03 March 2015

ಮಿ. ಡಿಕ್ಕರನ್ನು ಕುರಿತಾದ ಅತ್ತೆಯ ಭವಿಷ್ಯವಾಣಿ ನಿಜವಾಯಿತು

ಅಧ್ಯಾ ನಲ್ವತ್ತೈದು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ನಲ್ವತ್ತೇಳನೇ ಕಂತು
ಡಾ| ಸ್ಟ್ರಾಂಗರ ಕಾರ್ಯದರ್ಶಿ ಕೆಲಸವನ್ನು ಬಿಟ್ಟು ಈಗಾಗಲೇ ಕೆಲವು ದಿನಗಳಾಗಿವೆ. ನನ್ನ ಕೆಲಸವನ್ನು ಬಿಟ್ಟರೂ ಅವರ ಮನೆಗೆ ಆಗಿಂದಾಗ್ಗೆ ಹೋಗಿಬರುವುದನ್ನು ಬಿಡಲಿಲ್ಲ. ನಮ್ಮ ಮನೆಗೂ ಅವರ ಮನೆಗೂ ವಿಶೇಷ ದೂರವಿಲ್ಲದಿದ್ದುದು ಹೀಗೆ ಹೋಗಿ ಬರಲು ಬಹಳ ಅನುಕೂಲವಾಗಿತ್ತು. ಕೆಲವೊಮ್ಮೆ ನಾವು ಅಲ್ಲಿಗೆ `ಟೀಪಾರ್ಟಿ’ಗಳಿಗಾಗಿಯೂ ಹೋಗುತ್ತಿದ್ದೆವು. ತನ್ನ ಚಿಕ್ಕ ಪ್ರಾಯದ ಪತ್ನಿಯ ಸಂತೋಷಕ್ಕಾಗಿ ಸಮಾಜದಲ್ಲಿ ನಡೆದುಬರುವ `ಪಾರ್ಟಿ’ಗಳನ್ನೂ ಹಾಸ್ಯ, ವಿನೋದ ಮೊದಲಾದುವುಗಳನ್ನೊಳಗೊಂಡ ಚಟುವಟಿಕೆಗಳನ್ನು ಅವರು ತಮ್ಮ ಮನೆಯಲ್ಲಿ ಆಗಿಂದಾಗ್ಗೆ ಜರುಗಿಸುತ್ತಿದ್ದರು. ಈ ಕೆಲಸಗಳನ್ನೆಲ್ಲ ಅವರು ಬಹು ನಿಷ್ಠೆಯಿಂದಲೇ ನಡೆಸುತ್ತಿದ್ದರು. ಡಾ| ಸ್ಟ್ರಾಂಗರ ಮನೋಭಾವಗಳನ್ನು ಅರಿತಿದ್ದ ಮಿಸೆಸ್ ಮಾರ್ತಲ್ ಹೇಮಳು ತನ್ನ ಮಗಳ ಗೃಹಕೃತ್ಯಗಳಲ್ಲಿ ಸಹಾಯ ಒದಗಿಸಲು ಎಂದಂದುಕೊಂಡು –
ತನಗೆ ಬಹು ಪ್ರಿಯವಾಗಿದ್ದ ವಿಲಾಸ ವಿನೋದಗಳನ್ನು ಅನುಭವಿಸುವುದಕ್ಕಾಗಿಯೇ ಡಾಕ್ಟರ್ ಸ್ಟ್ರಾಂಗರ ಮನೆಯಲ್ಲಿ – ಸಾಧಾರಣ ಶಾಶ್ವತವಾಗಿಯೇ ಎಂಬಷ್ಟರ ಮಟ್ಟಿನಲ್ಲಿ ನೆಲೆಸಿಬಿಟ್ಟಿದ್ದಳು. ಡಾಕ್ಟರರ ಪತ್ನಿಗೆ ಇಷ್ಟವಿಲ್ಲದಿದ್ದರೂ ಈ `ಸಿಪಾಯಿ’ಯು (ಮಿಸೆಸ್ ಮಾರ್ತಲ್ ಹೇಮಳನ್ನು ನಾವು ಹಾಗೆಯೇ ಹಿಂದಿನಿಂದ ಹೇಳಿಕೊಳ್ಳುದ್ದಿದ್ದೇವಷ್ಟೆ) “ಎನ್ನೆ, ಇಂದು ಕವೆಂಟ್ ಗಾರ್ಡನ್ನಿನ ಅಪೇರ ನೋಡಲು ಹೋಗೋಣ. ನಾಡಿದ್ದು ಮಾರ್ಕೆಟ್ ವಠಾರದ ವಸ್ತುಪ್ರದರ್ಶನ ನೋಡಲು ಹೋಗೋಣ” ಎಂದು ಮೊದಲಾಗಿ ಹೇಳಿ ಮಗಳನ್ನು ಒತ್ತಾಯಪಡಿಸಿ ಕರೆದುಕೊಂಡು ಹೋಗುತ್ತಿದ್ದಳು.

ಮಿ. ಡಿಕ್ಕರು ಒಂದು ದಿನ ಹಠಾತ್ತಾಗಿ ನನ್ನ ಹತ್ತಿರ ಬಂದು ಕುಳಿತುಕೊಂಡು, ಏನೋ ಒಂದು ವಿಶೇಷ ಕಾರ್ಯಕ್ಕಾಗಿ ಬಂದಿದ್ದವರಂತೆ ಗಂಭೀರ ಮುಖಮುದ್ರೆಯಿಂದ ಸ್ವಲ್ಪ ಹೊತ್ತು ನನ್ನನ್ನೇ ನೋಡಿ, ಕೊನೆಗೆ,
“ಮಿ. ಕಾಪರ್ಫೀಲ್ಡ್, ನಿಮ್ಮಲ್ಲಿ ಕೆಲವು ಮಾತುಗಳನ್ನು ಕೇಳಬೇಕೆಂದಿದ್ದೇನೆ” ಅಂದರು.
“ಕೇಳಿ, ಮಾತಾಡೋಣ” ಅಂದೆ ನಾನು.
“ವಿಶೇಷವೇನೂ ಇಲ್ಲ – ನಿಮ್ಮ ಅತ್ತೆಯಷ್ಟು ಬುದ್ಧಿವಂತೆ ಹೆಂಗುಸು ಬೇರೊಬ್ಬಳಿಲ್ಲ” ಅಂದರು.
“ಅದಕ್ಕೆ ಸಂಶಯವೇನು?” ಅಂದೆ ನಾನು.
“ಡಾಕ್ಟರ್ ಸ್ಟ್ರಾಂಗರೂ ಬಹು ಬುದ್ಧಿವಂತರೂ ಘನಸ್ಥರೂ ಅಲ್ಲವೇ ಟ್ರಾಟೂಡ್?”
“ಅದಕ್ಕೂ ಸಂಶಯವಿಲ್ಲ; ಅವರೂ ಬುದ್ಧಿವಂತರು, ಗೌರವಾನ್ವಿತರು ಮತ್ತು ಮಹಾ ಜ್ಞಾನಿಗಳು.”
“ಅವರಿಗಾಗಿ ನಾನು ಮಾಡುತ್ತಿರುವ ಪ್ರಯತ್ನ ಗೊತ್ತಿದೆಯೇ?” ಎಂದು ಪ್ರಶ್ನಿಸಿದರು.
“ಇಲ್ಲ, ಏನದು?”
“ಅವರೂ ಅವರ ಪತ್ನಿಯವರೂ…" ಎಂದಿಷ್ಟೇ ಹೇಳಿ, ಆ ಮಾತು ಮುಂದುವರಿಸದೆ, ಇನ್ನೊಂದು ವಿಷಯಕ್ಕೆ ಪ್ರವೇಶಿಸಿದಂತೆ –
“ಟ್ರಾಟೂಡ್, ಅವರೂ… ಅವರ ಪತ್ನಿಯವರೂ ಯೋಗ್ಯರಲ್ಲವೆ?” ಎಂದು ಕೇಳಿದರು.
“ಖಂಡಿತವಾಗಿಯೂ ಹೌದು” ಎಂದು ನಾನು ಉತ್ತರವಿತ್ತೆನು.
“ಅವರೂ ಅವರ ಪತ್ನಿಯವರೂ (ಇದೆಲ್ಲಾ ಗೋಪ್ಯವಾಗಿರಲಿ) ಸುಖವಾಗಿರಬೇಕೆಂದೂ ನಾನು ಮನವಿ ಬರೆದು ಗಾಳಿಪಟದ ಮುಖಾಂತರ ಕಳುಹಿಸುತ್ತಿರುತ್ತೇನೆ, ಉತ್ತರವಿನ್ನೂ ಬರಲಿಲ್ಲ. ನನ್ನ ಈ ಪ್ರಯತ್ನ ಏನೆಂದು ಗೊತ್ತಿದೆಯೇ ಟ್ರಾಟ್?” ಎಂದು ಮಿ. ಡಿಕ್ಕರು ಕೇಳಿದರು. ಇಷ್ಟು ಮಾತು ನಮ್ಮೊಳಗೆ ನಡೆದು ಮುಗಿಯುವಷ್ಟರಲ್ಲೇ ಅತ್ತೆಯೂ ಡೋರಾಳೂ ನಾವಿದ್ದಲ್ಲಿಗೆ ಬಂದರು. ಹೀಗಾಗಿ ನಮ್ಮ ಮಾತು ಅಲ್ಲಿಗೇ ನಿಂತಿತು.

ಈ ಮಾತುಗಳು ನಡೆದ ಕೆಲವು ದಿನಗಳನಂತರ ಒಂದು ದಿನ ನಾನೂ ಅತ್ತೆಯೂ ಡಾಕ್ಟರ್ ಸ್ಟ್ರಾಂಗರ ಮನೆಗೆ ಹೋದೆವು. ಮಿಸೆಸ್ ಸ್ಟ್ರಾಂಗಳು ನಮ್ಮನ್ನು ಎದುರುಗೊಂಡು ಒಳಗೆ ಕರೆದುಕೊಂಡು ಹೋಗಿ ಆಸನಗಳನ್ನಿತ್ತು ನಮ್ಮನ್ನು ಕುಳ್ಳಿರಿಸಿದಳು. ಅನಂತರ ಅವಳೂ ನಮ್ಮ ಜತೆಯಲ್ಲೇ ಕುರ್ಚಿಯಲ್ಲಿ ಕುಳಿತು ಮಾತಾಡತೊಡಗಿದಳು. ಹೀಗೆ ನಾವು ಸ್ವಲ್ಪ ಮಾತಾಡುತ್ತಿದ್ದಾಗ ಮಿಸೆಸ್ ಮಾರ್ತಲ್ ಹೇಮಳು ತನ್ನ ಬೀಸಣಿಗೆಯನ್ನೂ ವೃತ್ತಪತ್ರಿಕೆಯನ್ನೂ ಹಿಡಿದುಕೊಂಡು ನಮ್ಮ ಜತೆಯಲ್ಲೇ ಬಂದು ಕುಳಿತಳು. ಅವಳು ಆಗಲೇ ಮಗಳನ್ನು ಕರೆದು,
“ಎನ್ನೆ, ಡಾಕ್ಟರರ ಕೋಣೆಯಲ್ಲಿ ಇಬ್ಬರು ಗೃಹಸ್ಥರಿರುವರಷ್ಟೆ – ಅವರಿದ್ದುದನ್ನು ನನಗೇಕೆ ತಿಳಿಸಲಿಲ್ಲ?” ಎಂದು ಕೇಳಿದಳು.
“ಅಲ್ಲಿ ಯಾರಿದ್ದದ್ದೂ ನನಗೆ ಗೊತ್ತಿಲ್ಲ” ಅಂದಳು ಮಗಳು.
“ಅಲ್ಲಿದ್ದವರ ಮಾತು ಕೇಳಿ ನಾನು ಡಾಕ್ಟರರ ಕೋಣೆಗೆ ಹೋದೆ. ಅಲ್ಲಿದ್ದವರು ವಕೀಲರಂತೆ ತೋರಿದರು. ನಾನಲ್ಲಿಗೆ ತಲಪುವಾಗಲೇ ಅವರಿಬ್ಬರು ತಮ್ಮ ಕೆಲಸ ಪೂರೈಸಿ ಹೊರಟಿದ್ದಂತೆ ತೋರಿದರು. ಡಾಕ್ಟರ್ ಸ್ಟ್ರಾಂಗರು ತಮ್ಮ ಮೇಜಿನ ಮೇಲಿದ್ದ ಒಂದು ರಿಕಾರ್ಡು ಕಟ್ಟನ್ನು ಒಂದು ಕೈಯಿಂದ ಮುಟ್ಟಿ ತೋರಿಸಿಕೊಂಡು ಹೇಳುತ್ತಿದ್ದ ಮಾತುಗಳನ್ನು ಕೇಳಿ ನಾನಲ್ಲೇ ನಿಂತೆ ಮಾತ್ರವಲ್ಲ, ಈ ಮೊದಲೇ ಹೋಗಿರಲಿಲ್ಲವಲ್ಲಾ ಎಂದೂ ಗ್ರಹಿಸಿದೆ. ನೀನಾದರೂ ಹೋಗಬಹುದಿತ್ತು ಎನ್ನೆ” ಎಂದು ಸ್ವಲ್ಪ ಅಸಮಾಧಾನ ಸೂಚಿಸುತ್ತಾ ಮಿಸೆಸ್ ಮಾರ್ತಲ್ ಹೇಮಳು ಅಂದಳು. ಇಷ್ಟರಲ್ಲಿ ಮಿಸೆಸ್ ಸ್ಟ್ರಾಂಗಳು ನಮ್ಮ ಕೋಣೆಯಿಂದ ಹೋದಳು.

ಅನಂತರ ಸ್ವಲ್ಪ ಸುಮ್ಮನಿದ್ದು, ನಮ್ಮೆಲ್ಲರ ಸಮಕ್ಷಮದಲ್ಲಿ ಹೇಳಬಾರದೋ ಎಂದು ಗ್ರಹಿಸಿಕೊಂಡು, ಹೇಳಿದರೆ ತಪ್ಪಿಲ್ಲವೆಂಬಂತೆ, ಮಿಸೆಸ್ ಮಾರ್ತಲ್ ಹೇಮಳು ಪುನಃ ಹೇಳತೊಡಗಿದಳು –
“ನಾನು ಆ ಕಡೆ ಹೋಗಬೇಕಾಯ್ತು, ಏಕೆಂದರೆ ಈ ಮನೆಯಲ್ಲಿ ದೀಪ ಹೊತ್ತಿಸಿಡುವ ಪದ್ಧತಿ ಬಹು ಕಡಿಮೆ. ನಾನು ಕುಳಿತು ಪತ್ರಿಕೆಯನ್ನೋದಲು ಅನುಕೂಲವಾದ ಸ್ಥಳ ಸಿಕ್ಕದೇ ಕೊನೆಗೆ  ಡಾಕ್ಟರರ ಕೋಣೆಗೆ ಹೋದೆನು. ಅಲ್ಲಿ ಕರುಣಾಳುಗಳಾದ – ಮಗುವಿನಂತಿರುವ, ಡಾಕ್ಟರ್ ಸ್ಟ್ರಾಂಗರು ಹೇಳುತ್ತಿದ್ದ ಮಾತು ಹೀಗಿತ್ತು: `ಈ ರಿಕಾರ್ಡಿನ ಒಕ್ಕಣೆಗಳಿಂದ ನನ್ನ ಪತ್ನಿಯನ್ನು ನಾನು ಎಷ್ಟೊಂದು ಪ್ರೀತಿಸಿ ಗೌರವಿಸುತ್ತಿದ್ದೇನೆಂಬುದೂ ಅವಳ ಸುಖಕ್ಕಾಗಿ ಎಲ್ಲಾ ಆಸ್ತಿಗಳನ್ನೂ ಯಾವ ಶರ್ತವನ್ನೂ ಹಾಕದೆ ಅವಳಿಗೆ ವಹಿಸಲಾಗಿದೆಯೆಂಬುದೂ ಸ್ಪಷ್ಟವಾಗುತ್ತದಷ್ಟೆ’ ಎಂದು.” ಬಹು ಹಿಗ್ಗಿನಿಂದ ಹೇಳುತ್ತಾ ಬೀಸಣಿಗೆಯನ್ನು ಬೀಸಿಕೊಂಡಳು.

ಈ ಮಾತು ಕೇಳುತ್ತಿದ್ದ ಹಾಗೆ ಅತ್ತೆಗೆ ಸಿಟ್ಟು ಬರತೊಡಗಿತ್ತು. ಆದರೆ ಮಿಸೆಸ್ ಮಾರ್ತಲ್ ಹೇಮಳು ಯಾವುದನ್ನು ಊಹಿಸದೆ, ಗ್ರಹಿಸದೆ ತನ್ನ ಸಿಯಾಯಿಗಿರಿಯನ್ನೆಲ್ಲ ಹೇಳಿಕೊಂಡಳು. ಅವಳ ಮಾತುಗಳ ಮುಖ್ಯ ಸಾರಾಂಶ: ಡಾಕ್ಟರ್ ಸ್ಟ್ರಾಂಗರು ವೃದ್ಧರೂ ಹಣವಂತರೂ ಆಗಿರುವಾಗ, ಚಿಕ್ಕ ಪ್ರಾಯದವಳೂ ಸುಂದರಿಯೂ ಆಗಿದ್ದ ಎನ್ನೆಯನ್ನು ಕೊಟ್ಟು ಮದುವೆ ನಡೆಸಿದ್ದ ಸಂಬಂಧವಾಗಿ ಉಭಯ ಪಕ್ಷದವರೂ ತಂತಮ್ಮ ಲಾಭ ಮತ್ತೂ ಅನುಕೂಲಗಳನ್ನು ಪಡೆದುಕೊಳ್ಳುವುದು ನ್ಯಾಯವೂ ಸಮರ್ಥನೆಯೂ ಆಗಿತ್ತು. ಅವಳ ಮಾತು ಮುಗಿದನಂತರ, ಆ ಮನೆಯಲ್ಲಿ ತಾನು ಹಿರಿಯಳೂ ಸರ್ವಾಧಿಕಾರಿಯೂ ಎಂಬಂತೆ ವರ್ತಿಸುತ್ತಾ ನಮ್ಮನ್ನೆಲ್ಲ ಒತ್ತಾಯದಿಂದ ಡಾಕ್ಟರರ ಆಫೀಸಿಗೆ ಕರೆದುಕೊಂಡು ಹೊರಟಳು. ಅತ್ತೆ ಮಿಸೆಸ್ ಮಾರ್ತಲ್ ಹೇಮಳನ್ನು ಕುರಿತು ಕೋಪ ಏರುತ್ತಿದ್ದರೂ ಡಾಕ್ಟರರ ಮೇಲಿನ ಗೌರವಕ್ಕಾಗಿ ಕೋಪವನ್ನು ತಡೆಹಿಡಿದು, ನಮ್ಮ ಜತೆಯಲ್ಲಿ ಬಂದಳು.

ಡಾಕ್ಟರರಿದ್ದ ಕೋಣೆಯಲ್ಲಿ ಮಾತ್ರ ದೀಪ ಉರಿಯುತ್ತಿದ್ದು, ನಾವು ದಾಟಿ ಹೋಗುತ್ತಿದ್ದ ಕೋಣೆಗಳಲ್ಲಿ ದೀಪವಿರಲಿಲ್ಲ. ಡಾಕ್ಟರರ ಆಫೀಸಿನ ಬಾಗಿಲು ತೆರೆದಿದ್ದು, ಆ ಕೋಣೆಯ ಒಳಗಿನವರನ್ನು ನಾವು ನೋಡಬಹುದಾಗಿತ್ತು. ಆದರೆ ನಾವು ಕತ್ತಲೆಯಲ್ಲೇ ಹೋಗುತ್ತಿದ್ದುದರಿಂದ ಅಲ್ಲಿನವರಿಗೆ ನಾವು ಕಾಣಿಸಿಕೊಳ್ಳುತ್ತಿರಲಿಲ್ಲ. ಮಿಸೆಸ್ ಮಾರ್ತಲ್ ಹೇಮಳ ಅವಸರದ ಮುಂದಾಳುತನದಲ್ಲಿ ನಾವು ಡಾಕ್ಟರರ ಕೋಣೆಗೆ ಸೀದಾ ನುಗ್ಗಿಬಿಡುವುದರಲ್ಲಿದ್ದೆವು. ಆದರೆ ಅಷ್ಟರಲ್ಲೇ ಇನ್ನೊಂದು ಬಾಗಿಲಿನಿಂದ ಮಿ. ಡಿಕ್ಕರು ಮಿಸೆಸ್ ಸ್ಟ್ರಾಂಗರನ್ನು ಕರೆದುಕೊಂಡು ಆ ಕೋಣೆಗೆ ನುಗ್ಗಿದುದರಿಂದ ನಾವು ಸ್ವಲ್ಪ ಹಿಂದೆಯೇ – ಕತ್ತಲಲ್ಲಿ, ನಿಂತೆವು. ಮಿ. ಡಿಕ್ಕರು ಡಾಕ್ಟರರ ಪತ್ನಿಯನ್ನು ತಾವು ಕರೆದುಕೊಂಡು ಹೋಗಿ ಒಪ್ಪಿಸುವ ಕ್ರಮದಲ್ಲಿ ಅಲ್ಲಿಗೆ ಬಂದದ್ದನ್ನು ಕಂಡು ನಾವು ಸ್ವಲ್ಪ ಅಳುಕಿನಿಂದಲೆ ನಿಂತೆವು. ಮಿ. ಡಿಕ್ಕರು ಡಾಕ್ಟರರ ಪತ್ನಿಯನ್ನು ಪತಿಗೆ ಒಪ್ಪಿಸಿದರು. ಪತ್ನಿಯು ಪತಿಯ ಪಾದಗಳಿಗೆ ಎರಗಿ ಏನನ್ನೋ ಹೇಳಿಕೊಳ್ಳುತ್ತಿದ್ದಳು. ಪತಿಯು ಪತ್ನಿಯ ಎರಡು ಕೈಗಳನ್ನು ಮೇಲೆತ್ತಿ, ಅವಳನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದರು. ಮಿಸೆಸ್ ಸ್ಟ್ರಾಂಗಳು ಪತಿಯ ಮುಖವನ್ನು ನೋಡಿ ಮಾತಾಡುವಷ್ಟರಲ್ಲೇ ಅಲ್ಲಿನ ಬೆಳಕಿನ ಕೆಲವು ಸಂದರ್ಭಗಳ ಕಾರಣವಾಗಿ, ನಮ್ಮನ್ನು ಕಂಡು ಗುರುತಿಸಿದಳು. ಅಲ್ಲಿನ ಪರಿಸ್ಥಿತಿಗಳನ್ನು ಕಂಡು ನಾವು ಒಳಗೆ ಪ್ರವೇಶಿಸುವ ಬದಲು ದೂರಸರಿಯಬೇಕೆಂದಿರುವಾಗಲೇ ಮಿಸೆಸ್ ಸ್ಟ್ರಾಂಗಳು ನಮ್ಮೆಲ್ಲರನ್ನುದ್ದೇಶಿಸಿ –
“ದಯಮಾಡಿ ನೀವೆಲ್ಲರೂ ಒಳಗೆ ಬನ್ನಿ – ಯಾರೂ ದೂರ ಸರಿಯಬೇಡಿ” ಎಂದು ಕೇಳಿಕೊಂಡಳು. ನಾವೆಲ್ಲರೂ ಅವಳ ಅಪೇಕ್ಷೆಯ ಮೇರೆಗೆ ಆ ಕೋಣೆಯನ್ನು ಪ್ರವೇಶಿಸಿದೆವು.

ಅತ್ತೆಯನ್ನೂ ನನ್ನನ್ನೂ ಕಂಡು ಮಿ. ಡಿಕ್ಕರಿಗಾದ ಸಂತೋಷ ಅಷ್ಟಿಷ್ಟಲ್ಲ. ಅವರ ಮಹತ್ಕಾರ್ಯವನ್ನು ಅರ್ಥ ಮಾಡಿ ಸಂತೋಷಿಸಬಲ್ಲ ನಾವಿಬ್ಬರೂ ಏಕಕಾಲದಲ್ಲಿ – ಆ ಸನ್ನಿವೇಶದಲ್ಲಿ, ಬಂದದ್ದೇ ಅವರ ಸಂತೋಷಕ್ಕೆ ಕಾರಣ. ಅತ್ತೆಗೂ ಮಿ. ಡಿಕ್ಕರನ್ನು ಅಲ್ಲಿ – ಅಂಥ ಮಹತ್ವದ ಸನ್ನಿವೇಶ, ಪ್ರಸಂಗಗಳಲ್ಲಿ, ಕಂಡು ಆದ ಸಂತೋಷವೂ ಬಹುವಾದದ್ದೇ ಆಗಿತ್ತು. ಅತ್ತೆ ತನಗೆ ತಾನೇ ಅಂದುಕೊಂಡಳು – “ಆ ಮನುಷ್ಯನನ್ನು ಹುಚ್ಚಾಂತ ಅನ್ನುವವರೆಲ್ಲ ಹುಚ್ಚರು” ಎಂದು.

ಅತ್ತ ಡಾಕ್ಟರರು ತನ್ನ ಪತ್ನಿಯನ್ನು ಪ್ರೀತಿಯಿಂದ ನೋಡುತ್ತಾ –
“ಎನ್ನೆ, ನನ್ನ ಪಾದದ ಮೇಲೆ ಬೀಳಬೇಡ, ಏಳು” ಎಂದು ಹೇಳಿದರು.
“ಎನ್ನೆ, ಏಳು – ತಾಯಿಗೂ ಇಲ್ಲಿರುವವರೆಲ್ಲರಿಗೂ ನಿನ್ನ ವರ್ತನೆಯು ಅಪಮಾನಕರ” ಎಂದಂದಳು ಮಿಸೆಸ್ ಮಾರ್ತಲ್ ಹೇಮಳು.
“ಅಮ್ಮಾ, ನಾವು – ಪತಿ-ಪತ್ನಿಯರ ಮಧ್ಯೆ ನಿನ್ನ ಪ್ರವೇಶವು ಅನಗತ್ಯ. ಸಂದರ್ಭಗಳು ಹಾಗಿವೆ” ಎಂದಂದಳು ಮಗಳು, ಮಿಸೆಸ್ ಸ್ಟ್ರಾಂಗ್.

ಮಿಸೆಸ್ ಮಾರ್ತಲ್ ಹೇಮಳು ಈ ಮಾತಿನಿಂದ ಬಹು ಗಾಬರಿಗೊಂಡಳು ಮತ್ತು ನಮ್ಮನ್ನೆಲ್ಲ ನೋಡುತ್ತಾ –
“ಓ ದೇವರೆ! ನನ್ನ ಪ್ರವೇಶ ಅನಗತ್ಯವೆ! ಏನು, ನಾನು ಅನಗತ್ಯ! ಸಹಿಸಲಾರೆ – ಯಾರಲ್ಲಿ? ಒಂದು ಗ್ಲಾಸು ತಣ್ಣೀರು!” ಎಂದು ಹೇಳುತ್ತಾ ಇಂಥ ದುಃಖ ಮತ್ತು ಅಪಮಾನಕರ ಸಂದರ್ಭಗಳಲ್ಲಿ ಮೂರ್ಛೆ ಹೋಗುವುದು ಮರ್ಯಾದೆಯೆಂದು ನಿಶ್ಚೈಸಿ, ಅಂಥ ಪ್ರಸಂಗಕ್ಕೆ ಬೇಕಾದ ನೀರನ್ನು ಮಿಸೆಸ್ ಮಾರ್ತಲ್ ಹೇಮಳು ಕೇಳಿದಳು. ಯಾರೂ ನೀರನ್ನು ತರದೆಯೂ ಅವಳು ಮೂರ್ಛಿತಳಾಗದೆಯೂ ಉಳಿದದ್ದರಿಂದ, ಕೊನೆಗೆ ಅವಳು ಅವಳ ಬೀಸಣಿಗೆಯನ್ನು ಬೀಸಿಕೊಂಡು ತಣ್ಣಗಾದಳು.

“ಎನ್ನೆ, ಏನೋ ಕೆಲವು ಸಂದರ್ಭಗಳಿಂದ ನಮ್ಮಿಬ್ಬರೊಳಗಿನ ನಡವಳಿಕೆಗಳು ಸರಿಯಾಗಿಲ್ಲವೆಂದಾಗಲೀ ಅಥವಾ ಸ್ವಲ್ಪ ಬದಲಾಗಿವೆಯೆಂದಾಗಲೀ ತೋರಿದ್ದಿದ್ದರೆ, ಕಳೆದುಹೋದುದಕ್ಕೆ ನೀನು ಚಿಂತಿಸಬೇಡ. ನಿನ್ನ ಮೇಲಿನ ನನ್ನ ಪ್ರೇಮವೂ ವಿಶ್ವಾಸವೂ ಗೌರವವೂ ಅಚಲವಾಗಿಯೂ ಪೂರ್ಣವಾಗಿಯೂ ನಿಂತಿವೆ. ನನ್ನಲ್ಲಿ ತೋರಿರಬಹುದಾದ ಬದಲಾವಣೆಗಳೆಲ್ಲ ಅರಿಯದೆ ಆಗಿ ಹೋದವು ಮಾತ್ರ. ಆ ಅಪರಾಧಗಳ ಬಗ್ಗಾಗಿ ನನ್ನನ್ನು ಕ್ಷಮಿಸು. ನೀನು ಪರಿಪೂರ್ಣ ಶುದ್ಧಳಾಗಿಯೇ ಇರುವೆ, ಏಳು” ಎಂದು ಡಾಕ್ಟರರು ಪತ್ನಿಯನ್ನು ಸಂತೈಸುತ್ತಾ ನುಡಿದರು.

“ನನ್ನ ಪತಿಯೊಡನೆ ಕೆಲವು ವಿಷಯಗಳನ್ನು ಹೇಳಿಕೊಳ್ಳಬೇಕೆಂಬ ಲವಲವಿಕೆ ನನಗೆ ಬಹು ಸಮಯದಿಂದಲೇ ಇತ್ತು. ಅಷ್ಟು ಅಲ್ಲದೆ, ಕೆಲವು ವಿವರಗಳನ್ನು ಅವರಲ್ಲಿ  ವಿಜ್ಞಾಪಿಸಿಕೊಂಡು ಅವರ ಕ್ಷಮೆಯನ್ನು ಬೇಡ ಬೇಕಾದ ಪ್ರಸಂಗಗಳು ಇತ್ತೀಚೆಗೆ ಇಲ್ಲಿ ನಡೆದಿವೆ. ಈ ಹೊತ್ತಿನಂಥ ಒಂದು ಸಂದರ್ಭವನ್ನು ಕಾಯುತ್ತಾ ಈವರೆಗೆ ಕುಳಿತಿದ್ದೆ. ಈ ಹೊತ್ತು ಅಂಥ ಯೋಗ್ಯ ಸಂದರ್ಭವು ನನಗೆ ದೊರಕಿದೆ. ನಾವು ಪತಿ-ಪತ್ನಿಯರ ಮಾನಾಪಮಾನಕ್ಕೆ ಸಂಬಂಧಪಡುವ ನಮ್ಮ ಎಲ್ಲಾ ಹಿತಚಿಂತಕರೂ ಇಂದಿಲ್ಲಿ ಸೇರಿರುವರು. ನಿಮ್ಮಲ್ಲೆ ಯಾರಾದರೂ ನಮ್ಮನ್ನು ಕುರಿತಾಗಿ ಏನಾದರೂ ಆಲೋಚಿಸುತ್ತಿದ್ದರೆ – ಹಿಂದೆ ಆಲೋಚಿಸಿದ್ದಿದ್ದರೆ, ಎಲ್ಲವನ್ನೂ ದಾಕ್ಷಿಣ್ಯವಿಲ್ಲದೆ ಹೇಳಬೇಕು. ಹೇಳತಕ್ಕ ವಿಷಯಗಳು ನಿಮ್ಮಲ್ಲಿವೆಯೆಂಬುದನ್ನು ನಾ ಬಲ್ಲೆ. ಸತ್ ಪ್ರಚಾರವೋ ಅಪಪ್ರಚಾರವೋ – ಬಹಿರಂಗಪಡಿಸಬೇಕಾದುದೋ ಗೋಪ್ಯವಾಗಿಡಬೇಕಾದುದೋ ಎಂದು ಸಹ ವಿಚಾರಿಸದೆ, ದಯಮಾಡಿ, ತಿಳಿಸಿರಿ. ಮರ್ಯಾದೆ, ದಾಕ್ಷಿಣ್ಯ ಎಂದು ಗ್ರಹಿಸಿ ವಿಷಯಗಳನ್ನು ಬಚ್ಚಿಟ್ಟರೆ, ನಿಮಗೆ ತಿಳಿಯದೇ ನಮಗೆ ಅಪಮಾನವಾಗಬಹುದು. ನಿಮ್ಮ ಅಭಿಪ್ರಾಯ, ಅನುಭವಗಳನ್ನು ಬಹಿರಂಗಪಡಿಸಿದರೆ ನಮಗಿಬ್ಬರಿಗೂ ಉಪಕಾರವೇ ಆಗುವುದೆಂದು ವಿನಂತಿಸಿಕೊಳ್ಳುತ್ತೇನೆ” ಎಂದು ಮಿಸೆಸ್ ಸ್ಟ್ರಾಂಗಳು ಬಹು ವಿನಯದಿಂದ ನಮ್ಮೊಡನೆ ಹೇಳಿಕೊಂಡಳು.

ಸುಂದರಿಯೂ ಯೌವ್ವನೆಯೂ ಆಗಿದ್ದ ಮಿಸೆಸ್ ಸ್ಟ್ರಾಂಗಳು ಈಗ್ಗೆ ಅನೇಕ ದಿನಗಳಿಂದ ಕಳೆಗುಂದಿ, ಬಾಡಿ, ಮ್ಲಾನಳಾಗಿ ತೋರುತ್ತಿದ್ದಳು. ಈ ರಾತ್ರಿ ಅವಳು ನಮ್ಮಲ್ಲಿ ಈ ರೀತಿ ವಿನಂತಿಸಿಕೊಳ್ಳುವಾಗ ದುಃಖ, ಉದ್ವೇಗ, ಧರ್ಮಭಯ, ಇವುಗಳಿಂದೆಲ್ಲ ಕೂಡಿ, ತುಂಬಾ ತೇಜೋವಂತಳಾಗಿಯೇ ತೋರುತ್ತಿದ್ದಳು. ಅವಳಂದಿದ್ದ ಮಾತುಗಳು ನನಗೆ ಸಂಬಂಧಿಸಿದುವು ಎಂಬುದು ನನಗೆ ಗೊತ್ತಿತ್ತು. ಹಾಗಾಗಿ, ನಾನು ಸ್ವಲ್ಪ ಆಲೋಚಿಸಿ, ಹಿಂದೆ ಉರೆಯ ಮಿ. ವಿಕ್ಫೀಲ್ಡರ ಸಮಕ್ಷಮದಲ್ಲಿ ನಾನಿದ್ದಾಗ ಹೇಳಿದ ಮಾತುಗಳನ್ನೂ ನಡೆದ ಸಂಗತಿಗಳನ್ನೂ ಹೇಳಿದೆ.

ನನ್ನ ಮಾತುಗಳನ್ನಾಡುತ್ತಿದ್ದಾಗ, ಮಿಸೆಸ್ ಮಾರ್ತಲ್ ಹೇಮಳ ಮುಖವನ್ನು ಯಾರಾದರೂ ನೋಡಿದ್ದಿದ್ದರೆ `ವಿಸ್ಮಯ’ ಶಬ್ದದ ಒಂದು ಪ್ರತಿಮೆಯೇ ಅವಳೆಂಬಂತೆ ತೋರುತ್ತಿದ್ದಳು.

ನನ್ನ ಯಾವ ಮಾತುಗಳಿಂದಲೂ ಗಾಬರಿಗೊಳ್ಳದೆ, ಬಹು ಸಮಾಧಾನದಿಂದ ಮಿಸೆಸ್ ಸ್ಟ್ರಾಂಗಳು ಪುನಃ ಮಾತಾಡಿದಳು –
“ಪ್ರಿಯ ಪತಿಯೇ, ನಿಮ್ಮ ಮನಸ್ಸಿನಲ್ಲಿ ನನ್ನನ್ನು ಕುರಿತು ಯಾವ ವಿಧದ ಸಂಶಯವೂ ಇರಲಿಲ್ಲವೆಂದು ನನಗೆ ಗೊತ್ತಿತ್ತು. ನೀವು ದಯಾಳುಗಳೂ ಕರುಣಾವಂತರೂ ಉದಾರಿಗಳೂ ಆಗಿ ಸದಾ ವರ್ತಿಸಿರುವಿರಿ. ಆದರೆ ನಮ್ಮ ಬಡ ತವರು ಮನೆಯವರು ನಿಮ್ಮ ಆ ಸದ್ಗುಣಗಳನ್ನೆಲ್ಲ ದುರುಪಯೋಗಪಡಿಸುತ್ತಾ ನನ್ನ ಅನುರಾಗವನ್ನು ನಿಮಗೆ ಹಣಕ್ಕೆ ಮಾರಿರುವವರಂತೆ ನಿಮ್ಮ ಹಣ, ಸಹಾಯ, ಹೆಸರು, ಪ್ರತಿಷ್ಠೆ ಎಲ್ಲವನ್ನೂ ತಮ್ಮ ಸ್ವಂತ ಸುಖಕ್ಕೆ – ಅಷ್ಟು ಮಾತ್ರವಲ್ಲ, ತಮ್ಮ ದುಷ್ಟ ವಿಲಾಸಗಳಿಗಾಗಿ ಉಪಯೋಗಿಸುತ್ತಿದ್ದುದನ್ನೂ ಈ ಸಂದರ್ಭದಲ್ಲಿನ ಅವರ ಮನೋಧರ್ಮವನ್ನೂ ನೋಡಿ, ಗ್ರಹಿಸಿ, ಸಹಿಸಲಾರದೆ ಈವರೆಗೆ ಕಷ್ಟಪಟ್ಟೆ, ದುಃಖಪಟ್ಟೆ.”

ಪತ್ನಿಯ ಈ ಮಾತುಗಳನ್ನು ಕೇಳುತ್ತಾ ಡಾಕ್ಟರರು ಬಹುವಾಗಿ ಮರುಗಿದರು. ಅವರು ಮರುಗುವ ಧ್ವನಿಯಿಂದಲೇ ಪತ್ನಿಯನ್ನು ನೋಡಿ –
“ನಾನು ಉಪಕಾರ ಮಾಡಿದ್ದೆಂದು ನೀನು ಗ್ರಹಿಸುವ ನನ್ನ ಎಲ್ಲಾ ಕಾರ್ಯಗಳನ್ನೂ ನಾನು ಸಂತೋಷದಿಂದಲೇ ಮಾಡಿರುತ್ತೇನೆ. ಆ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಯಾವ ಕಷ್ಟವೂ ಆಗಿರುವುದಿಲ್ಲ. ನನಗೆ ನಿನ್ನ ಮೇಲೆ ಸಂಶಯವಿಲ್ಲವೆಂದು ನೀನು ನಂಬಿರುವುದೇ ನನ್ನ ಭಾಗ್ಯ. ಪ್ರಿಯೇ, ದುಃಖಿಸಬೇಡ, ಏಳು” ಅಂದರು ಡಾ| ಸ್ಟ್ರಾಂಗರು.

“ನಿನ್ನ ತಾಯಿಯ ಎದುರೇ ನೀನು ಈ ರೀತಿ ಹೇಳುವುದು ಸರಿಯೇ ಎನ್ನೆ?” ಎಂದು ಈ ಮಧ್ಯ ತಲೆಹಾಕಿ, ಮಿಸೆಸ್ ಮಾರ್ತಲ್ ಹೇಮಳು ಕೇಳಿದಳು.
“ನಿನ್ನ ಬಾಯಿ ಮುಚ್ಚಿಕೋ, ಮೂರ್ಖೀ. ಅವಳು ಮಾತಾಡಲಿ” ಎಂದು ನನ್ನ ಅತ್ತೆ ಸಿಟ್ಟಿನಿಂದ, ಮಧ್ಯೆ ಪ್ರವೇಶಿಸಿ ಗೌಜು ಮಾಡಿದಳು.

ಈ ಯಾವ ಮಾತುಗಳಿಗೂ ಗಮನವೀಯದೆ ಮಿಸೆಸ್ ಸ್ಟ್ರಾಂಗಳು ಪತಿಯೊಡನೆ ಪುನಃ –
“ನೀವು ಹಾಗೆ ಸಂಶಯಪಡುವವರಲ್ಲವೆಂದು ನಾನು ದೃಢವಾಗಿ ನಂಬಿದ್ದೇನೆ. ನೀವು ನನ್ನ ಬಾಲ್ಯದ ಗುರುಗಳು, ತಾರುಣ್ಯದ ಪತಿ, ವಯಸ್ಸಿನ ತಂದೆ, ನ್ಯಾಯಧರ್ಮಗಳ ವಿರುದ್ಧವಾಗಿ ನಡೆಯುತ್ತಿರುವ ನಮ್ಮ ತವರು ಮನೆಯವರನ್ನು ಕುರಿತು ನಾನು ನಿಮ್ಮೊಡನೆ ಮರೆಮಾಚದೆ ಮಾತಾಡಿ, ನಿಮ್ಮ ಕ್ಷಮೆಯನ್ನು ಬೇಡಲೇ ಅಥವಾ ನನ್ನ ತವರು ಮನೆಯವರ ವಿರೋಧವಾಗಿ ನಿಮ್ಮ ಕರುಣಾಮಯ ಹಸ್ತವನ್ನು ನಾನೇ ಹಿಡಿದು ತಡೆಯಲೇ….” ಎಂದು ಹೇಳುತ್ತಾ ಮಿಸೆಸ್ ಸ್ಟ್ರಾಂಗಳು ಮಾತು ಮುಂದುವರಿಸುವ ಮಧ್ಯೆ ಮಿಸೆಸ್ ಮಾರ್ತಲ್ ಹೇಮಳು ಅಡ್ಡ ಮಾತಾಡಿದಳು. ಅವಳು –
“ಉದಾರಬುದ್ಧಿಯವರ ಔದಾರ್ಯಗಳನ್ನು ತಡೆಹಿಡಿಯುವ….” ಎಂದು ಮಾತುಗಳನ್ನಾಡುತ್ತಿದ್ದಾಗಲೇ, ಅತ್ತೆಯು ಬಹು ಕೋಪದಿಂದ –
“ಹಿಂದೆ ಬೊಗಳಿದ್ದನ್ನೆಲ್ಲಾ ಪುನಃ ಬಿಚ್ಚಬೇಡ ಹುಚ್ಚಿ” ಎಂದಂದುಬಿಟ್ಟಳು. ಆದರೆ, ಮಿಸೆಸ್ ಮಾರ್ತಲ್ ಹೇಮಳು ಯಾವುದನ್ನೂ ಗಣಿಸದೆ ಮುಂದುವರಿಸಿದಳು –
“….ಕ್ರಮ ನ್ಯಾಯವಲ್ಲ. ಅದರಿಂದ ಡಾಕ್ಟರರಿಗೇ ದುಃಖವಾದೀತೆಂಬುದನ್ನು ನೀನು ಗ್ರಹಿಸಿಲ್ಲ. ತಮ್ಮ ಸಂತೋಷದಿಂದ, ಸಂತೋಷಕ್ಕಾಗಿ ಅವರು ಮಾಡಿರುವ ಉಪಕಾರವನ್ನೂ ನನ್ನ ಒತ್ತಾಯದಿಂದ, ಹಿಂಸೆಯಿಂದ ಅವರು ಮಾಡಿರುವುದಾಗಿ, ನನ್ನ ಮಗಳಾಗಿ, ನೀನು ಹೇಳುತ್ತೀಯಲ್ಲಾ ದೇವರೆ!” ಅಂದಳು ಸಿಪಾಯಿ.
“ದೇವರೇ ಅವಳ ನಾಲಿಗೆಯನ್ನು ಕತ್ತರಿಸಬೇಕು” ಎಂದು ತನಗೆ ತಾನೆ ಅಂದುಕೊಂಡಳು, ಈ ಮಾತನ್ನು ಕೇಳಿ ಅತ್ತೆ.

ಅದಕ್ಕೆ ಮಿಸೆಸ್ ಸ್ಟ್ರಾಂಗಳು ಅಂದಳು -
“ಅಮ್ಮಾ, ಸ್ವಲ್ಪ ಗ್ರಹಿಸಿ ನೋಡು – ಡಾಕ್ಟರರ ಖರ್ಚಿನಲ್ಲಿ ಏನೇನೆಲ್ಲಾ ಸುಖ ಅನುಭವಿಸಿದ್ದೀರೆಂದು. ನೀನು ನನ್ನನ್ನು ಒಂದು ಗಾಳದಂತೆ ಉಪಯೋಗಿಸಿ, ನನ್ನನ್ನು ಡಾಕ್ಟರರಿಗೆ ಮಾರಿ ಲಾಭ ಪಡೆದು, ಅವರ ಕೃತಜ್ಞತೆಯನ್ನು ಇಂದು ಬಯಸುತ್ತಿರುವುದು ಯಾವ ಬುದ್ಧಿ?”

ಈ ಮಾತನ್ನು ಸಹಿಸಲಾರದೆ ಮಿಸೆಸ್ ಮಾರ್ತಲ್ ಹೇಮಳು ಅಂದಳು –
“ಇವಳಿಗೆ ಬುದ್ಧಿ ಕಲಿಸಲು ನಾನೊಬ್ಬ ತುರ್ಕಿಯವಳಾಗಿರಬೇಕಿತ್ತು!”

ಈ ಮಾತಿಗೆ ಯಾರು ಉತ್ತರ ಕೊಡದಿದ್ದರೂ ಅತ್ತೆ ಸ್ವಲ್ಪ ಗಟ್ಟಿಯಾಗಿಯೇ ಅಂದಳು –
“ಹೌದು, ಹೌದು – ನಿನ್ನಲ್ಲಿ ತುರ್ಕಿಯ ಸ್ವಭಾವವೇನೋ ಇದೆ, ನೀನಿಲ್ಲಿ ಇರಬಾರದಿತ್ತು. ನೀನು ತುರ್ಕಿಸ್ಥಾನದಲ್ಲಿ ಇದ್ದಿದ್ದರೆ ಎಲ್ಲರಿಗೂ ಸುಖವಿತ್ತು.”

ಮಿಸೆಸ್ ಸ್ಟ್ರಾಂಗಳು ಅವಳ ಕಡೆ ಮಾತನ್ನು ಮುಂದರಿಸುತ್ತಾ ತಾಯಿಯನ್ನೇ ಕುರಿತು, ದುಃಖದಿಂದ ಹೇಳಿದಳು –
“ನಾನು ನಿಮ್ಮೆಲ್ಲರಿಗಾಗಿಯೂ ನನ್ನ ಪ್ರಿಯ ಪತಿಗಾಗಿಯೂ ಸಹಿಸಿದ ಕಷ್ಟ, ಬಿಗಿಹಿಡಿದ ಮನಸ್ಸು ಎಷ್ಟೆಂದು ಹೇಳಲಿ! ಮೊದಮೊದಲು ನಿಮ್ಮ ಆಸೆಗೆ ಮಿತಿಯುಂಟೆಂದು ಗ್ರಹಿಸಿ ಸುಮ್ಮನಿದ್ದೆ. ಆ ಮಿತಿಯು ಮೀರುತ್ತಾ ನಿನ್ನ ತಮ್ಮನನ್ನು ಇಂಡಿಯಾ ದೇಶಕ್ಕೆ ಕಳುಹಿಸುವ ದೊಡ್ಡ ಖರ್ಚನ್ನೂ ಮಾಡಿ ಕೊಟ್ಟು ನೋಡಿದ್ದಾಯಿತು. ಅಷ್ಟು ಮಾಡಿಯೂ ನಿಮ್ಮ ಎರಡು ಮುಖದ ವರ್ತನೆಯನ್ನು ನೀವು ಬಿಡಲಿಲ್ಲ. ಡಾಕ್ಟರರ ಬಂಧುಗಳು, ಹಿತಚಿಂತಕರು ಎಂದು ಒಂದು ಮುಖದಿಂದ ತೋರಿಸುತ್ತಾ ಇನ್ನೊಂದರಿಂದ ಸ್ವಾರ್ಥವನ್ನು ಮಾತ್ರ ಸಾಧಿಸಿ ಸುಖಪಡತೊಡಗಿದಿರಿ. ಮಿ. ವಿಕ್ಫೀಲ್ಡರೂ ಇತರ ಕೆಲವರು ನನ್ನನ್ನು ಕುರಿತು ದುರ್ನಡತೆಯವಳೆಂದು ಸಂಶಯಪಡಲು ಕಾರಣರೂ ನಿನ್ನ ಸಮೇತ, ನನ್ನ ತವರುಮನೆಯವರೇ ಆಗಿದ್ದಾರೆ. ಜೇಕ್ ಮಾಲ್ಡನ್ನನೂ ನಾನೂ ಬಾಲ್ಯದ ಸ್ನೇಹಿತರಾಗಿದ್ದುದರಿಂದ ಮಾತ್ರ ಡಾಕ್ಟರರ ಮನೆಯಲ್ಲಿ ಅವನು ನನ್ನೊಡನೆ ಅಷ್ಟು ಸಲಿಗೆಯಿಂದಿರಲು ಕಾರಣವಾಯಿತು. ಬಾಲ್ಯದಲ್ಲಿ ನನ್ನ ಮತ್ತು ಜೇಕ್ ಮಾಲ್ಡನ್ನನೊಡನೆ ಬಹಳ ಪ್ರೀತಿಯಿತ್ತು. ನಾವು ಪರಸ್ಪರ ಪತಿ-ಪತ್ನಿಯರಾದರೂ ಆಗಬಹುದೆಂಬ ಭಾವನೆ ಆಗ್ಗೆ ಇದ್ದದ್ದು ನಿಜ. ಆದರೆ, ನಾನು ಡಾಕ್ಟರರನ್ನು ಮದುವೆಯಾಗಿ, ಅವರ ಜತೆಯಲ್ಲಿ ಧರ್ಮಮಾರ್ಗದ ಉತ್ತಮ ಜೀವನ ನಡೆಸಿ ಬಂದು ನನ್ನ ಬುದ್ಧಿ ಬೆಳೆದಾಗ ಬಾಲ್ಯದಲ್ಲಿ ನಾನು ತಿಳಿದಿದ್ದ ಅನುರಾಗ ಶಿಸ್ತಿಲ್ಲದ ಮನಸ್ಸಿನ ಅಂಧ ಉದ್ವೇಗ ಮಾತ್ರವೆಂದು ತಿಳಿಯಿತು. ನಾನು ಜೇಕ್ ಮಾಲ್ಡನ್ನನನ್ನು ಮದುವೆಯಾಗಿದ್ದಿದ್ದರೆ ನಮ್ಮ ಸಂಸಾರ ಖಂದಿತವಾಗಿಯೂ ಸುಖವಾಗಿ ಸಾಗುತ್ತಿರಲಿಲ್ಲವೆಂದು ತಾರತಮ್ಯದ ಗಣನೆಯಿಂದ ಗೊತ್ತಾಗಿದೆ. ದಂಪತಿಗಳೊಳಗೆ ಮನೋಬುದ್ಧಿಗಳ ಸಾಮ್ಯವಿಲ್ಲದೆ ನಡೆಯುವ ವಿವಾಹ ವಿಷಮ ವಿವಾಹವೇ ಸರಿ ಎಂಬುದು ನನಗೆ ಖಚಿತವಾಗಿದೆ. ಈ ಅನುಭವಗಳ ಕಾರಣವಾಗಿ ಪತಿಯ ಮೇಲಿನ ನನ್ನ ಪ್ರೇಮ ಶಿಲಾ ನಿರ್ಮಿತ ಭವನದಂತೆ ಭದ್ರವಾಗಿದೆ. ಹೀಗಿದ್ದರೂ ಲೋಕಾಪವಾದವೂ ಪತಿಯ ವರ್ತನೆಗಳಲ್ಲಿನ ಬದಲಾವಣೆಯೂ ನನ್ನನ್ನು ಹಿಂಸಿಸುತ್ತಿದ್ದುವು. ಈ ಹಿಂಸೆಯನ್ನು ನಿವಾರಿಸಿಕೊಳ್ಳಲು ತಕ್ಕದಾದ ಅವಕಾಶವನ್ನು ನಾನು ಹುಡುಕುತ್ತಿದ್ದೆನು. ಹಿಂದೊಂದು ದಿನ ನಾನು ಇಂದಿನಂತೆಯೇ ಪತಿಯೊಡನೆ ನನ್ನ ಕಷ್ಟಗಳನ್ನು ಹೇಳಿಕೊಂಡಿದ್ದೆನು. ಆದರೆ ಅನಂತರ ಹೇಳಿಕೊಳ್ಳಲು ಅವಕಾಶ ದೊರಕಲಿಲ್ಲ. ಪ್ರಾಯ, ವಿದ್ಯೆ, ಅನುಭವ ಎಲ್ಲದರಲ್ಲೂ ಎಳೆಯವಳಾದ ನಾನು ಪತಿಯಲ್ಲಿ ಯಾವ ಒಕ್ಕಣೆಗಳಿಂದ ನನ್ನ ಕಷ್ಟಗಳನ್ನು ಹೇಳಿಕೊಳ್ಳುವುದು, ಅವರ ಮನಸ್ಸಿನ ಯಾವ ಸ್ಥಿತಿಯಲ್ಲಿ ನನ್ನ ವಿಜ್ಞಾಪನೆಗಳನ್ನು ಒಪ್ಪಿಸುವುದು ಎಂದು ಮೊದಲಾಗಿ ಹೆದರುತ್ತಾ ದಿನಗಳನ್ನು ಕಳೆದೆನು. ಆದರೂ ನಾನು ಪತಿಯನ್ನು ಸಂಪೂರ್ಣ ನಂಬಿ ಬರುತ್ತಿರುವಾಗ, ನನ್ನ ನಂಬಿಕೆಯನ್ನು ಬಹುವಾಗಿ ಪುಷ್ಟೀಕರಿಸಿರುವ ಉಯಿಲಿನ ವರ್ತಮಾನವನ್ನು ಕೇಳಿ ನನ್ನ ಮೊದಲಿನ ನಂಬಿಕೆ ಮತ್ತಷ್ಟು ದೃಢವಾಯಿತು. ಅಲ್ಲದೆ, ಅವರ ಮೇಲಿನ ನನ್ನ ಕೃತಜ್ಞತಾಭಾವಕ್ಕೂ ಗೌರವ ಮತ್ತು ಪ್ರೀತಿಗೂ ಮೇರೆಯಿಲ್ಲದೇ ಆಗಿದೆ. ಈಗ ಈ ವಿಧದ ಎಲ್ಲಾ ಭಾವನೆಗಳು ಜತೆ ಸೇರಿ ನನ್ನನ್ನು ದುಃಖಮಿಶ್ರಿತ ಆನಂದದಿಂದ ಬಾಧಿಸುತ್ತಿವೆ. ಆದ್ದರಿಂದ ಬಂಧು ಮಿತ್ರರಾದ ನಿಮ್ಮೆಲ್ಲರ ಸಮಕ್ಷಮದಲ್ಲಿ, ನಮ್ಮೆಲ್ಲರ ಮರ್ಯಾದೆಗಾಗಿ, ಜೀವನದ ಶಾಂತಿಗಾಗಿ, ನನ್ನ ಹೃದಯದ ಭಾರವನ್ನು ಹಗುರಪಡಿಸಿಕೊಳ್ಳುವುದಕ್ಕಾಗಿ, ಈ ಎಲ್ಲಾ ವಿಷಯಗಳನ್ನೂ ಹೇಳಿಕೊಂಡಿರುತ್ತೇನೆ” ಎಂದು ಈ ಮಾತು ಮುಗಿಯುತ್ತಾ ಮಿಸೆಸ್ ಸ್ಟ್ರಾಂಗಳು ಡಾಕ್ಟರರಿಗೆ ನಮಸ್ಕರಿಸಿ, ಅವರನ್ನು ತಬ್ಬಿಕೊಂಡಳು. ಡಾಕ್ಟರರು ಆನಂದಬಾಷ್ಪ ಸುರಿಸುತ್ತಾ ಹೆಂಡತಿಯನ್ನು ಸಮಾಧಾನಪಡಿಸಿದರು.

ಇಂಥ ಒಂದು ಮಹಾ ಸಂದರ್ಭವನ್ನು ಏರ್ಪಡಿಸಿ, ಇಂಥ ಶಾಂತಿ ನೆಮ್ಮದಿಗಳನ್ನು ಆ ಸಂಸಾರದಲ್ಲಿ ನೆಲೆಗೊಳಿಸಿದ್ದುದು ಮಿ. ಡಿಕ್ಕರೆಂದು ಅತ್ತೆಗೆ ಗೊತ್ತಾಯಿತು. ಎಲ್ಲರ ಎದುರಿನಲ್ಲೇ ಅತ್ತೆ ಮಿ. ಡಿಕ್ಕರಿಗೆ ಮುತ್ತು ಕೊಟ್ಟು, ಆಲಂಗಿಸಿ, ಡಾಕ್ಟರರ ಸಂಸಾರಕ್ಕೆ ಒದಗಿದ್ದ ಶಾಂತಿಯಿಂದಲೂ ಇದಕ್ಕೆ ಮಿ. ಡಿಕ್ಕರ ಕಾರ್ಯಸಾಧನೆಯೇ ಕಾರಣವಾದ್ದರಿಂದಲೂ ತನಗಾಗಿದ್ದ ಅಪಾರ ಆನಂದವನ್ನು ವ್ಯಕ್ತಪಡಿಸಿದಳು.

ನಾನೂ ಅತ್ತೆಯೂ ನಮ್ಮ ಮನೆಗೆ ಹಿಂತಿರುಗಿ ಬರುವಾಗ ದಾರಿಯಲ್ಲಿ ಅತ್ತೆ ಅಂದುಕೊಂಡಳು –
“ಆ ಮುದಿ ಕತ್ತೆ – ಸಿಪಾಯಿ, ಒಬ್ಬಳಿಲ್ಲದಿದ್ದಿದ್ದರೆ ಡಾಕ್ಟರರ ಸಂಸಾರವು ಸುಖವಾಗಿ ಸಾಗಿಕೊಂಡಿರುತ್ತಿತ್ತು. ಈ ರೀತಿಯ ಹಿಂಸಾಫಲವುಳ್ಳ ಪ್ರೇಮದಿಂದ ಅನೇಕ ತಾಯಿಯಂದಿರು ತಮ್ಮ ಮಕ್ಕಳನ್ನು ಆ ಮಕ್ಕಳ ಮದುವೆಯಾದನಂತರವೂ ಸಾಕುವೆವೆಂದು ಗ್ರಹಿಸಿ ವರ್ತಿಸುತ್ತಾರೆ. ತಮ್ಮನ್ನು ಹೆರಬೇಕು, ಹೆತ್ತು ಸಾಕಬೇಕು, ಎಂದು ಯಾವ ಶಿಶುವೂ ಹೇಳಿದ್ದಿಲ್ಲ. ತಾವು ಮಕ್ಕಳನ್ನು ಹೆತ್ತದ್ದೇ ಒಂದು ಮಹದುಪಕಾರವೆಂದು ಮಕ್ಕಳು ಸದಾ ತಿಳಿದಿರಬೇಕೆಂದು ಪ್ರೇಮದ ಹೆಸರಲ್ಲಿ ಹಿಂಸೆ ಕೊಡುವಂಥ ಇಂಥ ತಾಯಂದಿರು ಊರಿನಲ್ಲಿ ಕಡಿಮೆಯಾದಷ್ಟು ಊರಿಗೇ ಉಪಕಾರ” ಎಂದು.

ಅತ್ತೆಯ ಮಾತಿಗೆ ನಾನೇನೂ ಉತ್ತರ ಕೊಡಲಿಲ್ಲ. ನನ್ನ ಮನಸ್ಸಿನಲ್ಲೇ `ಶಿಸ್ತಿಲ್ಲದ ಮನಸ್ಸಿನ ಅಂಧ ಉದ್ವೇಗ’, `ಮನೋಬುದ್ಧಿಗಳ ಸಾಮ್ಯವಿಲ್ಲದೆ ಆಗುವ ವಿವಾಹವು ವಿಷಮ ವಿವಾಹ,’ `ನನ್ನ ಪ್ರೇಮವು ಶಿಲಾನಿರ್ಮಿತ ಭವನದಂತೆ ಭದ್ರವಾಗಿದೆ’ ಎಂಬ ಮಿಸೆಸ್ ಸ್ಟ್ರಾಂಗಳ ಮಾತುಗಳೂ – ಅವುಗಳ ಮಥಿತಾರ್ಥವೂ ಎಡೆಬಿಡದೆ, ಅಲೆಯಂತೆ ಎದ್ದು ಮಾಯವಾಗುತ್ತಿದ್ದುವು.

ಈ ವಿಧದಲ್ಲಿ ನಾವು ಆಲೋಚಿಸುತ್ತಾ ಸ್ವಗತವಾಗಿ ಹೇಳಿಕೊಳ್ಳುತ್ತಾ ಹಿಮ ಮುಚ್ಚಿದ್ದ ರಸ್ತೆಯಲ್ಲೇ ನಡೆದು ರಸ್ತೆಯಲ್ಲಿದ್ದ ಅರೆತೇವದ ತರಗೆಲೆಗಳನ್ನು ಬೂಟ್ಸಿನ ಅಡಿಗೆ ಅಂಟಿಸಿಕೊಂಡು, ಮನೆಗೆ ತಲಪಿದೆವು. ಇದೇ ಸಮಯದಲ್ಲಿ ಭೂಮಿಯನ್ನೂ ನಮ್ಮನ್ನೂ ತಂಪುಗೊಳಿಸಲು ಬಂದಂತೆ ರಾತ್ರಿಯ ತಂಗಾಳಿಯು ಮೃದುವಾಗಿ ಬೀಸುತ್ತಿತ್ತು.
(ಮುಂದುವರಿಯಲಿದೆ)

No comments:

Post a Comment