ಬಿ.ಎಂ ರೋಹಿಣಿಯವರ
ಆತ್ಮಕಥಾನಕ ಧಾರಾವಾಹಿಯಲ್ಲಿ ಮೊದಲ ಭಾಗ
[ಸಂಪಾದಕೀಯ: ನನ್ನಂಗಡಿಯ ಖಾಯಂ ಗಿರಾಕಿಗಳಲ್ಲಿ
ಮುಗ್ದ ನಗೆ ಕೊಟ್ಟರೂ ಬಹುತೇಕ ಮೌನವೇ ಮಾತಾಗಿ ಕಾಣುತ್ತಿದ್ದವರು ಬಿ.ಎಂ ರೋಹಿಣಿ. ಎಲ್ಲೋ
ಟೀಚರ್ರು, ಸಾಹಿತ್ಯ ಮಾತ್ರವಲ್ಲದೆ ನಾಟಕಾದಿ ಲಲಿತಕಲೆಗಳಲ್ಲೂ ಅಪರಿಮಿತ ಆಸಕ್ತಿಯುಳ್ಳವರು ಎಂದಷ್ಟೇ
ಮೊದಮೊದಲ ಪರಿಚಯ. ಸಂಶೋಧಕ ಕೆಲಸದ ಅಮಲಿನಲ್ಲಿ ಊರು, ಹೆಂಡತಿ ಮಕ್ಕಳನ್ನೂ ಮರೆತು ದುಡಿಯುತ್ತಿದ್ದ
ಕನ್ನಡದ ಕಟ್ಟಾಳು ಶ್ರೀನಿವಾಸ ಹಾವನೂರರ ಗರಡಿಯಲ್ಲಿ ಈ ನಿವೃತ್ತ, ಬಡಕಲು ಟೀಚರ್ ರೋಹಿಣಿ ಸಾಮು
ನಡೆಸಿದಾಗ ಆಶ್ಚರ್ಯಪಟ್ಟಿದ್ದೆ. “ಸುಮಾರು ಎಂಟು ಗಂಟೆಗೂ ಮೊದಲೇ ನಾಟಕ ಮುಗಿಯದಿದ್ದರೆ
ನನಗೆ ಕುಡುಪಿಗೆ ಹೋಗಲು ಬಸ್ಸು ಸಿಗುದಿಲ್ಲ ಸಾರ್” ಎಂದೆಲ್ಲೋ ಇವರು ಒಮ್ಮೆ ಹೇಳಿದ್ದು
ಕೇಳಿದ್ದೆ. ಅದಕ್ಕಿಂತ ಹೆಚ್ಚಿಗೆ ವಿಚಾರಿಸಲು ನನ್ನದೇ ಮಿತಿಯಿಂದಾಗಿ ನಾನು ಹೆದರಿದ್ದೆ. ಯಾಕೆಂದರೆ,
ಅಳಿದೂರಿಗೆ ಉಳಿದವನೇ ಗೌಡ ಎನ್ನುವಂತೆ ಇತ್ತು ನನ್ನಂಗಡಿ. ಹಾಗಾಗಿ ಅಲ್ಲಿಗೆ ಬರುವ ಹೆಚ್ಚು
ಕಮ್ಮಿ ಪ್ರತಿ ಗಿರಾಕಿಯೂ ವಿಶಿಷ್ಟರೇ ಆಗಿರುತ್ತಿದ್ದರು. ನಾನಾದರೋ ಹೆಚ್ಚು ಒಡನಾಟದ
ಪರಿಚಯವನ್ನಷ್ಟೇ ನೆನಪಿನಲ್ಲುಳಿಸಿಕೊಳ್ಳುವ ತಾಕತ್ತಿನವನು. ವ್ಯಾಪಾರದ ಮಿತಿಯಲ್ಲಿ ವಿಚಾರಿಸಿದ
ಹೆಸರು, ಪರಿಚಯಗಳೆಲ್ಲ ಹೆಚ್ಚಾಗಿ ನನ್ನ ಮನೋಭಿತ್ತಿಯಲ್ಲಿ ಉಳಿಯುತ್ತಲೇ ಇರಲಿಲ್ಲ.
ಆ ನೆನಪುಗಳ ಚಂದ್ರದೋಣಿಯ ಪಯಣವಿದೆಯಲ್ಲಾ ಅದಕ್ಕೆ
ಸಮನಾದ ಆನಂದ ಬೇರೊಂದು ಇರಲಾರದು. ಶಿಶಿರದಲ್ಲಿ ಚೈತ್ರದ ತಂಗಾಳಿ ಬೀಸಿದಂತೆ ಮನಸ್ಸು ಪುಳಕಗೊಳ್ಳುತ್ತದೆ.
ಬಂಟ್ವಾಳದ ತುಂಬೆಯ ಕಾಣೆಮಾರಿನಲ್ಲಿ ಬೇಸಾಯದಲ್ಲಿ ನಿರತರಾಗಿದ್ದ ಕುಟುಂಬ ನನ್ನಪ್ಪನದು.
ನಯಂಪಳ್ಳಿ ಸುಂದರರಾಯರ ಗೇಣಿ ಒಕ್ಕಲುಗಳಾಗಿದ್ದ ಈ ಕುಟುಂಬಕ್ಕೆ ಸುಮಾರು ೬೦-೭೦ ಎಕ್ರೆಗಿಂತಲೂ
ವಿಸ್ತಾರವಾಗಿ ಕೃಷಿಭೂಮಿ, ಗುಡ್ಡೆಗಳು ಇದ್ದುವು. ಗುಡ್ಡೆಯಲ್ಲಿ ಸಾಕಷ್ಟು ತಾಳೆ ಮರಗಳಿದ್ದುವು.
ಹಾಗಾಗಿ ಕಳ್ಳು ತೆಗೆದು ಬೆಲ್ಲ ತಯಾರಿಸುವ ಕಸುಬೂ ಇತ್ತು. ನನ್ನಜ್ಜ ಕಂಡಪ್ಪ, ಪೂವಮ್ಮ
ದಂಪತಿಗಳಿಗೆ ಒಂದು ಹೆಣ್ಣು, ನಾಲ್ಕು ಗಂಡು ಮಕ್ಕಳು – ಉಮ್ಮರೆ, ಧೂಮ, ಜಾಯಿರ, ಕೊಗ್ಗಪ್ಪ ಮತ್ತು
ಕಣ್ಣ. ಅಲ್ಲದೆ ಕೂಡು ಕುಟುಂಬದ ಸೋದರ, ಸೋದರಿಯರ ಸಂಸಾರವೂ ಆ ಮನೆಯಲ್ಲಿತ್ತು. ೧೫೦ ವರ್ಷಗಳ ಹಿಂದೆ
ಆ ಮನೆಯ ಮಕ್ಕಳಿಗೆ ಅಕ್ಷರ ಕಲಿಸಲು ಕೇರಳದ ಪಂಡಿತರೊಬ್ಬರನ್ನು ಕರೆಸಿ, ಮನೆಯಲ್ಲೇ
ಇರಿಸಿಕೊಂಡಿದ್ದರಂತೆ. ಮಕ್ಕಳ ದೌರ್ಭಾಗ್ಯವೋ ಪಕ್ಕದ ಮನೆಯ ಹುಡುಗಿಯ ಸೌಭಾಗ್ಯವೋ ತಿಳಿಯದು. ಆ
ಹುಡುಗಿಯನ್ನು ಅಪಹರಿಸಿ ಓಡಿ ಹೋದ ಪಂಡಿತನ ಪತ್ತೆಯಿಲ್ಲ.
ಕಂಡಜ್ಜನ ಕೂಡು ಕುಟುಂಬದ ಮಕ್ಕಳಲ್ಲಿ ಐದೂ
ಮಂದಿಯನ್ನು ಬಂಟ್ವಾಳದ ಶಾಲೆಗೆ ಕಳಿಸಿದವರಲ್ಲಿ ಧೂಮ ಮತ್ತು ಕೊಗ್ಗಪ್ಪ ಮಾತ್ರ ನಾಲ್ಕನೆಯ ತರಗತಿಯವರೆಗೆ
ಓದಿದರು. ಉಳಿದವರು ಶಾಲೆಗೆ ನಮಸ್ಕಾರ ಹಾಕಿ ಬೇಸಾಯದಲ್ಲಿ ನಿರತರಾದರು. ನಾಲ್ಕನೆಯವರೆಗೆ ವಿದ್ಯೆ
ದಕ್ಕಿಸಿಕೊಂಡ ಧೂಮ ನನ್ನ ದೊಡ್ಡಪ್ಪ, ಕಾಣೆಮಾರನ್ನು ಬಿಟ್ಟು ಮಂಗಳೂರಿನಲ್ಲಿ ವೈದ್ಯವೃತ್ತಿ
ಕಲಿತು ಪಂಡಿತರೆನಿಸಿಕೊಂಡರು. ಕೊಗ್ಗಪ್ಪ ನನ್ನ ಅಪ್ಪ. ಏನೇನೋ ಹವ್ಯಾಸಗಳನ್ನು ರೂಢಿಸಿಕೊಂಡು,
ಉಂಡಾಡಿಗುಂಡನಂತೆ ಮೆರೆದರು.
ಆ ಹಳ್ಳಿಯಲ್ಲಿ ನಾಲ್ಕಕ್ಷರ ಕಲಿತವನೆಂಬ ಗೌರವ
ಉಂಡುಟ್ಟು ಖರ್ಚುಮಾಡಲು ಬೇಕಾದಷ್ಟು ಹಣ, ಬುದ್ಧಿವಂತನೆಂಬ ಹೆಗ್ಗಳಿಕೆಯೂ ಸೇರಿ ಯುವಕನಾದ
ನನ್ನಪ್ಪ ಊರಿನ ಸಣ್ಣ ಪಾಳೆಯಗಾರನಂತೆ ವರ್ತಿಸಲು ಆ ಕಾಲದ ಹಳ್ಳಿ ಪರಿಸರದಲ್ಲಿ ಅವಕಾಶವಿತ್ತು, ಹತ್ತೊಂಬತ್ತನೆಯ
ಶತಮಾನದ ಉತ್ತರಾರ್ಧದಲ್ಲಿ ನಮ್ಮ ಸಮುದಾಯದ ಹೆಣ್ಣುಮಕ್ಕಳು ರವಿಕೆ ತೊಟ್ಟರೆ ಅದನ್ನು
ಹರಿಯಬೇಕೆಂದು ಪ್ರಯತ್ನಿಸುತ್ತಿದ್ದ ಜಮೀನ್ದಾರರಿದ್ದರಂತೆ. ಕಾಣೆಮಾರಿನ ಈ ಬಿಸಿರಕ್ತದ ತರುಣರು
ಒಟ್ಟಾಗಿ ಅವರ ಸೊಕ್ಕನ್ನು ಮುರಿದ ಕತೆಗಳನ್ನು ಅಪ್ಪನ ಮಿತ್ರ ಬಳಗ ಬಹಳ ಸ್ವಾರಸ್ಯವಾಗಿ
ಹೇಳಿದ್ದನ್ನು ಕೇಳಿದ್ದೇನೆ. ಜಾತಿಕಲಹ, ಕುಟುಂಬ ಕಲಹ ಊರಿನ ವ್ಯಾಜ್ಯಗಳಲ್ಲೆಲ್ಲಾ ಈ ಯುವ ಸೇನೆ
ಹಾಜರಿದ್ದು ಶೋಷಿತರಿಗೆ ನ್ಯಾಯ ಒದಗಿಸಿಕೊಡುತ್ತಿದ್ದರಂತೆ. ಹಳ್ಳಿಯ ರಾಜಕೀಯದಲ್ಲಿ ಸಕ್ರಿಯವಾಗಿ
ತೊಡಗಿಸಿಕೊಂಡ ನನ್ನಪ್ಪನ `ಅಥರ್ವಣ’ಗಳ ಒಂದೊಂದು ಕತೆಯೂ ರೋಮಾಂಚಕ. ಹುರಿಗಟ್ಟಿದ ಮಾಂಸಖಂಡ, ಸುಂದರ
ಗೌರವರ್ಣ, ನಾಯಕನೆಂಬ `ಹೆಡ್ ವೇಯಿಟ್’ನ ಕಿರೀಟ ಇಷ್ಟಿದ್ದರೆ ಈ ಜಗದಲ್ಲಿ ನನಗೆ ಸರಿಸಮ ಯಾರಿಲ್ಲ
ಎಂಬ ಅಹಂಕಾರ ಹುಟ್ಟದಿರುತ್ತದೆಯೇ? ಹಲವು ಒಳ್ಳೆಯ ಹವ್ಯಾಸಗಳ ಜೊತೆಗೆ ಕೆಲವು ಕೆಟ್ಟ ಹವ್ಯಾಸಗಳು
ಇದ್ದುವು. ಶುಭ್ರವಾದ ಬಟ್ಟೆಯಲ್ಲಿ ಎದ್ದು ಕಾಣುವ ಕಪ್ಪು ಕಲೆಯಂತೆ ಆ ಕೆಟ್ಟ ಹವ್ಯಾಸಗಳು
ಅವರನ್ನು ದುರ್ಬಲಗೊಳಿಸಿತು. ಯಕ್ಷಗಾನ ತಾಳ ಮದ್ದಲೆ, ಬಯಲಾಟಗಳ ಹುಚ್ಚಿಗಾಗಿ ವಾರಗಟ್ಟಲೆ ಮನೆಗೆ
ಬಾರದೆ ಸುತ್ತುತ್ತಿದ್ದರು. ಶಾಸ್ತ್ರೀಯ ಸಂಗೀತವನ್ನು ಪ್ರಾಥಮಿಕ ಹಂತದಲ್ಲಿ ಕಲಿಯುತ್ತಿರುವಾಗಲೇ
ಆಲಾಪನೆ ಮಾಡಲು ನದಿ ನೀರಲ್ಲಿ ಕುಳಿತು ಗಂಟೆಗಟ್ಟಲೆ ಅಭ್ಯಾಸ ಮಾಡುತ್ತಿದ್ದರಂತೆ. ಇನ್ನು ಕಂಪೆನಿ
ನಾಟಕಗಳು ಮಂಗಳೂರಿಗೆ ಬಂದರೆ ತಪ್ಪಿಸಿಕೊಳ್ಳುತ್ತಲೇ ಇರಲಿಲ್ಲ. ನನ್ನನ್ನು ಬಾಲ್ಯದಲ್ಲಿ
ಕರೆದುಕೊಂಡು ಹೋದ ನೆನಪಿದೆ. ಎಲ್ಲಕ್ಕಿಂತ ವಿಶೇಷವಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಸೇರಿಕೊಂಡು
ಚರಕಾದಿಂದ ನೂಲುವುದು, ಖಾದಿಬಟ್ಟೆಯನ್ನು ಹೊತ್ತು ಹಳ್ಳಿ ಹಳ್ಳಿಯಲ್ಲಿ ಮಾರಾಟ ಮಾಡುವುದು ಮುಂತಾದ
ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಉತ್ತಮ ಸಾಹಿತ್ಯ ಕೃತಿಗಳ ಸಂಗ್ರಹ ಅವರ ಬಳಿ ಇತ್ತು.
ಕುಮಾರವ್ಯಾಸನೆಂದರೆ ಪರಮ ಪ್ರೀತಿ. ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು ಮತ್ತು ಬಡಕಬೈಲು
ಪರಮೇಶ್ವರರಾಯರೆಂದರೆ ಬಹಳ ಗೌರವವಿತ್ತು. ಸಾಹಿತಿಗಳ, ಕಲಾವಿದರ, ಸ್ವಾತಂತ್ರ್ಯ ಹೋರಾಟಗಾರರ
ಸಹವಾಸವಿದ್ದು ಕೂಡಾ ನನ್ನಪ್ಪ ಯಾವುದೇ ಒಂದು ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಲ್ಲದೆ ಜಂಗಮನಂತೆ
ಸುತ್ತಾಡಿದರು. ಜೀವನವನ್ನು ಪ್ರವಾಹವೆನ್ನುತ್ತಾರೆ. ಈ ಪ್ರವಾಹ ದಂಡೆಮೀರಿ, ದಿಕ್ಕುತಪ್ಪಿ
ಎಲ್ಲೆಲ್ಲೋ ಹರಿಯುವಂತಾದುದು ಹೇಗೆ ಎಂಬುದೇ ನನಗೆ ಅನೂಹ್ಯ.
ನನಗೆ ಬುದ್ಧಿ ತಿಳಿಯುವಷ್ಟು ಹೊತ್ತಿಗೆ ನನ್ನ
ಅಪ್ಪ ರಸ ಹಿಂಡಿದ ಕಬ್ಬಿನ ಜಲ್ಲೆಯಂತಿದ್ದರು. ಅವರ ಓರಗೆಯ ಹಿರಿಯರು ಮತ್ತು ಬಂಧುಗಳು ಹೇಳಿದ
ಯೌವನದ ಗತವೈಭವವನ್ನು ನಂಬುವಂತಹ ಯಾವ ಪಳೆಯುಳಿಕೆಯೂ ಅವರಲ್ಲಿ ಇರಲಿಲ್ಲ. ೩೪ನೇ ವಯಸ್ಸಿನಲ್ಲಿ
ಅವರನ್ನು ಅಪ್ಪಿಕೊಂಡ ಅಸ್ತಮಾ ಕಾಯಿಲೆ ಜೀವನಪರ್ಯಂತ ಅಗಲಿರಲಿಲ್ಲ. ಮನುಷ್ಯ ಜೀವನವು ದುರಂತಗಳ
ಸಂಗಮವೆನ್ನುತ್ತಾರೆ. ನನ್ನ ಅಪ್ಪ ತನ್ನ ಮನಸ್ಸಿನ ಆಸೆಗಳನ್ನು ಕಳಕೊಂಡದ್ದು ಒಂದಾದರೆ,
ಕಳಕೊಂಡದ್ದನ್ನು ಮತ್ತೆ ಹುಡುಕುವುದು ಎರಡನೆಯ ದುರಂತವಾಯಿತು. ಜೀವನವೆಂಬ ದೊಡ್ಡ ಸೌಧವನ್ನು
ಕಟ್ಟಲು ಹೊರಟ ನನ್ನಪ್ಪ ಅದಕ್ಕೆ ಸರಿಯಾದ ಗಟ್ಟಿಯಾದ ಪಂಚಾಂಗವನ್ನೇ ಹಾಕಿರಲಿಲ್ಲವೆನ್ನುವುದು
ಖೇದದ ಸಂಗತಿಯಾಗಿತ್ತು. ಕೃಷಿ, ವ್ಯವಹಾರ ಎಲ್ಲವನ್ನೂ ಕಡೆಗಣಿಸಿ ಊರ ಉಸಾಬರಿಗೆ ಹೊರಟ ಮಗನನ್ನು
ಕಂಡು ಕಂಡಜ್ಜ ಇವನಿಗೆ ವಿದ್ಯೆ ಕಲಿಸಿದ್ದೇ ತಪ್ಪಾಯಿತು ಎಂದು ಪಶ್ಚಾತ್ತಾಪಪಡುತ್ತಿದ್ದರಂತೆ.
ಖಾದಿ ಬಟ್ಟೆ ಹೊತ್ತುಕೊಂಡು ಮಾರಾಟ ಮಾಡುತ್ತಿದ್ದಾಗ ಕಂಡಜ್ಜ ನಿಧನರಾದರು. ಕೊನೆಗಾಲದಲ್ಲಿ
ಮಗನನ್ನು ತುಂಬಾ ಸಲ ನೆನಪಿಸಿಕೊಂಡು ಬಂದನೇ ಬಂದನೇ ಎಂದು ಕೇಳುತ್ತಿದ್ದರಂತೆ. ಕಂಡಜ್ಜ ತೀರಿ
ವಾರದ ಬಳಿಕ ಮನೆಗೆ ಬಂದಾಗ ನನ್ನಪ್ಪ ಮೊದಲ ಬಾರಿಗೆ ಗೋಳೋ ಎಂದು ಕಣ್ಣೀರಿಟ್ಟರಂತೆ. ಅಲ್ಲಿಗೆ
ಖಾದಿ ಬಟ್ಟೆಯ ವ್ಯಾಪಾರ ಮತ್ತು ಸ್ವಾತಂತ್ರ್ಯ ಚಳುವಳಿಯ ಒಡನಾಟ ಬಂದ್ ಆಯ್ತು. ಯಥಾರ್ಥವಾಗಿ
ಏನಾದರು ಸಾಧನೆ ಮಾಡಬೇಕೆಂಬ ಹಂಬಲವಾಗಲೀ ಅದಕ್ಕಾಗಿ ಕಷ್ಟ ಪಟ್ಟು ಪರಿಶ್ರಮ ಪಡಬೇಕೆಂಬ
ಇಚ್ಛೆಯಾಗಲೀ ಅವರಲ್ಲಿ ಇರಲೇ ಇಲ್ಲ. ಕೃಷಿಕ ಮನೆತನದಲ್ಲಿ ಹುಟ್ಟಿದರೂ ಬೆವರಿಳಿಸಿ ದುಡಿದವರಲ್ಲ.
ಕೆಲಸ ಮಾಡಿಸಿ ಗೊತ್ತು, ಮಾಡಿ ಗೊತ್ತಿಲ್ಲ. ಇಂತಹ ಸುಖಪುರುಷನಾದ ನನ್ನಪ್ಪನ `ಕಲ್ಯಾಣಗುಣ’ಗಳ
ಕತೆಗಳು ರಂಜನೀಯವಾಗಿವೆ. ಬದುಕಿನಲ್ಲಿ ಸುಖ, ಆನಂದ ನೀಡುವ ಏನೇನು ಪರಿಕರಗಳಿವೆಯೋ ಅವೆಲ್ಲವನ್ನು
ಆತುರಾತುರವಾಗಿ ಬಕಬಕನೆ ತಿಂದು ತೇಗಿದ ನನ್ನಪ್ಪನ ಬದುಕಿನ ಉತ್ತರಾರ್ಧ ಮಾತ್ರ ಯಾತನಾಮಯವಾದದ್ದು
ದುಃಖದ ಸಂಗತಿ.
ಇಂಥ ನನ್ನಪ್ಪನಿಗೆ ಬಾಳ ಸಂಗಾತಿಯಾಗಿ ಲಭಿಸಿದ
ನನ್ನಮ್ಮ ತನ್ನ ಕಾಲಕೆಳಗೆ ಹರಿಯುವ ಕೆಸರು ನೀರನ್ನು ಕಳೆದು ಶುಭ್ರವಾದ ತಿಳಿನೀರನ್ನು ಹರಿಯುವಂತೆ
ಮಾಡಿದರು. ಅಪ್ಪನ ಒಳ್ಳೆತನ ಬೆಟ್ಟಕ್ಕಿಂತ ದೊಡ್ಡದು, ಅಮ್ಮನ ಒಳ್ಳೆತನ ಸಮುದ್ರಕ್ಕಿಂತಲೂ
ಆಳವಾದದ್ದು ಅನ್ನುತ್ತಾರೆ. ಬೆಟ್ಟದ ಸ್ಥಿರತೆ ಮತ್ತು ಸಮುದ್ರದ ಗಾಂಭೀರ್ಯ ಇವೆರಡನ್ನು ಮಕ್ಕಳಿಗೆ
ಕಲಿಸಿದವರವರು. ಸೋಲಿನ ಸರದಾರನಾದ ನನ್ನಪ್ಪ ಕುಸಿದು ಕೂತಾಗ ಅಪ್ಪನಲ್ಲಿ ಜೀವನ ಪ್ರೀತಿಯನ್ನು ತುಂಬಿದವಳು
ಅಮ್ಮ. ಅವಮಾನ, ಸೋಲು, ಹಿಂಸೆ, ದಾರಿದ್ರ್ಯ ಇವೆಲ್ಲವನ್ನು ಎದೆಗೂಡಿನಲ್ಲಿ ಬಚ್ಚಿಟ್ಟುಕೊಂಡೇ
ಸ್ವಾಭಿಮಾನವೆಂಬ ನಿಧಿಯನ್ನು ಸೆರಗಿನಲ್ಲಿ ಕಟ್ಟಿಕೊಂಡೇ ನಮ್ಮನ್ನು ಜೀವನ ಪಥದಲ್ಲಿ ಮುನ್ನಡೆಸಿದರು.
ನನ್ನಮ್ಮನ ಬದುಕೇ ಒಂದು ಸಾಹಸಯಾನ.
ನನ್ನಮ್ಮ ಇಂದು ಬದುಕಿದ್ದರೆ ಶತಮಾನ
ಆಚರಿಸುತ್ತಿದ್ದರು. ೧೯೧೫ರಲ್ಲಿ ಹುಟ್ಟಿದ ಆಕೆಗೆ ೧೯೩೪-೩೫ರಲ್ಲೋ ವಿವಾಹವಾಗಿರಬೇಕು.
ಬಂಗ್ರಮಂಜೇಶ್ವರದಿಂದ ವಧುವಿನ ದಿಬ್ಬಣ ಬಂದದ್ದು ದೋಣಿಯಲ್ಲಿ. ಮೊದಲ ದಿನವೇ ಕಾಣೆಮಾರಿಗೆ ಬಂದು
ಮರುದಿನ ಮದುವೆಯಾಗಿ ಸಾಯಂಕಾಲ ವಧುದಿಬ್ಬಣ ತನ್ನ ತವರಿಗೆ ಮರಳಿದೆ. ನಮ್ಮ ಸಮುದಾಯದಲ್ಲಿ ವಧು ವರನ
ಮನೆಗೆ ಹೋಗಿ ಮದುವೆಯಾಗಿ ವರನನ್ನು ಕರೆದುಕೊಂಡು ಬರುವುದು ಸಂಪ್ರದಾಯ. ವಧುವಿನ ಮನೆಯಲ್ಲಿ ಒಂದು
ದಿನ ನಿಗದಿಗೊಳಿಸಿ ವರನ ಬಂಧುಗಳಿಗೆಲ್ಲಾ `ತಮ್ಮಣ’ (ಮಾಂಸದೂಟದ ಔತಣ - ಮಾಮಿಸಿಕೆ) ನೀಡುವ ಕ್ರಮ.
ಎರಡು ಕುಟುಂಬದ ಬಂಧುಗಳು ಪರಸ್ಪರರನ್ನು ಭೇಟಿಯಾಗುವ ಸಂದರ್ಭ. ಅಂದು ಹಿರಿಯರ ಸಮ್ಮುಖದಲ್ಲಿ ಊರ
ಗುರಿಕಾರರು ಮುಖಂಡರು ಎಲ್ಲರೂ ಸೇರಿ ಹೆಣ್ಣನ್ನು ಗಂಡನ ಮನೆಗೆ ಕಳಿಸಿಕೊಡುವಾಗ ಬಹಳ ಹೃದಯಸ್ಪರ್ಷಿಯಾದ
ಮಾತುಗಳನ್ನಾಡುತ್ತಾರೆ. ಆಗ ನೆರೆದವರೆಲ್ಲರೂ ಹನಿಗಣ್ಣಾಗಿ ಹೆಣ್ಣನ್ನು ಗಂಡಿನ ಕಡೆಯವರಿಗೆ
ಒಪ್ಪಿಸುವ ಘಳಿಗೆ ಇದೆಯಲ್ಲಾ ಅದು ಅತ್ಯಂತ ಭಾವುಕವಾದ ಕ್ಷಣವಾಗಿದೆ. ಕಾಳಿದಾಸನ ಶಾಕುಂತಳಾ ನಾಟಕದ
ನಾಲ್ಕನೇ ಅಂಕದ, ನಾಲ್ಕು ಶ್ಲೋಕಗಳನ್ನು ಬಹಳ ಕೊಂಡಾಡುವುದನ್ನು ಕೇಳಿದ್ದೇವೆ. ಅದೇ ಸನ್ನಿವೇಶ
ಪ್ರತೀ ಕುಟುಂಬದಲ್ಲೂ ಇರುತ್ತಿತ್ತು. ಸಂಚಾರ ಸೌಲಭ್ಯಗಳಿಲ್ಲದ ಆ ಕಾಲದಲ್ಲಿ ಮದುವೆಯಾದ ಮೇಲೆ
ಮತ್ತೆ ತವರಿಗೆ ಬರಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿಯಿತ್ತು. ಆದುದರಿಂದ ಹೆಣ್ಣೊಪ್ಪಿಸಿ
ಕೊಡುವಾಗ ಬಂಧು ಬಾಂಧವರೆಲ್ಲರೂ ಹೆಗಲಿನ ಶಾಲನ್ನು ಕಣ್ಣಿಗೊತ್ತಿಕೊಂಡರೆ ಮಹಿಳೆಯರೆಲ್ಲರೂ
ಸೆರಗಿನಲ್ಲಿ ಕಣ್ಣೊರೆಸಿಕೊಳ್ಳುತ್ತಿದ್ದರು. ಕಿಟಿಕಿಯ ಅಡ್ಡದಲ್ಲಿ, ಬಾಗಿಲ ಸಂದಿಯಲ್ಲಿ, ಕೋಣೆಯ
ಮೂಲೆಯಲ್ಲಿ, ಅಡುಗೆ ಕೋಣೆ ಬಚ್ಚಲುಕೋಣೆಗಳ ಮೂಲೆಗಳಲ್ಲಿ ಮುಸುಮುಸು ಅಳುವ ದೃಶ್ಯ
ಸಾಮಾನ್ಯವಾಗಿತ್ತು. ಅಂದಿನಿಂದ ಆಕೆ ಸಂಪೂರ್ಣವಾಗಿ ಗಂಡನ ಮನೆಗೆ ಸೇರಿದವಳು. ಆದರೆ `ಕೊಟ್ಟ
ಹೆಣ್ಣು ಕುಲಕ್ಕೆ ಹೊರಗೆ’ ಎಂಬ ಭಾವನೆ ಮಾತ್ರ ನಮ್ಮ ಕುಲದಲ್ಲಿರಲಿಲ್ಲ. ಗಂಡನ ಮನೆಯಲ್ಲಿ ಏನಾದರೂ
ಆಕೆಗೆ ತೊಂದರೆಯಾದರೆ ತವರಿನ ಬೆಂಬಲ, ಆಸರೆ ಸದಾ ಸಿಗುತ್ತಿತ್ತು. ಮಾತೃ ಪ್ರಧಾನ ವ್ಯವಸ್ಥೆಯಿದ್ದ
ನಮ್ಮ ಸಮುದಾಯದಲ್ಲಿ ಎರಡನೇ ಮೂರನೇ ಮದುವೆಯಾಗುವುದು ಸಾಮಾನ್ಯವಾಗಿತ್ತು.
“ನನ್ನ ಮಕ್ಕಳು, ನಿನ್ನ ಮಕ್ಕಳು, ನಮ್ಮ ಮಕ್ಕಳು”
ಎಂಬ ಬಾಂಧವ್ಯವುಳ್ಳ ಹಲವಾರು ಕುಟುಂಬಗಳನ್ನು ನಾನು ಬಾಲ್ಯದಲ್ಲಿ ಕಂಡಿದ್ದೇನೆ. ಗಂಡಸರಂತೂ ಎರಡು
ಮೂರು ಮದುವೆ ಅಂದರೆ `ಹೆಣ್ಣನ್ನು ಇಟ್ಟುಕೊಳ್ಳುವುದು’ ಪ್ರತಿಷ್ಠೆಯ ಸಂಗತಿಯಾಗಿತ್ತು. `ಕೆಸರು
ಕಂಡಲ್ಲಿ ತುಳಿಯುವುದು, ನೀರು ಕಂಡಲ್ಲಿ ತೊಳೆಯುವುದು’ ಅಂದಿನ ಕಾಲದ ಪುರುಷರಲ್ಲಿ ಸಾಮಾನ್ಯ
ಸಂಗತಿಯಾಗಿತ್ತು. ಆಧುನಿಕ ಕಾಲದಲ್ಲಿ ಹೆಣ್ಣು ಒಂದಿಷ್ಟು ಸ್ವರವೆತ್ತಿ ಮಾತಾಡುವ ಧೈರ್ಯ
ಹೊಂದಿದ್ದಾಳೆ ಎಂಬುದನ್ನು ಬಿಟ್ಟರೆ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳಲ್ಲಿ ಇಂತಹ
ಘಟನೆಗಳು ಇಂದಿಗೂ ಸಾಮಾನ್ಯವಾಗಿವೆ.
ಕಾಣೆಮಾರಿನದ್ದು ಮುಳಿಹುಲ್ಲಿನ ಛಾವಣಿಯಿರುವ, ಮೂರು ಕಡೆಯಿಂದ ಕಟ್ಟಡವಿದ್ದು,
ಮಧ್ಯದಲ್ಲಿ ವಿಶಾಲವಾದ ಅಂಗಳವಿರುವ ಮನೆ. ಮನೆಯ ಪಕ್ಕದಲ್ಲಿ ಹರಿಯುವ ತೋಡು, ಪ್ರಾಯಶಃ
ನೇತ್ರಾವತಿಯನ್ನು ಎಲ್ಲೋ ಸಂಧಿಸುತ್ತಿರಬೇಕು. ಒಂದು ದಂಡೆಯಿಲ್ಲದ ಬಾವಿಯಲ್ಲಿ ವರ್ಷವಿಡೀ ನೀರು
ಜಿನುಗುತ್ತಿತ್ತು. ಅದರಿಂದ ಬಗ್ಗಿ ನೀರೆತ್ತುತ್ತಿದ್ದರು. ಕಣ್ಣು ಹಾಯಿಸುವಷ್ಟು ದೂರದವರೆಗೂ
ವಿಶಾಲವಾದ ಗದ್ದೆಗಳು ಅದರಾಚೆಗೆ ಹಸಿರು ಹೊದ್ದಗುಡ್ಡೆಗಳು. ನನ್ನ ಸ್ಮೃತಿಪಟಲದಲ್ಲಿ ಸ್ಥಿರವಾದ
ಚಿತ್ರದಂತೆ ಕೂತಿದೆ. ಅಲ್ಲಿ ಟಾಮಿ ಎಂಬ ನಾಯಿಯೊಂದಿತ್ತು. ಅದಕ್ಕೆ ಮುದಿ ವಯಸ್ಸಾಗಿತ್ತು.
ಮೈಯ್ಯಲ್ಲಿ ಹುಣ್ಣಾಗಿತ್ತು. ಮನೆಯ ಮಕ್ಕಳು ಆಟವಾಡುವಾಗ ಅವರ ಹಿಂದೆ ಮುಂದೆ ಓಡಾಡುತ್ತಿತ್ತು.
ಒಮ್ಮೆ ಅಮ್ಮ ಅದಕ್ಕೆ ಅನ್ನ ಹಾಕುವಾಗ “ನೀನು ಇಲ್ಲಿ ಬರಬೇಡ. ನಿನಗೆ ಹಿತ್ತಿಲಿನ ಮೂಲೆಯ
ಕೋಳಿಗೂಡಿನ ಪಕ್ಕದಲ್ಲಿ ಅನ್ನ ಇಟ್ಟಿರುತ್ತೇನೆ ಆಯ್ತಾ?” ಎಂದು ಹೇಳಿದರಂತೆ. ವಿಚಿತ್ರವೆಂದರೆ
ಅದು ಸಾಯುವವರೆಗೂ ಮತ್ತೆ ಅಂಗಳಕ್ಕೆ ಕಾಲಿಡಲಿಲ್ಲವಂತೆ. ಪ್ರಾಣಿಗಳಿಗೆ ಮನುಷ್ಯರಿಗಿಂತಲೂ ಹೆಚ್ಚಿನ
ವಿಧೇಯತೆ ಮತ್ತು ಪ್ರೀತಿ ಇದೆ ಎಂಬುದಕ್ಕೆ ಹಲವಾರು ನಿದರ್ಶನಗಳಿವೆ. ನಮ್ಮ ಜಮೀನಿನ ಧಣಿಗಳಾದ
ನಯಂಪಳ್ಳಿ ಸುಂದರರಾಯರು ವರ್ಷದಲ್ಲಿ ಒಂದೆರಡು ಬಾರಿ ಬರುತ್ತಿದ್ದರಂತೆ. ಕುದುರೆ ಮೇಲೆ ಕೂತು
ಬರುತ್ತಿದ್ದ ಅವರನ್ನು ಕಂಡ ಕೂಡಲೇ ಟಾಮಿ ಮನೆಗೆ ಓಡಿ ಬಂದು ಬೊಗಳುವ ರೀತಿಯೇ ವಿಚಿತ್ರವಾಗಿತ್ತು
ಎಂದು ಅಮ್ಮ ಹೇಳುತ್ತಿದ್ದರು. ಬೇರೆ ಆಗಂತುಕರನ್ನು ಕಂಡಾಗ ಬೊಗಳುವ ರೀತಿಗಿಂತ
ಭಿನ್ನವಾಗಿತ್ತಂತೆ. ಬಹುಶಃ ಕುದುರೆಯನ್ನು ಕಂಡು ಅದರ ಬೊಗಳುವಿಕೆಯ ಶೈಲಿಯಲ್ಲಿ
ಬದಲಾವಣೆಯಾಗಿರಬಹುದು ಎಂದು ನನ್ನ ಭಾವನೆ. ಆದರೆ ಅಮ್ಮ ಮಾತ್ರ ಅಂತಹ ಬುದ್ಧಿಯ ನಾಯಿ
ಪ್ರಪಂಚದಲ್ಲೇ ಇರಲಾರದು ಎಂದು ಕೊಂಡಾಡುತ್ತಿದ್ದರು. ಕದಿಯಲು ಬಂದ ಕಳ್ಳರ ಕಾಲು ಕಚ್ಚಿ ಅವರ
ಸೊಂಟಕ್ಕೆ ಸುತ್ತಿದ ಬೈರಾಸನ್ನು ಕಚ್ಚಿ ಮನೆಗೆ ತಂದ ಕತೆಯನ್ನು ಅಮ್ಮ ಕಣ್ಣಿಗೆ ಕಟ್ಟಿದಂತೆ ವರ್ಣಿಸುತ್ತಿದ್ದರು.
ಕಳ್ಳರೋ ದಾರಿ ತಪ್ಪಿ ಬಂದವರೋ ಆಗಿರಬಹುದು ಎಂಬ ನನ್ನ ಮಾತನ್ನು ಅಲ್ಲೇ ತುಂಡರಿಸಿ ಮತ್ತೇನೂ ಹೇಳದಂತೆ
ತಡೆಯುತ್ತಿದ್ದರು.
ಮನೆಯೊಳಗಿನ ಬೆಕ್ಕಿನದ್ದೂ ಇಂತದೇ ಆಪ್ತ ಸಂಬಂಧದ
ಕಥೆಯಿದೆ. ಅದೊಂದು ದಿನ ಬೆಕ್ಕು ನಡುಕೋಣೆಯ ನಟ್ಟ ನಡುವೆ ಮಲಗಿತ್ತು. ಬೆಳಿಗ್ಗೆ ಅಮ್ಮ ಎದ್ದು
ಅಡುಗೆ ಮನೆಯ ಕೆಲಸಕ್ಕಾಗಿ ಆಚೀಚೆ ಓಡಾಡುವಾಗಲೆಲ್ಲ ಅವರ ಕಾಲಿಗೆ ಮೈಯನ್ನು ಒರಸಿಕೊಂಡೇ
ಓಡಾಡುವುದು ಅದರ ನಿತ್ಯದ ಅಭ್ಯಾಸ. ಅಂದು ಸದ್ದಿಲ್ಲದೆ ಮಲಗಿದ್ದನ್ನು ಕಂಡು ಅಮ್ಮ ಕರೆದರಂತೆ. ಆಗಲೂ
ಸುದ್ದಿ ಇಲ್ಲ. ಸಂಶಯದಿಂದ ಹತ್ತಿರ ಹೋಗಿ ನೋಡಿದರೆ ಬೆಕ್ಕು ಅಲ್ಲಾಡುವುದಿಲ್ಲ. ಗೋಪಾಲಣ್ಣನನ್ನು
ಕರೆದು ಇಬ್ಬರೂ ಪರಿಶೀಲಿಸಿದರೆ ಬೆಕ್ಕು ಸತ್ತಿದೆಯೆಂದು ಖಾತ್ರಿಯಾಯಿತು. ಇವರ ಮಾತಿನ ಸದ್ದಿಗೆ
ಎಚ್ಚರಗೊಂಡ ಅಪ್ಪ ಎದ್ದು ಹೊರಗೆ ಹೆಜ್ಜೆ ಇಡುವಾಗ ಏನೋ ಕಾಲಿಗೆ ತಣ್ಣಗೆ ಸ್ಪರ್ಷವಾದಂತೆ ಆಯಿತು.
ಆಗಿನ ಕಾಲದ ಮನೆಗಳಲ್ಲಿರುತ್ತಿದ್ದಂತೆ ಕೋಣೆಗಳಲ್ಲಿ ಹಗಲು ಹೊತ್ತಿನಲ್ಲೂ ಕತ್ತಲೆಯೇ. ಸಣ್ಣ
ಕಿಟಿಕಿ, ತಲೆ ತಗ್ಗಿಸಿಕೊಂಡೇ ಒಳ ನುಗ್ಗಬೇಕಾದ ಬಾಗಿಲುಗಳು ಸಾಮಾನ್ಯ. ಅಪ್ಪ ದಿಂಬಿನಡಿಯಲ್ಲಿದ್ದ
ಟಾರ್ಚ್ ಲೈಟನ್ನು ಹಾಕಿ ನೋಡಿದರೆ ದೊಡ್ಡ ಕಡಂಬಳ ಹಾವು ಸತ್ತು ಬಿದ್ದಿದೆ. ಇವರ ಕೋಣೆಗೆ ತಾಗಿ
ಇರುವ ನಡುಕೋಣೆಯಲ್ಲಿ ಬೆಕ್ಕು ಸತ್ತುಬಿದ್ದಿದೆ. ಅಮ್ಮನ ಕಣ್ಣು ತುಂಬಿ ಬಂತು. “ನಮ್ಮಿಬ್ಬರನ್ನು
ಬದುಕಿಸಿ ಪ್ರಾಣತೆತ್ತ ಬೆಕ್ಕನ್ನು ಮಣ್ಣು ಮಾಡಿದ ಸ್ಥಳದಲ್ಲಿ ಒಂದು ಮಂದಾರ ಹೂವಿನ ಗಿಡ
ನೆಟ್ಟಿದ್ದೆ. ಅದು ಹೂ ಬಿಟ್ಟಾಗ ಅದರಲ್ಲಿ ಬೆಕ್ಕಿನ ಮುಖವನ್ನು ಕಾಣುತ್ತಿದ್ದೆ” ಎಂದು ಅದೆಷ್ಟೋ
ಸಲ ನಮ್ಮಲ್ಲಿ ಹೇಳಿ ಮನಸ್ಸು ತುಂಬಿ ಅಶ್ರುತರ್ಪಣ ನೀಡುತ್ತಿದ್ದರು ಅಮ್ಮ. ದನ, ಕೋಣ,
ಎಮ್ಮೆಗಳನ್ನು ಆರೈಕೆ ಮಾಡುವ ಕೆಲಸಕ್ಕೆ ಆಳುಗಳಿದ್ದರೂ ಅವುಗಳಿಗೆ ಕಾಯಿಲೆಯಾದಾಗ, ಹೆರಿಗೆಯ
ಸಮಯದಲ್ಲಿ ಬಂದೆರಗಿದ ಅನೇಕ ಆಪತ್ತುಗಳನ್ನು ಎದುರಿಸಿ ಪಾರಾಗಲು ಪಟ್ಟ ಪಾಡುಗಳದ್ದೇ ಒಂದಷ್ಟು
ಕತೆಗಳನ್ನು ಹೇಳಿ ಕೃಷಿ ಬದುಕಿನ ಅರಿವಿಲ್ಲದ ನನಗೆ ತಿಳಿಸುತ್ತಿದ್ದರು. ನಿಸರ್ಗದ ಜೀವಜಾಲದ
ಕೊಂಡಿಯಲ್ಲಿ ಎಲ್ಲ ಜೀವಿಗಳಿಗೂ ಮಹತ್ವವಿದೆಯೆಂಬ ಪಾಠವನ್ನು ಅವರ ಅನುಭವದಿಂದ ಹೇಳುತ್ತಿದ್ದರು.
ದನಗಳಿಗೆ ಹುಲ್ಲು ಹೆರೆಯುವಾಗ ಕೈಗೆ ತಾಗಿಕೊಂಡೇ ಹೋದ ನಾಗರಹಾವನ್ನು ಕಂಡು ತಕ್ಷಣ ಭಯಗೊಂಡರೂ
ಅದಕ್ಕೆ ನಮ್ಮಿಂದ ಏನೋ ಅಪಚಾರವಾಗಿದೆ ಎಂದು ಅಮ್ಮ ಶಂಕಿಸಿದರಂತೆ. ಮನೆಯ ಸುತ್ತ ಮುತ್ತ ಅಲ್ಲಿ
ಇಲ್ಲಿ ನಾಗರಹಾವು ಕಾಣಿಸಿಕೊಂಡಾಗ ಎಲ್ಲರೂ ಗಾಬರಿಗೊಳ್ಳುತ್ತಿದ್ದರಂತೆ. ಅದಕ್ಕೆ ಸರಿಯಾಗಿ ಒಂದು
ದಿನ ಒಂದು ನಾಗರಹಾವು ಮನೆಯ ಅಂಗಳದಲ್ಲಿ ಇವರ ಕಣ್ಣ ಮುಂದೆಯೇ ಸತ್ತು ಬಿದ್ದಿತ್ತಂತೆ. ಮನೆಯಲ್ಲಿದ್ದ
ಹಿರಿಯರೆಲ್ಲರೂ ಒತ್ತಾಯ ಮಾಡಿ ಅಪ್ಪನನ್ನು ಜೋಯಿಸರಲ್ಲಿಗೆ ಕಳುಹಿಸಿದರಂತೆ. ಜೋಯಿಸರು ಹೇಳುವ
ಮಾಮೂಲಿ ಪರಿಹಾರವೆಂದರೆ ನಾಗನಿಗೆ ಕಲ್ಲು ಹಾಕುವುದು. ಹಾಗೆ ಜೋಯಿಸರು ತಿಳಿಸಿದರೂ ಕಲ್ಲು ಹಾಕುವ
ತಂಟೆಗೆ ಅಪ್ಪ ಹೋಗಲೇ ಇಲ್ಲ. ಹಾಗೆಂದು ಕಟ್ಟಾ ನಾಸ್ತಿಕರೇನೂ ಅಲ್ಲ ನನ್ನಪ್ಪ. ವೈಚಾರಿಕ
ಚಿಂತನೆಗಳೇನೋ ಇದ್ದವು. ಅವರನ್ನು ಆಗಾಗ ತೀವ್ರ ಕಾಡುತ್ತಿದ್ದ ಅಸ್ತಮಾ, ಮುಂದೆ ಒದಗಿದ ಆರ್ಥಿಕ
ಸಂಕಷ್ಟಗಳು ಅವರನ್ನು ತೀರಾ ದುರ್ಬಲಗೊಳಿಸಿತು. ನನ್ನಮ್ಮ ಅಪ್ಪನಷ್ಟು ಪುಸ್ತಕಗಳನ್ನು ಓದಿಲ್ಲ;
ಹೊರಪ್ರಪಂಚದ ಅರಿವಿಲ್ಲ. ಆದರೆ ಅವಳ ನಿಲುವುಗಳು ತಾರ್ಕಿಕವಾಗಿರುತ್ತಿದ್ದುವು. ಅಪ್ಪ
ಬೇಸಾಯದಲ್ಲಿ ಪ್ರಯೋಗ ಮಾಡಲು ಗುಡ್ಡ ಕಡಿದು ಸಮತಟ್ಟುಗೊಳಿಸಿದರಲ್ಲಾ ಆಗ ಹಾವುಗಳ ನೆಲೆಯನ್ನು
ನಾವು ಆಕ್ರಮಣ ಮಾಡಿದ್ದರಿಂದಲೇ ಅವುಗಳು ಈ ದುಸ್ಥಿತಿಗೆ ಬಂದಿವೆ. ನಾಗನ ಕಲ್ಲು ಹಾಕಿ ಕಟ್ಟೇ
ಕಟ್ಟಿದರೆ ಅವುಗಳ ನೆಲೆಯನ್ನು ಮರಳಿ ಅವುಗಳಿಗೆ ಕೊಟ್ಟಂತಾಗುವುದೇ? ಎಂಬ ಕೆಲವು ಮೂಲಭೂತ
ಪ್ರಶ್ನೆಗಳನ್ನು ಕೇಳುತ್ತಿದ್ದರಂತೆ. ಬಹುಶಃ ತಂದೆಗೂ ಅದು ಹೌದು ಎಂದು ಅನಿಸಿರಬೇಕು.
ಕಾಣೆಮಾರಿನಲ್ಲಿರುವವರೆಗೂ ಆ ಮಣ್ಣಿನೊಂದಿಗೆ ಗಾಢ ಸಂಬಂಧವಿತ್ತು.
`ವಿನಾಶಕಾಲೇ ವಿಪರೀತ ಬುದ್ಧಿ’ ಎಂಬ ಮಾತಿದೆ.
ನಮ್ಮ ಅವನತಿಗೆ ನಾವೇ ಕಾರಣ ಎಂಬುದು ಅಕ್ಷರಶಃ ಸತ್ಯ. ಅದು ನಮ್ಮ ಬದುಕಿನಲ್ಲೂ ಘಟಿಸಿತು.
ನಯಂಪಳ್ಳಿ ಸುಂದರ ರಾಯರು ಕಾಣೆಮಾರಿನ ಪೂರ್ಣ ಅಸ್ತಿಯನ್ನು ಖಾದ್ರಿ ಬ್ಯಾರಿ ಎಂಬವರಿಗೆ ಮಾರಾಟ ಮಾಡಿದರು.
ಅವರು ಮಾರಾಟ ಮಾಡಿದ್ದಕ್ಕೆ ಅವರದ್ದೇ ಆದ ಕಾರಣಗಳಿದ್ದವು. ಆದರೆ ನಮ್ಮಲ್ಲಿ ಒಂದು ಮಾತು ಮೊದಲೇ
ಹೇಳಲಿಲ್ಲವೆಂಬ ಒಂದು ಕಾರಣ ಮತ್ತು ಖಾದ್ರಿ ಬ್ಯಾರಿಯ ಒಕ್ಕಲುಗಳಾಗಿ ಈ ಊರಿನಲ್ಲಿರುವುದು
ಮನಸ್ಸಿಗೆ ಒಪ್ಪದ ಕಾರಣ ಆ ಮಣ್ಣನ್ನೇ ಧಿಕ್ಕರಿಸಿ ಮಂಗಳೂರಿಗೆ ಬಂದರು ನನ್ನಪ್ಪ. ದೊಡ್ಡಪ್ಪ
ಚಾಯಿರ, ಚಿಕ್ಕಪ್ಪ ಕಣ್ಣ ಇಬ್ಬರೂ ತುಂಬೆಯಲ್ಲೇ ಸ್ವಲ್ಪ ದೂರದಲ್ಲಿ ಸಣ್ಣ ಮನೆ ಮಾಡಿ ನೆಲೆ
ನಿಂತರು. ನನ್ನಪ್ಪ, ಅವರ ಸೋದರಳಿಯನ (ಅಕ್ಕನ ಮಗ) ಮನೆಗೆ – ಬಿಕರ್ನಕಟ್ಟೆಗೆ ಗಂಟುಮೂಟೆ ಸಮೇತ
ಬಂದರು. ಕೃಷಿ ಪರಿಕರಗಳು, ತಡಿ ಮಂಚ, ಕಪಾಟು, ಮೇಜು, ಕುರ್ಚಿಗಳು ಆ ದೊಡ್ಡ ಮನೆಯಲ್ಲಿ ತುಂಬಿ
ಕಾಲಿಡಲು ಸ್ಥಳವಿಲ್ಲದಂತಾಯಿತು. ಹೋಟೆಲು ಉದ್ಯಮ ಪ್ರಾರಂಭಿಸೋಣವೆಂದು ಸೋದರಳಿಯ ಮಾತು
ಕೊಟ್ಟಿದ್ದರಂತೆ. ಆದರೆ ತಿಂಗಳುಗಳುರುಳಿದರೂ ಸುದ್ದಿ ಎತ್ತಲಿಲ್ಲ. ಅಪ್ಪನ ಆರೋಗ್ಯ ದಿನೇ ದಿನೇ
ಹದಗೆಡುತ್ತಿತ್ತು. ತುಂಬೆಯ ಮಣ್ಣಿನ ಬೇರುಗಳನ್ನು ಕಿತ್ತು ಬಿಕರ್ನಕಟ್ಟೆಯಲ್ಲಿ ಊರುವುದು ಸಾಧ್ಯವಾಗಲೇ
ಇಲ್ಲ. ಇದು ಅಪ್ಪನ ಬದುಕಿನ ಎರಡನೆಯ ಅಧ್ಯಾಯ. ತಾನು ಕಳೆದುಕೊಂಡುದನ್ನು ಮರಳಿ ಪಡೆಯಲು
ಸಾಧ್ಯವಾಗಲೇ ಇಲ್ಲ. ಜೀವನವನ್ನು ಬಣ್ಣಬಣ್ಣದ ಗಾಜಿನ ಗೋಪುರವೆನ್ನುತ್ತಾರೆ. ಅನಂತತೆಯ ಶುಭ್ರ
ಬೆಳಕು ಅದನ್ನು ಮಲಿನಗೊಳಿಸಬಾರದು. ಹಾಗಾಗದಂತೆ ಹಗಲಿರುಳೂ ಎಚ್ಚರದಿಂದ ಕಾಯುತ್ತಾ ಕೈ ಹಿಡಿದು
ಮುನ್ನಡೆಸಿದವರು ನನ್ನಮ್ಮ.
ಅಪ್ಪನ ಪಾಂಡಿತ್ಯ ಅಮ್ಮನ ಜೀವನಾನುಭವದ ಮುಂದೆ ತೃಣ ಸಮಾನ. ಸೋಲುಗಳ
ಸಾಲು ಮರಗಳ ನೆರಳಿನಲ್ಲಿ ಅಪ್ಪ ನಿದ್ರಿಸಿಯೇ ಬಿಡುತ್ತಿದ್ದರು. ಅಮ್ಮ ತುಸು ವಿರಮಿಸಿ ಮುಂದೆ
ಸಾಗುವ ಧೈರ್ಯ ಮತ್ತು ಛಲವನ್ನು ತೋರಿಸಿದರು. ಕಳೆದ ಶತಮಾನದ ಹೆಣ್ಣು ಮಕ್ಕಳು ತಮ್ಮ ಜೀವನದಲ್ಲಿ
ಎದುರಿಸಿದ ಸವಾಲುಗಳೇನು ಎಂಬುದಕ್ಕೆ ನನ್ನಮ್ಮ ಮಾದರಿಯಾಗಿದ್ದಾರೆ. ಹಾಗೆಯೇ ಪುರುಷ ಪ್ರಧಾನ
ಸಮಾಜದ ಮಾದರಿಗಳು ಹೇಗಿರುತ್ತವೆ ಎಂಬುದಕ್ಕೆ ನನ್ನ ಅಪ್ಪ ನಿದರ್ಶನವಾಗಿದ್ದಾರೆ. ನನಗೆ ಬುದ್ಧಿ
ತಿಳಿದ ಮೇಲೆ ನನ್ನಪ್ಪನೊಂದಿಗೆ ನನ್ನ ಬಾಂಧವ್ಯ ಎಷ್ಟು ಘನಿಷ್ಟವಾಗಿತ್ತೆಂದರೆ ನನಗೆ ಅವರನ್ನು
ಬಿಟ್ಟು ಇರುವುದೂ ಅವರಿಗೆ ನನ್ನನ್ನು ಬಿಟ್ಟು ಇರುವುದು ಸಾಧ್ಯವಿರಲಿಲ್ಲ. ಮಗಳನ್ನು ಮಾನಸಿಕವಾಗಿ,
ಬೌದ್ಧಿಕವಾಗಿ, ಸಾಂಸ್ಕೃತಿಕವಾಗಿ ಗಟ್ಟಿಗೊಳಿಸಿದ ರೀತಿಯೇ ವಿನೂತನವಾಗಿತ್ತು. ಆ ವಿವರಗಳು ತುಂಬಾ
ಆತ್ಮೀಯವಾಗಿವೆ.
(ಮುಂದುವರಿಯಲಿದೆ)
ಒಳ್ಳೆಯ ಕೆಲಸ ಮಾಡಿದ್ದೀರಿ ಅಶೋಕ್ ವರ್ಧನ ಅವರೆ. ರೋಹಿಣಿ ಸಂಕಲನದಲ್ಲಿ ಬರೆದ ಲೇಖನ ಓದಿದ್ದೆ. .ಹೋರಾಟದ ಬದುಕು ಅವರದ್ದು.. ಸುಮಿತ್ರಾ.ಎಲ್ ಸಿ
ReplyDeleteತುಂಬಾ ಆಪ್ಯಾಯಮಾನವಾಗಿ ಬರೆದಿದ್ದೀರಿ. ಓದುವದಗಿಂತ ಕೇಳುತ್ತಲೇ ಇರುವದು ಹೃದಯಕ್ಕೆ ಹತ್ತಿರವೆನಿಸಿತು. ಅದರಲ್ಲೂ "ಜೀವನವು ಪೂರ್ಣ ಸಿಹಿಯೂ ಅಲ್ಲ, ಪೂರ್ಣ ಕಹಿಯೂ ಅಲ್ಲ. ಅವುಗಳ ವಿವಿಧ ಪ್ರಮಾಣಗಳ ಪಾಕ. ಕಹಿಯನ್ನು ಸಹಿಸುವ ಶಕ್ತಿ ಗಳಿಸಿದಂತೆ ಜೀವ ಮತ್ತಷ್ಟು ಬಲಗೊಳ್ಳುತ್ತದೆ. ಕಹಿಯ ಅನುಭವದಿಂದ ಸಿಹಿಗೆ ಮತ್ತಷ್ಟು ಕಳೆಯಿದೆ...." ಮತ್ತೆ ಮತ್ತೆ ಅವರ ಧ್ವನಿಯಲ್ಲಿಯೇ ಕೇಳಿದೆ. ಸದಾ ಹೊಸತನದ ನಿಮ್ಮ ಪ್ರಯೋಗ ಓದು/ಕೇಳುವಂತೆ ಮಾಡುತ್ತಿದೆ.
ReplyDeleteಕ್ಷಮಿಸಿ, ರೋಹಿಣಿಯವರಿಗೆ ಇಲ್ಲಿ ಕಂಠದಾನ ಮಾಡಿರುವುದು ದೇವಕಿ (ನನ್ನ ಹೆಂಡತಿ)
Deleteಬಿ.ಎಂ. ರೋಹಿಣಿಯವರ ಅನುಭವ ಕಥನವು ಅತಿ ಅಗತ್ಯ ದಾಖಲಾಗಬೇಕಾದ್ದು. ವಿಶಿಷ್ಟ ಸಾಧನೆ, ವ್ಯಕ್ತಿತ್ವದ, ಪ್ರತಿಕೂಲಗಳ ಮಧ್ಯೆ ಛಲದಿಂದ ಬದುಕಿದ ಧೀರೆ ಅವರು.
ReplyDeleteಕಾಣೆಮಾರಿನಿಂದ ಬಿಕರ್ನಕಟ್ಟೆಗೆ ಬಂದುದು ನಮ್ಮನ್ನೂ ಕದಡಿತು . ತಂದೆಯೊಂದಿಗಿನ ಆತ್ಮೀಯ ಬಂಧದ ರೋಹಿಣಿ ಅವರ ಮುಂದಿನ ಕಥನವನ್ನೋದಲು ಕಾದಿದ್ದೇವೆ. ಬೇಗನೆ ಬರಲಿ.
ReplyDeleteVery Interesting
ReplyDeleteGirish Bajpe
Baraha tumba chennagide..waiting eagerly for next episode..
ReplyDeleteVidyalaxmi
SUPER
ReplyDeleteMAHALINGA
ಆಪ್ತವಾಗಿ ಬರೆಯುವ ರೋಹಿಣಿಯವರ ಆತ್ಮ ಕಥೆಯ ಮೊದಲ ಅಧ್ಯಾಯ ಸ್ವ-ಮರುಕದಿಂದ ತುಂಬಾ ದೂರವಾಗಿದ್ದು ಆತ್ಮೀಯವಾಗಿ ಓಡಿಸಿಕೊಂಡು ಹೋಗುತ್ತದೆ. ಅಭಿನಂದನೆಗಳು.
ReplyDeleteನಾಲ್ಕು ವರ್ಷದ ಹಿಂದೆ ರೋಹಿಣಿಯವರು ಕೋಣಾಜೆಯಲ್ಲಿ ನಡೆದ ಲೇಖಕಿಯರ ಒಂದು ಕಾರ್ಯಕ್ರಮದಲ್ಲಿ ತಮ್ಮ ಜೀವನ ಕಥನ ತೋಡಿಕೊಂಡಿದ್ದರು. ಆಗ ಅವರ ಬಳಿ ನಿಮ್ಮ ಈ ಅನುಭವಕ್ಕೆ ಅಕ್ಷರರೂಪ ಕೊಡಿ ಅಂತ ಕೇಳಿಕೊಂಡಿದ್ದೆ. ಈಗ ಈ ರೂಪದಲ್ಲಿ ಅದು ದಕ್ಕುತ್ತಿರುವುದು ನನಗಂತು ತೃಪ್ತಿ ಕೊಡುತ್ತಿದೆ. ಆದರೆ, ಈ ಸೌಲಭ್ಯವಿಲ್ಲದವರಿಗೆ ಇದು ಸಿಗುವ ಕಾಲ ಬರಲಿ.
ReplyDeleteಅನುಪಮಾ ಪ್ರಸಾದ್
ಓದುವ ಜೊತೆಗೆ ಕೇ ಳುವ ಸೌಭಾಗ್ಯ..ವಂದನೆಗಳು
ReplyDelete