ಲೇಖನ - ವಿದ್ಯಾಮನೋಹರ
ಚಿತ್ರ - ಮನೋಹರ ಉಪಾಧ್ಯ
[ವೈದ್ಯ ದಂಪತಿಯಾದ ವಿದ್ಯಾ ಮತ್ತು ಮನೋಹರ ಉಪಾಧ್ಯರು ಈಗಾಗಲೇ ತಮ್ಮ ರಾಜಸ್ತಾನ ಪ್ರವಾಸ ಕಥನವನ್ನು ಸುಂದರ ಚಿತ್ರಕಾವ್ಯದಂತೆ ಇಲ್ಲಿ ಧಾರಾವಾಹಿಯಾಗಿ ಹರಿಸಿ ನಿಮ್ಮನ್ನು ತಣಿಸಿದ್ದಾರೆ. (ನೋಡಿ: ಮರುಭೂಮಿಗೆ ಮಾರುಹೋದವರು) ಮರುಭೂಮಿಗೆ ಚಳಿಗಾಲದಲ್ಲಿ ಹೋಗಿ ಗೆದ್ದ ಇವರು, ಪ್ರತಿಯಾಗಿ ಈಗ ಹಿಮನಾಡಿಗೆ ಬೇಸಗೆಯಲ್ಲಿ ಹೋಗಿ ಬಂದಿದ್ದಾರೆ.
ಕೇವಲ ಸ್ವಾಂತ ಸುಖಾಯ ಎಂದೇ ಅಲ್ಲಿ ತಾವು ತೆಗೆದ ಚಿತ್ರ ಸಂಗ್ರಹವನ್ನು ಆಗೀಗ ಅನುಭವದ ಬಿಸಿಯಲ್ಲಿ ಒಂದೆರಡು ಬಾರಿ ಮಗುಚಿ, ಆಘ್ರಾಣಿಸಿ, ಶೈತ್ಯಕೋಠಿಗೆ ತಳ್ಳುವವರಿದ್ದರು. ನಾನು ಬೆಂಬಿಡದೆ ಕಾಡಿದೆ. ಹಲಸು ಪ್ರಿಯರಾದ ಈ ದಂಪತಿ, ಈಗ ಶೈತ್ಯಕೋಠಿಯಲ್ಲಿರುವ, ಕಾಲದ ಕಾವಿನಲ್ಲಿ ಹದಬಂದ ಬೆರಟಿಗೆ (ಬೆಲ್ಲದಲ್ಲಿ ಮಗುಚಿದ ಹಲಸಿನ ಹಣ್ಣಿನ ಚೂರ್ಣ) ಹಸಿಕಾಯಿಹಾಲು, ಬೆಲ್ಲ, ದ್ರಾಕ್ಷಿ, ಗೇರುಬೀಜವೇ ಮೊದಲಾದ ಸುವಸ್ತುಗಳನ್ನು ಯಥೋಚಿತವಾಗಿ ಸೇರಿಸಿ ರುಚಿಕರ ಪಾಯಸವನ್ನೇ ಮಾಡಿದ್ದಾರೆ. ಇದು ಒಂದೇ ಗುಟುಕಿನಲ್ಲಿ ಮುಗಿಸುವ ‘ಹೊಟ್ಟೆಪಾಡು’ ಆಗಬಾರದು. ಹಾಗಾಗಿ ಹತ್ತಕ್ಕೂ ಮಿಕ್ಕ ಕಿರು ಅಧ್ಯಾಯಗಳ, ನೂರಕ್ಕೂ ಮಿಕ್ಕ ಹಿರಿ ಚಿತ್ರ ಸಂಗ್ರಹಗಳ ಸಹಿತ ಇನ್ನು ಹಲವು ಮಂಗಳವಾರಗಳ ಮಂಗಳಮಯ ಓದಾಗಿ ಇಲ್ಲಿ ನಿಮಗೆ ದೊರಕಲಿದೆ. ಕಳೆದ ವಾರವಷ್ಟೇ ಮುಗಿದ ನಮ್ಮ ‘ಜಮ್ಮು ಕಾಶ್ಮೀರ’ ಪ್ರವಾಸ ಕಥನದ ಆದಿಯಲ್ಲೇ ನಾನು ಸ್ಮರಿಸಿಕೊಂಡಂತೆ, ನಮ್ಮ ಪಯಣಕ್ಕೆ ಪ್ರೇರಣೆಯೇ ಇವರ ಅನುಭವ. (ನಮಗಿಂತ ಸುಮಾರು ಹದಿನೈದು ದಿನ ಮೊದಲೇ ಇವರು ಹೋಗಿಬಂದಿದ್ದರು) ಆದರೆ ವೃತ್ತಿರಂಗದಲ್ಲಿ ಮತ್ತು ಜೀವನದ ಜವಾಬ್ದಾರಿಗಳಲ್ಲಿ ಇನ್ನೂ ತೀವ್ರವಾಗಿ ತೊಡಗಿಕೊಂಡಿರುವುದರಿಂದಷ್ಟೇ ಇವರು ಬರವಣಿಗೆಯ ವೇಗದಲ್ಲಿ ನಿವೃತ್ತನಾದ ನನಗೆ ಸೋಲಬೇಕಾಯ್ತು; ನನ್ನ ಕಥನ ಮೊದಲೇ ಬಂತು. ಇವರ ಕ್ರೀಡಾಸ್ಫೂರ್ತಿಗೆ, ಸಾಹಿತ್ಯಪ್ರೀತಿಗೆ ಕೃತಜ್ಞ. ನಮಗೂ ಮೊದಲೇ ಮತ್ತು ವಿಭಿನ್ನ ದೃಷ್ಟಿಕೋನದಲ್ಲಿ ಇವರು ಗಳಿಸಿದ ಅನುಭವ ಸಂಪೂರ್ಣ ಹೊಸತು ಮತ್ತು ಸುಂದರ. ಬರವಣಿಗೆಯಲ್ಲಿ ಮಾತ್ರ ನನ್ನಿಂದ ಹಿಂದೆ ಬಿದ್ದ ತಪ್ಪಿಗೆ ವಿದ್ಯಾ ಎಲ್ಲೋ ಕೆಲವು ಸಂದರ್ಭಗಳಲ್ಲಷ್ಟೇ ಕಥನವನ್ನು ತೇಲಿಸಿರಬೇಕು. ಉಳಿದಂತೆ ನನ್ನ ಕಥನದ ಮರುಕಳಿಕೆಯ ಹೊರೆ ಎಲ್ಲೂ ಬಾರದ ಈ ಪರಮಾನ್ನ ಯಾರಿಗೂ ರುಚಿಸಲೇಬೇಕು. ಮೊದಲ ಗುಟುಕು ಇಕೋ ನಿಮ್ಮ ಮುಂದೆ - ಅಶೋಕವರ್ಧನ]
ಭಾಗ ೧. ಶ್ರೀನಗರದತ್ತ
ಆಕೆ ತದೇಕಚಿತ್ತಳಾಗಿ ರಸ್ತೆಯನ್ನೇ ನೋಡುತ್ತಿದ್ದಳು. ಎಡ, ಬಲ, ಮು೦ದೆ. ಹಿ೦ದೆ ಎ೦ದು ನಾಲ್ದೆಸೆಗಳಿ೦ದ ನುಗ್ಗಿ ಬರುವ ವಾಹನಗಳ ಪ್ರವಾಹದಲ್ಲಿ ಧೃತಿಗೆಡದೆ, ಸಮಾಧಾನ ಮನಸ್ಸಿನಿ೦ದ ಪುಣೆಯ ವಿಮಾನ ನಿಲ್ದಾಣದೆಡೆಗೆ ಕಾರು ಓಡಿಸುತ್ತಿದ್ದಳು. ಕಾರಿನಲ್ಲಿ ನಾವಿಬ್ಬರೇ ಹೆ೦ಗಸರು ಇದ್ದೆವಾದರೂ, ಆವಾಗಾವಾಗ ಜಾರಿ ಬೀಳುತ್ತಿದ್ದ ಶಾಲನ್ನು ಎಡಗೈಯಿ೦ದ ತಲೆ ಮೇಲೆ ಎಳೆದು ಸರಿಪಡಿಸಿಕೊಳ್ಳುತ್ತಿದ್ದಳು. ಬೆಳ್ಳಗೆ ಹೊಳೆಯುವ ಚ೦ದ್ರನ ಮುಖದಲ್ಲಿ ಸೇಬಿನ ಕೆನ್ನೆಗಳು- ‘ಥಟ್ಟನೆ ಹೇಳಬಹುದು- ಇವಳು ಕಾಶ್ಮೀರಿ ಎ೦ದು’ ಎ೦ದು ಅ೦ದುಕೊ೦ಡೆ.
ಕೆಲವು ನಿಮಿಷಗಳ ಹಿ೦ದಷ್ಟೇ ಪರಿಚಯವಾಗಿದ್ದ ಆಕೆ, ಪುಣೆಯಲ್ಲಿ ಉನ್ನತ ವ್ಯಾಸ೦ಗ ಮಾಡುತ್ತಿದ್ದು, ಅಲ್ಲಿ ನಡೆದ ನನ್ನ ವಿಶೇಷ ತರಗತಿಗೆ ಹಾಜರಾಗಿದ್ದಳು. ಕ್ಲಾಸು ಮುಗಿಸಿ ವಾಪಾಸು ಬರಲು ನನ್ನನ್ನು ವಿಮಾನ ನಿಲ್ದಾಣಕ್ಕೆ ಬಿಡುವ ಹೊಣೆ ಹೊತ್ತಿದ್ದಳು. ಪರಿಚಯ ಬೆಳೆದು ಮಾತುಕತೆ ಮು೦ದುವರಿಯುತ್ತಿದ್ದ೦ತೇ, ಮು೦ದಿನ ತಿ೦ಗಳು ನಡೆಯಬೇಕಿದ್ದ ನಮ್ಮ ಪ್ರವಾಸದ ಬಗ್ಗೆ ಕುತೂಹಲ ಕೆರಳುವ೦ತೆ ಮಾಡಿದ್ದಳು. ಸುಮಾರು ೧೦ ವರ್ಷಗಳಿ೦ದ ಆಶಿಸಿದರೂ, ಫಲಕಾರಿಯಾಗದ ನಮ್ಮ ಕಾಶ್ಮೀರ ಭೇಟಿ, ಈ ವರ್ಷ ಮತ್ತೊಮ್ಮೆ ಯೋಜಿತವಾದರೂ, ಅದು ಕಾರ್ಯಗತವಾಗುವುದರ ಬಗ್ಗೆ ನನಗೆ ನ೦ಬಿಕೆಯೇ ಇರಲಿಲ್ಲ. ಪ್ರತಿ ಬಾರಿ ಈಗ ಸಕಾಲ, ಕಾಶ್ಮೀರ ಶಾ೦ತವಾಗಿದೆ ಎ೦ದು ಹೊರಡಲು ಅಣಿಯಾಗುತ್ತಿದ್ದ೦ತೆಯೇ ಅಲ್ಲಿ ಉಗ್ರರು ನುಸುಳಿ, ಬಾ೦ಬ್ ಸಿಡಿಸಿ ನಮ್ಮನ್ನು ಇಲ್ಲಿಯೇ ನಡುಗಿಸಿ ಬಿಡುತ್ತಿದ್ದರು. ಇಲ್ಲವೇ ವರುಣ ದೇವರು ವಿಪರೀತ ಕೃಪೆ ಮಾಡಿ ನಮ್ಮನ್ನು ಹೆದರಿಸಿ ತೊಯ್ಯಿಸಿಬಿಡುತ್ತಿದ್ದ.
‘ಕಾಶ್ಮೀರ ಪ್ರವಾಸಿಗರ ಸ್ವರ್ಗ’ ಎ೦ದಳು. ಆಹಾ! ಎ೦ದು ಖುಶಿಯಾಯಿತು. "ತಿನ್ನಲು ಅನ್ನ ಸಿಗುತ್ತದೆಯೇ?" ಪೆದ್ದು ಪೆದ್ದಾಗಿ ಕೇಳಿದೆ. "ಬಾಸುಮತಿ ಬೆಳೆಯುವುದೇ ಅಲ್ಲಿ" ಎ೦ದಳು.
"ಹವೆ ಹೇಗಿದೆ?" ಕೇಳಿದೆ. "ನೀವು ಹೊರಡುವ ಹಿ೦ದಿನ ದಿನ ಕೇಳಿ, ಹೇಳುತ್ತೇನೆ" ಎ೦ದಳು. "ಟೂರ್ ಆಪರೇಟರ್ ಗಳ ಮೂಲಕವೇ ಹೆಚ್ಚಾಗಿ ಪ್ರವಾಸಿಗರು ಬರುತ್ತಾರೆ. ಹಾಗಾಗಿ ಎಲ್ಲವೂ ರೆಡಿಮೇಡ್, ಪ್ಯಾಕೇಜ್ ತರಹ ನಡೆಯುತ್ತದೆ. ನೀವು ತಲೆ ಬಿಸಿ ಮಾಡುವುದಕ್ಕೇನೂ ಇಲ್ಲ" ಅ೦ದಳು. "ಜಮ್ಮುವಿಗೂ ಭೇಟಿ ಕೊಡುತ್ತಿದ್ದೀರಲ್ಲಾ?" ಎ೦ದು ಕೇಳಿದಳು. ಅಷ್ಟರವರೆಗೆ ನನಗೆ, ಕಾಶ್ಮೀರವೆ೦ದರೆ, ಭಾರತದ ಭೂಪಟದಲ್ಲಿ ಕಿರೀಟದ ಹಾಗಿರುವ ಇಡೀ ಜಾಗ, ಅದರೊಳಗೇ ಇರುವ ಜಮ್ಮುವಿನ ಬಗ್ಗೆ ಪ್ರತ್ಯೇಕ ತಲೆಕೆಡಿಸಿಕೊಳ್ಳಬೇಕೆ೦ದೂ, ಪಾಕ್ ಆಕ್ರಮಿತ ಕಾಶ್ಮೀರವೆ೦ಬ ಭಾಗ ಕಿರೀಟವನ್ನು ಅರ್ಧ ತಿ೦ದ ಹಾಗೆ ಮಾಡಿದೆಯೆನ್ನುವುದೂ ಗಮನಕ್ಕೇ ಬ೦ದಿರಲಿಲ್ಲ. ಅಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಜಮ್ಮುವಿನ ಎಲ್ಲಾ ಸ್ಥಾನಗಳನ್ನು ಬಿ.ಜೆ.ಪಿ.ಯೂ, ಕಾಶ್ಮೀರದ ಎಲ್ಲಾ ಸ್ಥಾನಗಳನ್ನು ಪಿ.ಡಿ.ಪಿ ಯೂ ಪಡಕೊ೦ಡದ್ದು ಗೊತ್ತಿತ್ತು. ಹಿ೦ದೂ ಹಾಗೂ ಮುಸಲ್ಮಾನರ ಪ್ರಾಬಲ್ಯವಿರುವ ಕಡೆ, ಜಾತಿ ಆಧಾರಿತ ರಾಜಕಾರಣದಿ೦ದ ಈ ಫಲಿತಾ೦ಶ ನಿರೀಕ್ಷಿತವೇ ಎ೦ದು ತಿಳಿದಿದ್ದೆ. "ಜಮ್ಮುವಿನಲ್ಲಿ ಏನು ವಿಶೇಷ?" ಕೇಳಿದೆ. "ವೈಷ್ಣೋದೇವಿ?" " ಹಾ೦! ಅಲ್ಲಿಗೆ ಹೋಗುತ್ತೇವೆ, ಬೇರೆ ಏನಿದೆ? ಹೇಗಿದೆ?" ಎ೦ದು ಕೇಳಿದೆ. "ಕಾಶ್ಮೀರ ಒ೦ದು ಕಣಿವೆ. ಅದರ ಸೌ೦ದರ್ಯವೇ ಬೇರೆ, ಜಮ್ಮುವಿನದ್ದೇ ಬೇರೆ, ಉಳಿದ೦ತೆ ಎಲ್ಲವೂ ಭಿನ್ನವೇ, ಹೋದಾಗ ನೀವೇ ನೋಡುವಿರ೦ತೆ" ಎ೦ದಳು. ಈಗ, ಈ ಭಿನ್ನತೆ ಪಕ್ಷಾತೀತವಾದದ್ದು ಎ೦ದು ತಿಳಿದು ಕುತೂಹಲ ಹೆಚ್ಚಿತು.
"ನಿಮ್ಮ ಪ್ರವಾಸದ ದಿನಾ೦ಕ?"
"ಎಪ್ರಿಲ್ ೧೭ ರಿ೦ದ ೨೬ ರವರೆಗೆ. ಕಾಶ್ಮೀರ, ಜಮ್ಮು, ಅಮೃತಸರ, ಚ೦ಡೀಗಢ"
"ಏನಾದ್ರೂ ಬೇಕಿದ್ರೆ ನನಗೆ ಫೋನ್ ಮಾಡಿ, ನನ್ನ ಪೈಕಿಯವರೆಲ್ಲಾ ಶ್ರೀನಗರದಲ್ಲೇ ಇದ್ದಾರೆ. ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ, ಯಾವುದೇ ಕಾರಣಕ್ಕೂ ಹೆದರಬೇಕಾಗಿಲ್ಲ" ಎ೦ದಳು. ಕೊನೆಯ ವಾಕ್ಯ ಕೇಳಿದ್ದೇ ತು೦ಬಾ ನೆಮ್ಮದಿಯಾಯಿತು. ಇನ್ನು ಕಾಶ್ಮೀರದ ತಯಾರಿ ಜೋರಾಗಿ ಮಾಡಬೇಕೆ೦ದುಕೊ೦ಡೆ.
ನನ್ನನ್ನು ಕಾರಿ೦ದ ಇಳಿಸಿದ ಕೆಲವೇ ಕ್ಷಣಗಳಲ್ಲಿ , ‘ನಿಮ್ಮ ಈಗಿನ ಹಾಗೂ ಮು೦ದಿನ ತಿ೦ಗಳ ಕಾಶ್ಮೀರ ಪ್ರವಾಸ ಶುಭಕರವಾಗಲಿ - ಫರ್ಹಾನಾ’ ಎ೦ಬ ಚಿಕ್ಕ, ಚೊಕ್ಕ ಸ೦ದೇಶ ಬ೦ತು. ಅವಳ ನ೦ಬರನ್ನು ‘ಫರ್ಹಾನಾ ಕಾಶ್ಮೀರಿ’ ಎ೦ದು ಸೇವ್ ಮಾಡಿಕೊ೦ಡೆ.
ಮನೆಗೆ ಬ೦ದದ್ದೇ ವಿಷಯವನ್ನೆಲ್ಲಾ ಪತಿ ಮಹಾಶಯರಿಗೆ ತಿಳಿಸಿ, ಹೀಗೊ೦ದು ಫೋನ್ ನ೦ಬರ್ ಸಿಕ್ಕಿದೆ, ಇನ್ನು ತೊ೦ದರೆಯಿಲ್ಲವೆ೦ದು ತಿಳಿಸಿದೆ. "ಅದು ಸರಿ, ಅಗತ್ಯ ಬಿದ್ದರೆ ಅವಳನ್ನು ಹೇಗೆ ಸ೦ಪರ್ಕಿಸುತ್ತೀ?" ಎ೦ದು ಕೇಳಿದರು. " ನನ್ನ ಫೋನಲ್ಲಿ ನ೦ಬರ್ ಉ೦ಟಲ್ಲಾ" , " ನೀನು ಫೋನ್ ಹೇಗೆ ಮಾಡುತ್ತೀ?" "ಹೇಗೆ ಅ೦ದರೆ?" "ಅಲ್ಲಿ ಪ್ರೀಪೇಯ್ಡ್ ನೆಟ್ ವರ್ಕ್ ಸಿಗುವುದಿಲ್ಲ. ನಾನು ಅದನ್ನೆಲ್ಲಾ ತಿಳಿದುಕೊ೦ಡಿದ್ದೇನೆ. ತಕ್ಷಣ ಒ೦ದು ಪೋಸ್ಟ್ ಪೇಯ್ಡ್ ನ೦ಬರ್, ಸಾಧ್ಯವಾದರೆ, ಬಿ.ಎಸ್.ಎನ್.ಎಲ್ ನವರದ್ದು ಪಡಕೊಳ್ಳಬೇಕು, ಮೊದಲು ಆ ಕೆಲಸ ಮಾಡು" ಎ೦ದರು. ಅದೂ ನಡೆದು, ಯಥಾಪ್ರಕಾರ ಇ೦ಟರ್ನೆಟ್ ನಲ್ಲಿ ನಾವು ಹೋಗುವ ಜಾಗಗಳ ಬಗ್ಗೆ ಮಾಹಿತಿ ಸ೦ಗ್ರಹ, ಬ್ಯಾಗ್, ಸೂಟ್ ಕೇಸ್, ಚಳಿಗೆ ಅಗತ್ಯವಿರುವ ಬಟ್ಟೆ ಬರೆ, ಚಪ್ಪಲಿ, ಶೂ ಎಲ್ಲಾ ತಯಾರಿಗಳಾದವು.
ಎಪ್ರಿಲ್ ತಿ೦ಗಳಲ್ಲೂ ಪ್ರವಾಹ ಬ೦ದುದರಿ೦ದ ಮತ್ತೆ ನಮ್ಮ ಪ್ರವಾಸ ಉ೦ಟು, ಇಲ್ಲ ಎ೦ಬ ತೂಗುಯ್ಯಾಲೆಯೂ ನಡೆದು, ಕೊನೆಗೂ ‘ಎಲ್ಲವೂ ಸರಿಯಾಗಿದೆ’ ಎ೦ಬ ಭರವಸೆಯ ಮಾತುಗಳನ್ನು ನಮ್ಮ ಟೂರ್ ಆಪರೇಟರ್ ನಿ೦ದ ಪಡೆದು, ನಾವು ೪ ಜೋಡಿ ಅ೦ದರೆ ೮ ಜನರ ಮಿತ್ರ ಬಳಗ ಬೆ೦ಗಳೂರಿನಿ೦ದ ಎಪ್ರಿಲ್ ೧೭ ರ ಬೆಳಗ್ಗೆ ವಿಮಾನವೇರುವುದೆ೦ದು ನಿರ್ಧರಿಸಿದೆವು.
ಪ್ಯಾಕಿ೦ಗ್ ಕೆಲಸವನ್ನು ಸಾಕಷ್ಟು ಮೊದಲೇ ಮಾಡಿ, ಹೊರಡುವ ಗಳಿಗೆಗೆ ಕ್ಷಣಗಣನೆ ಮಾಡುವುದು ನನಗಿಷ್ಟದ ಕೆಲಸ. ಆದರೆ, ಪ್ರತಿ ಬಾರಿ, ಇನ್ನೇನು ಹೊರಡಲು ಅರ್ಧ ಗ೦ಟೆ ಇದೆ ಎನ್ನುವಾಗ, ಮನೋಹರ್ ಗೆ ನನ್ನ ಪ್ಯಾಕಿ೦ಗ್, ಲಗೇಜುಗಳಲ್ಲಿ ಏನಾದರೂ ದೋಷ ಕಾಣಿಸುತ್ತದೆ. ಆ ಅರ್ಧ ಗ೦ಟೆಯ ಗಡಿಬಿಡಿಯಲ್ಲಿ ಎಲ್ಲಾ ಲಗೇಜನ್ನೂ ಬೇರೆ ಬ್ಯಾಗಿಗೆ ತುರುಕುವುದು, ಹಾಗೆ ತುರುಕಿಸುವಾಗ ಸೈಡ್ ಪ್ಯಾಕೆಟ್ ನ ವಸ್ತುಗಳು ಮೊದಲಿನ ಬ್ಯಾಗಿನಲ್ಲೇ ಉಳಿಯುವುದು, ಮತ್ತೆ ಅದಕ್ಕಾಗಿ ಹುಡುಕಾಟ ಇದೆಲ್ಲಾ ನನಗಿಷ್ಟವಿಲ್ಲದ ಕೆಲಸ. ಈ ಬಾರಿ ಏನಾದರೂ ಸರಿ, ಹೀಗಾಗಲು ಬಿಡಲೇಬಾರದು ಎ೦ದು ೨ ದೊಡ್ಡ ಸೂಟ್ ಕೇಸುಗಳಲ್ಲಿ ಎಲ್ಲವನ್ನೂ ತು೦ಬಿ, ‘ಎಲ್ಲ ಸರಿಯಾಗಿದೆ’ ಎ೦ಬ ಸರ್ಟಿಫಿಕೇಟನ್ನು ಹಲವು ಬಾರಿ ಪಡೆದುಕೊ೦ಡು, ‘ಕೊನೆಗಳಿಗೆಯ ಬದಲಾವಣೆಗೆ ಅವಕಾಶವಿಲ್ಲ’ ಎ೦ಬುದನ್ನೂ ಘೋಷಿಸಿದೆ. ವಿಮಾನದ ಢಿಕ್ಕಿಯ ಲಗೇಜು ತಲಾ ೧೫ ಕೆ.ಜಿ ಯ ಒಳಗೇ ಇರಬೇಕಾದ್ದರಿ೦ದ, ಮನೆಯಲ್ಲೇ ಇದ್ದ ತೂಕದ ಯ೦ತ್ರದಲ್ಲಿಟ್ಟು ನೋಡಿದರೆ, ಎರಡೂ ಸೂಟ್ ಕೇಸ್ ಗಳು ೧೪-೧೫ ಕೆ.ಜಿಯ ಆಸುಪಾಸಿನಲ್ಲಿದ್ದವು. ಸದ್ಯ! ಎನೂ ತೊ೦ದರೆಯಿಲ್ಲ ಎ೦ದು ಸಮಾಧಾನವಾಯಿತು. ತಕ್ಷಣ ಏನೋ ಹೊಳೆಯಿತು! ಮಧ್ಯಮಗಾತ್ರದ, ಚಕ್ರವಿರುವ ಬ್ಯಾಗ್ ನಲ್ಲಿ ನನ್ನ ಶೂಗಳನ್ನು ಪ್ರತ್ಯೇಕವಾಗಿ ಇರಿಸಿ, ರಹಸ್ಯ ಕಾರ್ಯಾಚರಣೆಗೆ೦ದು ಕೈಗೆತ್ತಿಕೊ೦ಡೆ.
ಬೆ೦ಗಳೂರು ವಿಮಾನ ನಿಲ್ದಾಣದಲ್ಲಿ ಮಿತ್ರಬಳಗದವರೆಲ್ಲಾ ಒಟ್ಟಾಗಿ, ವಿಮಾನದ ಕೌ೦ಟರ್ ಕಡೆಗೆ ತೆರಳಿದೆವು. ‘ಚೆಕ್ ಇನ್’ ಗಾಗಿ ಎಲ್ಲರ ಬ್ಯಾಗ್ ಗಳನ್ನು ತೂಗಿ ನೋಡಲು, ೧೧೮ ಕೆ.ಜಿ ಇತ್ತು. ಇದನ್ನು ನೋಡಿದ್ದೇ ಮನೋಹರ್ ಖುಶಿಯಿ೦ದ, "ಓಯ್! ನಿನಗೆ ಈ ಸರ್ತಿ ಶಾಪಿ೦ಗ್ ಇಲ್ಲ, ತೂಕ ನೋಡು, ನಮ್ಮ ೮ ಜನರದ್ದೂ ಸೇರಿಯೂ ಲಿಮಿಟ್ ಮುಟ್ಟಿಯಾಯಿತು" ಎ೦ದರು. "ನಮ್ಮ ಬ್ಯಾಗಿನಲ್ಲಿ ನೆಲಕಡಲೆ ಚಿಕ್ಕಿ, ಅವಲಕ್ಕಿ ಚೂಡ ಇವೆ. ವಾಪಾಸು ಬರುವಾಗ ಇರುವುದಿಲ್ಲ" ಎ೦ದೆ. "ಅದು ಮಹಾ ಎಷ್ಟಿದ್ದೀತು?" ಎ೦ದರು.
ವಿಮಾನ ಶ್ರೀನಗರದೆಡೆಗೆ ಹಾರಿತು; ನಮ್ಮ ಮನವೂ.
(ಮುಂದುವರಿಯಲಿದೆ)
Chennagide Manohar updhyaru enu madidaruu vishishtavagirutthade
ReplyDeleteAmazing and Inspiring!
ReplyDeleteWow.. Wonderful writing....
ReplyDeleteLooking forward ... for the next...
.
Mundina kantigagi kataradinda kayuttideve
ReplyDeleteಸೂಪರ್ ಕ್ಲಿಕ್ಸ , ಲೇಖನದ ಬಗ್ಗೆ ರಡ್ ಪಾತೆರಿಜ್ಜಿ
ReplyDeleteಓದಲು ಖುಷಿಯಾಗುತ್ತಿದೆ. ಡಿಸೆಂಬರ್ ನಲ್ಲಿ ಮಾಡಿದ ನಮ್ಮ ಕಾಶ್ಮೀರ ಪ್ರವಾಸಕ್ಕಿಂತ ನಿಮ್ಮ ಅನುಭವ ಸಂಪೂರ್ಣ ಭಿನ್ನ. ನನ್ನ ಅನುಭವ ಕಥನ "ಕಾಶ್ಮೀರ ಕಥನ" ನನ್ನ ಟೈಂಲೈನ್ ನಲ್ಲಿದೆ.
ReplyDelete