07 August 2015

ತ್ರಿಕೂಟಾಚಲವಾಸಿನಿ ವೈಷ್ಣೋದೇವಿ

(ಜಮ್ಮು ಕಾಶ್ಮೀರ ಪ್ರವಾಸ ಕಥನ ೮)

ಕತ್ರ ನಗರದ ಹೊರ ಅಂಚು, ತ್ರಿಕೂಟ ಪರ್ವತಗಳ ಪಾದದ ಮಹಾದ್ವಾರದಲ್ಲಿ, ಇನ್ನೂ ಸೂರ್ಯ ಮೂಡದಿದ್ದರೂ ಪೂರ್ಣ ಹಗಲಿನ ಬೆಳಕು ಪಸರಿಸಿದ್ದ ಶುಭ್ರ ಪ್ರಾತಃಕಾಲದ ಆರು ಗಂಟೆ.
ನಾವಿಬ್ಬರೂ ವಾತಾವರಣ ಅನುರಣಿಸುತ್ತಿದ್ದ “ಜೈ ಮಾತಾದೀ” ಘೋಷದಲ್ಲಿ ಸೇರಿಹೋಗಿದ್ದೆವು. ಹಿಂದಿನ ರಾತ್ರಿ ನಿಶ್ಚೈಸಿದ್ದಂತೆ ಬೆಳಿಗ್ಗೆ ಬೇಗನೆದ್ದು, ಹೋಟೆಲಿನವನು ಕೊಟ್ಟ ಕಾರಿನ ಸೌಕರ್ಯದೊಡನೆ ಎರಡು-ಮೂರು ಕಿಮೀ ಅಂತರ ಕ್ರಮಿಸಿ ಅಲ್ಲಿ ಬಂದಿಳಿದಿದ್ದೆವು. ಭಕ್ತಪದವಾಹಿನಿಯಲ್ಲಿ ಒಂದಾಗಿ ವೈಷ್ಣೋದೇವಿಯ ಕ್ಷೇತ್ರದರ್ಶನಕ್ಕೆ ಹರಿದಿದ್ದೆವು.
ಬಾಣಗಂಗಾ ಹೊಳೆಯ ದಕ್ಷಿಣ ದಂಡೆಯದು. ಅಲ್ಲಿನ ದಿಬ್ಬದ ಮೇಲಿನ ಭರ್ಜರಿ ಸ್ವಾಗತ ಮಂಟಪದ ಒಳಕ್ಕೆ ವ್ಯಾಪಕ ಭದ್ರತಾ ತನಿಖೆಗಳು ವಿಸ್ತರಿಸಿವೆ. ನಾವು ಹೊರೆ ಹೊತ್ತವರಲ್ಲವಾದ್ದರಿಂದ ಸರಳವಾಗಿ ಪೋಲಿಸರಿಂದ ತಡಕಾಡಿಸಿಕೊಂಡು, ಗಣಕದ ಗ್ರಹಿಕೆಗೆ ಬೆರಳಿಟ್ಟು, ಅದರದೇ ಕಣ್ಣಿಗೆ ಮುಖ ಕೊಟ್ಟು (ತಿರುಪತಿಯಲ್ಲಿನಂತೆಯೇ) ನಮ್ಮ ವ್ಯಂಗ್ಯ ಚಿತ್ರ ಸಹಿತ ಅನುಮತಿ ಪತ್ರ ಹಿಡಿದುಕೊಂಡು ಮುಂದುವರಿದೆವು.

ಒರಟು ಕಾಂಕ್ರೀಟ್ ಹಾಸಿನ, ಎತ್ತರದ ದೃಢ ಮಾಡಿನ ಓಣಿ ನುಗ್ಗುತ್ತಿದ್ದಂತೆ ಕುದುರೆ, ಡೋಲಿ, ಕೂಲಿಗಳು ಗಿಜಿಗುಡುತ್ತವೆ. ನಿಮ್ಮ ಏರು ಸಾಮರ್ಥ್ಯ, ನಿಜ ಅಂತರದ ಲೆಕ್ಕ, ಹಣಕಾಸು ಹಾಗೂ ಸವಲತ್ತಿನ ತುಲನೆಗಳೆಲ್ಲ ಅಡಿಮೇಲಾಗುವಂತೆ ಮೌಖಿಕ ಜಾಹೀರಾತು, ಮನವಿ, ಪೀಡನೆ ನಡೆಯುತ್ತವೆ. ಸರಕಾರೀ (ಅಥವಾ ದೇವಾಲಯ ಸಮಿತಿಯದ್ದೂ ಇರಬಹುದು) ದರಪಟ್ಟಿ ಪ್ರದರ್ಶನಕ್ಕೇ ಸೀಮಿತವಿರಬೇಕು.
ಹೇಗೂ ನಾವು ಚಾರಣಪ್ರಿಯರೇ ಆದ್ದರಿಂದ, ಗಟ್ಟಿ ಧ್ವನಿಯಲ್ಲಿ “ನಹಿ, ನಹಿ” (ರಕ್ಷತಿ ಡುಕೃಂಕರಣೇ!) ಜಪಿಸುತ್ತ ಎದುರೀಜು ಹಾಕಿದೆವು. ಆದರೆ ದಪ್ಪದ ದಮಿಳನೊಬ್ಬ ದಮ್ಮಾಸು ಹಾಕುವ ಕ್ರಮದಲ್ಲೇ ಕುದುರೆ ಯಜಮಾನನೊಬ್ಬ ಶನಿಯಂತೆ ಬೆಂಬತ್ತಿದ್ದ. ಪ್ರವೇಶದ್ವಾರ ಕಳೆದು ನೂರೆಂಟು ಮೀಟರ್ ಮುಂದೆ ಬಂದರೂ ಭಾಷಾ ಸಮಸ್ಯೆಯಲ್ಲಿ ಆತ ಅರ್ಥಮಾಡಿಕೊಳ್ಳಲಾರದಾಗಿದ್ದ – ಯಜಮಾನ ಹೇಳುತ್ತಿರುವುದು ಕುದುರೆಯ ಬಾಡಿಗೆಯೋ ಮಾರಾಟದ ದರವೋ! ಪುಟು ಪುಟು ಹೆಜ್ಜೆಯಿಡುವ ಪುಟಾಣಿಯಿಂದ ತೊಡಗಿ ದೇಹಭಾರವೆಲ್ಲ ಹತ್ತಿಯೆಂಬಂತೆ ಸಾಗುವ ಅಜ್ಜಿಯವರೆಗೆ, ಭರದಿಂದ ಇಳಿವ ಜನಸಾಗರದಲ್ಲಿ ನಾವು ಕೊಚ್ಚಿಹೋಗದಂತೆ ಆರೋಹಣ ನಡೆಸಿದೆವು.

ವಿಸ್ತಾರ ಸೇತುವೆಯ ಮೇಲೆ ಕ್ಷೇತ್ರದ ತೀರ್ಥವೇ ಆದ ಬಾಣಗಂಗೆ ದಾಟಿದೆವು. ಮುಂದೆ ಬಲಕ್ಕೆ ಅದಕ್ಕೊಂದು ಹರಕು ಮುರುಕು ಸ್ನಾನಘಟ್ಟ ಮಾಡಿದ್ದೂ ಕಾಣಿಸಿತು.  ಎಂದೂ ಅನಿರೀಕ್ಷಿತ ಪ್ರವಾಹ ಕಾಣಿಸಬಹುದಾದ, ಇಲ್ಲದಿದ್ದರೂ ಸಾಮಾನ್ಯರು ಬೆಟ್ಟದ ಝರಿಯನ್ನು ಕೀಳಂದಾಜಿಸಿ ಸೋಲಬಹುದಾದಲ್ಲಿ ಬಂದೋಬಸ್ತು ಏನೂ ಕಾಣಿಸಲಿಲ್ಲ! ಇನ್ನು ಮಾಲಿನ್ಯ ತಡೆಯ ಮಾತು ಅಪ್ರಸ್ತುತವೇ ಸರಿ. ಅಸ್ಥಿರ ಬಂಡೆ ಗುಂಡುಗಳ ಹೊಳೆಪಾತ್ರೆಯಲ್ಲಿ ನಾಲ್ಕೈದು ಮಂದಿ ಮೀಯುವುದನ್ನು ಕಂಡೆವು.

ಮುಂದುವರಿದಂತೆ ಮಳಿಗೆಗಳ ಸಾಲಿನ ಸೆರೆಯಲ್ಲೂ ನಾವೇರಲಿದ್ದ ಲಕ್ಷ್ಯದ ಸ್ವರೂಪ ಸ್ಪಷ್ಟವಾಗುತ್ತ ಬಂತು. ಸ್ವಚ್ಛ ಆಕಾಶದೆತ್ತರಕ್ಕೆ ಬಹು ಕಡಿದಾಗಿಯೇ ನಿಂತಿತ್ತು ಹಸಿರು ಹೊದ್ದ ಮೂರು ಮಕುಟಗಳ ಬೆಟ್ಟ.
ಆದರೆ ಎಲ್ಲಾ ತೆರನ ಭಕ್ತಾದಿಗಳನ್ನು ಲಕ್ಷಿಸಿ, ನಿಶ್ಚಿತ ಹಗುರ ಏರಿನ ಕಾಂಕ್ರೀಟ್ ಪಥ ಪ್ರಾಕೃತಿಕ ತೊಡರುಗಳನ್ನೂ ನಿವಾರಿಸಿತ್ತು. ಹೊತ್ತೇರಿದರೂ ಅದರ ಅಂಕಾಡೊಂಕು ನಡೆಯಲ್ಲಿ ನೆತ್ತಿ ಕಾಯಿಸದ, ಮಳೆ ಬಂದರೆ ಮೈ ತೋಯಿಸದ, ಇನ್ನೂ ಮುಖ್ಯವಾಗಿ ಮೇಲಿನ ಉದುರು ಕಲ್ಲುಗಳು ಯಾತ್ರಿಕರಿಗೆ ಬಡಿಯದಂತೆ ಖಾಯಂ ಚಪ್ಪರದ ರಕ್ಷಣೆಯೂ ಬಹುತೇಕ ಭಾಗಗಳಲ್ಲಿ ಇತ್ತು.
ರಾತ್ರಿಯ ಕೊನೆಯ ಜಾಮದ ಸುಸ್ತಿಲ್ಲದೇ ಹಗಲಿನ ಮೊದಲ ಜಾಮದ ಮಂಕಿಲ್ಲದೇ ಕೂಲಿ, ಕುದುರೆ, ಡೋಲಿ, ಅಂಗಡಿ ಸಾಲು ಎಲ್ಲಕ್ಕೂ ಮುಖ್ಯವಾಗಿ ವೈವಿಧ್ಯಮಯ ಜನಸಾಗರ ಯಾರನ್ನೂ ಉತ್ತೇಜಿಸುವಂತಿತ್ತು. ನಾವಂತೂ ನಸು ಚಳಿಯನ್ನು ಹರಿದುಕೊಂಡು ಮುಂಜಾನೆಯ ವಾಯುವಿಹಾರವೆನ್ನುವಂತೇ ನಡೆದೆವು.

ದೇವಿಸ್ತೋತ್ರ, ವೈಷ್ಣೋದೇವಿ ಭಜನೆ ಕಿವಿದುಂಬಿಸುತ್ತ ಇನ್ನಷ್ಟು ಮತ್ತಷ್ಟು ಬೇಕೆನ್ನುವವರಿಗೆ ಕ್ಯಾಸೆಟ್, ಸೀಡಿಗಳಲ್ಲಿ ಮಾರುವ ಮಳಿಗೆಗಳು ಮೊದಲ ಪಂಕ್ತಿಯಲ್ಲಿದ್ದವು. ಅವುಗಳ ಒಳಾಲಂಕಾರದಲ್ಲಿನ ದೇವಿ, ಸಿಂಹ, ಹುಲಿ, ರಾಕ್ಷಸಾದಿ ಅಣಕು ಮೂರ್ತಿಗಳ ಸಂದೋಹ, ಬಣ್ಣ ಬೆಳಕಿನ ಸಂಯೋಜನೆ, ಪುಷ್ಪಧೂಪಗಳ ಕಮ್ಮನೆ ಛಾಯಾ ಚಿತ್ರದ ಮೋಹವಿರುವವರನ್ನೂ ಆಕರ್ಷಿಸುತ್ತಿದ್ದುವು.
ಸ್ಮರಣಿಕೆಗಳ, ಗಿಲೀಟು ಸಾಮಗ್ರಿಗಳ, ತಿನಿಸು ಪಾನೀಯಗಳ ಸಂತೆ ಎರಡೂ ಪಕ್ಕಗಳಲ್ಲಿ ಹೆಚ್ಚು ಕಡಿಮೆ ಮಾರ್ಗದುದ್ದಕ್ಕೂ ಜಾಗ ಇದ್ದಲ್ಲೆಲ್ಲ ಖಾಯಂ ಆಗಿ ನೆಲೆಸಿದ್ದವು. ಹಳೆಗಾಲದ ರಚನೆಗಳೊಡನೆ ಏಗುತ್ತಾ ಹೊಸಗಾಲದ ರೂಪಾಂತರವನ್ನು ಕಾಣುತ್ತಲಿದ್ದ ಮಳಿಗೆಸಾಲುಗಳೂ ಅನೇಕವಿದ್ದವು.

ತಿರುಪತಿಯಲ್ಲಿ ಮೆಟ್ಟಿಲಸಾಲು ಮತ್ತು ದಾರಿಗಳನ್ನಷ್ಟೇ ದೇವಾಲಯದ ಸುಪರ್ದಿಗೆ ಕೊಟ್ಟು ಉಳಿದಂತೆ ವೆಂಕಟೇಶ್ವರ ವನಧಾಮ ವ್ಯಾಪಿಸಿದೆ. ಸಹಜವಾಗಿ ದೇವಾಲಯ ಬಿಗು ನೀತಿಯಲ್ಲಿ, ನಿರ್ದಿಷ್ಟ ಅಂತರ ಹಾಗೂ ಜಾಗಗಳಲ್ಲಷ್ಟೇ ಸಂತೆಗೆ ಅವಕಾಶ ಕಲ್ಪಿಸಿದ್ದಂತಿತ್ತು. ಇಲ್ಲಿ – ತ್ರಿಕೂಟಪರ್ವತದಲ್ಲಿ, ಮೆಟ್ಟಿಲ ಸಾಲಿನ ಅಂಚುಗಳಲ್ಲಿ ಖಾಸಗಿ ನೆಲ, ವಸತಿ, ಕೃಷಿ ಮಾತ್ರವೇನು ಪ್ರತ್ಯೇಕ ಹಳ್ಳಿಯೂ ಇದೆ.
ಹಾಗಾಗಿಯೋ ಏನೋ ದಾರಿ, ಮೆಟ್ಟಿಲುಗಳ ವಿಸ್ತರಣೆ, ಅಭಿವೃದ್ಧಿ ಹಾಗೂ ವಾಣಿಜ್ಯ ವಹಿವಾಟುಗಳ ನಿಯಂತ್ರಣ ನಿಧಾನದಲ್ಲಿದೆ.

ನಡೆಯುವವರಿಗಲ್ಲಿ ಎರಡು ತೆರನ ಅವಕಾಶಗಳು. ಮಳೆ, ಸವಕಳಿಗಳಿಗೆ ಜಾರದಂತೆ ಗಟ್ಟಿ ಕಚ್ಚುಗಳುಳ್ಳ ಪುಟ್ಟ ಕಾಂಕ್ರೀಟ್ ದಾರಿ ಬಹುಜನ ಪ್ರೀತಿಯದು. ಇದು ಹಲವು ಹಿಮ್ಮುರಿ ತಿರುವುಗಳೊಡನೆ ಪೂರ್ಣ ಉದ್ದಕ್ಕೆ ಸಾಗಿದೆ. ಇದರ ಬಹುದೊಡ್ಡ ಸಮಸ್ಯೆ – ಜನ ಸಾಗಿಸುವ ಕುದುರೆ ಹೇಸರಗತ್ತೆಗಳು, ಕೇವಲ ಹೊರೆ ಸಾಗಿಸುವ ಕತ್ತೆಗಳು ಮತ್ತು ನಾಲ್ಕು ಜನ ಭುಜಕೊಟ್ಟು ಮನುಷ್ಯರನ್ನು ಸಾಗಿಸುವ ಡೋಲಿಗಳು.

ಈ ದಾರಿಗಳ ಅಗಲ ಏಕಪ್ರಕಾರವಾಗಿಲ್ಲ. ಅವಕಾಶವಿದ್ದಲ್ಲೆಲ್ಲ ಬಹುತರದ ವ್ಯಾಪಾರೀ ಮಳಿಗೆಗಳು, ಕುಡಿನೀರಗಟ್ಟೆಗಳು, ಮೂತ್ರದೊಡ್ಡಿಗಳು ವ್ಯಾಪಿಸಿ ಇನ್ನಷ್ಟು ಗೊಂದಲ ಮಾಡುತ್ತವೆ. ಈ ದಾರಿಗೆ ಅಗಲೀಕರಣದ ಮತ್ತು ದೃಢ ಮಾಡಿನ ಕಾಮಗಾರಿಗಳು ನಡೆದೇ ಇವೆ.


ಕಾಂಕ್ರೀಟ್ ಹಾಸಿನ ಬಳಸಂಬಟ್ಟೆ ಬಿಟ್ಟು, ಹಲವೆಡೆಗಳಲ್ಲಿ ನೇರ ಏರಲು ಸುವ್ಯವಸ್ಥಿತ ಮೆಟ್ಟಿಲ ಸಾಲುಗಳನ್ನು ಕಟ್ಟಿದ್ದಾರೆ. ಅವಕ್ಕೆ ದೃಢ ಕೊಳವೆ ಸಾಲಿನ ಕೈತಾಂಗು ಅಥವಾ ಬೇಲಿಯನ್ನೂ ಕೊಟ್ಟಿದ್ದಾರೆ. ಇವು ತೊಡಗುವಲ್ಲೆಲ್ಲ ಆಯಾ ವಿಭಾಗದ ಮೆಟ್ಟಿಲ ಸಂಖ್ಯೆಯೊಡನೆ ದುರ್ಗಮತೆಯ ಕುರಿತು ಎಚ್ಚರಿಕೆಯ ಮಾತುಗಳನ್ನೂ ಕಾಣಿಸಿದ್ದರು: “ಹೃದ್ರೋಗಿಗಳು ಮತ್ತು ವೃದ್ಧರು ಇದನ್ನು ಬಳಸಬಾರದೆಂದು ಆಗ್ರಹಪೂರ್ವಕವಾಗಿ ಸೂಚಿಸುತ್ತೇವೆ.”
 ಈ ಮೆಟ್ಟಿಲ ಸಾಲಿನಲ್ಲಿ ಕುದುರೆ, ಡೋಲಿ, ಅಂಚುಗಟ್ಟುವ ಅಂಗಡಿಮಳಿಗೆಗಳೂ ಇಲ್ಲ. ಇದು ನಡೆಯುವವರಿಗೆ ನಿಶ್ಚಿಂತೆಯನ್ನು ಕಲ್ಪಿಸುವುದರೊಡನೆ ತುಸು ಬೇಜವಾಬ್ದಾರಿಗೂ ಅವಕಾಶ ಕೊಡುತ್ತದೆ. ಕೆಲವು ಜನ ಸುಸ್ತಾದಾಗ ಅಂಚುಗಟ್ಟೆಗಳ ಬದಲು ಎಲ್ಲೆಂದರಲ್ಲಿ ಮೆಟ್ಟಿಲ ಮೇಲೇ ಕುಳಿತು ಇತರರ ಓಡಾಟಕ್ಕೆ ಅಡ್ಡಿಯಾಗುತ್ತಾರೆ. ನನ್ನ ಲೆಕ್ಕದಲ್ಲಿ, ಮೆಟ್ಟಿಲ ಉದ್ದಕ್ಕೆ ಮೈಚಾಚಿ ಬಿದ್ದುಕೊಂಡ ಹೆಂಗಸೊಬ್ಬಳಿಗೂ

 ಮೆಲುಕಾಡಿಸುತ್ತ ವಿರಾಜಮಾನವಾಗಿರುವ ಬೀಡಾಡಿ ಮೇಕೆಗೂ ಹೆಚ್ಚೇನೂ ವ್ಯತ್ಯಾಸವಿಲ್ಲ! ಇದನ್ನು ಇನ್ನಷ್ಟು ದುರುಪಯೋಗಪಡಿಸುವವರು ಭಿಕ್ಷುಕರು. (ಮುಂದೆ ವಿವರಿಸುತ್ತೇನೆ.)

ಕೋಲು ಇಲ್ಲಿ ಒಂದು ಸರಕು. ಮೆಟ್ಟಿಲ ಸಾಲಿನ ಉದ್ದಕ್ಕೂ ಹಲವು ಅಂಗಡಿಗಳು ಕಾಡುಕೋಲುಗಳನ್ನು ಕೀಸಿ, ಬಿಳಿ ಮಾಡಿ, ತಲಾ ಹತ್ತು ರೂಪಾಯಿಯಂತೆ ಮಾರುತ್ತಿದ್ದವು.
ಬೆಟ್ಟದೆತ್ತರಕ್ಕೆ ಹತ್ತಿಳಿಯುವಲ್ಲಿ ಊರುಗೋಲು ಬೇಕೆನ್ನಿಸಿದಾಗ ಎಲ್ಲೂ ಇವನ್ನು ಕೊಳ್ಳಬಹುದು. ಅಷ್ಟೇ ಸರಳವಾಗಿ, ಕೋಲು ನಿಮಗೆ ಬೇಡವೆನಿಸಿದಲ್ಲಿ ಮತ್ತೆ ಯಾವುದೇ ಮಳಿಗೆ – “ಎಲ್ಲಿಂದ” ಎಂದು ಕೇಳದೆ, ಇವನ್ನು ಅರ್ಧ ಕ್ರಯಕ್ಕೆ ಕೊಳ್ಳಲೂ ಸಿದ್ಧರಿರುತ್ತಾರಂತೆ. ಆದರೆ ಕೆಲವು ಕಿಡಿಗೇಡಿಗಳು ಅವನ್ನು ಮೆಟ್ಟಿಲಿಗೆ ಕುಟ್ಟಿ ನಡೆಯುವ ವರಸೆಯಲ್ಲಿ ಮೆಟ್ಟಿಲಿನ ಏಣು ಜಖಂಗೊಳ್ಳುವುದನ್ನೂ ಬೀಸಿ ನಡೆಯುವ ಚಂದಕ್ಕೆ ಕೈಯಾಧಾರಕ್ಕೆ ಹುಗಿದ ಕೊಳವೆಗಳು ನೆಗ್ಗುವುದನ್ನೂ ನಾನು ಕಾಣಬಲ್ಲವನಾಗಿದ್ದೆ. ಭಕ್ತಿಯಲ್ಲಿ ಅವನ್ನು ಕ್ಷೇತ್ರದ ಸ್ಮರಣಿಕೆಯಾಗಿ ಮನೆಗೆ ಒಯ್ಯುವವರೂ ಇದ್ದಂತೆ, ಕೊನೆಯಲ್ಲಿ ಉಡಾಫೆ ಮಾಡಿ ಎಸೆಯುವವರೂ ಇದ್ದರು. (ಹೇಗೂ ಕಸ ಪೇರಿಸುವಲ್ಲಿ ನಮ್ಮ ಪ್ರಾವೀಣ್ಯವನ್ನು ಸರಕಾರವೂ ಪ್ರೋತ್ಸಾಹಿಸುತ್ತದಲ್ಲವೇ!)

ಏರು ಹೆಜ್ಜೆಯಿಡುವಲ್ಲಿ ಅಡಿ ಅದುರಿತೇ? ಇಳಿಯುವಲ್ಲಿ ಮೀನಖಂಡ ಸೆಟೆಯಿತೇ? ಅಲ್ಲೇ ನಿಮ್ಮನ್ನು ಕೂರಿಸಿ, (ಕಾಸಿಗೆ) ಮಸಾಜು ಮಾಡುವ ಪರಿಣತರಿಗೇನೂ ಇಲ್ಲಿ ಕಡಿಮೆಯಿಲ್ಲ. ಕಾಲು ಕೈಯನ್ನೆಲ್ಲ ಆವರಿಸುವ ಬೆಲ್ಟುಗಳನ್ನು ಹೊಂದಿದ ಭಾರೀ ಸಿಂಹಾಸನಗಳಂಥ ಯಂತ್ರಗಳ ಮಳಿಗೆಗಳಿದ್ದವು. ಕಂಪನ ಸಹಾಯದಲ್ಲೋ ಎಣ್ಣೆ, ಶಾಖ, ಲಘು ವಿದ್ಯುದಘಾತಗಳಲ್ಲೋ ಒಂದು ಬೈಠಕ್ಕಿನಲ್ಲೇ ನಿಮ್ಮನ್ನು ಮತ್ತೆ ಮುಂದುವರಿಯಲು ಹುರಿಗೊಳಿಸುವ ಇವರಲ್ಲಿ ಕೆಲವರಿಗೆ ಸಾರ್ವಜನಿಕ ಚಿತ್ರಗ್ರಹಣದ ಕುರಿತು ಅಲರ್ಜಿಯೂ ಇತ್ತು; ಹಾಗೆಂದು ಬೋರ್ಡೇ ಹಾಕಿದ್ದರು!

ಪ್ರಾಕೃತಿಕ ಸೌಂದರ್ಯ ವೀಕ್ಷಣೆಯೊಡನೆ ಜನಸಂದೋಹದ ವೈವಿಧ್ಯ ಗಮನಿಸುತ್ತಾ ಅದರ ಒಂದು ಭಾಗವೇ ಆಗುತ್ತಾ ತ್ರಿಕೂಟ ಪರ್ವತ ಏರಿಳಿಯುವುದು ಸಾಮಾನ್ಯರಿಗೆ ಒಂದು ಹೊರೆ, ಸಾಹಸ ಎಂಬ ಭಾವ ಬರಲಾರದು.
ಆದರೆ ಇಲ್ಲಿ ನೋಡಿ: ಈ ಹೆಂಗಸಿಗೆ ಪಾಪ ಲಕ್ವ ಸಹಿತ ಬಹುತರದ ದೈಹಿಕ ಬಾಧೆ ಇದ್ದಂತಿದೆ. ಆದರೆ ವೈಷ್ಣೋದೇವಿಯನ್ನು ನಡೆದೇ ನೋಡುವ (ಹರಕೆ?) ಸಂಕಲ್ಪ! ಸಹಜವಾಗಿ ಎರಡು ಮೂರು ದಿನಗಳದೇ ಕಾರ್ಯಕ್ರಮ ಹಾಕಿದ್ದಿರಬೇಕು. ಪುಟ್ಟಪಥದಲ್ಲೇ ಇಳಿಯುತ್ತ ಬಂದು ಒಂದು ಮೆಟ್ಟಿಲಸಾಲಿನ ದ್ವಾರದ ಬಳಿ ನಿಂತಿದ್ದರು. ದೃಢಕಾಯದ ತರುಣ ಮಗ, ಹತಾಶೆಯ ಮುಖ ಹೊತ್ತು, ಕಡಿದಾದ ಮೆಟ್ಟಿಲಸಾಲಿನ ಒಳದಾರಿಯತ್ತ ಒಲವು ತೋರುತ್ತಿದ್ದ. ವೃದ್ಧನಾದರೂ ಆರೋಗ್ಯವಂತನಾಗಿ ತೋರುತ್ತಿದ್ದ ಗಂಡ ಆಕೆಯ ಎದುರು ಮುಖ ಮಾಡಿ ಮೌನವಾಗಿ ನಿಂತಿದ್ದ. ಆಕೆಯ ಬಲವಿದ್ದ ಕೈಯನ್ನು ಗಂಡ ತನ್ನೆರಡೂ ಹಸ್ತಗಳಲ್ಲಿ ಆಧಾರ ಕೊಡುವಂತೆ ಹಿಡಿದಿದ್ದ. ಆಕೆಯಲ್ಲಿ ಭಕ್ತಿಯ ಸೆಲೆಯೋ ಸಂಕಲ್ಪದ ಛಲವೋ ಜಿನುಗಿದಂತೆಲ್ಲ, ಪಾದವನ್ನು ಅಂಗುಲಂಗುಲ ಮುನ್ನೂಕುತ್ತಿದ್ದಳು. ಇಚ್ಛೆಯನರಿತ ಪತಿ, ತೇರಿನೆದುರಿನ ಬಸವನಂತೆ ತಾಳ್ಮೆಯಿಂದ ಹಿಂದೆ ಹೆಜ್ಜೆ ಹಾಕುತ್ತಲೇ ಇದ್ದ. ಸಮತಳದ ಕಾಂಕ್ರೀಟ್ ಇಳಿಜಾರಿನಲ್ಲೇ ಈ ಸ್ಥಿತಿಯಲ್ಲಿದ್ದವಳನ್ನು ಮೆಟ್ಟಿಲಿನಿಂದ ಮೆಟ್ಟಿಲ ಗುಂಡಿಗೆ ಹಾರಿಕೊಳ್ಳಲು ನಿರೀಕ್ಷಿಸುವ ಆತುರಗಾರನ (ಮಗ) ಬಗ್ಗೆ ನಮಗೆ ಒಪ್ಪಿಗೆಯಾಗಲಿಲ್ಲ.
ಇನ್ನೊಬ್ಬ ವೃದ್ಧೆಯನ್ನು ಗಾಲಿ ಕುರ್ಚಿಯಲ್ಲೇ ಮೇಲಕ್ಕೊಯ್ಯುತ್ತಿದ್ದರು. ಅಷ್ಟುದ್ದದ ಏರಿಗೆ ಕೇವಲ ಒಂದಾಳಿನ ನೂಕುಬಲ ಸಾಲದೆನ್ನುವಂತೆ, ಕುರ್ಚಿಗೆ ಮುಂದೊಂದು ದಪ್ಪದ ಹಗ್ಗ ಕಟ್ಟಿ ಎಳೆಯುವವನೂ ಒಬ್ಬನಿದ್ದ.
ಅಮ್ಮಂದಿರ ಸೊಂಟಕ್ಕೋ ಅಪ್ಪಂದಿರ ಭುಜಕ್ಕೋ ಏರಿದ ಮಕ್ಕಳಂತೇ ಸಂಬಂಧಿಕರ, ಬಾಡಿಗೆ ಜನರ ಬೆನ್ನು ಹತ್ತಿ ಹೋಗುವ ಬಡಕಲು ಹಿರಿಯರೂ ಅನೇಕರಿದ್ದರು. ಅವರೆಲ್ಲ ಹೆಲಿಕಾಪ್ಟರ್, ಡೋಲಿಗಳ ಹಣಕಾಸು ಹೊಂದಿಸಲಾಗದವರೂ ಇರಬಹುದು.
ಬೆನ್ನ ಹೊರೆಯಲ್ಲಿ ಭಾರೀ ಕಟ್ಟು ಹೊತ್ತ ಕೂಲಿಗಳನ್ನೂ ಸಾಕಷ್ಟು ಕಂಡಿದ್ದೆವು. ಕುದುರೆ ಮೇಲೆ ಆನೆ ಕೂತಂತೆ, ಡೋಲಿಯೊಳಗೆ ಮಹಾರಾಜ ವಿರಾಜಿಸಿದಂತೆ ಸವಾರಿ ಹೋಗುತ್ತಿದ್ದ ಮಂದಿ ಎಷ್ಟೂ ಇದ್ದರು. ಡೋಲಿಯ ನಾಲ್ಕು ಮಂದಿಯಾಗಲೀ ಸವಾರಿಯ ಜನಹೊತ್ತ ಕುದುರೆಗೆ ನಡಿಗೆಯಲ್ಲಿ ಜೊತೆಗೊಡುವ ಕಾಸ್ತಾರನಾಗಲೀ ಇತರ ಪಾದಚಾರಿಗಳನ್ನು ಎಚ್ಚರಿಸುತ್ತಿರುತ್ತಾರೆ. ಆದರೆ ಬರಿಯ ಹೇರು ಹಾಕಿ, ಸ್ಪಷ್ಟ ಕಾಣುವಂತೆ ಯಾವುದೇ ಜನಸಾಂಗತ್ಯವಿಲ್ಲದೇ ಏರಿಳಿಯುವ ಕತ್ತೆಗಳೂ ಸಾಕಷ್ಟು ಸಿಗುತ್ತವೆ.

ಅವು ಯಾವವೂ ಆಕ್ರಮಣಕಾರಿಗಳಲ್ಲ. ಆದರೂ ನಡೆಯುವವರನ್ನು ಹಿಂದಿಕ್ಕಿ ಹೋಗುವಾಗ, ಅನಿರೀಕ್ಷಿತ ಮೂಕ ಡಿಕ್ಕಿ ಕೊಡುವುದಿದೆ. ಒಂದು ಬಡಪಾಯಿ ಕತ್ತೆಯಂತೂ ತನ್ನ ದೇಹಗಾತ್ರದ ಸಂದಿನಲ್ಲಿ ನುಸುಳುವಾಗ ಇಕ್ಕೆಲಗಳಲ್ಲಿ ವಿಸ್ತರಿಸಿದ ಬೆನ್ನ ಹೊರೆಯ ಅಂದಾಜಿಲ್ಲದೆ ಮತ್ತೆ ಮತ್ತೆ ಅನ್ಯ ಸಂಚಾರಿಗಳಿಗೆ ಕುಟ್ಟುವುದರೊಡನೆ ರಕ್ಷಣಾ ಬೇಲಿಗೂ ಅಲ್ಲಿಲ್ಲಿ ಒರೆಸಾಡಿ, ಅನಾವಶ್ಯಕ ತೊನೆದಾಡಿ, ಹೆಚ್ಚಿನ ನೋವುಣ್ಣುತ್ತ ಹೋಗುತ್ತಿತ್ತು! ಈ ಡೋಲಿ, ಕುದುರೆಗಳಲ್ಲಿ ಆಧುನಿಕ ಒಪ್ಪಂದ-ಪತ್ರಗಳಲ್ಲಿನ ನಿಗೂಢ ಸೇವಾಶುಲ್ಕದಂತೆ ಬಹು ತೆರನ ಒಳ-ಸುಲಿಗೆ ನಡೆಸುತ್ತಾರೆ. ಅದರಲ್ಲಿ ಬಹಳ ಮುಖ್ಯವಾದದ್ದು ಸುಮಾರು ಅರ್ಧ ದಾರಿಯಲ್ಲಿ ಕುದುರೆಗಳಿಗೆ ತೌಡು ಹಾಗೂ ಮನುಷ್ಯರಿಗೆ ತಿಂಡಿ ತೀರ್ಥವನ್ನು ಸವಾರರು `ಉದಾರ’ವಾಗಿ ಕೊಡಿಸಬೇಕಂತೆ.

ದಪ್ಪ ಮೈರೋಮದ ಕಾಡು ಮಂಗಗಳು ಉದ್ದಕ್ಕೂ ನಮಗೆ ಕೆಲವು ಸಿಕ್ಕವು. ಬಹುಶಃ ಭಕ್ತಾದಿಗಳ ಔದಾರ್ಯದಲ್ಲೂ ಕಸದಲ್ಲೂ ಹೊಟ್ಟೆಗೆ ಸಾಕಷ್ಟು ಸಿಗುವುದರಿಂದಲೋ ಏನೋ ಇಲ್ಲಿನ ಮಂಗಗಳು ಸೌಮ್ಯವೇ ಇದ್ದುವು.
ಕಸಕ್ಕೆ ಎಸೆದಿದ್ದ ಫ್ರೂಟಿ ಪೊಟ್ಟಣವನ್ನೆತ್ತಿ ಉಳಿಕೆ ಹನಿಗಳನ್ನು ಚಪ್ಪರಿಸುತ್ತಿದ್ದ, ಕಾಫಿಗೂಡೊಂದರ ಎದುರು ಕೈಜಾರಿ ಸಿಮೆಂಟ್ ನೆಲದ ಮೇಲೆ ಚೆಲ್ಲಿದ್ದ ಕಾಫಿಯನ್ನು ನೆಕ್ಕುತ್ತಿದ್ದ ಮಂಗಗಳೇನೋ ಇದ್ದವು. ಆದರೆ ಜನ ಏನೋ ತಿನಿಸು ಮೆಲುಕುತ್ತಾ ಸಾಗಿದ್ದಾಗ ಚೀಲ ಹಿಡಿದು ನಡೆದಾಗ ನಿರಾಸಕ್ತಿಯಿಂದ ನಿರುಕಿಸುವ ಕಪಿಗಳೇ ಜಾಸ್ತಿ. ನಮ್ಮ ಹಲವು ಮಂತ್ರಿ ಶಾಸಕರಂತೆ ಜನ ಸಂಪರ್ಕದ ಮಟ್ಟದಲ್ಲಿದ್ದರೂ ತೂಕಡಿಸುವ ಮಂಗನನ್ನಂತೂ ನಾನು ಇದೇ ಮೊದಲು ಕಂಡದ್ದು!


ಈ ವಲಯದಲ್ಲಿ ಮಳೆ ಆಗೀಗ ಆಗುತ್ತಿರುವುದರಿಂದ, ಮೆಟ್ಟಿಲ ಸಾಲುಳಿದು ಇತರತ್ರ ಬೆಟ್ಟದ ಮೈಯಲ್ಲಿ ಸಾಕಷ್ಟು ಹುಲ್ಲು ಹಸಿರು ಇತ್ತು. ಅಂಥಲ್ಲೊಂದೆಡೆ ಒಂದು ಬೆಟ್ಟದಾಡು (ವನ್ಯ) ಕೇವಲ ನೂರಡಿ ಅಂತರದಲ್ಲಿ ಮೇಯುತ್ತ ಸಾಗಿದ್ದನ್ನೂ ಕಂಡೆವು. ಸಾಕಾಡುಗಳಂತು ಅಲ್ಲೆಲ್ಲ ಹೊಟ್ಟೆ ತುಂಬ ಮೇಯ್ದು, ಇಲ್ಲಿ ಬಂದು ಮೆಟ್ಟಿಲ ಸಾಲಿನಲ್ಲಿ ಮೆಲುಕುತ್ತಾ ವಿರಮಿಸಿದ್ದುವು.
ಉದ್ದಗೂದಲಿನ, ತರಹೇವಾರಿ ಕೋಡಿನ ಆಡುಗಳು ಸಂತೆಯೊಳಗಿನ ಸಂತರಂತೇ ಇರುತ್ತಿದ್ದುವು. ಒಂದೆಡೆ ನಾನು ನಲ್ಲಿ ನೀರು ಕುಡಿದು ಹೊರಟಿದ್ದೆ. ಬಿಳಿ ಆಡೊಂದು ಬಂದು ತನಗೂ ನೀರಡಿಯಾಗಿದೆ ಎನ್ನುವಂತೆ ನನಗೆ ಬಹಳ ಸ್ಪಷ್ಟ ಸೂಚನೆ ನೀಡಿತು.
ನಾನು ಸಂಶಯದಲ್ಲೇ ನಲ್ಲಿ ಒತ್ತಿ ಹಿಡಿದದ್ದೇ ಅದು ನೀರಧಾರೆಗೆ ಬಾಯಿಕೊಟ್ಟು ಮಿನಿಟೆರಡರ ಕಾಲ ನೀರು ಚಪ್ಪರಿಸುತ್ತಲೇ ಇತ್ತು. ಒಂದು ಹಂತದಲ್ಲಿ ನಾನೇ ಸಾಕೆಂದು ನಿಲ್ಲಿಸಿದೆ. ಆಗ ಅದರ ದೇಹಭಾಷೆ ನನಗೆ ಸ್ಪಷ್ಟವಾಗಿ “ಇಲ್ಲ, ಇನ್ನೂ ಸ್ವಲ್ಪ ಬಿಡು” ಎನ್ನುವಂತೇ ಕಂಡದ್ದು, ನಾನು ಮತ್ತೆ ಬಿಟ್ಟದ್ದು, ಅದು ಮತ್ತಷ್ಟು ಕುಡಿದು, ತೃಪ್ತವಾಗಿ ಹೊರಟದ್ದು ಎಂದೂ ಮರೆಯಲಾಗದ ಅನುಭವ! ಆಗ ದೇವಕಿ ತುಸು ಮುಂದೆ ಇದ್ದುದರಿಂದ ಘಟನೆಯನ್ನು ಚಲಚಿತ್ರ ದಾಖಲೆಗಿಳಿಸುವುದು ತಪ್ಪಿ ಹೋದ್ದಕ್ಕೆ ನನಗೆ ವಿಷಾದವಿದೆ.

ಒಮ್ಮೆಗೇ “ಢಮ್ಮ ಢಮ್ಮ...!” ನಮ್ಮ ಎದೆಬಡಿತಕ್ಕೆ ಹೊರಗೆಲ್ಲೋ ಭಾರೀ ಮೈಕು ಹಚ್ಚಿದಂತೆ ಢೋಲು ನಿನದಿಸಿತು. ಸದ್ದಿನ ಹತ್ತಿರ ಹೋದಾಗ ತಿಳಿಯಿತು – ಅದು ಸುಮ್ಮನೇ ಫ್ರೆಂಚ್ ಡ್ರಮ್ಮು ಗುದ್ದಿ ಭಿಕ್ಷೆ ಬೇಡುವವರ ಕರಾಮತ್ತು. ಮಾತಾದೀಗೆ (ವೈಷ್ಣೋದೇವಿ) ಎಲ್ಲೆಂದರಲ್ಲಿ `ವಾದ್ಯಸೇವೆ’ ಎಂದೇ ಭಾವಿಸುವ ಮಂದಿ ಇಂಥವರಿಗೆ ಧಾರಾಳ ಕಾಸು ಕೊಟ್ಟು ಕುಟ್ಟಿಸುತ್ತಾರೆ!
ಮೆಟ್ಟಿಲ ಸಾಲಿನಲ್ಲಿ ಅಲ್ಲಲ್ಲಿ ಸಣ್ಣ ಹುಡುಗಿಯರು ಜಿಗಿಜಿಗಿ ಝರಿಯ ಚುನರಿಯನ್ನು (ದೇವಿಯ ಶೇಷವಸ್ತ್ರವಂತೆ, ಪವಿತ್ರವಂತೆ) ದೇಹ ತುಂಬ ಹೊದ್ದು ವಿಸ್ತೃತ ಸೆರಗನ್ನು ಬಹುತೇಕ ದಾರಿಗಡ್ಡ ಚಾಚಿ ಕುಳಿತಿರುತ್ತಾರೆ. ಇವರ ಹಿರಿಯರು ಸಮೀಪದಲ್ಲೇ ಎಲ್ಲೋ ಮರೆಯಲ್ಲಿದ್ದುಕೊಂಡು, ಕಣ್ಗಾವಲೂ ನಡೆಸುತ್ತಾರೆಂದೂ ಕೇಳಿದ್ದೆ.
ಕೇವಲ ಮುಖವನ್ನಷ್ಟೇ ತೋರುತ್ತ, ಪಿಳಿಪಿಳಿ ದೃಷ್ಟಿಸುವ ಈ `ದೇವಿ ಸಮಾನರಾದ ಕುಮಾರಿ’ಯರು ಕಾಣಿಕೆ (ಭಿಕ್ಷೆ) ನಿರೀಕ್ಷಿಸುತ್ತಿರುತ್ತಾರೆ. ಕೆಲವರು ಉದ್ದುದ್ದ ಮಾತುಗಳನ್ನು ಎಳೆದೆಳೆದು ಆಡುತ್ತಾ ಭಿಕ್ಷೆ ಕೇಳುವುದೂ ಉಂಟು. ಜನಸಂಚಾರಕ್ಕೆ ತಡೆಯುಂಟು ಮಾಡುವ ಈ `ಮಾರಿ’ಯರನ್ನು ನಾನಂತೂ ಕಣ್ಣು ಕೆಕ್ಕರಿಸಿಯೇ ದಿಟ್ಟಿಸುತ್ತಿದ್ದೆ. ಒಂದೆಡೆ ಅಸಾಧ್ಯವೆನ್ನಿಸಿದಲ್ಲಿ ಕಾಲಿನಲ್ಲೇ ಆಕೆಯ ಚುನರಿಯನ್ನು ಸ್ವಲ್ಪ ಬದಿಗೆ ತಳ್ಳಿ ಮುಂದುವರಿದೆ. ಸ್ವಲ್ಪ ಬಲಿತ ಆ ಹುಡುಗಿ ಭಾರೀ ಅವಮಾನವಾದವರಂತೆ ಕಿರಲಿದಳು. ಮರೆಯ ರಕ್ಷಕ ದಪ್ಪ ಧ್ವನಿ ತೆಗೆದು ಮುಂದೆ ಬರುತ್ತಿದ್ದಂತೆ ನಾನು ಕೇಳದಂತೇ ಮಾಡಿ, ಸಹಜ ನಡೆಯಲ್ಲಾದ ಆಕಸ್ಮಿಕವೆಂಬಂತೆ ಬಿಂಬಿಸಿ ಬಚಾವಾದೆ! ಹಿಂದೊಮ್ಮೆ ಹೇಳಿದ್ದು ನೆನಪಿಸಿಕೊಳ್ಳಿ – ದೇವರಲ್ಲ, ದೇವಭಕ್ತರು ಅಪಾಯಕಾರಿಗಳು!

ಬೆಳಿಗ್ಗೆ ಏಳು ಗಂಟೆಯ ಸುಮಾರಿಗೆ ಡಾಬಾ ಒಂದರಲ್ಲಿ ಉಪಾಹಾರ ಮುಗಿಸಿದ್ದೆವು. ಹನ್ನೆರಡು ಗಂಟೆಯ ಸುಮಾರಿಗೆ ಮುಕ್ಕಾಲು ಬೆಟ್ಟದೆತ್ತರ, ಅಂದರೆ ಶಿಖರವಲಯದ ಹೆಲಿಪ್ಯಾಡ್ ಮಟ್ಟಕ್ಕೆ ಏರುವಲ್ಲಿಗೆ ಮುಖ್ಯ ಏರು ಮುಗಿದಿತ್ತು.
ಅಲ್ಲಿ ಯಾತ್ರಾರ್ಥಿಗಳಿಗೆ ಛತ್ರ, ರಾತ್ರಿ ಉಳಿಯುವುದಿದ್ದರೆ ಬಳಕೆಗೆ ಉಚಿತ ಕಂಬಳಿ, ಆಸ್ಪತ್ರೆಯ ಸೌಲಭ್ಯವೆಲ್ಲಾ ಇದೆ. ಸ್ಥಳೀಯ ಮಕ್ಕಳಿಗಾಗಿ ಒಂದು ದೊಡ್ಡ ಶಾಲೆಯೂ ಅಲ್ಲೇ ತಗ್ಗಿನ ಮರೆಯಲ್ಲಿ, ಬಹುಮಹಡಿ ಕಟ್ಟಡದಲ್ಲಿ ನಡೆಯುತ್ತಿತ್ತು!
ಈ ಜಾಗದಿಂದ ಮುಂದೆ ಹೆಚ್ಚುಕಡಿಮೆ ಸಮತಟ್ಟಿನ ಜಾಡು. ಅದು ಕೆಲವೆಡೆ ಸ್ವಲ್ಪ ಇಳಿಯುತ್ತಲೂ ನಮ್ಮನ್ನು ಬೆಟ್ಟದ ಇನ್ನೊಂದು ಮಗ್ಗುಲಿಗೆ ಸಾಗಿಸುತ್ತದೆ. ದೇವಿಯ ಆಧುನಿಕ ಭವನ ಹಾಗೂ ಒಟ್ಟು ಯಾತ್ರೆಯ ಪ್ರಧಾನ ಲಕ್ಷ್ಯ, ಅಂದರೆ ದೇವಿಯ ಗುಹಾನೆಲೆ, ಆ ಮೂಲೆಯಲ್ಲಿತ್ತು.

ಬಹು ಕಡಿದಾದ ಆ ವಲಯದಲ್ಲಿ ಬಹಳ ದೊಡ್ಡ ಸಂದಣಿಯನ್ನು ನಾಗರಿಕ ಸವಲತ್ತುಗಳ ಜೊತೆಗೆ, ನಿರಪಾಯಕಾರಿಯಾಗಿ ನಡೆಸಿಕೊಳ್ಳುವ ವ್ಯವಸ್ಥೆ, ನಿರ್ವಹಣೆ ನಿಜಕ್ಕೂ ಮೆಚ್ಚುವಂತದ್ದೇ.
ಅಲ್ಲಿನ ಹೋಟೆಲುಗಳಲ್ಲೆಲ್ಲ ಆಹಾರ ಪಾನೀಯಗಳು ದೇವಸ್ಥಾನ ಮಂಡಳಿ ನಿಯಂತ್ರಿಸಿದ ಬೆಲೆಯಲ್ಲೇ ಶುಚಿರುಚಿಯಾಗಿ ಲಭ್ಯವಿದ್ದುವು. ನಾವು ಹೋದಾಗೊಮ್ಮೆ, ವಾಪಾಸು ಹೊರಟಾಗೊಮ್ಮೆ ಬೇರೆ ಬೇರೆ ಮಳಿಗೆಗಳಲ್ಲಿ ಸ್ವಲ್ಪ ಸ್ವಲ್ಪವೇ ತಿಂಡಿಯನ್ನೇ ತಿಂದು ಸುಧಾರಿಸಿಕೊಂಡೆವು.
ಇಲ್ಲಿ ದೇವಿ ದರ್ಶನಕ್ಕೆ ಹೋಗುವವರನ್ನು ಬಹಳ ವಿವರಗಳಲ್ಲಿ ತನಿಖೆ ಮಾಡುತ್ತಾರೆ ಮತ್ತು ನಿರ್ದಾಕ್ಷಿಣ್ಯವಾಗಿ ಭದ್ರತಾ ನಿಯಮಗಳನ್ನು ಹೇರುತ್ತಾರೆ. ಇದಕ್ಕೆ ಉದಾಹರಣೆಯಾಗಿ ನನ್ನದೇ ಅನುಭವ ಕೇಳಿ. ಯಾತ್ರಿಗಳು ಮೊದಲು ತಮ್ಮ ಸಾಮಗ್ರಿಗಳನ್ನು ನೇರ ಸುಮಾರು ನೂರಿನ್ನೂರು ಮೆಟ್ಟಿಲು ಕೆಳಗಿದ್ದ ಉಚಿತ ಲಾಕರುಗಳಲ್ಲಿಟ್ಟು ಬರಬೇಕಿತ್ತು.
ನಾವು ಅಷ್ಟನ್ನೂ ಪುನಃ ಏರಬೇಕಲ್ಲಾ ಎಂಬ ಮುಲುಗಿನೊಡನೇ ಇಳಿದೆವು. ಅಲ್ಲಿ ಸರದಿ ಸಾಲು ಹಿಡಿದು ಮೊದಲು ಪರಿಚಯ ಪತ್ರ (ಆಧಾರ್) ತೋರಿ ಬೀಗ ಕೀಲಿ ಪಡೆದೆವು. ಅನಂತರ ಸಾಮೂಹಿಕ ಗೂಡುಗಳ ಅಂಕಣ ಪ್ರವೇಶಿಸಿ, ಖಾಲಿಯಿದ್ದ ಒಂದು ಗೂಡಿನಲ್ಲಿ ನಮ್ಮ ಚಪ್ಪಲಿ, ಚರವಾಣಿ, ಕ್ಯಾಮರಾ, ವಾಚು, ದೇವಕಿಯ ಜಂಬದ ಚೀಲ ಸಹಿತ ಎಲ್ಲವನ್ನೂ ತುಂಬಿ, ಬೀಗ ಜಡಿದೆವು. ಗೂಡಿನ ಕ್ರಮಸಂಖ್ಯೆ ಮರೆತು ಹೋಗದಂತೆ ಜೇಬಿನ ಚೀಟಿಯಲ್ಲಿ ಬರೆದಿಟ್ಟು, ಕೀಲಿಕೈಯನ್ನು ಕಿಸೆಗೆ ಸೇರಿಸಿ, ನಿಧಾನಕ್ಕೆ ಮೇಲೇರಿ ಪ್ರವೇಶ ಬಯಸಿದೆವು. ತನಿಖಾಧಿಕಾರಿ ನನ್ನಲ್ಲುಳಿದಿದ್ದ ಪೆನ್ನನ್ನು ನಿಷೇಧಿಸಿದ. ಬರಿಯ ಐದು ಹತ್ತು ರೂಪಾಯಿಯ ಪೆನ್ನಾಗಿದ್ದರೆ ಅಲ್ಲೇ ಕಸದಬುಟ್ಟಿ ಸೇರಿಸಿಬಿಡುತ್ತಿದ್ದೆ. ಆದರಿದು ನನ್ನ ಬೆಂಗಳೂರು ಸೈಕಲ್ ಮಹಾಯಾನದಲ್ಲಿ ಇಂಡಿಯನ್ ಆಯಿಲ್ ಕೊಟ್ಟ ಅಮೂಲ್ಯ ಸ್ಮರಣಿಕೆ. ಅಧಿಕಾರಿಗೆ “ನೀವೇ ಇಟ್ಟುಕೊಳ್ಳಿ. ದರ್ಶನ ಮುಗಿಸಿ ಬಂದು ನಾನು ಕೇಳಿಕೊಳ್ಳುತ್ತೇನೆ” ಎಂದು ನೋಡಿದೆ. ಆತ ನಿರಾಕರಿಸಿದ! ಆತನನ್ನು ದೂರುವಂತದ್ದೇನೂ ಇಲ್ಲ, ಕಾಲ ಕೆಟ್ಟದ್ದು. ಪೆನ್ನಿನಲ್ಲಿ ಕ್ಯಾಮರಾ ಬಾಂಬೂ ಇರಬಾರದೆಂದಿಲ್ಲ. ಮತ್ತೆ ಆ ನೂರಿನ್ನೂರು ಮೆಟ್ಟಿಲು ನಾನೊಬ್ಬನೇ ಇಳಿದು, ಸರದಿಯಲ್ಲಿ ಹಾಯ್ದು, ಗೂಡು ತೆರೆದು, ಪೆನ್ನಿಟ್ಟು ಮರಳಬೇಕಾಯ್ತು.

ಸರದಿ ಸಾಲಿನ ಉದ್ದನ್ನ ಬೇಲಿಗಳ ನಡುವೆ ಹಾಯ್ದು, ಮೊದಲು ಅಲಂಕಾರಿಕ ಆಧುನಿಕ ದೇವೀ-ಭವನವನ್ನು ಕಾಣುತ್ತೇವೆ. ದೇವಿಗೆ ಅರ್ಪಿಸುವ ಪೂಜಾ ಸಾಮಗ್ರಿಗಳೇನಿದ್ದರೂ ಅಲ್ಲೇ ಪೋಲಿಸ್-ಪುರೋಹಿತರ ಮೂಲಕವೇ ಸಲ್ಲಿಸಬೇಕು. ಮುಂದೆ ನಿಜ ಶ್ರದ್ಧಾ ಕೇಂದ್ರ – ವೈಷ್ಣೋದೇವಿಯ ಪ್ರಾಕೃತಿಕ ಗುಹಾ ಮಂದಿರ. ಇದರ ಪ್ರಾಕೃತಿಕ ಸ್ಥಿತಿಯನ್ನು ಒಳಗಿನಿಂದ ಪೂರ್ಣ ಬಿಗಿಪಡಿಸಿ, ಶುಭ್ರ ಅಮೃತಶಿಲಾಮಯ ಮಾಡಿದ್ದಾರೆ. ಭಾರತೀಯ ಭಕ್ತ ಮನಸ್ಸುಗಳು ಸಾಮಾನ್ಯವಾಗಿ ಗದ್ದಲಪ್ರಿಯ! ಇದರ ಪೂರ್ಣ ಅರಿವಿನೊಡನೆ, ಗುಹೆಯ ರಕ್ಷಣೆಗಾಗಿ, ಒಳಗೆ ಅಲ್ಲಲ್ಲಿ “ದೇವಿ ಸ್ಮರಣೆಯನ್ನು ಮನಸ್ಸಿನಲ್ಲೇ ಮಾಡಿ, ಘೋಷಣೆ ಕೂಡದು” ಎಂದು ಫಲಕಗಳನ್ನು ಹಾಕಿರುವುದು ನಮಗಂತು ಬಲು ಮುದ ನೀಡಿತು. (ಗುಹೆ ಕುಸಿಯಬಹುದು ಮತ್ತು ಸಂಕುಚಿತ ಆವರಣದಲ್ಲಿ ಏರು ಗದ್ದಲ ಕೆಲವರಲ್ಲಿ ಮಾನಸಿಕ ಅಸ್ಥಿರತೆಯನ್ನೂ ಉಂಟುಮಾಡುವ ಅಪಾಯವಿದೆ.) ಭದ್ರ ಗುಹೆಗೆ ಹೊಕ್ಕಲು, ಹೊರಡಲು ಪ್ರತ್ಯೇಕ ದ್ವಾರಗಳಿದೆ. ಒಳಗೆ ಸುಮಾರು ನೂರಡಿ ಅಂತರದಲ್ಲಿ ದೇವಿಯ ಸ್ಥಾನ. ಆರಾಧನಾ ಕೇಂದ್ರ ತುಸು ಎತ್ತರದಲ್ಲಿದೆ ಮತ್ತು ಪ್ರಾಕೃತಿಕ ಸ್ಥಿತಿಯಲ್ಲೇ ಇದೆ. ಸಾರ್ವಜನಿಕರಿಗೆ ಅದರ ಎದುರು ಸಪುರ ಓಣಿಯಲ್ಲಿ ಹಾದು ಹೋಗುವಷ್ಟೇ ದರ್ಶನಾವಕಾಶ. (ದೀರ್ಘ ದಂಡ ನಮಸ್ಕಾರಗಳಿಗೆಲ್ಲ ಅಲ್ಲಿ ಸ್ಥಳವೇ ಇಲ್ಲ) ಅಲ್ಲಿನ ಜರಿ, ದೀಪ, ದೂಪ, ಪ್ರತಿ ಭಕ್ತರ ಹಣೆಗೆ ಕುಂಕುಮ ನಾಮವೆಳೆಯುವ ಅರ್ಚಕರ ಗೊಂದಲದಲ್ಲಿ ನಾನು ಇನ್ನೂ ಹೆಚ್ಚಿನ ವಿವರಗಳನ್ನು ಗ್ರಹಿಸದಾದೆ. ಬಂದೋಬಸ್ತಿನವರು ಮೆದು ಮಾತಿನಲ್ಲಿ, ಅಗತ್ಯ ಬಂದಲ್ಲಿ ದೃಢ ಹಿಡಿತದಲ್ಲೂ ಭಕ್ತರ ಸಾಲನ್ನು ಚುರುಕಾಗಿಯೇ ಇಡುತ್ತಾರೆ. ಗುಹೆಯ ಹೊರಗೆ, ಪುಟ್ಟ ಕೊಳ, ಹುಲ್ಲ ಹಾಸು ಸಹಿತ ಸಣ್ಣ ಅಂಗಳವಿದೆ. ಅವನ್ನೆಲ್ಲ ಕಳೆದು ಹೊರದ್ವಾರದ ಬಳಿ ಎಲ್ಲರಿಗೂ ಪ್ರಸಾದ ರೂಪವಾದ ದೇವಿಯ ಲೋಹಮುದ್ರೆ ಹಾಗೂ ಪುಟ್ಟ ಕಲ್ಲುಸಕ್ಕರೆ ಪೊಟ್ಟಣವನ್ನು ಕೊಡುತ್ತಾರೆ. ದೇವೀ ಭವನದಲ್ಲಿ ಪೂಜಾಸಾಮಗ್ರಿ ಕೊಟ್ಟವರಿಗೆ (ರಸೀದಿಯಾಧಾರದಲ್ಲಿ) ಹೆಚ್ಚಿನ ಪ್ರಸಾದವನ್ನೂ ಇಲ್ಲೇ ವಿತರಿಸಿ ನಮ್ಮನ್ನು ಮುಕ್ತಗೊಳಿಸುತ್ತಾರೆ. ಅಪರಾಹ್ನ ಒಂದೂವರೆ ಗಂಟೆಯ ಸುಮಾರಿಗೆ ನಾವು ಮತ್ತೆ ಠೇವಣಿ ಇಟ್ಟ ನಮ್ಮೆಲ್ಲ ಸಾಮಗ್ರಿಗಳನ್ನು ವಾಪಾಸು ಪಡೆದು ಮುಂದಿನ ನಡೆಗೆ ಇಳಿದಿದ್ದೆವು.


ಭೈರೋನಾಥನನ್ನು ನೋಡುವುದಲ್ಲವಾದರೂ ಶಿಖರವಲಯ ನೋಡುವ ಉತ್ಸಾಹದಲ್ಲಿ ನಾವು ಮತ್ತೆ ಸುಮಾರು ಸಾವಿರದಿನ್ನೂರು ಕಡಿದಾದ ಮೆಟ್ಟಿಲ ಸಾಲನುಸರಿಸಿದೆವು. ಭೈರೋನಾಥನ ಮಂದಿರದ (ಇದು ಕಲ್ಲ ಕಟ್ಟಡ, ಪ್ರಾಕೃತಿಕ ಗುಹೆಯೇನೂ ಅಲ್ಲ) ಹೊರಗಿನ ವಿಸ್ತಾರ ವೀಕ್ಷಣಾ ಕಟ್ಟೆಯಲ್ಲಿ ಸಾಕಷ್ಟು ಭಕ್ತಾದಿಗಳು ಗದ್ದಲ, ಕಸ ಮಾಡುವಲ್ಲಿ ನಿರತರಾಗಿದ್ದರು. ಆದರೆ ನೇರ ಮಂದಿರದಲ್ಲಿ ಸಂದಣಿ ಕಡಿಮೆ ಇದ್ದ ಕಾರಣ ದೇವಕಿ ಒಳಗೆ ಹೋಗಿ ದರ್ಶನಶಾಸ್ತ್ರ ಮುಗಿಸಿದಳು. ನಾನು ಹೊರಗಿನಿಂದಲೇ `ಪುಣ್ಯ’ ಕಟ್ಟಿಕೊಂಡೆ. ಇಲ್ಲೂ ಹೊರಗೆ ಪ್ರಸಾದರೂಪವಾದ ಭಸ್ಮ (ವಿಭೂತಿ) ಲಭ್ಯ ಎಂದು ಸೂಚನಾಫಲಕಗಳಿದ್ದರೂ ನಿಗದಿತ ಸ್ಥಳದಲ್ಲಿ ಏನೂ ಉಳಿದಿರಲಿಲ್ಲ! ಕೊನೆಯದಾಗಿ, ಅಲ್ಲಿನ ವೀಕ್ಷಣಾ ಕಟ್ಟೆ. ಅದು ನಿಜ ಶಿಖರವಲ್ಲದಿದ್ದರೂ ನಮ್ಮ ಲೆಕ್ಕಕ್ಕೆ ಅತ್ಯುನ್ನತ ಸ್ಥಾನವಂತೂ ಹೌದು. ಹಾಗೆಂದು ಪೂರ್ಣ ತ್ರಿಕೂಟ ಪರ್ವತದ ದರ್ಶನ, ಎಂದರೆ ಪ್ರಾಕೃತಿಕ ಸ್ಥಿತಿಯಲ್ಲೇ ಉಳಿದಿರುವ ಬೆಟ್ಟದ ಉಳಿದ ಭಾಗವನ್ನು ಸುತ್ತುವುದು, ನಮ್ಮ ಅಂದಿನ ವೇಳಾಪಟ್ಟಿಗೆ ಹೊಂದುವಂತಿರಲಿಲ್ಲ. ಹಾಗಾಗಿ ಸಿಕ್ಕಷ್ಟು ದೃಶ್ಯವನ್ನು ಮನದುಂಬಿಕೊಂಡು, ಇಳಿದಾರಿಯನ್ನು ಹಿಡಿದೆವು.

[ನಾವಿಬ್ಬರು ಯಾವುದೇ ತೀರ್ಥಕ್ಷೇತ್ರವನ್ನು ಅದರ ಪ್ರಾಕೃತಿಕ ಸತ್ಯಕ್ಕೆ ಮತ್ತು ಸಾಮಾಜಿಕ ಅಂತಃಸಂಬಂಧದ ಕುರಿತ ನಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ನೋಡುತ್ತೇವೆ. ಅಲ್ಲಿ ವಿಶೇಷ ಪೂಜೆ, ದರ್ಶನಗಳಿಂದ ನಾವು ದೂರ ಉಳಿದರೂ ಅನುಕೂಲಕ್ಕೊದಗಿದರೆ, ಫಲಿತಾಂಶ – ಅಂದರೆ ತೀರ್ಥ, ಪ್ರಸಾದವನ್ನು ಸಂಗ್ರಹಿಸುತ್ತೇವೆ. ತಿರುಪತಿಗೆ ಹೋಗಿ ಎರಡು ದಿನವಿದ್ದೂ ವೇಂಕಟೇಶ ದರ್ಶನ ಪಡೆಯದೇ ಬಂದವರು ನಾವೆಂದು ನಿಮಗೆ ತಿಳಿದೇ ಇದೆ. ಆದರೆ ಅಲ್ಲಿನ ಲಡ್ಡು ಪ್ರಸಾದವನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಣ ಕೊಟ್ಟು ಸಂಗ್ರಹಿಸಿಕೊಳ್ಳಲು ಮರೆಯಲಿಲ್ಲ. ಇವು ನಾವು ಹಿಂದೆ ಹೋದಾಗ ನಮ್ಮ ಸಂಬಂಧಿಕ ವಲಯದಲ್ಲಿನ ಭಕ್ತಾದಿಗಳಿಗೆ ತುಂಬ ಕುಶಿಕೊಡುತ್ತದೆ! ಗೋಮುಖದಿಂದ ಗಂಗಾಜಲ, ತಿರುಪತಿಯಿಂದ ಲಡ್ಡು, ಮಧೂರಿನಿಂದ ಅಪ್ಪ ನಾವು ಸಾಕಷ್ಟು ವಿತರಿಸಿದ್ದೇವೆ. ಹಾಗೇ ದೇವಕಿ ವೈಷ್ಣೋದೇವಿಯ ಹೆಚ್ಚುವರಿ ಬೆಳ್ಳಿಮುದ್ರೆಗಳನ್ನು, ಅಲ್ಲೇ ಹೊರಗೆ ಅಂಗಡಿಗಳಿಂದ ಕೊಳ್ಳುವುದನ್ನು ಮರೆತಿರಲಿಲ್ಲ. ಭೈರೋನಥನ ವಿಭೂತಿ ಮಾತ್ರ ಸಿಕ್ಕಲಿಲ್ಲ!]

ವೈಷ್ಣೋದೇವಿಯಿಂದ ತಪ್ಪಲಿಗೆ ನೇರ ಮೆಟ್ಟಿಲ ಸಾಲೂ ಇದೆ. ನಾವದನ್ನು ಅನುಸರಿಸಿದೆವು. ಏರು ಜಾಡಿನ ದೃಶ್ಯಗಳನ್ನು ಮನನ ಮಾಡಿಕೊಳ್ಳುವುದರ ಜೊತೆಗೆ, ಬೆಳಿಗ್ಗೆಗಿಂತಲೂ ಹೆಚ್ಚಿದ್ದ ಭಕ್ತಪ್ರವಾಹದಲ್ಲಿ ಮತ್ತಷ್ಟು ಹೊಸ `ನಾಟಕ’ಗಳನ್ನು ಕಾಣುತ್ತಾ ನಿಧಾನಕ್ಕೆ ಇಳಿದೆವು. ವೈಷ್ಣೋದೇವಿ ದರ್ಶನ ವಲಯಕ್ಕೆ ಪ್ರವೇಶಿಸುವಾಗ ಒಂಟಿಯಾಗಿಯೇ ನಡೆದು ಬಂದಿದ್ದ ಗಿರೀಶ್ ಕಾಣಸಿಕ್ಕಿದ್ದರು.
ಆಗ ಅವರು ತಿಳಿಸಿದಂತೆ, ಧನಂಜಯ ತುಸು ಅನಾರೋಗ್ಯ ಕಾರಣವಾಗಿ ಸೂರ್ಯನೊಡನೆ ಹೋಟೆಲಿನಲ್ಲೇ ಉಳಿದಿದ್ದರು. ಮತ್ತಿವರು ಭಟ್ ದಂಪತಿಗಳನ್ನು ಹೆಲಿಪ್ಯಾಡಿಗೆ ಬಿಟ್ಟು, ಉಳಿದವರನ್ನು ಮೆಟ್ಟಿಲ ಸಾಲಿನ ದ್ವಾರದವರೆಗೆ ಮುಟ್ಟಿಸಿದ್ದರು. ಅನಂತರ ಈ ಜಾಡನ್ನು ಬಹುಬಾರಿ ಬಳಸಿದ ಬಲದಲ್ಲಿ ಒಂಟಿಯಾಗಿಯೇ ಮೇಲೇರಿದ್ದರು. ಇಳಿದಾರಿಯಲ್ಲೂ ಗಿರೀಶ್ ಎರಡೆರಡು ಕಡೆ ನಮಗೆ ಸಿಕ್ಕಿದ್ದರು. ಆದರೆ ಉಳಿದ ಸಹಯಾನಿಗಳು ಸಿಗಲೇ ಇಲ್ಲ.
ಸಂಜೆ ಐದಾರು ಗಂಟೆಯ ಸುಮಾರಿಗೆ ನಾವು ಮೆಟ್ಟಿಲ ಸಾಲು ಮುಗಿಸುತ್ತಿದ್ದಂತೆ ಭಾರೀ ಮಳೆ ಹೊಡೆಯಿತು. ಮಳೆಯ ಬಿರುಸು ಇಳಿಯುವುದನ್ನು ಕಾಯುತ್ತಾ ಕತ್ತಲು ಮುಸುಕುವುದನ್ನು ಕಾಣುತ್ತಾ ನಾವು ಸ್ವಾಗತ ದ್ವಾರದ ಬಳಿ ಸುಮಾರು ಹೊತ್ತು ಕಳೆದೆವು. ಕುದುರೆ, ಕೂಲಿ, ಡೋಲಿ, ಮಳೆಕೋಟು ಹಾಕಿಯಾದರೂ ಚಾರಣವೆಂದು ರಾತ್ರಿ ಏರುವವರ ಉತ್ಸಾಹ, ಸಂಖ್ಯೆ ಕೂಡಾ ಏರುತ್ತಲೇ ಇದ್ದುದನ್ನು ಬೆರಗುವಟ್ಟು ನೋಡಿದೆವು. ಮಳೆ ಇಳಿದಾಗ ಶಿಸ್ತಿನ ಸಾಲಿನಲ್ಲಿದ್ದ ರಿಕ್ಷಾ ಹಿಡಿಯಲು ಪ್ರಯತ್ನಿಸಿದೆವು. ಅವರು ತಲೆಗೆ ನೂರರಂತೆ ಕಿತ್ತು ಮೂರು ನಾಲ್ಕೈದು ಜನ ತುಂಬುವ ಮಾತಾಡುತ್ತಿದ್ದರು. ಅವರ ದರೋಡೆ-ದರಕ್ಕೆ ರೋಸಿ, ಎಲ್ಲ ತಿರಸ್ಕರಿಸಿ, ಕೊಚ್ಚೆ ಪ್ರವಾಹದ ದಾರಿಯಲ್ಲಿ, ಪಿರಿಪಿರಿ ಮಳೆಯಲ್ಲಿ ನಾವು ನಡೆದೇ ಹೊರಟೆವು. ಎಲ್ಲೆಡೆಗಳಲ್ಲಿರುವಂತೇ ಒಂದು ರಿಕ್ಷಾದವ ನಮ್ಮನ್ನನುಸರಿಸಿ ಬಂದು, ಇಬ್ಬರನ್ನೇ ಒಟ್ಟು ಕೇವಲ ರೂ ಅರವತ್ತಕ್ಕೆ ಹೋಟೆಲ್ ಮುಟ್ಟಿಸಿದ.

ಗಿರೀಶ್ ಒಟ್ಟಿಗೆ ಮೆಟ್ಟಿಲೇರಲು ಹೋಗಿದ್ದ ಸುವರ್ಣ, ವಿದ್ಯಾರಣ್ಯ ಮತ್ತು ರೇಖಾ ನಡಿಗೆ ಕುದುರೆಗಳ ಸಂಯೋಜನೆಯಲ್ಲೇ ದೇವಿ ದರ್ಶನ ಮುಗಿಸಿದ್ದರು. ಮತ್ತೆ ಸಮಯ ಸಾಕಾಗದೆಂದು ಭೈರೋನಾಥಕ್ಕೇರದೆ ಮರಳಿದ್ದರು. ಅವರಿಗೂ ದಾರಿಯಲ್ಲಿ ಮಳೆ ಸಿಕ್ಕರೂ ಕತ್ತಲೆಗೆ ಮುನ್ನ ಹೊಟೆಲ್ ತಲಪಿದ್ದರು. ರಾತ್ರಿ ನಮ್ಮ ಊಟದ ವೇಳೆಗೆ ಭಟ್ ದಂಪತಿ ಮತ್ತು ನಾಗಮಣಿ ಮಹಾಲಕ್ಷ್ಮಿಯರ ಜೋಡಿ ಬಂದಿರಲಿಲ್ಲ. ಧನಂಜಯರ ಆತಂಕಕ್ಕೆ ಗಿರೀಶ್ ಬಳಿ ಪರಿಹಾರವಿರಲಿಲ್ಲ! ಅದೃಷ್ಟಕ್ಕೆ ಮರುಬೆಳಿಗ್ಗೆ ಎಲ್ಲ ತಿಳಿಯಾಗಿತ್ತು. ವಾಸ್ತವದಲ್ಲಿ ನಾಗಮಣಿ ಜೋಡಿಯೂ ಉಳಿದವರಂತೇ ಕುದುರೆ, ನಡಿಗೆಗಳ ಮಿಶ್ರಣದಲ್ಲೇ ಏರಿಳಿದಿದ್ದರಂತೆ. ಆದರೆ ಗತಿ ನಿಧಾನವಾಗಿ, ಇಳಿಯುವಲ್ಲಿ ಮಳೆಯ ವಿಳಂಬ ಸೇರಿ ಮತ್ತೆ ರಿಕ್ಷಾದ್ರೋಹ ಮುಗಿಸಿ ಹೊಟೇಲ್ ಮುಟ್ಟುವಾಗ ರಾತ್ರಿ ಗಂಟೆ ಹನ್ನೊಂದೇ ಆಗಿತ್ತು; ಧನಂಜಯ ಸೂರ್ಯರ ಅಸಹಾಯಕ ಆತಂಕ ಕಳೆದಿತ್ತು!

ಗಣೇಶ್ ಭಟ್ ದಂಪತಿ ಹೆಲಿಕಾಪ್ಟರ್ ಸೇವೆಯನ್ನು ಆಶಿಸಿದ್ದರಷ್ಟೆ. ಶಿಖರವಲಯದಲ್ಲಿ ತನ್ನದೇ (ಎರಡನೇ) ಹೆಲಿಪ್ಯಾಡ್ ಮಾಡಿಕೊಂಡು, ಸಾರ್ವಜನಿಕರ ಸೇವಾನಿರತರವಾಗಿರುವ ಸಂಸ್ಥೆ ಸಾಂಜಿಛಾಟ್. (ಮೇಲೆ ಇರುವ ಇನ್ನೊಂದು ಹೆಲಿ-ನಿಲ್ದಾಣ ಸರಕಾರೀ ಬಳಕೆಯದು, ಬಿಗು ಪಹರೆಯಲ್ಲಿ ನಿದ್ರೆಮಾಡಿದಂತಿತ್ತು) ಇದು ಹವಾಮಾನ ತಿಳಿಯಾಗಿದ್ದಾಗ, ಅದೂ ಹಗಲಿನ ಹೊತ್ತುಗಳಲ್ಲಿ ಮಾತ್ರ ಹಾರಾಡುತ್ತದೆ. ಆರೆಂಟು ಮಿನಿಟಿನ ಪ್ರತಿ ಹಾರಾಟದಲ್ಲಿ ಆರೇ ಮಂದಿಯನ್ನು ತುಂಬಿಕೊಂಡು, ಕೆಳಗೆ ಮೇಲೆ ನಿರಂತರ ಸಾಗಿಸುತ್ತದೆ. ನಾವು ಶಿಖರವಲಯದಲ್ಲಿ ನಡೆಯುತ್ತಿದ್ದಾಗ ಕಂಡಂತೆ, ಆ ಕಂಪೆನಿಯದ್ದು ಒಟ್ಟಾರೆ ಮೂರು ಹೆಲಿಕಾಪ್ಟರುಗಳು ಕಾರ್ಯನಿರತವಾಗಿದ್ದುವು. ಹೆಚ್ಚು ಕಡಿಮೆ ಎರಡು ಮಿನಿಟಿಗೊಮ್ಮೆ ಬರುತ್ತಿತ್ತು, ಅಷ್ಟೇ ಚುರುಕಾಗಿ ತಂದ ಜನ ಇಳಿಸಿ, ಹೊಸಬರನ್ನು ತುಂಬಿಕೊಂಡು ವಾಪಾಸಾಗುತ್ತಿತ್ತು.  


ತಲಾ ರೂ ೧೦೪೦ ವೆಚ್ಚದ ಇದರ ಟಿಕೇಟನ್ನೇನೋ ಭಟ್ ದಂಪತಿಗಳು ಹೋದ ಕೂಡಲೇ ಅಂದರೆ, ಸುಮಾರು ಹತ್ತು ಗಂಟೆಯ ಸುಮಾರಿಗೆ ದಕ್ಕಿಸಿಕೊಂಡರು. ಆದರೆ ದಿನದ ಹವಾಮಾನ ಪ್ರಶಸ್ತವಾಗಿಯೇ ಇದ್ದರೂ ಮೂರೂ ಹೆಲಿಕಾಪ್ಟರುಗಳು ಎಡೆಬಿಡದೆ ಕಾರ್ಯನಿರತವಾಗಿದ್ದರೂ ಇವರ ಸರದಿ ಬರುವಾಗ ಅಪರಾಹ್ನ ಗಂಟೆ ಎರಡಾಗಿತ್ತಂತೆ. ದೇವಳದ ಸಮೀಪ ಹೆಲಿಕಾಪ್ಟರಿಗೆ ಯೋಗ್ಯ ನೆಲೆಯಿಲ್ಲ. ಅದರ ಇಳಿದಾಣದಿಂದ ಮತ್ತೆ ನಾಲ್ಕು ಕಿಮೀ ಅಂತರಕ್ಕೆ ನಡಿಗೆಯೋ ಕುದುರೆಯೋ ಎನ್ನುವ ಸ್ಥಿತಿ. ಭಟ್ ದಂಪತಿ ಅದನ್ನು ಕುದುರೆ/ ನಡಿಗೆಗಳಲ್ಲಿ ಸುಧಾರಿಸಿ, ಚುರುಕಾಗಿ ದರ್ಶನಾದಿಗಳನ್ನು ಮುಗಿಸಿಕೊಂಡು ಮರಳಿದರೂ ಹೆಲಿಕಾಪ್ಟರಿನಲ್ಲೇ ವಾಪಾಸಾಗುವ ಅವಕಾಶ ಇವರಿಗೆ ದಕ್ಕಲೇ ಇಲ್ಲ. ಮತ್ತೆ ಪತ್ನಿಯನ್ನು ಕುದುರೆಸವಾರಿಗೆ ಬಿಟ್ಟು, ಭಟ್ಟರು ನಡೆದು, ಮಳೆಯಲ್ಲಿ ನೆನೆದು, ತಪ್ಪಲಿನಿಂದ ರಿಕ್ಷಾ ಹಿಡಿದು ಹೋಟೇಲಿಗೆ ಮರಳುವಾಗ ರಾತ್ರಿ ಹನ್ನೊಂದು ಗಂಟೆಯೇ ಕಳೆದಿತ್ತು! ಇಂಥ ಗೊಂದಲಗಳನ್ನು ನಿವಾರಿಸುವಲ್ಲಿ ವೈಷ್ಣೋದೇವಿ ಕ್ಷೇತ್ರಾಡಳಿತದ ಬಿಗಿ ಹೆಚ್ಚಬೇಕು. ವಿವಿಧ ಖಾಸಗಿ ವಾಣಿಜ್ಯಾಸಕ್ತಿಗಳ ಜಾಲದಲ್ಲಿ ಸಾಮಾನ್ಯರು ಅನಾವಶ್ಯಕ ಶೋಷಿತರೂ ಬಳಲುವವರೂ ಆಗುವುದು ತಪ್ಪಬೇಕು.

(ಮುಂದುವರಿಯಲಿದೆ)

[ಕತ್ರದಿಂದ ಮುಂದೆಲ್ಲಿ? ಜಮ್ಮು ಕಾಶ್ಮೀರದ ಸುಮಾರು ಹನ್ನೆರಡು ದಿನದ ಪ್ರವಾಸೀ ಯೋಜನೆಯಲ್ಲಿ ಕಳೆದದ್ದು ಎಂಟು ದಿನಗಳಾದರೂ ಮುಖ್ಯ ಪ್ರೇಕ್ಷಣೀಯ ಅಂಶಗಳ ಪಟ್ಟಿ ಬಹುತೇಕ ಮುಗಿದಿತ್ತು. ಹಾಗೆಂದು ಪ್ರಯಾಣ ಉಪೇಕ್ಷಣೀಯವಲ್ಲ. ಅದನ್ನು ಕಿರಿದರಲ್ಲಿ ಮುಗಿಸಿಕೊಡುವ ನನ್ನ ಮಂಗಳಗೀತೆಗೆ ಮುಂದಿನವಾರದವರೆಗೆ ಕಾಯುತ್ತೀರಲ್ಲಾ? ಇದುವರೆಗಿನ ಕಥನಕ್ಕೆ ನಿಮ್ಮ ಇಷ್ಟಾನಿಷ್ಟಗಳನ್ನು ಬರೆಯುತ್ತೀರಲ್ಲಾ?]

7 comments:

 1. ನನ್ನ ತಂದೆಯವರೊಟ್ಟಿಗೆ ವೈಷ್ಣೋದೇವಿಗೆ ಹೋಗಿದ್ದೆ. ಅಲ್ಲಿಂದ ಬಂದಮೇಲೂ ಆನೇಕ ದಿನಗಳವರೆಗೆ ಆವರ ಕಿವಿಯಲ್ಲಿ ಜೈ ಮಾತಾದಿ ಗುನುಗುನಿಸುತ್ತಿದೆ ಎಂದು ಹೇಳುತ್ತಿದ್ದರು

  ReplyDelete
 2. Tumba sundara lekhana nammanne allige oyiditu.Dhanyavadagalu Vaisno Deviya darshana madisiddakke.

  ReplyDelete
 3. Dear Ashok,
  Just completed the previous episodes(reading).They made me once again recall my sweet as well as some bitter experiences of our tour.In the coming days we may forget many momments of the tour,but your articles( I will definitely keep them saved) help us to cherish those experiences and companions whenever we feel in the future.
  Regards,
  Ganesh

  ReplyDelete
 4. good guidance to this holy place GOOD ONE

  ReplyDelete
 5. ವೈಷ್ಣೋದೇವಿಗೆ ಒಮ್ಮೆ ಕೈಕಾಲು ಗಟ್ಟಿ ಇರುವಾಗಲೇ ಹೋಗಿಬರಬೇಕು... ನಿಮ್ಮ ಲೇಖನ ನನಗೆ ಹಲವಾರು ಮಾಹಿತಿಗಳನ್ನು ಒದಗಿಸಿತು....

  ReplyDelete
 6. Through this article, I could once again experience my trekk to Vishnodevi along with my daughter (2011). Even though helicopter service is available, it's highly dependent on wether and conditions of the Copter, better to book for downward journey, we did the same and was successful.

  ReplyDelete
 7. ನಿಮ್ಮ ಪ್ರವಾಸ ಕಥನ ಸಮಗ್ರವೂ, ಚೇತೋಹಾರಿಯೂ, ರಂಜನೀಯವೂ ಆಗಿದೆ.
  ಈಗ ನಡೆಯುವ ದಾರಿಯುದ್ದಕ್ಕೂ ಮೇಲ್ಛಾವಣಿ, ಇಂಟರ್ಲಾಕ್ ಇಟ್ಟಿಗೆ ಹಾಕಿ, ಅಗಲ ಮಾಡಿದ್ದಾರೆ. ಬ್ಯಾಟರಿ ಚಾಲಿತ ವಾಹನ ಐಐ ದಾರಿಯಲ್ಲಿ ಹೋಗುವುದನ್ನು ನೋಡಿದೆವು. (ದೇವರ ಸಾಮಗ್ರಿ ಸಾಗಿಸಲು ಮಾತ್ರ, ಭಕ್ತಾದಿಗಳ ಬಳಕೆಗೆ ಇಲ್ಲ. ಕಾರಣ: ಕುದುರೆ, ಡೋಲಿ, ಬೀಡಿ ಬದಿ ವ್ಯಾಪಾರಸ್ಥರ ತೀವ್ರ ಪ್ರತಿರೋಧ. ಅವರ ಜೀವನದ ದುಡಿಮೆಯ ಅವಕಾಶ ಇಲ್ಲವಾಗುವ ಭಯ. ರೋಪ್ ವೇ ಆಗದಿರಲೂ ಇದೇ ಕಾರಣ. ಆದರೆ ಈಗ ಭೈರೋನಾಥ ದರ್ಶನಕ್ಕೆ ಈ ವ್ಯವಸ್ಥೆ ಇದೆ. ಆದರೆ ನಾವು ಇಲ್ಲಿಗೆ ಹೋಗಲಿಲ್ಲ. ನಮ್ಮ ಗುಂಪಿನ ನಾಲ್ಕು ಜನ ಹೇಗೋ ಇದನ್ನೂ ಪೂರೈಸಿ ಯಾತ್ರೆಯ ಸಂಪೂರ್ಣ ಫಲ ಪ್ರಾಪ್ತಿಸಿಕೊಂಡರು.)
  ನಿಮ್ಮ ಪೆನ್ನು ಪ್ರಕರಣದ ಪೇಚಾಟ ಚೆನ್ನಾಗಿದೆ.

  ReplyDelete