17 November 2015

ಹೀಗೊಂದು ಹಾರಾಟ


(ಕರೆದೇ ಕರೆಯಿತು ಕಾಶ್ಮೀರ ಭಾಗ ಹದಿಮೂರು)

ಲೇಖನ - ವಿದ್ಯಾಮನೋಹರ
ಚಿತ್ರ - ಮನೋಹರ ಉಪಾಧ್ಯ

ಶ್ರೀನಗರಕ್ಕೆ ವಿಮಾನದಲ್ಲಿ ಹೋಗುವಾಗ ನಾವು ಹಿಮಾಲಯದ ಪರ್ವತಗಳ ದರ್ಶನ ಪಡೆದರೆ, ಹಾಗೇ ಅಲ್ಲಿಂದ ಜಮ್ಮುವಿಗೆ ಬರುವಾಗ ವೈಷ್ಣೋದೇವಿಯ ತ್ರಿಕೂಟ ಪರ್ವತದ ದರ್ಶನ ಪಡೆದೆವು. ಸುಮಾರು ೪೫ ನಿಮಿಷಗಳ  ಹಾರಾಟದ ಬಳಿಕ ಜಮ್ಮುವಿನಲ್ಲಿ ಇಳಿಯುವವರಿದ್ದೆವು. ಪೈಲೆಟ್ ಜಮ್ಮುವಿನ ತಾಪಮಾನ ೩೪ ಡಿಗ್ರಿ ಸೆಲ್ಸಿಯಸ್  ಎಂದು ಹೇಳಿದ್ದು ಕೇಳಿ ಹೌಹಾರಿದೆವು. ಹಿಂದಿನ ರಾತ್ರಿ ಪೆಹಲ್ ಗಾಂ ನಲ್ಲಿ ಸೊನ್ನೆ ಡಿಗ್ರಿ ಸೆಲ್ಸಿಯಸ್ ಇದ್ದುದು ಅಷ್ಟು ಬೇಗ ಏರಿದ್ದು ಹೇಗೆ ಎಂಬ ಆಶ್ಚರ್ಯವೂ ಆಯಿತು. ಜಮ್ಮು ಮತ್ತು ಶ್ರೀನಗರಗಳ ಭಿನ್ನತೆಯ ಅನುಭವ ದಟ್ಟವಾಗತೊಡಗಿತು.  ಇದಕ್ಕೆ ಜಮ್ಮುವಿನ ಅಚ್ಚುಕಟ್ಟಾದ ವಿಮಾನ ನಿಲ್ದಾಣ, ಶುಚಿಯಾಗಿದ್ದ ಶೌಚಾಲಯವೂ ಸಾಕ್ಷಿಯಾಯಿತು.   


ಜಮ್ಮುವಿನಲ್ಲಿ ಅಗಲವಾದ ರಸ್ತೆಗಳು, ನೂತನ ವಿನ್ಯಾಸದ ಕಟ್ಟಡಗಳು, ಧಾರಾಳವಾಗಿದ್ದ ಹಿಂದಿ ಭಾಷೆಯ ಬೋರ್ಡುಗಳು, ಸರ್ದಾರ್ ಜೀಗಳು, ಪಂಡಿತರು, ಜತೆಗೇ ಮುಸಲ್ಮಾನ ದಿರಸಿನವರೂ ಕಾಣಸಿಕ್ಕರು. ಭಾರತೀಯತೆಯ ವಿವಿಧತೆಯ ಕಂಪು ಜೋರೇ ಇತ್ತು.


ವಿಮಾನ ನಿಲ್ದಾಣದಿಂದ ಶ್ರೀನಗರ ಕಡೆಗಿನ ಹೆದ್ದಾರಿ ಯಲ್ಲಿ ಪ್ರಯಾಣಿಸಿ ಮುಂದೆ ಸಿ ಯಲ್ಲಿ ಸಾಗಿ ೪೯ ಕಿ.ಮೀ ದೂರದ ಕಾತ್ರಾ ಎಂಬ ಊರನ್ನು ತಲಪಿದೆವು.

ದಾರಿಯಲ್ಲಿ ಹೋಗುವಾಗ ಚೆಕ್ ಪೋಸ್ಟ್ ಒಂದರ ಬಳಿ ಮಾತ್ರ ಉರ್ದು ಅಕ್ಷರದ ಬೋರ್ಡ್ ಕಂಡೆ. ಜಮ್ಮುವಿನ ಸೆಖೆಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು.
ನಾವಿದ್ದ ಹೋಟೆಲ್ಲಿನ ಬಚ್ಚಲಿನಲ್ಲೂ ಫ್ಯಾನ್ ಇತ್ತು. ನಮ್ಮ ಕೊಠಡಿಯ ಎದುರಿಗಿದ್ದ ಮನೆಯ ತಾರಸಿಯ ಮೇಲೆ ಸೈನಿಕರು ಹಗಲು, ರಾತ್ರಿಯೆನ್ನದೇ ಗನ್ ಹಿಡಿದು ಗಸ್ತು ತಿರುಗುವುದು ಕಾಣುತ್ತಿತ್ತು.


ಮಾರನೆ ದಿನ ಬೇಗನೆದ್ದು, ವೈಷ್ಣೋದೇವಿ ಪ್ರಯಾಣದ ತಯಾರಿಗಳನ್ನೆಲ್ಲಾ ಮಾಡಿಕೊಂಡೆವು. ನಾವು, ಶ್ರಮ, ಸಮಯ ಕಡಿಮೆಯ, ಹೊಸ ಅನುಭವದ ಕಾರಣಗಳನ್ನೊಡ್ಡಿ, ಹೆಲಿಕಾಪ್ಟರ್ ಮೂಲಕ ಹೋಗುವ ಮತ್ತು ಬರುವ ಟಿಕೆಟ್ ಮಾಡಿಕೊಂಡಿದ್ದೆವು. ದೇವಿಯ ದರ್ಶನದ ಜಾಗದಲ್ಲಿ ಹಲವಾರು ನಿರ್ಬಂಧಗಳಿದ್ದು, ಅವುಗಳಲ್ಲಿ ಪರ್ಸ್, ಕ್ಯಾಮೆರಾ, ಬೆಲ್ಟ್, ಪೆನ್ನು ಮುಂತಾದವುಗಳಿದ್ದವು. ಹಾಗಾಗಿ ಹೆಚ್ಚಿನ ಅಮೂಲ್ಯ ವಸ್ತುಗಳನ್ನು ಹೋಟೆಲ್ಲಿನ ಲಾಕರ್ ನಲ್ಲಿಟ್ಟೆವು. ಒಬ್ಬರು ಮಾತ್ರ ಲಾಕರ್ ಬೀಗದ ಕೈ, ಹೆಲಿಕಾಪ್ಟರ್ ಟಿಕೆಟ್ ಮತ್ತು ಪರ್ಸ್ ಇಟ್ಟುಕೊಂಡರು. ದೇವಸ್ಥಾನದಲ್ಲೂ ಲಾಕರ್ ಸೌಲಭ್ಯವಿದ್ದರೂ, ನಮ್ಮ ಎಂಟೂ ಜನರ ವಸ್ತುಗಳ ವಿಲೇವಾರಿಗೆ ಹೆಚ್ಚಿನ ಸಮಯ ವ್ಯರ್ಥವಾಗುವುದು ಬೇಡವೆಂದು ಹೀಗೆ ಮಾಡಲು ನಿರ್ಧರಿಸಿದೆವು. ನಾನು ದಿನ, ಬದಿ ಕಿಸೆಯಿರುವ ಕುರ್ತಾ ಧರಿಸಿ ಅದರಲ್ಲಿ ನನ್ನ .ಡಿ ಕಾರ್ಡ್ ಇಟ್ಟುಕೊಂಡೆ. ಹೀಗೆ ನಾವು ಹೆಂಗಸರು ನಮ್ಮ ವ್ಯಾನಿಟಿ ಬ್ಯಾಗನ್ನು ತೊರೆದು ನಿರಾಡಂಬರರಾಗಿಯೂ, ಗಂಡಸರು ನಿರಾಯುಧರಾಗಿಯೂ, ದೇವಿಯ ದರ್ಶನಕ್ಕಾಗಿ ಹೆಲಿಕಾಪ್ಟರ್ ಪ್ರಯಾಣಕ್ಕೆ ತೆರಳಿದೆವು.

ಹೆಲಿಕಾಪ್ಟರ್ ಪ್ರಯಾಣಕ್ಕೆ ಬರುವ ಯಾತ್ರಾರ್ಥಿಗಳ ಸಂಖ್ಯೆ ವಿಪರೀತ. ಅದಕ್ಕಾಗಿ ಸಾಕಷ್ಟು ಹಾರಾಟಗಳನ್ನು ಮಾಡುತ್ತಾರಾದರೂ, ಒತ್ತಡದ ಅನುಭವವಾಯಿತು. ಬೋರ್ಡಿಂಗ್ ಪಾಸ್ ಪಡೆದುಕೊಂಡು ನಮ್ಮ ಸರದಿಗಾಗಿ ಸುಮಾರು ಗಂಟೆಗಳ ಕಾಲ ಕಾದೆವು. ಕಾಯುವ ಜಾಗದಲ್ಲಿ ಆಸನಗಳ ಸಂಖ್ಯೆ ಸೀಮಿತವಾಗಿದ್ದು, ಅಷ್ಟೂ ಹೊತ್ತು ನಿಂತೇ ಇರಬೇಕಾಯಿತು. ಅದೇ ವೇಳೆಯಲ್ಲಿ ನಡೆದಿರುತ್ತಿದ್ದರೆ, ಅರ್ಧ ಬೆಟ್ಟ ಹತ್ತುತ್ತಿದ್ದೆವೋ ಏನೋ ಎಂದೆನಿಸಿತು. ಕಂಪೆನಿಯವರ ಹೆಲಿಕಾಪ್ಟರ್ ಗಳು ಎಡೆಬಿಡದೆ ಹಾರಾಟ ನಡೆಸುತ್ತಿದ್ದವು. ಕೇವಲ ಐದಾರು ನಿಮಿಷಗಳ ಹಾರಾಟದಲ್ಲಿ ನಾವು ತ್ರಿಕೂಟ ಪರ್ವತದ ಮುಕ್ಕಾಲು ಭಾಗ ತಲಪಬಹುದು. ಅಲ್ಲಿ ಇಳಿದು ಮತ್ತೆ ಎರಡೂವರೆ ಕಿ.ಮೀಗಳನ್ನು ಕ್ರಮಿಸಿ ದೇವಿಯ ಗುಹೆ ತಲಪಬಹುದು.    

ನಮಗೆ ಕೊಟ್ಟ ಬೋರ್ಡಿಂಗ್ ಪಾಸಿನಲ್ಲಿ ನಮ್ಮ ಹಾರಾಟದ ಕ್ರಮಸಂಖ್ಯೆಯನ್ನು ನಮೂದಿಸುತ್ತಾರೆ. ನಮ್ಮ ನಂಬರನ್ನು ಕರೆಯುವಾಗ ನಾವು ಹೆಲಿಕಾಪ್ಟರ್ ಏರಲು ಸಿದ್ಧರಾಗಿ ನಿಲ್ಲಬೇಕು. ನನ್ನ ಮತ್ತು ಮನೋಹರ್   ಬೋರ್ಡಿಂಗ್ ಪಾಸಲ್ಲಿ ಕ್ರಮ ಸಂಖ್ಯೆ ೧೬ ಎಂದು ನಮೂದಾಗಿತ್ತು. ನಮ್ಮ ಸರದಿ ಬರಲು ಹೋಗಿ ನಿಂತೆವು. ಅಲ್ಲಿನ ಸಿಬ್ಬಂದಿ ನನ್ನ ಹೆಸರಿನ ಬದಲಿಗೆ ನನ್ನ ಸ್ನೇಹಿತೆಯ ಹೆಸರನ್ನು ಕರೆದ. ನಾನು ಆತ ತಪ್ಪಿರಬಹುದೆಂದು " ಅದು ನನ್ನ ಸ್ನೇಹಿತೆಯ ಹೆಸರು. ಆಕೆಯ ಕ್ರಮಸಂಖ್ಯೆ ೧೭, ನನ್ನದು ೧೬" ಎಂದು ತಿಳಿಸಿ ಬೋರ್ಡಿಂಗ್ ಪಾಸನ್ನು ತೋರಿಸಿದೆ. ಆತ ಅದನ್ನು ನೋಡಿಯೂ ಕೂಡ, " ಹಾಗಾದರೆ ನೀವು ವೈಟಿಂಗ್ ಜಾಗಕ್ಕೆ ವಾಪಾಸು ಹೋಗಿ, ಆಕೆಯನ್ನು ಕಳಿಸಿ" ಎಂದ. ನನಗೆ ಮತ್ತೂ ಗೊಂದಲವಾಯಿತು. "ನೋಡಿ, ನಾನು ಮತ್ತು ನನ್ನ ಗಂಡ ನಂಬ್ರ ೧೬ ರರಲ್ಲಿದ್ದೇವೆ, ಅವಳು ಮತ್ತು ಅವಳ ಗಂಡನ ಕ್ರಮಸಂಖ್ಯೆ ೧೭" ಎಂದೆ. ಆದರೆ ಆತ ಮತ್ತೆ ಕ್ರೂರವಾಗಿ, " ನೀವು ಹೋಗಿ, ಅವರನ್ನು ಕಳಿಸಿ, ಬೇಗ!" ಎಂದ.

ಹೆಲಿಕಾಪ್ಟರ್ ನಲ್ಲಿ ಬ್ಯಾಲೆನ್ಸ್ ಸರಿಯಾಗಿ ಇರುವಂತೆ ನೋಡಿಕೊಳ್ಳಲು ಬೋರ್ಡಿಂಗ್ ಪಾಸ್ ಕೊಡುವಾಗ, ಯಾತ್ರಾರ್ಥಿಗಳ ತೂಕವನ್ನು ನೋಡುತ್ತಾರೆ ಹಾಗೂ ಅದರ ಪ್ರಕಾರ ಯಾರ್ಯಾರು ಜತೆಯಲ್ಲಿ ಹೋಗಬೇಕೆಂದು ನಿರ್ಧರಿಸುತ್ತಾರೆ, ಅದನ್ನು ಚಾಚೂ ತಪ್ಪುವುದಿಲ್ಲ. ನನ್ನ ಮತ್ತು ನನ್ನ ಗೆಳತಿಯ ಕ್ರಮಸಂಖ್ಯೆ ತಪ್ಪಾಗಿ ಬೋರ್ಡಿಂಗ್ ಪಾಸಿನಲ್ಲಿ ಬರೆಯಲಾಗಿತ್ತು. ಸಿಬ್ಬಂದಿ ಅವರ ಬಳಿಯಿರುವ ಲಿಸ್ಟ್ ಪ್ರಕಾರ ಮಾತ್ರ ಹೋಗಲು ಬಿಡುತ್ತಾರೆ. ಇಲ್ಲಿ ನಾವು `ಎಷ್ಟು ತೂಕದ ವ್ಯಕ್ತಿ' ಎಂಬುದು ಮುಖ್ಯವಾಗುತ್ತದೆಯೇ ಹೊರತು, ಯಾರ ಹೆಂಡತಿ, ಯಾರ ಗಂಡ ಎಂಬುದಕ್ಕೆ ಬೆಲೆಯೇ ಇಲ್ಲ! ಅಂತೂ ಭಾರವಾದ ಮನಸ್ಸಿನಿಂದ ನಾನೂ, ನನ್ನ ಸ್ನೇಹಿತೆಯೂ ಅದಲು ಬದಲಾದೆವು. ಬರೇ ನಿಮಿಷಗಳ ಹಾರಾಟಕ್ಕೆ ನಾವು, ನನ್ನ ಗಂಡ, ನನ್ನ ಹೆಂಡತಿ ಎಂದೆಲ್ಲಾ ರಂಪಾಟ ಮಾಡಿಕೊಂಡದ್ದು ನೆನೆಸಿಕೊಂಡರೆ ನಗು ಬರುತ್ತದೆ. ಅಲ್ಲಿ ಕಾಯುತ್ತಾ ಕೂತಿದ್ದಾಗ, ಉತ್ತರಾಖಂಡದಲ್ಲಿ ಪ್ರಳಯ ಸದೃಶ ಸ್ಥಿತಿಯಲ್ಲಿದ್ದವರನ್ನು ಸೈನಿಕರು ರಕ್ಷಿಸಲು ಬಂದಾಗ, ಸಂಕಷ್ಟದಲ್ಲಿದ್ದವರು, `ನನ್ನ ಸಂಬಂಧಿಕರು, ಸ್ನೇಹಿತರು, ನಮ್ಮವರು' ಎಂದು ಹೇಳಲಿಕ್ಕಿತ್ತೇ? ಅವರ ಮನಸ್ಥಿತಿ ಹೇಗಿದ್ದಿರಬಹುದು ಎಂದೆಲ್ಲಾ ಯೋಚನೆಗಳು ಹಾದುಹೋದವು. ಅಂತೂ, `ಯಾರಿಗೆ ಯಾರುಂಟು, ಎರವಿನ ಸಂಸಾರ' ಎಂಬ ವೈರಾಗ್ಯ ಕ್ಷಣಕ್ಕೆ ಒಮ್ಮೆ ಬಂದುಹೋಯಿತು. 

ಹೆಲಿಕಾಪ್ಟರ್ ಹಾರಾಟದ ಹೊಸ ಅನುಭವಕ್ಕೆ ಕುತೂಹಲಿಯಾಗಿದ್ದೆ. ನಮ್ಮ ಸರದಿ ಬಂದಾಗ, ಹೆಲಿಕಾಪ್ಟರ್ ನಲ್ಲಿ ನಾವು ಯಾವ ಆಸನವನ್ನು ಅಲಂಕರಿಸಬೇಕೋ ಅದಕ್ಕೆ ಸರಿಯಾಗಿ ಅದೇ ಪ್ರಕಾರ ನಿಲ್ಲಿಸುತ್ತಾರೆ. ಮುಂದಿನ ಸೀಟಿನವರು ಮುಂದೆ, ಅವರ ಹಿಂದೆ ಯಾರು ಎಡ, ಯಾರು ಬಲ ಎಂದೆಲ್ಲಾ ನಿಗದಿಯಾದಂತೆ ಹಾಗೇ ನಿಂತುಕೊಳ್ಳಲು ಹೇಳುತ್ತಾರೆ. ಹಾಗೆ ನಿಂತುಕೊಂಡಿರುವಾಗ,  ನಮ್ಮ ವೇಷಭೂಷಣಗಳು ಗಾಳಿಗೆ ಹಾರದಂತೆ ಜಾಗ್ರತೆ ಕ್ರಮಗಳನ್ನು ಹೇಳುತ್ತಾರೆ. ಚೂಡಿದಾರದ ಶಾಲನ್ನು ಜನಿವಾರದಂತೆ ಹಾಕಿ, ಬಿಗಿಯಾಗಿ ಗಂಟು ಕಟ್ಟಲು ಹೇಳುತ್ತಾರೆ. ಹೆಲಿಕಾಪ್ಟರ್ ನಿರ್ಧಾರಿತ ಜಾಗದಲ್ಲಿ ಇಳಿಯುತ್ತಲೇ ಅದರ ಬಾಗಿಲಿನಿಂದ ವಾಪಾಸು ಬಂದ ಯಾತ್ರಾರ್ಥಿಗಳು ಕ್ಷಣಾರ್ಧದಲ್ಲಿ ಸಿಬ್ಬಂದಿಗಳು ತೋರಿದ ದಿಕ್ಕಿನಲ್ಲಿ ನಡೆದು ಹೋಗುತ್ತಾರೆ. ಕಿವಿಗಡಚಿಕ್ಕುವ ಶಬ್ದ, ಹಾರಿಯೇ ಬಿಡುತ್ತೇವೋ ಎನ್ನುವಷ್ಟು ಗಾಳಿಯ ಅಬ್ಬರಗಳ ಮಧ್ಯೆ, ಕ್ಷಣದಲ್ಲಿ ಹೆಲಿಕಾಪ್ಟರನ್ನು ಏರಿ ಕುಳಿತುಕೊಳ್ಳಬೇಕು. ಸಿಬ್ಬಂದಿ ತಕ್ಷಣ ಸೀಟು ಬೆಲ್ಟ್ ಬಿಗಿದು, ಬಾಗಿಲು ಹಾಕುತ್ತಾರೆ. ಎಲ್ಲಾ ವ್ಯವಸ್ಥೆಗಳು ಕೆಲವು ಸೆಕೆಂಡುಗಳಲ್ಲಿ ನಡೆದುಬಿಡುತ್ತದೆ.  ನನಗಂತೂ ಹಾರಾಟದ ಅನುಭವಕ್ಕಿಂತಲೂ ಶಿಸ್ತಿನ ವ್ಯವಸ್ಥೆಯ ಅನುಭವವೇ ಹೆಚ್ಚು ಅದ್ಭುತವೆನಿಸಿತು. ದಿನವೊಂದಕ್ಕೆ ೫೦೦ಕ್ಕೂ ಮಿಕ್ಕಿ ಪ್ರವಾಸಿಗರ ಸುರಕ್ಷತೆ ಅವರ ಕೈಯಲ್ಲಿದೆ.


ನಾವು ವಾಪಾಸು ಬರುವುದಕ್ಕೂ ಹೆಲಿಕಾಪ್ಟರಿಗೇ ಬುಕ್ ಮಾಡಿದ್ದರಿಂದ ಅವರು ಕೊಟ್ಟ ಮೂರೂವರೆ ಗಂಟೆಗಳಲ್ಲಿ ವಾಪಾಸು ಬರಬೇಕೆಂದು ನಿರ್ದೇಶಿಸಲಾಗಿತ್ತು. ನಮ್ಮ ಬೋರ್ಡಿಂಗ್ ಪಾಸಲ್ಲಿ ವಾಪಾಸು ಬರಲು ಸಮಯ ಮಧ್ಯಾಹ್ನದ .೪೫ಕ್ಕೆ ಎಂದು ನಮೂದಿಸಲಾಗಿತ್ತು. ` ಚೀಟಿಯನ್ನು ಯಾವುದೇ ಕಾರಣಕ್ಕೂ ಕಳಕೊಳ್ಳಬೇಡಿ' ಎಂದು ಸಿಬ್ಬಂದಿ ತಾಕೀತು ಮಾಡಿದ್ದರು.

ಹೆಲಿಕಾಪ್ಟರ್ ಅನುಭವ ಯಾವುದೇ ರೀತಿಯ ಥ್ರಿಲ್ಲಿಂಗ್ ಎನಿಸುವಂತಹದ್ದಾಗಿರಲಿಲ್ಲ. ಕಾತ್ರಾ ಪಟ್ಟಣವನ್ನು ಇಡಿಯಾಗಿ ನೋಡಲು ಸಾಧ್ಯವಾಯಿತು. ನನ್ನ ಪಕ್ಕದ ಸೀಟಿನಲ್ಲಿ ಕೂತವರು ಅನಿವಾಸಿ ಭಾರತೀಯ; ಅಮೆರಿಕಾದಲ್ಲಿರುವವರು. ಅವರ ಪ್ರಕಾರ ಹೆಲಿಕಾಪ್ಟರ್ ಗಳನ್ನು ಅಷ್ಟು ಕಡಿಮೆ ಅವಧಿಯಲ್ಲಿ, ಹಾಗೆ ಅರ್ಧ ವೃತ್ತಾಕಾರದಂತೆ ಹಾರಿಸಿ ಕೊಂಡೊಯ್ಯಲು ಕ್ಯಾಪ್ಟನ್ ಗೆ ಸಾಕಷ್ಟು ಚಾಕಚಕ್ಯತೆ ಬೇಕು. ನಾವು ಕ್ಯಾಪ್ಟನ್ ಬಳಿ ಮಾತಾಡಕೂಡದೆಂದು ಮೊದಲೇ ಎಚ್ಚರಿಕೆ ಕೊಟ್ಟಿದ್ದರು, ಹಾಗಾಗಿ, ಒಂದಿಷ್ಟೂ ವಿಚಲಿತರಾಗದೇ, ಗಂಭೀರತೆಯಿಂದ, ಪೂರ್ಣ ಮನಸ್ಸಿನಿಂದ ಕಾಪ್ಟರ್ ಚಲಾಯಿಸುತ್ತಿದ್ದ ಅವರನ್ನು ಪ್ರಶಂಸೆಯಿಂದ ನೋಡಿದೆ, ಅಷ್ಟೆ.   
      
ನಾವು ಹೆಲಿಕಾಪ್ಟರ್ ನಿಂದ ಇಳಿಯುತ್ತಲೇ ಮೊದಲೇ ಬಂದು ಕಾಯುತ್ತಿದ್ದ ಮಿತ್ರಬಳಗದವರನ್ನು ಸೇರಿಕೊಂಡೆವು. ಇನ್ನು ಮುಂದಿನ ಎರಡೂವರೆ ಕಿ.ಮೀಗಳನ್ನು ನಡಿಗೆಯ / ಕುದುರೆಯ/ ಡೋಲಿಯ ಮೂಲಕ ಮಾಡಬಹುದು. ಇಲ್ಲಿ ನಡಿಗೆಯನ್ನೇ ಆರಿಸಿಕೊಂಡಿದ್ದ ನಾವು ಎಂಟೂ ಜನ ಸಾಧ್ಯವಾದಷ್ಟು ವೇಗದಲ್ಲಿ ಹೆಜ್ಜೆಹಾಕತೊಡಗಿದೆವು. ಸ್ವಲ್ಪ ಮೊಣಗಂಟಿನ ನೋವಿದ್ದ ಕಾರಣ ನಾನು ಎಲ್ಲರಿಗಿಂತ ಹಿಂದೆಯೇ ಉಳಿಯುತ್ತಿದ್ದೆ. ಎಡ, ಬಲಗಳಲ್ಲಿ ಕುದುರೆಗಳ, ಡೋಲಿಯವರ ಕಿರಿಕಿರಿಯೂ ಇದ್ದೇ ಇತ್ತು. ಯಾರೂ ಹೆಚ್ಚಿಗೆ ಮಾತಾಡದೇ, ಶಕ್ತಿ ವ್ಯಯಮಾಡದೇ ನಡಿಗೆಯಲ್ಲೇ ಗಮನ ಹರಿಸಿದೆವು.

ನಾನು ಗಮನ ಹರಿಸಿದ್ದು ಹೆಚ್ಚಾಗಿಯೋ ಏನೋ, ಸ್ವಲ್ಪ ದೂರ ನಡೆಯುವಷ್ಟರಲ್ಲಿ ನನ್ನ ಬಲಗಾಲ ಚಪ್ಪಲಿ ತುಂಡಾಯಿತು. ಕಾಲೆಳೆಯುತ್ತಾ ನಡೆಯುವಷ್ಟು ಸಮಯಾವಕಾಶವಿಲ್ಲ. ಸುತ್ತಮುತ್ತ ತಿಂಡಿ, ತಿನಿಸುಗಳ ಅಂಗಡಿಗಳು ಮಾತ್ರವೇ ಇದ್ದವು. ಮಿತ್ರಬಳಗ ಅವರವರ ವೇಗಕ್ಕೆ ಸರಿಯಾಗಿ ಮುಂದೆ, ಹಿಂದೆ, ಮಧ್ಯೆ ಎಂದು ಚದುರಿತ್ತು. ಹೆಚ್ಚು ಯೋಚನೆ ಮಾಡದೇ, ಚಪ್ಪಲಿ ಬಿಟ್ಟು ಬರಿಗಾಲಲ್ಲಿ ನಡೆಯಲಾರಂಭಿಸಿದೆ. ಆಶ್ಚರ್ಯವೆಂದರೆ ಅದುವರೆಗೆ ಕಂಟುತ್ತಾ ಸಾಗುತ್ತಿದ್ದ ನಡಿಗೆ ಈಗ ವೇಗ ಪಡೆದುಕೊಂಡಿತು. `ಪಾದಯಾತ್ರೆಗೆ ಬರಿಗಾಲೇ ಸೂಕ್ತ' ಎಂಬ ನಿರ್ಧಾರಕ್ಕೆ ಬಂದೆ. ಅಲ್ಲಿನ ನೆಲವೂ ಚಪ್ಪಡಿ ಹಾಸಿ, ಮೇಲೆ ನೆರಳಿಗೆ ಶೀಟು ಹಾಕಿ ಅನುಕೂಲಕರವಾಗಿತ್ತು. ಕುದುರೆ ಲದ್ದಿಯನ್ನು ಸಂಭಾಳಿಸುವ ಸಮಸ್ಯೆ ಮಾತ್ರ ಇತ್ತು.


ದೇವಿಯ ಗುಹೆ ಬಳಿ ಬಂದಾಗ ಜನರ ರಶ್ ಏನೂ ಇರಲಿಲ್ಲ. ದರ್ಶನ ಮುಗಿಸಿ ಸಂತೃಪ್ತಿಯಿಂದ ವಾಪಾಸು ಹೊರಟೆವು. ಎಲ್ಲರೂ ಲಾಕರ್ ಬಳಿ ತೆರಳಿ ಚಪ್ಪಲಿ ಹಾಕಿಕೊಳ್ಳಲು ಹೋದರು. ನನಗೆ ಕೆಲಸವಿಲ್ಲದ್ದರಿಂದ, ಸ್ವಲ್ಪ ಸ್ವಲ್ಪವೇ ನಡೆಯುವಾ ಎಂದು ವಾಪಾಸು ಬರಲು ಹೊರಟೆ.

ಬಾಬಾ ಭೈರೋನಾಥರ ಗುಹೆಗೆ ದಾರಿ ಕಂಡರೂ .೪೫ ಗಡುವು ಹೆದರಿಸುತ್ತಲೇ ಇತ್ತು. ಹಾಗಾಗಿ ಬಂದ ದಾರಿಯಲ್ಲೇ ವಾಪಾಸು ಎಂದು ತೀರ್ಮಾನವಾಗಿತ್ತು. ನಡೆಯುತ್ತಾ ನಡೆಯುತ್ತಾ ಬರುತ್ತಿರುವಾಗ, ನಮ್ಮ ಬಳಗದವರ್ಯಾರೂ ಕಾಣದಷ್ಟು ದೂರ ಬಂದಿದ್ದೇನೆಂದು ಅರಿವಾಯಿತು. ಒಂದೆರಡು ಕವಲು ದಾರಿಗಳಿದ್ದದರಿಂದ ನಾನು ಅವರಿಂದ ಬೇರೆ ದಾರಿ ಹಿಡಿದೆನೋ ಎಂಬ ಅನುಮಾನವೂ ಕಾಡಲು ಶುರುವಾಯಿತು. ಸ್ವಲ್ಪ ಹೊತ್ತು ಕಾದರೂ ಯಾರದ್ದೂ ಸುಳಿವಿಲ್ಲ. ಬರಿಗೈಲಿ ಬಂದದ್ದರಿಂದ ಪರ್ಸ್, ವಾಚ್, ಮೊಬೈಲ್ ಯಾವುದೂ ಇಲ್ಲ. ಹಾಗಾಗಿ ಗಂಟೆ ಎಷ್ಟಾಯಿತೆಂದು ತಿಳಿಯುವಂತಿರಲಿಲ್ಲ. ಕಾಯುತ್ತಾ ಕೂತರೇ ಗಡುವು ದಾಟಿದರೇ? ನಾನು ಇಲ್ಲೇ ಉಳಿದು ಅವರೆಲ್ಲಾ ಮುಂದೆ ಹೋಗಿರಬಹುದೇ? ಎಂದೂ ಅನಿಸತೊಡಗಿತು. ಸ್ವಲ್ಪ ಹೊತ್ತು ಏನು ಮಾಡುವುದೆಂದು ಅರಿಯದೇ ಚಿಂತಿತಳಾದೆ. ದಾರಿಯುದ್ದಕ್ಕೂ ಅಲ್ಲಲ್ಲಿ ಸೈನಿಕರು ನಿಂತು ಕಾವಲು ಕಾಯುತ್ತಿದ್ದರು. ಅವರ ಬಳಿ ಹೋಗಿ ನಾನು ದಾರಿ ತಪ್ಪಿಲ್ಲ ತಾನೇ? ಎಂದು ವಿಚಾರಿಸಿಕೊಂಡೆ. ಮುಂದೆ ಬರಲು ಹೆಲಿಪ್ಯಾಡಿಗೆ ಕಿ.ಮೀ ಎಂಬ ಬೋರ್ಡ್ ಕಾಣಿಸಿತು. ಏನಾದರಾಗಲಿ, ಅಲ್ಲಿಗೆ ಬಂದೇ ಬರುತ್ತಾರಲ್ಲಾ, ಮುಂದಕ್ಕೇ ಹೋಗುವ ಎಂಬ ಯೋಚನೆಯಲ್ಲಿ ಬಿರಬಿರನೆ ನಡೆದೆ. `ಬಳಗದ ಸದಸ್ಯರೆಲ್ಲಾ ನನ್ನನ್ನು ಕಾಣದೇ ಚಿಂತಿತರಾಗಿ ಹುಡುಕುತ್ತಾ ಇರಬಹುದೇ?' ಎಂಬ ಅನುಮಾನವೂ ಬಂತು. ಸೀತಾನ್ವೇಷಣೆಗೆ ಹೊರಟ ರಾಮ, ದಾರಿಯುದ್ದಕ್ಕೂ ಸಿಕ್ಕಸಿಕ್ಕ ಕಲ್ಲು, ಮರ, ಪಶು, ಪಕ್ಷಿಗಳಲ್ಲಿ "ನನ್ನ ಸೀತೆಯನ್ನು ಕಂಡೀರಾ, ನನ್ನ ಸೀತೆಯನ್ನು ಕಂಡೀರಾ?" ಎಂದು ಕೇಳುತ್ತಾ ಸಾಗಿದ್ದು ನೆನಪಾಯಿತು. ಕೂಡಲೇ ಅಲ್ಲಿ ದಾರಿಯುದ್ದಕ್ಕೂ ನಿಂತಿದ್ದ ಸೈನಿಕರಲ್ಲಿ ` ನೋಡಿ, ನಾನು ಕರ್ನಾಟಕದವಳು. ನನ್ನ ಬಳಗದ ಇನ್ನು ಜನ ಒಟ್ಟಾಗಿ ಬರುತ್ತಿದ್ದಾರೆ. ಅವರು ನನ್ನನ್ನು ಹುಡುಕುತ್ತಿದ್ದರೆ, ಅವರ ಹಾವಭಾವಗಳಿಂದ ನಿಮಗೆ ಅರ್ಥವಾಗಬಹುದು, ಅವರು ನಿಮ್ಮಲ್ಲಿ ಕೇಳಲೂಬಹುದು. ಆಗ, ಬರಿಗಾಲಲ್ಲಿ ನಡೆಯುತ್ತಿದ್ದ ಮಹಿಳೆಯೊಬ್ಬರು, `ಹೆಲಿಪ್ಯಾಡ್ ಕಡೆಗೆ ಹೋಗಿದ್ದೇನೆಂದು ತಿಳಿಸಲು ಹೇಳಿದ್ದಾರೆ' ಎಂದು ತಿಳಿಸಿ, ದಯವಿಟ್ಟು" ಎಂದು ಹೇಳುತ್ತಾ ಮುಂದುವರಿದೆ. ನನ್ನ ಯೋಜನೆ ಕಾರ್ಯಗತವಾಗುವ ಸಂದರ್ಭವೇನೂ ಬಂದಂತಿರಲಿಲ್ಲ. ನಾನು ಚಪ್ಪಲಿ ಇಲ್ಲದೆ ಕುಂಟುತ್ತಾ, ನಿಧಾನಕ್ಕೆ ಹಿಂದಿನಿಂದ ಬರುತ್ತಿದ್ದೇನೆಂದು ತಿಳಿಯುತ್ತಾ ಅವರೆಲ್ಲಾ ಹೆಲಿಪ್ಯಾಡಿಗೆ ಬಂದು ಮುಟ್ಟಲು, ಅಲ್ಲಿ ಆವಾಗಲೇ ಬಂದು ಅವರಿಗೆ ಸ್ವಾಗತ ಕೋರುತ್ತಾ ನಿಂತಿದ್ದ ನನ್ನನ್ನು ನೋಡಿ ಆಶ್ಚರ್ಯವಾಯಿತು. ನನ್ನ ಬರಿಗಾಲ ನಡಿಗೆಯನ್ನು ಕಂಡ ಯಾತ್ರಾರ್ಥಿಗಳು ಯಾರೋ "ಬರಿಗಾಲಲ್ಲಿ ಬರುತ್ತೇನೆಂದು ಹರಕೆ ಹೊತ್ತಿರಬೇಕು, ಪಾಪ, ಏನು ಕಷ್ಟವೋ ಏನೋ" ಎಂದು ಆಡಿಕೊಳ್ಳುತ್ತಿದ್ದರೆಂದು ಸ್ನೇಹಿತೆ ಹೇಳಿದಳು. ಅಂತೂ ಬಿಟ್ಟಿ ಅನುಕಂಪದ ಅಲೆ ನನ್ನ ಚಪ್ಪಲಿ ಮಹಿಮೆಯನ್ನು ಗುಟ್ಟಾಗಿಯೇ ಉಳಿಸಿತು.

ಹೆಲಿಕಾಪ್ಟರ್ ಮರುಪ್ರಯಾಣದ  ವ್ಯವಸ್ಥೆಯ ಸಂಪೂರ್ ಅರಿವು ನಮಗಿರಲಿಲ್ಲ. ಬಂದ ಜನರೇ ಈಗಲೂ ಒಟ್ಟಿಗೇ ಹೋಗುವುದಾ? ಬೇರೆ ಬೋರ್ಡಿಂಗ್ ಪಾಸ್ ಬೇಕಾ? ಇತ್ಯಾದಿ ಸಂಶಯಗಳಿದ್ದವು. ಸರಿಯಾದ ಮಾರ್ಗದರ್ಶಕರೂ ಇರಲಿಲ್ಲ. ಅವರಿವರನ್ನು ಕೇಳುತ್ತಾ ವಿವರ ಪಡೆದುಕೊಂಡೆವು. ಇಲ್ಲಿ ಮತ್ತೆ ನಮ್ಮ ತೂಕಕ್ಕೆ ಸರಿಯಾಗಿ `ಗುಂಪುಗಾರಿಕೆ' ನಡೆಸಿ, ಕ್ರಮಸಂಖ್ಯೆಯನ್ನು   ನಮ್ಮ ಬಳಿ ಇದ್ದ ಬೋರ್ಡಿಂಗ್ ಪಾಸಿನಲ್ಲೇ ಬರೆದು ಕೊಡುತ್ತಾರೆ. ಈಗ ನಾವು ದಂಪತಿಗಳು ಜತೆಯಾಗಿ ಪ್ರಯಾಣಿಸುವಂತೆ ಕ್ರಮಸಂಖ್ಯೆಗಳು ಬಂದವು. `ದೇವಿಮಹಾತ್ಮೆ' ಎಂದುಕೊಂಡೆ! ದರ್ಶನವಾದದ್ದೇ, ಗಂಡ-ಹೆಂಡಿರ ತೂಕದಲ್ಲಿ ಹೊಂದಾಣಿಕೆಯಾಗಿದೆ ಎಂದು ಮನದಲ್ಲೇ ನಕ್ಕೆ.

ಇಲ್ಲಿ ಮತ್ತೆ ನಮ್ಮ ಹಾರಾಟದ ಸರದಿಗಾಗಿ ಒಂದೂವರೆ ಗಂಟೆ ಕಾದೆವು. ಹೊಟ್ಟೆ ತಾಳ ಹಾಕುತ್ತಿತ್ತು. ವೈಟಿಂಗ್ ಹಾಲಿನ ಪಕ್ಕದಲ್ಲೇ ಒಬ್ಬಾತ ಕೋನ್ ಐಸ್ ಕ್ರೀಮ್ ಮಾರುತ್ತಿದ್ದ. ಈಗ ಯಾರಿಗೂ ತೂಕದ ಹೆದರಿಕೆ ಇರಲಿಲ್ಲವಾದ್ದರಿಂದ, ಭರ್ಜರಿ ಹೊಡೆದೆವು!

ಹೋಗುವ ಮತ್ತು ಬರುವ ಎರಡೂ ಕಡೆಗಿನ ಹೆಲಿಕಾಪ್ಟರ್ ಪ್ರಯಾಣಕ್ಕೆ ಸುಮಾರು ,೫೦೦/- ರೂಪಾಯಿಗಳನ್ನು ಪಾವತಿಸಿದ್ದೆವು. ಅಶೋಕವರ್ಧನ- ದೇವಕಿ ದಂಪತಿ ತಮ್ಮ ವಯಸ್ಸಿನಲ್ಲೂ ಲೀಲಾಜಾಲವಾಗಿ ನಡಿಗೆಯಲ್ಲೇ ಪೂರೈಸಿದ್ದನ್ನೂ, ಬೆಟ್ಟದುದ್ದಕ್ಕೂ ಅವರು ಅನುಭವಿಸಿದ ವೈವಿಧ್ಯತೆಗಳನ್ನೂ ಓದುವಾಗ, ದುಡ್ಡು ಕೊಟ್ಟು ಕಳಕೊಂಡದ್ದು ಬೆಟ್ಟದಷ್ಟು ಎಂದು ಅನಿಸಿತು. "ಏನಾದರಾಗಲಿ ವಿದ್ಯಾ, ನಾನಂತೂ ಹೆಂಗಸರ ಗುಂಪು ಕಟ್ಟಿ, ತಾಕತ್ತಿಗೆ ತಾಲೀಮುಗಳನ್ನೆಲ್ಲಾ ಮಾಡ್ಸಿ, ಮೈ, ಕೈ ಹುರಿಮಾಡಿಕೊಂಡು ಮುಂದಿನ ಬಾರಿ ನಡಿಗೆಯಲ್ಲೇ ಬರುವವಳು, ಪುರುಸೊತ್ತಿಲ್ಲದ ಗಂಡಸರು, ಆಫೀಸು, ಆಫೀಸು ಅಂತ ಕೂತಿರಲಿ" ಎಂದು ನನ್ನ ಸ್ನೇಹಿತೆ ಹೇಳಿದ್ದು ನೆನಪಾಗುತ್ತಿದೆ.

(ಮುಂದುವರಿಯಲಿದೆ)

1 comment: