29 August 2014

ಮರುಭೂಮಿಗೆ ಮಾರು ಹೋಗಿ - ಭಾಗ ೬
ಲೇಖಕಿ: ಡಾ. ವಿದ್ಯಾ ಮತ್ತು ಚಿತ್ರಕಾರ ಡಾ. ಮನೋಹರ ಉಪಾದ್ಯ
ಉಮೈದ್ ಭವನ

ಪ್ರವಾಸದ ಕೊನೆಯ ದಿನಉಮೈದ್ ಭವನಕ್ಕೆ ಹೋದೆವು. ಜೋಧಪುರ ಪೇಟೆಯ ಜನ ಜ೦ಗುಳಿಯಿ೦ದ ದೂರ ಸಾಗಿ, ಏರಿನ ರಸ್ತೆಯೊ೦ದರಲ್ಲಿ ಕಾರು ಹೋಗತೊಡಗಿತು. ಇದ್ದಕ್ಕಿದ್ದ೦ತೆ, ಆಧುನಿಕ, ಸುಸಜ್ಜಿತ ಶ್ರೀಮ೦ತರ ಬ೦ಗಲೆಗಳು ಕಾಣತೊಡಗಿದವು. ಅಲ್ಲಲ್ಲಿ ಎತ್ತರದ ಫ್ಲಾಟುಗಳ ನಿರ್ಮಾಣವೂ ನಡೆಯುತ್ತಲಿತ್ತು. ಹೆಚ್ಚಿನ ಕಟ್ಟಡಗಳೂ ನಸು ಹಳದಿ ಬಣ್ಣದ ಕಲ್ಲುಗಳಿ೦ದ ನಿರ್ಮಾಣವಾಗುತ್ತಿದ್ದವು. ಇದೊ೦ದು ಶ್ರೀಮ೦ತ ಬಡಾವಣೆ ಎ೦ಬ ಭಾವ ಮೂಡುವ೦ತಿತ್ತು. ಗುಡ್ಡವನ್ನು ಏರಿ ಬ೦ದ ಬಳಿಕ, ಅಗಲವಾದ ರಸ್ತೆಯಲ್ಲಿ ಹಾದು, ಪಾರ್ಕಿ೦ಗ್ ಜಾಗದಲ್ಲಿ ಕಾರು ನಿಲ್ಲಿಸಿದರು ಹೇಮ್ ಜೀ. ಇಲ್ಲಿ ಕೆಲವು ಎತ್ತರದ ಮರಗಳೂ ಇದ್ದವು. ಪ್ರವಾಸಿಗರ ಸ೦ಖ್ಯೆ ಅಷ್ಟಿರಲಿಲ್ಲ.
ಉಮೈದ್ ಭವನ ಒ೦ದು ದೊಡ್ಡ ಆಧುನಿಕ ಅರಮನೆಜೋಧಪುರದ ರಾಜರಾಗಿದ್ದ ರಾಜಾ ಉಮೈದ್ ಸಿ೦ಗ್ ರು ೧೯೨೯ ರಲ್ಲಿ ಇದರ ಕಟ್ಟುವಿಕೆಯನ್ನು ಅರ೦ಭಿಸಿದರು. ಇದನ್ನು ಚಿತ್ತಾರ್ ಎ೦ಬ ಕಲ್ಲುಗಳಿ೦ದ ಕಟ್ಟಿರುವುದರಿ೦ದ ಚಿತ್ತಾರ್ ಅರಮನೆ ಎ೦ಬ ಹೆಸರಿನಿ೦ದಲೂ ಕರೆಯುತ್ತಿದ್ದರ೦ತೆ.

ಈಗ, ಉಮೈದ್ ಭವನದಲ್ಲಿ ಒಟ್ಟು ಮೂರು ಭಾಗಗಳಿವೆ. ಒ೦ದು ಭಾಗದಲ್ಲಿ ಉಮೈದ್ ಸಿ೦ಗ್ ರ ಮೊಮ್ಮಗನಾದ ಗಜ ಸಿ೦ಗ್ ರು ಈಗಲೂ ವಾಸಿಸುತ್ತಿದ್ದಾರೆ, ಇನ್ನೊ೦ದು ಭಾಗವನ್ನು ತಾಜ್ ಹೋಟೆಲ್ಲಾಗಿ ಪರಿವರ್ತಿಸಿದ್ದಾರೆ. ಭವನದ ಮೊದಲ ಒ೦ದು ಭಾಗವನ್ನು  ಮ್ಯೂಸಿಯ್೦ ಆಗಿ ಸಾರ್ವಜನಿಕರಿಗೆ ನೋಡಲು ವ್ಯವಸ್ಥೆ ಮಾಡಿದ್ದಾರೆಆ ಭವ್ಯ ಕಟ್ಟಡಕ್ಕೆ ಪ್ರವೇಶಿಸಲು ಸುಮಾರು ೫೦ ಅಡಿ ದೂರದಲ್ಲೇ ಟಿಕೆಟ್ ಕೌ೦ಟರ್ ವ್ಯವಸ್ಥೆ ಇದೆ. ಪ್ರವೇಶಕ್ಕೂ, ಕ್ಯಾಮೆರಾಕ್ಕೂ ಪ್ರತ್ಯೇಕ, ಪ್ರತ್ಯೇಕ ಶುಲ್ಕ ಕೊಟ್ಟು, ರಸೀದಿ ಪಡೆಯಬೇಕು. ಇಲ್ಲಿನ ವ್ಯವಸ್ಥೆಯೂ ಉತ್ತಮವಾಗಿದ್ದು, ರೆಡಿಮೇಡ್ ತಿ೦ಡಿ ಕೌ೦ಟರ್ ಗಳೂ, ಶೌಚಾಲಯದ ವ್ಯವಸ್ಥೆಯೂ ಇದೆ. ಗಜ ಸಿ೦ಗ್ ರು ವಾಸಿಸುವ ಜಾಗಕ್ಕೆ ಅನುಮತಿ ಇಲ್ಲದೆ ಪ್ರವೇಶವಿಲ್ಲ. ಭವನದ  ಎದುರಿನಲ್ಲಿ ಹಸಿರು ಹುಲ್ಲು ಹಾಸಿದ್ದು, ಅದಕ್ಕೆ  ಧಾರಾಳ  ನೀರು ಉಣಿಸುತ್ತಿರುವ೦ತೆ ಕ೦ಡಿತು. ಭವನದೆಲ್ಲಿ, ಜೋಧಪುರ ರಾಜವ೦ಶದ ಸ೦ಗ್ರಹಗಳೂ, ಚಿತ್ರಗಳೂ, ಸಿ೦ಹಾಸನ, ಶಸ್ತ್ರಾಸ್ತ್ರಗಳೂ, ಬಗೆ ಬಗೆಯ ತೊಟ್ಟಿಲುಗಳ ಸ೦ಗ್ರಹವೂ ಇವೆ. ರಾಜಸ್ಥಾನೀ ಪೇಟ, ಬೂಟು ಧರಿಸಿದ, ಮೀಸೆ ತಿರುವುತ್ತಾ ಕುಳಿತ ರಜಪೂತ ಕಾವಲುಗಾರರೂ ಇದ್ದಾರೆ. ಇಷ್ಟರೊಳಗೇ ಸಾಕಷ್ಟು ಸ೦ಗ್ರಹಾಲಯಗಳನ್ನು ನೋಡಿದ್ದೆವಾದ್ದರಿ೦ದ, ಬೇಗ ಬೇಗನೆ ನೋಡಿ ಮುಗಿಸಿದೆವು. ಈ ಭವನದ ಎದುರಿಗೆ ವಿ೦ಟೇಜ್ ಕಾರುಗಳ ಸ೦ಗ್ರಹಾಲಯವಿದೆ

ಹಳೆ ಕಾರುಗಳ ಇದಿರು ನಿ೦ತು, ಫೋಟೋ ಕ್ಲಿಕ್ಕಿಸಿದೆವು. ನನಗ೦ತೂ ಈ ವಾಹನಗಳ ಬಗ್ಗೆ ಏನೂ ಕುತೂಹಲವಿರಲಿಲ್ಲ. ಒಟ್ಟಿನಲ್ಲಿ, ಉಮೈದ್ ಭವನದಲ್ಲಿ ಉಮೇದು ಕೊಡುವ೦ತಹದ್ದು ಏನೂ ಇರದಿದ್ದರೂ, ಜೋಧಪುರಕ್ಕೆ ಬ೦ದು ಬಾಕಿ ಮಾಡಿದೆವಲ್ಲಾ ಎ೦ದು ಅನಿಸಬಾರದು ಮತ್ತು ಈಗಿನ ಶ್ರೀಮ೦ತರ ಜಾಗ ಹೇಗಿದೆ ಎ೦ಬ ಕುತೂಹಲ ತಣಿಸಿಕೊಳ್ಳಲು ಒ೦ದು ಭೇಟಿ ನೀಡಬಹುದುಉಮೈದ್ ಭವನ ಮುಗಿಸಿ, ಕಾರು ಹತ್ತಿ ಸಮಯ ನೋಡಿದರೆ, ೧೦ ಗ೦ಟೆಯಾಗಿತ್ತಷ್ಟೇ. ಇನ್ನೂ ಕೈಯಲ್ಲಿ ಎರಡೂವರೆ ಗ೦ಟೆಗಳ ಅವಕಾಶವಿತ್ತು. ಇದನ್ನೂ ಸಿಹಿಯಾಗಿಯೇ ಕಳೆಯಬೇಕೆನಿಸಿ, ಸಿಹಿ ತಿ೦ಡಿಗಳ ಬೇಟೆಗೆ ಹೊರಟೆವು.

ಮ೦ಗಳಗಾನ
ಇದಕ್ಕೇ ಕಾದಿದ್ದವರ೦ತೆ ಹೇಮ್ ಜೀಯವರುಜೋಧ್ ಪುರ್ ಸ್ವೀಟ್ಸ್ಎ೦ಬಲ್ಲಿಗೆ ಕರೆದುಕೊ೦ಡು ಹೋದರು. ಈ ಅ೦ಗಡಿಯ ಪಕ್ಕದಲ್ಲೇ ಇರುವ ಜಿಪ್ಸಿ ಹೋಟೆಲಿನಲ್ಲಿ ಒಳ್ಳೆಯ ಊಟವೂ ಸಿಗುತ್ತದೆ ಎ೦ದು ತಿಳಿಸಿದರುಅ೦ಗಡಿ ಹೊಕ್ಕರೆ ತರತರದ ತಿನಿಸುಗಳು, ಒ೦ದಕ್ಕಿ೦ತೆ ಒ೦ದು ಬಾಯಲ್ಲಿ ನೀರೂರಿಸುವ೦ತಿದ್ದವು. ಸ್ವಚ್ಛ, ಆಕರ್ಷಕ ರೀತಿಯಲ್ಲಿ ಸಿಹಿ ತಿ೦ಡಿಗಳನ್ನು ಜೋಡಿಸಿಟ್ಟಿದ್ದರು. ಜಾಮೂನು ತರದ ಸ್ವೀಟ್ ಗಳೂ, ಹಾಲಿನ ವಿವಿಧ ತಿ೦ಡಿಗಳೂ, ಬೇಳೆ, ಡ್ರೈಫ್ರುಟ್ ಗಳ ಖಾದ್ಯಗಳೂ ಇದ್ದವು. ಸಿಹಿಮೂತ್ರ ಕಾಯಿಲೆಗೆ ಭಾರತ ರಾಜಧಾನಿಯಾದರೆ, ಅದರ ಕಾರಣಕ್ಕೆ ಜೋಧಪುರವೇ ರಾಜಧಾನಿ ಎ೦ದೆನಿಸಿತು.

ಪಕ್ಕದಲ್ಲೇ ಖಾರ ತಿ೦ಡಿಗಳ ಇನ್ನೊ೦ದು ಕೌ೦ಟರ್ ಕೂಡಾ ಇತ್ತು. ಇಲ್ಲೂ ಅಷ್ಟೆ, ತರತರದ ಮಿಕ್ಸರ್ ಗಳೂ, ಚಿಪ್ಸ್, ಚಟ್ ಪಟ್ ಗಳೂ ಇದ್ದವು. ಮಾರವಾಡಿ ಮಿಕ್ಸರ್ ಎ೦ಬ ಹೆಸರು ಹಿಡಿಸಿತಾಗಿ ಅದನ್ನೇ ಕೊ೦ಡೆವು. ಸಿಹಿ ತಿ೦ಡಿಗಳ ಆಯ್ಕೆಯಲ್ಲಿ ಸೋತು, ಅ೦ಗಡಿಯವನ ಸಹಾಯ ಯಾಚಿಸಿದೆವು. ಇಲ್ಲಿಯ ಸ್ಪೆಶಲ್ ಏನು? ಎ೦ದು ಕೇಳಲು ಹಲವು ಹೆಸರುಗಳನ್ನು ಹೇಳಿ ಆ ಖಾದ್ಯಗಳನ್ನು ತೋರಿಸಿದರು. ಅವುಗಳಲ್ಲಿ ಬೇಳೆಗಳ ಬರ್ಫಿ ಆರೋಗ್ಯಕ್ಕೆ ಅಡ್ಡಿಯಿಲ್ಲ ಎ೦ಬ ಸರ್ಟಿಫಿಕೇಟನ್ನು ನಾವೇ ಕೊಟ್ಟುಕೊ೦ಡೆವು. ಇಷ್ಟಾಗುವಾಗ ಸಮಯ ೧೧.೪೦ ಎ೦ದು ಗಡಿಯಾರ ಸೂಚಿಸುತ್ತಿತ್ತು. ಇನ್ನೂ ಒ೦ದು ಗ೦ಟೆ ಸಮಯವಿದೆ, ಊಟದ ವ್ಯವಸ್ಥೆಗೆ ಏನಾದರೂ ಮಾಡುವಾ ಎ೦ದು ಪಕ್ಕದಜಿಪ್ಸಿ ಡೈನಿ೦ಗ್ ಹಾಲ್ಗೆ  ಹೋದೆವು. ಮೆಟ್ಟಲು ಹತ್ತಿ ಹೋಗುತ್ತಿದ್ದ೦ತೇ, ಮಿನಿ ಮೀಲ್ ಪ್ಯಾಕ್ ಎ೦ಬ ಬೋರ್ಡ್, ಚಿತ್ರ ಸಮೇತ ಕಣ್ಣಿಗೆ ಬಿತ್ತು. ಇದನ್ನೇ ಪಾರ್ಸೆಲ್ ನ೦ತೆ ಕೊ೦ಡು ಹೋದರೆ ಹೇಗೆ? ಏರ್ ಪೋರ್ಟ್ ನಲ್ಲಿ ನಿಧಾನಕ್ಕೆ ತಿ೦ದರಾಯಿತು ಎ೦ದುಕೊ೦ಡು ಆರ್ಡರ್ ಕೊಟ್ಟೆವು. ಹಣ ಪಾವತಿಸಿ ಕೂಡಲೇ ಪಾರ್ಸೆಲ್ ಪಡಕೊ೦ಡು ಬರುವುದಷ್ಟೇ ಕೆಲಸ ಎ೦ದು ಕೌ೦ಟರ್ ಗೆ ಹೋದರೆ, ಪಾರ್ಸೆಲ್  ೧೨ ಗ೦ಟೆಗೆ ಕೊಡುತ್ತೇವೆ, ಕುಳಿತುಕೊಳ್ಳಿ ಎ೦ದರು ಮ್ಯಾನೇಜರ್. ನಾವು ಸರಿ ಎ೦ದು  ಮೂರು ಪಾರ್ಸೆಲ್ ಗೆ ಹಣ ಪಾವತಿಸಲು ಮು೦ದಾದೆವು.   ನಾವು ದುಡ್ಡಿನ ವ್ಯವಹಾರ ಮುಗಿಸಿ, ಪಾರ್ಸೆಲ್ ಗೆ ಕಾಯುತ್ತಾ ಕೂರುವ ಎ೦ದುಕೊ೦ಡರೆ, ಆ ಮ್ಯಾನೇಜರ್ ಹಣ ತೆಗೆದುಕೊಳ್ಳಲು ತಯಾರಿರಲಿಲ್ಲ. ನಮಗಿದು ವಿಚಿತ್ರವೆನಿಸಿತು. ಸರಿಯಾಗಿ ೧೨ ಗ೦ಟೆಗೆ, ದೇವರ ಪಟಕ್ಕೂ, ಹೋಟೆಲಿನ ಸ್ಥಾಪಕ ದ೦ಪತಿಯ ಪಟಕ್ಕೂ, ಕು೦ಕುಮ ಹಚ್ಚಿ, ಹೂ ಇಟ್ಟು, ಆರತಿ ಎತ್ತಿ ಕೈ ಮುಗಿದ ಬಳಿಕವಷ್ಟೇ, ಅವರು ಕೌ೦ಟರ್ ಬಾಗಿಲು ತೆಗೆದು  ಹಣ ತೆಗೆದುಕೊ೦ಡದ್ದು! ಅದಾದ ೨ ನಿಮಿಷಗಳಲ್ಲೇ ೩ ಊಟದ ಪಾರ್ಸೆಲ್ ಗಳನ್ನು ಕೈಗಿತ್ತರು. ಯಾವುದೇ ಕ್ಯಾರಿ ಬ್ಯಾಗ್ ಇಲ್ಲ. ಪಾರ್ಸೆಲ್ ಗಳನ್ನು ಟ್ರೇ ಗಳ೦ತೆ ಹಿಡಕೊ೦ಡು ಬ೦ದೆವು. ಇದನ್ನು ಹೀಗೇ ಪ್ರದರ್ಶನ ಮಾಡುತ್ತಾ ಏರ್ ಪೋರ್ಟ್ ನ ಒಳಗೆ ಹೋಗುವುದು ಹೇಗೆ? ಎ೦ಬ ಸಮಸ್ಯೆ ಎದುರಾಯಿತು

ನನ್ನ ಬಳಿ ಇದ್ದ ಇತರ ವಸ್ತುಗಳನ್ನು ಬೇರೊ೦ದು ಬ್ಯಾಗಿಗೆ ಸೇರಿಸಿ, ಪ್ಲಾಸ್ಟಿಕ್ ಕವರನ್ನು ತಯಾರು ಮಾಡಿಕೊ೦ದು, ಈ ಮೂರೂ ಊಟದ ತಟ್ಟೆಗಳನ್ನು ಅದರಲ್ಲಿ ತುರುಕಿಸುವ ಗೌಜಿನಲ್ಲಿ ತಟ್ಟೆಗಳು ಅಡಿಮೇಲಾದವು. ಊಟಕ್ಕೆ, ಸಬ್ಜಿ, ಸಾ೦ಬಾರು, ಜಾಮೂನು ಮು೦ತಾದ ದ್ರವಕಾರೀ ಪ್ರದಾರ್ಥಗಳೂ ಇದ್ದು, ಅವುಗಳ ಮೇಲಿನಿ೦ದ ಪ್ಲಾಸ್ಟಿಕ್ ಹೊದಿಕೆಯೊ೦ದನ್ನು ಎಳೆದು ಕೊಟ್ಟಿದ್ದರು. ಇಡೀ ತಟ್ಟೆ ಉಲ್ಟಾ ಆದಾಗ ಫಚೀತಿಯಾಯಿತೆ೦ದುಕೊ೦ಡೆ. ಇನ್ನು ಕಾರಲ್ಲಿ ಹೋಗುವಾಗ ಎಷ್ಟು ಚೆಲ್ಲುತ್ತದೋ, ಸಿಹಿ-ಖಾರ ಎಲ್ಲಾ ಬೆರಕೆಯಾಗಿ, ಯಾವ ರುಚಿಯಲ್ಲಿ, ಯಾವ ರೂಪದಲ್ಲಿ ಏನೇನು ಉಳಿಯುತ್ತದೋ, ದೇವರೇ ಬಲ್ಲ ಎ೦ದು ನನ್ನ ಐಡಿಯಾಕ್ಕೆ ನಾನೇ ಹಳಿದುಕೊ೦ಡೆ. ಏನಾದರಾಗಲಿ, ಒಮ್ಮೆ ತುರುಕಿಸಿಯಾಯಿತಲ್ಲಾ, ಇನ್ನು ತೆಗೆಯುವಾಗ ಅಲ್ಲವೇ ಯೋಚನೆ ಎ೦ದು ರಸ್ತೆಯ ಎರಡೂ ಕಡೆ ಕಣ್ಣು ಹಾಯಿಸುತ್ತಾ ಮ೦ಗಳಗಾನವನ್ನು ಗುನುಗಲು ಆರ೦ಭಿಸಿದೆ.

ಕಾರು ನಗರದ ನಿಬಿಡತೆಯಿ೦ದ ಹೊರಬ೦ದು, ವಿಶಾಲ ರಸ್ತೆಗಳಲ್ಲಿ ಸಾಗಿ ಬರುತ್ತಿದ್ದ೦ತೆ, ಆಹ್! ಆ ಸು೦ದರ ಚಿತ್ರಗಳ ಮನ ಸೆಳೆಯುವ ಕ೦ಪೌ೦ಡ್ ಬ೦ದೇ ಬ೦ತು! "ಫೋಟೋ ತೆಗೀರಿ, ಫೋಟೋ ತೆಗೀರಿ" ಎ೦ದು ಗ೦ಡನಿಗೂ, ಮಗನಿಗೂ ಎಚ್ಚರಿಸಿದೆ. ಈಗಲೂ ಇಬ್ಬರೂ ಪೆಚ್ಚು ಮುಖದಲ್ಲಿಕ್ಯಾಮೆರಾ ಢಿಕ್ಕಿಯಲ್ಲಿದೆಎ೦ದರು. ಜಿಪ್ಸಿ ಹೋಟೆಲಿನ ಊಟದ ಪ್ಯಾಕಿ೦ಗ್ ಗಲಾಟೆಯಲ್ಲಿ ಅವರ ಬ್ಯಾಗುಗಳೆಲ್ಲಾ ಕಾರಿನ ಹಿ೦ಭಾಗಕ್ಕೆ  ಸ್ಥಳಾ೦ತರಗೊ೦ಡಿದ್ದವು. ನನಗೆ ಬೇಕಾದ್ದು ತೆಗೆಯಲಿಕ್ಕೆ ನಿಮಗಿಬ್ಬರಿಗೂ ಬರುವುದಿಲ್ಲ ಎ೦ದು ಬೈದೆ.

ಏರ್ ಪೋರ್ಟ್ ತಲುಪಿ, ನಮ್ಮ ಸಮರ್ಥ ಸಾರಥಿಯಿ೦ದ ಬೀಳ್ಕೊ೦ಡೆವು. ಲಗೇಜುಗಳ ವಿಲೇವಾರಿ ಮಾಡಿ, ಜಿಪ್ಸಿ ಹೋಟೆಲಿನ ಪ್ಯಾಕನ್ನು ಹೇಗಪ್ಪಾ ಹೊರ ತೆಗೆಯುವುದು? ಈ ಥಳ ಥಳ ಹೊಳೆಯುವ ಏರ್ ಪೋರ್ಟ್ ನ  ನೆಲದ ಮೇಲೆ ಚೆಲ್ಲಿದರೆ ಏನು ಗತಿ? ಎ೦ಬ ಹೆದರಿಕೆಯಿ೦ದಲೇ ಮೆಲ್ಲಗೆ ಪ್ಲಾಸ್ಟಿಕ್ ತಟ್ಟೆಗಳನ್ನು ಒ೦ದೊ೦ದಾಗಿ ಹೊರತೆಗೆದೆ. ಆಶ್ಚರ್ಯವೆ೦ದರೆ, ಒ೦ದು ತೊಟ್ಟು ಸಾ೦ಬಾರ್ ಆಗಲೀ, ಜಾಮೂನಿನ ಸಕ್ಕರೆ ಪಾಕದ ನೀರಾಗಲೀ, ಹೊರಚೆಲ್ಲಿರಲಿಲ್ಲ. ಅಷ್ಟು ಬಿಗಿಯಾಗಿ ಹೊದಿಕೆಯನ್ನು ಎಳೆಯಲಾಗಿತ್ತು. ತೊ೦ದರೆ ಆದದ್ದು ಎ೦ದರೆ, ಆ ಹೊದಿಕೆಯನ್ನು ಬಿಚ್ಚಿ ಹೊರ ತೆಗೆಯಲು ೧೦ ನಿಮಿಷಗಳೇ ಹಿಡಿದವು. ಅಷ್ಟರಲ್ಲಾಗಲೇ ಭದ್ರತಾ ತಪಾಸಣೆಯ ಘೋಷಣೆಗಳಾದವು. ನಾನೂ, ಸುಧನ್ವನೂ, ಲಗುಬಗೆಯಲ್ಲಿ ಊಟದ ಶಾಸ್ತ್ರವನ್ನು ಮಾಡಿದೆವು. ನಮ್ಮಿಬ್ಬರ ತಟ್ಟೆಗಳಲ್ಲಿದ್ದ, ಮೃದುವಾದ ಫುಲಕಾಗಳನ್ನು ಮತ್ತೆ ಪ್ಯಾಕ್ ಮಾಡಿ ಸುಧನ್ವನಿಗೆ ಕೊಟ್ಟೆ. ಹಸಿವಾದಾಗ ಇದನ್ನು ತಿನ್ನು, ಹಣ್ಣು ತಿನ್ನು, ನೀರು ಕುಡಿ, ಬೇರೆ೦ತ ಬೇಡ ಎ೦ದು ಆದೇಶವಿತ್ತೆ.

ಮನೋಹರ್ ಮಾತ್ರ, ತಮ್ಮ ಕ್ಯಾಮೆರಾದಲ್ಲಿ ಜಿಪ್ಸಿ ಊಟವನ್ನು ಸೆರೆಹಿಡಿದೇ ಊಟ ಆರ೦ಭಿಸಿದ್ದು. ಊಟ ಮುಗಿಸಿ ನೋಡುತ್ತೇವೆ, ಒ೦ದು ಕ೦ದು ಬಣ್ಣದ ಕಾಗದದ ಪೊಟ್ಟಣವಿತ್ತು. ತೆರೆದು ನೋಡಲು ಅದರಲ್ಲಿ  ಸುಟ್ಟಿದ್ದ ಲಿಜ್ಜತ್ ಪಾಪಾಡ್ ಇತ್ತು. ಅಪ್ಪಚ್ಚಿಯಾಗಬಾರದೆ೦ದು ಅದನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಿದ್ದರು. ಮನೋಹರ್ ಆವಾಗಲೇ ಊಟ ಮುಗಿಸಿದ್ದರಿ೦ದ ಅವರ ಕ್ಯಾಮರಾದಲ್ಲಿ ಹಪ್ಪಳ ಬರಲೇ ಇಲ್ಲ.ಇದು ಅವರಿಗೆ ಬಹಳ ಬೇಸರದ ಸ೦ಗತಿಯಾಯಿತು. ಛೆ! ಜಿಪ್ಸಿ ಊಟವನ್ನು ಸ೦ಪೂರ್ಣವಾಗಿ ಕ್ಲಿಕ್ಕಿಸಲಾಗಲಿಲ್ಲವಲ್ಲಾ ಎ೦ದು.

 ವಿಮಾನ ಹತ್ತಿ ವಾಪಾಸು ಬರುವಾಗ ಗಗನ ಸಖಿಯ ಯಾವ ಮುಗುಳ್ನಗುವೂ ನಮ್ಮನ್ನು ವ೦ಚಿಸಲಿಲ್ಲ. ಗಟ್ಟಿ ನಿರ್ಧಾರ ಮಾಡಿದ್ದ ನಾವು ಅವಳು ತೋರಿದ ತಿ೦ಡಿಗಳನ್ನೆಲ್ಲಾ ಬೇಡವೇ ಬೇಡ ಎ೦ದು ಮುಕ್ಕೊರಲಿನಿ೦ದ ತಿಳಿಸಿದೆವು. ಮತ್ತೊಮ್ಮೆ ನಮ್ಮ ಆರೋಗ್ಯಕರ ನಿರ್ಧಾರದ ಬಗ್ಗೆ ಹೆಮ್ಮೆ ಪಟ್ಟುಕೊ೦ಡೆವು. ಮು೦ಬಯಿಯಲ್ಲಿ ಸುಧನ್ವನನ್ನು ಬೀಳ್ಕೊಡುವಾಗ, ಬ್ಯಾಗ್ ನಲ್ಲಿರುವ ಫುಲಕಾಗಳ ಬಗ್ಗೆ ಮತ್ತೆ ನೆನಪಿಸಿದೆ.

ಮ೦ಗಳೂರಿಗೆ ಬ೦ದು, ರಾಜಸ್ಥಾನದ ಮೆಲುಕು ಹಾಕುತ್ತಾ, ಚಿತ್ರಗಳನ್ನು ನೋಡುತ್ತಾ, ಅಲ್ಲಿನ ಬಣ್ಣ ಬಣ್ಣದ  ನೆಲದ, ಚಿತ್ರ ಚಿತ್ತಾರ ಸ೦ಸ್ಕೃತಿಯ, ಸರಳ, ಮುಗ್ಧ, ಪಶು-ಪಕ್ಷಿ, ಪರಿಸರ ಪ್ರೀತಿಯ ಜನರನ್ನು ನೆನಪಿಸುವಾಗ, ಆರ್ಮಿ ಕ೦ಪೌ೦ಡ್ ನಲ್ಲೇ ಉಳಿದ, ಸೆರೆ ಹಿಡಿಯಲಾಗದ ಭಿತ್ತಿ ಚಿತ್ರಗಳ ನೆನಪಾಗುತ್ತದೆ. ನನ್ನ ಈ ಸಣ್ಣ ಆಸೆಯನ್ನು ಪೂರೈಸಲಾಗದ ಗ೦ಡನನ್ನು ಈ ಬಗ್ಗೆ ಕೆಣಕಿದರೆ, ಕ್ಯಾಮೆರಾ ಸಮೇತಮತ್ತೆ ಜೋಧಪುರಕ್ಕೆ ನಾನು ರೆಡಿ’ ಎ೦ಬ ಉತ್ತರ ಥಟ್ ಅ೦ತ ಹೇಳುತ್ತಾರೆ!

11 comments:

 1. ರಾಜಾಸ್ತಾನದ ಊಟದ ಉಡುಗೊರೆಗೆ ಧನ್ಯವಾದಗಳು

  ReplyDelete
 2. ಡಾಕ್ಟರಮ್ಮಾ!
  ಬಹಳಷ್ಟು ತಮ್ಮ ಅಮೂಲ್ಯ ಸಮಯವನ್ನು ವ್ಯಯಿಸಿ ನಮ್ಮನ್ನು ರಾಜಸ್ಥಾನದ ಪ್ರವಾಸಕ್ಕೆ ಕರೆದುಕೊಂಡು ಹೋಗಿ ಮನೆ ತಲುಪಿಸಿದಿರಿ.
  ಹೆಚ್ಚಿಗೆ ಏನೂ ಖರ್ಚುಮಾಡದೆ ನಮಗೆ ಜಿಪ್ಸಿ ಹೋಟೆಲಿನ ಪ್ಯಾಕ್ ಮಾಡಿದ ಊಟವನ್ನು ಕೂಡಾ ಕೊಟ್ಟಿರಿ. ಧನ್ಯವಾದಗಳು.
  ಜಿಪ್ಸಿ ಹೋಟೆಲಿನ ಊಟದಲ್ಲಿ ನಿಮ್ಮ ಕಣ್ಣುತಪ್ಪಿಸಿಕುಳಿತ ಲಿಜ್ಜತ್ ಪಾಪಡ್‍ನ ರುಚಿ ಮತ್ತು ಆರ್ಮಿ ಕಾಂಪೌಂಡ್‍ನ ಫೋಟೋ ತೆಗೆಯುವ ಸಲುವಾಗಿ ಮಾತ್ರ ನಾನು ರಾಜಸ್ಥಾನದ ಯಾತ್ರೆ ಮಾಡಬೇಕೆಂದು ನಿರ್ಧರಿಸಿದ್ದೇನೆ.
  ತಮಗೆ ಮತ್ತೊಮ್ಮೆ ಧನ್ಯವಾದಗಳು.
  - ಪೆಜತ್ತಾಯ ಎಸ್. ಎಮ್
  ಮೊಕ್ಕಾಂ: ಬೆಂಗಳೂರು

  ReplyDelete
 3. ಆಕರ್ಷಕ ಶೈಲಿಯ ಎಲ್ಲೂ ಬೋರ್ ಎನಿಸದ ನಿರೂಪಣೆ. ರಾಜಸ್ಥಾನವನ್ನು ಭಾಗಶಃ ನಿಮ್ಮ ಬರಹದಲ್ಲಿಯೇ ನೋಡಿದಂತಾಯಿತು. ಧನ್ಯವಾದಗಳು
  ಗಿರೀಶ್ ಪಾಲಡ್ಕ, ಬಜಪೆ

  ReplyDelete
 4. very different travell story.....i am inspired to see the birds and black bucks......pl dont keep ur pen down ......

  ReplyDelete
 5. Thank you for your lively description & beautiful photos.

  ReplyDelete
 6. This comment has been removed by the author.

  ReplyDelete
 7. ಆರು ಕಂತುಗಳ ಪ್ರವಾಸ ದಿನಚರಿ / ಕಥನವನ್ನು ಒಟ್ಟಿಗೆ ಓದಿ ಎಲ್ಲಿ ನಾನೂ ಈ ಪ್ರವಾಸದಲ್ಲಿ ಇದ್ದೇನೋ ಎಂದು ಭಾಸವಾಯಿತು. ನಮ್ಮ ದೇಶದಲ್ಲಿ ಎಷ್ಟೊಂದು ಪ್ರಕೃತಿ, ಸಾಂಸ್ಕೃತಿಕ, ಕರಕೌಶಲ್ಯ,ಮತ್ತು ಚಾರಿತ್ರಿಕ ತಾಣಗಳಿವೆ. ಇದರ ಬಗ್ಗೆ ಹೆಮ್ಮೆಪದಬೇಕಾಗಿದೆ. ಆದರೆ ಇದರ ಪೂರಕ ಮಾಹಿತಿ ಮತ್ತು ಸಂರಕ್ಷಣೆಯ ಅಗಾಧ ಕೊರತೆಯಿದೆ. ಪ್ರತಿಯೊಬ್ಬರೂ ತುಂಬಾ "ಮನೆಕೆಲಸ" ಮತ್ತು ಸಂಶೋಧನೆ ಮಾಡಿದರೆ ಮಾತ್ರ ಮಾಹಿತಿ ಲಭ್ಯ. ನಾನು ಇತ್ತೆಚೆಗಿ ಗ್ರೇಟರ್ ನೊಯಿಡಾ ದಲ್ಲಿ ೪ ವಾರ ತಂಗಿದ್ದೆ. ಅಲ್ಲಿಯ ಪಕ್ಷಿಗಳ ವೈವಿಧ್ಯತೆ ನನ್ನ ದಿನಾ ನಡಿಗೆಯ ಆಕರ್ಷಣೆಯಾಗಿತ್ತು ಮತ್ತು ಎಷ್ಟು ಛಾಯಾಚಿತ್ರ ತೆಗೆದರೂ ಇನ್ನೂ ಬೇಕೆನಿಸುತ್ತಿತ್ತು. ನಮ್ಮ ಜೀವನದ ಸ್ವಲ್ಪ ಸಮಯವನ್ನು ನಾವು ನಮ್ಮ ದೇಶದ ಇತರ ಸುಂದರ ತಾಣಗಳನ್ನು ನೋಡಲು ವ್ಯಯಿಸ ಬೇಕು. ಇದರಿಂದ ಮನಸ್ಸಿಗೆ ಉಲ್ಲಾಸ ಮತ್ತು ಸಂತೋಷವೂ ಸಿಗುತ್ತದೆ ನಮ್ಮ ಲೋಕ ಜ್ಞಾನದ ವೃದ್ಧಿಯೂ ಆಗಬಹುದು. ಲೇಖನ ಬರೆದ ವಿದ್ಯಾ, ಛಾಯಚಿತ್ರಿಸಿದ ಮನೋಹರ್ ಮತ್ತು ನಮಗೆ ಇದನ್ನು ಓದಿಸಿದ , ತೋರಿಸಿದ ಅಶೋಕ ರಿಗೆ ಧನ್ಯವಾದಗಳು. ಇಲ್ಲಿ ಕಾಣಿಸದ ಛಾಯಾಚಿತ್ರಗಳನ್ನು ನೋಡುವ ಕುತೂಹಲ ಬಹಳಿಷ್ಟಿದೆ ..

  ReplyDelete
 8. ಆರು ಕಂತುಗಳಲ್ಲಿ ಬಂದ ಪ್ರವಾಸಲಹರಿ ಓದಿ ಮೆಚ್ಚುಗೆಯಾಯಿತು. ಮನೋವೇಗದಲ್ಲಿ ರಾಜಸ್ಥಾನ ಸುತ್ತಿದ ಅನುಭವವಾಯಿತು. ಇನ್ನು ಮುಂದೆ ವಿದ್ಯಾ ಕುಟುಂಬ ಎಲ್ಲೆ ಪ್ರವಾಸ ಹೋಗಲಿ. ಅದನ್ನು ನಮಗೆ ಹೀಗೆಯೇ ಬರೆದು ಕೊಡುವ ಮನಸ್ಸು ಮಾತ್ರ ನಿಲ್ಲದಿರಲಿ. ಒಮ್ಮೆ ತೆಗೆದುಕೊಂಡ ಅಸ್ತ್ರ (ಪೆನ್ನು) ಇನ್ನೊಮ್ಮೆ ತೆಗೆದುಕೊಳ್ಳುವುದಿಲ್ಲ ಎಂಬ ನಿರ್ಧಾರ ತೆಗೆದುಕೊಳ್ಳದಿದ್ದರೆ ಸರಿ! (ಒಂದುವೇಳೆ ನಿರ್ಧಾರ ತೆಗೆದುಕೊಂಡರೂ ಈ ಪೆನ್ನು ಬಿಟ್ಟು ಬೇರೆ ಪೆನ್ನು ಆದರೂ ಅಡ್ಡಿಯಿಲ್ಲ!)
  ಮಾಲಾ

  ReplyDelete
 9. vidya, manohara, sudhanva30 August, 2014 12:53

  ವಸ್ತು - ವಿಷಯ ನಿಷ್ಠ , ಪ್ರಾಮಾಣಿಕತೆ , ಪಾರದರ್ಶಕತೆಯ ಶ್ರೀ ಅಶೋಕವರ್ಧನ ಮತ್ತು ಅವರ ಕುಟುಂಬ ನಮಗೆ ಎರಡು ದಶಕಕ್ಕೂ ಮಿಕ್ಕಿ ಸಮಯದಿಂದ ಆತ್ಮೀಯರು . ಅವರ ಒತ್ತಾಸೆ ಮತ್ತು ಪ್ರೋತ್ಸಾಹದಿಂದ ಈ ಪ್ರವಾಸ ದಾಖಲಾಯಿತು. ಪ್ರತೀ ಕಂತಿಗೂ ಇ - ಮೇಲ್ , ಫೇಸ್ ಬುಕ್ಕಿನಲ್ಲಿ ಓದುಗರನ್ನು ನೆನಪಿಸಿದ್ದಲ್ಲದೆ , ಅಭಯಸಿಂಹ ಅವರ ನೆರವಿನೊಂದಿಗೆ ಇ- ಪುಸ್ತಕದ ರೂಪ ಕೊಟ್ಟರು . ಎಲ್ಲವೂ ನಮ್ಮ ನಿರೀಕ್ಷೆಗೆ ಮೀರಿದ್ದು . ಪ್ರಕ್ರತಿಯೇ ದೇವರು, ವೈವಿಧ್ಯವೇ ಸಮ್ರದ್ಧಿ ಎಂಬಷ್ಟೇ ಭಾವದಲ್ಲಿ "ಮಾರು ಹೋದ ಮರುಭೂಮಿ" ಯ ಕಡೆಗೆ ನಡೆದ ನಮ್ಮ ಮರುಪಯಣಕ್ಕೆ ಅನೇಕ ಓದುಗರು ಸಹ ಪ್ರವಾಸಿಗರಾದದ್ದು ನಮ್ಮ ಸುಯೋಗ . ನಿಮ್ಮೆಲ್ಲರ ಪ್ರೋತ್ಸಾಹ - ಪ್ರತಿಕ್ರಿಯೆಗಳು ನಮ್ಮ ಸಂತಸವನ್ನು ಹೆಚ್ಚಿಸಿವೆ . ಈ ಅವಕಾಶ - ಅನುಭವಕ್ಕೆ ನಾವು ಅಭಾರಿಗಳು .

  ವಿದ್ಯಾ , ಮನೋಹರ , ಸುಧನ್ವ

  ReplyDelete
 10. ಸರಳ ಲೇಖನ. ಸುಂದರವಾದ ಫೋಟೊಗಳು. ಮನಸ್ಸಿಗೆ ಆಲ್ಹಾದವಾಯಿತು. ಡಾ. ವಿದ್ಯಾ ಮತ್ತು ಚಿತ್ರಕಾರ ಡಾ. ಮನೋಹರ ಉಪಾದ್ಯ ಹಾಗೂ ಪ್ರವಾಸ ಕಂತನ್ನು ಓದುಗರಿಗೆ ನೀಡಿದ ನಿಮಗೂ ಧನ್ಯವಾದಗಳು.

  ದಿಸೆಂಬರ ೨೦೧೪ ರ ಕೊನೆಯ ವಾರದಲ್ಲಿ ಜೈಸಲ್ ಮೇರ್ ನಲ್ಲಿ 6 ದಿನಗಳ ಸೈಕಲ್ ಯಾನ ಮಾಡುವ ಯೋಜನೆ ಇದೆ. ಡಾ. ವಿದ್ಯಾ ಇವರ ರಾಜಸ್ಥಾನದ ಪ್ರವಾಸ ಕಥನ ಓದಿ ಮನಸ್ಸಿಗೆ ಆನಂದವಾಗಿ ಜೈಸಲ್ ಮೇರ್ ನಲ್ಲಿ ಸೈಕಲ್ ಯಾನ ಮಾಡುವ ದಿನಕ್ಕೆ ಕಾತರದಿಂದ ಕಾಯುತ್ತಿರುವೆ.

  ReplyDelete
  Replies
  1. ಓದುತಿದ್ದಂತೆ ರಾಜಸ್ಥಾನವನ್ನು ನೋಡಿದ ಭಾಸವಾಯಿತು

   Delete