02 May 2014

ಟಿವಿ-ಮಹಾಭಾರತ - ಕನ್ನಡದಲ್ಲಿ ಚರಟು! ಹಿಂದಿಯಲ್ಲಿ ರಸಗಬ್ಬು!

ವಾರದ ಐದು ದಿನ ಸಂಜೆ ಆರು ಗಂಟೆಯಿಂದ ಅರ್ಧ ಗಂಟೆಯುದ್ದಕ್ಕೆ ಉದಯ ಟೀವಿ `ಅಪ್ಪಟ ಕನ್ನಡ'ದಲ್ಲಿ ಧಾರಾವಾಹಿಸುತ್ತಿರುವ ಕನ್ನಡ ಮಹಾಭಾರತವನ್ನು ನೋಡಿ ತಡೆಯಲಾಗದ ಸಂಕಟದಿಂದ ಕೆಲವು ಮಾತುಗಳು. ಇದನ್ನು ನಾನು ಬಿಟ್ಟೂ ಬಿಡಲಾಗದೇ (ಮೂಲ ಮಹಾಭಾರತದ ಕುರಿತು ನನಗಿರುವ ಅಪಾರ ಪ್ರೀತಿ, ಗೌರವದಿಂದ) ಹಲವು ಬಾರಿ ನೋಡಿ, ಸಂಕಟದಲ್ಲಿ ಒದರಾಡಿ ಮನೆಯವರಿಗೆ ಅಪಾರ ಹಿಂಸೆ ಕೊಡುತ್ತಿರುತ್ತೇನೆ.

ಹಾಗೇ ಸುಮಾರು ಮೂರು ತಿಂಗಳಿನಿಂದೀಚೆಗೆ ಪರಿಚಯವಾದ ಹಿಂದಿಯ ಮಹಾಭಾರತ ಸರಣಿ (ಸ್ಟಾರ್ ಪ್ಲಸ್, ವಾರದ ಆರು ದಿನ ರಾತ್ರಿ ಎಂಟೂವರೆಗೆ ಮತ್ತು ಮರು ಬೆಳಗ್ಗೆ ಎಂಟಕ್ಕೆ) ಸಿಕ್ಕ ಮೇಲೆ ಹಿಂದಿ ಸುಲಭದಲ್ಲಿ ಅರ್ಥವಾಗದ ಕಷ್ಟಕ್ಕೆ ಎರಡು ಸಲ ನೋಡುತ್ತ, ಆದರೆ ಬಲು ಸಂತೋಷದಲ್ಲಿ ಎದೆಯುಬ್ಬಿಸಿಕೊಳ್ಳುತ್ತಿದ್ದೇನೆ. (ಹಿಂದಿ ಸರಣಿಯ ಎಲ್ಲ ಕಂತುಗಳೂ ಅಂತರ್ಜಾಲದಲ್ಲಿ ಉಚಿತವಾಗಿ ನೋಡಲು ಲಭ್ಯ ಒಮ್ಮೆ ಇದರ ರುಚಿ ಹತ್ತಿದ ಮೇಲೆ ವಿರಾಮದಲ್ಲಿ ಇದರೆ ಮೊದಲ ಕಂತಿನಿಂದ ಎಲ್ಲ ನೋಡಿ, ಮುಂದುವರಿದಿದ್ದೇನೆ. ಈ ಸೌಲಭ್ಯವನ್ನು ಕನ್ನಡ ಮಹಾಭಾರತ ಕೊಡುತ್ತಿಲ್ಲ.) ಆದರೆ ಅಷ್ಟಕ್ಕೆ ಸುಮ್ಮನಿರದಂತೆ ಕಾಡುತ್ತಿದೆ ನನ್ನ ಕನ್ನಡ ಪ್ರೀತಿ, ಯಾರೂ ತಿರಸ್ಕರಿಸಲಾಗದ ಕನ್ನಡದ ಶಕ್ತಿ ಮತ್ತು ಸಾರ್ವಕಾಲಿಕ ಮತ್ತು ಸರ್ವವ್ಯಾಪೀ ಮೌಲ್ಯಗಳ ಖನಿಯೇ ಆದ ಮಹಾಭಾರತದ ಯೋಗ್ಯತೆ.


ಮಹಾಭಾರತವನ್ನು (ರಾಮಾಯಣವನ್ನೂ) ಅತ್ಯುತ್ತಮ ಸಾಹಿತ್ಯವಾಗಿ (ಪೂಜ್ಯವಾಗಿ ಅಲ್ಲ) ನೋಡುವ ಪೈಕಿ ನಾನು. ನನಗೆ ಸಿಕ್ಕಿದ ಅದರ ಎಲ್ಲಾ ಪಾಠಾಂತರಗಳನ್ನು ಅಭಿವ್ಯಕ್ತಿ ವೈವಿಧ್ಯಗಳನ್ನು ಒಪ್ಪಿ, ಮೆಚ್ಚುಗೆಯಾದಲ್ಲಿ ಹತ್ತು ಜನಗಳಲ್ಲಿ ಪ್ರಚುರಿಸುವ ಉತ್ಸಾಹ ನನ್ನದು. ಆಗದಿದ್ದರೆ, ಅಂದರೆ ಅದು ನನ್ನ ಮಿತಿಯ ಮೌಲ್ಯಮಾಪನದಲ್ಲಿ ಸೋತರೆ, ಸಕಾರಣ ಸಾರ್ವಜನಿಕ ಚರ್ಚೆಗೆ ತೆರೆದಿಡುವಲ್ಲೂ (ಅಯ್ಯೋ ಯಾಕೆ ಸುಮ್ಮನೇಂತ) ನಾನು ಹುಮ್ಮಸ್ಸು ಕಳೆದುಕೊಂಡದ್ದಿಲ್ಲ. ಮೂಲ ಮಹಾಭಾರತ ಅಥವಾ ವ್ಯಾಸ ಭಾರತ ಎನ್ನುವುದು ನನ್ನ ಲೆಕ್ಕಕ್ಕೆ ಒಂದು ಉತ್ತಮ ಪಾಠಾಂತರ ಮಾತ್ರ. ಸಾಮಾನ್ಯ ಭಾಷೆಯಲ್ಲಿ ಹೇಳುವಂತೆ ಯಕ್ಷಗಾನದ ಕಥನಗಳೂ ಸೇರಿದಂತೆ ಬರುವ ನೂರೆಂಟು `ಪ್ರಕ್ಷಿಪ್ತ'ಗಳನ್ನು ನಾನು ವಿಭಿನ್ನ ಪಾಠಾಂತರಗಳೆಂದೇ ಪರಿಗಣಿಸಿ, ಆಯಾ ಚೌಕಟ್ಟಿನೊಳಗೆ ಸದಾ ಪ್ರೀತಿ ಕುತೂಹಲಗಳಿಂದಲೇ ಅನುಭವಿಸುತ್ತೇನೆ, ಬಹುತೇಕ ಮೆಚ್ಚುತ್ತೇನೆ. ನನ್ನ ವಿಮರ್ಶೆಗಳೇನಿದ್ದರೂ ವಿಷಯನಿಷ್ಠ, ವ್ಯಕ್ತಿ ನಿಷ್ಠವಲ್ಲ. ನಾನು ಯಾವುದೇ ಸೃಜನಶೀಲ ಕೃತಿಯ ನಿಷೇಧಗಳ ವಿರೋಧಿ. ಆ ನೆಲೆಯಲ್ಲಿ ಕಲೆಗಳ ಮೂಲವನ್ನು ಶೋಧಿಸಿದ ಬಲದಲ್ಲಿ ಅವನ್ನು ಭೂತದ ಗೂಟಕ್ಕೆ ಕಟ್ಟಿಹಾಕುವವರ, ಆರಾಧನೆಯ ಆವರಣದೊಳಗೆ ಬಂಧಿಯಾಗಿಸುವವರ, ಜನಪದ ರೂಕ್ಷತೆಗೇ ನಿರ್ಬಂಧಿಸುವವರ, ಭವಿಷ್ಯತ್ತಿನ ವಿಕಾಸದ್ವಾರವನ್ನೇ ಮುಚ್ಚಿಬಿಡುವವರ ಜೊತೆಗೆ ನನಗೆಂದೂ ಒಲವು ಮೂಡಿದ್ದಿಲ್ಲ. ಇವರೆಲ್ಲ ಬಹುತೇಕ ಅಪ್ರಾಮಾಣಿಕರು, ಅಲ್ಪಸಂಖ್ಯೆಯಲ್ಲಿ ಸಾಂಪ್ರದಾಯಿಕ ಮೌಢ್ಯಗಳ ಅನುಯಾಯಿಗಳು.

ಚಲಚಿತ್ರದ ಬಲವಿರುವುದು ವಾಸ್ತವದಲ್ಲಲ್ಲ, ತೋರಿಕೆಯಲ್ಲಿ. ಒಂದು ದೇಶದ, ಹಲವು ಲೋಕಗಳ ಆಗುಹೋಗುಗಳನ್ನು ಒಂದು ಮಹಾಕುಟುಂಬ ಹೇಗೆ ಪ್ರಭಾವಿಸಿತು, ಬದಲಿಸಿತು ಎನ್ನುವುದನ್ನು ಚಲಚಿತ್ರದಲ್ಲಿ ನಿರೂಪಿಸುವ ಔಚಿತ್ಯಜ್ಞಾನ, ಜವಾಬ್ದಾರಿ, ಸಾಹಸೀಪ್ರವೃತ್ತಿ ಕನ್ನಡ ಮಹಾಭಾರತದ ನಿರ್ಮಾಣದಲ್ಲಿ ಕಾಣುವುದೇ ಇಲ್ಲ. ಮಹಾಕುಟುಂಬದ ಸದಸ್ಯರು ಅಥವಾ ಇಲ್ಲಿನ ಎಲ್ಲ ಪಾತ್ರಗಳೂ ಒಂದು ಅಜ್ಜಿ-ಕಥಾರಥದಲ್ಲಿ ಸವಾರಿ ಹೊರಟ ಗೊಂಬೆಗಳು, ನಿಶ್ಚಿತ ಗುರಿ ಸೇರುವಲ್ಲಿ ಆಗೀಗ ಅಲುಗುತ್ತ, ಕೆಲವೊಮ್ಮೆ ಬಡಬಡಿಸುತ್ತ ಸಮಯ ಕಳೆಯುವ ಭ್ರಮೆಗಳು. ಅದೇ ಹಿಂದಿ ಮಹಾಭಾರತದಲ್ಲಿ ಪ್ರತಿ ಘಟನೆ, ಪಾತ್ರ ಮತ್ತು ಮಾತು ಆಯಾ ಕ್ಷಣದ ಸತ್ಯವನ್ನು ಅದ್ಭುತವಾಗಿ ಅನಾವರಣಗೊಳಿಸುತ್ತವೆ, ರಸಮಯ ಮಾಡುತ್ತವೆ.

ಕನ್ನಡದೋರ್ವ ಮಹಾಕವಿ ಮಹಾಭಾರತವೇ ಕರ್ಣರಸಾಯನಂ (ಕರ್ಣನನ್ನು ಸೇರಿಸಿಕೊಂಡು ಎರಡು ಅರ್ಥದಲ್ಲಿ) ಎಂದು ಹೇಳಿದ್ದು, ನಾಟಕ ಲೋಕದಲ್ಲಿ `ದಾನಶೂರ ಕರ್ಣ', ಯಕ್ಷಗಾನದಲ್ಲಿ `ಮಹಾರಥಿ ಕರ್ಣ' ಎಂದೆಲ್ಲಾ ಅಪ್ರತಿಮ ಔನ್ನತ್ಯಕ್ಕೆ ಹೆಸರೇ ಆದ ಕರ್ಣಪಾತ್ರ ಕನ್ನಡದ ಟೀವಿ ಸರಣಿಯಲ್ಲಿ ಕೇವಲ ದುರ್ಯೋಧನನ ನೆರಳು; ಅವನೆಲ್ಲ ಕುಟಿಲತೆಗೆ ನಿರ್ವಿವಾದವಾಗಿ ಗಾಳಿ ಹಾಕುವ ಚೇಲಾ. ಅದೇ ಹಿಂದಿ ಟೀವಿಯಲ್ಲಿನ ಕರ್ಣನದ್ದು ಸನ್ನಿವೇಶದ ಸುಳಿಯಲ್ಲದಿದ್ದರೆ ಸಾಕ್ಷಾತ್ ಪ್ರತಿ-ಧರ್ಮರಾಯನ ನಿಲುವು, ನಡೆ, ನುಡಿ. ಇದೊಂದು ಮಾತು ಕೇಳಿ: ಕರ್ಣ ಕುಂತಿ ತನ್ನನ್ನು ಹೆತ್ತಬ್ಬೆ ಎಂಬ ಅರಿವಿಲ್ಲದೆ, ಆಕೆಗೊಂದು ಮಾತು ಕೊಡುವ ಸಂದರ್ಭದಲ್ಲಿ, ಸಾಕವ್ವ ರಾಧೆಯನ್ನು ನೆನೆಸಿಕೊಂಡು, ತನ್ನ ವಿಶ್ವಾಸಾರ್ಹತೆಯ ಕುರಿತಂತೆ ಹೇಳುತ್ತಾನೆ ತಾಯಿ ನನ್ನನ್ನು ಬಿಟ್ಟಳು, ನಾನು ತಾಯಿಯನ್ನಲ್ಲ. ಕರ್ಣನ ನಿಜ ತಾಯಿಯೇ ಆದ ಕುಂತಿಗೆ ಮತ್ತು ಬಹುತೇಕ ವಿಚಾರವಂತ ಪ್ರೇಕ್ಷಕರಿಗೆ ಇದು ಕೊಡುವ ಅರ್ಥ ಪ್ರತೀತಿ ಎಷ್ಟೆಂದು ನಾನು ವಿಸ್ತರಿಸಹೋಗುವುದಿಲ್ಲ. ಕ್ಷಣಕ್ಷಣಕ್ಕೆ ರಂಗದ ಮೇಲೆ ಇಂಥ ಸಾವಿರಾರು ನುಡಿ ಮಿಂಚುಗಳನ್ನು ಹೊಳಯಿಸಿ, ಅದ್ಭುತ ರಸವೃಷ್ಟಿಯನ್ನು ಮಾಡುವ ಅಸಂಖ್ಯ ಯಕ್ಷಗಾನ ತಾಳಮದ್ದಳೆಗಳನ್ನು ಅನುಭವಿಸಿದ ನೆನಪಿನಲ್ಲಿ ಹೇಳುತ್ತೇನೆ - ಕನ್ನಡ ಮಹಾಭಾರತ ಟೀವೀ ಸರಣಿಗಿಷ್ಟು ದರಿದ್ರ ಬರಬಾರದಿತ್ತು.

ಸ್ವಲ್ಪ ಮುಂದೆ ವೈಶಾಲಿ (ಕರ್ಣನ ಹೆಂಡತಿ) ಎಂಬ ಅಷ್ಟೇನೂ ಮಹತ್ತ್ವದ್ದಲ್ಲದ ಪಾತ್ರದ ಎದುರು ಅದೇ ಕರ್ಣ, ತಾನು ಅಧರ್ಮಿಯಲ್ಲ ಎನ್ನುವುದನ್ನು ಪರೋಕ್ಷವಾಗಿ ಸ್ಪಷ್ಟಪಡಿಸುವಂತೆ ಕೊಟ್ಟ ವಿಷಾದದ ನುಡಿ ಹುಟ್ಟಿನ ಹೀನತೆಯನ್ನು ಕಳೆಯಲು ನಾನು ಸಾಮರ್ಥ್ಯ ಗಳಿಸಿದೆ. ಆದರೆ ಆ ಸಾಮರ್ಥ್ಯ ನನ್ನನ್ನು ಅಧರ್ಮ ಪಕ್ಷಪಾತಿಯನ್ನಾಗಿಸಿತು. ಹಿಂದಿಯ ಕರ್ಣ ದುರ್ಯೋಧನನ ಯಾವುದೇ ಕುಹಕವನ್ನು ಮನಸಾ ಸವಿಯುವುದಿಲ್ಲ. ಆದರೆ ಕನ್ನಡದ ಕರ್ಣ ಸ್ಪಷ್ಟವಾಗಿ ದುಷ್ಟ ಚತುಷ್ಟಯದಲ್ಲಿ ಒಬ್ಬ; ದುರ್ಯೋಧನನ ಕಪ್ಪು ನೆರಳು.

ಮಹಾಭಾರತ ಹೆಸರೇ ಹೇಳುವಂತೆ ಮಹಾವಸ್ತು. ಅದನ್ನು ಕನ್ನಡದ ಸೀಮಿತ ಮಾರುಕಟ್ಟೆಗೆ ಕೊಡುವಲ್ಲಿ ನಿರ್ಮಾಣ ವೆಚ್ಚದ ಸಂಗತಿ ಬಲು ಗಂಭೀರವೇ ಇರಬಹುದು. ಹಾಗೆಂದು ಅದನ್ನು ಬೆದರುಬೊಂಬೆಯಂತೆ ನಿಲ್ಲಿಸಿ, ಮುಂದೆಂದೋ ಬರಲೂಬಹುದಾದ ಸಶಕ್ತ ಕೃತಿಗೆ `ಇದು ಮೊದಲಲ್ಲ' ಎಂಬ ಎಡವುಕಲ್ಲನ್ನು ಇಟ್ಟಂತಾಗುತ್ತಿದೆ ಪ್ರಸ್ತುತ ಕನ್ನಡ ಮಹಾಭಾರತ. ಉದಾಹರಣೆಗೆ ಇಲ್ಲಿನ ದೃಶ್ಯ ಕಟ್ಟುವ ಅವಸ್ಥೆ ನೋಡಿ.

ಎಲ್ಲೂ ಯಾವ ಪಾತ್ರಗಳೂ ಸಹಜ ಸ್ಥಿತಿಯಲ್ಲಿ ನಡೆಯುತ್ತಲೋ ವ್ಯಸ್ತವಾಗಿ ಕುಳಿತೋ ಅನ್ಯ ಕಾರ್ಯಮಗ್ನವಾಗಿಯೋ ಕಾಣಿಸುವುದೇ ಇಲ್ಲ. ಸಿನಿಮಾರಂಗದ ಅದ್ಭುತ ಸಾಧ್ಯತೆಗಳನ್ನೆಲ್ಲ ಅವಗಣಿಸಿ, ಕೇವಲ ಕಂಪೆನಿ ನಾಟಕಗಳ ರಂಗಮಂಚದ ಮಿತಿಯಲ್ಲೇ ಇವರ ದೃಶ್ಯಾವಳಿಗಳನ್ನು ಬೆಳೆಸುತ್ತಾರೆ. ಸಾಮಾನ್ಯವಾಗಿ ಯಾವುದೇ ದೃಶ್ಯದಲ್ಲಿ ಅದೆಷ್ಟೇ ಅನೌಪಚಾರಿಕ ಸನ್ನಿವೇಶದಲ್ಲೂ (ಚಿಂತೆ, ಸ್ವಗತ, ಸಂವಾದ, ಪಯಣ ಇತ್ಯಾದಿ) ಚಟುವಟಿಕೆಗಳೆಲ್ಲ ನಮ್ಮನ್ನು (ಪ್ರೇಕ್ಷಕರನ್ನು ಅಥವಾ ಕ್ಯಾಮರಾವನ್ನು) ಉದ್ದೇಶಿಸಿದ ಸೈನ್ಯದ ಕವಾಯತಿನಂತೇ ಇರುತ್ತವೆ. ಒಳಾಂಗಣದಲ್ಲಂತೂ ಎಲ್ಲ ಪಾತ್ರಗಳು ಮೂರು ದಿಕ್ಕುಗಳಲ್ಲಿ ಓರಣವಾಗಿ ಜೋಡಿಸಿದ ಆಸನಗಳ ಮೇಲೆ ಕುಳಿತೇ ಕಾರ್ಯನಿರ್ವಹಿಸುತ್ತವೆ. ಅಕಸ್ಮಾತ್ ಅಡ್ಡಾಡಿದರೂ ಕೆಳ ಮಧ್ಯಮವರ್ಗದ ಮನೆಯ ಹದಿನೈದು ಗುಣಿಸು ಹತ್ತು ಅಡಿ ಅಳತೆಯ ಕೋಣೆಯೊಳಗೆ ಸಿಕ್ಕಿಕೊಂಡಂತೆ ಪರಸ್ಪರ ಮೈ ಒರೆಸಿಕೊಳ್ಳುವ ಸ್ಥಿತಿ. ವನವಾಸ ಸೇರಿದಂತೆ ಹೊರಾಂಗಣದ ಚಟುವಟಿಕೆಗಳಲ್ಲೂ ಈ `ಶಿಸ್ತು' ನಗೆ ತರಿಸುತ್ತದೆ. ಉದಾಹರಣೆಗೆ ಪಾಂಡವರನ್ನು ಕಾಣಲು ಕೃಷ್ಣಾಗಮನ ನೋಡಿ. ವಿರಳ ಮರಗಳಿರುವ ಯಾವುದೋ ಹುಲ್ಲುಗಾವಲಿನಲ್ಲಿ ಪಾಂಡವರು ಸಾಲುಗಟ್ಟಿ ನಿಲ್ಲುತ್ತಾರೆ. ಕೃಷ್ಣನ `ಮೆರವಣಿಗೆ' ನಿಂತು ಆತ ರಥದಿಂದಿಳಿಯುವಲ್ಲಿಗೆ ಧರ್ಮರಾಯ ಮಾತ್ರ ಹೋಗುತ್ತಾನೆ. ಹತ್ತಿಪ್ಪತ್ತಡಿ ಆಚೆಗೆ ಇರುವ ಉಳಿದವರು ಭಾವವಿವಶತೆಯಿಂದಲೂ ಸಾಲು ಕಡಿದು ರಥದ ಬಳಿ ಬರುವುದಿಲ್ಲ. ಈ `ಶಿಸ್ತು' ಇನ್ಯಾರೇ ಬರುವಾಗ, ಹೋಗುವಾಗಲೂ ಪಾಲಿಸುತ್ತಲೇ ಇರುತ್ತಾರೆ. ಮತ್ತೆ ಅವರು ನಿಂತ ಅಥವಾ ಕುಳಿತ ಸ್ಥಳ ಅವರ ದೈನಂದಿನದ ಯಾವ ಕಾರ್ಯಕ್ಕೂ ಸಂಬಂಧಿಸಿದಂತೆ ಇರುವುದಿಲ್ಲ. ಬಹುಶಃ ಪುರಾಣ ಕಾಲದಲ್ಲಿ ಸಮಾಜ ಅನ್ಯ ಕಾರ್ಯನಿರತವಾದಾಗ ಮಾತೇ ಆಡುವುದಿಲ್ಲ ಎಂದು ನಮ್ಮಷ್ಟಕ್ಕೇ ಸಮಾಧಾನಪಟ್ಟುಕೊಳ್ಳಬೇಕಾಗುತ್ತದೆ! 

ಭಾಷೆ ಮತ್ತು ಅದರ ಬಳಕೆ ಅಥವಾ ಸಾಹಿತ್ಯ ಮತ್ತು ಸಂಭಾಷಣೆ - ಹಿಂದಿ ಸ್ಟಾರ್ ಪ್ಲಸ್ನಲ್ಲಿ ಬರುತ್ತಿರುವ ಮಹಾಭಾರತದಲ್ಲಿ ಸದಾ ಆಣಿಮುತ್ತುಗಳು. ದೃಶ್ಯಗಳು ಸದಾ ಉನ್ನತ ಭಾವ ಪ್ರಚೋದಕಗಳು. ಒಂದು ಮಾತು, ಹೂಂಕಾರವೂ ಇಲ್ಲಿ ನಿತ್ಯ ಕಲಾಪದ ಅಂಗವಾಗಿಯೇ ಬರುವುದಿದ್ದರೂ ಧ್ವನಿಪೂರ್ಣವಾಗಿದ್ದು, ಸನ್ನಿವೇಶದ ಅಭಿವ್ಯಕ್ತಿಯಾಗಿ ಮೊಳಗುತ್ತದೆ. ಉದಾಹರಣೆಗೆ ಯುಧಿಷ್ಟಿರನ ರಾಜ್ಯಾಭಿಷೇಕ ನಿಶ್ಚಯವಾಗುವ ಒಂದಂಕವನ್ನು ಗಮನಿಸಿ: 

ಪೂರ್ವಭಾವೀ ದೃಶ್ಯದಲ್ಲಿ ಧೃತರಾಷ್ಟ್ರ ತನ್ನ ನಿರ್ವಹಣಾ ರಾಜಪದವಿಯ ಗರ್ವದಲ್ಲಿ, ಕುರುವಂಶದ ಅಗ್ರ ಪಾಲನಾಕತೃ ಭೀಷ್ಮನನ್ನು ಧಿಕ್ಕರಿಸಿ, ಪರಿಣಾಮದಲ್ಲಿ ಭಾರೀ ಸೋಲನುಭವಿಸಿರುತ್ತಾನೆ. ಸನ್ನಿವೇಶ (ಮತ್ತು ಧೃತರಾಷ್ಟ್ರನ ಮುಖ ಕೂಡಾ) ಉಳಿಸುವಂತೆ ತಂತ್ರಗಾರ ಶಕುನಿ ಭೀಷ್ಮನಲ್ಲಿ ದೌತ್ಯ ಹೋಗಿ ಧೃತರಾಷ್ಟ್ರ ತೀವ್ರ ಪಶ್ಚಾತ್ತಾಪದಲ್ಲಿ ಕ್ಷಮಾಯಾಚನೆಗೆ ಕಾದಿದ್ದಾನೆ ಎಂದು ಕೇಳಿಕೊಳ್ಳುತ್ತಾನೆ. ಭೀಷ್ಮ ಪರೋಕ್ಷವಾಗಿ ತನ್ನ ಪೀಠನಿಷ್ಠೆಯ ಶಪಥಕ್ಕೆ ಬದ್ಧತೆಯನ್ನು ಮರೆಯದೆ, ಧೃತರಾಷ್ಟ್ರನಿಗೆ ತಿದ್ದಿಕೊಳ್ಳಲು ಮತ್ತೊಂದು ಅವಕಾಶ ಕೊಡುವ ಸೂಚನೆ ಕೊಡುತ್ತಾನೆ. ಆದರೆ ಹಿಡಿದ ಕೆಲಸ ಪೂರ್ಣಗೊಳಿಸುವುದರೊಡನೆ, ಚಿಂತನೆಗೆ ಕಾಲಾವಕಾಶವಾಗುವಂತೆ ಶಕುನಿಯನ್ನು ಮುಂದೆ ಕಳಿಸಿರುತ್ತಾನೆ. 

ಇಬ್ಬರೇ ಉಳಿದಿರುವ ಭವ್ಯ ರಾಜಸಭಾಭವನದಲ್ಲಿ ಧೃತರಾಷ್ಟ್ರ ಸಿಂಹಾಸನದಲ್ಲಿ ಕುಳಿತಂತೆ ಶಕುನಿ ಒತ್ತಿನಲ್ಲಿ ನಿಂತು ಕುಟಿಲ ಮಂತ್ರಾಲೋಚನೆ ನಡೆಸಿರುವಂತೆ ಪ್ರಸ್ತುತ ದೃಶ್ಯ ತೆರೆದುಕೊಳ್ಳುತ್ತದೆ. ಸೂತ್ರ ರೂಪದಲ್ಲಿ ಎರಡೇ ಮಾತು ಹೇಳುತ್ತಾನೆ ಭೀಷ್ಮನನ್ನು ನಿನ್ನ ಮತ್ತು ಹಸ್ತಿನಾವತಿಯ ವಶದಲ್ಲಿ ಉಳಿಸಿಕೋ. (ಗಮನಿಸಿ, ಅವರಾಡಿರಬಹುದಾದ ರಾಶಿ ರಾಶಿ ಮಾತುಗಳನ್ನು ಮುಂದಿನ ಕ್ರಿಯೆ ಹಾಗೂ ಲೆಕ್ಕದ ಮಾತುಗಳ ಪರಿಣಾಮದಲ್ಲಿ ಮಾತ್ರ ನಮಗೆ ಕಾಣಿಸುತ್ತಾರೆ) ದ್ವಾರಪಾಲ ಪ್ರವೇಶಿಸಿ ಭೀಷ್ಮಾಗಮನದ ಸುದ್ದಿ ಕೊಡುತ್ತಾನೆ. ಧೃತರಾಷ್ಟ್ರ ಅನುಮತಿಯ ಸೂಚ್ಯವಾಗಿ ತಲೆಯಾಡಿಸುತ್ತಾನೆ. ಶಕುನಿ ನಿರ್ಗಮನಕ್ಕಾಗಿ ಮಹಾದ್ವಾರದತ್ತ ತಿರುಗುತ್ತಿದ್ದಂತೆ ಪೂರ್ವಲೋಚನೆಯನ್ನು ನೆನಪಿಸುವಂತೆ ಧ್ವನಿ ತೆಗೆದು ಮುಂದುವರಿಯುತ್ತಾನೆ. ಧೃತರಾಷ್ಟ್ರ ಆಸನದಿಂದೆದ್ದು ಒತ್ತಿನ ನೆಲದ ಮೇಲೆ ಅಧೋವದನನಾಗಿ ಕೂರುತ್ತಾನೆ. ಭೀಷ್ಮನ ಪ್ರವೇಶವಾಗುತ್ತದೆ. ಆತನ ಅರ್ಧ ದಾರಿಯಲ್ಲಿ ದೈನ್ಯದ ಕರಜೋಡಣೆಯೊಡನೆ ಶಕುನಿ ಎದುರಾಗಿ, ನಿತ್ರಾಣಿ ಧೃತರಾಷ್ಟ್ರನ ಬಳಿಸಾರಿ ಉದ್ಧರಿಸು ಮಹಾಮಹಿಮ ಎನ್ನುವ ಭಾವ ಪ್ರಕಟಿಸಿ, ನಿರ್ಗಮಿಸುತ್ತಾನೆ. ಧೃತರಾಷ್ಟ್ರ ಭೀಷ್ಮ ಸಿಂಹಾಸನ ಸಮೀಪಿಸುತ್ತಿರುವುದನ್ನು ಎಂದಿನಂತೆ ಹೆಜ್ಜೆಯ ಸದ್ದಿನಲ್ಲೇ ಗುರುತಿಸಿ, ಔಪಚಾರಿಕ ಪ್ರಣಾಮಕ್ಕೂ ಮೊದಲೇ ಕಂಪಿಸುವ ಧ್ವನಿಯಲ್ಲಿ, ಮನೆಯ ಹಿರಿಯನೊಡನೆ ತಪ್ಪಾಗಿ ನಡೆದ ಮುಗ್ಧ ಕಿರಿಯನ ಭಾವದಲ್ಲಿ ಕ್ಷಮಾಯಾಚನೆಗಿಳಿಯುತ್ತಾನೆ. ಭೀಷ್ಮ ತಿದ್ದುವ ಕರ್ತವ್ಯದ ಹಿರಿಯನಂತೆ ಕನಿಕರಿಸಿ ರಾಜನಾದವನು ಯಜ್ಞಕಾಲವನ್ನುಳಿದು ನೆಲದಲ್ಲಿ ಕೂರಬಾರದು ಎಂದೇ ಸಮಾಧಾನಿಸಲು ತೊಡಗುತ್ತಾನೆ. ಕರಗಿದವನನ್ನು ಧೃತರಾಷ್ಟ್ರ ತನ್ನ ಹಂಚಿಕೆಗಳಿಗೆ ಸರಿಯಾಗಿ ಬಗ್ಗಿಸಿಕೊಳ್ಳುತ್ತಾನೆ! ಆತನ ಕುರುವಂಶ ನಿಷ್ಠೆ, ರಾಜನಿಷ್ಠೆಯನ್ನು ಧೃತರಾಷ್ಟ್ರ ತನ್ನ ಪೀಠರಕ್ಷಣೆಗೆ ಪರಿವರ್ತಿಸಿಕೊಳ್ಳುತ್ತಾನೆ, ತನ್ನ ಮಕ್ಕಳ ಅನಾಚಾರಗಳಿಗೆ ಧರ್ಮದ ಕವಚವನ್ನಾಗಿ ಮಾರ್ಪಡಿಸಿಕೊಳ್ಳುತ್ತಾನೆ. ಕೊನೆಯಲ್ಲಿ ಯುಧಿಷ್ಟಿರನ (ಇಂದ್ರಪ್ರಸ್ಥಕ್ಕೆ) ರಾಜ್ಯಾಭಿಷೇಕ ನಿಶ್ಚಯವಾಗುತ್ತದೆ.

ಕನ್ನಡ ಮಹಾಭಾರತದಲ್ಲಿ ಕಪಟ ದ್ಯೂತ ವಾರಗಟ್ಟಳೆ ನಮ್ಮ ಸಹನೆ ಪರೀಕ್ಷೆ ಮಾಡಿತ್ತು. ಮಿನಿಟುಗಟ್ಟಳೆ ವಿಕಾರ ನಗೆ, ದುರ್ಯೋಧನನ ಕಿರಿಚಾಟಗಳು ಅವಿರತ ನಡೆದಿದ್ದುವು. ಇತರ ಪಾಂಡವರಾದಿ ಭೀಷ್ಮ ದ್ರೋಣಾದಿಗಳು ಬಿಸುಸುಯ್ಯುವುದು, ಮುಷ್ಠಿಗಟ್ಟುವುದು, ಗಾಳಿಗುದ್ದುವುದನ್ನಷ್ಟೇ ನಾವು ಕಾಣುತ್ತೇವೆ. ನೀರಸ ಪಲ್ಲವಿಯಂತೆ ವಿದುರನೊಬ್ಬ ಮತ್ತೆ ಮತ್ತೆ ಹೇಳಿದ್ದನ್ನೇ ಹೇಳುತ್ತಿರುತ್ತಾನೆ. ಆದರೆ ಹಿಂದಿಯಲ್ಲಿ ಇದು ನಾಲ್ಕೈದು ಕಂತುಗಳಲ್ಲೇ ಮುಗಿದರೂ ಪರಿಣಾಮ ತೀರಾ ಗಾಢವಾಗಿತ್ತು. ಭೀಷ್ಮ, ದ್ರೋಣ, ಕರ್ಣಾದಿಗಳೇನು ಭೀಮನದ್ದೂ ಸೇರಿದಂತೆ,  ವೈವಿಧ್ಯಮಯ ಧರ್ಮ ಸಂಕಟಗಳಲ್ಲಿ ನಾವು ಟೀಕಾಕಾರರಾಗಿ ಉಳಿಯುವುದಿಲ್ಲ, ಪಾಲುದಾರರಾಗಿಬಿಡುತ್ತೇವೆ.

ಹಿಂದಿಯಲ್ಲಿ ಸುಭದ್ರಾ ವಿವಾಹದ ಚಂದ ನೋಡಿ: ಬಲರಾಮ ಶಕುನಿಗೆ ಕೊಟ್ಟ ಮಾತಿನಂತೆ ದುರ್ಯೋಧನನ ದಿಬ್ಬಣ ದ್ವಾರಕ ತಲಪಿದೆ. ಆದರೆ ಒಂದು ವರ್ಷಕಾಲ ಪ್ರಾಯಶ್ಚಿತ ರೂಪದಲ್ಲಿ ದೇಶಾಂತರ ಹೊರಟ ಅರ್ಜುನ (ಕೃಷ್ಣ ಕೊಟ್ಟ ಸೂಚನೆಯಂತೆ) ಅದಕ್ಕೂ ಮೊದಲೇ ಕೊನೆಯ ಅವಧಿಯನ್ನು ದ್ವಾರಕದ ಒತ್ತಿನ ಸೋಮನಾಥನ ಸಾನ್ನಿಧ್ಯದಲ್ಲಿ ಕಳೆಯಲು ಹಾಜರಾಗಿದ್ದಾನೆ. ಅರ್ಜುನನನ್ನು ಸುಭದ್ರೆ ಮೊದಲೇ ಮನಸಾ ಪ್ರೇಮಿಸಿದ್ದರೂ ಇಲ್ಲಿ ಹಿರಿಯಣ್ಣನ ಮಾತು ತಳ್ಳಿ ಹಾಕಲಾಗದೇ ಮದುವೆಗೆ ಸಜ್ಜಾಗುತ್ತಿದ್ದಳು. ಆ ಹಂತದಲ್ಲಿ ಆಕೆಗೆ ಕೃಷ್ಣನ ಬಲವತ್ತರವಾದ ಸೂಚನೆ ಸಿಗುತ್ತದೆ. ಆಕೆ ಅನ್ಯಮನಸ್ಸಿನೊಡನೇ ಸೋಮನಾಥ ದೇವಳಕ್ಕೆ ಹೋಗಿ `ಮಹಾತ್ಮ'ರಿಂದ ಆಶೀರ್ವಾದ ಪಡೆದು, ಅವರನ್ನು ನಗರಕ್ಕೆ ಆಹ್ವಾನಿಸಿ ತರುತ್ತಿರುತ್ತಾಳೆ. ದಾರಿಯಲ್ಲೇ ಕೃಷ್ಣ ರಥ ಸಮೇತ ಎದುರಾಗಿ ಅರ್ಜುನನ ವೇಷದ ಗುಟ್ಟು ಬಯಲು ಮಾಡುತ್ತಾನೆ.

ನಮ್ಮ ಜನಪದದಲ್ಲಿ ಸುಭದ್ರಾಪಹರಣ ಒಂದು ಮನೋಹರ ಪ್ರಸಂಗ. ಆದರೆ ಹಿಂದಿ ಸರಣಿಯ ಅರ್ಜುನನಿಗೆ ಅಲ್ಲ. ಆತನಿಗೂ ಸುಭದ್ರೆಯ ಮೇಲೆ ಪ್ರೀತಿ ಇದೆ. ಆದರೆ ಪ್ರತಿ ಕಾರ್ಯಕ್ಕೂ ಇರುವ ಕಾರಣಗಳನ್ನು ಆತ (ಪಾಂಡವರೆಲ್ಲರೂ) ಧರ್ಮದ ನೆಲೆಯಲ್ಲಷ್ಟೇ ಸ್ವೀಕರಿಸಬಲ್ಲ. ಹಿರಿಯ ಬಲರಾಮನ ಅಪೇಕ್ಷೆಯ (ಆದೇಶದ) ವಿರುದ್ಧ ಆತ ಸುಭದ್ರೆಯನ್ನು ಅಪಹರಿಸಲಾರ. (ಕೇಳುವ ಸನ್ನಿವೇಶವೇ ಅದಲ್ಲ.) ಕೃಷ್ಣ ರಥ ಕೊಟ್ಟು ಸುಭದ್ರೆಯೇ ಅರ್ಜುನನನ್ನು ಹಾರಿಸಿಕೊಂಡುಹೋಗುವ ಮಾತಾಡುತ್ತಾನೆ. ಆದರೆ ಅರ್ಜುನ ತಾನು ಅಪಹರಣಕ್ಕೊಳಗಾಗುವ ದುರ್ಬಲನಲ್ಲ ಎಂದು ಸಾಧಿಸಲು ಪ್ರಯತ್ನಿಸುತ್ತಾನೆ. ನಿಶ್ಶಸ್ತ್ರಳೂ ಸ್ತ್ರೀಯೂ ಆದ ಸುಭದ್ರೆಯ ಅಪಹರಣಕ್ಕೆ ಸಲಕರಣೆ `ಪ್ರೇಮ' ಎಂಬರ್ಥದ ಹೊದಿಕೆ ಕೊಟ್ಟು, ಕೃಷ್ಣ   ಪ್ರಸಂಗ ಪರಿಹರಿಸುವ `ಲೀಲೆ'ಯನ್ನು ಕಂಡು ಕೇಳಿಯೇ ಅನುಭವಿಸಬೇಕು.

ಮೊನ್ನೆ ಬಹಳ ಕಾಲದ ಮೇಲೆ, ಸಂಜೆ ಆರರಿಂದ ಆರೂವರೆಯವರೆಗೆ, ಉದಯ ಟೀವಿಯ ಕನ್ನಡ ಮಹಾಭಾರತಕ್ಕಿನ್ನೊಮ್ಮೆ ಕುಳಿತೆ: ಅಗ್ಗದ ಹೂ, ಸೊಪ್ಪುಗಳನ್ನು ಜಾಳುಜಾಳಾಗಿ ಹೆಣೆದು, ಮಾರುಗಟ್ಟಳೆ ಭೂರಿ ಜಾತ್ರೆಯಲ್ಲಿ ಬಿಕರಿಸುವ ಮಾಲೆ ಕಂಡೆ. ಐದುನೂರು ಕಂತಿನ ಮೇಲೆ `ಚಿತ್ರಹಿಂಸೆ' ಕೊಟ್ಟರೂ ಇನ್ನೂ ಅದು  ಪಾಂಡವರ ವನವಾಸದಲ್ಲೆ ನವೆಯುತ್ತಿತ್ತು! ದುರ್ಯೋಧನ ಮಹಾವೈಷ್ಣವೀ ಯಾಗ ಮಾಡುವ ಸಂಕಲ್ಪ ಮಾಡಿದ್ದಾನೆ. ಆತ ಸಪತ್ನೀಕನಾಗಿ ತಂದೆ ತಾಯಿಯರನ್ನು ನೋಡಿ ಔಪಚಾರಿಕವಾಗಿ ತಿಳಿಸುತ್ತಾನೆ. ಅವರು ಶುಭಾಶಯಗಳನ್ನು ಹೇಳುತ್ತಾರೆ. ಮತ್ತೆ ಆ ಜೋಡಿ ಭೀಷ್ಮ ದ್ರೋಣರನ್ನು ನೋಡುತ್ತದೆ; ಬಿನ್ನಹ ಅದೇ. ಅವರು ತುಸು ಸಂದೇಹದಲ್ಲೇ ನೋಡಿದರೂ ಶುಭಾಶಯಗಳನ್ನು ಹೇಳುತ್ತಾರೆ. ಮತ್ತೆ ಆತ ವಿದುರನನ್ನ ಕರೆಸಿಕೊಂಡು ಹೇಳುತ್ತಾನೆ; ಸುದ್ದಿ ಯಾಗದ್ದೇ. ಕಿರು ಬುದ್ಧಿವಾದದೊಂದಿಗೆ ಶುಭಾಶಯ ಸಿಕ್ಕಿಯೇ ಸಿಗುತ್ತದೆ. ದುಶ್ಶಾಸನ ಸಂದೇಶವಾಹಕನನ್ನು ಕರೆಸುತ್ತಾನೆ; ಪಾಂಡವರಿಗೆ ಯಾಗದ ಆಮಂತ್ರಣ ಮುಟ್ಟಿಸಲು! ವಾಹಕ ದ್ವೈತವನಕ್ಕೆ ಹೋಗಿ ಯಾವ ಮಹತ್ತಿನ ಅರ್ಥ ಸಂಪತ್ತನ್ನೂ ಕಟ್ಟಿಕೊಡದೇ ಸುತ್ತಿ ಬಳಸಿ ಹೇಳುತ್ತಾನೆ - ಯಾಗದ ವಾರ್ತೆಯನ್ನೇ. ಎಲ್ಲ ನಿರೀಕ್ಷೆಗಳಂತೆ ಸಣ್ಣ ಭಿನ್ನಮತಗಳೊಡನೆ ಪಾಂಡವರ ತಿರಸ್ಕಾರ ಮರುರವಾನೆಯಾಗುವುದರೊಂದಿಗೆ ಅರ್ಧ ಗಂಟೆಯ ಅವಧಿ ತುಂಬಿತ್ತು, ಕಂತು ಮುಗಿದಿತ್ತು. ಸಾಧನೆ ಏನು? ಪಾಂಡವರ ರಾಜಸೂಯಯಾಗಕ್ಕೆ ಸ್ಪರ್ಧಾತ್ಮಕವಾಗಿ ದುರ್ಯೋಧನ ಒಂದು ಯಾಗ ಮಾಡಲಿದ್ದಾನೆ.

ಅಂದೇ ರಾತ್ರಿ ಎಂಟರಿಂದ ಎಂಟೂವರೆಯವರೆಗೆ ಎಂದೂ ತಪ್ಪಿಸಿಕೊಳ್ಳದ, ಹಿಂದಿ ಮಹಾಭಾರತವನ್ನಂತೂ ನೋಡಿಯೇ ನೋಡಿದೆ: ಇವರು ಕನ್ನಡದಕ್ಕಿಂತ ತುಂಬಾ ತಡವಾಗಿ ಪ್ರಸಾರಕ್ಕಿಳಿದರೂ (ಇವರು ಕಥನದ ಕ್ರಮ ಸಂಖ್ಯೆ ಹಾಕಿಕೊಳ್ಳುತ್ತಿಲ್ಲ. ಎಲ್ಲೋ ನೂರಿನ್ನೂರರ ಒಳಗಿರಬೇಕು) ಬಿಗಿ ಬಂಧದಲ್ಲಿ ಅಮೂಲ್ಯ ರತ್ನಪ್ರಾಯವಾದ ಪ್ರಮುಖ ಘಟನೆಗಳಲ್ಲೇ ಸಂಪೂರ್ಣ ಕಥನವನ್ನು ಸಾಧಿಸುತ್ತಿರುವುದರಿಂದ ಕನ್ನಡದ್ದನ್ನು ಹಿಂದಿಕ್ಕಿ, ಉದ್ಯೋಗಪರ್ವದಲ್ಲಿದ್ದರು.

ಶಕುನಿ ಎರಡು ಅಳಿಯಂದಿರೊಂದಿಗೆ ದ್ವಾರಕದ ಕಡಲಕಿನಾರೆಯಲ್ಲಿದ್ದಾನೆ. ಅಸ್ತ ಸೂರ್ಯನೆದುರು ಬಲು ದೂರದಿಂದ ಕೃಷ್ಣಬಲರಾಮರು ಇವರತ್ತ ಬರುವುದನ್ನು ಗಮನಿಸುತ್ತಾ ಶಕುನಿ ಹೊಸ ನಡೆಯನ್ನು ಅಳಿಯಂದಿರಿಗೆ ಸೂಚಿಸುತ್ತಾನೆ. ಬಲರಾಮನಿಗೆ ದುರ್ಯೋಧನನ ಮೇಲೆ ಅಮಿತ ಶಿಷ್ಯ ವಾತ್ಸಲ್ಯವಿದೆ. ಹಿಂದೆ ಸುಭದ್ರಾ ವಿವಾಹದಲ್ಲಿ (ಕೃಷ್ಣ ತಂತ್ರದಲ್ಲಿ) ತನಗಾದ ಅವಮಾನದ ದುಃಖವನ್ನು ಹರಿಯಬಿಟ್ಟು ದುರ್ಯೋಧನ ಇಂದು ಬಲರಾಮನನ್ನು ಸೆಳೆದುಕೊಳ್ಳಬೇಕು. ಆಗ ಪಾಂಡವಪರನೇ ಆದ ಕೃಷ್ಣ ನಿರೀಕ್ಷೆಯಂತೆ ಎದುರು ಪಕ್ಷದಿಂದ ಧುರಕ್ಕಿಳಿದರೂ ಅಣ್ಣನ ವಿರುದ್ಧ ಶಸ್ತ್ರ ಎತ್ತಲಾರ. ಪಾಂಡವರು ಸೇಡಿನ ಜ್ವಾಲೆಯನ್ನು ತಮ್ಮ ಜೀವನಾಂತ್ಯದವರೆಗೆ ತಳ್ಳುತ್ತಾ ತಮ್ಮ ಚಿತಾಗ್ನಿಯಾಗಿ ಪರಿವರ್ತಿಸಿಕೊಳ್ಳುವುದಷ್ಟೇ ಉಳಿಯುತ್ತದೆ. ಶಕುನಿಯ ಹಂಚಿಕೆ ಮುಗಿಯುತ್ತಿದ್ದಂತೆ ಸಮೀಪಸ್ಥರಾದ ಕೃಷ್ಣ ಬಲರಾಮರ ಭೇಟಿಯಾಗುತ್ತದೆ.

ಕಾಲಸೂಚಿಯಾದ ಔಪಚಾರಿಕತೆಗಳನ್ನು ಚೊಕ್ಕವಾಗಿ ಪೂರೈಸುವುದರೊಡನೆಯೇ (ಅಭಿನಯದಲ್ಲಿನ ನಡೆ, ನಗು, ಕೊಂಕು, ಸೆಡವುಗಳು ಈ ಮಾಲಿಕೆಯಲ್ಲಿ ಸದಾ ಮನೋಜ್ಞವಾಗಿಯೇ ಬರುತ್ತವೆ. ನಾನು ವಿವರಿಸ ಹೋಗುತ್ತಿಲ್ಲ, ಅಷ್ಟೆ.) ಅರ್ಥಪ್ರತತಿ ಅದ್ಭುತವಾಗಿಯೇ ವಿಕಸಿಸುವುದನ್ನು ಗಮನಿಸುತ್ತೇವೆ. ಉದಾಹರಣೆಗೆ ಕೆಲವು ಆಯ್ದ ಸಂಭಾಷಣೆಯನ್ನು ನೋಡಿ: ಶಕುನಿ, (ಬಲರಾಮನನ್ನುದ್ದೇಶಿಸಿ) ನೀವು ದುರ್ಯೋಧನನಿಗೆ ಏನೆಲ್ಲಾ ಕೊಟ್ಟಿದ್ದೀರಿ. ಆದರೆ ಸುಖ, ಸಂತೋಷಗಳನ್ನು ಗಳಿಸುವ ದಾರಿ ತೋರಿಲ್ಲ... ಕೃಷ್ಣ (ನಡುವೆ ಬಾಯಿ ಹಾಕಿ) ಅವೆರಡೂ ಕೊಡುವಂತಹವಲ್ಲ, ಸ್ವಯಂ ಆಯ್ದುಕೊಳ್ಳುವಂತವು. ಸುಖದ ದಾರಿಯಲ್ಲಿ ಸಂಘರ್ಷವಿದ್ದರೆ, ಸಂತೋಷದ ಹಾದಿ ಶಾಂತಿಯನ್ನು ಕಾಣುತ್ತದೆ. ಈಗ ಯುವರಾಜ ದುರ್ಯೋಧನನ ಆಯ್ಕೆ ಯಾವುದು... ಎಂದು ಪ್ರಶ್ನಿಸುತ್ತಿರುವಂತೆ ಭಾರೀ ಸೈನ್ಯ ಅನಿರೀಕ್ಷಿತವಾಗಿ ಇವರನ್ನು ಕೇಂದ್ರದಲ್ಲುಳಿಸಿಕೊಂಡು,  ಸುತ್ತ ಆತಂಕಕಾರಿ ವ್ಯೂಹ ರಚಿಸುತ್ತದೆ. ದುರ್ಯೋಧನ ದುಶ್ಶಾಸನರು ಆಯುಧಗಳನ್ನು ಸಜ್ಜುಗೊಳಿಸುವುದನ್ನೂ ನೋಡುತ್ತೇವೆ. ವಿಚಲಿತನಾದ ಶಕುನಿ, ಇದೇನು ಕೃಷ್ಣಾ? ನಾವು ಮೈತ್ರಿ ಬಯಸಿ ಬಂದವರು ನಾವು! ಕೃಷ್ಣ ಭಯವಿದ್ದರೆ ಮೈತ್ರಿ ಗಾಢವಾಗುತ್ತದಲ್ಲವೇ? ಆದರೆ ಹೆದರಬೇಡಿ, ನಿಮಗೆ ಗಾಢಮೈತ್ರಿ ಬೇಕಾಗಿಲ್ಲ ಅಲ್ಲವೇ?! (ಸ್ವಲ್ಪ ಸಮಯಕೊಟ್ಟು, ತಪ್ಪು ತಿಳಿಯಬೇಡಿ ಎನ್ನುವ ಮುಸುಕಿನಲ್ಲಿ) ಅಂದರೆ, ಇಲ್ಲಿ ಭಯಕ್ಕೆ ಆಸ್ಪದವೇ ಇಲ್ಲ. ಇದು ದ್ವಾರಕದ ನಾರಾಯಣೀ ಸೈನ್ಯ. ಇಲ್ಲಿನ ಓರ್ವ ಬಾಲಕನ ಯುದ್ಧ ಕೌಶಲ್ಯದ ಅಭ್ಯಾಸಕ್ಕಾಗಿ ಮಾತ್ರ ರಚಿಸಿದ ಚಕ್ರವ್ಯೂಹ.

ಚಕ್ರವ್ಯೂಹದ ರಚನೆ ಮತ್ತು ಅದನ್ನು ಪ್ರವೇಶಿಸುವ ವೈಭವದೊಡನೆ ಇಲ್ಲಿ (ಪ್ರೇಕ್ಷಕರಿಗೆ ಅಥವಾ ಕಥಾನಕಕ್ಕೆ) ಪ್ರಥಮ ಪ್ರವೇಶ ಕೊಡುವವನು ಅಭಿಮನ್ಯು. ಆದರೂ ಆ ಸಂಭ್ರಮಕ್ಕೆ ಭವಿಷ್ಯದಲ್ಲಿ ಸೀಮಿತ `ಪಾತ್ರ' ನಿರ್ವಹಣೆಯಷ್ಟೇ ಇರುವುದೆಂಬುದನ್ನು ಸ್ವತಃ ಅಭಿಮನ್ಯು ಮಾತಿನಲ್ಲಿ ಧ್ವನಿಪೂರ್ಣವಾಗಿಯೂ (ನಾನು ಪಾರ್ಥನ ಶಸ್ತ್ರ), ಆತ (ಮಾಮೂಲೀ) ವಿದಾಯ ಹೇಳುವಾಗ ಕೃಷ್ಣನ ಒಂದು ಕ್ಷಣದ ಮುಖಭಾವದಲ್ಲೂ (ಅಳಿಯ ಅಲ್ಲ, ಶೀಘ್ರ ಅಳಿಯುವವ?) ಕಾಣಿಸುತ್ತಾರೆ. ಮಾತುಗಳಂತೆ ಭಾವಾಭಿವ್ಯಕ್ತಿಯಲ್ಲೂ ವಿಭಿನ್ನ ಅರ್ಥ ಸರಣಿಯನ್ನು ಪ್ರಚೋದಿಸುತ್ತಲೇ ಸಾಗಿರುವುದು ಹಿಂದಿ ಮಹಾಭಾರತ ಮಾಲಿಕೆಯ ಸಾಮರ್ಥ್ಯವೇ ಸರಿ.

ಕಥಾನಕ ಮತ್ತು ಸನ್ನಿವೇಶವೂ ಮಹಾಯುದ್ಧದ ಕಾವಳದಲ್ಲಿರುವಾಗ, ಅದರ ಕರ್ತೃವಾದ ದುರ್ಯೋಧನನೇ ಹಸ್ತಿನಾವತಿಯ ದೂರದಿಂದ ದ್ವಾರಕೆಗೆ ಬಂದಿರುವಾಗ ಸತ್ಯದ ಪರಾಮರ್ಶೆ, ಬೇಡ, ಕನಿಷ್ಠ ಬಂದ ಕಾರಣವನ್ನಾದರೂ ಗಂಭೀರವಾಗಿ ವಿಚಾರಿಸುವ ಮೊದಲು ಬಲರಾಮ ಗದಾಯುದ್ಧದ ಅಭ್ಯಾಸ ಪಂದ್ಯಕ್ಕೆ ದುರ್ಯೋಧನನಿಗೆ ಆಹ್ವಾನ ಕೊಡುತ್ತಾನೆ; ಯುದ್ಧ ತೊಡಗುತ್ತದೆ. ಇದು ಒಂದು ಮುಖದಲ್ಲಿ ಬಲರಾಮನ ಭೋಳೇತನದ ಮರುಸ್ಥಾಪನೆ. ಹಾಗೇ ಇನ್ನೊಂದು ನಿಟ್ಟಿನಲ್ಲಿ ಸ್ವತಃ ದುರ್ಯೋಧನನೇ ಆಟವಾಡಲು ಎರಡು ಮನಸ್ಸಿನಲ್ಲಿದ್ದಂತೆ ತೋರುವಾಗ ಶಕುನಿ ಸನ್ನೆಯಲ್ಲೇ ಉತ್ತೇಜನ ಕೊಟ್ಟದ್ದು ನೋಡುವಾಗ ಬಲರಾಮನನ್ನು ಒಲಿಸಿಕೊಳ್ಳುವ ನಿಟ್ಟಿನಲ್ಲಿ ದುರ್ಯೋಧನನಿಗೆ ಒದಗಿದ ಸುಲಭ ಅವಕಾಶ. ಗದಾಯುದ್ಧ ನಡೆಯುತ್ತದೆ; ಖ್ಯಾತಿಗೆ ತಕ್ಕಂತೆ ಬಲರಾಮನ ಮೇಲುಗೈಯನ್ನೂ ಕಾಣುತ್ತೇವೆ. ಆದರೆ ಜತೆಗೇ `ಮೋಜಿನ ವೀಕ್ಷಕ'ರ ನೆಲೆಯಲ್ಲಿ ಕೃಷ್ಣ ಶಕುನಿಯರ ನಡುವೆ ನಡೆಯುವ ಗೂಢಾರ್ಥಗಳ ಸಂವಾದ ಮತ್ತೆ ಗಂಭೀರ ಧ್ವನಿಗಳನ್ನೇ ಹೊರಡಿಸುತ್ತಿರುತ್ತದೆ. ಮಾತು ಮುತ್ತು ಎನ್ನುವುದನ್ನು ಈ ಹಿಂದಿ ಸರಣಿಯಲ್ಲಿ ಅವಶ್ಯ ನೋಡಬಹುದು.

ಅರ್ಧ ಗಂಟೆಯ ಪ್ರದರ್ಶನದ ಕೊನೆಯಲ್ಲಿ ಮತ್ಸ್ಯ ದೇಶದಿಂದ ದ್ವಾರಕೆಗೆ ಧಾವಿಸಿ ಬಂದ ಅರ್ಜುನನನ್ನು ಕಾಣುತ್ತೇವೆ. ಆತ ದ್ವಾರಕೆಯ ಹೊರವಲಯದಲ್ಲೇ ಆಕಸ್ಮಿಕವಾಗಿ ಭೇಟಿಯಾಗುವ ಯುವ ತಂಡದಲ್ಲಿ, ಪೂರ್ವ ಪರಿಚಯವಿಲ್ಲದಿದ್ದರೂ ಅಭಿಮನ್ಯುವನ್ನು ಗುರುತಿಸುವ ಚಂದವನ್ನು ಹಿಂದೀಯರು ಮರೆಯುವುದಿಲ್ಲ. ನೆನಪಿರಲಿ, ಪಾಂಡವರು ವನವಾಸ ಹೊರಡುವಾಗ ಸುಭದ್ರೆ ಕೇವಲ ಗರ್ಭಿಣಿ. ಮಹಾಭಾರತದ ಕಾಲಗರ್ಭದಲ್ಲಿ ಹೊತ್ತು, ಹೆತ್ತದ್ದರ ಲೆಕ್ಕಾಚಾರಗಳು ನಮ್ಮನ್ನು ದೇವವ್ರತ, ಸತ್ಯವತಿಯ ಕಾಲದಿಂದಲೇ ಕಾಡುವುದನ್ನು ನನಗಿದು ನೆನಪಿಸಿತು. 

ಹಿಂದಿಯ ದೃಶ್ಯ ವೈಭವಗಳ ಕುರಿತು ಎಷ್ಟೂ ಪಟ್ಟಿಯನ್ನು ಬೆಳೆಸಬಹುದು: ಪರಶುರಾಮನ ತಪೋಭೂಮಿ, ಚಿತ್ರವೀರ್ಯನ ಮರಣದಲ್ಲಿ ಭೀಷ್ಮನ ಕೋಪ, ನೂರು ತೈಲ ಭಾಂಡಗಳಲ್ಲಿನ ಕೌರವ ಪಿಂಡಗಳು, ಪಾಂಡವರ ಜನನ, ಕುರುಬಾಲರಿಗೆ ದ್ರೋಣ ಶಿಕ್ಷಾ, ದ್ರುಪದ ಗರ್ವಭಂಗ, ಅರಗಿನ ಮನೆ, ಹಿಡಿಂಬವನ, ಮತ್ಸ್ಯಯಂತ್ರ ಪ್ರಸಂಗ, ಇಂದ್ರಪ್ರಸ್ಥ ಹೀಗೆ ಹೇಳಿದಷ್ಟು ಮುಗಿಯದು. ಅದೇ ಕನ್ನಡದಲ್ಲಿ ನಾಲ್ಕು ಬೋಳು ಬಂಡೆಗಳ ಸಮೂಹವನ್ನೇ (ಬಹುಶಃ ರಾಮನಗರದ ಆಸುಪಾಸಿರಬಹುದು) ಗಂಧಮಾದನವೆಂದೋ, ಬಿಳಿ ಹೊಗೆ ಹೊಡೆದ ಶೂನ್ಯವನ್ನೇ ಹಿಮಾಲಯವೆಂದೋ ವಿರಳ ಮರಗಳ ಬಯಲನ್ನೇ ದಟ್ಟ ಕಾಡೆಂದೋ, ಎಲ್ಲ ಯುದ್ಧಗಳಿಗೂ ಅದೇ ಒಂದೆರಡು ಬಾಣ ಪ್ರಯೋಗ ಮತ್ತು ಪರಿಣಾಮದ ಪ್ರಕ್ರಿಯೆಯ ದಾಸ್ತಾನು ದೃಶ್ಯವೇ ಮುಂತಾದವನ್ನು ಯಾಂತ್ರಿಕವಾಗಿ ಮರುಬಳಸುವಾಗೆಲ್ಲಾ ಪ್ರಜ್ಞಾವಂತ ವೀಕ್ಷಕರಿರಲಿ, ಸ್ವತಃ ನಿರ್ಮಾಪಕರುಗಳಿಗೇ `ಕಳಪೆ' ಎಂಬ ಭಾವ ಕಾಡುವುದಿಲ್ಲವೇ ಎಂದು ಆಶ್ಚರ್ಯವಾಗುತ್ತದೆ.

ಉದಯ ಟೀವಿ ಪಸ್ತುತಿಯ ಮಹಾಭಾರತ ಉತ್ತಮಗೊಂಡೀತೋ ಎನ್ನುವ ನಿರೀಕ್ಷೆಯಲ್ಲಿ ಸದ್ಯ ಇಲ್ಲಿಗೆ ವಿರಮಿಸುತ್ತೇನೆ.

12 comments:

 1. ಹಿಂದಿನ ಮಹಾಭಾರತದ ಕಳಪೆ ಅನುಕರಣೆಗಿಂತ ಸ್ವಂತ ಕಲ್ಪನೆಯ ಮಹಾಭಾರತದ ಹೊಸ ಸೃಷ್ಟಿಯ ಸಾಧ್ಯತೆಯನ್ನು ಈಗ ಬರುತ್ತಿರುವ ಹಿಂದಿಯ ಹೊಸ ಮಹಾಭಾರತ ಮಾಡಿ ತೋರಿಸುತ್ತಿದೆ. ಅದರಿಂದ ಸೃಜನಶೀಲತೆಯ ಸ್ಫೂರ್ತಿಪಡೆದು ಕನ್ನಡದಲ್ಲಿಯೂ ಅದರ ಅನುಕರಣೆಯ ಬದಲು ಹೊಸದನ್ನು ಸೃಷ್ಟಿಸಬೇಕು. ಸೃಜನಶೀಲತೆ ಹೊಸ ಸೃಷ್ಟಿಗೆ ತುಡುಕಿದರೆ ಪ್ರತಿಭಾ ದಾರಿದ್ರ್ಯ ಅನುಕರಣೆ, ನಕಲಿನ ಡಬ್ಬಾಳಿಕೆಗೆ ಎಳಸು ತ್ತದೆ. ಅಭಯಣ್ಣ ನಂಥ ಎಳೆಯರು ಕಡಿಮೆ ಖರ್ಚಿನ ಕಲಾತ್ಮಕ ವೈಭವದ ಹೊಸ ಸಾಧ್ಯತೆಗಳ ಜೊತೆಗೆ ಹೊಸ ವ್ಯಾಖ್ಯಾನ ಸಾಧ್ಯತೆಗಳ ಹೊಳಹುಗಳನ್ನು ಅನ್ವೇಷಿಸಬಹುದು. ಯಕ್ಷಗಾನದಂಥ ಸಾಂಪ್ರದಾಯಿಕ ಮಾಧ್ಯಮದಲ್ಲಿಯೂ ಪ್ರತಿಭಾವಂತರು ಶ್ರೀರಾಮನಿರ್ಯಾಣದಂಥ ಹೊಸ ಸೃಷ್ಟಿಯ ಸಾಧ್ಯತೆಯನ್ನು ಹುಡುಕಿದ್ದರು. ಕನ್ನಡ ಮಹಾಭಾರತವನ್ನು ಪಂಪ ಕುಮಾರವ್ಯಾಸ ಭೈರಪ್ಪನವರ ಪರಂಪರೆಗೆ ಭಿನ್ನವಾದ ಹೊಸ ಕಾಣ್ಕೆಯಲ್ಲಿ ಕಟ್ಟಿಕೊಡುವ ಅವಕಾಶ ಪ್ರತಿಭಾವಂತನನ್ನು ಎದುರುನೋಡುತ್ತಿದೆ.

  ReplyDelete
 2. ಪ್ರಿಯ ಅಶೋಕವರ್ಧನ ಅವರಿಗೆ:
  ನಮಸ್ಕಾರ. ಇಂದು ನಿಮ್ಮ ’ತೌಲನಿಕ ವಿಮರ್ಶೆ’ಯನ್ನು ಓದಿ, ತುಂಬಾ ಸಂತೋಷವಾದುದರಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ. ಬಹು ಅಪರೂಪವಾಗಿ ಉತ್ತಮ ’ಸಾಹಿತ್ಯ ವಿಶ್ಲೇಷಣೆ-ವ್ಯಾಖ್ಯಾನ’ವನ್ನು ನಿಮ್ಮ ಬರಹ ದಾಖಲಿಸುತ್ತದೆ. ನಾನು ಎರಡೂ ಮಹಾಭಾರತಗಳನ್ನು ನೋಡಿಲ್ಲವಾದುದರಿಂದ ನಿಮ್ಮ ತೀರ್ಮಾನಗಳ ಬಗ್ಗೆ ಏನೂ ಹೇಳುವುದಿಲ್ಲ; ಆದರೆ ನಿಮ್ಮ ಮೌಲ್ಯಾತ್ಮಕ ನಿರ್ಣಯಗಳು ಸರಿಯಾಗಿವೆ ಎಂದು ತೋರುತ್ತದೆ --ನೀವು ಕೊಡುವ ಸತಾರ್ಕಿಕ ವಾದದಿಂದ.
  ಹಾಗೆಯೇ ಮತ್ತೊಂದು ಮಾತು: ಡಬಿಂಗ್ ಅನ್ನು ಯಾವಾಗಲೂ ನಾನು ವಿರೋಧಿಸುವವನು (ಆದರೆ ಮರು ನಿರ್ಮಾಣವನ್ನಲ್ಲ). ಈ ನನ್ನ ನಿಲುವು ನಿಮ್ಮದೂ ಕೂಡಾ - ಈಗ -ಎಂಬುದು ತಿಳಿದು ಸಂತಸವಾಯಿತು. ಎಲ್ಲವನ್ನೂ ನಮ್ಮದೇ ಭಾಷೆಯಲ್ಲಿ ಓದಬೇಕು/ ನೋಡಬೇಕು ಎನ್ನುವುದು ’ಇತರ ಭಾಷೆಗಳನ್ನು ಕುರಿತು ಇರುವ ತಿರಸ್ಕಾರ’ದ ನಿಲುವು --ಎಂದರೆ ಭಾಷಾಂಧತೆ, ಭಾಷಿಕ ಮೂಲಭೂತವಾದ.
  ಒಂದು ಒಳ್ಳೆಯ ಲೇಖನವನ್ನು ಓದುವ ಅವಕಾಶವನ್ನು ಕೊಟ್ಟುದಕ್ಕೆ ಧನ್ಯವಾದಗಳು.

  ReplyDelete
 3. ೧. ಆ ಎರಡು ಧಾರಾವಾಹಿಗಳ ಹೋಲಿಕೆ ಸ್ಕ್ರಿಪ್ಟ್ ಮಟ್ಟಿಗೆ ಸರಿಯೆ ಅಲ್ಲ್, ನೋ ಕಂಪೇರಿಸನ್.
  ೨. ಹಿಂದಿ ಮಹಾಭಾರತ (ಹಳತ್ತು) ದ ದೊದ್ದನಮಶಾ ರಾಹಿ (ಮಸುಲತ್ತು) ಮಾಸುಮ್ ರಾಜ ಅವರ ಚಿತ್ರ ನಾಟಕ. ಅದು ಉತ್ಕೃಷ್ಟ ಕಲಾಕೃತಿ. ಳಿದಂತೆ ಆ ಧಾರಾವಾಹಿಯು ಚಲಚಿತ್ರ ತಂತ್ರದಲ್ಲಿ ಸಾಮಾನ್ಯ.
  ೩. ಕರ್ಣನು ಮೂಲ ಭಾರತದಂತೆ ದುರ್ಯೋಧನನ ನೆರಳು ಎಂಬುದೆ ಸತ್ಯ, ಅದೇ ಸರಿಯಾದ ಚಿತ್ರ. ನಾನೂ ಸೇರಿ ಯಕ್ಷಗಾನದಲ್ಲಿನ ಹಲವರು ಚಿತ್ರಿಸುವ ಕರ್ಣ ಚಿತ್ರಣಕ್ಕೆ ವಾಸ್ತವತಃ ಭದ್ರ ನೆಲೆಯಿಲ್ಲ. ಕಾವ್ಯ ನ್ಯಾಯದಿಂದ ಒಪ್ಪಬಹುದಷ್ಟೆ.

  ReplyDelete
 4. ಕನ್ನಡ ಮಹಾಭಾರತ' ಸರಣಿಯ ಬಗ್ಗೆ ನನಗೆ ಅನಿಸಿದ್ದನ್ನೇ ನೀವೂ ಬರೆದಿದ್ದೀರಿ. ಎಲ್ಲೋ 15 ದಿನಗಳಿಗೊಮ್ಮೆ ಐದಾರು ನಿಮಿಷಗಳ ಕಾಲ ಅದನ್ನು ನೋಡಿ ರೇಜಿಗೆ ಹುಟ್ಟಿ ಮತ್ತೆ 14 ದಿನ ಆ ಚಾನೆಲ್ ಹಚ್ಚುವುದೇ ಇಲ್ಲ. ಬಾಲ್ಯದಲ್ಲಿ ಅಕ್ಷರಗಳ ಮೂಲಕ ಕಲ್ಪಿಸಿಕೊಂಡು ರೋಮಾಂಚನಗೊಳ್ಳುತ್ತಿದ್ದ ಮಹಾಭಾರತವನ್ನೆಲ್ಲ ಇವರು ವಾಷೌಟ್ ಮಾಡಿಬಿಟ್ಟಿದ್ದಾರೆ. ನಿಮ್ಮ ಸಲಹೆಯ ಮೇರೆಗೆ ಹಿಂದಿ ಸೀರಿಯಲ್ಲನ್ನು ನೋಡಬೇಕು ಇಂದು ರಾತ್ರಿ...

  ReplyDelete
 5. was to see when my brother told ( hindi mahabharath ) ....will surely see it from today

  ReplyDelete
 6. ನಟೇಶ್02 May, 2014 18:32

  ಟಿವಿ ಹಾಕಿದಾಗೆಲ್ಲ ಏನೂ ಚಿತ್ರ ಕಾಣಿಸದೆ ಬರೀ ' ಪ್ರೇಕ್ಷಕರು ಮೂರ್ಖರು' ಎಂಬ ಬರಹ ಕಾಣಿಸತೊಡಗಿ ಅದೇ ಧ್ವನಿಯಾಗಿಯೂ ಕೇಳಿಸತೊಡಗಿದಾಗ ಗಾಬರಿಯಾಗಿ ಸೀರಿಯಲ್ ಗಳಿಗೆ ಬೆನ್ನು ಹಾಕಿದ್ದೆ. ಇದಾಗಿ ಹಲವು ವರ್ಷಗಳಾಗಿರುವುದರಿಂದ ಮಹಾಭಾರತದ ಬಗ್ಗೆ ಪ್ರತಿಕ್ರಿಯಿಸಲಾರೆ.

  ಆದರೆ ಓದುವಾಗ ಅನಿಸಿದ್ದು - ಅತ್ಯುತ್ತಮ ವಿಮರ್ಶೆ!
  ನೀವು ಬರೆದದ್ದಕ್ಕೆ ಸಹಮತ ಎಂಬಂತೆ ಅಲ್ಲಾಡಿಸಿ ಕತ್ತು ನೋಯಲು ಶುರುವಾಗಿದೆ !

  ನಟೇಶ್

  ReplyDelete
 7. ಚಂದಮಾಮಾದಲ್ಲಿ ಬರುತ್ತಿದ್ದ ಮಹಾಭಾರತವನ್ನು ಓದಿ ಅನುಬವಿಸಿದ ಆನಂದ ಈ ಕೋಟಿಗಟ್ಟಲೆ ಸುರಿದ ಸೀರಿಯಲ್ ಗಳಿಂದ ಸಿಗುವುದಿಲ್ಲ.... :-(

  ReplyDelete
 8. ತಾಂತ್ರಿಕ ಕೊರತೆಗಳು, ಭಾಷೆ, ಸಾಹಿತ್ಯವನ್ನು ಅಸಮರ್ಪಕವಾಗಿ ಬಳಸುವುದು, ಕಂತುಗಳನ್ನು ಅನಗತ್ಯವಾಗಿ ಹಿಗ್ಗಿಸುವುದು ಮುಂತಾದ ಕಾರಣಗಳಿಂದಾಗಿ ಕನ್ನಡ ಕಿರುತೆರೆ ಸೊರಗುತ್ತಿದೆ. ಅಪ್ಪಟ ಕನ್ನಡಾಭಿಮಾನಿಗಳೂ ಇದನ್ನು ಇಷ್ಟಪಡುವುದಿಲ್ಲ. ಇದಕ್ಕಾಗಿಯೇ ನಾವು ಡಬ್ಬಿಂಗ್ ಬೇಕು ಎನ್ನುತ್ತಿರುವುದು. ಇನ್ನು ಚಲನಚಿತ್ರ ಡಬ್ಬಿಂಗ್ ನ ಬಗ್ಗೆ ಹೇಳುವುದಾದರೆ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರೂ ಸರಿ.. ಅನ್ಯರಾಜ್ಯೀಯರಾಗಿರಬಹುದು. ತಯಾರಿ ಮಾತ್ರ ಕನ್ನಡದಲ್ಲಿಯೇ (ತೀರಾ ಕಳಪೆಯಾದರೂ ಸರಿ) ಆಗಿರಬೇಕು....

  ReplyDelete
 9. ಹಿಂದಿ ಮಹಾಭಾರತದ ಬಗ್ಗೆ ನೀವು ಬರೆದಿರುವುದು ಅತ್ಯಂತ ಸೊಗಸಾಗಿದೆ. ಅದರಲ್ಲಿ ಬರುವ ಸಂವಾದಗಳು, ಸಂದರ್ಭದ ವಿಶ್ಲೇಷಣೆಗಳು, ನಮ್ಮಲ್ಲಿನ ಯಕ್ಷಗಾನ ತಾಳಮದ್ದಳೆಗಳಲ್ಲಿ ನಾವು ಕೇಳುತ್ತಿರುವ ಅರ್ಥಗಾರಿಕೆಯ ಹಾಗೆ ಭಾಸವಾಗುತ್ತಿದೆ. ಮಹಾಭಾರತದ ಒಂದು ಹೊಸ ರೂಪವನ್ನು ಈ ಧಾರಾವಾಹಿಯಲ್ಲಿ ನೋಡಲು ಸಾಧ್ಯವಾಗಿದೆ. ಕೆಲವು ಸನ್ನಿವೇಶಗಳನ್ನು ವಿಸ್ತಾರವಾಗಿ ನಿರೂಪಿಸಿದಂತೆಯೂ, ಕೆಲವನ್ನು ಮೊಟಕುಗೊಳಿಸಿರುವಂತೆಯೂ ತೋರುತ್ತದೆ. ಕರ್ಣನನ್ನು ದುಷ್ಟಚತುಷ್ಟಯದಿಂದ ಹೊರಗಿಟ್ಟು ಉದಾತ್ತ ಪಾತ್ರವಾಗಿ ನಿರೂಪಿಸಿರುವುದು ಕೂಡ ಒಂದು ಒಳ್ಳೆಯ ನಡೆಯಾಗಿ ಕಂಡುಬರುತ್ತಿದೆ.
  ReplyDelete
 10. ನನ್ನದೊಂದು ಪ್ರಶ್ನೆ ಇದೆ.
  ಹಿಂದಿಯಲ್ಲಿ ಬರುತ್ತಿದ್ದ ಮಹಾಭಾರತ ಧಾರಾವಾಹಿಯಲ್ಲಿ
  ದ್ರೌಪತಿ ವಸ್ತ್ರಪಹರಣದ ಸಮಯದಲ್ಲಿ ಕರ್ಣ ಅವಳನ್ನ
  ವೇಶ್ಯೆ, ವ್ಯಭಿಚಾರಿ ಅಂತ ಹೇಳುವ ಮಾತುಗಳನ್ನ ಕಾಣಬೋದು
  ಆದ್ರೆ ಅದು ಯಾವ ಕಡೆ ಉಲ್ಲೇಕ ಆಗಿಲ್ಲ

  ಅಗಾದ್ರೆ ವಾಸ್ತವ ಏನು ಕರ್ಣ ಅಂದಿದ್ದು ನಿಜಾನೋ ಅಥವಾ ಸೀರಿಯಲ್ ಅವರ ಕಥೆ ನೋ..


  ದಯವಿಟ್ಟು ಉತ್ತರ ನೀಡಿ

  ReplyDelete
  Replies
  1. ಪುರಾಣಗಳಲ್ಲಿ ವಾಸ್ತವ ಸತ್ಯ ಇಲ್ಲ. (ಮೂಲ ಮಹಾಭಾರತ, ರಾಮಾಯಣ ಎಂದು ಒಂದು ಗ್ರಂಥವೇ ಇಲ್ಲ. ವ್ಯಾಸ ವಾಲ್ಮೀಕಿಯರದ್ದೂ ಒಂದು ರೂಪ, ಹೆಚ್ಚು ಬಳಕೆಯಲ್ಲಿರುವ ರೂಪ ಎಂದಷ್ಟೇ ಗ್ರಹಿಸುತ್ತಾರೆ. ಆದರೂ ಅದರಲ್ಲೂ ಭಿನ್ನ ಪಾಠಾಂತರಗಳು ಇವೆ ಎನ್ನುವುದನ್ನೂ ಮರೆಯಬಾರದು) ಮುನ್ನೂರಕ್ಕೂ ಮಿಕ್ಕ ರಾಮಾಯಣ, ಹಾಗೇ ಅಸಂಖ್ಯ ಮಹಾಭಾರತ ಕಥಾರೂಪಗಳೂ ಇರುವುದನ್ನು ಮನಗಂಡು, ಪ್ರಸ್ತುತ ಸನ್ನಿವೇಶದಲ್ಲಿ ಎಷ್ಟು ಸಮರ್ಥವಾಗಿ ಬಂದಿದೆ ಎಂದಷ್ಟೇ ಯೋಚಿಸಿ, ಸಾಕು.

   Delete
 11. ಅದೇನೇ ಇದ್ದರೂ...ಉತ್ತಮ ಅಭಿವ್ಯಕ್ತಿ..
  ಎರಡೂ ಧಾರಾವಾಹಿ ವಾಹಿನಿಗಳಬಗ್ಗೆ ವಸ್ತುನಿಷ್ಠವಾಗಿ ಅಭಿಪ್ರಾಯ ವ್ಯಕ್ತಪಡಿಸಿರುವಿರಿ..
  ನಾನು..ಸ್ಟಾರ್ ಪ್ಲಸ್ ನ ಮಹಾಭಾರತದ ಹಿಂದಿ..ಹಾಗೂ ಕನ್ನಡ ಅವತರಣಿಕೆ...ಉದಯ ಟೀವಿಯ ಕನ್ನಡ ಮಹಾಭಾರತ ಮೂರನ್ನೂ ನೋಡಿ.. ಅಶೋಕವರ್ಧನರವರ ಅಭಿಪ್ರಾಯಗಳನ್ನು ಅನುಮೋದಿಸಿ ಅಭಿನಂದಿಸುತ್ತೇನೆ..ಶುಭವಾಗಲಿ..
  ಶಶಿಕಲಾರಶವಿಶಂಕರ್

  ReplyDelete