26 December 2014

ಬೆಟ್ಟದ ಮೇಲಿನ `ಮನೆ’

(ಕುದುರೆಮುಖದಾಸುಪಾಸು ೪)
ಮಟ ಮಟ ಮಧ್ಯಾಹ್ನ ಹೇವಳ ಮುಟ್ಟಿದ್ದೆವು (೧೯೮೩ರ ಹಗಲು ತಂಡ). ಎದುರು ವಿಸ್ತಾರ ಬೋಗುಣಿಯಂಥಾ ಕಣಿವೆ. ಎಡಕ್ಕೆ ಕುದುರೆಮುಖ, ಬಲಕ್ಕೆ ಹಿರಿಮರುದುಪ್ಪೆ – ಹೇವಳದ ಬೋಗುಣಿಗೆ ಭರ್ಜರಿ ಅಂಚುಗಟ್ಟೆಗಳು. ಕುದುರೆಮುಖದ ಈ ಖಾಸಾ ಒಕ್ಕಲುಗಳ ಮನೆ, ಜನ, ಜಾನುವಾರು, ಕೃಷಿ ನಮ್ಮಲ್ಲಿ ಕೆಲವರನ್ನು ತುಸು ಹೆಚ್ಚೇ ಆಕರ್ಷಿಸಿದ್ದಿರಬೇಕು. ಮತ್ತೆ ಅಲ್ಲಿನ ಭಾವ ಸೋಜಾ ಸೂಚನೆ, ಬೆಂಬಲವೂ ಸಿಕ್ಕಿರಬೇಕು. ಒಂದು ಮನೆಗೆ ಹೋಗಿ ಮಜ್ಜಿಗೆ ಕೇಳಿದೆವು. ನಮ್ಮ ಸೋತ ಮುಖಗಳನ್ನು ನೋಡಿ ಅವರು ಹೊಟ್ಟೆ ತುಂಬ ಕುಡಿಯಲು ಕೊಟ್ಟುದಲ್ಲದೆ ಜೊತೆಗೆ ಒಯ್ಯಲು ಕೂಡಾ ಕೊಟ್ಟರು. ಅವರಿಗೆ ಧನ್ಯವಾದ (“ಅದಕ್ಕೆಲ್ಲ ಹಣ ಎಂಥದ್ದು?” ಎನ್ನುವ ಕಾಲವದು) ಅರ್ಪಿಸಿ ಮೇಲಕ್ಕೆ ಮುಂದುವರಿದಿದ್ದೆವು.

ಮೊದಲ ಗುಡ್ಡದಲ್ಲಿ ಹೇವಳದ ಜನ ಜಾನುವಾರು ಬಳಸಿದ ಹಲವಾರು ಜಾಡುಗಳು ಸ್ಪಷ್ಟವಿದ್ದವು. ನಾವು ಹೇವಳದವರ ನೀರಾವರಿ ನಾಲೆಯ ಒತ್ತಿನ ನೇರ ಜಾಡನ್ನೇ ಆರಿಸಿಕೊಂಡೆವು. ಹಾಗೆ ಆ ಕೊನೆಯಲ್ಲಿ, ಒಂಟಿಮರದಡಿಯಲ್ಲಿ ಊಟದ ಬಿಡುವು. ಅಲ್ಲಿನ ತಣ್ಣನೆ ನೀರು ಮುಖಕ್ಕೆ ತಳಿಯುವುದೇ ಒಂದು ಚೇತೋಹಾರಿ ಅನುಭವ. ಮಟ್ಟಸ ನೆಲದ ಹುಲ್ಲ ಹಾಸಿನ ಮೇಲೆ ಪಟ್ಟಾಗಿ ಕುಳಿತು, ಕಟ್ಟಿ ಒಯ್ದ ಚಪಾತಿಗೆ ಚಟ್ನಿ, ಉಪ್ಪಿನಕಾಯಿ, ಜಾಮ್ ಮೊದಲಾದ ಪಕ್ಕ ವಾದ್ಯ ಕೊಟ್ಟು ಹೊಟ್ಟೆಯ ಹಾಡನ್ನು ತಣಿಸಿದೆವು. ಬಿಟ್ಟಿ ಒದಗಿದ್ದ ಮಜ್ಜಿಗೆಗೆ ಹೆಚ್ಚೇ ನೀರು, ಉಪ್ಪು ಸೇರಿಸಿ ಮಂಗಳ ಹಾಡಿದೆವು.


ಸರಳವಾಗಿ ಹೊಟ್ಟೆಗಷ್ಟು ಹಾಕಿದ್ದನ್ನು ಸಂಗೀತ ಮಾಡಿದ್ದಕ್ಕೆ ಕ್ಷಮೆಯಿರಲಿ. ಆದರೆ ಇಂಥಲ್ಲೆಲ್ಲ ನನಗೆ ನಿಜಕ್ಕೂ ರಾಗ ಲಹರಿಗಳು ಬರುತ್ತಲೇ ಇರುತ್ತವೆ; ಯಾವುದೇ ಶಾಸ್ತ್ರ ಪರಿಣತಿಯಿಂದಲ್ಲ, ಸಾಹಿತ್ಯಶಕ್ತಿಯಿಂದಲೂ ಅಲ್ಲ, ಕೇವಲ ಕೇಳ್ಮೆಯ ಕೋಶದಿಂದ ಅಪರಿಪೂರ್ಣ ಲಹರಿ. ಆದರೆ ಈ ಅಪಲಾಪಕ್ಕೂ ಉಲ್ಲಾಸದ ಪ್ರತಿಸ್ಪಂದನೆಯಲ್ಲಿ ತಂಡದ ಸದಸ್ಯ ಸಂಪತ್ಕುಮಾರ್ ಮತ್ತು ತಮ್ಮಣ್ಣ ಉರುಫ್ ಸುಬ್ರಹ್ಮಣ್ಯ ಬಲು ಚುರುಕು. ತಮ್ಮಣ್ಣನಿಗಾದರೋ ಕರ್ನಾಟಕ ಸಂಗೀತದ ಹಲವು ವರ್ಷಗಳ ಕಲಿಕೆ ಹಾಗೂ ಅಪಾರ ಕೇಳ್ಮೆಯ ಬಲವಿದೆ. ಅದಕ್ಕೂ ಹೆಚ್ಚಿಗೆ ನನ್ನ ಖಯಾಲಿ ಹುಟ್ಟಿದಾರಭ್ಯ ಅವನು ಅನುಭವಿಸಿದವನೇ. 


ಸಂಪತ್ಕುಮಾರ್ ಹಾಗಲ್ಲ ಎನ್ನುವುದಕ್ಕೆ ಅವರ ಪರಿಚಯದ ನಾಲ್ಕು ಮಾತು ಇಲ್ಲೆ ಸೇರಿಸಿಬಿಡುತ್ತೇನೆ. ಪ್ರೊ| ಸಂಪತ್ಕುಮಾರ್ ಮಂಗಳೂರು ವಿವಿನಿಲಯದ ಗಣಿತ ಪ್ರಾಧ್ಯಾಪಕ. ಕಲಿಕಾ ಮಾಧ್ಯಮ ಪ್ರಾದೇಶಿಕ ಭಾಷೆ ಕನ್ನಡವೇ ಸರಿ ಎನ್ನುವುದನ್ನು ಸ್ವಂತ ವಿದ್ಯಾರ್ಥಿ ಜೀವನದಲ್ಲಿ ಅನುಷ್ಠಾನಿಸಿ ತೋರಿದ ಅಸಾಮಾನ್ಯ. ಅಂತಿಮ ಬಿ.ಎಸ್ಸಿ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿ ಉತ್ತರಿಸಿ, ಸಾರ್ವಜನಿಕದಲ್ಲೂ ಉತ್ತಮ ಶ್ರೇಣಿಯಲ್ಲಿ ಸ್ನಾತಕರಾದವರು. (ಅಲ್ಲಿ ಗಣಿತ ಮತ್ತು ಭೌತ ವಿಜ್ಞಾನಗಳು ಇವರ ಐಚ್ಛಿಕಗಳು. ಸ್ನಾತಕೋತ್ತರದಲ್ಲಿ ಮಾಧ್ಯಮ ಸ್ವಾತ್ರಂತ್ರ್ಯ ಸಿಕ್ಕದೇ ಇದಾಗ ಇಂಗ್ಲಿಷಿನಲ್ಲೇ ಉತ್ತಮವಾಗಿ ಪೂರೈಸಿದ್ದರು.) ಅತ್ರಿ ಬುಕ್ ಸೆಂಟರಿನ (ಅಂದರೆ ನನ್ನ) ಏಕೈಕ ಸಂಬಳ ಮತ್ತು ಹುದ್ದೆರಹಿತ ಪ್ರಚಾರಾಧಿಕಾರಿಯಾಗಿದ್ದ ಪಂಡಿತಾರಾಧ್ಯರೇ ಇವರನ್ನೂ ನನಗೆ ಪರಿಚಯಿಸಿದ್ದಿರಬೇಕು. ಮತ್ತೆ ನನ್ನ ತಂದೆಯ ಮೇಲಿನ ಅಭಿಮಾನ ಹಾಗೂ ಸಹಜ ಪುಸ್ತಕ ಪ್ರೀತಿ ಸಂಬಂಧವನ್ನು ಗಾಢವಾಗಿಸಿತ್ತು. ಪ್ರಕೃತಿಪ್ರೇಮ ಮತ್ತು ಸರಳ ಮೈತ್ರಿ ಇವರ ಇನ್ನೊಂದು ಗುಣ. ಬಹುಶಃ ಆ ಗುಣಗಳೇ ಇವರನ್ನು ನನ್ನ ಚಾರಣಗಳಿಗೆ ತಳ್ಳಿದ್ದಿರಬೇಕು. ಪರ್ವತಾರೋಹಣದಲ್ಲಿ ವಿಶೇಷ ಹಿನ್ನೆಲೆಯಿಲ್ಲದೆಯೂ ಇವರು ೧೯೮೨ರ `ಬನ್ನಿ ಬಲ್ಲಾಳರಾಯನ ದುರ್ಗಕ್ಕೆ’ ಓಗೊಟ್ಟರು. ದೀರ್ಘ ಮತ್ತು ತುಸು ದಢೂತಿ ಎನ್ನುವ ದೇಹ ಸಂಪತ್ತು ಇವರದು. ಎರಡು ದಿನದ ಆ ಕಾರ್ಯಕ್ರಮದ ಕೊನೆಯ ಹಂತದಲ್ಲಿ, ಬಂಡಾಜೆ ಅಬ್ಬಿಯ ಪಾತ್ರೆಯಲ್ಲಿ ಇವರು ಸುಸ್ತಿನ ಪರಿಣಾಮದಲ್ಲಿ ತಪ್ಪಡಿಯಿಟ್ಟು, ಐದಾರು ಅಡಿ ತಗ್ಗಿನಲ್ಲಿದ್ದ ಕಲ್ಲಿನ ಮೇಲೆ ಕುಸಿದು ಬಿದ್ದ ಪರಿ ನನಗೆಂದೂ ಮರೆಯದು. ಬಂಡೆಗೆ ತಲೆಯಪ್ಪಳಿಸಬಹುದಿತ್ತು, ಸೊಂಟ ಅಥವಾ ಬೆನ್ನಹುರಿಗೆ ತೀವ್ರ ಆಘಾತವಾಗಬಹುದಿತ್ತು, ಕನಿಷ್ಠ ಕಾಲಾದರೂ ಮುರಿಯಬಹುದಿತ್ತು. ಅಂದು ಎಲ್ಲರ ಅದೃಷ್ಟಕ್ಕೆ ಇವರು ಏನೂ ಆಗದೆ ಬಚಾವಾದ್ದಕ್ಕೇ ಪ್ರಸ್ತುತ ಸಾಹಸಯಾನದಲ್ಲಿ ಕುದುರೆಮುಖಕ್ಕೂ ಬಂದಿದ್ದರು!

ಸಂಪತ್ಕುಮಾರ್ ವೃತ್ತಿಯಲ್ಲಿ ವರ್ಗಾವಣೆಯ ಅನುಕೂಲ ಒದಗಿದಾಗ ನಮ್ಮಿಂದ ದೂರಾಗಿದ್ದರು. ಆದರೆ ಈಚೆಗೆ ಅಂತರ್ಜಾಲದ ಅನುಕೂಲದಲ್ಲಿ  ಮತ್ತೆ ಸಂಪರ್ಕ ಬೆಳೆದಿದೆ. ಅವರದೇ ಮಾತಿನಲ್ಲಿ ಕುದುರೆಮುಖ ಸೇರಿದಂತೆ ಪರ್ವತಾರೋಹಣದ ಅನುಭವಗಳ ಟಿಪ್ಪಣಿ ಹೀಗಿದೆ: “ಕುದುರೇಮುಖದ ನೆನಪು ಸ್ವಲ್ಪ ಮಾಸಿದೆ! ನನ್ನಲ್ಲಿರುವ ಚಿತ್ರಗಳೆಲ್ಲ ನಿಮ್ಮಿಂದಲೇ ಪಡೆದದ್ದು. ನಾನು ನನ್ನ "ಚಾರಣ ಜೀವನ" ವನ್ನು ನಿಮ್ಮೊಡನೆ  ಬಲ್ಲಾಳರಾಯನದುರ್ಗದ ಚಾರಣದೊಂದಿಗೆ ಆರಂಭಿಸಿದೆ. ಆ ಚಾರಣದಿಂದ ನನ್ನ ಆರೋಗ್ಯ, ದೇಹದಾರ್ಡ್ಯದ ಬಗ್ಗೆ ಜ್ಞಾನೋದಯವಾಯಿತು! ಅಲ್ಲಿಂದ ಮುಂದೆ ನಿಮ್ಮ ಹಾಗೂ ಪಂಡಿತಾರಾಧ್ಯರೊಡನೆಯ ನನ್ನ ಸ್ನೇಹಕ್ಕೆ ನ್ಯಾಯವೆಸಗುವ ಗುರಿಯೊಡನೆ ನನ್ನ ಜೀವನ ಶೈಲಿಯಲ್ಲಿ ಗುರುತರ ಬದಲಾವಣೆ ಮಾಡಿಕೊಂಡೆ. ಆ ಬದಲಾವಣೆಯ ಲಾಭವನ್ನು ನಾನು ಈಗಲೂ ಅನುಭವಿಸುತ್ತಿದ್ದೇನೆ!

“ನಾನು ನನ್ನ ನಿವೃತ್ತಿ ಜೀವನವನ್ನು ಆರಂಭಿಸುವುದಕ್ಕೆ ಮೊದಲೊಮ್ಮೆ, ನನ್ನ ಇಬ್ಬರು ಒಡನಾಡಿಗಳೊಡನೆ ಕುದುರೇಮುಖ ಚಾರಣ ಮಾಡಿದ್ದೆ. ಅಲ್ಲಿ ಹೊಸ ಮೌಲ್ಯಗಳನ್ನು ಹೊತ್ತ ಚಾರಣ ನಿರತರನ್ನು ಕಂಡು ಖೇದವಾಯಿತು. ರಾತ್ರಿಯೆಲ್ಲಾ ತಮ್ಮೊಡನೆ ತಂದಿದ್ದ ಮದ್ಯದ ಕ್ರೇಟ್ ಖಾಲಿಯಾಗುವವರೆಗೆ ಕುಡಿದು, ತಿಂದು, ಮಿಕ್ಕಿದ ಎಂಜಲನ್ನೆಲ್ಲಾ ಅಲ್ಲಿ ಹರಿಯುವ ಝರಿಯಲ್ಲಿ ತೇಲಿಬಿಟ್ಟ ಕಂಟಕರು ಅವರು! ನಂತರ ತಿಳಿಯಿತು, ಆ ಅಸಂಸ್ಕೃತರು ಹೆಸರಾಂತ ಒಂದು ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರು.”

*             *             *             *             *

ಹಳಗಾಲದಲ್ಲೆಲ್ಲ ಹೇವಳದ ಒಂಟಿ ಮರ ಅಂದರೆ, ಶಿಖರ ದರ್ಶನ ಮತ್ತು ಆಹಾರ ಸೇವನೆಯ ತುಸು ದೀರ್ಘ ವಿಶ್ರಾಂತಿ ಎಂದೇ ಚೇತೋಹಾರಿ ಆಗಿರುತ್ತಿತ್ತು. ಆದರೆ ಈ ಬಾರಿ (೨೦೧೪) ಹಾಗಾಗಲಿಲ್ಲ. ಮುಳ್ಳೋಡಿಯಿಂದ ಮುಂದುವರಿಯುತ್ತಿದ್ದಂತೆ ಕುದುರೆಮುಖಕ್ಕೆ ಮುಸುಕೆಳೆದ ಮಂಜು, ದಟ್ಟವಾಗಿ ನಮ್ಮ ಮೇಲೂ ವ್ಯಾಪಿಸಿ ತೊಟಿಕಿಕ್ಕತೊಡಗಿತು. ನಾಲ್ಕೆಂಟು ಹನಿಯೆಂದು ತೊಡಗಿ ಅಸಂಖ್ಯವಾಗುತ್ತ ಹೋಗಿ, ನಮ್ಮೆಲ್ಲ ರಾಣೀಕೋಟು, ಪ್ಲ್ಯಾಸ್ಟಿಕ್ಕು ಜಾಗೃತವಾದುವು. ಕಾಡಿನ ಕಾವಳ ಹೆಚ್ಚಿ, ಬಿಬ್ಬಿರಿ ಸಮೂಹಗಾನ ತಾರಕ್ಕೇರಿ, ಕಾಲ್ದಾರಿ ತಚಪಚವಾಗುತ್ತಿದ್ದಂತೆ ಹೇವಳದ ಬಯಲು ಸೇರಿದ್ದೆವು.ಈ ಶತಮಾನದ ಆದಿಯಲ್ಲಿ ಮೂಲ ಹೇವಳಿಗರು (ಲೋಬೋ ವಂಶಜರು) ಸಾಂಪ್ರದಾಯಿಕ ಕೃಷಿಯೊಡನೆ ಬದಲಾದ ಕಾಲಕ್ಕೆ ಹೊಂದಲಾಗದೆ ನವೆಯುತ್ತಿದ್ದರು. ಸಹಜವಾಗಿ ಅದನ್ನು ಹೊರಗಿನವರು ಯಾರೋ ಕೊಂಡರು. ಕೊಂಡವರು ಆ ನೆಲದ ಮೇಲೆ ನಾಗರಿಕ ಅಭಿವೃದ್ಧಿಗಳ ಮಹಾಪೂರದೊಡನೆ ವಿಭಿನ್ನ ಉದ್ದಿಮೆಗಳ (ಪ್ರವಾಸೋದ್ಯಮ, ಪಶುಸಂಗೋಪನೆ ಇತ್ಯಾದಿ) ಕನಸು ಕಟ್ಟಿಕೊಂಡಿದ್ದರು. ಆದರೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಘೋಷಣೆ ಎಲ್ಲಕ್ಕೂ ಕಡಿವಾಣವಿಕ್ಕಿತು. ಕೆಲವು ವರ್ಷಗಳ ಏಗಾಟದ ಕೊನೆಯಲ್ಲಿ, ಅವರು ಕಾಲದ ಕಟ್ಟಲೆಗೆ ಶರಣಾಗಿ ಅಲ್ಲಿನೆಲ್ಲವನ್ನು ವನ್ಯ ಇಲಾಖೆಗೆ ಒಪ್ಪಿಸಿ ಹೊರನಡೆದಿದ್ದರು. ಹಾಗಾಗಿ ನಾನು ಇದೇ ಮೊದಲು ಹೇವಳದ ಬೋಗುಣಿಯಲ್ಲಿ ಮನೆಯಿಲ್ಲ, ಕೃಷಿಯಿಲ್ಲ ಎಂಬ ಸ್ಥಿತಿ ಕಂಡೆ. ಹುಡುಕಿ ನೋಡಿದರೆ ಪೊದೆಗಳ ಮರೆಯಲ್ಲಿ ಮನೆಯ ಅವಶೇಷಗಳು ಕಾಣಿಸಿಯಾವು, ಗುರುತಿಸಿ ಹೇಳುವುದಿದ್ದರೆ ಬದುವಿಲ್ಲದ ವಿಸ್ತಾರ ಹುಲ್ಲಹರಹುಗಳನ್ನು ಗದ್ದೆ ಎನ್ನಬಹುದಿತ್ತು – ಅಷ್ಟೆ. ಅಲ್ಲೆ ಒಂದೆರಡು ಕಡೆ ಯಾವುದೋ ಜಾನುವಾರಿನ ಕೇವಲ ಮೂಳೆ ಅವಶೇಷಗಳಷ್ಟೇ ಕಾಣಿಸಿದುವು. ಬಹುಶಃ ಅವು ಮುಳ್ಳೋಡಿಯವರು ಅನಾಥವಾಗಿಸಿದ್ದ ಜಾನುವಾರುಗಳು ವನ್ಯ ಮಾಂಸಾಹಾರಿಗಳಿಗೆ ಬಲಿಯಾದದ್ದಿರಲೂ ಬಹುದು. ಪ್ರಾಕೃತಿಕ ನಿಯಮವೇ ಅಷ್ಟು - ಸಮರ್ಥನಿಗಷ್ಟೇ ಉಳಿಗಾಲ!

ಸುಂದರ ರಾಯರು ಭಾರೀ ಚಾ ಭಕ್ತರು. ಈ ಸಾಹಸಯಾನದ ಯೋಜನಾ ಸಮಯದಲ್ಲಿ ನಾನು ಎಂದಿನಂತೆ ಚಾ ಅಥವಾ ಕಾಫಿ ಕಾಯಿಸುವ ಪ್ರಸ್ತಾಪ ಮಾಡಿದ್ದೆ. ಹುಡಿ, ಹಾಲು, ಸಕ್ಕರೆ ಹೊಂದಿಸುವುದು ಸಮಸ್ಯೆಯಲ್ಲ. ಆದರೆ ಪಾತ್ರೆ, ಬೆಂಕಿ ಎಂದ ಕೂಡಲೇ ಮಯ್ಯ ನೇರ ಪ್ರಶ್ನಿಸಿದ್ದ “ಬರಿಯ ನೀರು ಕುಡಿದರೆ ಸಾಲದೇ ಸಾರ್?” ಕಣ್ಣೆದುರು ಬೆಳೆದ ಹುಡುಗನೇ ಇಷ್ಟು ಗಂಭೀರವಾದಾಗ ರಾಯರಿಗೆ ಬೇರೆ ದಾರಿಯಿರಲಿಲ್ಲ. ಕನಿಷ್ಠ ರಾಜಪ್ಪನ ಚಾ ಆದರೂ ದಕ್ಕೀತೇ ಎಂದರೆ ಬೇಗ ಮನೆ ಬಿಟ್ಟದ್ದಕ್ಕೆ ಅದಕ್ಕೂ ಎರವಾಗಬೇಕಾಯ್ತು. ಈಗ ಪಟ್ಟು ಹಿಡಿದ ಮಳೆಯಿಂದ ಚೀಲದ ಒಳಗಿದ್ದ ತಿಂಡಿಯನ್ನೂ ಬಂಧಮುಕ್ತಗೊಳಿಸಲಾಗದ ಸ್ಥಿತಿ. ಮುಖದಲ್ಲಿಳಿಯುತ್ತಿದ್ದ ಮಳೆನೀರನ್ನಷ್ಟೇ ನೆಕ್ಕಿಕೊಂಡು, ಒಂಟಿಮರವನ್ನು ಮನದಲ್ಲೇ ಅನುಸಂಧಾನ ಮಾಡಿ, ನೇರ ಏರಿನ ಜಾಡು ಅನುಸರಿಸಿದೆವು. ಕಾಲ್ದಾರಿಯ ಕೊರಕಲುಗಳೆಲ್ಲ ಪಾದ ಮುಳುಗಿಸುವ ಮಳೆನೀರ ಚರಂಡಿಗಳು. ಅಂಚಿನಲ್ಲಿ ಸೊಕ್ಕಿ ನೋಡುತ್ತಿದ್ದ ಹುಲ್ಲಮುಡಿಗೆ ಕೈ ಹಾಕಿ, ಅದರ ಬುಡವನ್ನೇ ತುಳಿದು ನಡೆದೆವು. ನಾವೂರಿನ ದೀರ್ಘ ನಡೆ, ಉಗ್ರ ಬಿಸಿಲು, ಬೆನ್ನುಮುರಿಯುವ ಹೊರೆಗಳೇನೂ ಇಲ್ಲದ್ದಕ್ಕೋ ಏನೋ ನಿರೀಕ್ಷೆಗೂ ಮುನ್ನವೇ ಮಟ್ಟಸ ಗಾಡಿದಾರಿಯನ್ನು ಸೇರಿದ್ದೆವು. ವಾಸ್ತವದಲ್ಲಿ ನಾವು ಹೇವಳದ ನೀರ ಕಾಲುವೆ, ಕೊನೆಯಲ್ಲಿ ಸಿಗಬಹುದಾಗಿದ್ದ ಒಂಟಿ ಮರಕ್ಕೂ ಪೂರ್ವದಿಶೆಯಲ್ಲೇ ಏರಿದ್ದಾಗಿತ್ತು. ನಮಗೆ ಸಿಕ್ಕಿದ್ದಾದರೋ ಹೇವಳದಿಂದಲೇ ಮೇಲೇರುತ್ತಿದ್ದ ಗಾಡಿದಾರಿ. ನಾವು ದಾರಿಯಲ್ಲೇ ತುಸು ಹುಲ್ಲ ಹರಹು ಕಳೆಯುವಷ್ಟರಲ್ಲಿ ನಾವೂರಿನತ್ತಣಿಂದ ಬರುವ ಗಾಡಿದಾರಿಯನ್ನೂ ಸಂಧಿಸಿದೆವು. ಸಂಧಿಸ್ಥಾನವನ್ನು ಗುರುತಿಸುವಂತೆ ಕಟ್ಟಿದ್ದ ಸೈಜುಗಲ್ಲಿನ ಕಚ್ಚಾ ಕಟ್ಟೆ ನಮ್ಮ ಒಂಟಿಮರದ ಹಪಹಪಿಕೆಯನ್ನು ಅಣಕಿಸಿತ್ತು; ವನ್ಯ ಇಲಾಖೆಯ ನಿಯಮಗಳು ಕಠಿಣ!

ಜಿಗಣೆಗಳ ಕಾರುಭಾರು ಹೇವಳದವರೆಗೆ ಕಾಡಿನ ಮರೆ, ತರಗೆಲೆ ರಾಶಿಯಲ್ಲಿ ಕಾಪಿಟ್ಟ ನೀರಪಸೆಯಿಂದ ನಿರೀಕ್ಷಿತವೇ ಇತ್ತು. ಮುಂದೆ ಹುಲ್ಲ ಹಾಸಿನ ನಡುವೆ ಒಣ ನೆಲದಲ್ಲಿ ಕಡಿಮೆಯಿರಬಹುದೆಂದು ಭಾವಿಸಿದ್ದು ತಪ್ಪಾಯ್ತು. ಮಳೆ ಜಿಗಣೆ ಸಂಚಾರವನ್ನೂ ಹುಲುಸಾಗಿಟ್ಟಿತ್ತು. ಚಾರಣಕ್ಕೆ ಶೂವಿನಂಥ ದೃಢ ಹಾಗೂ ಪೂರ್ಣ ಪಾದರಕ್ಷೆ ನಿಸ್ಸಂದೇಹವಾಗಿ ಬೇಕು. ಮತ್ತವಕ್ಕೆ ಜಿಗಣೆ ನುಗ್ಗದಂತೆ ಮಾಡುವುದೂ (ಕುಮಾರಪರ್ವತ ಮತ್ತು ಕಪ್ಪೆ ಶಿಬಿರದ ಕಥಾನಕಗಳಲ್ಲಿ ವಿವರಿಸಿದಂತೆ) ಸುಲಭ. ಆದರೆ ಜಾಡಿನಲ್ಲಿ ಆಗಾಗ ತೊರೆಗಳನ್ನು ಇಳಿದೇ ದಾಟುವ ಅನಿವಾರ್ಯತೆ ಬರುವಲ್ಲಿನ ರಗಳೆಗಳು ಅಪಾರ. ಹಾಗಾಗಿ ಈಚಿನ ದಿನಗಳಲ್ಲಿ ನಮ್ಮ ತಂಡದಲ್ಲಿ ಹಲವರು ಶೂ ಖರೀದಿಯನ್ನೇ ನಿರಾಕರಿಸಿ, ಚಪ್ಪಲಿಗಳಲ್ಲೇ ಸುಧಾರಿಸುತ್ತಿದ್ದೆವು. ಆಗೊಂದು ಈಗೊಂದು ತೊರೆ ಬಿಟ್ಟು ಪೂರ್ಣ ಒಣ ಚಾರಣವೇ ಆದರೆ ಪ್ಲ್ಯಾಸ್ಟಿಕ್ ಚಪ್ಪಲಿಗಳದೂ ಇನ್ನೊಂದೇ ಸಮಸ್ಯೆ. ಪಾದ ಬಿಸಿಯೇರುವುದು, ಬೆರಳುಗಳ ತುದಿಯಲ್ಲಿ ಬೊಕ್ಕೆ ಬರುವುದು, ಹಾವೂ ಸೇರಿದಂತೆ ವಿಷಜಂತುಗಳ ಸಂಪರ್ಕವಾಗುವುದೆಲ್ಲ ಎಚ್ಚರವಹಿಸಬೇಕಾಗುತ್ತದೆ. ಆದರಿಲ್ಲಿ ಇನ್ನೊಂದೇ ಬಗೆಯ ಸಂಕಟ – ಕೆಸರು. ನಿಲ್ಲದ ಮಳೆ, ತೊರೆಯೇ ಆದ ಜಾಡಿನಿಂದ ಮರಳ ಕಣಗಳು ಚಪ್ಪಲಿಯೊಳಗೆಲ್ಲ ವ್ಯಾಪಿಸಿ ಘಾಸಿ ಮಾಡುತ್ತಿದ್ದವು. ಏರು ನಡೆಯಲ್ಲಿ ಕೆಸರಿನಿಂದಾಗಿ ಚಪ್ಪಲಿಯೊಳಗೇ ಪಾದ ಜಾರುವುದೂ ಇತ್ತು. ಇಳಿದಾರಿಯಲ್ಲಂತೂ ಇದು ವಿಪರೀತಕ್ಕಿಟ್ಟುಕೊಂಡು ಮಹೇಶ ತನ್ನ ಚಪ್ಪಲಿಯ ಎಲ್ಲಾ ಬಾರುಗಳನ್ನು ಹರಿದುಕೊಂಡು, ಬರಿಗಾಲಿನಲ್ಲಿ ನಡೆಯುವ ದಯನೀಯ ಸ್ಥಿತಿಗೇ ಇಳಿದಿದ್ದ! ತಮಾಷೆ ಎಂದರೆ, ಕಚ್ಚಾ ನೆಲದಲ್ಲಿ ಮುಕ್ತವಾಗಿ ಬರಿಗಾಲು ಬಳಸುವುದು ನಮಗಿಂದು ಮರೆತೇ ಹೋಗಿದೆ. ಒಳ್ಳೆಯ ಆವರಣವನ್ನಷ್ಟೇ ಕೊಡುವ ಬೂಟುಗಳು ಅದರ ಮಿತಿಯನ್ನು ನಮ್ಮಿಂದ ಮರೆಸುತ್ತವೆ. ಇದಕ್ಕೆ ಉದಾಹರಣೆಯಾಗಿ…

ದಾರಿ ತೆರ್ಮೆ (ಫರ್ನ್ಸ್ ಜಾತಿಯ ಸಸ್ಯ) ಸಂದಣಿಯನ್ನು ಹಾಯ್ದು, ವಾಟೆ ಹಿಂಡಲಿನೊಳಗೆ ನುಸಿದು ಒಂದು ಝರಿ ಪಾತ್ರೆಗೆ ಬಂತು. ಸಣ್ಣ ಮಟ್ಟಿನ ಜಲಪಾತವೇ ಧುಮುಕಿ, ದೊಡ್ಡ ಹಾಸುಬಂಡೆಯನ್ನು ವ್ಯಾಪಿಸಿ ಮತ್ತೆ ಸುಮಾರು ಹನ್ನೆರಡಡಿ ಆಳದ ಕೊರಕಲಿಗೆ ಕುಸಿದು ಹರಿದಿತ್ತು. ದಾರಿಯನ್ನು ಮಾತ್ರ ಪುಡಿ ಬಂಡೆಗಳನ್ನು ಗಿಡಿದು ಬಿಗಿಗೊಳಿಸಿದ್ದರು. ಆದರೂ ತಂಡ ಪಸೆ, ಪಾಚಿಗಳ ಬಗ್ಗೆ ಪರಸ್ಪರ ಎಚ್ಚರಿಕೆ ಕೊಟ್ಟುಕೊಳ್ಳುತ್ತ, ನೀರಿನ ವೈಭವವನ್ನು ಕಣ್ಣಿನಲ್ಲೂ ತುಸು ಹೊಟ್ಟೆಗೂ ತುಂಬಿಕೊಳ್ಳುತ್ತ ನಿಧಾನಕ್ಕೆ ದಾಟತೊಡಗಿತ್ತು. ನಾನಿನ್ನೂ ಸ್ವಲ್ಪ ಹಿಂದುಳಿದು ವಾಟೆ-ಗುಹೆಯ ಚಿತ್ರ ತೆಗೆದು ಮುಗಿಸಿರಲಿಲ್ಲ. ಒಮ್ಮೆಲೆ ಸುಂದರರಾಯರ ಬೊಬ್ಬೆ ಕೇಳಿಸಿತು. ಧಾವಿಸಿ ನೋಡುವುದೇನು – ಗಿರಿಧರ ಹಾಸುಗಲ್ಲಿನ ಮೇಲೆ ಕೈಕಾಲು ಹರಡಿ ಕವುಚಿ ಬಿದ್ದಿದ್ದರು! 


ನಮ್ಮ ಬಿಟ್ಟಿ ಸಲಹೆ ಅಥವಾ ಸಹಾಯ ಹಸ್ತ ಚಾಚುವುದರೊಳಗೆ ಅವರೇ ಸ್ತಿಮಿತ ಒಗ್ಗೂಡಿಸಿ, ನಿಧಾನಕ್ಕೆ ಕಲ್ಲಿನ ಚಡಿ, ಸಂದುಗಳನ್ನು ಬಳಸಿ ಈಚೆಗೆ ಬಂದರು. ಆದದ್ದಿಷ್ಟು: ಗಿರಿ ಬಲವಾದ ಬೂಟನ್ನೇನೋ ಹಾಕಿದ್ದರು. ಅದರ ಅಟ್ಟೆ ರಬ್ಬರಿನದು. ಗಿರಿ ಅದರ ಕಚ್ಚುಗಳ ಮಿತಿಯನ್ನು ಅಂದಾಜಿಸದೆ, ನೀರ ಹರಿವು ಕಳೆದದ್ದೇ ಹಗುರದ ಹೆಜ್ಜೆಯನ್ನು ಹಾಸು ಬಂಡೆಯ ಮೇಲೂರಿದ್ದಾರೆ - ಕವುಚಿ ಬಿದ್ದದ್ದೇ ಗೊತ್ತು. ಕೊಳ್ಳಕ್ಕೆ ಕೆಡೆಯಲಿಲ್ಲ, ಕೈಕಾಲು ಮೂಳೆಯೂ ಮುರಿಯಲಿಲ್ಲ; ಕ್ಷಣಿಕ ಮಾನಸಿಕ ಆಘಾತ ಬಿಟ್ಟರೆ ಏನೂ ಆಗಲಿಲ್ಲ ಎನ್ನುವುದು ನಿಜಕ್ಕೂ ಅದೃಷ್ಟದ ಮಾತು.

ಬೂಟಿನ ವಿಶೇಷ ಕಚ್ಚುಗಳ ಕುರಿತು ಉಲ್ಲೇಖಿಸುವಾಗ ಶುದ್ಧ ಪರ್ವತಾರೋಹಣಕ್ಕೆ ಮೀಸಲಾದ ಮೋಟಾರ್ ಸೈಕಲ್ಲಿನ (ಈಗ ಸೈಕಲ್ ಕೂಡಾ) ಕುರಿತು ತುಸು ಹೇಳದಿರಲಾರೆ. ನಾನು ಕಂಡಂತೆ ೧೯೮೦ ರ ದಶಕದಲ್ಲಿ ಮಂಗಳೂರಿನಲ್ಲಿ ಮೋಟಾರ್ ಸೈಕಲ್ ಸಾಹಸಗಳು ಉಚ್ಛ್ರಾಯದಲ್ಲಿದ್ದುವು. ರ್ಯಾಲೀ, ಟ್ರೆಷರ್ ಹಂಟ್, ಮೋಟಾರ್ ಕ್ರಾಸ್ ಮುಂತಾದವುಗಳಲ್ಲಿ ಭಾರೀ ತಾಕತ್ತಿನ ಯಂತ್ರಗಳು, ಭಾರೀ ಕಚ್ಚಿನ ಚಕ್ರಗಳ ಬಲದಲ್ಲಿ ಸಾಧಿಸದ ಲಕ್ಷ್ಯವಿಲ್ಲ ಎನ್ನುವ ಭಾವ ನಮ್ಮಲ್ಲಿತ್ತು. ಮತ್ತೆ ನಾವಾದರೋ ಆರೋಹಣ ಪರ್ವತಾರೋಹಿಗಳು ಸಾಹಸಿಗಳು ಹೆಸರಿನಲ್ಲಿ ತೀರಾ ದುರ್ಗಮ ಮಲೆಜಾಡುಗಳಲ್ಲಿ ಬೈಕ್ ನುಗ್ಗಿಸಿ ಒರಟು ಸವಾರಿಯಲ್ಲಿ ಒಂದು ರೀತಿಯ ಪರಿಣತಿಯನ್ನೂ ಗಳಿಸಿದ್ದೆವು. ಸಾಹಸ ಅಕಾಡೆಮಿ, ಸಾಹಸ ಪ್ರವಾಸೋದ್ಯಮ ವಾತಾವರಣದಲ್ಲಿ ದಟ್ಟವಾಗಿತ್ತು. ಪ್ರವಾಸೋದ್ಯಮ ಇಲಾಖೆ ಕುದುರೆಮುಖ ಶಿಖರದ ಬಂಗ್ಲೆಗಳನ್ನು ಜೀರ್ಣೋದ್ಧಾರಗೊಳಿಸಲೂ ತೊಡಗಿತ್ತು. ಸಂಸೆಯಿಂದ ಕತ್ತೆ ಸಾಲುಗಳನ್ನೇ ಹೂಡಿ ಸಿಮೆಂಟು, ಇಟ್ಟಿಗೆ, ಹಂಚು ಶಿಖರಕ್ಕೆ ಸಾಗಿಸಿದ್ದರು. ಆದರೆ ಮುಂದಿನ ಕತೆ ನಮ್ಮೆಲ್ಲಾ ಸಾರ್ವಜನಿಕ ಕಾಮಗಾರಿಗಳದ್ದೇ ಆಯ್ತು. ಸಿಮೆಂಟಿಗಿಂತ ಹೆಚ್ಚು ಮರಳೋ ಮಣ್ಣೋ ಬಳಕೆಯಾಗಿರಬೇಕು. ಮಹಡಿನ ಪಕಾಸು ರೀಪುಗಳೆಲ್ಲ ಲೆಕ್ಕ ಪುಸ್ತಕದಲ್ಲೇನೇ ಇರಲಿ, ನಾವು ಕಂಡಂತೆ ಬಳಕೆಯಾದವು ಕಚ್ಚಾ ಕಾಡು ಕಂಬ, ಕೋಲು! ಒಂದು ಮಳೆಗಾಲಕ್ಕೂ ಇದು ಬಾಳಿಕೆ ಬರದೇ ಕುಸಿದು ಬಿದ್ದಿತ್ತು. ಮೊದಲೇ ಹೇಳಿದಂತೆ ಸ್ಪಾರ್ಕ್ ಮತ್ತು ಇತರ ಬೇಜವಾಬ್ದಾರೀ ತಂಡಗಳು ಎಲ್ಲೆಲ್ಲಿಂದಲೂ ಇದು, ಮತ್ತಿತರ ಪರ್ವತಾಗ್ರಗಳಿಗೆ ಧಾಳಿಯಿಟ್ಟು ಮಾಡುತ್ತಿದ್ದ ದಾಂಧಲೆಗಳು ನನ್ನ ಕಣ್ಣು ತೆರೆಸಿದವು. ಕೇವಲ ಮನುಷ್ಯ ಬಳಕೆಯೇ ತರುವ ಪಾರಿಸರಿಕ ಹಾನಿಗಳು ಇಷ್ಟಾದರೆ, ಬೈಕ್, ಜೀಪ್, ತೊಟ್ಟಿಲ ಸರಣಿ, ಹೆಲಿಪ್ಯಾಡ್ ಎಂದೆಲ್ಲಾ ಏರುಮುಖಿಯಾಗುವ ಸವಲತ್ತುಗಳು ಇದನ್ನು ಏನು ಮಾಡಿಯಾವು ಎಂದು ಹೆದರಿಹೋದೆ; ಬೈಕ್ ಸಾಹಸದ ಯೋಚನೆಯನ್ನು ಆಳ ಕಾಣದ ಗುಂಡಿಯಲ್ಲಿ ಹೂತುಬಿಟ್ಟೆ! ಕಾಲಿನ ತಾಕತ್ತಿರುವವರಿಗೆ ಮಾತ್ರ ಬೆಟ್ಟ ಸಾಕು. ಅದೂ ಗಂಭೀರ ಆಸಕ್ತಿಗಳಲ್ಲಿ ನೋಡಿ ಬರುವುದಕ್ಕಷ್ಟೇ ಇರಲಿ, ನೆಲೆಸಿ ನಲಿಯುವುದಕ್ಕಲ್ಲ ಎನ್ನುವುದನ್ನು ಮನಸ್ಸಿನಲ್ಲಿ ಗಟ್ಟಿ ಮಾಡಿಕೊಂಡೆ. ಹಾಗಾಗಿ ಅಂದು ಗಂಟೆ ಒಂಬತ್ತಾದರೂ ನೀರಲ್ಲದಿನ್ನೊಂದನ್ನು ಹೊಟ್ಟೆಗಿಳಿಸಲು ಅವಕಾಶ ಕೊಡದೇ ಮಳೆ ಕಾಡಿದರೂ ನಾವು ಸಂತೋಷದಲ್ಲೇ ಶಿಖರಗಾಮಿಗಳಾಗಿದ್ದೆವು. ಬಹುಶಃ ಇಂಥದ್ದೇ ಆನಂದ ಹಿಂದಿನಷ್ಟೂ ಭೇಟಿಗಳ ಕಾಲದಲ್ಲಿ ನಾವು ಅನುಭವಿಸಿದ್ದರಿಂದಲೇ ಎಲ್ಲ ಕಿರುಕುಳಗಳನ್ನು ಮೀರಿ ನಮ್ಮನ್ನು ಕುದುರೆಮುಖ ಮತ್ತೆ ಮತ್ತೆ ಸೆಳೆಯುತ್ತಲೇ ಇದೆ.

ಮಳೆಯ ಆರ್ಭಟೆಯಲ್ಲಿ ನಮ್ಮ ಶಿಖರ ದರ್ಶನ ವ್ಯರ್ಥವಾಗುತ್ತದೆ, ಕೇವಲ ಸಾಹಸ ಸಾಧನೆಯೊಂದೇ ಉಳಿಯುತ್ತದೆ ಎಂಬ ನಿರಾಶೆ ಕಾಡುತ್ತಲೇ ಇತ್ತು. ಕುದುರೆಯ ಬಾಲದ ತುದಿಗೆ ಇನ್ನೇನು ಹತ್ತೋ ಇಪ್ಪತ್ತೋ ಹಿಮ್ಮುರಿ ಸರಣಿಯ ಒಂದು ಬೆಟ್ಟದ್ದಷ್ಟೇ ಅಂತರ ಎನ್ನುವ ಹಂತದಲ್ಲಿ ಮಳೆ ಬಿಟ್ಟಿತು. ಅಲ್ಲಿ ಜಿಗಣೆ ಮುಕ್ತಿಗಾಗಿ ಒಂದು ಬಂಡೆಯನ್ನೇರಿ ಕುಳಿತು ಬುತ್ತಿ ಬಿಚ್ಚಿದೆವು.

ಇಡ್ಲಿ, ಚಪಾತಿ, ದೋಸೆ, ಅವಲಕ್ಕಿ, ಬ್ರೆಡ್, ತರಹೇವಾರಿ ಕಿರು ತಿನಿಸುಗಳು ಮತ್ತು ಕೂಟಕಗಳ ಸಮಾರಾಧನೆಯೇ ಆಯ್ತು. ಪ್ರತಿಯೊಬ್ಬರೂ ಅನುಕೂಲವಿದ್ದಂತೆ ಮನೆ, ಹೋಟೆಲಿನಿಂದ ಕಟ್ಟಿಸಿಕೊಳ್ಳುವಾಗ ತುಸು ಹೆಚ್ಚೇ ಇರಲಿ ಎಂದಂದುಕೊಂಡದ್ದು ಇಲ್ಲಿ ಭಾರಿಯಾಗಿತ್ತು. [ಅಜೀರ್ಣ ಹಿಡಿದು ಸತ್ತರೂ ಸೈ, ಸ್ವಲ್ಪವೂ ಕಡಿಮೆಯಾಗಬಾರದು ಎಂದು ನಮ್ಮಲ್ಲಿ ಅನೇಕರ ನಂಬಿಕೆ! ಉಳ್ಳವರ ಈ ಅಪಕಲ್ಪನೆ ತಿನಿಸುಗಳ ಅವಹೇಳನ ಮಾಡುವುದರೊಂದಿಗೆ ಊರ ಕೊಳಚೆಯನ್ನೂ ಅಧಿಕಗೊಳಿಸುತ್ತಿದೆ. ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಒಂದು ಹಳೆಯ ಅಂದಾಜಿನಂತೆ ಕೇವಲ ಭಾರತ, ಒಂದು ವರ್ಷದಲ್ಲಿ ೪೪೦೦೦ ಕೋಟಿ ರೂಪಾಯಿ ಮೌಲ್ಯದಷ್ಟು ಆಹಾರವಸ್ತುಗಳನ್ನು (ಮುಖ್ಯವಾಗಿ ಮದುವೆಯಂಥ ಸಮಾರಂಭಗಳಲ್ಲಿ) - ತಿನ್ನುತ್ತಿಲ್ಲ, ಕೊಳಚೆ ಮಾಡುತ್ತಿದೆ.] ಆದರೆ ನಾವು ಹೆಚ್ಚುವರಿಯನ್ನೆಲ್ಲ ಮರಳಿ ಕಟ್ಟಿ, ಮಧ್ಯಾಹ್ನಕ್ಕೆ ಉಳಿಸಿಕೊಂಡೆವು. ಅಲ್ಲಿನ ಪ್ರಾಕೃತಿಕ ಶೀತದಲ್ಲಿ ಯಾವ ತಿನಿಸುಗಳೂ ಹಳಸುವ ಹೆದರಿಕೆ ಏನೂ ಇರಲಿಲ್ಲ.

ಮೋಡ ಬಿರಿದೀತು ಎಂಬ ಆಶಯದೊಡನೆ, ಅಂತಿಮ ಧಾಳಿಗೆ ಹೆಜ್ಜೆಯ ಮೇಲೆ ಹೆಜ್ಜೆಯೇರಿಸತೊಡಗಿದೆವು.

*             *             *             *             *

ಹೊರೆ ಮತ್ತು ಏರಿನ ಶ್ರಮ, ಚುರುಕಾಯಿಸುತ್ತಿದ್ದ ಬಿಸಿಲು ನಮ್ಮೆಲ್ಲರನ್ನೂ (೧೯೮೩ರ ತಂಡ) ಮೂಕ ಎತ್ತುಗಳಂತೆ ನೆಲನೋಟಕರನ್ನಾಗಿಸಿತ್ತು, ಜಾಡು ಸವೆದಂತೆ ಸಾಗಿದ್ದೆವು. ಕನಿಷ್ಠ ಮೂರು ತಾಸಿನ ಏರುಪ್ರಯಾಣವೆಂದೇ ಅಂದಾಜಿಸಿ ಹೇವಳದ ಒಂಟಿ ಮರ ಬಿಟ್ಟಿದ್ದೆವು. ನಮ್ಮ ವೇಗ ಸಾಲದಾಯಿತೋ ಅಂತರ ಬಿಸಿಲಿಗೆ ಹಿಗ್ಗಿತೋ ಎಂಬ ಸಂಶಯದಲ್ಲೇ ಕಾಲೆಳೆದಿದ್ದೆವು. ಸೂರ್ಯನಾಗಲೇ ಪಡುವಣ ಪಕ್ಷವನ್ನು ಸ್ಪಷ್ಟವಾಗಿ ಸೇರಿದ್ದ. ಐದಾರು ಅಡಿ ಎತ್ತರದ ಹೊಂಬಣ್ಣದ ಹುಲ್ಲು, ಬೆಂಕಿಯ ಸೋಂಕಿಲ್ಲದೆ ತೆಳು ಗಾಳಿಗೆ ನಲಿದಿತ್ತು. ನಾವು ಸವಕಲು ಜಾಡು, ಗಾಡಿ ದಾರಿ ಒಲಿದಂತೆ (ಸವಕಳಿ ಹೆಚ್ಚಿರುವುದನ್ನು ಗಮನಿಸಿ) ಬಿಡಿಸಿಕೊಳ್ಳುತ್ತ, ಒಂದೊಂದೇ ದಿಬ್ಬಗಳನ್ನು ಕೆಳ ತಳ್ಳುತ್ತಾ ಕುದುರೆ ಬೆನ್ನು ಸಾಧಿಸಿಯೇ ಬಿಟ್ಟೆವು.

ಒಮ್ಮೆಗೇ ಬಿಸಿಗಾಳಿ ತಂಪಾಯ್ತು. ಅದುವರೆಗಿನ ನೇವರಿಕೆ ಬಿಟ್ಟು ಸ್ಥಿರವಾಗಿ ಬೀಸಿ ನಮ್ಮನ್ನು ಪುನಶ್ಚೇತನಗೊಳಿಸಿತು. ಬಂದ ದಾರಿಯತ್ತ ತಿರುಗಿ ನೋಡಿದರೆ ಹರಡಿದ ಅಮಿತ ಸೌಂದರ್ಯಶ್ರೀ ಅದ್ಭುತ. ಏರಿಕೆ ಮುಗಿದಾಗ ಬಂದ `ಉಸ್ಸಪ್ಪಾ’ವನ್ನು `ಅಬ್ಬಾ’ ಗೆಲ್ಲಿಸಿತ್ತು. ಸೂರ್ಯಾಸ್ತಕ್ಕೆ ಇನ್ನೂ ಸಮಯವಿದ್ದುದರಿಂದ ಹೆಚ್ಚು ಸವೆದ ಶಿಖರದತ್ತಣ ಜಾಡು ಬಿಟ್ಟು, ಗಾಡಿ ದಾರಿಯನ್ನೇ ಅನುಸರಿಸಿದೆವು.

ಕಾರ್ಗಾಲದ ಪ್ರಚಂಡ ಪಶ್ಚಿಮ ಮಳೆಗಾಳಿ `ಕುದುರೆಮುಖ’ವನ್ನು ರೂಪಿಸಿತ್ತು. ಅದರ ಹಿಂದಲೆಯಲ್ಲಿ, ವಾಯುವರುಣ ಪ್ರತಾಪಕ್ಕೆ ಮರೆಯಾಗಿರುವ ಪುಟ್ಟ ಬೋಗುಣಿಯಂಥಾ ಕಣಿವೆಯಲ್ಲಿ ಅದೇ ಪ್ರಾಕೃತಿಕ ಶಕ್ತಿಗಳು ದಟ್ಟ ಕುರುಚಲು ಕಾಡನ್ನು ಪೋಷಿಸಿತ್ತು. ಬ್ರಿಟಿಷರಾದರೋ ಅದನ್ನು ಸರಿಯಾಗಿಯೇ ಗುರುತಿಸಿ ತಮ್ಮ ವಾಸ್ತವ್ಯದ ಎಲ್ಲ ರಚನೆಗಳನ್ನೂ ಆ ಬೋಗುಣಿಯಲ್ಲೇ ವ್ಯವಸ್ಥಿತವಾಗಿ ನೆಲೆಗೊಳಿಸಿದ್ದರು. ಸಹಜವಾಗಿ ಗಾಡಿದಾರಿಯೂ ಅತ್ತ ಸಾರಿತ್ತು. ದಿನದ ಕೆಲಸ ಮುಗಿಯಿತೆಂಬ ಭಾವ, ಶಿಬಿರ ಸ್ಥಾನದ ಬೆಚ್ಚನೆಯ ನೆಲೆಯನ್ನು ಇನ್ನೇನು ಸೇರಿಯೇಬಿಟ್ಟೆವೆನ್ನುವ ಉದಾಸಚಿತ್ತದಲ್ಲೇ ಎಲ್ಲ ಹೆಜ್ಜೆ ಹಾಕಿದ್ದೆವು. ಒಮ್ಮೆಲೆ ಕುರುಚಲು ಕಾಡೇ ಕಾಲು ಕೋಡುಗಳಾಗಿ ಝಗ್ಗನೆದ್ದು ಚದುರಿದಂತೆ ದೊಡ್ಡ ಕಡವೆ ಹಿಂಡೊಂದು ಓಡಿ ಹೋಯಿತು. 


ನಾವು ಗಾಬರಿಗೆಟ್ಟು, ಹುಯ್ಯಲೆಬ್ಬಿಸಿ, ಎಲ್ಲ ಒಟ್ಟಾಗಿ ಬುದ್ಧಿ ಜೋಡಿಸುವಾಗ, ಅಲ್ಲೇನೂ ಉಳಿದಿರಲಿಲ್ಲ! ಕಡವೆಗಳು ನಿಸ್ಸಂದೇಹವಾಗಿ ಭಯಬಿದ್ದು ಓಡಿತ್ತು. ಆದರೆ ನಮ್ಮ ವನ್ಯ ಅಜ್ಞಾನ ಮತ್ತು ನಾಗರಿಕ ಮನಸ್ಸು ಕ್ರೂರ ಮೃಗವನ್ನಷ್ಟೇ ಗ್ರಹಿಸಿದ್ದು ನಾಚಿಗೆಗೇಡು. ಕನಿಷ್ಠ ಮೌನವಾಗಿ ನಿಂತಿದ್ದರೆ, ಒಂದೆರಡು ಕಡವೆ ಬಾಲವನ್ನಾದರೂ ವೀಕ್ಷಿಸುವ ಸಂತೋಷ ಇರುತ್ತಿತ್ತೋ ಏನೋ. 

ದಾರಿ ವಸತಿ ವಲಯದ ತಗ್ಗು ಪ್ರದೇಶವನ್ನೇ ಸೇರಿತು. ಅಲ್ಲಿ ಲಾಳಾಕೃತಿಯಲ್ಲಿ ಬಹುಶಃ ಕಾಡು ತೆರವುಗೊಳಿಸಿ, ಸಣ್ಣ ತಟ್ಟು ಮಾಡಿಕೊಂಡಿದ್ದರು. ಅವುಗಳಲ್ಲಿ ಎಡ ಮಗ್ಗುಲಿನ ಇಗರ್ಜಿಯ ಅವಶೇಷ ಸ್ವಲ್ಪ ನೋಡುವಂತಿತ್ತು. ಕಣಿವೆ ಹೆಚ್ಚು ಕಡಿಮೆ ಸಮತಟ್ಟಾದ ಜವುಗುನೆಲ. ಇಗರ್ಜಿಯ ತಟ್ಟು ಅದರ ದಕ್ಷಿಣ ಅಂಚಾದರೆ ಉತ್ತರ ಅಂಚನ್ನು ನಿರ್ಧರಿಸುವಂತೆ, ಕರಿಕಲ್ಲ ಪಾತ್ರೆಯಲ್ಲಿ ನಲಿಯುತ್ತಿತ್ತೊಂದು ಝರಿ. ನಮ್ಮ ದಾರಿಯ ಒಂದು ಕವಲು ಇಗರ್ಜಿಯತ್ತ ಹೋದರೆ, ಇನ್ನೊಂದು ಜವುಗುನೆಲದ ಪೂರ್ವ ಅಂಚನ್ನು ರೇಖಿಸಿತ್ತು. ಅಲ್ಲಿ ನೆಲ ಮತ್ತೆ ಕೊಳ್ಳಕ್ಕಿಳಿಯುವುದರಿಂದ ಬಹುಶಃ ದಾರಿಯನ್ನು ಕಾಡು ಕಲ್ಲುಕಟ್ಟಿಯೇ ಬಿಗಿಗೊಳಿಸಿದ್ದಿರಬೇಕು. ಪ್ರಾಕೃತಿಕ ಸ್ಥಿತ್ಯಂತರಗಳಿಂದ, ಇಂದು ಮಳೆಗಾಲದಲ್ಲಿ ಆ ದಾರಿಯೂ ಗೊಸರುಭೂಮಿಯ ವಿಸ್ತರಣೆಯೇ ಆಗುವುದಿರಬಹುದು. ನಾವು ದಾರಿಗುಂಟ ಹೋಗಿ ತೊರೆಯ ಎದುರು ದಂಡೆಯ ಹಾಸುಗಲ್ಲನ್ನು ಶಿಬಿರತಾಣವಾಗಿ ಆರಿಸಿಕೊಂಡೆವು. ಅದು ನನ್ನ ತಂದೆಯ ಬಳಗವೂ ಸೇರಿದಂತೆ ಹೆಚ್ಚಿನೆಲ್ಲ ಚಾರಣಿಗರ ಜನಪ್ರಿಯ ತಾಣ. ಅದರ ಮಣ್ಣಿನಂಚುಗಳಲ್ಲಿ ಮೊದಲು ಬಂದ ಚಾರಣಿಗರು ಉಳಿಸಿಹೋದ ಸ್ವಲ್ಪ ಕಸ ಬಿಟ್ಟರೆ ಪೂರ್ತಿ ಖಾಲಿಯಿತ್ತು.

ಶಿಬಿರತಾಣವನ್ನು ತಂದೆ ರಾಮಾಯಣದ ಪಂಚವಟಿಯ ಪರ್ಣಕುಟಿಗೇ ಹೋಲಿಸಿದ್ದರು. (ಇಲ್ಲಿ ಚಿಟಿಕೆ ಹೊಡೆಯಿರಿ – ಕುದುರೆಮುಖದೆಡೆಗೆ). ನನ್ನ ಮೊದಲ ಭೇಟಿಯ ಕಾಲಕ್ಕಂತೂ (೧೯೭೫) ಹಿಂದಿನವರು ಯಾರೋ ಕಾಡುಕಂಬ ಊರಿ, ಅಡ್ಡ ಕೋಲು ಕಟ್ಟಿ, ಮೇಲೆ ಇಗರ್ಜಿಯಲ್ಲಿ ಕುಸಿದು ಬಿದ್ದ ಮಾಡಿನ ಹಂಚು, ಹುಲ್ಲು ಹೊದೆಸಿ ನಿಜ ಎಲೆಮನೆಯನ್ನೇ ಮಾಡಿದ್ದರು. ಮತ್ತೊಂದು ಬಾರಿ ಹೋಗಿದ್ದಾಗ ಅಲ್ಲೇ ನೆಲದಲ್ಲಿ ದಪ್ಪವಾಗಿ ಒಣಹುಲ್ಲನ್ನು ಹಾಸಿ ಮಾಡಿದ್ದ ಸುಪ್ಪತ್ತಿಗೆಯೂ ಒದಗಿದ್ದಿತ್ತು. ಆದರೆ ಈ ಬಾರಿ (೧೯೮೩) ನಾಗರಿಕ ಕಸ ಮಾತ್ರ ಇದ್ದರೂ ನಮ್ಮ ಮಾನಸಿಕ ಅನುಸಂಧಾನದಲ್ಲಿ ಮನೋಹರವಾಗಿಯೇ ಕಂಡಿತ್ತು. ನಾವು ಬೆನ್ನ ಹೊರೆಗಳನ್ನೆಲ್ಲ ಅಲ್ಲಿಳಿಸಿಟ್ಟೆವು. ನೆನಪಿರಲಿ, ಅದು ಗುಡಾರ, ಮಲಗುಚೀಲ, ಗ್ಯಾಸ್ ಒಲೆಯಂಥ ಸೌಲಭ್ಯಗಳೆಲ್ಲ ಇಲ್ಲದ ಕಾಲ. ಸಹಜವಾಗಿ ನಾವು ಶಿಬಿರದ ಪ್ರಾಥಮಿಕ ಆವಶ್ಯಕತೆ ಎಂದೇ ಪರಿಗಣಿಸುತ್ತಿದ್ದ ಉದುರು ಸೌದೆ ಸಂಗ್ರಹ ನಡೆಸಿದೆವು. ಸಂಗ್ರಹ ಅಡುಗೆಗೆ ಉರುವಲಾಗಿಯೂ ರಾತ್ರಿಯುದ್ದಕ್ಕೆ ಬೆಳಕು, ಬಿಸುಪು ಮತ್ತು ಧೈರ್ಯ ನೀಡುವ ಶಿಬಿರಾಗ್ನಿಗೂ ಒದಗುವಷ್ಟು ಮಾಡಿಕೊಂಡೆವು.(ಅಗಾಧ ಕಾಡಿನ ಕತ್ತಲಲ್ಲಿ ಜನ್ಮಯಿಡೀ `ಏಗಾಡು'ವ ಮೃಗಗಳಿಗೆ ಸಾಲುವಷ್ಟು ಬೆಳಕಲ್ಲ, ಆಕಾಶದ ಬಾಣಲೆಯಲ್ಲಿ ಬಿದ್ದ ಬೆಳಕಿನ ಬೀಜಗಳನ್ನು ಹುರಿಯುವಷ್ಟು ಪ್ರಖರವೂ ಅಲ್ಲ.) ಜೊತೆಗೆ ಚಾ ಕಾಯಿಸಿ, ಕುರುಕಲು ಮೆದ್ದು, ಒಲೆಯ ಮೇಲೆ ರಾತ್ರಿಗೆ ಗಂಜಿ ಏರಿಸಿದ್ದೆವು. ಅಷ್ಟೇ ಅವಸರದಲ್ಲಿ ಸಣ್ಣಪುಟ್ಟ ಸಿಹಿ ತಿನಿಸು, ನೀರು, ಬಹು ಮುಖ್ಯವಾಗಿ ಹಿಂದೆ ಬರುವ ಎಚ್ಚರದಲ್ಲಿ - ಟಾರ್ಚು, ಹಿಡಿದು ಶಿಖರದತ್ತ ಹೆಜ್ಜೆ ಹಾಕಿದ್ದೆವು. ಆದರೆ ರಾತ್ರಿ ಇಡೀ ನಡೆದು ಬಂದ ಮೊದಲ ಯಾತ್ರೆಯ ಶಿಬಿರದ ಪರಿ ಬೇರೆಯೇ...

*             *             *             *             *

ಇಡಿಯ ಹಗಲು (೧೯೭೫) ಶಿಖರ ನಮ್ಮದೇ ಎನ್ನುವ ನಿಶ್ಚಿಂತೆ ನಾಲ್ವರಲ್ಲೂ ಇತ್ತು. ಸೋಜಾನಿಗಾದರೋ ಶಿಖರ ಸದಾ ನೆರೆಮನೆ, ನೋಡಲೇನವಸರ ಎನ್ನುವ ಭಾವ. ಪ್ರಾತರ್ವಿಧಿಗಳನ್ನು ಮುಗಿಸುತ್ತಿದ್ದಂತೆ ಕಾಫಿ ಕಾದಿತ್ತು, ಸಾಂಗತ್ಯಕ್ಕೆ ಬ್ರೆಡ್, ಜ್ಯಾಂ, ಮೋಸುಂಬಿ. ಆ ಹೊತ್ತಿಗೆ ಸೂರ್ಯನೂ ಏರಿ ಬಂದಿದ್ದುದರಿಂದ ಸ್ನಾನದ ಹೊಳಹು ಹಾಕಿದೆವು.

ಶಿಬಿರ ತಾಣದ ಪಕ್ಕದಲ್ಲೇ ಇದ್ದ ಸ್ಫಟಿಕ ನಿರ್ಮಲ ಪುಟ್ಟ ಮಡು ಒಳ್ಳೇ ಸ್ನಾನ ತೊಟ್ಟಿಯಂತೇ ಇತ್ತು. ಆದರೆ ಬೇಸಗೆಯ ಮಟಮಟ ಮಧ್ಯಾಹ್ನದಲ್ಲೂ ಅದರ ಹಿಮಶೀತಲ ಸ್ಪರ್ಷಕ್ಕೆ ಮೊದಲ ಮುಳುಗೇ ಕೊನೆಯ ಮುಳುಗಾದರೆ – ಮರಗಟ್ಟಿ ಹೋದರೆ, ಎಂಬ ಭಯ. ವಿಶ್ವನಾಥ್ ಬೇರೊಂದು ದಾರಿ ಕಂಡುಕೊಂಡರು. ಸ್ವಲ್ಪ ಮುಂದೆ ತೊರೆ ಸಣ್ಣ ಹಳ್ಳಕ್ಕೆ ಧುಮುಕುತ್ತಿತ್ತು. ಜಾಗ್ರತೆಯಲ್ಲಿ ಅಲ್ಲಿಗಿಳಿದರು. ಮತ್ತೆ ಪುಟ್ಟ ಜಲಪಾತಕ್ಕೆ ಚೂರುಚೂರೇ ಮೈಯೊಡ್ಡಿ, ಹಿಂದೆ ಸರಿದು, ಕೊರೆಶೀತದೊಡನೆ ರಾಜಿ ಮಾಡಿಕೊಂಡರು. ಈ ಶವರ್ ಬಾತ್ ಅಂದು ನಮಗೆಲ್ಲರಿಗೂ ಅಚ್ಚುಮೆಚ್ಚಾಗಿತ್ತು. ಅಲ್ಲಿ ಬೇರೆ ಬೇರೆ ಕಾಲಗಳಲ್ಲಿ, ವಿವಿಧ ತಂಡಗಳೊಡನೆ ನಾನು ಪಡೆದ ಸ್ನಾನದ ಅನುಭವ ಸದಾ ಉಲ್ಲಾಸದಾಯಕವೇ.

ವೀರಾವೇಶದಲ್ಲಿ ಚಡ್ಡಿ ಹಾಕಿ, ನೀರಂಚಿನಲ್ಲಿ ಸುಳಿದಾಡಿದವರೆಲ್ಲ ಕೊನೆಯಲ್ಲಿ ಸ್ನಾತರೇ ಎಂದು ನಿರ್ಧರಿಸುವಂತಿಲ್ಲ. (ಹೇಗೆ – ಕೊಣಾಜೆಯಲ್ಲಿ ಅಡ್ಡಾಡಿದವರೆಲ್ಲ ಎಮ್ಮೆಗಳಲ್ಲವೋ ಹಾಗೆ!) ಕಾಲ ಬೆರಳಷ್ಟೇ ನೀರಿಗಿಳಿಸಿ ಮೈ ಮುದ್ದೆ ಮಾಡಿ, ಮತ್ತೆ ನಾಲ್ಕೇ ಹನಿ ತಲೆಗಿಟ್ಟು ಮಂತ್ರ ಸ್ನಾನ ಮಾಡಿದವರೂ ಬಹಳ! ಇಂಥ ತಂತ್ರಗಳಲ್ಲಿ ಅದ್ವಿತೀಯವಾದ್ದು ಇಬ್ಬರ ಸವಾಲು – ಜವಾಬು! ಅದು ರಾತ್ರಿ ಅಲ್ಲೇ ತಂಗಿದ್ದ ತಂಡ. ಮಸಕು ಬೆಳಕಿನ ಮುಂಜಾನೆ, ಸೂರ್ಯ ತನ್ನ ದಪ್ಪ ಮಂಜಿನ ಕೋಟು ಕಳಚಿರಲಿಲ್ಲ. ರಾತ್ರಿಯಿಡೀ ಸುರಿದ ಮಂಜಿನಲ್ಲಿ ಒದ್ದೆಯಾದ ಹೊದಿಕೆಯನ್ನು ಇನ್ನಿಲ್ಲದಂತೆ ಅಪ್ಪಿಕೊಂಡ ತಮ್ಮಣ್ಣ, ಕೊಂಡಹಾಯುವವನ್ಂತೆ ಶಿಬಿರಾಗ್ನಿ ಬಳಿ ನಿಂತು, ಗದಗುಟ್ಟುವ ಸ್ವರದಲ್ಲಿ ಲೋಕಮುಖಿಯಾದ, “ಈಗ ಸ್ನಾನ ಮಾಡಿದವರಿಗೆ ನನ್ನ ಅರ್ಧ ರಾಜ್ಯವನ್ನೂ ಮಗಳನ್ನೂ ಕೊಟ್ಟು...” ಸವಾಲು ಸ್ವೀಕರಿಸಿದ ಬಾಲಣ್ಣನಿಗೆ (ಬಾಲಕೃಷ್ಣ ಸೋಮಯಾಜಿ) ಗೊತ್ತಿತ್ತು, ತಮ್ಮಣ್ಣನಲ್ಲಿ ರಾಜ್ಯ ಬಿಟ್ಟು ಬಡಕಲು ಮನೆಯ ಯಜಮಾನಿಕೆಯೂ ಇಲ್ಲ. ಮತ್ತು ಆತನೇ ಕನಿಷ್ಠ ಮದುವೆಯ ಪ್ರಾಯಕ್ಕೂ ಏರದ ಚಿಗುರು ಮೀಸೆಯ ಪಡ್ಡೇಂತ! ಆದರೂ ಬಾಲಣ್ಣ ಗಟ್ಟಿ ಮನಸ್ಸು ಮಾಡಿ ಹಳ್ಳಕ್ಕೆ ಧುಮುಕಿಯೇ ಬಿಟ್ಟ. ಮತ್ತೆ ಹುಸಿ ಸವಾಲಿಗೆ ಶಾಸ್ತಿ ವಿಧಿಸಿದ, “ಈಗ ನೀನೂ ನೀರಿನಲ್ಲಿ ಮುಳುಗು ಹಾಕು. ಇಲ್ಲವಾದರೆ ನಿನ್ನ ಅರ್ಧ ಮೀಸೆ ಬೋಳಿಸಿಕೊಂಡರೆ ಸಾಕು.” ಕೊನೆಯಲ್ಲಿ, ಮಂಕಾಗಿದ್ದ ಶಿಬಿರಾಗ್ನಿಯನ್ನು ಒಮ್ಮೆಗೇ ಭುಗಿಲೆಬ್ಬಿಸಿ, ಎರಡು ಕೊರಡುಗಳಲ್ಲಿ ಜೀವ ಸಂಚಲನೆ ತರಿಸುವ ಕಷ್ಟ ವೀಕ್ಷಕರಿಗೆ ಬಂದಿತ್ತು!
[ನೀವೇನು ಓದು ಮುಂದುವರಿಸುವಂತೆ ಗಟ್ಟಿ ಕೂತೇ ಇದ್ದೀರಿ? ಏಳಿ, ಮುಂದಿನ ಕಂತಿನಲ್ಲಿ ನನ್ನೊಡನೆ ಶಿಖರದರ್ಶನಕ್ಕೆ ಸಜ್ಜಾಗಿ. ಪೂರ್ವಭಾವಿಯಾಗಿ ನಿಮ್ಮ ಆಶಾನುಡಿಗಳನ್ನು ಕೆಳಗಿನ ಪ್ರತಿಕ್ರಿಯಾ ಅಂಕಣ ತುಂಬುವಂತೆ ಬರೆದು ಬಿಡಿ!]

4 comments:

 1. ಕುದುರೆಮುಖ ಚಾರಣದ ಅನುಭವವನ್ನು ಚೆನ್ನಾಗಿ ವಿವರಿಸಿದ್ದೀರಿ...

  ReplyDelete
 2. ಆಹಾ ! ಹೊಟ್ಟೆ ಉರಿಸಿದಿರಿ, ಅಶೋಕ ವರ್ಧನ. ಆ ಗಿರಿ, ಕಂದರ, ಝರಿ , ಹಳ್ಳಗಳ , ಮಂಜು ಮುಸುಕಿನ ತಣ್ಪಿನಲ್ಲಿ ನಾವೂ ಮಿಂದಂತಾಯ್ತು. ಅಂದು ಹಾಗೆ ಕೊರಡಾದವರು ಇಂದೂ ಚಾರಣದಲ್ಲಿ ನಿಮಗೆ ಜೊತೆಯಾಗುತ್ತಾರೆಯೇ? ನಮಗೀ ಭಾಗ್ಯ ದೊರಕುವಂತಿದ್ದರೆ ಎಂದು ಹೊಟ್ಟೆ ಉರಿ. ನಾನಂತೂ ಏಳಲಾಗದೆ ಇಲ್ಲೇ ಕುಳಿತು ಕಾಯುತ್ತಿದ್ದೇನೆ ಬರಲಿ, ಬೇಗನೆ ಮುಂದಿನ ಚಾರಣ ಕಥನ.

  ReplyDelete
  Replies
  1. Shyamala Madhava ಸಂಪತ್ ಕುಮಾರ್, ತಮ್ಮಣ್ಣ, ಬಾಲಣ್ಣ, ಪ್ರಸನ್ನ ಇನ್ನೂ ಕೆಂಡ ಉಳಿಸಿಕೊಂಡು, ಪುರುಳೆ ಸೇರಿಸಿ ಪ್ರಜ್ವಲಿಸುವ ಆಸೆ ಉಳಿಸಿಕೊಂಡಿದ್ದಾರೆ. ಉಪಾಧ್ಯರು ಚಾರಣಾಸಕ್ತಿಯಲ್ಲಿ ಸಂತೃಪ್ತರಾಗಿ (ಬಿಸಿ ಬೂದಿ), ಕೇಳಿದರೆ ನಿವೃತ್ತಿ ಮಾತಾಡುತ್ತಾರೆ. ಉಳಿದವರ ವಿಳಾಸವೇ ಇಲ್ಲ ಎನ್ನುವ ಸ್ಥಿತಿ :-(
   ಪರಿಚಯವಿದ್ದರೂ ನನ್ನ ಮೊದಮೊದಲ ಚಾರಣಗಳಿಗೆ ಅಷ್ಟಾಗಿ ಸಹಯೋಗ ಕೊಡದ ಸುಂದರರಾಯರೊಬ್ಬರೇ ಇಂದು ನನಗಿಂದು ಜೋಡಿ :-)

   Delete
 3. ಚಾರಣಪ್ರಿಯರಿಗೆ ಇತರರ ಚರಣಾನುಭವಗಳನ್ನು ಓದುವುದೂ ಖುಷಿ ನೀಡುತ್ತದೆ. ಮತ್ತೆ ಕಾಯುತ್ತಿದ್ದೇವೆ, ಮುಂದಿನ ಕಂತಿಗಾಗಿ..

  ReplyDelete