02 December 2014

ಯಾತ್ರಾರಂಭ

ಅಧ್ಯಾ ಮೂವತ್ತೆರಡು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಮೂವತ್ನಾಲ್ಕನೇ ಕಂತು
ಇಂಥ ಪ್ರಸಂಗದಲ್ಲಿ ನಮ್ಮ ಮನಸ್ಸಿನಲ್ಲುಂಟಾಗುವ ಭಾವನೆಗಳು ಸಾಧಾರಣ ಎಲ್ಲರಿಗೂ ಒಂದೇ ವಿಧದ್ದಾಗಿರುತ್ತದೆಂದು ನಾನು ನಂಬಿದ್ದೇನೆ. ಆದ್ದರಿಂದ ಸ್ಟೀಯರ್ಫೋರ್ತನನ್ನು ಕುರಿತಾದ ನನ್ನ ಮನಸ್ಸಿನ ಭಾವನೆಗಳನ್ನು ಬಚ್ಚಿಡದೆ ತಿಳಿಸುವುದು ನ್ಯಾಯವಿದೆ. ಅವನ ದುಷ್ಟ ಕಾರ್ಯ, ದುರ್ನಡತೆ ನನಗೆ ತಿಳಿದ ಕೂಡಲೆ ಮೊದಲು ಆದುದು ದುಃಖ ಮತ್ತು ದುಃಖದ ಮಧ್ಯವೇ ಆತನ ಸಕಲ ಸದ್ಗುಣಗಳು ಎದ್ದು ಕಾಣತೊಡಗಿದುವು. ಅವನು, ಅವನ ತೇಜಸ್ಸು, ಪ್ರತಿಭೆ, ಸಾಮರ್ಥ್ಯಗಳಿಂದ ಎಂಥ ಉತ್ತಮ ವ್ಯಕ್ತಿಕೀರ್ತಿ ಪ್ರತಿಷ್ಠಾಯುತ ಪ್ರಜೆ, ಆಗಿ ಸಮಾಜದಲ್ಲಿ ಬೆಳಗಬಹುದಿತ್ತೆಂದು ಈಗ ಚಿತ್ರಿಸಿಕೊಂಡದ್ದಕ್ಕಿಂಥ ಸ್ಪಷ್ಟವಾಗಿ ನಾನು ಹಿಂದೆಂದೂ ಚಿತ್ರಿಸಿ ನೋಡಿರಲಿಲ್ಲ. ನಿಷ್ಕಳಂಕ ಬಡ ಸಂಸಾರಕ್ಕೆ ಅವನು ತಂದೊಡ್ಡಿದ ಭ್ರಷ್ಟತೆಯಲ್ಲಿ ನನ್ನ ಜವಾಬ್ದಾರಿ ತಿಳಿಯದೆಯೇ ಆದರೂ ಎಷ್ಟಿತ್ತೆಂದು ಅರಿಯುತ್ತಾ ದುಃಖಿಸಿದೆನು. ಆದರೆ ಇದೇ ಚಿಂತನೆಗಳಿದ್ದಾಗಲೇ ಅವನೇ ಹಠಾತ್ತಾಗಿ ನನ್ನೆದುರು ಬಂದು ನಿಂತು ಮಾತಾಡತೊಡಗಿದ್ದರೆ ನಾನು ಎಷ್ಟು ಮಾತ್ರಕ್ಕೂ ಅವನನ್ನು ನಿಂದಿಸದೆ, ಬೈಯ್ಯದೆ, ಮೌನವಾಗಿರುತ್ತಿದ್ದೆನೆಂಬುದನ್ನು ನಾನು ಅರಿತಿದ್ದೆ. ಎಲ್ಲ ಆಲೋಚನೆಗಳ ಗೊಂದಲದ ಮಧ್ಯದಲ್ಲೇ ಅವನ ಅಪರಾಧ ಅಕ್ಷಮ್ಯವಾಗಿತ್ತೆಂಬುದು ನನಗೆ ಸ್ಪಷ್ಟವಾಗಿ ಗೊತ್ತಿತ್ತು. ಮತ್ತು ಮುಂದೆ ಅವನ ಸ್ನೇಹ, ವರ್ಚಸ್ಸುಗಳು ನನ್ನ ಮೇಲೆ ಪರಿಣಾಮಗಳನ್ನು ತರಲು ಎಡೆ ಕೊಡಕೂಡದೆಂಬ ದೃಢ ನಿರ್ಧಾರ ಮಾಡಿಕೊಂಡೆನು.


ಮರುದಿನ ಬೆಳಗ್ಗೆ ನಾನು ಸಮುದ್ರದ ಕರೆಯಲ್ಲಿ ತಿರುಗಾಡುತ್ತಿದ್ದಾಗ ಜನರು ತಂತಮ್ಮೊಳಗೇ ವಿಷಯವನ್ನು ಮಾತಾಡಿಕೊಳ್ಳುತ್ತಿದ್ದರು. ಹೆಚ್ಚಿನ ಜನರು ಎಮಿಲಿಯ ಮೇಲೆ ತಪ್ಪನ್ನೂ ಕೆಲವು ಜನರು ಸ್ಟೀಯರ್ಫೋರ್ತನ ಮೇಲೆ ತಪ್ಪನ್ನೂ ಆರೋಪಿಸುತ್ತಿದ್ದರು. ಆದರೆ ಮಿ. ಪೆಗಟಿಯ ಮತ್ತೂ ಹೇಮನ ದುಃಖವನ್ನು ಎಲ್ಲರೂ ತಿಳಿದು, ತಾವೂ ದುಃಖಿಸಿ, ಅವರಿಬ್ಬರು ಕಾಣಸಿಕ್ಕಿದಾಗ ದೂರ ಸರಿದು ನಿಂತು, ಅವರನ್ನು ಕುರಿತು ಬಹು ಮೆದುಸ್ವರದಿಂದ, ಮರ್ಯಾದೆಯುಕ್ತವಾಗಿ ಮಾತಾಡಿಕೊಳ್ಳುತ್ತಿದ್ದರು.

ಮರುದಿನ ಬೆಳಗ್ಗೆ ಮಿ. ಪೆಗಟಿ ಮತ್ತೂ ನಾನು ಲಂಡನ್ನಿಗೆ ಹೋಗುವುದೆಂದು ನಿಶ್ಚೈಸಿಕೊಂಡೆವು. ಹೇಮನು ಅವನ ಅತ್ತೆ ಪೆಗಟಿಯ ಜತೆಯಲ್ಲಿ ಇನ್ನು ಮುಂದೆ ಇರುವುದು ಯುಕ್ತವೆಂದೂ ಮಿ. ಪೆಗಟಿಯ ಮನೆಯಲ್ಲಿ ಹೇಮನ ಉಸ್ತುವಾರಿಯೊಳಗೆ ಮಿಸೆಸ್ ಗಮ್ಮಿಜ್ ಇರುವುದೆಂದೂ ನಿಶ್ಚೈಸಿದೆವು. ಅಂತೂ ದುಃಖದ ಮನೆಯ ಭವಿಷ್ಯದ ವಿಷಯ ಸ್ವಲ್ಪ ಮಾತಾಡಿದೆವು. ಆಗ ಮಿ. ಪೆಗಟಿ ತಮ್ಮ ಕೆಲವು ಸಲಹೆಗಳನ್ನು ಅನುಜ್ಞೆಗಳನ್ನೂ ಇತ್ತರು.

ನೋಡಿ ಮಿ. ಕಾಪರ್ಫೀಲ್ಡ್, ಮನೆಯನ್ನು ಎಲ್ಲರೂ ಬಿಟ್ಟು ಹೋಗಕೂಡದು. ಹಾಗಾಗಿಯೇ ಮಿಸೆಸ್ ಗಮ್ಮಿಜ್ಜಳೂ ಇಲ್ಲೇ ಇರುವಳು. ಎಮಿಲಿಗೆ ಮನಸ್ಸು ಬಂದಾಗ, ಹಗಲಾದರೆ ಹಗಲು, ರಾತ್ರಿಯಾದರೆ ರಾತ್ರಿ, ಮನೆಗೆ ಬರಲು ಎಡೆಯಿರಬೇಕು. ಜೀವವಿದ್ದು ಸುಖವಾಗಿ ಬರಲಿ. ಕೊನೆಗೆ ಪ್ರೇತವಾಗಿ ದುಃಖಿಸಿ, ಅವಳು ಜೀವಂತವಾಗಿದ್ದಾಗ ಸದಾ ಸಮುದ್ರವನ್ನು ನೋಡುತ್ತಿದ್ದ ಕಿಟಕಿಯ ಕಂಡಿಯಿಂದ ಇಣಿಕಿ ನೋಡಲೋಸ್ಕರ ಬರಲಿ. ಹೇಗೇ ಎಂದೇ ಬಂದರೂ ಅವಳಿಗೆ ಮನೆಯಲ್ಲಿ ಪ್ರೇಮ ಆದರಪೂರ್ವಕವಾದ ಸ್ವಾಗತವಿದೆ. ಅವಳು ಯಾವತ್ತು ಬೇಕಾದರೂ ಬಂದು ಅವಳಿಗಾಗಿ ಕಾದಿರುವ ಆಸನದಲ್ಲಿ ಕುಳಿತು ಮಿಸೆಸ್ ಗಮ್ಮಿಜ್ಜಳ ಸೆರಗಿನಲ್ಲಿ ತನ್ನ ದುಃಖಾಶ್ರುಗಳನ್ನೊರಸಿ, ಶಾಂತಿ ಸಮಾಧಾನ ಪಡೆದುಕೊಳ್ಳಬಹುದು. ಮಿಸೆಸ್ ಗಮ್ಮಿಜ್ಜಳು ಎಮಿಲಿಯನ್ನು ಸದಾ ನಿರೀಕ್ಷಿಸುತ್ತ ಇಲ್ಲಿ ಕುಳಿತಿರುವಳು.”

ನನಗೆ ದುಃಖದಿಂದ ಮಾತೇ ಹೊರಡದೆ ಆಯಿತು. ಅವರು ಪುನಃ ತಮ್ಮ ಮಾತುಗಳನ್ನು ಮುಂದರಿಸಿದರು
ಪ್ರತಿ ರಾತ್ರಿಯೂ ಕಿಟಕಿಯಲ್ಲಿ ಬೆಳಕನ್ನು ಹೊತ್ತಿಸಿ ಇಡಬೇಕು ಹೇಮ್, ಮರೆಯಬಾರದು. ಬೆಳಕನ್ನು ಎಮಿಲಿ ಕಂಡರೆ ಅದು ತನ್ನನ್ನು `ಬಾರಮ್ಮಾ, ಕಂದಾಎಂದು ಕರೆಯುತ್ತಿರುವುದಾಗಿ ಗ್ರಹಿಸುವಳು. ಜ್ಞಾಪಕದಲ್ಲಿಟ್ಟಿರು ಹೇಮ್. ಎಮಿಲಿ ಬಂದು ಬಾಗಿಲು ತಟ್ಟಿದರೆ, ಅವಳ ಪುಟ್ಟ ಕೈ ಬೆರಳಿನ ಶಬ್ದ ಕೇಳಿಸಿದಾಗ, ನೀನೇ ಹೋಗಿ ಬಾಗಿಲು ತೆರೆಯಬೇಡ. ಅವಳು ಅಂಜಿಕೊಂಡಾಳು, ಗಮ್ಮಿಜ್ಜಳು ತೆಗೆಯಲಿ. ಗಮ್ಮಿಜ್ಜಳು ಅವಳನ್ನು ಮೆಲ್ಲಗೆ ಒಳಗೆ ಕರೆತರಲಿಅಂದರು.

ನಮ್ಮ ಜತೆಯಲ್ಲೇ ನಿಂತಿದ್ದ ಹೇಮನೊಡನೆ ಸ್ವಲ್ಪ ಮಾತಾಡಲಿದೆಯೆಂದು ನಾನು ಅವನನ್ನು ಎಷ್ಟು ಕರೆದರೂ ಅವನಿಗೆ ಗೊತ್ತಾಗಲಿಲ್ಲಅವನು ಒಂದು ಮರದ ಗೂಟದಂತೆ ಅಲುಗಾಡದೆ ನಿಂತು ಸಮುದ್ರವನ್ನೇ ನೋಡುತ್ತಿದ್ದನು. ನಾನು ಪುನಃ ಅವನನ್ನು ಎಚ್ಚರಿಸಿ ಕರೆಯುವುದರೊಳಗೆ ಅವನು ಹೇಳಿದನು
ಮಾಸ್ಟರ್ ಡೇವೀ, ನೋಡುನನಗೊಂದು ಆಲೋಚನೆ ಎದ್ದೆದ್ದು ತೋರುತ್ತದೆ. ಈಗ ನಡೆದಿರುವ ದುಃಖ ಇಷ್ಟಕ್ಕೆ ಮುಗಿಯಲಿಲ್ಲ. ಇದು ಪ್ರಾರಂಭ. ಇನ್ನು ಘಟನೆಯು ಪ್ರಾರಂಭವಾದಲ್ಲೇ ಅದರ ಅವಸಾನವೂ, ದುಃಖದ ಪೂರೈಕೆಯೂ ಆಗಲಿದೆಇದೇ ಸ್ಥಳದಲ್ಲಿ ಮುಂದೆ ಇನ್ನೊಂದು ಮಹತ್ವದ ದುಃಖ ಆಗಲಿದೆಯೆಂಬ  ಭವಿಷ್ಯದ ಚಿತ್ರ ಅಸ್ಪಷ್ಟವಾಗಿ ನನಗೆ ಎದ್ದೆದ್ದು ತೋರುತ್ತಿದೆ.”
ಹೇಮನ ಮಾತುಗಳಿಗೆ ಏನುತ್ತರ ಕೊಡುವುದೆಂದು ಅರಿಯದೆ ಸುಮ್ಮನಿದ್ದೆ ನಾನು.

ದಿನ ಸಂಜೆ ನಾನು ಮಿಸೆಸ್ ಬಾರ್ಕಿಸ್ ಪೆಗಟಿಯ ಮನೆಗೆ ಹೋದೆ. ಅಲ್ಲಿ ಅವಳು ಅಳುತ್ತಲೇ ಇದ್ದಳು. ನಾನು ಅವಳೊಡನೆ ಮಾತಾಡುವ ಅನುಕೂಲ ತೋರದೆ ಹೊರಗಿನಎದುರು ಕೋಣೆಯಲ್ಲಿ, ಒಬ್ಬಂಟಿಗನಾಗಿ ಕುಳಿತು ಏನೇನೋ ಆಲೋಚಿಸುತ್ತಿದ್ದೆ. ಆಗ ಬಾಗಿಲು ತಟ್ಟಿದ ಶಬ್ದ ಕೇಳಿಸಿತು. ನಾನು ಬಾಗಿಲು ತೆರೆದೆ. ಆಗ ನಾನು ಮೊದಲು ಕಂಡದ್ದು ಬಿಚ್ಚಿದ್ದ ಒಂದು ಕೊಡೆಯನ್ನು. ಅದನ್ನು ಮುಚ್ಚಿದಾಗ, ಕೊಡೆಯಷ್ಟೇ ಎತ್ತರದ ಮಿಸ್ ಮೌಚರಳು ನನ್ನ ಎದುರು ನಿಂತಿದ್ದಳು. ಸ್ಟೀಯರ್ಫೋರ್ತನಿಗೂ ಅವಳಿಗೂ ತುಂಬಾ ಪರಿಚಯವಿದ್ದುದನ್ನು ನಾನು ತಿಳಿದಿದ್ದುದರಿಂದಲೂ ಅವಳ ವಾಚಾಳಿತನ ಮುಖಭಂಗಿ, ಮೊದಲಾದ ನಡೆ ನಟನೆಗಳನ್ನು ನಾನು ಸ್ವತಃ ಕಂಡಿದ್ದುದರಿಂದಲೂ ಅವಳಿಗೂ ಸದ್ಯ ನಡೆದ ಎಮಿಲೀ ಪ್ರಸಂಗದಲ್ಲಿ ಭಾಗವಿದ್ದಿರಬೇಕೆಂದು ನಾನು ಊಹಿಸಿದ್ದೆನು. ಹಾಗಾಗಿ ಅವಳು ಮನೆಯೊಳಗೆ ಪ್ರವೇಶಿಸಬಾರದೆಂದು ತಿಳಿಯುತ್ತಾ ಅವಳಿಗೆ ನಾನು ಅಡ್ಡವಾಗಿ ನಿಲ್ಲಬೇಕೆಂದು ಯೋಚಿಸಿದ್ದಾಗಲೇ ಅವಳು ಸರಸರನೆ ನಡೆದು ಅಗ್ಗಿಷ್ಟಿಕೆಯ ಬೆಂಕಿ ಕಾಯಿಸಿಕೊಂಡು, ತನ್ನ ಎರಡು ಕೈಗಳಿಂದ ಮುಖವನ್ನು ಮುಚ್ಚಿಕೊಂಡು ಅಳತೊಡಗಿದಳು.

ರಾತ್ರಿ ಅವಳು ನಮ್ಮಲ್ಲಿಗೆ ಬಂದುದು ಏಕೆ, ನನ್ನಿಂದ ಅವಳಿಗೆ ಏನಾಗಬೇಕು ಎಂದು ಮೊದಲಾಗಿ ನಾನು ವಿಚಾರಿಸಿದೆನು. ಅವಳು ಬಹು ಸ್ಪಷ್ಟವಾಗಿ, ಸರಳವಾಗಿ, ನಂಬಲರ್ಹವಾದಷ್ಟು ಪರಿಷ್ಕಾರವಾಗಿ ತನ್ನ ಜೀವನ ವೃತ್ತಾಂತವನ್ನೂ ಅಲ್ಲಿಗೆ ಬಂದ ಉದ್ದೇಶವನ್ನೂ ತಿಳಿಸಿದಳು.

ಯಾರ್ಮತ್ತಿನಲ್ಲಿ ನಡೆದಿದ್ದ ಸ್ಟೀಯರ್ಫೋರ್ತನ ದುಷ್ಟ ಪ್ರಸಂಗದ ವರ್ತಮಾನವನ್ನು ಕೇಳಿ ಅವಳು ಬಂದದ್ದಾಗಿತ್ತು. ಸ್ಟೀಯರ್ಫೋರ್ತನ ಕಾರ್ಯಗಳು ಅನ್ಯಾಯವಾದುದೆಂದು ಅವಳು ತಿಳಿದೇ ತನ್ನ ಭಾಗ ಅದರಲ್ಲಿ ಎಷ್ಟು ಇರಬಹುದೆಂದು ಸಂಶಯಪಟ್ಟು, ವಿಚಾರಿಸಿಕೊಂಡು, ಇರಬಹುದಾದ ಸಂಶಯವನ್ನು ನಿವಾರಿಸಿಕೊಂಡು, ತನ್ನಿಂದಾಗುವ ಸಹಾಯಗಳನ್ನು ಒದಗಿಸುವುದಕ್ಕಾಗಿ ಬಂದಿದ್ದುದಂತೆ. ಸ್ಟೀಯರ್ಫೋರ್ತನು ಕೊಟ್ಟಿದ್ದ ಒಂದು ಪತ್ರವನ್ನು ಅವಳು ಎಮಿಲಿಗೆ ಬಟವಾಡೆ ಮಾಡಿದ್ದಷ್ಟರ ತಪ್ಪು ಆಗಿರಬಹುದೆಂದು ಅವಳಿಗೆ ವಿಷಯಗಳನ್ನೆಲ್ಲ ತಿಳಿದ ಮೇಲೆ ಗೊತ್ತಾಯಿತಂತೆ. ಕಾಗದ ಪತ್ರಗಳ ಬಟವಾಡೆ ಕೆಲಸ ಅವಳ ಜೀವನ ವೃತ್ತಿಯ ಒಂದು ಅಂಶವೂ ಆಗಿದ್ದು, ಸಂಬಳದ ಆಸೆಗಾಗಿ ಮಾಡಿದ್ದಂತೆ. ಇದನ್ನೆಲ್ಲ ಬಹು ಪಶ್ಚಾತ್ತಾಪಯುತವಾಗಿ ಹೇಳುತ್ತಾ ತನ್ನ ಜೀವನ ವೃತ್ತಿಗೆ ಚಿಕ್ಕ ಭಾಗದ ತನ್ನ ಜವಾಬ್ದಾರಿ ತೊಂದರೆಯನ್ನೊಡ್ಡಬಾರದಾಗಿ ವಿಜ್ಞಾಪಿಸಿಕೊಂಡು ಅತ್ತಳು.

ಇಷ್ಟೆಲ್ಲ ಅವಳು ಹೇಳುವ ಮಧ್ಯೆ ಮಧ್ಯೆ ಅವಳ ಕುಬ್ಜತೆ, ವೃತ್ತಿ, ಸಂಸಾರದ ಕಷ್ಟಗಳನ್ನೂ ಹೃದ್ರಾವಕವಾಗಿ ವಿವರಿಸಿಕೊಂಡಳು. ಇವಳಿಗೆ ಕೆಲವು ಜನ ತಮ್ಮಂದಿರಿದ್ದರಂತೆ. ಅವರೆಲ್ಲರೂ ಇವಳಂತೆಯೇ ಬಹು ಕುಳ್ಳರಾಗಿದ್ದು, ಸಂಪಾದನೆ ಮಾಡಲು ಅಸಮರ್ಥರಾಗಿ, ಸಂಸಾರದ ಭಾರ ಪೂರಾ ಇವಳ ಮೇಲೆಯೇ ಬಿದ್ದಿತು. ಇವಳು ಎಲ್ಲರ ಮನಸ್ಸನ್ನು ಅರಿತು, ಎಲ್ಲರನ್ನೂ ಅನುಸರಿಸಿ, ಅವರ ಇಂಗಿತದಂತೆ ಕಾರ್ಯಗಳನ್ನು ಮಾಡಿಕೊಟ್ಟು, ಸಿಕ್ಕಿದಷ್ಟು ಪ್ರತಿಫಲವನ್ನು ನಗುಮುಖದಿಂದ ಪಡೆಯಬೇಕಿತ್ತು. ಇವಳನ್ನು ಜನರು ಹೀನವಾಗಿ, ದಲ್ಲಾಳಿ ಎಂದು ಕರೆಯುತ್ತಿದ್ದರು. ಇವಳ ವೃತ್ತಿ ಕ್ಷೌರದ ಕೆಲಸ ಮುಖ್ಯವಾಗಿದ್ದು, ಇತರ ಅನೇಕ ಉಪವೃತ್ತಿಗಳನ್ನು ಇವಳು ಕೈಕೊಳ್ಳುತ್ತಿದಳು. ಧನಿಕ, ಬಡವಹುಡುಗ, ಮುದುಕರೆಲ್ಲರಿಗೂ ಸಂದರ್ಭಾನುಸಾರ ಕೆಲಸ ಮಾಡಿಕೊಡುತ್ತಿದ್ದಳು. ಆದರೆ, ಅವರೇ ಇವಳನ್ನು ತಮ್ಮ ಸ್ಥಾನ, ಪ್ರಾಯ, ಹಣ, ದೇಹಬಲಗಳಿಂದ ಹಗುರವಾಗಿ ಕಂಡು, ಹೀಯಾಳಿಸಿ, ಚೇಷ್ಟೆ ಮಾಡುತ್ತಿದ್ದರು.

ಇವಳಿಗೂ ಹೃದಯವಿತ್ತು, ಸಂಸಾರವಿತ್ತು. ಆದ್ರೆ ತನ್ನ ಪ್ರಕೃತಿದತ್ತವಾದ ಅಂಗವಿಲಕ್ಷಣದ ಕಾರಣವಾಗಿ ಎಲ್ಲರ ನಿಂದನೆ, ಅಪಹಾಸ್ಯ, ಕುತಂತ್ರಗಳನ್ನು ಸಹಿಸುತ್ತಾ ಕ್ಷೌರ, ಸಂಧಾನ, ಅಲಂಕಾರ, ಚಮತ್ಕಾರ, ಹಾಸ್ಯ, ನಟನೆ, ವಿನೋದ, ಠಕ್ಕುಗಳಿಂದ ಜೀವಿಸುತ್ತಿದ್ದಳು. ಆದರೆ ಸದ್ಗುಣದುರ್ಗುಣಗಳನ್ನು ವಿವೇಚಿಸಿ, ಅರಿತು, ಅತಿರೇಕಗಳಲ್ಲಿ ಪ್ರವೇಶಿಸದೆ ವೃತ್ತಿಯನ್ನು ಸಾಗಿಸುತ್ತಿದ್ದಳು. ಅಂಗನ್ಯೂನತೆಗೂ ಮನಸ್ಸಿನ ನ್ಯೂನತೆಗೂ ಸಂಬಂಧ ಕಲ್ಪಿಸಬಾರದೆಂದು ಇವಳು ದುಃಖಯುತವಾಗಿ ವಿಜ್ಞಾಪಿಸಿಕೊಳ್ಳುತ್ತಿದ್ದಳು.

ಮಿಸ್ ಮೌಚರಳ ಮಾತುಗಳನ್ನು ಕೇಳಿ ನನಗೆ ಅವಳನ್ನು ಕುರಿತು ಸಮಾಧಾನವೂ ಕನಿಕರವೂ ಉಂಟಾಯಿತು. ನಾನು ಅವಳಿಗೆ ಸಮಾಧಾನಕರವಾದ ಮಾತುಗಳನ್ನು ಹೇಳಿ ಸಂತೈಸಿದೆನು. ನಮಗೆ ಅವಳಿಂದ ಆಗಬೇಕಾದ ಸಹಾಯ ಸದ್ಯ ಏನೂ ಇಲ್ಲವೆಂದು ಅಂದ ಮೇಲೆ ಅವಳು ಹೊರಟು ಹೋದಳು.

ನಾನು ಮೊದಲೇ ಯಾರ್ಮತ್ತಿನಲ್ಲಿ ನಡೆದಿದ್ದ ಕೆಲವು ವರ್ತಮಾನವನ್ನು ಸೂಕ್ಷ್ಮವಾಗಿ ಮಿಸೆಸ್ ಸ್ಟೀಯರ್ಫೋರ್ತಳಿಗೆ ಪತ್ರ ಬರೆದು ತಿಳಿಸಿದ್ದೆ. ಅಲ್ಲದೆ ಅವಳನ್ನು ಕಂಡು ಮಾತಾಡುವ ಉದ್ದೇಶದಿಂದ ಮಿ. ಪೆಗಟಿಯೂ ನಾನೂ ಲಂಡನ್ನಿಗೆ ಬರುವುದಾಗಿಯೂ ಬರೆದಿದ್ದೆ.

ಮರುದಿನ ಬೆಳಗ್ಗೆ ಮಿ. ಪೆಗಟಿ, ಬಾರ್ಕಿಸ್ ಪೆಗಟಿ ಮತ್ತು ನಾನು ಲಂಡನ್ನಿಗೆ ಹೋದೆವು. ಬಾರ್ಕಿಸ್ ಪೆಗಟಿಯನ್ನು ನನ್ನ ಮನೆಯಲ್ಲೇ ಬಿಟ್ಟು, ಮಿ. ಪೆಗಟಿಯೂ ನಾನೂ ಮಿಸೆಸ್ ಸ್ಟೀಯರ್ಫೋರ್ತಳ ಮನೆಗೆ ಹೋದೆವು. ಪ್ರಕೃತದ ಸಂದರ್ಭದಲ್ಲಿ ಸ್ಟೀಯರ್ಫೋರ್ತನ ತಾಯಿ ನಮಗೆ ಭೇಟಿಕೊಡುವುದು ಸ್ವಾಭಾವಿಕವಾಗಿಯೇ ಅಸಂಭವವೆಂದು ನಾನು ತಿಳಿದಿದ್ದರೂ ನನ್ನ ಪರಿಚಯ ಅವಳಿಗೆ ಮೊದಲೇ ಇದ್ದುದರಿಂದಲೂ ನಾನು ಪತ್ರವನ್ನು ಅವರಿಗೆ ಮೊದಲೇ ಬರೆದಿದ್ದುದರಿಂದಲೂ ಅವಳು ನಮಗೆ ಭೇಟಿಕೊಟ್ಟಳು.

ಸ್ಟೀಯರ್ಫೋರ್ತನ ತಾಯಿ ನೋಡಲು ಸ್ಟೀಯರ್ಫೋರ್ತನಂತೆಯೇ ಇದ್ದುದರಿಂದ ಅವಳನ್ನು ಕಂಡೊಡನೆಯೇ ನಮಗೆ ಸ್ಟೀಯರ್ಫೋರ್ತನ ಜ್ಞಾಪಕ ಬಂತು. ಮಿ. ಪೆಗಟಿಗಂತೂ ಹೋಲಿಕೆ ಬಹು ಆಶ್ಚರ್ಯವನ್ನುಂಟುಮಾಡಿರಬೇಕು. ಅವಳ ಸದಾ ಇರುವ ಮುಖದ ಗಾಂಭೀರ್ಯವು ಮೊದಲಿನಂತೆಯೇ ಇದ್ದರೂ ಮುಖ ಸ್ವಲ್ಪ ಬಾಡಿದಂತೆಯೇ ಇತ್ತು. ತಾನು ಕುರ್ಚಿಯಲ್ಲೇ ಕುಳಿತಿದ್ದು ಮಿ. ಪೆಗಟಿಗೆ ಒಂದು ಕುರ್ಚಿಯನ್ನು ತೋರಿಸಿ ಕುಳಿತುಕೊಳ್ಳಲು ಹೇಳಿದಳು. ಅನಂತರ ನಮ್ಮನ್ನು ನೋಡಿ
ನನ್ನಿಂದೇನಾಗಬೇಕು, ನಿಮಗೆಅಂದಳು.
ಮಿ. ಪೆಗಟಿ ಎಮಿಲಿ ಅರೆದಿದ್ದ ಪತ್ರವನ್ನು ಅವಳಿಗೆ ಕೊಟ್ಟನು. ಅವಳು ಅದನ್ನು ಓದಿ ಮಿ. ಪೆಗಟಿಗೆ ವಾಪಾಸ್ ಕೊಟ್ಟಳು. ಅವಳು ಏನೂ ಮಾತಾಡದಿದ್ದುದರಿಂದ, ಮಿ. ಪೆಗಟಿ `ನನ್ನನ್ನು ಕುಲೀನ ಗೃಹಿಣಿಯಾಗಿ ಅವನು ಮರಳಿ ತರದಿದ್ದರೆಎಂಬ ಪತ್ರದ ವಾಕ್ಯವನ್ನು ಎತ್ತಿ ತೋರಿಸಿ
ಅವನು ತನ್ನ ಮಾತಿನಂತೆಯೇ ನಡೆಯುವನೇ?” ಎಂದು ಮಿಸೆಸ್ ಸ್ಟೀಯರ್ಫೋರ್ತಳನ್ನು ಕೇಳಿದನು.
ಇಲ್ಲಅಂದಳು ಮಿಸೆಸ್ ಸ್ಟೀಯರ್ಫೋರ್ತ್.
ಯಾಕೆ?” ಪೆಗಟಿ.
ಅದು ಅಸಾಧ್ಯ. ಅವನ ಸ್ಥಾನಮಾನವನ್ನು ಗ್ರಹಿಸಬೇಕು, ಎಮಿಲಿಯ ಕೀಳುತನದ ವಿಷಯ ನಿಮಗೆ ನಾನು ತಿಳಿಸುವ ಅಗತ್ಯವಿಲ್ಲವಷ್ಟೆ?”

ರೀತಿಯ ಒಂದು ವಿಧದ ವಾಗ್ಯುದ್ಧವನ್ನೇ ಮಿಸೆಸ್ ಸ್ಟೀಯರ್ಫೋರ್ತಳು ಹೂಡಿದಳು. ಅವಳು, ಮಿ. ಪೆಗಟಿ ಮತ್ತೂ ಅವರ ಸಂಸಾರವನ್ನು ನಿಷೇಧಿಸುತ್ತಾ ತನ್ನ ಗೌರವವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾ ಸ್ವಲ್ಪ ಕಠಿಣವಾಗಿಯೇ ಮಾತಾಡತೊಡಗಿದಳು.
ಅವಳ ಬಂಧುಗಳ ಸಂಬಂಧವನ್ನು ಬೆಳೆಸಲು ನಾವು ತಯಾರಿಲ್ಲ. ಮಾತನ್ನು ಆಡಬಾರದೆಂದು ನಾನಿದ್ದರೂ ನೀವೇ ಅದನ್ನು ಹೊರಡಿಸಿದಿರಿಅಂದಳು, ಮಿಸೆಸ್ ಸ್ಟೀಯರ್ಫೋರ್ತ್.
ಅಮ್ಮಾ ಸ್ವಲ್ಪ ಆಲೋಚಿಸಿ ನೋಡಿ. ಮದುವೆಯಾಗದೆ ಅವಳನ್ನು ನಾವು ಸ್ವೀಕರಿಸುವುದರಲ್ಲಿ ನಮಗೆ ಅಪಮಾನವಿಲ್ಲವೇ? ಅವಳು ಗಂಡನ ಜತೆಯಲ್ಲಿ ಸುಖವಾಗಿರಲಿ, ಅವಳ ಮಾನವೊಂದು ಉಳಿಯಲಿ. ನಿಮ್ಮ ಬಂಧುತ್ವವನ್ನು ಬಳಸುವ ಅಭಿಲಾಷೆ ನಮಗಿಲ್ಲ. ಅವಳನ್ನು ವಾಪಾಸು ಪಡೆಯಲು ನಾನು ವಿಶ್ವದ ಐಶ್ವರ್ಯವನ್ನೇ ತೆರಬೇಕಾಗಿದ್ದು, ಅಷ್ಟು ಐಶ್ವರ್ಯ ನನ್ನಲ್ಲಿದ್ದರೂ ನಾನು ಸಂತೋಷದಿಂದ ತೆತ್ತು ಅವಳನ್ನು ಪಡೆಯಲು ಸಿದ್ಧನಿದ್ದೇನೆ. ಆದರೆ ಅವಳ ಮಾನದ ಮಟ್ಟಿಗೆ ನಾನು ಒತ್ತಾಯಪಡಿಸಬೇಕಾಗಿದೆ. ಅವಳ ಸಂತತಿಯವರಾದರೂ ಕುಲೀನರಾಗಿ ಬಾಳಬಹುದಷ್ಟೆ. ಅವರಿಬ್ಬರ ಮದುವೆಗೆ ಅಡ್ಡಿಯಿದೆಯೇ ಎಂಬುದು ನನ್ನ ಪ್ರಶ್ನೆಅಂದರು ಮಿ. ಪೆಗಟಿ.
ಅದೆಲ್ಲ ನನಗೆ ಸಂಬಂಧವಿಲ್ಲ. ಕುರಿತು ಮಾತು ಬೆಳೆಸುವ ಅಗತ್ಯವಿಲ್ಲ. ಅವಳನ್ನು ಮದುವೆಯಾಗಿ ನನ್ನ ಮಗನ ಸಮಾಜದೊಳಗಿನ ಮಾನ ಮರ್ಯಾದೆ, ಭವಿಷ್ಯಗಳನ್ನು ಕಳೆದುಕೊಳ್ಳಲು ನಾವು ತಯಾರಿಲ್ಲ. ನಿಮಗೆ ಪರಿಹಾರ ದ್ರವ್ಯ ಬೇಕಾದ್ರೆ...” ಎಂದು ಮಿಸೆಸ್ ಸ್ಟೀಯರ್ಫೋರ್ತಳು ಹೇಳಿ ಮುಂದುವರಿಸುವುದರೊಳಗೆ, ಮಿ. ಪೆಗಟಿಯು ಮಾತಿನಲ್ಲಿ ಧುಮುಕುವವರಂತೆ
ನಮ್ಮ ಮನೆಯ ಪವಿತ್ರ ಸ್ಥಳದಲ್ಲಿ, ಬೆಂಕಿಯ ಬುಡದಲ್ಲಿ ಸುಖವಾಗಿ ಕುಳಿತು ಸಂತೋಷಿಸಿ, ನಮ್ಮನ್ನೆಲ್ಲ ಮುಗುಳ್ನಗೆ, ಸವಿ ಮಾತುಗಳಿಂದ ನಂಬಿಸಿ, ಅರಿಯದ ಚಿಕ್ಕ ಬಾಲಿಕೆಯನ್ನು ಒಲಿಸಿ ಬಗಲಲ್ಲಿಟ್ಟುಕೊಂಡು, ತನ್ನ ಕರಾಳ ಹೃದಯದ ಉದ್ದೇಶಗಳನ್ನು ಅಡಗಿಸಿ, ಮಾಡಬಾರದ ಹೀನ ಕಾರ್ಯವನ್ನು ಮಾಡಿರುವ ಅವನ ಮುಖವನ್ನು ನೆನಸಿದಂತೆಲ್ಲ ಅವನನ್ನು ಹಿಡಿದು ರಕ್ತಹೀರಿ ತಿಂದುಬಿಡೋಣವೆಂದೆನ್ನಿಸುತ್ತದೆ. ಕ್ರೂರಿ ಕೃತಘ್ನನ ಮುಖದಂತೆಯೇ ಇರುವ ಮುಖದ ಎದುರು ನಾನು ನನ್ನ ಮಗುವಿನ ಸರ್ವನಾಶವಾದ ದುಃಖವನ್ನು ವರೆಗೆ ಹೇಳಿಕೊಂಡಿರುವೆನು. ಹಣ ಕೊಟ್ಟು ಹೃದಯದ ವೇದನೆಯನ್ನು ನಿವೃತ್ತಿಪಡಿಸುವ ಆಲೋಚನೆ ನಿಮಗೆ ತೋರಿದ್ದೇ ಆಶ್ಚರ್ಯದ, ವಿಷಾದಕರವಾದ ಸಂಗತಿ. ಹಣದ ಪ್ರಸ್ತಾಪವನ್ನು ನನ್ನ ಹತ್ತಿರ ಎತ್ತುವುದಿರಲಿ, ಅಂಥ ಆಲೋಚನೆ ನಿಮ್ಮ ಅಂತರಂಗದಲ್ಲಿ ಮೂಡಿದಾಗಲೇ ನೀವು ಪಶಾತ್ತಾಪಪಟ್ಟು, ನಿಮ್ಮ ಪಶ್ಚಾತ್ತಾಪ ಮುಖದಲ್ಲಿ ತೋರಬೇಕಿತ್ತು. ಇದರ ಬದಲು ಗೌರವ, ಹೆಗ್ಗಳಿಕೆ, ಸಿರಿವಂತಿಕೆಗಳನ್ನು ಮೆರೆಸಲು ಮಾತಾಡುವ ನಿಮ್ಮ ಮುಖ ಅಧಮಾಧಮನ ಮುಖದಂಥಾದ್ದೇ ಎಂಬುದು ನಿಸ್ಸಂಶಯವುಎಂದು ಹೇಳಿ ಬಿಟ್ಟನು.

ರೀತಿಯ ಸಂಭಾಷಣೆಯ ಕಾವು ಏರುತ್ತಿದ್ದಾಗಲೇ ಮಿಸ್ ಡಾರ್ಟಲ್ಲಳೂ ಮಾತಾಡತೊಡಗಿದಳು. ಅವಳು ಸ್ಟೀಯರ್ಫೋರ್ತನನ್ನು ಬಹುವಾಗಿ ಪ್ರೀತಿಸಿ, ಮದುವೆಯಾಗಲು ಬಯಸುತ್ತಿದ್ದುದರಿಂದ, ಎಮಿಲಿ ತನ್ನ ವಿರೋಧಿಯೆಂದು ತಿಳಿದು ಮಾತಾಡಿದಳು. ಅವಳೂ ತಮ್ಮ ಕುಲದ ಹೆಗ್ಗಳಿಕೆಯನ್ನು ಹೇಳಿಕೊಳ್ಳುತ್ತಾ ಎಮಿಲಿಯ ಮತ್ತು ಅವಳ ಬಂಧುಗಳ ಬಡತನವನ್ನು ಹೀನೈಸಿ, ಜರೆದು ಮಾತಾಡಿದಳು.

ಆದರೂ ಮಿ. ಪೆಗಟಿ ವಾಗ್ಬಾಣಗಳನ್ನೆಲ್ಲ ಸಹಿಸಿ, ತನ್ನ ಔದಾರ್ಯ ಸ್ವಭಾವದಿಂದಲೇ ಅಲ್ಲಿಂದ ಹೊರಟನು. ತಾನು ಮಾಡಬೇಕಾಗಿದ್ದ ಕರ್ತವ್ಯಗಳನ್ನು ತಾನು ಮಾಡಿರುವೆನೆಂಬ ತೃಪ್ತಿ ಅವನಿಗೆ ಇತ್ತು. ಆನಂತರ ನಾವು ನನ್ನ ಮನೆ ಕಡೆಗೆ ಹೊರಟು ಬಂದೆವು.

ದಿನ ನಾವೆಲ್ಲರೂ ನನ್ನ ಮನೆಯಲ್ಲೇ ಊಟ ಮಾಡಿದೆವು. ಊಟವಾದನಂತರ ಮಿ. ಪೆಗಟಿ ಎಮಿಲಿಯನ್ನು ಹುಡುಕಲಿರುವ ಯಾತ್ರೆಯನ್ನಾರಂಭಿಸಿದರು. ಮಿ. ಬಾರ್ಕಿಸರ ಉಯಿಲಿನ ಪ್ರಕಾರ ಅವನಿಗೆ ಸಲ್ಲಬೇಕಾಗಿದ್ದ ಹಣದಿಂದ, ಒಂದು ತಿಂಗಳಿನ ಖರ್ಚಿಗೆ ಬೇಕಾಗಬಹುದಾದಷ್ಟು ಹಣವನ್ನು ತಂಗಿ ಪೆಗಟಿಯಿಂದ ಪಡೆದುಕೊಂಡು, ಕೈಚೀಲ, ದೊಣ್ಣೆ ಮತ್ತು ಹೇಟನ್ನು ತೆಗೆದುಕೊಂಡು, ಪರಾರಿಯಾಗಿದ್ದ ತನ್ನ ಪ್ರೀತಿಯ ಸೊಸೆ ಎಮಿಲಿಯನ್ನು ಹುಡುಕಿ ತರಲು, ತನ್ನ ಊರು, ಮನೆ, ಬಂಧು ಬಾಂಧವರನ್ನು ತೊರೆದು, ದೃಢಸಂಕಲ್ಪನಾಗಿ ಅವನು ಹೊರಟು ನಿಂತನು. ನಾವೆಲ್ಲರೂ ಅವನಿಗೆ ನಮಸ್ಕರಿಸಿದೆವು. ಅವನು ನಮ್ಮನ್ನು ಹರಸುತ್ತಾ ಅಂದನು -
ನಿಮ್ಮೆಲ್ಲರಿಗೂ ಶುಭವಾಗಲಿ. ದೇಶವಿದೇಶಗಳಲ್ಲೆಲ್ಲ ಹುಡುಕಬೇಕಾದರೂ ಹುಡುಕಿ ಅವಳನ್ನು ತರುವೆನು. ತಂದನಂತರ ಜನನಿಂದೆ ತಟ್ಟದ ಸ್ಥಳದಲ್ಲಿ ಏಕಾಂತವಾಗಿ ಬದುಕುವೆವು. ನಾನು ಇಲ್ಲಿಗೆ ಬರುವ ಮೊದಲೇ ಅವಳೇನಾದರೂ ಇಲ್ಲಿಗೆ ಬಂದರೆ ಅಥವಾ ನಾನು ಅಕಸ್ಮಾತ್ ಮೃತನಾದರೆ, ನನ್ನ ಅಂತಿಮ ಆಶೀರ್ವಾದವನ್ನು ಅವಳಿಗೆ ತಿಳಿಸಿರಿ. ನಾನು ಅವಳನ್ನು ಕ್ಷಮಿಸಿದ್ದೇನೆ. ನನ್ನ ಸ್ಥಿರವಾದ ಪ್ರೇಮವು ಮುದ್ದು ಎಮಿಲಿಯ ಮೇಲೆ ಸದಾ ಸಂಪೂರ್ಣ ಇದೆಎಂದು ತಿಳಿಸಿರಿ.”

ಮಾತುಗಳನ್ನು ನುಡಿಯುತ್ತಿದ್ದಾಗ ಅವನ ಮುಖ, ದೇಹವೆಲ್ಲ ದೈವಸನ್ನಿಧಿಯಲ್ಲಿ ಒಂದು ಪ್ರತಿಜ್ಞೆಗೈಯ್ಯುವಂತೆ ಇದ್ದುವು. ಪ್ರತಿಜ್ಞಾ ವಾಕ್ಯಗಳಾದನಂತರ ಅವನು ಹೇಟನ್ನು ಧರಿಸಿ, ಕೈಯ್ಯಲ್ಲಿ ಚೀಲ ದೊಣ್ಣೆಗಳನ್ನು ಹಿಡಿದುಕೊಂಡು ಮಾರ್ಗಕ್ಕೆ ಇಳಿದು ನಡೆದುಹೋದನು. ಏನೂ ತೋಚದೆ ನಾವೂ ಸ್ವಲ್ಪ ದೂರ ಅವನನ್ನು ಹಿಂಬಾಲಿಸಿದೆವು. ಕೊನೆಗೆ ಅವನು ಜನಸಂದಣಿಯಲ್ಲಿ ಬೆರೆತು ಕಾಣದೆ ಹೋದನು.

ದಿನದ ಸಮಯದಂತೆ ಸಮಯ ತೋರಿದಾಗಲೆಲ್ಲಕನಸಿನ ಕನವರಿಕೆಗಳಿಂದ ಎಚ್ಚತ್ತು ಕುಳಿತಾಗತೇಲುವ ಚಂದ್ರನನ್ನೇ ನೋಡುತ್ತಾ ಒಬ್ಬಂಟಿಗನಾಗಿ ಕುಳಿತಾಗಹನಿ ಹನಿ ಮಳೆಸುರಿದು ಬೀಸುವ ಗಾಳಿಯು ರೋದಿಸುತ್ತಿರುವಂತೆ ಕೇಳಿದಾಗ, ಒಂಟಿಗನಾಗಿ, ಕೈಚೀಲ ಹಿಡಿದು ಎಡೆಬಿಡದೆ ನಡೆದು ಹೋಗುತ್ತಿದ್ದ ಮಹಾ ವ್ಯಕ್ತಿಯ ಚಿತ್ರವೂ ಅವನ ಪ್ರತಿಜ್ಞಾ ವಾಕ್ಯಗಳೂ ನನ್ನ ಮನಸ್ಸಿನಲ್ಲಿ ತೋರುತ್ತಿದ್ದುವು.
(ಮುಂದುವರಿಯಲಿದೆ)

1 comment:

  1. ಧನ್ಯವಾಷಗಳು. ಮಿ. ಪೆಗಟಿಯ ಪಾತ್ರ ಮನ ತುಂಬಿತು

    ReplyDelete