22 April 2014

ಡೇವಿಡ್ ಕಾಪರ್ಫೀಲ್ಡ್‌ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ | ಮುನ್ನುಡಿ

ಮುನ್ನುಡಿ
[ಡೇವಿಡ್ ಕಾಪರ್ಫೀಲ್ಡ್ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್ ಕನ್ನಡ ಭಾವಾನುವಾದ .ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಎರಡನೇ ಕಂತು
ಕನ್ನಡದಲ್ಲಿ ಕಾದಂಬರಿಗಳ ಯುಗ ಕಾಲಿರಿಸಿದ್ದು ಕಳೆದ ಶತಮಾನದ ಕೊನೆಯಲ್ಲಿ. ಸ್ವತಂತ್ರ ಕಾದಂಬರಿಗಳ ಪಂಕ್ತಿಯಲ್ಲಿ ಮೊದಲಿಗೆ ಕಾಣಿಸಿಕೊಂಡ ಕನ್ನಡ ಕಾದಂಬರಿ ಗುಲ್ವಾಡಿ ವೆಂಕಟರಾಯರಇಂದಿರಾ. ಇದು ಕಳೆದ ಶತಮಾನದ ಕೊನೆಯ ದಶಕದಲ್ಲಿ ಪ್ರಕಟಗೊಂಡಿತು. ಅದೇ ವೇಳೆಯಲ್ಲಿ ಕಾದಂಬರಿಯ ಇಂಗ್ಲಿಷ್ ಅನುವಾದ ಕೂಡ ದಕ್ಷಿಣ ಕನ್ನಡ ಜಿಲ್ಲೆಯ ಕಲೆಕ್ಟರರಾಗಿದ್ದ ಕ್ರೌಚ್ಮೆನ್ ಎಂಬ ಇಂಗ್ಲಿಷ್ ಗೃಹಸ್ಥರಿಂದ ಭಾಷಾಂತರಿಸಲ್ಪಟ್ಟು ಪ್ರಕಟಗೊಂಡಿತು. ಶತಮಾನದ ಆರಂಭದಲ್ಲಿ ಗುಲ್ವಾಡಿ ಅಣ್ಣಾಜಿರಾಯರಸೀಮಂತಿನಿ ಎಂಬ ಸ್ವತಂತ್ರ ಕಾದಂಬರಿ, ಎಂ.ಎಸ್. ಪುಟ್ಟಣ್ಣನವರಮಾಡಿದ್ದುಣ್ಣೋ ಮಹಾರಾಯ, ಬೋಳಾರ ಬಾಬೂರಾಯರವಾಗ್ದೇವಿಗಳು ಪ್ರಕಟಗೊಂಡವು. ಇದೇ ವೇಳೆಯಲ್ಲಿ ಬಿ. ವೆಂಕಟಾಚಾರ್ಯರು ಬಹಳವಾಗಿ ಬಂಗಾಳಿ ಕಾದಂಬರಿಗಳ ಕನ್ನಡ ಅನುವಾದಗಳನ್ನು ಒದಗಿಸಿಕೊಟ್ಟರು. ಅವರು ಇಂಗ್ಲಿಷಿನಿಂದ ಭಾಷಾಂತರಿಸಿದರಜನಿಯೆಂಬ ಕಾದಂಬರಿಲಾಸ್ಟ್ ಡೇಸ್ ಆಫ್ ಪೊಂಪಿ ಎಂಬುದರ ಅನುವಾದ. ಹೆಚ್ಚು ಕಡಿಮೆ, ದೇಶ ಭಾಷೆಗಳಲ್ಲಿ ಶತಮಾನದ ಆರಂಭದಲ್ಲಷ್ಟೆ ಕಾದಂಬರಿ ಸಾಹಿತ್ಯ ನಮ್ಮಲ್ಲಿ ಕಾಣಿಸಿಕೊಂಡಿತೆಂದು ಹೇಳಿದರೆ ತಪ್ಪಾಗಲಾರದು.
ದೀರ್ಘವಾದ ಸ್ವತಂತ್ರ ಕಥಾನಕಗಳ ಸಾಹಿತ್ಯ ರೂಪ ಮೊದಲು ಕಾಣಿಸಿಕೊಂಡುದು ಯುರೋಪಿನಲ್ಲಿ. ಭಾರತೀಯರಾದ ನಮಗೆ ಅಂತಹ ರಚನೆ ಮಾಡುವ ಪ್ರೇರಣೆ ಬಂದದ್ದು ಇಂಗ್ಲಿಷ್ ಸಾಹಿತ್ಯದಿಂದ. ಅವರು ತಮಗೆ ಹೊಸತಾದ ಸಾಹಿತ್ಯ ರೂಪವನ್ನುನಾವೆಲ್ ಎಂಬ ಅಭಿದಾನದಿಂದ ಕರೆದರು. ಹಲವಾರು ವ್ಯಕ್ತಿಗಳ ಶೀಲವನ್ನೂ, ಸಮಾಜದಲ್ಲಿ ವಿವಿಧ ಸನ್ನಿವೇಶಗಳಿಂದ ಭಿನ್ನ ಶೀಲರಲ್ಲಿ ಉಂಟಾಗುವ ಸಂಘರ್ಷಣೆಗಳನ್ನೂ ಚಿತ್ರಿಸುವುದು ಇವುಗಳ ಗುರಿಯಾಗಿತ್ತು. ಇಂಗ್ಲಿಷಿನಂತೆಯೇ ಫ್ರೆಂಚ್ ಸಾಹಿತ್ಯದಲ್ಲಿ ಬಗೆಯ ಕಾದಂಬರಿಗಳು ಬಂದುವು. ವಿಕ್ಟರ್ ಹ್ಯೂಗೋವಿನಲಾ ಮಿಸರೆಬಲ್ಸ್ ಅಂಥ ಒಂದು ಬೃಹತ್ ಕಾದಂಬರಿ. ಅದು ದೊಡ್ಡದಾಗಿರುವಂತೆ ಬಲು ಶಕ್ತಿಯುತವೂ ಆದ ರಚನೆಯಾಗಿದೆ. ಫ್ರೆಂಚ್ ಭಾಷೆಯಿಂದ ಇಂಗ್ಲಿಷಿಗೆ ಪರಿವರ್ತನೆಗೊಂಡ ಕಾದಂಬರಿಯೂ ನಮ್ಮ ಕಣ್ಣಿಗೆ ಬಂತು. ರಷ್ಯಾ ದೇಶದಲ್ಲಿ ಕಳೆದ ಶತಮಾನದಲ್ಲಿ ಹೆಸರಾಂತ ಸಾಹಿತಿ ಎನಿಸಿಕೊಂಡ ಕೌಂಟ್ ಲಿಯೋ ಟಾಲ್ಸ್ಟಾಯ್ ಬರೆದವಾರ್ ಎಂಡ್ ಪೀಸ್, ಎನ್ನಾ ಕೆರಿನೀನಾ ಮೊದಲಾದ ಗ್ರಂಥಗಳು ಇಂಗ್ಲಿಷ್ ಭಾಷೆಯಲ್ಲಿ ಭಾಷಾಂತರಗೊಂಡು ನಮ್ಮ ಜನಗಳ ಕಣ್ಣಿಗೆ ಬಿದ್ದುವು. ಸ್ವತಃ ಇಂಗ್ಲಿಷಿನಲ್ಲಿಯೇ ಕಳೆದ ಶತಮಾನದಲ್ಲಿಯೇ ಹಲವು ಪ್ರಸಿದ್ಧ ಬರಹಗಾರರು ಕಾಣಿಸಿಕೊಂಡರು. ಬ್ರೊಂಟೆ ಸಹೋದರಿಯರು, ಜೇನ್ ಆಸ್ಟಿನ್, ಸರ್ ವಾಲ್ಟರ್ ಸ್ಕಾಟ್, ಥಾಮಸ್ ಹಾರ್ಡಿ, ಚಾರ್ಲ್ಸ್ ಡಿಕೆನ್ಸ್, ಮಿಸೆಸ್ ಹೆನ್ರಿ ವುಡ್, ಗೋಲ್ಡ್ ಸ್ಮಿತ್ ಮೊದಲಾದವರು ಹಲವು ಕಾದಂಬರಿಗಳನ್ನು ಇಂಗ್ಲಿಷಿನಲ್ಲಿ ಕೊಟ್ಟಿದ್ದಾರೆ. ಕಾಲದಲ್ಲಿ ಇಂಗ್ಲೆಂಡಿನ ಕಾದಂಬರಿಯ ಬೆಳಸು ಸಮೃದ್ಧಿಯಾಗಿದ್ದುದಲ್ಲದೆ, ವಿಶೇಷ ಜನಪ್ರಿಯವೂ ಪ್ರಭಾವಶಾಲಿಯೂ ಆಗಿತ್ತು.
ಯಾವುದೇ ಒಂದು ದೇಶದ ಜನತೆ ಸಾಹಿತ್ಯಕ್ಕೆ ಮನ್ನಣೆ ಕೊಡುವಲ್ಲಿ, ಅದರ ನಿಷ್ಕರ್ಷ ರೂಪ ಮತ್ತು ತೂಕಗಳನ್ನು ಅರ್ಥಮಾಡಿಕೊಳ್ಳಬೇಕಾದರೆ, ಅನ್ಯ ಭಾಷೆಗಳಲ್ಲಿಯೂ ನಡೆಯುತ್ತಿರುವ ಸಾಹಿತ್ಯದ ಕೃಷಿ ಯಾವ ಬಗೆಯದು ಎಂದು ತಿಳಿಯಲೇಬೇಕು. ಕರ್ನಾಟಕದ ಜನರು ಬರಿಯ ಕನ್ನಡ ಬರಹಗಳನ್ನಷ್ಟೇ ಓದಿನಮ್ಮದು ಹಾಗೆ, ನಮ್ಮದು ಹೀಗೆ ಎಂದು ತಿಳಿದರೆ ಅದರಿಂದ ಸಾಹಿತ್ಯವನ್ನು ಕುರಿತಾದ ವಿವೇಕಯುತ ದೃಷ್ಟಿ ಬರಲಾರದು. ಜೀವನ ದೃಷ್ಟಿ ಪೂರ್ಣವಾಗಿ ನಮಗೆ ಬರುವುದಕ್ಕೂ ಕೂಡ, ಅನ್ಯ ಜನಗಳ ಜೀವನದ ಪರಿಚಯವೂ ನಮಗಾಗಬೇಕು. ಅದು ಪ್ರತ್ಯಕ್ಷವಾಗಿ ನಮಗೆ ದೊರೆಯದಿದ್ದಾಗ ಸಾಹಿತ್ಯದ ಮೂಲಕ ಅದನ್ನು ನಾವು ತಿಳಿಯಬೇಕು. ಕೆಲಸವನ್ನು ನಮ್ಮ ನಮ್ಮ ಭಾಷೆಯಲ್ಲಿ ಅನುವಾದಕರು ಮಾಡಿಕೊಡಬೇಕಾಗುತ್ತದೆ. ದೃಷ್ಟಿಯಿಂದ ಮಿತ್ರರಾದ ಶ್ರೀ .ಪಿ. ಸುಬ್ಬಯ್ಯನವರು ಕೈಕೊಂಡಿರುವ ಕೆಲಸ ಮಹತ್ವವಾದದ್ದು. ಹಿಂದೆ ಅವರು ವಿಕ್ಟರ್ ಹ್ಯೂಗೋವಿನಲಾ ಮಿಸರೆಬಲ್ಸ್ ಕಾದಂಬರಿಯನ್ನು ಕನ್ನಡಿಸಿ ಪ್ರಕಟಿಸಿದರು. ಬಾರಿ ಇಂಗ್ಲಿಷ್ ಕಾದಂಬರಿಕಾರ ಚಾರ್ಲ್ಸ್ ಡಿಕೆನ್ಸನು ಬರೆದ, ಅವನ ಅತ್ಯುತ್ತಮ ಗ್ರಂಥವೆನಿಸಿದಡೇವಿಡ್ ಕಾಪರ್ಫೀಲ್ಡನ್ನು ಅನುವಾದಿಸಿ ಕೊಟ್ಟಿದ್ದಾರೆ. ಕಾದಂಬರಿ ೧೮೪೯-೫೦ರಲ್ಲಿ ಇಂಗ್ಲೆಂಡಿನ ಪತ್ರಿಕೆಯೊಂದರಲ್ಲಿ ಕ್ರಮಶಃ ಪ್ರಕಟವಾಯಿತು. ಅದರೊಳಗಣ ಕೆಲವೊಂದು ಪಾತ್ರಗಳು ಚಿರಸ್ಮರಣೀಯವಾಗಿವೆ.


ಭಾಷಾಂತರದ ಕೆಲಸ ಸುಲಭವೆಂದು ಯಾರೂ ತಿಳಿಯಬೇಕಾಗಿಲ್ಲ. ಒಂದು ಭಾಷೆಯ ಪದಸಂಪತ್ತಿಗೆ ಸಮನಾಗಿ ಇನ್ನೊಂದು ಭಾಷೆಯಲ್ಲಿ ಉಚಿತ ಪದಗಳು ಸಿಗುವುದು ಕಷ್ಟ. ಇಂಗ್ಲೆಂಡಿನ ಜೀವನಕ್ರಮವೇ ಪ್ರತ್ಯೇಕವಾದುದರಿಂದ ಅಲ್ಲಿನ ಶಿಷ್ಟಾಚಾರ, ವಸ್ತು, ಒಡವೆಗಳ ರೂಪ ಬೇರೆಯವೇ ಆದುದರಿಂದ ಅವಕ್ಕೆಲ್ಲ ಸಮಾನ ಪದಗಳನ್ನು ಕನ್ನಡದಲ್ಲಿ ಒದಗಿಸುವುದು ಕಷ್ಟ. ಅಡಚಣೆಯ ಜೊತೆಗೆ ಇಂಗ್ಲಿಷ್ ಭಾಷೆಯ ಅಂದಿನ ಅಥವಾ ಇಂದಿನ ವಾಕ್ಯ ರಚನಾ ಕ್ರಮಗಳು, ನುಡಿಗಟ್ಟುಗಳು, ಕನ್ನಡದ ಹಿಡಿತಕ್ಕೆ ಸಿಗುವುದೂ ಕಷ್ಟ. ಅವನ್ನು ಇದ್ದಕ್ಕಿದ್ದಂತೆ (ಮಕ್ಕಾಮಕ್ಕಿ) ಭಾಷಾಂತರಿಸಿದರೆಇದು ಕನ್ನಡವೇ?’ ಎಂಬ ಟೀಕೆ ಬರುತ್ತದೆ. ಹಾಗೆ ಮಾಡದೇ ಹೋದರೆಮೂಲದಲ್ಲಿ ಹೀಗಿರಲಿಲ್ಲವಲ್ಲ ಎಂದು ಇಂಗ್ಲಿಷಿನಲ್ಲಿ ಅದನ್ನೋದಿದವರು ಹೇಳಬಹುದು. ಯಾವ ಭಾಷಾಂತರಕಾರನಿಗೂ ಸಮಸ್ಯೆ ತಪ್ಪಿದ್ದಲ್ಲ. ಇಂಥ ಅಡಚಣೆಗಳನ್ನು ಎದುರಿಸಿ, ಉತ್ಸಾಹದಿಂದ ನಮ್ಮ ಮಿತ್ರರು ಡಿಕನ್ಸಿನ ಒಂದು ಕಾದಂಬರಿಯ ರೂಪರೇಷೆಗಳು ಹೇಗಿರಬಹುದೆಂದು ತೋರಿಸುವುದಕ್ಕೆ ಪ್ರಯತ್ನಿಸಿದ್ದಾರೆ. ಇಂಥ ಅನೇಕ ಅನ್ಯದೇಶೀಯ ಕಾದಂಬರಿಗಳೂ ಮತ್ತು ಇತರ ಸಾಹಿತ್ಯಗಳೂ ಕನ್ನಡದಲ್ಲಿ ಬರಬೇಕಾಗಿದೆ. ಅನುವಾದದ ಜಟಿಲ ಸಮಸ್ಯೆಗಳನ್ನು ತಿಳಿದು, ಪರಿಶ್ರಮದಿಂದ ಅವನ್ನು ಬಿಡಿಸಿ, ಕನ್ನಡ ಜನದ ಮನಸ್ಸನ್ನು ತೃಪ್ತಿಪಡಿಸಲು ಅನೇಕ ಸಾಹಸಿಗಳು ಮುಂದೆ ಬರಬೇಕಾಗಿದ್ದ ಕಾಲದಲ್ಲಿ ಶ್ರೀ .ಪಿ. ಸುಬ್ಬಯ್ಯನವರ ಯಥಾನುಶಕ್ತಿ ಪ್ರಯತ್ನವನ್ನು ಆದರದಿಂದ ಸ್ವಾಗತಿಸಬೇಕಾಗಿದೆ. ಅವರು ದೀರ್ಘ ಕಾಲದಿಂದ ತಮ್ಮ ಬಿಡುವಿನ ಸಮಯವನ್ನು ಕೆಲಸಕ್ಕಾಗಿ ಕಳೆಯುತ್ತಿದ್ದಾರೆ. ಓದುಗರ ಸಹಕಾರ, ಸಹಾನುಭೂತಿಯಿಂದ ಅವರ ಪ್ರಯತ್ನಕ್ಕೆ ತಕ್ಕ ಪುರಸ್ಕಾರ ಸಿಗುವಂತಾಗಲೆಂದು ಹಾರೈಸುತ್ತೇನೆ.
ಇತಿ
ಶಿವರಾಮ ಕಾರಂತ
೧೭-೧೦-೧೯೬೬,
ಪುತ್ತೂರು, ದಕ.
ನನ್ನ ಜನನ
(ಅಧ್ಯಾಯ ಒಂದು, ಕಳೆದ ವಾರದಿಂದ ಮುಂದುವರಿದ)
ನಮ್ಮ ಮನೆಯ ಪೂರ್ವ ಭಾಗದ ಮುಖ್ಯ ಕೊಠಡಿಯಲ್ಲಿ ತಂದೆಯ ಮರಣಾನಂತರ ಬೆಂಕಿ ಹೊತ್ತಿಸಿರಲಿಲ್ಲ. ದಿನ ಸಹ ಮುಂದುಗಡೆಯ ಬೈಠಖಾನೆಯಲ್ಲಿ ಮಾತ್ರ ಬೆಂಕಿ ಉರಿಸಲಾಗಿತ್ತು. ತಾಯಿಯೂ ಅತ್ತೆಯೂ ಅಲ್ಲಿಗೆ ಹೋಗಿ, ಕುರ್ಚಿಗಳಲ್ಲಿ ಕುಳಿತು, ಸ್ವಲ್ಪ ಸಮಯ ಒಬ್ಬರನ್ನೊಬ್ಬರು ನೋಡುತ್ತಾ ಮೌನವಾಗಿಯೇ ಕಾಲಕಳೆದರು. ಹೀಗೆ ಮೌನವಾಗಿದ್ದ ಕಾರಣದಿಂದಲೇ ತಾಯಿ - ಅಳಬಾರದೆಂದು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದೆ - ಅಳತೊಡಗಿದಳು - ಕೊನೆಗೆ ಬೇಕಷ್ಟು ಅತ್ತಳು. ಅಳುವಿನಿಂದ ಅತ್ತೆಯ ಮನಸ್ಸು ಕರಗಿರಬೇಕು. ಅವಳೆದ್ದು ಬಂದು, ತಾಯಿಯ ಹತ್ತಿರ ನಿಂತು, ಅವಳ ತಲೆಯನ್ನು ಸವರುತ್ತಾ ಸಂತೈಸತೊಡಗಿದಳು. ನನ್ನ ತಾಯಿ ಬಹು ಸುಂದರಿಯಾಗಿದ್ದಳಂತೆ. ಪುಷ್ಕಳವಾಗಿ ಬೆಳೆದಿದ್ದ ಅವಳ ಮೃದು ತಲೆಕೂದಲು ಮುಖದ ಮೇಲೆಲ್ಲಾ ಹರಡಿತ್ತು. ಹೀಗೆ ತಲೆಕೂದಲು ಹರಡಿಕೊಂಡು ಅಳುತ್ತಿದ್ದ ತಾಯಿಯನ್ನು ಅತ್ತೆ ನೋಡಿ,
ನಿಜ, ನೀನು ನಿಜವಾಗಿಯೂ ಹಸುಗೂಸು - ಮಾತೆಯಾಗತಕ್ಕಷ್ಟು ದೊಡ್ಡವಳಲ್ಲ ಅಂದಳು.
ತಾಯಿ ಗದ್ಗದ ಕಂಠದಿಂದಹೌದು, ತಿಳಿಯದ ಹುಡುಗಿ - ವಿಧವೆ - ಸದ್ಯವೇ ಮಾತೆಯಾಗಲಿರುವವಳು ಎಂದನ್ನುತ್ತಾ ಅತ್ತೆಯನ್ನು ನೋಡಿ ನಾಚಿಕೆಪಟ್ಟುಕೊಂಡಳು. ಪಾಪ! ಅವಳ ಸೌಂದರ್ಯದ ಅರಿವು, ಪ್ರಾಯದ ಎಳೆತನ, ಅಶಕ್ತಿ, ಜೀವನದಲ್ಲಿ ತಾನು ಏಕಾಂಗಿಯಾಗಿ ಇರುವ ಜ್ಞಾನ - ಇವನ್ನೆಲ್ಲಾ ಗ್ರಹಿಸಿ ಅವಳು ನಾಚಿಕೆಪಟ್ಟುಕೊಂಡಿರಬೇಕು. ಇದೇ ಸಮಯದಲ್ಲಿ ಅತ್ತೆಯ ಮನಸ್ಸು ಮತ್ತಷ್ಟು ಕರಗಿರಬೇಕು. ಅತ್ತೆ ಪುನಃ ತಾಯಿಯ ತಲೆಯನ್ನು ಮತ್ತಷ್ಟು ಮೃದುವಾಗಿ ಸವರುತ್ತಾ ಆಲೋಚನಾಮಗ್ನಳಾಗಿ ಕುಳಿತಳು. ಆದರೆ, ತನ್ನ ಜನ್ಮ ಸಿದ್ಧವಾದ ದಿಟ್ಟತನ ಬಿಟ್ಟು ಮೃದುತ್ವ ಹೊಂದಿದ್ದ ಶಿಸ್ತು ಭಂಗವನ್ನು ಅವಳು ಕೂಡಲೇ ತಿಳಿದು, ಹಠಾತ್ತಾಗಿ ಮುಖದಲ್ಲಿ ಮಹತ್ತರವಾದ ಗಂಭೀರ ಮುದ್ರೆಯನ್ನು ಹೊತ್ತು, ಕಾಲುಗಳನ್ನು ಬೆಂಕಿ ಉರಿಯುತ್ತಿದ್ದ ಅಗ್ಗಿಷ್ಟಿಕೆಯ ಪಕ್ಕಗಳಲ್ಲಿರಿಸಿ, ಮೊಣಕಾಲ ಮೇಲೊಂದು ಕೈಯ್ಯನ್ನೂರಿ ಅಂಗೈಯಲ್ಲಿ ತಲೆಯನ್ನಿಟ್ಟು, ಬೆಂಕಿಯನ್ನೇ ದೃಷ್ಟಿಸತೊಡಗಿದಳು. ಹೀಗಿದ್ದ ಕೆಲವು ನಿಮಿಷಗಳ ನಂತರ ಇದ್ದಕ್ಕಿದ್ದಂತೆಯೇ ತಾಯಿಯನ್ನು ನೋಡಿ -
ಕೋಕಿಲನಿವಾಸ - ಅದೇನು ಹೆಸರು?” ಅಂದಳು.
ಮನೆಗೆ ಹೆಸರೇಕೆಂದು ಕೇಳಿದಿರಾ. . .” ಎಂದು ತಾಯಿ ಮಾತಾಡುತ್ತಾ ಮುಂದುವರಿಯುವ ಮೊದಲೇ
ಪಾಕನಿವಾಸ - ಎಂತಲೂ ಹೆಸರಿಡಬಹುದಿತ್ತು. ಮನೆಗೂ ಒಂದು ಹೆಸರು ಬೇಕಿತ್ತೇ?” ಎಂದು ಅತ್ತೆ ಕೇಳಿದಳು.
ಮನೆಯನ್ನು ಕ್ರಯಕ್ಕೆ ಪಡೆದಾಗ ಮನೆಗಳಲ್ಲಿದ್ದ ಗೂಡುಗಳನ್ನು ಕಂಡು, ಅವುಗಳಲ್ಲಿ ತುಂಬಾ ಕೋಗಿಲೆಗಳಿರಬೇಕೆಂದು ತಿಳಿದು ಹೆಸರಿಟ್ಟರು ಅಂದಳು ತಾಯಿ.
ನಮ್ಮ ಹಿತ್ತಲಿನ ಒಂದು ಮೂಲೆಯಲ್ಲಿ ರಾಕ್ಷಸಾಕಾರವಾಗಿ ಬೆಳೆದಿದ್ದ ಕೆಲವು ಎಲ್ಮ್ ಮರಗಳಿದ್ದುವು. ಸಂಜೆಯ ಸಮಯದಲ್ಲಿ ಮರಗಳು ಗಾಳಿಯಿಂದ ಬಾಗುತ್ತಾ, ರಾಕ್ಷಸರು ತಂತಮ್ಮೊಳಗೆ ಆಂತರಂಗಿಕವಾಗಿ ಮಾತಾಡುವಂತೆ ಒಂದನ್ನೊಂದು ಮುಟ್ಟಿ, ಒರೆಸಿ, ಪುನಃ ದೂರಸರಿದು, ತಲೆಗಳನ್ನು ಒದರಿಕೊಂಡು, ತಮ್ಮ ಗೆಲ್ಲುಗಳನ್ನು ಪರಸ್ಪರ ತೂರಿಕೊಂಡು ಪುನಃ ಹಿಂದೆಳೆದು, ಗಾಳಿಯ ಆರ್ಭಟೆಯಲ್ಲಿ ತಾವೂ ಆರ್ಭಟಿಸುತ್ತಿರುವಂತೆ ಭಯಂಕರವಾಗಿ ತೋರಿದುವು. ಮೂರ್ಖ ರಾಕ್ಷಸರ ಅಂತರಂಗ ಸಲ್ಲಾಪವೇ ಭಯಂಕರಾವಸ್ಥೆಗೆ ಕಾರಣವೆಂಬಂತೆ ತೋರುತ್ತಿದ್ದ ಮರಗಳನ್ನು ಅತ್ತೆಯೂ ತಾಯಿಯೂ ನೋಡುತ್ತಿದ್ದರು. ಇದೇ ಸಮಯದಲ್ಲಿ ಹರಿದುಹಾಳಾಗಿದ್ದ ಕೋಗಿಲೆಗಳ ಗೂಡುಗಳು ಒಂದು ಮರದಿಂದ ಇನ್ನೊಂದು ಮರದ ಕಡೆಗೆ ಜೋತು ನೇತಾಡಿ, ಹಗುರವಾಗಿದ್ದುದರಿಂದ ಬೀಳದೆ ತೂಗಾಡುತ್ತಿದ್ದುವು. ಅತ್ತೆ ಗೂಡುಗಳನ್ನು ನೋಡುತ್ತಾ -
ಕೋಗಿಲೆಗಳೆಲ್ಲಿವೆ?” ಅಂದಳು.
ತನ್ನನ್ನು ವಿಚಾರಿಸಿದ ಸ್ವರ ಮತ್ತೂ ಕ್ರಮದಿಂದ ತಾಯಿ ಹೆದರಿ, ಗಾಬರಿಗೊಂಡು-
ಗೂಡುಗಳನ್ನು ಕಂಡು ಕೋಗಿಲೆಗಳು ಅಲ್ಲಿರಬೇಕೆಂದು ಅವರು ನಂಬಿದ್ದರು. ನಾವು ಬಂದು ಇಲ್ಲೇ ವಾಸಮಾಡುವಾಗ ಅವೆಲ್ಲ ಖಾಲಿಗೂಡುಗಳೆಂಬುದನ್ನು ತಿಳಿದೆವು ಅಂದಳು.
ಅಬ್ಬಾ! ಪ್ರತಿ ಹೆಜ್ಜೆಯಲ್ಲೂ ಡೇವಿಡ್ ಕಾಪರ್ಫೀಲ್ಡನೇ! ಗೂಡು ನೋಡಿ ಹಕ್ಕಿಗಳನ್ನೆಣಿಸಿದ! ತಾನು ಹಿಡಿದ ಕೆಲಸದಲ್ಲೆಲ್ಲಾ ತನ್ನ ಬುದ್ಧಿಶೂನ್ಯತೆಯ ಪ್ರದರ್ಶನ!” ಎಂದು ಅತ್ತೆ ಜಿಗುಪ್ಸೆಯಿಂದ ನುಡಿದಳು.
ತನಗೆ ತ್ರಾಣವಿಲ್ಲದಿದ್ದರೂ, ತನ್ನ ಮೃತ ಪತಿಯ ದೂಷಣೆಯನ್ನು ಕೇಳಲಾರದೆ ಬೆಟ್ಸಿಯನ್ನು ಒಮ್ಮೆಯಾದರೂ ಎದುರಿಸಿ ಮಾತಾಡಬೇಕೆಂದು ತಾಯಿಯು ಎದ್ದು ನಿಂತಳು. ಆದರೆ, ಅವಳು ಆರೋಗ್ಯವಾಗಿದ್ದಾಗಲಾದರೂ ಸಹ ಬೆಟ್ಸಿಯೊಡನೆ ಎದುರಿಸಿ ಮಾತಾಡಿದ್ದಾದರೆ ಸೋಲಲೇಬೇಕಾಗಿದ್ದ ನನ್ನ ತಾಯಿ, ದಿನದ ತನ್ನ ಮಾನಸಿಕ ಮತ್ತೂ ದೈಹಿಕ ಪರಿಸ್ಥಿತಿಯ ಕಾರಣವಾಗಿ -
ಕಳೆದುಹೋದವರ ಹೆಸರೆತ್ತಿ ಟೀಕಿಸಲೂ ನಿಮಗೆ ಧೈರ್ಯ ಬರುತ್ತದೆಯೇ. . . ಏನು?” ಎಂದು ಅಷ್ಟು ಮಾತ್ರ ಹೇಳಿ, ಆಗಲೇ ತನ್ನ ಮಾತುಗಳ ಪರಿಣಾಮ ಭೀಕರ ಅತ್ತೆಯ ಮೇಲೆ ಏನಾಗಬಹುದೆಂದು ಊಹಿಸಿ, ಊಹನೆಯಿಂದ ಹೆದರಿ, ಮೂರ್ಛಿತಳಾಗಿ ಮಲಗಿಬಿಟ್ಟಳು.
ಇಷ್ಟರಲ್ಲಿ ಸಂಧ್ಯಾಕಾಲ ದಾಟಿತ್ತು, ರಾತ್ರಿಯೇ ಪ್ರಾರಂಭಿಸಿತ್ತು. ಸ್ವಲ್ಪ ಹೊತ್ತಿನಲ್ಲೇ ತಾಯಿಗೆ ಸ್ಮೃತಿ ಬಂದದ್ದು ಬೆಂಕಿಯ ಬೆಳಕಿನಲ್ಲಿ ಗೊತ್ತಾಯಿತು. ಬೆಟ್ಸಿಯ ಸಹಾಯದಿಂದ ಅವಳು ಎದ್ದು ನಿಂತು, ಕಿಟಕಿಯ ಸರಳುಗಳನ್ನು ಹಿಡಿದುಕೊಂಡು ಸುಧಾರಿಸುತ್ತಾ, ಬೆಟ್ಸಿಯನ್ನು ನೋಡಿದಳು. ಅತ್ತೆ ಪುನಃ ವಿಚಾರಿಸತೊಡಗಿದಳು -
ತಿಂಗಳು ತುಂಬುವುದು ಯಾವಾಗ?”
ಗೊತ್ತಿಲ್ಲ, ಈಗಲೇ ಆಗಬಹುದೆಂದು ತೋರುತ್ತದೆ. ನಾನಂತೂ ಇದರಿಂದ ಪಾರಾಗುವುದು ಅಸಂಭವ - ಸಾಯುವುದು ಖಂಡಿತ,” ಅಂದಳು ತಾಯಿ.
ಅತ್ತೆ ಸಮಾಧಾನಪಡಿಸತೊಡಗಿದಳು,
ಹೆದರಬೇಡ ಮಗು, ಹೆದರಿಕೆಯಿಂದ ಮಾತ್ರ ರೀತಿಯ ಆಲೋಚನೆಗಳು ಬರುತ್ತವೆ. ಸ್ವಲ್ಪ ಬಾಯಾರಿಕೆ ಕುಡಿದು ನೋಡು, ಸುಖವಾಗುತ್ತೆ. ಇರಲಿ, ಹುಡುಗಿಯ ಹೆಸರೇನೆ?” ಅಂದಳು ಅತ್ತೆ.
ನಾನು ಹೆರುವುದು ಗಂಡನ್ನೋ ಹೆಣ್ಣನ್ನೋ ಯಾರಿಗೆ ಗೊತ್ತು!” ಎಂದು ತಾಯಿ ಉತ್ತರ ಕೊಟ್ಟಳು. ಆಗ ಅತ್ತೆ -
ಅಯ್ಯೋ ಹೆಡ್ಡು ಹುಡುಗೀ, ನೀನು ಹೆರುವ ಮಗುವಿನ ಹೆಸರನ್ನು ವಿಚಾರಿಸಿದ್ದಲ್ಲ. - ನಿಮ್ಮ ಮನೆ ಕೆಲಸದವಳ ಹೆಸರೇನೆಂದು ಕೇಳಿದೆ.”
ಅವಳ ಹೆಸರೋ - ಅವಳು ಪೆಗಟಿ,” ಎಂದು ತಾಯಿ ಕೆಲಸದವಳ ಹೆಸರನ್ನು ಹೇಳಿದಳು.
ಹೆಸರು ಕೇಳಿ ಅತ್ತೆಗೆ ಆಶ್ಚರ್ಯವಾಯಿತು.
ಏನು - ಪೆಗಟಿ, ಎಂದು ಹೆಸರೇನು? ಕ್ರಿಶ್ಚಿಯನ್ ಜಾತಿಯಲ್ಲಿ ಜನಿಸಿ, ಇಗರ್ಜಿಗೆ ಹೋಗಿ, ಹುಡುಕಿ ಇಟ್ಟ ಹೆಸರು - ಪೆಗಟಿ!” ಎಂದನ್ನುತ್ತಾ ಅತ್ತೆ ಪೆಗಟಿಯನ್ನು ಕರೆದು ಸ್ವಲ್ಪ ಚಾ ತರಲು ಹೇಳಿದಳು. ಅನಂತರ ತಾಯಿಯನ್ನು ನೋಡಿ,
ಈಗ ತಾನೇ ಹೆಣ್ಣೋ ಗಂಡೋ ಎಂದು ಪ್ರಸ್ತಾಪಿಸಿದೆವಲ್ಲಾ - ನಾನು ಕಂಡ ಕೆಲವು ಶಕುನಗಳಿಂದ ಹುಟ್ಟುವುದು  ಹೆಣ್ಣೂಂತ ನಿಶ್ಚೈಸಿರುತ್ತೇನೆ,” ಅಂದಳು ಅತ್ತೆ.
ಗಂಡೇ ಜನಿಸುವುದೆಂದು ನನ್ನ ಊಹೆ,” ಅಂದಳು ತಾಯಿ.
ಮಾತು ಅತ್ತೆಗೆ ಸಮಾಧಾನ ಕೊಡಲಿಲ್ಲ. ಜನಿಸುವ ಮಗು ಹೆಣ್ಣೇ ಆಗುವುದೆಂದು ಅತ್ತೆ ತನ್ನ ಅಂತರಂಗದಲ್ಲಿ ನಿಶ್ಚೈಸಿಕೊಂಡಿದ್ದಳು - ಅವಳ ಅತಿಯಾದ ಕಾಂಕ್ಷೆಯೇ ಹಾಗಿತ್ತು. ಸ್ವಲ್ಪ ಆಲೋಚಿಸುತ್ತಾ ಅತ್ತೆ ಅಂದಳು -
ನನಗೆ ಬಲವತ್ತರವಾದ ನಂಬಿಕೆಯೇ ಇದೆ; ಜನಿಸುವ ಮಗು ಹೆಣ್ಣೂಂತ. ನನ್ನ ಅಭಿಪ್ರಾಯಕ್ಕೆ ವಿರೋಧ ಮಾತಾಡಬೇಡ. ಹುಟ್ಟುವ ಹುಡುಗಿಗೆ ನಾನು ದೇವಮಾತೆಯಾಗುತ್ತೇನೆ. ನನ್ನಬೆಟ್ಸಿ ಟ್ರಾಟೂಡ್ ಆದರೂ ನನಗಿಂತ ಉತ್ತಮವಾದ ಜೀವನಸುಖವನ್ನು ಅನುಭವಿಸಲಿ. ಇವಳ ಪ್ರೇಮ ಅಪಾತ್ರನ ಪಾಲಾಗದೆ - ಜುಗಾರಿಯ ಪಣದಂತೆ ಆಗದೆ ಇರಲಿ! ಈಗ ಜನಿಸುವ ಶಿಶುವಿನ ಮನಸ್ಸು ಯೋಗ್ಯ ಮಾರ್ಗವನ್ನನುಸರಿಸುವಂತೆ ನೋಡಿ, ಕಾಪಾಡಿ, ಅವಳನ್ನು ಆದರ್ಶ ಜೀವನಮಾರ್ಗದಲ್ಲಿ ನಡೆಸುವ ಜವಾಬ್ದಾರಿ ನನ್ನದಿರಲಿ ಎಂದು ಅತ್ತೆ ಸ್ವಲ್ಪವೇ ದುಃಖಮಿಶ್ರಿತ ಆವೇಶದಿಂದ ಹೇಳಿದಳು. ಅವಳ ಜೀವನದ ಗತಕಾಲದ ಅನುಭವದ ಕಾರಣವಾಗಿ ಅವಳು ಹಾಗೆ ಮಾತಾಡಿರಬೇಕು. ಹೀಗೆ ಮಾತಾಡಿ ಬೆಂಕಿಯನ್ನೇ ನೋಡುತ್ತಾ ಅತ್ತೆ ಚಿಂತಾಮಗ್ನಳಾಗಿ ಕುಳಿತಳು. ಮತ್ತೆ ಸ್ವಲ್ಪ ಹೊತ್ತಿಗೆ ತಾಯಿಯನ್ನು ಪ್ರಶ್ನಿಸಿದಳು -
ಮಗೂ, ಡೇವಿಡ್ಡನು ನಿನ್ನನ್ನು ಪ್ರೀತಿಸುತ್ತಿದ್ದನೇನು - ನಿಮ್ಮ ಸಂಸಾರ ಸುಖವಾಗಿತ್ತೇ?”
ತನ್ನ ದೇಹ ದೌರ್ಬಲ್ಯವನ್ನೂ, ಹೆರಿಗೆಯ ಗಂಡಾಂತರಗಳನ್ನೂ ಯೋಚಿಸುತ್ತಾ, ಗಾಬರಿಗೊಂಡಿದ್ದ ತಾಯಿ ಸ್ವಲ್ಪ ದುಃಖದಿಂದಲೇ-
ನಾವು ಸುಖವಾಗಿದ್ದೆವು - ಡೇವಿಡ್ಡನು ಇರಬೇಕಾದುದಕ್ಕಿಂತಲೂ ಹೆಚ್ಚಿನ ರೀತಿಯಲ್ಲೇ ನನಗೆ ಒಳ್ಳೆಯವನಾಗಿದ್ದನು.”
ಏನು, ಅತಿ ಪ್ರೀತಿಯಿಂದ ನಿನ್ನನ್ನು ಹಾಳುಮಾಡಿದನೇನು?” ಎಂದು ಅತ್ತೆ ಮರುಪ್ರಶ್ನಿಸಿದಳು.
ತಾಯಿಗೆ ಅಳು ಬಂದಿತು. ಅಳುತ್ತಾ ಅಂದಳು -
ಹೌದು, ಕಷ್ಟಮಯ ಪ್ರಪಂಚದಲ್ಲಿ ನನ್ನೊಬ್ಬಳನ್ನೇ ಬಿಟ್ಟು ಹೋಗಿದ್ದಾನೆ - ಮಟ್ಟಿಗೆ ಹೌದು.”
ಅತ್ತೆಯ ಮನಸ್ಸು ಕರಗಿತು -
ನಾನು ಹಾಗೆ ಕೇಳಿದೆನೆಂದು ಬೇಸರಿಸಬೇಡ, ಅಳಬೇಡ, ಮಗು - ನಿಮ್ಮ ದಾಂಪತ್ಯವು ಯೋಗ್ಯವಾದ ಒಂದು ಕೂಟವಾಗಿರಲಿಲ್ಲವೆಂದು ನಾನು ಊಹಿಸಿದ್ದೆ. ಆದರೆ, ಸ್ವಲ್ಪ ಆಲೋಚಿಸಿ ನೋಡಿದರೆ ಯೋಗ್ಯವಾದ ದಾಂಪತ್ಯಗಳೇ ಇಲ್ಲವೆನ್ನಲೂಬಹುದು. ಪ್ರಪಂಚದ ಸ್ಥಿತಿಯೇ ಹಾಗೆ. ನೀನೊಬ್ಬ ತಂದೆತಾಯಿಯಿಲ್ಲದ - ಏಕಾಂಗಿ - ಅನಾಥ ದಾದಿಯಾಗಿದ್ದೆಯಲ್ಲವೇ?”
ಹೌದು, ನಾನು ದಾದಿಯಾಗಿದ್ದೆ. ನಾನಿದ್ದ ಮನೆಗೆ ಡೇವಿಡ್ಡನು ಆಗಿಂದಾಗ್ಗೆ ಬರುತ್ತಿದ್ದನು. ಅಲ್ಲಿ ನನ್ನನ್ನು ಅವನು ವಿಶೇಷವಾಗಿ ಗಮನವಿಟ್ಟು ನೋಡುತ್ತಿದ್ದನು. ನನ್ನಲ್ಲಿ ಅವನಿಗಿದ್ದ ಪ್ರೀತಿ ಶ್ರದ್ಧೆಗಳ ಪರಿಣಾಮವಾಗಿ ನಮ್ಮೊಳಗೆ ವಿವಾಹವು ನಡೆಯಿತು.”
ರೀತಿ ಇನ್ನೂ ಅನೇಕ ವಿಷಯಗಳನ್ನು ಸ್ವಲ್ಪಸ್ವಲ್ಪವಾಗಿ ಅತ್ತೆ ವಿಚಾರಿಸಿ ತಿಳಿದಳು. ನಮ್ಮ ತಾಯಿ ತಂದೆಯರ ಜೀವನ ಕ್ರಮ, ತಂದೆ ಮೃತಪಡುವ ಮೊದಲು ತಾಯಿಗೆ ಐನೂರು ಪವನು ವರ್ಷಾಶನ ಸಿಕ್ಕುವಂತೆ ಮಾಡಿರುವ ಏರ್ಪಾಡು, ಇಂಥದ್ದೇ ಅನೇಕ ವಿಷಯಗಳನ್ನು ಮಾತಾಡಿಕೊಂಡರು. ಇಷ್ಟರಲ್ಲಿ ನನ್ನ ತಾಯಿಯ ಪರಿಸ್ಥಿತಿಯು ತುಂಬಾ ಕೆಡುತ್ತಾ ಬಂದಿತ್ತು. ಇದನ್ನು ಕಂಡು ಡಾಕ್ಟರರೂ ನರ್ಸಳೂ ಬಂದರೆ ಅನುಕೂಲವೆಂದು - ಮರೆಯಲ್ಲೇ ನಿಂತು ನೋಡುತ್ತಲೂ, ಮಾತುಗಳನ್ನು ಕೇಳುತ್ತಲೂ ಇದ್ದ - ಪೆಗಟಿಯು ಅಭಿಪ್ರಾಯಪಟ್ಟಳು. ಇಂಥ ಸಂದರ್ಭಕ್ಕೆ ಒಬ್ಬ ಜವಾನ ಅಗತ್ಯವೆಂದು ಪೆಗಟಿ ತನ್ನ ಸೋದರಳಿಯ ಹೇಮನನ್ನು ಮನೆಯಲ್ಲೇ ಅಡಗಿಸಿಟ್ಟುಕೊಂಡಿದ್ದಳು - ಹೇಮ ಡಾಕ್ಟರರನ್ನು ಕರೆತರಲು ಓಡಿದ.
ಸ್ವಲ್ಪ ಹೊತ್ತಿನಲ್ಲಿ ಡಾಕ್ಟರರೂ, ನರ್ಸಳೂ ಬಂದರು. ಇಂತಹ ಸನ್ನಿವೇಶಗಳಲ್ಲಿ ಎಲ್ಲರಿಂದಲೂ ಗೌರವ ಮತ್ತು ಭಯದಿಂದ ಕಾಣಲ್ಪಡುವ ಡಾಕ್ಟರರೂ ಮತ್ತು ನರ್ಸುಗಳೂ ಇಲ್ಲಿ ಮಾತ್ರ ತಾವೇ ಭಯಪಡುವ ಪ್ರಸಂಗವಿತ್ತು. ಡಾಕ್ಟರರು ಸ್ವಭಾವತಃ ಬಹು ವಿನೀತರಾಗಿದ್ದರು. ನಮ್ಮ ಮನೆಯಲ್ಲಿ ಯಾರಿಗೂ ಪರಿಚಯವಿಲ್ಲದಿದ್ದ - ನೋಡಿದರೇನೆ ಭಯವುಂಟಾಗಬೇಕಾದಂಥ ಶರೀರ ಮತ್ತು ಮುಖ ವರ್ಚಸ್ಸಿದ್ದ - ಅತ್ತೆ ಬೆಟ್ಸಿಯನ್ನು ನೋಡಿ ಡಾಕ್ಟರರು ಭಯಗ್ರಸ್ತರೇ ಆದರು. ಬೆಟ್ಸಿ ತನ್ನ ಕುಲಾವಿಯನ್ನು ಎಡತೋಳಿಗೆ ಕಟ್ಟಿಕೊಂಡು, ಅನಾವಶ್ಯಕವಾದ ಮಾತುಗಳು ತನ್ನ ಕಿವಿಗೆ ಬೀಳದಂತೆ ಕಿವಿಗೆ ಹತ್ತಿಯ ದಿಮ್ಮಿಯನ್ನು ಹಾಕಿಕೊಂಡು ಬೆಂಕಿಯ ಎದುರು ಕುಳಿತಿದ್ದಳು. ಆಕೆ ಡಾಕ್ಟರರ ದೃಷ್ಟಿಯಲ್ಲಿ  ಒಂದು ಗಂಭೀರವೂ, ಭಯಪ್ರದವೂ ಆದ, ವೈಚಿತ್ರ್ಯವೇ ಆಗಿಬಿಟ್ಟಿದ್ದಳು.
ಇಷ್ಟರಲ್ಲಿ ತಾಯಿಯನ್ನು ಮಹಡಿಯ ಮೇಲಿನ ಒಂದು ಕೋಣೆಗೆ ಸಾಗಿಸಿದ್ದರು. ಡಾಕ್ಟರರು ಅಲ್ಲಿಗೆ ಹೋಗಿ ಅವಳನ್ನು ಪರೀಕ್ಷಿಸಿ, ಹೆರಿಗೆಗೆ ಇನ್ನು ಸ್ವಲ್ಪ ಸಮಯ ಬೇಕೆಂದಂದುಕೊಂಡು ಕೆಳಗೆ ಬಂದರು. ಕೆಳಗಿದ್ದ ಭಯಕಾರಕ ಸ್ತ್ರೀಯ ಸಮಕ್ಷಮದಲ್ಲಿ ಸ್ವಲ್ಪ ಹೊತ್ತು ತಾನು ಕುಳಿತಿರಬೇಕಾಗುವುದೆಂಬುದನ್ನು ಗ್ರಹಿಸಿ - ಹೀಗಿರುವಷ್ಟು ಅವಳನ್ನು ಒಲಿಸಿಕೊಂಡಿರುವುದು ಅಗತ್ಯವೆಂದು - ವಿನೀತತೆಯಿಂದ ಬೆಟ್ಸಿಯನ್ನು ನೋಡುತ್ತಾ, ತಲೆಯನ್ನು ಸ್ವಲ್ಪ ಓರೆ ಮಾಡಿಕೊಂಡು ಅತ್ತಿತ್ತ ನಡೆಯತೊಡಗಿದರು. ಡಾಕ್ಟರರು ಬಹು ವಿನೀತರು - ವಿನೀತತೆಯನ್ನು ಮೀರಿ, ಪುಕ್ಕರೆ ಆಗಿದ್ದರು, ಎಂದನ್ನಬಹುದಾದಷ್ಟು ವಿನೀತರು. ಅಂಥವರು ಗಂಡಸರಲ್ಲಿ ಸಿಕ್ಕುವುದು ಬಹು ಅಪೂರ್ವ. ಯಾರಾದರೂ ಅವರನ್ನು ದೃಷ್ಟಿಸಿ ನೋಡಿದ್ದಾದರೆ ಕೂಡಲೇ ಅವರು ಮೊದಲಿಗಿಂತಲೂ ಚಿಕ್ಕದಾಗಿ ಹೋದವರಂತೆ ತೋರಿಕೊಳ್ಳುತ್ತಿದ್ದರು. ಅವರು ನಡೆಯುವಾಗ ಯಾರಿಗಾದರೂ ಮೈ ಒರೆಸಿ ತೊಂದರೆಯಾಗಿಬಿಡುವುದೋ ಎಂದು ಅಂಜಿ ನಡೆಯುತ್ತಿದ್ದರು. ನಡೆಯುವಾಗ ತಲೆ ತಗ್ಗಿಸಿ ಸಮಸ್ತರಿಗೂ ಪ್ರಣಾಮಗೈಯುತ್ತಾ ನಡೆಯುತ್ತಿರುವಂತೆ ತೋರುತ್ತಿದ್ದರು. ಅವರು ಯಾರಿಗೂ, ಎಂದೂ ಒಂದು ನಿಷ್ಠುರವಾದ ಮಾತನ್ನಾಡಿದವರಲ್ಲ - ಒಂದು ನಾಯಿಗೇ ಆದರೂ ಒಂದು ಕಠಿಣ ಮಾತನ್ನಾಡರು. ನಾಯಿಗೇ ಆದರೂ ರೊಟ್ಟಿ ತುಂಡನ್ನುಎಸೆದುಬಿಟ್ಟೆ ಎಂದನ್ನಲಾರರು - ‘ಕೊಟ್ಟೆ, ಕೊಡುತ್ತೇನೆ, ಎಂದೇ ಹೇಳುವರು. ಇಂಥ ವಿನಯಸಂಪನ್ನರಿಗೆ ಬೆಂಕಿಯ ಎದುರಿದ್ದ ಓರ್ವ ಸ್ತ್ರೀಯನ್ನು ಮಾತಾಡಿಸಿ ಗೌರವಿಸಬೇಕೆಂದು ತೋರಿದುದು ಸ್ವಾಭಾವಿಕವೇ ಸರಿ. ಹೀಗಾಗಿ ನಮ್ಮತ್ತೆ ಬೆಟ್ಸಿಯ ಕಿವಿಯಲ್ಲಿ ಹತ್ತಿ ದಿಮ್ಮಿ ಇದ್ದುದನ್ನು ಕಂಡು ಡಾಕ್ಟರರು, ತಮ್ಮ ಕಿವಿಯನ್ನು ಮುಟ್ಟಿ ತೋರಿಸಿಕೊಂಡು -
ಏನಮ್ಮಾ, ನಿಮಗೆ ಕಿವಿನೋವೇ?” ಎಂದಂದರು.
ಡಾಕ್ಟರರ ಹೆಸರು ಮಿಸ್ಟರ್ ಚಿಲ್ಲಿಪ್ಪ್. ಡಾಕ್ಟರ್ ಚಿಲ್ಲಿಪ್ಪರ ಪ್ರಶ್ನೆಯನ್ನು ಕೇಳಿ, ಅತ್ತೆ ಹಠಾತ್ತಾಗಿ ಹತ್ತಿ ದಿಮ್ಮಿ ತೆಗೆದು -
ಏನಂದಿರಿ?” ಎಂದು ಕೇಳಿದಳು. ದಿಮ್ಮಿ ತೆಗೆದ ಕ್ರಮ, ಮತ್ತು ಪ್ರಶ್ನೆಯ ಕ್ರಮಗಳನ್ನು ಕಂಡು ಡಾಕ್ಟರರು ಮೂರ್ಛಿತರೇ ಆಗುವುದರಲ್ಲಿದ್ದರು. ಆದರೆ, ತಾವು ಡಾಕ್ಟರರೆಂಬ ಜ್ಞಾನದಿಂದ ಧೈರ್ಯ ತಾಳಿ -
ಅಲ್ಲಾ, ನಿಮಗೆ ಕಿವಿನೋವು ಇದೆಯೇ, ಎಂದು ಕೇಳಿದೆ ಎಂದಂದರು.
ನಿಮಗೆ ಹುಚ್ಚು,” ಎಂದು ಮಾತ್ರ ಅತ್ತೆ ಉತ್ತರ ಕೊಟ್ಟು, ಪುನಃ ದಿಮ್ಮಿ ಏರಿಸಿಕೊಂಡು ಬೆಂಕಿ ನೋಡುತ್ತಾ ಕುಳಿತಳು.
ಡಾಕ್ಟರರು ಏನೋ ಅವಸರದ ಕೆಲಸವಿದ್ದಂತೆ - ಅಥವಾ, ಅಲ್ಲಿಂದ ತಪ್ಪಿಸ್ಕೊಂಡು ಮರ್ಯಾದೆ ಉಳಿಸಿಕೊಳ್ಳಲೋಸ್ಕರವೋ ಏನೋ - ಮಹಡಿಯ ಕೋಣೆಗೆ ಹೋದರು. ಮಹಡಿಯ ಮೇಲೆ ಹೆರಿಗೆ ಸಂಬಂಧದ ಕೆಲಸ ನಡೆಯುತ್ತಿದ್ದಿರಬೇಕೆಂದು ತಿಳಿಯುವಂತೆ ಕಾಲ ಸಪ್ಪಳ ಕೇಳಿಬರುತ್ತಿತ್ತು. ಹೀಗೆ ಮಹಡಿಯ ಮೇಲೆ ಸ್ವಲ್ಪ ಸಮಯ ಕೆಲಸಗಳು ನಡೆದು ಸುಖಪ್ರಸವವೇ ನಡೆಯಿತು.
ವಿನೀತರಾದ ಡಾಕ್ಟರ್ ಚಿಲ್ಲಿಪ್ಪರು ಎಂದೂ ದ್ವೇಷ ಸಾಧಿಸುವವರಲ್ಲ- ಅದರಲ್ಲೂ, ಸುಖಪ್ರಸವವಾದನಂತರವಂತೂ ಹಾಗೆ ಮಾಡುವವರಲ್ಲ. ಈಗ ಅವರ ವಿನೀತತೆ ಪರಿಪೂರ್ಣತೆಗೆ ಏರಿತ್ತು. ಸಂತೋಷ ಸಮಯದಲ್ಲಿ ಬೆಟ್ಸಿಯನ್ನೂ ಸಂತೋಷಗೊಳಿಸಬೇಕೆಂದು ಡಾಕ್ಟರರು ಮಹಡಿಯಿಂದ ಇಳಿದುಬಂದ ಕೂಡಲೇ, ಬೆಟ್ಸಿಯನ್ನು ನೋಡಿ-
ಸುವಾರ್ತೆಯನ್ನು ತಿಳಿಸಲು ಸಂತೋಷಪಡುತ್ತೇನೆ,” ಅಂದರು.
ಯಾವ ವಾರ್ತೆ?” ಅಂದಳು ಅತ್ತೆ.
ಪ್ರಶ್ನೆಯ ಸ್ವರ - ಸ್ವಭಾವವನ್ನು ಕಂಡು ಡಾಕ್ಟರರು - ಸುಖಪ್ರಸವದ ವರ್ತಮಾನದಿಂದ ಬೆಟ್ಸಿಯು ಮೃದುವಾಗಬಹುದೆಂದು ನಿರೀಕ್ಷಿಸುತ್ತಿದ್ದವರು - ತುಂಬಾ ಗಾಬರಿಗೊಂಡರು. ಆದರೂ, ಅವಳ ಕೋಪಾಗ್ನಿ ಶಮನಕ್ಕಾಗಿ ತನ್ನ ತಲೆಯನ್ನು ಮತ್ತಷ್ಟು ಓರೆ ಮಾಡಿಕೊಂಡು - ಪ್ರಸನ್ನಳಾಗುವ ಕ್ರಮವನ್ನೇ ಬೆಟ್ಸಿಗೆ ತೋರಿಸುತ್ತಿರುವವರಂತೆ ತೋರುತ್ತಾ - ಮುಗುಳ್ನಗೆಯಿಂದ -
ಅಮ್ಮಾ, ಎಲ್ಲವೂ ನಾವಿಚ್ಛಿಸಿದಂತೆಯೇ ಸುಖವಾಗಿ ನಡೆದಿದೆ,” ಎಂದು ಡಾಕ್ಟರ್ ಚಿಲ್ಲಿಪ್ಪರು ಹೇಳಿದರು.
ಅಯ್ಯೋ, ಇವರಿಗೇನು ಮಾತೇ ಬರೋದಿಲ್ಲವೋ? ಹೇಳಬೇಕಾದ್ದನ್ನು ಹೇಳದೇ ಏನೇನೋ ಒದರುತ್ತಾರಲ್ಲಾ!” ಎಂದು ಅತ್ತೆ ಉದ್ಗಾರವನ್ನು ಎಳೆದಳು. ಮತ್ತೆ ಸ್ವಲ್ಪ ಸಮಾಧಾನ ತೆಗೆದುಕೊಂಡು ಕೇಳಿದಳು-
ಅವಳು ಹೇಗಿದ್ದಾಳೆ?”
ಅವಳು ಸೌಖ್ಯವಾಗಿದ್ದಾಳೆ, ತಾಯೀ - ಬೇಕಾದ ಚಿಕಿತ್ಸೆಯೆಲ್ಲ ನಡೆದಿದೆ. ನೀವು ಬೇಕಾದರೆ ಹೋಗಿ ನೋಡಿ ಬನ್ನಿ, ತಾಯೀ - ನೀವು ಮಾತಾಡಿದರೆ ಬಾಣಂತಿಗೆ ಮತ್ತಷ್ಟು ಸುಖವಾಗಬಹುದು,” ಅಂದರು ಡಾಕ್ಟರರು.
ಬೆಟ್ಸಿಗೆ ಈಗ ತುಂಬಾ ಕೋಪ ಬಂದಿರಬೇಕು; ಸ್ಪಷ್ಟವಾದ ಸ್ವರದಿಂದ, ವಿರಳವಾಗಿ ಅವಳು ನುಡಿದಳು -
ಅವಳು - ಅವಳು - ಅಂದರೆ, ಈಗ ಹುಟ್ಟಿದ ಹುಡುಗೀ - ಹುಡುಗೀ ಹೇಗಿದ್ದಾಳೆ ಎಂದು ಕೇಳಿದೆ.
ನಿಮಗೆ ಆಗಲೇ ಗೊತ್ತಾಗಿರಬಹುದೆಂದು ಗ್ರಹಿಸಿದೆ. ತಾಯೀ - ಜನಿಸಿದ್ದು ಗಂಡು ಶಿಶು,” ಅಂದರು ಡಾಕ್ಟರ್ ಚಿಲ್ಲಿಪ್ಪರು.
ತಾನು ಸಂಸಾರ ಕಟ್ಟಿ ಸುಖಪಡೆಯಲು ಪ್ರಯತ್ನಿಸಿ, ಸುಖಕಾಣದೇ ಸೋತಬೆಟ್ಸಿ ಇನ್ನೋರ್ವ ಸ್ತ್ರೀಗಾದರೋ ತಾನು ಶ್ರಮ ವಹಿಸಿ ಸಂಸಾರ ಸುಖವನ್ನೊದಗಿಸಬೇಕೆಂದು ಉದ್ದೇಶಿಸಿ, ಇಲ್ಲಿ ಜನಿಸುವ ಶಿಶು ಹೆಣ್ಣಾಗಬೇಕೆಂದು ಬಹುವಾದ ಕಾಂಕ್ಷೆಯಲ್ಲಿದ್ದಳು.
ಇಲ್ಲಿ ಜನಿಸಿದ ಹೆಣ್ಣು ಶಿಶುವನ್ನು ಸಾಕಿ ಸಲಹಿ, ತಾನು ಅನುಭವಿಸದಿದ್ದ ಸುಖವನ್ನು ಅದಕ್ಕಾದರೂ ಒದಗಿಸಿ ಸಂತೋಷಿಸಬೇಕೆಂದು ಅತ್ತೆ ಇಚ್ಛಿಸಿದ್ದಳು. ತೆರನಾದ ನಿರೀಕ್ಷಣೆ- ಶಿಶುವಿನ ಮುಂದಿನ ಜೀವನಪಥ - ಇತ್ಯಾದಿಗಳಲ್ಲಿ ಸಂತೋಷದಿಂದ ಮಗ್ನಳಾಗಿದ್ದ ಬೆಟ್ಸಿಗೆ, ಜನಿಸಿದ ಶಿಶು ಗಂಡೆಂದು ತಿಳಿದದ್ದು ಬಹು ದುಃಖಕರವೇ ಆಗಿ ಅವಳ ಆಶಾಭಂಗಕ್ಕೂ, ಕೋಪಕ್ಕೂ ಮೇರೆ ಇಲ್ಲದೇ ಹೋಯ್ತು. ಆದರೂ ಮನೋನಿಗ್ರಹವನ್ನು ಅರಿತಿದ್ದ ಬೆಟ್ಸಿ ಡಾಕ್ಟರರ ಮಾತನ್ನು ಕೇಳಿ ಎದ್ದು ನಿಂತು, ತನ್ನ ಕುಲಾವಿಯ ಹಗ್ಗವನ್ನು ಹಿಡಿದು ಒಮ್ಮೆ ಕುಲಾವಿಯನ್ನು (ಡಾಕ್ಟರರನ್ನೇ ಅದರಿಂದ ಹೊಡೆದು ಬಿಡುವಂತೆ) ಬೀಸಿ, ತಲೆಗಿಟ್ಟುಕೊಂಡು, ಬಗ್ಗಿ, ಬಾಗಿಲನ್ನು ದಾಟಿ, ನಮ್ಮ ಮನೆಯನ್ನು ಬಿಟ್ಟೇ ಹೋದಳು. ಪ್ರಪಂಚಾತೀತ ಸ್ವರೂಪಗಳನ್ನು ನೋಡುವ ಯೋಗದಲ್ಲಿ ಜನಿಸಿದ್ದ ನನ್ನನ್ನು ನೋಡಲು ಬಂದಿದ್ದ ಒಬ್ಬ ಯಕ್ಷಿಣಿಯು ಕೋಪಾವಿಷ್ಠಳಾಗಿ ಹೋದಂತೆ ಅತ್ತೆ ಅಂತರ್ಧಾನವೇ ಆಗಿಬಿಟ್ಟಳು. ಅವಳು ಮನೆಗೆ ಅನಂತರ ಎಂದೂ ಕಾಲಿಡಲಿಲ್ಲ.
ನಿಜ! ಬೆಟ್ಸಿ ಟ್ರಾಟೂಡ್ ಪುನಃ ಬರಲೇ ಇಲ್ಲ; ನನ್ನ ಜನನದ ಮೊದಲು ನಾನು ಯಾವ ಅದೃಶ್ಯ ಪ್ರಪಂಚದಲ್ಲಿದ್ದೆನೋ ಅದೇ ವಿಶಾಲ ಕ್ಷೇತ್ರಕ್ಕೆ ಅತ್ತೆಯಿಂದ ಕಲ್ಪಿತಳಾಗಿದ್ದ ಬೆಟ್ಸಿ ಟ್ರಾಟೂಡ್ ಕಾಪರ್ ಫೀಲ್ಡಳೂ ಹೋದಳುನಾನು ಮಾತ್ರ ನನ್ನ ಬಿದಿರಿನ ತೊಟ್ಟಿಲಲ್ಲಿ ಮಲಗಿದ್ದೆ; ನನ್ನ ತಾಯಿ ಅವಳ ಹಾಸಿಗೆಯಲ್ಲಿ ಮಲಗಿದ್ದಳು. ಯಾವಾತ ಇರದಿದ್ದರೆ ನಾನು ಇರುತ್ತಿರಲಿಲ್ಲವೋ - ಯಾರು ಲೋಕ ಜೀವನದ ಗಡಿಯಂತಿರುವ ಗೋರಿಯ ಅಡಿಯಲ್ಲಿ ಮಣ್ಣಾಗಿ ಮಲಗಿದ್ದಾನೋ - ಆತನ ಮೇಲೂ, ಆತನಂತೆಯೇ ಪ್ರಪಂಚವನ್ನು ಬಿಟ್ಟು ನಿರ್ಗಮನ ಹೊಂದಿದ್ದ ಇತರರ ಮೇಲೂ, ನಮ್ಮ ಕೋಣೆಯೊಳಗಿನ ಸೌಮ್ಯವಾದ ಬೆಳಕು ಹರಡಿ ಬಿದ್ದಿತ್ತು.

(ಮುಂದುವರಿಯಲಿದೆ)

ವಿಶೇಷ ಸೂಚನೆ: ಒಂದನೆಯ ಅಧ್ಯಾಯವನ್ನು ನಿಮಗೆ ಸಂಪೂರ್ಣ ಇಲ್ಲಿ ‘ಕೇಳು’ವ ಸೌಕರ್ಯವನ್ನೂ ಕಲ್ಪಿಸಲಾಗಿದೆ. ಇದನ್ನು ಮುಂದೆ ಪ್ರತಿ ಅಧ್ಯಾಯಕ್ಕೂ ಅಳವಡಿಸಿ ಕೊನೆಯಲ್ಲಿ ‘ಕೇಳು-ಪುಸ್ತಕ’ವನ್ನೂ ಉಚಿತವಾಗಿ ಕೊಡುವ ಪ್ರಯೋಗ ನಡೆಸುತ್ತಿದ್ದೇವೆ. ಈ ಅಧ್ಯಾಯಗಳನ್ನು ಆಗಿಂದಾಗ್ಗೆ Download ಮಾಡಿಕೊಂಡು ನೀವು ಮತ್ತೆ ಸಮಯ ಸಿಕ್ಕಾಗ ಮೊಬೈಲ್ ಮೂಲಕವೋ, ಇ-ಪಾಡ್ ಮೂಲಕವೋ ಕೇಳಿಕೊಳ್ಳಬಹುದು. ಮುಂದೆ ಇ-ಪುಸ್ತಕ ಸಂಪೂರ್ಣಗೊಳ್ಳುವ ಸಮಯದಲ್ಲಿ ಎಲ್ಲಾ ಅಧ್ಯಾಯಗಳನ್ನೂ ಒಟ್ಟಿಗೇ ಒಂದೇ ಸ್ಥಳದಲ್ಲಿ ಕೊಡುವ ಆಶಯವೂ ನಮ್ಮದು.


(ಎರಡನೇ ಅಧ್ಯಾಯದಲ್ಲಿ ಮುಂದುವರಿಯುವುದು)

2 comments:

 1. Read the translation.Good.Language and style reminded the time/period of its writing.Hearing your voice when reading the text gave me personal touch,(being far away from India,now?) I studied this novel when I was a B.A.student.I should start remembering this novel now.Thank you.I marvel at your involvement in this modern medium of communication!!.M.L.S.

  ReplyDelete
 2. ಪಂಡಿತಾರಾಧ್ಯ ಮೈಸೂರು09 May, 2014 10:06

  ಸೋಮಿ,
  ಓದುವವರಿಗೆ ಮಹಾಪ್ರಾಣ ಉಚ್ಚಾರಣೆಯ ಬಗ್ಗೆ ಗಮನವಿದ್ದಂತಿಲ್ಲ.
  ಮುಂದಿ ಸಂಚಿಕೆಗಳ ಬಗ್ಗೆ ಗಮನಿಸಿ

  ReplyDelete