06 November 2015

ನೆಲ ನಿಲ್ಲಿಸುವುದು, ನೆಲ ಮುಳುಗಿಸುವುದು!


(ನೀನಾಸಂ ನಾಟಕಗಳ ದಾಖಲೀಕರಣ

ಹಿಂದೆ, ಮುಂದೆ - ೩)

ನೀನಾಸಂ ತಿರುಗಾಟದ ದಾಖಲೀಕರಣದ ಮೂರನೇ ಹಂತ ಸಂದರ್ಶನಗಳದ್ದು. ಇದನ್ನು ವೈಯಕ್ತಿಕ ನೆಲೆಯಲ್ಲಿ ಇಸ್ಮಾಯಿಲ್, ಅಭಯ ಮತ್ತು ವಿಷ್ಣು ನಡೆಸುತ್ತಿದ್ದರು. ಅಲ್ಲಿ ತಾಂತ್ರಿಕವರ್ಗದಿಂದ ಹೊರಗಿನವರ ಉಪಸ್ಥಿತಿ ಉಪದ್ರವಾಗುವುದೇ ಹೆಚ್ಚು. ಇದನ್ನು ಮುಂದಾಗಿಯೇ ಯೋಚಿಸಿ ನಾವು ಮರಳುವ ಯೋಚನೆ ಮಾಡಿದ್ದೆವು.

ಕೆ.ವಿ.ಸುಬ್ಬಣ್ಣ ವಿದ್ಯಾಭ್ಯಾಸದ ಅನಿವಾರ್ಯತೆಗೆ ಮೈಸೂರಿನವರೆಗೆ (ಬಿ.ಎ. ಆನರ್ಸ್) ಹೋದರೂ ಸಾಂಸ್ಕೃತಿಕ ರಂಗದ ತನ್ನ ಪ್ರಯೋಗಗಳನ್ನು ರೂಢಿಸಲು ತನ್ನ ಹುಟ್ಟೂರ ವಲಯ - ಹೆಗ್ಗೋಡು, ಉಳಿಸಿಕೊಂಡೇ ಇದ್ದರು. ಆದರೆ ಕಲಿಕೆ (ಇಂಜಿನಿಯರಿಂಗ್), ಆಸಕ್ತಿಗಳಿಂದ (ರಾಷ್ಟ್ರೀಯ ನಾಟಕ ಶಾಲೆ, ದಿಲ್ಲಿಯ ಪದವೀಧರ) ಸ್ಪಷ್ಟ ನಗರಮುಖಿಯಾಗಬೇಕಿದ್ದವರು ಪ್ರಸನ್ನ. ಇವರು ತನ್ನ ಸಮುದಾಯ ಸಂಘಟನಾ ಚಟುವಟಿಕೆಗಳಿಗೆ ಆರಿಸಿಕೊಂಡದ್ದು ಹೆಗ್ಗೋಡು – ಒಂದು ಆಕಸ್ಮಿಕ. ಆದರೆ `ಚರಕ’ ಎಂಬ ಹೆಸರಿನಲ್ಲಿ ಇವರು ಗ್ರಾಮೀಣ ಜನತೆಯನ್ನು ಅದರಲ್ಲೂ ಮುಖ್ಯವಾಗಿ ಮಹಿಳೆಯರನ್ನು ಸಂಘಟಿಸಿ, ಮುಖ್ಯವಾಗಿ ಕೈಮಗ್ಗದಲ್ಲಿ ನಡೆಸುತ್ತಿರುವ ಕೆಲಸಗಳು ಸಾಕಷ್ಟು ದೊಡ್ಡದೇ ಇರಬೇಕು. ಮೊದಮೊದಲು ಯಾವುದೇ ಸಾಂಸ್ಕೃತಿಕ ಸಮಾವೇಶಗಳು ಇದ್ದಲ್ಲಿ ಚರಕ ಸಂಸ್ಥೆಯ ಪ್ರತಿನಿಧಿಗಳು ತಮ್ಮದೇ ತಯಾರಿಯ, ವಿವಿಧ ನಮೂನೆಯ ಕೈಮಗ್ಗದ ಉಡುಪುಗಳ ಮಳಿಗೆ ತೆರೆಯುತ್ತಿದ್ದರು. ಈಚೆಗೆ ಬೆಂಗಳೂರು ಮಂಗಳೂರೂ ಸೇರಿದಂತೆ ಕೆಲವೆಡೆಗಳಲ್ಲಿ ತಮ್ಮ ಖಾಯಂ `ದೇಸೀ’ ಮಳಿಗೆಗಳ ಮಟ್ಟಕ್ಕೂ ವಹಿವಾಟನ್ನು ವಿಸ್ತರಿಸಿದ್ದಾರೆ.


ಪ್ರಸನ್ನ `ಸಮುದಾಯ’ದ ಹೆಸರಿನಲ್ಲಿ ರಾಜ್ಯಾದ್ಯಂತ ನಾಟಕ ಚಳವಳಿಗಿಳಿದಾಗಿನಿಂದ ನನಗವರ ಪರಿಚಯ. ಹೆಗ್ಗೋಡಿನ ಅವರ ಖಾದಿ ಪ್ರಯೋಗವನ್ನು ನಾನು ಅಂಗಿಯ ಮಟ್ಟಿಗೆ ಅಂಗೀಕರಿಸಿದ್ದೆ. ಅಲ್ಲಿನ ಅವರ ಪ್ರಯೋಗಗಳ ಫಲವಾಗಿ ಅವರೇ ಬರೆದು ಪ್ರಕಟಿಸಿದ ಪುಸ್ತಕಗಳನ್ನು ವೃತ್ತಿ-ವ್ಯಾಪಾರಿಯಾಗಿ ನಾನು ಧಾರಾಳ ತರಿಸಿ ಮಾರಿದ್ದೆ. ಪ್ರಸನ್ನ ರಂಗಾಯಣದ ನಿರ್ದೇಶಕತ್ವ ವಹಿಸಿಕೊಂಡಾಗ ಕಂಡು ಅಭಿನಂದಿಸಿದ್ದೆ. ದೇಸೀ ತನ್ನ ಮಂಗಳೂರ ಮಳಿಗೆ ತೆರೆಯುವಾಗಲೂ ನಾನು ಹಾಜರಿ ಹಾಕಿದ್ದೆ. ಈ ಉದ್ದಕ್ಕೂ ಯೋಚನೆಯಲ್ಲೇ ಇದ್ದ ಅವರ `ಹೆಗ್ಗೋಡು ಆಶ್ರಮ’ದ ಭೇಟಿಯನ್ನು ಈ ಸಲ ಯೋಜನೆಗೆ ಆದ್ಯತೆಯಲ್ಲೇ ಸೇರಿಸಿದ್ದೆ ಕೂಡಾ. ಹೆಗ್ಗೋಡು ತಲಪಿದ ಸಂಜೆ, ಅಷ್ಟೇ ಆಕಸ್ಮಿಕವಾಗಿ ನೀನಾಸಂನ ಎದುರು ರಸ್ತೆಯಲ್ಲಿ ಪ್ರಸನ್ನರ ಭೇಟಿಯೂ ಆಗಿತ್ತು. ಅವರು ಮರುದಿನದ (ಗಾಂಧೀ ಜಯಂತಿ) ಕಾರ್ಯಕ್ರಮ ಒಂದಕ್ಕೆ ಬೆಂಗಳೂರಿಗೆ ರಾತ್ರಿ ಬಸ್ಸಿನಲ್ಲಿ ಹೋಗುವವರಿದ್ದರು. ಆದರೂ ಅವರ ಆಪ್ತ ಸಹಾಯಕನ ಚರವಾಣಿ ಸಂಖ್ಯೆ ಕೊಟ್ಟು “ಅವಶ್ಯ ಸಂಪರ್ಕಿಸಿ, ಭೇಟಿ ಕೊಡಿ” ಎಂದು ಹೇಳಿಯೇ ಹೋಗಿದ್ದರು. ಆದರೆ…

ಲಿಂಗನಮಕ್ಕಿ ಅಣೆಕಟ್ಟಿನ ಶರಾವತಿ ಹಿನ್ನೀರಿನ ದ್ವೀಪವಾಸಿ ಸಿಗಂದೂರೇಶ್ವರಿ – ದೇವಿಯ ಕ್ಷೇತ್ರ, ನಾನು ಕೇಳಿದ್ದೆ. ರಶ್ಮಿ ಒಂದೆರಡು ವರ್ಷಗಳ ಹಿಂದೆ ಯಾವುದೋ ಟೀವೀ ಚಾನೆಲ್ಲಿಗೆ ದೇವಾಲಯಗಳನ್ನು ಪರಿಚಯಿಸುವ ಮಾಲಿಕೆಯ ನಿರೂಪಕಿಯಾಗಿ ಸಿಗಂದೂರಿಗೆ ಭೇಟಿ ಕೊಟ್ಟದ್ದನ್ನು ಮಧುರವಾಗಿ ನೆನಪಿಸಿಕೊಂಡಳು. ಬೆಳಗ್ಗಿನ ತಿಂಡಿ ತಿಂದ ಗೂಡು ಹೋಟೆಲಿನೆದುರು ಕೈಕಂಬ ಸಿಗಂದೂರನ್ನು ಹೆಸರಿಸಿ ಇಪ್ಪತ್ತೆರಡೇ ಕಿಮೀ ಎಂದ ಮೇಲಂತೂ ಮೂರನೇ ದಿನ ಹೋಗಿಬರುವುದೇ ಸರಿ ಎಂದು ನಿಶ್ಚೈಸಿದ್ದೆ. ಓಂಶಿವಪ್ರಕಾಶ್ ದಂಪತಿ ಕೂಡಾ ನಮ್ಮೊಡನೆ ಸೇರಿಕೊಳ್ಳುವ ಯೋಚನೆ ನಡೆಸಿದ್ದರು. `ಆಹಾರ್ಯ’ದ ನಿರ್ವಾಹಕ – ನಾಗಾಭರಣ, ಸಿಗಂದೂರಿನ ಕುರಿತು ಹೆಚ್ಚಿನ ಮಾಹಿತಿ ಕೊಟ್ಟರು. ಈ ಬದಿಯಿಂದ ಸಿಗಂದೂರಿಗೆ ಹೋಗುವವರು ಹಿನ್ನೀರು ದಾಟಬೇಕು ನಿಜ, ಆದರೆ ಅದು ದ್ವೀಪವಲ್ಲ; ನಿಟ್ಟೂರು, ಕೊಲ್ಲೂರು ವಲಯಕ್ಕೆ ಸೇರುವ ಎದುರು ದಂಡೆ. ಅನಿವಾರ್ಯವಾಗಿ ನಮ್ಮ ಹೋಗಿ, ಮತ್ತೆ ಹೆಗ್ಗೋಡಿಗೇ ಬರುವ ಯೋಜನೆ ಕೈ ಬಿಟ್ಟೆವು.

ಶಿವುದಂಪತಿ ಬೇಸರಿಸದೆ ಬೇರೇನೋ ಯೋಜಿಸಿಕೊಂಡರು. ಮಂಗಳೂರಿಗೆ  ಕೊಲ್ಲೂರ ದಾರಿ ಹೆಚ್ಚು ದೂರದ್ದೇ ಆದ್ದರಿಂದ ನಾವು ಬೇಗ ಹೆಗ್ಗೋಡು ಬಿಡುವುದು ಅನಿವಾರ್ಯವಾಗಿ `ಚರಕ’ದ ಭೇಟಿ ಮತ್ತೆ ರದ್ದುಪಡಿಸಬೇಕಾಯ್ತು. ಶಿವರಾಮ ಕಾರಂತ ರಂಗಮಂದಿರದ ಒತ್ತಿಗೇ ಇದ್ದ ಒಂದು ಸಣ್ಣ ವಠಾರ, ಮುಂದೆ ಹೆಗ್ಗೋಡು ಪೇಟೆಯೊಳಗಿನ ಕವಲು ದಾರಿಯಲ್ಲಿದ್ದ ಸರಳ ಸುಂದರ ವಿನ್ಯಾಸದ  ಅಂಗಡಿಗಳೆಲ್ಲ ನಾವು ಸಿಗಂದೂರಿಗೆ ಹೊರಟ ಆ ಬೆಳಿಗ್ಗೆ ಚಟುವಟಿಕೆ ತೋರಲಿಲ್ಲ. ತುಸು ಮುಂದುವರಿದಂತೆ ಸಿಕ್ಕ ಅವರದೇ ಇನ್ನೊಂದು ವಠಾರ - ಬಟ್ಟೆಗಳಿಗೆ ಬಣ್ಣ ಹಾಕುವ ಕಾರ್ಯಾಗಾರ, ಜನರೇನೋ ಇದ್ದರು. ಆದರೆ “ಪ್ರಾರ್ಥನೆ ಆಗಿ, ಕೆಲಸ ಶುರುವಾಗುವುದು ಇನ್ನೂ ಲೇಟು” ಎಂದು ಕೇಳಿದ ಮೇಲೆ ನಾವು ನಿಲ್ಲಲಿಲ್ಲ.

ಲಿಂಗನಮಕ್ಕಿ ಅಣೆಕಟ್ಟೆ ತಡೆ ಹಿಡಿದ ಜಲರಾಶಿ ಅಸಂಖ್ಯ ದ್ವೀಪ, ಅರೆದ್ವೀಪಗಳನ್ನು ರೂಪಿಸಿದೆ. ಇವೆಲ್ಲ ಸಾಮಾನ್ಯ ಜನಜೀವನಕ್ಕೆ ಎರವಾಗಿ, ವಿಶಿಷ್ಟ ಪರಿಸರಕ್ಕನುಗುಣವಾಗಿ ಹೊಸ ಬಗೆಯ ವನ್ಯ ವಿಕಾಸವನ್ನೇ ಕಂಡಿದೆ. ಈಗ ಅದನ್ನು ಒಟ್ಟಾಗಿ ಶರಾವತಿ ಕಣಿವೆ ವನಧಾಮ ಎಂದೇ ಸರಕಾರ  ಗುರುತಿಸಿದೆ.  ಅಂದು ಹಿನ್ನೀರಿನ ಜಾಲಗಳ ಎಡೆಯಲ್ಲಿ ಉಳಿದೂ ಅಳಿದೂರುಗಳಿಗೆ ನಾಗರಿಕ ವ್ಯವಸ್ಥೆಗಳು ಅಪರಿಪೂರ್ಣವಾಗಿ ಬಂದವು, ಆಮೆಗತಿಯಲ್ಲೇ ಬಂದವು. ಏನೇ ಇರಲಿ, ಸದ್ಯ ಅಲ್ಲಿನ ದಾರಿಗಳಂತೂ ನುಣ್ಣನೆ ಡಾಮರು ಕಂಡು ನಮ್ಮ ಓಟವನ್ನು ಮನೋಹರಗೊಳಿಸಿತು. ಹಾಗೆಂದು ಕವಲುಗಳಲ್ಲಿ `ನಿಟ್ಟೂರು, ಕೊಲ್ಲೂರು’ ನಾಮಸೂಚನೆಯನ್ನು ಅನುಸರಿಸದಿದ್ದರೆ ಯಾವುದೋ ಕುರುಡುಮೂಲೆಯಲ್ಲಿ ನೀರು ಕಂಡು ಮರಳಬೇಕಾಗುತ್ತಿತ್ತು. ಹೀಗೆ ಅನುಸರಿಸಿದ ದಾರಿಯೂ ಕೊನೆಯಲ್ಲಿ ಜಲನಿಧಿಯ ಅಂಚಿನಲ್ಲೇ ಮುಗಿದಿತ್ತು. ಆದರೆ ಅಲ್ಲಿ ಮಾತ್ರ ಸರಕಾರ ವ್ಯವಸ್ಥಿತ ದೋಣಿ ಸೇವೆ ಒದಗಿಸಿ ಜನ, ವಾಹನಗಳಿಗೆ ಎದುರು ದಂಡೆ ಕಾಣಿಸುತ್ತಿತ್ತು. ನಾವು ಕಂಡಂತೆ ಕಾರಿನಿಂದ ಮರಳು ತುಂಬಿದ ಲಾರಿವರೆಗೆ ಚತುಷ್ಚಕ್ರ ವಾಹನಗಳು ಇಲ್ಲಿ ಮೌನವಾಗಿ ಸರದಿ ಸಾಲಿನಲ್ಲಿ ನಿಂತಿದ್ದುವು.

ಸಹಜವಾಗಿ ಅಲ್ಲಿ ಅರಣ್ಯ ಇಲಾಖೆ (ಈಗ ವನ್ಯ ಇಲಾಖೆ ಎನ್ನಿ) ಸುತ್ತ `ಸುಂದರ’ ವನ, ಅಲಂಕಾರದ ಬೇಲಿ, ಭರ್ಜರಿ ಮಹಾದ್ವಾರ, ಪರಿಸರ ಮಹತ್ವ ಸಾರುವ ಹತ್ತೆಂಟು ಘೋಷಣಾ ಫಲಕಗಳು, ಎರಡೆರಡು ಗೇಟು, ಟಿಕೆಟ್ ವಸೂಲಿಗೆ ಗೂಡು, ಜನ ಎಲ್ಲ ನಿರ್ಮಿಸಿ ಸಂಭ್ರಮಿಸಿತ್ತು. ಜನರ ಧಿಡೀರ್ ಹಸುತೃಷೆಗಳಿಗೆ ಕುರ್ಕುರೆ, ಕ್ಯಾಡ್ಬರೀಸ್, ಕೋಲಾಗೀಲಾ ಸಂತೆಯಂತೂ ಧಾರಾಳ ಇತ್ತು. ಈ ಎಲ್ಲ ಆದರ್ಶಗಳೊಡನೆ ವಾಸ್ತವವನ್ನೂ ಮರೆಯದಂತೆ ಮುರುಕು ಗೇಟು, ಕಸ, ಗದ್ದಲ, ಅವ್ಯವಸ್ಥೆ ಕಡಿಮೆಯೇನೂ ಇರಲಿಲ್ಲ. ದಾರಿಗಡ್ಡಲಾಗಿದ್ದ ಎರಡನೇ ಗೇಟಿನಿಂದಾಚೆ ಕಾಂಕ್ರೀಟ್ ದಾರಿ ನೇರ ದೋಣಿಗಟ್ಟೆಗಿಳಿಯುವುದನ್ನು ಕಾಣಬಹುದಿತ್ತು.
ಸುದೂರದ (ಸುಮಾರು ಎರಡು ಕಿಮೀ ಅಂತೆ) ಎದುರು ದಂಡೆಯಲ್ಲೊಂದು, ಇಲ್ಲೊಂದು ದೊಡ್ಡ ಯಾಂತ್ರಿಕ ದೋಣಿ, ಇಳಿದಾರಿಗೆ ತಮ್ಮ ಉಕ್ಕಿನ ಸೇತು ಇಳಿಬಿಟ್ಟು ಶಿಸ್ತಿನಲ್ಲಿ ಸಾಗಣೆದಾರರನ್ನು ತುಂಬಿಕೊಳ್ಳುತ್ತಿದ್ದುವು. ಸರದಿಯ ಸಾಲಿನಲ್ಲಿ ನಮ್ಮ ಕಾರೂ ನಿಂತು ನಿಂತು ಮುಂದುವರಿದಂತೆ, ಬಗೆಗಣ್ಣಿನಲ್ಲಿ ನನ್ನ ಹಳೆಯ ನೆನಪುಗಳು ಚೇತರಿಸಿಕೊಂಡವು.

ಅಂದು, ೧೯೮೮ರ ಸ್ವಾತಂತ್ರ್ಯೋತ್ಸವ, ಸೋಮವಾರಕ್ಕೆ ಬಂದಿರಬೇಕು. ಆಗ ಇನ್ನೂ ಮಳೆಗಾಲ ಮಲೆನಾಡಿನ ವಲಯವನ್ನು ಪೂರ್ಣ ಬಿಟ್ಟಿರಲಿಲ್ಲ. ಆದರೇನು ನಮ್ಮ `ಆರೋಹಣ’ದ ಹತ್ತು ದ್ವಿಚಕ್ರಿಗಳ ತಂಡ ಹಿಂದಿನ (ಆದಿತ್ಯವಾರ) ಬೆಳಿಗ್ಗೆಯೇ ಐದೂವರೆ ಗಂಟೆಗೆ ಮಂಗಳೂರು ಬಿಟ್ಟಿತ್ತು. ಕುಂದಾಪುರದಲ್ಲಿ ಕಾಫಿಂಡಿ. ವಂಡ್ಸೆ ಕೊಲ್ಲೂರಿಗಾಗಿ ನಾಗೋಡಿ ಘಾಟಿ ಏರಿ, ನಿಟ್ಟೂರಿಗೂ ಮುನ್ನ ಎಡದ ಕವಲು ಹಿಡಿದೆವು. ಆ ಸ್ಥಳದ ಅಪ್ಪಟ ಜನಪದ ಹೆಸರು ಮರೆತರುಂಟೇ - ಮರಕುಟುಕ!

ಮುಂದಿನ ದಾರಿ ಪೂರ್ತಿ ಕಚ್ಚಾ ಮಾರ್ಗ; ಜಲ್ಲಿಕಿತ್ತ ಜಾಡುಗಳು, ಕೆಸರ ಗದ್ದೆಗಳು, ಕೆನ್ನೀರ ಸಾಲುಮಡುಗಳು. ದ್ವಿಚಕ್ರಿಗಳ ಜಾರಾಟ, ಸಣ್ಣ ಅಡ್ಡ ಮಗುಚುವಿಕೆಗಳು, ಸಹವಾರರನ್ನಿಳಿಸಿ ಇಕ್ಕೆಲಗಳಿಗೆ ಊರೆಗಾಲಿಟ್ಟು ದಾಟಿದ ಅವಸ್ಥೆಗಳನ್ನೆಲ್ಲ ವಿವರಗಳಲ್ಲಿ ಹೇಳಲಾರೆನಾದರೂ ಅಸಂಖ್ಯ. ಒಂದೆಡೆ ಪುಟ್ಟ ತೊರೆಯೊಂದಕ್ಕೆ ಅಡಿಪಾಯದ ಕೆಲಸಗಳನ್ನೆಲ್ಲ ಪೂರೈಸಿ ನಿಲ್ಲಿಸಿದ್ದರು. ಶೋಷಣೆಯ ದೊಡ್ಡ ಭಾರದಲ್ಲಿ ಬೆನ್ನುಹುರಿ ಬಗ್ಗಿದ್ದ ಸ್ಥಳೀಯ ಮಂದಿಗೆ ಬಹುಶಃ ಇಂಥಲ್ಲೆಲ್ಲ ಪರ್ಯಾಯ ದಾರಿಗೆ ಹಕ್ಕೊತ್ತಾಯ ಮಂಡಿಸುವ ಶಕ್ತಿಯೇ ಉಳಿದಿರಲಿಲ್ಲ. ಕೇವಲ ಎರಡು ಕಾಂಕ್ರೀಟ್ ವಿದ್ಯುತ್ ಕಂಬಗಳನ್ನು ಈ ದಂಡೆಯಿಂದ ಆ ದಂಡೆಗೆ ಮಲಗಿಸಿದ್ದರು. ನಮ್ಮಲ್ಲಿನ ಎರಡು ಮೂರು ಗಟ್ಟಿಗರು ಸೇರಿ, ಒಮ್ಮೆಗೆ ಒಂದು ವಾಹನದಂತೆ ಈಚೆಯಿಂದಾಚೆಗೆ ನೂಕಿ ಸಾಗಿಸಿದೆವು. ಅದರೆಡೆಯಲ್ಲೂ ಸಾಹಸ ಮೆರೆಯುವ ಒಂದೆರಡು ಚಪಲಿಗರು ಇಂಜಿನ್ ಚಲಾಯಿಸಿಯೇ ಬೈಕ್ ದಾಟಿಸಿದ್ದಂತೂ ಖಂಡಿತ ಮರೆಯಲಾರೆ. (ಅದೃಷ್ಟಕ್ಕೆ ಅವಘಡ ಆಗಲಿಲ್ಲ!)

ಚದುರಿದಂತೆ ಹಳ್ಳಿ, ಮನೆ, ಗದ್ದೆ, ತೋಟ, ಉಳಿದಂತೆ ಸರ್ವವ್ಯಾಪೀ ಕಾಡು, ತಪ್ಪಿದರೆ ನೀರು. ಲಿಂಗನಮಕ್ಕಿ ಅಣೆಕಟ್ಟಿನ ಪರಿಣಾಮವಾಗಿ ಮುಳುಗದುಳಿದ ನೆಲ – ಅಭಿಶಪ್ತ ವಲಯ. ಎತ್ತರದ ನೆಲಗಳಲ್ಲಿ ತಲೆತಲಾಂತರದಿಂದ ಇದ್ದ ಜನ, ರೂಢಿಸಿದ ಚಟುವಟಿಕೆಗಳೆಲ್ಲ ವಿಕಲಾಂಗವಾಗಿ, ಹೊಸದೇ ಭೌಗೋಳಿಕ ಆಯಾಮಕ್ಕೆ ಇನ್ನೂ ಹೊಂದಿಕೊಳ್ಳಲು ಚಡಪಡಿಸುತ್ತಿದ್ದ ಸ್ಥಳ. ಇಂದು ನಮಗೆಲ್ಲ ರೂಢಿಸಿಹೋಗಿರುವ ಅಭಿವೃದ್ಧಿಯ ಶಾಪ ಮತ್ತು ಹೇಳಿಕೊಳ್ಳಲು ಜನಪರವೆಂಬ ಸರಕಾರಗಳು, ಮಾಡುವ ಜನದ್ರೋಹಗಳ ಮೊದಲ ಹೆಜ್ಜೆಗಳ ಕಾಲವದು! ಮಧ್ಯಾಹ್ನದೂಟ ತುಮರಿಯ ಗೂಡು ಹೋಟೆಲಿನಲ್ಲಿ ನಡೆದಿದ್ದಂತೆ ಭರ್ಜರಿ ಮಳೆ ಹೊಡೆದಿತ್ತು. ಆದರೂ ಅಲ್ಲಿ ಯಾರೋ ಸೂಚಿಸಿದ್ದಕ್ಕೆ ತುಸು ಮುಂದೆ ಕೆಲವು ಕವಲು ದಾರಿಗಳಲ್ಲಿ ಸುತ್ತಿ ಮುಳುಗದುಳಿದ ಕೆರೂರು ಎಂಬಲ್ಲಿ ಜೈನ ಬಸದಿಯನ್ನೂ ನೋಡಿ ಬಂದಿದ್ದೆವು. ಹೀಗೆ ಅಪರಾಹ್ನ ಮೂರೂವರೆಯ ಸುಮಾರಿಗೆ ಮುಖ್ಯ ನೀರ ಹರಹಿನ ಈ ವಲಯದ ಏಕೈಕ ಕಡವಿನ ಕಟ್ಟೆ ಕಳಸವಳ್ಳಿ ತಲಪಿದ್ದೆವು. ಅಲ್ಲಿ ಎಲ್ಲವನ್ನೂ ಈ ದಡ ಆ ದಡ ಮಾಡಲು ಇದ್ದದ್ದು ಒಂದೇ ಲಾಂಚು. ದಾಟುವ ಅವಧಿ (ಎಂಟು ಮಿನಿಟು) ಸಣ್ಣದೇ ಆದರೂ ವಾಹನಗಳನ್ನು ಏರಿಳಿಸುವ, ಅಕಾಲಗಳಲ್ಲಿ ಲಾಂಚು ತುಂಬುವಷ್ಟು ಸಮ್ಮರ್ದವಿಲ್ಲದಿದ್ದರೆ ತುಸು ಕಾಯುವ ಅನಿವಾರ್ಯತೆಯನ್ನು ಎಲ್ಲರೂ ಒಪ್ಪಿಕೊಂಡಿದ್ದರು. ಕೆಂದೂಳು, ರಣಗುಡುತ್ತಿದ್ದ ಬಿಸಿಲಿನಲ್ಲಿ ಶಾಂತವಾಗಿ ಕಾದಿದ್ದ ಬಸ್ಸು, ಕಾರು, ಜನಗಳೊಡನೆ ನಾವೂ ಕಾದಿದ್ದೆವು. ಲಾಂಚು ಬಂದಾಗ ಕ್ರಮದಂತೆ, ನಮ್ಮೆಲ್ಲ ವಾಹನಗಳನ್ನೂ ಏರಿಸಿಕೊಂಡು ತಂದಿಳಿಸಿದ ಎದುರು ದಂಡೆ – ಇದೇ ಹೊಳೆಬಾಗಿಲು!

“ಅರೆ, ಅಶೋಕವರ್ಧನ್! ನಿಮಗೆ ನೆನಪಿರಲಾರದು, ನಾನು ಹಾಸನದ ನಾರ್ವೆಯವನು, ರಾಜಶೇಖರ್. ಮಂಗಳೂರಿಗೆ ಬಂದಾಗೆಲ್ಲ ಅತ್ರಿಗೆ ನುಗ್ಗದೇ ಮರಳಿದವನಲ್ಲ…” ಕಾರುಬಾಗಿಲಿಗೆ ಕೈಯೂರಿ, ನೆನಪಿನಹೊಳೆಯಲ್ಲಿ ತೇಲುಗಣ್ಣನಾಗಿದ್ದವನನ್ನು ವಾಸ್ತವಕ್ಕೆಳೆದ ರಾಜಶೇಖರ್ ಜತೆ ನಾಲ್ಕು ಔಪಚಾರಿಕ ಮಾತಾಡುತ್ತಿದ್ದಂತೆ ನನಗೆ ದೋಣಿಯೇರಿಸುವ ಕರೆ ಬಂತು. ಮುಂದಿನ ದೋಣಿಗಷ್ಟೇ ನನಗವಕಾಶ ಬಂದೀತು ಎಂದೇ ನಾನು ಭಾವಿಸಿದ್ದೆ. ಆದರೆ ಅನುಭವೀ ದೋಣಿ ನಿರ್ವಾಹಕರು ಉಳಿದ ಎಡೆಗಳಿಗೆ ಮತ್ತೂ ನಾಲ್ಕು ದ್ವಿಚಕ್ರಿಗಳನ್ನು ಗಿಡಿದೇ ಸೇತು ಎತ್ತಿದರು. ಜನರಂತೂ ಲೆಕ್ಕ ಸಿಗದಂತೆ ಎಲ್ಲೆಡೆ ಗಿಜಿಗಿಜಿ ತುಂಬಿದ್ದರು!

ದೋಣಿ ತುಸು ಹಿಂದೆ ಸರಿದು, ಸಣ್ಣ ಒಂದು ಸುತ್ತೋಟದಲ್ಲಿ ದುಂಡಿಯನ್ನು ಎದುರು ದಂಡೆಯತ್ತ ತಿರುಗಿಸಿ ವೇಗವರ್ಧಿಸಿತು. ಎಡ ಪಕ್ಕದಲ್ಲಿ ಅನತಿ ದೂರದಲ್ಲಿ ಸಣ್ಣ ಒಂದು ದ್ವೀಪ (ಕುದುರು) ಬಹು ರಮ್ಯವಾಗಿ ಕಾಣಿಸುತ್ತಿತ್ತು. ಉಳಿದಂತೆ ಭಾರೀ ನೀರಹರಹು ಯಾವುದೇ ಚಲನೆ, ಆಳದ ಸೂಚನೆ ಕೊಡದೆ, ದೋಣಿಯ ಸೀಳೋಟಕ್ಕೂ ವಿಶೇಷ ಕದಲದಂತೆ ಗಂಭೀರವಾಗಿ ನಿಂತಿತ್ತು. ಇಕ್ಕೆಲಗಳು ಅಂದರೆ ಮೂಲ ಪ್ರಾಕೃತಿಕ ಸ್ಥಿತಿಯಾಧಾರದಲ್ಲಿ ಹೇಳುವಂತೆ ನದಿ ಪಾತ್ರೆಯಲ್ಲಿ ಇನ್ನದೆಷ್ಟು ಕುದುರುಗಳೋ ಆಳ ಕಡಿಮೆಯಿರುವಲ್ಲಿ ನೀರ ಮೇಲೆ ಆರ್ತಹಸ್ತ ಚಾಚಿಯೇ ಇರಬಹುದಾದ ಇನ್ನದೆಷ್ಟು ಹಳೆಮರಗಳೋ.

ಗೂಗಲ್ ನಕ್ಷೆಯಲ್ಲಿ ನೋಡಿದರೆ ಪೂರ್ಣ ಕುದುರುಗಳ ಜಾಲವೇ ಸಾಕಷ್ಟಿದೆ. ಅವುಗಳೆಲ್ಲ ನಿರ್ಜನ ಕಾನನಗಳು. ಆದರೆ ಸುತ್ತೂ ನೀರಿದ್ದು, ದುರ್ಬಲ ನೆಲ ಸಂಪರ್ಕ ಉಳಿಸಿಕೊಂಡ, ಕಟ್ಟೆಯಲ್ಲಿ ನೀರಿಳಿಯುತ್ತಿದ್ದಂತೆ ನೆಲ ಸಂಪರ್ಕ ಸಾಧಿಸುವ ಹಲವು ಜಾಗಗಳಲ್ಲಿ ಕೃಷಿ, ಜನಜೀವನ ನಡೆದಿರುವುದನ್ನೂ ಕಾಣುತ್ತೇವೆ. ನಮ್ಮದೇ ದೋಣಿ (ಕಯಾಕ್) ತಂದು ನಾಲ್ಕೆಂಟು ದಿನವಾದರೂ ಇಲ್ಲೆಲ್ಲ ಸುತ್ತಾಡುವ, ಅಲ್ಲಿ ಇಲ್ಲಿ ತಂಗಿ ಸ್ವಲ್ಪವಾದರೂ ಪರಿಚಯಿಸಿಕೊಳ್ಳುವ ಯೋಜನೆ ತಲೆಯೊಳಗೆ ಗುಂಗಿಯಾಡುತ್ತಿತ್ತು. ದೋಣಿ ಸವಾರಿ, ನಿರ್ಜನ ಕುದುರುಗಳಲ್ಲಿ ಶಿಬಿರವಾಸ, ಅಸಹಜವಾಗಿ ಒದಗಿದ ನೀರಸಮೃದ್ಧಿಯಲ್ಲಿ ಮರುರೂಪಣೆಗೊಂಡ ಕಾಡೂ ಸೇರಿದಂತೆ ಜೀವವೈವಿಧ್ಯದ ವೀಕ್ಷಣೆ ರೋಮಾಂಚಕಾರಿಯೇ ಸರಿ. ಆದರೆ ಅಳಿಸಿದ ನಾಗರಿಕತೆಯ ಕುರುಹುಗಳನ್ನು ಕಾಣುವಾಗ ಅಥವಾ ಇಂದೂ ಉಳಿದಿರುವವರ ಸ್ಥಿತಿಯನ್ನು ಎಣಿಸುವಾಗ ಈ ಯಾನ ಖಂಡಿತಕ್ಕೂ ರಮ್ಯ ವಿಹಾರವಾಗಲಾರದು. ಈ ಹೊಸ ಯೋಚನಾಲಹರಿಗೆ ಅದ್ಯಾವ ಮಾಯೆಯಲ್ಲೋ ಮತ್ತೆ ೧೯೮೮ರ ನೆನಪಿನ ರೀಲು ಜೋಡಣೆಗೊಂಡಿತ್ತು…

ಸವಾರಿ ಎಂಟೇ ಮಿನಿಟಿನದಾದರೂ ಅಂದು ನಮ್ಮ ದ್ವಿಚಕ್ರಗಳ ಸೈನ್ಯ ಹೊಳೆಬಾಗಿಲಿನಲ್ಲಿ ಇಳಿದಾಗ ಸುಮಾರು ಎರಡು ಗಂಟೆಗಳೇ ಸೋರಿಹೋಗಿ, ಮುಸ್ಸಂಜೆಯೇ ಆಗಿತ್ತು. ನಮ್ಮ ಅದೃಷ್ಟಕ್ಕೆ ಮಳೆಯ ಲಕ್ಷಣಗಳೇನೂ ಇರಲಿಲ್ಲ. ನಿರ್ಜನ ಬಯಲಿನಲ್ಲಿ ಸಾಗಿದ್ದ ಮಣ್ಣದಾರಿಯಲ್ಲಿ, ಅಜ್ಞಾತ ಹೆಗ್ಗೋಡು (ನಮ್ಮ ತಂಡದಲ್ಲಿ ಯಾರೂ ಆ ಮೊದಲು ಹೆಗ್ಗೋಡು ಕಂಡವರಲ್ಲ) ಮುಟ್ಟುವ ಕಾತರದಲ್ಲೇ ದ್ವಿಚಕ್ರಿಗಳನ್ನು ಓಡಿಸಿದ್ದೆವು. ಯಾಕೋ ಒಂದೊಂದೇ ವಾಹನ ನಿಧಾನಿಸುತ್ತಾ ಕೊಸರಾಡುತ್ತಾ ನಿರಪಾಯವಾಗಿ ಅಡ್ಡ ಮಲಗತೊಡಗಿತ್ತು!

ನಮಗ್ಯಾರಿಗೂ ಭೂತ ಈತಿಬಾಧೆಗಳ ಭಯವಿರಲಿಲ್ಲ. ಇದೇನು ವಿಚಿತ್ರ ಎಂದು ತನಿಖೆ ನಡೆಸಿದೆವು. ಮಳೆಗಾಲ ಮುಗಿಯುವ ಸಮಯಕ್ಕೆಂದು ಅಭಿವೃದ್ಧಿ ಕಾಮಗಾರಿಯವರು ಮಾರ್ಗದ ಕೊರಕಲುಗಳಿಗೆಲ್ಲ ಶೇಡಿ ಮಣ್ಣು ತುಂಬಿದ್ದರು. ಅವರ ಅಂದಾಜಿನಂತೆ ಅದು ಘನವಾಹನಗಳ ಓಟ ಮತ್ತು ಋತುಮಾನದ ಕೊನೆಯ ಮಳೆಯಲ್ಲಿ ಸಹಜವಾಗಿ ಕಲಸಿ, ಧಮ್ಮಾಸು ಹಾಕಿದಂತೆ ಬಿಗಿಯಾಗಬೇಕಿತ್ತು. ಆದರೆ ಅದೆಲ್ಲ ದೊಡ್ಡ ಗೋಂದಿನ ಮುದ್ದೆಗಳಂತೆ ನಮ್ಮ ವಾಹನಗಳ ಚಕ್ರ ಮಡ್‍ಗಾರ್ಡ್ ನಡುವೆ ದಪ್ಪಕ್ಕೆ ತುಂಬಿ ಬಿರಿಹಾಕಿತ್ತು! ಆಗ ನಮಗೆ ವರವಾಗಿ ಕಾಣಿಸಿದ್ದು ದಾರಿಯ ಕೆನ್ನೀರ ಹೊಂಡಗಳು. ಭಕ್ತಿಯಿಂದ ಆ ಕೊಚ್ಚೆ ನೀರನ್ನೇ ಬೊಗಸೆಯಲ್ಲಿ ಮೊಗೆದು, ಬೈಕುಗಳಿಗೆ ಚೇಪಿ, ಮಣ್ಣಪದರವನ್ನು ಮಿದುಗೊಳಿಸಿದೆವು. ಮತ್ತೆ ಸಿಕ್ಕ ಕಾಡುಕೋಲು, ಕಲ್ಲುಗಳಿಂದ ಎಲ್ಲರೂ ಚಕ್ರಗಳ ಸಂದನ್ನು ಒಕ್ಕಿ ಒಕ್ಕಿ ಮಣ್ಣಗಿಟ್ಟೆಗಳನ್ನೇ ತೆಗೆದಿದ್ದೆವು. ಉಸ್ಸಪ್ಪಾ ಎಂದೇ ತೊಡಗಿದ ಮುಂದಿನ ಸವಾರಿಯಲ್ಲಿ ಎಲ್ಲರೂ ಅಭ್ಯಾಸಬಲವನ್ನು ತಿದ್ದಿಕೊಂಡಿದ್ದೆವು. ಅಂದರೆ, ಗಟ್ಟಿ ನೆಲದ ಭ್ರಮೆಯಲ್ಲಿ ಕೆಸರು ತೊಡರಿಕೊಂಡು ಬೀಳುವುದಕ್ಕಿಂತ, ಕೆನ್ನೀರ ಮಡು ಕಲಕಿ ಸೀರ್ಪನಿಪಡೆದರೂ ದೃಢವಾಗಿ ಮುಂದುವರಿಯುವುದನ್ನು ಕಂಡುಕೊಂಡಿದ್ದೆವು. ಮತ್ತೆ ಎಲ್ಲೋ ಕಲ್ಲುಕಿತ್ತ ಡಾಮರು ದಾರಿ ಹಾಗೇ ಹೆಗ್ಗೋಡು ಕಂಡಿದ್ದೆವು, ಬಿಡಿ. ಇಂದು ಅದೇ ಜಾಡಿನಲ್ಲಿ ಆದರೆ ಯಾವುದೂ ನೆನಪಾಗದಂತೆ ನುಣ್ಣನೆ ಡಾಮರಿನಲ್ಲಿ ಬಂದದ್ದಲ್ಲವೇ ಎಂದರಿವಾದಾಗ ಒಮ್ಮೆ ಮೈ ಪುಳಕವಾಯಿತು!

ಶರಾವತಿ ಸರೋವರದ ಸುಮಾರು ಮಧ್ಯಂತರದಲ್ಲಿ ನಮ್ಮನ್ನು ಎದುರು ದೋಣಿ ಹಾದು ಹೋಯ್ತು. ಹಳಗಾಲದ  ಗೊಟ ಗೊಟಾ ಶಬ್ದದ (ಸೀಮೆಣ್ಣೆದೋ ಡೀಸೆಲ್ಲಿನದೋ ಮರೆತಿದ್ದೇನೆ) ಯಂತ್ರಕ್ಕೆ ಹೋಲಿಸಿದರೆ ಇಂದಿನದು ಹೆಚ್ಚು ಪರಿಸರಸ್ನೇಹಿಯಾದ್ದಕ್ಕೇ ನಮಗೆ ದೋಣಿಯಲ್ಲಿ ಅವರಿವರನ್ನು ನೋಡುವ ಮತ್ತು ಮಾತು ಬೆಳೆಸುವ ಅವಕಾಶಗಳೂ ಹೆಚ್ಚಿತ್ತು. ಹಿಂದೆ ಕಾರು ಸರದಿ ಸಾಲಿನಲ್ಲಿದ್ದಾಗಲೂ ದೋಣಿಯೇರಿ ನಿಂತ ಮೇಲೂ ನಾನು, ದೇವಕಿ ಹೊರಗಿಳಿದು ಅವರಿವರನ್ನು ಮಾತಾಡಿಸಿದ್ದು, ಸುತ್ತಿ ನೋಡಿದ್ದೂ ಇತ್ತು. ಆದರೆ ರಶ್ಮಿ ತನ್ನದೇ `ಜನಪ್ರಿಯತೆ’ಗೆ ಹೆದರಿ ಕಾರಿನಿಂದ ಇಳಿದೇ ಇರಲಿಲ್ಲ. ಇದು ಯಾವುದೇ ಉತ್ಪ್ರೇಕ್ಷೆ ಅಲ್ಲ ಅಥವಾ ಜಂಭದ ಮಾತೂ ಅಲ್ಲ. ಇಲ್ಲಿ ನನ್ನ ಜಾಲತಾಣದ ಹೊಸ ಓದುಗರಿಗಾಗಿಯಾದರೂ ನಾನು ರಶ್ಮಿ – ನಮ್ಮ ಸೊಸೆ, ಇವಳ ಸಣ್ಣ ಪರಿಚಯ ಹೇಳುವುದು ಅವಶ್ಯ. ಈಕೆ ಕೇವಲ ಬಿಡುಸಮಯಕ್ಕೆಂಬಂತೆ ಕೆಲವು ಟೀವಿ ಸರಣಿಗಳಲ್ಲಿ (ನೋಡಿ) ಕೆಲವು ಸಮಯ ಅಭಿನೇತ್ರಿಯಾಗಿದ್ದಳು. ಅದರಲ್ಲೂ ಪಲ್ಲವಿ ಅನುಪಲ್ಲವಿಯಲ್ಲಿನ ಪ್ರಧಾನ ಪಾತ್ರ – ನಂದಿನಿ, ಮಾಡಿದ ಮೇಲಂತೂ ಇವಳಿಗೆ ಸಾರ್ವಜನಿಕದಲ್ಲಿ ಓಡಾಡಿದಾಗೆಲ್ಲ ಅಭಿಮಾನಿಗಳು ಗುರುತಿಸಿ ಮುಜುಗರದ ಸನ್ನಿವೇಶಗಳು (ಎಲ್ಲಾ ಒಳ್ಳೆಯ ಉದ್ದೇಶದ್ದೇ ಮತ್ತು ಹಿಂಸಾತ್ಮಕವೇನೂ ಅಲ್ಲದ್ದು) ಬಂದದ್ದು ನಾವೂ ಕಂಡು ಬಳಲಿದ್ದುಂಟು. ಈಗ `ಅನುರೂಪ’ ಧಾರಾವಾಹಿಯ ಕಥೆ, ಸಂಭಾಷಣೆ ಇವಳದ್ದೇ. ಈಗ ಇದಕ್ಕಿನ್ನೊಂದೇ ಸ್ತರದ ಅಭಿಮಾನಿಗಳು. ಅದೊಂದು ಕಲ್ಪನಾಲಹರಿ ಎನ್ನುವುದನ್ನೇ ಮರೆತು ಹರಿಹಾಯುವ ವಿಮರ್ಶಾ ಭಯಂಕರರಿದ್ದಾರೆ. ಮತ್ತೆ ನಟನಾ ಅವಕಾಶಗಳನ್ನು ಕೇಳುವ ತಗಲೂಪಿಗಳ ಲೆಕ್ಕ ತೆಗೆಯ ಹೋದರೆ ನೀನಾಸಂನಲ್ಲೂ ಕೆಲವರಿದ್ದರು! ಹಾಗಾಗಿ ದೋಣಿಯಲ್ಲೂ ನಾನು ದೇವಕಿ ಕಾರಿನಿಂದ ಹೊರ ನುಸುಳಿ ಆಚೀಚೆ ಓಡಾಡಿಕೊಂಡಿದ್ದರೆ, ರಶ್ಮಿ ಒಳಗೇ ಉಳಿದಿದ್ದಳು. ಆಕೆ ಹೊರಗಿನ ದೃಶ್ಯಯಗಳ ಬಗ್ಗೆ ಕಳ್ಳನೋಟ ಹಾಕಿದರೂ ಚರವಾಣಿಯ ಸಂಬಂಧದಲ್ಲಿ ತಲೆತಗ್ಗಿಸಿ ಕುಳಿತದ್ದೇ ಹೆಚ್ಚು.

ಆದರೂ ಯಾರೋ ಇಬ್ಬಿಬ್ಬರು ಕಾರಿನ ಬಳಿ ಬಂದು “ನೀವು ರಶ್ಮಿ ಮೇಡಂ ಅಲ್ವಾ? ನಾವು ನಿಮ್ಮ ಅಭಿಮಾನಿಗಳು...” ಎಂದು ಕೊರೆದೇ ಕೊರೆದರು. ರಶ್ಮಿಯ ಅದೃಷ್ಟಕ್ಕೆ ಈ ಶರಾವತಿ ಛಾನೆಲ್ಲಿನಲ್ಲಿ ಕಮ್ಮರ್ಶಿಯಲ್ ಬ್ರೇಕ್ ಇಲ್ಲದಿದ್ದರೂ ಪ್ರದರ್ಶನಾವಧಿ ಗರಿಷ್ಠ ಎಂಟೇ ಮಿನಿಟು. ಎದುರು ದಂಡೆ ಬಂದಿತ್ತು – ಕತೆ ಬೇರೇ ಪಾತ್ರಧಾರಿಗಳು ಬೇರೇಯಾಗಿ ರಶ್ಮಿ ಬಚಾವ್!

ಈ ದಂಡೆಯಲ್ಲಿ ಇಪ್ಪತ್ತೈದು ವರ್ಷಗಳ ಹಿಂದೆ ನಾವು ಬಂದಾಗ ತುಮ್ರಿ ಖ್ಯಾತನಾಮವಿತ್ತು. ಆದರಿಂದು ಸಿಗಂದೂರು ಏರುಪ್ರಚಾರದಲ್ಲಿದೆ. ನನಗೋ ಅಲ್ಲಿನ ಪ್ರಾಕೃತಿಕ ವೈಶಿಷ್ಟ್ಯ – ದ್ವೀಪದ ಸ್ಥಿತಿ, ಬಲು ದೊಡ್ಡ ಆಕರ್ಷಣೆಯಾಗಿತ್ತು. ದೋಣಿ ಇಳಿದು ಆರೆಂಟು ಕಿಮೀ ಅಂತರದಲ್ಲಿ ದೇವಿಯ ಕ್ಷೇತ್ರವೇನೋ ಸಿಕ್ಕಿತು. ಆದರೆ ಭಕ್ತಿ-ಉದ್ದಿಮೆಯ ಹೊಡೆತದಲ್ಲಿ ಮಹಾದ್ವಾರ, ಮಹಾದಾರಿ, ಮಹಾವಾಹನ ತಂಗುದಾಣ, ಮಹಾಚಪ್ಪರವೆಂದು ಎಲ್ಲೆಲ್ಲೂ ರಣಗುಡುವ ಬಿಸಿಲು, ದೂಳು.

ಭಕ್ತ ಮಹಾಶಯರು ಕಡಿಮೆಯೇನೂ ಇರಲಿಲ್ಲ. ಆರೋಗ್ಯ ಭಾರವನ್ನು ದೇವರಿಗೇ ಬಿಟ್ಟಂತೆ ಸಾಲೋ ಸಾಲು ತತ್ಕಾಲೀನ ಅಂಗಡಿಮುಂಗಟ್ಟುಗಳು ಹಸಿತಿನಿಸು, ಮಜ್ಜಿಗೆಗಳನ್ನು ಮಾರುತ್ತಿದ್ದವು! ಇವೆಲ್ಲವನ್ನು ನಾವು ಹಗುರ ಮಾಡಿದರೂ ಚಪ್ಪಲಿ ಹಾಗೂ ಕೈ ಹೊರೆಗಳನ್ನು ಬಿಡುವ ಸ್ಟ್ಯಾಂಡಿನ ಅವ್ಯವಸ್ಥೆ ನೋಡಿ ಹೆದರಿದೆವು. ಬೆಂಗಳೂರಿನ `ಸವಿನೆನಪಿನಲ್ಲಿ’ ರಶ್ಮಿ ತನ್ನ ಮಡಿಲ-ಗಣಕವನ್ನು ಕಾರಿನಲ್ಲಿ ಬಿಡದೆ ಹಿಡಿದುಕೊಂಡಿದ್ದದ್ದು ತಪ್ಪಾಗಿ ಕಾಣಿಸಿತು. ಆಕೆ ಪುನಃ ಕಾರಿಗೇ ನಡೆದು ಗಣಕವನ್ನು ಸೀಟಿನಡಿಯಲ್ಲಿ ಮರೆಮಾಡಿ ಇಟ್ಟು ಬಂದಳು.

ನಮ್ಮ ಪುಣ್ಯಕ್ಕೆ ಅದು ನವರಾತ್ರಿಯ ದಿನಗಳಾಗಿರಲಿಲ್ಲ. ಆದರೂ ದೇವಳದ ವಠಾರದೊಳಗೆ (ತಿರುಪತಿಯಂತೆ) ಸಣ್ಣ ಸಣ್ಣ ಬೇಲಿ ಬಂಧನದೊಳಗೆ ಭಕ್ತರನ್ನು ಕೂಡಿಸಿ, ಕಂತುಕಂತುಗಳಲ್ಲಿ ದರ್ಶನಾವಕಾಶ ಕಲ್ಪಿಸುತ್ತಿದ್ದರು. ನಾವು ದೇವರ ದರ್ಶನವನ್ನೇ ಬೈಪಾಸ್ ಮಾಡ ಹೊರಟೆವು. ಭಕ್ತಮಂದೆಯ ನಿರ್ವಾಹಕನೊಬ್ಬ ಕೇಳಿಯೂ ಬಿಟ್ಟ “ಏನು, ದೇವಿಯ ದರ್ಶನ ಬೇಡವೇ?” “ಹಾಗೊಬ್ಬಳು ಸರ್ವಶಕ್ತೆ ಇರುವುದೇ ಆದರೆ ಆಕೆ ಗರ್ಭಗುಡಿಯ ಕಿಷ್ಕಿಂಧೆಗೇ ಸೀಮಿತಳೇ” ಎಂಬ ಉತ್ತರವೇನೋ ನನ್ನಲ್ಲಿ ಸಿದ್ಧವಿತ್ತು. ಆದರೆ ಅದು ಸಾಮಾನ್ಯರಿಗೆ ಪಥ್ಯವಾಗದು ಎಂಬ ಅರಿವೂ ಇದ್ದುದರಿಂದ ನಾವು ಮೂವರು ಮೌನವಾಗಿ ಗರ್ಭಗುಡಿಯನ್ನು ದೂರದಿಂದಲೇ ಸುತ್ತುವ ಬೇಲಿಯೊಳಗೇ ಹಾದು ಹೊರಬಂದೆವು.

ಅಲ್ಲಿನ ಸಿಗಂದೂರೇಶ್ವರಿ ಮಳಿಗೆಯಲ್ಲಿ ತಿನ್ನುವ ಪ್ರಸಾದವನ್ನು (ಅಪ್ಪ) ಮಾತ್ರ ಮರೆಯದೆ ಖರೀದಿಸಿ ಕಾರಿಗೆ ಮರಳಿದೆವು. ನನಗೆ ದೇವ ಅಥವಾ ಪೂಜಾ ವೈವಿಧ್ಯಗಳಲ್ಲಿಲ್ಲದ ವಿಶ್ವಾಸ ಪ್ರಸಾದ ವೈವಿಧ್ಯಗಳ ಮೇಲೆ ಇದೆ. ತಿರುಪತಿಯ ಲಾಡು, ವಡೆ, ಸತ್ಯನಾರಾಯಣ ವ್ರತದ ಸಪಾತ್ ಭಕ್ಷ್ಯ, ಮಧೂರಿನ ಅಪ್ಪ, ಶರವಿನ ಪಂಚಕಜ್ಜಾಯ ಮುಂತಾದವುಗಳನ್ನು ನಾನು ಎಂದೂ ದೂರಿದವನಲ್ಲ. ಗೂಗಲ್ ನಕ್ಷೆಯಲ್ಲಿ ಕಾಣುವಂತೆ ಸಿಗಂದೂರು ಕ್ಷೇತ್ರಕ್ಕೆ ಪ್ರಾಕೃತಿಕ ಆವರಣ ಮತ್ತು ಶೋಭೆ ಒದಗಿಸುವ ಕಾಡು ಮತ್ತು ನೀರು ವಾಸ್ತವದ ಕ್ಷೇತ್ರ ಅಭಿವೃದ್ಧಿಯಲ್ಲಿ ಯಾವುದೇ ಪಾತ್ರವಹಿಸಿಲ್ಲ ಎನ್ನುವ ತೀವ್ರ ನಿರಾಶೆಯೊಡನೆ ಮುಂದುವರಿದೆವು.

ಮುಂದಿನ ದಾರಿ ಸಪುರ ಹಾಗೂ ಅಂಕಾಡೊಂಕಿದ್ದರೂ ನುಣ್ಣಗಿದ್ದುದರಿಂದ ನಿಶ್ಚಿಂತವಾಗಿ ಸಾಗಿದೆವು.  ಹಿಂದಿನ ತುಮ್ರಿ ದಾರಿ ಇಂದಿನ ನಕ್ಷೆಯಲ್ಲಿ ಸಿಗಂದೂರು ದಾರಿಯಾಗಿದೆ. ಹಾಗೇ ಹಳೆಯ ಸ್ಥಳನಾಮ `ಮರಕುಟುಕ’ ಏನೇ ಆಗಿರಲಿ, ಹೊಸನಗರ-ಕೊಲ್ಲೂರ ದಾರಿ ಸಂಧಿಯಂತೂ ಸಕಾಲಕ್ಕೆ ಸಿಕ್ಕಿತು. ಮತ್ತೆ ನಾಗೋಡಿ ಘಾಟಿ ಹಾಯ್ದು ಊಟದ ಹೊತ್ತಿಗೆ ಸರಿಯಾಗಿ ಕೊಲ್ಲೂರು ಸೇರಿದ್ದೆವು. ನಾವು ಸಿಗಂದೂರಿನಲ್ಲಿ ದೇವಳದ ಒಳಹೋಗಿಯೂ ದೇವಿಯಲ್ಲೇನೂ ಅಹವಾಲು ಸಲ್ಲಿಸಿರಲಿಲ್ಲ. ಇನ್ನು ಹಳೆಪರಿಚಯದ ಕೊಲ್ಲೂರಿನ (ಮೂಕಿ) ಮೂಕಾಂಬೆಯ ಬಳಿ ನಮಗೇನು ಕೆಲಸ? ಪೇಟೆಯ ಹೋಟೆಲೊಂದರಲ್ಲಿ ಊಟ ಮಾಡಿ ಕಾರೇರಿದವರು ಮತ್ತೆ ಇಳಿದದ್ದು ಮಂಗಳೂರಿನಲ್ಲೇ.

ನೆಲದ ಸತ್ವ, ಜನಪದದ ಸತ್ಯಗಳನ್ನೆಲ್ಲ ನೆಲೆ ನಿಲ್ಲಿಸುವ ಪ್ರಯತ್ನಗಳ ಸಂಕೇತವಾಗಿಯೇ ಹೆಗ್ಗೋಡಿನ ನೀನಾಸಂ ಅಥವಾ ಚರಕ ನೋಡಿ ಬಂದೆವು. ಅವುಗಳನ್ನು ಸಣ್ಣ ಮಿತಿಯಲ್ಲೇ ಆದರೂ ದಾಖಲಿಸುವ ಪ್ರಯತ್ನ ಸಂಚಿ ಟ್ರಸ್ಟಿನ ವಿಡಿಯೋ ಅಥವಾ ಈ ಜಾಲತಾಣದ ಬರಹ ಎಂದೇ ನಾನು ನಂಬಿದ್ದೇನೆ. ವೈಜ್ಞಾನಿಕ ದಾಖಲೀಕರಣ, ಕಳೆದದ್ದಕ್ಕೆ ಸಾಕ್ಷಿಯಾಗುವುದರೊಡನೆ ವರ್ತಮಾನಕ್ಕೆ ಪ್ರೇರಣೆ, ಭವಿಷ್ಯತ್ತಿಗೆ ಆದರ್ಶವನ್ನೂ ಕಲ್ಪಿಸುತ್ತದೆ.
ಈ ಕಾಲಪ್ರವಾಹದಲ್ಲಿ ಮಾಸುತ್ತ, ಕಳೆದೇ ಹೋಗುವುದನ್ನು ಸಾರ್ವಕಾಲಿಕಕ್ಕೆ ನೆಲೆ ನಿಲ್ಲಿಸುವ ಕೆಲಸವಿದು. ಈ ನೆಲೆಯಲ್ಲಿ ಶರಾವತಿ ನೀರು ನುಂಗಿದ ನೆಲ, ಕಾಡು, ಸಂಸ್ಕೃತಿ (ಹಾಗೆ ಹೇಳುವುದಿದ್ದರೆ ತೀರಾ ಸಣ್ಣದರಲ್ಲಿ ಸಿಗಂದೂರು ದೇವಿಯ ನೆಲೆ ಕೂಡಾ) ಯಾವುದೇ ದಾಖಲೆ ಇಲ್ಲದೇ ಕಳೆದು ಹೋಗಿವೆ. ಹಿಂತರಲಾಗದಂತೆ ಕಳೆದು ಹೋದ ಅವುಗಳ ಬಗ್ಗೆ ಕೊರಗು ಹಚ್ಚಿಕೊಳ್ಳುವುದು ಬೇಡ. ಕನಿಷ್ಠ ಮತ್ತೆ ಅಂಥ ತಪ್ಪಾಗದ ವಿವೇಚನೆಯನ್ನಾದರೂ ನಾವು ಬೆಳೆಸಿಕೊಳ್ಳಬೇಡವೇ? ಬೆಳೆಸಿಕೊಂಡಿಲ್ಲ ಎನ್ನುವುದಕ್ಕೆ ಈಗ ಜ್ವಲಂತ ಉದಾಹರಣೆಯಾಗಿ ಕಾಣುತ್ತಿದೆ ಎತ್ತಿನಹೊಳೆಯ ಹೆಸರಿನ ನದಿತಿರುವು ಯೋಜನೆ. ಜನಪರವಾದ, ಜವಾಬ್ದಾರಿಯುತ ಸರಕಾರ ಇಲ್ಲಿ ಏನುಂಟು, ಏನಿಲ್ಲ ಎನ್ನುವುದನ್ನು ಮನಗಾಣುವ ಮುನ್ನ ಎಲ್ಲ ಮುಳುಗಿಸುವ ಕೆಲಸ ನಡೆಸಿದ್ದಾರೆ.

ಯೋಚನೆಯ ಸಾಂಗತ್ಯವೇ ಇಲ್ಲದ ಈ ಕ್ರಿಯೆಗೆ `ಯೋಜನೆ’ ಎನ್ನುವುದೇ ತಪ್ಪು. ಎರಡು ಮೂರು ಲಕ್ಷವನ್ನು ಸಾರ್ವಜನಿಕ ಬಿಕ್ಷೆಯಲ್ಲಿ ಕಷ್ಟದಿಂದ ಸಂಗ್ರಹಿಸಿ, ವೈಯಕ್ತಿಕ ತ್ಯಾಗಗಳನ್ನು ಸೇರಿಸಿ ಶುದ್ಧ ಖಾಸಗಿ ಪ್ರಯತ್ನದಲ್ಲಿ ನೀನಾಸಂ ದಾಖಲೀಕರಣ ನಡೆದಿದೆ. ಆದರೆ ಎತ್ತಿನಹೊಳೆ ಜಲಾನಯನ ಪ್ರದೇಶದಲ್ಲಿ ಸಾರ್ವಜನಿಕ ಹಣವನ್ನು ಶತಕೋಟಿಗಳ ಲೆಕ್ಕದಲ್ಲಿ ನಿರ್ಯೋಚನೆಯಿಂದ ವಿನಿಯೋಗಿಸುವ ಕ್ರಮ ನೋಡಿದರೆ ಇದು ಮುಳುಗಿಸುವುದು ಬರಿಯ ನೆಲವನ್ನಲ್ಲ – ವಿಶ್ವಾಸ, ಹಣ, ಜನಜೀವನ, ಜೀವವೈವಿಧ್ಯ, ಪರಿಸರ ಮತ್ತೆಲ್ಲಕ್ಕೂ ಮುಖ್ಯವಾಗಿ ನೀರನ್ನೂ ಎನ್ನುವುದರಲ್ಲಿ ಸಂದೇಹವೇ ಇಲ್ಲ.


ಎತ್ತಿನಹೊಳೆ ಯೋಜನಾ ಪ್ರದೇಶದಲ್ಲಿ ಈಚೆಗೆ ಮತ್ತೆ ಎರಡೆರಡು ಬಾರಿ (೨೫,೨೬-೮-೨೦೧೫ ಮತ್ತು ೨೪,೨೫-೧೦-೨೦೧೫) ಸುತ್ತಾಡಿ ಬಂದೆ. ಅದರ ಅನುಭವ ಕಥನವನ್ನು ಮುಂದಿನ ಸ್ವತಂತ್ರ ಲೇಖನದಲ್ಲಿ ನೀರೀಕ್ಷಿಸಿ. ಅದುವರೆಗೆ  ಆ ಯೋಜನೆಯ ಕುರಿತ ನನ್ನ ಹಿಂದಿನ ಬರಹಗಳನ್ನು ನೋಡದವರು ಇಲ್ಲೇ `ಎತ್ತಿನಹೊಳೆ' ವಿಭಾಗಕ್ಕೇ ಚಿಟಿಕೆ ಹೊಡೆದು ಓದಬಹುದು, ಧಾರಾಳ ಚರ್ಚಿಸಬಹುದು.
6 comments:

 1. ಅಶೋಕ ಬಾವ, ನಿನ್ನ ಬರಹ ಮತ್ತೆ ಸ್ವಾತಂತ್ರೋತ್ಸವದ ಅಂದು ನನ್ನ ಹೊಸ ಯಮಾಹಾ RX 100 ಬೈಕಿನೊಂದಿಗೆ ನಿನ್ನೊಡನೆ ಸಾಗರ, ಹೆಗ್ಗೋಡು, ಶರಾವತಿ ಹಿನ್ನೀರಿನ ತುಮ್ರಿ ಎಲ್ಲ ಸುತ್ತಿದ ನೆನಪು ಮತ್ತೆ ಒತ್ತರಿಸಿ ಬಂತು. ಪ್ರತಿ ಬಾರಿಯೂ ಅಗೋಸ್ಟ್ ೧೫ ಬಂದಾಗ ಆ ರಮ್ಯ ಪಯಣದ ನೆನಪಾಗುತ್ತದೆ. .

  ReplyDelete
 2. ಧಾರಾವಾಹಿಯ ಅಭಿಮಾನಿದೇವರುಗಳ ಬಗ್ಗೆ (ವಿಮರ್ಶಾ ಭಯಂಕರರು) ಬರೆದಿದ್ದೀರಿ. ನಮ್ಮ ಮನೆಯಲ್ಲಿ ನೋಡಲ್ಪಡುವ ಧಾರಾವಾಹಿಗಳ ಕಥೆಗಾರರು ಸಿಕ್ಕಿದ್ದಲ್ಲಿ ನಾನು ಅದ್ಯಾವ ರೀತಿ ಪ್ರತಿಕ್ರಿಯಿಸುತ್ತಿದ್ದೆನೋ ಗೊತ್ತಿಲ್ಲ. ಕೆಲವೊಮ್ಮೆ ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಟಿ ವಿ ನೋಡುವ ನಾವು ಧಾರಾವಾಹಿಗಳೆಂದರೆ ಉರಿದು ಬೀಳುವ ಹಾಗಿದ್ದೇವೆ!

  ಪ್ರವಾಸ ಕಥನ ಎಂದಿನಂತೆ ಚೆನ್ನಾಗಿದೆ.

  ReplyDelete
 3. ಪೂರ್ತಿ ಓದುತ್ತಾ ಸುತ್ತಾಡಿ ಬಂದೆ. ಪೂರ್ವಾನುಭವ ಸ್ಮರಿಸಿದ್ದು ಸೊಗಸಾಗಿದೆ.ಸಿಗಂದೂರಿಗೆ ಒಮ್ಮೆ ಮಾತ್ರ ಹೋದ ನಾನು ದೇವಿಗೆ ಸಿಗದೆ ಬಂದಿದ್ದೆ. !

  ReplyDelete
 4. I can never forget that trip.. Dad, mom and I were on our beloved kinetic.. In between, we had to get down and walk a couple of times as there was water and small narrow bridges to cross..
  My first visit to jog falls, first time on launch, late night show at Heggodu.. Memorable. At that time, I never realised how lucky I was to experience such adventures. When I look back, it seems magical..

  ReplyDelete
 5. ಎಂದೂ ಮರೆಯದ ನೆನಪು. RX 100, ಯಮಾಹಾ ಬೈಕ್, ಹೊಸದಾಗಿ ವೃತ್ತಿ ಜೀವನಕ್ಕೆ ಅಡಿ ಇಟ್ಟ ದಿನಗಳು. ನಾನು ಮತ್ತು ಸುಬ್ರಹ್ಮಣ್ಯ ಬೈಕ್ ಪ್ರವಾಸಕ್ಕೆ ಸೇರಿಕೊಂಡೆವು - ಅಪ್ಪನನ್ನು ಹಾಗೂ ಹೀಗೂ ಒಪ್ಪಿಸಿ��.
  ಸ್ವಾತಂತ್ರೋತ್ಸವ ಎಲ್ಲ ಕಡೆ, ನಮಗೂ. ದಾರಿ ಉದ್ದಕ್ಕೆ ಜಡಿ ಮಳೆ. ತುಮರಿಯ ಹಾದಿ, ಶರಾ ವತಿಯ ಹಿನ್ನೀರು, ಬಾರ್ಜ್ ಏರಿ ನದಿ ದಾಟಿದ್ದು, ಹೆಗ್ಗೋಡಿನಲ್ಲಿ ವಸತಿ..ಎಲ್ಲವೂ ಚಿರ ಸ್ಮರಣೀಯ. ಇನ್ನೂ ಕೊಳ್ಳಬಹುದಾಗಿದ್ದ RX100 ನ್ನು ಕೊಡುವ ತಪ್ಪು ನಿರ್ಧಾರಕ್ಕೆ ಇಂದು ಕೂಡ ಪರಿತಪಿಸುತ್ತಾ, ಹಾದಿಯಲ್ಲಿ ಸಾಗುವ RX 100 ಯಮಾಹಾ ಬೈಕಿನ ಸ್ವರ ಕೇಳಿದಾಗ ಮೂವತ್ತ ಮೂರು ವರ್ಷಗಳ ಹಿಂದಿನ ಪ್ರವಾಸದ ನೆನಪು ಇಂದು ಮಾಡಿದಂತಾಗುವುದೇ ಮನದ ಸೋಜಿಗ. ವಿಸ್ಮಯ.

  ReplyDelete
 6. ಶರಾವತಿ ಕೊಳ್ಳದ ಆ ಪ್ರಯಾಸಕರವಾದ ಪ್ರವಾಸವನ್ನು ಮರೆಯಲು ಸಾಧ್ಯವೇ? ಮಂಗಳೂರಿನಿಂದ ಹೊರಡುವಾಗಲೇ ಜಡಿಮಳೆ (ಈ ವಾರ ಸುರಿಯುತ್ತಿದೆಯಲ್ಲಾ ಹಾಗೆ). ದಾರಿಯುದ್ದಕ್ಕೂ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ನೋಡುತ್ತಾ ಪ್ರಯಾಣ ಚೆನ್ನಾಗಿಯೇ ಸಾಗಿತ್ತು. ಆದರೆ ಒಮ್ಮೆ ಕಾಡುದಾರಿ ಶುರುವಾದ ಮೇಲೆ ಪಜೀತಿ ಆರಂಭವಾಯಿತು. ಸುರಿಯುವ ಮಳೆ, ಅಲ್ಲಲ್ಲಿ ಗಾಡಿ ನಿಲ್ಲಿಸಿ ಬಿದ್ದ ಮರಗಳನ್ನು ಬದಿಗೆ ಸರಿಸಿ, ಕೆಲವೊಮ್ಮೆ ಹಿಂಬದಿ ಸವಾರರು ಸ್ವಲ್ಪ ದೂರ ನಡದುಕೊಂಡು ಮುಂದುವರಿದ ಪ್ರಯಾಣದಲ್ಲಿ ಒಂದೆಡೆ ಸಣ್ಣ ಕಾಲ್ಸಂಕದಲ್ಲಿ ವಾಹನಗಳನ್ನು ದಾಟಿಸಿದ್ದು ಮರೆಯಲಾಗದ ಅನುಭವ. ಅಲ್ಲಿಂದ ಮುಂದೆ ಶರಾವತಿ ಹಿನ್ನೀರಿನ ಬಾರ್ಜ್ ಪ್ರಯಾಣ ಇನ್ನೊಂದು ವಿಶೇಷ. ಹೆಗ್ಗೋಡಿನ ನೆನಪು ಮರೆಯಲಾಗದು. ಹಿಂದಿರುಗಿ ಬರುವಾಗ ಮರವಂತೆ, ಕುಂದಾಪುರ ಹೆದ್ದಾರಿಯ ಹೊಂಡಗಳ ಆಳ ಅಗಲ ತಿಳಿಯದೆ ಒದ್ದಾಡಿದ್ದನ್ನು ಮರೆಯಲಾಗುವುದೇ? ಈಗಲೂ ನೆನಪಿಸಿಕೊಂಡರೆ ಮೊನ್ನೆ ತಾನೆ ಹೋಗಿಬಂದ ಹಾಗಿದೆ.

  ReplyDelete