10 June 2014

ಸೆಲಂ ಶಾಲೆಯಲ್ಲಿ ನನ್ನ ಪ್ರಥಮ ಅರ್ಧವರ್ಷ

ಅಧ್ಯಾಯ ಏಳು
[ಡೇವಿಡ್ ಕಾಪರ್ಫೀಲ್ಡ್‌ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್ ಕನ್ನಡ ಭಾವಾನುವಾದ .ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಒಂಬತ್ತನೇ ಕಂತು
ಮರುದಿನ ವಿಧಿವತ್ತಾಗಿ, ಶ್ರದ್ಧಾಪೂರ್ವಕವಾಗಿ, ಶಾಲೆ ಪ್ರಾರಂಭವಾಯಿತು.  ವಿದ್ಯಾರ್ಥಿಗಳು ಮಾತು ನಗೆಗಳಿಂದ ಆವರಣವನ್ನೆಲ್ಲ ಹುರುಪುಗೊಳಿಸುತ್ತಿದ್ದರು. ಈ ರೀತಿ ಒಂದು ವಿಧದಲ್ಲಿ ಭೋರ್ಗರೆಯುತ್ತಿದ್ದ ಕ್ಲಾಸುಗಳು ಹಠಾತ್ತಾಗಿ ಶ್ಮಶಾನಸದೃಶವಾದ ನಿಶ್ಶಬ್ದತೆ ತಾಳಿದ್ದು ಕಂಡು ನಾನು ಬಾಗಿಲ ಕಡೆ ನೋಡಿದೆ. ಅಲ್ಲೇ, ಆಗತಾನೇ, ಮಿ. ಕ್ರೀಕಲರು ಟಂಗೆ ಸಮೇತರಾಗಿ ಬಂದು ನಿಂತಿದ್ದರು. ಕಟ್ಟು ಕಥೆಯ ರಾಕ್ಷಸ ತನ್ನ ಸೆರೆಯಾಳುಗಳನ್ನು ಭಕ್ಷಿಸುವ ಮೊದಲು ಅವರನ್ನೆಲ್ಲ ನಿಂತು ನೋಡಿ ಸಂತೋಷಪಡುವಂತೆ ಮಿ. ಕ್ರೀಕಲರು ನಮ್ಮನ್ನು ಅಧಿಕಾರ ಮತ್ತತೆಯ ಆನಂದದಿಂದ ನೋಡಿ ಸಂತೋಷಪಡುತ್ತಿದ್ದರು. ಮಿ. ಕ್ರೀಕಲರ ರೂಪವೂ, ಅಲ್ಲಿನ ಸನ್ನಿವೇಶವೂ ಕಥೆಯ ರಾಕ್ಷಸನ ರೂಪ, ಸನ್ನಿವೇಶಗಳಿಗಿಂತ ಭಯಂಕರವಾಗಿದ್ದುವು. ಮಕ್ಕಳೇ, ಶಬ್ದ ಮಾಡಬೇಡಿರಿ ಎಂದು ಟಂಗೆ ಆರ್ಭಟಿಸಿದುದು ಕೇವಲ ಸಾಂಪ್ರದಾಯಿಕ ಘೋಷಣೆಯಾಗಿತ್ತೇ ಹೊರತು ಹಾಗೆ ಎಚ್ಚರಿಸುವ ಅಗತ್ಯವೇ ಇಲ್ಲದಿದ್ದಷ್ಟರ ನಿಶ್ಶಬ್ದ ಪರಿಸ್ಥಿತಿ ಅಲ್ಲಿತ್ತು. ಮಿ. ಕ್ರೀಕಲರು ಮಾತಾಡಿದ್ದನ್ನು ನಾವೆಲ್ಲ ಕಂಡೆವು, ಜತೆಯಲ್ಲೇ ಟಂಗೆಯ ವಚನಗಳನ್ನು ಕೇಳಿದೆವು. ಅಂದಿನ ಪೀಠಿಕಾ ವಚನಗಳು ಈ ತೆರನಾಗಿದ್ದುವು
ಮಕ್ಕಳೇ ಹೊಸ ವರ್ಷಾರಂಭವು ಈ ದಿನವೇ ಆಗಿದೆ. ನೀವು ನಿಮ್ಮ ಪಾಠಗಳನ್ನು ಹೊಸ ಹುರುಪಿನಿಂದ ಕಲಿಯತಕ್ಕದ್ದು. ನಿಮಗೆ ಕಲಿಯುವ ಹುರುಪು ಕಡಿಮೆಯಾದರೆ ನನಗೂ, ನನ್ನ ಬೆತ್ತಕ್ಕೂ ಹುರುಪು ಹೆಚ್ಚುವುದು. ನಾನು ನಿರ್ದಾಕ್ಷಿಣ್ಯವಂತನು, ತಿಳಿಯಿತೇ? ಪಾಠಗಳನ್ನು ನೀವು ಆಲಸತನದಿಂದ ಮರೆತು ಮನಸ್ಸಿನಿಂದ ಮಾಸಿಕೊಳ್ಳಬಹುದಾದರೂ ನನ್ನ ಬೆತ್ತದಿಂದ ನಿಮ್ಮ ಬೆನ್ನಿನಲ್ಲಾಗುವ ಕಲೆಗಳು ಮಾಸಲಾರವು, ತಿಳಿಯಿತೇ? ಸರಿ, ಪ್ರಾಠಗಳು ಪ್ರಾರಂಭವಾಗಲಿ.

ಈ ಭಾಷಣವಾದನಂತರ ಅವರು ನನ್ನ ಹತ್ತಿರ ಬಂದು ನಿಂತು ಬೆತ್ತವನ್ನು ತೋರಿಸಿ
ಹೇಗೆ, ಈ ಬೆತ್ತ ಚುರುಕಾಗಿದೆಯೇ? ಎಂದು ಕೇಳುತ್ತಾ ನನ್ನ ಶರ್ಟನ್ನು ಎತ್ತಿ ಹಿಡಿದುಕೊಂಡು ಬೆನ್ನಿಗೆ ಹೊಡೆಯಲಾರಂಭಿಸಿದರು.
ಒಂದುಹಲ್ಲಿನ ರುಚಿ ಹೇಗೆ? ? ಎರಡು ಹಲ್ಲಿನ ರುಚಿ ಹೇಗೆ? ? ಕಚ್ಚಿದ ಮಾಂಸದ ರುಚಿ ಹೇಗೆ? ? ಕಚ್ಚಿದರೆ ಹೇಗಾಗುತ್ತೆ? ಗೊತ್ತಾಯಿತೇ, ಎಂದನ್ನುತ್ತಾ ಪ್ರತಿ ವಾಕ್ಯಕ್ಕೆ ಒಂದರಂತೆ ಕೆಲವು ಸರ್ತಿ ಎರಡರಂತೆ ಬೆತ್ತದಿಂದ ಹೊಡೆದು ಸೆಲಂ ಶಾಲೆಯ ರುಚಿ ತೋರಿಸಿದರು. ಪೆಟ್ಟಿನ ನೋವು ಭಾರಗಳಿಂದ ಮೈ ಬಿಸಿಯಾಯಿತು, ಮತ್ತು ಕಣ್ಣಲ್ಲಿ ನೀರು ಸುರಿಯಲಾರಂಭಿಸಿತು. ಶಾಲಾರಂಭದ ದಿನ ಈ ವಿಧದ ವೈಯಕ್ತಿಕವಾದ ಮರ್ಯಾದೆ ನನಗೆ ಮಾತ್ರ ಲಭಿಸಿದುದಲ್ಲ ಶಾಲೆಯಲ್ಲಿದ್ದ ಬಾಲಕರಲ್ಲಿ ಅರ್ಧಾಂಶದಷ್ಟು ಬಾಲಕರಿಗೂ ಲಭಿಸಿತು. ಮಧ್ಯಾಹ್ನದೊಳಗೆ ಎಲ್ಲರೂ ಮೈ ಕೈ ಉಜ್ಜಿಕೊಂಡು ಅಲ್ಲಲ್ಲಿ ದುಃಖಿಸಿ ಅಳುತ್ತಿದ್ದರು. ಮೃದು ಚರ್ಮವಿದ್ದು ಉರುಟುರುಟಾಗಿ ಬೆಳೆದಿದ್ದವರ ಮೇಲೆ ಈ ವಿಧದ ಪ್ರಯೋಗ ಮಾಡಲಂತೂ ಮಿ. ಕ್ರೀಕಲರಿಗೆ ಬಹಳವಾದ ಉತ್ಸಾಹವೇ ಇತ್ತು. ಅಂಥ ಉತ್ಸಾಹ ಒಂದು ಆವೇಶವೇ ಆಗಿ ಪರಿಣಮಿಸುವುದೂ ಇತ್ತು.
ಆ ಮೂರ್ಖನನ್ನು ಜ್ಞಾಪಿಸಿಕೊಂಡಾಗಲೆಲ್ಲಾ ನನ್ನ ರಕ್ತ ಬಿಸಿಯೇರುತ್ತದೆ. ಅನಾಥ, ಆರ್ತ ಬಾಲಕರು ಆ ಕ್ರೂರ ದೇವತೆಗೆ ಬಲಿಯಾಗಿ ಪುಡಿ ಹೊಂದುತ್ತಿದ್ದ ಕ್ರಮವನ್ನೂ ವಿದ್ಯೆಯ ವಿಷಯದಲ್ಲಿ  ಅವನಿಗಿದ್ದ ಅಲ್ಪತರದ ಜ್ಞಾನವನ್ನೂ, ಇಂತಹ ಜವಾಬ್ದಾರೀ ಸ್ಥಾನಗಳ ಕುರಿತಾಗಿ ಅವನಿಗೆ ಇದ್ದ ಇತರ ಅಯೋಗ್ಯತೆಯನ್ನೂ ಗ್ರಹಿಸಿದರೆ, ನಮ್ಮ ಸಮಾಜ ಸ್ವಲ್ಪವೂ ಆಲೋಚಿಸದೆಯೇ ಅಂಥ ಅಯೋಗ್ಯರ ವಶಕ್ಕೆ ತಮ್ಮ ಎಳೆ ಬಾಲಕರನ್ನು ಒಪ್ಪಿಸಿ, ಆ ವಿಧದಲ್ಲಿ ತಮ್ಮ ಮುಂದಿನ ಸಮಾಜವನ್ನೇ ಹಾಳುಮಾಡುತ್ತಿದೆಯಲ್ಲಾ ಎಂದು ವ್ಯಸನವಾಗುವುದು. ನೆಲ ಜಲಗಳ ಸೈನ್ಯಗಳ ಮಹಾಧಿಕಾರಿಗಳು ತಮ್ಮ ಕೈಯ್ಯೊಳಗಿನ ತರಬೇತಿಗಾಗಿ ಬರುವ ಸೈನಿಕರನ್ನು ತಮ್ಮ ಅಜ್ಞತೆ, ಅಯೋಗ್ಯತೆಗಳಿಂದ ಹಾಳುಮಾಡುವಾಗ ಆಗುವ ದೇಶದ್ರೋಹಕ್ಕಿಂತ ಹೆಚ್ಚಿನ ದೇಶದ್ರೋಹ ಇಂಥ ಉಪಾಧ್ಯಾಯ ವರ್ಗ ತಮ್ಮಲ್ಲಿಗೆ ಬಂದ ಬಾಲಕರ ಮಿದುಳನ್ನು ಹಾಳು ಮಾಡುವುದರಿಂದ ಆಗುತ್ತದೆಂದು ನನ್ನ ಅಭಿಪ್ರಾಯ.
ಕ್ಲಾಸಿನ ಒಂದು ತುದಿಯಲ್ಲಿ ಮಿ. ಕ್ರೀಕಲರು ಕುಳಿತುಕೊಳ್ಳುತ್ತಿದ್ದರು. ಒಬ್ಬ ಹುಡುಗನನ್ನು ಬಡಿದಪ್ಪಳಿಸಿದನಂತರ ಮತ್ತೊಬ್ಬನನ್ನು ಬಡಿಯುತ್ತಿದ್ದರು. ಟಂಗೆ ಬಾಲಕರನ್ನು ಕ್ರಮಬದ್ಧವಾಗಿ ಒಬ್ಬನಾದ ನಂತರ ಒಬ್ಬನಂತೆ ಕಳುಹಿಸಿ ಕೊಡುತ್ತಿದ್ದನು. ಬಾಲಕರು ಪ್ರಶ್ನೆಗಳಿಗೆ ಉತ್ತರ ಕೊಡಲಾರದೆ ಸೋಲಬೇಕೆಂಬ ಉದ್ದೇಶದಿಂದಲೇ ಆ ನಮೂನೆಯ ಪ್ರಶ್ನೆ ಹಾಕುವುದೂ, ಈ ರೀತಿ ಅವರನ್ನು ಸೋಲಿಸಿ ಹೊಡೆಯುವುದೂ ಅವರ ಮುಖ್ಯ ಕೆಲಸವಾಗಿತ್ತು.
ಮಿ. ಕ್ರೀಕಲರ ಮನೆಯ ಸಾಧಾರಣ ಎಲ್ಲ ಕಿಟಕಿಗಳಿಂದಲೂ ನಮ್ಮ ಆಟದ ಮೈದಾನವನ್ನು ಕಾಣಬಹುದಾದಂತೆ ಮನೆಯ ಕಿಟಕಿಗಳಿದ್ದುವು. ಸ್ಟಿಯರ್ಫೋರ್ತನೊಬ್ಬನನ್ನು ಬಿಟ್ಟು ಇತರ ಎಂಥ ಬಾಲಕನೇ ಆದರೂ, ಎಂಥ ಆವೇಶಭರಿತ ನಗೆ, ಹಾರಾಟಗಳಲ್ಲೇ ಇದ್ದರೂ, ಮಿ. ಕ್ರೀಕಲರ ತಲೆಯ ಅತಿ ಚಿಕ್ಕ ಭಾಗವನ್ನೇ ಕಂಡದ್ದಾದರೂ, ಆ ಕೂಡಲೇ ಅವನ ಉತ್ಸಾಹ, ಹಾರಾಟವೆಲ್ಲ ನಿಂತುಬಿಡುತ್ತಿದ್ದುವು. ನಾವು ಯಾವ ಕಡೆಗೇ ಮುಖ ಹಾಕಿಕೊಂಡಿದ್ದರೂ ಮಿ. ಕ್ರೀಕಲರ ದೃಷ್ಟಿ ನಮ್ಮ ಮೇಲೇ ಇದೆಯೆಂದು ನಮ್ಮ ನಂಬಿಕೆ. ಅವರು ಅವರ ಮನೆಯಲ್ಲಿ ಇದ್ದರೂ ಇರದಿದ್ದರೂ, ಅವರು ಆ ಕನ್ನಡಿ ಕಿಟಕಿಗಳ ಮೂಲಕ ನಮ್ಮನ್ನು ನೋಡಬಲ್ಲರೆಂಬ ನಮ್ಮ ತಿಳಿವಳಿಕೆ ಆ ಕನ್ನಡಿಗಳಿಗೂ ಸಹ ಕ್ರೀಕಲರಷ್ಟೆ ನಮ್ಮನ್ನು ಭಯಗೊಳಿಸುವ ಶಕ್ತಿಯನ್ನು ಕೊಟ್ಟಿತ್ತು.
ಒಂದು ದಿನ ನಮ್ಮ ಆಟದ ಚಂಡು ಮಿ. ಕ್ರೀಕಲರ ಕಿಟಕಿಯ ಕನ್ನಡಿಯನ್ನು ಅಕಸ್ಮಾತ್ತಾಗಿ ಪುಡಿ ಮಾಡಿದಾಗ, ಆ ಪ್ರಸಂಗದಲ್ಲಿ ಗುರಿಯಾಗಿ ಸಿಕ್ಕಿದ ಟ್ರೇಡಲ್ಸನು ತುಂಬಾ ಪೆಟ್ಟು ತಿಂದಿರುತ್ತಾನೆ. ಆ ಪೆಟ್ಟು ಟ್ರೇಡಲ್ಸನಿಗಾದ್ದರಿಂದ ಮಾತ್ರ ಸದಾ ಹರ್ಷ ಚಿತ್ತತೆಯಿಂದ ಇರುವ ಅವನ ಸ್ವಭಾವದಿಂದ ವಿಶೇಷ ಯಾರಿಗೂ ಅದರ ನೋವು, ಅಥವಾ, ವೈಪರೀತ್ಯ ತಿಳಿಯಲಿಲ್ಲ. ತನ್ನ ದುಃಖ ಶಮನಕ್ಕಾಗಿ ಅವನು ಕಾಗದದ ಚೂರುಗಳಲ್ಲೂ, ಸ್ಲೇಟಿನಲ್ಲೂ ತುಂಬಾ ಅಸ್ತಿ ಪಂಜರಗಳ ನಕ್ಷೆ ಬಿಡಿಸಿ, ಪೆಟ್ಟು ತಿಂದ ವರದಿಯನ್ನು ತನ್ನ ಚಿಕ್ಕಪ್ಪನಿಗೆ ಬರೆದು ದುಃಖವನ್ನೂ ನೋವನ್ನೂ ಮರೆತನು.
ನಮ್ಮ ಶಾಲಾ ವಠಾರದಲ್ಲೆಲ್ಲ ಅತ್ಯಂತ ದೊಡ್ಡ, ಘನವ್ಯಕ್ತಿಯೆಂದರೆ ಸ್ಟಿಯರ್ಫೋರ್ತನು ಎಂದು ನಾನು ಗ್ರಹಿಸಿದ್ದೆ. ಸ್ಟಿಯರ್ಫೋರ್ತನ ಅನೇಕ ಮಹಾ ಗುಣ, ಪ್ರಭಾವಗಳ ಜತೆಯಲ್ಲಿ ಅವನ ಠೀವಿ, ಮರ್ಜಿಗಳೂ ಮಹತ್ತರದವೇ ಆಗಿದ್ದುವು. ಅವನು ಮಿ. ಕ್ರೀಕಲರ ಸಂಸಾರದೊಂದಿಗೆ ಇಗರ್ಜಿಗೆ ಹೋಗುವಾಗ ಕ್ರೀಕಲರ ಮಗಳ ಕೈಯನ್ನು ಹಿಡಿದುಕೊಂಡು ಅವರಿಬ್ಬರು ಸರಿಸಮಾನರಾಗಿ, ಠೀವಿಯಿಂದ ನಡೆದು ಹೋಗುತ್ತಿದ್ದ ಅಮೋಘ ದೃಶ್ಯವನ್ನು ನಾನೆಂದಿಗೂ ಮರೆಯೆನು. ಸ್ಟಿಯರ್ಫೋರ್ತನ ಅನಂತರದ ಎರಡನೇ ಸ್ಥಾನವನ್ನು ಮಿ. ಶಾರ್ಪರಿಗೂ ಮಿ. ಮೆಲ್ಲರಿಗೂ ನಾನು ಕೊಟ್ಟಿದ್ದೆ. ಅಷ್ಟೊಂದು ಜನ ವಿದ್ಯಾರ್ಥಿಗಳಿಗೆ ಜ್ಞಾನ ಒದಗಿಸುತ್ತಿದ್ದ ಅವರ ಜ್ಞಾನ ಭಂಡಾರವನ್ನು ಮೆಚ್ಚಿ ಮಾತ್ರ ಅವರಿಗೆ ಆ ಸ್ಥಾನವನ್ನು ಕೊಟ್ಟಿದ್ದೆ. 
ಒಂದು ದಿನ ನಾವು ಸಂಜೆಯ ಸಮಯ ಜತೆ ಸೇರಿ ಮಾತಾಡುತಿದ್ದಾಗ ಒಬ್ಬ ಹುಡುಗನನ್ನು ಒಂದು ಕಥೆಯ ಕಥಾನಾಯಕನಿಗೆ ಅವನು ಹೋಲುತ್ತಾನೆಂದು ನಾನು ಹೇಳಬೇಕಾಯ್ತು. ನನ್ನ ಹೋಲಿಕೆಯನ್ನು ಕೇಳಿ ನನಗೆ ಕಥೆ ಬರುತ್ತಿದೆಯೆಂದು ಸ್ಟಿಯರ್ಫೋರ್ತನು ತಿಳಿದು, ನನ್ನಿಂದ ಕಥೆ ಹೇಳಿಸುವ ಕೂಟವನ್ನೇ ಏರ್ಪಡಿಸಿದನು.
ಸ್ಟಿಯರ್ಫೋರ್ತನಿಗೆ ನಿದ್ರೆ ಬಹು ಕಡಿಮೆ. ಅವನಿಗೆ ಮನೋರಂಜಕ ವಿಷಯಗಳೆಂದರೆ ಬಹು ಇಷ್ಟ. ಹೀಗಾಗಿ ನಾನು ಈ ಶಾಲೆಯಲ್ಲಿ ನನ್ನ ಪ್ರಥಮದ ಅರ್ಧ ವರ್ಷವಿಡೀ ಕಥೆ ಹೇಳಿರುತ್ತೇನೆ. ಈ ಕಥೆಗಳ ಕೂಟ ಏರ್ಪಾಡಾಗುವ ಸಮಯದಲ್ಲೇ ನಮ್ಮ ಮನೆಯಿಂದ ತಾಯಿ ಸ್ವಲ್ಪ ತಿಂಡಿ ಮತ್ತೂ ಒಂದೆರಡು ಕುಪ್ಪಿ ವೈನನ್ನು ಕಳುಹಿಸಿಕೊಟ್ಟಿದ್ದಳು. ತಿಂಡಿಯನ್ನು ಅದು ಬಂದ ದಿನವೇ ನಾವೆಲ್ಲಾ ಹಂಚಿಕೊಂಡು ತಿಂದೆವು. ಆದರೆ ವೈನನ್ನು ಸ್ಟಿಯರ್ಫೋರ್ತನು ನನಗಾಗಿ ಕಾದಿಟ್ಟಿದ್ದನು. ನಾನು ಕಥೆ ಹೇಳಿ ಸ್ವರ ಬೀಳುವಾಗ ಸ್ವಲ್ಪ ಸ್ವಲ್ಪ ವೈನನ್ನು ನನಗೆ ಕೊಡುತ್ತಾ ನನ್ನ ಸ್ವರವನ್ನು ಕಾಪಾಡುವುದಾಕ್ಕಾಗಿ ಈ ವೈನು ಉಪಯೋಗಿಸಲಾಯಿತು. ನನಗೆ ಕಥೆ ಹೇಳುವದರಲ್ಲಿ ಬಹಳ ಆಸಕ್ತಿಯಿತ್ತು. ದಿನಗಳು ದಾಟಿದ ಹಾಗೆಲ್ಲಾ ನನ್ನ ವ್ಯಾಸಂಗದಲ್ಲಿ ನಾನು ಅಭಿವೃದ್ಧಿ ಪಡೆಯುತ್ತಾ ಬಂದೆನು, ಈ ಕಾರಣದಿಂದ ನಮ್ಮ ಗುಂಪಿನಲ್ಲಿ ನಾನೊಬ್ಬ ಗಣನೀಯ ವ್ಯಕ್ತಿಯಾಗತೊಡಗಿದೆ. ನಾನು ಕಥೆ ಹೇಳುವಾಗ ಮೂಲ ಕಥೆಗಳಿಗೆ ಎಷ್ಟೆಲ್ಲಾ ಕೂಡಿಸಿರುವೆ ಅಥವ ಅವುಗಳಿಂದ ಎಷ್ಟೆಲ್ಲಾ ಅಡಗಿಸಿರುವೆ, ಎಂಬುದನ್ನು ಊಹಿಸಿ ನೋಡುವಾಗಲೇ ನನಗೆ ನಾಚಿಕೆಯಾಗುತ್ತದೆ. ನನ್ನ ಕಥೆಗಳಲ್ಲಿ ದುಃಖ ಪ್ರಸಂಗಗಳು ಬಂದಾಗ, ಅವುಗಳನ್ನು ಕೇಳುತ್ತಿದ್ದ ಮೃದು ಮನಸ್ಸಿನ ಟ್ರೇಡಲ್ಸನು ಒಮ್ಮೊಮ್ಮೆ ಅತ್ತು, ಆ ಕೂಡಲೇ ಮನಶ್ಶಾಂತಿಗಾಗಿ ಅಸ್ತಿಪಂಜರಗಳ ನಕ್ಷೆಗಳನ್ನು ಬಿಡಿಸುತ್ತಿದ್ದನು. ಆದರೆ, ಆದೇ ಟ್ರೇಡಲ್ಸನು ಸಂತೋಷ ಪ್ರಸಂಗಗಳನ್ನು ಕೇಳಿದಾಗ ಬಾಯಿ ಕಳೆದು ನಗಾಡುತ್ತಲೂ, ಭಯಂಕರ ಪ್ರಸಂಗಗಳನ್ನು ಕೇಳಿದಾಗ ಹಲ್ಲು ಕಚ್ಚಿಕೊಂಡು ನಡುಗುತ್ತಲೂ ಇದ್ದನು. ಇಂಥ ಒಂದು ಸಂದರ್ಭದಲ್ಲಿ ಅಡಗಿ ಗಸ್ತು ತಿರುಗುತ್ತಿದ್ದ ಮಿ. ಕ್ರೀಕಲರ ಗಮನಕ್ಕೆ ಅವನು ಬಿದ್ದು ತುಂಬಾ ಪೆಟ್ಟು ತಿಂದುದೂ ಉಂಟು.
ಮಿ.ಮೆಲ್ಲರು ನನ್ನನ್ನು ಕುರಿತು ವಿಶೇಷ ಗಮನ ಕೊಡುತ್ತಿದ್ದುದರಿಂದಲೂ ಸ್ಟಿಯರ್ಫೋರ್ತನ ಸಹವಾಸ ಮತ್ತೂ ಕಥಾಕಾಲಯಾಪನೆಗಳಿಂದ ನಾನು ಸ್ವಲ್ಪ ಸಂತೋಷದಿಂದಲೇ ಇರುತ್ತಿದ್ದುದರಿಂದಲೂ ನಾನು ಪಾಠಗಳನ್ನು ಚೆನ್ನಾಗಿ ಕಲಿಯುತ್ತಿದ್ದೆ. ನಾನು ಮಿ. ಮೆಲ್ಲರನ್ನು ಎಷ್ಟೇ ಮರ್ಯಾದೆಯಿಂದ ಕಾಣುತ್ತಿದ್ದರೂ ಸ್ಟಿಯರ್ಫೋರ್ತನು ಮಾತ್ರ ಅವರನ್ನು ಬಹು ಹೀನವಾಗಿ ಕಾಣುತ್ತಿದ್ದನು. ಮತ್ತೂ ಸಂದರ್ಭ ದೊರಕಿದಾಗಲೆಲ್ಲಾ ಇತರರಿಂದ ಅವರನ್ನು ಕುಚೇಷ್ಟೆ ಮಾಡಿಸುತ್ತಲೂ ಇದ್ದನು.
ಒಂದು ದಿನ ಒಂದು ಸಂದರ್ಭದಲ್ಲಿ ಸ್ಟಿಯರ್ಫೋರ್ತನಿಗೂ ಮಿ. ಮೆಲ್ಲರಿಗೂ ಒಂದು ವಿಧದ ವಾಗ್ಯುದ್ಧವಾಯಿತು. ಆ ಸಂದರ್ಭವನ್ನು ಇಲ್ಲಿ ಹೇಳಬೇಕಾಗಿದೆ. ಶನಿವಾರ ದಿನ ಮಧ್ಯಾಹ್ನದನಂತರ ಶಾಲೆಗೆ ರಜ ಕೊಡುವುದು ರೂಢಿಯಾಗಿದ್ದರೂ ಒಂದು ದಿನ ಮಿ. ಕ್ರೀಕಲರಿಗಾಗಿ ಶನಿವಾರ ಮಧ್ಯಾಹ್ನವೂ ಶಾಲೆ ನಡೆಸಬೇಕಾಯಿತು. ಅವರು ಅಸೌಖ್ಯವಾಗಿದ್ದುದರಿಂದ ವಿದ್ಯಾರ್ಥಿಗಳು ಗೌಜು ಗದ್ದಲ ಮಾಡದಂತೆ ತಡೆಯಲೋಸ್ಕರ ಶಾಲೆ ನಡೆಸಲಾಗಿತ್ತು. ಮಿ. ಮೆಲ್ಲರ ಕ್ಲಾಸಿನಲ್ಲಿ ಹುಡುಗರು ಗುಲ್ಲೆಬ್ಬಿಸಿ, ಅವ್ಯವಸ್ಥೆಯನ್ನೇ ಉಂಟುಮಾಡಿದರು. ಇದನ್ನೆಲ್ಲ ನೋಡುತ್ತಾ, ಒಂದು ರೀತಿಯಲ್ಲಿ ಪ್ರೋತ್ಸಾಹಿಸುತ್ತಾ ನಿಂತಿದ್ದ ಸ್ಟಿಯರ್ಫೋರ್ತನನ್ನು ನೋಡಿ, ಅವನಾದರೂ ಶಾಂತನಾಗಿರಬೇಕು, ಶಿಸ್ತಿನಿಂದಿರಬೇಕು ಎಂದು ಮಿ. ಮೆಲ್ಲರು ನುಡಿದರು. ಅವರು ಎಷ್ಟೇ ಮರ್ಯಾದೆಯಿಂದಲೇ ಮಾತಾಡಿದರೂ ಸ್ಟಿಯರ್ಫೋರ್ತನು ಬಹು ನಿಕೃಷ್ಟ ರೀತಿಯಲ್ಲೇ ಉತ್ತರ ಕೊಡತೊಡಗಿದನು. ಕೊನೆಗೆ ನಿರ್ವಾಹವಿಲ್ಲದೆ,
ಮಿ. ಸ್ಟಿಯರ್ಫೋರ್ತ್, ನೀವು ಬುದ್ಧಿವಂತರು, ದೊಡ್ಡವರು, ದೊಡ್ಡವರ ಆಶ್ರಯವಿರುವವರು, ದಯಮಾಡಿ ಈ ಗಲಭೆ ನಿಲ್ಲಿಸಲು ನನ್ನೊಡನೆ ಸಹಕರಿಸಿ ಎಂದುಮಿ. ಮೆಲ್ಲರು ಅಂದರು.
ಈ ಗಲಭೆ, ಚರ್ಚೆಗಳನ್ನೆಲ್ಲಾ ದೂರದಿಂದ ಕೇಳುತ್ತಿದ್ದ ಮಿ. ಕ್ರೀಕಲರು ಶಾಲೆಗೆ ಹಠಾತ್ತಾಗಿ ಪ್ರವೇಶಿಸಿ ಮಿ, ಮೆಲ್ಲರನ್ನೇ ವಿಚಾರಣೆ ಮಾಡತೊಡಗಿದರು. ದೊಡ್ಡವರ ಆಶ್ರಯವಿರುವವರು ಎಂಬ ವಾಕ್ಯ ತಮಗೆ ಅಪಮಾನಕರವೆಂದು ಕೊನೆಗೆ ಅವರು ನಿರ್ಧರಿಸಿ, ಮತ್ತೂ ಸ್ಟಿಯರ್ಫೋರ್ತನ ಋಜುವಾತುಗಳಲ್ಲಿ ಮಿ. ಮೆಲ್ಲರು ನಿರ್ಗತಿಕರು ತಾಯಿಯನ್ನು ಅನಾಥಾಶ್ರಮದಲ್ಲಿ ಸಾಕಲು ಬಿಟ್ಟವರು- ಎಂದು ಮೊದಲಾಗಿ ತಿಳಿದು, ಆ ಕೂಡಲೇ ಮಿ. ಮೆಲ್ಲರನ್ನು ಶಾಲೆಯ ಉಪಾಧ್ಯಾಯ ಕೆಲಸದಿಂದ ಡಿಸ್ಮಿಸ್ ಮಾಡಿಬಿಟ್ಟರು.
ಮಿ. ಮೆಲ್ಲರು ತಿರುಕರೂ, ನೀಚರೂ ಮತ್ತು ತಮ್ಮ ಯೋಗ್ಯತೆಯನ್ನು ಆ ಮೊದಲೇ ತಿಳಿಸದಿದ್ದ ವಂಚಕರೂ ಎಂದು ಮೊದಲಾಗಿ ಮಿ. ಕ್ರೀಕಲರು ಹೇಳುತ್ತಾ ತಮ್ಮ ಘನ ವಿದ್ಯಾನಿಲಯದಲ್ಲಿ ಭ್ರಷ್ಟತನ ಪಸರಿಸದಂತೆ ಸಮಯೋಚಿತವಾಗಿ ಕಾದುಕೊಂಡು, ಗುಟ್ಟನ್ನು ರಟ್ಟುಪಡಿಸಿದುದಕ್ಕಾಗಿ, ಸ್ಟಿಯರ್ಫೋರ್ತನನ್ನು ಹೊಗಳಿ, ಹಸ್ತಲಾಘವವನ್ನಿತ್ತರು.
ಆದರೆ ಮಿ. ಮೆಲ್ಲರು ಡಿಸ್ಮಿಸ್ ಆದ ವಿಷಯದಲ್ಲಿ ಟ್ರೇಡಲ್ಸನೂ, ನಾನೂ ದುಃಖಿಸುತ್ತಿದ್ದೆವು. ಮಿ.ಮೆಲ್ಲರು ಅವರ ಪುಸ್ತಕಗಳನ್ನು ತೆಗೆದುಕೊಂಡು ನಮ್ಮೆದುರೇ ಶಾಲೆಯನ್ನು ಬಿಟ್ಟು - ಅದರಲ್ಲೂ ನನ್ನನ್ನು ಹರಸುತ್ತಾ ಬಿಟ್ಟು ಹೋದದ್ದನ್ನು ಕಂಡು ಟ್ರೇಡಲ್ಸನು ಕಣ್ಣೀರು ಹಾಕಿದನು. ಇದನ್ನು ಕಂಡು ಮಿ. ಕ್ರೀಕಲರು ಊರಿಂದೂರೇ ಮಿ. ಮೆಲ್ಲರು ಡಿಸ್ಮಿಸ್ ಆದುದಕ್ಕೆ ಸಂತೋಷಪಡುವಾಗ ದುಃಖಪಡುವ ಈ ಮೂರ್ಖನ್ಯಾರು ಎಂದಂದುಕೊಂಡು ಟ್ರೇಡಲ್ಸನನ್ನು ಚೆನ್ನಾಗಿ ಹೊಡೆದರು. ಮಿ. ಕ್ರೀಕಲರು ಅವರ ಮನೆಗೆ ಹೋದ ಕೂಡಲೇ ಟ್ರೇಡಲ್ಸನು ಹತ್ತಾರು ಅಸ್ತಿಪಂಜರಗಳ ಚಿತ್ರ ಬಿಡಿಸಿ, ತನ್ನ ಪೂರ್ವದ ಹರ್ಷಚಿತ್ತತೆಗೆ ಬಂದನು. ನಾನು ಸ್ಟಿಯರ್ಫೋರ್ತನ ಕುರಿತು ಸ್ವಲ್ಪ ಅಸಮಾಧಾನಪಟ್ಟುಕೊಂಡೆನು. 
ನಮ್ಮ ಶಾಲೆಯಲ್ಲಿನ ಇದೇ ಪ್ರಥಮ ಅರ್ಧ ವರ್ಷದಲ್ಲಿ ಜರುಗಿದ ಇನ್ನೊಂದು ವಿಶೇಷವೇನೆಂದರೆ: ಯಾರ್ಮತ್ತಿನಿಂದ ಮಿ. ಪೆಗಟಿ ಮತ್ತು ಹೇಮರು ನನ್ನನ್ನು ನೋಡಲು ಬಂದದ್ದು. ಅವರು ಬರುವಾಗ್ಗೆ ಬುತ್ತಿ, ತಿಂಡಿ, ಹಣ್ಣು ಮೊದಲಾದುವುಗಳನ್ನು ನನಗಾಗಿ ತಂದಿದ್ದರು. ಅವರನ್ನು ನಾನು ನೋಡಲು ಹೋಗುವ ಮೊದಲು ನನ್ನನ್ನು ಚೆನ್ನಾಗಿ ಮೀಯಿಸಿ, ಒಳ್ಳೆ ದುಸ್ತು ಮಾಡಿದ್ದರು. ಈ ಶಾಲೆಗೆ ಬಾಲಕರ ತಂದೆ ತಾಯಿಗಳೋ, ಅಥವಾ, ಸಂಬಂಧಪಟ್ಟವರೋ ತಮ್ಮ ಕಡೆಯ ಬಾಲಕರನ್ನು ನೋಡಲು ಬರುವಾಗಲೆಲ್ಲ ಇದೇ ರೀತಿ ಬಾಲಕರನ್ನು ಅಲಂಕರಿಸಿ ಕಳುಹಿಸುತ್ತಿದ್ದರು. ಶಾಲೆಯ ಏರ್ಪಾಡುಗಳನ್ನು ಬಂದವರು ಕಂಡು ಮೆಚ್ಚಿ, ಪ್ರತಿದಿನವೂ ಹಾಗೆಯೇ ಏರ್ಪಾಡುಗಳಿವೆಯೆಂಬ (ಟೊಳ್ಳಿನ) ಪ್ರದರ್ಶನಕ್ಕಾಗಿ ಹೀಗೆ ಮಾಡುತ್ತಿದ್ದರು.
ನಾನು ಸ್ಟಿಯರ್ಫೋರ್ತನಿಗೆ ಮಿ. ಪೆಗಟಿ ಮತ್ತು ಹೇಮರ ಪರಿಚಯ ಮಾಡಿಕೊಟ್ಟೆನು. ಈ ಪರಿಚಯ ಮಾಡಿಕೊಡುವ ಸಂತೋಷದಲ್ಲಿ ಅವರ ಮನೆ, ಮನೆಯ ವಠಾರ, ಅವರ ಆದರಾತಿಥ್ಯ, ಸರಳತೆ ಮೊದಲಾದುವುಗಳನ್ನೆಲ್ಲ ಹೃತ್ಪೂರ್ವಕವಾಗಿ ವರ್ಣಿಸಿ ಹೇಳಿದೆ. ಅವರ ಅನುಪಮ ಗುಣವರ್ಣನೆಯಂತೆಯೇ ನನ್ನ ಕಡೆಯ ಸ್ಟಿಯರ್ಫೋರ್ತನ ಗುಣವನ್ನೂ ಹೊಗಳಿದೆ. ಅವನು ನನ್ನ ಪರಮಸ್ನೇಹಿತ, ರಕ್ಷಕ, ಆದರ್ಶ ವಿದ್ಯಾರ್ಥಿ, ಪ್ರಾಯಕ್ಕೂ ಮೀರಿದ ಪ್ರಾಜ್ಞ, ವಿದ್ಯಾವಂತ, ಎಂದು ಮೊದಲಾಗಿ ಉತ್ಸಾಹ ಭರದಲ್ಲಿ ವರ್ಣಿಸಿದೆ.
ಈ ಪರಿಚಯದ ಸಂದರ್ಭದಲ್ಲಿ ಸ್ಟಿಯರ್ಫೋರ್ತನ ಸರಾಗವಾದ ವಿನಯಪೂರಿತ ಮಾತುಗಳನ್ನೂ ಗಾಂಭೀರ್ಯ, ಹರ್ಷಚಿತ್ತತೆ ಮೊದಲಾದ ಆಕರ್ಷಣೀಯ ಗುಣಗಳನ್ನೂ ಕಂಡು ಮಿ. ಪೆಗಟಿ ಮೆಚ್ಚಿಹೋದನು. ಸ್ಟಿಯರ್ಫೋರ್ತನು ಎಂದಾದರೂ ಯಾರ್ಮತ್ತಿಗೆ ಬಂದರೆ ತನ್ನ ಬಡ ಸಂಸಾರಕ್ಕೆ ಒಂದು ಭೇಟಿಯನ್ನು ಕೊಡಬೇಕಾಗಿ ವಿನಂತಿಸಿಕೊಂಡನು.
ಈ ರೀತಿ ಆರು ತಿಂಗಳ ಕಾಲ ನಮ್ಮ ಶಾಲೆ ನಡೆಯಿತು. ನನ್ನನ್ನು ನಮ್ಮ ಮನೆಗೆ ಕರೆಸಿಕೊಳ್ಳುವುದೇ ಅಸಂಭವವೆಂದು ಹೆದರುತ್ತಿದ್ದ ನನಗೆ ಗೃಹಾಭಿಮುಖವಾಗಿ ಬಂಡಿಯನ್ನೇರಿ ಹೋಗುವ ಮಹದಾನಂದವೇ ಬಂದೊದಗಿತು. ಬಂಡಿಯಲ್ಲಿ ನಿದ್ರಿಸುತ್ತಲೂ, ಸ್ವಪ್ನಗಳನ್ನು ಕಾಣುತ್ತಲೂ, ಎಚ್ಚತ್ತು ಹಿಂದೆ ಬಂದಿದ್ದ ಸ್ಥಳಗಳನ್ನು ನೋಡಿ ನೆನಪಿಗೆ ತಂದುಕೊಳ್ಳುತ್ತಲೂ ಯಾರ್ಮತ್ತಿನವರೆಗೆ ಬಂದು ತಲುಪಿದೆನು.
(ಮುಂದುವರಿಯಲಿದೆ)

2 comments:

  1. ಪಾತ್ರಗಳ ಭಾವ ನಿಮ್ಮ Audioದಲ್ಲಿ ಚನ್ನಾಗಿ ಮನದಟ್ಟಾಗುತ್ತಿದೆ. ಕನ್ನಡ ಓದಿನ(ಕೇಳುಗ) ಪ್ರಪಂಚದಲ್ಲಿಯೇ ವಿಶಿಷ್ಟವಾದದ್ದು. ಖುಷಿಯಿಂದ ಕೇಳುತ್ತಾ ಓದಿದೆ.

    ReplyDelete
  2. I read you regularly. You made us to read Dickens agains in such good trnslation suitable for the style of the original author.
    Thanks.
    Regards

    ReplyDelete