16 January 2015

ಅಮ್ಮ ಬಿಡಿಸಿದ ಹಾಸಿಗೆ, ಅಪ್ಪ ಕೊಟ್ಟ ಕಾಸು

(ಕುದುರೆಮುಖದಾಸುಪಾಸು ೫)

ಹೌದು, ಅದು ಅಖಂಡ ಹಸಿರಿನ ಹಾಸಿಗೆ, ಅದಕ್ಕೆ ಮಂಜುಮೋಡದ ಬಲು ದಪ್ಪದ ಹೊದಿಕೆ. ತರಂಗಿತ ಕಣಿವೆ ಕಾಣದಾಯ್ತೆಂದು ಯಾರೂ ದೂರದಂತೆ, ಹಲವು ಪದರಗಳಲ್ಲಿ ವಿವಿಧ ವಿನ್ಯಾಸಗಳಲ್ಲಿ ಆವರಿಸುತ್ತ, ಅನಾವರಿಸುತ್ತಲೂ ಇದ್ದ ಬೆಳ್ಮೋಡದ ಮೋಡಿಯಾದರೂ ನೋಡಿ ಮುಗಿಯುವಂಥದ್ದಲ್ಲ. ಆದರೆ ನೋಡುವ ನಮಗೆ ಸಮಯದ ಮಿತಿಯಿದೆಯಲ್ಲಾ. ತಡವಾಗಿ ತಿಂಡಿ ತಿಂದ ಮೇಲೆ, ವೇಳೆಗಳೆಯದೆ ಧಾವಿಸಿದ್ದವರು (೨೦೧೪) ಎರಡೇ ಮಿನಿಟು ಹಕ್ಕಿನೋಟ ಬೀರಿ, ಉಸಿರು ತೆಗೆದುಕೊಂಡು, ಶಿಖರವಲಯದ ಅತ್ಯುನ್ನತ ಕೇಂದ್ರದಲ್ಲಿನ ಅದೃಷ್ಟ ಪರೀಕ್ಷೆಗೆ ಮುಂದಾದೆವು.

ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಯಾರಿಗೂ ಶಿಬಿರವಾಸದ ಅವಕಾಶವಿಲ್ಲ. ಹಾಗಾಗಿ ಕುದುರೆಯ ಬಾಲದ ಕೊನೆಯತ್ತ ಸಾರುವ ಗಾಡಿದಾರಿ ಇಂದು ನಿರ್ಲಕ್ಷ್ಯಕ್ಕೊಳಗಾಗಿದೆ. ಒಳ ದಾರಿಯಂತೆಯೇ ಇದ್ದ ಸ್ಪಷ್ಟ ಸವಕಲು ದಾರಿಯನ್ನು ನಾವೂ ಅನುಸರಿಸಿದೆವು. ನಾವು ಮೋಡಗಳ ಲೋಕದೊಳಗೇ ಇದ್ದೆವು. ಅಲ್ಲವಾದರೆ ಒಂದೇ ನೋಟದಲ್ಲಿ ಕುದುರೆಯ ತುಪ್ಪುಳದಂತೆ ತೋರುವ ಹುಲ್ಲುಗಾವಲು, ಕತ್ತಿನ ಮೇಲಿನ ಜೂಲಿನಂತೆ, ಒಳಮೈಯ ಗಡಿರೇಖೆ ನಿರ್ಧರಿಸುವ ಕಾಡು ಸ್ಪಷ್ಟವಾಗಬೇಕಿತ್ತು. ಇದು ಜತೆಗೇ ತಂಡದ ಸದಸ್ಯರು ವಿಶೇಷ ಅಂತರ ಕಲ್ಪಿಸಿಕೊಳ್ಳದ ಎಚ್ಚರವನ್ನೂ ಕೊಡುತ್ತಿತ್ತು. ತುಸು ಮುಂದುವರಿದಂತೆ, ಜಾಡಿನಲ್ಲಿ ಕವಲು ಕಾಣಿಸಿತು. 

ಬಲದ್ದು ಒಳಮೈಯ ರಚನೆಗಳತ್ತ (ಮೊದಲಾಗಿದ್ದರೆ ಶಿಬಿರಸ್ಥಾನದತ್ತ ಎಂದೂ ಹೇಳಬಹುದಿತ್ತು.), ಎಡದ್ದು ನೇರ ಶಿಖರದತ್ತ ಎಂದಿತು ನಮ್ಮ ನೆನಪು. ಆದರೆ ಅದಕ್ಕೆ ಮರೆವಿನ ಮುಸುಕು ಬಿದ್ದರೆ? ಎಡದ್ದರಲ್ಲೇ ಮುಂದುವರಿದೆವು. ಅದು ಕಾಡಿನಿಂದ ದೂರ ಸರಿಯುತ್ತ, ಇಳಿಮುಖವನ್ನು ಹೆಚ್ಚು ತೋರುತ್ತಿದ್ದಂತೆ ಅನಿಸತೊಡಗಿತು. ಹೇವಳದತ್ತ ಇನ್ನೊಂದೇ ಒಳದಾರಿಯಿರಬಹುದೇ? ಹೊಸ ಕಾಲದ ತುರ್ತಿಗೆ ಸರಿಯಾಗಿ, ಕಷ್ಟವಾದರೂ ಹತ್ತಿರವಾದ ನಾರಾವಿಯಿಂದ ರೂಪುಗೊಂಡ ಹೊಸ ಸವಕಲು ಜಾಡೇ? ಸಂದೇಹಗಳು ಹೆಚ್ಚುವಂತೆ ಮೋಡವೂ ದಟ್ಟೈಸಿತ್ತು. ನನ್ನ ನೆನಪಿನ ಕಡತದಲ್ಲಿ, ಶಿಬಿರತಾಣದಿಂದ ಹುಲ್ಲುಗಾವಲಿಗೆ ಬಂದ ಮೇಲೆ ಬಲಕ್ಕೆ ಹೊರಳಿದರೆ ಶಿಖರಕ್ಕೆ ಒಂದೇ ಜಾಡು. ಅದೂ ಬಲಕ್ಕೆ ಕಾಡನ್ನು ನೋಡುತ್ತ ಕ್ರಮವಾಗಿ ಏರಿದರೆ, ಐದು-ಹತ್ತು ಮಿನಿಟಿನ ದಾರಿ. ಆದರೆ ಇಂದು ಕಾಡು ದೂರಾಗುವುದರೊಡನೆ ಜಾಡಿನ ಇಳಿಜಾರೂ ಹೆಚ್ಚತೊಡಗಿತ್ತು. ನೀಲಗಗನದ ದಿನಗಳಲ್ಲಾದರೆ ಶಿಖರವೇ ಕಂಗೊಳಿಸಿ ಕರೆಯುತ್ತಿತ್ತು. ಕೊನೆಯ ಹಂತದಲ್ಲಂತೂ ಹುಲ್ಲಗುತ್ತಿ, ಬಂಡೆಚೂರುಗಳನ್ನು ತಪ್ಪಿಸಿ ಯಾರು ಎಷ್ಟು ಹರಡಿ ನಡೆದರೂ ಅದು ಹಿಂದೆ ಇನ್ಯಾರ್ಯಾರೋ ಶಿಖರಕ್ಕೆ ನಡೆದ ಜಾಡೇ ಆಗಿರುತ್ತಿತ್ತು. (ಭಾವುಕನಾಗುವುದಿದ್ದರೆ “ಸುಮಾರು ಐದು ದಶಕಗಳ ಹಿಂದೆ ಇದೇ ಅಲ್ಲವೇ ನನ್ನಪ್ಪ ತುಳಿದ ನೆಲ” ಎಂದು ನಾನೇ ಹೇಳಬಹುದಿತ್ತು.)  ಸದ್ಯ ಮಹೇಶ ಮಯ್ಯ – ಸಾಲಿನ ಮುಂದಿದ್ದವ, ಯಾಕೋ ನಿಂತ. ಅವನ ಕಾಲಿಗೂ ನನ್ನದ್ದೇ ಸಂಶಯ ಸುತ್ತಿಕೊಂಡಿತ್ತು. ನಾನು ವಿಚಾರಿಸಿದ್ದೇ ಸಾಕೆಂಬಂತೆ, ಮುಖ್ಯ ಜಾಡು ಬಿಟ್ಟು ಬಲಕ್ಕೆ, ಸಿಕ್ಕ ದುರ್ಬಲ ಜಾಡು ಅನುಸರಿಸಿದೆವು. ಎರಡು-ಮೂರು ಮಿನಿಟಿನಲ್ಲಿ ಉನ್ನತ ಕೇಂದ್ರವೇನೋ ಸಮೀಪಿಸಿದಂತನ್ನಿಸಿತು.

ಆದರೆ ಜತೆಗೇ ಮತ್ತೆ ಕಾಡೇ ಎದುರಾಯ್ತು. ಮೋಡ ನಮ್ಮನ್ನು ದೃಕ್ಸೂಚನೆಗಳಿಂದ ಪೂರ್ಣ ವಂಚಿಸಿತ್ತು. ಜೀಪಿಯೆಸ್ಸೂ ಗೂಗಲ್ ಮ್ಯಾಪೂ ಬಹುತೇಕ ಎಲ್ಲರ ಚರವಾಣಿಯಲ್ಲೂ ಬೆರಳ ಸೂಚನೆಗೆ ಕುಣಿಯುತ್ತಿದ್ದದ್ದು ನಿಜ. ಅದರೊಳಗೆ ನಾವೆಲ್ಲಿದ್ದೇವೆ, ಶಿಖರ ನಮ್ಮಿಂದ ಯಾವ ದಿಕ್ಕು ಮತ್ತು ಎಷ್ಟು ಅಂತರದಲ್ಲಿದೆ ಎಂದೇನೋ ಕಂಡುಕೊಂಡರು. “ಆದರೆ ಈ ಕಾಡೂ” ಎಂಬ ಸಂಶಯಪಿಶಾಚಿ, ಕಾಡಿತು. ರಗಳೆ ಬೇಡವೆಂದು ಎಡಕ್ಕಿಳಿದು, ಬಿಟ್ಟು ಬಂದಿದ್ದ ಹಳೇ ಇಳಿಜಾಡನ್ನೇ ಸೇರಿಕೊಂಡೆವು. ಅದು ಮೋಸ ಮಾಡಲಿಲ್ಲ. ಸ್ವಲ್ಪದರಲ್ಲೇ ಬಲ ಬದಿಗೆ ಮತ್ತೆ ಕಾಡಿನ ಸೆರಗು ಕಾಣಿಸಿತು. 

ಇಳಿಜಾರಿಗೆ ಕೊನೆ ಹೇಳುವಂತೆ ಸಣ್ಣ ಮಳೆನೀರ ತೊರೆ ಅಡ್ಡ ಹಾಯ್ದಿತ್ತು.  (ಇದೇ ತೊರೆ ಮುಂದೆ ಫಲ್ಗುಣಿ ಎಂಬ ಹೆಸರಿನೊಡನೆ ವೇಣೂರು, ಪೊಳಲಿ, ಗುರುಪುರ, ಕೂಳೂರಿಗಾಗಿ ಮಂಗಳೂರಿನಲ್ಲಿ ನೇತ್ರಾವತಿಯೊಡನೆ ಸಂಗಮಿಸಿ ಸಮುದ್ರ ಸೇರುತ್ತದೆ!) ಮುಂದೆ ಮಿನಿಟುಗಳ ಎಣಿಕೆಯಲ್ಲಿ ನಿಜಶಿಖರ ಸೇರಿದ್ದೆವು. ಸಾಕ್ಷಿ - ಹಳೆಗಾಲದ ಸರ್ವೇಕ್ಷಣಾ ಕ್ರಮದ ಖಚಿತ ಸಂಕೇತವಾದ ಜಿಟಿ ಸ್ಟೇಷನ್ನನ್ನು (Great Trignometrical Station) ಪ್ರತಿನಿಧಿಸುವ ಕಾಡು-ಕಲ್ಲುಗಳ ಗುಪ್ಪೆ. ಅಲ್ಲದಿದ್ದರೆ ಹದಿನೈದಡಿಯಾಚೆ ತಂಡದ ಸದಸ್ಯರೇ ಅದೃಶ್ಯರಾಗುವ ಮೋಡ ಕವಿದೇ ಇತ್ತು. ಸಾಧನೆಯ ಧನ್ಯತೆ ನಮಗಿತ್ತಾದರೂ ರೂಢಿಗತ ಸಂಭ್ರಮಕ್ಕೆ ಅವಕಾಶವಿಲ್ಲದಂತೆ ಎಲ್ಲ ಮುಸುಕಿನೊಳಗಿದ್ದುದೇ ಒಂದು ಕೊರತೆ.


*             *             *             *             *
ಕುದುರೆಮುಖ ಶಿಖರ ಪ್ರದೇಶದ ವಿಸ್ತಾರ ಮತ್ತು ವೈವಿಧ್ಯ ನಾನು ಕಂಡಂತೆ ಪಶ್ಚಿಮ ಘಟ್ಟದಲ್ಲೇ ಅನನ್ಯ. ನಾವು ನಿಂತ ಅತ್ಯುನ್ನತ ಕೇಂದ್ರವನ್ನು ಸರ್ವೇಕ್ಷಣಾ ಭೂಪಟ ಮುಖ್ ಹೆಡ್ (ಸಮುದ್ರ ಮಟ್ಟದಿಂದ ೬೨೦೭ ಅಡಿ ಅಥವಾ ೧೮೯೪ ಮೀಟರ್) ಎಂದೇ ಹೆಸರಿಸಿದೆ. ಇದನ್ನು ಮೂಲೆ ಗುರುತಿನಂತಿಟ್ಟುಕೊಂಡ ಘಟ್ಟ ಶ್ರೇಣಿಯಲ್ಲಿ, ಪೂರ್ವ - ನಾವು ಏರಿ ಬಂದ ದಿಕ್ಕು. 

ಮತ್ತೆ ಬಲಕ್ಕೆ ಹೊರಳಿಕೊಂಡ ಶ್ರೇಣಿ, ಅಂದರೆ ಉತ್ತರದ ಮುಂದುವರಿಕೆಯಲ್ಲಿ, ತೀರಾ ಅಲ್ಪ ಅಂತರದಲ್ಲೇ ಇನ್ನೆರಡು ದಿಬ್ಬಗಳಿವೆ. ಕರಾವಳಿಯತ್ತಣಿಂದ ಗುರುತಿಸುವವರಿಗೆ ಇವೂ ಅಸಾಮಾನ್ಯ ಶಿಖರಗಳೇ. ಅವು - ಮಿಜ್ ಪಾಯಿಂಟ್ ಅಥವಾ ಗೋಮುಖ (೬೧೭೭ ಅಡಿ ಅಥವಾ ೧೮೮೪ ಮೀ) ಮತ್ತು ಎಂಡ್ ಪಾಯಿಂಟ್ (೬೧೭೩ ಅಡಿ ಅಥವಾ ೧೮೮೩ ಮೀ). ಈ ಮೂರನ್ನು ಸೇರಿಸಿಯೇ ಕುದುರೆಮುಖ ಶಿಖರವಲಯವನ್ನು ಸಾಮಾನ್ಯವಾಗಿ ಗುರುತಿಸಲಾಗುತ್ತದೆ. ಮುಖ್ಯ ಶಿಖರ, ಶ್ರೇಣಿಯ ಹರಿವು ಒಳ ಸಂಕೋಚಗೊಂಡಲ್ಲಿನ ಮೂಲೆಗಲ್ಲಿನಂತೇ ಇದೆ. ಆದ್ದರಿಂದ ಹೆಚ್ಚು ಕಡಿಮೆ ೨೯೦ ಡಿಗ್ರಿಯ ವಿಸ್ತಾರಕ್ಕೆ, ಅಂದರೆ, ಉತ್ತರದಲ್ಲಿ ಸುಮಾರು ಕುಂದಾಪುರದಿಂದ, ದಕ್ಷಿಣಕ್ಕೆ ಸುಮಾರು ಕಾಞಂಗಾಡ್ ವರೆಗೂ ಸಮುದ್ರವನ್ನೇ ದಿಗಂತದಲ್ಲಿ ಕಾಣಿಸುತ್ತದೆ. ಜತೆಗೆ ಒಳ ತಿರುವಿನಲ್ಲಿ ಪೂರ್ವದ ಚಾರ್ಮಾಡಿಯವರೆಗೂ ದೃಶ್ಯವನ್ನು ತೆರೆದಿಡುತ್ತದೆ. ಪ್ರಾಚೀನ ಕಾಲದ ಅಂತಾರಾಷ್ಟ್ರೀಯ ಸಮುದ್ರ ಯಾನಿಗಳಿಗಂತೂ ಭಾರತದ ಕರಾವಳಿಯ ಒಂದು ಪ್ರಮುಖ ಭೂ ನಿಶಾನಿಯೇ ಕುದುರೆಮುಖ.

ಮೇಲೆ ಹೇಳಿದ ಭೌಗೋಳಿಕ ಲೆಕ್ಕಾಚಾರಗಳು, ಹಾಗೇ ಇಗರ್ಜಿ ಶಿಬಿರಸ್ಥಾನಾದಿ ಮನುಷ್ಯ ರಚನೆಗಳ ಬಹುತೇಕ ಒಣ ವಿಚಾರಗಳು ಹಾಗಿರಲಿ. ಅವುಗಳನ್ನು ವಿಸ್ತರಿಸಿ ಅಂಕಿ, ಆಯಗಳ ಗೊಂದಲದಲ್ಲಿ ಅನುಭೂತಿಯನ್ನು ಇನ್ನು ಕಳೆಯುವುದಿಲ್ಲ. ಪ್ರಸಂಗ ಗೊತ್ತಿದ್ದೂ ಪ್ರದರ್ಶನದಿಂದ ಪ್ರದರ್ಶನಕ್ಕೆ ಹೊಸತೇ ರಂಜಿಸುವ ಮಂಟಪರ ಭಾಮಿನಿಯಂತೆ ಶಿಖರವಲಯದ ಕೆಲವು ವಿಶಿಷ್ಟ ಅನುಭವಗಳ ಮತ್ತು ಆಪ್ತ ಕೇಳ್ಮೆಗಳನ್ನು ಕಥಿಸುತ್ತ ಮುಂದುವರಿಯುತ್ತೇನೆ.

ಚಳಿಯೊಳಿರ್ದುಂ ಬೆಮರ್ದನ್:
ಒಮ್ಮೆ ನಮ್ಮೊಂದು ತಂಡ ಶಿಬಿರ ತಾಣಕ್ಕೆ ಬರುವಾಗಲೇ ಮುಸ್ಸಂಜೆಯಾಗಿತ್ತು. ಉಳಿದುಕೊಳ್ಳಲು ನೆಲ ಹಸನು ಮಾಡುವುದರಿಂದ ತೊಡಗಿ ಕನಿಷ್ಠಾವಶ್ಯಕತೆಗಳನ್ನು ಹೊಂದಿಸುವುದರೊಳಗೆ ಪೂರ್ಣ ಕತ್ತಲಾವರಿಸಿತ್ತು. ತತ್ಕಾಲೀನ ಅಡುಗೆಗೇನೋ ವ್ಯವಸ್ಥೆಯಾಯ್ತು. ಆದರೆ ಅಲ್ಲಿನ ಸಹಜ ವಾತಾವರಣದ ತಣ್ಪಿಗೆ ಬೆವರು ಸುರಿಸುತ್ತ ಬಂದ ತಂಡ ಪಟ್ಟ ಸಂತೋಷ ಬೇಗನೆ ಮರೆತು ಹೋಯ್ತು. ಅಲ್ಲಿನ ವಿಪರೀತ ಚಳಿಯೊಡನೆ ನಮ್ಮರಿವು ಜಾಗೃತವಾಯ್ತು – ಚಾ ಕಾಯಿಸಿದ ಉರಿ ಗಂಜಿಗುಳಿಯದು. ಅದಕ್ಕೂ ಮಿಕ್ಕು ರಾತ್ರಿಯಿಡೀ ಉರಿಯಲೇ ಬೇಕಾದ ಶಿಬಿರಾಗ್ನಿಗೆ ನಮ್ಮ ಕಟ್ಟಿಗೆ ಸಂಗ್ರಹ ಏನೇನೂ ಸಾಲದು! ಒಬ್ಬ ಬಡ್ಡು ಕತ್ತಿ, ಮತ್ತೊಬ್ಬ ಮಿಣುಕು ಟಾರ್ಚು ಹಿಡಿದು, ದಿನದ ಶ್ರಮದಲ್ಲಿ ಹಣ್ಣಾದ ಮೈ, ಕಿರ್ರೋಮುರ್ರೋಗುಟ್ಟುತ್ತಿದ್ದ ಕಾಲೆಳೆದುಕೊಂಡು ಇಬ್ಬರು ಹೊರಟರು. ಶಿಬಿರತಾಣದ ಪಕ್ಕದಲ್ಲೇ ಹಾಯ್ದು, ಹಿತ್ತಲಿನ ದಟ್ಟ ಕಾಡಿನೊಳಗೆ ನುಗ್ಗಿದ್ದ ಗಾಡಿ ದಾರಿಯನ್ನೇ ಅನುಸರಿಸಿದರು. ಅದೃಷ್ಟಕ್ಕೆ ಹತ್ತು-ಹದಿನೈದಡಿ ಅಂತರದಲ್ಲೇ ಬರಿಯ ರಾತ್ರಿಯೇನು, ಎರಡು ದಿನಕ್ಕೆ ಸಾಲುವಷ್ಟು ದೊಡ್ಡ ಪೊದರಿನಂಥ ಮರವೇ ಅಡ್ಡ ಬಿದ್ದಿತ್ತು. ಅದು ನಮಗಾಗಿ ಹತ್ತಿಪ್ಪತ್ತು ದಿನಗಳ ಹಿಂದೆ ಪೂರ್ಣ ಬೇರು ಕಳಚಿಕೊಂಡು ಅಡ್ಡ ಮಲಗಿ, ಒಣಗಿ, ಕಾದಂತಿತ್ತು! ನಾವು ಸಾದರದಿಂದ ಒಪ್ಪಿಸಿಕೊಂಡೆವು. ಸಣ್ಣ ಪುಟ್ಟ ಮೇಲಿನ ಅಡರುಗಳನ್ನು ಕಡಿದು, ಅಡುಗೆ ಒಲೆಗೆ ಪ್ರತ್ಯೇಕ ಜೋಡಿಸಿಟ್ಟುಕೊಂಡೆವು. ಮತ್ತೆ ಮುಖ್ಯ ಕೊಂಬೆಗಳಿಗೆ ಎಲ್ಲರೂ ಕೈ ಜೋಡಿಸಿ ಎಳೆದು ತಂದು, ಬೇಕಾದಂತೆ ಬಳಸಿದೆವು. ರಾತ್ರಿಯನ್ನು ನಿಶ್ಚಿಂತವಾಗಿ ಕಳೆದೆವು. ಬೆಳಕು ಹರಿದ ಮೇಲೆ ಅದೇ ಹಿತ್ತಿಲ ದಾರಿಗುಂಟ ಸಾಗಿ, ಅಜ್ಜನಗುಡ್ಡೆ ಶೋಧಿಸುವ ಕೆಲಸಕ್ಕೆ ಹೊರಟೆವು. ಹಿಂದಿನ ರಾತ್ರಿಯ ಅದೇ ಹದಿನೈದು ಹೆಜ್ಜೆ ಹೋದಾಗ, ಸೌದೆಕೊಟ್ಟ ಮರದ ಮೂಲನೆಲೆ ನೋಡಿ ಮೈಮರವಟ್ಟು ಹೋಯ್ತು. ಸುಂದರ ಕೊಂಬು ಸಹಿತವಾದ ಭಾರೀ ಕಾಟಿಯ ತಲೆಬುರುಡೆ ಅಲ್ಲಿತ್ತು. ಅದರ ಸೊಂಟದ್ದೂ ಸೇರಿದಂತೆ ಹಲವು ಪ್ರಧಾನವಾದ ಮೂಳೆಯ ಉಳಿಕೆಗಳೂ ಅಲ್ಲಿ ಚಲ್ಲಾಪಿಲ್ಲಿಯಾಗಿದ್ದುವು. ಬಹುಶಃ ಹುಲಿಯೇ ಅದನ್ನು ಬೇಟೆ ಮಾಡಿದ್ದಿರಬೇಕು. (ಅನ್ಯ ಸಣ್ಣ ಮಾಂಸಾಹಾರಿ ಪ್ರಾಣಿಗಳು ಕಾಟಿಯ ಬಳಿ ಸುಳಿಯಲೂ ಧೈರ್ಯ ಮಾಡವು. ಕಳ್ಳಬೇಟೆಯವರಾದರೆ ಸುಂದರ ಕೊಂಬು ಸೇರಿದ ತಲೆಬುರುಡೆ ಹಿಂದುಳಿಸರು.) ಅದರ ಪ್ರಾಣಾಂತಿಕ ರಭಸದ ಓಟಕ್ಕೆ ಈ ಮರ ಅಡ್ಡಿಯಾಗಿರಬೇಕು. ಟನ್ ತೂಕದ ಕಾಟಿಯ ಢಿಕ್ಕಿಗೆ ಮರ ಅತ್ತ, ಕಾಟಿಯಿತ್ತ ಅಸುನೀಗಿರಬೇಕು. ಹಿಂಬಾಲಿಸಿದ ಹುಲಿರಾಯ ವಿರಾಮದಲ್ಲಿ “ಸಹನೌ ಭುನಕ್ತು” ಮಂತ್ರ ಪಠಿಸಿ ತನ್ನ ಮೊದಲ ಸುತ್ತು ಮುಗಿಸಿದ್ದಾನೆ. ಮತ್ತೆ ವಿವಿಧ ಕಾಲ ಹಾಗೂ ಹಂತಗಳ ಕಲಾಪವನ್ನು ಇತರ ವನ್ಯಮೃಗಗಳು ಸಾಂಗಗೊಳಿಸಿದ್ದಾವೆ. ಜೀರ್ಣಿಸಿಕೊಳ್ಳಲಾಗದ ಅಂಶವಷ್ಟೇ ನಮ್ಮೆದುರು ಉಳಿದಿತ್ತು. ರಾತ್ರಿ ಸೌದೆ ಒಟ್ಟು ಮಾಡುವ ಧ್ಯಾನದಲ್ಲಿ, ಸೀಮಿತ ಬೆಳಕಿನಲ್ಲಿ ನಾವಿದನ್ನು ಗಮನಿಸಿಯೇ ಇರಲಿಲ್ಲ. ನಮ್ಮತ್ತ ಚಾಚಿದ್ದ ಕೊಂಬೆಗಳನ್ನು ಬಿಟ್ಟು ಬೇರಿಗೆ ಕೈಹಾಕಲು ಹೋಗಿದ್ದರೂ ನಾವು ಕಾಟಿಯ ಅವಶೇಷವನ್ನು ರಾತ್ರಿಯೇ ಕಂಡಿರುತ್ತಿದ್ದೆವು. ಆಗ ಬಹುಶಃ ಶಿಬಿರಾಗ್ನಿ ಉರಿಯದೆಯೂ ನಾವು ಚಂಡವ್ಯಾಘ್ರನನ್ನು ನೆನೆಸುತ್ತ ಬೆವರಿಕೊಂಡಿರುತ್ತಿದ್ದೆವು! (ಚಳಿಯೊಳಿರ್ದುಂ ಬೆಮರ್ದನ್ ಶೋಕವರ್ದನ್ – ಕಪಿಚಕ್ರವರ್ತಿ ಬನ್ನ ಉವಾಚ)

ಗಿರಿ ವಿಹಾರಧಾಮ:
ಅದು ಗುಡಾರ, ಗ್ಯಾಸೊಲೆ ಹೊತ್ತು ಆರಾಮದಲ್ಲಿ ಒಂಟಿಮರದ ಮೊಕ್ಕಾಂ ಮುಗಿಸಿ, ಮೇಲೆ ಬಂದ (೧೯೯೦) ಮುಂಜಾನೆ. ಇಗರ್ಜಿಯ ಪುಟ್ಟ ಮುಖಮಂಟಪವನ್ನುಳಿದು ಜೀರ್ಣೋದ್ಧಾರದ ಹಂಚಿನ ಮಾಡಿಡೀ ಕುಸಿದು ಕೂತದ್ದನ್ನು ಕಂಡೆವು. ಆ ಕೋಣೆಯಲ್ಲೇ ಅಡುಗೆ ಸಾಹಿತ್ಯ ಕೃತಿಯಾಗಲು ಸಜ್ಜುಗೊಂಡಿತು. ಅಂಗಳದ ಹುಲ್ಲ ಹಾಸಿನಲ್ಲಿ ಗುಡಾರ ಅರಳಿತು. ಮಂಜಿನಮಣಿ ಸರಕು ಹೇರಿಕೊಂಡ ಹಸುರಿನ ಮೇಲೆ ಅರುಣ ಕಿರಣಗಳ ನೂರೆಂಟು ನಲಿವು. ಚಳಿ ಕಳೆವ ಬಿಸಿಲು, ಬಿಸಿಯಳಿಸುವ ಮೆಲುಗಾಳಿಗೆ, ಮನೋಪಟಲ ಅರಳಿಸಿ ತಂಡ ವಿಹಾರವೆನ್ನುವಂತೇ ಶಿಖರಕ್ಕೆ ತೇಲಿತ್ತು. ವಿರಾಮದಲ್ಲೇ ಮರಳಿತ್ತು. ವೃತ್ತಿಯಲ್ಲಿ ರಾಸಾಯನಿಕಗಳೊಂದಿಗಿನ ಪ್ರಯೋಗಗಳಷ್ಟೇ ಪ್ರೀತಿಯಲ್ಲಿ ಶಿಬಿರವಾಸಗಳಲ್ಲಿ ತರಕಾರಿ, ಮಸಾಲೆಗಳೊಂದಿಗಿನ ಕಸರತ್ತೂ ಅರವಿಂದರ ಪ್ರಿಯ ಪ್ರವೃತ್ತಿ. ಅಂದಿನ ಶಿಬಿರದಲ್ಲೂ ಅವರ ಬಾಣಸ-ಸಾಹಸಗಳು ಉಳಿದವರ ಕೈಗಳನ್ನು ಕಟ್ಟಿ ಹಾಕಿದ್ದವು. ಮಾತಿನ ಒಗ್ಗರಣೆಯಾದರೂ ನನ್ನದಿರಲಿ ಎಂಬಂತೆ ಮೋಹನ್ ಜತೆಗೊಟ್ಟಿದ್ದರು. ಮೋಹನರ ಗಡಗಡ ನಗು ಇಗರ್ಜಿಯ ಮೇಲುಳಿದ ಶಿಥಿಲ ಮಾಡನ್ನು ತಲೆಗೇ ತಂದೀತೆಂದು ಹೆದರಿ ಪ್ರಸನ್ನ ಕ್ಯಾಮರಾದೊಡನೆ ಹೊರಗೆ ಜಾರಿದ್ದ. ದೇವಕಿ ಅಭಯನ ಕಡಿವಾಣ ಸಡಿಲ ಬಿಟ್ಟು, ಹೂವೋ ಹಸಿರೋ ಹೆಕ್ಕುವುದರಲ್ಲಿದ್ದಳು. 

ಅಭಯನ ಬಾಲಲೀಲೆಗಳು ಸುತ್ತಣ ಹುಲ್ಲುಗಾವಲಿನಲ್ಲಿ ಹರಡಿತ್ತು. ಕೆಲವೆಡೆಗಳಲ್ಲಿ ಐದಾರು ಅಡಿ ವ್ಯಾಸಕ್ಕೆ ಹಸಿ ಹುಲ್ಲು ಸೊಂಟಮುರಿದು ಮಲಗಿರುವುದುಂಟು. ಅಂಥವು `ಕಾಟಿಮಲಗಿದ ಜಾಗ’ ಎಂದೇ ಹಿಂದೆಂದೋ ಸೋಜಾ ಪರಿಚಯಿಸಿದ್ದ. ಅಂಥಲ್ಲೊಂದೆಡೆ ಅಭಯ ಇದ್ದಕ್ಕಿದ್ದಂತೆ ಹಾವೆಂದು ಅರಚಿದಾಗ ಒಮ್ಮೆ ಎಲ್ಲ ಹೆದರಿದ್ದುಂಟು. ಆದರೆ ಕೊರಡುಗಟ್ಟಿದ ಮೈಯನ್ನು ಬಿಸಿಲಿಗೊಡ್ಡಿದ ಆ ಕನ್ನಡಿ ಹಾವು ನಿಸ್ಪಂದವಾಗಿತ್ತು; ನಾವು ದೂರಸರಿದೆವು.

ಒಟ್ಟಾರೆ ನಾವು ವಿಶ್ವಮೈತ್ರಿಯಲ್ಲಿ ಲೀನಿಸಿದ್ದಂತೆ, ಒಮ್ಮೆಲೆ ಉತ್ತರ ದಿಗಂತ ಬಿರಿದಂತೆ ಆಗಸ ಗುಡುಗಿತು. ಹಿಂದೆ ರಾತ್ರಿಗಳಲ್ಲಿ ಗಣಿಗಾರಿಕೆಯ ವಿಸ್ಫೋಟನಾ ಸದ್ದು ಸುಮಾರು ಹೀಗೇ ಇರುತ್ತಿತ್ತು. ಆದರೆ ಈ ಬಾರಿ ಕಥೆ ಬೇರೇ. ಎಲ್ಲಿತ್ತೋ ಏನೋ ಕರ್ಮೋಡಗಳ ದಂಡು, ಮಿಂಚಿನ ವೇಗದಲ್ಲಿ ನಮ್ಮ ಮೇಲೆ ಜಮಾಯಿಸತೊಡಗಿತು. ಅವು ಕವುಚಿ ಬಿದ್ದರೆ ನಮ್ಮ `ಅಡುಗೆಮನೆ’ಯ ಮಾಡೂ ಬಡಕಲು ಗುಡಾರಗಳೂ ತಾಳವೆಂಬ ಭಾವ ನಮ್ಮಲ್ಲಿ ಬಲಿಯಿತು. ಅವಸರದಲ್ಲಿ ಎಲ್ಲ ತಣಿಸಿ, ಗಂಟುಮೂಟೆ ಕಟ್ಟಿ, ಶಿಬಿರ ಬರ್ಖಾಸ್ತು ಮಾಡಿ, ಹೇವಳದ ಒಂಟಿಮರಕ್ಕೆ ಧಾವಿಸಿದ್ದೆವು. ನಮ್ಮ ದಯನೀಯ ಸ್ಥಿತಿಗೆ ಮರುಕಗೊಂಡೋ ಏನೋ ವರುಣದಳ ಶಿಖರವಲಯ ಬಿಟ್ಟು ಬೆಂಬತ್ತಲಿಲ್ಲ. ಸಂತಸ ಇಮ್ಮಡಿಸುವಂತೆ ಅರವಿಂದ ಹಾಲಿನ ಪಾಯಸವನ್ನೇ ಮಾಡಿ ಬಿಟ್ಟರು. ಮತ್ತಲ್ಲೇ ರಾತ್ರಿಯನ್ನೂ ಕಳೆದು ಮರುದಿನ ಮನೆಗೆ ಮರಳಿದ್ದೆವು. 

ಅದರ ಆನಂದಕ್ಕೆ ಅಕ್ಷರರೂಪ ಕೊಡುವುದು ಅಸಾಧ್ಯ. ಬದಲಿಗೆ ಉಲ್ಟಾ ಲೆಕ್ಕಾಚಾರದ ವಿಸ್ತರಣೆಯೊಂದರಲ್ಲಿ, ಒಂದುಸುರಿನಲ್ಲಿ (ಹಿಂದಿ ಚಿತ್ರವೊಂದರ ಬ್ರೆತ್ ಲೆಸ್ ಸಾಂಗಿನಂತೆ!) ಸೂಚಿಸಿಬಿಡುತ್ತೇನೆ. ವಿಮಾನದಲ್ಲಿ ಹಾರಿ, ಮೈಕುಲುಕದ ಕಾರಿನಲ್ಲಿ ಹೋಗಿ, ಏಸೀರೂಮಿನ ಕನ್ನಡಿಯೊಳಗಿಂದ ಇಣುಕಿ, ಕಂಡಷ್ಟಕ್ಕೆ ಉದ್ಗಾರ-ಉತ್ಪ್ರೇಕ್ಷೆಗಳನ್ನು ಎಸೆದು, ಕುಡಿನೀರಿಗೆ ಸೀಲೊಡೆದ ಬಾಟಲಿ ಹಿಡಿದು, ನೂರೆಂಟು ತಿನಿಸಿಗೆ ಹತ್ತೆಂಟು ಕೈ ಆಧರಿಸಿ, ಮಕ್ಮಲ್ ಹುಲ್ಲಿನ ಆರಾಮಾಸನದ ಮೇಲೊರಗಿ, ವಿದ್ಯುತ್ ಅಥವಾ ಗ್ಯಾಸ್ ತೆರೆದ ಒಲೆಗೆ ಚಂದದ ನಾಲ್ಕು ಚಕ್ಕೆ ಒಡ್ಡಿ ಎದ್ದ `ಶಿಬಿರಾಗ್ನಿ’ ಶಾಖಕ್ಕೆ ಬೆವೆತು, ಐಸ್ ಕ್ಯೂಬುಗಳ ಕಣಕಣಕ್ಕೆ ಮದಿರೆ ಸೀಪಿ, ಪೊದರು ಮರಗಳಲ್ಲಿ ಹುಗಿದ ಮಿಣುಕು ದೀಪಗಳ ಬಣ್ಣದಾಟಕ್ಕೆ ಮನಸೋತು (ಕ್ಷಮಿಸಿ, ಪಟ್ಟಿ ಹೀಗೆ ಎಷ್ಟೂ ಬೆಳೆಸಬಹುದು) ಪರಸ್ಪರ ಸುಳ್ಳು ಹೊಸೆಯುತ್ತಾ `ಹಿಲ್ ರೆಸಾರ್ಟ್ ಮಝಾ’ ಅನುಭವಿಸುವವರಿಗೆ ನಮ್ಮ ದೈವೀ ಅನುಭವ ಎಂದಿಗೂ ಅರ್ಥವಾಗದು, ಅರ್ಥವಾಗದು.

ಉಪಾಧ್ಯರೊಡನೆ ಕೆಲಹೊತ್ತು:
ವೆಂಕಟ್ರಮಣ ಉಪಾಧ್ಯರ ಸಾಧನೆಗಳೆಲ್ಲ ತೊಡಗುವುದು ಅಪಾರ ಬೆರಗಿನಿಂದ! ಅದರ ಬೆನ್ನು ಹಿಡಿದು ಬರುವ ಸರ್ವೋಪಯೋಗೀ ಸಂಶೋಧನ ಕೃತಿಗಳು ಖುದ್ದು ಉಪಾಧ್ಯರ ಕೈಗೆಲಸದಿಂದಲೇ ಅರಳುವುದು ಇನ್ನೊಂದೇ ಬೆರಗು. ಅವರು ಸಾಲಿಗ್ರಾಮದಲ್ಲಿ ವೃತ್ತಿತಃ ಸರ್ವಸರಕಿನ ಮಳಿಗೆಯನ್ನೇ (ಅಣ್ಣ ಮಂಜುನಾಥ ಉಪಾಧ್ಯರೊಡನೆ) ನಡೆಸುತ್ತಾರಾದರೂ ಯಾವ ಸಿದ್ಧ ಮಾದರಿಗಳೂ ಅವರಿಗೆ ಒಗ್ಗುವುದಿಲ್ಲ. ಅವರು ಬಹುತೇಕ ಹೊಸ ಮಾದರಿಯನ್ನೇ ಯೋಚಿಸುತ್ತಾರೆ ಅಥವಾ ಲಭ್ಯ ಮಾದರಿಯನ್ನು ತನ್ನ ತರ್ಕಬದ್ಧ ಮಿತಿಗಳಲ್ಲಿ ಹೆಚ್ಚು ಉಪಯುಕ್ತವಾಗುವಂತೆ ಮರುರೂಪಿಸಿಕೊಳ್ಳುತ್ತಾರೆ. ಇವೆಲ್ಲ ತೊಡಗುವುದು ಯಾವುದೇ ವಾಣಿಜ್ಯ ಅಥವಾ ಔದ್ಯಮಿಕ ಅಥವಾ ದಾಖಲೆ ಅಥವಾ ಪ್ರಚಾರೇತ್ಯಾದಿ ತುಡಿತಗಳಿಂದಲ್ಲ; ಕೇವಲ ಸ್ವಾಂತ ಸುಖಾಯ. ಅವುಗಳಲ್ಲಿ ಕೆಲವನ್ನು ವಿಸ್ತೃತ ಸಾಮಾಜಿಕ ಬಳಕೆಗೆ `ಸರಕಾ’ಗಿಯೇ ಒಡ್ಡಿದ್ದುಂಟು. ಆದರೆ ಅವು ತನ್ನ ಸಂಶೋಧನಾ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತವೆ ಎಂದು ಕಂಡಾಗ, ದಿಟ್ಟವಾಗಿ ಅವನ್ನು ವೃತ್ತಿಪರರಿಗೆ ನಿಶ್ಶುಲ್ಕ ವಹಿಸಿಕೊಟ್ಟು ಕೈತೊಳೆದುಕೊಂಡಿದ್ದಾರೆ! ಈ ಒಂದೊಂದೂ ಶೋಧಗಳನ್ನು ವಿವಿಧ ಹಂತಗಳಲ್ಲಿ ಪರಿಷ್ಕರಿಸಿದ ಮತ್ತು ಪೂರೈಸಿದ ಉಪಾಧ್ಯರ ಅನುಭವ ಕಥನ, ಅದೂ ಅವರದೆ ಮಾತುಗಳಲ್ಲಿ ಕೇಳುವುದೂ ಒಂದು ಅನನ್ಯ ಅನುಭವ.

ನಾವು ಶಿಬಿರವಾಸಗಳಲ್ಲಿ ನಿರಂತರ ಬೆಳಕಿಗೆ ಬಹಳ ಸಮಯ ಚಿಮಣಿ ಎಣ್ಣೆ ಲಾಂದ್ರ ಹೊರುತ್ತಿದ್ದೆವು. ಅದನ್ನು ಪ್ರತ್ಯೇಕ ಕೈಯಲ್ಲಿ ಹಿಡಿಯುವ, ಎಡವಿದರೆ ಗಾಜು ಒಡೆಯುವ, ಒಮ್ಮೊಮ್ಮೆ ನಮ್ಮರಿವಿಲ್ಲದೇ ಅದರಿಂದ ಸೀಮೆಣ್ಣೆ ಸೋರಿ ಹೋಗಿ ಅಗತ್ಯಕ್ಕೆ ಒದಗದ ಹತ್ತೆಂಟು ರಗಳೆಗೆ ಉಪಾಧ್ಯರು ಪುಟ್ಟ ಕ್ಯಾಂಡಲ್ ಲಾಂದ್ರ ಮಾಡಿಕೊಂಡಿದ್ದರು. ರಂಗನಾಥಸ್ತಂಭ ಕಾಲದಲ್ಲಿ ಅವರು ರೂಪಿಸಿದ್ದ ಗುಡಾರ, ಸರ್ವ ಸರಕಿನ ಬೆನ್ನ ಚೀಲ, ಒಕ್ಕಣ್ಣಿನ ದೂರದರ್ಶಕ ಮುಂತಾದವು ನಿಮಗೆ ತಿಳಿದವೇ ಇವೆ. ಉಪಾಧ್ಯರು ಮದುವೆಯಾಗಿಲ್ಲ. ಅಂಗಡಿಯ ಹಿರಿಯ ಪಾಲುದಾರನೂ ಆತ್ಮೀಯನೂ ಆದ ಅಣ್ಣನ ಮನೆ (ಸಕುಟುಂಬ) ಹತ್ತಿರದಲ್ಲೇ ಇದ್ದರೂ ಇವರು ಸ್ವತಂತ್ರವಾಗಿರುವುದರಲ್ಲಿ ಹೆಚ್ಚಿನ ಸಂತೋಷ ಕಂಡವರು. ಸಹಜವಾಗಿ ಕಡಿಮೆ ಸರಕಿನಲ್ಲಿ, ಮಿತವ್ಯಯದೊಡನೆ, ಹೆಚ್ಚು ರುಚಿಕರ ಅಡುಗೆ ವೈವಿಧ್ಯಕ್ಕೂ ಉಪಾಧ್ಯರಲ್ಲಿ ಕಾರ್ಯಸೂಚಿ ಇದೆ. ಅವರಿದ್ದ ಶಿಬಿರಗಳಲ್ಲಿ ನಾನಂತೂ ನಿಶ್ಚಿಂತವಾಗಿ ಸಹಾಯಕನ ಕೆಲಸಕ್ಕಿಳಿಯುವವನೇ!

ಒಮ್ಮೆ ಬಳಸಿದ ದಾರಿ ಮತ್ತೊಮ್ಮೆಗೆ ತಪ್ಪಿದರೆ ಸಾಮಾನ್ಯವಾಗಿ “ಮರೆವು” ಎಂದು ಮುಗಿಸುತ್ತೇವೆ. ಆದರೆ ಪ್ರತೀ ಬಾರಿ ತಪ್ಪಿದರೆ “ವೆಂಕಟ್ರಮಣ ಉಪಾಧ್ಯ” ಅನ್ನಲೇಬೇಕು! ಸಲಕರಣೆಗಳ ಕುರಿತಂತೆ ಯಾವುದೇ ಲಕ್ಷ್ಯಕ್ಕೆ ಅವರು ಹಲವು ಸಾಧ್ಯತೆಗಳನ್ನು ಕಾಣುತ್ತಾರೆ ಮತ್ತು ಸಾಧಿಸುತ್ತಾರೆ ಎನ್ನುವ ಮಾತು, ದಾರಿಯ ಕುರಿತಂತೆ ಮಾತ್ರ ಅನುದ್ದೇಶಿತವಾಗಿ ಆಗುತ್ತದೆ ಮತ್ತು ಅವರೂ ಸೇರಿದಂತೆ ನಮಗೆಲ್ಲರಿಗೆ ಬಲು ದೊಡ್ಡ ತಮಾಷೆಯ ಸಂಗತಿಯೂ ಆಗುತ್ತಿರುತ್ತದೆ. ಅವರು ಮೊದಲ ಬಾರಿಗೆ ನನ್ನೊಡನೆ ಕುದುರೆಮುಖ ಶಿಖರಕ್ಕೆ ಬಂದಾಗ, ಪೂರ್ಣ ಮೋಹಪರವಶರಾಗಿದ್ದರು. ಊರಿಗೆ ಮರಳಿದ ಮೇಲೆ ಅಲ್ಲಿನ ಖಾಸಾ ಮಿತ್ರರರುಗಳನ್ನು ಜತೆ ಮಾಡಿಕೊಳ್ಳುತ್ತಾ ಮತ್ತೆ ಕುದುರೆಮುಖಕ್ಕೆ ಕೊಟ್ಟ ಭೇಟಿ ಅಸಂಖ್ಯ. ಆದರೆ ಪ್ರತಿಬಾರಿಯೂ (ಅವರ ಬಹುಗಾಲದ ಸಹಚಾರಣಿಗ) ಕುಶಿ ಹರ್ಷವರ್ಧನ ಭಟ್ “ಅಯ್ಯೋ ಉಪಾದ್ರಿಗೆ ಮತ್ತೆ ದಾರಿ ತಪ್ಪಿದ್ದಲ್ವಾ” ಎಂದಾಗ, ಹೊಟ್ಟೆ ಹಿಡಿದು ನಗುವಲ್ಲಿ ನಾನು ಜತೆಗಾರನಾಗುತ್ತೇನೆ.

ಕುದುರೆಮುಖದಲ್ಲಿನ ಆಕಾಶ, ಮೋಡರಹಿತ ಯಾವುದೇ ರಾತ್ರಿಯಲ್ಲೂ ಅದ್ಭುತ ಅನುಭವವೇ. ಅದರಲ್ಲೂ ಅಮಾವಾಸ್ಯೆಯ ರಾತ್ರಿ - ವಿಶೇಷ ಹೊಳಪುಗೊಟ್ಟ, ಮುಕ್ತ ರತ್ನಭಾಂಡಾಗಾರ (ಶೀರ್ಷಿಕೆಯಲ್ಲಿ ಹೇಳಿದಂತೆ - ಎಣಿಸಲಾಗದ ಅಪ್ಪ ಕೊಟ್ಟ ಕಾಸೇ ಸರಿ). ವೆಂಕಟ್ರಮಣ ಉಪಾಧ್ಯರ ಕುದುರೆಮುಖದ ಬಗೆಗಿನ ಪ್ರಥಮಾದ್ಯತೆಯ ಪ್ರೀತಿಯಾದರೂ ಆಕಾಶವೀಕ್ಷಣೆಯದ್ದೇ. ಸ್ವತಃ ಮಸೂರಗಳನ್ನು ಉಜ್ಜುವಲ್ಲಿಂದ ಇವರು ಮಾಡಿದ ಸಾಧನೆಗಳನ್ನು ನೀವೀಗಾಗಲೇ ಓದಿದ್ದೀರಿ (ಬೆಳ್ಳಿಬರೆಯಿಂದ ಕೊಡಚಾದ್ರಿಯ ಮುಡಿಗೆ)

ಉಪಾಧ್ಯರು ಒಮ್ಮೆ ಕೇವಲ ನಕ್ಷತ್ರವೀಕ್ಷಣೆಗಾಗಿಯೇ ಒಂದುತಂಡವನ್ನು ಕುದುರೆಮುಖಕ್ಕೆ ಹೊರಡಿಸಿದ್ದರು. ಅಂದಿನ ಮುಖ್ಯ ಮತ್ತು ಭಾರೀ ಹೊರೆ - ಎರಡು ಮಾರುದ್ದದ ಭಾರೀ ದುರ್ಬೀನು, ಅದನ್ನು ಅಸಮ ನೆಲದಲ್ಲೂ ದೃಢವಾಗಿ ಹೊತ್ತು ನಿಲ್ಲಿಸಲು ಹೆಣಭಾರದ ಮುಗ್ಗಾಲಿ (ಎರಡೂ ಉಪಾಧ್ಯರವೇ ನಿರ್ಮಾಣ) ಮತ್ತು `ಗಗನ ವೀಕ್ಷಕರ ಭಗವದ್ಗೀತೆ’ – ಇಂಗ್ಲಿಷಿನ ಭಾರೀ ಗ್ರಂಥ. ಅವುಗಳ ತೂಕವನ್ನು ಸರಿದೂಗಿಸಲು ಸದಸ್ಯರೆಲ್ಲ ಚಳಿ ಬಟ್ಟೆಯೂ ಸೇರಿದಂತೆ ಹಲವು ಮಾಮೂಲೀ ಹೊರೆಗಳನ್ನು ಕಡಿತಗೊಳಿಸಿದ್ದರು. ತಂಡ ಎಂದಿನಂತೆ ತಪ್ಪುದಾರಿಯಲ್ಲಿ ತುಸು ಬಳಸಾಡಿದರೂ ಕತ್ತಲಿಗೆ ಮುನ್ನ ಶಿಖರ ಸೇರಿತ್ತು. ಅಮಾವಾಸ್ಯೆಯ ಗಗನವೂ ಮೋಡರಹಿತವಾಗಿತ್ತು. ತಂಡದ ಹೊಟ್ಟೆಪಾಡು, ದೇಹ ಸೌಖ್ಯ, ಬಲುಶ್ರಮದಿಂದ ಒಯ್ದ ಸಲಕರಣೆಗಳೂ ಸೇರಿದಂತೆ ಎಲ್ಲ ಚೆನ್ನಾಗಿಯೇ ಇತ್ತು. ಆದರೆ ಗಗನವೀಕ್ಷಣೆ ಮಾತ್ರ ಇವರಿಂದಾಗಲೇ ಇಲ್ಲ. ಕಾರಣ - ಅಲ್ಲಿನ ತೀವ್ರ ಚಳಿಗೆ ಗದಗುಟ್ಟಿ ನಡುಗುತ್ತಿದ್ದ ಯಾವ ಕೈಗೂ ಮುಗ್ಗಾಲಿಯ ಮೇಲಿನ ದುರ್ಬೀನನ್ನು ಗ್ರಹ, ನಕ್ಷತ್ರಗಳ ಮೇಲೆ ಕೇಂದ್ರೀಕರಿಸುವುದು ಸಾಧ್ಯವಾಗಲೇ ಇಲ್ಲ! ಬರಿದೇ ಅಂಗಾತ ಮಲಗಿ ಕಣ್ತುಂಬಿಕೊಳ್ಳಲೂ ಇವರಲ್ಲಿ ಬೆಚ್ಚನೆ ಉಡುಪುಗಳೇನೂ ಇರಲಿಲ್ಲ. ತಡವಾಗಿ ಕಟ್ಟಿಗೆ ಸಂಗ್ರಹಕ್ಕಿಳಿದುದರಿಂದ ಅದೂ ಸರಿಯಾಗಲಿಲ್ಲ. ಶಿಬಿರಾಗ್ನಿಯ ನೆಪದಲ್ಲಿ ಮೂಗಿನಲ್ಲಿ ನೀರಿಳಿಸಿಕೊಂಡು, ಕಣ್ಣಲ್ಲಿ ಹೊಗೆ ತುಂಬಿಕೊಂಡು, ಸಿಡಿಮಿಡಿಗುಟ್ಟುವ ಕಿಡಿಗಳನ್ನೇ ನಕ್ಷತ್ರವೆಂದು ಭ್ರಮಿಸುತ್ತ ಜಾಗರಣೆ ಮಾಡಿ, ಬದುಕಿದ್ದಕ್ಕೆ ಸಂತಸಪಡುತ್ತಾ ಮರಳಿದ್ದರು!

ಅವಶೇಷಗಳ ಮೇಲೊಂದು ನೋಟ
ಶಿಖರ ಪ್ರದೇಶಕ್ಕೆ ಬಂದವರಿಗೆ ಮೊದಲು ಸಿಗುವುದೇ ಇಗರ್ಜಿ. ಮೊದಲೇ ಹೇಳಿದಂತೆ ನಡುವೆ ಒಮ್ಮೆ ಪ್ರವಾಸೋದ್ಯಮ ಇಲಾಖೆಯ ಕಾಟಾಚಾರದ `ಅಭಿವೃದ್ಧಿ’ ಮರೆತರೆ ಇದು ಎಂದೂ ನಮಗೆ ಕನಿಷ್ಠ ವಾಸಯೋಗ್ಯ ನೆಲವನ್ನೂ ಕೊಟ್ಟದ್ದಿಲ್ಲ. ನಮ್ಮ ಈಚಿನ ಭೇಟಿಯಲ್ಲಿ ನಾವದನ್ನು ದೂರದಿಂದಲೇ ನೋಡಿಬಿಟ್ಟೆವು. ಹೆಚ್ಚು ಕಾಡು ಆವರಿಸಿದಂತಿತ್ತು. ಮೋಟುಗೋಡೆ, ಜರಿದ ಚಪ್ಪರಗಳಿಗೆ ಋತುಮಾನದ ಶಿಲ್ಪಿ ಎಲ್ಲ ಅಳಿಸಲು ಇನ್ನದೆಷ್ಟು ಹೊಡೆತ ನೀಡಬೇಕೋ.

ಅದೊಂದು ತಂಡದಲ್ಲಿ ಎಲ್ಲ ಇಗರ್ಜಿಯೊಳಗಿನ ವಿವಿಧ ಕೋಣೆಗಳನ್ನು ಗುರುತಿಸುತ್ತ ಗದ್ದಲವೆಬ್ಬಿಸಿದ್ದೆವು. ಆಗ ಬಹುಶಃ ಪ್ರಾರ್ಥನಾ ವೇದಿಕೆಯ (ಆಲ್ಟರ್) ಬಳಿ, ಕುಸಿದು ಕೂತಿದ್ದ ಹಳೆಗಾಲದ ಭಾರೀ ಮರದ ತೊಲೆಗೆ ಪಂಡಿತಾರಾಧ್ಯರು ಕ್ರಿಸ್ತಾಭಿನಯದಲ್ಲಿ ಒರಗಿ ನಿಂತು, ಗಂಭೀರ ಧ್ವನಿಯಲ್ಲಿ “ಪರಲೋಕದಲ್ಲಿರುವ ಓ ನನ್ನ ತಂದೆ, ಕ್ಷಮಿಸು ಇವರನ್ನು. ತಾವೇನು ಗಳಹುತ್ತೇವೆಂದು ತಿಳಿಯರು ಅವರು.” 
 [೧೯೬೯ರಲ್ಲಿ ನಾನಿನ್ನೂ ಪ್ರಥಮ ಬಿಎ ವಿದ್ಯಾರ್ಥಿಯಾಗಿ ಮೈಸೂರಿನಲ್ಲಿದ್ದಾಗಲೇ ಮೂರೋ ನಾಲ್ಕೋ ವರ್ಷ ಹಿರಿಯ ವಿದ್ಯಾರ್ಥಿಯಾಗಿ ಪರಿಚಯಕ್ಕೆ ಬಂದವರು – ಎಂ.ಎನ್.ವಿ.ಪಂಡಿತಾರಾಧ್ಯ. ೧೯೭೫ರಲ್ಲಿ ನಾನು ಮಂಗಳೂರಿಗೆ ಬರುವಾಗ ಅವರು ಇಲ್ಲಿನ ಸ್ನಾತಕೋತ್ತರ ಕೇಂದ್ರದಲ್ಲಿ ಬಹು ವಿದ್ಯಾರ್ಥಿಪ್ರಿಯ ಅಧ್ಯಾಪಕರಾಗಿ ನೆಲೆಸಿದ್ದರು. ವಿದ್ಯಾರ್ಥಿ ದೆಸೆಯಲ್ಲಿ ಅವರು ನನ್ನ ಪರ್ವತಾರೋಹಿ ಹವ್ಯಾಸವನ್ನು ಹಚ್ಚಿಕೊಂಡವರಲ್ಲ. ಆದರೆ ಮಂಗಳೂರಲ್ಲಿ ನನ್ನ ಮೊದಲ ಅಂಗಡ್ಯೇತರ ಕಲಾಪಗಳಲ್ಲಿ ಬಿಡುವಿದ್ದಾಗಲೆಲ್ಲ ತಾವೂ ವಿದ್ಯಾರ್ಥಿಮಿತ್ರರನ್ನು ಕಟ್ಟಿಕೊಂಡೂ ಭಾಗಿಯಾದ ಕಥನಗಳನ್ನು ನೀವಿಲ್ಲಿ (ಮುಖ್ಯವಾಗಿ ಜಮಾಲಾಬಾದ್) ಓದಿಯೇ ಇರ್ತೀರಿ. ಇವರು ವೃತ್ತಿರಂಗದಲ್ಲಿ ದೊಡ್ಡ ನ್ಯಾಯಿಕ ಹೋರಾಟ (ವಿವಿನಿಲಯದ ಎದುರು) ನಡೆಸಿ, ಗೆದ್ದು, ಮೈಸೂರಿಗೆ ಮರಳಿದ್ದು, ಸಾಮರ್ಥ್ಯದಿಂದ ಹೆಸರಿಗೊಂದು `ಡಾ|’ ಸೇರಿಕೊಂಡಾಗ ಸಾಮಾನ್ಯ ಸಂಬೋಧನೆಗೆ ನಿರರ್ಥಕವೆಂದು ಕಂಡು `ಎಂ.ಎನ್.ವಿ.’ ಕಳಚಿಕೊಂಡದ್ದು ಮುಂತಾದವೆಲ್ಲ ಇಲ್ಲಿ ವಿಸ್ತರಿಸುವುದಿಲ್ಲ. ನನ್ನ ಬಹುತೇಕ ವೈಚಾರಿಕ ನಿಲುವುಗಳನ್ನು ಗುಣವರಿತು ಗಟ್ಟಿಯಾಗಿ ಬೆಂಬಲಿಸುವಲ್ಲಿ (ಗುಹಾಪ್ರಕರಣಗಳು, ವೈಜ್ಞಾನಿಕ ಮನೋಧರ್ಮ, ಪ್ರಾಕೃತಿಕ ಸತ್ಯಗಳು ಇತ್ಯಾದಿ), ಮುಂದುವರಿದು ಇಂದು ಗಣಕ ಲೋಕದ ವಿಹಾರದಲ್ಲಿ, ಸಹೃದಯಿಯಾಗಿ, ಕನ್ನಡದ ನಿಜ-ಕಾವಲುಗಾರನಾಗಿಯೂ ನೀವೆಲ್ಲಾ ಕಾಣುತ್ತಲೇ ಇರುವುದರಿಂದ ನಾನು ಹೆಚ್ಚೇನು ಹೇಳಬೇಕಾಗಿಯೂ ಇಲ್ಲ.] 
ನಮ್ಮ ಶಿಬಿರತಾಣದ ಹಿಂದೆ ಸಾಗುವ ಗಾಡಿದಾರಿ ಬಹುತೇಕ ಕಾಡಿನಿಂದ ಮುಚ್ಚಿಹೋಗಿದೆ. ಆದರೂ ಅನುಸರಿಸಿದರೆ ಐದು ಮಿನಿಟಿನಲ್ಲಿ ಕಾಡು ಸವರಿ ಕಟ್ಟಡ ನಿಲ್ಲಿಸಿದ ಅವಶೇಷಗಳನ್ನು ಧಾರಾಳ ನೋಡಬಹುದು. ಸೋಜಾ ತಿಳಿಸಿದಂತೆ, ಅಲ್ಲಿ ಅತಿಥಿಗೃಹದ ರಚನೆಗಳಿದ್ದುವಂತೆ. ಅದರ ಎದುರಿನ ಇಳಿಜಾರಿನಲ್ಲಿ ನಡುವೆ ವಿಸ್ತಾರ ಸೋಪಾನಗಳನ್ನು ಮಾಡಿ, ಎಡಬಲಗಳಲ್ಲಿ ಎರಡು ಮೂರು ಹಂತಗಳಲ್ಲಿ ಉದ್ಯಾನವನವೂ ಇತ್ತಂತೆ. ಬಂಗ್ಲೆಯ ಹಿತ್ತಿಲಿನಾಚೆಯ ಹುಲ್ಲ ಗುಡ್ಡೆ -  ಅಜ್ಜನಗುಡ್ಡೆ. ಇದು ಕಾಟಿಬೇಟೆಗೆ ಹೇಳಿ ಮಾಡಿದ ಸ್ಥಳವೆಂದೇ ಸೋಜಾ ಪೀಠಿಕೆ ಹೊಡೆದಿದ್ದ. “ನಾವು ಪಟ ಮಾತ್ರ ಹೊಡೀತೇವೆ, ಹೆಚ್ಚೆಂದರೆ (ಬಾಯಿ-ಪಟಾಕಿಯೂ ಸೇರಿದಂತೆ) ಪಟಾಕಿ; ಖಂಡಿತಾ ತುಪಾಕಿಯಲ್ಲ” ಎಂದದ್ದು ಸೋಜಾನಿಗೆ ನಗೆ ತರಿಸಿತ್ತು. ಅಜ್ಜನಗುಡ್ಡೆಯಿಂದ ಶಿಖರ ಸಾಲಿನಲ್ಲೇ ಮುಖ್ಯ ಶಿಖರದಂಚಿನವರೆಗೂ ಬ್ರಿಟೀಷರು ಗಾಲ್ಫ್ ಕೋರ್ಸ್ ಹೊಂದಿಸಿಕೊಂಡಿದ್ದರಂತೆ. 

ಅಜ್ಜನಗುಡ್ಡೆಯಲ್ಲಿ ಸೋಜಾ ಎರಡು ಬ್ರಿಟಿಷ್ `ದೂಪೆ’ಗಳನ್ನು ತೋರಿಸಿದ್ದ. ಅಂದಿನ ನಮ್ಮ ಭಾಷಾಜ್ಞಾನದಲ್ಲಿ ಸುಮ್ಮನೆ ಗೋಣಾಡಿಸಿದ್ದೆವು. ಹಾಗೆಂದರೆ `ಸಮಾಧಿ’ ಎಂದು ನಮಗೆ ಮಂಗಳೂರಿಗೆ ಮರಳಿದ ಮೇಲೇ ತಿಳಿದುಬಂತು! `ಗೈಡೆನ್ಸ್’ ಇಲ್ಲದವರು ಕಾಲಾಂತರದಲ್ಲಿ ಅದನ್ನು ನಿಧಿಶೋಧಕ್ಕೆ ಕೆದರಾಡಿಯೋ ಗೋರಿಕಲ್ಲಿಗೆ ಕುಂಕುಮ ಬಡಿದೋ ಒಟ್ಟಾರೆ ರಚನೆಗೆ ಚಾದರ ಹೊದಿಸಿಯೋ ವಲಯ ಸಂಕೀರ್ಣಗೊಳ್ಳುವ ಮುನ್ನ, ಇಂದು, ಎಲ್ಲ ವನ್ಯದೊಳಗೆ ಸೇರಿದ್ದು ಒಳ್ಳೇದಾಯ್ತು.

ಒಂದು ಕನಸು….
ಅದೊಂದು ಸಂಜೆ ಐದು ಗಂಟೆಯ ಸುಮಾರಿಗೆ ನಾನು ಅಂದಿನ ತಂಡದೊಡನೆ ಶಿಖರಾಗ್ರ ಭಾಗ ಸೇರಿದ್ದೆ. ಹಾಗೇ ಶಿಖರ ಸಾಲಿನ ತುದಿಯವರೆಗೆ, ಅಂದರೆ ಗೋಮುಖ ಅಥವಾ ಮಿಜ್ ಪಾಯಿಂಟ್,  ಕೊನೆಯ ಫುಲ್ ಸ್ಟಾಪ್‍ವರೆಗೂ ಕಾಲು ಬೆಳೆಸಿ ಮುಖ್ಯ ಶಿಖರದಲ್ಲೇ ಕುಳಿತು ಕಣಿವೆಯ ವಿಸ್ತಾರವನ್ನು ನೋಡುತ್ತಲೇ ಇದ್ದೆ.

ದಿನದಾಟ ಮುಗಿಸಿದ ಸೂರ್ಯ ಮೋಡಗಳ ಅಟ್ಟಳಿಗೆಗಳಲ್ಲಿ ಇಳಿಯಿಳಿಯುತ್ತ ದಿಗಂಬರಕ್ಕೆ ಬೆಳ್ಳಿ ಚಿನ್ನದ ಝರಿ ಕೆಲಸ ನಡೆಸಿದ್ದ. ಕಡಲಿನಲ್ಲಿ ಆತ ಕಾಲಾಡಿಸಿದ್ದಕ್ಕೆ ದಿಗಂತ ಕೆಂಪೇರಿತ್ತು. ನೀರು ನುಂಗಿತೋ ಕತ್ತಲು ನೂಕಿತೋ ಅಲ್ಲ ಇವನೇ ದಿನದ ಶ್ರಮ ಮತ್ತು ಬೇಗೆಗೆ ಬೇಸತ್ತು ಹಾರಿಕೊಂಡನೋ ಅಂತೂ ಸೂರ್ಯ ಕಣ್ಮರೆಯಾದ. ಕತ್ತಲಲ್ಲೆ ಶಿಬಿರ ಸೇರಿದೆವು. ರಾತ್ರಿಯ ಚಳಿ ತೀವ್ರ ತರವಾಗಿತ್ತು. ಬಿಸಿಗಂಜಿಗೆ ಹಸಿ ತರಕಾರಿಗಳ ಪಚ್ಚಡಿ ಮತ್ತು ಉಪ್ಪಿನಕಾಯಿಯ ಒಪ್ಪ ಕೊಟ್ಟು ಎಲ್ಲರೊಡನೆ ಪಟ್ಟಾಗಿ ಹೊಡೆದೆ. ನಿಶಾ ಪಹರೆಯಲ್ಲಿ ನನ್ನ ಸರದಿ ಕೊನೆಯದು. ಹಾಗಾಗಿ ಶಿಬಿರಾಗ್ನಿಯಿಂದ ನಿರಪಾಯ ಅಂತರ ಕಾಪಾಡಿಕೊಂಡು ಬೆಚ್ಚನ್ನ ಜಮಖಾನ, ಹೊದಿಕೆಗಳ ಗರ್ಭ ಸೇರಿದ್ದೆ. ಪಹರಿಗಳ ಗುಸುಗುಸು, ಬೆಂಕಿಯ ಕಿಟಿಪಿಟಿ, ಕೆಲವೊಮ್ಮೆ ಕೊಂಡ ಕುಸಿದ ಸದ್ದು, ಆಗೀಗ ಕಾಡೊಳಗಿನ ನಿಗೂಢ ಧ್ವನಿಗಳು ನನ್ನ ನಿದ್ರೆಯನ್ನು ದೂರವೇ ಉಳಿಸಿದ್ದುವು. ಉಂಡು ಉಳಿದ ಗಂಜಿಪಾತ್ರೆಯನ್ನು ಶಿಬಿರಾಗ್ನಿಯ ಅಂಚಿನ ಕೆಂಡದಲ್ಲಿ ಹುಗಿದಿಟ್ಟು, ಪಹರಿಗಳು ಆಗಾಗ ಕುಡಿಯುವುದಿತ್ತು. ಹೊತ್ತು ಕಳೆದಂತೆ, ಪಹರಿಗಳು ಬದಲುತ್ತಿದ್ದರು, ನಿದ್ರೆಗಿಂತ ಚಳಿ ಹೆಚ್ಚಾದವರೂ ಸೇರಿಕೊಳ್ಳುತ್ತಿದ್ದರು, ಗಂಜಿ ಮುಗಿದಾಗ ಕೆಂಡದ ಮೇಲೆ ಚಾ ಪಾತ್ರೆ ಏರಿತ್ತು, ಕುರುಕಲು ಪೊಟ್ಟಣ ಅರಳಿತ್ತು… ನಾನು ಎಂದೋ ನಿದ್ರಾಲೋಕ ಸೇರಿಹೋದೆ. ಅಲ್ಲೊಂದು ರಮ್ಯ ಕನಸು…

[ಮುಂದಿನ ಕಂತಿನಲ್ಲಿ ಕನಸಿನಲೋಕಕ್ಕೆ ಪ್ರವೇಶದ ಹಾಸಲು ನಿಮ್ಮ ಇಂದಿನ ಪ್ರತಿಕ್ರಿಯೆ :-)]

3 comments:

 1. ಇದು ಹಿಂದೊಮ್ಮೆ ಪ್ರಕಟವಾಗಿತ್ತಲ್ಲವೆ?
  'ಗುಣಗಾಣ'ಕ್ಕೆ ಮತ್ತೆ ಏಕೆ ಒಡ್ಡಿದಿರಿ?

  ReplyDelete
  Replies
  1. ಕುದುರೆಮುಖದಾಸುಪಾಸುವಿನಲ್ಲಿ ಹಿಂದೆ ನನ್ನ ಜಾಲತಾಣದಲ್ಲಿ ಬಾರದ ಸಂಗತಿಗಳನ್ನೇ ಮೊದಲ ಬಾರಿಗೆ ಪ್ರಕಟಿಸುತ್ತಿದ್ದೇನೆ. `ಗುಣಗಾಣ' ಸಾಂದರ್ಭಿಕವಾಗಿ ಜಮಾಲಾಬಾದಾದಿ ಇತರ ಪ್ರಕರಣಗಳಲ್ಲಿ ಬಂದದ್ದಿರಬಹುದು. ಅದು ಭಿನ್ನರೂಪದಲ್ಲಿರಬಹುದು. ಮತ್ತಿಲ್ಲಿನದು ಆರಿಸು, ಕತ್ತರಿಸು, ಅಂಟಿಸು ಕ್ರಿಯೆಯಂತೂ ಖಂಡಿತ ಅಲ್ಲ :-)

   Delete
 2. ಚೆನ್ನಾಗಿ ಓದಿಸಿಕೊಂಡು ಹೋಗುತ್ತಿದೆ..... ಕನಸಿನ ಕಥಾಭಾಗಕ್ಕಾಗಿ ಕಾಯುತ್ತಿದ್ದೇವೆ.

  ಗಿರೀಶ್, ಬಜಪೆ

  ReplyDelete