್ನೆಲ್ಲ ಇಲ್ಲಿ ಸುಧಾರಿಸಿದ್ದ. ಆಗ ಈ ತೋಡಿಗೆ ಪಾಲ ಇರಲಿಲ್ಲ. ಕೆಲಸದವರು, ಜಾನುವಾರುಗಳು ಅದನ್ನು ಬಳಸಿ ಓಡಾಡುತ್ತಿದ್ದರು. ಸಾಹಸೀ ಅಣ್ಣ ಮಾತ್ರ ಸದಾ ನೇರ ಹಾರಿಯೇ ದಾಟುತ್ತಿದ್ದ. ಹಾಗೆ ಒಮ್ಮೆ ಹಾರುವಾಗ ಈತನ ಅಂದಾಜು ತಪ್ಪಿ, ಮೊಣಕಾಲು ತಿರುಚಿತ್ತು. ಆ ನೋವು ಆತನನ್ನು ಬಹುಕಾಲ ಕಾಡಿತ್ತು. ಬಹುಶಃ ಆ ಮೇಲೆ ಅಣ್ಣ ಅಲ್ಲಿಗೆ ಎರಡು ಅಡಿಕೆ ಕಾಂಡಗಳ ಸಪುರ ಪಾಲ ಹಾಕಿಸಿದ್ದ. ಕೈ ತಾಂಗು ಇಲ್ಲದ ಆ ಪಾಲದಲ್ಲಿ ದಾಟುವುದೆಂದರೆ ನಮಗೆಲ್ಲ ನಯಾಗಾರದ ಮೇಲಿನ ಬಿಗಿಸರಿಗೆ ನಡುಗೆ! ಇಂದು ಅಲ್ಲಿ ಕೊಟ್ಟಿಗೆ ಉಳಿದಿಲ್ಲ. ಪಾಲವನ್ನೂ ಸೇರಿಸಿ ಮುಳ್ಳು ಪೊದರುಗಳ ರಾಜ್ಯ ಬಲಿತು, ಜಾಡೇ ಸೋತ ಮೊದಲೇ ಹೇಳಿದ್ದೇನೆ. ಹಾಗಾಗಿ ನಾನು ಒಂದೆಡೆ ಕುರುಚಲು ಗಿಡಗಳನ್ನು ಹಿಡಿದು ತೋಡಿಗೇನೋ ಇಳಿದೆ. ಆದರೆ ಅತ್ತಣ ದಂಡೆಗೇರುವ ಜಾಡು ಹಿಡಿಯಲಾಗದೆ ವಾಪಾಸು ಏರಬೇಕಾಯ್ತು.

ತುಸು ಆಚೆಗೆ ಮರಿಕೆಯ ಮುಖ್ಯ ತೋಡೇ ಕೊರಕಲೊಂದರಲ್ಲಿ ಬರುವ ಸ್ಥಳ ತಲಪಿದೆ. ನನ್ನ ಬಾಲ್ಯದಲ್ಲಿ `ಅರಬ್ಬಿ’ ಎಂದೇ ಖ್ಯಾತವಾದ, ಹಾಸು ಬಂಡೆಗಳ ಜಾಗ. ಈಚಿನ ದಿನಗಳಲ್ಲಿ ನ್ಯಾಶನಲ್ ಜಿಯಾಗ್ರಾಫಿಕ್ ಚಿತ್ರಗಳಲ್ಲಿ ಅಮೆಜಾನ್ ಕೊಳ್ಳಗಳನ್ನು ನೋಡುವಾಗ, ನನ್ನ ಮನೋಭಿತ್ತಿಯಲ್ಲಿ ಬಾಲ್ಯಕ್ಕೆ ರಮ್ಯವಾಗಿ ಕಂಡ ಈ ಅರಬ್ಬಿಯ ಚಿತ್ರ ಎದ್ದು ಬರುತ್ತಿತ್ತು. ಆದರೆ ಇಂದು ವಾಸ್ತವ ತೀರಾ ನಿರಾಶಾಜನಕವೇ ಆಗಿತ್ತು. ಹೊಂಡಗಳಲ್ಲಿ ನಗರ ಮಾಲಿನ್ಯಗಳಿಂದ ಕೊಳೆತ ನೀರು, ಉಳಿದಂತೆ ಕಸರಾಶಿ. ಶಾಸ್ತ್ರಕ್ಕೆರಡು ಚಿತ್ರ ಹಿಡಿದು, ಎಚ್ಚರಿಕೆಯೊಡನೆ ಬಂಡೆ ಹಾರಿ, ಎದುರು ದಂಡೆಯ ಇನ್ನೊಂದೇ ತೋಡಿನ ಬಾಯಿ ಸೇರಿದೆ. ಅಲ್ಲಿ ಕಾಡುಹಂದಿ ತಡೆಯಲು ಹಾಕಿದ್ದ ಕಬ್ಬಿಣದ ಬೇಲಿ ಆರೈಕೆ ಇಲ್ಲದೆ ಅಡ್ಡ ಮಲಗಿತ್ತು. ಅದನ್ನು ಮೆಟ್ಟಿ ಎದುರು ತೋಟ, ಅಂದರೆ ನಾಲ್ಕನೆಯ ಸೋದರಮಾವ ರಾಮನಾಥನ ತೋಟ ಸೇರಿಕೊಂಡೆ.

ತೋಟದಲ್ಲಿ ಸ್ಪ್ರಿಂಕ್ಲರ್ ಚಾಲೂ ಇತ್ತು. ಹಿಂದೆಲ್ಲ ಸೆಕೆ ಬೆವರಿನ ಹೊತ್ತಿನಲ್ಲಿ ಸ್ಪ್ರಿಂಕ್ಲರ್ ಎರಚಾಟಕ್ಕೆ ನಾವು ಮೈ ಒಡ್ದಿಕೊಳ್ಳುವುದಿತ್ತು. ಆದರೀಗ ತೋಡಿನ ನೀರಿನ ಶುದ್ಧ ಕಂಡಮೇಲೆ ನೀರೆರಚು ತಪ್ಪಿಸಿಯೇ ನಡೆಯಬೇಕಾಯ್ತು. ರಾಮನಾಥ ಸಾಂಪ್ರದಾಯಿಕ ಕಟ್ಟದ ಜಾಗದಲ್ಲಿ ಹೆಚ್ಚು ಕಾಲ ಬಾಳುವ ಕಿಂಡಿ ಅಣೆಕಟ್ಟನ್ನೇ ಮಾಡಿಕೊಂಡಿದ್ದರು. ಅದರ ಮೇಲೆ ಹಾಯ್ದು `ಭೂತಗುರಿ’ ಮನೆ ಸೇರಿಕೊಂಡೆ. ವೃದ್ಧಾಪ್ಯದ ಸಣ್ಣಪುಟ್ಟ ಬೇನೆಗಳು, ವಿಶ್ರಾಂತಿಗಳೊಡನೆ ರಾಮನಾಥ ತೋಟದ ಕೆಲಸಗಳ ನಿರ್ವಹಣೆಯಲ್ಲಿ, ನೆನಪು ವಿಶ್ವಾಸಗಳ ವಿನಿಮಯದಲ್ಲಿ ಏನೂ ಕುಗ್ಗಿಲ್ಲ.
ನಾನು ಅಂಗಡಿ ತೆರೆದ ಹೊಸದರಲ್ಲಿ ಒಮ್ಮೆ ಭಾರೀ ಆಸೆಪಟ್ಟು ಲಭ್ಯವಿದ್ದ ಭಾರತೀಯ ಗೇರ್ ಸೈಕಲ್ಲೊಂದನ್ನು ಖರೀದಿಸಿದ್ದೆ. ಆದರೆ ಅಂದಿನ ನನ್ನಂಗಡಿಯ ಜವಾಬ್ದಾರಿಯಲ್ಲಿ ಅದಕ್ಕೆ ತಕ್ಕ ಕೆಲಸ ತೆಗೆಯುವುದು ನನಗಸಾಧ್ಯವಿತ್ತು. ಮತ್ತೆ ಅಂದಿನ ನನ್ನ ಆರ್ಥಿಕ ಪರಿಸ್ಥಿತಿಯಲ್ಲಿ ಆ ದುಡ್ಡೂ ನನಗೆ ಹೊರೆಯಾಗಿ ಕಾಣಿಸಿತ್ತು. ಆಗ ರಾಮನಾಥ, ಮಗ ಸತೀಶನಿಗಾಗಿ, ಅದನ್ನು ನನ್ನಿಂದ ಕೊಂಡು ಉಪಕರಿಸಿದ್ದ. ಇಂದು ನಾನು ಮಂಗಳೂರಿನಿಂದ ಗೇರ್ ಸೈಕಲ್ಲಿನಲ್ಲೇ ಬಂದೆನೆಂದು ಕೇಳಿದಾಗ ಆ ಹಳೇ ಸೈಕಲ್ಲನ್ನು ರಾಮನಾಥ ಜ್ಞಾಪಿಸಿಕೊಂಡ. “ಆ ಉತ್ಕೃಷ್ಟ ಸೈಕಲ್ಲನ್ನು ಕೆಲಸದವರು ಹಾಳು ಮಾಡಿಯಾರೆಂದು ಅಡಿಕೆ ಅಟ್ಟದಲ್ಲಿ ಅದಕ್ಕಾಗಿ ಒಂದು ಜಾಗ ಗೊತ್ತುಪಡಿಸಿದ್ದೆ” ಎಂದಾಗಂತೂ ಇಬ್ಬರಿಗೂ ನಗುವೋ ನಗು. ಅದಕ್ಕೆ ಎರಡೋ ಮೂರೋ ಗೇರಿದ್ದದ್ದು ನಿಜ. ಆದರೆ ಬಳಕೆಯಲ್ಲಿ ಅದರ ಉಪಯೋಗ ಪಡೆಯಲು ನನಗೇ ಗೊತ್ತಿರಲಿಲ್ಲ. ಇನ್ನು ರಾಮನಾಥ ಅಥವಾ ಅಂದಿನ ಎಳೆಯ ಸತೀಶ ಏನು ಸಾಧಿಸಿರಬಹುದು? ಇನ್ನೊಂದು ತಮಾಷೆ ಗಮನಿಸಿ. ಅಂದೂ ಸೈಕಲ್ಲನ್ನು ನಾನು ಮಂಗಳೂರಿನಿಂದ ಬಿಟ್ಟುಕೊಂಡೇ ಬಂದು ಒಪ್ಪಿಸಿದ್ದೆ. ಆದರೆ ಅಂದಿನವರ ಮನೋಸ್ಥಿತಿಯಲ್ಲಿ (ನನಗೂ) ಅದೊಂದು ಸಾಹಸ ಎಂಬ ಭಾವವೇ ಇರಲಿಲ್ಲ. ಆದರೆ ಇಂದು ಹೊಸ ತಲೆಮಾರಿನ ಸೈಕಲ್ ಸವಾರರು ದಿನಕ್ಕೆ ನಾಲ್ಕೆಂಟು ಕಿಮೀ ಪೇಟೆ ದಾರಿಯಲ್ಲೇ ಹೋಗಿ ಬರುವುದಿದ್ದರೂ ಅದೇನು ಸಿದ್ಧತೆ, ಬಂದ ಮೇಲೆ ಅದೇನು ಆರೈಕೆ, ಇನ್ನೂ ವಿಚಿತ್ರ ಅದೆಷ್ಟು ದೊಡ್ಡ ಡಂಗುರ!! ಬಹುಶಃ ಆ ಕೃತಕ ಬೆಳಕಿನಲ್ಲೇ ಎಲ್ಲ ನನ್ನ ಇಂದಿನ ಸವಾರಿಯನ್ನು ನೋಡಿದ್ದಕ್ಕೇ ಇರಬೇಕು – ನಾನೊಬ್ಬ ಮಹಾಸಾಹಸಿ!ರಾಮನಾಥನಿಗೆ ನನ್ನ ಜತೆಯಲ್ಲೇ ಮರಿಕೆಗೆ ನಡೆದು ಬಿಡುವ ಉಮೇದಿತ್ತು. ಆದರೆ ಪ್ರಾಯ ಸಹಜವಾದ ವಿಶ್ರಾಂತಿ ಮುಗಿದಿರಲಿಲ್ಲ. ಅಲ್ಲದೆ ಪೂರ್ಣ ತಿಳುವಳಿಕೆಯ ಹೆಂಡತಿ ಶಾಂತಳನ್ನು (ನನಗೆ ಅತ್ತೆ) ಬಿಟ್ಟು ಹೊರಡುವುದೂ ಸರಿಯಾಗುತ್ತಿರಲಿಲ್ಲ. ನಾನು ಸರಣಿ ಪೂರ್ಣ ಮಾಡುವವನಂತೆ ಎರಡನೇ ಸೋದರಮಾವನ ಚೇತನ ಮನೆಯತ್ತ ಹೊರಟೆ.


ಎ.ಪಿ. ಮಾಲತಿ ಸಾಹಿತ್ಯ ವಲಯಗಳಲ್ಲಿ ಸಾಕಷ್ಟು ಪ್ರಚುರಿತ ಹೆಸರು. ಆದರೆ ನಮ್ಮ ಕೌಟುಂಬಿಕ ವಲಯದಲ್ಲಿ ಆಕೆ - ಗೋವಿಂದನ ಹೆಂಡತಿ, (ಅಂದರೆ ನನಗೆ ಅತ್ತೆ,) ಮತ್ತು ಜನ್ಮನಾಮ ಮೋಹಿನಿ ಎಂದೇ ಆತ್ಮೀಯೆ. ನಾನಿನ್ನೂ ಪುಸ್ತಕೋದ್ಯಮಿಯಾಗಿದ್ದ ಕಾಲದಲ್ಲಿ ಅವರಿಂದ ಕೇಳಿ, `ಸಂಜೆ ಬಿಸಿಲು’ ಎಂಬ ಕಥಾ ಸಂಕಲನವನ್ನು (ಬೆಲೆ ರೂ ಎಪ್ಪತ್ತೈದು) ಪ್ರಕಟಿಸಿದ್ದೆ.


ನಿಜ ವ್ಯವಹಾರದಂತೆ ಅದಕ್ಕೆ ಪೂರ್ಣ ಮುದ್ರಣ ಖರ್ಚು ನನ್ನದೇ. ವೃತ್ತಿ ಮರ್ಯಾದೆಯಂತೆ ಲೇಖಕ-ಗೌರವಧನ ಹಾಗೂ ಉಚಿತ ಪ್ರತಿಗಳನ್ನೂ ಕೊಟ್ಟಿದ್ದೆ. (ಲೇಖಕರಿಂದ ೫೦% ತೆಗೆದುಕೊಂಡು ಮಾಡಿ, ಐವತ್ತೋ ನೂರೋ ಪ್ರತಿ ಪುಸ್ತಕಗಳನ್ನು ಬದಲಿ ಎಂಬಂತೆ ಅವರಿಗೆ ಕೊಟ್ಟು ಕೈ ತೊಳೆದುಕೊಳ್ಳುವ ಸಗಟು ಖರೀದಿಗೆ ಹುಟ್ಟಿದವರು ತುಂಬಾ ಇದ್ದಾರೆ, ಬಿಡಿ.) ಆದರೆ ಕನ್ನಡದಲ್ಲಿ ಕಥಾ ಸಂಕಲನ ಬೇಡಿಕೆ ಕಡಿಮೆಯಿರುವ ಸಾಹಿತ್ಯ ಪ್ರಕಾರ. ಸಾಲದ್ದಕ್ಕೆ ನಾನು ಪ್ರಕಾಶನವನ್ನೂ ಮಾರಾಟ ಮಳಿಗೆಯನ್ನೂ ಬಿಟ್ಟದ್ದೂ ಸೇರಿಕೊಂಡಿತು. ಹಾಕಿದ್ದು ಐದುನೂರೇ ಪ್ರತಿಯಾದರೂ ಬಹುತೇಕ ನನ್ನ ದಾಸ್ತಾನಿನಲ್ಲೇ ಬೆಚ್ಚಗುಳಿದುಕೊಂಡಿತು. ನಿತ್ಯಾ ಅವನ್ನು ನೋಡಿ ತಲೆಕೆಟ್ಟು ಈಚೆಗೆ ಅದರ ಇನ್ನೂರೋ ಮುನ್ನೂರೋ ಪ್ರತಿಗಳಿರುವ ಒಂದು ಕಟ್ಟನ್ನು ಪುತ್ತೂರಿನತ್ತ ಹೋಗಲಿರುವ ಕಾರಿಗೆ ಹೇರಿ ಕಳಿಸಿಬಿಟ್ಟಿದ್ದೆ. ಈಗ ಮೋಹಿನಿಯ ಪ್ರತಿಕ್ರಿಯೆ ಏನಿರುತ್ತದೋ ಎಂದು ಯೋಚಿಸುತ್ತ ಪಾದ ಬೆಳೆಸಿದ್ದೆ. ಅಡಿಕೆ ಜಾಲಿನ ಕೊನೆಯಿಂದ ಮೇಲಿನ ತೋಟದೆತ್ತರಕ್ಕೇರಿ ನಡೆಯುತ್ತಿದ್ದಂತೆ ಕ್ಯಾಮರಾ ದಾಖಲೀಕರಣ ಚಾಲೂ ಮಾಡಿದ್ದೆ. ಅದರ ಚಂದ, ಕೊನೆಯಲ್ಲಿ ಪುಸ್ತಕ ಮರಳಿಸಿದ್ದಕ್ಕೆ ನನಗೆ ಕಾದ ಶಿಕ್ಷೆಯನ್ನು ನೀವೇ ಚಲಚಿತ್ರದಲ್ಲಿ ನೋಡಿ ಆನಂದಿಸಿ.

“ಖ್ಯಾತ ಸಾಹಿತಿ ಮಾಲತಿಯವರಿಂದ ಪ್ರಕಾಶಕ ಅಶೋಕವರ್ಧನನ ಮೇಲೆ ಹಲ್ಲೆ” ಎಂದು ಪತ್ರಿಕಾ ಹೆಡ್‍ಲೈನ್ ಅಥವಾ ನನ್ನ ಕೈಕಾಲು ಮುರಿದ ಕುರಿತಂತೆ ದಿನವಿಡೀ ಛಾನೆಲ್ಲುಗಳ ಬಾರ್ಕಿಂಗ್ ನಾಯ್ಸ್ (breaking news) ಬರುವಂತದ್ದೇನೂ ನಡೆಯಲಿಲ್ಲ, ಬಿಡಿ. ನನಗೆ ಗೋವಿಂದನನ್ನು ನೆನೆಸಿದಾಗೆಲ್ಲ, ಹಳೆಯ ಮರಿಕೆ ಮನೆಯ ಉಯ್ಯಾಲೆ ಚಾವಡಿಯ ತೆಂಗಿನ ಅಟ್ಟದ ಮೂಲೆ ನೆನಪಾಗುತ್ತದೆ. ಅಲ್ಲಿನ ದೂಳು, ತೆಂಗಿನ ಮುಕ್ಕು, ಜೇಡನ ಬಲೆ ಎಣಿಸದೆ, ಕಿಟಕಿಯಂಚಿನಲ್ಲಿ ಎರಡು ಗೋಣಿ ಹಾಸಿ ತನ್ನದೇ ಸ್ಟಡೀ ಕಾರ್ನರ್ ಮಾಡಿಕೊಂಡಿದ್ದ ಗೋವಿಂದ. ಲಹರಿ ಬಂದಾಗ “ಹಾಜರೇಏಏ ಮೈ ಪರದೇಸೀಈಈ” ಎಂದು ಗುನುಗುವ ಸಂಗೀತಪ್ರಿಯ ಗೋವಿಂದ. ಅದೊಂದು ದಿನ, ಮೋಹಿನಿ ಹೀಗೇ ತವರೂರಿಗೆ ಹೋಗಿದ್ದಳಂತೆ. ಅಂಚೆಯಣ್ಣ ಬಾಗಿಲಲ್ಲಿ ಬಂದು ಕಾದಿದ್ದನಂತೆ. ಮನೆಯೊಳಗಿಂದ ಗೋವಿಂದ ಗಾನಲಹರಿಯಲ್ಲಿ “ವಿರಹಾಆಆ ನೂರು ನೂರು ತರಹಾಆಆ” ಎನ್ನುತ್ತ ಬಂದನಂತೆ. ಆಗ ಅಂಚೆಯಣ್ಣ ರಾಗಕಂಪನಕ್ಕೆ ಕರಗಿ, “ಕಾಕಜಿ ಮಾಲತಿಯಕ್ಕನವೇ ಆವಡ್” ಎಂದು ಆಶಿಸಿದ್ದರೆ ಆಶ್ಚರ್ಯವಿಲ್ಲ! ತನ್ನ ಕತೆ, ಕಲ್ಪಕತೆಗಳಲ್ಲಿ ಮಕ್ಕಳಿಗಂತೂ ಸದಾ ತೀರಾ ಆಪ್ತವಾಗುವ ಗೋವಿಂದನಿಗಿಂದು ವೃದ್ಧಾಪ್ಯದ (೮೪) ಭಾಗವಾಗಿ ಧ್ವನಿ ಬಿದ್ದುಹೋಗಿದೆ. ಹಾಗೆಂದು ಪಿಸು ಮಾತು, ತುಂಟ ಜೋಕು, ನಗು ಬಂದಾಗ ಮೂಗು ಮುಚ್ಚಿ ಕಣ್ಣಲ್ಲಿ ಹೊಳೆಯಿಸುವ ಶೈಲಿ ಒಂದೂ ಕಡಿಮೆಯಾಗಿಲ್ಲ. ಇಂಥಾ ಗೋವಿಂದ ಎಂದಿನಂತೆ ಒಂಟಿಯಾಗಿ ಮರಿಕೆಗೆ ಹೊರಟಿದ್ದ. ತೋಟದೊಳಗೆ ಒಂಟಿಯಾಗಿ ನಡೆಯುವಾಗ ಮೈ ಮಾಲಿದರೆ ಎಂದು ಕ್ರಮದಂತೆ ಹಿಡಿದುಕೊಳ್ಳುವ ದೊಣ್ಣೆ ಹುಡುಕಿದ್ದ. ಮೋಹಿನಿ ಅದನ್ನು ಸಂಗ್ರಹಿಸಿ ಕೊಡುವ ಕಾಲಕ್ಕೆ ಅನಿರೀಕ್ಷಿತವಾಗಿ ಒದಗಿದ ನನ್ನಲ್ಲಿ ಕುಶಾಲು ನಡೆಸಿ ಕ್ಯಾಮರಾಕ್ಕೆ ಸಿಕ್ಕಿಬಿದ್ದಳು.ಚೇತನದಿಂದ ಮರಿಕೆಮನೆಗೆ ತೋಟದೊಳಗಣ ಕಾಲ್ದಾರಿ ಹಿಡಿಯುವವರಿಗೆ ತುಸು ಕಷ್ಟದ್ದು ಮೊದಲಲ್ಲೇ ಸಿಗುವ ತೋಡು ಅಥವಾ ಅದನ್ನು ದಾಟುವ ಪಾಲ. ಹಿಂದೊಮ್ಮೆ ಅತ್ತಿಗೆ (ರಮಾದೇವಿ) ಸದೃಢ ಆರೋಗ್ಯವಂತೆಯಾಗಿದ್ದ ಕಾಲದಲ್ಲೇ ಈ ಪಾಲದಲ್ಲಿ ಕಾಲು ಜಾರಿ ತೋಡಿಗೆ ಬಿದ್ದು ಸಂಕಟ ಅನುಭವಿಸಿದ್ದರು. ಅನಂತರವೇ ಪ್ರಥಮಾದ್ಯತೆಯಲ್ಲಿ ಎನ್ನುವಂತೆ ಇಲ್ಲೊಂದು ಕಾಂಕ್ರೀಟ್ ಕಾಲು ಸಂಕ ಬಂದಿತ್ತು. ಈಗ ಕೃಷಿಕಾರ್ಯಕ್ಕೆ ಕೆಲಸದವರ ಅಭಾವ ಕಾಡುತ್ತಿದೆ. ಕೃಷ್ಯುತ್ಪನ್ನಗಳ ಸಾಗಣೆಗೆ ವಾಹನಾವಲಂಬನೆ ಅನಿವಾರ್ಯವಾಗಿದೆ. ಹಾಗಾಗಿ ಇಲ್ಲಿ ತುಸು ಆಚೆ ತೋಟಕ್ಕೆ ಚತುಷ್ಚಕ್ರ ವಾಹನವೇ ಇಳಿಯುವಂತೆ ಹೆಚ್ಚಿನಗಲದ ಸೇತುವೆಯೂ ಬಂದಿದೆ!


ಗೋವಿಂದನ ಗಡಿ ದಾಟಿದ್ದೇ ರಾಮನಾಥನ ಒಂದು ಕೆರೆ ಸಿಗುತ್ತದೆ. ಬಾಲ್ಯದಲ್ಲಿ ಅದು ನಮ್ಮ ಲೆಕ್ಕಕ್ಕೆ ವಿಸ್ತಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ, ಶೀತನೈರ್ಮಲ್ಯಗಳಲ್ಲಿ ಸಾಕ್ಷಾತ್ ಮಾನಸಸರೋವರವೇ ಆಗಿತ್ತು. ಅದಕ್ಕಿಳಿಯುವಾಗ ನೀರೊಳ್ಳೆ ಸಿಕ್ಕಿ “ನೀರೊಳಗಿರ್ದು ಬೆಮರ್ದನ್” ಸ್ವಾನುಭವಕ್ಕೆ ದಕ್ಕಿದ್ದು, ಕಣ್ಣು ಮುಚ್ಚಿ ಅಂಡರ್ ವಾಟರ್ ಸಾಹಸ ನಡೆಸಿದ್ದಾಗ ಕೊಳೆತ ಅಡಿಕೆ ಸೋಗೆ ಸಿಕ್ಕಿ `ಹಾವೋ ಹಗ್ಗವೋ’ ಸಾಕ್ಷಾತ್ಕಾರವಾದದ್ದು, ಯಾರದ್ದೋ ಪುಕ್ಕಲು ಕಲಿಕೆಯಲ್ಲಿ ಬಾಳೇದಿಂಡು ತಪ್ಪಿಹೋದಾಗ ಸೊಂಟಮಟ್ಟದ್ದೇ ನೀರಿನ ಅರಿವಾದದ್ದು, ದಂಡೆಯ ಮೇಲಿಂದ ಧುಮುಕುವ ಉತ್ಸಾಹದಲ್ಲಿ ನಾಚಿಕೆ ಮುಳ್ಳಿನ ಉರಿ ಮರೆತದ್ದು, ನೀರಾಟದ ಉತ್ತುಂಗದಲ್ಲಿದ್ದಾಗ ಅತ್ತ ಬಂದ ಹಿರಿಯರು ಎದ್ದ ಬಗ್ಗಡ ನೋಡಿ “ಕೋಣಗಳು” ಎಂದದ್ದಕ್ಕೆ ಕಿವುಡುಗಿವಿ ಕೊಟ್ಟದ್ದು, ಡ್ರೆಸ್ಸಿಂಗ್ ರೂಮಾಗಿ ಸಿಕ್ಕುತ್ತಿದ್ದ ಪಂಪು ಕೊಟ್ಟಿಗೆಯಲ್ಲಿ ಒಣಹಾಕುತ್ತಿದ್ದ ಯಾರ್ಯಾರ ಚಡ್ಡಿ/ಕಾಚ ಯಾರ್ಯರೋ ಬಳಸಿದರೂ `ಶರ್ಮಿಷ್ಠೆ ದೇವಯಾನಿ’ ಪ್ರಸಂಗ ಬರದಿದ್ದದ್ದು... ಹೀಗೇ ನೆನಪಿನ ಮೆರವಣಿಗೆ ನಡೆಯುತ್ತಿದ್ದಂತೆ ಅಣ್ಣನದ್ದೇ ಇನ್ನೊಂದು ಕೆರೆ ದಾಟಿ ನಡೆದಿದ್ದೆವು. ಈ ಕೆರೆಯಲ್ಲೇ ರಾಮನಾಥ ನನಗೆ ಈಜು ಕಲಿಸಲು ಹೊರಟದ್ದು. (ವಿವರಗಳಿಗೆ ಮತ್ತೆನೋಡಿ: ಅಸಮ ಸಾಹಸಿ, ಮರಿಕೆಯ ಅಣ್ಣ)ಮರಿಕೆಯ ದನದ ಕೊಟ್ಟಿಗೆವರೆಗೂ ಗಂಟಲಿನ ಅಸಹಾಯಕತೆಯಿಂದ ಹೆಚ್ಚು ಕಡಿಮೆ ಮೌನವಾಗಿಯೇ ಬಂದ ಗೋವಿಂದ ಒಮ್ಮೆ ನನ್ನನ್ನು ತಡೆದು ನಿಲ್ಲಿಸಿದ. ಕೊಟ್ಟಿಗೆಯತ್ತ ಕೈಮಾಡಿ “ಹದಿನಾರರ ಪ್ರಾಯದಲ್ಲಿ ಕೃಷಿಗೆ ನಿಂತ ಅಣ್ಣ ಏನೆಲ್ಲ, ಎಷ್ಟೆಲ್ಲ ಮಾಡಿದ ಮಾರಾಯಾ” ಪಿಸುಗುಟ್ಟಿದ!
ಬಹುಶಃ ಈ ಸ್ಥಾಯೀಭಾವದ ಸಮರ್ಥನೆಯನ್ನೇ ಅಂದು ತಿಥಿಯೂಟಕ್ಕೆ ಬಂದೆಲ್ಲರೂ ಮೌನದಲ್ಲಿ ಮಾಡಿದ್ದರು. ಊಟ ಮುಗಿದು, ನೆಂಟರಿಷ್ಟರು ಚದುರುವಾಗ ನಾನು ಅವಸರಿಸಲಿಲ್ಲ. ಸೂರ್ಯ ತುಸು ಬಾಡಿದ ಮೇಲೆ, ಮಂಗಳೂರಿಗೆ ಮರಳಲು ನಾನು ಮತ್ತೆ ಸೈಕಲ್ಲೇರಿದೆ, ಸವಾರಿ ಬಂದದ್ದಕ್ಕೆ ಸಾರ್ಥಕ್ಯ ಕಂಡಂತೆ ಇಮ್ಮಡಿ ಉತ್ಸಾಹದಲ್ಲಿ ಪೆಡಲಿದೆ.

ನರಹರಿ ಬೆಟ್ಟ – ಹೆಸರಿನ ವೈಭವ ಮಾತ್ರ, ನಿಜದಲ್ಲಿ ನೆತ್ತಿಯಲ್ಲಿ ಬಂಡೆಗಳನ್ನು ಹೊತ್ತ ಸಣ್ಣ ಗುಡ್ಡ. ಗಂಭೀರ ಚಾರಣ, ಪರ್ವತಾರೋಹಣಗಳ ಕಡತ ಬಿಚ್ಚಿದರೆ ಇದು ನೀರಸ, ಪ್ರಾಥಮಿಕ ಹಂತದ ಗುಡ್ಡ. ೧೯೭೦ರ ದಶಕದಲ್ಲೆಲ್ಲೋ ನಾನು ಶಿಲಾರೋಹಿಯಾಗಿ ನರಹರಿ ಬೆಟ್ಟವನ್ನು ಮೊದಲು ಕಂಡದ್ದಿರಬೇಕು. ಮೂರು ನಾಲ್ಕು ಮಂದಿಯನ್ನು ಕಟ್ಟಿಕೊಂಡು ಬಂದಿದ್ದೆ. ಶಿಖರದ ಮುಖ್ಯ ಬಂಡೆಯ ಕಡಿದಾದ ಮೈಯನ್ನು ನಮ್ಮ ಚಟುವಟಿಕೆಗಳಿಗೆ ಬಳಸಲು ನಮ್ಮ ರಕ್ಷಣಾ ಸಲಕರಣೆಗಳು ಪರ್ಯಾಪ್ತವಿರಲಿಲ್ಲ. ಈ ವಲಯದ ಹೆಚ್ಚಿನ ಗುಡ್ಡಗಳ ಶಿಖರಪ್ರದೇಶ ಕಾಡುಮುಚ್ಚಿರುವುದರಿಂದ, ನರಹರಿಬೆಟ್ಟ ನಿಸ್ಸಂದೇಹವಾಗಿ ಅತ್ಯುನ್ನತ ದೃಶ್ಯ ಮತ್ತು ರಮಣೀಯ ಭಾವಗಳ ಸೆಲೆ. ನಾವು ಮಾತ್ರ ಅಷ್ಟಕ್ಕೆ ಕಳೆದುಹೋಗದೆ, ಮುಖ್ಯ ದಾರಿಯ (ಆಗ ಇದಕ್ಕಿನ್ನೂ ಹೆದ್ದಾರಿಯ ಸ್ಥಾನ ಬಂದಿರಲಿಲ್ಲ) ಉತ್ತರ ದಿಕ್ಕಿನ ಸಣ್ಣ ಬಂಡೆಗಳಲ್ಲಿ ಅಭ್ಯಾಸ ನಡೆಸಿ ಮರಳಿದ್ದೆವು.


ನನ್ನದೇ ಖಾಸಗಿ ವಾಹನದ ಓಡಾಟಗಳಲ್ಲಿ ಒಂದೆರಡು ಬಾರಿ ಶಿಖರದ ದೇವಳ ನೋಡುವ ಆಸೆಯವರನ್ನು ಒಯ್ಯುವಾಗ ಮತ್ತೆ ಮತ್ತೆ ಕಂಡದ್ದಿತ್ತು. ಆಗೆಲ್ಲಾ ಕರಿಕಲ್ಲು ಸಾಗಿಸುವವರ (ಕಡೆವ ಕಲ್ಲು ಮಾಡುವವರೂ ಇದ್ದಿರಬೇಕು, ಸರಿಯಾಗಿ ನೆನಪಿಲ್ಲ) ಶಕ್ತಿಯುತ ಲಾರಿಗಳಿಗಷ್ಟೇ ಸಂಚಾರ ಸಾಧ್ಯತೆ ಇದ್ದ ತೀರಾ ಕಚ್ಚಾ ಮತ್ತು ಸಣ್ಣ ದಾರಿಯಷ್ಟೇ ಗುಡ್ಡ ಏರುತ್ತಿತ್ತು. ಮುಂದೊಂದು ದಿನ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಶಿಖರದ ದೇವಳದ ವಠಾರದಲ್ಲೇ ನಡೆಯುತ್ತದೆ ಎಂದಾಗ ನನಗೆ ಕುತೂಹಲ ಬಂತು. ಸಾಲದ್ದಕ್ಕೆ ನಮ್ಮ ಆತ್ಮೀಯ ಕೇಶವ ಉಚ್ಚಿಲರೇ (ಬಂಟ್ವಾಳ ಕಾಲೇಜಿನ ಕನ್ನಡ ಉಪನ್ಯಾಸಕರು) ಅಧ್ಯಕ್ಷರು ಎಂದ ಮೇಲಂತೂ ಹೋಗದಿರುವುದಾಗಲೇ ಇಲ್ಲ. ಆ ಕಾಲಕ್ಕೆ ದಾರಿ ಹೆಚ್ಚು ಹಸನಾಗಿತ್ತು, ನೇರ ದೇವಳವನ್ನು ಹೊತ್ತ ಬಂಡೆ ಸಮೂಹದ ಬುಡಕ್ಕೂ ಮುಟ್ಟಿತ್ತು. ಭಕ್ತಾದಿಗಳ ಸೇವೆಯಲ್ಲಿ ದೇವಳದ ಅನೇಕ ಅಭಿವೃದ್ಧಿಗಳೊಡನೆ ಹೆದ್ದಾರಿ ಪಕ್ಕದಲ್ಲಿ `ಮಹಾದ್ವಾರ’ವೂ ನಿಂತುಬಿಟ್ಟಿತ್ತು. ಅದು ಉರಿಬಿಸಿಲ ದಿನಗಳಾದರೂ ಭೋರ್ಗರೆಯುತ್ತಿತ್ತು ಪಶ್ಚಿಮದಗಾಳಿ. ದೇವಳದಂಗಳದಲ್ಲಿ ಬಿಗಿದು ಕಟ್ಟಿದ್ದ ಶಾಮಿಯಾನ ಉಡ್ಡಯನಕ್ಕೆ ಸಜ್ಜಾದ ಗಗನನೌಕೆಯಂತೇ ಸಂಭ್ರಮಿಸಿತ್ತು. ವಿಶೇಷ ನಾಗರಿಕ ಸವಲತ್ತುಗಳಿಲ್ಲದ ಸ್ಥಳವಾದ್ದರಿಂದ ಸಮ್ಮೇಳನ ಪುಟ್ಟ ಮತ್ತು ಆತ್ಮೀಯ ಕೂಟವೇ ಆಗಿತ್ತು. ಮನುಷ್ಯ ಗದ್ದಲ ಮತ್ತು ವಾಸನೆಗಳಿಗೆ ಅಲ್ಲಿ ಆಸ್ಪದವೇ ಇರಲಿಲ್ಲ. ದಿಟ್ಟಿ ಅಲಂಕೃತ ವೇದಿಕೆಗೆ ನೆಟ್ಟರೂ ಎಲ್ಲ  ಕುಬ್ಜವಾಗಿಸುವ ಹಿನ್ನೆಲೆಯ ಪ್ರಾಕೃತಿಕ ವೈಭವಗಳಿಂದ ಸಮ್ಮೇಳನ ಬೇರೊಂದೇ ಆಯಾಮದಿಂದ ಚೇತೋಹಾರಿಯಾದ ಅನುಭವವನ್ನು ಕೊಟ್ಟದ್ದಂತೂ ಖರೆ.

ಕಾಲಚಕ್ರದ ಮುಂದಿನ ಉರುಳಿನಲ್ಲಿ ಅದ್ಯಾವುದೋ ಭಾರೀ ಯಜ್ಞ ಒಂದರ ಸೆಳವಿಗೆ ಸಿಕ್ಕಿತ್ತು ನರಹರಿ ಬೆಟ್ಟ. ದೇವರು, ಪೂಜೆ ಮುಂತಾದವು ನನ್ನ ಆಸಕ್ತಿಗಳ ಪಟ್ಟಿಯಲ್ಲಿ ಎಂದೂ ಬರಲಿಲ್ಲ. ಹಾಗಾಗಿ ಅನ್ಯ ಕಾರ್ಯಗಳಲ್ಲಿ ನಾನು ಪುತ್ತೂರು-ಮಂಗಳೂರುಗಳ ನಡುವೆ ಓಡಾಡುತ್ತಿದ್ದಾಗ ಗಮನಿಸಿದ್ದಿಷ್ಟು: ಮಹಾದ್ವಾರ ಕಳೆದದ್ದೇ ಬಲಬದಿಯ ಸಣ್ಣ ದಿಬ್ಬವನ್ನು ಸಮತಟ್ಟುಗೊಳಿಸಿದ್ದರು. ಅಲ್ಲಿ ಕೇಸರಿ ಧ್ವಜ ಸಹಿತ ಎದ್ದ ಭಾರೀ ಚಪ್ಪರದಲ್ಲಿ ದಿನಗಟ್ಟಳೆಯೋ ವಾರಗಟ್ಟಳೆಯೋ ವೈವಿಧ್ಯಮಯ ಸಾಂಸ್ಕೃತಿಕ ಗದ್ದಲ ಪ್ರಸಾರವಾಗಿತ್ತು. ಆಗೆಲ್ಲಾ ಇನ್ನೊಮ್ಮೆ ಹೋಗಬೇಕು, ನೋಡಬೇಕು ಎಂದುಕೊಂಡದ್ದೇ ಬಂತು. ಹಾಗಾಗಿಯೋ ಏನೋ......

ಈ ಸಲ ಮರಿಕೆಯಿಂದ ಅವಿರತ ಪೆಡಲುತ್ತ ಬಂದವನಿಗೆ ನರಹರಿಬೆಟ್ಟದ ಏರೂ ಸರಾಗ ಮುಗಿಯುತ್ತಿದ್ದಂತೆ ಒಮ್ಮೆಲೇ ಮಿದುಳಛಳಕು (ಬ್ರೇನ್ ವೇವ್) ಮೂಡಿತು, “ಬೆಟ್ಟದ ಭುಜವೇ ಯಾಕೆ, ತಲೆಗೇ ಏರೋಣ”! ಎಡ ಹೊರಳಿಯೇ ಬಿಟ್ಟೆ. ಬೆಟ್ಟಕ್ಕಿದ್ದ ಹಳೆಯ `ಮಹಾದ್ವಾರ’ ಹೊಸ ಅಭಿವೃದ್ಧಿಗಳಿಗೆ ಕಿರುದ್ವಾರ ಅನ್ನಿಸಿರಬೇಕು. ಹಾಗಾಗಿ ಕಾಲಕ್ಕೊದಗಿದ ಯಂತ್ರಧರ್ಮಾನುಸಾರ ಅದರ ಒತ್ತಿನಲ್ಲೇ ಸುವಿಸ್ತಾರವೂ ನುಣುಪಿನದೂ ಹೊಸತೇ ದಾರಿ ಹೊರಟು, ಹಳತನ್ನು ಸೇರಿಸಿಕೊಂಡು ಮೇಲೇರಿತ್ತು. ಹಿಂದೆ ಯಜ್ಞ ನಡೆದ ಜಾಗದಲ್ಲಿ ಏನೋ ಕಿರು ಉದ್ಯಮದ ಭಾರೀ ಕಟ್ಟಡ ಬಂದಿತ್ತು. ದಾರಿ ತೀವ್ರ ಕಡಿದಾಗಿಯೇ ಇತ್ತು. ಆ ಕೊನೆಯಲ್ಲೂ ಸಹಜ ಕುರುಚಲು ಕಾಡು ಹುಡಿ ಮಾಡಿ, ಸಾಕಷ್ಟು ಬಂಡೆ ಮಣ್ಣು ಕದಲಿಸಿ, ಕಳಚಿ ವಾಹನಗಳಿಗೆ ತಂಗಲು ಅವಕಾಶ ಕಲ್ಪಿಸಿದ್ದರು. ಆರ್ಸೀಸಿಯ ಒಂದು ಕಟ್ಟಡದಲ್ಲಿ ಬರುವ ಭಕ್ತಾದಿಗಳ ಶಾಸ್ತ್ರಕ್ಕೆ ಹಣ್ಣು-ಕಾಯಿಯ ಮಳಿಗೆಯೂ ಅನುಷ್ಠಾನದ ಸೌಕರ್ಯಕ್ಕೆ ಲೇಸು-ಕೋಲಾ ಅಥವಾ ಕುರ್ಕುರೇ-ಫಂಟಾಗಳ ಮಳಿಗೆಯೂ ನೆಲೆಸಿತ್ತು. ಸಹಜವಾಗಿ ಹಿತ್ತಲಿನಲ್ಲಿ ಕಸ ಕೊಳಕು ಎರಚಾಟ ಧಾರಾಳವೇ ಇತ್ತು. ಹೀಗೆ ಪರಿಸರ ಮಾಲಿನ್ಯದಲ್ಲಿ ದೊಡ್ಡ ಪಾಲಿರುವ ಅಲ್ಲಿನ ಮಳಿಗೆಯಾತ ಭಗವದ್ಗೀತೆ ಪಾರಾಯಣ ನಡೆಸಿದ್ದರು. ನಾನು ಸಿಕ್ಕ ಅವಕಾಶವನ್ನು ಬಿಡಬಾರದೆಂಬಂತೆ “ನೀವು ಓದುವ ಗೀತಾಮೂರ್ತಿ ಇಂದ್ರಾದಿ ದೇವತೆಗಳನ್ನಲ್ಲ, ಗೋವರ್ಧನಗಿರಿಯನ್ನು ಪೂಜಿಸಿ ಎಂದ. ಅದನ್ನು ಒಪ್ಪುವ ನೀವು ನಿಮ್ಮದೇ ನರಹರಿಗಿರಿಗೆ ಹೀಗೆ ಕಸ ಸೇರಿಸುವುದೇ” ಎಂದೆ. ಆತ `ಪಾಪರಾಶಿ’ಯನ್ನು ಸುಲಭವಾಗಿ ಸಾರ್ವಜನಿಕರ ತಲೆಗೆ ವರ್ಗಾಯಿಸಿದರು. ಪರಿಸ್ಥಿತಿಯ ಇನ್ನೊಂದು ವ್ಯಂಗ್ಯವೆಂದರೆ ಆತ ಓದುತ್ತಿದ್ದ ಗೀತೆಯಾದರೋ ಇಸ್ಕಾನ್ ಆವೃತ್ತಿ. ಇಸ್ಕಾನಿನ ಒಂದೇ ಉದಾಹರಣೆ ನೋಡಿ - ಕೊಲ್ಲೂರು ಆಶ್ರಮ. ಇದು ಕೊಡಚಾದ್ರಿ ಬೆಟ್ಟದ ಪಾದ, ಮೂಕಾಂಬಿಕಾ ವನಧಾಮದ ಭಾಗವನ್ನು ಅವಹೇಳನ ಮಾಡಿಯೇ ನೆಲೆ ಕಂಡುಕೊಂಡಿದೆ! ಹೇಳುವುದು ಶಾಸ್ತ್ರ, ಇಕ್ಕುವುದು ಗಾಳ.

ಸೈಕಲ್ಲನ್ನು ಅಂಗಡಿಯಾತನ ಸುಪರ್ದಿಗೆ ಬಿಟ್ಟು, ಶಿಖರದ ಭೇಟಿಗೆ ಹೊರಡುವ ಯೋಚನೆ ನನ್ನದಿತ್ತು. ಹಿಂದೆ ಈ ಕೊನೆಯ ಹಂತದಲ್ಲಿ ಅಂಕಾಡೊಂಕು, ಹರಕುಮುರುಕು ಮೆಟ್ಟಿಲುಗಳಿದ್ದುವು. ಇಂದು ದೃಢ ಕೈತಾಂಗು ಸಹಿತ, ನೇರ ವ್ಯವಸ್ಥಿತ ಮೆಟ್ಟಿಲ ಸಾಲು ಕಾಣಿಸಿತು. ಆದರೆ ಅಷ್ಟೇ ಅಲ್ಲ, ಮೆಟ್ಟಿಲಸಾಲಿನ ಪಕ್ಕದಲ್ಲಿದೇನು! ನೆಲ ಕೀಸಿ, ಜಲ್ಲಿ ಹಾಸು ಬಿಗಿದು ದಾರಿಯನ್ನು, ಪರೋಕ್ಷವಾಗಿ ಮೋಟಾರು ವಾಹನಗಳನ್ನೂ ಶಿಖರಕ್ಕೆ ಮುಟ್ಟಿಸುವ ಕಾಮಗಾರಿ ಸುರುವಾಗಿತ್ತು. ಅಲ್ಲಿಗೆ ಒಮ್ಮೆಲೆ ನನ್ನ ಕುತೂಹಲದೂಟೆ ಬತ್ತಿಹೋಯ್ತು. ಎಲ್ಲಿಗೆ ಏನು ಮತ್ತು ಎಷ್ಟು ಎಂಬ ಮಿತಿಯರಿಯದ `ಅಭಿವೃದ್ಧಿ’ಯ ಮುಂದಿನ ಹೆಜ್ಜೆಯ ಕಲ್ಪನೆಯೇ ನನ್ನ ಉತ್ಸಾಹವನ್ನು ಬಲಿ ತೆಗೆದಿತ್ತು. ನಾನು ನಿರಾಶೆಯ ಪಾತಾಳಕ್ಕೇ ಸೇರಿದ್ದೆ. ಇನ್ನು `ನಾಳೆ’ಗೆ ಉಳಿಯುವ ನರಹರಿ ಬೆಟ್ಟವೆಂದರೆ ಗರ್ಭಗುಡಿಯ ಹಿತ್ತಿಲಲ್ಲೊಂದು ಹೆಲಿಪ್ಯಾಡ್, ಎಡ ಬಲಗಳಲ್ಲಿ ತಪ್ಪಲಿನಿಂದ ನೆತ್ತಿಗೆ ತೊಟ್ಟಿಲ ಸೇವೆ ಒದಗಿಸುವ ರಕ್ಕಸ ಸ್ತಂಭದ ಎರಡು ಕಾಲು! ಸದ್ಯಕ್ಕೆ ದಾರಿ ಮುಗಿದಲ್ಲಿಗೆ ಸ್ಕೂಟರ್ ಏರಿ ಬಂದಿದ್ದ ಭಟ್ಟರೊಬ್ಬರು ನನ್ನಲ್ಲೊಬ್ಬ `ಗಿರಾಕಿ’ಯನ್ನು ಕಂಡವರಂತೆ ಚುರುಕಾಗಿಯೇ ಮೇಲೆ ಹೋಗಿದ್ದರು. ನೊಣಕ್ಕೂ ಅವಕಾಶವಿಲ್ಲದಷ್ಟು ಒಣಗಿದ್ದ ಕ್ಯಾಂಟೀನ್ ನನಗಾಗಿ ಚಾಯ್ ಕಾಯಿಸಲು ಸಣ್ಣ ಸಂಕೇತವನ್ನಷ್ಟೇ ಕಾದಿತ್ತು. ಏನಲ್ಲದಿದ್ದರೂ ನನ್ನದೇ ಲೆಕ್ಕಾಚಾರದಲ್ಲಿ ಮೆಟ್ಟಿಲೇರುತ್ತಾ ವಿವಿಧ ಹಂತಗಳ ಮತ್ತು ಕೋನಗಳ ಶಿಖರಸ್ವರೂಪದ ಚಿತ್ರ ತೆಗೆಯುವುದಿತ್ತು. ದೇವಳದ ಅಂಗಳದಿಂದ, ಬಂಡೆಯ ಅಂಚಿನಿಂದ, ವಿಹಂಗಮದ ನೋಟದಿಂದೆಲ್ಲ ಹೊರಲೋಕ ಸೆರೆಹಿಡಿಯುವ ಬಯಕೆಯೂ ಇತ್ತು. ಮೇಲೆ ಪುಟ್ಟ ಒಣ ಕೊರಕಲುಗಳು ಭಾವುಕ ಕಣ್ಣುಗಳಿಗೆ ತೀರ್ಥದ್ವಯಗಳಾಗಿ ಭಾಸವಾಗುವ ಚೋದ್ಯವನ್ನೂ ಸಚಿತ್ರ ವಿವರಿಸಬೇಕೆಂದಿದ್ದೆ. ಎಲ್ಲ ಕೈಚೆಲ್ಲಿ, ಕೇವಲ ನಿರಾಶೆಯ ಆಳವನ್ನು ಹಿಡಿಯುವಂತೆ ಕ್ಯಾಮರಾ ಕಣ್ಣು ತೆರೆದಿಟ್ಟು, ಸೈಕಲ್ಲೇರಿ, ನಿಧಾನಕ್ಕೆ ಹೆದ್ದಾರಿಗೆ ಮರಳಿಬಿಟ್ಟೆ.

ಸಣ್ಣ ಬದಲಾವಣೆಗಾಗಿ ನೇತ್ರಾವತಿಯ ಹಳೇ ಸೇತುವೆ – ಪಾಣೇರುಸಂಕ, ಬಳಸಿಕೊಂಡು ಹೋದೆ. ಉಳಿದಂತೆ ಜೋಡುಮಾರ್ಗದಿಂದ ಮಂಗಳೂರಿನ ನನ್ನ ಮನೆಯವರೆಗೆ ಮಾಮೂಲು ದಾರಿ. ಇಲ್ಲಿ ನಾನು ಸೈಕಲ್ ಮೆಟ್ಟಲೇ ಇಲ್ಲ; ಬಹುಬಳಕೆಯ ಜಾಡಾದ್ದರಿಂದ ಸೈಕಲ್ಲೇ ನನ್ನನ್ನು ಹೊತ್ತು ಓಡಿತ್ತು!
ಯಾವುದೋ ದುರ್ಬಲ ಕ್ಷಣಗಳಿಗೆ ಸೋತು ಮಡೆಸ್ನಾನ ಅಥವಾ ಎಂಜಲಿನ ಮೇಲೆ ಉರುಳುಸೇವೆ ಮಾಡುವವರನ್ನು ಧಾರಾಳ ಕೇಳಿದ್ದೇವೆ. ಇಲ್ಲಿ ಸೈಕಲ್ಲೇರಿ, ಸುಮಾರು ನೂರಿಪ್ಪತ್ತು ಕಿಮೀ ಮಾರ್ಗದುದ್ದಕ್ಕೆ ನಾನು ಮಾಡಿದ್ದೂ ಒಂದು ಉರುಳು ಸೇವೆಯೇ. ಆದರೆ ಇದರಲ್ಲಿ ಹರಕೆ ಸಂದಾವಣೆ ಮಾಡುವವರ ದೈನ್ಯವಿಲ್ಲ. ಕಾರ್ಯರಂಗದಲ್ಲಿ ಯಾವ ಮನ್ನಣೆಗಳ ಹಂಗಿಲ್ಲದೆಯೂ ಪ್ರಚಾರದ ಡೌಲಿಲ್ಲದೆಯೂ ಸಂಪರ್ಕಕ್ಕೆ ಬಂದವರಲ್ಲಿ ಅಸಮ ಸಾಹಸಕ್ಕೆ ಪ್ರೇರಣೆಯನ್ನೇ ಕೊಡುತ್ತಿದ್ದ ಅಣ್ಣನ ನೆನಪಿಗೆ ಇದೊಂದು ಶೌರ್ಯ ಸಲಾಮ್ – ರಾಯಲ್ ಸಲ್ಯೂಟ್!

6 comments:

 1. ನಮಗೆಲ್ಲ ಮಂಗಳೂರು - ಮರಿಕೆ ಮತ್ತು ಮರಿಕೆ ಬಯಲಿನ ಪ್ರವಾಸ ಮಾಡಿಸಿದ್ದಕ್ಕೆ ಧನ್ಯವಾದಗಳು.. ನನ್ನ ಮಾವ ಎ.ಪಿ.ತಿಮ್ಮಪ್ಪಯ್ಯ ಈ ಕಾಲದ ಅಪರೂಪದ ಆದರ್ಶ ವ್ಯಕ್ತಿತ್ವ - ನುಡಿದಂತೆ ನಡೆ ಮತ್ತು ನೇರ ನುಡಿಗೆ ಖ್ಯಾತರು - ಅವರ ಕೃಷಿ ಮತ್ತು ಪರಿಸರದ ಪರಿಶ್ರಮದ ಕೆಲಸ ಇಂದಿನ ಯುವಕರನ್ನೂ ನಾಚಿಸುವಂತದು ..ನರಹರಿ ಬೆಟ್ಟಕ್ಕೆ ಪಕ್ಕಾ ರಸ್ತೆ ನಿರ್ಮಾಣ ಎಷ್ಟರ ಮಟ್ಟಿಗೆ ಅಗತ್ಯವೋ ಗೊತ್ತಗುವುದಿಲ್ಲಾ ..ಮೆಟ್ಟಲು ಹತ್ತಿ ಹೋಗಿ ಪ್ರಕೃತಿ ಸೌಂದರ್ಯ ಸವಿಯಲು ಉತ್ತಮ ಜಾಗೆ ( ಕಾರಿಜೆ ಬೆಟ್ಟವು ಸಹ )

  ReplyDelete
 2. ಆಹಾ! ಮಾಲತಿಯವರ ಬಾರುಕೋಲು ಬೆನ್ನ ಮೇಲೆ ಬಿತ್ತೇ ಬಿತ್ತು ಎMದು ಕೊಂಡೆ.. ಎಷ್ಟೊಂದು ವಿಶಾಲ ಕೊಟ್ಟಿಗೆ! ಎಶ್ಟೊಂದು ಹಸುಗಳು! ಈಗಲೂ ಇಷ್ಟೆಲ್ಲ ಕೆಲಸ ಮಾಡುವವರು ಇರುವರೇ ಎಂದು ಅಚ್ಚರಿಯಾಯ್ತು .ವ್ಯಕ್ತಿಚಿತ್ರ ಹಾಗೂ ಪರಿಸರ ಚಿತ್ರ ಕಣ್ಮನ ತುಂಬಿತು..

  ReplyDelete
 3. Aathmeeya nenapugalu.. saadaneya parichaya.. odhi kushi aaytu..
  thank you.

  ReplyDelete
 4. ನಿಮ್ಮ ’ಅಣ್ಣನ ಸ್ಮೃತಿಗಾಗಿ ಉರುಳು ಸೇವ” ಓದುವಾಗ ಪುತ್ತುರು - ಮರಿಕೆ-ಸಂತ್ಯಾರಿಗೆ ನಿಮ್ಮೊಡನೆ ಪ್ರಯಾಣ ಮಾಡಿದ ಅನುಭವವಾಯಿತು. ಎ.ಪಿ.ತಿಮ್ಮಪ್ಪಯ್ಯನವರ ಭಾವ ಚಿತ್ರ ನೋಡಿದಾಗ ಹಲವು ವರುಷಗಳ ಕೆಳಗೆ ಸಂತ್ಯಾರಿಗೆ ಬಂದಾಗ ಅವರ ಜೊತೆ ಕಳೆದ ಸುಮಧುರ ನೆನೆಪು ಮರು ಕಳಿಸಿತು. ಧನ್ಯವಾದಗಳು.

  2015-16 Rotari Whitefield ಸಂಸ್ತೆಯ ಅದ್ಯಕ್ಷ ಪದ ಭಾರದ ನಿಮಿತ್ತವಾಗಿ ಸಮಯದ ಅಭಾವದಿಂದಾಗಿ, ನಿಮ್ಮ ಬ್ಲಾಗನ್ನು ನಿಯಮಿತವಾಗಿ ಓದಲು ಆಗುತ್ತಿಲ್ಲ. ಕ್ಷಮಿಸಿ.

  ReplyDelete
 5. ನೀನು ಸೈಕಲ್ನಲ್ಲಿ ಮರಿಕೆಗೆ ಬಂದುದು ನಿನ್ನ ಅಣ್ಣನಿಗೆ ಸಂತೋಷ ಕೊಡುತ್ತಿತ್ತು.ಅಣ್ಣನ ಪಟ್ಟದ ಅಳಿಯ ಅಂತ ಅಮ್ಮ ಹೇಳುವುದಿತ್ತು.!

  ReplyDelete
 6. ತುಂಬಾ ಆತ್ಮೀಯವಾದ ಸರಳ ನಿರೂಪಣೆ... ಇದನ್ನೋದಿದ ಅನೇಕರಿಗೆ ಅವರ ಅಜ್ಜನ ಮನೆಯೋ ದೊಡ್ಡಪ್ಪನ ಮನೆಯೋ ನೆನಪಿಗೆ ಬಂದರೆ ಅಚ್ಚರಿಯಿಲ್ಲ.

  ReplyDelete