18 November 2014

ದುಃಖದ ಒಂದು ಘಟನೆ

ಅಧ್ಯಾ ಮೂವತ್ತು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಮೂವತ್ತೆರಡನೇ ಕಂತು
ನಾನು ಯಾರ್ಮತ್ತಿಗೆ ಸಾಯಂಕಾಲ ತಲುಪಿದೆನು. ಮಿ. ಬಾರ್ಕಿಸರ ಮನೆಗೆ ಹೋಗುವ ದಾರಿಯಲ್ಲೇ ಓಮರ್ ಮತ್ತು ಜೋರಾಮರ ಅಂಗಡಿಯಿದ್ದುದರಿಂದ ಮಿ. ಓಮರರೊಡನೆ ಸ್ವಲ್ಪ ಮಾತಾಡಿ ಹೋಗೋಣವೆಂದು ನಾನು ಅವರ ಅಂಗಡಿಗೆ ಹೋದೆನು. ಮಿ. ಓಮರರು ಅವರ ಆರಾಮ ಕುರ್ಚಿಯಲ್ಲಿ ಕುಳಿತು ಸಿಗರೇಟ್ ಸೇದುತ್ತಿದ್ದರು. ಅವರ ಖಾಸಶ್ವಾಸದ ನಿಮಿತ್ತ ಅವರು ಹೆಚ್ಚಾಗಿ ಆರಾಮ ಕುರ್ಚಿಯಲ್ಲೇ ಕುಳಿತಿರುತ್ತಿದ್ದರೆಂದು ತಿಳಿದೆ. ನನ್ನನ್ನು ಕಂಡು ಅವರಿಗೆ ಬಹಳ ಸಂತೋಷವಾಯಿತು. ನನಗೆ ಆಸನ ಕೊಟ್ಟರು. ಉಭಯ ಕುಶಲ ಪ್ರಶ್ನೆಗಳನ್ನಾಡಿದೆವು. ಅನಂತರ ನಾನು ವಿಚಾರಿಸಿದೆ –
“ಮಿ. ಬಾರ್ಕಿಸರ ಖಾಯಿಲೆ ಯಾವ ಸ್ಥಿತಿಯಲ್ಲಿದೆಯೆಂದು ನಿಮಗೇನಾದರೂ ಗೊತ್ತಿದೆಯೇ ಮಿ. ಓಮರ್?”
“ಆ ಪ್ರಶ್ನೆಯನ್ನು ನಾನೇ ಕೇಳಬೇಕೆಂದಿದ್ದೆ, ಮಿ. ಕಾಪರ್ಫೀಲ್ಡ್” ಎಂದು ಹೇಳುತ್ತಾ ನಗಾಡಿದರು. ನಗೆಯಿಂದ ನೇವಸ, ಉಬ್ಬುಸ ತಲೆದೋರಿ, ಸ್ವಲ್ಪ ಸಮಾಧಾನವಾಗುವುದರೊಳಗೆ, ಉತ್ಸಾಹದಿಂದಲೇ ಮಾತಾಡಲಾರಂಭಿಸಿದರು –
“ನಮ್ಮ ಶವಸಂಸ್ಕಾರ ಸಾಹಿತ್ಯದಂಗಡಿಗಳಿಗೆ ಇರುವ ಒಂದು ವಿಶೇಷ ಅವಗುಣವೆಂದರೆ, ಅಂಗಡಿ ಮಾಲೀಕರಿಗೆ ಇತರರ ಖಾಯಿಲ ಹೇಗಿದೆ, ಅವರ ಆರೋಗ್ಯ ಹೇಗಿದೆ ಎಂದು ಕೆಲವು ಸಂದರ್ಭಗಳಲ್ಲಿ ಕೇಳಲು ಅನುಕೂಲವಿಲ್ಲದಿರುವುದು! ನೋಡಿ, `ಓಮರ್ ಮತ್ತು ಜೋರಾಮರ ನಮಸ್ಕಾರ’ ಎಂದು ಕೇವಲ ಸಾಂಪ್ರದಾಯಿಕವಾಗಿ ಪತ್ರ ಬರೆದರೂ ಜನರ ಮುಖಾಂತರ ವಿಚಾರಿಸಿದರೂ ಖಾಯಿಲಸ್ಥರಿರುವ ಮನೆಯವರು ಅಪಾರ್ಥವನ್ನೇ ಕಲ್ಪಿಸಿಕೊಳ್ಳುವರು.” ಇಷ್ಟು ಹೇಳುವಾಗಲೇ ಪುನಃ ಕೆಮ್ಮು ಬಂತು. ಸ್ವಲ್ಪ ಕಷ್ಟಪಟ್ಟರು, ಅಂತೂ ಬಿಡದೆ ಪುನಃ –
“ಮಿ. ಬಾರ್ಕಿಸರನ್ನು ಕುರಿತು ವರ್ತಮಾನ ಸಂಗ್ರಹಿಸಲು ಅನುಕೂಲವಿದೆ – ಸ್ವಲ್ಪ ತಡೆಯಿರಿ, ಎಮಿಲಿ ಅಲ್ಲಿಗೆ ಹೋದವಳು ಸದ್ಯ ಬರಬಹುದು” ಎಂದೆಂದರು.


ಎಮಿಲಿಯ ಹೆಸರು ಕೇಳಿದ ಕೂಡಲೆ – ನನ್ನ ಬಾಲ್ಯದ ಪ್ರೀತಿಯ ಎಮಿಲಿಯನ್ನು ಜ್ಞಾಪಿಸಿಕೊಂಡು – ಅವಳು ಹೇಗಿದ್ದಾಳೆಂದು ವಿಚಾರಿಸಿದೆ.
“ಎಮಿಲಿ ಕ್ಷೇಮವಾಗಿದ್ದಾಳೆ” ಎಂದು ಉತ್ತರವಿತ್ತು, ಹೇಳಲು ಇನ್ನೂ ಏನೋ ಇರುತ್ತಾ, ಹೇಳಬಹುದೋ ಬಾರದೋ ಎಂದು ಗ್ರಹಿಸುತ್ತಿರುವಂತೆ ಸ್ವಲ್ಪ ಅತ್ತಿತ್ತ ನೋಡಿದರು. ಕೊನೆಗೆ ಒಂದು ನಿರ್ಧಾರಕ್ಕೆ ಬಂದವರಂತೆ ಕೆಮ್ಮಿಕೊಂಡು –
“ಆದರೆ ಅವಳಿಗೆ ಬೇಗ ಲಗ್ನವಾಗಬೇಕೆಂದು ನಮ್ಮೆಲ್ಲರ ಆಸೆ” ಎಂದಂದರು.
“ಅದೇಕೆ ಹಾಗೆ ಹೇಳುತ್ತೀರಿ? ಹೇಮನಿಗೆ ಕೊಟ್ಟು ಮದುವೆಯಾಗುವುದೆಂದಿತ್ತಲ್ಲಾ, ಅದೇನಾಯ್ತು? ಅಂದೆ ನಾನು.
“ಆ ಅಭಿಪ್ರಾಯ ಈಗಲೂ ಊರ್ಜಿತಲ್ಲಿದೆ, ಸದ್ಯ ಆಗಲೂ ಬಹುದು. ಮಿ. ಪೆಗಟಿ, ಹೇಮ್ ಎಲ್ಲರೂ ಆ ಕಾರ್ಯದಲ್ಲಿದ್ದಾರೆ. ಹೇಮನು ಒಂದು ಸ್ವಂತ ಮನೆಯನ್ನು ಕಟ್ಟಿಸಿ ಅದಕ್ಕೆ ಬೇಕಾದ ಸಾಮಾನುಗಳನ್ನು ಒದಗಿಸಿ ಸಜ್ಜುಮಾಡಿಟ್ಟಿರುತ್ತಾನೆ. ಮಿ. ಬಾರ್ಕಿಸರ ಖಾಯಿಲವೊಂದಲ್ಲದಿದ್ದರೆ ಇಷ್ಟರಲ್ಲೇ ಮದುವೆಯಾಗಿ ಹೋಗುತ್ತಿತ್ತು” ಅಂದರು ಮಿ. ಓಮರ್.
“ಎಷ್ಟು ದಿನ ಹೀಗೆ ಕಾದಿರುವುದೆಂದೇನಾದರೂ ನಿಶ್ಚಯವಾಗಿದೆಯೇ?” ನನ್ನ ಪ್ರಶ್ನೆ.
ಅವರಂದರು –
“ಆ ವಿಷಯ ಗೊತ್ತಿಲ್ಲ. ಆದರೆ ಹಾಗೆ ಕಾಯುವುದೇ ಅಪಾಯಕರವೆಂದು ನಮ್ಮ ಅಭಿಪ್ರಾಯ. ಮದುವೆಯಾಗಲಿಲ್ಲವೆಂದು ಅವಳೇನೂ ನೋಡುವ ಮಟ್ಟಿಗೆ ಬಡವಾಗಲಿಲ್ಲ, ಮುಖ ಬಾಡಿಲ್ಲ. ದುಃಖಿಸಿರುವಳೇ ಅಂದರೆ, ಅದೂ ಇಲ್ಲ. ಅವಳು ಸುಂದರಿಯಾಗಿ, ದೊಡ್ಡವಳಾಗಿ ತರುಣಿಯಾಗಿ ಶೋಭಿಸುತ್ತಿದ್ದಾಳೆ. ಆದರೆ ಅವಳ ಮನಸ್ಸಿನ ಚಾಂಚಲ್ಯ, ಅನುರಾಗದ ಉದ್ವೇಗ, ಸರಳ ಸ್ವಭಾವ – ಇವುಗಳ ಕಾರಣವಾಗಿ ಅವಳ ಸ್ಥಿತಿ ಕೆಡಬಹುದೆಂದು ನಮ್ಮ ಬೆದರಿಕೆ. ಅವಳನ್ನು ಪೋಷಿಸಿ, ರಕ್ಷಿಸಬಲ್ಲ ಒಂದು ಶಕ್ತಿ ಈಗ ಅವಳ ಜತೆಯಲ್ಲಿರಬೇಕು” ಎಂದಷ್ಟು ಹೇಳಿ, ಇನ್ನೂ ಏನೋ ಗಹನವಾದ ಕಾರಣಗಳನ್ನು ಅವರು ಊಹಿಸಿದ್ದಂತೆ ತೋರಿದರು. ನಾನು,
“ಮಿ. ಪೆಗಟಿ ಇದ್ದಾರಲ್ಲ – ಅವರು ಸಾಲದೆ?” ಎಂದು ಕೇಳಿದೆ.
“ಮಿ. ಪೆಗಟಿ ಇದ್ದಾರೆಂಬುದು ನಿಜ. ಅವಳು ಅವರನ್ನು ಬಹುವಾಗಿ ಪ್ರೀತಿಸುತ್ತಿದ್ದಾಳೆಂಬುದೂ ಅವಳು ಮಾವ ಮಿ. ಪೆಗಟಿಯನ್ನು ಮೊದಲಿಗಿಂತಲೂ ಹೆಚ್ಚಾಗಿಯೇ ಅಂಟಿಕೊಂಡು ಹಿಂಬಾಲಿಸುತ್ತಿದ್ದಾಳೆಂಬುದೂ ನಿಜ. ನಮಗೆಲ್ಲಾ ಗೊತ್ತಿರುವ ವಿಷಯ, ಅದು. ಆದರೆ ಈ ಪ್ರೀತಿಯೇ ಅಪಾಯಕ್ಕೆ ಕಾರಣ. ಮಾವನನ್ನು ಮತ್ತಷ್ಟು ಬಲವಾಗಿ ಅಂಟಿಕೊಂಡು ಪ್ರೀತಿಸುತ್ತಿರುವುದೂ ಅಪಾಯದ ಚಿಹ್ನೆ. ತನ್ನ ಚಂಚಲ ಮನಸ್ಸಿಗೆ ತಾನೇ ಹೆದರಿ ಮಾವನನ್ನು ಹಾಗೊಂದು ಅಂಟಿಕೊಂಡು ತಿರುಗುತ್ತಿದ್ದಾಳೆಂದು ನಮ್ಮ ಊಹೆ. ನೋಡಿ ಮಿ. ಕಾಪರ್ಫೀಲ್ಡ್, ಬಡತನದಲ್ಲಿ ಬೆಳೆದ ಎಮಿಲಿಗೆ ಭಾಗ್ಯವಂತರ ಮನೆ ಸೇರಬೇಕೆಂದು ಬಹುವಾದ ಲವಲವಿಕೆಯಿದೆ. ಹೇಮನನ್ನು ಪ್ರೀತಿಸಿ, ಮಿ. ಪೆಗಟಿಯನ್ನು ಪೂಜಿಸಿ, ತನ್ನ ಬಳಗದವರ ಸಂತೋಷದಂತೆ ತಾನಿರಬೇಕೆಂದು ಅವಳು ತಿಳಿಯುತ್ತಿರುವುದರ ಜತೆಯಲ್ಲೇ ಎಲ್ಲವನ್ನೂ ಬಿಟ್ಟು ತಾನೂ ಶ್ರೀಮಂತಿಕೆಯನ್ನೂ ದಲಿತ, ದರಿದ್ರರ ರಕ್ಷಣಾಶಕ್ತಿಯನ್ನೂ ಪಡೆಯಬೇಕೆಂದೂ ಇಚ್ಛಿಸುತ್ತಿದ್ದಾಳೆ ಎಮಿಲಿ. ಈ ವಿಧದ ಮನಸ್ಸುಳ್ಳ ಅವಳ ಚರ್ಯೆ, ವ್ಯವಹಾರಗಳಲ್ಲಿ ಅವಳು ಸುತ್ತಲಿನ ವಸ್ತುಸ್ಥಿತಿಯನ್ನೇ ಮರೆತು ಕಲ್ಪನಾ ರಾಜ್ಯಕ್ಕೆ ಧುಮುಕಿ ಕಷ್ಟಪಡುತ್ತಿದ್ದಾಳೆಂದೂ ನಾವು ತಿಳಿದಿದ್ದೇವೆ. ಅವಳ ಅಸ್ಥಿರವಾದ ಮನಸ್ಸು ನ್ಯಾಯವಾದ ಮಾರ್ಗದಲ್ಲಿ ಪ್ರವರ್ತಿಸುವಂತೆ ಮಾಡಬಲ್ಲ ಮಾರ್ಗದರ್ಶಕ – ಬೋಧಕ, ಅವಳಿಗೆ ಈಗ ನೆರವಿಗೆ ಬರಬೇಕು” ಅಂದರು ಮಿ. ಓಮರರು. ಇಷ್ಟರಲ್ಲೇ ಮಿ. ಓಮರರ ಮಗಳು ಮಿ. ಬಾರ್ಕಿಸರ ವರ್ತಮಾನವನ್ನು ತಂದಳು. ಡಾ| ಚಿಲ್ಲಿಪ್ಪರ ಅಭಿಪ್ರಾಯ ಪ್ರಕಾರ ಮಿ. ಬಾರ್ಕಿಸರು ಇಹಲೋಕವನ್ನು ಬಿಡಲು ಹೆಚ್ಚು ಸಮಯವಿಲ್ಲವೆಂದು ಅವಳು ತಿಳಿಸಿದಳು. ಹಾಗಾಗಿ ನಾನು ಆ ಕೂಡಲೇ ಅಲ್ಲಿಂದ ಹೊರಟೆನು.

ಮಿ. ಬಾರ್ಕಿಸರ ಮನೆಗೆ ತಲುಪಿ ಹೊರಗಿನಿಂದ ಬಾಗಿಲು ತಟ್ಟುವಾಗ ಒಳಗಿನಿಂದ ಏನೂ ಶಬ್ದ ಕೇಳಿಸಲಿಲ. ಮಿ. ಪೆಗಟಿ ಬಂದು ಬಾಗಿಲು ತೆರೆದರು. ಒಳಗೆ ಎಮಿಲಿಯೂ ಹೇಮನೂ ಇದ್ದರು. ಅವರು ಮೌನವಾಗಿ ನಿಂತಿದ್ದರು. ಮರಣದ ಸಮ್ಮುಖದಲ್ಲಿ ಬದುಕಿದ್ದವರು ಬಾಡಿ ಬಗ್ಗುವುದು ಸ್ವಾಭಾವಿಕವೇ ತಾನೆ.

ಮಿ. ಬಾರ್ಕಿಸರು ಹೇಗಿದ್ದಾರೆಂದು ಪಿಸುಮಾತಿನಿಂದ ವಿಚಾರಿಸಿದೆನು. ಬದುಕುವುದು ಅಸಾಧ್ಯವೆಂದೂ ಸಮುದ್ರದ ಇಳಿತದ ಕಾಲದಲ್ಲಿ ಬಾರ್ಕಿಸರ ಜೀವವೂ ಹೋಗಬಹುದೆಂದು ಮಿ. ಪೆಗಟಿ ತಿಳಿಸಿದರು. ಮಿ. ಬಾರ್ಕಿಸರು ಮಲಗಿದ್ದ ಕೋಣೆಗೆ ಹೋಗಿ ನೋಡಿದೆನು. ವೇದನೆಯಿಂದ ಅವರ ಮೈ ಡೊಂಕಿತ್ತು; ಅವರು ಬಲಭಾಗಕ್ಕೆ ಬಗ್ಗಿ ಹೋಗಿದ್ದರು. ಮಂಚದ ಪಕ್ಕದಲ್ಲಿ ಅವರ ಬಲಭಾಗದಲ್ಲಿದ್ದ, ಒಂದು ಕಾಲುಮಣೆಯ ಮೇಲೊಂದು ಪೆಟ್ಟಿಗೆಯಿತ್ತು. ಈ ಪೆಟ್ಟಿಗೆಯ ಮೇಲೆ ಮಿ. ಬಾರ್ಕಿಸರು ಅವರ ಕೈಯ್ಯನ್ನಿಟ್ಟುಕೊಂಡಿದ್ದರು. ಮಿ. ಬಾರ್ಕಿಸರು ಸೌಖ್ಯವಾಗಿದ್ದಾಗ ಅವರ ತಲೆಯಡಿಯಲ್ಲಿರುತ್ತಿದ್ದ ಪೆಟ್ಟಿಗೆಯೇ ಅದೆಂದೂ ಅವರು ಖಾಯಿಲೆಯಲ್ಲಿ ಕಠಿಣಾವಸ್ಥೆಗೆ ಬರುವ ಮೊದಲೇ ಅವರ ಇಷ್ಟ ಪ್ರಕಾರವೇ ಆ ಪೆಟ್ಟಿಗೆಯನ್ನು ಅಲ್ಲಿ ಇಡಲಾಗಿತ್ತೆಂದೂ ಅಲ್ಲಿದ್ದವರು ತಿಳಿಸಿದರು. ಮಿ. ಬಾರ್ಕಿಸರಿಗೆ ಮಾತಾಡುವ ಶಕ್ತಿಯಿದ್ದಾಗ ಬಂದಿದ್ದವರೊಬ್ಬರ ಹತ್ತಿರ ಪೆಟ್ಟಿಗೆಯನ್ನು ಮುಟ್ಟಿ “ಹಳೆ ಬಟ್ಟೆ ಮಾತ್ರ” ಎಂದಂದಿದ್ದರಂತೆ ಅವರು.

ಪೆಗಟಿ ಮಿ. ಬಾರ್ಕಿಸರ ಸಮೀಪ ಹೋಗಿ, ಅವರ ಕಿವಿಯ ಹತ್ತಿರ ಮುಖವಿಟ್ಟು,
“ಮಿ. ಬಾರ್ಕಿಸ್, ಮಿ. ಕಾಪರ್ಫೀಲ್ಡ್ ಬಂದಿದ್ದಾನೆ. ನಮ್ಮ ಕಾಪರ್ಫೀಲ್ಡ್, ಮದುವೆಯನ್ನು ನಿಶ್ಚೈಸಿದ ಕಾಪರ್ಫೀಲ್ಡ್ ಬಂದಿದ್ದಾನೆ” ಅಂದಳು. ಮಿ. ಬಾರ್ಕಿಸರಿಗೆ ಪೆಗಟಿಯ ಮಾತು ಕೇಳಿಸಲಿಲ್ಲವೆಂದು ತೋರುತ್ತದೆ – ಅವರಿಂದ ಯಾವ ಉತ್ತರವೂ ಬರಲಿಲ್ಲ.
“ಸಮುದ್ರ ಇಳಿಯುವಾಗ – ರಾತ್ರಿ ಮೂರೂವರೆಗೆ ಘಂಟೆಗೆ, ಬಾರ್ಕಿಸರೂ ಇಳಿಯಬಹುದು. ಆ ಕಾಲ ತಪ್ಪಿದರೆ, ಒಮ್ಮೆ ಸಮುದ್ರ ಏರಿ ಪುನಃ ಇಳಿಯುವಾಗಲಂತೂ ಅವರು ಉಳಿಯಲಾರರು” ಅಂದರು ಮಿ. ಪೆಗಟಿ.

ಆ ರಾತ್ರಿ ನಾನು ಅಲ್ಲೇ ಉಳಿದೆನು. ರಾತ್ರಿ ಇಡೀ ನಾವು ಏನೇನೋ ಮಾತಾಡಿಕೊಂಡು ಕಾಲ ಕಳೆದೆವು. ಮಿ. ಬಾರ್ಕಿಸರು ಖಾಯಿಲದ ಸಮಯದಲ್ಲೂ ನನ್ನನ್ನು ಹೊಗಳಿ ಹೊಗಳಿ ಸಂತೋಷಿಸುತ್ತಿದ್ದರಂತೆ, ಪತ್ನಿ ಪೆಗಟಿ, ಅವರ ಪೆಟ್ಟಿಗೆ, ಮತ್ತೂ ನಾವು ಕೆಲವರು ಮಾತ್ರ ಅವರ ನೆನಪಿನಲ್ಲಿ ಉಳಿದಿದ್ದವೆಂದು ಪೆಗಟಿ ತಿಳಿಸಿದಳು.

ಪ್ರಪಂಚದ ಹೊರ ಬಾಗಿಲನ್ನು ದಾಟಿ ಹೋಗಲು ಕಾದು ನಿಂತಿದ್ದ ಮಿ. ಬಾರ್ಕಿಸರ ಅಂತಿಮ ದರ್ಶನವನ್ನು ನಾವು ಏಕಾಗ್ರತೆಯಿಂದ ಬಯಸುತ್ತಿದ್ದುದರಿಂದಲೋ ಅಥವಾ ಇನ್ನು ಯಾವ ಕಾರಣದಿಂದಲೋ ಏನೋ ರಾತ್ರಿ ಮೂರೂವರೆ ಘಂಟೆಗೆ ಮಿ. ಬಾರ್ಕಿಸರು ಕಣ್ಣು ತೆರೆದರು.

“ಬಾರ್ಕಿಸನು ನೋಡುತ್ತಾನೆ” ಅಂದಳು ಪೆಗಟಿ.
ಮಿ. ಪೆಗಟಿಯವರು ನನ್ನನ್ನು ಮುಟ್ಟಿ –
“ಮಿ. ಬಾರ್ಕಿಸನೂ ಸಮುದ್ರವೂ ಜತೆಯಲ್ಲೇ ಇಳಿಯುವರು” ಎಂದು ಅಂದರು.
“ಪ್ರಿಯ ಪತಿ ಬಾರ್ಕಿಸ್” ಎಂದು ಅಳುತ್ತಾ ಕರೆದಳು ಪೆಗಟಿ.
“ಸಿ.ಪಿ. ಬಾರ್ಕಿಸ್ – ಅತ್ಯುತ್ತಮ ಹೆಂಡತಿ” ಎಂದು ಹೆಂಡತಿಯನ್ನು ಗುರುತಿಸಿ ಮಿ. ಬಾರ್ಕಿಸರು ಹೇಳಿದರು.
“ಇತ್ತ ನೋಡು, ಮಾಸ್ಟರ್ ಡೇವಿಡ್ ಬಂದಿದ್ದಾನೆ” ಎಂದು ಹೇಳಿ ಪೆಗಟಿ ನನ್ನನ್ನು ತೋರಿಸಿದಳು. ನನ್ನ ಗುರುತು ಅವರಿಗೆ ಸಿಕ್ಕಿತು ಎಂಬುದಕ್ಕಾಗಿಯೇ ಆಗಿರಬೇಕು –
“ಬಾರ್ಕಿಸನು ತಯಾರಿದ್ದಾನೆ” ಎಂದು ಅವರು ಹೇಳಿದರು.

ಅವರು ಮಾತಾಡಿದ್ದು ಅಷ್ಟೇ. ಅದರಲ್ಲಿ ಹಿಂದಿನ ಚರಿತ್ರೆಯೆಲ್ಲ ಅಡಗಿದೆ. ಸಮುದ್ರದ ಏರಿಕೆ ದಡದಿಂದ ಇಳಿದು ಹೋಗುವುದರ ಜತೆಯಲ್ಲೇ ಅವರೂ ಇಳಿದು ನಮ್ಮೆಲ್ಲರನ್ನು ಬಿಟ್ಟು ಹೋದರು.

(ಮುಂದುವರಿಯಲಿದೆ)

No comments:

Post a Comment