12 January 2016

ಪ್ರೇಮ ಮತ್ತು ಕರ್ತವ್ಯಗಳ ಸಮತೋಲನ

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ
ಅಧ್ಯಾಯ ಹತ್ತು 

ತಾರುಣ್ಯದ ಪ್ರೇಮ ಬೆಳ್ಳಿಯ ಮೊಗ್ಗಿನಂತೆ. ಪ್ರಬುದ್ಧ ಪ್ರೇಮ ಚಿನ್ನದ ಹೂವಿನಂತೆ ಎನ್ನುತ್ತಾರೆ. ಪ್ರಪಂಚದಲ್ಲಿ ಪ್ರೇಮ ಇರುವುದರಿಂದಲೇ ಅದು ಚೈತನ್ಯಶೀಲವೂ ಸುಂದರವೂ ಆಗಿದೆ. ಪ್ರೇಮವಿಲ್ಲದ ಹೃದಯ ಮರುಭೂಮಿಗೆ ಸಮ. ಇದು ನಮ್ಮ ಜೊತೆಗಿರುವ ನೆರಳಿನಂತೆ. ಅದನ್ನು ಎಂತಹ ಸೂರ್ಯನೂ ಓಡಿಸಲಾರ. ಆದರೆ ಅದೇ ಪ್ರೇಮ ಅನೇಕ ದುಃಖಗಳಿಂದ ಕೂಡಿದ ಔಷಧಿಯಿಲ್ಲದ ರೋಗದಂತೆಯೂ ಕಾಣುತ್ತದೆ. ಪ್ರೇಮದ ಅನಂತ ಶಕ್ತಿ ಅನೇಕ ಕವಿಗಳಿಗೆ ಸ್ಫೂರ್ತಿ ನೀಡಿದೆ. ಯೌವನದಲ್ಲಿ ಪ್ರತಿಯೊಬ್ಬನೂ ಕವಿಯಾಗಿರುತ್ತಾನೆ ಎಂಬುದು ಪ್ರೇಮದ ಸಾಕ್ಷಾತ್ಕಾರದಿಂದಲೇ ಆಗಿದೆ. ಇಷ್ಟೆಲ್ಲಾ ಪೀಠಿಕೆಯ ವಿವರಣೆ ಯಾಕೆ ಎಂದು ಯೋಚಿಸುತ್ತೀರಾ? ಅದಕ್ಕೆ ಕಾರಣವಿದೆ.


ಬಿಕರ್ನಕಟ್ಟೆಯ ಯುವಕ ಸಂಘದ ನಾಟಕಗಳು ಅನೇಕ ಪ್ರೇಮಕತೆಗಳಿಗೆ ಸ್ಫೂರ್ತಿ ನೀಡಿದೆಯೆಂದು ನಾನು ಹೇಳಿದ್ದೆನಲ್ಲಾ. ಅಂತಹ ಒಂದು ಕಥನವಿದು. ಒಂದು ದಿನ ಗುರುಪುರಕ್ಕೆ ಹೋಗುವ ಮಿಸ್ಕಿತ್ ಬಸ್ಸಿನಲ್ಲಿ ಕೂತ ತರುಣಿಯೊಬ್ಬಳು ರಸ್ತೆಯ ತಿರುವಿನಲ್ಲಿ ಅಚಾನಕ್ಕಾಗಿ ಹತ್ತಿರ ಕೂತ ಯುವಕನ ಮೇಲೆ ಬಿದ್ದಳು. ಯುವಕನಿಗೆ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಷ್ಟು ಖುಷಿ. ಯಾಕೆಂದರೆ ಹಲವು ದಿವಸಗಳಿಂದ ಅವಳಲ್ಲಿ ಮಾತಾಡಬೇಕೆಂಬ ಉದ್ದೇಶಕ್ಕಾಗಿಯೇ ಆಕೆ ದಿನನಿತ್ಯ ಹೋಗುವ ಬಸ್ಸಿನಲ್ಲಿ ಅವಳನ್ನು ಹಿಂಬಾಲಿಸಿದ್ದ. ಅದು ಅವಳಿಗೂ ಗೊತ್ತಿತ್ತು. ಆಕೆ ಗುರುಪುರದ ಕಾನ್ವೆಂಟ್ ಶಾಲೆಯಲ್ಲಿ ಶಿಕ್ಷಕಿ. ಆತ ಕಾಲೇಜು ವಿದ್ಯಾರ್ಥಿ. ಅಚಾನಕ್ಕಾಗಿ ವಿಧಿಯೇ ಅವಳನ್ನು ಅವನ ಮಡಿಲಿಗೆ ಎಸೆದಂತಾಗಿ ಇಬ್ಬರೂ ಸುತ್ತಮುತ್ತಲಿದ್ದವರನ್ನು ಗಮನಿಸಿ ನಾಚಿಕೆ ಪಟ್ಟುಕೊಂಡರೂ ಕ್ಷಮಿಸಿ ಸಾರ್ ಎಂದು ಹೇಳುತ್ತಾ ಮಾತಾಡುವಂತಾಯಿತು. ಮುಂದೆ ಪರಸ್ಪರ ನೋಡಿ ಮಾತಾಡುವ ಆಸೆಯನ್ನು ಹೇಗೋ ಕದ್ದು ಮುಚ್ಚಿ ಪೂರೈಸತೊಡಗಿದರು. ಪ್ರೇಮಪತ್ರಗಳ ರವಾನೆಯಾಗತೊಡಗಿತು. ಇದು ಪ್ರಾರಂಭವಾದದ್ದು ಯುವಕ ಸಂಘ ಪ್ರತೀ ವರ್ಷ ಆಡಿ ತೋರಿಸುತ್ತಿದ್ದ ನಾಟಕಗಳಿಂದಾಗಿ. ಹೆಚ್ಚಿನ ಎಲ್ಲಾ ನಾಟಕಗಳಲ್ಲಿ ನಾಯಕ ಅವನೇ. ಈಕೆ ಅವನ ಅಭಿಮಾನಿಯಾಗಿ ಅವನ ಕಣ್ಣ ನೋಟಕ್ಕೆ ಒಂದು ಸುಂದರವಾದ ನಗುವಿಗೆ ಕಾತರದಿಂದ ಕಾಯುತ್ತಿದ್ದಳು. ಅವನೆದುರು ಕಾಣಿಸಿಕೊಳ್ಳಬೇಕು, ಅವನೊಂದಿಗೆ ಮಾತಾಡಬೇಕು ಎಂಬ ಆಸೆ ಬೆಟ್ಟದಷ್ಟಿದ್ದರೂ ಸಮಾಜದ ಭಯ ಅವಳನ್ನು ತಡೆಯುತ್ತಿತ್ತು. ಮಿಸ್ಕಿತ್ ಬಸ್ ಅದಕ್ಕೆ ಸುಂದರ ಅವಕಾಶ ಕಲ್ಪಿಸಿಕೊಟ್ಟಿತು. ಮುಂದೇನು? ಮದುವೆಯಾಗೋಣ ಎಂದು ಯುವಕನ ಒತ್ತಾಯ. ಆಕೆ ಕುಟುಂಬದ ಹಿರಿಮಗಳು. ಹೀಗೆ ವಿವಾಹವಾದರೆ ತನ್ನ ಹಿಂದೆ ಸಾಲಾಗಿ ಇರುವ ಐದು ಮಂದಿ ತಂಗಿಯಂದಿರ ವಿವಾಹಕ್ಕೆ ತೊಂದರೆಯಾದೀತೇನೋ ಎಂಬ ಭಯ ಕಾಡಿತು. ಅವನ ಮನೆಮಾತು ತುಳು. ಇವಳದ್ದು ಮಲೆಯಾಳ ಎಂಬುದು ಬಿಟ್ಟರೆ ಇಬ್ಬರೂ ಬಿಲ್ಲವ ಸಮುದಾಯದವರೇ. ಆದರೂ ಕಳೆದ ಶತಮಾನದ ೬೦ರ ದಶಕದಲ್ಲಿ ಸಂಪ್ರದಾಯವಾದಿಗಳು ಮದುವೆಯನ್ನು ಫಕ್ಕನೆ ಒಪ್ಪಿಕೊಳ್ಳುವ ಮನಸ್ಥಿತಿ ಇರಲಿಲ್ಲ. ಯುವಕನ ಪದವಿ ಮುಗಿದೊಡನೆ ಮುಂಬೈಗೆ ಹೋದ. ಅಲ್ಲಿ ಪ್ರಸಿದ್ಧ ಕಂಪೆನಿಯಲ್ಲಿ ಕೆಲಸವೂ ಸಿಕ್ಕಿತು. ಮರಾಠಿ, ತುಳು, ಕನ್ನಡ ನಾಟಕಗಳಲ್ಲಿ ಅಭಿನಯಿಸುವ ಹವ್ಯಾಸವನ್ನಿಟ್ಟುಕೊಂಡ ಅವನು ಮುಂಬೈಯಲ್ಲಿ ಪ್ರಸಿದ್ಧ ನಟನೆಂಬ ಕೀರ್ತಿಯನ್ನು ಗಳಿಸಿದ. ಅಲ್ಲಿನ ಮರಾಠಿ ರಂಗನಟಿಯೊಬ್ಬಳು ಅವನ ಬಾಳಸಂಗಾತಿಯಾದಳು. ಸುದ್ದಿ ಊರಿಗೆ ತಲುಪಿದಾಗ ತರುಣಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಯಿತು. ಜೀವನವೇ ಬೇಡ ಎಂಬ ಕ್ಷಣವಾಗಿತ್ತದು. ಆದರೂ ಧೈರ್ಯ ತಂದುಕೊಂಡು ಹೆಚ್ಚಿನ ಓದಿಗೆ ಮನಸ್ಸು ತೆತ್ತು ಅದರಲ್ಲೇ ತಲ್ಲೀನಳಾದಳು. ಸಂಗೀತ, ಸಂಸ್ಕೃತ, ಹಿಂದಿ, ಇತಿಹಾಸ ಎಂ.., ಕನ್ನಡ ಎಂ.. ಹೀಗೆ ಸದಾ ಕಲಿಕೆಯಲ್ಲಿ ತೊಡಗಿದಳು. ಶಾಲೆಯ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ತನ್ನನ್ನು ತೊಡಗಿಸಿಕೊಂಡಳು.


ಒಂದೆರಡು ವರ್ಷ ಕಳೆದಿರಬಹುದು. ಆರೋಗ್ಯವಂತರಾಗಿದ್ದ ಅವಳ ತಂದೆ ಹೃದಯಾಘಾತದಿಂದ ನಿಧನ ಹೊಂದಿದರು. ಕುಟುಂಬದ ಆಧಾರಸ್ತಂಭ ಕುಸಿಯಿತು. ಇದು ಇನ್ನೂ ದೊಡ್ಡ ಆಘಾತವಾಯಿತು ಅವಳ ಪಾಲಿಗೆ. ದುಡಿವ ಕೈ ಇವಳದ್ದು ಮಾತ್ರ. ಮೂರು ಗಂಡು ಐದು ಮಂದಿ ಹೆಣ್ಣುಮಕ್ಕಳು ಇವಳ ಬೆನ್ನಿಗಿದ್ದರು. ಒಬ್ಬ ತಂಗಿಗೆ ಮಾತ್ರ ಮದುವೆಯಾಗಿತ್ತು. ಉಳಿದವರು ಇನ್ನೂ ಪ್ರಾಥಮಿಕ, ಪ್ರೌಢಶಾಲೆಯ ಹಂತದಲ್ಲಿರುವವರು. ಬೇರೆ ಯಾರೂ ಕುಟುಂಬಕ್ಕೆ ಆಧಾರವಿರಲಿಲ್ಲ. ಬೀಡಿ ಉದ್ಯಮವೊಂದೇ ಸ್ವಲ್ಪ ಮಟ್ಟಿನ ಆಸರೆ ನೀಡಿದರೂ ಅದು ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆಯೇ ಸರಿ. ಹಿರಿಮಗಳಾಗಿ ಅವರನ್ನು ಒಂದು ನೆಲೆಗೆ ಮುಟ್ಟಿಸುವ ಹೊಣೆ ಆಕೆಯ ಹೆಗಲಿಗೇರಿತು. ಹಿರಿಮಗನಾಗಬೇಡ, ಹಿತ್ತಿಲ ಬಾಗಿಲಾಗಬೇಡ ಎಂಬ ಗಾದೆಯೇ ಇದೆಯಲ್ಲಾ. ಅಂದಿನಿಂದ ಅವಳೇ ರಾಣಿ. ಅವಳೇ ಮಂತ್ರಿ, ಅವಳೇ ದಂಡಾಧಿಪತಿ ಮನೆಗೆ. ಅವಳ ಅಮ್ಮ ಮಕ್ಕಳ ಯೋಗಕ್ಷೇಮವನ್ನೆಲ್ಲಾ ಹಿರಿಮಗಳ ವಶಕ್ಕೆ ಒಪ್ಪಿಸಿಬಿಟ್ಟರು. ಅಪ್ಪ ನಿಧನ ಹೊಂದಿ ಒಂದು ತಿಂಗಳಾಗಿರಬಹುದು. ಮುಂಬಯಿಯಿಂದ ಪ್ರಿಯತಮನಿಂದ ಒಂದು ಕಂಡೋಲೆನ್ಸ್ ಲೆಟರ್ ಬಂತು. ಇದು ಆಕೆಗೆ ಅನಿರೀಕ್ಷಿತ. ಅದನ್ನು ಬೆಂಕಿಗೆ ಹಾಕಲೇ, ಉತ್ತರ ನೀಡಲೇ ಎಂಬ ತಾಕಲಾಟದಲ್ಲಿ ಕೆಲವು ದಿನ ಅವಳ ಮನಸ್ಸು ಕುದಿವ ಕೊಪ್ಪರಿಗೆಯಾಯಿತು. ಕೊನೆಗೂ ಒಂದು ನಿರ್ಧಾರಕ್ಕೆ ಬಂದು ತನ್ನನ್ನು ಸ್ಮರಿಸಿದ್ದಕ್ಕೆ ಕೃತಜ್ಞತಾ ಪತ್ರ ಬರೆದಳು. ಸ್ವಲ್ಪ ಕಾಲ ಬೆಂಗಾಡಾಗಿದ್ದ ಮನಸ್ಸು ತಂಪಾಯಿತು. ಪ್ರೇಮದ ಕಾಮನಬಿಲ್ಲು ಮತ್ತೆ ಅರಳಿತು. ಹೊಸ ಕನಸುಗಳು ಅಂಕುರಿಸತೊಡಗಿದವು. ಪ್ರೇಮವು ಚಂದ್ರನಂತೆ ಎಂಬ ಗಾದೆಮಾತು ಅದಕ್ಕೇ ಸೃಷ್ಟಿಯಾಗಿರಬೇಕು. ಪ್ರೇಮವು ಹೆಚ್ಚಾಗದಿದ್ದಲ್ಲಿ ಕಡಿಮೆಯಾಗುತ್ತದೆ. ಕಡಿಮೆಯಾದರೆ ಮತ್ತೆ ಹೆಚ್ಚಾಗುತ್ತದೆ.

ಆಕೆ ಖಾಸಗಿಯಾಗಿ ಪದವಿ ಪರೀಕ್ಷೆ ಬರೆಯಲು ಧಾರವಾಡಕ್ಕೆ ಹೋದವಳು ಅಲ್ಲಿಂದ ಮುಂಬೈಗೆ ಹೋಗಿ ಅವನನ್ನು ಭೇಟಿಯಾದಳು. ಮುಂದೆ ವರ್ಷದಲ್ಲೊಂದೆರಡು ದಿನ ಅವರು ಯಾವುದಾದರೂ ಸ್ಥಳದಲ್ಲಿ ಭೇಟಿಯಾಗಿ ಪ್ರೇಮವನ್ನು ನವೀಕರಣಗೊಳಿಸುತ್ತಿದ್ದರು. ಪ್ರೇಮವನ್ನು ಕೆಮ್ಮನ್ನು ಮುಚ್ಚಿಡುವುದು ಕಷ್ಟವಲ್ಲವೇ? ಆದರೂ ತನ್ನ ಮನೆಯವರಿಗೆ ಸುದ್ದಿಯನ್ನು ರಹಸ್ಯವಾಗಿಟ್ಟಳು. ನಾಲ್ವರು ತಂಗಿಯಂದಿರಿಗೆ ತಾನೇ ಮುಂದೆ ನಿಂತು ಮದುವೆ ಮಾಡಿಕೊಟ್ಟಳು. ತಮ್ಮಂದಿರಿಗೆ ಅವರು ಕಲಿಯುವಷ್ಟು ಶಿಕ್ಷಣ ಕೊಡಿಸಿದಳು. ಅವರನ್ನೆಲ್ಲಾ ಒಂದು ಉತ್ತಮ ಭವಿಷ್ಯದತ್ತ ಕೊಂಡೊಯ್ಯುವ ಕನಸಿತ್ತು ಆಕೆಗೆ. ಆದರೆ ಇವಳ ಡಿಕ್ಟೇಟರ್ಶಿಪ್ ಬೆದರಿಕೆಗೆ ಸೊಪ್ಪು ಹಾಕದೆ ಅವರು ಬಂಡಾಯವೇಳುತ್ತಿದ್ದುದು ಅವಳನ್ನು ರೊಚ್ಚಿಗೆಬ್ಬಿಸುತ್ತಿತ್ತು. ತಾನು ಹಾಕಿದ ಗೆರೆ ದಾಟಬಾರದು ಎಂದು ಆಕೆ ವಿಧಿಸಿದರೆ ನಿನ್ನ ಗೆರೆ ನಿನಗೇ ಇರಲಿ ನಾವು ಸಾಗುವ ದಾರಿಗೆ ಗೆರೆ ಎಳೆಯಬೇಡವೆಂದು ನಡೆದೇ ತೋರಿಸಿದರು. ಇಂತಹ ಮಾನಸಿಕ ಅಶಾಂತಿಯ ಸಮಯದಲ್ಲೇ ಆಕೆ ನಮ್ಮಲ್ಲಿಗೆ ಸಂಗೀತ ಕಲಿಯಲು ಬರುತ್ತಿದ್ದಳು. ಬೆಳಿಗ್ಗೆ ಐದು ಗಂಟೆಗೆ ನಮ್ಮ ಮನೆಗೆ ಬಂದು ಒಟ್ಟಿಗೇ ಸಂಗೀತ ಆಲಾಪನೆ ಮಾಡುತ್ತಿದ್ದೆವು. ನನ್ನ ಅಪ್ಪನ ಬಗ್ಗೆ ಬಹಳ ಗೌರವಾಭಿಮಾನವಿದ್ದುದರಿಂದ ಸಾಹಿತ್ಯಕ್ಕೆ ಸಂಬಂಧಿಸಿದ ಚರ್ಚೆ ನಡೆಯುತ್ತಿತ್ತು. ಮುಂದೆ ಬಿ.ಎಡ್.,  ಹಿಸ್ಟರಿ ಎಂ.. ಮುಗಿಸಿದವಳೇ ಕನ್ನಡ ಎಂ.. ಮಾಡತೊಡಗಿದಳು. ಹೀಗೆ ಓದಿನಲ್ಲಿ ಮನಸ್ಸನ್ನು ಕೇಂದ್ರೀಕರಿಸಿದರೆ ಕೌಟುಂಬಿಕ ವ್ಯಥೆಗಳನ್ನು ಮರೆಯಬಹುದೇನೋ ಎಂದು ಭಾವಿಸಿರಬೇಕು. ಗದುಗು ಭಾರತವನ್ನು ನಾವಿಬ್ಬರೂ ಪಾರಾಯಣ ಮಾಡಿ ಅಪ್ಪ ಅರ್ಥ ಹೇಳುತ್ತಿದ್ದುದೂ ಅದೇ ಸಮಯದಲ್ಲಿ. ಮನೆಯಲ್ಲಿ ಒಂದಿಷ್ಟು ಇರಿಸು ಮುರಿಸು ಉಂಟಾದೊಡನೆ ಒಂದೋ ನಮ್ಮ ಮನೆಗೆ ಇಲ್ಲವೇ ಲಕ್ಷ್ಮೀ ಟೀಚರ ಮನೆಗೆ ಹೋಗಿ ಕ್ಲೇಷಗಳನ್ನು ಮರೆಯಲು ಪ್ರಯತ್ನಿಸುತ್ತಿದ್ದಳು.

ಹೀಗಿರುವಲ್ಲಿ ಒಂದು ದಿನ ನನ್ನನ್ನು ಕದ್ರಿ ಪಾರ್ಕ್ಗೆ ಹೋಗೋಣ ಎಂದು ಒತ್ತಾಯದಿಂದ ಕರೆದುಕೊಂಡು ಹೋದಳು. ಜೋಗಿ ಮಠಕ್ಕೆ ಹೋಗುವ ದಾರಿಯ ಪಕ್ಕದ ಬಂಡೆಯ ಮೇಲೆ ಕೂತೆವು. ``ನಿನ್ನನ್ನು ಇಲ್ಲಿಗೆ ಕರೆತರುವುದಕ್ಕೆ ಮುಖ್ಯ ಕಾರಣವಿದೆ. ನಾನು ನನ್ನ ಪ್ರೇಮಿಯನ್ನು ಮದುವೆಯಾಗುವವಳಿದ್ದೇನೆ. ನಿನ್ನ ಸಹಾಯ ಬೇಕು'' ಎಂದಾಗ ನಾನು ತಬ್ಬಿಬ್ಬು. ಎಂತಹ ಸಹಾಯವನ್ನು ನನ್ನಿಂದ ನಿರೀಕ್ಷೆ ಮಾಡಿದ್ದಳೆಂದು ತಿಳಿಯದೆ ಒಂದು ಕ್ಷಣ ಮೂಕವಿಸ್ಮಿತಳಾದೆ. ``ಮನೆಯಲ್ಲಿ ನಿಮ್ಮ ಅಮ್ಮನಲ್ಲಿ ಹೇಳಿದ್ದೀರಾ?''
``ಅವರಿಗೆ ಗೊತ್ತಾಗಬಾರದು ಎಂಬ ಕಾರಣಕ್ಕಾಗಿಯೇ ನಿನ್ನನ್ನು ಇಲ್ಲಿಗೆ ಕರೆದುಕೊಂಡು ಬಂದದ್ದು''
``ನಿಮ್ಮ ಮನೆಯವರಿಗೆ ಹೇಳಿದರೆ ಅವರೇನೂ ತಡೆಯಲಾರರು ಅಲ್ವಾ? ಮದುವೆಯಾಗುವ ಧೈರ್ಯ ವಹಿಸಿದವರಿಗೆ ಹೇಳುವ ಧೈರ್ಯವಿರಲೇಬೇಕಲ್ಲ?'' ನಾನು ನಿಧಾನವಾಗಿ ಹೇಳಿದೆ.
``ನಿನಗೆ ನನ್ನ ಮದುವೆಗೆ ಬರಲು ಇಷ್ಟವಿದ್ದರೆ ಬಾ. ಇಲ್ಲದಿದ್ದರೆ ಬೇಡ. ಲಕ್ಷ್ಮೀ ಟೀಚರು ಮತ್ತು ನಿನ್ನನ್ನು ಮಾತ್ರ ಕರೆದುಕೊಂಡು ಹೋಗುವ ಯೋಚನೆ ಮಾಡಿದ್ದೇನೆ. ನಿನಗೆ ನನ್ನ ಒತ್ತಾಯವಿಲ್ಲ'' ಕಡ್ಡಿ ಮುರಿದಂತೆ ಹೇಳಿದಳು.
``ನೀವು ಮದುವೆಯಾಗುವುದು ಅವನ ಮೊದಲ ಪತ್ನಿಗೆ ಗೊತ್ತಿದೆಯೇ?''
``ಹೌದು, ಅವಳೂ ಊರಿಗೆ ಬಂದಿದ್ದಾಳೆ. ಅವಳಿಗೆ ಗೊತ್ತಿದ್ದೇ ಯೋಚನೆ ಮಾಡಿದ್ದೇವೆ.''
``ನಾನು ನನ್ನ ಅಪ್ಪನಲ್ಲಿ ಹೇಳಬೇಕಾ?''
``ಹೇಳು, ನನ್ನ ಅವನ ಸಂಬಂಧ ಲೋಕಕ್ಕೆಲ್ಲಾ ಗೊತ್ತು. ಈಗ ಅಧಿಕೃತವಾಗಿ ಅದಕ್ಕೆ ಒಂದು ಮುದ್ರೆ ಹಾಕಿಸಿಕೊಳ್ಳುವ ಕೆಲಸ ಮಾತ್ರ ಮಾಡುತ್ತಿದ್ದೇನೆ. ನಾನು ಬಹಳಷ್ಟು ಯೋಚನೆ ಮಾಡಿ ನನ್ನ ಪರಿಚಯದ ಪ್ರಾಜ್ಞರಲ್ಲಿ ಚರ್ಚೆ ಮಾಡಿ ನಿರ್ಧಾರಕ್ಕೆ ಬಂದಿದ್ದೇನೆ.''
``ಮನೆಯವರನ್ನು ಇದರಿಂದ ಹೊರಗಿಡುವುದು ಸರಿಯಲ್ಲವೆಂದೇ ನನ್ನ ಭಾವನೆ'' ಎಂದದ್ದೇ ತಡ ಕಣ್ಣು ಕೆಂಪಾಯಿತು. ಸ್ವರ ಏರಿತು.
``ನೋಡು, ವಿಷಯದಲ್ಲಿ ನಿನ್ನ ಉಪದೇಶ ಬೇಡ. ಆಗಲೇ ಹೇಳಿದೆನಲ್ಲಾ. ನೀನು ಬಾರದಿದ್ದರೂ ನನ್ನ ಮದುವೆ ನಡೆಯುತ್ತದೆ. ನನ್ನ ಅತ್ಯಂತ ಆಪ್ತರಲ್ಲಿ ನೀವಿಬ್ಬರು. ನನ್ನನ್ನು ಚೆನ್ನಾಗಿ ಅರಿತವರು ನೀವು. ಆದುದರಿಂದ ನಿನ್ನಲ್ಲಿ ಹೇಳಿದೆ. ಏಳು ನಡಿ ಹೋಗೋಣ'' ಎಂದು ಎಬ್ಬಿಸಿ ಹೊರಟರು. ಅಲ್ಲಿಂದ ಮನೆ ಸೇರುವವರೆಗೂ ಒಂದೇ ಒಂದು ಮಾತಿಲ್ಲ. ಮನೆ ಹತ್ತಿರ ಬಂದಾಗ ``ಲಕ್ಷ್ಮೀ ಟೀಚರಿಗೆ ಹೇಳಿದ್ದೀರಾ? ನಾನು ನಿಮ್ಮ ಮದುವೆಗೆ ಬರುತ್ತೇನೆ'' ಎಂದು ದಾಪುಗಾಲು ಹಾಕಿ ನನ್ನ ಮನೆಗೆ ಸಾಗಿದೆ.

ಉಪ್ಪಿನಂಗಡಿಯ ದೇವಸ್ಥಾನದಲ್ಲಿ ಮದುವೆ. ನಾನು ಲಕ್ಷ್ಮೀಟೀಚರು, ಎಂ.ಪಿ. ಸಂಜೀವಣ್ಣ (ವರನ ತಂಗಿಯ ಗಂಡ), ವಧು, ವರ ಇಷ್ಟು ಮಂದಿ ಕಾರಲ್ಲಿ ಹೋದೆವು. ದೇವಸ್ಥಾನಕ್ಕೆ ಹತ್ತಿರವಾಗುವಾಗ ಲಕ್ಷ್ಮೀ ಟೀಚರುನಾನು ದೇವಸ್ಥಾನದೊಳಗೆ ಬರಲಿಕ್ಕಾಗದು. ನೀವು ಹೋಗಿ” ಎಂದುಬಿಟ್ಟರು. ಸರಿ, ಇನ್ನೇನು ಮಾಡುವುದು? ಮದುವೆಗೆ ಪ್ರತ್ಯಕ್ಷ ಸಾಕ್ಷಿಯಾಗಿ ನಾನು ಮತ್ತು ಸಂಜೀವಣ್ಣ ಇಬ್ಬರೇ. ಸಣ್ಣ ಪೂಜೆ ಮಾಡಿ ಭಟ್ಟರು ವಧೂ ವರರನ್ನು ಹಾರ ಬದಲಾಯಿಸುವಂತೆ ಹೇಳಿದರು. ವರನು ವಧುವಿನ ಕೊರಳಿಗೆ ತಾಳಿಯನ್ನು ಕಟ್ಟಿದ. ಅಲ್ಲಿ ಊಟ ಮುಗಿಸಿ ವರನು ಬಿಕರ್ನಕಟ್ಟೆ ಕಂಡೆಟ್ಟಿನಲ್ಲಿರುವ ಅವನ ಮನೆಗೆ ಹೋದ. ವಧು ಅವಳ ಮನೆಗೆ, ನಾವು ನಮ್ಮ ನಮ್ಮ ಮನೆಗೆ ಸೇರಿದೆವು. ಮದುವೆಯೇನೋ ಸುಖಾಂತವಾಯಿತು.

ಮುಂದೆ ವರನು ಮುಂಬೈಯಿಂದ ಊರಿಗೆ ಬಂದಾಗಲೆಲ್ಲಾ ಎಲ್ಲಾದರೂ ಹೋಟೇಲಲ್ಲಿ ದಂಪತಿಗಳು ಒಟ್ಟು ಸೇರುತ್ತಿದ್ದರು. ಆಕೆ ಕುತ್ತಿಗೆಗೆ ಕಟ್ಟಿದ ತಾಳಿ ಯಾರ ಕಣ್ಣಿಗೂ ಬೀಳದಂತೆ ಜಾಗ್ರತೆ ವಹಿಸಿದರೂ ವಿಷಯವೂ ಗುಸು ಗುಸು ಪ್ರಚಾರವಾಯಿತು. ಆಕೆಯ ಕೌಟುಂಬಿಕ ಮಿತ್ರರಾದ ಮುಂಡಪ್ಪ ಮಾಸ್ತರು ಪ್ರಕರಣದಿಂದ ತುಂಬಾ ನೊಂದುಕೊಂಡರು. ಹೇಗಾದರೂ ಸರ್ವರ ಸಮ್ಮತಿಯಿದ್ದೇ ಇದನ್ನು ಬಗೆಹರಿಸಬೇಕೆಂದು ಮರುವರ್ಷ ವರನು ಊರಿಗೆ ಬಂದಾಗ ಅವನಲ್ಲಿ ಮಾತಾಡಿ ಒಂದು ದಿನ ನಿಗದಿಗೊಳಿಸಿದರು. ಅಂದು ಶರವು ಗಣಪತಿ ದೇವಸ್ಥಾನದಲ್ಲಿ ಮತ್ತೊಮ್ಮೆ ಹಾರ ಬದಲಾಯಿಸಿ ಅವರು ಸತಿಪತಿಗಳಾದರು. ವರನ ಮನೆಗೆ ವಧು ಹೋಗುವಂತೆ ಎರಡೂ ಕುಟುಂಬದವರ ಮನವೊಲಿಸಿದರು. ಅಂದಿನಿಂದ ಅವನು ಊರಿಗೆ ಬಂದರೆ ಇವಳ ಮನೆಗೂ ಇವಳು ಅವನ ಮನೆಗೂ ಹೋಗುವುದು ಬರುವುದು ಪ್ರಾರಂಭವಾಯಿತು. ಪ್ರಯತ್ನದಲ್ಲಿ ಜಯಶಾಲಿಯಾದ ಮುಂಡಪ್ಪ ಮಾಸ್ಟ್ರನ್ನು ಎಷ್ಟು ಕೊಂಡಾಡಿದರೂ ಸಾಲದು. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ ಕತೆ ಆಕೆಯದು. ನನಗೆ ತಿಳಿದಂತೆ ಅವಳ ಮತ್ತು ಅವನ ಮದುವೆಯ ಸಂಬಂಧ ಒಂದು `ಓಪನ್ ಸೀಕ್ರೆಟ್'. ಮನೆಯವರಿಗೂ ಗೊತ್ತಿತ್ತು. ಅವಳ ತಾಯಿ ಎಲ್ಲ ವಿಷಯ ತಿಳಿದೂ ತಾಳ್ಮೆಯಿಂದಿದ್ದರು. ಅವಳ ಮುಂದೆ ಸ್ವರವೆತ್ತುವ ಧೈರ್ಯವಿರಲಿಲ್ಲ. ಆಕೆ ಮಾತ್ರ ಯಾರಿಗೂ ಗೊತ್ತಿಲ್ಲವೆಂಬ ಭ್ರಮೆಯಲ್ಲಿ ಇದ್ದಳು. ಪ್ರೇಮ ಕಥಾನಕ ಯಾರದೆಂದು ಗೊತ್ತಾಯಿತೇ? ತುಳು ಚಲನಚಿತ್ರದ ಕೋಟಿ ಚೆನ್ನಯದಲ್ಲಿ ಚೆನ್ನಯನ ಪಾತ್ರ ಮಾಡಿದ ವಾಮನ್ರಾಜ್ ಎಂಬ ನಟ ಕಥೆಯ ನಾಯಕ ಮತ್ತು ತುಳು ಕನ್ನಡ ಕವಿಯಿತ್ರಿಯಾಗಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯೆಯಾಗಿ, ಸಾಂಸ್ಕೃತಿಕ ಚಟುವಟಿಕೆಗಳ ನಿಧಿಯಾಗಿ, ನಾಟಕ, ಸಂಗೀತ ಮುಂತಾದ ಕಲೆಗಳಲ್ಲಿ ನುರಿತ ಕಲಾವಿದೆಯಾಗಿ ಪ್ರಸಿದ್ಧಿ ಪಡೆದ ಕೆ. ಲೀಲಾವತಿ ಕಥೆಯ ನಾಯಕಿ.


ಲೋಕದಲ್ಲಿ ಪ್ರತಿಯೊಬ್ಬನನ್ನು ಕೈ ಹಿಡಿದು ಆಚೆ ದಡಕ್ಕೆ ಮುಟ್ಟಿಸುವವರು ಯಾರೂ ಇರುವುದಿಲ್ಲ. ತಾನೇ ಪ್ರಯತ್ನ ಪಟ್ಟು ಹೇಗಾದರೂ ದಡ ಸೇರುತ್ತಾನಲ್ಲವೇ? ಹಾಗೆಯೇ ಲೀಲಕ್ಕನದು ಹೋರಾಟದ ಬದುಕು. ಮನೆಯಲ್ಲಿ ಮಾತ್ರವಲ್ಲ ಅವರ ವೃತ್ತಿ ಬದುಕಿನಲ್ಲೂ ಸಹೋದ್ಯೋಗಿಗಳೊಂದಿಗೆ ಅವರ ಸಂಬಂಧ ವಿಶಿಷ್ಟವಾಗಿತ್ತು. ಶಾಲೆ ಅವರಿಗೆ ಮನೆಯ ವಿಸ್ತರಣೆಯಾದಂತೆ ಅನಿಸುತ್ತಿತ್ತು. ಕೆಲವು ಸಹೋದ್ಯೋಗಿಗಳಿಗಂತೂ ನಮ್ಮನ್ನು ತಿದ್ದಲಿಕ್ಕಾಗಿಯೇ ಬೆಥನಿ ಸಂಸ್ಥೆ ನೇಮಿಸಿದ ದಂಡಾಧಿಕಾರಿಗಳೇನೋ ಎಂಬಂತೆ ಭಾಸವಾಗುತ್ತಿತ್ತು. ಎಲ್ಲರಲ್ಲೂ ಅತೃಪ್ತಿ, ಎಲ್ಲರಲ್ಲೂ ಸಂಶಯ. ಅವರ ಮೂಡ್ ಯಾವಾಗ ಸರಿ ಇರುತ್ತಿತ್ತೆಂದು ಹೇಳಲಾಗದು. ಕ್ಷಣಚಿತ್ತ ಕ್ಷಣಪಿತ್ತ ಎಂಬಂತಹ ಸ್ವಭಾವದಿಂದಾಗಿ ಸಹೋದ್ಯೋಗಿಗಳು ಒಂದು ಅಂತರವಿಟ್ಟುಕೊಂಡೇ ಅವರಲ್ಲಿ ವರ್ತಿಸುತ್ತಿದ್ದರು. ಶಾಲೆಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಾತ್ರ ಅವರದು ಎವರ್ಗ್ರೀನ್ ಪ್ರತಿಭೆ. ಕುಲಶೇಖರದ ಸೇಕ್ರೆಡ್ ಹಾರ್ಟ್ ಬಾಲಿಕಾ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿ ಆಕೆ ನೇಮಕವಾಗಿದ್ದರೂ ಕನ್ನಡ, ಚರಿತ್ರೆ ಮುಂತಾದ ಪಾಠಗಳಲ್ಲೂ ಪರಿಣತಿ ಹೊಂದಿದವರು. ನಾನೂ ಅದೇ ಶಾಲೆಯಲ್ಲಿ ಅವರ ಸಹೋದ್ಯೋಗಿಯಾಗಿ ಕೆಲಸ ಮಾಡಿದ ಅನುಭವವಿದೆ. ಮನಸ್ಸು ನಿರಾಳವಾಗಿದ್ದ ದಿನ ಸಹೋದ್ಯೋಗಿಗಳೊಂದಿಗೆ, ಮಕ್ಕಳೊಂದಿಗೆ, ಎಲ್ಲರೊಂದಿಗೂ ಫುಲ್ ಖುಶಿ ಖುಶಿಯಾಗಿ ನಗುತ್ತಾ ಜೋಕ್ ಹೇಳುತ್ತಾ ವರ್ತಿಸುವುದನ್ನು ಕಂಡಾಗ ನಿನ್ನೆ ಕಂಡ ಲೀಲಾವತಿ ಇವರೇನಾ ಎಂದು ಯಾರಾದರೂ ಬೆರಗಾಗಬೇಕು, ಹಾಗಿರುತ್ತಿದ್ದರು. ಮೂಡ್ ಸರಿ ಇಲ್ಲದಂದು ಸ್ಟಾಫ್ರೂಮಿನಲ್ಲಿ `ಗ್ಯಾಸ್ ಚೇಂಬರಿ'ನೊಳಗಿದ್ದಂತಹ ಅನುಭವವುಂಟಾಗುತ್ತಿತ್ತು. ಒಂದು ವರ್ಷ ನಮ್ಮ ಶಿಕ್ಷಕವೃಂದದವರು ಶಿಕ್ಷಕರ ದಿನಾಚರಣೆಯಂದು ಮೋತಿಮಹಲಿನಲ್ಲಿ ಒಂದು ಕಾರ್ಯಕ್ರಮ ನೀಡಬೇಕಿತ್ತು. ನಿರ್ದೇಶನ ಇವರದ್ದೇ. ನಾಲ್ಕೇ ದಿನದಲ್ಲಿ ದಿಡೀರ್ ನಾಟಕ, ನೃತ್ಯ, ಹಾಡು ಎಲ್ಲಾ ಇವರದ್ದೇ ತರಬೇತಿ. ಅದರ ತರಬೇತಿಯ ದಿನಗಳಲ್ಲಿ ಅವರ ಸಹಕಾರ, ಪ್ರೀತಿಯನ್ನು ಕಂಡು ನಾವೆಲ್ಲಾ ಲೀಲಾವತಿ ಪ್ರತಿದಿನ ಹೀಗೆಯೇ ಇರಬಾರದೇ ಎಂದು ಮನಸ್ಸಿನಲ್ಲಿ ಪ್ರಾರ್ಥಿಸಿಕೊಂಡದ್ದೂ ಉಂಟು. ನಿಜವಾಗಿ ನೋಡಿದರೆ ಅವರ ಪ್ರತಿಭೆ ದೈವದತ್ತ. ಅದು ಪೂರ್ಣ ಪ್ರಕಟಗೊಳಿಸಲೇ ಇಲ್ಲ. ಪ್ರತಿಭೆ ಬುದ್ಧಿಯ ಕಣ್ಣಲ್ಲ. ಹೃದಯದ ಕಣ್ಣಾಗಬೇಕು. ಇವರ ಪ್ರತಿಭೆ ಬುದ್ಧಿಯ ಕಣ್ಣಾಗಿ ಸೊರಗಿತೇ ಎಂಬ ಸಂಶಯ ನನಗೆ. ಅವರಿರುವಷ್ಟು ಕಾಲವೂ ಅಂತರ್ಶಾಲಾ ನಾಟಕದಲ್ಲಿ ನಮ್ಮ ಶಾಲಾ ಮಕ್ಕಳಿಗೇ ಪ್ರಥಮ ಬಹುಮಾನ. ವಾರ್ಷಿಕೋತ್ಸವದಲ್ಲಿ ಅವರ ನಿರ್ದೇಶನದ್ದೇ ನಾಟಕಗಳು ಖಾಯಂ ಇರುತ್ತಿದ್ದವು. ಸಂಗೀತ ಮತ್ತು ಸಾಹಿತ್ಯದ ಆಸಕ್ತಿಗಳು ನಮ್ಮಿಬ್ಬರನ್ನು ೩೦ ವರ್ಷಗಳ ಕಾಲ ಬೆಸೆದಿತ್ತು. ಅವರೊಂದಿಗೆ ನಾನು ನೋಡಿದ ಪ್ರಸಿದ್ಧ ನಾಟಕಗಳು, ಸಂಗೀತ ಕಚೇರಿಗಳು, ಯಕ್ಷಗಾನ, ತಾಳಮದ್ದಳೆಗಳು ನನ್ನನ್ನು ಬೌದ್ಧಿಕವಾಗಿ ಭಾವನಾತ್ಮಕವಾಗಿ ವಿಕಾಸಗೊಳ್ಳುವಂತೆ ಮಾಡಿದ್ದನ್ನು ಮರೆಯಲಾರೆ. ಒಂದು ದಿನ ನಗರದ ಟೌನ್ಹಾಲಿನಲ್ಲಿ ಬಿಸ್ಮಿಲ್ಲಾಖಾನ್ ಅವರ ಶಹನಾಯ್ ವಾದನದ ಕಚೇರಿ ಕೇಳಿ ನಾವಿಬ್ಬರೇ ೧೧ ಗಂಟೆಯ ಹೊತ್ತಿಗೆ ನಡೆದುಕೊಂಡೇ ಮನೆ ತಲುಪಿದ್ದನ್ನು ನೆನಪಿಸಿಕೊಂಡರೆ ಆಶ್ಚರ್ಯವಾಗುತ್ತದೆ. ಯಾವ ಧೈರ್ಯ ನಮ್ಮ ಹೆಜ್ಜೆಗಳಲ್ಲಿ ತುಂಬಿತ್ತು? ಯಥಾರ್ಥವಾಗಿ ಲೀಲಾವತಿಯದು ಪುಕ್ಕಲು ಸ್ವಭಾವ. ಸಣ್ಣ ಸದ್ದಿಗೂ ಭಯಪಡುವವರು. ಆದರೆ ಭಂಡ ಧೈರ್ಯ ಅನ್ನುತ್ತಾರಲ್ಲಾ ಅದು ಧಾರಾಳವಾಗಿತ್ತು. ಅವರಿಗೆ ಹೋಲಿಸಿದರೆ ಕತ್ತಲೆಯಲ್ಲಿ ನಿರ್ಭಯವಾಗಿ ಸಂಚರಿಸುವ ಧೈರ್ಯ ನನ್ನಲ್ಲಿ ಹೆಚ್ಚಿತ್ತು. ಎರಡೂ ಧೈರ್ಯಗಳು ಒಟ್ಟು ಸೇರಿದ್ದರಿಂದ ನಿರ್ಜನವಾದ ರಸ್ತೆಗಳಲ್ಲಿ ರಾತ್ರಿ ೧೧ ಗಂಟೆಯ ಬಳಿಕ ನಾಲ್ಕು ಕಿ.ಮೀ. ನಡೆದುಕೊಂಡು ಕ್ಷೇಮವಾಗಿ ಮನೆಗೆ ತಲುಪಿದ್ದೆವು. ಈಗ ಹಾಗೆ ರಾತ್ರಿ ಮನೆ ತಲುಪಿದರೆ ಪವಾಡ ಎನ್ನಬೇಕೇನೊ? ಲೀಲಾವತಿಯದು ದುಂಡು ಮುಖ, ದಷ್ಪಪುಷ್ಟವಾದ ದಪ್ಪಶರೀರ. ಆಕರ್ಷಕ ವ್ಯಕ್ತಿತ್ವ. ತನ್ನ ಜೊತೆಯಲ್ಲಿದ್ದವರು ತನ್ನ ಹಿಂದೆ ಇರುವವರೆಗೆ ಕ್ಷೇಮ. ಎಲ್ಲಾದರೂ ಆಕೆಯನ್ನು ಓವರ್ಟೇಕ್ ಮಾಡಿ ಮುಂದೆ ಹೋದಿರೋ ಅವರಿಂದ ಬಚಾವಾಗುವುದು ಕಷ್ಟ. ಅಂತಹ ಪರಿಸ್ಥಿತಿ ನಿರ್ಮಾಣ ಮಾಡಿಬಿಡುತ್ತಾರೆ.

ಮನೆಯಲ್ಲಿ ಅವರೊಬ್ಬರೇ ನಿಜವಾದ ಗಂಡಸು. ಇಂದಿರಾಗಾಂಧಿಯನ್ನು ಪಾರ್ಲಿಮೆಂಟಿನ ಏಕೈಕ ಗಂಡಸು ಎನ್ನುತ್ತಿರಲಿಲ್ಲವೇ ಹಾಗೆ. ತಂಗಿಯಂದಿರಿಗೆ, ತಮ್ಮಂದಿರಿಗೆ ಮದುವೆ ಮಾಡಿ ಒಂದು ನೆಲೆಗೆ ಮುಟ್ಟಿಸಿದ ಅವರ ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಅವರ ತಾಯಿ ಬದುಕಿರುವವರೆಗೆ ಅವರನ್ನು ಪ್ರೀತಿಸುವ ಆರೈಕೆ ಮಾಡುವ ಜೀವವೊಂದಿತ್ತು. ತಾಯಿ ತೀರಿದ ಮೇಲೆ ಲೀಲಾವತಿಯ ಬದುಕಿನಲ್ಲಿ ಉತ್ಪಾತಗಳೇಳತೊಡಗಿದವು. ಸಾಂತ್ವನ ಹೇಳುವವರೆಂದರೆ ನೆರೆಮನೆಯ ಲಕ್ಷ್ಮೀ ಟೀಚರ್ ಮಾತ್ರ. ಅವರನ್ನು ಪ್ರೀತಿಯಿಂದ ಸತ್ಕರಿಸುವ ಕೆಲವು ಗೆಳತಿಯರ ಮನೆಗಳಿದ್ದುವು. ಕೆಲವೊಮ್ಮೆ ಅಲ್ಲಿಗೆ ಭೇಟಿ ನೀಡಿ ಮರೆಯುವ ಪ್ರಯತ್ನ ಮಾಡತೊಡಗಿದರು.

ವಾಮನ್ರಾಜ್ ವರ್ಷಕ್ಕೊಮ್ಮೆ ಊರಿಗೆ ಬಂದಾಗ ಬೇಗೆಯಿಂದ ಬಾಗಿದ ಮನಸ್ಸು ನಳನಳಿಸುತ್ತಿತ್ತು. ಅವನೂ ಸಂಸಾರಿಯಾಗಿ ಎರಡು ಮಕ್ಕಳ ತಂದೆಯಾದುದರಿಂದ ಮತ್ತು ಸ್ವಂತಕ್ಕೆ ಸಡಿಲ ಬಿಟ್ಟು ಖರ್ಚು ಮಾಡುವವನಾದ ಕಾರಣ ಊರಿನಲ್ಲಿರುವ ದುಡಿವ ಹೆಂಡತಿಯನ್ನು ಹಿಂಡಲು ಸಾಧ್ಯವೇ ಎಂದು ನೋಡತೊಡಗಿದ. ಆದರೆ ಜಾಣೆ ಲೀಲಾವತಿ ಅದಕ್ಕೆ ಆಸ್ಪದ ಕೊಡದೆ ತನ್ನ ವೃತ್ತಿ ಬದುಕಿನ ಸರಕಾರಿ ದಾಖಲೆಗಳಲ್ಲಿ ಅವನ ಹೆಸರನ್ನು ದಾಖಲಿಸದೇ ನಿವೃತ್ತರಾದರು. ಇದನ್ನು ವಾಮನ ನಿರೀಕ್ಷಿಸಿರಲಿಲ್ಲವೆಂದು ಕಾಣುತ್ತದೆ. ಲೀಲಾವತಿ ತೀರಿದ ಮೇಲೆ ನನ್ನ ಮತ್ತು ಅವನ ಭೇಟಿಯಲ್ಲಿ ಮಾತು ಹೊರಬಂತು. ತನ್ನನ್ನು ಬೇಬಿ (ಲೀಲಾವತಿ) ನಿರ್ಲಕ್ಷಿಸಿದ್ದಳು ಎಂದು ಅವನ ಆರೋಪವಿತ್ತು. ಆದರೆ ಲೀಲಾವತಿ ವಾಮನನಿಂದ ನನ್ನ ಹೆಸರು ಕೆಟ್ಟಿತ್ತು, ಅವನಿಂದಲೇ ಬದುಕಿಗೆ ಒಂದು ಗುರುತು ಇರಲಿ ಎಂದು ಬಯಸಿದರೇ ಹೊರತು ತಾನು ಇಡೀ ಬದುಕನ್ನೇ ಅವನ ಪದತಲದಲ್ಲಿಟ್ಟು ನಿಶ್ಚಿಂತರಾಗಿ ಬಿಡುವಷ್ಟು ದಡ್ಡರಲ್ಲ ಲೀಲಾವತಿ. ತನಗೆ ಹುಟ್ಟುವಾಗಲೇ ಬೆನ್ನಿಗಂಟಿಕೊಂಡಿದ್ದ ತಮ್ಮ ತಂಗಿಯಂದಿರಿಗೆ ತಾನು ದುಡಿದು ಗಳಿಸಿದ್ದೆಲ್ಲವನ್ನೂ ಧಾರೆಯೆರೆದರು.

ನಿವೃತ್ತರಾದ ಮೇಲೆ ಸಾಕಷ್ಟು ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆಗಳಲ್ಲಿ ತನ್ಮಯತೆಯಿಂದ ಕೆಲಸ ಮಾಡಿದ ಲೀಲಾವತಿ ತಾನು ಹೋದಲ್ಲೆಲ್ಲಾ ತನ್ನ ಪ್ರತಿಭೆಯ ಅಸ್ಮಿತೆಯ ಮುದ್ರೆಯೊತ್ತಿ ಬಿಡುತ್ತಿದ್ದರು. ಕರಾವಳಿ ಲೇಖಕಿಯರ ಸಂಘದಲ್ಲಿ ಅವರ ಕೆಲಸ ಸ್ಮರಣೀಯ. ಒಂದು ದಿನ ಅಕಸ್ಮತ್ತಾಗಿ ಬ್ರೈನ್ ಹೇಮರೇಜ್ ಆಗಿ ತೀರಿಹೋದ ಲೀಲಾವತಿಯದ್ದು ಒಂದರ್ಥದಲ್ಲಿ ಸುಖ ಮರಣ. ತಾನು ಸಾಯುವೆನೆಂದು ಮೊದಲೇ ತಿಳಿದವರಂತೆ ತನ್ನ ಗಳಿಕೆಯ ಉಳಿಕೆಯನ್ನು ಯಾರ್ಯಾರಿಗೆ ಎಷ್ಟೆಷ್ಟು ಸಂದಾಯವಾಗಬೇಕು ಎಂದು ವಿಲ್ ಮಾಡಿಟ್ಟಿದ್ದರು. ತನ್ನ ತಾಯಿ ಸತ್ತ ಮೇಲೆಯೇ ಆಕೆಗೆ ತಾನು ಇನ್ನು ಬದುಕಬಾರದು ಎಂಬ ಭಾವನೆ ಮೂಡಿರಬೇಕು. ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸು ಮಾಡಿ ಅವರು ಬರೆದ ಪತ್ರವೂ ನಮಗೆ ಅವರ ಮನೆಯಲ್ಲಿ ಸಿಕ್ಕಿತ್ತು. ಹಾಗೆಂದು ಅಮೃತ ಸೋಮೇಶ್ವರರಲ್ಲೂ ಅವರ ನಿರ್ಧಾರವನ್ನು ತಿಳಿಸಿದ್ದೂ ಇತ್ತು. ಇವರ ಒಂದು ಲೇಖನದ ಬಗ್ಗೆ ಇನ್ನೋರ್ವ ಲೇಖಕಿ ಚೌರ್ಯದ ಆರೋಪ ಮಾಡಿದ್ದರಿಂದ ಲೀಲಾವತಿಗೆ ತುಂಬಾ ಅವಮಾನವೆನಿಸಿ ಸಾಯುವ ಮನಸ್ಸು ಮಾಡಿದ್ದರಂತೆ. ಅಮೃತಸೋಮೇಶ್ವರರು ಅವರನ್ನು ಸಮಾಧಾನಪಡಿಸಲು ಬಹಳ ಪ್ರಯತ್ನಿಸಿದ್ದರಂತೆ.

ಆಕೆಯ ನಿಧನದ ಬಳಿಕ ಅವರ ಸಂಗ್ರಹದಲ್ಲಿದ್ದ ಪುಸ್ತಕಗಳನ್ನು ಕರಾವಳಿ ಲೇಖಕಿಯರ ವಾಚಕಿಯರ ಸಂಘಕ್ಕೆ ನೀಡಲು ಸೋದರ ಸೋದರಿಯರು ಒಪ್ಪಿದ ಕಾರಣ ನಾನು ಮತ್ತು ದೇವಿಕಾ ಅವೆಲ್ಲವನ್ನೂ ಒಯ್ದೆವು. ಪ್ರಪಂಚದ ಎಲ್ಲಾ ನೋವು, ಹಿಂಸೆ, ಕಷ್ಟಗಳಿಗೂ ಸಾವು ಕೊನೆ. ಆದರೆ ಸಾವಿನ ಬಾಗಿಲು ತೆರೆದು ನಾವು ಓಡಿಹೋಗಲು ಸಾಧ್ಯವಿಲ್ಲವಲ್ಲಾ. ಅದು ಕರೆದಾಗಲಷ್ಟೇ ಹೋಗಬೇಕು ತಾನೇ? ಲೀಲಾವತಿಯ ಬದುಕು ಹಲವು ಕೌತುಕಗಳ, ಹಲವು ಸಾಹಸಗಳ, ಹಲವು ಹೋರಾಟಗಳ ಕಥಾನಕ. ಅವರ ಸಹವಾಸಕ್ಕೆ ಬಂದವರೆಲ್ಲರ ಮೇಲೆ ಒಂದು ವಿಶಿಷ್ಟಛಾಪನ್ನು ಮೂಡಿಸಿದ್ದಾರೆ. ಹೂವಿಗೆ ಸುವಾಸನೆ ಇರುವಂತೆ ಮನುಷ್ಯನಿಗೆ ವ್ಯಕ್ತಿತ್ವವಿರುತ್ತದೆ. ಎಲ್ಲಾ ಹೂಗಳಿಗೂ ಒಂದೇ ರೀತಿಯ ಸುವಾಸನೆ ಇರುವುದಿಲ್ಲವಲ್ಲಾ. ಹಾಗೆಯೇ ಇವರ ವ್ಯಕ್ತಿತ್ವವು ಕೆಲವರಿಗೆ ಅಸಹ್ಯವೆನಿಸಿದ್ದೂ ಇಲ್ಲವೆಂದಲ್ಲ. ಹಲವರಿಗೆ ಕಣ್ಣಿಗೊತ್ತಿ ತಲೆ ಮೇಲೆ ಕೂರಿಸಿ ಕೊಂಡಾಡುವ ವ್ಯಕ್ತಿತ್ವ ಅವರದು. ಶಿಷ್ಯೆಯರ ಬಗ್ಗೆಯೂ ಇದೇ ಮಾತು ಅನ್ವಯವಾಗುತ್ತದೆ. ಕೆಲವರನ್ನು ಆಜನ್ಮ ಶತ್ರುಗಳಂತೆ ಕಂಡದ್ದೂ ಇದೆ. ಹಲವರನ್ನು ತನ್ನ ಮಗುವಿನಂತೆ ಪ್ರೀತಿಸಿದ್ದೂ ಇದೆ.

ನನ್ನ ಮತ್ತು ಅವರ ಸಂಬಂಧದ ಬಗ್ಗೆಯೇ ನನಗೆ ಉತ್ತರಿಸಲಾಗದ ಪ್ರಶ್ನೆಗಳಾಗಿವೆ. ನನ್ನನ್ನು ತಂಗಿಯಂತೆ ಕಂಡರೇ? ಇಲ್ಲ, ಸ್ನೇಹಿತರಂತೆ ಕಂಡರೇ ಅದೂ ಇಲ್ಲ. ಸಹೋದ್ಯೋಗಿಯಂತೆ ಕಂಡರೇ? ಅದೂ ಇಲ್ಲ. ಸ್ವಜಾತಿ ಬಾಂಧವಳಂತೆ ಮಮಕಾರದಿಂದ ಕಂಡರೇ? ಅದೂ ಇಲ್ಲ. ಎಲ್ಲಾ ಸಂಬಂಧಗಳ ಮಿಶ್ರಣವೊಂದು ರೂಪುಗೊಂಡರೆ ಹೇಗಿರಬಹುದು ಅಂತಹ ಒಂದು ಬಾಂಧವ್ಯ ನನ್ನ ಮತ್ತು ಅವರ ಮಧ್ಯೆ ಇತ್ತು. ನನ್ನ ಬರವಣಿಗೆಯನ್ನು ಮೊದಲು ಪ್ರೋತ್ಸಾಹಿಸಿದವರೇ ಅವರು. ಆದರೆ ನನ್ನ ಪುಸ್ತಕಗಳು ಪ್ರಕಟವಾದ ಮೇಲೆ ಮೊದಲಿನ ಆತ್ಮೀಯತೆಯನ್ನು ಉಳಿಸಿಕೊಳ್ಳದೆ ನನ್ನನ್ನು ಪರಕೀಯಳಂತೆ ಕಾಣುವ ಅವರ ಮನೋಭಾವ ಕಂಡು ಬೆರಗಾಗಿದ್ದೆ. ಆದರೆ ಅವರಿಗೆ ಅಗತ್ಯವಾಗಿ ಏನಾದರೂ ಕೆಲಸ ಆಗಬೇಕಿದ್ದರೆ ಎಲ್ಲವನ್ನೂ ಮರೆತು ಬೆರೆಯುತ್ತಿದ್ದರು. ಲೀಲಾವತಿ ಜೀವನವನ್ನು ಪ್ರೀತಿಸಿದರು. ಉಡುವುದು, ತೊಡುವುದು, ಉಣ್ಣುವುದು, ತಿನ್ನುವುದು ಎಲ್ಲವೂ ಅವರಿಗೆ ಪ್ರಿಯವಾದ ವಿಷಯ. ಚಿನ್ನ ಸೀರೆಗಳ ವ್ಯಾಮೋಹವೂ ಕಡಿಮೆ ಇರಲಿಲ್ಲ. ಹಾಗಾಗಿ ಲೀಲಾವತಿ ಇದ್ದಲ್ಲಿ ಹೊಳಪಿನ ಬೆಳ್ಳಿರೇಖೆಗಳು ಮಿಂಚುತ್ತಿದ್ದುವು. ಕುಟುಂಬದಲ್ಲಿ ಹಿರಿಮಗಳಾಗಿ ಹುಟ್ಟಿದ್ದಕ್ಕೆ ಮಾಡಬೇಕಾದ ಕರ್ತವ್ಯಗಳನ್ನು ಒಂದಿಷ್ಟೂ ಕುಂದು ಬಾರದಂತೆ ನಿರ್ವಹಿಸಿದ ಅವರ ಹಿರಿತನಕ್ಕೆ ಶಿರ ಬಾಗಲೇಬೇಕು. ಅವಿವಾಹಿತೆಯಾಗಿ ಸಾಯಲಾರೆ ಎಂಬ ನಿರ್ಧಾರದಂತೆ ವಾಮನನೊಂದಿಗೆ ವಿವಾಹವಾದರು. ಅಲ್ಲೂ ಅತಿಯಾದ ವ್ಯಾಮೋಹದಿಂದ ಕುರುಡಾಗದಂತೆ ಎಚ್ಚರ ವಹಿಸಿದರು. ನನ್ನ ಅವರ ಒಡನಾಟದಿಂದ ನಾನು ಪಡೆದ ಜ್ಞಾನಕ್ಕೆ ಎಣೆಯಿಲ್ಲ. ಮರದ ಕೊರಡಿನಂತೆ ಜೀವ ಚೈತನ್ಯವಿಲ್ಲದ ನನ್ನಲ್ಲಿ ಹೊಸ ಸಂಚಲನವನ್ನು ಉಂಟುಮಾಡಿದರು. ಜೀವನವೆಂಬುದು ಕಲೆ. ಅದನ್ನು ಯಾರಿಂದಲೂ ಕಲಿಸಲಾಗದು. ಜೀವನ ಕೌಶಲ್ಯವನ್ನು ಗಳಿಸಿದರೆ ಬದುಕು ಸಾರ್ಥಕವಾಗುತ್ತದೆ. ಎಸ್.ವಿ. ಪರಮೇಶ್ವರ ಭಟ್ಟರು ಹೇಳಿದಂತೆ ಅರಿವೆಂಬ ಕುದುರೆಗೆ ತನ್ನನುಭವವೇ ಹುರುಳಿ. ಅನ್ಯರ ಉಪದೇಶ ಅದಕ್ಕೆ ಕಡಿವಾಣ. ಎಸ್.ವಿ.ಪಿ.ಯವರ ನಿಕಟ ಸಂಪರ್ಕದಲ್ಲಿ ಕೆಲಕಾಲ ಲೀಲಾವತಿ ಇದ್ದರು. ಲೀಲಾವತಿ ಅವರ ಉಪದೇಶವನ್ನು ಸ್ವೀಕರಿಸುವ ಮನಸ್ಥಿತಿಗೆ ಬಂದಿದ್ದರು. ಬನ್ನಂಜೆ ಗೋವಿಂದಾಚಾರ್ಯ, ಚಂದ್ರಶೇಖರ ರಾವ್ ಮಾಸ್ಟ್ರು, ಅಮೃತ ಸೋಮೇಶ್ವರ, ಬಿ.. ವಿವೇಕ ರೈ ಮುಂತಾದ ಹಿರಿಯರಲ್ಲಿ ತನ್ನ ಬದುಕಿನ ಕಷ್ಟಗಳಿಗೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದರು. ಎಷ್ಟೋ ಸಲ ಇವರ ಮುಂಗೋಪಗಳನ್ನು ನಿಯಂತ್ರಿಸಲು ಇವರ ಉಪದೇಶ ಸಹಾಯ ಮಾಡುತ್ತಿತ್ತು. ಲೀಲಾವತಿಯ ಸಂಪರ್ಕ ಪಡೆದ ಯಾರೂ ಕೂಡಾ ಅವರನ್ನು ಮರೆಯಲು ಸಾಧ್ಯವಿಲ್ಲ. ಅಂತಹ ಅನನ್ಯ ಗುಣಗಳು ಅವರಲ್ಲಿ ಮನೆ ಮಾಡಿದ್ದವು. ಇಂದು ಬದುಕಿರುತ್ತಿದ್ದರೆ ದೊಡ್ಡ ಲೇಖಕಿಯಾಗಿ ಬೆಳೆಯುತ್ತಿದ್ದರು ಎಂಬುದರಲ್ಲಿ ಸಂಶಯವಿಲ್ಲ.ಮುಂದುವರಿಯಲಿದೆ

5 comments:

 1. ಈ ವಿಶಿಷ್ಟ ಲೀಲಾಅತಿ ಅವರ ಬಗ್ಗೆ ಕೇಳಿರಲಿಲ್ಲ; ಅರಿತಿರಲಿಲ್ಲ. ನಿಗೂಧರಾಗಿಯೇ ಉಳಿದನ್ತಾದ ಆರ ಬಗ್ಗೆ ಸರಿಯಾಗಿ ತಿಳಿಯಲು, ಇನ್ನೂ ರೋಹಿಣಿ ಅವರು ಚಿತ್ರಿಸಿದ ಅವರ ವ್ಯಕ್ತಿಚಿತ್ರಾನ್ನೋದಲು .ಕಾದಿರುವೆ.

  ReplyDelete
 2. ಚೆನ್ನಾಗಿ ಬರುತ್ತಿದೆ

  ReplyDelete
 3. Many unknown personalities in the region are being brought to light. Nice work.

  ReplyDelete
 4. ಗೆಳತಿಯರ ಸ್ನೇಹದ ವಿಶ್ಲೇಷಣೆ ಹಾಗು ಲೀಲಾವತಿಯವರ ವ್ಯಕ್ತಿತ್ವ ವಿಶ್ಲೇಷಣೆ ಮಾರ್ಮಿಕವಾಗಿದೆ. ಹಾಗೆಯೇ ಬಿಸ್ಮಿಲ್ಲಾಖಾನರ ಶಹನಾಯ್ ಆಲಿಸಿದ ನೆನಪಿನ ಸವಿ ಸವಿಯಾಗಿದೆ.
  ಅನುಪಮಾ ಪ್ರಸಾದ್.

  ReplyDelete
 5. ಲೀಲಾವತಿಯವರ ನೆನಪು ನನ್ನನ್ನು ಕೆಸುವಿನ ಸೊಪ್ಪಿನ ನೆನಪಿಗೆ ಕೊಂಡೊಯ್ಯಿತು. ಅವರಿಗೆ ಕೆಸವಿನ ಸೊಪ್ಪು ಎಂದರೆ ಪಂಚಪ್ರಾಣ.೧೯೯೪ ರಲ್ಲಿ ಕರಾವಳಿ ಲೇಖಕಿಯರ ಸಂಘದ ಕಾರ್ಯನಿಮಿತ್ತ ಅವರು ಮತ್ತು ಮೋಹಿನಿ ಮಂಜುನಾಥ ನಮ್ಮ ಪುತ್ತೂರಿನ ಹಳ್ಳಿ ಮನೆಗೆ ಬಂದಿದ್ದರು.ಊಟ ನಮ್ಮಲ್ಲೇ ಮಾಡಿ ಹೊರಡುವಾಗ ಮನೆ ಹಿಂಬದಿ ನಾವೇ ಬೆಳೆಸಿದ ಕೆಸವಿನ ಸಾಲುಗಳು ಕಂಡಿತ್ತು. ಸೊಕ್ಕಿ ಬೆಳೆದ ತಾಜಾ ಎಲೆಗಳು. ಕೆಸವು ಮಳೆಗಾಲದಲ್ಲಿ ಮಾತ್ರ ಸಿಗುತ್ತವೆ. ಬೇಸಿಗೆಯಲ್ಲಿ ಬೇಕೆಂದರೆ ಹೀಗೆ ಬೆಳೆಸಿದ್ದು ಸಿಗಬೇಕು. ಅವರು ಪತ್ರೊಡೆ ವಿಷಯ ಹೇಳಿದಾಗಲೇ ಮಾತಿನಿಂದಲೇ ಕೆಸವು ಅವರಿಗಿಷ್ಟವೆಂದು ಕೇಳಿ ತಿಳಿದು ಬೇಕೆನಿಸುವಷ್ಟು ಕುಯ್ದು ಕೊಟ್ಟೆ. ಸಂತೋಷದಿಂದಲೇ ಒಯ್ದು ಆಮೇಲೆ ತಾವು ಪತ್ರೊಡೆ ಮಾಡಿದ್ದು,ಕಡಲೆಹಿಟ್ಟಿನಲ್ಲಿ ಸವರಿ ಹುರಿದದ್ದು ಇನ್ನೂ ಏನೇನು ಮಾಡಿದ್ದು ಅಂತ ವಿವರಿಸಿ ನನಗೆ ಥ್ಯಾಂಕ್ಸ್ ಹೇಳಿದ್ದರು. ಅನಂತರ ಕಾಲದಲ್ಲಿ ನಾನು ಮಂಗಳೂರಿಗೆ ಹೋಗುವಾಗಲೆಲ್ಲ ಅವರಿಗಾಗಿ ಕೆಸವಿನ ಸೊಪ್ಪು ಒಯ್ದು ಅಶೋಕವರ್ಧನರ ಅತ್ರೀ ಬುಕ್ ಸೆಂಟರ್ ನಲ್ಲಿ ಇಡುತ್ತಿದ್ದೆ. ಅವರು ಬಂದು ತೆಗೆದುಕೊಂಡು ಹೋಗುತ್ತಿದ್ದರು. ಅತ್ರೀ ಬುಕ್ ಸೆಂಟರ್ ನಮ್ಮ ಸಂಘದ ಸದಸ್ಯೆಯರಿಗೆ ಕೊಡು ತೆಗೆದುಕೊಳ್ಳುವ ಕೇಂದ್ರವಾಗಿತ್ತು. ನಮ್ಮಿಬ್ಬರಲ್ಲಿ ಸ್ನೇಹದ ಅನುಬಂಧ ಸುಮಾರಾಗಿ ಬೆಳೆಯಲು ಈ ಸೊಪ್ಪು ಕಾರಣ. ಮುಖತಃ ಭೇಟಿಯಾದಾಗ ಅದರ ಬಗ್ಗೆ ಹೇಳುವಾಗ ಅವರ ಮುಖ ತುಂಬಾ ನಗುವುಕ್ಕಿ, "ನಿಮಗೆ ತೊಂದರೆ ಕೊಡುತ್ತೇನೆಯೇ?" ಕೇಳುತ್ತಿದ್ದರು ಸಂಕೋಚದಲ್ಲಿ. ಹೀಗೆ ಒಮ್ಮೆ ಅತ್ರಿಯಲ್ಲಿಟ್ಟ ಕೆಸುವಿನ ಸೊಪ್ಪಿನ ಕಟ್ಟ ಒಯ್ಯಲು ನಾಲ್ಕು ದಿನಗಳಾದರೂ ಯಾರೂ ಬರಲಿಲ್ಲವೆಂಬ ವಿಷಯ ತಿಳಿಯಿತು.ಏನು ಕಾರಣವೆಂದು ಕೇಳಿದಾಗ ಅವರು ಊರಲ್ಲಿ ಇರಲಿಲ್ಲವಂತೆ. "ಈಗ ಮಳೆಗಾಲ ಮುಗಿದರೂ ಸೊಪ್ಪು ಅಲ್ಲಿಲ್ಲಿ ಸಿಗುತ್ತಿದೆ. ಬೇಸಿಗೆಯಲ್ಲಿ ನಾನೇ ನಿಮ್ಮಲ್ಲಿಗೆ ಬರುತ್ತೇನೆ"ಎಂದಿದ್ದರು. ಆದರೆ ಹಾಗೇ ಮುಂದೆ ಸ್ವಲ್ಪ ಸಮಯದಲ್ಲೇ ಅವರು ಇನ್ನಿಲ್ಲವೆಂಬ ಸುದ್ದಿ ಸಿಕ್ಕಿತು. ಈಗಲೂ ಆಗಾಗ ಕೆಸವು ತೆಗೆಯುವಾಗ ನೆನಪಾಗುತ್ತಾರೆ ನಗುಮೊಗದ ಲೀಲಾವತಿ. ಬಾಯ್ತುಂಬ ನಗುವ ಲೀಲಾವತಿಯವರ ಬದುಕಿನ ಪುಟಗಳು ಅದೆಷ್ಟು ಅಜ್ಞಾತ!

  ReplyDelete