22 December 2015

ಈಸಿ ಗೆದ್ದವರು, ಈಸಲಾರದೆ ಸೋತವರು

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ
ಭಾಗ ಏಳು 

ನನ್ನ ತಾಯಿಯ ಅಕ್ಕ ಶಿವಮ್ಮ ದೊಡ್ಡಮ್ಮನದು ವಿಶಿಷ್ಟ ವ್ಯಕ್ತಿತ್ವ. ಕುಡುಪು ಜಾತ್ರೆಯ ಸಮಯದಲ್ಲೋ, ಏನಾದರೂ ಶುಭ ಸಮಾರಂಭದಲ್ಲೋ ಭೇಟಿಯಾದಾಗ ನಿನ್ನ ಮಗಳನ್ನು ಯಾಕೆ ಶಾಲೆಗೆ ಕಳಿಸುತ್ತೀಯಾ? ಮನೆಯಲ್ಲಿ ಕೂರಿಸಿ ಬೀಡಿ ಕಟ್ಟಿಸಬಾರದಾ? ಕಳಿಸಿದರೆ ನಾಳೆ ನಿನಗೇ ಕಷ್ಟ ಎಂದು ಯಾವಾಗಲೂ ಅಮ್ಮನ ಕಿವಿಯೂದುತ್ತಿದ್ದರು. ನಾಲ್ಕಕ್ಷರ ಕಲಿತ ಅಪ್ಪಿ ಚಿಕ್ಕಮ್ಮನಿಗೆ ವಿದ್ಯೆ ಕಲಿಸದಿದ್ದರೆ ಆಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲವೆಂದೇ ದೊಡ್ಡಮ್ಮನ ಅಭಿಪ್ರಾಯ. ಹಾಗಾಗಿ ಅವರ ಹೆಣ್ಣುಮಕ್ಕಳಿಗೆ - ತರಗತಿಗಿಂತ  ಮೇಲೆ ಶಾಲೆಗೆ ಕಳಿಸಲಿಲ್ಲ. ಗಂಡು ಮಕ್ಕಳು ಎಸ್.ಎಸ್.ಎಲ್.ಸಿ.ಯವರೆಗೆ ಮಾತ್ರ ಅದೂ ಕಷ್ಟದಲ್ಲಿ ತಲುಪಿದ್ದರು. ದೊಡ್ಡಮ್ಮ ತನ್ನ ಮೊದಲ ಮೂರು ಮಕ್ಕಳನ್ನು ತವರಿನಲ್ಲಿ ಮಂಜೇಶ್ವರದಲ್ಲಿ ಇರಿಸಿ ಶಾಲೆಗೆ ಕಳಿಸುವ ವ್ಯವಸ್ಥೆ ಮಾಡಿದ್ದರಲ್ಲಾ, ಕುಡುಪುನಲ್ಲಿ ಶಾಲೆ ಇಲ್ಲವೆಂದಾಗಲೀ ಶಾಲೆಗೆ ಕಳಿಸಲು ಸಾಧ್ಯವಿಲ್ಲವೆಂದಾಗಲೀ ಕಾರಣವಲ್ಲ. ದೊಡ್ಡಮ್ಮನದೂ ವಿಷಮ ದಾಂಪತ್ಯ. ಏಗುತ್ತಾ, ಈಜುತ್ತಾ, ಮುಳುಗುತ್ತಾ ದಾಂಪತ್ಯವನ್ನು ನಿಭಾಯಿಸಿದ ರೀತಿಯೇ ಅನನ್ಯ.


ಅಮ್ಮನ ಸೋದರ ಸೋದರಿಯರಲ್ಲಿ ದೊಡ್ಡಮ್ಮನಿಗೆ ಮಾತ್ರ ವಿದ್ಯೆ ಇಲ್ಲ. ತಮ್ಮಂದಿರ, ತಂಗಿಯಂದಿರ ಹೇಲು, ಉಚ್ಚೆ ತೊಳೆಯುವುದನ್ನೇ ಅಪ್ಪ ಕಲಿಸಿದ್ದು, ವಿದ್ಯೆಯನ್ನಲ್ಲ ಎಂದು ನಿರ್ಭಾವುಕರಾಗಿ ಹೇಳುತ್ತಿದ್ದರು. ಹಿರಿಮಗಳಾದ ಕಾರಣ ಮನೆವಾರ್ತೆಯ ಹೊಣೆಯೂ ಇವರ ಮೇಲೆಯೇ. ಹತ್ತು ಮಕ್ಕಳನ್ನು ಹೆತ್ತು ಹೊತ್ತು ಸಾಕುವ ಕೆಲಸದಲ್ಲಿ ಅಜ್ಜಿಗೆ ಆಸರೆಯಾಗಿ ನಿಂತವರು ದೊಡ್ಡಮ್ಮನೇ. ತರಕಾರಿ ತೋಟದಲ್ಲಿ ಗಿಡಗಳಿಗೆ ನೀರು ಹಾಕುತ್ತಿರುವಾಗಲೇ ಪಕ್ಕದ ತೋಡಿನ ಬದಿಯಲ್ಲೇ ಅಜ್ಜಿ ದೊಡ್ಡಮ್ಮನನ್ನು ಹೆತ್ತಿದ್ದರಂತೆ. ಜೊತೆಯಲ್ಲಿದ್ದ ಯಾರೋ ನೆರವಾದರಂತೆ. ಅಲ್ಲಿಂದಲೇ ಮಗುವನ್ನು ಎತ್ತಿಕೊಂಡು ತಂದು ಮನೆಯಲ್ಲಿ ಮಲಗಿಸಿದರಂತೆ. ಆಧುನಿಕ ಕಾಲದಲ್ಲಿ ಮಧ್ಯಮ ವರ್ಗದ ಹೆಂಗಸರಿಗೆ ಲಭಿಸುತ್ತಿರುವ ಬಾಣಂತಿ ಆರೈಕೆ, ವಿಶ್ರಾಂತಿ, ಉತ್ತಮ ಆಹಾರ ಇತ್ಯಾದಿ ಯಾವುದೂ ಅಜ್ಜಿಗಾಗಲೀ, ನನ್ನಮ್ಮನಿಗಾಗಲೀ ದೊಡ್ಡಮ್ಮನಿಗಾಗಲೀ ಕೇಳಿಯೂ ಗೊತ್ತಿಲ್ಲ. ಅದನ್ನು ಊಹಿಸಲೂ ಸಾಧ್ಯವಿರಲಿಲ್ಲ. ಇವರಿಗೆಲ್ಲಾ ಹೆರಿಗೆಯಾದ ಮೂರೇ ದಿನದಲ್ಲಿ ಎದ್ದು ಎಲ್ಲಾ ಕೆಲಸ ಮಾಡುವ ಅನಿವಾರ್ಯತೆ ಇತ್ತು. ಈಗ ಬಾಣಂತಿ ಆರೈಕೆಯೂ ಒಂದು ಉದ್ಯೋಗವಾಗಿ ತಿಂಗಳಿಗೆ ೩೦ ಸಾವಿರದಷ್ಟು ಸಂಪಾದನೆಯ ಕೆಲಸವಾಗಿದೆ. ಒಂದು ಶತಮಾನದ ಉರುಳುವಿಕೆಯಲ್ಲಿ ಏನೆಲ್ಲಾ ಪರಿವರ್ತನೆಗಳು, ಸ್ಥಿತ್ಯಂತರಗಳು ಆಗುವುದು ಸಹಜ ತಾನೇ? ಸಾಂಸ್ಕೃತಿಕ ಪರಿವರ್ತನೆಗಳು ಪ್ರಾರಂಭದಲ್ಲಿ ಸಮಾಜ ಪ್ರತಿರೋಧಗಳನ್ನೆದುರಿಸಿಯೇ ಪ್ರಾರಂಭವಾಗುತ್ತದೆ. ಬದಲಾವಣೆಗಳಲ್ಲಿ ಒಳಿತಿನ ಜೊತೆಗೆ ಕೆಡುಕುಗಳೂ ಕೆಲವೊಮ್ಮೆ ಸೇರಿಕೊಳ್ಳುವುದಿದೆ. ಜೀವಪರವಾದ ಪರಿವರ್ತನೆಗಳು ಮಾತ್ರ ಉಳಿಯುತ್ತವೆ. ದುರ್ದೈವವೆಂದರೆ ಜೀವವಿರೋಧಿ ಪರಿವರ್ತನೆ ಯಾವುದು? ಜೀವಪರವಾದದ್ದು ಯಾವುದು ಎಂದು ಅರಿಯುವ ವಿವೇಕವಿಲ್ಲದೆಯೋ ಅಥವಾ ಇದ್ದರೂ ಹಳತೆಲ್ಲಾ ಹೊನ್ನು ಎಂಬ ನಂಬಿಕೆಗಳಿಂದಲೋ ಕೆಲವೊಂದು ಕಂದಾಚಾರಗಳು, ನಂಬಿಕೆಗಳು ಆಗ ಉಳಿದೇಬಿಟ್ಟಿದ್ದವು.


ದೊಡ್ಡಮ್ಮನ ಹುಟ್ಟು ಹೇಗೆ ವಿಶಿಷ್ಟವೋ ಮದುವೆಯೂ ಅಷ್ಟೇ ವಿಶಿಷ್ಟ. ೧೯೨೫-೨೬ನೇ ಇಸವಿ ಇರಬಹುದು. ದೊಡ್ಡಮ್ಮನಿಗೆ ಬಂಟ್ವಾಳದ ನೆತ್ತರಕೆರೆಯೆಂಬಲ್ಲಿನ ಕೃಷಿ ಕುಟುಂಬದ ವರನೊಂದಿಗೆ ಮದುವೆ ನಿಶ್ಚಯವಾಯಿತು. ಬಂಧು ಬಾಂಧವರಿಗೆಲ್ಲಾ ಆಮಂತ್ರಣ ನೀಡಲಾಯಿತು. ಮದುವೆಗೆ ಒಂದು ವಾರ ಇದೆ ಎನ್ನುವಾಗ ಮಿಲಿಟ್ರಿಯಿಂದ ದೊಡ್ಡಮಾವ ಬಂದರು. ವರನ ಮನೆಯನ್ನು ನೋಡಿ ಬರಲು ನೆತ್ತರಕೆರೆಗೆ ಮಾವ ಹೋದರು. ಅಲ್ಲಿನ ಪರಿಸರವನ್ನು ಸೂಕ್ಷವಾಗಿ ಗಮನಿಸಿದ ಮಾವನಿಗೆ ಹುಡುಗ ವಿದ್ಯಾವಂತನಲ್ಲವೆಂಬ ಗುಮಾನಿ ಮೂಡಿತು. ಮನೆಯವರೊಂದಿಗೆ ಸಮಾಧಾನವಾಗಿಯೇ ಮಾತಾಡಿದ ಮಾವನನ್ನು ಬೀಗರು ಒಳ್ಳೆಯ ರೀತಿಯಲ್ಲಿ ಸತ್ಕಾರ ಮಾಡಿದರು. ಆದರೆ ಊಟದ ಬಳಿಕ ಮನೆಯಿಂದ ಹೊರಡುವಾಗ ಅಂಗಳಕ್ಕಿಳಿದು, ನಾನು ನನ್ನ ತಂಗಿಯನ್ನು ಮನೆಗೆ ಕೊಡುವುದಿಲ್ಲ. ನೀವು ಬೇರೆ ವಧುವನ್ನು ಹುಡುಕಿ ಎಂದು ಹೇಳಿ ಹಿಂತಿರುಗಿ ನೋಡದೆ ಅವರ ಉತ್ತರಕ್ಕೂ ಕಾಯದೆ ದಾಪುಗಾಲು ಹಾಕಿ ನಡೆದೇ ಬಿಟ್ಟರಂತೆ. ಕಾರಣ ಏನು ಎಂದು ಅವರೂ ಕೇಳಲಿಲ್ಲ. ಇವರೂ ಹೇಳಲಿಲ್ಲ. ವರನ ಮನೆಯವರಿಗೆ ಕ್ಷಣಕ್ಕೆ ಆಘಾತವಾದರೂ ಅದೊಂದು ದೊಡ್ಡ ಸಂಗತಿಯಲ್ಲವೆಂದು ತಿಳಿದರು. ಮದುವೆ ನಿಷ್ಕರ್ಷೆಯಾದ ದಿನದಂದೇ ಬೇರೆ ಹುಡುಗಿಯೊಡನೆ ಮದುವೆಯೂ ಆಯಿತು. ಆದರೆ ವಧುವಿನ ಮನೆಯವರಿಗೆ ದೊಡ್ಡ ಶಾಕ್ ಆಯಿತು. ಕ್ಷಣಕ್ಕೆ ಗಂಡು ಸಿಗುವುದಾದರೂ ಹೇಗೆ? ಅದೂ ವಿದ್ಯಾವಂತ ಹುಡುಗನಾಗಬೇಕೆಂಬ ಆಶಯವನ್ನು ಆಗ ಈಡೇರಿಸಲು ಸಾಧ್ಯವಿಲ್ಲ. ಅಜ್ಜ ಅಜ್ಜಿಯರನ್ನು ಸಮಾಧಾನ ಮಾಡಲು ಮಾವ ತುಂಬಾ ಕಷ್ಟಪಟ್ಟರಂತೆ. ಆದರೆ ದೊಡ್ಡಮ್ಮನ ಮನಸ್ಸಿಗಾದ ಗಾಯದ ಆಳವೆಷ್ಟೆಂದು ಯಾರೂ ಊಹಿಸಲೂ ಇಲ್ಲ. ಕೇಳಲೂ ಇಲ್ಲವೆಂದು ಅಮ್ಮ ಹೇಳುತ್ತಿದ್ದಳು. ಕೆಲವು ದಿನ ದೊಡ್ಡಮ್ಮ ಕೋಣೆಯಿಂದ ಹೊರಗೇ ಬರಲಿಲ್ಲವಂತೆ.

ಬಳಿಕ ದೊಡ್ಡಮ್ಮನಿಗೆ ವರಾನ್ವೇಷಣೆಯ ಕೆಲಸವನ್ನು ಶ್ರದ್ಧೆಯಿಂದ ಅಜ್ಜ ಮತ್ತು ಮಾವ ಮಾಡಿದರು. ವರ್ಷ ಕಳೆದ ಮೇಲೆ ಕುಡುಪಿನಲ್ಲಿ ಮಂಜಪ್ಪ ಪಂಡಿತರ ಮಗನಾದ ಮೋನಪ್ಪನ ಜೊತೆ ದೊಡ್ಡಮ್ಮನ ವಿವಾಹವಾಯಿತು. ಮಂಜಪ್ಪ ಪಂಡಿತರು ಆಸುಪಾಸಿನಲ್ಲೆಲ್ಲಾ ಬಹಳ ಪ್ರಸಿದ್ಧ ವೈದ್ಯರು. ಮಾತ್ರವಲ್ಲ ಆಧ್ಯಾತ್ಮಿಕ ಸಿದ್ಧಿ ಪಡೆದವರೆಂದೂ ಪ್ರತೀತಿ ಇತ್ತು. ಸಂಸ್ಕೃತ, ಮಲೆಯಾಳ ಭಾಷೆಯಲ್ಲೂ ಪರಿಣತರಾಗಿದ್ದರಂತೆ. ಅದಕ್ಕೆ ಸಾಕ್ಷಿಯಾಗಿ ಅವರ ಬಳಿ ಕೆಲವು ಗ್ರಂಥಗಳಿದ್ದವು. ಪ್ರತ್ಯೇಕ ಕೋಣೆಯಲ್ಲಿ ಸನ್ಯಾಸಿಯಂತೆ ಬಾಳುತ್ತಿದ್ದರು. ಇಂತಹ ತಂದೆಯ ಮಗ ಮಾತ್ರ ಸಕಲ ಗುಣ ಸಂಪನ್ನನಾದುದು ಹೇಗೆ ಎಂಬುದೇ ಆಶ್ಚರ್ಯ. ವಿದ್ಯಾವಂತ ಹೌದು. ಆದರೆ ತಂದೆಯ ಸಂಪತ್ತನ್ನು ಕರಗಿಸಲು ಬೇಕಾದಷ್ಟು ವ್ಯಸನಗಳೆಲ್ಲಾ ದೊಡ್ಡಪ್ಪನಿಗಿತ್ತು. ಜೊತೆಯಲ್ಲಿ ಕುಡಿದು ಬಂದು ಹೆಂಡತಿ ಮಕ್ಕಳನ್ನು ಹೊಡೆಯುವುದೂ ನಿತ್ಯ ವರ್ತಮಾನವಾಗಿತ್ತು. ಸೌಭಾಗ್ಯಕ್ಕೆ ಮದುವೆಯಾದೆನೇ? ಎಂದು ದೊಡ್ಡಮ್ಮ ಪರಿತಪಿಸುತ್ತಾ ನಿಟ್ಟುಸಿರು ಬಿಡುತ್ತಾ ಮಾವನ ಮುಖ ನೋಡಿ ಎಲ್ಲವನ್ನು ಸಹಿಸಲು ಕಲಿತರು. ಮಗನ ದುರ್ವ್ಯಸನಗಳಿಗಾಗಿ ಹಲವಾರು ಎಕ್ರೆ ಭೂಮಿಯನ್ನು ಮಾರಬೇಕಾಯಿತು. ಎಲ್ಲವನ್ನೂ ನಿರ್ನಾಮ ಮಾಡುವ ಮಗನ ಆಪೋಶನ ಶಕ್ತಿಯನ್ನು ಕಂಡು ಬೇಸರಿಸಿ ವೈದ್ಯರು ಕುಡುಪುವಿನಲ್ಲಿ ತಾನು ವಾಸವಾಗಿದ್ದ ದೊಡ್ಡ ಮನೆಯನ್ನು ತನ್ನ ಮಗಳ ಹೆಸರಿಗೆ ವಿಲ್ ಮಾಡಿದ ವರ್ಷದೊಳಗೆ ನಿಧನರಾದರು. ಇಷ್ಟರವರೆಗೆ ಹಿರಿಯ ಜೀವವೊಂದು ಮನೆಯೊಳಗೆ ತನಗೆ ಬೆಂಗಾವಲಾಗಿ ಆಸರೆಯಾಗಿ ಜೊತೆಗಿದ್ದಾರೆ ಎಂಬುದೇ ದೊಡ್ಡಮ್ಮನ ಬದುಕಿಗೊಂದು ಚೈತನ್ಯ ತುಂಬುತ್ತಿತ್ತು. ಇನ್ನು ತನ್ನ ಮೇಲೆ ದೌರ್ಜನ್ಯ ನಡೆದಾಗ ಯಾರನ್ನು ಆಶ್ರಯಿಸಲಿ ಎಂದು ತಿಳಿಯದೆ ದೊಡ್ಡಮ್ಮ ಒಂದು ಕ್ಷಣ ಕಂಗಾಲಾದರು. ತಾನು ಪ್ರತಿಭಟಿಸಲು ಕಲಿಯದಿದ್ದರೆ ಗಂಡ ತನ್ನನ್ನು ಮಾರಲಾರನೆಂದು ಹೇಳಲು ಸಾಧ್ಯವಿಲ್ಲವೆಂದು ತಿಳಿದ ದೊಡ್ಡಮ್ಮ ನಂತರ ಬದುಕಿದ ರೀತಿಯೇ ಬೇರೆ. ಅವರ ಚೆಹರೆಯೇ ಬೇರೆ.

ಒಂದು ದಿನ ಹಾಗೆ ಪ್ರತಿಭಟಿಸಿದಾಗ ಸಿಟ್ಟಿಗೆದ್ದ ದೊಡ್ಡಪ್ಪ ಮಕ್ಕಳನ್ನೂ ದೊಡ್ಡಮ್ಮನನ್ನೂ ಮನೆಯಿಂದ ಹೊರಗೆ ದಬ್ಬಿದರು. ದೊಡ್ಡಮ್ಮ ಮಕ್ಕಳನ್ನು ಕರೆದುಕೊಂಡು ಬಿಕರ್ನಕಟ್ಟೆಯ ನಮ್ಮ ಬಾಡಿಗೆ ಮನೆಗೆ ಬಂದು 'ನನ್ನ ಗಂಡ ಸತ್ತರು' ಎಂದು ನಿರ್ಭಾವುಕರಾಗಿ ನುಡಿದಾಗ ನಾವೆಲ್ಲ ನಾಲಿಗೆ ಸತ್ತಂತಾಗಿಬಿಟ್ಟಿದ್ದೆವು. ನಮ್ಮ ಮನೆಯಲ್ಲಿ ಅವರಿಗೆಲ್ಲರಿಗೆ ಕುಳಿತುಕೊಳ್ಳಲು ಸ್ಥಳ ಸಾಲದಾದ ಕಾರಣ ನಮ್ಮ ಮನೆಯ ಮಾಲಕರಾದ ಕೃಷ್ಣಮ್ಮ ದೊಡ್ಡಮ್ಮನ ಮನೆಯಲ್ಲಿ ಕೆಲವು ದಿನ ಇದ್ದರು. ವಾರಗಳ ಬಳಿಕ ಸೋದರಮಾವನವರು ಬಂದು ಪಂಚಾಯಿತಿಕೆ ಮಾಡಿ ಮತ್ತೆ ಕುಡುಪಿನ ಮನೆಗೆ ಹೋಗುವಂತಾಯಿತು. ಏಳು ಮಕ್ಕಳನ್ನು ಒಂದು ನೆಲೆಗೆ ತಂದು ನಿಲ್ಲಿಸಲು ದೊಡ್ಡಮ್ಮ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮನೆಯ ಸುತ್ತುಮುತ್ತಲಲ್ಲಿ ಹಸಿರು ಹಬ್ಬಿಸಿದ ದೊಡ್ಡಮ್ಮ ಬೇರೆಯವರ ಗದ್ದೆಗಳನ್ನು ಬಾಡಿಗೆಗೆ ಪಡೆದು ಕೃಷಿ ಮಾಡಿದ್ದರು. ಹೋಟೇಲು ಉದ್ಯಮ ಪ್ರಾರಂಭಿಸಿದರು. ಪರಿಸರದಲ್ಲಿ ಹೆಂಗಸೊಬ್ಬಳು ಹೋಟೆಲ್ ನಡೆಸುತ್ತಾಳೆಂಬ ವಿಷಯವೇ ಎಲ್ಲರಿಗೂ ಕುತೂಹಲದ ಮತ್ತು ಆಶ್ಚರ್ಯದ ಸಂಗತಿಯಾಗಿತ್ತು. ಬೆಳಕು ಮೂಡುವ ಹೊತ್ತಿಗೆ ಪ್ರಾರಂಭವಾದ ಅವಳ ದುಡಿಮೆ ರಾತ್ರಿ ೧೨ರ ವರೆಗೂ ನಡೆಯುತ್ತಿತ್ತು. ಗಂಡು ಮಕ್ಕಳು ಹದಿಹರೆಯಕ್ಕೆ ಬರುವಷ್ಟು ಹೊತ್ತಿಗೆ ದೊಡ್ಡಪ್ಪನ ಹಾರಾಟ, ಠೇಂಕಾರಗಳೆಲ್ಲ ಕಡಿಮೆಯಾದವು. ಯಾಕೆಂದರೆ ಅವರಿಗೆ ಗುಣವಾಗದ ಕಾಯಿಲೆ ಅಂಟಿಕೊಂಡು ಬಿಟ್ಟಿತ್ತು. ಕೆಲವೇ ತಿಂಗಳಲ್ಲಿ ತೀರಿಹೋದ ದೊಡ್ಡಪ್ಪ ತಂದೆಯಾಗಿ ಮಕ್ಕಳಿಗೂ ಆತ್ಮೀಯರಾಗಲಿಲ್ಲ. ಮಗನಾಗಿ ಮಂಜಪ್ಪಜ್ಜನಿಗೂ ಪ್ರೀತಿಪಾತ್ರರಾಗಲಿಲ್ಲ. ಗಂಡನಾಗಿ ದೊಡ್ಡಮ್ಮನಿಗೂ ಆಪ್ತರಾಗಲಿಲ್ಲ. ತಂದೆಯ ವೈದ್ಯವೃತ್ತಿಯನ್ನು ಕಲಿತು ಸ್ವಂತಕ್ಕೆ ಒಂದು ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು. ಅದೂ ಮಾಡಲಿಲ್ಲ. ತಾನು ಕಲಿತ ವಿದ್ಯೆಗೆ ದೊಡ್ಡ ಹುದ್ದೆ ಸಿಗಬೇಕು ಎಂಬ ದುರಭಿಮಾನದಲ್ಲೇ ಆಯುಷ್ಯ ಸವೆಸಿದ ದೊಡ್ಡಪ್ಪ ತನ್ನ ತಂದೆಯ ಆಸ್ತಿಯ ಮೇಲ್ವಿಚಾರಣೆ ಮಾಡಿಕೊಂಡೋ, ಬೇಸಾಯದಲ್ಲಿ ತೊಡಗಿಸಿಕೊಂಡೋ ಆದಾಯಕ್ಕೊಂದು ದಾರಿ ಹುಡುಕಬಹುದಿತ್ತು. ಅದ್ಯಾವುದನ್ನೂ ಮಾಡದೆ ದುಶ್ಚಟಗಳ ದಾಸರಾಗಿ ಇದ್ದ ಆಸ್ತಿಯನ್ನೆಲ್ಲಾ ಸಂಸಾರಿಯಾದ ೧೫ ವರ್ಷಗಳೊಳಗೆ ಸಾಲಗಾರರ ವಶವಾಗುವಂತೆ ಮಾಡಿಬಿಟ್ಟರು. ಸಾಲಗಾರರಿಗೆ ಏಲಂ ಆಗಿ ಹೋಗುವ ಆಸ್ತಿಯನ್ನು ಸೋದರಮಾವನೇ ತೆಗೆದುಕೊಳ್ಳುವಂತೆ ದೊಡ್ಡಮ್ಮ ಒತ್ತಾಯಿಸಿದ್ದರಿಂದ ಒಂದು ಭಾಗದ ಆಸ್ತಿ ಉಳಿಯಿತು.

ಅಂತೂ ದೊಡ್ಡಮ್ಮನಿಗೆ ಏಳು ಮಕ್ಕಳನ್ನು ಕರುಣಿಸಿ ದೊಡ್ಡಪ್ಪ ನಿಧನರಾದರು. ಕೆಲವು ಮದುವೆಗಳೆಂದರೆ ಕಲ್ಲಿನ ಮೇಲೆ ಕಲ್ಲಿಟ್ಟು ಕುಟ್ಟುವ ಹಾಗೆ ಎನ್ನುತ್ತಾರೆ. ಕುಟ್ಟುವಿಕೆಯಲ್ಲಿ ಪುಡಿ ಪುಡಿಯಾಗುವುದು ಪತ್ನಿಯೇ ತಾನೇ? ದೊಡ್ಡಮ್ಮ ಪುಡಿ ಪುಡಿಯಾದ ಆತ್ಮವಿಶ್ವಾಸವೆಲ್ಲವನ್ನು ಒಟ್ಟುಗೊಳಿಸಿ ಮುರಿದ ಮನೆಯನ್ನು ನೆಟ್ಟಗೆ ನಿಲ್ಲಿಸಿದರು. ವಾಸವಿದ್ದ ಮನೆ ಗಂಡನ ತಂಗಿಯ ಹೆಸರಿನಲ್ಲಿದ್ದುದರಿಂದ ತಾನು ಮಕ್ಕಳನ್ನು ಹಿಡಿದುಕೊಂಡು ಬೀದಿಗೆ ಬೀಳಬೇಕಾದಿತೇನೋ ಎಂಬ ಭಯದಿಂದ ಕಂಗೆಟ್ಟ ದೊಡ್ಡಮ್ಮ ಕೋರ್ಟಿನ ಕಟ್ಟೆ ಹತ್ತಬೇಕಾಯಿತು. ಹೆಣ್ಣು ಹೆಂಗಸು ಇವಳನ್ನು ಏನಾದರೂ ಮಾಡಿ ಮೋಸ ಮಾಡಬಹುದು ಎಂದು ಯಾರಾದರೂ ಭಾವಿಸಿ ಆಕೆಯ ಬಳಿಗೆ ಬಂದರೆ ತನ್ನ ಮಾತಿನ ಚಾಣಾಕ್ಷತನದಿಂದ ಬಾಯಿ ಮುಚ್ಚಿಸಿಬಿಡುತ್ತಿದ್ದರು. ನಾನು ಮದುವೆಯಾಗಿ ಮನೆಯ ಹೊಸ್ತಿಲು ಹತ್ತಿ ಒಳಗೆ ಬಂದಿದ್ದೇನೆ. ಇನ್ನು ನನ್ನ ಹೆಣ ಮಾತ್ರ ಇಲ್ಲಿಂದ ಹೊರಹೋಗಬೇಕು ಎಂಬ ಹಠದಿಂದ ಮನೆಯಲ್ಲೇ ಕೂತರು. ಎಷ್ಟೋ ವರ್ಷಗಳ ಕೋರ್ಟು ವ್ಯಾಜ್ಯದ ಬಳಿಕ ಮನೆ ದೊಡ್ಡಮ್ಮನ ಹೆಸರಿಗೆ ಆಯಿತು. ಮಕ್ಕಳೆಲ್ಲರಿಗೂ ಮದುವೆಯಾಗಿ ಅವರವರ ನೆಲೆಯನ್ನು ತಲುಪಿದ ಮೇಲೆ ಒಬ್ಬಂಟಿಯಾಗಿದ್ದ ದೊಡ್ಡಮ್ಮ ಯಾವ ಕಾರಣಕ್ಕೂ ಮಕ್ಕಳ ಮನೆಯಲ್ಲಿ ಹೋಗಿ ಒಂದು ದಿನವಾದರೂ ತಂಗಲಿಲ್ಲ. ಸುಮಾರು ೮೫ ವರ್ಷಗಳವರೆಗೆ ಬದುಕಿದ್ದ ಅವರು ಅದೇ ಮನೆಯಲ್ಲಿ ಕೊನೆಗಾಲದ ಅನಾರೋಗ್ಯ ಬಿಟ್ಟರೆ ನಿಧನರಾಗುವವರೆಗೂ ನೆಮ್ಮದಿಯಿಂದ ಬಾಳಿದರು. ಮಕ್ಕಳೆಲ್ಲರೂ ಒಳ್ಳೆಯ ಉದ್ಯೋಗ ಗಳಿಸಿ ಸಮಾಜದಲ್ಲಿ ಗೌರವಸ್ಥಾನ ಪಡೆದರೂ ಬೀಗಲಿಲ್ಲ. ಕುಡುಪು ದೇವಸ್ಥಾನದ ಅಂಗಳಕ್ಕೆ ನಮ್ಮ ಜಾತಿಯವರು ಹಿಂದೆ ಇಳಿಯುತ್ತಿರಲಿಲ್ಲ. ನಾವು ಅಸ್ಪೃಶ್ಯರು. ದೊಡ್ಡಮ್ಮನ ಮಗನೊಬ್ಬ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಆದ ಮೇಲೆ ಮೊತ್ತಮೊದಲ ಬಾರಿ ದೊಡ್ಡಮ್ಮ ದೇವಸ್ಥಾನದ ಅಂಗಳಕ್ಕೆ ಕಾಲಿಟ್ಟರು.


ಅದೇನೂ ದೊಡ್ಡ ಭಾಗ್ಯ ಅಥವಾ ದೊಡ್ಡ ಸಾಧನೆಯೆಂಬ ಭ್ರಮೆ ಅವರಿಗಿರಲಿಲ್ಲ. ಹೋಗದೇ ಇರುವುದು ದೊಡ್ಡ ಕೊರತೆಯೆಂಬ ಭಾವವೂ ಇರಲಿಲ್ಲ. ರೆಕ್ಕೆ ಬಲಿಯಿತು, ಹಕ್ಕಿ ಹಾರಿತು ಎಂಬ ಭಾವವಿತ್ತೇ ಹೊರತು, ಮಕ್ಕಳು ತನ್ನತ್ತ ಮುಖ ಮಾಡುತ್ತಿರಬೇಕು ಎಂದು ಆಶಿಸಿದವರಲ್ಲ. ಮಕ್ಕಳಲ್ಲಿ ಭಿನ್ನಾಭಿಪ್ರಾಯಗಳು ಮೂಡಿದಾಗ ಇದೆಲ್ಲಾ ಮನುಷ್ಯ ಮನುಷ್ಯರೊಳಗೆ ಸಹಜವಾದ ಗುಣಗಳು ಎಂದು ತನ್ನ ಪಾಡಿಗೆ ತಾನಿರುವುದೇ ವಾಸಿ ಎಂದು ತಿಳಿದುಕೊಂಡರು. ವಿದ್ಯಾವಂತ ಮಕ್ಕಳ ಕೆಲವು ಸಣ್ಣತನಗಳನ್ನು ಕಂಡು ಕೆರಳಿ ಬುದ್ಧಿ ಹೇಳಿದರು. ಅವರ ದೊಡ್ಡತನ, ಸದ್ಗುಣಗಳನ್ನು ಹರಸಿದರು. ತಾನು ಕುಟುಂಬಕ್ಕೆ ಮಾಡುವ ಕರ್ತವ್ಯದಲ್ಲಿ ಕಿಂಚಿತ್ತೂ ಲೋಪವಾಗದಂತೆ ನೋಡಿಕೊಂಡ ದೊಡ್ಡಮ್ಮ ತೀರಿದ ಮೇಲೆ ದೊಡ್ಡ ಮನೆಯ ಶೋಭೆಯೇ ನಾಶವಾಯಿತು. ಈಗ ಮೊಮ್ಮಕ್ಕಳ ಕಾಲದಲ್ಲಿ ಮನೆಯೂ ನಾಶವಾಗಿದೆ. ಜಾಗದಲ್ಲಿ ಮಂಜಪ್ಪಜ್ಜ  ಆರಾಧಿಸುತ್ತಿದ್ದ ದೇವರು ದೈವಗಳಿಗೆ ಒಂದು ಗುಡಿಯೂ ನಿರ್ಮಾಣವಾಗುತ್ತಿದೆ. ಮನೆಯೆಂಬ ಗುಡಿಯನ್ನು ಮನಸ್ಸುಗಳು ಕಟ್ಟಬೇಕು. ಕಲ್ಲು  ಮಣ್ಣು ಇಟ್ಟಿಗೆಗಳಲ್ಲ. ಮನಸ್ಸುಗಳನ್ನು ಕಟ್ಟಲಾಗದವರು ರೀತಿಯ ಗುಡಿಗಳಿಂದಾದರೂ ಒಂದಾಗಿ ಬೆರೆಯುವಂತಾಗಲಿ ಎಂಬ ಆಶಯ ಈಗ ಎಲ್ಲರದೂ ಆಗಿದೆ.

ದೊಡ್ಡಮ್ಮನ ಸ್ವಯಂ ನಿರ್ಮಿತ ವ್ಯಕ್ತಿತ್ವದ ಮುಂದೆ ಯಮುನಾ ಚಿಕ್ಕಮ್ಮನ ವ್ಯಕ್ತಿತ್ವ ತೀರಾ ಪೇಲವವಾಗಿ ಕಾಣುತ್ತದೆ. ಚಿಕ್ಕಮ್ಮ ಮತ್ತು ಬಾಲಕೃಷ್ಣ ಮಾವನನ್ನು ಅಣ್ಣ ತಂಗಿಯರಿಗೆ ಪಗರ್ ಸಾಟೆಯಾಗಿ ಮದುವೆ ಮಾಡಿಕೊಡಲಾಗಿತ್ತು. ಕಾಞಂಗಾಡಿನ ಕೋರ್ಟಿನಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದ ದಾಮೋದರ ಚಿಕ್ಕಪ್ಪನದು ಆಕರ್ಷಕ ವ್ಯಕ್ತಿತ್ವ. ಅವರ ತಂಗಿ ಶ್ರೀಮತಿ ಮತ್ತು ಬಾಲಕೃಷ್ಣ ಮಾವನದ್ದು ಅನುರೂಪ ದಾಂಪತ್ಯ. ಯಮುನಾ ಚಿಕ್ಕಮ್ಮನಿಗೆ ಅಸ್ತಮಾ ಬಾಧೆ ಕಾಡುತ್ತಿದ್ದುದರಿಂದ ಒಂದು ರೀತಿಯ ಕೀಳರಿಮೆ ಇತ್ತು. ಚಿಕ್ಕಪ್ಪನಿಗೆ ಚಿಕ್ಕಮ್ಮನ ಕಾಯಿಲೆ ಒಂದು ಕೊರತೆಯಾಗಿ ಕಂಡಿರಲಿಲ್ಲ. ನಾಲ್ಕು ಮಕ್ಕಳ ಸುಖೀ ಸಂಸಾರ ಅವರದು.

ಒಂದು ದಿನ ಯಾವುದೋ ಶುಭ ಸಮಾರಂಭಕ್ಕೆ ಮಂಗಳೂರಿಗೆ ಬಂದಿದ್ದ ಚಿಕ್ಕಮ್ಮ ಮನೆ ಹುಡುಕಿಕೊಂಡು ನಮ್ಮ ಪುಟ್ಟ ಬಾಡಿಗೆ ಮನೆಗೆ ಬಂದಿದ್ದರು. ಅಮ್ಮನಿಗೂ ತಂಗಿಯನ್ನು ಕಂಡು ಹೃದಯ ಅರಳಿತು. ಯಾಕೆಂದರೆ ಅಮ್ಮನ ಬಂಧುಗಳು ನಮ್ಮ ಮನೆಗೆ ಬರುವುದೇ ಅಪರೂಪದ ಸಂಗತಿಯಾಗಿತ್ತು. ಅಕ್ಕ ತಂಗಿ ಭೇಟಿಯಾಗದೆ ಹಲವು ವರ್ಷಗಳಾಗಿದ್ದವು. ಮನ ಬಿಚ್ಚಿ ಮಾತನಾಡಿದರು. ಹೋಗುವಾಗ ಚಿಕ್ಕಮ್ಮ ಅಕ್ಕಾ, ನೀನೇ ಭಾಗ್ಯವಂತೆ. ನಿನಗೆ ಸ್ವಂತ ದುಡಿಮೆ ಇದೆ. ಯಾರ ಕೈ ಕಾಯಬೇಕಾಗಿಲ್ಲ. ನನ್ನದೇನಿದ್ದರೂ ಪರಾವಲಂಬಿ ಬದುಕು ಎಂದು ಹೇಳಿದ್ದು ಕೇಳಿ ಅಮ್ಮ ದಂಗಾದಳು. ದೊಡ್ಡ ಮನೆ. ಆರ್ಥಿಕವಾಗಿ ಉತ್ತಮ ಸ್ಥಿತಿವಂತ ಗಂಡನಿದ್ದರೂ ಅವಳು ತೃಪ್ತಿಯಿಂದಿಲ್ಲ ಎಂದು ಅಮ್ಮ ಅರಿತಳು. ದುಡಿಯುತ್ತೇನೆ ಎಂಬುದು ಬಿಟ್ಟರೆ ನಮ್ಮದು ಇವತ್ತಿಗೇನು ನಾಳೆಗೇನು ಎಂಬಂತಹ ಬದುಕು. ಸಾಕಷ್ಟಿದ್ದರೂ ಸಾಲದು ಎನ್ನುವವರಿಗೆ ಎಷ್ಟಿದ್ದರೂ ತೃಪ್ತಿ ಇರುವುದಿಲ್ಲ. ನಾವು ತೃಪ್ತಿಯಲ್ಲಿ ಸುಖ ಕಾಣುವವರು. ಚಿಕ್ಕಮ್ಮ ಸುಖದಲ್ಲಿಯೂ ತೃಪ್ತಿ ಕಾಣಲಾಗದವರು. ಅಂತಹ ಚಿಕ್ಕಮ್ಮ ಕಾಞಂಗಾಡಿಗೆ ಮರಳಿ ಕೆಲವು ತಿಂಗಳಾಗಿರಬಹುದು. ಅವರು ಆತ್ಮಹತ್ಯೆ ಮಾಡಿಕೊಂಡರೆಂಬ ಆಘಾತಕಾರಿ ಸುದ್ದಿ ತಲುಪಿತು. ಮಕ್ಕಳು ನಾಲ್ವರೂ ೧೫ ವರ್ಷದೊಳಗಿನವರು. ಚಿಕ್ಕಪ್ಪನಿಗೆ ೪೦ ವರ್ಷವಾಗಿರಬಹುದು. ಯಾಕೆ ಇಂತಹ ಕೃತ್ಯವೆಸಗಿದರೆಂಬ ಸಂದೇಹ ಎಲ್ಲರನ್ನೂ ಕಾಡತೊಡಗಿತು. ಚಿಕ್ಕಮ್ಮನಿಗೆ ಕೀಳರಿಮೆಯ ಜೊತೆಯಲ್ಲಿ ಅನುಮಾನ ಪ್ರವೃತ್ತಿಯೂ ಇತ್ತು. ಅದೇ ಅವರನ್ನು ಬಲಿ ತೆಗೆದುಕೊಂಡಿತು ಎಂದು ತಿಳಿಯಿತು. ಹಿರಿಮಗಳು ನಿರ್ಮಲಾ ತಾಯಿ ಇಲ್ಲದ ಮನೆಯನ್ನು ಅಷ್ಟು ಚಿಕ್ಕ ವಯಸ್ಸಿನಲ್ಲೇ ಸಂಭಾಳಿಸಿದ್ದು ನಿಜಕ್ಕೂ ಶ್ಲಾಘನೀಯ. ಹೆಣ್ಣುಮಕ್ಕಳಿಗೆ ಶಕ್ತಿ ನಿಸರ್ಗದತ್ತವಾಗಿ ಬಂದಿದೆಯೇ? ಇರಲೂಬಹುದು. ಎಷ್ಟೋ ಮನೆಗಳು ಹೆಣ್ಮಕ್ಕಳ ಸಹನೆ ಮತ್ತು ತ್ಯಾಗದಿಂದಾಗಿಯೇ ಮನೆಯಾಗಿ ಉಳಿದಿವೆ. ನೆಮ್ಮದಿಯ ಬದುಕನ್ನು ಕಂಡಿವೆ.

ಹಿರಿಮಗಳು ನಿರ್ಮಲಾಗೆ ಮದುವೆ ಮಾಡಿಕೊಟ್ಟ ಮೇಲೆ ಗಂಡು ಮಕ್ಕಳಿಬ್ಬರೂ ಉದ್ಯೋಗವನ್ನರಸಿ ದೂರದ ಪಟ್ಟಣಗಳನ್ನು ಸೇರಿದ ಮೇಲೆ  ಕಿರಿಮಗಳು ಸುಮಿತ್ರೆಯಿದ್ದರೂ ಚಿಕ್ಕಪ್ಪನಿಗೆ ಇಷ್ಟು ದೊಡ್ಡ ಮನೆಯನ್ನು ನಾಳೆ ನಾನು ನಿಭಾಯಿಸಲಾರೆ ಎಂಬ ಭಾವ ಕಾಡತೊಡಗಿ ಅವರ ೪೫ನೇ ವಯಸ್ಸಿನಲ್ಲಿ ಮರುಮದುವೆಯಾದರು. ಶಿಕ್ಷಕ ತರಬೇತಿ ಪಡೆಯುತ್ತಿದ್ದ ನಾನಾಗ ಖುಷಿಯಿಂದ ಅವರಿಗೆ ಪತ್ರ ಬರೆದಿದ್ದೆ. ಚಿಕ್ಕಪ್ಪ ಮರು ಟಪ್ಪಾಲಿಗೆ ಉತ್ತರಿಸಿದ್ದರು. ಮಗಳೇ, ನೀನು ಮಾತ್ರ ನನ್ನ ಮರುಮದುವೆಯನ್ನು ಬೆಂಬಲಿಸಿ ಬರೆದೆ. ಬೇರಾರಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿಲ್ಲ ಎಂದು ಬರೆದಿದ್ದರು. ಶಿಕ್ಷಕಿಯಾಗಿದ್ದ ಗಿರಿಜ ಚಿಕ್ಕಮ್ಮ ಕೆಲಸಕ್ಕೆ ರಿಸೈನ್ ಮಾಡಿ ಚಿಕ್ಕಪ್ಪನ ಬಾಳಸಂಗಾತಿಯಾದರು. ಅವರಿಗೆ ಅದು ಮೊದಲ ಮದುವೆಯಾದ ಕಾರಣ ಬಹಳ ನಿರೀಕ್ಷೆಗಳಿದ್ದುವೇನೋ? ಮೊದಮೊದಲು ಹೊಂದಿಕೊಳ್ಳಲು ಸ್ವಲ್ಪ ಕಷ್ಟವಾದರೂ ಚಿಕ್ಕಪ್ಪನ ಪ್ರೀತಿಯ ಅಂತಃಕರಣಕ್ಕೆ ಮಣಿಯಲೇಬೇಕಾಯಿತು. ಕವಿವಾಣಿಯಂತೆ ನಾ ನಿನಗೆ ನೀನೆನಗೆ ಜೇನಾಗುವಾ ರಸದೇವ ಗಂಗೆಯಲಿ ಮೀನಾಗುವಾ ಎಂಬಂತೆ ಸುಖವಾಗಿ ಬಾಳಿದರು. ಒಂದು ಸಣ್ಣ ಅನುಮಾನ ಯಮುನೆಯನ್ನು ಎಂತಹ ದುರಂತಕ್ಕೆ ಈಡು ಮಾಡಿತಲ್ಲಾ. ಅವಳಿಗೆ ಮಕ್ಕಳ ಸೌಭಾಗ್ಯವನ್ನು ಉನ್ನತಿಯನ್ನು ನೋಡುವ ಭಾಗ್ಯವಿಲ್ಲದಾಯಿತಲ್ಲಾ ಎಂದು ನನ್ನ ಅಮ್ಮ ಆಗಾಗ ಅವರ ಸುಖ ನೆಮ್ಮದಿಯನ್ನು ಕಂಡು ಪರಿತಪಿಸುತ್ತಿದ್ದಳು.

ಆತ್ಮಹತ್ಯೆ ಮಾಡಿಕೊಳ್ಳುವವರು ಕ್ಷಣದಲ್ಲಿ ತನ್ನ ದುಃಖ ಪರಿಹಾರಕ್ಕಾಗಿ ಯಾರಾದರೂ ಬರಬಹುದೇ ಎಂದು ಎಷ್ಟು ನಿರೀಕ್ಷಿಸುತ್ತಿರಬಹುದೋ ಏನೋ? ಒಂದು ಕ್ಷಣ ಮನಸ್ಸು ವಿಚಲಿತಗೊಂಡರೂ ಅವರು ನಿರ್ಧಾರದಿಂದ ದೂರ ಸರಿಯುತ್ತಾರೆ. ಗಟ್ಟಿ ಮನಸ್ಸಿನಲ್ಲಿ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿ ಮುನ್ನುಗ್ಗುವ ಕ್ಷಣ ಅವರ ಪಾಲಿಗೆ ಅಮೂಲ್ಯವೆಂದೇ ಭಾವಿಸುತ್ತಾರೆ. ಸಮಾಜದ ದೃಷ್ಟಿಯಲ್ಲಿ ಅವರು ಸಾವಿಗೆ ಮನ ತೆತ್ತದ್ದು ಕ್ಷುಲ್ಲಕ ಕಾರಣವೆಂದು ಅನಿಸಬಹುದು. ಅವರಿಗದು ಇಡೀ ಬದುಕಿನ ಪ್ರಶ್ನೆಯಾಗಿ ಕಾಣುತ್ತದೆ. ಕಾಡುತ್ತದೆ. ನೆಮ್ಮದಿಯ ಬದುಕಿನ ಸಾವಿರಾರು ಬಾಗಿಲುಗಳನ್ನು ಅವರಿಗೆ ತೆರೆದು ತೋರಿಸುವವರೊಬ್ಬರು ತಕ್ಷಣದಲ್ಲಿ ಹತ್ತಿರದಲ್ಲಿ ಒದಗಿ ಬರುತ್ತಿದ್ದರೆ ಕಠಿಣ ನಿರ್ಧಾರದಿಂದ ಹಿಂದೆ ಸರಿಯುವ ಸಾಧ್ಯತೆಗಳಿವೆ. ಹಾಗಾಗದ ಕಾರಣ ಎಷ್ಟೋ ಗಂಡು ಹೆಣ್ಣುಗಳು ಆತ್ಮಹತ್ಯೆಯ ದುರಂತವನ್ನಪ್ಪುತ್ತಾರೆ. ನನ್ನಪ್ಪನ ಸೋದರಮಾವನ ಮಗಳೊಬ್ಬಳು ೧೪ ವರ್ಷದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆಯನ್ನು ನೆನೆದಾಗ ಕರುಳಲ್ಲಿ ಕತ್ತರಿಯಾಡಿಸಿದಂತಾಗುತ್ತದೆ. ಪೂವಮ್ಮಜ್ಜಿಯ (ತಂದೆಯ ತಾಯಿ) ಅಣ್ಣ ದರ್ಗಾಸಿನಜ್ಜನೆಂದೇ ನಮಗೆ ಪರಿಚಿತರು. ಪ್ರಸಿದ್ಧ ವೈದ್ಯರು. ಅವರ ಹಿರಿಮಗಳು ಬಹಳ ಸುಂದರಿಯಂತೆ. ಪೂವಮ್ಮಜ್ಜಿ ಮಗುವನ್ನು ತೊಟ್ಟಿಲಿಗೆ ಹಾಕುವ ಸಂದರ್ಭದಲ್ಲಿ ಅಣ್ಣನ ಮನೆಗೆ ಹೋಗಿದ್ದಾಗ ಇದು ನನ್ನ ಕಣ್ಣನಿಗೆ ಎಂದು ಅಣ್ಣ ಅತ್ತಿಗೆಯರ ಮುಖ ನೋಡಿ ಹೇಳಿದ್ದರಂತೆ. ಅಣ್ಣ ತಂಗಿಯರೊಳಗೆ ಮಾತು ಶಿಲಾಶಾಸನದಂತೆ ಶಾಶ್ವತವಾಗಿ ನಿಂತುಬಿಟ್ಟಿತು. ಹಿರಿಮಗಳು ಸುಂದರಿ ಮಾತ್ರವಲ್ಲ ಪ್ರತಿಭಾವಂತೆಯೂ ಬುದ್ಧಿವಂತೆಯೂ ಆಗಿದ್ದಳು. ಅಕ್ಷರಾಭ್ಯಾಸವಿಲ್ಲದಿದ್ದರೂ ಶಿಕ್ಷಣದ ಬಗ್ಗೆ ಆಸಕ್ತಿ ಮತ್ತು ಗೌರವವಿದ್ದವಳು. ಇವರು ಹುಟ್ಟಿದಾಗಲೇ ಹಿರಿಯರು ನಿಗದಿಪಡಿಸಿದ ವರನಿಗೆ ಎದೆ ಸೀಳಿದರೂ ಒಂದಕ್ಷರ ಬಾರದವನು. ಗರಡಿಯಲ್ಲಿ ಸಾಮು ಮಾಡಿದ ಸದೃಢವಾದ ದೇಹವುಳ್ಳವ ಮತ್ತು ಒಳ್ಳೆಯ ಗುಣನಡತೆಯುಳ್ಳ ಸಜ್ಜನ ಹೃದಯವಂತ. ಹೆಣ್ಣಿಗೆ ತಿರಸ್ಕಾರಯೋಗ್ಯವಾದ ಯಾವ ಗುಣಗಳೂ ಕಣ್ಣ ಚಿಕ್ಕಪ್ಪನಲ್ಲಿರಲಿಲ್ಲ. ಆದರೆ ಕೊಟ್ಟ ಮಾತಿನಂತೆ ಕಣ್ಣನಿಗೇ ಮದುವೆ ಮಾಡುವ ತಯಾರಿ ನಡೆಯಿತು. ಯಾಕೆಂದರೆ ಹುಡುಗಿಗೆ ೧೪ ತುಂಬಿದ ಮೇಲೆ, ವರನು ಅಂಗೈಯಲ್ಲೇ ಇದ್ದ ಮೇಲೆ ಕಾಯುವುದರಲ್ಲಿ ಅರ್ಥವಿಲ್ಲವೆಂದು ದರ್ಗಾಸಿನಜ್ಜ ಅವಸರಿಸಿದರು. ಅದಲ್ಲದೆ ಅವಳ ಹಿಂದೆ ಮದುವೆಗೆ ಸಿದ್ಧರಾಗುತ್ತಿರುವ ತಂಗಿಯಂದಿರಿದ್ದರು. ಮದುವೆಗೆ ತಿಂಗಳ ಮೊದಲು ನನ್ನಪ್ಪ ಒಂದು ದಿನ ದರ್ಗಾಸಜ್ಜನ ಮನೆಗೆ ಹೋದಾಗ ಹಿರಿಮಗಳು ಸುಂದರಿ (ಮದುಮಗಳು) ಏಯ್, ನಿನಗೆ ಸುಭದ್ರಾಕಲ್ಯಾಣದ ಕತೆ ಗೊತ್ತೇನೋ? ರುಕ್ಮಿಣೀ ಸ್ವಯಂವರದ ಕತೆ ಗೊತ್ತೇನೋ? ಹೇಳೋ ಮಾರಾಯ ಎಂದು ದುಂಬಾಲು ಬಿದ್ದಳಂತೆ. ಈಗ ಕತೆ ಹೇಳಲು ಸಮಯವಿಲ್ಲ. ಮದುವೆಯಾಗಿ ಬರ್ತೀಯಲ್ಲಾ ಆಗ ಹೇಳ್ತೇನೆ ಎಂದರಂತೆ. ಅಲ್ಲೇ ಚಾವಡಿಯ ಮೂಲೆಯಲ್ಲಿದ್ದ ಮೇಜಿನ ಮೇಲೆ ಅವಳು ಮಾಡಿದ ಬೊಂಬೆಗಳಿದ್ದವು. ಹೆಣ್ಣು ಬೊಂಬೆಗೆ ಸೊಗಸಾಗಿ ಅಲಂಕಾರ ಮಾಡಿದ್ದಳು. ಗಂಡು ಬೊಂಬೆಗೂ ಅಲಂಕಾರವೇನೋ ಮಾಡಿದ್ದಳು. ಆದರೆ ಅದಕ್ಕೆ ಕಣ್ಣೇ ಬರೆದಿರಲಿಲ್ಲವಂತೆ. ಅಪ್ಪ ಯಾಕೋ ಇದಕ್ಕೆ ಕಣ್ಣು ಬರೆಯಲಿಲ್ಲ ಎಂದು ಅವಳನ್ನು ಕೇಳಿದಾಗ ಆಕೆ ಹೆಣ್ಣಿಗೆ ಕಣ್ಣಿದ್ದರೆ ಸಾಲದೇ? ಗಂಡಿಗೇಕೆ ಬೇಕು? ಎಂದು ಮರುಪ್ರಶ್ನೆ ಹಾಕಿದಳಂತೆ. ಗಲಿಬಿಲಿಗೊಂಡ ಅಪ್ಪ ಕಣ್ಣಿಲ್ಲದ ಗಂಡು ಹೆಣ್ಣನ್ನು ಸಂಸಾರದ ಹೊಂಡಕ್ಕೆ ದೂಡಿದರೆ? ದಾರಿ ತೋರಿಸಬೇಕಾದವ ಹೀಗಿರುವುದು ಸರಿಯಲ್ಲ. ಗಂಡಿಗೆ ಕಣ್ಣಿರಲೇಬೇಕು ಎಂದರಂತೆ. ಹೌದಾ? ಹಾಗಾದರೆ ನೀನೇ ಗಂಡಿಗೆ ಕಣ್ಣನ್ನು ಬರಿ ಎಂದು ಕಡ್ಡಿಯನ್ನು ಮಸಿಯಲ್ಲಿ ಅದ್ದಿ ಕೊಟ್ಟಳಂತೆ. ಹೋಗೇ, ನನಗೆ ಗೊತ್ತಿಲ್ಲ. ನಿನ್ನ ಗೊಂಬೆಗೆ ನಾನ್ಯಾಕೆ ಕಣ್ಣು ಬಿಡಿಸಲಿ? ಎಂದು ಎದ್ದು ಸೋದರಮಾವನ ಬಳಿಗೆ ಹೋದರಂತೆ. ಅವಳ ಮಾತುಕತೆ, ಚಲನವಲನಗಳು, ಹಾವಭಾವಗಳೆಲ್ಲವೂ ಬದಲಾದಂತೆ ಕಂಡಿತು ಅಪ್ಪನಿಗೆ. ಬಾಲ್ಯದ ಮುಗ್ಧತೆ ಇರಲಿಲ್ಲ. ನಗುವಿರಲಿಲ್ಲ. ಪ್ರೌಢತೆಯ ಗಾಂಭೀರ್ಯವಿತ್ತು. ಬಹುಶಃ ಮದುವೆ ಎಂದಾಗ ಹೆಣ್ಣುಮಕ್ಕಳಲ್ಲಿ ಇಂತಹ ಗಂಭೀರತೆ ಸಹಜವಾಗಿ ಬರುತ್ತದೇನೋ ಎಂದು ಅಪ್ಪ ಭಾವಿಸಿದ್ದರಂತೆ. ಕೆಲವೇ ದಿನಗಳಲ್ಲಿ ಅವಳ ಮದುವೆ ಕಣ್ಣ ಚಿಕ್ಕಪ್ಪನೊಂದಿಗೆ ಸಡಗರದಿಂದಲೇ ನಡೆಯಿತು. ಅಣ್ಣನಿಗಿಂತ ಮೊದಲೇ ತಮ್ಮ ಮದುವೆಯಾದ ಅಪರೂಪದ ಪ್ರಸಂಗವಿದು. ಮದುವೆಯಾದ ದಿನ ರಾತ್ರಿ ಹೆಣ್ಣು ಗಂಡಿನ ಮನೆಗೆ ಹೋಗುವ ಕ್ರಮ ನಮ್ಮಲ್ಲಿಲ್ಲ. ವಧುವಿನ ಮನೆಯಲ್ಲಿ ಔತಣವೇರ್ಪಡಿಸಿ ವರನ ಕುಟುಂಬದೊಂದಿಗೆ ಹೆಣ್ಣನ್ನು ಕಳಿಸಿಕೊಡುವುದು ಸಂಪ್ರದಾಯ. ಮದುವೆಯಾದ ದಿನ ಗಂಡು ತನ್ನ ಮನೆಗೇ ಹೋಗಬೇಕು. ಆದರೆ ಮದುಮಗಳು ಕಣ್ಣ  ಚಿಕ್ಕಪ್ಪನನ್ನು ಮನೆಯಲ್ಲೇ ಉಳಿಯಬೇಕೆಂದು ಹಠ ಮಾಡಿದಳಂತೆ. ಸೋದರಮಾವನ ಮನೆಯೇ ಆದುದರಿಂದ ಯಾರದೂ ಆಕ್ಷೇಪವಿರಲಿಲ್ಲ. ಅಲ್ಲದೆ ವಧೂ ವರರ ಮನೆಯೂ ಮೂರ್ನಾಲ್ಕು ಕಿ.ಮೀ. ಅಂತರದೊಳಗೇ ಇತ್ತು. ರಾತ್ರಿ ಮದುಮಗನ ಊಟವಾದ ಬಳಿಕ ವಧು ಅವನನ್ನು ತನ್ನ ಕೋಣೆಗೆ ಕರೆದಳು. ಇಷ್ಟರವರೆಗೆ ಬಹಳ ಗಂಭೀರವಾಗಿ ವರ್ತಿಸುತ್ತಿದ್ದ ಆಕೆ ಅಂದು ತುಂಬಾ ಮಾತಾಡತೊಡಗಿದಳಂತೆ. ಕಣ್ಣಿಲ್ಲದ ಗಂಡು ಬೊಂಬೆಯನ್ನು ತೋರಿಸಿ ಏನೇನೋ ಪ್ರಶ್ನೆ ಕೇಳಿದಳಂತೆ. ಯಾವುದೋ ರಾಜಕುಮಾರಿಯ ಕತೆ ಹೇಳಿದಳಂತೆ. ಮನೆಯವರೆಲ್ಲರೂ ಮಲಗಿದರೂ ಅವರ ಕೋಣೆಯೊಳನಿಗಿಂದ ಮಾತು ಕೇಳುತ್ತಿತ್ತು. ನಡು ನಡುವೆ ಅವಳು ನಗುವುದು ಕೇಳುತ್ತಿತ್ತು. ವರನ ಸ್ವರ ಮಾತ್ರ ಬಹಳ ಕ್ಷೀಣವಾಗಿ ಕೇಳಿಸುತ್ತಿತ್ತು. ಸುಮಾರು ೧೨ ಗಂಟೆಯವರೆಗೂ ಹೀಗೆ ಮಾತಾಡಿದ ಬಳಿಕ ಆಕೆ ವರನನ್ನು ನೀನಿನ್ನು ಮನೆಗೆ ಹೋಗು ಎಂದಳಂತೆ. ವರನಿಗೆ ಶಾಕ್ ಆಯಿತು. ಮಧ್ಯರಾತ್ರಿ ಎಲ್ಲಿಗೆ? ಎಂದಾಗ ಏಯ್, ನೀನು ಗಂಡಸಲ್ವೇನೋ? ನಿನಗೆಂತಹ ಹೆದರಿಕೆ? ಎಂದು ಛೇಡಿಸಿದಳಂತೆ. ಅದು ವರನನ್ನು ಕೆಣಕಿತು. ಮರುಮಾತಿಲ್ಲದೆ ಕೋಣೆಯಿಂದ ಹೊರಟು ಕಾಣೆಮಾರು ತಲುಪಿದ.

ಮರುದಿನ ಬೆಳಿಗ್ಗೆ ಗಂಟೆ ಎಂಟಾದರೂ ಕೋಣೆಯ ಬಾಗಿಲು ತೆರೆಯದ್ದನ್ನು ಕಂಡು ಕರೆದರು. ಬಾಗಿಲು ಬಡಿದರು. ಊಹೂಂ, ಸದ್ದಿಲ್ಲ. ಕಿಟಕಿಯನ್ನು ಗುದ್ದಿದರು. ಉತ್ತರವಿಲ್ಲ. ಕೊನೆಗೆ ಅಟ್ಟಕ್ಕೆ ಹತ್ತಿ ಕೋಣೆಗೆ ಇಣುಕಿದಾಗ ಕಂಡದ್ದೇನು? ವಧುವಿನ ಹೆಣ ಪಕ್ಕಾಸಿಗೆ ನೇತಾಡುತ್ತಿತ್ತು. ಮದುವೆ ಮನೆ ಮಸಣವಾದ ಕತೆ ಮಾತಿಗೆ ನಿಲುಕದ್ದು. ವರನಾದ ಕಣ್ಣ ಚಿಕ್ಕಪ್ಪ ಸುದ್ದಿ ಕೇಳಿ ವಾರದವರೆಗೆ ಮಾತೇ ಆಡಿರಲಿಲ್ಲವಂತೆ. ಅಂದು ರಾತ್ರಿ ಮನೆಗೆ ನಡೆದುಕೊಂಡು ಹೋಗುವಾಗ ಇವಳಿಗೆ ತಾನು ಯೋಗ್ಯ ವರನಲ್ಲವೆಂಬ ಸಂದೇಹ ಉಂಟಾಗಿತ್ತಂತೆ. ತನಗೆ ಗೊತ್ತಿಲ್ಲದ ಕತೆಗಳನ್ನು ಹೇಳುತ್ತಾ ಚಿಕ್ಕಪ್ಪನ ಪೆದ್ದುತನವನ್ನು ಸೂಕ್ಷ್ಮವಾಗಿ ಲೇವಡಿ ಮಾಡಿದ್ದಳಂತೆ. ಹಾಗಾಗಿ ತಾನೂ ಇಂತಹ ಕತೆಗಳನ್ನು ಕೇಳಿ ಕಲಿತುಕೊಳ್ಳಬೇಕು ಎಂದು ನಿರ್ಧರಿಸಿದ್ದರಂತೆ. ಇಂತಹ ಕಠಿಣ ನಿರ್ಧಾರ ತೆಗೆದುಕೊಂಡಾಳು ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ತನ್ನ ಇಚ್ಛೆಯೇನು ಎಂಬುದನ್ನು ಆಕೆ ಹೆತ್ತವರಲ್ಲಿ ಹೇಳುತ್ತಿದ್ದರೆ ಅವರು ಒಪ್ಪುತ್ತಿದ್ದರೇ? ಬಹುಶಃ ಇಲ್ಲ. ಕಣ್ಣ ಚಿಕ್ಕಪ್ಪನಿಗೆ ಆಕೆಯ ಮೇಲೆ ಅಂತಹ ಆಕರ್ಷಣೆಯೇನೂ ಇರಲಿಲ್ಲ. ಹಿರಿಯರು ಕೊಟ್ಟ ಮಾತಿನಂತೆ ನಡೆದುಕೊಂಡರು ಅಷ್ಟೇ. ಒಂದು ಮುಗ್ಧ ಜೀವವನ್ನು ಹಿರಿಯರು ಹೀಗೆ ಕೊಂದರು. ನನಗೆ ಕಲಿತ ಹುಡುಗನೇ ಬೇಕು ಎಂದು ಹೇಳುವ ಕೌಟುಂಬಿಕ ವಾತಾವರಣವೇ ಆಗ ಇರಲಿಲ್ಲವಲ್ಲಾ. ಹಾಗಾಗಿ ದುರಂತ ನಡೆಯಿತು.

ದರ್ಗಾಸಜ್ಜನ ಮುದ್ದಿನ ಮಗಳಾದ ಆಕೆಗೆ ಕತೆಗಳನ್ನು ಹೇಳಿಯೇ ಅವರು ಬೆಳೆಸಿದ್ದರು. ಆಕೆ ನಿಧಿಯನ್ನು ಕೊಟ್ಟವಳಾದ ಕಾರಣ ನಿಧಿಯಂತೆಯೇ ಪೋಷಿಸಿದ್ದರು. ಒಂದು ದಿನ ದರ್ಗಾಸಿನ ಗುಡ್ಡೆಯ ಮೇಲೆ ಬಾಲ್ಯದಲ್ಲಿ ಆಕೆ ದನ ಮೇಯಿಸುತ್ತಿದ್ದಾಗ ಒಂದು ಸಣ್ಣ ಬಟ್ಟೆಯ ಗಂಟು ಸಿಕ್ಕಿತಂತೆ. ಸುತ್ತಮುತ್ತ ಯಾರೂ ಇಲ್ಲದ್ದರಿಂದ ಅದನ್ನು ಮನೆಗೆ ತಂದಳಂತೆ. ಗಂಟಿನಲ್ಲಿ ಬೆಳ್ಳಿಯ ನಾಣ್ಯಗಳಿದ್ದುವಂತೆ. ಆಮೇಲೆ ಅವರು ಅಭಿವೃದ್ಧಿ ಹೊಂದಿದರಂತೆ. ಕತೆಗಳು ಪಿಸುದನಿಯಲ್ಲಿ ಕೇಳಿದವುಗಳೇ ಹೊರತು ಇದಕ್ಕೆ ದಾಖಲೆಗಳಿಲ್ಲ. ನನ್ನಪ್ಪ ಪಿಸುದನಿಯಲ್ಲಿ ಕೇಳಿದ ಕತೆಯನ್ನು ನನ್ನ ಕಿವಿಗೆ ದಾಟಿಸಿದ್ದರು. ಇವುಗಳನ್ನು ಗಟ್ಟಿ ದನಿಯಲ್ಲಿ ಹೇಳುವುದು ಸಾಧ್ಯವೂ ಇರಲಿಲ್ಲ. ಅಂತದೇ ಒಂದು ಕತೆ ನಮ್ಮ ಪರಿಚಿತ ಮನೆತನದ ಬಗ್ಗೆಯೂ ಕೇಳಿದ್ದೇನೆ. ಈಗ ಹೇಳಿದರೆ ಯಾರೂ ಒಪ್ಪಲಾರರು. ನಾಲ್ಕೈದು ತಲೆಮಾರುಗಳ ಹಿಂದೆ ಮನೆತನದ ಹೆಣ್ಣುಮಗಳೊಬ್ಬಳನ್ನು ಬ್ರಿಟಿಷ್ ದೊರೆಗಳು ಪ್ರೇಯಸಿಯಾಗಿ ಇಟ್ಟುಕೊಂಡಿದ್ದರಂತೆ. ಹಾಗಾಗಿ ಕಾಲದಲ್ಲಿ ಸಾಕಷ್ಟು ಜಮೀನು ಅಲ್ಲದೆ ಊರಲ್ಲಿ ಯಾರಿಗೂ ಇಲ್ಲದ ಸುಂದರವಾದ ಮಾಳಿಗೆ ಮನೆಗಳೆಲ್ಲಾ ಇದ್ದುವು. ಪ್ರಾರಂಭದಲ್ಲಿ ಕುಟುಂಬಕ್ಕೆ, ಮನೆತನಕ್ಕೆ ಕಳಂಕವೆಂಬ ಭಾವವಿದ್ದಿರಬಹುದು. ಕ್ರಮೇಣ ಸಂಪತ್ತು, ಧನ, ದೌಲತ್ತುಗಳು ಕಳಂಕವನ್ನು ತೊಳೆದು ಹಾಕಿದೆ. ತಮ್ಮದು ಬಹಳ ಪರಿಶುದ್ಧ ಮನೆತನ, ಶುದ್ಧ ರಕ್ತ ಎಂಬು ಬೀಗುವವರನ್ನು ಕಂಡಿದ್ದೇನೆ. ಕಾಲಚಕ್ರದ ಉರುಳುವಿಕೆಯಲ್ಲಿ ಹೊಸ ರಕ್ತ ಸೇರುವುದು, ನವೀಕರಣಗೊಳ್ಳುವುದು ಮಾನವ ಚರಿತ್ರೆಯಲ್ಲಿ ಸಾಮಾನ್ಯ ಸಂಗತಿಗಳಾಗಿವೆ. ಕರಾವಳಿಯು ಕ್ರಿಸ್ತಪೂರ್ವದಿಂದಲೇ ವ್ಯಾಪಾರಕ್ಕೆ ತೆರೆದುಕೊಂಡಿದ್ದ ಕಾರಣ ಇಲ್ಲಿನ ಜನಸಮುದಾಯದಲ್ಲಿ ಭಿನ್ನ ಭಿನ್ನ ದೇಶದ ರಕ್ತಸಂಬಂಧಗಳು ಇಲ್ಲಿ ಬೆಸೆದಿವೆ. ಎಚ್.ಎಲ್. ನಾಗೇಗೌಡರು ಸಂಪಾದಿಸಿದ ಕೃತಿಯಲ್ಲಿ ಪ್ರವಾಸಿ ಕಂಡ ಇಂಡಿಯಾದ ಪ್ರವಾಸಿಗಳು ನಡೆದ ಘಟನೆಗಳನ್ನು ದಾಖಲಿಸಿದ್ದಾರೆ. ಇಲ್ಲಿನ ಹೆಣ್ಣುಮಕ್ಕಳನ್ನು ಮದುವೆಯಾದವರು ಕೆಲವರಾದರೆ, ತತ್ಕಾಲದ ಪ್ರೇಯಸಿಗಳಾಗಿ ಇರಿಸಿಕೊಂಡವರು ಹಲವರು. ಇನ್ನು ವೇಶ್ಯಾವಾಟಿಕೆಗಳಂತೂ ಹೇರಳವಾಗಿದ್ದವು. ಇದರಿಂದಾಗಿ ಹತ್ತಿಸಿಕೊಂಡ ರೋಗಕ್ಕೆ 'ಪರಂಗಿ ರೋಗ'ವೆಂದೇ ಹೆಸರಿತ್ತು. ವಸಾಹತುಶಾಹಿ ಎಲ್ಲೆಲ್ಲಿ ತನ್ನ ಸಾಮ್ರಾಜ್ಯ ಸ್ಥಾಪನೆ ಮಾಡಿತೋ ಅಲ್ಲೆಲ್ಲಾ ಮೊದಲು ಶೋಷಣೆಗೆ ದಕ್ಕುವವರು ಮಹಿಳೆಯರು. ಅದು ರಾಜಮಹಾರಾಜರ ಕಾಲದಲ್ಲೂ ಕಡಿಮೆಯಿರಲಿಲ್ಲ. ಗೆದ್ದ ರಾಜರು ಸೋತ ರಾಜ್ಯದಲ್ಲಿ ತಮ್ಮ ಅಧಿಪತ್ಯ ಸ್ಥಾಪಿಸುವ ಮೊದಲು ಅಲ್ಲಿನ ಹೆಂಗಸರ ಮೇಲೆ ಅತ್ಯಾಚಾರ ಮಾಡಿ ತಮ್ಮ ಪೌರುಷ ಪ್ರದರ್ಶನ ಮಾಡುವುದು ಸರ್ವೇಸಾಮಾನ್ಯವಾಗಿತ್ತು. ಆದುದರಿಂದ ತಮ್ಮದು ಬಹಳ ಮರ್ಯಾದಸ್ತ, ಕುಲೀನ ಕುಟುಂಬವೆಂದು ಬೀಗುವವರು ಒಮ್ಮೆ ಪ್ರಪಂಚದ, ಮನುಕುಲದ ಇತಿಹಾಸವನ್ನು ಓದಬೇಕು.

ಹೀಗೆ ಕುಲ ಮರ್ಯಾದೆಯಿಂದ ಬೀಗುತ್ತಿದ್ದ ನಮ್ಮ ಕುಟುಂಬವೊಂದಲ್ಲಿ ಒಬ್ಬ ಹೆಣ್ಣುಮಗಳು ಉತ್ಪಾತವನ್ನೇ ಉಂಟುಮಾಡಿದ ಘಟನೆ ನಡೆಯಿತು. ೧೬ ವರ್ಷ ತುಂಬುವುದರೊಳಗೆ ತರಾತುರಿಯಿಂದ ಮನೆ ಮಗಳಿಗೆ ಮದುವೆ ತಯಾರಿ ನಡೆಯಿತು. ತಮ್ಮ ಆರ್ಥಿಕ ಸಂಪನ್ನತೆಗೆ ಏನೇನೂ ಹೊಂದಿಕೆಯಾಗದ ಬಡ ಮನೆತನದ ಹುಡುಗನೊಂದಿಗೆ ಮದುವೆ ವಿಶೇಷ ಗೌಜಿ ಗದ್ದಲವಿಲ್ಲದೆ ಸರಳವಾಗಿ ನಡೆಯಿತು. ಮದುವೆಯ ಮೊದಲ ದಿನ ವಧುವಿನ ಹಿಂದೆ ಮುಂದೆ ಒಬ್ಬಿಬ್ಬರಾದರೂ ಗಂಡಸರು ಇಲ್ಲವೇ ಹೆಂಗಸರು ಕಾಯುತ್ತಿದ್ದರು. ರಾತ್ರಿ ಆಕೆ ಮಲಗಿದಾಗಲೂ ಬಾಗಿಲ ಬಳಿಯೇ ಕಾವಲು ಕಾಯುತ್ತಿದ್ದರಂತೆ. ಮದುವೆಗೆ ಹೋಗಿದ್ದ ಅಮ್ಮನಿಗೆ ವಧುವಿಗೆ ಏನಾದರೂ ಅನಾರೋಗ್ಯ ಬಾಧಿಸುತ್ತಿರಬಹುದೇನೋ ಎಂಬ ಸಂದೇಹ ಬಂದಿತ್ತಂತೆ. ಮನೆಯ ಹತ್ತಿರ ಸಂಬಂಧಿಗಳ ಮುಖದಲ್ಲಿ ಸಂಭ್ರಮಕ್ಕಿಂತ ಹೆಚ್ಚು ದುಗುಡದ ಕಳೆ ಹೊಡೆದು ಕಾಣುತ್ತಿತ್ತಂತೆ. ದೊಡ್ಡವರ ಮನೆಯ ಕಷ್ಟ ಸುಖ ವಿಚಾರಿಸಲು ನಾವ್ಯಾರು ಎಂದು ಅಮ್ಮ ಸುಮ್ಮನಾಗಿದ್ದರಂತೆ. ಮನೆಗೆ ಬಂದು ಅಪ್ಪನಲ್ಲಿ, ಹುಡುಗನಿಗೆ ಸರಕಾರಿ ಕೆಲಸವೂ ಅಲ್ಲದೆ ಶ್ರೀಮಂತರ ಹುಡುಗಿಯೂ ಲಭಿಸಿ ದೊಡ್ಡ ಲಾಟರಿಯೇ ಹೊಡೆದಂತಾಗಿದೆ ಎಂದು ಹೇಳಿ ಖುಷಿಯನ್ನು ಹಂಚಿಕೊಂಡಿದ್ದರು. ಯಾಕೆಂದರೆ ಹುಡುಗನ ತಾಯಿ ಬೀಜದ ಕಾರ್ಖಾನೆಯಲ್ಲಿ ದುಡಿಯುತ್ತಿದ್ದರು. ಹುಡುಗ ಕಷ್ಟಪಟ್ಟು ಕಲಿತು ಶಿಕ್ಷಕನಾಗಿ ಒಂದು ನೆಲೆಗೆ ಬಂದಿದ್ದ. ಮದುವೆಯಾದ ಮೇಲೆ ಮಂಗಳೂರಿನಲ್ಲಿ ಮನೆ ಮಾಡಿದ. ಉಡುಪಿಗೆ ವರ್ಗಾವಣೆಯಾದುದರಿಂದ ಅಮ್ಮನನ್ನು ಕೆಲಸಕ್ಕೆ ರಾಜೀನಾಮೆ ಕೊಡಿಸಿದ. ಸುಖ ಸಂಸಾರ ಪ್ರಾರಂಭವಾಯಿತು. ಆರೇಳು ತಿಂಗಳು ಕಳೆದಿರಬಹುದು. ನಾವೆಲ್ಲಾ ಬೆಚ್ಚಿ ಬೀಳುವಂತಹ ಸುದ್ದಿ ಬಂತು. ಆಕೆ ತನ್ನ ಪ್ರಿಯತಮನ ಜೊತೆಯಲ್ಲಿ ತವರುಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಳಂತೆ. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಬದುಕಿ ಉಳಿಯಲಿಲ್ಲ. ಆಕೆ ತಿಂಗಳುಗಳ ಕಾಲ ಸಾವು ಬದುಕಿನ ಹೋರಾಟದಲ್ಲಿ ಬದುಕಿ ಬಂದಳು.


ಇಲ್ಲಿ ಹಲವು ಪ್ರಶ್ನೆಗಳು ನಮ್ಮನ್ನು ಮುತ್ತಿಕೊಳ್ಳುತ್ತವೆ. ನೆರೆಮನೆಯ ಹುಡುಗನನ್ನು ಪ್ರೀತಿಸುತ್ತಾಳೆ ಮನೆಮಗಳು ಎಂದು ತಿಳಿದ ಕೂಡಲೇ ಹಿರಿಯರು ಮಾಡಿದ ತರಾತುರಿಯ ಮದುವೆ ಒಬ್ಬ ಪ್ರೇಮಿಯನ್ನು ನಿಷ್ಕರುಣೆಯಿಂದ ಕೊಲ್ಲಿಸಿತು. ಅವಳನ್ನು ಮದುವೆಯಾದ ಗಂಡನನ್ನು ಜೀವಮಾನವಿಡೀ ಕೊರಗುವ, ನರಳುವ ಪಾಪಕ್ಕೆ ಗುರಿಯಾಗಿಸಿತು. ತನ್ನ ಹೆಂಡತಿ ಕೃತ್ಯ ಮಾಡಿದಳೆಂಬ ವಿಷಯ ತಿಳಿದು ಹುಡುಗ ನನ್ನ ಅಪ್ಪನಲ್ಲಿಗೆ ಬಂದು ಗೋಳೋ ಎಂದು ಅತ್ತು ನಾನು ಇನ್ನೇನು ಮಾಡಲಿ? ಎಂದು ಕಂಗಾಲಾಗಿ ಕೇಳಿಕೊಂಡಿದ್ದ. ಅಪ್ಪ ಅವನನ್ನು ಕೆಲವು ಸಮಯ ದೂರ ಇರು. ಊರಿಗೆ ಬರಲೇಬೇಡ ಎಂದು ಸಮಾಧಾನ ಮಾಡಿದರು. ಮುಂದಿನ ವಿಷಯ ಆಮೇಲೆ ನಿರ್ಧರಿಸೋಣವೆಂದು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದರು. ತಿಂಗಳುಗಳು ಉರುಳಿದ ಮೇಲೆ ಅವನನ್ನು ಕರೆಸಿ ಸಮಾಧಾನ ಮಾಡಿ ಹಿರಿಯರ ತಪ್ಪಿನಿಂದ ಹೀಗಾಯಿತೇ ಹೊರತು ಅವಳನ್ನು ದೂರ ಮಾಡುವುದು ಸರಿಯಲ್ಲ. ಅವಳ ಇಚ್ಛೆಗೆ ವಿರುದ್ಧವಾಗಿ ನಡೆದಾಗ ಅವಳು ಮದುವೆಗೆ ಮೊದಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಳು. ಹಾಗಾಗದಂತೆ ಕಾವಲು ಕಾದುದರಿಂದ ಮದುವೆಯ ನಂತರ ಆಯಿತು ಅಷ್ಟೇ. ಗಂಡು ಹೆಣ್ಣು ಮಾತಾಡಿದ ಮಾತ್ರಕ್ಕೆ ಕಳಂಕಿನಿ ಎಂಬ ಆರೋಪ ಹೊರಿಸಬೇಡ. ಅವಳು ಈಗ ಹೇಗೋ ಸತ್ತು ಪುನರ್ಜನ್ಮ ಪಡೆದಿದ್ದಾಳೆ. ಅವಳನ್ನು ತಿರಸ್ಕರಿಸಿದರೆ ಆಕೆ ಮತ್ತೊಮ್ಮೆ ಆತ್ಮಹತ್ಯೆಗೆ ಶರಣಾಗಬೇಕಾದೀತು. ಯೋಚಿಸಿ ನೋಡು ಎಂದು ಬಗೆ ಬಗೆಯಾಗಿ ತಿಳಿಸಿದರು. ಅಪ್ಪನ ಮಾತಿಗೆ ಬೆಲೆ ಕೊಟ್ಟು ಅವಳೊಂದಿಗೆ ಸಂಸಾರ ಮಾಡಿದ. ಆದರೂ ಯಾಕೋ ಏನೋ ಅಂದಿನವರೆಗೂ ಒಂದೇ ಒಂದು ದುರಭ್ಯಾಸವಿಲ್ಲದ ಹುಡುಗ ಕ್ರಮೇಣ ಕುಡಿತದ ಚಟಕ್ಕೆ ಬಲಿಯಾದ. ಎಲ್ಲಿಯವರೆಗೆಂದರೆ ಕುಡಿದು ಮಾರ್ಗದಲ್ಲಿ ಬೀಳುವಷ್ಟು. ಆಕೆ ಅವನ ಎಲ್ಲಾ ದೌರ್ಬಲ್ಯಗಳನ್ನು ಸಹಿಸಿಕೊಂಡು ಬಾಳ್ವೆ ಮಾಡಿದಳು. ಈಗ ಮಾತ್ರ ತವರು ಮನೆಯವರು ಅವಳ ಕೈಬಿಡಲಿಲ್ಲ. ಅವಳ ಕಷ್ಟಕ್ಕೆ ನೆರವಾದರು. ಆದರೆ ಅವನು ಮಾತ್ರ ತಾನು ಶಿಕ್ಷಕ ವೃತ್ತಿಯಲ್ಲಿರುವಾಗಲೇ ಕಾಯಿಲೆಗೆ ತುತ್ತಾಗಿ ನಿಧನ ಹೊಂದಿದ. ಹಿರಿಯರ ಕುಲ ಮರ್ಯಾದೆಗಳು ಏನೇನೆಲ್ಲಾ ಅನಾಹುತಗಳನ್ನುಂಟುಮಾಡಿತು ಎಂಬುದಕ್ಕೆ ಘಟನೆಗಳು ಸಾಕ್ಷಿಯಾಗಿವೆ. ಈಗ ನಾವು ಅಲ್ಲಲ್ಲಿ ನಡೆಯುತ್ತಿರುವ, ಕೇಳುತ್ತಿರುವ ಮರ್ಯಾದಾ ಹತ್ಯೆಗಳು ಇದರದೇ ಭೀಕರ ರೂಪಗಳು. ಮರ್ಯಾದಾ ಹತ್ಯೆಗಳು ಒಮ್ಮೆಲೇ ಕೊಂದು ಹಾಕಿಬಿಡುತ್ತವೆ. ಇಂತಹ ಘಟನೆಗಳು ಇಂಚಿಂಚಾಗಿ ಕೊಲ್ಲುತ್ತಾ ಜೀವಂತ ದಹನ ಮಾಡಿಬಿಡುತ್ತವೆ.


(ಮುಂದುವರಿಯಲಿದೆ)

1 comment:

  1. Heart breaking incidences brought out succinctly.
    T.R.Anantharamu

    ReplyDelete