12 June 2015

ಕುತೂಹಲ ಕೆರಳಿಸದ ಜಮ್ಮು ಕಾಶ್ಮೀರ

(ಜಮ್ಮು ಕಾಶ್ಮೀರ ಪ್ರವಾಸ ಕಥನ – ೧)
ದಿಲ್ಲಿ ಬಿಟ್ಟ ವಿಕ್ರಮ
ನೇಪಾಳ ಕುಸಿದು ಕುಳಿತಿದೆ, ದಿಲ್ಲಿ ಪಾಟ್ನಾಗಳು ನಡುಗಿವೆ. ಕಳೆದ ವರ್ಷ ಶ್ರೀನಗರ ಮುಳುಗಿ ಹೋಗಿತ್ತು, ಅದಕ್ಕೂ ತುಸು ಹಿಂದೆ ಕೇದಾರ ಕೊಚ್ಚಿಯೇ ಹೋಯ್ತು. ಹೀಗೆ ಇನ್ನೂ ರೂಪುಗೊಳ್ಳುತ್ತಿರುವ, ಅತಿಕಿರಿ ಪ್ರಾಯದ ದೈತ್ಯ ಹಿಮಾಲಯದ `ಮಕ್ಕಳಾಟ’ಗಳು ಅಸಂಖ್ಯವೂ ನರಹುಳುಗಳಿಗೆ ದುರ್ಭರವೂ ಆಗುತ್ತಲೇ ಇದೆ. ಆದರೂ ಇಲ್ಲಿ ಹಿಮಾಲಯದ ಸೆರಗಿನಲ್ಲೇ ಜಮ್ಮು ಕಾಶ್ಮೀರದ ಮಡಿಲಿನಲ್ಲೇ ಕಡಿದಾದ ಬೆಟ್ಟದ ಮಗ್ಗುಲಿನಲ್ಲಿ ಬಾಲಧ್ವನಿಯೊಂದು ಕೇಳುತ್ತದೆ, “ಜೈ ಮಾತಾದೀ”; ಹತ್ತುವಲ್ಲಿ ಕಾಲು ಸೋಲುತ್ತಿದ್ದ ಅಮ್ಮನಿಗೆ ಪುಟ್ಟ ಮಗನ ಕುಮ್ಮಕ್ಕು!

“ಜೈ ಮಾತಾದೀ” -  ಸಮಪಾದ ಬೆಳೆಸುವಲ್ಲಿ ಸೋತರೂ ನಿಟ್ಟುಸಿರಿನಲ್ಲಿ ಅಮ್ಮ ಹೊರಡಿಸಿದ ಶಬ್ದರೂಪ!! ಕೋಲೂರಿ, ಕಾಲೆಳೆದು, ಮೆಟ್ಟಿಲು ಮೆಟ್ಟಿಲಿಗೆ ಕುಳಿತು, ಮಣಿದು ಸಾಗುತ್ತಾರೆ. ಕೂಲಿಯಾಳುಗಳ ಬೆನ್ನೇರಿ, ಕುದುರೆಗೆ ಹೊರೆಯಾಗಿ, ಡೋಲಿಯಲ್ಲಿ ವಿರಾಜಮಾನರಾಗಿ, ಹೆಲಿಕಾಪ್ಟರ್ನವಲ್ಲಿ ಕ್ಷಣಿಕರಾಗಿ ಆ ಎತ್ತರವನ್ನು ಸಾಧಿಸುತ್ತಾರೆ. ಬಿಸಿಲು, ಮಳೆ, ಚಳಿಗಳನ್ನು ಲೆಕ್ಕಿಸದೆ ದಿನದ ಇಪ್ಪತ್ನಾಲ್ಕೂ ಗಂಟೆ ಆ ಕಣಿವೆಯಲ್ಲಿ ಅನುರಣಿಸುವ ಈ ಜಯಘೋಷಗಳ ಬಹುಮುಖ್ಯ ಅಂಶ ದೈವೀಭಕ್ತಿ. ಆದರೆ ನಾವೋ ತೀರ್ಥ ಕ್ಷೇತ್ರದಲ್ಲಿನ ಕೇವಲ ಪ್ರಾಕೃತಿಕ ವೈಶಿಷ್ಟ್ಯ ಹಾಗೂ ಸಾಮಾಜಿಕ ಸಂವೇದನೆಯನ್ನು ಮೈಗೂಡಿಸಿಕೊಳ್ಳುವ ಉತ್ಸಾಹದಲ್ಲಿ ಬೆಟ್ಟಕ್ಕೆ ಹೆಜ್ಜೆ ಹಾಕಿದ್ದೆವು. ಚಾರಣ ಪ್ರಧಾನವಾದ ಯಮುನೋತ್ರಿ, ಗಂಗೋತ್ರಿ-ಗೋಮುಖ, ಕೇದಾರನಾಥ, ತಿರುಪತಿ, ಎಸ್ಸಾರೆಸ್ ಬೆಟ್ಟ, ಶಿವಗಂಗೆಯೇ ಮೊದಲಾದ ನಮ್ಮ ಸಾಧನೆಯ ಗಿರಿಗಳ ಪಟ್ಟಿಗೆ ವೈಷ್ಣೋದೇವಿ (ತಪ್ಪಲಿನ ಊರು ಕತ್ರಾ – ಸಮುದ್ರ ಮಟ್ಟದಿಂದ ೨೪೭೪ ಅಡಿ, ವೈಷ್ಣೋದೇವಿ - ೫೨೦೦ ಅಡಿ)  ಹೀಗೆ ಸೇರಲು ಕಾರಣವನ್ನು ಮೂಲದಿಂದಲೇ ಕೇಳಿ.


ಎಲ್ಲ ಶುರುವಾದ್ದು ನನ್ನ ಸಣ್ಣ ಹಲ್ಲುನೋವಿಂದ! ಕುಟುಂಬ ಮಿತ್ರರೇ ಆದ ದಂತವೈದ್ಯೆ ವಿದ್ಯಾರಲ್ಲಿ ಹೋದೆ. ಬಾವಿಗಳ ಹೂಳು ತೆಗೆದು, ಅಂಚಿನ ಪಾಚಿ ಕೊರಕಲು ಒಪ್ಪ ಮಾಡಿ, `ಸಿಮೆಂಟ್’ ನಿಗಿದು, ಮೇಲ್ಮೈಯ ಅಚ್ಚು ತೆಗೆದು, “ಒಂದೆರಡು ದಿನದೊಳಗೇ ನಾನು ಫೋನು ಮಾಡ್ತೇನೆ. ದಯವಿಟ್ಟು ಕೂಡಲೇ ಬನ್ನಿ, ಟೊಪ್ಪಿ (?) ಹಾಕಿಬಿಡ್ತೇನೆ” ಅಂದರು. ಸೌಮ್ಯ ಮಾತಿನ ವಿದ್ಯಾ ಮಾತೊಪ್ಪಿಸುವ ಪರಿಯಲ್ಲಿ ನನಗೆ ತಮಾಷೆಯ ಧ್ವನ್ಯರ್ಥ ಹಿಂಜಲಾಗಲಿಲ್ಲ. ಹಾಗಾಗಿ ನೇರ ಕೇಳಿದೆ “ಯಾಕೆ? ತಡವಾದರೆ ನೀವು...” “ಹಾಂ, ಮನೋಹರ್ ಹೇಳಲಿಲ್ವಾ? ನಾವು ಹತ್ತು ದಿವಸಕ್ಕೆ ಜಮ್ಮು ಕಾಶ್ಮೀರ್ ಪ್ರವಾಸ ಹೊರಟಿದ್ದೇವೆ!” ನನಗಿದು ಆಶ್ಚರ್ಯ!

ವಿದ್ಯಾ ಮನೆಯಂಗಳದ ಸ್ವಂತ ಚಿಕಿತ್ಸಾಲಯದಲ್ಲಿ ಬಿಡು ಸಮಯ ಉಳಿಯದಂತೆ `ಚಿಕಿತ್ಸಾ ಸೇವೆ’, ಆಗೀಗ ಕೇರಳ ಹೈದರಾಬಾದೆಂದು ವಿಶೇಷ ಉಪನ್ಯಾಸ ಸರಣಿ, ಪರೀಕ್ಷಾ ಸುಪರ್ದಿಗಳ ಪ್ರವಾಸ ಮತ್ತು ಬೆಂಗಳೂರಿನಲ್ಲಿ ಇನ್ನೂ ವಿದ್ಯಾರ್ಜನೆ ನಡೆಸಿರುವ ಮಗ ಸುಧನ್ವನ ಆರೈಕೆಗೆ ನಿಗದಿತ ಮೊಕ್ಕಾಂ ಕೂಡಾ ಹೂಡುವ ಇವರು ಪ್ರತ್ಯೇಕ ಪ್ರವಾಸ ಮಾಡುವುದೇ? ಇನ್ನಿವರ ಗಂಡ...

ಕಲಿಕೆ ಮತ್ತು ಆಸಕ್ತಿಯಲ್ಲೂ ಪಕ್ಕಾ ಪಶುವೈದ್ಯ, ಮನೋಹರ ಉಪಾಧ್ಯ. ವೃತ್ತಿ ಒತ್ತಡದಲ್ಲಿ ಸ್ವಂತ ಕಾಫಿ, ಊಟಗಳಿಗೆ ಬಿಡುವು ದೊರೆಯದ ಅಸಾಮಿ. ಆದರೂ ಅನುಷ್ಠಾನದಲ್ಲಿ ಇತರ ಚಿಕಿತ್ಸಾಪ್ರಕಾರಗಳ ಬಗ್ಗೆ ಅಧ್ಯಯನಾತ್ಮಕ ಮನವಿಟ್ಟು, ಜಾನುವಾರುಗಳಿಗೆ ಹೆಚ್ಚು ಪರಿಣಾಮಕಾರಿಯಾದ ಮತ್ತು ಯಜಮಾನರುಗಳಿಗೆ ಸುಲಭ ಬೆಲೆಯ ಜನಪದ ವೈದ್ಯಗಳ ಪ್ರತಿಪಾದಕ. ಅನುಭವಸಿದ್ಧ ಪೌಷ್ಠಿಕ ಹಾಗೂ ವೈದ್ಯಕೀಯ ಆಹಾರ/ ಔಷಧಿ ತಯಾರಕ. ಇತರತ್ರ ಯಕ್ಷಗಾನ ಪೋಷಣೆ, ಫೊಟೋಗ್ರಫಿ, ಸಾವಯವ ಹಾಗೂ ನಿರ್ಲಕ್ಷಿತ ಆಹಾರ ವಿಶೇಷಗಳ (ಸೊಪ್ಪು ತರಕಾರಿ, ಗೆಡ್ಡೆ, ಹಲಸು, ಕಾಡುಮಾವು ಮುಂತಾದವು) ಮೇಳ ಎಂದಿತ್ಯಾದಿ ವಿಪರೀತ ಉತ್ಸಾಹಿಯಾಗಿ ದುಡಿಯುವ ಮನೋಹರ್ ಕೂಡಾ ಪ್ರವಾಸ??

ನಾವಿಬ್ಬರಾದರೋ ನಿವೃತ್ತಿವ್ರತ ಹಿಡಿದು ಮೂರು ವರ್ಷಗಳಾದರೂ ಒಂದು ಘನವಾದ ಪ್ರವಾಸ ನಡೆಸಿಲ್ಲ! ನನಗೆ ಮನಸ್ಸಿನ ವ್ಯಾಪಾರದಲ್ಲಿ ಸೋಲಿನ ಅನುಭವವಾಯ್ತು. ಭಾರಿ ಹಿಂದೆ ಎರಡು ಬಾರಿ ಬೈಕೇರಿ ಭಾರತಯಾನಗಳನ್ನು ಮಾಡಿದರೂ ಅಂದು ಪಂಜಾಬ್, ಕಾಶ್ಮೀರ ಮತ್ತು ಅಸ್ಸಾಂಗಳ ರಾಜಕೀಯ ಅಸ್ಥಿರತೆ ಗಮನಿಸಿ ಆ ವಲಯಗಳಿಂದಲೇ ದೂರ ಉಳಿದಿದದ್ದೂ ಈಗ ತೀವ್ರವಾಗಿಯೇ ಚುಚ್ಚಿತು. ಹಾಗಾಗಿ ಕೂಡಲೇ ಪೂರ್ವ ಪರಿಚಿತ ಶಿವಾನಂದ - ವಿಕ್ರಂ ಟ್ರಾವೆಲ್ಸಿನ ಮಾಲಿಕ, ಮತ್ತವರ ತಮ್ಮ - ಸುಬ್ರಹ್ಮಣ್ಯರನ್ನು ಕಂಡೆ. ಅವರ ಕಾಶ್ಮೀರ ಪ್ರವಾಸದ ಸಿದ್ಧ ಯೋಜನೆ ನೋಡಿದೆ. ಕೆಲವು ಪರಿಷ್ಕರಣಗಳೊಂದಿಗೆ ನಮ್ಮಿಬ್ಬರ ಹೆಸರನ್ನು ಪೂರ್ಣ ಹಣ ಕೊಟ್ಟು ನೋಂದಾಯಿಸಿಯೇ ಬಿಟ್ಟೆ. ಮತ್ತೆ ಮೇ ಮೂರರಿಂದ ಹದಿನೇಳರವರೆಗೆ ಜಮ್ಮು ಕಾಶ್ಮೀರ ಪ್ರವಾಸ ನಡೆಸಿಯೇಬಿಟ್ಟೆವು.

ವಿಕ್ರಂ ಟ್ರಾವೆಲ್ಸಿನ ಸಿದ್ಧ ಯೋಜನೆ ಹದಿನೈದು ದಿನಗಳಲ್ಲಿ ಮೊದಲು ಒಂದೂವರೆ ದಿನದ ರೈಲ್ವೇಯಾನ ಮತ್ತು ದಿಲ್ಲಿ ದರ್ಶನಗಳಲ್ಲಿ ನಮಗಾಸಕ್ತಿಯಿರಲಿಲ್ಲ. ಮಿತ್ರ ಚಂದ್ರಶೇಖರ ದೈತೋಟ ಹೇಳಿದಂತೆ, ದಿಲ್ಲಿಯಲ್ಲಿರುವುದು ಎರಡೇ – ಐತಿಹಾಸಿಕ ರಾಜಮಹಾರಾಜರುಗಳ ಸ್ಮೃತಿಗಳು ಮತ್ತೆ ಆಧುನಿಕ `ಮಹಾರಾಜ’ರುಗಳ ಕೀರ್ತಿಕೆಗಳು; ಒಟ್ಟಾರೆ ದಿಲ್ಲಿ ಗೋರಿಗಳ ನಗರ!  ಟ್ರಾವೆಲ್ಸಿನ ಪೂರ್ಣ ಯೋಜನಾ ತಂಡ ಮೇ ಎರಡಕ್ಕೆ ಮಂಗಳೂರಿನಿಂದ ದಿಲ್ಲಿಯ ರೈಲೇರಿತ್ತು. ನಾವು ಬೆಂಗಳೂರಿನಿಂದ ದಿಲ್ಲಿಗೆ ಸ್ಪರ್ಧಾತ್ಮಕ ದರದಲ್ಲಿ ಇರುವ ಅನೇಕ ವಿಮಾನಗಳಲ್ಲಿ ಗೋ ಏರ್ ಆಯ್ಕೆ ಮಾಡಿಕೊಂಡೆವು. ಅದಕ್ಕೆ ಹೊಂದುವಂತೆ ಮೂರರಂದು ಬಸ್ಸೇರಿ ಬೆಂಗಳೂರಿಸಿದೆವು. `ಅ(ಭಯ)ರ(ಶ್ಮಿಯರ)ಮನೆ’ಯಲ್ಲಿ ಎರಡು ರಾತ್ರಿ ಕಳೆದು ಐದರ ಬೆಳಿಗ್ಗೆ ದಿಲ್ಲಿ ವಿಮಾನ. ಗೋಏರ್ ಗಡಿಯಾರದ ಮುಳ್ಳಿನಂತೆ ಬೆಂಗಳೂರಿನಲ್ಲಿ ನಮ್ಮನ್ನೆತ್ತಿ ಹತ್ತೂಕಾಲಕ್ಕೆ ದಿಲ್ಲಿಯಲ್ಲಿಳಿಸಿತು.

ವಿಕ್ರಂ ಟ್ರಾವೆಲ್ಸ್ ನಮಗೆ  ಮುಂದಾಗಿ ದಿಲ್ಲಿಯ ಹೋಟೆಲ್ ವಿಳಾಸ ಮಾತ್ರ ಕೊಟ್ಟಿತ್ತು. ನಾನು ಎರಡು ಬಾರಿ ವಿಕ್ರಂ ಕಚೇರಿಗೆ ಭೇಟಿ ಕೊಟ್ಟದ್ದಲ್ಲದೆ, ಕೆಲವು ಚರವಾಣಿ ಸಂದೇಶದಲ್ಲಿ ಕೇಳಿದರೂ ನಮ್ಮ ಪ್ರವಾಸೀ ನಿರ್ವಾಹಕನ ಸಂಪರ್ಕ ಸಂಖ್ಯೆಯಾಗಲೀ ಪರಿಚಯವಾಗಲೀ ಕೊಟ್ಟೇ ಇರಲಿಲ್ಲ. ವಿಮಾನದೊಳಗೆ ಚರವಾಣಿಗೆ ದಿಗ್ಬಂಧನವಿತ್ತು. ಆದರೆ ದಿಲ್ಲಿಯ ನೆಲ ಮುಟ್ಟುತ್ತಿದ್ದಂತೆ ಅದರಲ್ಲಿ ಕಟ್ಟೆಯೊಡೆದ ಪ್ರವಾಹದಂತೆ ಸಂದೇಶಗಳು ತುಂಬಿಕೊಂಡವು. ಸಾಲದೆಂಬಂತೆ ಅವನ್ನೆಲ್ಲ ಕಳಿಸಿದ್ದಾತ, ತಾನು ವಿಕ್ರಂ ಟ್ರಾವೆಲ್ಸಿನ  ಪ್ರವಾಸ ನಿರ್ವಾಹಕ ಗಿರೀಶನೆಂದು ಪರಿಚಯಿಸಿಕೊಂಡು ನಮ್ಮನ್ನು ಸ್ವಾಗತಿಸಿದರು. ಆತ ಮುಖ್ಯ ತಂಡಕ್ಕೆ ದಿಲ್ಲಿ ದರ್ಶನ ನಡೆಸುತ್ತಿದ್ದುದರಿಂದ ನಮ್ಮನ್ನು ತಡವಾಗಿ ಕಾಣುವುದಾಗಿಯೂ ತಿಳಿಸಿದರು. ಮುಂದುವರಿದು ಗಿರೀಶ್ ಕೂಡಾ ವಿಕ್ರಂನವರು ಕೊಟ್ಟ ಹೋಟೆಲಿಗೇ ಟ್ಯಾಕ್ಸೀ ಮಾಡಿಕೊಂಡು ಹೋಗಲು ತಿಳಿಸಿದ್ದರಿಂದ ನಮಗೆ ಹೆಚ್ಚು ಯೋಚನೆ ಮಾಡುವುದು ಬೇಕಾಗಲಿಲ್ಲ. ನಾವು ವಿಮಾನ ನಿಲ್ದಾಣದಲ್ಲೇ ಮುನ್ಪಾವತಿ ಕೊಟ್ಟ ಕಾರುಹಿಡಿದೆವು. ಆ ಟ್ಯಾಕ್ಸೀ ಗುಜರಿಯಾದರೂ ಚಾಲಕ ಧೀರ್ ಸಿಂಗ್! ಬೀಡಾಡಿ ಜಾನುವಾರು (“Go ಮಾತೆ” ಎಂದರೂ ಇವು ದಾರಿ ಬಿಡವು), ಕೈಗಾಡಿ, ಸೈಕಲ್ ರಿಕ್ಷಾಗಳಿಂದ ಹಿಡಿದು ಎಲ್ಲ ಚರಾಚರಗಳ ಸಂತೆಯನ್ನೂ (ತಂಗುದಾಣದ ಸೂಚನೆಯಿಲ್ಲದಲ್ಲೂ ಎರಡೆರಡು ಪದರದಲ್ಲಿ ಕಾರು ರಿಕ್ಷಾದಿ ವಾಹನಗಳು ನಿಂತಿದ್ದವು) ಯಶಸ್ವಿಯಾಗಿ ನಿವಾರಿಸಿ ಆತ ನಮ್ಮನ್ನು ಕರೋಲ್ ಭಾಗಿನ, ದೇಶಬಂಧು ಗುಪ್ತ ರಸ್ತೆ ಕೊನೆಯ, ದೇವ್ ನಗರ್ ಬಡಾವಣೆಯ, ಗಲ್ಲಿಯೊಳಗಿನ ಹೋಟೆಲ್ ಸನ್ ಶೈನ್ ಸೇರಿಸಿದ! ಅದಕ್ಕೆ ವಿಕ್ರಂ ಟ್ರಾವೆಲ್ಸಿನ ದೀರ್ಘ ಸಂಬಂಧವಿರುವ ಕಾರಣ ನಮ್ಮನ್ನು ಆದರದಿಂದಲೇ ಏಸಿ ಕೋಣೆ ಮತ್ತು ಚಾ ಕೊಟ್ಟು ಸ್ವೀಕರಿಸಿತು.


ವಾಸ್ತವದಲ್ಲಿ ಸೂರ್ಯರಶ್ಮಿಗೆ ಪ್ರವೇಶವೇ ಇಲ್ಲದಂಥ, ಹಳೆಗಾಲದ, ತೀರಾ ಸಾಮಾನ್ಯ ಮೂರು ನಾಲ್ಕು ಕಿರುಮನೆಗಳ ಸಂಕಲನದಂತಿತ್ತು - ಹೋಟೆಲ್ ಸನ್ ಶೈನ್. ಇದು ಮೂಲಮನೆಗಳ ಆಯ ಬದಲಿಸದೆ, ಕಿಟಕಿ ಬಾಗಿಲು ಹೊಂದಿಸಿ, ಅವಶ್ಯವಿದ್ದಲ್ಲಿ ವಿಭಾಜಕ ಗೋಡೆಗಳನ್ನು ಕೊಟ್ಟು, ಓಣಿ, ಮೆಟ್ಟಿಲಸಾಲು, ಬಚ್ಚಲು, ಲಿಫ್ಟ್ ಹೇರಿಕೊಳ್ಳುತ್ತಾ ನಾಲ್ಕೈದು ಮಹಡಿಯೆತ್ತರ ಮುಟ್ಟಿಬಿಟ್ಟಿತ್ತು! (ಈ ಭಾಗದ ದಿಲ್ಲಿ ಭೂಕಂಪಿಸಿದರೆ ಇದು/ ಇಂಥದ್ದರ ಸ್ಥಿತಿ ಊಹಿಸುವುದು ಕಷ್ಟ!) ಮೊದಲು ನಮಗೆ ಯಾವುದೋ ತಿರುವಿನ ಎರಡನೆಯ ಮಹಡಿಯ  ಕೋಣೆಯನ್ನೂ ಪ್ರವಾಸದ ಕೊನೆಯಲ್ಲಿ ಮೂರನೆಯ ಮಾಳಿಗೆಯ ಇನ್ನೊಂದೇ ಕೋಣೆಯನ್ನೂ ಕೊಟ್ಟಿದ್ದರು. ಆ ನೆಪದಲ್ಲಿ ನಾವು ಅಲ್ಲಿ ಹತ್ತೆಂಟು ಬಾರಿ ಮೇಲೆಕೆಳಗೆ, ಒಳಹೊರಗೆ ಓಡಾಡಿದ್ದೇವೆ. ಆದರೂ ಪ್ರತಿಬಾರಿ ಅದು ಬಗೆಹರಿಯದ ಚಕ್ರವ್ಯೂಹ!
ಹಳೆಗಾಲದ ಬಡ್ಡು ಅಲಂಕಾರಿಕ ಕೆತ್ತನೆಗಳಿದ್ದ ಮರದ ಕುರ್ಚಿ, ಮೇಜು, ಕಪಾಟು, ಮಂಚಗಳು ದಪ್ಪ ಪೈಂಟು ಹೊತ್ತು ಕುಳಿತಿದ್ದುವು. ಟೀವಿ, ಅಲಂಕಾರಿಕ ದೀಪಗಳು, ಹೊಸಗಾಲದ ನೆಲಹಾಸು, ವಾತಾಯನ ವ್ಯವಸ್ಥೆ (ಫ್ಯಾನು, ಏರ್ ಕಂಡೀಶನರ್ ಇತ್ತು. ಕಿಟಕಿಗಳೆಲ್ಲ ಒಳ ಓಣಿಗಳಿಗೇ ತೆರೆದುಕೊಳ್ಳುವುದರಿಂದ ಇದ್ದರೂ ಮುಚ್ಚಿಯೇ ಸರಿ), ಬಚ್ಚಲ ಜೋಡಣೆಗಳ ಹೊರೆಯಲ್ಲಿ (ಸ್ವತಂತ್ರ ಗೀಸರ್ ಇದ್ದುವು. ಕೊನೆಯದ್ದರಲ್ಲಿ ಭಾರೀ ಬಾತ್ ಟಬ್ಬೇ ಇತ್ತು! ಎಲ್ಲಿಂದ ನೀರು ತುಂಬುತ್ತಾರೋ ಹೋಟೆಲ್ ಬಿಲ್ ತುಂಬುವವರು ಕೇಳಲುಂಟೇ!!) ಯಾಕೋ ಮುದಿ ಶೃಂಗಾರಿಯಂತೆ, ಇನ್ನೂ ಸರಿ ಹೇಳಬೇಕಾದರೆ – ಯಕ್ಷಗಾನದಲ್ಲಿ ಚಪ್ಪರಮನೆ ಶ್ರೀಧರ ಹೆಗಡೆಯ ಮಂಥರೆ ವೇಷದ ಹಾಗೇ ತೋರುತ್ತಿತ್ತು. ಗಿರೀಶ್ ಬರುವಾಗ ಸಂಜೆಯಾದೀತೆಂದು ತಿಳಿಯಿತು. ಆದರೆ ನಾವು ತಂಡದ ಸಮಯದ ಮೇಲೆ ಹೊರೆಯಾಗಬಾರದೆಂಬ ಎಚ್ಚರದಿಂದ ಸ್ವತಂತ್ರ ಕಾರ್ಯಕ್ರಮವೇನೂ ಹಾಕಿಕೊಳ್ಳಲಿಲ್ಲ. ದಿಲ್ಲಿಯ ಬಿಸಿಲಿನ ಉರುಬನ್ನು ಏಸಿ ಕೋಣೆಯ ತಂಪಿನಲ್ಲೂ ಬೆಳಗ್ಗೆ ಬೇಗ ಎದ್ದು ಉಂಟಾದ ಅಪಾರ ನಷ್ಟವನ್ನು ಹುಗಿದುಹೋಗುವ ಹಾಸಿಗೆಯಲ್ಲೂ ತುಂಬಿಕೊಟ್ಟೆವು.

ಸಂಜೆ ಮಾರ್ಗದರ್ಶಿ ಗಿರೀಶ್ ಭೇಟಿಯಾದರು. ಪಂಜ ಸೀಮೆಯ, ಪ್ರಾಯ ನಲ್ವತ್ತರ ಆಸುಪಾಸಿನ ಗಿರೀಶ್ ಪ್ರವಾಸೋದ್ಯಮದಲ್ಲಿ ಕೆಲವು ವರ್ಷಗಳ ಅನುಭವಿ, ಸ್ನೇಹಶೀಲ ವ್ಯಕ್ತಿ. ಅವರು ರಾತ್ರಿ ಎಂಟಕ್ಕೆ ಅಲ್ಲೇ ಊಟ ಅನಂತರ ರೈಲಿನಲ್ಲಿ ಜಮ್ಮು ಪಯಣ ಎಂದು ಖಾತ್ರಿಪಡಿಸಿದ ಮೇಲೆ ನಿಶ್ಚಿಂತವಾಗಿ ಕರೋಲ್ ಭಾಗಿನ ಸಂತೆಯಲ್ಲಿ ಸಣ್ಣ ನಡೆದಾಟಕ್ಕೆ ಹೋದೆವು.

ಸೈಕಲ್ ರಿಕ್ಷಾದ ಹಲವು ವಿಧ, ಮತ್ತವುಗಳ ವೈವಿಧ್ಯಮಯ ಹೊರೆ ಸಾಮರ್ಥ್ಯ, ಸಂಚಾರಿ ಕೈಗಾಡಿಯನ್ನೇರಿದ ಶೀಥಲೀಕೃತ ಕುಡಿನೀರು (ವ್ಯಾಪಾರ), ಮತ್ತದರಿಂದ ನೀರೆತ್ತುವ ಸಣ್ಣ ಕೈಪಂಪು, ಸಂಜೆಯ ವ್ಯಾಪಾರಕ್ಕೆ ಪುಟ್ಟಪಥವನ್ನೇ ಸ್ವಂತ
ಅಂಗಳದಂತೆ ನೀರು ಹಾಕಿ ಉಡುಗಿ ಮೇಜರಳಿಸುತ್ತಿದ್ದ ಪಾನ್ಪೂರಿ ಛಾಟ್ ದೂಕಾನುಗಳು, ನೆಲದ ಗದ್ದಲಕ್ಕೆ ಹೆದರಿ ಮಹಡಿಯನ್ನೊಪ್ಪಿಕೊಂಡ ಕಾಳಿ ಮಂದಿರ, ತ್ರೇತಾಯುಗದಲ್ಲಿ ಭವತಾರಣನನ್ನು ಸರಯೂ ಪಾರು ಮಾಡಿದ ಗುಹಾ ಇಂದಿನ ಕಾಲಮಹಿಮೆಗೆ ಹೆದರಿ, ಎರಡನೇ ಮಾಳಿಗೆಯ ಸೆಜ್ಜಾದ ಮೇಲೆ ಸ್ಥಿರನಾದ ದೃಶ್ಯ, ನಾಮಫಲಕದ ಅಗತ್ಯವನ್ನೂ ಅಳಿಸಿಕೊಂಡು ದೂಳಿನಲ್ಲಿ ಜೂಗರಿಸಿದ್ದ ಪುಸ್ತಕ ಮಳಿಗೆ, ತನ್ನ ಮಾಳಿಗೆಯ ಕಚೇರಿಗೆ ಬರುವ ಬಕರಾನಿಗೆ ಪ್ರತಿ ಮೆಟ್ಟಲಿಗೂ ಸುವರ್ಣ-ಯೋಜನೆಗಳ ಕನಸು ಕಟ್ಟಿ ಇಳಿಯುವಾಗ ಮರೆಸಿ ಕಂತುಕಟ್ಟುವ ಹೊರೆಯನ್ನಷ್ಟೇ ನೆನಪಿಸುವ ಫೈನಾನ್ಸ್... ಚಂದದ ಮೇಲೆ ಚಂದ ನೋಡುತ್ತ ನಡೆದೆವು. 

ದೇಶಬಂಧು ಗುಪ್ತ ಎಂಬ ಮುಖ್ಯ ರಸ್ತೆಯಿಂದ ಕವಲೊಡೆಯುವ ಅಸಂಖ್ಯ ಅಡ್ಡ ರಸ್ತೆಗಳೆಲ್ಲ ಅಸ್ತಿತ್ವ ಕಳೆದುಕೊಂಡು ಕರೋಲ್ಭಾಂಗ್ ಸಂತೆಯ ಭಾಗವೇ ಆಗಿಹೋಗಿವೆ. ಅಲ್ಲೆಲ್ಲ ದಾರಿಯ ಎರಡು ಬದಿಯಲ್ಲಿ ಮಳಿಗೆಗಳ ಮಾಲಕರ ವಾಹನಗಳೇ ವ್ಯವಸ್ಥಿತವಾಗಿ ಅಡ್ಡಡ್ಡ ನಿಂತ ಮೇಲೆ ಗಿರಾಕಿಗಳು ಉದ್ದುದ್ದಕ್ಕೆ ಎರಡನೇ ಸಾಲು ನಿಲ್ಲಿಸುವುದು ಅನಿವಾರ್ಯವೇ ಆಗಿದೆ. ಪುಟ್ಟಪಥದಲ್ಲಿ, ಕಾರುಗಳೆಡೆಯಲ್ಲಿ ಇಲ್ಲದ ವ್ಯಾಪಾರ, ವಹಿವಾಟು ಇಲ್ಲ! ಧಾರ್ಮಿಕ ಕಟ್ಟಳೆಯ ಸಕಲಾಯುಧ ಸಜ್ಜಿತನಾದ (ಮುಂಡಾಸಿಗೆ ಎಂಥದ್ದೋ ಬಿಲ್ಲೆಯನ್ನೂ ಏರಿಸಿದ್ದ) ಸರದಾರ್ಜಿ ಹತ್ತಿ ಹಗ್ಗ ಮಾರುತ್ತಿದ್ದ. 

ಇನ್ನೂ ಹತ್ತು ಹನ್ನೆರಡರ ಹುಡುಗನೊಬ್ಬ ಕಾರೊಂದರ ಮಗ್ಗುಲಿಗೆ ಆರಡಿ, ಐದಡಿ ಬ್ಯಾನರ್ ಸಿಕ್ಕಿಸಿ, ಎದುರು ಎರಡು ಪುಟ್ಟ ಪ್ಲ್ಯಾಸ್ಟಿಕ್ ಕಾಲ್ಮಣೆ ಇಟ್ಟು ಇನ್ನೊಂದು ಸ್ಟೂಲಿನ ಮೇಲೆ ತನ್ನ ಹಚ್ಚೆ ಅಂಗಡಿ ತೆರೆದಿದ್ದ. ನಾಲ್ಕು ದಾರಿ ಸೇರುವಲ್ಲೇ ಯಾವ ಮುಜುಗರವೂ ಇಲ್ಲದಂತೆ (ಬಾಲಸುತ್ತಿ ರಾವಣನೆದುರು ವಿರಾಜಮಾನನಾದ ಹನುಮನಂತೆ) ಕವುಚಿ ಒಟ್ಟಿದ ಡಬ್ಬಿಗಳ ಅಟ್ಟಳಿಗೆಯಲ್ಲಿ ಹಣ್ಣು, ತರಕಾರಿಗಳ ವ್ಯಾಪಾರ ನಡೆದಿತ್ತು. ಬೈಕ್ ರಿಪೇರಿ, ವಿವಿಧ ಜೂಸ್ ತಯಾರಿ, ಪೂರಿಪರಾಟಕ್ಕೇ ಒಂದು, ಚಾಗೆ ಪ್ರತ್ಯೇಕ ಎಂಬಂತೆ ಢಾಬಾಗಳು, ಪುಟ್ಟ ಭರಣಿಯಲ್ಲಿ ಗೇಣುದ್ದದ ಮಂಥು ಹಾಕಿ ಕಡೆಯುವ ಲಸ್ಸೀವಾಲಾ, ಪಾನ್ವಾಲಾ,  ಮಕ್ಕಳ ಆಟಿಕೆಗಳು, ಬಟ್ಟೆಬರಿ ಇತ್ಯಾದಿ ಇತ್ಯಾದಿ – ದಿಲ್ಲಿಯಾದರೇನು ಸಿವಾ ನಮ್ಮ ಹಳ್ಳೀ ಸಂತೆಯೇ ಮೈದಳೆದಿತ್ತು. ಕಸ, ಕೊಚ್ಚೆ, ಅಸಮ ನೆಲ, ಚರಂಡಿ, ಜಾರಿದ ಮುಚ್ಚಿಗೆಗಳ ಪುಟ್ಟಪಥ ಮುಂತಾದವನ್ನು ಹಾರಿ, ಮೆಟ್ಟಿ, ನುಸುಳಿ ಸುಮಾರು ಒಂದೂವರೆ ಗಂಟೆಯ ಸುತ್ತಾಟ ಮುಗಿಸಿ ಮರಳಿದೆವು. “ಕೇಜ್ರೀವಾಲ್ ಪೊರಕೆ, ಮೋದಿಯ ಹರಕೆ (ಸ್ವಚ್ಛ ಭಾರತ್) ಭಾರತ ಬೇಡ, ದಿಲ್ಲಿಯನ್ನಾದರೂ ಸ್ವಚ್ಛ ಮಾಡೀತೇ” ಎನ್ನುವುದಷ್ಟೇ ಕೇಳುವುದು ಉಳಿದಿದೆ.


ನಾವು ಏಳೂವರೆಗೇ ಊಟಕ್ಕೆ ಸಜ್ಜಾಗಿ ಹೋಟೆಲಿನ ತಾರಸಿ ತಲಪಿದೆವು. ಮೋಟು ಅಂಚುಗಟ್ಟೆ, ಅರೆಪಾರದರ್ಶಕ ಪ್ಲ್ಯಾಸ್ಟಿಕ್ ಮಾಡು, ಅವ್ಯವಸ್ಥಿತ ಮೇಜು ಕುರ್ಚಿಗಳು  ಹರಡಿಕೊಂಡಿದ್ದವು. ಸಹಜವಾಗಿ ದೂಳು, ಕಾಗೆ ಪಾರಿವಾಳಗಳ ಉಚ್ಚಿಷ್ಟ ಧಾರಾಳ ಇತ್ತು. ಅದು ಬಹು ಬಳಕೆಯದಾಗಿರಲಿಲ್ಲ. ಹೋಟೆಲಿನದೇ ಮೂರು ನಾಲ್ಕು ನೌಕರರು ಅಲ್ಲಿ ಕೈಕಾಲು ಎಸೆದು, ಸೋಮಾರಿ ಕಟ್ಟೆ ಮಾಡಿಕೊಂಡಿದ್ದರು. ಅವರು ನಮ್ಮನ್ನು ಕಂಡು ಒಮ್ಮೆ ಆಶ್ಚರ್ಯಪಟ್ಟರು. ನಾವೇ “ಖಾನ ಲಗಾಯಾ ನೈ?” ಎಂದು ವಿಚಾರಿಸಿದಾಗ ಗಡಿಬಿಡಿಸಿ ಏಳುತ್ತ “ಹೋ ಜಾಯೇಗಾ...” ಅಂತ ಹೇಳುತ್ತಾ ಚದುರಿದರು. ಪರಸ್ಪರ ಮುಜುಗರ ಹೆಚ್ಚದಂತೆ ನಾವು ತುಸು ಅತ್ತ ಸರಿದೆವು. ನಾಲ್ಕೆಂಟು ಹೂಗಿಡಗಳ ಕುಂಡಗಳು, ಖಾಲಿಯಾದ ಗ್ಯಾಸ್ ಸಿಲಿಂಡರುಗಳು, ಹರವಿದ ಕೆಲಸದವರ ಬಟ್ಟೆ, ಕಸ ಕೊಳಕು ಅಲ್ಲಿ ಸಮಾನ ಸ್ಥಾನ ಪಡೆದಿದ್ದುವು. ಬೀಡಿ ಕಚ್ಚಿದ `ಮಾಣಿ’ ಕಾಲೊರೆಸಾಗಲೂ ನಾಲಾಯಕ್ ಆದ ಗೋಣಿಯಲ್ಲಿ ಹರಡಿಬಿದ್ದ ಮೇಜುಗಳ ಮೇಲಿಂದ ಪಾರಿವಾಳದ ಪ್ರಸಾದಗಳನ್ನು ಒರೆಸಿದ. ಮತ್ತೆ ಆ ಗೋಣಿಯನ್ನು ಹಾಗೇ ಮೂಲೆಗೆಸೆದು ಅದೇ ಕೈಯಲ್ಲಿ ಊಟದ ವ್ಯವಸ್ಥೆಗಳನ್ನು ಜೋಡಿಸತೊಡಗಿದ.

ದಿಲ್ಲಿಯಲ್ಲಿ ಸೂರ್ಯಾಸ್ತ ನಿಧಾನವಾದ್ದರಿಂದ ಪಕ್ಕದ ವಠಾರದ ಬಹುಮಹಡಿ ಕಟ್ಟಡದ ಹೊರ ಅಂಚುಗಳ ಮೇಲೆ ಪಾರಿವಾಳಗಳ ಕಚಪಿಚ ನಡೆದಿತ್ತು. ಕುತೂಹಲದಲ್ಲಿ ನೋಡಿದೆವು. ಬಹುಮಡಿಯ ಆ ಕಟ್ಟಡದಲ್ಲಿ ಎಷ್ಟೂ ಹಕ್ಕಿಗಳ ಅನುಕೂಲಕ್ಕೊದಗುವಂತೆ ನಿಯತ ಅಂತರದಲ್ಲಿ ಅನೇಕ ಹೊರಚಾಚಿಕೆಗಳಿದ್ದುವು. ಆದರೆ ಹಾರಾಟದಲ್ಲಿ ನಮಗೆ ಒಂದು ಹಿಂಡಾಗಿ ಕಾಣುವ ಪಾರಿವಾಳಗಳಲ್ಲಿ ಅದೆಷ್ಟು ಗುಂಪುಗಾರಿಕೆ! ಸುಮಾರು ಆರಡಿ ಉದ್ದದ ಒಂದು ಸೆಜ್ಜದಲ್ಲಿ ಆರೇಳೇ ಪಾರಿವಾಳಗಳಿದ್ದರೂ ಬಣದ ಹೊರಗಿನ ಒಂದಕ್ಕೂ ಅಲ್ಲಿ ತಂಗಲು ಬಿಡುತ್ತಿರಲಿಲ್ಲ. ಇಂಥಾ ಒಂದು ತಿರಸ್ಕೃತರ ಗುಂಪು ಚಾಲನೆಯಲ್ಲಿಲ್ಲದ ಏಸೀ ಗೂಡಿನ ಮೇಲೆ ಕಿಕ್ಕಿರಿದು ತುಂಬಿದ್ದರೆ, ಕೆಲವು ಹೊರಚಾಚಿಕೆಗಳು ಪೂರ್ತಿ ಖಾಲಿಯೇ ಉಳಿದಿದ್ದುವು. ಹಕ್ಕಿಗಳ ಒಳ ಬಣಗಳ ಸ್ಪರ್ಧೆ ನಮ್ಮೊಳಗೆ ಬಾರದಿರಲಿ ಎಂದು ಹಾರೈಸುತ್ತಿದ್ದಂತೆ ಗಿರೀಶ್ ಮತ್ತು ಇತರ ಸದಸ್ಯರು ಒಬ್ಬೊಬ್ಬರೇ ಬಂದರು.

ಸುವರ್ಣ ಮಂಗಳೂರಿನ ಯಾವುದೋ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿದ್ದು ಈಚೆಗೆ ನಿವೃತ್ತರಾದವರು. ಅವರೇ ಹೇಳಿಕೊಂಡಂತೆ “ವಿಕ್ರಂ ಟ್ರಾವೆಲ್ಸಿನಲ್ಲಿ ಅವರದಿದು ಹದಿಮೂರನೇ ಪ್ರವಾಸ.” ಹಿಂಬಾಲಿಸಿದಂತೆ ಬಂತು ಮೂಡಿಗೆರೆಯ ಕೆನರಾ ಬ್ಯಾಂಕಿನ ಅಧಿಕಾರಿಯಾದ ಧನಂಜಯ ಜೀವಾಳರ ಕುಟುಂಬ. ಅವರ ಹೆಂಡತಿ ನಾಗಮಣಿ ಕಾರ್ಪೊರೇಶನ್ ಬ್ಯಾಂಕಿನ ಅಧಿಕಾರಿ. ಮಕ್ಕಳಾದ ಸೂರ್ಯ ಏಳನೇ ತರಗತಿಯಾದರೆ, ಮಹಾಲಕ್ಷ್ಮಿ ಐದನೆಯ ವಿದ್ಯಾರ್ಥಿ. ಧನಂಜಯ ಪೂರ್ಣಚಂದ್ರ ತೇಜಸ್ವಿಯವರ ಕೊನೆಯ ಸುಮಾರು ಹದಿನೈದು ವರ್ಷ ನಿಕಟ ಸಂಪರ್ಕ ಇಟ್ಟುಕೊಂಡಿದ್ದವರಂತೆ. ತೇಜಸ್ವಿ ಗತಿಸಿದ ಮೇಲೆ ಅವರ ಹೆಂಡತಿ ರಾಜೇಶ್ವರಿ `ನನ್ನ ತೇಜಸ್ವಿ’ ಎನ್ನುವ ಪುಸ್ತಕ ಬರೆದು ಪ್ರಕಟಿಸಿದ್ದು ನಿಮಗೆಲ್ಲಾ ತಿಳಿದೇ ಇದೆ. ತೇಜಸ್ವಿಯೊಡನೆ ನನಗಿದ್ದ ಆತ್ಮೀಯತೆಯಲ್ಲಿ ಆ ಪುಸ್ತಕವನ್ನು ನಾನು ಶ್ರದ್ಧೆಯಿಂದ ಓದಿ, ಅನೌಪಚಾರಿಕ ಪತ್ರ ವಿಮರ್ಶೆಯನ್ನು ರಾಜೇಶ್ವರಿಯವರಿಗೆ ಬರೆದಿದ್ದೆ. ಅದು ಮೂರೋ ನಾಲ್ಕೋ  ವರ್ಷದ ಹಳೇ ಮಾತು. ಆದರೆ ಇಂದು, ದಿಲ್ಲಿಯ ಮೂಲೆಯಲ್ಲಿ ನನ್ನ ಹೆಸರು ಕೇಳುತ್ತಲೇ ಅಂದು ತಾನು ಆ ಪತ್ರವನ್ನು ರಾಜೇಶ್ವರಿಯವರಲ್ಲಿ ಓದಿದ್ದನ್ನು ನೆನಪಿಸಿಕೊಂಡು ಹೆಚ್ಚು ಆತ್ಮೀಯರಾದರು ಧನಂಜಯ! ತಂಡದ ಹಿರಿಯ ಜೋಡಿ ಮಂಗಳೂರಿನವರೇ ಆದ ಗಣೇಶ್ ಭಟ್ ಮತ್ತವರ ಪತ್ನಿ ಉಷಾ. ಭಟ್ಟರು ಉದ್ಯಮಿಯಾಗಿಯೂ ಉಷಾ ಅಧ್ಯಾಪಕಿಯಾಗಿಯೂ ನಿವೃತ್ತರು. ಅವರಿಗೆ ಅತ್ರಿ ಮತ್ತು ನನ್ನ ಪರಿಚಯ ಸಾಕಷ್ಟಿದ್ದರೂ (ದೇವಕಿಯೂ ಸೇರಿದಂತೆ) ನಾವು ಅವರನ್ನು ಹೊಸದಾಗಿ ಸ್ವೀಕರಿಸುವಂತಾದ್ದು ಕೇವಲ ನನ್ನ ನೆನಪಿನ ಕೊರತೆಯಿಂದ.

ದಿಲ್ಲಿಯಿಂದ ತೊಡಗಿದಂತೆ ತಂಡದ ಕೊನೆಯ ಜೋಡಿ ಅಮ್ಮ, ಮಗನದ್ದು. ಇವರು ಕುಂದಾಪುರದ ಬಳಿಯ ಸಿದ್ಧಾಪುರದ ರೇಖಾ ಮತ್ತು ವಿದ್ಯಾರಣ್ಯ. ಈ ಜೋಡಿ ಅದುವರೆಗೆ ನಮ್ಮಿಬ್ಬರ ಸಂಪರ್ಕಕ್ಕೆ ಬಾರದೆಯೂ ಹೆಚ್ಚು ಆತ್ಮೀಯರಾದ್ದಕ್ಕೊಂದು ಪುಟ್ಟ ಬಳಸಿನ ಕತೆ ಹೇಳಬೇಕು. ೧೯೯೦ರ ದಶಕದಲ್ಲೆಲ್ಲೋ ಸಿದ್ಧಾಪುರದ ಶ್ರೀಕಾಂತ ಮಂಗಳೂರು ವಿವಿನಿಲಯದ ಕನ್ನಡ ಎಂಎ ವಿದ್ಯಾರ್ಥಿ. ಆ ದಿನಗಳಲ್ಲಿ ಸಾಹಿತ್ಯ ವಿದ್ಯಾರ್ಥಿಗಳಿಗೆ `ಅತ್ರಿ ಬುಕ್ ಸೆಂಟರ್’ ಕನಿಷ್ಠ ವಾರಕ್ಕೊಮ್ಮೆಯಾದರೂ ಅನಿವಾರ್ಯ ಭೇಟಿಯ ಸ್ಥಳವಾಗಿತ್ತು. ಸಹಜವಾಗಿ ನನ್ನ ಗಿರಾಕಿ ಎಂಬಲ್ಲಿಂದ ತೊಡಗಿತ್ತು ಶ್ರೀಕಾಂತರ ಪರಿಚಯ. ಆತ ವರಾಹಿ ವಿದ್ಯುತ್ ಯೋಜನೆಯ ವಲಯದೊಳಗಿನ ಕಾಲೇಜಿನ ಅಧ್ಯಾಪಕನಾದದ್ದು, ಮುಂದೆ ಗ್ರಂಥಾಲಯ ಅಗತ್ಯಗಳಿಗೆ ನನ್ನಲ್ಲಿಗೆ ಬರುತ್ತಿದ್ದುದು ಎಲ್ಲ ವ್ಯಾಪಾರಿ – ಗಿರಾಕಿ ಸಂಬಂಧಗಳ ಮಟ್ಟದಲ್ಲಿ ಚೆನ್ನಾಗಿಯೇ ಇತ್ತು. ಆದರೆ ಅವರ ಪಾಠಪಟ್ಟಿ ಮೀರಿದ ಓದಿನ ಹಸಿವು, ತಿಳಿವಿನ ಕುತೂಹಲ, ಎಲ್ಲಕ್ಕೂ ಮಿಕ್ಕು ಯಕ್ಷಗಾನಾಸಕ್ತಿ (– ಅದರಲ್ಲೂ ಭಾಗವತಿಕೆ) ನನಗೆ ಹೆಚ್ಚಿನ ಆತ್ಮೀಯತೆಯನ್ನು ತಂದಿತ್ತು. ರೇಖಾ ಸಂಶಯದ ತಕ್ಕಡಿಯಲ್ಲೇ “ನಿಮಗೆ ನನ್ನ ಗಂಡ ಶ್ರೀಕಾಂತ್...” ಎಂದಾಗ ನನ್ನ ನೆನಪಿಗೆ ಬರಿಯ ಮೀಟುಗೋಲು ತಾಗಿತ್ತು. ಆಕೆ ಮುಂದುವರಿದು “...ಸಿದ್ಧಾಪುರದವರು” ಎನ್ನುತ್ತಿದ್ದಂತೆ ಸನ್ನೆಗಲ್ಲು ಕೊಟ್ಟ ಹಾಗಾಯ್ತು! “ಹೋ ನಮ್ಮ ಭಾಗವತರು” ಎಂದೇ ನಾನುದ್ಗರಿಸಿದ್ದೆ. ಪದವಿಯ ಚಾಪಲ್ಯಕ್ಕೆ ಸಂಶೋಧನೆಯ ಶಾಸ್ತ್ರ ಮುಗಿಸುವುದನ್ನು ಮೀರಿ ನಡೆದವರು ಡಾ| ಶ್ರೀಕಾಂತ ಸಿದ್ಧಾಪುರ. ಹಾಗೇ ಆತ ಯಕ್ಷಗಾನ ಭಾಗವತಿಕೆಯಲ್ಲೂ ವೃತ್ತಿಪರ ಚಾಪಲ್ಯಗಳೇನೂ ಇಲ್ಲದೆ ಕಸುವುಗೊಂಡವರು ಎಂಬ ಅರಿವು ನನಗಿದ್ದುದಕ್ಕೇ ಈ ಸಹಜ ಉದ್ಗಾರ! ರೇಖಾ ಯಾವುದೋ ಶಾಲಾ ಅಧ್ಯಾಪಕಿ. ವಿದ್ಯಾರಣ್ಯ ವರ್ತಮಾನದ ಬಹುತೇಕ ಯುವಮನಸ್ಸಿನಂತೆ ಆರ್ಥಿಕ ಪ್ರಯೋಜನಕ್ಕಾಗಿಯೇ ವಿದ್ಯೆಯೆಂಬ ಮಾಯಾಕುದುರೆಯನ್ನೇರಿರದೆ, ಆಳ್ವಾಸ್ ಕಾಲೇಜಿನಲ್ಲಿ ಪತ್ರಿಕೋದ್ಯಮದ ವಿಷಯದೊಡನೆ ಬೀಯೇ ಓದುತ್ತಿದ್ದ. ಯಾವುದೇ ಕೀರ್ತಿ, ಸ್ಪರ್ಧೆಗಳ ಲಾಲಸೆಯಿಲ್ಲದ ಸ್ವಾಂತಸುಖಾಯದ ಗಾಯಕನೂ ಆಗಿದ್ದ. ಹೀಗೆ ಹನ್ನೊಂದೇ ಜನರ ನಮ್ಮ ತಂಡ ಮೊದಲ ಮೆಟ್ಟಿಲಲ್ಲೇ ನಮಗೆ ಅನಿರೀಕ್ಷಿತವಾಗಿ ಆತ್ಮೀಯವಾಯ್ತು.

ತಂಡದ ಭಾಗವಾಗಿಯೂ ಹೊರಗಿನವರಾಗಿಯೂ ಇದ್ದವರು ಪ್ರವಾಸೀ ನಿರ್ವಾಹಕ ಗಿರೀಶ್. ದಕ ಜಿಲ್ಲೆಯ ಪಂಜದ ಈ ಹಳ್ಳಿಗ ತನ್ನ ಸ್ನಾತಕ ಮಟ್ಟದ ವಿದ್ಯಾಭ್ಯಾಸ ಅಥವಾ ತುಂಡು ಕೃಷಿಯನ್ನು ನೆಚ್ಚಿ ಕೂರದೇ ಪ್ರವಾಸಿಗಳಿಗೆ ಅಖಿಲ ಭಾರತ ಮಟ್ಟದ ಮಾರ್ಗದರ್ಶಿಯಾಗಿ ಬೆಳೆದದ್ದು ಆಶ್ಚರ್ಯ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, ಗುಜರಾಥಿನಿಂದ ಬಂಗಾಳದವರೆಗೂ ಕನ್ನಡ ಪ್ರವಾಸೀ ತಂಡಗಳನ್ನು ಇವರು ಕಳೆದ ಸುಮಾರು ಎಂಟು ವರ್ಷಗಳಿಂದ ತಿರುಗಿಸುತ್ತಲೇ ಇದ್ದಾರೆ. ಸದ್ಯ ಕೊಲ್ಕೊತ್ತಾ ವಲಯದಲ್ಲಿ ಯಾವುದೋ ತಂಡವನ್ನು ಸುಧಾರಿಸಿ, ಊರಿಗೆ ಮರಳಿಸಿ, ದಿಲ್ಲಿಗೆ ಬಂದಿದ್ದರು. 

ಇಲ್ಲಿ ಜಮ್ಮು ಕಾಶ್ಮೀರದ ನಮ್ಮ ತಂಡವನ್ನು ಒಗ್ಗೂಡಿಸಿ ನಡೆಸಲಿದ್ದರು. ಸುವರ್ಣ, ರೇಖಾ ಮತ್ತು ವಿದ್ಯಾರಣ್ಯ ಮಂಗಳೂರಿನಿಂದ ಮೂರು ಹಂತದ ಮಲಗುವ ಭೋಗಿ ಹಿಡಿದು ಬಂದ ಮೂಲ ತಂಡ. ಅದಕ್ಕೆ ಬೆಂಗಳೂರಿನಿಂದ ಏರೋಪ್ಲೇನ್ ಏರಿ ಬಂದು ಸೇರಿಕೊಂಡವರು ಗಣೇಶ್ ಭಟ್ ದಂಪತಿ. ಹಾಗೇ ಬೆಂಗಳೂರಿನಿಂದ ರೈಲೇರಿ ಬಂದು ಸೇರಿದ್ದು ಧನಂಜಯ ಕುಟುಂಬ. ಗಿರೀಶ್ ನಾಲ್ಕನೇ ತಾರೀಕಿನಂದು ಇಷ್ಟೂ ಜನರನ್ನು ದಿಲ್ಲಿಯಲ್ಲಿ ಎದುರುಗೊಂಡು, ಹೊಟೆಲಿಗೆ ಮುಟ್ಟಿಸಿ, ಮರುದಿನ ದಿಲ್ಲಿ ದರ್ಶನ ಮಾಡಿಸಿದ್ದಾಗಿತ್ತು. ಅಲ್ಲಿನ ಲೆಕ್ಕದಲ್ಲಿ ನಾವು ಕೊನೆಯ ಕಂತು. ಹೀಗೆ ವಿಭಿನ್ನ ಆಸಕ್ತಿ, ಅನುಕೂಲಗಳನ್ನು ಅನುಸರಿಸಿ ಬರುವವರನ್ನು ಸಂಗ್ರಹಿಸಿ, ತಿರುಗಿಸಿ, ಮರಳಿಸುವ ಕೆಲಸದಲ್ಲಿ ಗಿರೀಶ್ ಕೆಲವು ಬಾರಿ ಐದಾರು ತಿಂಗಳವರೆಗೂ ಊರು ಮನೆಯನ್ನು ನೋಡುವುದೇ ಇಲ್ಲವಂತೆ! ಟ್ರಾವೆಲ್ಸಿನವರು ಮುಂದಾಗಿಯೇ ಸ್ಥಳೀಯ ವೃತ್ತಿಪರರೊಡನೆ ಒಪ್ಪಂದಗಳನ್ನು ಮಾಡಿಕೊಳ್ಳುವುದರಿಂದ ಗಿರೀಶ್ ಕೆಲಸ ಜವಾಬ್ದಾರಿಯುತವೆ ಆದರೂ ಹಗುರವೂ ಹೌದು.

ಸುಮಾರು ಹದಿನೈದು ವರ್ಷಗಳ ಹಿಂದೆ ಇದೇ ವಿಕ್ರಂ ಟ್ರಾವೆಲ್ಸಿನಲ್ಲಿ ನನ್ನ ತಾಯಿ ಇತರ ಮೂರು ಗೆಳತಿಯರನ್ನು ಕೂಡಿಕೊಂಡು ಉತ್ತರ ಭಾರತ ಪ್ರವಾಸ ಕೈಗೊಂಡಿದ್ದರು. ಅದು ಬದರಿ ಕೇದಾರ ಸೇರಿದಂತೆ ತೀರ್ಥಯಾತ್ರಾ ಪ್ರಧಾನವಾದ್ದರಿಂದ ಜನ ತುಂಬ ಇದ್ದರಂತೆ. ಹಾಗಾಗಿ ಎರಡು ದೀರ್ಘ ಪ್ರಯಾಣಗಳು ಮಾತ್ರ ರೈಲಿನಲ್ಲಿ. ಉಳಿದಂತೆ ಇವರದೇ ದೊಡ್ಡ ಬಸ್ಸು, ಅಡುಗೆಯ ತಂಡ ಎಲ್ಲ ಇದ್ದು ತಾಯಿಗೆ ಅನುಭವ ಅವಿಸ್ಮರಣೀಯವಾಗಿತ್ತು. ಆದರಿಲ್ಲಿ  ನಮ್ಮ ತಂಡ ಸಣ್ಣದು, ದೀರ್ಘ ಪ್ರಯಾಣದ ಅಗತ್ಯಗಳೂ ಬೇರೆಬೇರೆ. ಹಾಗಾಗಿ ಸಂಯೋಜನೆ ಸ್ವಲ್ಪ ರಗಳೆಯದ್ದೇ ಇದ್ದಿರಬೇಕು. ನಮಗೆಲ್ಲ ದಿಲ್ಲಿ-ಜಮ್ಮು ಯಾನಕ್ಕೆ ಒಂದೇ ರೈಲು ಹಿಡಿದರೂ ಆಸನ ಅಥವಾ ಮಲಗುವ ವ್ಯವಸ್ಥೆಗಳು ನಾವು ಬಂದ ಒಳಗುಂಪಿನ ಅನುಸಾರವೇ ಸಿಗುವಂತಾಗಿತ್ತು. ಅನಿವಾರ್ಯವಾಗಿ ಗಿರೀಶ್ ಮೊದಲೇ ನಮಗೆಲ್ಲ ಟಿಕೆಟ್ಗಳನ್ನು ವಿತರಿಸಿ, ವಿವರಿಸಿದ್ದರು. ರಾತ್ರಿಯೂಟ ಮುಗಿದದ್ದೇ ಗಿರೀಶ್ ವ್ಯವಸ್ಥೆ ಮಾಡಿದ್ದ ಮೂರೋ ನಾಲ್ಕೋ ರಿಕ್ಷಾದಲ್ಲಿ ನಾವೆಲ್ಲ ದಿಲ್ಲಿಯ ಹಳೆ ರೈಲ್ವೇ ನಿಲ್ದಾಣ ಸೇರಿದೆವು. ಸುಮಾರು ಅರ್ಧ ಗಂಟೆ ವಿಳಂಬಿಸಿ ರೈಲು ಬಂದಾಗ ಸಾವಕಾಶವಾಗಿಯೇ ನಮ್ಮನಮ್ಮ ಜಾಗ ಕಂಡುಕೊಳ್ಳಬೇಕಾಯ್ತು.

ಜಮ್ಮು ರೈಲಿನಲ್ಲೂ ಸೆಕೆ, ಜನಸಮ್ಮರ್ದ ವಿಪರೀತವೇ ಇತ್ತು. ನಾವು ಮೂಲದಲ್ಲೇ ಹೊರೆಯನ್ನು ಇಬ್ಬರೊಳಗೇ ಹೊತ್ತು ಸಾಗಿಸುವಂತೆ ಜೋಡಿಸಿಕೊಂಡಿದ್ದೆವು. ಅಲ್ಲದೆ ಅನಿವಾರ್ಯವಾದ ಅಮೂಲ್ಯ ವಸ್ತುಗಳೊಂದನ್ನೂ (ಹಣ, ದಾಖಲೆಗಳು, ಚರವಾಣಿ, ಕ್ಯಾಮರ ಇತ್ಯಾದಿ) ಚೀಲಗಳಲ್ಲಿರದಂತೆ ನೋಡಿಕೊಂಡಿದ್ದೆವು (ಮೈಗೆ ಧರಿಸಿದ ಉಡುಪಿನಲ್ಲೇ ಇರುತ್ತಿತ್ತು). ಹಾಗಾಗಿ ರೈಲು ಹೊರಡುತ್ತಿದ್ದಂತೆ ಚೀಲಗಳನ್ನು ಆಸನಗಳ ಅಡಿಗೆ ನೂಕಿ ನಿಶ್ಚಿಂತೆಯಲ್ಲಿ ಮಲಗುವುದು ಸಾಧ್ಯವಾಯ್ತು. ಆದರೆ ಮಲಗಿದವರೆಲ್ಲ ನಿದ್ರಿಸಿದವರು ಎಂದು ತಪ್ಪು ಗ್ರಹಿಸಬಾರದು. ಎಷ್ಟೋ ವರ್ಷಗಳ ಮೇಲೆ ಮತ್ತೆ ರೈಲೋಟದ ಮತ್ತು ನಿಲುಗಡೆಗಳ ಲಯಕ್ಕೆ ಹೊಂದಿಕೊಳ್ಳಬೇಕಾಗಿತ್ತು. ನಿಲ್ದಾಣಗಳ ಗದ್ದಲ, ಇಳಿಹತ್ತುವ ಮಂದಿಯ ಲಹರಿಗಳನ್ನು ಸಹಿಸಿಕೊಳ್ಳಬೇಕಿತ್ತು. ಕೊನೆಯದಾಗಿ, ನಮ್ಮ ಚೀಲಗಳನ್ನು ನಾವೆಷ್ಟು ಬಡವಾಗಿಸಿದ್ದರೂ ಎರಡು ಸತ್ಯವನ್ನು ಮರೆಯುವಂತಿರಲಿಲ್ಲ. ಒಂದನೆಯದಾಗಿ, ನಮ್ಮ ಚೀಲದ ಬಡತನ ಕಳ್ಳನಿಗೆ ಮುಂದಾಗಿ ತಿಳಿದಿರುವುದು ಅಸಾಧ್ಯ. ಹಾಗಾಗಿ ಆಕಸ್ಮಿಕದಲ್ಲೇ ಚೀಲವನ್ನು ಕಳ್ಳ ಒಯ್ದರೂ ಪ್ರವಾಸದುದ್ದಕ್ಕೆ ನಾವು ಏಕಾಂಬರರಾಗಬೇಕು! ಹಾಗಾಗಿ ನಾವು ತೋರಿಕೆಗೆ ಎಷ್ಟು ಉದಾಸರಾಗಿದ್ದರೂ ಈ `ಆಕಸ್ಮಿಕ’ತೆಯ ಹುಳ ನಮ್ಮ ನಿದ್ರೆಯನ್ನು ಕದಿಯುತ್ತಲೇ ಇತ್ತು.

ಕಾಶ್ಮೀರ ರಾಜ್ಯದೊಳಗಿನ ಭಯೋತ್ಪಾದನೆಯ ತಡೆಗೆ ಬಂದಷ್ಟೂ ಸರಕಾರಗಳು ನೂರೆಂಟು ಶಾಸನಗಳನ್ನೇ ತಂದಿವೆ. ಅವುಗಳ ಮೂಲ ಉದ್ದೇಶ, ಸಾಧಿತ ಫಲದ ವಿಮರ್ಶೆ ಬಿಟ್ಟು ಮುಂದಾಗಿ ಕಾಡಿದು – ಚರವಾಣಿ. ಆ ಪ್ಲಾನು, ಈ ಪ್ಲಾನು, ಇದಕ್ಕಿಷ್ಟು ಸಂದೇಶ, ಅದರಲ್ಲಿ ಹಣವೆಲ್ಲ ಮಾತಿನ ಸಮಯ ಎಂದಿತ್ಯಾದಿ ಚೌಕಾಸಿಗಳಲ್ಲಿ ನಮಗೆ ಮುನ್ಪಾವತಿ (ಪ್ರೀ ಪೇಡ್) ಕೊಟ್ಟೇ ಗೊತ್ತು. ಆದರೆ ಕಾಶ್ಮೀರದೊಳಗೆ ಆ ಚರವಾಣಿಗಳು ಸತ್ತಂತೇ ಸರಿ; ಅಲ್ಲಿ ಸಂಪರ್ಕ ಯೋಗ್ಯತೆ ಮಾತಾಡಿದ ಮೇಲೆ (ಪೋಸ್ಟ್ ಪೇಡ್) ವ್ಯವಸ್ಥೆಗೆ ಮಾತ್ರ. ಹೀಗೆ ತಯಾರಿಯ ದಿನಗಳಲ್ಲಿ ಮನೋಹರ ಉಪಾಧ್ಯರ ಸೂಚನೆ ಸಿಕ್ಕಿದ್ದೇ ದೂರವಾಣಿ ಇಲಾಖೆಯಲ್ಲಿ ವಿಚಾರಿಸಿ ನೋಡಿದ್ದೆ. ಆದರೆ ಕೇವಲ ಹತ್ತು ದಿನಗಳ ಅನುಕೂಲಕ್ಕಷ್ಟೇ ಬೇಕಾಗುವ ಪರಿವರ್ತನೆಯಾದರೂ ಸೇವಾಶುಲ್ಕ ಸಾವಿರ ರೂಪಾಯಿಗೂ ಮೀರುತ್ತದೆ ಎಂದು ತಿಳಿದಾಗ, ಯೋಚನೆಯನ್ನೇ ಕೈಚೆಲ್ಲಿದ್ದೆವು. ಟ್ರಾವೆಲ್ಸಿನವರು “ತುರ್ತು ಸಂಪರ್ಕಕ್ಕೆ ನಿಮಗೆ ಜತೆಗೊಡುವ ನಮ್ಮ ನಿರ್ವಾಹಕರದ್ದಿರುತ್ತದೆ. ಅಲ್ಲವಾದರೂ ಸಾರ್ವಜನಿಕ ಕರೆಗೂಡುಗಳು ಧಾರಾಳ ಸಿಗುತ್ತವೆ.” ವೃತ್ತಿಪರ ದಿನಗಳಲ್ಲಿ ನಾನು ಚರವಾಣಿಯನ್ನು ಪೂರ್ಣ ನಿರಾಕರಿಸಿದವ. ಮುಂದೆಯೂ ನನ್ನ ಸಂಪರ್ಕ ಬಯಸಿದವರಿಗೆಲ್ಲ ನಾನು ಮಿಂಚಂಚೆ ವಿಳಾಸ ಕೊಡುತ್ತೇನೆ, “ಬೇಕೇ ಬೇಕು” ಎಂದವರಿಗೆ ಮನೆಯ ಸ್ಥಿರವಾಣಿ ಬರೆಸುತ್ತೇನೆ. ಹಾಗೂ ನನ್ನ ಚರವಾಣಿ ಸಂಖ್ಯೆ ಸಂಗ್ರಹಿಸಿದವರಿಗೆ ಸ್ಪಷ್ಟ ಸೂಚನೆ ಕೊಡುತ್ತಿದ್ದೆ “ಸದಾ ಮನೆಯ ಸ್ಥಿರವಾಣಿಯನ್ನೇ ನೆಚ್ಚಿ, ನನ್ನ ಚರವಾಣಿಯನ್ನಲ್ಲ.!” ಇದನ್ನು ನನ್ನ ಸ್ಯಾಮ್ಸಂಗ್ ಸಲಕರಣೆ ಕೂಡಾ ಅರ್ಥ ಮಾಡಿಕೊಂಡಿದೆ! (ಕರದೊಳಗಿನ ಇಷ್ಟಲಿಂಗ.)


ನಗರದ ಮಧ್ಯದಲ್ಲೂ ಎಷ್ಟೋ ಬಾರಿ ಅಗತ್ಯದ ಸಂದೇಶ, ತುರ್ತು ಕರೆಗಳ ಅಗತ್ಯಕ್ಕಾಗುವಾಗ ಇದು “ಸಂಪರ್ಕವಲಯದಿಂದ ದೂರವಿರುತ್ತದೆ.” ಆದರೆ ಆಗಲೇ ಒಮ್ಮೆ ಅದನ್ನು ಪೂರ್ಣ ಸ್ಥಗಿತಗೊಳಿಸಿ, ಮರುಚಾಲನೆ ನೀಡಿದರೆ ಸರಿಯಾಗುತ್ತದೆ. ಇದಕ್ಕೊಂದು ತಮಾಷೆ ಹೇಳಲೇಬೇಕು. ಮೇ ಇಪ್ಪತ್ತೇಳರಂದು ಗೆಳೆಯ ಅಭಿ “ಇಂದು ಸೈಕಲ್ ಸರ್ಕೀಟ್ ಬರ್ತೀರಾ” ಎಂದು ಕಳಿಸಿದ್ದ ಸಂದೇಶ, ನನಗೆ ಮೂವತ್ತನೇ ತಾರೀಕಿನಂದು, ಪಿಲಿಕುಳದಲ್ಲಿ ಸಿಕ್ಕಿತ್ತು! ಈ ಎಲ್ಲ ಕಾರಣವಾಗಿ ನಮ್ಮ ಜಮ್ಮು ರೈಲು ಪಂಜಾಬ್ ವಲಯ ಕಳೆಯುವುದರೊಳಗೆ ಅಭಯರಶ್ಮಿಯರಿಗೆ ನಾವಿಬ್ಬರೂ `ಕೊನೆಯ ಸಂದೇಶ’ ಕಳಿಸಿ, ನಿದ್ರೆಗೆ ಜಾರಿದೆವು!


[ಸದ್ಯ ಕಥನವನ್ನು ಮುಂದಿನ ಶುಕ್ರವಾರಕ್ಕೆ ಜಾರಿಸುತ್ತೇನೆ. ಇಷ್ಟಕ್ಕೆ ಪ್ರತಿಕ್ರಿಯೆ ಬರೆಯುತ್ತೀರಲ್ಲಾ?]

9 comments:

 1. ಕಡಿದಾದ ಪ್ರಪಾತ, ಕೊರೆಯುವ ಮಳೆಚಳಿಗಳ ಅನುಭವದೊಂದಿಗೆ ಹಸಿವು ನೀರಡಿಕೆಗಳ ಪರಿವೆಯೇ ಇಲ್ಲದೆ ಸಾಹಿತ್ಯಿಕ ರಸ ಸಿಂಚನದೊಂದಿಗೆ ಮುದನೀಡಲಿರುವ ರೋಮಾಂಚಕ ಹೊಸ ಪ್ರವಾಸ ಕಥನ ತರಬಹುದಾದ ಅನುಭವಕ್ಕೆ ಕಾದಿದೆ ಮನ.

  ReplyDelete
 2. ತುಂಬ ಸೊಗಸಾಗಿ ಆರಂಭವಾಗಿದೆ; ಮುಂದಿನ ಕಂತುಗಳಿಗಾಗಿ ಕಾತರದಿಂದ ಕಾಯುತ್ತಿದ್ದೇನೆ.

  ReplyDelete
 3. Nimma pravasa kathana tadavaagiyaadaroo shuru aaitalla emba samaadhaana,olledaagide,bege mundina kanthu haaki.
  Ramaraj P N

  ReplyDelete
 4. ಬೇಗ ನಿದ್ರೆಯಿಂದ ಏಳಿ!
  ಮಾಲಾ

  ReplyDelete
 5. ನಿಮ್ಮ ಕಾಶ್ಮೀರ ಪ್ರವಾಸಕಥನ ಯಾರನ್ನೂ ಹಿಡಿದಿಡಬಲ್ಲದು. ನಾನು ಅಪವಾದವಾಗಲು ಹೇಗೆ ಸಾಧ್ಯ? ಪ್ರವಾಸಕಥನವೆಂದರೆ ಬರೀ ಸ್ಥಳಪುರಾಣವಲ್ಲ ಎನ್ನುವುದನ್ನು ಓದುಗರಿಗೆ ತೋರಿಸಿಕೊಟ್ಟಿದ್ದೀರಿ.
  ಟಿ.ಆರ್. ಅನಂತರಾಮು

  ReplyDelete
 6. ಅನುಭವಿಯ ಹೊಸ ಅನುಭವ ಕಥನ.... ಶೈಲಿ ಎಂದಿನದೇ ಆದರೂ ಕಥೆ ನೂತನ... ಬರುತ್ತಿರಲಿ...ಕಾಯುವೆವು ನಾವು.

  ReplyDelete
 7. JANARDHANA PAI16 July, 2015 23:07

  Photos are excellent

  ReplyDelete
 8. ಚಪ್ಪರ ಮನೆ ಶ್ರೀಧರ ಹೆಗಡೆಯವರ ಮಂಥರೆ !!?? ..... "ಅಜ್ಜಿಗೆ ಶೃಂಗಾರ ಮಾಡಿದಂಗೆ ?....
  ಚೆನ್ನಾಗಿದೆ ವಿಡಂಬನೆ .....

  ReplyDelete
 9. ಇದನ್ನು ಮೊದಲು ಓದಿದ ನೆನಪಿಲ್ಲ. ಹೊಸದಾಗಿಯೇ ಓದಿದೆ ಜಂಗಮವಾಣಿ, ಇಷ್ಟಲಿಂಗಗಳು ಇಲ್ಲಿ ಬಳಕೆಯಾಗಿರುವುದನ್ನು ನೋಡಿ ಸಂಪ್ರದಾಯಸ್ಥರು ಆ ಪದಗಳನ್ನು ಸಂಪ್ರದಾಯದಿಂದ ಹೊರಹಾಕಬಹುದು!

  ReplyDelete