06 January 2015

ಉತ್ಸಾಹಭಂಗ

ಅಧ್ಯಾ ಮೂವತ್ತೇಳು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಮೂವತ್ತೊಂಬತ್ತನೇ ಕಂತು
ನನ್ನ ಹೊಸ ವಿಧದ ಜೀವನಕ್ರಮವನ್ನು ಅನುಸರಿಸುತ್ತ ಒಂದು ವಾರದ ಮೇಲೆ ಸಮಯ ದಾಟಿತು. ಜೀವನಕ್ಕಾಗಿ ಎಂಥ ಪರಿಶ್ರಮಗಳನ್ನಾದರೂ ಕೈಗೊಳ್ಳಲೇಬೇಕು, ಎಂಥ ತ್ಯಾಗಗಳನ್ನಾದರೂ ಮಾಡಲೇಬೇಕೆಂಬ ನನ್ನ ಮೊದಲಿನ ನಿರ್ಧಾರ ಈಗಲೂ ಉಜ್ವಲವಾಗಿಯೇ ಉಳಿದಿತ್ತು. ಇಷ್ಟರಲ್ಲೇ ಮೆಲ್ಲಗೆ ನಡೆಯುವ ಅಭ್ಯಾಸವನ್ನೇ ಮರೆತುಬಿಟ್ಟಿದ್ದೆ. ಎಷ್ಟೆಷ್ಟು ಚುರುಕಾಗಿ ನಡೆದು ಎಷ್ಟೆಷ್ಟು ಬೆವರು ಸುರಿಸಿ ದುಡಿವೆನೋ ಅಷ್ಟಷ್ಟೇ ತುಂಬಾ ನಾನು ಡೋರಾಳ ಸಾಮೀಪ್ಯಕ್ಕೆ ತಲಪುತ್ತಿದ್ದೇನೆಂದು ಗ್ರಹಿಸುತ್ತಿದ್ದೆನು. ನನ್ನನ್ನೇ ಡೋರಾಳಿಗೆ ಆಹುತಿಯಾಗಿ ಸಮರ್ಪಿಸಬೇಕಾಗಿ ಬಂದಿದ್ದರೂ ನಾನದಕ್ಕೆ ತಯಾರಾಗಿಯೇ ಇದ್ದೆನು. ಖರ್ಚುಗಳನ್ನೆಲ್ಲ ಆದಷ್ಟು ಕಡಿಮೆ  ಮಾಡಿದೆ. ಈ ಉದ್ದೇಶಕ್ಕಾಗಿಯೇ ಶಾಕಾಹಾರವನ್ನು ಮಾತ್ರ ಸೇವಿಸಬೇಕೆಂದೂ ನಿರ್ಧರಿಸಿದೆನು. ಈ ಎಲ್ಲ ತ್ಯಾಗಗಳಿಂದ ಡೋರಾಳನ್ನು ಪಡೆಯಲಿರುವ ಯಜ್ಞವನ್ನೇ ಮಾಡುತ್ತಿದ್ದೆನು.

ಮಿ. ಡಿಕ್ಕರು ಕ್ರಮವಾಗಿ ಹಣ ಸಂಪಾದಿಸುತ್ತಿದ್ದರು. ಇದರಿಂದ ಅವರ ಆನಂದಕ್ಕೆ ಪಾರವೇ ಇರಲಿಲ್ಲ. ನಮ್ಮೆಲ್ಲರನ್ನು ಪೋಷಣೆ ಮಾಡುವ ಜವಾಬ್ದಾರಿಯನ್ನು ತಾನು ಹೊತ್ತಿರುವವರಂತೆ ಅವರು ಬಹು ಠೀವಿಯಿಂದ ಅತ್ತಿತ್ತ ತಿರುಗುವುದೇ ಒಂದು ಆನಂದದ ದೃಶ್ಯವಾಗಿತ್ತು. ಮಿ. ಡಿಕ್ಕರು ಹೀಗೆ ಗ್ರಹಿಸುತ್ತಿದ್ದಾಗ ಅತ್ತೆ ಇನ್ನೊಂದು ವಿಧದಲ್ಲಿ ಗ್ರಹಿಸಿ ಸಂತೋಷಿಸುತ್ತಿದ್ದಳು. ಮಿ.ಡಿಕ್ಕರ ಯೋಗ್ಯತೆ ತಿಳಿಯದಿದ್ದವರೆಲ್ಲ ಈಗಲಾದರೂ ತಿಳಿಯುವ ಸಂದರ್ಭ ಬಂದಿದೆಯೆಂಬುದು ಅವಳ ಸಂತೋಷ. ನಮ್ಮ ಮನೆಯೊಳಗಿನ ವ್ಯವಸ್ಥೆಯನ್ನು ಅತ್ತೆಯೇ ನೋಡಿ ಸರಿಪಡಿಸುತ್ತಿದ್ದಳು. ಮಿಸೆಸ್ ಕೃಪ್ಸಳು ಅತ್ತೆಯಿಂದ ಪರಾಜಿತಳಾಗಿ – ಅವಳ ಸೋಲನ್ನು ಒಪ್ಪಿ, ಅತ್ತೆಯ ಎದುರು ಬರುವುದನ್ನೇ ನಿಲ್ಲಿಸಿಬಿಟ್ಟಳು.


ಈ ಸಮಯದಲ್ಲಿ ಬಾರ್ಕಿಸ್ ಪೆಗಟಿ ಯಾರ್ಮತ್ತಿಗೆ ಹೋದಳು. ಅವಳು ಹೋಗುವ ಮೊದಲು, ಹಿಂದಿನ ಅವಳ ಕ್ರಮದಿಂದಲೇ ನನ್ನನ್ನು ಅಪ್ಪಿಕೊಂಡು, ಅಳುತ್ತಾ ತನ್ನ ಸಹಾಯವನ್ನು ಯಾವತ್ತು ಬೇಕಾದರೂ ನಾನು ಪತ್ರ ಬರೆದು ಅಪೇಕ್ಷಿಸಬಹುದೆಂದು ಹೇಳಿದಳು. ಅಷ್ಟು ಅಲ್ಲದೆ ನಾನು ಹಣದ ಸಹಾಯ ಬೇಕಾದರೂ ಪತ್ರ ಬರೆಯಬಹುದೆಂದೂ ತಿಳಿಸಿದಳು. ಕೊನೆಗೆ, ನಾನು ಡೋರಾಳನ್ನು ಮದುವೆಯಾಗಿ, ಸ್ವಂತ ಗೃಹಕೃತ್ಯ ನಡೆಸುವಾಗ ಆ ಮನೆಯನ್ನು ಸಜ್ಜುಗೊಳಿಸುವ ಕೆಲಸವನ್ನು ತನ್ನಿಂದಲೇ ನಾನು ಮಾಡಿಸುವುದಾಗಿಯೂ ನನ್ನಿಂದ ವಾಗ್ದಾನ ಪಡಕೊಂಡಳು.

ನನ್ನ ಬಡಸ್ತಿಕೆಯನ್ನು ಕುರಿತು ಡೋರಾಳಿಗೆ ತಿಳಿಸುವುದು ನನ್ನ ಕರ್ತವ್ಯವೆಂದು ನಿಶ್ಚೈಸಿಕೊಂಡು, ಒಂದು ದಿನ, ನನಗೆ ರಜವಿದ್ದಾಗ, ಮಿ. ಸ್ಪೆನ್ಲೋರ ಮನೆಗೆ ಹೋದೆನು. ಮಿ. ಸ್ಪೆನ್ಲೋರು ಆ ದಿನ ಸ್ವಲ್ಪ ಹೆಚ್ಚು ಹೊತ್ತು ಮನೆಯಲ್ಲಿದ್ದುದರಿಂದ, ನಾನು ಸ್ವಲ್ಪ ಹೊರಗೆ ರಸ್ತೆಯಲ್ಲಿ ಕಾಯಬೇಕಾಗಿತ್ತು. ಮಿ. ಸ್ಪೆನ್ಲೋರು ಮನೆಯಿಂದ ಹೊರಗೆ ಹೋದ ಸಂಕೇತವಾಗಿ ಏರ್ಪಡಿಸಿಕೊಂಡಿದ್ದ ಗಿಳಿಪಂಜರವು ಡೋರಾಳ ಕಿಟಕಿಯ ಹೊರಗೆ ತೂಗಾಡಿಸಿದ್ದು ಕಂಡಮೇಲೆ ನಾನು ಮನೆಯನ್ನು ಪ್ರವೇಶಿಸಿದೆನು.

ಡೋರಾಳು ನನ್ನನ್ನು ಜಿಪ್ಪ್ ಸಮೇತವಾಗಿ ಬಂದು ಎದುರುಗೊಂಡು ತನ್ನ ಕೋಣೆಗೆ ಕರೆದುಕೊಂಡು ಹೋದಳು. ಅಪೂರ್ವಕ್ಕೆ ನಡೆದಿದ್ದ ಈ ಭೇಟಿಯಲ್ಲಿ ನಾನು ಹೇಗೆಲ್ಲ ಮಾತಾಡಬೇಕೆಂದು ಮೊದಲೇ ನಿಶ್ಚೈಸಿಕೊಂಡೇ ಅಲ್ಲಿಗೆ ಹೋಗಿದ್ದರೂ ಡೋರಾಳ ದರ್ಶನದ ಮರುಕ್ಷಣ ಆ ಮಾತೆಲ್ಲ ಮರೆತುಹೋಯಿತು. ನಾನು ಸ್ವಲ್ಪ ಅಚಾತುರ್ಯದಿಂದಲೇ ಮಾತನ್ನು ಪ್ರಾರಂಭಿಸಿದೆನು.
“ಮುದ್ದು ಡೋರಾ, ನಮ್ಮೊಳಗಿನ ಅನುರಾಗವೆಲ್ಲ ಸರಿ. ಆದರೆ, ನೀನು ಒಬ್ಬ ದರಿದ್ರನನ್ನು, ತಿರುಕನನ್ನು ಪ್ರೀತಿಸಬಲ್ಲೆಯಾ?” ಎಂದು ಕೇಳಿಹೋಯಿತು.
“ಏನು ಹುಚ್ಚು ಹಿಡಿದಿದೆಯೋ ನಿನಗೆ! ತಿರುಕನನ್ನು ಪ್ರೀತಿಸಬೇಕು ನಾನೂಂತ ಹೇಳ್ತಿಯೇನು!” ಎಂದು ತುಟಿ ತಿರುಟಿಸಿಕೊಂಡು, ನಸು ನಗುತ್ತಾ ಕೇಳಿದಳು ಡೋರಾ.
“ಡೋರಾ, ನನ್ನ ಪರಮಪ್ರಿಯ ಡೋರಾ, ಆ ದರಿದ್ರನೇ, ತಿರುಕನೇ ನಾನು”
“ನನ್ನೆದುರಿಗೆ ಕುಳಿತು ಏನೇನಾದರೂ ಹರಟಿದರೆ ಜೋಕೆ! ಜಿಪ್ಪನನ್ನು ಛೂ ಬಿಡುತ್ತೇನೆ ನೋಡು!” ಅಂದಳು ಡೋರಾ.
ನನ್ನ ಮಾತನ್ನು ಡೋರಾ ಅರ್ಥಮಾಡಿರಲಿಲ್ಲವೆಂಬುದು ಸ್ಪಷ್ಟ. ನನ್ನ ಮುಖದಿಂದಲೂ ಅವಳು ತಿಳಿಯಲಿಲ್ಲ. ಅವಳು ಕೇವಲ ಹಸುಳೆಯಂತೆ ಸರಳವಾಗಿ, ವಿನೋದಪ್ರಿಯಳಾಗಿ ವರ್ತಿಸತೊಡಗಿದಳು.
“ನನ್ನ ಆಸ್ತಿಗಳೆಲ್ಲಾ ಕೈತಪ್ಪಿ ಹೋಗಿವೆ. ನಾನು ಕೇವಲ ಬಡವ ಡೋರಾ” ಎಂದಂದದ್ದಕ್ಕೆ,
“ಈ ಠಕ್ಕು ವಿದ್ಯವನ್ನೆಲ್ಲ ಎಲ್ಲಿ ಕಲಿತೆ! ನೋಡು, ಇನ್ನೂ ಹಾಗೆ ಮಾತಾಡಿದರೆ ಜಿಪ್ಪನನ್ನು ಖಂಡಿತವಾಗಿಯೂ ಬಿಡುತ್ತೇನೆ” ಅಂದಳು.

ಕೊನೆಗೆ ನಾನು ಅವಳ ಪಾದದ ಸಮೀಪ ಕುಳಿತು, ಅವಳ ಕೈಗಳನ್ನು ಹಿಡಿದುಕೊಂಡು, ನಮ್ಮ ಮನೆಯ ಪರಿಸ್ಥಿತಿಯನ್ನೆಲ್ಲಾ ವಿವರಿಸಿ ತಿಳಿಸಿದೆನು. ಅವಳು ಎಲ್ಲವನ್ನೂ ಕೇಳುತ್ತಾ ಮಾತಾಡುವ ಬದಲು ಅಳಲಾರಂಭಿಸಿದಳು.
“ನನ್ನ ಇಂದಿನ ಸ್ಥಿತಿ ಹೀಗಿದ್ದಾಗ್ಯೂ ನಿನ್ನನ್ನು ಹೊಂದಲು ಬೇಕಾದ ಸಕಲ ಯೋಗ್ಯತೆಗಳನ್ನೂ ಮೊದಲು ಪಡೆದೇ ನಿನ್ನ ಬಳಿಗೆ ಬರುವೆನು ಡೋರಾ. ಅನುದಿನವೂ ಕೆಲಸಮಾಡಿ ಹಣ ಸಂಪಾದಿಸುವೆನು. ಹಣವಂತನಾಗಿ ನಾನು ನಿನ್ನಲ್ಲಿಗೆ ಬಂದು ನಿನ್ನ ಪ್ರೇಮವನ್ನು ಯಾಚಿಸಿದರೆ ಆಗ ದಯಪಾಲಿಸುವೆಯಾ ಡೋರಾ” ಎಂದು ಗದ್ಗದ ಕಂಠದಿಂದ ಕೇಳಿದೆನು.

ನನ್ನ ಸ್ಥಿತಿಯನ್ನು ನೋಡಿ ಅವಳಿಗೆ ಸಹಿಸಲಾರದೆ ಆಗಿರಬೇಕು. ನನ್ನನ್ನು ಪರಿಪೂರ್ಣವಾಗಿ ಪ್ರೀತಿಸುತ್ತಿದ್ದುದ್ದರಿಂದ, ನನ್ನ ಈ ಬಡತನದ ವಿವರಗಳೆಲ್ಲ ಬಹು ವಿಘ್ನಕಾರಿಗಳಾಗಿ ತೋರಿ, ನನ್ನ ಈ ವಿಧದ ಮಾತನ್ನು ನಿಲ್ಲಿಸುವುದಕ್ಕಾಗಿ ಸಹ, ಸಂತೋಷದಿಂದಲೇ ಅಂದಳು –
“ನಾನು ಯಾವುದಕ್ಕೂ ತಯಾರು. ನಾನು ನಿನ್ನವಳೇ ಆಗಿರುವೆನು. ನಿನ್ನ ಸಂತೋಷವೇ ನನ್ನ ಸಂತೋಷ. ಇನ್ನಾದರೂ ಆ ಒರಟು ಮಾತು ಬಿಡು.”
“ನೀನು ಅಷ್ಟು ತಿಳಿಸಿದ್ದು ಸಮಾಧಾನ. ನಾನು ಕೆಲಸಮಾಡಿ, ಹಣ ಸಂಪಾದಿಸಿ, ಊಟ ತಿಂಡಿಗಳಲ್ಲಿ ಬಿಗಿಹಿಡಿದು, ಶಿಲ್ಲಿಂಗ್ ಪೆನ್ನಿಗಳನ್ನು ಕೂಡಿಟ್ಟು ಶ್ರೀಮಂತನಾಗಲು ಸ್ವಲ್ಪ ಸಮಯ ಬೇಕಾಗಬಹುದು. ನೀನು ಎಲ್ಲವನ್ನು ಆಲೋಚಿಸಬೇಕು – ತಿಳಿಯದೆ, ಆವೇಶ ಭರದಿಂದ, ಉತ್ತರ ಕೊಡಬಾರದು” ಎಂದಂದೆನು.

ಡೋರಾ ನನ್ನನ್ನು ಅಪ್ಪಿ ಹಿಡಿದುಕೊಂಡು, ಎಳೆಗೂಸು ನೋಡುವಂತೆ ನನ್ನನ್ನೇ ಮೌನವಾಗಿ ಸ್ವಲ್ಪ ನೋಡಿ, ಗಾಬರಿಯಿಂದಲೂ ದುಃಖದಿಂದಲೂ –
“ನೋಡು, ನೀನು ಆ ರೀತಿಯಲ್ಲೆಲ್ಲ ನನ್ನನ್ನು ಹೆದರಿಸಬಾರದು - `ಬಿಗಿ ಹಿಡಿದು’, `ಶಿಲ್ಲಿಂಗ್ ಪೆನ್ನಿ’ – ಹೀಗೆಲ್ಲಾ ಹೇಳಿ ಹೆದರಿಸಬಾರದು. ಏನೇ ಆದರೂ ನನಗೂ ಜಿಪ್ಪನಿಗೂ ಸದಾ ತಿಂಡಿ ಬೇಕೇ ಬೇಕು. ಜೋಕೆ, ಇನ್ನು ಹೆದರಿಸಬೇಡ” ಅಂದಳು.

ಅವಳನ್ನು ಸಮಾಧಾನಪಡಿಸುವುದಕ್ಕಾಗಿ ಅನಂತರ ನಾನು ಕೆಲವು ಮಾತುಗಳನ್ನಾಡಬೇಕಾಯಿತು. ನಮ್ಮ ಮನೆಯೊಳಗಿನ ಸಕಲ ವ್ಯವಸ್ಥೆಗಳಿಗೆ ಅತ್ತೆಯಿರುತ್ತಾಳೆ. ನಾನು ಬೆಳಗ್ಗೆ ಎದ್ದು ನನ್ನ ಹೊರಗಿನ ಕೆಲಸವನ್ನು ಮಾಡಿಕೊಂಡು ಬರುವೆನು. ಡೋರಾಳು ಬೇಕಾದರೆ ತಡವಾಗಿ ಏಳಬಹುದು. ಮನೆ ಖರ್ಚಿನ ಲೆಖ್ಖಗಳನ್ನು ಡೋರಾಳು ಬರೆದಿಡಬೇಕು. ಅತ್ತೆಯ ಶಿಸ್ತು, ಅವಳ ಪ್ರೇಮ, ನಮ್ಮ ಸಂಸಾರದ ಹಿತವನ್ನು ಬಯಸಿ ಕೆಲಸಮಾಡುವ ಅವಳ ಶ್ರದ್ಧೆ – ಇವುಗಳನ್ನೆಲ್ಲ ಡೋರಾಳಿಗೆ ತಿಳಿಸಿದೆನು. ಹೀಗೆ ನಾವು ನಡೆದದ್ದಾದರೆ ನಮ್ಮ ಕಷ್ಟವೆಲ್ಲ ಪಾರಾಗಿ, ನಾವು ಸುಖ ಸಂತೋಷವನ್ನು ಕಾಣುವೆವು – ಎಂಬಿತ್ಯಾದಿಯಾಗಿ ವಿವರಿಸಿದೆನು. ಅವಳ ಎಳೆ ಮನಸ್ಸಿಗೆ ನನ್ನ ಮಾತುಗಳು ಅರ್ಥವಾಗಲಿಲ್ಲ. ಅವಳು ಅಪಾರ್ಥವನ್ನೇ ಕಲ್ಪಿಸಿಕೊಂಡಿರಬೇಕು. ನಾನೊಬ್ಬ ಕಾರ್ಮಿಕ ದಿನಕೂಲಿಯವನೆಂದೂ ಅತ್ತೆ ಶಿಸ್ತಿನ ಭೀಕರ ಸ್ವರೂಪಳೆಂದೂ ಲೆಖ್ಖ ಪತ್ರಗಳನ್ನಿಡುವ ಕೆಲಸ ಅವಳಿಗೆ ಕೊಡಲಾಗುವ ಹಿಂಸೆಯೆಂದೂ ಅವಳು ಅರ್ಥಮಾಡಿರಬೇಕು. ನನ್ನ ವಿವರವನ್ನು ಕೇಳಿ ಪೂರೈಸುವಷ್ಟರಲ್ಲೇ ಮುಖದಲ್ಲಿ ಬಿಳುಪೇರಿ ಅವಳು ಸ್ಮೃತಿ ತಪ್ಪಿ ಬಿದ್ದಳು.

ನಾನು ಗಾಬರಿಯಾದೆನು. ಈವರೆಗೆ ಉದ್ದೇಶಪೂರ್ವಕವಾಗಿಯೇ ಕೋಣೆಯ ಹೊರಗಿದ್ದ ಮಿಸ್ ಮಿಲ್ಸಳು ನಾನು ಕರೆದ ಕೂಡಲೇ ಒಳಗೆ ಬಂದು ನೋಡಿದಳು. ಡೋರಾಳ ಪರಿಸ್ಥಿತಿಯಿಂದ ವಿಶೇಷ ಗಾಬರಿಗೊಳ್ಳದೆ ಸ್ವಲ್ಪ ತಣ್ಣೀರು ತಂದು ಅವಳ ಮುಖದ ಮೇಲೆ ಚಿಮುಕಿಸಿ, ಅವಳನ್ನು ಎಬ್ಬಿಸಿದಳು. ಅನಂತರ ಡೋರಾಳೊಡನೆ ತುಂಬಾ ಮಾತಾಡಿ ಅವಳನ್ನು ಸಮಾಧಾನಗೊಳಿಸಿದಳು. ಡೋರಾ ನನ್ನ ಮೇಲೆ ಸಿಟ್ಟಾಗಿರಲಿಲ್ಲ. ನನ್ನನ್ನು ಸಂತೋಷಗೊಳಿಸಬೇಕೆಂದೇ ಒಂದು ಪದವನ್ನೂ ಅವಳು ಹಾಡಿದಳು.

ಅನಂತರ ನಾನು ನಮ್ಮ ಮನೆಗೆ ಹೊರಟು ಬಂದೆನು. ಅನಂತರದ ದಿನಗಳಲ್ಲಿ ನಾನು ಡೋರಾಳಿಗೋಸ್ಕರ ಶ್ರಮಪಟ್ಟದ್ದಕ್ಕೆ ಮಿತಿಯಿಲ್ಲ. ಕಬ್ಬಿಣವನ್ನು ಕಾಯಿಸಿ ಬಡಿಯುವಂತೆ ದೇಹಶ್ರಮವನ್ನು ವಿವಿಧ ರೂಪದಲ್ಲಿ ವಹಿಸಿ ಹಣ ಸಂಪಾದಿಸತೊಡಗಿದೆನು. ಇಂಥ ಶ್ರಮಗಳನ್ನು ಕೈಗೊಳ್ಳುತ್ತಿದ್ದಾಗಲೆಲ್ಲ ನನ್ನ ಆ ಪರಿಸ್ಥಿತಿಯನ್ನು  ಡೋರಾಳು ತಿಳಿದರೆ ಅವಳ ಮೇಲೆ ಎಂಥಾ ಪರಿಣಾಮವಾಗಬಹುದೋ ಎಂದು ಹೆದರುತ್ತಿದ್ದೆನು. 

ಒಮ್ಮೊಮ್ಮೆ ಈ ತೆರನಾದ ಕಾಯಕಷ್ಟದ ಕೆಲಸಗಳನ್ನು ಬಿಟ್ಟು ಡೋರಾಳಿಗಾಗಿ ಮೃದು-ಮಧುರ ರೀತಿಯಿಂದ ಹಣ ಸಂಪಾದಿಸಲು ಸಾಧ್ಯವಾಗಬಹುದೇ ಎಂದೂ ಆಲೋಚಿಸುತ್ತಿದ್ದೆನು. ಆದರೆ, ಇಂಥ ಮೃದು-ಮಧುರ ವೃತ್ತಿಗಳಿಂದ ಡೋರಾಳನ್ನು ಸೇರುವುದಾದ ಪಕ್ಷಕ್ಕೆ, ನಮ್ಮಿಬ್ಬರ ನಡುವೆ ಇದ್ದ ದಾರಿದ್ರ್ಯದ ಕಾಡನ್ನು ವೀಣೆ ಮೃದಂಗಗಳಿಂದ ನಾಶಮಾಡಲು ಸಾಧ್ಯವಾಗಬಹುದೇ, ಕೊಡಲಿ ಚಮ್ಮಟಿಗಳನ್ನು ಬಿಟ್ಟು ಈ ಮಾರ್ಗದಿಂದ ಮುಂದುವರಿದಾಗ, ಗುರಿಗೆ ತಲುಪುವಾಗ ನನ್ನ ತಲೆ ನರೆದು ನಾನೊಬ್ಬ ಮುದುಕನೇ ಆಗಿಬಿಡಬಹುದಲ್ಲವೇ ಎಂದು ಹೆದರುತ್ತಿದ್ದೆನು.

(ಮುಂದುವರಿಯಲಿದೆ)

2 comments:

  1. ಧನ್ಯವಾದಗಳು. ಶಾಖಾಹಾರ? ಶಾಕಾಹಾರ?

    ReplyDelete
    Replies
    1. ತಿದ್ದಿಕೊಂಡಿದ್ದೇನೆ, ಧನ್ಯವಾದಗಳು.

      Delete