12 December 2014

ಕುದುರೆಮೊಗ ದರ್ಶನ

(ಕುದುರೆಮುಖದಾಸುಪಾಸು – ೨)
ಸೋಜಾ ಮೊದಲೇ ಕೊಟ್ಟ ಸೂಚನೆಯಂತೆ – ಅಂದರೆ ನಲ್ವತ್ತು ವರ್ಷಗಳ ಹಿಂದಿನ ಕತೆ ನೆನೆಸಿಕೊಳ್ಳಿ, ನಡುರಾತ್ರಿ ಸುಮಾರು ಎರಡು ಗಂಟೆಯ ಹೊತ್ತಿಗೆ, ನಾವು ಎಚ್ಚರಾದೆವು. ಕೇವಲ ಮೂರು ಗಂಟೆಯ ಆದರೆ ಚೇತೋಹಾರಿ ವಿಶ್ರಾಂತಿಯನಂತರ ಜಾಗೃತರಾಗಿದ್ದೆವು. ಏನೋ ಕುರುಕಲು ಮುಕ್ಕಿ, ಮೂರು ಕಲ್ಲಿನ ಒಲೆ ಹೂಡಿ, ಚಾ ಕಾಯಿಸಿ ಹೀರಿ, ಶಿಬಿರ ಕಿತ್ತೆವು. ಬೆಳ್ತಂಗಡಿಯಿಂದ ನಡೆದು ಬಂದಿದ್ದ ವಾಹನಯೋಗ್ಯ ದಾರಿ - ಬಹುತೇಕ ಹಸನಾಗಿಯೂ ಮಟ್ಟಸವಾಗಿಯೂ ಇದ್ದ ಅವಕಾಶ ಮುಗಿದಿತ್ತು. ಸ್ಪಷ್ಟವಾಗಿ ಬೆಟ್ಟವನ್ನೇರುವ  ಸವಕಲು ಜಾಡು ಹಿಡಿದೆವು. ಬೆಟ್ಟದ ಹೆಸರೇ ಏರುಮಲೆ.

ಬ್ರಿಟಿಷರು ಚಳಿನಾಡಿನವರು. ಉಷ್ಣವೇ ಪ್ರಧಾನವಾದ ಭಾರತದಲ್ಲಿ, ಇನ್ನೂ ಮುಖ್ಯವಾಗಿ ನಮ್ಮ ಕರಾವಳಿಯ ತೇವಯುಕ್ತ ಧಗೆಯಲ್ಲಿ, ಅತೀವ ಬಳಲಿದಾಗ ಚೇತರಿಸಿಕೊಳ್ಳಲು ಪ. ಘಟ್ಟದುದ್ದಕ್ಕೂ ಗಿರಿಧಾಮಗಳನ್ನು ರಚಿಸಿಕೊಂಡಿದ್ದರು. ಭಾರತಕ್ಕೆ ವೈಜ್ಞಾನಿಕ ಭೂ-ಸರ್ವೇಕ್ಷಣೆ ಮತ್ತು ಭೂಪಟ ಕೊಟ್ಟವರೇ ಅವರು. ಹಾಗಾಗಿ ಕುದುರೆಮುಖ ಶಿಖರ ಪಳಗಿಸುವುದನ್ನೂ ಅಚ್ಚುಕಟ್ಟಾಗಿಯೇ ನಡೆಸಿದ್ದರು. ಶಿಖರದ ಪಶ್ಚಿಮದ ನೇರ ಕೊಳ್ಳದಾಳದಲ್ಲಿರುವ ನಾರಾವಿಯನ್ನು ಬಿಟ್ಟು, ದಕ್ಷಿಣದ ಕುಗ್ರಾಮ ನಾವೂರನ್ನು ತಳ ಶಿಬಿರವನ್ನಾಗಿ ಆರಿಸಿಕೊಂಡಿದ್ದರು. ಇಲ್ಲಿನ ಕಿರು ಬೆಟ್ಟ ಸಾಲು – ಓಂತಿಗುಡ್ಡೆ, ಕ್ರಮವಾಗಿ  ಉತ್ತರಕ್ಕೆ ಏರೇರುತ್ತಾ ಸಾಗಿದೆ. ಅದರ ಪೂರ್ವ ಮೈಯಲ್ಲಿ, ಹೆಚ್ಚು ಏರು ಬರದಂತೆ ಓರೆಯಲ್ಲಿ ದಾರಿ ಕಡಿದಿದ್ದರು. ಸಹಜವಾಗಿ ಅಸಂಖ್ಯ ಹಿಮ್ಮುರಿ ತಿರುವುಗಳು. ಅಂತಿಮವಾಗಿ ಕುದುರೆಯ ಬಾಲದ ತುದಿಯನ್ನು ಮುಟ್ಟಿ, ಹಿಮ್ಮೈಯಿಂದ ಹಣೆಯೆತ್ತರ ಸಾಧಿಸುವ ಲಕ್ಷ್ಯ.


ಮುಂದಾಳು ಸೋಜಾ ಲಾಂದ್ರ ಹಿಡಿದು, ವನ್ಯ ಪ್ರಾಣಿಗಳ ಆಕಸ್ಮಿಕ ಮುಖಾಮುಖಿಯಾಗದ ಎಚ್ಚರಿಕೆಗೆ ಆಗೀಗ ಗಟ್ಟಿಯಾಗಿ ಹುಯ್ಯಲಿಡುತ್ತಾ ನಡೆದಿದ್ದ. ನಾವು ಆಗೀಗ ಟಾರ್ಚ್ ಬೆಳಗುತ್ತಾ ಬೇರಗಟ್ಟೆಗಳು, ಮಳೆಗಾಲದ ಕೊರಕಲುಗಳು, ಉಬ್ಬೆದ್ದ ಕಲ್ಲು, ಉದುರು ಸೌದೆ ತರಗೆಲೆ ಸಾವರಿಸಿಕೊಂಡು ಹೆಜ್ಜೆಯ ಮೇಲೆ ಹೆಜ್ಜೆ ಪೇರಿಸುತ್ತ ಹಿಂಬಾಲಿಸಿದೆವು. ಕಾಡಿದ್ದಲ್ಲಿ ಕತ್ತಲು ದಟ್ಟೈಸುತ್ತಿತ್ತು, ತೆರೆಮೈಯಲ್ಲಿ ಬೆಳ್ದಿಂಗಳು ರಮಿಸುತ್ತಿತ್ತು.

ಸೋಜಾ ಆ ವಲಯದ ಮೌಖಿಕ ಪುರಾಣದ ಸಮರ್ಥ ವಕ್ತಾರ.  ಆತ ನಮ್ಮ ಕತ್ತಲ ದಾರಿಯ ಉದ್ದಕ್ಕೂ ಕತೆಗಳ ನಡೆಮಡಿ ಹಾಸುತ್ತಲೇ ಇದ್ದ. ಅಲ್ಲಿ ಕೋಣ ಕಟ್ಟಿದ ಗಾಡಿಯನ್ನೇ ಎಳೆಸಿದ್ದರು. ಇಟ್ಟಿಗೆ, ಗಚ್ಚು, ಹಂಚು, ಮರದಿಂದ ಹಿಡಿದು ಎಲ್ಲ ಕಟ್ಟಡ ಸಾಮಗ್ರಿ, ಸರ್ವ ಋತುಗಳಿಗೂ ಒದಗುವ ಮನುಷ್ಯ ಅನುಕೂಲಗಳು ಮನುಷ್ಯರೂ ಹೀಗೇ ಹೋಗಿದ್ದರು. ನಿರ್ಮಾಣ ಮತ್ತು ನಿರ್ವಹಣೆಯ ನೌಕರರು, ಅಸಂಖ್ಯ ಸಾಹೇಬರುಗಳೂ ಪಾದ್ರಿಗಳು, ಖಾಯಂ ಚಾಕರಿಯವರು ನಡೆದೋ ಕುದುರೆ ಸವಾರಿಯಲ್ಲೋ ಗಾಡಿಯಲ್ಲೋ ಇಲ್ಲಿ ದಾರಿ ಸವೆಸಿದ್ದರು. ಆ ಎಲ್ಲ ಮೌಖಿಕ ಪುರಾಣಕ್ಕೆ ದಾರಿ, ಮುಕ್ಕಾಲು ಮೇಲೆ ಸಿಗುವ ಹೇವಳ (ಅಥವಾ ತೊಳಲಿ), ಶಿಖರವಲಯದ ಅಸಂಖ್ಯ ಶಿಥಿಲ ರಚನೆಗಳು ಇಂದಿಗೂ ಮೌನ ಸಾಕ್ಷಿಗಳು. [ಸೋಜಾ ಪುರಾಣದಲ್ಲಿ ಬಹ್ವಂಶಗಳನ್ನು ನಾನಿಂದು ಮರೆತಿರುವುದಕ್ಕೆ ವಿಷಾದಿಸುತ್ತೇನೆ. ಕೆಲವು ದಶಕಗಳ ಹಿಂದೆಯೇ ಕಾಲಗರ್ಭ ಸೇರಿದ ಸೋಜಾನೊಡನೆ ಆ ಪುರಾಣ ಖಿಲವಾಗಿದೆ. ಇನ್ನೇನಾದರೂ ಸ್ವಲ್ಪ ಉಳಿದಿದ್ದರೆ ಹೊರಗೆ ಎಲ್ಲೆಲ್ಲೋ ಮರುವಸತಿ ಪಡೆದ ಹೇವಳದ ಸಿಂಹಪುರ್ಬುಗಳ ವಂಶಸ್ಥರನ್ನು (ನಾಲ್ಕೂ ಐದನೇ ತಲೆಮಾರುಗಳು) ಹುಡುಕಬೇಕಷ್ಟೆ]

ಒಂದೊಂದೂ ಗುಡ್ಡೆಯ ಹಿಮ್ಮುರಿ ಸರಣಿಗಳು, ಭೂ ರಚನೆಗಳು ಪಡೆದ ಅನ್ವರ್ಥ ನಾಮ, ಹಿಂದಿನ ಕತೆಗಳನ್ನು ಸೋಜಾ ವಿವರಿಸುತ್ತಾ ದಾರಿ ಕಳೆದಿದ್ದ. ಮೊದಲು ಏರಿದ್ದು ಹದಿನೇಳು ಸುತ್ತು ಎಂದೇ ಖ್ಯಾತವಾದ ವಲಯ. ಹದಿನೇಳು ಹಿಮ್ಮುರಿ ತಿರುವಿದ್ದಿರಬೇಕು. ಆದರೆ ಮರಬಿದ್ದೋ ನೆಲ ಜರಿದೋ ನೇರ ಹಾಗೂ ತೀರಾ ಕಡಿದಾದ ಒಳದಾರಿಯೇ ಊರ್ಜಿತದಲ್ಲಿದ್ದಂತಿತ್ತು! ನಮಗೋ ಸುಸ್ತೋ ಸುಸ್ತು. ಮುಂದೆ ಕುವೆಕಣ – ಕ್ಷಮಿಸಿ, ವಿವರಣೆ ನನ್ನಲ್ಲಿಲ್ಲ.

ಸುಮಾರು ಒಂದು ಗಂಟೆಯ ಚಾರಣದಲ್ಲಿ ನಾವು ಕಾಡು ಹರಿದು ಒಂದು ತೆರೆಮೈ ತಲಪಿದ್ದೆವು. ಅಲ್ಲಿ ನೆಲದಿಂದೆದ್ದ ಕಲ್ಲ ಹಾಸು - ಗುಂಡಲ್ಪಾದೆ (ಗುಂಡಗಿರುವ ಪಾದೆ = ಉಬ್ಬೆದ್ದ ಕಲ್ಲ ಹಾಸು), ನಮಗೆ ಮೊದಲ ವಿಶ್ರಾಂತಿಗೂ ಒದಗಿತ್ತು. ಅಲ್ಲಿ ಕುಳಿತಾಗ ಸೋಜಾ ಉತ್ಸಾಹದಿಂದ ಕೆಳಭೂಮಿಯತ್ತ ಕೈಚಾಚುತ್ತ ಕೊಟ್ಟ ಸ್ಥಳಪುರಾಣಗಳಿಗೆ ನಾವು ಕೋಲೇ ಬಸವಗಳಂತೆ ಗೋಣು ಹಾಕಿದ್ದೆವು. ಕತ್ತಲಿನ ಮೊತ್ತದಲ್ಲಿ ಅಲ್ಲೊಂದು ಮಿಣುಕು ಬಂಗಾಡಿಪೇಟೆ, ಇಲ್ಲೊಂದು ಛಾಯೆ ಧರ್ಮಸ್ಥಳ! ಕರಿಯಾಗಸದಲ್ಲಿನ ಮಸಿಮುದ್ದೆಗಳು ಅಗ್ಗಲ್ಲು, ಕಾರ್ತಿಗಲ್ಲು, ಹಿರಿಮರುದುಪ್ಪೆಯೇ ಮೊದಲಾದ ಪರ್ವತಾಗ್ರಗಳು!

ಅಂಕುಡೊಂಕಿನ ಗಾಡಿ ದಾರಿಯನ್ನು ಅಲ್ಲಲ್ಲಿ ಉಪೇಕ್ಷಿಸಿಯೂ ಚಾರಣಿಗರು ನೇರ ಒಳದಾರಿಗಳನ್ನು ರೂಢಿಸಿದ್ದರು. ಅವು ಉಸಿರುಗಟ್ಟಿಸುವಂತಿದ್ದರೂ ನಾವು ಬಿಟ್ಟುಗೊಡಲಿಲ್ಲ. ನಾನೂರಡಿ ಬಳಸಂಬಟ್ಟೆಗೆ ಬದಲಿಯಾಗಿ ಒದಗುವ ನಲ್ವತ್ತಡಿ ಯಾರಿಗೂ ನಿರಾಕರಿಸಲಾಗದ ಆಕರ್ಷಣೆಯೇ ಸರಿ. ಎಷ್ಟೋ ಕಡೆ ಸುತ್ತಿನ ದಾರಿ ಬಳಕೆ ಬಿಟ್ಟು ಹೋದ್ದಕ್ಕೆ ಪೂರ್ತಿ ಕಾಡು ಬೆಳೆದು, ದುರ್ಗಮವೇ ಆದದ್ದೂ ಇತ್ತು. ಅಂಚು ಕಟ್ಟಿದ್ದ ಕಾಡುಕಲ್ಲುಗಳು ಕುಸಿದು ಒಳದಾರಿಯೇ ನಿಜದಾರಿಯಾದದ್ದೂ ಇತ್ತು. ಜಾಡು ಅಡ್ಡ ಸರಿಯುವಲ್ಲಿ ಅಸಂಖ್ಯ ಏಣು (ಉಬ್ಬು ಮೈ), ಕಣಿವೆಗಳನ್ನು ಉತ್ತರಿಸುತ್ತಿತ್ತು. ಅಂಥ ಬಹುತೇಕ ಕಣಿವೆಗಳಲ್ಲಿ ಕಾಡಿನ ದಟ್ಟಣೆ ಹೆಚ್ಚುವುದೂ ಝರಿ ತೊರೆಗಳು ಸಿಕ್ಕುವುದೂ ಅಪ್ಯಾಯಮಾನವಾಗಿರುತ್ತಿತ್ತು. ಎಷ್ಟೋ ಏಣು ಮೈಯಲ್ಲಿ ಹುಲ್ಲಿನ ಹರಹುಗಳಿರುತ್ತಿದ್ದುದರಿಂದ ಹಗಲಿನ ಚಾರಣಿಗರಿಗಂತೂ ಕಣಿವೆಗಳು ಖಂಡಿತಕ್ಕೂ ವಿರಾಮಧಾಮದ ಕಲ್ಪನೆಯನ್ನೇ ಕೊಟ್ಟರೆ ಆಶ್ಚರ್ಯವಿಲ್ಲ. ಝರಿ, ತೊರೆಗಳಿಗೆ ನಾವು ನೇರ ಬಾಯಿ ಒಡ್ಡುತ್ತಿದ್ದೆವು, ಕೈ ಮುಖಕ್ಕೆ ಧಾರಾಳ ತಳಿದುಕೊಳ್ಳುತ್ತಿದ್ದೆವು. ಜಲಮೂಲಗಳನ್ನೆಲ್ಲ ಮಾಲಿನ್ಯಕಾರಕಗಳ ಪಾತ್ರೆಯನ್ನಾಗಿಸುವ ಅಪಕಲ್ಪನೆ ಆ ದಿನಗಳಲ್ಲಿ ಅಷ್ಟು ತೀವ್ರವಿರಲಿಲ್ಲ. ಹಾಗಾಗಿ  ಮೇಲಿನ ದಂಡೆಯಲ್ಲಿ ಮನುಷ್ಯ ವಾಸವಿರಬಹುದೇ ಎಂಬ ಯೋಚನೆ ಆ ದಿನಗಳಲ್ಲಿ ಬಂದದ್ದೇ ಇಲ್ಲ! [ನದಿತಿರುವು, ಗಣಿಗಾರಿಕೆ, ಅನೈತಿಕ ಪ್ರವಾಸೋದ್ಯಮಗಳು ಇಂದು ಮಾಲಿನ್ಯವನ್ನು ಅತ್ಯುನ್ನತ ಶಿಖರಾಗ್ರಗಳಿಗೂ ಧಾರಾಳ ಮುಟ್ಟಿಸುತ್ತಿವೆ. ಕುಮಾರಪರ್ವತದ ನೆತ್ತಿಯ ಕಸದ ಕುಪ್ಪೆಯನ್ನು ನೋಡಿದವರು ಯಾರೂ ಅಲ್ಲಿನ ತೊರೆಗಳನ್ನು ನಿರ್ಮಲ ಮನಸ್ಸಿನಿಂದ ಸ್ವೀಕರಿಸುವುದು ಅಸಾಧ್ಯ! ಕಾಡ್ಮನೆ ಚಾ ತೋಟಗಳನ್ನು ಬಗೆಗಣ್ಣಿನಿಂದ ನೋಡಿದವರು ಯಾರೂ ಶಿರಾಡಿ ಘಾಟಿಯ ಉತ್ತರ ಮಗ್ಗುಲಿನ ಝರಿ ತೊರೆಗಳನ್ನು ಶುದ್ಧ ನೀರೆನ್ನಲಾರರು!]

ಆಗೀಗ ಅನುರಣಿಸುತ್ತಿದ್ದ ವನಸ್ವನಗಳು ಶಬ್ದಾರ್ಥದಲ್ಲಿ ನಿಗೂಢ, ಭಯಕಾರಿಯೇ ಇರುತ್ತಿತ್ತು. ಎಲ್ಲೋ ಜಿಮ್ ಕಾರ್ಬೆಟ್ಟನ ಕಥನಗಳ ನರಭಕ್ಷಗಳು ನಮ್ಮನ್ನು ನಿಶ್ಶಬ್ದವಾಗಿ ಹಿಂಬಾಲಿಸುತ್ತಿರಬಹುದೇ ಎಂಬ ಭಯ ಕಾಡುವುದಿತ್ತು. ಆ ದಿನಗಳಲ್ಲಿ ನಮ್ಮ ಪ್ರತ್ಯಕ್ಷ ವನ್ಯ ಜ್ಞಾನ ಸೊನ್ನೆ. ಆದರೂ ಕಾಟಿ ಕಡವೆಗಳ ಸಮೃದ್ಧಿಯಿರುವ ಈ ವಲಯದಲ್ಲಿ ಹುಲಿ ಚಿರತೆಗಳು ನಮ್ಮ ತಳ್ಳಿಗೆ ಬಾರವು ಎಂದು ಮನಸ್ಸನ್ನು ಸಂತೈಸಿಕೊಳ್ಳುತ್ತಿದ್ದೆವು. ಮುಂದುವರಿದಂತೆ ಆ ಧ್ವನಿಗಳು ಆತ್ಮೀಯವಾಗುತ್ತ, ವನಗಾನದಂತೆ ನಮ್ಮ ಭಾವಕೋಶವನ್ನು ಆನಂದದಿಂದ ತುಂಬುತ್ತಿದ್ದವು. ಆಗೀಗ ಲಹರಿ ಕಾಡುವುದೂ ಇತ್ತು. ಈಗಲೇ ಹೀಗಿದ್ದರೆ, [ನೆನಪಿರಲಿ, ನಾನು ಹೇಳುತ್ತಿರುವುದು ನಾಲ್ಕು ದಶಕದ ಹಿಂದಿನ ಸ್ಥಿತಿ] ಶತಮಾನದ ಹಿಂದಿನ ಸ್ಥಿತಿ ಹೇಗಿದ್ದಿರಬೇಡ! ವನ್ಯ ಇನ್ನಷ್ಟು ಅಖಂಡವಿತ್ತು, ಪ್ರಾಣಿ ಸಂಪತ್ತು ಸಮೃದ್ಧವಿತ್ತು. ಆ ದಿನಗಳಲ್ಲಿ, ಇಲ್ಲಿ ದಾರಿ ಕಡಿದವರ, ಗಾಡಿ ಕಟ್ಟಿ ಎಳೆಸಿದವರ, ಕುದುರೆ ಏರಿ ಮೆರೆದವರ, ಮರೆಸು ಕೂತು ಬೇಟೆಯಾಡಿದವರ ಉಸಿರೆಲ್ಲಾ ಕತೆಯಾಗುವುದಿದ್ದರೆ ಹೇಗೋ ಎಂದು ಆಶ್ಚರ್ಯಪಡುತ್ತಿರುವಾಗ ಸೋಜಾನ ಕತೆಯೊಂದು ಬಂತು.

ಸೋಜಾನಿಗೆ ಮಳೆಗಾಲದ ನಡುವಣ ಅದೊಂದು ಸಂಜೆಯ ಕೊನೆ ಬಸ್ಸಿನಲ್ಲಿ ಮಂಗಳೂರಿನಿಂದ ಸುದ್ದಿ ಬಂತು - ಹೇವಳದ  ಭಾವ ಅರ್ಥಾತ್ ಸಿಂಹಪುರ್ಬುವಿನ ತಮ್ಮ ಮರಣಿಸಿದ್ದಾನೆ. ಬಾಡಿಸಿದ ಬಾಳೆ ಎಲೆ ಸುತ್ತಿ ಒಂದಷ್ಟು ಸೂಟೆ (ಒಣ ತೆಂಗಿನ ಗರಿಯ, ಸುಮಾರು ತೋಳ್ದಪ್ಪದ ಕಟ್ಟು – ಆ ಕಾಲದ ಟಾರ್ಚು!) ಹಿಡಿದು, ತಲೆಗೊಂದು ಗೊರಬು (ಬಾಗಿಸಿ, ಬಿಗಿದು ಕಟ್ಟಿದ ಬಿದಿರ ಸೀಳುಗಳ ಹಂದರಕ್ಕೆ ಒಣ ಈಚಲ ಗರಿ ಬಿಗಿದು ಮಾಡಿದ ರೈನ್ ಕೋಟ್!) ಮತ್ತು ಹೊಟ್ಟೆಗೊಂದಷ್ಟು ಗಂಗಸರ (ಹೆಂಡ) ಏರಿಸಿ ನಡೆದೇ ಬಿಟ್ಟಿದ್ದನಂತೆ. ದಾರಿ ಸಾಗುವಲ್ಲಿ ಮಳೆ, ಝರಿ, ಕಾಡು, ಜಿಗಣೆ, ಕವಿದ ಕತ್ತಲೆಗಳೆಲ್ಲ ಕತೆ ಕೇಳುವ ನಮಗೆ ಭಯಕಾರಕಗಳು; ಅವುಗಳಿಂದ ಭಿನ್ನನಲ್ಲದ ಸೋಜಾನಿಗೆ ನಿರ್ಭಯ. ನಡು ರಾತ್ರಿ ಹೇವಳ ತಲಪಿದ್ದಾನೆ. ಆದರೆ ಅಲ್ಲೋ ಇನ್ನೊಂದೇ ತುರ್ತು. ಕುಟುಂಬದಲ್ಲಿ ಯಾರಿಗೋ ಬಗೆಹರಿಯದ ಸೀಕು ತುರೀಯಾವಸ್ಥೆಯಲ್ಲಿತ್ತು. ದಪ್ಪ ಕೋಲೊಂದಕ್ಕೆ ಕಂಬಳಿ ತೊಟ್ಟಿಲು ಕಟ್ಟಿ, ರೋಗಿಯನ್ನದರಲ್ಲೇರಿಸಿದ್ದಾಯ್ತು. ಸೋಜಾನ ಹೊಟ್ಟೆಗೊಂದಷ್ಟು ಗಂಜಿ, ಮೇಲಿನ್ನೊಂದು ದಿರಾಮು ಕಳಿ. ಕಂಬಳಿತೊಟ್ಟಿಲಿಗೆ ದಪ್ಪ ಕೋಲು ತೂರಿ ಒಂದು ಕೊನೆಯಲ್ಲಿ ಭುಜ ಕೊಟ್ಟ ಲೋಬೋಭಾವನಿಗೆ ಇನ್ನೊಂದು ಕೊನೆಯಲ್ಲಿ ಜೋಡಿ ಸೋಜಾಭಾವ. ಬಿರುಮಳೆಯ ಆ ರಾತ್ರಿ ಕಳೆದ ನಸುಕಿನ ನಾಲ್ಕು ಗಂಟೆಗೆ ಬೆಳ್ತಂಗಡಿ ವೈದ್ಯರ ಬಾಗಿಲು ತಟ್ಟಿ ಇಲಾಜು ಕೇಳುವಾಗ ಇಬ್ಬರೂ ನೆರೆಮನೆಯಿಂದ ಬಂದವರಂತೆ ಇದ್ದರಂತೆ!

ಸೋಜಾ ಕಥಾ ಭಂಡಾರದಲ್ಲಿ ಆ ವಲಯದ ಓರ್ವ ಭಾರೀ ಜಮೀನ್ದಾರ ದುರ್ವ್ಯಸನಗಳ ದಾಸನಾಗಿ, ದಿವಾಳಿಯಾಗಿ ನಂಬಿದವರಿಗೆ ಸಾಲದ ಹೊರೆಯನ್ನಷ್ಟೇ ಉಳಿಸಿ ಆತ್ಮಹತ್ಯೆ ಮಾಡಿಕೊಂಡದ್ದು ನಮ್ಮಲ್ಲೂ ತೀವ್ರ ವಿಷಾದವನ್ನು ಹರಡಿತ್ತು. ಶ್ರಮಜೀವಿಯೊಬ್ಬ ಮೈಗಳ್ಳ ಸ್ನೇಹಿತನಿಗೆ ಸಾಲ ಕೊಟ್ಟು, ಮರುಪಾವತಿಗೆ ಒತ್ತಾಯಿಸಿದಾಗ, ಪುಸಲಾವಣೆಯಲ್ಲಿ ಬೇಟೆಗೊಯ್ದು ಬಲಿಯಾದ ವಿಶ್ವಾಸದ್ರೋಹದ ಕತೆ ನಮ್ಮಲ್ಲೂ ಖತಿ ಮೂಡಿಸಿತ್ತು. ಹೀಗೇ ಹೇವಳಕ್ಕೆ ಮಣಿಪಾಲದ ಡಾಕ್ಟ್ರು ಬಂದ ಕತೆ, ಕಳ್ಳಭಟ್ಟಿ ನಾಯ್ಕನನ್ನು ಸೋಜಾ ಗಾಬರಿಬೀಳಿಸಿದ ಕತೆ, ಶಿಕಾರಿಗೆ ಹೊರಟ ಮಿತ್ರರು ಸೋಜಾನ ಗಂಗಸರಕ್ಕೆ ಚಿತ್ತಾದ ಕತೆ, ಬೆಳ್ತಂಗಡಿಗೆ ನಾಗರಿಕತೆ ತಂದ ವ್ಯಥೆ ಮೊದಲಾದವನ್ನು ಅಂದು ನಾನು ಕೇವಲ ಶೀರ್ಷಿಕೆಗಳ ಮಟ್ಟದಲ್ಲಷ್ಟೇ ಟಿಪ್ಪಣಿ ಹಾಕಿಟ್ಟದ್ದನ್ನು ಉಲ್ಲೇಖಿಸಬಲ್ಲೆ; ವಿಸ್ತರಿಸಬೇಕಿದ್ದ ವಿವರಗಳು ಮಂಡೆಯಲ್ಲಿ ಮಸಳಿವೆ.

[ಮುಂದೊಂದು ದಿನ ಗೆಳೆಯ ಪಂಡಿತಾರಾಧ್ಯರನ್ನೂ ಒಳಗೊಂಡ ತಂಡ ಒಂದನ್ನು ಕುದುರೆಮುಖಕ್ಕೆ ಹೀಗೆ ಏರಿಸಿದ್ದೆ. ಆಗ ಮನುಷ್ಯನ ಎಂಜಲೆಲೆ ಮೊಲ ಮೂಸಿದರೆ ಮನುಷ್ಯನ ಮೇಲಾಗುವ ವಿಪರೀತದ ಕುರಿತ ಸೋಜಾ ಹೇಳಿದ ಕತೆಯನ್ನಂತೂ ಆರಾಧ್ಯರು ಕನಸಿನಲ್ಲೂ ನೆನೆಸಿ ನಗುತ್ತಿದ್ದರು.]

ಓಂತಿಗುಡ್ಡೆಯ ವಲಯ ಮುಗಿದ ಮೇಲೆ ಕೋಟೆ ಸುತ್ತು. ಇಲ್ಲಿ ತೆರೆಮೈ ಜಾಸ್ತಿ. ಆಳೆತ್ತರದ ಹುಲ್ಲು ಕಂಡಾಗ ಸೋಜಾನಿಗೆ ಬೆಂಕಿ ಹಚ್ಚುವ ಮೋಜು. ಕತ್ತಲನ್ನು ನೆಕ್ಕುವ ಆ ಕೆನ್ನಾಲಗೆಗೆ ನಾವು ಆತ್ಮರಕ್ಷಣೆಗೆಂದು ಒಯ್ದಿದ್ದ ಪಟಾಕಿಯೊಂದನ್ನೂ ಎಸೆದು ತುಸು ಭಯ ದೂರಮಾಡಿಕೊಂಡಿದ್ದೆವು! ಅಲ್ಲೊಂದೆಡೆ ಇಗರ್ಜಿಯೆಡೆಗೆ ಹೊರಟಿದ್ದ ಪಾದ್ರಿಯೊಬ್ಬ ದೇವನೆಡೆಗೆ ನಡೆದ ಕತೆ ಬಂತು. ದಾರಿ ಬದಿಯ ದೊಡ್ಡ ಕರಿಮರದ ಕಾಂಡದ ಮೇಲೆ ಕೆತ್ತಿದ್ದ `ಕುರ್ಸು’ (ಶಿಲುಬೆ) ಸಾಕ್ಷಿ ನುಡಿಯಿತು. ಬಲ್ಲೆಕಣ, ಕರಡಿಮಾಂಟೆ, ದಫೇದಾರ್ ಬುಡಾರಗಳೂ ಹಿಂದೆ ಬಿದ್ದವು.

ಹೊಸದಿನದ ಮುಂಬೆಳಕಿನೊಡನೆ ಕಾಡಿನ ಮುಸುಕನ್ನು ಕಳೆಯುವಾಗ ನಮ್ಮೆದುರು ಮೂರು ಅದ್ಭುತಗಳು ಅನಾವರಣಗೊಂಡವು. ಎದುರು ಹರಡಿ ಬಿದ್ದಿತ್ತು ಹೇವಳದ ವಿಸ್ತಾರ ಬೋಗುಣಿ – ಸಿಂಹ ಪುರ್ಬುಗಳ ಕೃಷಿಭೂಮಿ. ಹೇವಳದ ಇತಿಹಾಸವನ್ನು ಈಗಾಗಲೇ ನನ್ನ ತಂದೆ (ಜಿಟಿನಾ – ಕುದುರೆಮುಖದೆಡೆಗೆ) ಹೇಳಿರುವುದರಿಂದ ನಾನು ವಿವರಿಸಲು ಹೋಗುವುದಿಲ್ಲ.

ಬಲಕ್ಕೆ ತಿರುಗಿ ನೋಡಿದರೆ ಹಿರಿಮರುದುಪ್ಪೆ. ವಾಸ್ತವದಲ್ಲಿ ಗುಂಡಲ್ಪಾದೆಯಿಂದಲೇ ಕತ್ತಲಮೊತ್ತದಲ್ಲಿ ನಮ್ಮ ದಾರಿಯನ್ನಡ್ಡಗಟ್ಟಿದ ಛಾಯಾರಕ್ಕಸನಂತೇ ಕಂಡುಕೊಂಡಿದ್ದ ಶಿಖವರವಿದು. ಮುಂಬೆಳಕಿನ ವೇಳೆಯಲ್ಲಿ ನಮ್ಮೆದುರಿದ್ದ ಭಾರೀ ಬೆಟ್ಟವೊಂದರ ಹೊರಮಗ್ಗುಲಿಂದ, ಇನ್ನೂ ಭಾರೀ ಎನ್ನುವಂತೆ, ಆಕಾಶ ತಿವಿಯುವ ಶಿಲಾಯುಧದಂತೆ, ನಮ್ಮನ್ನು ನಿಗೂಢವಾಗಿ ಇಣುಕಿ ನೋಡುವಂತೆಯೇ ತೋರುತಿತ್ತು. ಆದರೀಗ - ಹೇವಳದ ಹಂತದಲ್ಲಿ, ಬಲ ಕೊಳ್ಳದ ಬಂಗಾಡಿಪೇಟೆಯೋ ಕಿಲ್ಲೂರೋ ಪಾತಾಳಕ್ಕಿಳಿದಿತ್ತು. ನಾವು ಭಾರೀ ಎಂದುಕೊಂಡಿದ್ದ ಎದುರಿನ ಶಿಖರ ನಮ್ಮಿಂದ ಕೆಳಗಿತ್ತು. ಆದರೆ ಹಿರಿಮರುದುಪ್ಪೆ (ಸಮುದ್ರ ಮಟ್ಟದಿಂದ ೫೬೪೩ ಅಡಿ), ಮರೆ ಕಳಚಿ ಪೂರ್ಣ ರೂಪದಲ್ಲಿ, ಇನ್ನಷ್ಟು ಭವ್ಯವಾಗಿಯೇ ಪ್ರತ್ಯಕ್ಷವಾಗಿತ್ತು. ಎತ್ತರ ಬಿತ್ತರಗಳಲ್ಲಿ ಇದು ಕುದುರೆಮುಖಕ್ಕೆ ನಿಸ್ಸಂದೇಹವಾಗಿ ಸಣ್ಣದು. ಆದರೆ ಪರಿಣಾಮದಲ್ಲಿ ಏನೂ ಕಡಿಮೆಯದ್ದಲ್ಲ. (ಇದರ ಸ್ವತಂತ್ರ ಆರೋಹಣದ ನಿರೂಪಣೆ ಇಲ್ಲೇ ಮುಂದೆಂದಾದರೂ)


ಕೊನೆಯದು, ಎಡ ಹೊರಳಿದರೆ ಎಂದೂ ಮರೆಯದ ದೃಶ್ಯ - ಕುದುರೆಮುಖ ಶಿಖರ. ಚೈನಾ ಪ್ರವೇಶಿಸಿ ಕೈಲಾಸ (ಶಿಖರ) ಪರಿಕ್ರಮಣ, ಡಾರ್ಜಿಲಿಂಗಿನ ಟೈಗರ್ ಹಿಲ್ಲಿನಿಂದ ಕಾಣುವ ಕಾಂಚನ್‍ಜುಂಗಾದ ನೆತ್ತಿಯಲ್ಲಿನ ಸೂರ್ಯೋದಯ, ಎವರೆಸ್ಟ್ ತಳ ಶಿಬಿರಕ್ಕೆ ಚಾರಣ, ಊಟಿಯ ಡಾಲ್ಫಿನ್ ನೋಸಿನಿಂದ ರಂಗನಾಥ ಸ್ತಂಬ ದರ್ಶನ, ಕೊಡೈಕೆನಾಲಿನಲ್ಲಿ ದೃಶ್ಯಗಳ ಮಾಲೆಯೇ ಆಗಿರುವ ಗ್ರೀನ್ ವ್ಯಾಲೀ ವ್ಯೂ ಎಂದಿತ್ಯಾದಿ ಪ್ರಕೃತಿಯಾರಾಧನೆಯಲ್ಲಿ ವಾಸ್ತವದ ಲಕ್ಷ್ಯ ಸಾಧನೆಯಷ್ಟೇ ಸೌಮ್ಯ ವೀಕ್ಷಣೆಯೂ ಮಹತ್ವವನ್ನು ಪಡೆದಿದೆ. ಹಾಗೇ ಹೇವಳದ ಕಣಿವೆಯಿಂದ ಕುದುರೆಮುಖ ದರ್ಶನವೂ ಒಂದು ವಿಶಿಷ್ಟ ಅನುಭವ. ನಾನು ಬೇರೆ ಬೇರೆ ಕಾಲಘಟ್ಟದಲ್ಲಿ, ವಿವಿಧ ತಂಡಗಳೊಡನೆ ನಾವೂರು ದಾರಿಯಿಂದಲೂ ಸಂಸೆಯತ್ತಣಿಂದಲೂ ಬಂದದ್ದಿದೆ. ಕತ್ತಲು ಹರಿದು ಒಮ್ಮೆಗೇ ಕಣ್ತುಂಬಿದಾಗಲೂ ಹಗಲಿನ ಚಾರಣದಲ್ಲಿ ಅಲ್ಲಿ ಇಲ್ಲಿ ನೋಡನೋಡುತ್ತಾ ಬಂದರೂ ಹೇವಳದ ಮೆಟ್ಟಿನಲ್ಲಿ ನಿಂತಾಗ ಸಿಗುವ ದರ್ಶನಕ್ಕೊಂದು ಪ್ರತ್ಯೇಕತೆ ಇದೆ. ನಾವೇರುತ್ತ ಬಂದ ಬೆಟ್ಟಸಾಲು ಹೇವಳದ ಅಂಚಿನಲ್ಲಿ ಪೂರ್ಣ ಎಡ ಹೊರಳಿ ಕುದುರೆಮುಖ ಶಿಖರದ ಪಾದದಲ್ಲಿ ಲೀನವಾಗುತ್ತದೆ. ಓಂತಿಯ ಈ ಶರಣಾಗತಿಯನ್ನು ದಿವ್ಯವಾಗಿ ನಿರ್ಲಕ್ಷಿಸಿದ ಕುದುರೆ, ಗತ್ತಿನ ಹಣೆಯನ್ನು ಆಗಸಕ್ಕೆತ್ತಿ, ನಾರಾವಿಯ ಕೊಳ್ಳ, ಮೂಡಬಿದ್ರೆ ಬಯಲುಗಳನ್ನು ಮೀರಿ ಪಡುಗಡಲನ್ನು ದಿಟ್ಟಿಸುವಂತಿದೆ. ಅದರ ಹಿಂದಲೆಯಲ್ಲಿ ಉತ್ತರಕ್ಕೆ ಹಗುರವಾಗಿ ಇಳಿಯುವ ಆ ಶ್ರೇಣಿಯ ಹುಲ್ಲಹಾಸಿನ ಉದ್ದಕ್ಕೂ ಆಚಿನಿಂದಿಣುಕುವ ಮರಗಳ ಕೊಡಿ ಹೆಕ್ಕತ್ತಿನ ಜೂಲಿನಂತೇ ಶೋಭಿಸುತ್ತದೆ. ಆ ಮುಖಕ್ಕೊದಗುವ ಮೋಡ-ಮಂಜು, ಬೆಳಕು-ಮಸಕುಗಳ ಆಟ, ಆ ದೈತ್ಯ ಶಿಲಾಮುಖ ರೇಖೆಗಳು ಧ್ಯಾನಸ್ಥ ಮನಸ್ಸಿಗೆ ಹೊಳೆಯಿಸುವ ಕಲ್ಪನಾಚಿತ್ರಗಳು ಎಲ್ಲವೂ ಭವ್ಯ. ನಮ್ಮ ನೋಟವನ್ನು ಕತ್ತಲಿನೊಡನೆ ಓಂತಿಯ ಬೆನ್ನ ಹುರಿಯೂ (ಬೆಟ್ಟ ಹಾಗೂ ಕಾಡು) ಮರೆ ಮಾಡುತ್ತಲೇ ಇತ್ತು. ಅಂತಿಮ ಹಂತದಲ್ಲಂತೂ ಕಾಡಿನ ಮರೆ ನಮ್ಮ ಕುತೂಹಲವನ್ನು ನಿಶ್ಚಯ ಲಂಬಿಸಿತ್ತು. ಅದುವರೆಗಿನ ಶ್ರಮಕ್ಕೆ ಧನ್ಯತೆ, ಮನಸ್ಸಿಗೆ ಮುಕ್ತಿ, ಪ್ರಯತ್ನಕ್ಕೆ ಭರವಸೆಯನ್ನೆಲ್ಲ ಒಮ್ಮೆಗೇ ಕೊಡುತ್ತದೆ ಕುದುರೆಮುಖ ಶಿಖರದ ದಿವ್ಯದರ್ಶನ!

ಗಗನ ಚಿತ್ತಾರವನ್ನು ಮನುಷ್ಯ ಮಿತಿಗೆ ಅಳವಡಿಸುವಾಗ ತಾರೆಗಳ ಅಸಂಗತ ಎರಚಾಟದಲ್ಲೂ ಪುರಾಣಪುರುಷ, ಕಥನವನ್ನು ಕಾಣುವಂತೆ ಇದೂ ಕುದುರೆಮುಖವಾದದ್ದಿರಬಹುದು. ಕುದುರೆಯ ಹಣೆಯಂತೆ ಕಲ್ಪಿಸಲಾಗುವ ಅಂಶ ಭಾರೀ ಶಿಲಾಮಯ. ವಿಜ್ಞಾನ ಇಲ್ಲಿನ ಕಲ್ಲುಗಳಲ್ಲಿರುವ ಕಬ್ಬಿಣದ ಅಂಶ ಗುರುತಿಸಿದ್ದಕ್ಕೇ ಗಣಿಗಾರಿಕೆ ಬಂದದ್ದು ನಿಮಗೆ ತಿಳಿದೇ ಇದೆ. ಹಾಗೇ ಸ್ಥಳ-ಪುರಾಣಿಕರು ಕಬ್ಬಿಣದಂಶವನ್ನು ಗುರುತಿಸಿ ಇದನ್ನು ಅಯೋಮುಖವೆಂದರು, ಎನ್ನುತ್ತದೆ ಒಂದು ವಾದ. ಅಯೋಮುಖ ಬಳಕೆಯ ಸವಕಳಿಯಲ್ಲಿ ಹಯಮುಖ, ಕನ್ನಡೀಕರಣಗೊಂಡು ಕುದುರೆಮುಖವಾಯ್ತೆಂದು ಆ ಪುರಾಣ ನಿಷ್ಕರ್ಷಿಸುತ್ತದೆ.

ಸೋಜಾ ಹಾಕಿದ ಉದ್ದನ್ನ ಕೂಕಳಿಗೆ ಅತ್ತಣಿಂದ ಉತ್ತರ ಬಂತು. ಅವರೊಳಗಿನ ಆಪ್ತತೆಯಲ್ಲಿ ಅದೇ ಉಭಯಕುಶಲೋಪರಿಯ ಪರಿಯಾಗಿರಬೇಕು. ಆದರೆ ನಮಗೆ ಬರಿಯ ಮಾತಿನ ಉಪಚಾರಕ್ಕಿಂತಲೂ ಮಿಗಿಲಾದ್ದು, ಹಸಿವಿಗೆ ಏನಾದರೂ ಬೇಕಿತ್ತು. ಖಾಂಡವವನ ದಹನಕಾಲದಿಂದಲೂ ಹಿಂಗದ ಹಸಿವಿನ ಅಗ್ನಿ, ಇಲ್ಲಿ ಸೋಜಾನ ನೆಪದಲ್ಲಿ ಕೆಳಗೆ ದಾರಿಯಲ್ಲೆಲ್ಲೋ ಹುಲ್ಲಿಗೆ ಹತ್ತಿಕೊಂಡಿದ್ದನಲ್ಲ. ಅವನು ಆ ಮೈಯಲ್ಲೇ ಏರೇರಿ ಸದ್ಯ ಕುದುರೆಯ ಕಂಠದ ಕೆಂಪು ಮಾಲೆಯಂತೆ ಚಟಪಟಾಯಿಸುತ್ತಿದ್ದ. ಅದಕ್ಕೆ ಸೂಕ್ತ ಸ್ಥಳಕ್ಕೇ ಸೋಜಾ ನಮ್ಮನ್ನು ಕರೆದೊಯ್ದ. ಹೇವಳದ ಬೋಗುಣಿಯ ಮೇಲಂಚಿನಲ್ಲೇ ಸಾಗುವ ದಾರಿಯಲ್ಲೇ ಮುಂದುವರಿದೆವು. ಹೇವಳದವರು ತಮ್ಮ ವಲಯದ ಉತ್ತರಮೂಲೆಯ ಬಳಿಯೊಂದು ಕಾಡತೊರೆಯನ್ನು ತಿರುಗಿಸಿ ತಂದಿದ್ದರು. (ಮುಂದದು ತೋಡಿದ್ದ ನೇರ ಚರಂಡಿಯಲ್ಲೇ ಕೆಳಗಿಳಿದು ಹೇವಳಿಗರ ಗೃಹ ಹಾಗೂ ಕೃಶಿಕಾರ್ಯಕ್ಕೆ ನೀರೂಡುತ್ತಿತ್ತು.) ಅದನ್ನು ಪ್ರಕೃತಿ ಗುರುತಿಸಿದಂತೆ ಅಲ್ಲೊಂದು ಭಾರೀ ಮರ ಬೆಳೆದು ನಿಂತಿತ್ತು. ಆ ನೆರಳಲ್ಲಿ ತುಸು ದೀರ್ಘವೇ ತಂಗಿ, ಪ್ರಾತರ್ವಿಧಿಗಳನ್ನೆಲ್ಲ ಪೂರೈಸುವುದರೊಡನೆ ಪುನಶ್ಚೇತನಗೊಳ್ಳುವ ಕೆಲಸಕ್ಕಿಳಿದೆವು. ಹುಲ್ಲ ಹರಹಿನ ನಡುವೆ ಅಸಾಮಾನ್ಯವಾಗಿಯೇ ಕಾಣುವ ಮರವನ್ನುದ್ದೇಶಿಸಿ ಆ ಜಾಗದ ಹೆಸರು `ಒಂಟಿಮರ’.
*             *             *             *             *
“ಅಕೋ ಒಂಟಿಮರ ಬಂತು” ಮಹೇಶ ಮಯ್ಯ ಘೋಷಿಸಿದ. ಗಡಿಬಿಡಿ ಮಾಡಬೇಡಿ. ಊರಿನಲ್ಲಿ ನೇರಳಕಟ್ಟೇ ಜೇನುಕಲ್ಲುಗಳೇ ಮೊದಲಾದವು ಎರಡಕ್ಕೂ ಮಿಕ್ಕು ಇರುವಂತೇ ಕುದುರೆಮುಖದ ವಲಯದಲ್ಲೂ ಇನ್ನೊಂದೇ ಒಂಟಿಮರವಿದೆ. ರಾಜಪ್ಪಗೌಡರ `ಸೌಕರ್ಯ’ ಕಳಚಿಕೊಂಡು ಹೊರಟವರಿಗೆ ಶುದ್ಧ ವನ್ಯದ ನಿಶಾನಿ ತೋರಿದ ಈ ಒಂಟಿಮರವೂ ನನ್ನ ನೆನಪುಗಳ ಕಾಲದ ಪರಿಧಿಯೊಳಗೇ ಇದೆ. ಘಟ್ಟದ ಮೇಲಿನಿಂದಲೇ ಅಂದರೆ ಸಂಸೆ ಮಾರ್ಗದಿಂದ, ಆ ಕಾಲದಲ್ಲಿ ಹೇವಳ ಸಂಪರ್ಕಿಸುವವರ ಲೆಕ್ಕದಲ್ಲಿ ಈ ಒಂಟಿಮರ ಅರ್ಧದಾರಿ ಮತ್ತು ಸಹಜವಾಗಿ ಒಂದು ಪುಟ್ಟ ವಿಶ್ರಾಂತಿ ತಾಣ. ಏಣಿನ ಮೇಲ್ಮೈಯಲ್ಲಿನ್ನ ಹುಲ್ಲುಗಾವಲಿನಲ್ಲಿ  ಬಹುಶಃ ಸರ್ವೇಕ್ಷಣ ಇಲಾಖೆಯ ಕಲ್ಲಗುಪ್ಪೆಯನ್ನೇ ಮೆಟ್ಟಿ ವಿಕಸಿಸಿದಂತಿದೆ ಇಲ್ಲಿನ ಒಂಟಿಮರ. ಇಲ್ಲಿ ಸಾರ್ವಕಾಲಿಕ ನೀರಿನಾಸರೆ ಇಲ್ಲದ್ದಕ್ಕೋ ಏನೋ ಇದು ಗುಜ್ಜಾರಿ ಮರ. ಆದರೆ, ನೆರಳಿನೊಡನೆ ಕೂರಲು ಕಲ್ಲಿನ ಸೌಕರ್ಯ ಸೇರಿ ಜನಪ್ರಿಯವಾಗಿರ ಬೇಕು. ಇಂದು ಮರವನ್ನು ಸುತ್ತುವರಿದಂತೆ ಗಟ್ಟಿಯಾದ ಕಟ್ಟೆಯನ್ನೇ ಕಟ್ಟಿಬಿಟ್ಟಿದ್ದಾರೆ!


ಓ ಕ್ಷಮಿಸಿ, ರಾಜಪ್ಪಗೌಡರ `ಸೌಕರ್ಯ’ದ ಕುರಿತು ವಿವರಣೆ ಕೊಡದೆ, ಒಂಟಿಮರ ಮುಟ್ಟಿದ್ದು ಹೇಗೇಂತೀರೋ? ಕೇಳಿ, ರಾಜಪ್ಪಗೌಡ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಲಯದಿಂದ ಮರುವಸತಿ ಕಂಡು ಅಂಚಿನಲ್ಲಿ ಕುಳಿತ ಕೃಷಿಕ. ಇವರು ತನ್ನ ವನ್ಯದ ಹಿನ್ನೆಲೆಗೆ ಸ್ಥಳ ಮಹತ್ತ್ವವನ್ನು ಹದವರಿತು ಬೆರೆಸಿ, ಮನೆ ಹಾಗೂ ಅಗತ್ಯದ ಉಪಚಾರಗಳನ್ನು ಚಾರಣಪ್ರಿಯರಿಗೆ ತೆರೆದಿಟ್ಟಿದ್ದಾರೆ. ಇಂದು ರಜಾದಿನಗಳ ಮತ್ತು ವಾರಾಂತ್ಯಗಳ ಹೊಂದಾಣಿಕೆಯಲ್ಲಿ ರಾಜ್ಯವೇನು ದೇಶದ ಮೂಲೆಮೂಲೆಗಳಿಂದಲೂ ಜನ ಪುಟ್ಟ ಪುಟ್ಟ ತಂಡಗಳಲ್ಲಿ ರಾಜಪ್ಪಗೌಡರ ಸೌಕರ್ಯವನ್ನು ಬಳಸಿಕೊಳ್ಳುತ್ತಿದ್ದಾರೆ. ನಾವು ಅವರ ಅಂಗಳಕ್ಕೇರುತ್ತಿದ್ದಂತೆ ಒಮ್ಮೆಗೆ ಕಣ್ಣು ಕೋರೈಸಿತು.

ಅತ್ತಣ ಕೊಟ್ಟಿಗೆ, ಇತ್ತಣ ಜಗುಲಿಯ ಪಾಲಿಶ್ಡ್ ಗ್ರಾನೈಟ್, ವಿಟ್ರಿಫೈಡ್ ಟೈಲ್ಸ್ಗಳೆಲ್ಲ ಸಿಎಸ್ಸೆಫ್ ದೀಪಗಳ ಬೆಳಕಿನಲ್ಲಿ ಕನ್ನಡಿಯಂತೆ ಹೊಳೆಯುತ್ತಿದ್ದವು. ಹಬ್ಬದ ಮನೆಯಂತೆ ಎಲ್ಲೆಲ್ಲೂ ಹಲವೂರಿನ ಜನ ಸಂಭ್ರಮಿಸಿಕೊಂಡಿದ್ದರು. ವಿವಿಧ ಮೂಲೆಗಳಿಂದ ಮೊಬೈಲೋ ಮತ್ತೊಂದೋ ಚಿತ್ರ, ವಿಚಿತ್ರ ಸಹಿತ ಅರಚಿಕೊಳ್ಳುತ್ತಿದ್ದುವು. ಎಲ್ಲೋ ಹಿಮಾಲಯದ ತಳ ಶಿಬಿರದ (ಅಥವಾ ಸಾಹಸೀ ಸಿನಿಮಾದ) ಅಣಕದಂತೆ ಹಲವು ಬಗೆಯ ಚಾರಣ ಸಾಮಗ್ರಿಗಳ ಸಂತೆಯಲ್ಲಿ ಚಡ್ಡಿ, ಮುಕ್ಕಾಲು ಹಾಕಿದ ವಿವಿಧ ತರುಣ ತಂಡಗಳು, ಮಹಾಸಾಹಸಕ್ಕೆ ಮುನ್ನದ ವಿರಾಮ ಅನುಭವಿಸುವಂತೆ ಚಟುವಟಿಕೆಯಲ್ಲಿದ್ದುವು. ಯಾವುದೋ ಬಳಗ ಸ್ವಂತ ಪಾಕದ ಸಿದ್ಧತೆಯಲ್ಲಿತ್ತು. ಇನ್ಯಾರೋ ಜಗುಲಿಯ ಕುರ್ಚಿ ಬಿಸಿ ಮಾಡುತ್ತಾ ಕುರುಕಲು, `ಪಾನಕ’ ಸವಿಯುತ್ತಿದ್ದರು. ಆದರೆ ರಾಜಪ್ಪನಿಗೆ ಮಯ್ಯ ನಿಶಾಂತರ ಪರಿಚಯವಿದ್ದುದರಿಂದ ನಮ್ಮ ನಾಡಿ ಹಿಡಿದು, ನೇರ ಮನೆಯೊಳಗಿನ ಒಂದು ಪುಟ್ಟ ಕೋಣೆಗೇ ಒಯ್ದು ಬಿಟ್ಟರು. ನಮ್ಮ ಮೊದಲ ಕೆಲಸ ಮಳೆನೀರಲ್ಲಿ ತೊಯ್ದ ನಮ್ಮ ಬಟ್ಟೆ ಬದಲಾವಣೆ. ಅವನ್ನೆಲ್ಲ ಅಲ್ಲಿನ ಹಗ್ಗದಲ್ಲಿ ಹರಗಿದೆವು. ಮೋಡ ಕವಿದ ವಾತಾವರಣವೇ ಇದ್ದುದಕ್ಕೋ ಏನೋ ನಿರೀಕ್ಷಿತ ಚಳಿ ಇರಲಿಲ್ಲ. ಹಾಗಾಗಿ ಹಗುರವಾಗಿಯೇ ನಡುಕೋಣೆಯಲ್ಲಿ ಕಾಲು ಬಿಡಿಸಿ ಲೊಟ್ಟೆ ಪಟ್ಟಾಂಗದೊಡನೆ ವಿರಮಿಸಿದೆವು.

ರಾಜಪ್ಪನ ಆಶ್ರಯ ಬಯಸಿ ಬರುವ ಯಾವುದೇ ತಂಡಕ್ಕೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಔಪಚಾರಿಕತೆಗಳು ಬಾಧಿಸದು. ಅನುಮತಿ ಪತ್ರ, ಪ್ರವೇಶಧನ, ಮಾರ್ಗದರ್ಶಿ ಮತ್ತಿತರ ವ್ಯವಸ್ಥೆಗಳೆಲ್ಲ ರಾಜಪ್ಪ ವಹಿಸಿಕೊಳ್ಳುತ್ತಾರೆ. ನಾವು ಕೇವಲ ಅವರಲ್ಲಿದ್ದ ಡೈರಿಯಲ್ಲಿ ತಂಡದ ಹೆಸರನ್ನಷ್ಟು ಕಾಣಿಸಿ, ಅವರು ಹೇಳಿದ ಮೊತ್ತ ಕೊಟ್ಟರಾಯ್ತು; ರಸೀದಿಯ ಪಂಚಾಯ್ತಿಕೆ ಇಲ್ಲ. ಬಾಯ್ದೆರೆ ವಿವರಗಳಲ್ಲಿ ಹೇಳುವುದಿದ್ದರೆ, ಅದರಲ್ಲಿ ವನ್ಯ ಪ್ರವೇಶದ ಅನುಮತಿಯ ರುಸುಮು, ವೈಯಕ್ತಿಕ ಪ್ರವೇಶದ ರುಸುಮು ಅಲ್ಲದೆ, ಕಡ್ಡಾಯವಾಗಿ ಜತೆಗೊಡುವ ಮಾರ್ಗದರ್ಶಿ/ ವನ್ಯರಕ್ಷಕನ ಸೇವಾಶುಲ್ಕವೂ ಸೇರಿತ್ತು. ವನ್ಯ ಇಲಾಖೆ ನಿತ್ಯ ಕಾರ್ಯಗಳಿಗೇ ಬೇಕಾದ ನೌಕರ ಹಾಗೂ ಸವಲತ್ತುಗಳ ಕೊರತೆ ಅನುಭವಿಸುತ್ತಿದೆ. ಆದರೆ ಈ ಅನಧಿಕೃತ ಹೊರಸೇವೆಯಲ್ಲಿ ಕೊರತೆಗಳೇನೂ ಪ್ರತಿಫಲಿಸುವುದಿಲ್ಲ. ಬಹುಶಃ ಇಲಾಖೆಯ ಕಡತ ಕಟ್ಟುವ ಕೌಶಲದಲ್ಲಿ ಯಾವುದೇ ಲೆಕ್ಕ ಪರಿಶೋಧಕ ನಿಜ ಸಿಬ್ಬಂದಿಗಳ ಲೆಕ್ಕವನ್ನು ಚಾರಣಕ್ಕೆ ಬರುವ ತಂಡಗಳ ಸಂಖ್ಯೆಗೆ ತಾಳೆ ಹಿಡಿಯುವುದೇ ಇಲ್ಲ! `ಮಧ್ಯವರ್ತಿ’ಯನ್ನು ಪೋಷಿಸುವ ವ್ಯವಸ್ಥೆಯಲ್ಲಿ ಸೋರಿಕೆ, ಅದಕ್ಷತೆಗಳು ಲಕ್ಷ್ಯ ಸಾಧನೆಯಲ್ಲಿ ಹೂತುಹೋಗುತ್ತವೆ. ಸಹಜವಾಗಿ ರಾಜಪ್ಪ ಗೌಡರ ಆತಿಥ್ಯಕ್ಕೆ ದಾಖಲೆಯೂ ಇಲ್ಲ, ಕೊರತೆಯೂ ಬಾರದು.  ಅಲ್ಲಿನ ಜಾಡುಗಳ ಅನುಭವ ಇರುವ ಯಾವುದೇ ಹಳ್ಳಿಗ ಚಾರಣ ತಂಡಗಳಿಗೆ ವನ್ಯರಕ್ಷಕನೇ ಸರಿ. ಮಹೇಶ, ನಿಶಾಂತರ ಶಿಸ್ತು, ಆಸಕ್ತಿಗಳ ಪೂರ್ವಪರಿಚಯ ರಾಜಪ್ಪನಿಗೆ ಚೆನ್ನಾಗಿತ್ತು. ಹಾಗಾಗಿ ನಾವು ಸೂರ್ಯೋದಯಕ್ಕೆ ಮುನ್ನ, ಮಾರ್ಗದರ್ಶಿಯ ಹಂಗಿಲ್ಲದೇ ಮುಂದುವರಿಯುವುದಕ್ಕೆ ಅನುಮೋದನೆ ಪಡೆದುಕೊಂಡೆವು.

ಕ್ಲಪ್ತ ಕಾಲಕ್ಕೆ ಬಫೆ ವ್ಯವಸ್ಥೆಯಲ್ಲಿ ಕೊಟ್ಟ ಅಗತ್ಯದ ಊಟ (ಚಪಾತಿ,  ಪಲ್ಯ, ಅನ್ನ, ಸಾಂಬಾರು) ಮುಗಿಸಿ ಬೇಗನೆ ಮಲಗಿಕೊಂಡೆವು. ಸರಿ ರಾತ್ರಿಯಲ್ಲಿ ಹೊರಗೆ ತುಸು ಚಳಿ ಏರಿದ್ದರೂ ಸಣ್ಣ ಕೋಣೆಯೊಳಗೆ ಆರು ಜನ ಗಿಡಿದುಕೊಂಡದ್ದರಿಂದ ನಮ್ಮನ್ನಂತೂ ಅದು ಕಾಡಲಿಲ್ಲ. ಪ್ರಾಯ ಸಹಜವಾಗಿ ಎಲ್ಲೂ ನಿದ್ರೆ ಕಡಿಮೆ (ಆದರೆ ತೂಕಡಿಕೆ ನಿತ್ಯ – ನಮ್ಮ ಖ್ಯಾತ ಅನೇಕ ರಾಜಕಾರಣಿಗಳ ಹಾಗೇ) ಇರುವಂಥಾ ನನ್ನಂತವರನ್ನು ಹೊರತು ಪಡಿಸಿ ಎಲ್ಲರೂ ಸುಖನಿದ್ರೆಯನ್ನೂ ತೆಗೆದಿರಬೇಕು. ಅನುಭವದ ಬಲ ಹಾಗೂ ತಾರುಣ್ಯದ ಬಿಸಿಯಲ್ಲಿ ಮಹೇಶ ಮತ್ತು ನಿಶಾಂತ್ ಹೊರಗೆ ಜಗುಲಿಯಲ್ಲಿ ಮಲಗುಚೀಲ ಬಿಡಿಸಿಕೊಳ್ಳುವುದಾಗಿ ಹೋಗಿದ್ದರು. ಆದರೆ ಅಲ್ಲಿ ಅವರ ಅದೃಷ್ಟ ಅಷ್ಟು ಒಳ್ಳೆಯದಿರಲಿಲ್ಲ. ಮೊದಲು ಬೆಂಗಳೂರಿನಿಂದ ಬಂದ ಒಬ್ಬ ತರುಣ ಹದ ತಪ್ಪಿ ಕುಡಿದು, ವಾಂತಿ ಮಾಡಿಕೊಂಡು ಬಿದ್ದ. ಮಾನವೀಯ ನೆಲೆಯಲ್ಲಿ ಮಯ್ಯ, ನಿಶಾಂತ್ ರಾಜಪ್ಪನಿಗೆ ಜತೆಗೊಟ್ಟು, ಕುಡುಕನ ಚಾಕರಿ ಮಾಡಿದರು. ಮತ್ತೆ ವಿರಮಿಸಬೇಕೆನ್ನುವಷ್ಟರಲ್ಲಿ, ಮಂಗಳೂರಿನಿಂದ ತಡವಾಗಿ ಹೊರಟ ಇನ್ನೊಂದು ತಂಡ ಅಲ್ಲಿಗೆ ತಲಪಿಕೊಂಡಿತಂತೆ. ಅವರು ಕಾರಿನಲ್ಲಿ ಸಂಸೆಗೆ ಬಂದು, ಅಲ್ಲೆಲ್ಲೋ ಅದನ್ನು ಬಿಟ್ಟು, ಮತ್ತಿನ ದೂರವನ್ನು ನಡೆದೇ ಮುಗಿಸಿದ್ದರು. ಆ ತಂಡ ಮಹೇಶನ ಪರಿಚಿತರೇ ಆದ್ದರಿಂದ ಅವರ ಕೊಸರಾಟಗಳಿಗೂ ಸಾಕ್ಷಿಯಾಗುವುದು ನಮ್ಮವರಿಗೆ ಅನಿವಾರ್ಯವಾಯ್ತು. ಮತ್ತೆ ನಾಲ್ಕು ಗಳಿಗೆ ಕಣ್ಣೆವೆ ಮುಚ್ಚುವುದರೊಳಗೆ ನಮ್ಮ ಹೊರಡುವ ಸಮಯ ಬಂದಿತ್ತು. ಅಲ್ಲಿ ಸುಸಜ್ಜಿತ ಪಾಯಖಾನೆ, ಬಚ್ಚಲು ಇದ್ದುದರಿಂದ ಪ್ರಾತರ್ವಿಧಿಗಳೇನೋ ಸುಲಭವಾಗಿಯೇ ಮುಗಿದಿತ್ತು. ಏಳು ಗಂಟೆಯ ಸುಮಾರಿಗಷ್ಟೇ ಹಾಜರಾಗಬಹುದಾದ ರಾಜಪ್ಪನ ಮಾರ್ಗದರ್ಶಿ, ಎಂಟು ಗಂಟೆಗಷ್ಟೇ ತಯಾರಾಗುವ ತಿಂಡಿತೀರ್ಥವನ್ನೆಲ್ಲ ನಾವು ಮೊದಲೇ ನಿರಾಕರಿಸಿದ್ದೆವು. ಹಾಗಾಗಿ ಐದೂ ಕಾಲಕ್ಕೇ ಟಾರ್ಚ್ ಬೆಳಗಿಕೊಂಡು ಕಾಲ್ದಾರಿಗಿಳಿದೆವು.

ಪೂರ್ಣ ಕತ್ತಲು, ಕಾಡು ದಾರಿ, ಸಾಲದ್ದಕ್ಕೆ ಮಳೆಯ ಪ್ರಭಾವ ದೂರಾಗದ ದಿನ. ನಾಗರಿಕ ವ್ಯವಸ್ಥೆಗಳಿಗೆ ಹೊಂದಿ ಹೋದ ಹೆಜ್ಜೆ ಎಡವಿ, ಎಂಬಂತೆ ನಾನೊಂದು ಪಲ್ಟಿ ಹೊಡೆದೆ. ಬಿದ್ದ ನೋವಿಗಿಂತಲೂ `ಅಷ್ಟು ದೊಡ್ಡ ಮೀಸೆ’ ಹೊತ್ತು  ಗಳಿಸುವ ಅವಮಾನ ದೊಡ್ಡದು ಎಂದು ಗಡಿಬಿಡಿಸಿ ಎದ್ದೆ. ಬೆನ್ನ ಚೀಲದ ಎಡ ಜೇಬಿನಿಂದ ಚಿಮ್ಮಿ ಬಿದ್ದ ಸ್ಟೀಲಿನ ನೀರಂಡೆ ಕುಂಡೆ ನೆಗ್ಗಿಸಿಕೊಂಡಿತ್ತು. ಮಣ್ಣು ಒರೆಸಿ, ಅಯೋಡೆಕ್ಸ್ ಹಚ್ಚಿ ಶುಶ್ರೂಷೆ ಮಾಡಿ, ಒಳಗಿಟ್ಟೆ. ಈಚೆ ಪಕ್ಕದ ಜೇಬಿನಿಂದ ಎರಡು ಮೋಸುಂಬಿ ಮುಂದಕ್ಕುರುಳಿ ಹೋಗಿದ್ದುವು. “ನನಗಿಂತಲೂ ಜೋರಾ” ಎಂದು ಗದರಿ ಒಳ ಸೇರಿಸಿದೆ. ನಮ್ಮ ತಂಡ ಸಂತಾಪ ಸಭೆ ನಡೆಸುವ ಮುನ್ನ “ಪೋಯಿ, ಪೋಯಿ” ಎಂದು ಸಾಲು ನಡೆಸಿಯೇ ಬಿಟ್ಟೆ. ಅದುವರೆಗೆ ಟಾರ್ಚಿನ ಬೆಳಕೋಲಿನಲ್ಲಿ ಉಳಿತಾಯ ಮಾಡಿದ್ದ ತಪ್ಪನ್ನು ಬಿಟ್ಟು, ನಿರಂತರತೆ ಉಳಿಸಿಕೊಂಡು, ಎರಡು ಮಿನಿಟು ಬಿರುಸಿನ ಹೆಜ್ಜೆ ಹಾಕಿಯೇಬಿಟ್ಟೆ. ತಲೆ ತುಸು ಹಗುರಾದಾಗ, ಅಜ್ಜಿ ಪುಣ್ಯಕ್ಕೆ ಹಲ್ಲೋ ಮೂಳೆಯೋ ಮುರಿಯಲಿಲ್ಲ ಎಂದು ಮನದಲ್ಲೇ ಲೆಕ್ಕ ಹಾಕಿ ಮುಖ ಒರೆಸಿಕೊಂಡೆ. ಆಗಲೇ ಹೊಳೆದದ್ದು ಮೂಗಿನ ಮೇಲೆ ಕನ್ನಡಕವೇ ಇರಲಿಲ್ಲ! ಮತ್ತೆ ನಾನು ಹಿಂದೆ ನಡೆದು, ಬೆಳಕು ಕತ್ತಲಾಟದಲ್ಲಿ, ಕನ್ನಡಕವೇ ಇಲ್ಲದ ದೃಷ್ಟಿಯಲ್ಲಿ ಕನ್ನಡಕ ಹುಡುಕುವುದನ್ನು ಸುಂದರರಾಯರು ಮತ್ತು ಗಿರಿಧರ್ ತಪ್ಪಿಸಿದರು.

ಆಕಾಶ ಬಿಳುಪೇರುವಾಗ, ಅಂದರೆ, ಭೂಮಿಯ ಮೇಲೆ ಕತ್ತಲಿನ ಪ್ರಭಾವ ಇನ್ನೂ ಇದ್ದ ಹಾಗೇ ದಿಗಂತದಾಚಿನ ರವಿರಾಯರು ಬರುತ್ತಾ ಇದ್ದೇನೆ ಎಂದು ಹೇಳಿಕಳಿಸಿದ ಸಮಯದಲ್ಲಿ ನಾವು ಅಧಿಕೃತವಾಗಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನವನ್ನು ಪ್ರವೇಶಿಸಿಯಾಗಿತ್ತು. ಇದರ ಮುಖ್ಯ ಕುರುಹು – ಮೊದಲೇ ಹೇಳಿದ ಒಂಟಿಮರ. ತುಸು ಮುಂದುವರಿದಂತೆ ಬಲದ ಕಣಿವೆಯಾಚೆ ದಿಟ್ಟಿ ಹರಿಯುತ್ತಿದ್ದಂತೆ ನನ್ನ ನೆನಪು ಸುಮಾರು ಎರಡು ವರ್ಷ ಹಿಂದಕ್ಕೋಡಿತು. ಅಂದು ಅಲ್ಲಿ ತಳದ ಪುಟ್ಟ ಕಣಿವೆಯ ಹರಹಿನಿಂದ ಅರ್ಧ ಬೆಟ್ಟದ ಮೈವರೆಗೂ ಕೆಲವು ತಲಾಂತರಗಳಿಂದ ನೆಲೆಗೊಂಡ ಹಳ್ಳಿ – ಮುಳ್ಳೋಡಿ, ಇತ್ತು. ಮೊದಲೇ ಕಠಿಣವಿದ್ದ ಅವರ ಕೃಷಿ-ಜೀವನ ಪರಿಸರ ರಾಷ್ಟ್ರೀಯ ಉದ್ಯಾನವನದ ಜ್ಯಾರಿಯೊಡನೆ ಬಿಗಡಾಯಿಸಿಕೊಂಡಿತ್ತು. ಆಗ ವೈಲ್ಡ್ ಲೈಫ್ ಫಸ್ಟ್ ಹೆಸರಿನ ನನ್ನ ಮಿತ್ರ ಬಳಗ – ಮುಖ್ಯವಾಗಿ ನಿರೇನ್ ಜೈನ್, ಅವರೆಲ್ಲ ಅಗತ್ಯಗಳಿಗೆ ಹೊರಗೆ ಮರುವಸತಿಯನ್ನು ಕಲ್ಪಿಸಿದ್ದರು. ಅದಾಗಿ ವರ್ಷ ಕಳೆದ ಮೇಲೊಂದು ದಿನ ಗೆಳೆಯ ನಿರೇನ್ ಜತೆಗೆ ನಾನು ಅದೇ ಪ್ರಥಮವಾಗಿ ಅವನ್ನೆಲ್ಲ ನೋಡಲು ಬಂದಿದ್ದೆ. ಬೆಟ್ಟದ ಮೈಯಲ್ಲಿ ಹಂಚಿದಂತಿದ್ದ ಆರೆಂಟು ಹಳಗಾಲದ ಕಟ್ಟಡಗಳು ಮೋಟುಗೋಡೆಗಳಾಗಿ ಉಳಿದಿದ್ದವು. ಅಡಿಕೆ, ಬಾಳೆ, ಕಾಫಿ ಮೊದಲಾದವೆಲ್ಲವನ್ನೂ ಕಡಿದು, ಅಕ್ರಮ ಜನಾಕರ್ಷಣೆಯನ್ನು ಕಳೆದಿದ್ದರು. ಗದ್ದೆಯ ಬದುಗಳನ್ನಳಿಸಿ ನೆಲ ತನ್ನ ಪ್ರಾಕೃತಿಕ ಸ್ತರಕ್ಕೆ ಮರಳಲು ಅನುವು ಮಾಡಿದ್ದರು. ಒಂದೇ ಅಪವಾದವೆಂಬಂತೆ ತಳದ ಬಯಲಿನಲ್ಲಿದ್ದ ಪುಟ್ಟ ಭೂತಸ್ಥಾನವನ್ನು ಮಾತ್ರ ಯಾರೂ ಬಿಚ್ಚುವ `ಸಾಹಸ’ ಮಾಡಿರಲಿಲ್ಲ. ಅದರೊಳಗಿನ ಮಡಿಕೆ, ಮೊರ, ಒಂದೆರಡು ಆಯುಧ ತುಕ್ಕು ಗೆದ್ದಲುಗಳ ವಿಚಾರಣೆ ಎದುರಿಸಿದ್ದುವು. ಯಾರ್ಯೋರೋ ಹರಿಕೆ ಬರೆದುಕೊಂಡು ಅಲ್ಲೇ ಒಳಗೆ ಚಿಲ್ಲರೆ ಕಾಸೂ ಇಟ್ಟ ಒಂದು ನೂರು ಪುಟದ ಪುಸ್ತಕ ಮಾತ್ರ ವಾರೀಸುದಾರ ಶಕ್ತಿಗಳನ್ನು ಗೆದ್ದಲಗೂಡಿನಲ್ಲಿ ಹುಡುಕಲು ಹೊರಟಿತ್ತು. ಗುಳೆ ಕಿತ್ತವರು ಕೆಲವು ಕುಂಟ, ಗೊಡ್ಡು ಜಾನುವಾರುಗಳನ್ನು ಅನಾಥ ಮಾಡಿ ಹೋಗಿದ್ದರು. ಅವು ಹಾಗೇ ಅನಾಥವಾಗುಳಿದಿದ್ದ ಒಂದು ಕೊಟ್ಟಿಗೆಯನ್ನು ರಾತ್ರಿಗೆ ನೆಚ್ಚಿಕೊಳ್ಳುತ್ತಿದ್ದಂತಿತ್ತು. 

ನಾವು ಆ ಜಾನುವಾರು ಬೆಟ್ಟದ ಮೈಯಲ್ಲಿ ಚದುರಿದಂತೆ ಮೇಯುತ್ತಿದ್ದುದನ್ನೂ ಕಂಡಿದ್ದೆವು. ಜಾನುವಾರುಗಳನ್ನೂ ಹೊರಸಾಗಿಸಿ ವನ್ಯಮೃಗಗಳಿಗೆ ಹುಲ್ಲೋ ಹುಲ್ಲೆಯೋ ನೆಲದ ನ್ಯಾಯ ಸಲ್ಲುವಂತಾಗಬೇಕು ಎಂಬ ಯೋಚನೆಯಷ್ಟೇ ನಮ್ಮಲ್ಲುಳಿದಿತ್ತು. ಇಂದು ಅವೆಲ್ಲ ರೂಢಿಸಿದ್ದು, ಮೊದಲಬಾರಿಗೆ ಅತ್ತ ಕಣ್ಣು ಹಾಯಿಸುವವರಿಗೆ ಸಂದ ನಾಗರಿಕತೆಯ ಕುರುಹೇನೂ ಉಳಿದಿಲ್ಲ ಎನ್ನುವಂತೆ ಕಾಣುತ್ತಿತ್ತು. ಆ ಬೆಟ್ಟ ಸಾಲುಗಳನ್ನು ಬೆಂಗದಿರ ತಡವುತ್ತಿದ್ದಂತೆ, ತೆಳು ಮಂಜಿನ ಹೊದಿಕೆ ಹರಿಯುತ್ತ ಬೆಳಕಾಯಿತು.

ನಾವೂರಿನಿಂದ ಮೇಲೇರಿದ ಗಾಡಿ ದಾರಿಯದ್ದೇ ಸ್ವರೂಪದ ದಾರಿ ಸಂಸೆಯ ಬದಿಯಿಂದಲೂ ಇದ್ದಿರಬೇಕು. ಇಲ್ಲಿ ವಿಶೇಷ ಏರಿಳಿತಗಳಿಲ್ಲ, ಆದರೆ ಬಲದ ಕೊಳ್ಳದತ್ತ ಚಾಚಿಕೊಂಡ ಏಣು, ಒಳ ಮಡಿಚಿಕೊಳ್ಳುತ್ತಿದ್ದ ಕಣಿವೆಗಳಿಗನುಗುಣವಾಗಿ ಬಳಸಂಬಟ್ಟೆ ಅನಿವಾರ್ಯವಿತ್ತು. ಒಂದೆರಡು ತೊರೆ, ಅವುಗಳನ್ನು ಕವಿದಂತೆ ದಟ್ಟ ಕಾಡು ಹಾಯ್ದು ಮುಂದುವರಿದಂತೆ ಮುಳ್ಳೋಡಿಯ ಬೆಟ್ಟ ಸಾಲಿನಿಂದಾಚೆ ದಕ್ಷಿಣ-ಪಶ್ಚಿಮದ ಸುದೂರದಲ್ಲಿ ಕುದುರೆಮುಖ ಶಿಖರ ತನ್ನ ಪ್ರಥಮ ದರ್ಶನ ಕೊಟ್ಟಿತು. ಆದರೆ ಅದು ಕ್ಷಣಿಕ.  ಹಿಂದೆ ಅದನ್ನು ಹಲವು ಕೋನಗಳಿಂದ ಹಲವು ಬಾರಿ ನೋಡಿದ ಮತ್ತು ಸಾಕಷ್ಟು ಹತ್ತಿಳಿದ ಸಂತೋಷದ ಪಾಲುದಾರರು ಮೂವರೇ (ಮಯ್ಯ, ನಿಶಾಂತ್ ಮತ್ತು ನಾನು). ಅದಕ್ಕೆ ಮರ್ಯಾದೆ ಕೊಟ್ಟು ಉಳಿದವರು “ಹಾ, ಹೌದು” ಎಂದುಕೊಂಡದ್ದೇ ಬಂತು. ಪುಟ್ಟ ಕಾಡು ನುಗ್ಗಿ, ತೊರೆ ಹಾಯ್ದು ಮತ್ತೆ ತೆರೆಮೈಗೆ ಬರುವಾಗ ಮಂಜಿನ ತೆರೆ ಬಂದು ಎಲ್ಲ ಮಯಮಯ. ಮುಳ್ಳೋಡಿಯ ಶಿಖರ ದರ್ಶನದಲ್ಲೇ ಕುಗ್ಗಲು ಮರೆತ ಕಣ್ಗಳು, ಈಗಂತೂ ಕಂಗಳಿನ್ಯಾತಕೋ ಕುದುರೆಮುಖ ನೋಡದ ಎಂದು ಗಾನಗಂಗೆಯನ್ನೇ ಹರಿಸುವಂತಾಗಿತ್ತು. ಯಕ್ಷಗಾನದ ಮಹಾಪಾತ್ರಗಳಂತೇ ಈ ಭೂ ದಿಗ್ಗಜಗಳಿಗೂ ಒಮ್ಮೆಗೇ ಪೂರ್ಣಪ್ರಮಾಣದಲ್ಲಿ ಕಾಣಿಸಿಕೊಳ್ಳದ ಬಿನ್ನಾಣ. ಮತ್ತೊಮ್ಮೆ ಕಾಡ ಸೆರಗು ಹಾದು ಬಯಲಾಗುವಾಗಂತೂ ಶಿಖರ ಪೂರ್ಣ ತೆರೆಯ ಮರೆ ಸೇರಿತ್ತು.

[ಆದರೆ ೧೯೯೦ರ ಭೇಟಿಯಲ್ಲಿ ಕುದುರೆಮುಖ ದರ್ಶನ ಹೀಗೆ ಸತಾಯಿಸಲಿಲ್ಲ. ಅಂದು ನವರಾತ್ರಿಯ ಮೂರು ರಜಾದಿನಗಳನ್ನು ಹೊಂದಿಸಿಕೊಂಡು ನಮ್ಮ ಇನ್ನೊಂದೇ ಪುಟ್ಟ ತಂಡ – ಆರೇ ಜನ, ಇಲ್ಲಿ ಬಂದದ್ದು, ಬೆಟ್ಟದ ಮೇಲೇ ಎರಡು ರಾತ್ರಿಗಳ ಶಿಬಿರವಾಸ ಬಲು ರಮ್ಯ, ಬಲು ರಮ್ಯ. ಆ ಎಳೆಯನ್ನೂ ಹೊಸೆಯುತ್ತ ಮುಂದಿನ ಕಂತಿನಲ್ಲಿ ಯಾತ್ರೆ ಮುಂದುವರಿಸುತ್ತೇನೆ, ಆಗದೇ?]

3 comments:

  1. ಸೋಜರು ಹೇಳಿದ ಕತೆ ಮರೆತಿದೆ. ದಯವಿಟ್ಟು ಇನ್ನೊಮ್ಮೆ ಹೇಳಿ.

    ReplyDelete
  2. ಪಂಡಿತರೇ ಈ ಪಾಮರ ತಿಳಿದಷ್ಟನ್ನು ದಾಖಲು ಮಾಡುತ್ತಲೇ ಇದ್ದಾನೆ. ಆ ಕತೆ ಬಿಡಿ, ಪ್ರಸ್ತುತ ಕಥಾ ಭಾಗದಲ್ಲಿ ಬೇರೇನಾದರೂ ನಿಮ್ಮ ನೆನಪಿನ ಕೋಶದಲ್ಲಿದ್ದರೆ ಇಲ್ಲಿ ಮತ್ತು ಮುಂದೂ ದಾಖಲಿಸಬಾರದು??

    ReplyDelete
  3. ಆಕರ್ಷಕ ನಿರೂಪಣೆ...ಚೆನ್ನಾಗಿ ಓದಿಸಿಕೊಂಡು ಹೋಗುತ್ತಿದೆ...

    ReplyDelete