21 November 2014

ಚಕ್ರೇಶ್ವರನ ಸಿಂಹಾವಲೋಕನ

(ಚಕ್ರೇಶ್ವರ ಪರೀಕ್ಷಿತ – ೫)

ಕೊಂಕಣ ಸುತ್ತಿ ಮೈಲಾರ:
ಜೋಡುಮಾರ್ಗದ ಗೆಳೆಯ ಸುಂದರರಾವ್ ಮತ್ತು ರಮಾ ದಂಪತಿಗೆ ಒಂದು ಚಾ ದಂಡ ಹಾಕೋಣವೆಂದು ಅಂದು ಮಧ್ಯಾಹ್ನ ಎರಡೂವರೆಗೆ ಸೈಕಲ್ಲೇರಿ ಹೊರಟೆ. ಬರಿದೇ ಹೆದ್ದಾರಿಯಲ್ಲಿ ಬಂಟ್ವಾಳ ಜೋಡು ರಸ್ತೆಗೆ (ಬಿ.ಸಿ ರೋಡು) ಹಿಂದೊಮ್ಮೆ ಹೋಗಿ ಬಂದಿದ್ದೆ. ಹೊಸತನಕ್ಕಾಗಿ ಹೊಸ ದಿಕ್ಕು - ನಂತೂರು, ಕುಲಶೇಖರ, ನೀರ್ಮಾರ್ಗ ದಾರಿ ಅನುಸರಿಸಿದೆ. ಜಿಲ್ಲೆಯೊಳಗೆ ಸಾಮಾನ್ಯವಾಗಿ ನದಿಪಾತ್ರೆಯನ್ನನುಸರಿಸುವ ಅಥವಾ ಕಡಲ ಕಿನಾರೆ ಸಾಮೀಪ್ಯದ ದಾರಿಗಳು ಮಾತ್ರ ತುಸು ಸಮಾಧಾನದಲ್ಲಿರುತ್ತವೆ. ಉಳಿದವು ಹೆಚ್ಚಾಗಿ ಗುಡ್ಡೆಗಳ ಏಣು ಬಳಸಿ, ತಗ್ಗು ಸುಳಿಸಿ ಅಂಕಾಡೊಂಕು ಮತ್ತು ಒಮ್ಮೆ `ಸ್ವರ್ಗ’ದ ಎತ್ತರಕ್ಕೇರಿಸುತ್ತವೆ, ಮರುಕ್ಷಣಕ್ಕೆ `ಪಾತಾಳ’ದ ಆಳಕ್ಕೇ ತಳ್ಳುತ್ತವೆ.ನೀರ್ಮಾರ್ಗದ ಕಥೆ ಇದೇ. ಸೈಕಲ್ ಇಳಿಯುವ ರಭಸವನ್ನು ಏರುವ ಶ್ರಮಕ್ಕೆ ಪರಿವರ್ತಿಸಲಾಗಿದ್ದರೆ ಎಂದು ಕೊರಗುವಂತೆ ಹೊಸ ಏರು ಎದುರಾಗುತ್ತಿತ್ತು. ಇಳಿಜಾರಿನ ಸುಳಿದಾಟಗಳಲ್ಲಿ ರಸ್ತೆಯ ಎಡ ಅಂಚು ಕಾಯ್ದುಕೊಳ್ಳುವುದು ಸುಲಭ. ಅದೇ ಏರು ದಾರಿಯಲ್ಲಿ ಸೈಕಲ್ಲಿಗೆ ಯಾವುದೇ ಮಗ್ಗುಲಿನ ಒಳ ಅಂಚು ಕಠಿಣವಾಗುತ್ತದೆ. ನಾವು ಮೋಟಾರ್ ವಾಹನಗಳಲ್ಲಿದ್ದರೆ ಮೂಲತಃ ನಮ್ಮದೇ ಸದ್ದಿನಿಂದ ದಾರಿಯ ಕಾಣಿಸದ ಹಿಂದುಮುಂದಿನ ವಾಹನಗಳ ಬರ-ಹೋಗುವ ಸೂಚನೆಗಳು ತಿಳಿಯದೇ ಹೋಗಬಹುದು. ಆದರೆ ಸುಸ್ಥಿಯ ಸೈಕಲ್ ನಡಿಗೆಗಿಂತಲೂ ಮೌನಿ. ರಸ್ತೆಯ ಯಾವುದೇ ಅಂಚನ್ನು ನಿಷ್ಠೆಯಿಂದ ಕಾಯ್ದುಕೊಳ್ಳುವ ಸೈಕಲ್ಲನ್ನು ಇತರ ವಾಹನಗಳು ಪಾದಚಾರಿಗಳ ವರ್ಗದಲ್ಲೇ ಕಾಣುವುದರಿಂದ ಆತಂಕಿತರಾಗುವುದಿಲ್ಲ ಮತ್ತು ರಿಯಾಯಿತಿಯನ್ನೂ ಕೊಡುತ್ತಾರೆ. (ಪೇಟೆಯೊಳಗೇ ಗಮನಿಸಿ: ಕೆಂಪು ಸಂಕೇತ, `ನೋ ಎಂಟ್ರಿ’, ಏಕಮುಖಸಂಚಾರಗಳಲ್ಲೆಲ್ಲ ಪೋಲಿಸರು ಸೈಕಲ್ಲನ್ನು ವಿಚಾರಿಸುವುದೇ ಇಲ್ಲ!) ನಾನಿದನ್ನು ಗಮನದಲ್ಲಿಟ್ಟುಕೊಂಡು ಕಠಿಣವಾದ ಎಡ ತಿರುವುಗಳಲ್ಲೆಲ್ಲ ಎಚ್ಚರಿಕೆ ಎಚ್ಚರಿಕೆಯಿಂದ ಬಲ ಮಗ್ಗುಲುಗಳನ್ನೇ ಬಳಸಿಕೊಂಡೆ.

ಮೂಡಬಿದ್ರೆಯತ್ತಣ ಇಳಿದಾರಿಯಲ್ಲಿ ನೀರ್ಮಾರ್ಗದ ಕವಲು ಹಿಡಿದರೆ ಒಮ್ಮೆಲೇ ಅರ್ಧ ಗುಡ್ಡೆ ಏರಬೇಕು. ಮುಂದೆ ನೀರ್ಮಾರ್ಗ ಪೇಟೆ ಕಳೆಯುವವರೆಗೆ ಬಯಲು. ಮತ್ತೆ ಬೊಂಡಾಲ ವಲಯದ ಬಯಲಿಗಿಳಿಯಲು ಬಲು ದೀರ್ಘ ಇಳಿಜಾರು. ಇಲ್ಲೆಲ್ಲ ಗಾದೆ ಮಾತಿನ ವಿಪರೀತಾನ್ವಯಕ್ಕೆ ಮಹತ್ತ್ವ ಹೆಚ್ಚು – ಇಳಿದವನೇರಲೇ ಬೇಕು! ಈ ದಾರಿಯ ಮುನ್ನೋಟ ಸ್ಪಷ್ಟವಾಗಿ ಮನಸ್ಸಲ್ಲಿದ್ದುದರಿಂದ ನವೋನ್ಮೇಷಶಾಲಿನಿಯಾಯ್ತು ನನ್ನ ಪ್ರತಿಭೆ; ಪ್ರಸ್ತುತ ಇಳಿವೇಗವನ್ನು ಭವಿಷ್ಯತ್ತಿನ ಏರುಶಕ್ತಿಯನ್ನಾಗಿಸುವ ತಂತ್ರದ ಕುರಿತ ಚಿಂತನೆಗೆ ತೊಡಗಿದೆ!

ಇಳಿದಾರಿಯ ನಡುವೆಯೇ ಸಿಗುವ ಬಲಗವಲು ನಾನು ಹಿಂದೆ ಅನುಸರಿಸಿದ ಮೇರ್ಲಪದವು, ವಳಚ್ಚಿಲ್ (ಹಾಗೇ ಅಡ್ಯಾರ್ ಕಟ್ಟೆಯದೂ) ಮಾರ್ಗ. ಅದು ಬಿಟ್ಟು ಇಂದಿನ ನೇರ ದಾರಿಯಲ್ಲೂ ಹಿಂದೆರಡು ಬಾರಿ ಬಂದ ನೆನಪು ಮನಸ್ಸಿನಲ್ಲಿ ಸ್ಪಷ್ಟವಿತ್ತು. ಒಮ್ಮೆ ನನ್ನ ತಮ್ಮ ಅನಂತನ ಪ್ರೀತ್ಯರ್ಥ ಯಾವುದೋ ಯಕ್ಷಗಾನ ಮೇಳದ ಮೊಕ್ಕಾಂ ಅರಸಿಕೊಂಡು ರಾತೋರಾತ್ರಿ ಮೋಟಾರು ಸೈಕಲ್ಲಿನಲ್ಲಿ ಇಲ್ಲೇ ಬಂದಿದ್ದೆವು. ಹಗಲಲ್ಲೇ ಜನ ಸಂಚಾರ ವಿರಳವಾದ ಪ್ರದೇಶದಲ್ಲಿ ಅಂದಾಜಿನಲ್ಲೇ ಕವಲುಗಳನ್ನಾರಿಸಿಕೊಂಡು, ಜನ ಸಿಕ್ಕಲ್ಲಿ ವಿಚಾರಿಸಿ, ಹಿಂದೆ ಮುಂದೆ ಓಡಾಡಿದರೂ ಸಕಾಲಕ್ಕೆ ಆಟದ ಗದ್ದೆ ತಲಪಿದ್ದು ಒಂದು ವಿಶಿಷ್ಟ ಅನುಭವ. ಹಾಗೇ ಬೊಂಡಂತಿಲದ ಸಮೀಪದಲ್ಲೆಲ್ಲೋ ಧರ್ಮ ನೇಮದ ನೆಪದಲ್ಲೊಂದು ಒಳ್ಳೆಯ ತಾಳಮದ್ದಳೆ ಕೂಟಕ್ಕೆ ನಾನೂ ದೇವಕಿಯೂ ಹಗಲೇ ಬೈಕೇರಿ ಹುಡುಕಾಡಿ ಬಂದಿದ್ದೆವು. ಅದು ಇನ್ನೊಂದೇ ಮಧುರ ನೆನಪು.

ಮಂಗಳೂರಿನ ಬಲ್ಮಠದಲ್ಲೊಂದು ಕಲ್ಪನಾ ರಸ್ತೆಯಿದೆ. ಅದರಲ್ಲೇ ಕವಿ ಕಡೆಂಗೋಡ್ಲು ಶಂಕರಭಟ್ಟರ ಮನೆಯೂ ಇತ್ತು. ಅವರ ಕವಿತಾ ಕಲ್ಪನೆಗೆ ಈ ಹೆಸರು ಪ್ರೇರಕವಾಗಿರಬಹುದೇ? ಅಥವಾ ಮಂಗಳೂರಿನ ಖ್ಯಾತ ಸಿನಿ-ನಟಿ ಕಲ್ಪನಾ ಸ್ಮರಣೆಗೆ ಇದು ಮೀಸಲೋ? ಎಂದೆಲ್ಲಾ ನಾನು ಯೋಚಿಸಿದ್ದಿತ್ತು. ಆದರೆ ಕಾಲಚಕ್ರವನ್ನು ತುಸುವೇ ಹಿಂದೆ ಸರಿಸಿದಾಗ ಅದು ಮೂಲದಲ್ಲಿ ಕಲ್ಪಣೆ ರಸ್ತೆಯಾಗಿತ್ತಂತೆ! ಸದ್ಯ ನಾನು ಸೈಕಲ್ ಮೆಟ್ಟುತ್ತಿದ್ದ ಗುರಿಯನ್ನು ನಾಗರಿಕರು ಬೆಂಜನಪದವೆಂದೇ ಗುರುತಿಸಿದರೂ ಕಿಮೀ ಕಲ್ಲುಗಳು ನಿಸ್ಸಂದೇಹವಾಗಿ ಪ್ರಾಕೃತಿಕ ಸತ್ಯವನ್ನು ಸಾರುವಂತೆ `ಕಲ್ಪಣೆ’ಗೇ ಇಳಿಲೆಕ್ಕವನ್ನು ಕೊಡುತ್ತಿದ್ದುವು.

ಸುಮಾರು ಮೂರು ದಶಕಗಳ ಹಿಂದೆ ಮಂಗಳೂರಿನಲ್ಲಿ ಮೋಟಾರು ರ್‍‍ಯಾಲೀಗಳು ಉತ್ಕರ್ಷದಲ್ಲಿದ್ದವು. (ನೋಡಿ: ಕ್ಷಣ ಕ್ಷಣವೂ ರೋಮಾಂಚನ: ಮೋಟಾರ್ ರ್‍ಯಾಲಿ) ನಾನು ಎಂದೂ ಯಾವುದೇ ಸ್ಪರ್ಧಾತ್ಮಕ ಕ್ರೀಡಾಳುವಾಗಿರಲಿಲ್ಲ. ಆದರೆ ರ್‍ಯಾಲಿಯವರು ಅನುಸರಿಸುತ್ತಿದ್ದ ದಾರಿಗಳು, ಅದರಲ್ಲಿ ಅವರ ಏಳುಬೀಳುಗಳನ್ನು ಹಿಂಬಾಲಿಸಿ ನೋಡುವ ಕುತೂಹಲ ಮತ್ತು ಉತ್ಸಾಹ ನನ್ನಲ್ಲಿ ಧಾರಾಳ ಇತ್ತು. ಹಾಗೇ ಒಮ್ಮೆ ಈ ದಿಕ್ಕಿನಲ್ಲೂ ಬೈಕುಗಳ ಅಯಾಚಿತ ಬೆಂಗಾವಲಿನವನಂತೆ ಬಂದಿದ್ದೆ. ತೀರಾ ಕಚ್ಚಾ ಸ್ಥಿತಿಯಲ್ಲಿದ್ದ ಪಕ್ಕಾ ಮಣ್ಣ ರಸ್ತೆ; ಕೇವಲ ಮುರಕಲ್ಲು ಸಾಗಿಸುವ ಲಾರಿಗಳಿಗಷ್ಟೇ ಮೀಸಲು. ಉಯ್ಯಾಲೆಯಾಡಿಸುವ ಹೊಂಡಗಳು, ಚರಳುಕಲ್ಲಿನ ಮಡುಗಳು, ಮುಗಿಲಿಗೇಳುವ ದೂಳು, ಪದವಿನೆತ್ತರಕ್ಕೆ ಬಂದರಂತೂ ಮುಗಿಯಿತು – ಉಧ್ವಸ್ಥ ರಣಭೂಮಿ. ಎಲ್ಲೆಲ್ಲೂ ಕೆಂಪು ಚೆಲ್ಲುವ ಕಲ್ಪಣೆಗಳು (ಮುರಕಲ್ಲ ಕೋರೆ). ಜನ, ಜಾನುವಾರು, ಮನೆಗಳೊಂದೂ ಇಲ್ಲದ ಪಕ್ಕಾ ಮರುಭೂಮಿ.

ಆ ಎಲ್ಲ ನೆನಪಿನ ಕಡತಗಳಿಗೆ ಮರವೆ ಬರುವಂತೆ ಇಂದಿನ ದಾರಿ ವಿಸ್ತಾರವಾಗಿಯೂ ನುಣುಪಾದ ಡಾಮರಿನದಾಗಿಯೂ ಇತ್ತು. ಮಳೆಗಾಲದ ಪ್ರಭಾವ ಸೇರಿಕೊಂಡದ್ದಕ್ಕೋ ಕಲ್ಲಕೋರೆಗಳ ಚಟುವಟಿಕೆ ನಿಂತದ್ದಕ್ಕೋ ಎಲ್ಲೆಲ್ಲೂ ಹಸಿರು ನೆಲೆಸಿತ್ತು. ಮಟಮಟ ಮಧ್ಯಾಹ್ನವೇ ಹೊರಟ ನನ್ನನ್ನು ಪ್ರೋತ್ಸಾಹಿಸಲು ಸಣ್ಣ ಪುಟ್ಟ ಮೋಡಗಳು ಸಾಲುಗಟ್ಟಿ ಛತ್ರಿ ಹಿಡಿಯುತ್ತಿದ್ದುವು. ಆದರೂ ಒಂದು ಗುಣಿಸು ಒಂದು ಅಂದರೆ ಅಂತಿಮ ಗೇರಿನಲ್ಲಿ ಬಹಳ ಉದ್ದಕ್ಕೆ ತುಳಿದು, ಬೆವರ ಹೊಳೆಯನ್ನೇ ಹರಿಸಿ ಗೆದ್ದ ಶಿಖರ (ಪದವು) ಕುಟಿನ್ಹೋ ಪದವು. 

ಸಣ್ಣ ಉದ್ದಿಮೆ, ಸ್ವರ್ಣಶಾಸನ ಖಚಿತ ಬಂಟರ ಭವನ, ಮೊರಾರ್ಜೀ ಶಾಲೆ, ಅನಾನಸು ಕೃಷಿಭೂಮಿ ಎಲ್ಲ ಕಳೆದು ಅತ್ಯುನ್ನತಿಯಲ್ಲೊಂದು ಭರ್ಜರಿ ಇಗರ್ಜಿ, ವೈಭವದ ಮನೆ (ಇಗರ್ಜಿಯೆದುರು ಎತ್ತರಿಸಿದ ಪೌಳಿ ನೋಡುವಾಗ ಹಾಗೆ ಕಾಣುತ್ತದೆ) ಹಾಗೂ ಬಲಕ್ಕೊಂದು ಕವಲು ಮಾರ್ಗವೂ ಇತ್ತು. ಬಲದಾರಿ ಮಲ್ಲೂರು, ಮೇರಮಜಲುಗಳಿಗೆ. ನಾನದನ್ನು ನಿರಾಕರಿಸಿ ನಾನು ನನ್ನ ಕಲ್ಪನೆಯ (ಕಿಮೀ ಕಲ್ಲು ಹೇಳುವ ಕಲ್ಪಣೆ) ದಿಕ್ಕಿಗೇ ಮುಂದುವರಿದೆ – ಸುಂದರರಾಯರ ಮನೆಯ ಚಾ!

ಇಗರ್ಜಿಯಿಂದ ಅನತಿ ದೂರದಲ್ಲಿ ಕೆಲವು ಜೋಪಡಿ, ಪೆಟ್ಟಿಗೆ ಅಂಗಡಿಗಳ ವ್ಯವಹಾರ ತುರುಸು ಕುಟಿನ್ಹೋ ಪದವೂ ನಗರೀಕರಣದತ್ತ ಇಡುವ ಅಸ್ಥಿರ ಹೆಜ್ಜೆಗಳನ್ನೇ ಸಾರುವಂತಿದ್ದುವು. ಮುಂದಿನ ಇಳಿಜಾರು ನಾನೇರಿದಷ್ಟು ಎತ್ತರವನ್ನು ಕ್ಷಣಮಾತ್ರದಲ್ಲಿ ಕಳೆದು ಹಾಕಿತು. ಆಗ ಏನೂ ಅನಿಸಲಿಲ್ಲ. ಆದರೆ ಮುಂದೆ ಕುಟಿನ್ಹೋಗಿಂತಲೂ ಕಡಿದಾದ ಬೆಂಜನಪದವನ್ನು ಏರುವಾಗ ಮತ್ತೆ ಇಳಿವೇಗ -> ಏರುಶಕ್ತಿ ಯೋಚನೆ ಮುಂದುವರಿಸಿ, ನೀಲನಕಾಶೆಯನ್ನೇ ರೂಪಿಸಿ ಬಲವರ್ಧಿಸಿಕೊಂಡೆ. ಕುಟ್ಟಿಗಿಂತ ಬೆಂಜ ಒಂದು ಕೈ ಮಿಗಿಲು. ಹಿಂದೆ ನಾವು ಹಾರುವ ಹುಚ್ಚಿಗೆ ಮೈಕೈ ತರಚಿಕೊಂಡ, ಅರುಣ್ ನಾಯಕ್ ದಂತಭಗ್ನವಾದ, ಶರತ್ ಇಂಚುಗಳಂತರದಿಂದ ಕಂಬದೆತ್ತರದ ವಿದ್ಯುತ್ ತಂತಿಗೆ ಸಿಕ್ಕ ಅನಾಥ ಬಾವಲಿಯಂತಾಗದ ಗುಡ್ಡೆ ಇಂದು ಭದ್ರ ಪೌಳಿಯೊಳಗಿತ್ತು. ಅದರ ಎದುರಿಗಿದ್ದ ಏಕೈಕ ಕೃಷಿಭೂಮಿ ಮತ್ತು ಮನೆ ಇಂದು ದಟ್ಟ ಹಸುರಿನ ನಡುವೆ ಮರೆಯಾಗಿ, ನವಿಲುಲಿಯ ಹಾಡಾಗಿ, ಹಲವು ವಿದ್ಯಾಸಂಸ್ಥೆಗಳ ಮತ್ತು ಸಹಜವಾಗಿ ವಿಸ್ತಾರ ನಾಗರಿಕತೆಯ ಎಡೆಯ ನಂದನವನವಾಗಿಯೇ ಕಂಗೊಳಿಸಿತ್ತು!

ಮುಖ್ಯ ರಸ್ತೆಯಲ್ಲಿ ಬಲಕ್ಕೆ ಸಿಗುವ ದೊಡ್ಡ ಕವಲು ಫರಂಗಿಪೇಟೆಯೆಡೆಗೆ ಹೋಗುತ್ತಿತ್ತು. ಅದನ್ನು ನಿರಾಕರಿಸಿ, ಮುಂದೆ ಹಾಗೇ ಎಡಕ್ಕೆ ಸಿಗುವ ಪೊಳಲಿ ಕವಲನ್ನೂ ಬಲದ ದಾರಿ ಹಿಡಿದೆ. ಇಲ್ಲಿ ಮಾತ್ರ ದಾರಿ ಅಕ್ಷರಶಃ ಪದವಿನಿಂದ ಕೊಳ್ಳಕ್ಕೆ ಹಾರಿಕೊಂಡಷ್ಟೇ ತೀವ್ರವಾಗಿ ಇಳಿಯುತ್ತದೆ. ನಾನಂತೂ ಸದ್ಯ ಇದೇ ದಾರಿಯಲ್ಲಿ ಮರಳುವ ಚಿಂತೆಯಿಲ್ಲ ಎಂಬ ಸಂತೋಷದಲ್ಲಿ ಝರ್ರಂತ ಜೋಡುಮಾರ್ಗದತ್ತ ಇಳಿದೆ. ಇಂಥಾ ಶಕ್ತಿವ್ಯಯವನ್ನು ಇಡುಗಂಟು ಮಾಡಿಕೊಳ್ಳಲು ಮನದಲ್ಲೇ ರೂಪಿಸಿದ್ದ ನೀಲನಕಾಶೆಯನ್ನು ಅಲ್ಲೆ ಹುಗಿದುಬಿಟ್ಟೆ. ಅದೇ ದಾರಿಯಲ್ಲಿ ಹೆದ್ದಾರಿಗೂ ಒಂದೂವರೆ ಕಿಮೀ ಮೊದಲೇ ಸಿಗುವ ಸುಂದರರಾಯರ ಮನೆ ತಲಪುವಷ್ಟರಲ್ಲೇ ಭರ್ತಿ ಎರಡು ಗಂಟೆ ನಡೆಸಿದ ಸವಾರಿಯ ಶ್ರಮ ಸುಂದರ ಅನುಭವ ಕಥನವಾಗಿ ರೂಪುಗೊಂಡಾಗಿತ್ತು. ಬಹುಶಃ ಆ ಕೊರೆತ ತಪ್ಪಿಸಲೋ ಎನ್ನುವಂತೆ ರಮಾ ರಾಯರು ಕೂಡಲೇ ನನಗೆ ನೀರು, ಚಾ ಕೊಟ್ಟು ನೋಡಿದರು. ಮತ್ತೂ ನನ್ನ ಕಥನ `ಕೌಶಲ್ಯ’ ಅದಮ್ಯವಾಗಿದೆ ಎಂದು ಕಂಡದ್ದಕ್ಕೋ ಏನೋ ಬಾಯಿಗೆ ಸೌತೇಕಾಯಿ ಕಡುಬು ತುಂಬಿದರು. ಮತ್ತೂ ಮುಂದುವರಿದೀತು ಎಂದು ಹೆದರಿಯೋ (ಅಥವಾ ನಾನು ಕತ್ತಲಲ್ಲಿ ಹೆದ್ದಾರಿಯಲ್ಲಿ ಬಾಕಿಯಾಗಬಾರದೆಂಬ ಕಾಳಜಿಯಿಂದಲೋ ನನ್ನನ್ನು ಪರೋಕ್ಷವಾಗಿ ಹೊರಡುವಂತೆ ಮಾಡಿ) ರಾಯರು ಯಾವುದೋ ಮೀಟಿಂಗ್ ನೆಪದಲ್ಲಿ ಓಡಿಯೇ ಹೋದರು!! ನಾನಂತೂ ಚಾ, ಸೌತೆಗಡುಬನ್ನು ಸಾಹಸೀ ಸಾಧನೆಗೆ ಅರ್ಥಪೂರ್ಣ ಸಮ್ಮಾನವಾಗಿ ಪರಿಗ್ರಹಿಸಿದೆ (ಪುಣ್ಯಕ್ಕೆ ಹೆಣಭಾರದ ಹೂಮಾಲೆ, ಉಪಯೋಗಕ್ಕಿಲ್ಲದ ತಗಡೋ ಮರದ ತುಂಡೋ ಕೊಡಲಿಲ್ಲ!) ಅನಂತರ  ಸಾರ್ವಜನಿಕ ಸಭೆಗೆ ಬಂದು, ತನ್ನ ನಾಲಿಗೆ ಚಪಲ ತೀರಿಸಿದ ಕೂಡಲೇ ಸುಳ್ಳೇ ಅನ್ಯ ತುರ್ತು ಕಾರ್ಯದ ನೆಪದಲ್ಲಿ ಜಾಗ ಖಾಲಿ ಮಾಡುವ ಮಂತ್ರಿ ಮಹೋದಯರಂತೆ ಹೊರಟುಬಿಟ್ಟೆ. ಹೆದ್ದಾರಿಗುಂಟ ಮತ್ತೊಂದೇ ಗಂಟೆಯ ನಿರಾಯಾಸ ತುಳಿತದಲ್ಲಿ ಮಂಗಳೂರ ಮನೆ ಸೇರಿಕೊಂಡೆ.

ಎಲ್ಲೋಮಡ್ ನ್ಯಾಶನಲ್ ಪಾರ್ಕ್!

ತೀವ್ರ ಶೀತದಿಂದ ಮೈಬಿಸಿ ಏರಿತ್ತು. “ಇವತ್ತು ಸೈಕಲ್ ಬೇಡ” ಎಂದ ದೇವಕಿಗೆ “ಉಷ್ಣಂ ಉಷ್ಣೇನ ಶೀತಲಂ” ಎಂದು ಸಂಸ್ಕೃತ ಬಿಟ್ಟು, ಸರ್ಕೀಟ್ ಹೊರಟೇ ಬಿಟ್ಟೆ. ಬಿಜೈ, ಕುಂಟಿಕಾನ ಕಳೆದು ಕಾವೂರಿನತ್ತ ಹೋಗುತ್ತಿದ್ದಂತೆ ಎಡಕ್ಕೆ `ಆಕಾಶಭವನ’ದ ಮಾರ್ಗಸೂಚೀ ಕಾಣಿಸಿತು. ಇದು ನನ್ನ ನೆನಪಿನ ಕೋಶಕ್ಕೊಂದು ಪುಟ್ಟ ಕಿಂಡಿ ಒಡೆಯಿತು! ನೀವೇ ನೋಡಿ...

ಪ್ರಸ್ತುತ ಮಳೆಗಾಲಕ್ಕೂ ಮೊದಲೊಮ್ಮೆ ನಮ್ಮ ಜಂಟಿ ಸೈಕಲ್ ಸವಾರಿ ಕೂಳೂರಿನಿಂದ ಕೊಟ್ಟಾರದ ಕಡೆಗೆ ಬರುತ್ತಿದೆ. ಸುಮಾರು ಅರ್ಧ ದಾರಿಯಲ್ಲಿ, ಅಂದರೆ ಒಂದು ಕಾಲದಲ್ಲಿ ಸ್ಟಾಕ್ ಎಕ್ಸ್‍ಛೇಂಜ್ ಬರಲಿದ್ದ ವಠಾರಕ್ಕೂ ತುಸು ಮುಂದೆ (ಮಂಗಳೂರು ಕಡೆಗೆ) ಸಿಗುವ `ಗಟಾರಗಂಗಾ’ ಸೇತು ದಾಟಿದ ಕೂಡಲೇ ಎಡಕ್ಕೆ ಕಾಣಿಸಿದ ಸಣ್ಣ ಕವಲು ದಾರಿ ನನ್ನ ಕುತೂಹಲ ಕೆರಳಿಸಿದೆ. ಸವಾರಿ ಅತ್ತ ತಿರುಗಿತು. ಕಣ್ಣು ಜೂಗರಿಸಿದ್ದ ಬೊಗ್ಗಿ ಬೊಗ್ರರೂ ಘಟ್ಟದ ಮೇಲಿನ ಕೂಲಿಕಾರರ ಚಳ್ಳೆಪುಳ್ಳೆಗಳು ನಮ್ಮ ಸಂಭ್ರಮದ ಭಾಗವಾಗಿ ಹುಯ್ಲಿಡುತ್ತಾ ಬೆಂಬತ್ತಿದ್ದಾರೆ. ಯಾವುದೋ ಜೋಪಡಿ ಮಡಿಲಿನಿಂದ ಮೋಟುಲಟಾರಿ ಸೈಕಲ್ ಏರಿದ ಒಬ್ಬ ಗೊಣ್ಣೆ ಸುರ್ಕ ಬಾಲನಂತೂ ತುಸು ದೂರದವರೆಗೂ “ಅಂಕಲ್ ಟಾಟಾ, ಆಂಟೀ ಟಾಟಾ” ಮಾಡುತ್ತ ಬಂದ. ದಾರಿ-ಚಾಪೆಯ ಸುರುಳಿ ಕಾಂಕ್ರೀಟ್, ಹರಕು ಡಾಮರು ಎಂದು ಬಿಡಿಸಿಕೊಳ್ಳುತ್ತಲೇ ಇತ್ತು. ಸುಮಾರು ಒಂದು ಕಿಮೀ ಕಳೆಯುವುದರೊಡನೆ ಮುಖ್ಯ ವಸತಿ ವಠಾರಗಳೆಲ್ಲ ಮುಗಿದಿವೆ. ಆಚೀಚೆ ಜವುಗು ಪ್ರದೇಶಗಳ ವಿಸ್ತಾರ ಹರಹು, ನಮ್ಮದೋ ತುಸು ಎತ್ತರಿಸಿದ ಪಕ್ಕಾ ಮಣ್ಣುದಾರಿ. ನಡುನಡುವೆ ಚಾಪೆಯ ಹೆಣಿಗೆ ಕಿತ್ತು ಅತ್ತಿತ್ತ ಚಾಚಿದ ಹುಲ್ಲ ಎಳೆಗಳಂತೆ ಅಮುಖ್ಯ ಕವಲುಗಳು. ಅವುಗಳ ಕೊನೆಯಲ್ಲಿ, ನಾಗರಿಕತೆ ಪರಿಸರವನ್ನು ಹಣಿದು ಊರಿದ ವಿಜಯದ ಸಂಕೇತದಂತೆ, ಚಿತ್ರ ವಿಚಿತ್ರ ಬಣ್ಣಗಳ, ಹಲವು ರಚನಾ ವೈಖರಿಗಳ ವಸತಿ ಸಂಕೀರ್ಣಗಳು! ಓ ಅಂಥದ್ದೇ ಬಲಕ್ಕೊಂದು ಭಾರೀ ವಠಾರ, ಬೋರ್ಡು - ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಶೆಟ್ರ ಗುತ್ತಿನ ಮನೆಯದ್ದು, ಕಂಡಾಗ ಸ್ಥಳ ನಾಮ ಮಾಲಾಡಿ ಎಂದೂ ಸ್ಪಷ್ಟವಾಯ್ತು. ದಾರಿ ಮಣ್ಣಿನದೇ ಆದರೂ ಹೆಚ್ಚುಕಡಿಮೆ ಸಮತಟ್ಟಾಗಿಯೂ (ಘನವಾಹನಗಳ ಹಾವಳಿಯಿಲ್ಲದೆ) ಸಾಕಷ್ಟು ಬಳಕೆಯಲ್ಲಿದ್ದೂ ನಯವಾಗಿ ಉಳಿದಂತಿತ್ತು. ಅಸಾಧ್ಯವೆನ್ನಿಸಿದ್ದರೆ, ಬಂದ ದಾರಿಯಲ್ಲೇ ಮರಳದಿರಲು ನಾವೇನು “ಒಮ್ಮೆ ತೊಟ್ಟ ಅಸ್ತ್ರವನ್ನು ಮರಳಿ ತೊಡೆವೆಂಬ” ಕರ್ಣ-ಶಪಥಧಾರಿಗಳೇ!

ಆಚೆ ಕೊನೆಯಲ್ಲಿ ಬಯಲು ಕಳೆದು ಗುಡ್ಡೆ ಬರುತ್ತ ದಾರಿ ಮತ್ತೆ ಡಾಮರು ಕಂಡಿತ್ತು. ಸ್ವತಂತ್ರ ಮನೆಗಳ ಕಾಲನಿಯೇ ತೆರೆದುಕೊಂಡಿತು. ಏರುಮುಖೀ ದಾರಿಯಲ್ಲಿ ಸೈಕಲ್ಲಿಳಿದು ತುಸುವೇ ನೂಕುವುದರೊಡನೆ ಮುಖ್ಯ ದಾರಿಯೊಂದನ್ನು ಸಂಪರ್ಕಿಸಿದ್ದೆವು; ಸ್ಥಳನಾಮ ನಂದನಪುರ. ಮೇಗಿನ ಮಾಲಾಡಿ ಎಂಬ ಪ್ರಾದೇಶಿಕತೆಯನ್ನು ಧಿಕ್ಕರಿಸಿ ನಿಂತ ಹೆಸರಿನ ನಾವೀನ್ಯ ನಗೆ ತರಿಸಿತು. ನಾವು ಬಲಕ್ಕೆ ಹೊರಳಿ, ಮರಳಿ ಹೆದ್ದಾರಿ ಸೇರುವ ಅಂದಾಜಿನಲ್ಲಿ ಮುಂದುವರಿದೆವು. ಅದರಲ್ಲಿ ತುಸು ಮುಂದೆ, ಎಡಕ್ಕೆ, ಮತ್ತೆ ಗುಡ್ಡೆಯನ್ನೇರುವ ದಾರಿಯಂಚಿನಲ್ಲಿ, ಕೈಕಂಬ ಸೂಚಿಸಿದ ಹೆಸರೂ – ಆಕಾಶಭವನ.

ಅಂದು ಜಂಟಿ ಸವಾರಿಗೆ ಗುಡ್ಡದ ದಾರಿ ಒಗ್ಗದೆಂದು ನಿರ್ಲಕ್ಷಿಸಿದ್ದನ್ನು ಇಂದು ಒಂಟಿ ಸವಾರಿಯಲ್ಲಿ ನೋಡಿಯೇ ಬಿಡೋಣವೆಂದುಕೊಂಡೆ. ಕುಂಟಿಕಾನದತ್ತಣಿಂದ ಬಂದ ನಾನು ಎಡದ ಇಳಿಜಾರಿನಲ್ಲಿ ಧಾವಿಸಿದೆ. ಹಾಗೆ ತಿರುಗಿ, ಹೀಗೆ ತಿರುಗುವುದರೊಳಗೆ ನಾವು ಅಂದು ಕಂಡ ನಂದನಪುರದ್ದೇ ಕವಲು ಸಿಕ್ಕಿತು. ಅಲ್ಲಿದ್ದವರನ್ನು ವಿಚಾರಿಸಿದೆ “ನಿಜಕ್ಕೂ ಅಲ್ಲಿ ಆಕಾಶದೆತ್ತರಕ್ಕೆ...?” ನನ್ನ ಪ್ರಶ್ನೆ ಪೂರ್ಣವಾಗುವ ಮೊದಲೇ ಸ್ಥಳೀಯನೊಬ್ಬ ನಗಾಡುತ್ತಾ “ಅದು ಬರೀ ಹೆಸರು” ಎಂದು ನನ್ನ ಕುತೂಹಲದ ಗುಳ್ಳೆ ಒಡೆದ.

ಯಕ್ಷಗಾನಕ್ಕೆ ಘನ ಪ್ರಸಂಗ ಸಾಹಿತ್ಯದೊಡನೆಯೇ ಏಸುಕ್ರಿಸ್ತನನ್ನು ತಂದ ಮೊದಲಿಗರು ಮುಳಿಯ ಕೇಶವಯ್ಯ. ವೃತ್ತಿ ಮುಖದಲ್ಲಿ ಬ್ಯಾಂಕ್ ಉದ್ಯೋಗಿ, ವಕೀಲ ಎಂದೆಲ್ಲಾ ಇದ್ದರೂ ದೊಡ್ಡಪ್ಪ – ಮುಳಿಯ ತಿಮ್ಮಪ್ಪಯ್ಯನವರಿಂದ ತೊಡಗಿ ಮನೆಯಲ್ಲಿ ಸಾಹಿತ್ಯವೇ ಮಡುಗಟ್ಟಿದ್ದುದರಿಂದ ಇವರ ಬೊಗಸೆಯ ಕೊಡುಗೆ ಚೆನ್ನಾಗಿಯೇ ಇತ್ತು. ಆದರೆ ಯಕ್ಷ-ವೃತ್ತಿಪರರ ಕೃತಿ ಚೋರ ಪ್ರವೃತ್ತಿ ಇವರನ್ನು ಸತಾಯಿಸಿದ್ದರಿಂದ ಬಹುಶಃ ಮುಂದುವರಿಯಲಿಲ್ಲ. ಕೇಶವಯ್ಯ ಈಚೆಗೆ ಇದೇ ಮೇಲಿನ ಮಾಲಾಡಿ ವಲಯದಲ್ಲಿ ಸಣ್ಣ ಕೃಷಿಭೂಮಿ ಕೊಂಡು, ಹೊಸ ಮನೆ ಮಾಡಿದ್ದರು. ಆ ನೆಪದಲ್ಲಿ ಅಲ್ಲೇ ಅವರು ನಿಡ್ಲೆ ಗೋವಿಂದ ಭಟ್ಟರ ಮೇಳದಿಂದ ಆಡಿಸಿದ ಯಕ್ಷ-ಪ್ರದರ್ಶನಕ್ಕೆ ರಸಿಕನಾಗಿ, ಅನಂತರದ ಊಟಕ್ಕೆ ರಸನೆಯಾಗಿ ನಾನೂ ಪಾಲ್ಗೊಂಡಿದ್ದೆ. ಆ ನೆನಪಲ್ಲಿ ಈಗ ಒಂದು ಕ್ಷಣದ ನಮಸ್ಕಾರ ಹೇಳಿ ಬರೋಣವೆಂದು ನನ್ನ ಸೈಕಲ್ಲನ್ನು ಅರ್ಧ ಗುಡ್ಡೆಯಷ್ಟೇ ಕೆಳಗಿನ ಅವರ ಮನೆಗಿಳಿಸಿದೆ. ಮತ್ತೆ ನಾನೆಷ್ಟು ಬೇಡವೆಂದರೂ ಅವರ ಹೆಂಡತಿ, ಸೊಸೆ ನನಗೆ ಚಾ, ಬಾಳೇಹಣ್ಣು ತಿನ್ನಿಸದೇ ಬಿಡಲಿಲ್ಲ. ಹಿಂದೆಲ್ಲ ಕೇಶವಯ್ಯ ಸ್ಕೂಟರ್ ಏರಿ ಬಿಡುವು ಮಾಡಿಕೊಂಡು ನನ್ನಂಗಡಿಗೆ ಯಾವುದೋ ಪುಸ್ತಕದ ನೆಪದಲ್ಲಿ ಬಂದು, ಪಟ್ಟಾಂಗ ಹೊಡೆದು ಹೋಗುವುದಿತ್ತು. ಆಗೆಲ್ಲ ಇವರು ಮುಷ್ಠಿಮಾಡಿ, ಉಂಗುರ ಮತ್ತು ಕಿರು ಬೆರಳ ನಡುವೆ ಕಿಚ್ಚಿಕ್ಕಿದ ಸಿಗರೇಟ್ ಸಿಕ್ಕಿಸಿ, ಹೆಬ್ಬೆರಳ ಸಂದಿನಿಂದ ಬಲವಾಗಿ ಹೊಗೆ ಎಳೆಯುತ್ತಿದ್ದ ಕ್ರಮ ನಾನನ್ಯರಲ್ಲಿ ಕಂಡದ್ದಿಲ್ಲ. ಹಾಗೇ ಸಿಗರೇಟಿನ ತುದಿ ಬೂದಿಗಟ್ಟಿದಾಗಲೂ ಅದನ್ನು ಕೊಡಹುವ ಭರ್ಜರಿ ಶೈಲಿಯೂ ಇವರದೇ ಸೈ! ಆದರೀಗ ಧೂಮಪಾನದ ಸಂಚಿತ ಸಮಸ್ಯೆ, ಪ್ರಾಯದ ಪ್ರಭಾವಗಳು ಸೇರಿದ್ದಿರಬೇಕು – ಪಾಪ, ಮಲಗಿದ್ದವರು ನನಗಾಗಿ ಎದ್ದು ಬರುವ ಹಾಗಾಯ್ತು. ಎಂದಿನ ಆಳದ ಧ್ವನಿಯಲ್ಲಿ “ಗಾಳಿ ಸಾಕಾಗುದಿಲ್ಲ ಮಾರಾಯ್ರೇ. `ಆರೋಗ್ಯ ಅಡ್ಡಿಯಿಲ್ಲ ನಿಮ್ಮ ಪುಪ್ಪುಸದ ಪಂಪಿಂಗ್ ಪವರ್ರೇ ಕಮ್ಮಿಯಾಗಿದೆ’ ಎನ್ತಾರೆ ಡಾಕ್ಟ್ರು” ಎಂದು ಹೇಳಿ, ಎಂದಿನಂತೆ ಮತ್ತವರದೇ ವೈಶಿಷ್ಟ್ಯವಾದ ಮೈಯೆಲ್ಲಾ ಕುಲುಕುವ ಮುಕ್ತ ಅಟ್ಟಹಾಸ (ನಗೆ ತುಂಬ ಸಣ್ಣ ಶಬ್ದ) ಹಾಕಿದರು. 

ನನ್ನ ಪುಪ್ಪುಸದ ಪಂಪಿಂಗ್ ಪವರ್ ಪರೀಕ್ಷಿಸಿಕೊಳ್ಳುವಂತೆ ಕೇಶವಯ್ಯನವರ ಮನೆಯಂಗಳದಿಂದ ಮೇಲಿನ ದಾರಿಗೆ ಸರಸರನೆ ಸೈಕಲ್ ಮೆಟ್ಟಿದೆ. ಬಲಕ್ಕೆ ಹೊರಳಿ ಐವತ್ತಡಿ ಕಳೆಯುವುದರೊಳಗೆ ಮತ್ತದಕ್ಕೂ ಮಿಕ್ಕಿದ ಇನ್ನೊಂದು ಏರು. ಅದನ್ನೂ ಸೀಟಿಗಂಟಿಯೇ ತುಳಿದು, ಕೆಳತಳ್ಳಿದೆ. ಆ ಎತ್ತರದಲ್ಲಿ ತುಸು ಸುಧಾರಿಸಿಕೊಳ್ಳುವ ಸುಪ್ತಾಲೋಚನೆಯೊಡನೆ (ಕೇಶವಯ್ಯನವರೆಲ್ಲಾದರೂ ಕೇಳಿಬಿಟ್ಟರೆ “ಏನು ನೀವೂ ಸೋತದ್ದಾ?”), ಅಲ್ಲೇ ಎಡಕ್ಕೆ ಕಾಣುತ್ತಿದ್ದ ಈ ಮನುಷ್ಯಕೃತ ಪ್ರಾಕೃತಿಕ ವೈಚಿತ್ರ್ಯವನ್ನು ಕ್ಯಾಮರಾಕ್ಕೆ ತುಂಬಿಕೊಳ್ಳಲು ನಿಂತೆ.

ಹಿಂದೆ ಪಿಕ್ಕಾಸಿ, ಗುದ್ದಲಿಗಳ ಯುಗದಲ್ಲಿ ನೆಲ ಸಪಾಟು ಮಾಡುವಾಗ ಲೆಕ್ಕಾಚಾರದ ಗುರುತಕ್ಕೋ ಏನೋ ನಡುನಡುವೆ ಕವುಚಿಟ್ಟ ಬೃಹತ್ ಮೂಲಂಗಿಯಂತೆ ದಿಬ್ಬಗಳನ್ನು ಉಳಿಸುತ್ತಿದ್ದರು. ಇಂದು ಜೇಸೀಬೀ ಹಿಟಾಚೀಗಳ ಯಮಶಕ್ತಿಯಲ್ಲಿ ದಿನ ಒಂದೆರಡರಲ್ಲಿ ಗುಡ್ಡೆ ತೆಗೆದರೂ ನಾಳೆ ಲೆಕ್ಕ ಸಿಕ್ಕದಷ್ಟು ಚೊಕ್ಕ ಮಾಡಿಬಿಡುತ್ತಾರೆ. ಇಲ್ಲಿ ಮಾತ್ರ ಯಾಕೋ ಹೀಗೊಂದಿಷ್ಟು ಇನ್ನೂ ಉಳಿಸಿದ್ದಾರೆ. ಹನ್ನೊಂದು ಸಾವಿರ ವರ್ಷಕ್ಕೂ ಮಿಕ್ಕ ನದಿಯ ಹರಿವು, ಅಗ್ನಿಪರ್ವತಗಳ ಕೋಪ, ವಾಯುಪ್ರತಾಪಗಳ ಮೊತ್ತವಾಗಿ ಅಮೆರಿಕಾದಲ್ಲಿನ `ಭಾರೀ ಕಣಿವೆ’ (ಗ್ರ್ಯಾಂಡ್ ಕ್ಯಾನಿಯನ್) ರೂಪುಗೊಂಡಿದೆ. ಅದರ ಔಚಿತ್ಯವನ್ನು ಸಕಾಲಕ್ಕೆ ಮನಗಂಡು `ಯೆಲ್ಲೋಸ್ಟೋನ್ ನ್ಯಾಶನಲ್ ಪಾರ್ಕ್’ ಎಂದೇ ಹೆಸರಿಸಿ ಕಾಪಾಡಿಕೊಂಡು ಬಂದಿರುವ ಖ್ಯಾತಿ ಅಲ್ಲಿನವರದು. ಇಲ್ಲಿ ಇನ್ನೂ ಪ್ರಾಚೀನತಮವಾದ ಸತ್ಯಗಳನ್ನು ಮುರಕಲ್ಲ ಪದವುಗಳ ರೂಪದಲ್ಲಿ ಪ್ರಕೃತಿ ನಮಗೆ ಕಾಪಾಡಿಕೊಟ್ಟಿದೆ. ಆದರೆ ಅವನ್ನು ಯಾವ ವಿವೇಚನೆಯೂ ಇಲ್ಲದೆ ತಗ್ಗಿಸುತ್ತೇವೆ, ಕಣಿವೆಗಳನ್ನು ಎತ್ತುತ್ತೇವೆ – ಒಟ್ಟಾರೆ ಬಯಲು ಮಾಡುತ್ತಿದ್ದೇವೆ. ಅಪೂರ್ವಕ್ಕೆ, ಅದೂ ಹೆಚ್ಚು ಕಾಲ ಇರದಂತೆ ಇಂಥಾ ವಿಕೃತ-ಸ್ಮಾರಕಗಳನ್ನು ಉಳಿಯಗೊಡುತ್ತೇವೆ. ಈ ದಿಬ್ಬವಾದರೂ ಇನ್ನೆಷ್ಟು ಕಾಲ ನಿಂತಿರುತ್ತದೋ ನನಗ್ಗೊತ್ತಿಲ್ಲ. ಆದರೆ ಇರುವಷ್ಟು ಕಾಲವಾದರೂ ಹೆಸರು ಖ್ಯಾತವಾಗಲಿ - ಮಂಗಳೂರಿನ ಯೆಲ್ಲೋ ಸ್ಟೋನ್ (ಮಡ್?) ನ್ಯಾಶನಲ್ ಪಾರ್ಕ್! ಅನಂತರ ಹಳದಿ ದಿಬ್ಬದ ಹಿಮ್ಮೈ ಸುತ್ತಿಳಿವ ಡಾಮರ್ ದಾರಿಯಲ್ಲಿ ಝರ್ರೆಂದು ಮಾಲೇಮಾರ್, ಕೊಟ್ಟಾರ, ಬಿಜೈ, ಮನೆ. 

ಒಂದು ಸಿಂಹಾವಲೋಕನ!

ಸೈಕಲ್ ಸರ್ಕೀಟಿನ ಚಿತ್ರ ಮತ್ತು ಕಥನಗಳ ವರದಿಯಷ್ಟೇ ಅನುಭವಿಸಿ ಹತಾಶಳಾದ ದೇವಕಿ ಕೆಣಕಿದಳು “ಎಲ್ಲ ನನಗೆಲ್ಲಿ?” ಅಷ್ಠಮಿಯ ಹಿಂದಿನ ದಿನ ದೇವಕಿಯನ್ನು ಉಪೇಕ್ಷಿಸಲಾದೀತೇ. ಅಪರಾಹ್ನವೇ ಅವಳನ್ನು ಬೆನ್ನಿಗೇರಿಸಿಕೊಂಡು ಮೊಟಾರ್ ಸೈಕಲ್ ಹೊರಡಿಸಿದೆ. 

ಬೈಕಂಪಾಡಿಯ ಉದ್ದಿಮೆ ವಲಯದೊಳಗೆ ಹಾಯ್ದು ಜೋಕಟ್ಟೆ. ಅಲ್ಲಿಂದ ಪೊರ್ಕೋಡಿಯ ನೇರ ಗುಡ್ಡೆ ಏರಿ, ಬಜ್ಪೆ ಪೇಟೆಯ ದಾರಿ ಸೇರಿದೆವು. ಅದರಲ್ಲಿ ಮಂಗಳೂರಿನತ್ತ ಇಳಿಯುತ್ತ ಹೊಸ ನಿಲ್ದಾಣದ ಹಿತ್ತಿಲು, ಅಂದರೆ ಆದ್ಯಪಾಡಿಯತ್ತ ಸಾಗುವ ದಾರಿ ಹಿಡಿದೆವು. ಕೆಲವು ವಾರಗಳ ಹಿಂದೆ ನಾನಲ್ಲಿ ಡೆಕ್ಕನ್ ಹೋಟೆಲಿನವರೆಗೂ ಇದ್ದ ಡಾಮರು ದಾರಿಯಲ್ಲಿ ಸೈಕಲ್ ತುಳಿದೇ ಹತ್ತಿಸಿದ್ದೆ. ಆದರೆ ಈಗ ಪರಿಷ್ಕರಣಕ್ಕಾಗಿ ಹೋಟೆಲಿನತ್ತಣ ದಾರಿ ಕತ್ತರಿಸಿದ್ದರು. ನಾನಿನ್ನೂ ಸೈಕಲ್ ಸರ್ಕೀಟಿನಲ್ಲಿ ಅನುಭವಿಸದ ಬಲಗವಲು – ಆದ್ಯಪಾಡಿಯತ್ತ, ಸಾಗಿದೆವು. ಇದು ಎಡ ಮಗ್ಗುಲಿನ ವಿಮಾನನಿಲ್ದಾಣದ ಗಡಿಗೆ ಸಮಾನಾಂತರದಲ್ಲಿ ಹೊಸದಾಗಿ ಕಾಡು ಕಡಿದು, ಮಣ್ಣು ತೋಡಿ, ಪೂರ್ಣ ಕಾಂಕ್ರೀಟ್ ಕಂಡಿತ್ತು. ತಮಾಷೆ ಎಂದರೆ ಅಷ್ಟು ಮಾಡಿದವರು ಅದರಲ್ಲಿ ವಿಪರೀತ ಏರಿಳಿತಗಳನ್ನು ಹಗುರಗೊಳಿಸಿರಲೇ ಇಲ್ಲ! ಸುಮಾರು ಎಂಟು-ಹತ್ತು ಕಿಮೀ ಕಳೆದ ಹಂತದಲ್ಲಿ ನಿಲ್ದಾಣದ ಒಂದು ಮಗ್ಗುಲು ದಾರಿಯಂಚಿನಲ್ಲೇ ಬಲು ಎತ್ತರದಲ್ಲಿ ಗೋಚರಿಸಿತು.

ಆಗ ಅಂದಾಜಿಸಿದೆ, ವಿಮಾನನಿಲ್ದಾಣ ಹಳ್ಳಿಗರನ್ನು ತೃಪ್ತಿಪಡಿಸುವ ಅನಿವಾರ್ಯತೆಗೆ ಅಲ್ಲಿವರೆಗಿನ ದಾರಿ ರಚಿಸಿದ್ದಿರಬೇಕು. ಮತ್ತೆ ಆದ್ಯಪಾಡಿ ಪೇಟೆಗೆ ಉಳಿದ ಸುಮಾರು ಅರ್ಧ ಕಿಮೀ ಅಂತರಕ್ಕೆ ಇವರ ಔದಾರ್ಯ ವ್ಯಾಪಿಸಲೇ ಇಲ್ಲ. ಅಲ್ಲಿ ದಾರಿಗೆ ಕಾಂಕ್ರೀಟು, ಡಾಮರು ಬಿಡಿ ಸರಿಯಾಗಿ ಜಲ್ಲಿಯನ್ನೂ ಕಾಣಿಸಿಲ್ಲ. ಹೋಲಿಕೆಗೆ ಪದವಿನ ಇನ್ನೊಂದು ಮಗ್ಗುಲಲ್ಲಿ ವಿಮಾನಯಾನಿಗಳ ಅನುಕೂಲಕ್ಕೆ ಮಾಡಿರುವ ಅದ್ಭುತ ಚತುಷ್ಪಥ ರಸ್ತೆ, ಡೆಕ್ಕನ್ ಹೋಟೆಲ್ ಬದಿಯಿಂದಲೂ ಈಗ ರೂಪಿಸುತ್ತಿರುವ ಪರ್ಯಾಯ ದಾರಿಯ ಕಾಮಗಾರಿಗಳನ್ನು ನೋಡಿ. ಆ `ಪ್ರೀತಿ’ಯ ನೂರರಲ್ಲಿ ಒಂದಂಶ ಇತ್ತ ಹರಿಸಿದ್ದರೆ ಬಹುಶಃ ಆದ್ಯಪಾಡಿಯ ಹಳ್ಳಿಗರು `ಸೊಕ್ಕುವ’ ಭಯವಿತ್ತೋ ಏನೋ!

ಆದ್ಯಪಾಡಿ ಪೇಟೆಯ ಮುಂದಿನ ಇಳಿಜಾರು ನೇರ ಪಾತಾಳಕ್ಕಿಳಿದಂತಿತ್ತು. ಅದರಲ್ಲಿ ನೂರಿನ್ನೂರು ಮೀಟರ್ ಹೋಗುವಷ್ಟರಲ್ಲೇ ಬಲಕ್ಕೆ ಮರವೂರಿನಿಂದ ಬರುತ್ತಿದ್ದ ಹಳೆದಾರಿ ಕಾಣ ಸಿಕ್ಕಿತು. ನನ್ನ ಭೌಗೋಳಿಕ ಅಂದಾಜಿನಲ್ಲಿ ಸ್ಥಳೀಯರಲ್ಲಿ ಗುರುಪುರಕ್ಕೆ ದಾರಿ ಕೇಳಿದೆ. ಇಳಿದಾರಿ ಗುರುಪುರ ಕೈಕಂಬ ಸಂಪರ್ಕಿಸುವುದೇನೋ ನಿಜ ಎಂದರು. ಆದರೆ ಚರಳು ಕಲ್ಲುಗಳ ಮೇಲೆ ಜಾರುತ್ತಾ ಹೋದರೂ ಕೆಳ ಬಯಲಿನಲ್ಲಿ ಬೈಕ್ ಓಡಿಸಲಾಗದ ಕಚ್ಚಾ ಸ್ಥಿತಿ ಇದೆ. ಅಲ್ಲಿನ ಮಳೆಗಾಲದ ರಂಪದಲ್ಲಿ ಬೈಕೇರಿ ಇಬ್ಬರ ಸವಾರಿಯಂತೂ ಕಡು ಕಷ್ಟ ಎಂದರು. 

ನಾನದನ್ನು ಸೈಕಲ್ ಸರ್ಕೀಟಿಗೇ ಉಳಿಸಿ, ಬಲಗವಲೇ ಹಿಡಿದೆ. ಮರವೂರು ಅಣೆಕಟ್ಟು, ಸೇತುವೆ ಕಳೆದು ತಿರುಗಿ ಬೊಂದೆಲ್, ಯಯ್ಯಾಡಿಗಾಗಿ ನಂತೂರು ಹೆದ್ದಾರಿ.


ಸರ್ಕೀಟಿನ ಇನ್ನೊಂದು ದಿಕ್ಕನ್ನೂ ಅಂದೇ ಮುಗಿಸುವ ಉತ್ಸಾಹದಲ್ಲಿ ಕುಲಶೇಖರದೆಡೆಗೆ ಮುಂದುವರಿದೆವು. ಅದೃಷ್ಟಕ್ಕೆ ಬೈಕಿನ ಪೆಟ್ರೋಲ್ ಸಂಗ್ರಹ ಶೂನ್ಯಂದಂಚಿನಲ್ಲಿದ್ದದ್ದನ್ನು ಸರಿಪಡಿಸಿಕೊಂಡೆ. ಈಗ ನೀರ್ಮಾರ್ಗದ ದಾರಿ. ಎರಡು ಗಂಟೆಗಳುದ್ದಕ್ಕೆ, ಮಧ್ಯಾಹ್ನದ ಬಿಸಿಯಲ್ಲಿ, ಪೂರ್ತಿ ನನ್ನದೇ ಶಕ್ತಿ, ಯುಕ್ತಿಯಲ್ಲಿ ತುಳಿದು ಕಳೆದ ದಾರಿಯನ್ನು ಈಗ ಕೇವಲ ಕೈ ಹಾಗೂ ಕಾಲ ಬೆರಳ ತುದಿಗಳ ಕಿರು ಸಂಚಲನದಲ್ಲಿ, ಪಕ್ಕಾ ವಾಯುವಿಹಾರದಂತೆಯೇ ಕಳೆಯುತ್ತಿದ್ದೆವು! ನನ್ನ ಮನಸ್ಸಿನ ಆಂದೋಳನ ದೇವಕಿಗೆಷ್ಟು ಮುಟ್ಟಿತೋ ಗೊತ್ತಿಲ್ಲ. ೧. ಈ ಕಷ್ಟವನ್ನೆಲ್ಲ ಒಂಟಿಯಾಗಿ ಎಳೆದುಕೊಂಡ ನನ್ನ ಬಗ್ಗೆ ದೇವಕಿಗೆ ಭಯ ಮೂಡಿ ಮುಂದಿನ ಸರ್ಕೀಟುಗಳಿಗೆ ಅಡ್ಡಿಯಾಗಬಹುದು. ೨. ಇಲ್ಲವೇ ನಿರಾಯಾಸವಾಗಿ, ಪ್ರಾಕೃತಿಕ ಚಂದ ನೋಡುತ್ತಾ “ಇಷ್ಟು (ಬೈಕ್ ಅಥವಾ ಬೇಕಾದರೆ ಕಾರ್ ಕೂಡಾ ಓಡಿಸುವ) ಅನುಕೂಲ ಇರುವಾಗ...” ನಾನು ಶ್ರಮಪಟ್ಟದ್ದರ ಬಗ್ಗೆ ಮರುಕವೂ ಮೂಡಬಹುದು. 


೩. ಸೈಕಲ್ ತುಳಿಯುವ ಶ್ರಮ, ಸಾಧನೆಗಳ ಅರಿವೇ ಮೂಡದೆ “ಫೂ ಇಷ್ಟೆಯೋ. ಎಲ್ಲಾ ನಿಮ್ಮ ಬರವಣಿಗೆಯ ಚಮತ್ಕಾರ” ಎಂದು ಹಗುರವೂ ಮಾಡಬಹುದು! ಏನೇ ಇರಲಿ, ಬೆಂಜನಪದವಿನಲ್ಲಿ ಮಾತ್ರ ನಮ್ಮ ಹಾರು-ಹುಚ್ಚಿನ ಗುಡ್ಡೆ ಮತ್ತು ಒಟ್ಟು ಪರಿಸರ ನೋಡಿದಾಗ ದೇವಕಿಗೆ ಮೂಡಿದ ಧನ್ಯತೆಯಲ್ಲಿ, ನನ್ನ ಸಿಂಹಾವಲೋಕನದ ಸಾರ್ಥಕತೆ ಕಂಡುಕೊಂಡೆ.

ಬೆಂಜನಪದವಿನಿಂದ ಜೋಡುಮಾರ್ಗ (ಮತ್ತೆ ಸುಂದರರಾವ್ ದಂಪತಿಗೆ ಚಾ, ಕಡುಬುಗಳ ದಂಡ ಹಾಕುವುದನ್ನು) ನಿರಾಕರಿಸಿ, ನಾವು ನೆರ ಫರಂಗಿಪೇಟೆಯ ದಾರಿ ಹಿಡಿದೆವು. ಈ ದಾರಿ ನಮ್ಮ ಹಾರುವ ಹುಚ್ಚಿನ ಕಾಲದಲ್ಲಿ ಸಪುರವಾಗಿಯೂ ಹರಕು ಡಾಮರಿನದ್ದಾಗಿಯೂ ಇತ್ತು. ಮಳೆಗಾಲದ ಉತ್ತುಂಗದಲ್ಲಿ ಬ್ರಹ್ಮರಕೂಟ್ಲುವಿನಲ್ಲಿ ದಾರಿ ಮುಳುಗಡೆ ಕಂಡಾಗ, ಬದಲಿ ದಾರಿಯಾಗಿ ಘನ ವಾಹನಗಳಿಗೆ ಬದಲಿ ದಾರಿಯಾಗಿ ಇದನ್ನು ಬಳಸುತ್ತಿದ್ದರು. ಆಗ ಕೆಲವು ವಾಹನಗಳು ಅಪಘಾತಗಳಿಗೀಡಾಗುತ್ತಿದ್ದದ್ದು, ಇತರ ವಾಹನ ಸಂಚಾರ ಬಗೆಹರಿಯದ ಕಗ್ಗಂಟಾಗುತ್ತಿದ್ದದ್ದೆಲ್ಲ ನಾನೂ ಅನುಭವಿಸಿದ್ದೆ. ನನಗೆ ಇದರಲ್ಲಿ ಇನ್ನೂ ಆಪ್ತವಾದ ಅನುಭವ ಮೊದಲೇ ಹೇಳಿದ ಹಾರೋ ಹುಚ್ಚಿನದ್ದು.

ತೇಲು ರೆಕ್ಕೆ (ಹ್ಯಾಂಗ್ ಗ್ಲೈಡರ್) ಮಡಚಿದ ಸ್ಥಿತಿಯಲ್ಲೂ ಸುಮಾರು ಹದಿನೆಂಟು ಅಡಿ ಉದ್ದ, ಸುಮಾರು ಎರಡೂವರೆ ಅಡಿ ಸುತ್ತಳತೆಯ ಗಾತ್ರ (ಕೆಲವು ಕೊಳವೆ, ಸರಿಗೆ ಮತ್ತು ವಿಶೇಷಪಟ್ಟ ಬಟ್ಟೆ) ಹಾಗೂ ಸುಮಾರು ಮೂವತ್ತು ಕೇಜಿ ತೂಕದ ಹೊರೆ. ನಮ್ಮ ಆಸಕ್ತಿಗಳು ದೊಡ್ಡವು ಅವನ್ನು ಪೂರೈಸುವ ಹಣಕಾಸಿನ ವ್ಯವಸ್ಥೆ ಸಣ್ಣವು. ರೆಕ್ಕೆ ಸಾಗಿಸಲು ನಮ್ಮ ಯಾರಲ್ಲೂ ದೊಡ್ಡ ವಾಹನಗಳಿರಲಿಲ್ಲ. (ಜೀಪು ಲಾರಿ ಬಾಡಿಗೆಗೆ ಹಿಡಿಯುವುದೂ ಆರ್ಥಿಕವಾಗಿ ಕಷ್ಟವಾಗುತ್ತಿತ್ತು.) ಆದರೆ ಸಾಹಸೀ ಹೊಂದಾಣಿಕೆಗೇನೂ ಕೊರತೆ ಇರಲಿಲ್ಲ. ಅಂದು ನನ್ನಲ್ಲಿದ್ದ ಯೆಜ್ದಿ ಬೈಕಿಗೆ ಎರಡು ಮಗ್ಗುಲಿನಲ್ಲಿ ಬಲವಾದ ಡಬ್ಬಿಗಳಿದ್ದವು. ರೆಕ್ಕೆಯನ್ನು ಬೈಕಿನ ಎಡಮಗ್ಗುಲಿನ ಡಬ್ಬಿ ಹಾಗೂ ಎದುರಿನ ಕ್ರ್ಯಾಶ್ ಗಾರ್ಡಿನ ಅಂಚಿನಲ್ಲಿ ತೂಕ ಹಂಚಿ ಬರುವಂತೆ ಇಟ್ಟು ಬಿಗಿಯಾಗಿ ಕಟ್ಟುತ್ತಿದ್ದೆವು. ಮತ್ತೆ ಗೆಳೆಯರು ಬೈಕ್ ಹಿಡಿದುಕೊಂಡಾಗ ನಾನೂ ಸಹವಾರನೂ ಬಹಳ ಎಚ್ಚರದಿಂದ ಎಡ ಸಂದಿನಲ್ಲಿ ಕಾಲುತೂರಿ ಸೀಟೇರುತ್ತಿದ್ದೆವು. ವಿಪರೀತ ಎಡ ತುಯ್ತ, ಬೈಕ್ ಮೀರಿದ ಅಳತೆ ಮತ್ತು ಅದರ ಬಳುಕಾಟಗಳ ಬಗ್ಗೆ ವಿಶೇಷ ಎಚ್ಚರವಹಿಸಿಕೊಂಡು ನಿಧಾನಕ್ಕೆ ಭೈಕ್ ಚಲಾಯಿಸುತ್ತಿದ್ದೆ. ನಮ್ಮ ಬಳಗದ ಇತರ ಒಂದೆರಡು ಬೈಕ್ ಸ್ಕೂಟರುಗಳು ನಮ್ಮ ವಿಚಿತ್ರ ಸ್ಥಿತಿಯನ್ನು ಇತರ ವಾಹನಗಳಿಗೆ ಮುಂಗಾಣಿಸಲು ತುಸು ಮುಂದೆ ಹಿಂದೆ ಓಡಾಡುತ್ತಿದ್ದವು. ಆದಿತ್ಯವಾರ ಬಂದರೆ ಹೀಗೆ ನಮ್ಮ ದಂಡಯಾತ್ರೆ ಶುರು! ಫರಂಗಿಪೇಟೆಯ ಮುಂದಿನ ಕವಲು ದಾರಿಯವರೆಗೇನೋ ಆರಾಮವಾಗಿಯೇ ಬರುತ್ತಿದ್ದೆವು. ಮುಂದಿನ ದಾರಿ ಮಾತ್ರ ನಮ್ಮನ್ನು ಭಾರೀ ಸತಾಯಿಸುತ್ತಿತ್ತು. ಅವ್ಯವಸ್ಥೆಯ ತೀವ್ರ ತಿರುವುಗಳಲ್ಲಿ ನಮ್ಮ `ಮೂಗು’ ದಾರಿಯಂಚಿನ ಪೊದರು ನುಗ್ಗಬಾರದು. ಅವೈಜ್ಞಾನಿಕ ಏರುಗಳಲ್ಲಿ ಮತ್ತೆ ಅದು ಎದುರು ದಾರಿಯನ್ನು ತಿವಿಯಲೂಬಾರದು. ಹಾಗೇ ತೀವ್ರ ಇಳುಕಲುಗಳಲ್ಲಿ ರೆಕ್ಕೆಯ `ಬಾಲ’ ರಸ್ತೆ ಉಜ್ಜಲೂಬಾರದು. ಇಷ್ಟರ ನಡುವೆ ರಸ್ತೆಯ ಹರಕು, ಹೊಂಡಗಳನ್ನು ನಿಭಾಯಿಸುವ ಸಂಕಟದಲ್ಲಿ ಇಂಜಿನ್ ಬಂದ್ ಬಿದ್ದರಂತೂ ಮುಗಿದೇಹೋಯ್ತು! (ಹೀಗೆ ಒಂದೆರಡು ಬಾರಿ ಹಗುರಕ್ಕೆ ಅಡ್ಡ ಬಿದ್ದದ್ದೂ ಇತ್ತು.) ವಿಪರೀತ ಏರೂ ಸವಾಲಾಗುತ್ತಿತ್ತು. ಕಿರುದಾರಿಯಲ್ಲಿ ಲಾರಿಯ ಹಿರಿತನವನ್ನು ಪರಿಭಾವಿಸಿಕೊಂಡರೂ ವಾಸ್ತವದಲ್ಲಿ ಓಡಿಸುತ್ತಿದ್ದದ್ದು ಒಂದು ಸಾಮಾನ್ಯ ಬೈಕ್! 

ಹೀಗೆ ಅನುಭವದ ನೆನಪಿನ ಸವಿಯಲ್ಲಿ ತೇಲುತ್ತಾ ಇಂದಿನ ವಿಸ್ತಾರ, ನುಣ್ಣನೆ ಆದರೆ ಹಳೆಯದೇ ಗುಡ್ಡ ಇಳಿಯುತ್ತಿದ್ದಂತೆ ಒಮ್ಮೆಗೆ ಬೈಕ್ ನಡುಗಿತು. ಎಲ್ಲೋ ನನ್ನರಿವಿಗೇ ಬಾರದ ಕಲ್ಲೋ ಚಡಿಯೋ ಹಾಯ್ದಿರಬೇಕೆಂದು ಉದ್ಗರಿಸುತ್ತಿದ್ದಂತೆ ಹಿಂದಿನ ಚಕ್ರ ಗಾಳಿ ಕಳೆದುಕೊಂಡದ್ದು ಅರಿವಾಯ್ತು. (ಮಂಗಳೂರಿನಲ್ಲಿ ಪೆಟ್ರೋಲ್ ತುಂಬಿಸಿದಾಗ, ಚಕ್ರದ ಗಾಳಿ ತನಿಖೆ ಮಾಡದ್ದಕ್ಕೆ ಪಶ್ಚಾತ್ತಾಪವಷ್ಟೇ ಉಳಿದಿತ್ತು) ಇಳಿಯಪ್ಪ, ಹತ್ತಿರದಲ್ಲೆಲ್ಲಾದರೂ ಇರಬಹುದಾದ `ಪ್ಯಾಚಪ್ಪ’ನನ್ನು ಹುಡುಕುತ್ತ ನೂಕಪ್ಪ ಮಾಡಿದೆವು.

ತುಂಡು ಮೋಡಗಳು ಹೆದರಿಸುವಂತಿರಲಿಲ್ಲ. ದಿನದ ಬೆಳಕು ಮಾಸಲು ಸಮಯವೂ ಸಾಕಷ್ಟು ಉಳಿದಿತ್ತು. ಎಲ್ಲೋ ಒಂದೆರಡು ಕಿಮೀ ಇಳುಕಲಿನ ದಾರಿಯ ಕೊನೆಯಲ್ಲಿ ಹೆದ್ದಾರಿ, ಮತ್ತಲ್ಲಿ ರಿಪೇರಿ ಖಾತ್ರಿ ಎಂದೇ ನಾನು ಅಂದಾಜಿಸಿದ್ದೆ. ಆದರೆ ದಾರಿ ಅಷ್ಟು ಸುಲಭದಲ್ಲಿ ಬಿಟ್ಟು ಕೊಡಲಿಲ್ಲ. ಇಳಿದಾರಿಯಲ್ಲಿ ಬಿರಿ ಹಿಡಿದು ಸುಧಾರಿಸಿದರಾಯ್ತು ಎನ್ನುವಾಗ ಏರುದಾರಿ ಕಾಣಿಸಿತ್ತು. ಅದಕ್ಕೆ ಇಬ್ಬರ ನೂಕುಬಲ ಸಾಲುತ್ತಿರಲಿಲ್ಲ. ಇಂಜಿನ್ ಚಾಲೂ ಮಾಡಿ ಪ್ರಥಮ ಗಿಯರ್ ಹಾಕಿ ಪಕ್ಕದಲ್ಲೇ ಬೀಸುಗಾಲು ಹಾಕಿದೆ. ಇನ್ನೇನು ಈಗ ಬಂತು, ಮುಂದಿನ ತಿರುವಿನಾಚೆ ಇದೆ ಅಂದುಕೊಳ್ಳುತ್ತಿರುವಂತೆ ನೆತ್ತರಕೆರೆಯ ಪುಟ್ಟ ಪೇಟೆ ಬಂತು. ಊರ ಉತ್ಸಾಹಿಗಳು ನಮ್ಮನ್ನು ವಿಚಾರಿಸಿದರು. ಆಗ ತಿಳಿಯಿತು, ಇನ್ನೂ ಸುಮಾರು ಮೂರು ಕಿಮೀ ದೂರದ ಫರಂಗಿಪೇಟೆಯಲ್ಲದೆ ರಿಪೇರಿ ಅಂಗಡಿ ಇಲ್ಲಾಂತ.

ಹಿರಿಪ್ರಾಯಕ್ಕೆ ಜಗ್ಗಿದ್ದ ಉತ್ಸಾಹವನ್ನು ತುಸು `ಎಣ್ಣೆ’ ಹಾಕಿ ಜಾಗೃತಗೊಳಿಸಿಕೊಂಡಿದ್ದವ, ಊರಿನ ಏಕಮಾತ್ರ ಅಂಗಡಿಯಾತ, ಏಕಮಾತ್ರ ರಿಕ್ಷಾಚಾಲಕ, ಮರುದಿನದ ಮೊಸರುಕುಡಿಕೆ ಸಾಂಸ್ಕೃತಿಕ ಕಲಾಪಗಳ ಅಭ್ಯಾಸ ನಡೆಸಿದ್ದ ಭಜನಾಮಂದಿರದ ಯುವಕರು ಎಲ್ಲಾ ನಿರ್ವಂಚನೆಯಿಂದ ನಮ್ಮ ಸಹಾಯಕ್ಕೆ ಪ್ರಯತ್ನಿಸಿದರು. ಅವರು ಚರವಾಣಿಸಿ ಸಂಪರ್ಕಿಸಿದ ಎರಡೂ ಟಯರ್ ವರ್ಕ್ಸಿನವರು ಕೆಲಸದವರ ಕೊರತೆಯಲ್ಲಿ “ಬೇಕಾದರೆ ಚಕ್ರ ಬಿಡಿಸಿ ತನ್ನಿ. ಬರಲು ಇಲ್ಲಿ ಜನವಿಲ್ಲ” ಎಂದು ಕೈತೊಳೆದುಕೊಂಡರು. ನಾವು ಸಾಹಸಯಾತ್ರೆ ಹೊರಟವರಲ್ಲವಾಗಿ ಬೈಕಿನ ಸಲಕರಣೆಗಳ ಕಟ್ಟು ಜೊತೆಯಲ್ಲಿರಲಿಲ್ಲ. ಅನಿವಾರ್ಯವಾಗಿ ಬೈಕ್ ಹಾಗೂ ದೇವಕಿಯನ್ನು ಅಲ್ಲೇ ಉಳಿಸಿ, ನಾನು ರಿಕ್ಷಾ ಏರಿ ಫರಂಗಿಪೇಟೆಗೇ ಹೋಗಬೇಕಾಯ್ತು. ಅಲ್ಲಿ ಎರಡು ಸ್ಪ್ಯಾನರ್ ಕಡಪಡೆಯುವಲ್ಲಿ `ಜಗದ್ವಿಖ್ಯಾತ ಅತ್ರಿ’ ಸೋತು, ರಿಕ್ಷಾ ಚಾಲಕ ಜಾಮೀನಾಗಬೇಕಾಯ್ತು. ಅದರೊಡನೆ ತಿರುಗಿ ನೆತ್ತರಕೆರೆ. ನಾನೇ ಚಕ್ರ ಬಿಚ್ಚಿ ಮತ್ತೆ ರಿಕ್ಷಾ ಏರಿ ಫರಂಗಿಪೇಟೆ. ರಿಪೇರಿಯಾದ ಮೇಲೆ ಚಕ್ರ ಜೋಡಿಸುವಲ್ಲಿ ನನ್ನ ಪರಿಣತಿ ಕೈಕೊಟ್ಟರೆ ಎಂಬ ಸಂಶಯದಲ್ಲಿ `ಪ್ಯಾಚಪ್ಪ’ನನ್ನು ಸೇರಿಸಿಕೊಂಡು ಮತ್ತೆ ನೆತ್ತರಕೆರೆ. ಚಕ್ರ ಜೋಡಿಸಿದ ಮೇಲೆ ರಿಕ್ಷಾ ಬಿಟ್ಟೆ. ಪ್ಯಾಚಪ್ಪನನ್ನು ನಾನು ಬೈಕಿನಲ್ಲೇ ಮತ್ತೆ ಫರಂಗಿಪೇಟೆಗೆ ಮುಟ್ಟಿಸಿ ಮರಳಿದೆ. ಅಷ್ಟರಲ್ಲಿ ದೇವಕಿ ಸ್ವಯಂಸ್ಫೂರ್ತಿಯಲ್ಲಿ ಫರಂಗಿಪೇಟೆಯತ್ತಲೇ ನಡೆಯುತ್ತಿದ್ದುದರಿಂದ ಪೆಟ್ರೋಲಿನಲ್ಲಿ ನಿವ್ವಳ ಉಳಿತಾಯ ಅರ್ಧ ಕಿಮೀ. ರಿಕ್ಷಾ, ಪ್ಯಾಚು, ಇನಾಮು ಎಂದೆಲ್ಲ ಹೋದದ್ದು ರೂ ಮುನ್ನೂರು.

ಇಷ್ಟರಲ್ಲಿ ಕತ್ತಲಾವರಿಸಿತ್ತು. ನೋಡಲು ಬಾಕಿಯುಳಿದ ವಳಚಿಲ್ ದಾರಿ, ಅಡ್ಯಾರ್ ಮುಂತಾದವುಗಳ ಬಗ್ಗೆ ಯಾವುದೇ ವಿಷಾದವಿಲ್ಲದೇ ಮನೆ ಸೇರಿಕೊಂಡೆವು.

5 comments:

 1. ಅಶೋಕ 'ಚಕ್ರ'ವರ್ತಿಗಳಿಗೆ

  ನಗರದ ಹೊರವಲಯದಲ್ಲಿ ಚೆನ್ನಾಗಿ ಪ್ರದಕ್ಷಿಣೆ (ನಮಗೂ) ಮಾಡಿ(ಸಿ)ದಿರಿ. ನಾನೂ ನೀರ್ಮಾರ್ಗ ಕುಟಿನ್ಹೋಪದವು ಬೆಂಜನಪದವು ರಸ್ತೆಯಲ್ಲಿ ಚತುಷ್ಚಕ್ರ ಸವಾರಿ ಕೆಲವು ಸಾರಿ ಮಾಡಿದ್ದೇನೆ. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಮನಸಾರೆ ಮೆಚ್ಚಿಕೊಂಡಿದ್ದೇನೆ ಧನ್ಯವಾದಗಳು.

  ರಿಚರ್ಡ್

  ReplyDelete
 2. chennaagide anubhava kathana, sundararaayaradu meeting nepa aagiralikkillappa!! avarige aagaaga meetingsu iruthve, !! ajakkala girisha

  ReplyDelete
 3. ಚಕ್ರಯಾತ್ರೆ ಚೆನ್ನಾಗಿದೆ..- ಗೋಪಾಲ್

  ReplyDelete
 4. Rathayaathre, notada sogasu, anubhavada beesu ella ranjisithu. Aa kallubetta eshtondu cheluvaagide! Inthavannu hegaadaru ulisi kollona.
  ---- Shyamala Madhav

  ReplyDelete
 5. ತೋರಣಕ್ಕೆಂದು ಬಾಳೆದಿ೦ಡನ್ನು ಸಹಸವಾರನ ಜೊತೆ ಸಾಗಿಸಿ ಉಸ್ಸಪ್ಪಾ ಎನ್ನುವ ನಾವು ತೇಲುರೆಕ್ಕೆ ಸಾಗಿಸಿದ ಸಾಧನೆಯೆದುರು ಕುಬ್ಜೆರೇ ಸರಿ :)

  ReplyDelete