ಅಧ್ಯಾಯ ಹದಿಮೂರು
[ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ.
ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಹದಿನೈದನೇ ಕಂತು
ಡೋವರಿನವರೆಗೂ
ಓಡುವುದೇ ಅಗತ್ಯವೆಂದು ಬಂಡಿಯನ್ನು ಹಿಂಬಾಲಿಸಿ ಓಡುತ್ತಿದ್ದಾಗ ನಾನು ಗ್ರಹಿಸಿದ್ದರೂ ಓಡುತ್ತಾ ಬಚ್ಚಿದ
ಮೇಲೆ ಹಾಗೆ ಓಡುವುದರ ಅಸಾಧ್ಯತೆ ತಿಳಿದುಬಂತು. ಕೊನೆಗೆ ಶ್ರಮಪರಿಹಾರಕ್ಕಾಗಿ ರಸ್ತೆ ಕರೆಯ ಒಂದು ಕಟ್ಟಡದ
ಮೆಟ್ಟಿಲಲ್ಲಿ ಕುಳಿತುಕೊಂಡೆನು. ನನ್ನೆದುರೇ ಒಂದು ನೀರಿನ ಕಾರಂಜಿಯಲ್ಲಿ ಮೇಲಕ್ಕೆ ಹಾರಿ, ಹರಡಿ ಕೆಳಬೀಳುತ್ತಲೂ
ಅದರ ಜತೆಯಲ್ಲೇ ಒಂದು ನಿಂಬೆಹಣ್ಣಿನಂತಿದ್ದ ಚಂಡು ನೀರು ಬುಗ್ಗೆಯ ಶಿಖರದಲ್ಲಿ ಸದಾ ನಲಿಯುತ್ತಿದ್ದುದನ್ನು
ನೋಡುತ್ತಾ ಸ್ವಲ್ಪ ದಣಿವು ಆರಿಸಿಕೊಂಡೆನು. ಆಗ ರಾತ್ರಿಯಾಗಿತ್ತು. ಆದರೆ ಹವಾಮಾನ ಒಳ್ಳೆಯದಿದ್ದುದರಿಂದ
ನಾನು ಕೆಂಟ್ ರಸ್ತೆಯಲ್ಲೇ ನಡೆದು ಮುಂದುವರಿಸಿದೆನು. ಇಷ್ಟರಲ್ಲೇ ನನ್ನಲ್ಲಿ ಏನೂ ಹಣವಿಲ್ಲವೆಂಬ ಜ್ಞಾಪಕ
ಬಂದು, ನನ್ನ ಅಂಗಿ ಬಟ್ಟೆಗಳನ್ನಾದರೂ ಸ್ವಲ್ಪ ಮಟ್ಟಿಗೆ ಮಾರಿ ಹಣ ಮಾಡಬೇಕೆಂದು ನಿಶ್ಚೈಸಿದೆನು. ಮಿ.
ಮೈಕಾಬರರ ಸಹವಾಸದಿಂದ ಹಳೆಬಟ್ಟೆ ಮಾರಾಟ ಮಾಡುವ ಅನುಭವ ನನಗಿದ್ದುದರಿಂದ, ನನ್ನ ವೇಸ್ಟ್ ಕೋಟನ್ನು
ತೆಗೆದು ಕೈಯಲ್ಲಿ ಹಿಡಿದುಕೊಂಡು ರಸ್ತೆ ಕರೆಯ ಹಳೆಬಟ್ಟೆ ವ್ಯಾಪಾರ ನಡೆಸುವ ಅಂಗಡಿಗಳಿವೆಯೋ ಎಂದು
ಹುಡುಕುತ್ತಾ ಹೋದೆನು.
ಕೊನೆಗೆ
ಮಿ. ಡೊಲೋಬಿ ಎಂಬವರ ಹಳೆಬಟ್ಟೆ ವ್ಯಾಪಾರದ ಅಂಗಡಿಯನ್ನು ಕಂಡು, ಅವರಲ್ಲಿಗೆ ಹೋಗಿ, `ವೆಸ್ಟ್ ಕೋಟ’ನ್ನು
ಮಾರಲು ಬಂದದ್ದಾಗಿ ಅವರಿಗೆ ತಿಳಿಸಿದೆನು. ಅವರು ನನ್ನಂಗಿಯನ್ನು ಹಿಡಿದು ನೋಡಿ –
“ಎಷ್ಟು
ದುಡ್ದು ಕೊಡಬೇಕು?” ಎಂದು ಕೇಳಿದರು.
“ನಿಮಗೆ
ಗೊತ್ತಿದೆಯಲ್ಲ, ಸರ್” ಅಂದೆ ನಾನು.
“ಮಾರುವವನೂ
ಕೊಳ್ಳುವವನೂ ಒಬ್ಬನೇ ಆಗಲಾರ – ನೀನೇ ಹೇಳು” ಎಂದು ಅವರೆಂದರು.
“ಹದಿನೆಂಟು...” ಎಂದು ನಾನು ಹದಿನೆಂಟು ಪೆನ್ಸು ಕ್ರಯ ಹೇಳುವ ಮೊದಲು ಅವರಂದರು –
“ಹದಿನೆಂಟು?
ಒಂಬತ್ತು ಪೆನ್ಸ್ ಕೊಟ್ಟ ಪಕ್ಷಕ್ಕೇ ನನ್ನ ಕುಟುಂಬದ ಒಪ್ಪತ್ತಿನ ಊಟ ನಿಲ್ಲುತ್ತೆ – ಅದು ಅಸಾಧ್ಯ!”
ನನ್ನ ನಿರ್ದಾಕ್ಷಿಣ್ಯವಾದ ಕ್ರಯ ಕೊಟ್ಟು ಅವರ ಕುಟುಂಬ ಉಪವಾಸ
ಬೀಳುವ ಸಂಭವ ಗ್ರಹಿಸಿ ನನಗೆ ಸ್ವಲ್ಪ ನಾಚಿಕೆಯಾಯಿತು. ಆದರೆ ನನ್ನ ಹಿತವನ್ನು ಮಾತ್ರ ಗ್ರಹಿಸಿ ಒಂಬತ್ತು
ಪೆನ್ಸಿಗಿಂತ ಕಡಿಮೆ ಕ್ರಯಕ್ಕೆ ಕೊಡಲು ತಯಾರಿಲ್ಲವೆಂದು ನಾನು ಕಠಿಣವಾಗಿ ತಿಳಿಸಿಯೇ ಬಿಟ್ಟೆ. ಕೊನೆಗೆ
ಬಹಳ ದುಃಖಪಟ್ಟುಕೊಂಡು ಸ್ವಲ್ಪ ಸ್ವಲ್ಪವಾಗಿ ಒಂಬತ್ತು ಪೆನ್ಸನ್ನು ಮಿ. ಡೊಲೋಬಿಯವರು ಕೊಟ್ಟರು. ಅಷ್ಟನ್ನು
ತೆಗೆದುಕೊಂಡು ನಾನು ನನ್ನ ಪ್ರಯಾಣದಲ್ಲಿ ಮುಂದುವರಿದೆನು.
ನಾನು
ನಡೆಯಬೇಕಾಗಿದ್ದ ದೂರವೆಷ್ಟು, ಅನುಭವಿಸಬೇಕಾಗ ಬಹುದಾದ ಕಷ್ಟಗಳೇನೇನಿರಬಹುದು, ಎಂಬ ಯಾವ ವಿಷಯವೂ ನನಗೆ
ಗೊತ್ತಿರಲಿಲ್ಲ. ಆದರೂ ಆವರೆಗಿನ ನನ್ನ ಕಷ್ಟ ಪರಂಪರೆಗಳ ಅನುಭವದ ಅಳತೆಯಿಂದ ಮುಂದೆ ಎಂಥೆಂಥ ಭಯಂಕರ
ಪ್ರಸಂಗಗಳು ಬರಬಹುದೋ ಎಂದು ಹೆದರಿಕೊಂಡೇ ದಾರಿ ನಡೆದೆ. ಕೊನೆಗೆ ನಾನು ಹಿಂದೆ ಹೋಗಿದ್ದ ಸೆಲಂ ಶಾಲೆಯ
ವಠಾರ ಬಂತು. ಆ ಶಾಲಾ ಕಾಂಪೌಂಡಿನ ಹೊರಬದಿಯಲ್ಲಿದ್ದ ಒಂದು ಹುಲ್ಲು ಮುಂಡದ ಮರೆಯಲ್ಲಿ ಅಂದಿನ ರಾತ್ರಿ
ನಿದ್ರಿಸಿದೆನು. ಮನೆಮಾರೆಲ್ಲ ದಾರಿಹೋಕ ದುಷ್ಟರಿಗೆ ಅಂಜಿ ಬಾಗಿಲು ಬಂದೋಬಸ್ತು ಮಾಡಿದನಂತರದ ಮಧ್ಯರಾತ್ರಿ
ಕಾಲದಲ್ಲಿ – ನಮಗರಿಯದ ಕಾರಣಗಳಿಗಾಗಿ ನಾಯಿಗಳು ರಸ್ತೆ ಕಡೆ ನೋಡಿ, ಸಿಟ್ಟುಗೊಂಡು ಎಡೆಬಿಡದೆ ಬೊಗಳುವ
ಶಬ್ದಗಳ ಮಧ್ಯೆ – ನಾನು ಪಾಠ ಕಲಿತು ಎಲ್ಲಾ ಬಾಲಕರಂತೆ ಊಟ ಆಟ - ಪಾಟಗಳಲ್ಲಿ ದಿನ ಕಳೆದಿದ್ದ ಶಾಲಾ
ವಠಾರದ ಹೊರಬದಿ – ಮನೆಮಾರಿಲ್ಲದ ಪರಕೀಯ ಪೋಲಿಯೊಬ್ಬನಂತೆ ಆ ಶಾಲಾ ಬಾಲಕರಿಂದ ದೂರದಲ್ಲಿ, ಅಂದು ಏಕಾಂಗಿಯಂತೆ
ಮಲಗಿದ್ದೆ. ಆ ದಿನದ ದೇಹ ಶ್ರಮದ ಕಾರಣವಾಗಿ ರಾತ್ರಿ
ನಿದ್ರೆ ಚೆನ್ನಾಗಿ ಬಂದಿತ್ತು. ಹೀಗಾಗಿ ಬೆಳಗ್ಗಿನ ಬಿಸಿಲೂ ಸೆಲಂ ಶಾಲೆಯ ಘಂಟಾನಾದವೂ ನನ್ನನ್ನು ಎಬ್ಬಿಸುವವರೆಗೂ
ನಿದ್ರಿಸುತ್ತಿದ್ದೆ. ನಾನೆದ್ದ ಕೂಡಲೆ ನನ್ನ ದಾರಿ ಹಿಡಿದು ನಡೆಯ ತೊಡಗಿದೆನು.
ಆ ದಿನ
ಆದಿತ್ಯವಾರವಾಗಿತ್ತು. ಇಗರ್ಜಿ ಘಂಟೆಗಳ ಸ್ವರ ಇಂಪಾಗಿ ಕೇಳಿಸುತ್ತಿತ್ತು. ನಾನು ಸೆಲಂ ಶಾಲೆಯಲ್ಲಿ
ದಿನ ಕಳೆದಾಗಿನ ಆದಿತ್ಯವಾರ ದಿನದ ಬೆಳಗ್ಗಿನ ಸಂತೋಷದ ಸವಿನೆನಪುಗಳನ್ನು ಸ್ಮರಿಸುತ್ತಾ ಮಾರ್ಗಸಾಗಿದೆನು.
ದುಸ್ತು ಮಾಡಿಕೊಂಡು ಶಿಸ್ತಿನಿಂದ ನಡೆದುಹೋಗುತ್ತಿದ್ದ ಪ್ರಸನ್ನ ಮುಖಗಳು ನನ್ನೆದುರೇ ಇಗರ್ಜಿಗಳಿಗೆ
ಆ ಬೆಳಗ್ಗೆ ಹೋಗುತ್ತಿದ್ದರು. ನಾನು ಮಾತ್ರ ನನ್ನ ಯಾತ್ರಾ ಪಥದಲ್ಲಿ ಬಿಡದೇ ಮುಂದೆ ಸಾಗಿದೆನು. ಆ
ದಿನ ಸಂಜೆಗೆ ಇಪ್ಪತ್ಮೂರು ಮೈಲು ನಡೆದು ಚೇತೇಮಿಗೆ ತಲಪಿದೆನು.
ಚೇತೇಮಿಗೆ
ತಲಪುವಾಗ ಬೆಳಗ್ಗೆ ಕಂಡಿದ್ದಂತೆಯೇ ಇಗರ್ಜಿಗಳಿಂದ ಸಂತೋಷಚಿತ್ತರಾಗಿ ವಾಪಸ್ಸು ಬರುತ್ತಿದ್ದ ಅನೇಕರನ್ನು
ಕಂಡೆ. ಚೇತೇಮಿನ ನದಿಯೂ ನದಿಯಲ್ಲಿದ್ದ ಹಡಗುಗಳನ್ನೂ ಕೆಲವು ದೋಣಿಗಳನ್ನೂ ನೋಡುತ್ತಾ ಸೇತುವೆಗಳನ್ನೂ
ಕಾಲುವೆಗಳನ್ನು ದಾಟುತ್ತಾ ಈ ಪಟ್ಟಣದಲ್ಲೇ ಮುಂದುವರಿದೆನು. ಕೊನೆಗೆ ಆ ಪಟ್ಟಣದ ಮತ್ತೊಂದು ಗಡಿಯಲ್ಲಿ,
ಜನಸ್ತೋಮ, ಮನೆ ಮಠಗಳಿಂದ ದೂರದಲ್ಲಿದ್ದ, ಸೈನಿಕರ ಕವಾಯಿತು ಮೈದಾನಕ್ಕೆ ತಲಪಿದೆನು. ಅಲ್ಲಿ ಸೈನಿಕರ
ಅಭ್ಯಾಸಕ್ಕಾಗಿ ನಿರ್ಮಿಸಿದ್ದ ಒಂದು ಎತ್ತರದ ಒಡ್ಡಿನ ಹೊರಬದಿ ನಾನು ಆ ದಿನ ರಾತ್ರಿ ನಿದ್ರಿಸಿದೆನು.
ನನಗೆ
ಎಚ್ಚರವಾದಾಗ ಪ್ರಥಮವಾಗಿ ಕೇಳಿದ್ದು ತುತ್ತೂರಿ ತಮಟೆಗಳ ಶಬ್ದ. ಆ ಶಬ್ದ ಬಂದ ಕಡೆ ನಡೆಯುತ್ತಿದ್ದ
ಸೈನಿಕರ ಕವಾಯತನ್ನೂ ಸ್ವಲ್ಪ ಸಮಯ ನೋಡುತ್ತಿದ್ದೆನು. ಅನಂತರ ಎದ್ದು ಮುಂದೆ ಸಾಗಲೆಂದು ಹೆಜ್ಜೆಯಿಡುವಾಗ
ನನ್ನ ಕಾಲುಗಳು ಬಾತಿದ್ದುವೆಂದು ತಿಳಿಯಿತು. ನಡೆಯ ತೊಡಗಿದಾಗ ಬಹುವಾಗಿ ನೋಯತೊಡಗಿದುವು. ಆದರೂ ನನ್ನ
ನಿರ್ಧಾರಶಕ್ತಿಯಿಂದಲೇ ನಡೆದು ಮುಂದುವರಿಯತೊಡಗಿದೆನು. ಈ ದಿನ ನನ್ನ ಆಹಾರಕ್ಕಾಗಿ ನನ್ನ ಹೊರ ಅಂಗಿಯನ್ನು
ಮಾರಿದೆ. ಈ ದಿನದ ಬಟ್ಟೇ ಮಾರಾಟ ಸ್ವಲ್ಪ ಕಷ್ಟತರದ್ದಾಗಿತ್ತು.
ಅಂಗಡಿಯವನಿಗೆ ಖಾಸಶ್ವಾಸವೋ – ಗೂರಲೋ – ಏನೋ ಒಂದು ರೋಗವಿದ್ದಿರಬೇಕು. ಅವನು ನನ್ನನ್ನು ಹಿಂಸಿಸುತ್ತಾ,
ಕೊಡಬೇಕಾಗಿದ್ದ ಹಣಕ್ಕಿಂತ ಬಹು ಕಡಿಮೆ ಕೊಟ್ಟು ನನ್ನನ್ನು ಗದರಿಸಿ ಓಡಿಸಿದನು. ಅಂದು ರಾತ್ರಿ ರಸ್ತೆ
ಕರೆಯಲ್ಲಿದ್ದ ಒಂದು ಹುಲ್ಲು ಮುಂಡದ ಆಶ್ರಯದಲ್ಲಿ ಮಲಗಿ ನಿದ್ರಿಸಿದೆನು.
ಮರುದಿನ
ಏಳುವಾಗಲಂತೂ ನನ್ನ ಕಾಲುಗಳು ಮತ್ತಷ್ಟು ಬಾತುಕೊಂಡಿದ್ದುವು. ಆದರೂ ನನ್ನ ತಾಯಿಯ ನೆನಪೂ ಅತ್ತೆಯ ಆಶ್ರಯದ
ಆಸೆಯೂ ನನ್ನ ನಿರ್ಧಾರದ ಶಕ್ತಿಯೂ ನನ್ನನ್ನು ಶಕ್ತಿಕೊಟ್ಟು ಮುಂದೆ ಸಾಗಿಸಿದುವು.
ದಾರಿಯಲ್ಲೊಬ್ಬ
ಹೆಂಡಕುಡುಕನು ನನ್ನನ್ನು ಹೆದರಿಸಿ, ಬೈದು, ಚಳಿಗಾಗಿ ನನ್ನ ಕುತ್ತಿಗೆಗೆ ಸುತ್ತಿಕೊಂಡಿದ್ದ ಶಾಲು
ತನ್ನದೆಂದು ಎಳೆದು ತೆಗೆದುಕೊಂಡನು. ಅವನು ಆ ರೀತಿ ಮಾಡಿದ್ದು ತಪ್ಪೆಂದು ಅಂದುಕೊಂಡು ನನ್ನ ಶಾಲನ್ನು
ವಾಪಾಸು ಕೊಡಿಸಲು ಪ್ರಯತ್ನಿಸಿದ ಅವನ ಪತ್ನಿಗೆ ಆ ಹೆಂಡಕುಡುಕನು ಹೊಡೆದುದರಲ್ಲಿ ಅವಳ ಮೂಗಿನಿಂದ ರಕ್ತ
ಸುರಿಯತೊಡಗಿತು. ಇದನ್ನೆಲ್ಲ ಕಂಡು ನಾನು ಶಾಲನ್ನು ಬಿಟ್ಟು ಅಲ್ಲಿಂದ ಓಡುತ್ತಾ ದೂರ ಸಾಗಿದೆನು. ಈ
ಕಾರಣದಿಂದಾಗಿ ಕೊನೆಗೆ ದಾರಿಯಲ್ಲಿ ತುಂಬ ಜನ ಬರುವುದನ್ನು ಕಂಡಾಗಲೆಲ್ಲಾ ನಾನು ಅಡಗಿಯೇ ಮುಂದೆ ಸಾಗುತ್ತಿದ್ದೆನು.
ದಾರಿ
ನಡೆಯುತ್ತಿದ್ದಾಗ ಏನೇನೋ ಭಯಂಕರ ಆಲೋಚನೆಗಳು ನನ್ನ ಮನಸ್ಸಿನಲ್ಲಿ ಏಳುತ್ತಿದ್ದುವು. ಕೈಯಲ್ಲಿ ಕಾಸಿಲ್ಲದೆ,
ಮಾರಲು ನನ್ನದಾಗಿ ಏನೂ ಸಾಮಾನಿಲ್ಲದೆ, ಕೊನೆಗೆ ಆಹಾರವಿಲ್ಲದೆ ಸತ್ತಾಗ ನನ್ನನ್ನು ಪೋಲೀಸರು ದಫನ್
ಮಾಡಬೇಕಾಗಬಹುದೇ ಎಂಬಷ್ಟರವರೆಗೂ ಆಲೋಚಿಸಿ ಹೆದರುತ್ತಿದ್ದೆ. ಆದರೆ, ಎಂಥ ಮಾನಸಿಕ ಅಂಧಕಾರದಲ್ಲೂ ನನ್ನ
ಮಾತೆಯ ಸೌಮ್ಯಮೂರ್ತಿ ಪ್ರಭೆಯಾಗಿ ತೋರಿ, ನನ್ನ ದೃಢ ನಿರ್ಧಾರಕ್ಕೆ ಮತ್ತಷ್ಟು ಶಕ್ತಿ ಕೊಟ್ಟು, ನನ್ನನ್ನು
ಮುಂದೆ ಸಾಗಿಸುತ್ತಿತ್ತು. ಹೀಗೆಲ್ಲಾ ಮುಂದುವರಿದು ಕೊನೆಗೆ ಡೋವರ್ ಪಟ್ಟಣಕ್ಕೇ ತಲುಪಿದೆನು.
ಅಲ್ಲಿ
ದೊಡ್ಡ ದೊಡ್ಡ ಕಟ್ಟಡಗಳನ್ನೂ ಗೋಪುರಗಳನ್ನೂ ತೋಪುಗಳನ್ನೂ ಮೈದಾನಗಳನ್ನೂ ದಾಟುತ್ತಾ ಸಾಗಿದೆನು. ಕೆಲವು
ಕಡೆಗಳಲ್ಲಿ ಹರಕು ಮುರುಕು ಮನೆಗಳೂ ಚಿಲ್ಲರೆ ಅಂಗಡಿಗಳೂ ಹಾಳುಬಿದ್ದ ಕಟ್ಟಡಗಳೂ ಇದ್ದುವು. ಡೋವರಿನ
ಪರಿಚಯವಿಲ್ಲದಿದ್ದ ನನಗೆ ಡೋವರಿನಲ್ಲೇ ಇದ್ದಾಗಲೂ ಅತ್ತೆಯ ಮನೆಯನ್ನು ಕುರಿತಾದ ವಿಷಯದಲ್ಲಿ ಲಂಡನ್ನಿನಲ್ಲಿ
ಇದ್ದಷ್ಟೇ ಪ್ರಯೋಜನವಿತ್ತೆಂದು ದುಃಖಪಟ್ಟೆ.
ಅತ್ತೆಯ
ಮನೆ ಸಮುದ್ರದ ಕರಾವಳಿಯಲ್ಲಿದ್ದುದು ಎಂಬ ವರದಿಯ ನೆನಪಿನಿಂದ ದಾರಿಯಲ್ಲಿ ಸಿಕ್ಕಿದ ಕೆಲವು ನಾವಿಕರೊಡನೆ
ಅತ್ತೆಯನ್ನೂ ಅತ್ತೆಯ ಮನೆಯನ್ನೂ ಕುರಿತಾಗಿ ವಿಚಾರಿಸಿ ನೋಡಿದೆ. ನನ್ನ ಮಾತನ್ನು ಅರ್ಥ ಸಹ ಮಾಡಿಕೊಳ್ಳದೆ,
ನಾನೊಬ್ಬ ತಿರುಕನಿರಬೇಕೆಂದು ಗ್ರಹಿಸಿ ಅವರು ನನ್ನನ್ನು ಗದರಿಸಿ ಓಡಿಸಿದರು. ಆ ದಿನ ಸಂಜೆಯವರೆಗೂ
ಅಲೆದು ಅಲೆದು, ಅತ್ತೆಯ ಮನೆ ಸಿಗದೆ, ಬಳಲಿ, ಬಾಯಾರಿಕೆಯಿಂದಲೂ ದಣಿವಿನಿಂದಲೂ ದಾರಿ ತೋಚದೆ, ಎರಡು
ರಸ್ತೆ ಸೇರುವ ಮೂಲೆಯಲ್ಲಿದ್ದ ಬಾಗಿಲು ಹಾಕಿದ್ದ ಒಂದು ಅಂಗಡೀ ಜಗುಲಿಯಲ್ಲಿ ಕುಳಿತುಬಿಟ್ಟೆ.
ಆಗಲೇ
ನನ್ನೆದುರು ಒಂದು ಕುದುರೆಗಾಡಿಯು ದಾಟಿ ಹೋಯಿತು. ಗಾಡಿಯವನಿಗೆ ಅರಿಯದೇ ಅವನ ಕುದುರೆ ಮೈಮೇಲೆ ಅಲಂಕಾರಕ್ಕಾಗಿ
ಹಾಕಿದ್ದ ಶಾಲು ಜಾರಿ ಮಾರ್ಗಕ್ಕೆ ಬಿತ್ತು. ನಾನು ಅದನ್ನು ಹೆಕ್ಕಿ ತೆಗೆದುಕೊಂಡು ಹೋಗಿ ಗಾಡಿಯವನಿಗೆ
ಕೊಟ್ಟೆ. ಆ ಶಾಲನ್ನು ತೆಗೆದುಕೊಂಡ ಗಾಡಿಯವನು ಸ್ವಲ್ಪ ಕರುಣೆಯುಳ್ಳವನೆಂದು ಅವನ ಮುಖ ನೋಡಿದಾಗ ತಿಳಿಯಿತು.
ಅವನೊಡನೆ ಅತ್ತೆಯನ್ನು ಕುರಿತು ವಿಚಾರಿಸಿದೆನು. ಅವನು ನಿಜವಾಗಿಯೂ ಕರುಣಾಳುವೇ ಆಗಿದ್ದನು. ಅವನು
ನನ್ನನ್ನು ನೋಡಿ –
“ನೀನು
ವಿಚಾರಿಸಿದ್ದು ಟ್ರಾಟೂಡ್ಡಳನ್ನು ತಾನೇ? ಆ ಮುದುಕಿಯನ್ನ?” ಅಂದನು.
“ಹೌದು”
ಎಂದಂದೆ ನಾನು.
ಗಾಡಿಯವನು
ತನ್ನ ಬೆನ್ನನ್ನು ನೆಟ್ಟಗೆ ಮಾಡಿ ತೋರಿಸಿ –
“ಗೂಟದಂತೆ
ನಡೆಯುವವಳಲ್ಲವೆ?” ಅಂದನು.
“ಹೌದು”
ಅಂದೆ.
“ಕೈಯ್ಯಲ್ಲಿ
ಸದಾ ಒಂದು ಚೀಲವಿರುತ್ತೆ – ಮಾತಾಡಿದರೆ ಹೊಡೆಯೋಕೆ ಬರುವವಳಂತೆ ತೋರುತ್ತಾಳೆ, ಅವಳು ತಾನೆ?”
ಅದೆಲ್ಲ
ಹೌದೆಂದು ನಾನೊಪ್ಪಿದೆ.
“ಹಾಗಾದರೆ,
ಆ ಇಳಿಜಾರು ದಾಟಿದನಂತರ ಸಿಕ್ಕುವ ಮೊದಲಿನ ಜೀನಸಿನ ಅಂಗಡಿಗೆ ಹೋಗಿ ವಿಚಾರಿಸು – ಆ ಅಂಗಡಿಯವನಿಗೆ
ಅವಳ ಪೂರ್ಣ ಪರಿಚಯವಿದೆ” ಎಂದು ಹೇಳಿ ಗಾಡಿಯವನು ತನ್ನ ಗಾಡಿಯನ್ನು ಓಡಿಸಿದನು.
ನಾನು
ಆ ಅಂಗಡಿಯನ್ನು ಹೇಗೋ ಮಾಡಿ ಹುಡುಕಿ ಹಿಡಿದೆನು. ಆಗ ಅಂಗಡಿಯವನು ಒಬ್ಬಳು ಹೆಂಗುಸಿಗೆ ಕೆಲವು ಸಾಮಾನುಗಳನ್ನು
ಕೊಡುತ್ತಿದ್ದನು. ಅಂಗಡಿಯವನೊಡನೆ ಅತ್ತೆಯನ್ನು ಕುರಿತಾಗಿ ವಿಚಾರಿಸಿದೆನು – ಆಗ ಸಾಮಾನು ಪಡೆಯುತ್ತಿದ್ದ
ಹೆಂಗುಸು ನನ್ನ ಮಾತನ್ನು ಕೇಳಿ –
“ಏನು?
ನಮ್ಮ ಯಜಮಾನೀನ ವಿಚಾರಿಸುತ್ತೀಯಾ – ಬೇಡೋದಕ್ಕೆ ತಾನೆ?” ಎಂದು ಕೇಳಿದಳು.
ಆ ಮಾತು
ಅಪಹಾಸ್ಯವಾಗಿ ನನಗೆ ತೋರಿ ನನ್ನ ಮುಖ ಕೆಂಪೇರಿತು. ಆದರೆ, ನಾನು ಹೋಗುತ್ತಿದ್ದುದಾದರೂ ಬೇಡುವುದಕ್ಕೇ
ತಾನೆ! – ಆಶ್ರಯವನ್ನು ಬೇಡುವುದಕ್ಕೆ! ಎಂದು ಗ್ರಹಿಸಿ, ಅಪಮಾನವನ್ನು ನುಂಗಿಕೊಂಡು –
“ಸ್ವಲ್ಪ
ಮಾತಾಡುವ ಕೆಲಸವಿದೆ” ಎಂದಷ್ಟು ಮಾತ್ರ ಹೇಳಿದೆ. ನನ್ನ ಪುಣ್ಯವಶದಿಂದ ಅವಳು ಅಷ್ಟೊಂದು ಕ್ರೂರಿಯಾಗಿರಲಿಲ್ಲ
– ಕಠಿಣಸ್ಥಳೂ ಆಗಿರಲಿಲ್ಲ. ಅವಳ ಒಪ್ಪಿಗೆಯಿಂದಲೇ ಅವಳನ್ನು ಹಿಂಬಾಲಿಸುತ್ತಾ ನಡೆದೆನು. ಆದರೆ ದಾರಿಯುದ್ದಕ್ಕೂ
ನಾನು ಮಾತಾಡುವುದೇನು – ಹೇಗೆ – ಅತ್ತೆ ಒಲಿಯದಿದ್ದರೆ ನನ್ನ ಗತಿ ಏನು ಎಂಬಿತ್ಯಾದಿ ದುಃಖ, ಭಯಗಳಿಂದಲೇ
ಆಲೋಚಿಸುತ್ತಿದ್ದೆ. ಹೀಗೆ ಸ್ವಲ್ಪ ದೂರ ನಡೆಯುವಾಗ, ಸ್ವಲ್ಪ ಮುಂದೆ, ನಮ್ಮೆದುರು ಚೊಕ್ಕಟವಾಗಿದ್ದ
ಒಂದು ಬಯಲು ಪ್ರದೇಶದ ಮಧ್ಯೆ ನಿಂತಿದ್ದ ಒಂದು ಸುಂದರವಾದ ಮನೆಯನ್ನು ಕಂಡೆನು. ಮನೆಯ ಕಿಟಕಿ ಬಾಗಿಲುಗಳೆಲ್ಲ
ಬಹು ಸುಂದರವಾಗಿದ್ದು, ಆ ಮನೆಯ ಸೌಂದರ್ಯಕ್ಕಾಗಿ ಅವುಗಳನ್ನಿಟ್ಟಿದ್ದಂತೆ ತೋರಿದುವು. ನಾವು ಮುಂದುವರಿದ
ಹಾಗೆ ಮನೆಯ ಮುಂಭಾಗದಲ್ಲಿನ ಬಲು ಚಂದದ ಒಂದು ಹೂದೋಟವನ್ನು ಕಂಡೆನು. ಹೂಗಳು ಅಲ್ಲಿ ಬಲು ಸಮೃದ್ಧವಾಗಿದ್ದುವು.
ಅಲ್ಲದೆ, ಆ ಕಡೆಯಿಂದ ಸುವಾಸನೆಯೂ ತೇಲಿ ಬರುತ್ತಿತ್ತು.
ನಾನು
ಗೇಟಿಗೆ ಬರುವಾಗ ಮನೆಯ ಬೈಠಖಾನೆ ತೋರಿತು. ಬೈಠಖಾನೆಯೊಳಗಿದ್ದ ಒಂದು ದೊಡ್ಡ ಕುರ್ಚಿಯ ಒಂದು ಭಾಗವೂ
ಬಾಗಿಲ ಪರದೆಯ ಸೆರೆಯಲ್ಲಿ ಕಾಣಿಸುತ್ತಿತ್ತು. ಆ ಕುರ್ಚಿಯಲ್ಲಿ ನನ್ನ ಅತ್ತೆ ಭೀಷಣ-ಗಾಂಭೀರ್ಯದಿಂದ
ಕುಳಿತಿರಬಹುದೆಂದು ಊಹಿಸುತ್ತಾ ಹೆದರಿಕೊಂಡೇ ನಾನು ಮುಂದೆ ನಡೆದೆನು.
ಗೇಟು
ದಾಟಿ ಮುಂದೆ ಹೋದಾಗ ಬೈಠಖಾನೆಯಲ್ಲಿ ಯಾರೂ ಇಲ್ಲವೆಂದು ಕಂಡಿತು. ಅತ್ತೆ ಅಲ್ಲಿಲ್ಲದಿದ್ದರೆ ನನ್ನ
ಪಾಡೇನೆಂದು ಹೆದರುತ್ತಾ ಮನೆಯ ಮಹಡಿಯ ಕಡೆ ನೋಡಿದಾಗ ಅಲ್ಲಿಂದ ಒಬ್ಬ ಗಂಡಸು ಕಿಟಕಿಯ ಆಚೆಗೆ ನಿಂತು
ನನ್ನನ್ನೇ ನೋಡುತ್ತಿದ್ದಾನೆಂದು ಗೊತ್ತಾಯಿತು. ಅವನಾದರೂ ಯಾರಿರಬಹುದೆಂದು ಅವನನ್ನೇ ನೋಡಿದಾಗ ಅವನು
ನಸುನಗುತ್ತಾ ನನ್ನನ್ನು ಪರೀಕ್ಷಿಸಲೋಸ್ಕರ ಒಂದು ಕಣ್ಣನ್ನು ಮುಚ್ಚಿ ಒಂದೇ ಕಣ್ಣಿನಿಂದ ತುಸು ನೋಡಿದನು.
ಅವನು ದುಂಡು ಮುಖದವನಾಗಿದ್ದು, ಸದಾ ಹರ್ಷಚಿತ್ತತೆಯಲ್ಲೇ ಇರುವವನಂತೆ ತೋರುತ್ತಿದ್ದನು. ಅವನು ನನ್ನನ್ನು
ಈ ರೀತಿ ಒಂದು ಕಣ್ಣಿನಿಂದ ಪರೀಕ್ಷಿಸಿ, ಇದ್ದಕ್ಕಿದ್ದ ಹಾಗೆಯೇ ಅಲ್ಲಿಂದ ಮಾಯವಾದನು.
ನಾನು
ಇನ್ನೇನು ಮಾಡುವುದೆಂದು ಹೆದರಿ ಅತ್ತಿತ್ತ ನೋಡುತ್ತಿದ್ದಾಗಲೇ ನನ್ನ ಎದುರು ಒಬ್ಬಳು ಹೆಂಗುಸು ಬರುತ್ತಿದ್ದುದನ್ನು
ಕಂಡೆನು. ಹೆಂಗುಸಿಗೆ ದೀರ್ಘ ದೇಹವಿತ್ತು; ನೆಟ್ಟಗೆ ನಡೆಯುತ್ತಿದ್ದಳು. ಜಟ್ಟಿಯ ಮೈಕಟ್ಟು ನಿಲುವಿಕೆಗಳಿದ್ದುವು
ಅವಳಲ್ಲಿ. ಎಡಗೈಯ್ಯಲ್ಲೊಂದು ಹೂದೋಟದ ಕತ್ತರಿಯನ್ನು ಹಿಡಿದುಕೊಂಡು ಬಲಗೈಯ್ಯಲ್ಲಿದ್ದ ಕತ್ತಿಯನ್ನು
ಬೀಸುತ್ತಾ ಅವಳು ನನ್ನೆದುರು ಬರತೊಡಗಿದಳು. ನನ್ನ ತಾಯಿಯು ಮಾಡುತ್ತಿದ್ದ ವರ್ಣನೆಯನ್ನು ಕೇಳಿದ್ದುದರಿಂದ
ಅವಳೇ ನನ್ನ ಅತ್ತೆಯಾಗಿರಬೇಕೆಂದು ನಿಶ್ಚೈಸಿಕೊಂಡೆನು. ಅತ್ತೆಯು ನನ್ನನ್ನು ನೋಡಿ –
“ನನಗೆ
ಇಲ್ಲಿ ಹುಡುಗರ ಅಗತ್ಯವಿಲ್ಲ. ಹೊರಟು ನಡಿ ಇಲ್ಲಿಂದಾ” ಎಂದು ಗರ್ಜಿಸಿ, ತನ್ನ ಶತ್ರುಗಳ ಶಿರಚ್ಛೇದನಗೈದಂತೆ
ಬಲಗೈಯ್ಯಿಂದ ಕತ್ತಿಯನ್ನು ಬೀಸಿದಳು. ಇಷ್ಟು ಹೇಳಿ ಅವಳ
ಸಮೀಪದಲ್ಲಿದ್ದ ಒಂದು ಗಿಡವನ್ನು ಸರಿಮಾಡತೊಡಗಿದಳು. ನನ್ನ ಧೈರ್ಯವೆಲ್ಲಾ ಇಷ್ಟರಲ್ಲಿ ಮಾಯವಾಗಿ
ಹೋಗಿತ್ತು. ಆದರೆ ಅತ್ತೆಯನ್ನು ಬಿಟ್ಟರೆ ನನಗೆ ಇನ್ಯಾರೂ ಗತಿಯಿಲ್ಲವೆಂಬ ಸ್ಪಷ್ಟವಾದ ಅರಿವೇ ಈ ನನ್ನ
ಅವಸ್ಥೆಯಲ್ಲಿ ಧೈರ್ಯವಾಗಿ ರೂಪಾಂತರಗೊಂಡಿತು. ನನಗೊಂದು ಹುಚ್ಚು ಆವೇಶವೇ ಬಂದಿತು. ನಾನು ಅತ್ತೆಯ
ಸಮೀಪಕ್ಕೆ ಹೋಗಿ, ಅವಳನ್ನು ತುದಿ ಬೆರಳಿನಿಂದ ಮುಟ್ಟುತ್ತಾ –
“ಅಮ್ಮಾ
ಎರಡು ಮಾತು” ಎಂದು ಕೇಳಿಕೊಂಡೆ.
ಅತ್ತೆ
ತಟ್ಟನೆ ನೆಟ್ಟಗೆ ನಿಂತು ನನ್ನನ್ನು ಬಹುವಾದ ಜಿಗುಪ್ಸೆಯಿಂದ ನೋಡಿದಳು. ಅವಳು ಹಾಗೆ ನೋಡಿ ಮಾತು ಪ್ರಾರಂಭಿಸುವ
ಮೊದಲೇ ನಾನು ಪ್ರಾರಂಭಿಸಿ –
“ಅತ್ತೆ,
ಎರಡೇ ಎರಡು ಮಾತು – ನಾನು ನಿನ್ನ ಅಳಿಯ” ಎಂದಂದೆನು.
ಈ ಮಾತನ್ನು
ಕೇಳಿದಾಗ ಅವಳ ಮುಖದಲ್ಲಿ ಆದ ಬದಲಾವಣೆಯನ್ನು ನಾನು ಶಬ್ದಗಳಿಂದ ವರ್ಣಿಸಲಾರೆ. ಸಾಧಾರಣ, ಇನ್ನು ಪ್ರಪಂಚದಲ್ಲಿ
ಇಂಥ ಒಂದು ಆಶ್ಚರ್ಯವೇ ನಡೆದದ್ದಿಲ್ಲದೆ, ಇದೇ ಪ್ರಥಮದ್ದಾಗಿದ್ದು, ಅದನ್ನೇ ಅವಳು ಕಾಣುತ್ತಿರುವಂತೆ
ಅವಳ ಮುಖ ಕಾಣುತ್ತಿತ್ತು. ಇಂಥ ಅದ್ಭುತದ ಆಶ್ಚರ್ಯವನ್ನು ಕಂಡು – ಕೇಳಿ – ಮಾತು ಹೊರಡದೆ, ಹತಾಶಳಾಗಿ
ಅಲ್ಲೇ ಕುಳಿತು ನನ್ನನ್ನು ಕಾಲಿನಿಂದ ತಲೆಯವರೆಗೂ ನೋಡಿದಳು. ಅವಳ ಈ ವರ್ತನೆಗಳೆಲ್ಲ ನನ್ನ ಗಂಡಾಂತರವೇ
ಎಂದು ನಾನು ತಿಳಿಯುತ್ತಾ ಬಂದದ್ದರಿಂದ, ಹೇಗೂ ನಾನು ಆಖೈರಾಗಿ ಕಡುಗಂಡಾಂತರಕ್ಕೇ ಬೀಳುವ ಮೊದಲು, ನನ್ನ
ಕಡೆಯ ಹೇಳಿಕೆಗಳನ್ನೆಲ್ಲಾ ಹೇಳಿ ಪೂರೈಸಿಬಿಡುವೆನೆಂದೂ –
“ಸಫಕ್ಕಿನ
ಬ್ಲಂಡರ್ಸ್ಟನ್ನಿನಲ್ಲಿ ಹುಟ್ಟಿದ ಡೇವಿಡ್ ಕಾಪರ್ಫೀಲ್ಡ್ ನಾನು, ಅತ್ತೆ. ನನ್ನ ಜನನದ ದಿನ ನೀವು ನಮ್ಮ ಮನೆಗೆ ಬಂದಿದ್ದರಂತೆ
– ನನ್ನ ತಾಯಿಯನ್ನು ನೀವು ನೋಡಿದ್ದೀರಂತೆ – ನನ್ನ ತಾಯಿಯು ತೀರಿಹೋದಳು. ಅನಂತರ ನನ್ನಿಂದ ನನ್ನ ಪ್ರಾಯಕ್ಕೂ
ಶಕ್ತಿಗೂ ಮೀರಿದ ಕೆಲಸ ಮಾಡಿಸಿದರು. ಹಿಂಸೆ ತಡೆಯಲಾರದೆ ನಿಮ್ಮಲ್ಲಿಗೆ ಓಡಿಬಂದೆ, ಅತ್ತೆ. ನನಗೆ ಯಾವ
ವಿದ್ಯೆಯನ್ನೂ ಹೇಳಿಕೊಡಲಿಲ್ಲ. ತಾಯಿಯ ಮರಣಾನಂತರ ಸುಖ ಕಾಣದ ನನ್ನಿಂದ ನನ್ನಲ್ಲಿದ್ದುದನ್ನೆಲ್ಲಾ
ನಿಮ್ಮಲ್ಲಿಗೆ ಹೊರಟು ಬರುವಾಗ ದಾರಿಯಲ್ಲಿ ಎಳೆದು ತೆಗೆದರು – ನನ್ನ ಸ್ಥಿತಿ ಎಂಥದ್ದೆಂದು ನನ್ನನ್ನು
ನೋಡುವಾಗಲೇ ನಿಮಗೆ ಗೊತ್ತಾಗಬಹುದು” ಎಂದು ಮೊದಲಾಗಿ ಹೇಳುತ್ತಾ ಮಾತು ಸಾಕಾಗದೆ ಕೈಕರಣದಿಂದ ವಿವರಿಸಲು
ಪ್ರಯತ್ನಿಸುತ್ತಾ ದುಃಖಾತಿಶಯದಿಂದ ಅಳಲು ಪ್ರಾರಂಭಿಸಿದೆ. ಅಷ್ಟರವರೆಗೆ ನನ್ನ ದೇಹಕ್ಕೆ ತ್ರಾಣ ಕೊಡುತ್ತಿದ್ದ
ಮನೋದಾರ್ಢ್ಯ ಏಕಾಏಕಿ ಮಾಯವಾಗಿ ಹೋಯಿತು. ರೋದನದಿಂದಲೇ ದುಃಖ ಶಮನವಾಗಬೇಕೆಂದು ಪ್ರಕೃತಿ ನಿಯಮವೇ ಇರಬೇಕೆಂದು
ತೋರುತ್ತದೆ. ನನಗೆ ಇಷ್ಟು ಮಾತಾಡುವುದರೊಳಗೆ ದುಃಖಸಾಗರವೇ ಉಬ್ಬಿ ಮೇರೆ ಮೀರಿ ಹರಿಯುವಂತೆ ನನ್ನ ಕಣ್ಣುಗಳಿಂದ
ಕಣ್ಣೀರು ಉಕ್ಕಿ ಹರಿಯಿತು.
ಇದನ್ನು
ಕಂಡು ಅತ್ತೆ ನನ್ನನ್ನು ಹಿಡಿದು ಎಳೆದುಕೊಂಡೇ ಮನೆಯ ಒಳಗೆ ಹೋದಳು. ಒಂದು ಸೋಫಾದ ಮೇಲೆ ಒಂದು ಬಟ್ಟೆಯನ್ನು ಹಾಸಿ ನನ್ನನ್ನು
ಅದರ ಮೇಲೆ ಕುಳ್ಳಿರಿಸಿದಳು. ಅನಂತರ ನಾಲ್ಕಾರು ಕಪಾಟುಗಳ ಬಾಗಿಲು ತೆರೆದು ಹತ್ತೆಂಟು ಕುಪ್ಪಿಗಳಿಂದ
ಏನೇನೋ ದ್ರಾವಕ, ವೈನು, ಸಾಂಬಾರ ಜೀನಸುಗಳ ಸಾರ, ನೀರು ಮೊದಲಾದುವನ್ನು ಅಳತೆ ಮಾಡಿ ಮಾಡಿ ನನ್ನ ಬಾಯಿಗೆ
ಹುಯ್ದಳು. ನನ್ನ ಶ್ರಮ ಪರಿಹಾರಕ್ಕಾಗಿಯೂ ಆಹಾರಕ್ಕಾಗಿಯೂ ಈ ರೀತಿ ಮಾಡಿರಬೇಕೆಂದು ನಾನು ಊಹಿಸಿದೆನು.
ಅನಂತರ
ಕೆಲಸದ ಹೆಂಗುಸನ್ನು ಕರೆದು-
“ಮಿ.
ಡಿಕ್ಕರು ಈ ಕಡೇ ದಯಮಾಡಿ ಒಮ್ಮೆ ಬರುವಂತೆ ಹೇಳು, ಜೇನೆಟ್” ಎಂದು ಹೇಳಿದಳು. ಆ ಕೆಲಸದ ಹೆಂಗುಸೇ ನನ್ನನ್ನು
ಅಂಗಡಿಯಿಂದ ಮನೆಯವರೆಗೆ ಕರೆತಂದವಳೆಂದು ಆಗ ತಿಳಿಯಿತು.
ಸ್ವಲ್ಪ
ಹೊತ್ತಿನಲ್ಲಿಯೇ ಆ ಗೃಹಸ್ಥರು ಬಂದರು. ಅವರನ್ನು ಕಂಡೊಡನೆ ಮೊದಲು ನನ್ನನ್ನು ಮಹಡಿಯ ಮೇಲಿಂದ ಒಂದು
ಕಣ್ಣಿನಿಂದ ನೋಡಿದವರೇ ಅವರೆಂದು ಗೊತ್ತಾಯಿತು. ಅವರು ನನ್ನನ್ನು ಕಂಡಕೂಡಲೇ ಕಣ್ಣಿನಿಂದ ನನಗೊಂದು
ಸಂಜ್ಞೆ ಮಾಡಿದರು. ಅವರು ನನ್ನನ್ನು ಈ ಮೊದಲೇ ಕಂಡಿದ್ದ ಪರಿಚಯವನ್ನು ಅತ್ತೆಗೆ ತಿಳಿಸಬಾರದೆಂದೇ ಆ
ಸಂಜ್ಞೆಯ ಅರ್ಥವಿರಬೇಕೆಂದು ನಾನು ಊಹಿಸಿದೆ. ಅತ್ತೆ ಅವರನ್ನು ನೋಡಿ –
“ಮಿ.
ಡಿಕ್ಕ್ ಅವರೇ! ಎಂತಹ ವಿಪತ್ತಿನಿಂದಲೂ ಪಾರಾಗಲು ತಕ್ಕಂಥ ಆಲೋಚನೆಗಳನ್ನು ಮನಸ್ಸು ಮಾಡಿದ ಮಾತ್ರಕ್ಕೆ
ಹೇಳಬಲ್ಲ ನೀವು ಈಗ ನನಗೆ ಬಂದೊದಗಿರುವ ಕಷ್ಟ ಪರಿಹಾರಕ್ಕೊಂದು ಮಾರ್ಗವನ್ನು ಹೇಳಬೇಕು. ನಿಮ್ಮ ವಾಡಿಕೆಯ
ತಮಾಷೆಗಳನ್ನೆಲ್ಲ ಬದಿಗಿಟ್ಟು ಒಂದು ಸಲಹೆಯನ್ನು ಕೊಡಿ, ನೋಡೋಣ” ಅಂದಳು.
ಮಿ. ಡಿಕ್ಕರು
ಪುನಃ ನನ್ನನ್ನು ನೋಡಿ, ಆ ಮೊದಲಿನ ಸಂಜ್ಞೆಯನ್ನೇ ಮಾಡಿ, ಅತ್ತೆ ಅವರ ಮೇಲೆ ಆವಾಹನೆ ಮಾಡಿದ್ದ ಜ್ಞಾನವನ್ನು
ಮುಖದಲ್ಲಿ ತೋರಿಸಲೋಸ್ಕರ, ಗಾಂಭೀರ್ಯ ತಾಳಿ –
“ಒಂದಾಲೋಚನೆ
ತಾನೆ? ಏನಾಗಬೇಕು, ಕೇಳಿ” ಅಂದರು.
ಮಿ. ಡಿಕ್ಕರು
ಕೊಟ್ಟ ಉತ್ತರದಿಂದ ಅತ್ತೆ ತೃಪ್ತಿಪಟ್ಟು, ಅವರ ಅಭಿಪ್ರಾಯ ಕೊಡಲು ಅವರಿಗೆ ಬೇಕಾಗುವ ಸಮಸ್ಯೆಗಳನ್ನೆಲ್ಲ
ವಿವರಿಸುವುದು ಅಗತ್ಯವೆಂದು, ಈ ರೀತಿ ಹೇಳತೊಡಗಿದಳು –
“ನಿಮ್ಮ
ಶಕ್ತಿ ಎಷ್ಟಿದೆ, ನಿಮ್ಮ ಯೋಗ್ಯತೆ ಏನು – ಎಂಬುದನ್ನು ನೀವು ತಿಳಿದಿರುವುದಕ್ಕಿಂತಲೂ ಹೆಚ್ಚು ನಾನು
ತಿಳಿದಿರುವೆನು. ಇತ್ತ ನೋಡಿ, ಇಲ್ಲಿಯವರೆಗೆ ಓಡಿ ಬಂದು ನಿಂತಿದ್ದಾನೆ ದೊಡ್ಡ ಡೇವಿಡ್ ಕಾಪರ್ಫೀಲ್ಡನ
ಮಗ – ನಾನು ಆಗಾಗ ನಿಮ್ಮ ಹತ್ತಿರ ಪ್ರಸ್ತಾಪಿಸುತ್ತಿದ್ದೆನಲ್ಲಾ, ಅವನ ಮಗ. ಎಳೆಯ ಪ್ರಾಯದ ಈ ಡೇವಿಡ್
ಕಾಪರ್ಫೀಲ್ಡನು ತಂದೆಯ ಹಾಗೆಯೇ ಕಾಣುತ್ತಾನೆ. ಇವನ ಬುದ್ಧಿಯೂ ತಂದೆಯ ಬುದ್ಧಿಯಷ್ಟೇ ಇರಬೇಕೆಂದು ತೋರುತ್ತದೆ.
ಇವನು ಸಾಕಿದವರಿಂದ ಹೇಳದೇ ಓಡಿ ಬಂದಿದ್ದಾನೆ. ಇವನ ತಂಗಿ ಆಗಿದ್ದರೆ, ಅಂದರೆ ಬೆಟ್ಸಿ ಟ್ರಾಟೂಡ್ ಕಾಪರ್ಫೀಲ್ಡಳು
ಆಗಿದ್ದರೆ, ಹೀಗೆ ಓಡಿಬರುತ್ತಿರಲಿಲ್ಲ. ಈ ಗಂಡಾಂತರದ ಹುಡುಗ ನಮ್ಮಲ್ಲಿಗೆ ಬಂದಿದ್ದಾನಲ್ಲ. ಈಗ ನಾನೇನು
ಮಾಡಬೇಕು, ಹೇಳಿ.”
ಈ ಉದ್ದದ
ಭಾಷಣವನ್ನು ಕೇಳಿ ಮಿ. ಡಿಕ್ಕರು ಸ್ವಲ್ಪ ಗಾಬರಿಗೊಂಡರು. ಇದನ್ನು ಕಂಡು ಅತ್ತೆ – ಇವರನ್ನು ಸರಿದಾರಿಗೆ
ತರಲೋಸ್ಕರ – ಪುನಃ ಅಂದಳು -
“ಜವಾಬ್ದಾರಿ
ದೊಡ್ಡದು – ನಿಮ್ಮಿಂದ ಅಸಾಧ್ಯವೆಂದು ತಪ್ಪಿಸಬಾರದು – ಸ್ವಲ್ಪ ಆಲೋಚಿಸಿ, ಚುಟುಕಾಗಿ ಉತ್ತರ ಕೊಡಿ.”
ಮಿ. ಡಿಕ್ಕರು
ಮಧ್ಯಪ್ರಾಯ ದಾಟಿದವರು. ಅವರ ತಲೆ ನರೆತಿತ್ತು. ಅವರಿಗಿದ್ದ ಒಂದು ಚಿಕ್ಕ ಕೊರತೆಯೆಂದರೆ ಅವರು ಎಳೆಮಕ್ಕಳಂತೆ
ಸದಾ ಮುಗುಳ್ನಗೆಯಲ್ಲೇ ಇರುತ್ತಿದ್ದುದು ಮಾತ್ರ. ಈ ಮುಗುಳ್ನಗೆಯೊಂದನ್ನು ಬಿಟ್ಟಿದ್ದರೆ ಅವರ ಮುಖ
ಬಹು ಗಂಭೀರತರದ್ದೇ ಆಗಿರುತ್ತಿತ್ತು. ಅವರು ಬಹು ಬುದ್ಧಿವಂತರಂತೆಯೂ ತೋರುತ್ತಿದ್ದರು. ಅವರ ಮೈಕಟ್ಟು,
ನಿಲುವೂ – ಈ ಎಡೆಬಿಡದ ಹಾಸ್ಯ ಸ್ವಭಾವದ ಮುಗುಳ್ನಗೆಯೊಂದರ ಹೊರತು – ಬಹು ಯೋಗ್ಯ ಮಟ್ಟದ್ದೇ ಆಗಿತ್ತು.
ಅತ್ತೆ ಪುನಃ ಎಚ್ಚರಿಸಿದ ಮಾತುಗಳಿಂದ ಅವರು ಸ್ವಲ್ಪ ಗಂಭೀರತೆ ತಾಳಿದರು. ನನ್ನನ್ನು ಚೆನ್ನಾಗಿ ನೋಡಿದರು.
ಅರೆಕಣ್ಣು ಮುಚ್ಚಿಕೊಂಡು ಅಲೋಚಿಸಿದರು. ಕೊನೆಗೆ ಹಠಾತ್ತಾಗಿ ಆಲೋಚನೆ ಸ್ಫುರಿಸಿದಂತೆ ನುಡಿದರು –
“ಓಹೋ,
ಡೇವಿಡ್ಡನ ಮಗನೇ ಇವನು? ಸ್ನಾನ ಮಾಡಿಸಿ, ಮೊದಲು.”
ಅತ್ತೆಗೆ
ಒದಗಿದ್ದ ಧರ್ಮಸಂಕಟವೂ ಮಾನಸಿಕ ಅಂಧಕಾರವೂ ಈ ಜ್ಞಾನ ಕಿರಣದಿಂದ ನಾಶವಾದುವು. ನನ್ನ ಸ್ನಾನದ ಏರ್ಪಾಡುಗಳನ್ನು
ಮಾಡಿಸತೊಡಗಿದರು. ಬಿಸಿನೀರು ಕಾಯುವವರೆಗೆ ನನ್ನ ಸೋಫಾದ ಎದುರು ಅತ್ತೆ ಅತ್ತ ಇತ್ತ ತುಂಬಾ ಆಲೋಚನಾಪರವಶರಾಗಿ
ತಿರುಗಾಡಿದರು. ಅವರ ತಿರುಗಾಟ ಕಾಲದಲ್ಲಿ ಅವರ ಮುಖದಿಂದ ಆಶ್ಚರ್ಯ, ಭಯ, ದೂಷ್ಯ ಮೊದಲಾದ ಭಾವನೆಗಳ
ಉದ್ಗಾರ ಹೊರಹೊಮ್ಮುತ್ತಿತ್ತು. ನನಗೆ ಬಹುಮಟ್ಟಿನ ದೇಹಸುಖ ಆಗಲೇ ದೊರಕಿದ್ದರೂ ನನ್ನ ಅವಸ್ಥೆ ಮುಂದೇನಾಗಬಹುದೋ
ಎಂದು ಮನಸ್ಸಿನಲ್ಲಿ ಕಷ್ಟಪಡುತ್ತಾ ನಾನು ಸುತ್ತಲಿನ ಎಲ್ಲಾ ವಸ್ತುಗಳನ್ನೂ ನೋಡುತ್ತಾ ಕುಳಿತಿದ್ದೆ.
ಅತ್ತೆ
ದೃಢಕಾಯಳು. ಸಿಪಾಯಿಯಂತೆ ನೆಟ್ಟಗೆ ನಿಂತು, ಸಿಪಾಯಿಯಂತೆಯೇ ನಡೆಯುತ್ತಿದ್ದಳು. ಅಧಿಕಾರ, ಶಿಸ್ತುಗಳನ್ನು
ಜಾರಿ ಮಾಡಬಲ್ಲಂಥ ಶಕ್ತಿ ಅವಳ ಮುಖದಲ್ಲಿ ಬಿಂಬಿಸುತ್ತಿತ್ತು. ಅವಳು ರೂಪವಂತಳೂ ಆಗಿದ್ದಳು. ತುಂಬಾ
ಗಾಂಭೀರ್ಯಯುತಳೂ ಆಗಿದ್ದಳು. ಅವಳ ಈ ಸ್ಥಿರ ಭಾವನೆಗಳ ಮರೆಯಲ್ಲಿ ದುಃಖವೂ ಅನುಕಂಪವೂ ಕರುಣೆಯೂ ಅಡಗಿದ್ದುವೆಂಬುದನ್ನು
ನಾನು ಅವಳ ಅಂದಿನ ವರ್ತನೆಗಳಿಂದ ತಿಳಿದುಕೊಂಡೆನು. ಅವಳ ದುಸ್ತುಗಳೆಲ್ಲ ಬಹು ಚೊಕ್ಕಟವಾಗಿ, ಶುಭ್ರವಾಗಿದ್ದುವು.
ಅನಾವಶ್ಯಕವಾದ, ಅಥವಾ ಆಡಂಬರದ ಯಾವ ವಸ್ತುವನ್ನೂ ಅವಳು ಧರಿಸಿರಲಿಲ್ಲ. ಗಂಡುಸರಿಟ್ಟುಕೊಳ್ಳುವಂಥ ಗಡಿಯಾರ
ಅವಳ ಅಂಗಿ ಜೇಬಿನಲ್ಲಿತ್ತು.
ನಾನು
ಕುಳಿತಿದ್ದ ಕೋಣೆಯೂ ಬಹು ಚೊಕ್ಕಟವಾಗಿತ್ತು. ಅಲ್ಲಿನ ಎಲ್ಲ ವಸ್ತುಗಳೂ ಬಹು ಕ್ರಮವಾಗಿಯೇ ಇಡಲಾಗಿದ್ದುವು.
ನನ್ನ ಸ್ನಾನದ ಏರ್ಪಾಡು ನಡೆಸುತ್ತಿದ್ದ ಕೆಲಸದ ಹೆಂಗುಸು ಜೇನೆಟ್ಟಳು ಹದಿನೆಂಟು- ಹತ್ತೊಂಬತ್ತು ವರ್ಷದ
ಹೃಷ್ಟಪುಷ್ಟಳಾದ ಸುಂದರ ತರುಣಿ. ಜೇನೆಟ್ಟಳು ಅತ್ತೆಯ ಶಿಸ್ತನ್ನು ಚೆನ್ನಾಗಿ ಅಭ್ಯಸಿಸಿದ್ದು, ಅವಳ
ನಡಿಗೆ, ನುಡಿ, ವರ್ತನೆಗಳೆಲ್ಲ ಅತ್ತೆಯ ನಡೆ ನುಡಿ ವರ್ತನೆಗಳನ್ನೇ ಹೋಲುತ್ತಿದ್ದುವು.
ಸ್ವಲ್ಪ
ಸಮಯದಲ್ಲಿ ಬಿಸಿನೀರು ತಯಾರಾಯಿತು. ನನಗೆ ಜೇನುಮಿಶ್ರಿತ ಗಂಜಿಯನ್ನು ಅತ್ತೆಯೇ ಚಮಚದಲ್ಲಿ ಕುಡಿಸಿದಳು.
ನಾನು ಆಹಾರವಿಲ್ಲದೇ ಕೆಲವು ದಿನ ಕಳೆದಿರಬೇಕೆಂದು ಊಹಿಸಿಯೇ ಅತ್ತೆ ಈ ರೀತಿಯ ಮುಂಜಾಗ್ರತೆ ವಹಿಸಿರಬೇಕೆಂದು
ನಾನು ಊಹಿಸುತ್ತೇನೆ. ಹಾಗೆ ನನಗೆ ಗಂಜಿ ಕುಡಿಸುತ್ತಿದ್ದ ಮಧ್ಯದಲ್ಲಿ ಅತ್ತೆ ಹಠಾತ್ತಾಗಿ –
“ಜೇನೆಟ್,
ಕತ್ತೆಗಳು” ಎಂದು ಒಂದು ವಿಧದ ಉದ್ಗಾರವನ್ನೇ ಮಾಡಿದಳು. ಅಷ್ಟೂ ಅಲ್ಲದೆ, ಗಂಜಿ ಚಮಚ ಸಮೇತವಾಗಿ ಅಂಗಳಕ್ಕೆ
ಧುಮುಕಿದಳು. ಮಹಡಿಯ ಮೇಲಿಂದ ಓಡಿಬಂದು ಜೇನೆಟ್ಟಳೂ ಅತ್ತೆಯ ಜತೆ ಸೇರಿದಳು. ರಸ್ತೆಗೂ ಈ ಮನೆಯ ಮೂಂದಿನ
ಹೂದೋಟಕ್ಕೆ ಮಧ್ಯವಿದ್ದ ಮೈದಾನವನ್ನು ಅತ್ತೆಯು ಬಹು ಎಚ್ಚರಿಕೆಯಿಂದ ಕಾಪಾಡಿಕೊಂಡು ಬರುತ್ತಿದ್ದಳಾದ್ದರಿಂದ,
ಆ ಮೈದಾನಕ್ಕೆ ಯಾವ ಪ್ರಾಣಿಯಾದರೂ ಪ್ರವೇಶವಾದೊಡನೆ ಅವಳಿಗೆ ಬಹುವಾದ ಕೋಪ ಬರುತ್ತಿತ್ತು. ಹೀಗೆ ಅತ್ತೆ
ಮತ್ತೂ ಜೇನೆಟ್ಟರು ಆ ಮೈದಾನಕ್ಕೆ ಆಗ ತಾನೆ ಕಾಲಿಟ್ಟಿದ್ದ ಎರಡು ಕತ್ತೆಗಳನ್ನು ಓಡಿಸಿ ಮನೆಗೆ ಬರುವಾಗ
ಬಿಸಿನೀರು ಕಾದಿತ್ತು.
ನನ್ನನ್ನು
ಬಿಸಿನೀರಲ್ಲಿ ತುಂಬಾ ಹೊತ್ತು ಸ್ನಾನ ಮಾಡಿಸಿದರು. ಸ್ನಾನದಿಂದ ನನಗೆ ಸುಖವೂ ಆಯಿತು. ಅನಂತರ ಮೈಗೆಲ್ಲಾ
ಬಲವಾಗಿ ಬಟ್ಟೆ ಸುತ್ತಿ ಒಂದು ಸೋಫಾದ ಮೇಲೆ ಮಲಗಿಸಿದರು. ನನಗೆ ಸುಖವಾದ ನಿದ್ರೆ ಬಂತು. ನಾನು ನಿದ್ರೆ
ಮಾಡಿದ್ದಾಗ ಅತ್ತೆ ನನ್ನನ್ನೇ ನೋಡುತ್ತಾ “ಪಾಪ ಬಹು ದಣಿದು ಹೋದ, ಹುಡುಗ – ಅನ್ನವಿಲ್ಲದೆ ಕೃಶವಾಗಿ
ಹೋದ” ಎಂದಂತೆ ಸ್ವಪ್ನವನ್ನು ಕಂಡೆ. ಅದು ಸ್ವಪ್ನವೂ ಇರಬಹುದು – ಅಥವಾ ನಿಜವಾಗಿಯೂ ನಡೆದದ್ದನ್ನೇ
ನಾನು ಅರೆನಿದ್ರೆಯಲ್ಲಿ ಗ್ರಹಿಸಿದ್ದೂ ಇರಬಹುದು. ನಾನು ನಿದ್ರೆಯಿಂದ ಎಚ್ಚತ್ತು ನೋಡುವಾಗ ಅತ್ತೆ
ಕಿಟಕಿಯ ಸಮೀಪದಲ್ಲಿ ನಿಂತು ಸಮುದ್ರವನ್ನು ನೋಡುತ್ತಿದ್ದಳು.
ನನಗೆ
ಎಚ್ಚರವಾದ ಮೇಲೆ ಊಟವಾಯಿತು. ಊಟ ಬಹು ರುಚಿಯಾಗಿತ್ತು. ಊಟವಾದನಂತರ ನನಗೆ ದ್ರಾಕ್ಷಾರಸಕ್ಕೆ ಬ್ರೇಂಡಿಯನ್ನು
ಮಿಶ್ರ ಮಾಡಿಕೊಟ್ಟರು. ಮಿ. ಡಿಕ್ಕರ ಸಮಕ್ಷಮದಲ್ಲಿ ಅತ್ತೆ ನನ್ನ ಜೀವನ ವೃತ್ತಾಂತವನ್ನೆಲ್ಲ ವಿಚಾರಿಸಿ
ಕೇಳಿದಳು. ನನಗೆ ತಿಳಿದದ್ದನ್ನೆಲ್ಲಾ ವಿವರವಾಗಿ ತಿಳಿಸಿದೆನು. ನನ್ನ ತಂದೆ, ತಾಯಿ ಇಬ್ಬರಿಗೂ ಬುದ್ಧಿ
ಕಮ್ಮಿಯಾಗಿದ್ದುದರಿಂದಲೇ ನನ್ನ ಹೆಡ್ಡ ತಂದೆ ಬುದ್ಧಿಯಿಲ್ಲದ ನನ್ನ ತಾಯಿಯನ್ನು ಮದುವೆಯಾದದ್ದೆಂತಲೂ
ನನ್ನ ತಾಯಿ ಹೆಡ್ಡಳಾಗಿದ್ದುದರಿಂದಲೇ ಪುನಃ ಆ ಕ್ರೂರಿ – ಮರಣಕಾರಕನೆಂದು ಹೆಸರು ಇರುವ – ಎರಡನೆ ಗಂಡನನ್ನು
ಮದುವೆಯಾದುದೆಂತಲೂ ಅತ್ತೆ ಹೇಳಿಕೊಂಡಳು.
ಅತ್ತೆ
ಹಿಂದಿನ ನೆನವರಿಕೆಗಳನ್ನು ಮಾಡುತ್ತಾ-
“ಆ ಹುಚ್ಚು
ಹುಡುಗಿ – ಇವನ ತಾಯಿ – ಬೇಕಾದ ಒಂದು ಹೆಣ್ಣು ಹುಡುಗಿಯನ್ನು ಹೆರುವ ಬದಲು ಈ ಪೋರ – ಸಾಕಿದವರನ್ನು
ಬಿಟ್ಟೋಡುವ ಕಳ್ಳನನ್ನು ಹೆತ್ತಳು. ಮತ್ತೆ ಅಲ್ಲೊಬ್ಬ ತಲೆ ಓರೆಮಾಡಿ ನಡೆಯುವ – ಹಕ್ಕಿಗಿದ್ದಷ್ಟೂ
ಮಿದುಳಿಲ್ಲದ – ಡಾಕ್ಟರನು ಗಂಡು ಹುಟ್ಟಿತೂ ನಾನು ಹುಟ್ಟಿಸಿದ್ದೂ ಎಂದನ್ನುವಂತೆ ಹಾರಾಡುತ್ತಿದ್ದ.
ಇವರ ಈ ಕೂಟಕ್ಕೆ ಆ ಕಾಡು ಕುರುಬಿ ಪೆಗಟಿಯೂ ಬಹು ಯೋಗ್ಯಳೇ ಆಗಿದ್ದಳು. ಆ ಯಮನಂತಿದ್ದ – ಮಾರಣಕಾರಿ
ನಾಮಧೇಯನನ್ನು – ಯಜಮಾನಿಗೆ ಮದುವೆ ಮಾಡಿಸಿ, ತಾನೊಬ್ಬ ರಾಕ್ಷಸನನ್ನು ಪತಿಯೆಂದು ಜತೆ ಸೇರಿ ಓಡಿದಳು.
ಅಂಥ ಸ್ಥಳದಲ್ಲಿ ಇಂಥ ಬಾಲಕ ಜನಿಸಿದ್ದು ಆಶ್ಚರ್ಯವಲ್ಲ” ಎಂದು ಮೊದಲಾಗಿ ಸ್ವಲ್ಪ ದುಃಖದಿಂದಲೇ ಮಾತಾಡಿದಳು.
ನಾನು
ನಿರ್ವಾಹವಿಲ್ಲದೆ ಪೆಗಟಿಯ ಯೋಗ್ಯತೆಯನ್ನು ಸ್ವಲ್ಪ ಹೊಗಳಿದೆ. ಅದನ್ನು ಕೇಳಿ ಅತ್ತೆಗೆ ಸ್ವಲ್ಪ ಸಂತೋಷವಾಗಿರಬೇಕು.
ಅವಳು ಅಂದಳು –
“ಚಿಂತೆಯಿಲ್ಲ
ಈ ಹುಡುಗ, ಆ ತಂದೆತಾಯಿಗಳಿಗಿಂತ ಸ್ವಲ್ಪ ಬುದ್ಧಿ ಹೆಚ್ಚಿರುವನೆಂದು ತೋರುತ್ತದೆ – ಸಾಕಿದವರನ್ನು
ಸಮರ್ಥಿಸುವ ಬುದ್ಧಿಯಾದರೂ ಇವನಿಗಿದೆ.”
ಇಷ್ಟು
ಹೇಳುತ್ತಿದ್ದ ಹಾಗೆಯೇ ಅತ್ತೆಗೆ ಮಹತ್ತರವಾದ ಕೋಪ ಬಂದು –
“ಜೇನೆಟ್
ಕತ್ತೆಗಳು” ಎಂದಂದುಕೊಂಡು ಮೈದಾನಕ್ಕೆ ಓಡಿದಳು. ಜೇನಟ್ಟಳು ಜತೆ ಸೇರಿದಳು. ಕೆಲವು ಹುಡುಗರು ಕತ್ತೆಗಳ
ಮೇಲೆ ಸವಾರಿ ಮಾಡಿಕೊಂಡು ಮನೆಯೆದುರಿನ ಮೈದಾನಕ್ಕೆ ಬಂದಿದ್ದರು. ಇಬ್ಬರೂ ಸೇರಿ ಆ ಹುಡುಗರನ್ನೂ ಕತ್ತೆಗಳನ್ನೂ
ಹೊಡೆದೋಡಿಸಿದರು. ಆ ಸ್ಥಳ ಸರ್ಕಾರದ್ದಾಗಿತ್ತೋ ಅತ್ತೆಯದೋ ಎಂಬ ಸಂಶಯ ನನಗಿದ್ದರೂ ಅದನ್ನು ಕಾಪಾಡುವ
ಹಕ್ಕು ತನ್ನದೆಂಬುದಾಗಿ ಅತ್ತೆ ತಿಳಿದಿದ್ದಂತೆ ಕಂಡುಬಂತು.
`ಕತ್ತೆ
ನಿಷೇಧ’ ಕಾನೂನನ್ನು ಸರ್ಕಾರವು ತಂದು ಕತ್ತೆಗಳನ್ನು ಸಾಕದಂತೆ ಏಕೆ ಮಾಡಲಿಲ್ಲವೆಂದು ಸರ್ಕಾರವನ್ನೇ
ಶಪಿಸುತ್ತಾ ಅತ್ತೆ ಮರಳಿ ಬಂದು ತನ್ನ ಕುರ್ಚಿಯಲ್ಲಿ ಕುಳಿತಳು.
ಅನಂತರ
ಮಿ. ಡಿಕ್ಕರನ್ನು ಕರೆದು-
“ನಿಮಗೆ
ಇವನ ಕಥೆಯೆಲ್ಲಾ ಗೊತ್ತಿದೆಯಷ್ಟೆ – ಈವರೆಗೆ ಇವನ ಚರಿತ್ರೆಯನ್ನೆಲ್ಲ ಕೇಳಿದಿರಷ್ಟೆ. ಮುಂದೆ ಇವನನ್ನೇನು
ಮಾಡಬೇಕು – ತಿಳಿಸಿರಿ. ಮನಸ್ಸು ಮಾಡಿದರೆ ಎಂಥ ಸಂದರ್ಭದಲ್ಲೂ ಯೋಗ್ಯ ಸಲಹೆ ಕೊಡಬಲ್ಲ ನೀವು ಉದಾಸೀನಮಾಡದೆ
ಹೇಳಬೇಕು” ಎಂದು ಅತ್ತೆ ಹೇಳಿದಳು.
ತತ್ಕ್ಷಣವೇ
ಮಿ. ಡಿಕ್ಕರು ಗಂಭೀರ ಮುಖಮುದ್ರೆಯನ್ನು ತಂದುಕೊಂಡು-
“ಡೇವಿಡ್ಡನ
ಮಗನಲ್ಲವೇ – ಏನು ಮಾಡಬೇಕೆಂದು ಕೇಳಿದ್ದು?” ಎಂದು ಪ್ರಶ್ನಿಸಿದರು.
“ಹೌದು”
ಎಂದಳು ಅತ್ತೆ.
“ಹಾಸಿಗೆಯಲ್ಲಿ
ಮಲಗಿಸು” ಅಂದರು ಮಿ. ಡಿಕ್ಕರು. ಮಿ. ಡಿಕ್ಕರ ಮಾತಿಗೆ ಅಪ್ಪೀಲೇ ಇರಲಿಲ್ಲ. ಒಬ್ಬ ಕೈದಿಯನ್ನು ಸಾಗಿಸುವಂತೆ
ಮುಂದೆ ಅತ್ತೆ, ಹಿಂದೆ ಜೇನೆಟ್ಟಳು ನಿಂತು, ಮಧ್ಯದಲ್ಲಿ ನನ್ನನ್ನು ನಿಲ್ಲಿಸಿ, ಮಹಡಿಯ ಮೇಲಕ್ಕೆ ಕರೆದುಕೊಂಡು
ಹೋದರು. ಅಲ್ಲಿ ಮೊದಲೇ ತಯಾರಿಸಿಟ್ಟಿದ್ದ ಹಾಸಿಗೆಯಲ್ಲಿ ನನ್ನನ್ನು ಮಲಗಿಸಿದರು. ಅಷ್ಟರಲ್ಲೇ ಅತ್ತೆ
ಬಹು ಗಾಬರಿಯಿಂದ, ಕತ್ತೆಗಳನ್ನು ಕಂಡಷ್ಟೇ ಗಾಬರಿಯಿಂದ, ಮಹಡಿಗೆ ಬರುತ್ತಿದ್ದ ದುರ್ವಾಸನೆಗೆ ಕಾರಣವೇನೆಂದು
ತಿಳಿದು ಬರಲು ಜೇನೆಟ್ಟಳಿಗೆ ಆಜ್ಞೆಯಿತ್ತಳು. ಜೇನೆಟ್ಟಳು ಮಾತ್ರ ಗಾಬರಿಗೊಳ್ಳದೆ ಅದು ನನ್ನ ಸಮಸ್ತ
ಬಟ್ಟೆಗಳನ್ನು ಬಚ್ಚಲ ಒಲೆಯಲ್ಲಿ ಸುಟ್ಟಿರುವುದರಿಂದ ಬರುವ ದುರ್ವಾಸನೆಯೆಂದು ಸಮಾಧಾನಪಡಿಸಿದಳು. ಅನಂತರ
ಅತ್ತೆ ನನ್ನ ಕೋಣೆಯಲ್ಲೊಂದು ಮಯಣಬತ್ತಿಯನ್ನು ಹೊತ್ತಿಸಿಟ್ಟು, ಬಾಗಿಲು ಹಾಕಿಕೊಂಡು, ಹೊರಗಡೆಯಿಂದ
ಬೀಗ ಬಂದೋಬಸ್ತು ಮಾಡಿಕೊಂಡು ಹೋದಳು. ಸಾಕಿದವರ ಮನೆಯಿಂದ ಕದ್ದೋಡುವ ದುಷ್ಟ ಚಟ ನನಗಿರಬೇಕೆಂದು ತಿಳಿದು
ಅತ್ತೆ ಹಾಗೆ ಮುಂಜಾಗ್ರತೆ ಮಾಡಿರಬೇಕೆಂದು ನಾನು ಊಹಿಸಿದೆನು.
ನಾನು
ಮಲಗಿದ್ದ ಕೋಣೆ ಚೊಕ್ಕಟವಾಗಿಯೂ ಬಹು ಅನುಕೂಲವಾಗಿಯೂ ಇತ್ತು. ನನ್ನ ಹಾಸಿಗೆಯ ಬದಿಯ ಕಿಟಕಿಯಿಂದ ಸಮುದ್ರ
ಕಾಣಿಸುತ್ತಿತ್ತು. ಸಮುದ್ರಕ್ಕಿಂತ ಸ್ವಲ್ಪ ಎತ್ತರದಲ್ಲಿ ಚಂದ್ರನಿದ್ದುದರಿಂದ, ಚಂದ್ರ ಸಮುದ್ರದಲ್ಲಿ
ಪ್ರತಿಫಲಿತವಾಗಿ, ಸಮುದ್ರ ಒಂದು ವಿಶಾಲವಾದ ಕನ್ನಡಿಯಂತೆ
ತೋರುತ್ತಿತ್ತು. ಚಂದ್ರನ ಸೌಮ್ಯವಾದ ಬೆಳಕೂ ವಿಶಾಲ, ಶಾಂತ ಸಮುದ್ರದ ಚಂದ, ರಾತ್ರಿಯ ತಂಪಾದ,
ಹದವಾಗಿ ಬೀಸುತ್ತಿದ್ದ ಗಾಳಿ, ಇವೆಲ್ಲವೂ ನನ್ನ ಮನಸ್ಸಿಗೆ ಬಹುವಾದ ಆನಂದವನ್ನು ಕೊಟ್ಟವು. ನನ್ನ ಕೋಣೆಯಲ್ಲಿನ
ದೀಪ ಉರಿದು ಮುಗಿದಿತ್ತಾದುದರಿಂದ, ದೈವದತ್ತವಾದ ಚಂದ್ರ ಕಿರಣಗಳೇ ನನಗೆ ಬೆಳಕಾಗಿ ಒಳಗೆ ಬರುತ್ತಿದ್ದುವು.
ನನ್ನ ಅಂತಃಪ್ರೇರಣೆಯಿಂದಲೇ ನಾನು ನನ್ನ ಹಾಸಿಗೆಯಲ್ಲೇ ಎದ್ದು ಕುಳಿತು, ಮೊಣಕೈಯ್ಯನ್ನು ಹಾಸಿಗೆಯಲ್ಲಿ
ಊರಿಕೊಂಡು ಸಮುದ್ರವನ್ನು ನೋಡಿದೆ. ಹಿಂದಿನ ನಾಲ್ಕಾರು ದಿನಗಳ ಶ್ರಮವನ್ನೂ ಅಂದಿನ ಅತ್ತೆಯ ಪ್ರೇಮಪೂರಿತ
ಉಪಚಾರಗಳನ್ನೂ ಗ್ರಹಿಸುತ್ತಾ ಕೃತಜ್ಞತೆ, ಪ್ರೇಮ, ದೇವರಲ್ಲಿ ನಂಬಿಕೆ ಮೊದಲಾದ ಸದ್ಭಾವಗಳು ನನ್ನ ಮನಸ್ಸಿನಲ್ಲಿ
ಮೂಡಿದುವು. ನನ್ನೆದುರು ತೋರಿಬರುತ್ತಿದ್ದ ಮಹಾ ಕನ್ನಡಿಯಲ್ಲಿ ನನ್ನ ಭವಿಷ್ಯ ಏನಿರಬಹುದೆಂದು ನೋಡಲು
ಪ್ರಯತ್ನಿಸಿರುವಂತೆ, ಮುಂದೆ ನನ್ನನ್ನು ಏನು ಮಾಡುವರು, ನನ್ನ ಜೀವನ ಏನಾಗಬಹುದೆಂದು ಯೋಚಿಸತೊಡಗಿದೆ.
ಸಮುದ್ರದಲ್ಲಿ ಪ್ರತಿಫಲಿತವಾಗಿ ಬರುತ್ತಿದ್ದ ಚಂದ್ರ ಪ್ರಭೆಯಲ್ಲೇ ನನ್ನ ತಾಯಿ ನಿಂತು ನನ್ನನ್ನೇ ನೋಡುತ್ತಿರುವಂತೆಯೂ
ದೇವರು, ದೇವರ ಅಪಾರ ಕರುಣಾಕಟಾಕ್ಷಗಳೂ ಇವೆಲ್ಲ ನನ್ನನ್ನು ಸಮಾಧಾನ ಮಾಡುತ್ತಿರುವಂತೆಯೂ ನನಗೆ ಭಾಸವಾಗುತ್ತಿತ್ತು.
ಆ ಸಂದರ್ಭ, ಸನ್ನಿವೇಶಗಳನ್ನು ತಂದುಕೊಟ್ಟಿದ್ದ ದೇವರು ನಿರಾಶ್ರಿತರ, ದೀನದರಿದ್ರರ, ಅನಾಥರ ಕುರಿತು
ಅನುಕಂಪ, ದಯಾ, ವಾತ್ಸಲ್ಯ ಮೊದಲಾದ ಗುಣಗಳು ನನ್ನಲ್ಲಿ ಸದಾ ಉಂಟಾಗುವಂತೆ ಅನುಗ್ರಹಿಸಬೇಕೆಂದು ದೇವರನ್ನು
ಪ್ರಾರ್ಥಿಸಿಕೊಂಡೆನು. ಹೀಗೆ ಸಮುದ್ರದ ಕಡೆಯ ತೇಜೋಮಯ ದೃಶ್ಯವನ್ನು ನೋಡುತ್ತಾ ಅಂದಿನ ಸುಖಾಂತ ಸನ್ನಿವೇಶಗಳನ್ನು
ಗ್ರಹಿಸುತ್ತಾ ಮೃದುವಾಗಿ ಮೈ ಮರೆಯುತ್ತಾ ಸ್ವಪ್ನಮಯ ಪ್ರಪಂಚದಲ್ಲಿ ತೇಲಿಹೋದೆನು.
(ಮುಂದುವರಿಯಲಿದೆ)
No comments:
Post a Comment