“ಇದು ಯಾವುದು ಬೇಡ. ಮೊದಲು ಊಟ, ಅನಂತರ ನಮ್ಮ ಹೋಟೆಲಿಗೆ ಹೋಗಿ ಸೆಟಲ್ ಆಗುವ. ಅಲ್ಲಿ ಹೋಟೆಲಿನವರ ಪರಿಚಯದ ಜೀಪುಗಳನ್ನು ಹಿಡಿಯುವ” ಎಂದು ಒಮ್ಮೆಲೆ ಗಿರೀಶ್ ಘೋಷಿಸಿದರು. ಗಿರೀಶ್ ವರಸೆ ಯಾಕೆ ಬದಲಿಸಿದರೋ ತಿಳಿಯಲಿಲ್ಲ! ಇದ್ದಕ್ಕಿದ್ದಂತೆ ಅವರಿಗೆ ಆಗಲೇ ತಡವಾಗಿದ್ದ ನಮ್ಮ ಊಟದ ನೆನಪಾದಂತಿತ್ತು.
ಪೆಹೆಲ್ಗಾಂಗೆ ಬಂದಾಗ, ನಮ್ಮನ್ನು ಸ್ಥಳೀಯ ದಲ್ಲಾಳಿಗಳ ಕೈಗೊಪ್ಪಿಸುವಾಗಲೇ ಊಟದ ಹೊತ್ತಾಗಿತ್ತು. ಟ್ಯಾಕ್ಸೀ ಸ್ಟ್ಯಾಂಡಿನ ದಳ್ಳಾಳಿಗಳೊಡನೆ ಕಂಠಶೋಷಣೆ ಮಾಡಿಕೊಳ್ಳುವಾಗ `ಭಟ್ ಅಂಡ್ ಧನಂಜಯ್ ಕಂಪೆನಿ’ಯಾದರೂ ಊಟವನ್ನು ಮರೆತಿರಲಿಲ್ಲ. ಅವರು ಸ್ಟ್ಯಾಂಡಿನಿಂದ ಹೊರಗೆ ಇನ್ಯಾವ್ಯಾವುದೋ ಪ್ರವಾಸಿತಂಡಗಳಲ್ಲಿ ವಿಚಾರಿಸಿ, ಕಡಿಮೆ ದರಕ್ಕೆ ಜೀಪು ನಿಷ್ಕರ್ಷಿಸಿದಾಗಲೂ “ಊಟ ಮಾಡಿ ಹೋಗುವುದು” ಎಂದೇ ಒಪ್ಪಿಸಿದ್ದರು.
ಅದನ್ನೆಲ್ಲ ಒಮ್ಮೆಲೆ ತಳ್ಳಿ ಹಾಕಿ ಗಿರೀಶ್ ತನ್ನ ಮಾತು ಹೇರಿದ್ದರು! ಚುನಾವಣೆ ತನ್ನ ಅನುಕೂಲಕ್ಕೆ ಒದಗಲಿಲ್ಲವೆಂದು ರಾಷ್ಟ್ರವನ್ನು ತುರ್ತು ಪರಿಸ್ಥಿತಿಗೆ ತಳ್ಳಿದವರ ನೆನಪು ಬಂತು. ಎಲ್ಲರು ಕೇವಲ ಮುಖದಾಕ್ಷಿಣ್ಯಕ್ಕೆ ಗಿರೀಶರ `ಸೆಟಲ್ಮೆಂಟ್’ ಒಪ್ಪಿಕೊಂಡೆವು; ಊಟ ಮಾಡಿ, ವ್ಯಾನೇರಿ ಪೂರ್ವ ನಿಗದಿತ ಹೋಟೆಲಿಗೆ ಹೋದೆವು.
ಟೂರಿಸ್ಟ್ ಪ್ಯಾಲೇಸ್
– ಚಂದನವಾಡಿ ದಾರಿಯಲ್ಲೇ (ಸುಮಾರು ಮೂರು ಕಿಮೀ ಅಂತರ) ಸಿಗುವ ಒಂದು
ಸಾಮಾನ್ಯ ಹೋಟೆಲ್. ನಮ್ಮದು ಲೆಕ್ಕಕ್ಕೆ ಇಬ್ಬರ-ಕೋಣೆಯಾದರೂ ಮಂಚ, ಕುರ್ಚಿ, ಪುಟ್ಟ ಮೇಜು ತುಂಬಿ, ವಾಸಿಗಳಿಗೆ ಕಾಲಾಡಿಸಲು ಜಾಗವಿಲ್ಲದ ಕಿಷ್ಕಿಂಧೆ. ಆದರೆ ಹಿತ್ತಿಲಿಗೆ ತೆರೆದಂತೆ ಒಂದು ಬಾಲ್ಕನಿಯ ಸೌಕರ್ಯವಿತ್ತು. ಒಂದು ರಾತ್ರಿಯ ನಿದ್ರೆಗಷ್ಟೇ ಬೇಕಾದ ಕೋಣೆ ಎಂದ ಮೇಲೆ ಓಡಾಡುವ ಜಾಗ ಯಾಕೆ? ಹೊರಗೆ ಅಸಾಧ್ಯ ಚಳಿ ಇರುವಾಗ ಬಾಲ್ಕನಿಯ ವೈಭವ ಬೇಕೇ? ನಾವೇ ಸಮಾಧಾನಿಸಿಕೊಂಡೆವು. ಬಚ್ಚಲೊಳಗೆ ಮಾಮೂಲೀ ವ್ಯವಸ್ಥೆಯಲ್ಲದೆ ಆಶ್ಚರ್ಯಕರವಾಗಿ ಬಾಗಿಲಿನಲ್ಲೇ ಒಂದು ಜತೆ ಹವಾಯ್ ಚಪ್ಪಲಿಯಿಟ್ಟಿದ್ದರು. ಇದು ಯಾಕೋ ಅಂದುಕೊಳ್ಳುತ್ತಾ ದೇವಕಿ ಸಾದಾ ನಲ್ಲಿ ತಿರುಗಿಸುವಾಗ ಸಣ್ಣ ವಿದ್ಯುದಾಘಾತ ಸಿಕ್ಕಿತು! ಕೂಡಲೇ ದೂರು ಗಂಟೆ ಜಗ್ಗಿದೆವು. ಯಾರೋ ಹುಡುಗ ಬಂದ. `ಶಾಕಿಂಗ್ ನ್ಯೂಸ್’ ಕೊಟ್ಟೆವು. “ಏ ಹಾಗೇನೂ ಇಲ್ಲ”
ಎನ್ನುತ್ತ ಅವನು ಕೈ ಹಾಕಿ ಒಂದು `ಒತ್ತ’ ತಿಂದ.
ಆ ಮೇಲೆ, ಭಾರೀ ಜಾಣನಂತೆ ರಬ್ಬರ್ ಚಪ್ಪಲಿ ಯಾಕಿಟ್ಟದ್ದು ಎಂದು ನಮಗೆ ವಿವರಿಸಿದ! ಗೀಸರ್ ಸ್ವಿಚ್ ಹಾಕಿದರೆ ಇನ್ನು ಹೇಗೋ ಎಂಬ ಭಯ ಅವನಿಗೂ ಇದ್ದಿರಬೇಕು. ಎಲ್ಲ ರಿಪೇರಿ ಮಾಡಿಸುವುದಾಗಿ, ಬಿಸಿ ನೀರು ಪ್ರತ್ಯೇಕ ಕೊಡುವುದಾಗಿ ಹೇಳುತ್ತ ಜಾರಿದ. ರಾತ್ರಿ ಊಟ ಮಾಡಿ ನಾವು ಮಲಗುವವರೆಗೂ ನಮ್ಮ ಬಿಸಿನೀರ ಬೇಡಿಕೆಗೆ ಹೋಟೆಲಿಗರ ಮಧುರಪಲ್ಲವಿ ಒಂದೇ “ಆಯೆಗಾ ಆಯೆಗಾ, ಗರಂ ಪಾನೀ ಆಯೆಗಾ!” ಅಲ್ಲಿ ನಿಂತ ಸಣ್ಣ ಅವಧಿ ಮತ್ತು ಅಲ್ಲಿನ ಚಳಿ ನಮ್ಮ ಸ್ನಾನದ ಆಸೆಯಿರಲಿ, ನೀರಿನ ಬಳಕೆಯನ್ನೇ ಕಡಿಮೆ ಮಾಡಿತ್ತು. ಮೊದಲೇ ಇದರ ಅರಿವಾಗದೆ ಗೀಸರನ್ನೇ ಚಾಲೂ ಮಾಡಿ, ಸ್ನಾನಕ್ಕೇನಾದರೂ ಇಳಿದಿದ್ದರೆ ಆಘಾತಕ್ಕೆ ನಾವು `ಬ್ರೇಕಿಂಗ್ ನ್ಯೂಸ್’ಗೆ ಸುದ್ಧಿಯಾಗುತ್ತಿದ್ದೆವೋ ಆರ್ಕಿಮಿಡೀಸನಂತೆ ಬಚ್ಚಲಿನ ಬಾಗಿಲು ಹಾರುಹೊಡೆದು, ಹುಟ್ಟುಡುಗೆಯಲ್ಲಿ ಬೊಬ್ಬೆ ಹಾಕಿ ಓಡುತ್ತಿದ್ದೆವೋ ಹೇಳುವುದು ಕಷ್ಟ!
ಆ ಮೇಲೆ, ಭಾರೀ ಜಾಣನಂತೆ ರಬ್ಬರ್ ಚಪ್ಪಲಿ ಯಾಕಿಟ್ಟದ್ದು ಎಂದು ನಮಗೆ ವಿವರಿಸಿದ! ಗೀಸರ್ ಸ್ವಿಚ್ ಹಾಕಿದರೆ ಇನ್ನು ಹೇಗೋ ಎಂಬ ಭಯ ಅವನಿಗೂ ಇದ್ದಿರಬೇಕು. ಎಲ್ಲ ರಿಪೇರಿ ಮಾಡಿಸುವುದಾಗಿ, ಬಿಸಿ ನೀರು ಪ್ರತ್ಯೇಕ ಕೊಡುವುದಾಗಿ ಹೇಳುತ್ತ ಜಾರಿದ. ರಾತ್ರಿ ಊಟ ಮಾಡಿ ನಾವು ಮಲಗುವವರೆಗೂ ನಮ್ಮ ಬಿಸಿನೀರ ಬೇಡಿಕೆಗೆ ಹೋಟೆಲಿಗರ ಮಧುರಪಲ್ಲವಿ ಒಂದೇ “ಆಯೆಗಾ ಆಯೆಗಾ, ಗರಂ ಪಾನೀ ಆಯೆಗಾ!” ಅಲ್ಲಿ ನಿಂತ ಸಣ್ಣ ಅವಧಿ ಮತ್ತು ಅಲ್ಲಿನ ಚಳಿ ನಮ್ಮ ಸ್ನಾನದ ಆಸೆಯಿರಲಿ, ನೀರಿನ ಬಳಕೆಯನ್ನೇ ಕಡಿಮೆ ಮಾಡಿತ್ತು. ಮೊದಲೇ ಇದರ ಅರಿವಾಗದೆ ಗೀಸರನ್ನೇ ಚಾಲೂ ಮಾಡಿ, ಸ್ನಾನಕ್ಕೇನಾದರೂ ಇಳಿದಿದ್ದರೆ ಆಘಾತಕ್ಕೆ ನಾವು `ಬ್ರೇಕಿಂಗ್ ನ್ಯೂಸ್’ಗೆ ಸುದ್ಧಿಯಾಗುತ್ತಿದ್ದೆವೋ ಆರ್ಕಿಮಿಡೀಸನಂತೆ ಬಚ್ಚಲಿನ ಬಾಗಿಲು ಹಾರುಹೊಡೆದು, ಹುಟ್ಟುಡುಗೆಯಲ್ಲಿ ಬೊಬ್ಬೆ ಹಾಕಿ ಓಡುತ್ತಿದ್ದೆವೋ ಹೇಳುವುದು ಕಷ್ಟ!
ಈ ವಠಾರ ಹಲವು ಹಿಂದೀ ಸಿನಿಮಾಗಳಲ್ಲಿ ಜನಪ್ರಿಯ ದೃಶ್ಯವಾಗಿ ಮೆರೆದಿದೆಯಂತೆ. ಆದರೆ ವಾಸ್ತವದಲ್ಲಿ ಕ್ಯಾಮರಾದ ಸುಂದರ ಚೌಕಟ್ಟು ತಪ್ಪಿಸಿದ ಅವ್ಯವಸ್ಥೆಗಳು ನಮ್ಮನ್ನು ಅಣಕಿಸುತ್ತಿದ್ದವು. ಬಾಣೆಯ ಇನ್ನೊಂದು ಮಗ್ಗುಲಿಗೆ ತುಸು ಆಳದ ಕಣಿವೆಯಲ್ಲಿ ಹೊಳೆ, ಮತ್ತಾಚೆ ಪೈನ್ ಮರಗಳ ಕಾಡು. ಐದು ಹತ್ತು ಮಿನಿಟಿನಲ್ಲಿ ಎಲ್ಲಕ್ಕು ಒಂದು ಸುತ್ತು ಹಾಕಿ, ಪಾಯಿಂಟ್ ನಂಬರ್ ಟೂಗೆ ಸಜ್ಜಾಗಿದ್ದೆವು.
ಹಿಮಸಂಪರ್ಕದ ತಾಣಗಳಲ್ಲಿ ಗಂಬೂಟು, ಭಾರೀ ಬಿಸಿಯುಡುಪುಗಳ ಆವಶ್ಯಕತೆ ನಮಗೆ ಕಾಣಲೂ ಇಲ್ಲ. ಇಲ್ಲಿಯೂ ಇತರರಿಗೆ ವಿಶೇಷ ಚಳಿಬಾಧೆ ಕಾಡಲಿಲ್ಲ. ನನ್ನನ್ನು ಮಾತ್ರ ಚಳಿ ಸ್ವಲ್ಪ ಕಾಡಿತ್ತು. ಬರಿಯ ಸ್ವೆಟ್ಟರ್, ಮಂಗನತೊಪ್ಪಿ
ಧರಿಸಿ `ಮಂಗ’ನಂತಾಗಿ ಮೊದಲಲ್ಲಿ ನಾನು ಹಿಮದಿಂದ ದೂರವೇ ಉಳಿದುಬಿಟ್ಟೆ. ಇತರರು ಮುಂದುವರಿದ ಮೇಲೆ, ಡಾಮರು ದಾರಿಯಲ್ಲೇ ಶತಪಥ ಹಾಕಿ, ಡಾಬಾದಲ್ಲಿ ಬಿಸಿ ಡಬ್ಬಲ್ ಚಾ ಹೀರಿ ಒಳಗಿನ ಕಿಚ್ಚು ಕೆರಳಿಸಿದೆ! (ದೇವಕಿ ಮೇಲಿನ ಹೊಟ್ಟೆಕಿಚ್ಚು ಎನ್ನುವುದು ನಂಬಲನರ್ಹ ಮತ್ತು ಅಪಪ್ರಚಾರ ಎಂದು ತಳ್ಳಿಹಾಕುತ್ತೇನೆ!) ಇನ್ನು ಅಡ್ಡಿಯಿಲ್ಲ ಎಂದುಕೊಂಡು ಹಿಮ ಸಮೀಪಿಸುವಾಗ ಉಳಿದವರು “ಎಂಥ ವಿಶೇಷ ಇಲ್ಲ” ಅಂದುಕೊಂಡು ವಾಪಾಸು ಹೊರಟಿದ್ದರು. ಬೇಜಾರವೇನೂ ಇಲ್ಲದೆ ನಾನೂ ಸೇರಿಕೊಂಡೆ.
ಹಜನ್ನಿನಲ್ಲಿ ಸಣ್ಣದಾಗಿ
ಕೃಷಿಯೂ ಇದ್ದ ಜುಲ್ಫೀಯ ಕುಟುಂಬದಲ್ಲಿ ಅಪ್ಪ, ಅಣ್ಣರೂ ಪ್ರವಾಸೀ ಶ್ರಾಯದಲ್ಲಿ ಸ್ವಂತ ಜೀಪುಗಳನ್ನು ಬಾಡಿಗೆಗೆ ಓಡಿಸುವವರೇ. ಒಂದು ಪಕ್ಕದಲ್ಲಿ ಹತ್ತಲು ಹೋದರೆ ಊಹಿಸಲಾಗದೆತ್ತರಕ್ಕೆ ಕಡಿದಾದ ಬೆಟ್ಟ, ಇನ್ನೊಂದು ಪಕ್ಕದಲ್ಲಿ ಮಗುಚಿದರೆ ಎಲುಬಿನ ಪುಡಿಯಷ್ಟೇ ಹೆಕ್ಕಬೇಕಾಗುವ ಕಮರಿ. ಇವುಗಳೆಡೆಯಲ್ಲಿ ಹಾವಾಡುವ ದಾರಿ ಪ್ರತಿ ತಿರುವಿನಲ್ಲು ಕೊಳ್ಳ ಹಾರಿಕೊಂಡಂತೇ ಕಾಣುತ್ತದೆ. ಇಲ್ಲೇ ಹುಟ್ಟಿ, ಸುಮಾರು ಇಪ್ಪತ್ತೈದು ಶಿಶಿರಗಳುದ್ದಕ್ಕೆ ಜೀವಿಸಿ, ಜೀಪನ್ನು ಬಾಳಿನ ಭಾಗವಾಗಿಸಿಕೊಂಡವನಿಗೆ ನಮ್ಮ ಕಾಳಜಿಗಳು ನಗೆ ತರಿಸುವುದು ಸಹಜವೇ.
ಈತ ಕಷ್ಟದಲ್ಲೇ ಹನ್ನೆರಡನೇ ತರಗತಿಯ ಪರೀಕ್ಷೆವರೆಗೆ ಕಲಿತಿದ್ದನಂತೆ. ಅಲ್ಲಿ ಶೇಕಡಾ ಇಪ್ಪತ್ತರ ಅಂಕಗಳು ಬಂದು ಡುಮ್ಕಿ ಹೊಡೆದನಂತೆ. ಅವರಿವರ ಒತ್ತಾಯಕ್ಕೆ, ಹೆಚ್ಚು ಸಿದ್ಧತೆಯೊಡನೆ ಮರಳಿಯತ್ನವ ನಡೆಸಿದನಂತೆ. ಅಂಕಗಳು ಶೇಕಡಾ ಹದಿನೈದಕ್ಕೆ ಕುಸಿದದ್ದು ಕಂಡ ಮೇಲೆ ಈತ ಮತ್ತೆ ಅತ್ತ ತಲೆ ಹಾಕಲಿಲ್ಲ! ಆಗಸ್ಟಿನಲ್ಲೇ ಒಂದು ದಿನ ಇವರ ಒತ್ತಿನ ಹಳ್ಳಿಯ ಹುಡುಗಿ ಇವನಿಗೆ ವಧುವಾಗಿ ಬರುತ್ತಿದ್ದಾಳೆಂದು ತಿಳಿಯಿತು. ಹುಡುಗಿಗೆ ಗೃಹಿಣಿತ್ವ ಮತ್ತು ಕೃಷಿ ಸಹಕಾರಗಳಿಂದಾಚೆಗೊಂದು ವ್ಯಕ್ತಿತ್ವ ಇರಬಹುದೆಂಬ ಅರಿವೇ ಜುಲ್ಫಿಗೆ ಇದ್ದಂತಿರಲಿಲ್ಲ. ಆದರೆ ಮೂರು ಗಳಿಗೆ ಸವಾರಿಗಷ್ಟೇ ಹಕ್ಕುದಾರರಾದ ನಾವು ಕೊನೆಯಲ್ಲಿ, ಉಪದೇಶಾಮೃತ ಹರಿಸದೆ, ಜೀಪ್ ಬಾಡಿಗೆಯೊಡನೆ ಬಾಯ್ತುಂಬ ಶುಭಾಶಯವನ್ನಷ್ಟೇ ಕೊಟ್ಟಿದ್ದೆವು.
ತುಸು ಬಿಸಿಯನ್ನು ಇಲ್ಲಿ ಉತ್ತಮಪಡಿಸಿಕೊಂಡು ಗೆದ್ದೆ. ಮತ್ತೆ ಜೀಪೇರಿ, ಇದೇ ಹೊಳೆಯ ತುಸು ಕೆಳದಂಡೆಯಲ್ಲಿರುವ ನಮ್ಮ ಹೋಟೆಲಿಗೆ ಮರಳುವುದರೊಡನೆ ಪೆಹೆಲ್ಗಾಂನ ನಮ್ಮ ಆಖ್ರೀ ಪಾಯಿಂಟ್ ಕೂಡಾ ಮುಗಿಸಿದ್ದೆವು. ಗಿರೀಶ್ ಹೇಳಿದ ಜೀಪ್ ಬಾಡಿಗೆ ಕೊಟ್ಟು ಕೃತಾರ್ಥರಾದೆವು!
ನಾವು ತಿರುಗಾಟಕ್ಕೆ
ಹೊರಡುವ ಮುನ್ನವೇ ಬಿಸಿನೀರಿಗಿಟ್ಟಿದ್ದ ಅರ್ಜಿ, ಆಗೀಗ ಲಘು ವಿದ್ಯುದಾಘಾತ ಕೊಡುತ್ತಿದ್ದ ನಲ್ಲಿಯ ಸಮಸ್ಯೆಗಳ ವಿಚಾರಣೆಯನ್ನೇನೋ ಮಾಡಿದೆವು. “ಹೋಜಾಯೇಗಾ, ಹೋಜಾಯೇಗಾ” - ಚಂದದ ಮಾತಷ್ಟೇ ನಮಗೆ ಸಿಕ್ಕಿದ ಲಾಭ. ಅಲ್ಲಿ ರಾತ್ರಿಯೂಟವನ್ನು ತುಂಬಾ ನಿಧಾನಕ್ಕೆ ಕೊಟ್ಟರು. ಊಟದ ಕೋಣೆ ಹೊಟೆಲ್ಲಿನ ಆವರಣ ಮೀರಿದಂತೆ ಹಿತ್ತಲಿನಲ್ಲಿತ್ತು. ಅಲ್ಲಿಗೆ ಹೋಗುವಾಗ ಹೊಳೆಯತ್ತಣಿಂದ ಬಂದ ಶೀತಮಾರುತ ನನ್ನನ್ನಂತೂ ಅಕ್ಷರಶಃ ನಡುಗಿಸಿಬಿಟ್ಟಿತು. ದೇವಕಿ ಮತ್ತೆ ನಮ್ಮ ಕೋಣೆಗೆ ಓಡಿಹೋಗಿ ವಿಶೇಷ ಶಾಲು ತಂದು ನನಗೆ ಹೊದೆಸಿದ್ದು ಸ್ಮರಣೀಯ. ಹೇಗೋ ಊಟ ಮುಗಿಸಿ, ಕೋಣೆ ಸೇರಿದವನಿಗೆ ಒಂದಡಿ ದಪ್ಪದ ಹಾಸಿಗೆ, ಮೂರು ಪದರದ ವಿಭಿನ್ನ ಹೊದಿಕೆಗಳಲ್ಲಿ ಹುಗಿದು ಹೋದದ್ದಷ್ಟೇ ನೆನಪು. (ಇಲ್ಲಿ ವಿದ್ಯುತ್ ಸಂಪರ್ಕದಲ್ಲಿ ಬಿಸಿಯಾಗುವ ಹೊದಿಕೆಯನ್ನೂ ಕೊಟ್ಟಿದ್ದರು. ವಿದ್ಯಾ ಮನೋಹರ ತಮ್ಮ ಚಳಿಯ ಅನುಭವ ಹೇಳಿದಾಗ, ಅಂಥದ್ದೊಂದನ್ನು ಬಳಸಿದ್ದನ್ನೂ ಹೇಳಿದ್ದರು. ಆದರೆ ತಣ್ಣೀರ ನಲ್ಲಿಯಲ್ಲೂ ವಿದ್ಯುತ್ ಹರಿಸುವ ನಮ್ಮ ಹೋಟೆಲಿನ ವಿದ್ಯುತ್ ರಗ್ಗನ್ನು ಬಳಸಿದ್ದರೆ, ನಾವು ಖಾಯಂ ನಿದ್ರೆಗೆ ಜಾರುವ ಅಪಾಯವಿತ್ತೋ ಏನೋ!!)
ನಮ್ಮ ಪ್ರವಾಸ
ಯೋಜನೆಯಲ್ಲಿ ನಭೂತೋ ನಭವಿಷ್ಯತ್ ಎನ್ನುವಂತೆ ನಾವು ಬೆಳಗ್ಗೆ ಆರೂವರೆಗೇ ಕಾರ್ಯರಂಗಕ್ಕೆ ಇಳಿದಿದ್ದೆವು. ವಾಸಕ್ಕಿದ್ದ ಹೋಟೆಲಿನಲ್ಲಿ ಬರಿಯ ಚಾ ಕುಡಿದರೂ ಕಟ್ಟಿ ಒಯ್ದ ಬುತ್ತಿಯನ್ನು (ಅವಲಕ್ಕಿ, ಬ್ರೆಡ್ಡು) ದಾರಿಯ ಯಾವುದೋ ಹೋಟೆಲಿನ ಚಾದೊಡನೆ ನಂಚಿಕೊಂಡು ಮುಂದುವರಿದೆವು. ಮತ್ತೆ ಜಮ್ಮು-ಶ್ರೀನಗರ ದಾರಿ ಸೇರಿದ್ದೆವು. ಇಲ್ಲಿ ನಾವು ಪ್ರಾಕೃತಿಕ ದೃಶ್ಯವೈವಿಧ್ಯದ ಬಗ್ಗೆ ಭಯಮೂಲವಾದ ಆಶ್ಚರ್ಯವನ್ನೂ ಮಾನವಕೃತ ಟ್ರಾಫಿಕ್
(ಮುಂದುವರಿಯಲಿದೆ)
[ಅಲ್ಲಿನ ಒಂದು
ರಾತ್ರಿಯನ್ನು ಇಲ್ಲಿನ
ವಾರಕ್ಕೆ ಸಮೀಕರಿಸುತ್ತೇನೆ. ನನ್ನ ವಾರಪೂರ್ತಿ
ನಿದ್ರೆಗೆ ಗುಣಪಕ್ಷಪಾತಿ ವಿಮರ್ಶಕರಾದ ನೀವು
ಎಚ್ಚರಿದ್ದು, ಟಿಪ್ಪಣಿಗಳಲ್ಲಿ ಮೃದುವಾಗಿ ತಟ್ಟುತ್ತೀರಿ, ವಿಕಲ್ಪಗಳಿಗೆ ತಡೆಗಾವಲಿಗರಾಗಿಯೂ ಎಚ್ಚರಿಕೆಗೆ ಶೀಟಿ
ಹೊಡೆಯುತ್ತೀರಲ್ಲಾ? ಮತ್ತೆ
ಮುಂದಿನ ವಾರದ
ಬೆಳೀಈಈಗ್ಗೆ ವೈಷ್ಣೋದೇವಿ
ಭೇಟಿಗೆ ಸಜ್ಜಾಗಿಯೂ
ಇರುತ್ತೀರಿ ಎಂದು
ಭಾವಿಸುತ್ತೇನೆ.]
ಜೈ ವೈಷ್ಣೋದೇವಿಗೆ
ReplyDeleteMundina kantige kaytiddene.Sundara drushyagalige dhanyavaadagalu.
ReplyDelete