25 February 2014

ನ್ಯಾಯ ಪರಿಪಾಲನೆ

(ಕೊಡಗಿನ ಸುಮಗಳು - ಎಂಟನೇ ಸಣ್ಣ ಕತೆ -೧೯೫೧)

ಲಿಂಗರಾಜನ ವಿಷಯವನ್ನು ಹಿಂದೊಮ್ಮೆ (ಪಂಜರದ ಗಿಳಿ) ಹೇಳಲಾಗಿದೆ. ಒಲಿದರೆ ಶಂಕರನೂ ಮುನಿದರೆ ಭಯಂಕರನೂ  ಆಗಿದ್ದ ಲಿಂಗರಾಜನು ಅತಿ ಚಿಕ್ಕ ಪ್ರಾಯದಲ್ಲಿ ಕೊಡಗಿನ ಸಿಂಹಾಸವನ್ನೇರಿದ್ದನು. ಅವನಿಗೆ ಆಗ ಇನ್ನೂ ಹದಿನೈದು ವರ್ಷ ತುಂಬಿರಲಿಲ್ಲ - ಆಗಲೇ ಅವನ ತಂದೆ ವೀರರಾಜನು ಶಿವಾಧೀನನಾದನು, ರಾಜಕುಟುಂಬ ದುಃಖಸಾಗರದಲ್ಲಿ ಮುಳುಗಿತ್ತು. ನಡುನೀರಿನಲ್ಲಿ ಬಿರುಗಾಳಿಯ ತೀವ್ರತೆ ಏರಿದ್ದಾಗ ಹಡಗಿನ ಕೂವೆಮರ ಒಡೆಯಿತು. ಅನೇಕ ಸಾಮಂತರಾಜರು ವೀರರಾಜನ ಕರ್ಮಾಂತರಗಳಿಗೆ ಬಂದು ಭಾವೀ ರಾಜನಾದ ಕಿರಿಯ ಲಿಂಗರಾಜನಿಗೆ ತಮ್ಮ ಗೌರವ, ವಿಧೇಯತನಗಳನ್ನು ಸಲ್ಲಿಸಿ ಮರಳಿದರು. ಆದರೆ ಆ ಔಪಚಾರಿಕವಾದ ವಿನಯ ಪ್ರದರ್ಶನಗಳು ಅವರ ಹಿಂದೆಯೇ ತೆರಳಿದುವು. ಕೆಲವು ಉದ್ಧತ ಸಾಮಂತ ಭೂಪಾಲರು ಈ ಒಂದು ಮರ್ಯಾದೆಯನ್ನೂ ತೋರಿಸಲಿಲ್ಲ. ವೀರರಾಜನ ಮರಣವಾರ್ತೆ ಕೇಳಿದಾಗಲೇ ತಾವೇ ಅರಸರೆಂದು ಸಾರಿ ಹಾಗೆ ವರ್ತಿಸತೊಡಗಿದರು. ರಾಜಕುಲವನ್ನು ಸರಿಯಾದ ದಾರಿಯಲ್ಲಿ ನಡೆಯಿಸುವ ಧೀರರು ಯಾರೂ ಇರಲಿಲ್ಲವೆನ್ನುವಂತೆ ತೋರಿತು. ಅನುಭವಿಗಳಾದ ಮಂತ್ರಿಗಳು, ವೃದ್ಧರು ಇರಲಿಲ್ಲ. ರಾಜ್ಯದ ರಕ್ಷಣೆ ಮತ್ತು ಆಡಳಿತ ಎಳೆ ಹರೆಯದ ಲಿಂಗರಾಜನ ಮೇಲೆ ಬಿದ್ದುವು.


ಆ ಕಾಲದಲ್ಲಿ ಕೊಡಗು ಸಂಸ್ಥಾನವು ಮೈಸೂರು ದೇಶದ ಹಲವು ಜಿಲ್ಲೆಗಳಿಂದಲೂ ನೇತ್ರಾವತೀ ನದಿಯವರೆಗೆ ವ್ಯಾಪಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯಿಂದಲೂ ಕೂಡಿದ್ದಿತು. ವೀರರಾಜನು ಮೃತನಾದೊಡನೆಯೇ ಮೈಸೂರಿನ ಮತ್ತು ಕನ್ನಡ ಜಿಲ್ಲೆಯ ಆಶ್ರಿತ ರಾಜ್ಯಗಳು ಸ್ವತಂತ್ರವಾದುವು. ಕೊಡಗು ದೇಶದ ಪೂರ್ವ ಗಡಿಯಲ್ಲಿ ಮೈಸೂರಿನವರೂ ಪಶ್ಚಿಮದ ಕೊನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪಾಳೆಯಗಾರರೂ ಪ್ರಬಲರಾಗಿ ದಂಗೆಗಳನ್ನು ಪ್ರೋತ್ಸಾಹಿಸುತ್ತಿದ್ದರು. ಮಡಿಕೇರಿಯ ಹಲವಾರು ರಾಜಭಕ್ತರು ರಾಜಕುಲವೇ ಅಳಿದು ಹೋಗುವುದೋ ಎಂದು ಹೆದರುತ್ತಿದ್ದರು. ರಾಜಕುಲದ ಅಭ್ಯುದಯಕ್ಕಾಗಿ ಲಿಂಗರಾಜನ ಕ್ಷೇಮಕ್ಕಾಗಿ ನಿತ್ಯವೂ ರಾಜಭಕ್ತರ ಮನೆಗಳಲ್ಲಿ ಪೂಜೆ ಪುರಸ್ಕಾರ ಪ್ರಾರ್ಥನೆಗಳು ನಡೆದುವು. ದೇವಾಲಯಗಳಲ್ಲಿ ಮಹಾಭಿಷೇಕಗಳನ್ನು ಏರ್ಪಡಿಸಲಾಯಿತು. ರಾಜಮಾತೆ - ದಿವಂಗತ ವೀರರಾಜನ ಮಡದಿ ಮಗನ ಕ್ಷೇಮಚಿಂತನೆಯಲ್ಲಿ ಕೊರಗುತ್ತಿದ್ದಳು. ಅನುಭವಿಯೂ ತೀಕ್ಷ್ಣಮತಿಯೂ ಆದ ಆ ಮಹಾಸತಿಯು ಕರಣಿಕ ಸುಬ್ಬಯ್ಯ ಮುಂತಾದ ರಾಜಕಾರಣಿಗಳ ಸಹಾಯ ಸಹಕಾರಗಳಿಂದ ಕೊಡಗನ್ನು ಸುರಕ್ಷಿತವಾಗಿಸಲು ಮುಂದಾದಳು. ಲಿಂಗರಾಜನು ಕಿರಿಯವನಾದರೂ ಆ ಪ್ರಾಯದಲ್ಲಿಯೇ ರಾಜಯೋಗ್ಯ ಶಿಕ್ಷಣವನ್ನು ಪಡೆದಿದ್ದನು. ಶಸ್ತ್ರಕಲೆ, ಸೈನ್ಯ ನಿರ್ವಹಣ ವಿದ್ಯೆ, ರಾಜ್ಯಭಾರ ಕ್ರಮ ಮುಂತಾದುವುಗಳಲ್ಲಿ ತನ್ನ ಪ್ರೀತಿಯ ಪಿತೃವರ್ಯರ ನೇತೃತ್ವದಲ್ಲಿ ಪರಿಶ್ರಮಿಸಿ ಸಿದ್ಧಿಪಡೆದಿದ್ದನು. ತಂದೆಯ ಅಕಸ್ಮಾತ್ ಮರಣ, ಆ ಕಾರಣದಿಂದ ಉಂಟಾದ ದುಃಖ ಮತ್ತು ಶೂನ್ಯತೆಗಳಿಲ್ಲದಿದ್ದರೆ ಲಿಂಗರಾಜನು ಇಡಿಯ ವಿಶಾಲ ಕೊಡಗು ರಾಜ್ಯವನ್ನು ಪಾಲಿಸುವಷ್ಟು ದಕ್ಷತೆ ಚಾಣಾಕ್ಷತೆಗಳಿಂದ ಕೂಡಿದವನಾಗಿದ್ದನು. ವೀರಮಾತೆಯ ಮತ್ತು ರಾಜಹಿತೈಷಿಗಳ ಸಹಾಯದಿಂದ ಲಿಂಗರಾಜನು ಮೊದಲು ಕೊಡಗು ದೇಶದ ರಕ್ಷಣೆ ಭದ್ರತೆಗಳನ್ನು ನಿರ್ವಹಿಸಲು ಮುಂದಾದನು.

ಲಿಂಗರಾಜನು ದಕ್ಷನೂ ಸಮರ್ಥನೂ ಆದ ಪ್ರಭು ಎಂದು ಅರಿವಾದೊಡನೆಯೇ ಅವನ ಸುತ್ತಲೂ ಅನೇಕ ಭಕ್ತರು ಜಮಾಯಿಸಿದರು. ಸೈನ್ಯವು ನವೋತ್ತೇಜನಭರಿತವಾಗಿ ಎಂತಹ ಶತ್ರುವನ್ನು ಎದುರಿಸಲೂ ಶಕ್ತವಾಯಿತು. ಕ್ರಮೇಣ ಲಿಂಗರಾಜನು ಕೊಡಗು ದೇಶದಲ್ಲಿ ಶಾಂತಿಯನ್ನೂ ಸುವ್ಯವಸ್ಥಿತವಾದ ಆಡಳಿತೆಯನ್ನೂ ಸ್ಥಾಪಿಸಿದನು. ರಾಜಕುಲದ ಗೌರವ ಪುನಃ ಶಿಖರಾಭಿಮುಖವಾಗಿ ಏರತೊಡಗಿತು. ಇವುಗಳನ್ನು ಯಶಸ್ವಿಯಾಗಿ ನಿರ್ವಹಿಸುವಾಗ ರಾಜನಿಗೆ ಇಪ್ಪತ್ತು ವರ್ಷಗಳೂ ತುಂಬಿರಲಿಲ್ಲ ಎನ್ನುವುದನ್ನು ಗಮನಿಸುವಾಗ ಅವನು ಸಾಧಿಸಿದುದು ಮಹಾಕಾರ್ಯ ಭೀಮಕಾರ್ಯ ಎಂದು ಹೇಳಲೇಬೇಕು. ಮುಂದೆ ಒಂದೆರಡು ವರ್ಷಗಳಲ್ಲಿಯೇ ಅವನು ದಕ್ಷಿಣ ಕನ್ನಡ ಜಿಲ್ಲೆಯ ಮತ್ತು ಮೈಸೂರು ಸರಹದ್ದಿನ ಪಾಳೆಯಗಾರರನ್ನು ಪುನಃ ಅಂಕೆಯಲ್ಲಿ ತಂದನು. ಅವರ ವಿರುದ್ಧ ಘೋರ ಕದನವೆಸಗಬೇಕಾಯಿತು. ಮೈಸೂರು ಸರಹದ್ದಿನ ಪಾಳೆಯಗಾರ ಸುಲಭವಾಗಿ ವಶವಾದನು. ಆದರೆ ದಕ್ಷಿಣ ಕನ್ನಡ ಜಿಲ್ಲೆಯವರು ಹಾಗಾಗಲಿಲ್ಲ. ಅಲ್ಲಿಯ ನಾಲ್ಕೈದು ಪಾಳೆಯಗಾರರು ಒಂದುಗೂಡಿ ಲಿಂಗರಾಜನ ಮೇಲೆ ತಾವಾಗಿಯೇ ಕತ್ತಿಗಟ್ಟಿದರು. ಕೊಡಗು ದೇಶವನ್ನು ಸ್ವಾಹಾ ಮಾಡಬೇಕೆಂದು ಅವರ ಹಂಬಲವಾಗಿತ್ತು. ಆದರೆ ಅದು ನುಂಗಲಾರದ ತುತ್ತಾಗಿ ಅವರ ಗಂಟಲಿನಲ್ಲಿ ಉಳಿದು ಅವರ ಮರಣವನ್ನು ತಂದಿತು. ಹೀಗೆ ಪ್ರಬಲ ಯುದ್ಧಾನಂತರ ದಕ್ಷಿಣ ಕನ್ನಡ ಪುನಃ ಕೊಡಗು ರಾಜನ ಛತ್ರ ಛಾಯೆಗೆ ಅಧೀನವಾಯಿತು.

ಲಿಂಗರಾಜನ ಈ ದಿಗ್ವಿಜಯ ಯಾತ್ರೆಗಳಲ್ಲಿ ಅವನ ಬಲಗೈ ಬಂಟನಂತಿದ್ದವನು ಬಿಟ್ಟಂಗಾಲದ ಕುಟ್ಟಪ್ಪ. ಸಾಮಾನ್ಯ ಸಿಪಾಯಿಯಾಗಿ ಸೇರಿದ್ದ ಕುಟ್ಟಪ್ಪನು ತನ್ನ ಪರಾಕ್ರಮ, ದುರೀಣತ್ವ, ರಾಜನಿಷ್ಠೆಗಳಿಂದಲೇ ರಾಜನ ದೃಷ್ಟಿಯನ್ನು ಸೆಳೆದ ಗಣ್ಯವ್ಯಕ್ತಿಯಾದನು. ಮೈಸೂರು ಪಾಳೆಯಗಾರನ ವಿರುದ್ಧದ ಹೋರಾಟದಲ್ಲಿ ಒಂದು ಪಡೆಯ ಮುಂದಾಳಾಗಿ ಕುಟ್ಟಪ್ಪನು ಆ ಪಾಳೆಯಗಾರನಿಗೆ ವಿಪರೀತ ನಷ್ಟವನ್ನುಂಟುಮಾಡಿದ್ದನು. ಗೊರಿಲ್ಲಯುದ್ಧ, ಈ ಹೆಸರಿನಿಂದ ತಿಳಿದಿರದಿದ್ದ ಆ ದಿನಗಳಂದು ಕುಟ್ಟಪ್ಪನ ಪಡೆ ಗೊರಿಲ್ಲ ಯುದ್ಧ ಮಾಡಿತು. ಇದೇ ಯುದ್ಧ ಕ್ರಮದಿಂದ ಕುಟ್ಟಪ್ಪನು ಕನ್ನಡ ಜಿಲ್ಲೆಯ ಪಾಳೆಯಗಾರರಲ್ಲಿ ಒಬ್ಬನನ್ನು ಸದೆಬಡಿದನು. ಸುಳ್ಯದ ಸಮೀಪ ಘೋರ ಕದನ ಜರಗಲು ಅಣಿಯಾಗುತ್ತಿತ್ತು. ಕುಟ್ಟಪ್ಪನು ದೂರದರ್ಶಿತ್ವದಿಂದ, ಸ್ವಸಾಮರ್ಥ್ಯದಿಂದ ತನ್ನ ಪಡೆಯನ್ನು ಕಡಮಕಲ್ಲು ದಾರಿಯಾಗಿ ತೆಗೆದುಕೊಂಡು ಹೋಗಿ ಶತ್ರುವನ್ನು ಅಪರಾತ್ರಿಯಲ್ಲಿ ಹಿಂದಿನಿಂತ ನುಸುಳಿ ಇರಿದನು, ತರಿದು ಬಿಸುಟನು. ಹೀಗೆ ಧೃತಿಗೆಟ್ಟ ಶತ್ರುವನ್ನೂ ಶತ್ರುಸೈನ್ಯವನ್ನೂ ಸದೆಬಡಿದು ಅಟ್ಟಿ ಸೆರೆ ಹಿಡಿಯುವುದು ಲಿಂಗರಾಜನಿಗೆ ಸುಲಭವಾಯಿತು.

ಕುಟ್ಟಪ್ಪನಂತಹ ಸ್ವಾಮಿಭಕ್ತ ಸಾಮರ್ಥ್ಯಪೂರಿತ ಸೇನಾನಾಯಕನಿಲ್ಲದಿದ್ದರೆ ಲಿಂಗರಾಜನು ಹೆಸರಿಲ್ಲದಾಗುತ್ತಿದನು ಎಂದು ರಾಜನು ಸ್ವತಃ ಮುಕ್ತಕಂಠದಿಂದ ಆನಂದೋದ್ಗಾರವೆತ್ತಿದಾಗ ಕುಟ್ಟಪ್ಪನು ಮೌನದಿಂದ ವಿಧೇಯತೆಯಿಂದ ತಲೆತಗ್ಗಿಸಿದನು. ರಣಭೀಷಣನಾದ ಶತ್ರುಭಯಂಕರನಾದ ಕುಟ್ಟಪ್ಪನು ರಾಜನ ಮೆಚ್ಚಿನ ಬಂಟನಾದನು.

ದಕ್ಷಿಣ ಕನ್ನಡ ಜಿಲ್ಲೆ ಸಾಮಂತರಾಜ್ಯವನ್ನು ಶತ್ರುರಹಿತವನ್ನಾಗಿ ಮಾಡಲು ರಾಜನಿಗೆ ಕುಟ್ಟಪ್ಪನೇ ನೆರವಾದನು. ಆ ಪ್ರದೇಶದಲ್ಲಿಯೂ ಸುವ್ಯವಸ್ಥಿತವಾದ ಆಡಳಿತೆಯು ಏರ್ಪಟ್ಟಿತು. ಮುಂದೆ ಎಂದೆಂದೂ ದಂಗೆಕೋರರು ತಲೆಯೆತ್ತದಂತೆ ಮಾಡಲು ಬಲಿಷ್ಠನಾದ ಕುಟ್ಟಪ್ಪನನ್ನೇ ರಾಜನು ದಕ್ಷಿಣ ಕನ್ನಡ ಜಿಲ್ಲೆಯ ನಾಯಕನನ್ನಾಗಿ ನೇಮಿಸಿದನು.

ಕುಟ್ಟಪ್ಪಾ! ನಿನ್ನ ರಾಜನಿಷ್ಠೆಗೆ ಯೋಗ್ಯತೆಗೆ ನಾನು ಕೊಡಬಹುದಾದ ದೊಡ್ಡ ಬಹುಮಾನವಿದು. ನೀನು ರಣರಂಗದಲ್ಲಿ ಎಂತಹ ಭೀಕರ ಕಡುಗಲಿಯೋ ಅಷ್ಟೇ ಕರುಣಾಮಯ ಮೂರ್ತಿಯಾಗಿ ಈ ಪ್ರದೇಶದ ಆಡಳಿತೆಯನ್ನು ನಿರ್ವಹಿಸು. ನಿನ್ನಲ್ಲಿ ನನಗೆ ಸಂಪೂರ್ಣ ವಿಶ್ವಾಸವಿದೆ. ಕೊಡಗು ರಾಜಕುಲದವರ ಘನತೆ ಮರ್ಯಾದೆಗಳು ವರ್ಧಿಸುವಂತೆ ನ್ಯಾಯ ಪರಿಪಾಲನೆಮಾಡು. ರಾಜ್ಯಭಾರ ಕಾಯಕದಲ್ಲಿ ದಕ್ಷತೆ ನ್ಯಾಯಪಕ್ಷಪಾತತೆ ಸಹಾನುಭೂತಿ ಇರಲಿ. ನಿನ್ನ ಸೈನಿಕರ ಹಿತವೇ ನಿನ್ನ ಹಿತವೆಂದು ನೀನು ಹೇಗೆ ಪರಿಗಣಿಸಿದೆಯೋ ಹಾಗೆ ಇನ್ನು ಮುಂದೆ ನಿನ್ನ ಜನರ ಹಿತವೇ ನಿನ್ನ ಹಿತವೆಂದು ನೀನು ಭಾವಿಸಿ ರಾಜ್ಯಪರಿಪಾಲನೆ ಮಾಡು. ಸತ್ಯ ಮತ್ತು ಧರ್ಮದ ಋಜುಮಾರ್ಗವನ್ನು ಎಂದೂ ನಿರಾಕರಿಸಬೇಡ. ಈ ಕಾರ್ಯವನ್ನು ನೀನು ಯಶಸ್ವಿಯಾಗಿ ಪರಮೇಶ್ವರನು ಮೆಚ್ಚುವಂತೆ ನೆರವೇರಿಸು ಎಂದು ಲಿಂಗರಾಜನು ಹರಸಿದನು.

ಕಿರಿಯ ಲಿಂಗರಾಜನಲ್ಲಿ ಎಂತಹ ಉನ್ನತ, ಉದಾತ್ತ ಗುಣಗಳ ಸಂಕಲನ! ಎಂತಹ ಔದಾರ್ಯ! ಔನ್ನತ್ಯದಲ್ಲಿ ಔದಾರ್ಯವು ಆದರ್ಶ.

ಕುಟ್ಟಪ್ಪನು ತಲೆಬಾಗಿ ವಂದಿಸಿ ಆನಂದಪುಳಕಿತನಾಗಿ ಪ್ರಭುವಿನ ಆಜ್ಞೆಯನ್ನು ಶಿರಸಾವಹಿಸಿದನು. ಅಂದಿನಿಂದ ಬಿಟ್ಟಂಗಾಲದ ಕುಟ್ಟಪ್ಪನು ಪಾಳೆಯಗಾರ ಕುಟ್ಟಪ್ಪನಾದನು. ಲಿಂಗರಾಜನಿಗೆ ಕುಟ್ಟಪ್ಪನಾಗಿಯೂ ಇತರರಿಗೆ ಕುಟ್ಟರಸನಾಗಿಯೂ ಆ ಧೀರ ಸೈನಿಕನು ವಿಜೃಂಭಿಸಿದನು. ಕುಟ್ಟಪ್ಪನನ್ನು ದಕ್ಷಿಣ ಕನ್ನಡದ ಪಾಳೆಯಗಾರನನ್ನಾಗಿ ಪುತ್ತೂರಿನಲ್ಲಿ ಪ್ರತಿಷ್ಠಾಪನೆ ಮಾಡಿ ಲಿಂಗರಾಜನು ಮಡಿಕೇರಿಗೆ ಮರಳಿದನು. ಕುಟ್ಟಪ್ಪನು ಸಂಪಾಜೆಯವರೆಗೂ ರಾಜನೊಡನೆ ಬಂದು ಅವನನ್ನು ಬೀಳ್ಕೊಟ್ಟನು. ನೆಚ್ಚಿನ ಪ್ರಭು, ಪ್ರೀತಿಯ ರಾಜನು ಮಡಿಕೇರಿಯ ಘಟ್ಟವೇರಿಹೋದಂತೆ ಕುಟ್ಟಪ್ಪನಿಗೆ ಗಂಟಲು ತುಂಬಿಬಂದಿತು. ಆ ಒಂದು ಕ್ಷಣ ಅವನು ಸೇನಾನಾಯಕ ಕುಟ್ಟಪ್ಪನಾಗಿರಲಿಲ್ಲ, ಮಾನವ ಹೃದಯಿ ಕುಟ್ಟಪ್ಪನಾಗಿದ್ದನು.

ಮುಂದಿನ ಗಳಿಗೆಯಿಂದ ರಾಜ್ಯಭಾರ ಕಾರ್ಯವು ಪ್ರಾರಂಭವಾಯಿತು. ಕುಟ್ಟರಸನು ಬಲವಾಗಿ ಭದ್ರವಾಗಿ ಪುತ್ತೂರಿನಲ್ಲಿ ತಳವೂರಿದನು. ಹಳೆಯ ದಂಗೆಕೋರ ಪಾಳೆಯಗಾರರನ್ನು ಸದೆಬಡಿದಾಗಿದ್ದಿತು. ಆದರೆ ಅವರ ಅನುಯಾಯಿಗಳೂ ಅವರ ಪರ ಸಹಾನುಭೂತಿ ಇರುವವರೂ ಹೇರಳವಾಗಿ ಕನ್ನಡ ಜಿಲ್ಲೆಯಲ್ಲಿ ವ್ಯಾಪಿಸಿದ್ದರು. ಈ ತುಂಡು ಪಾಳೆಯಗಾರರನ್ನು ನಾಶಪಡಿಸದೆ ವಿಧಿಯಿರಲಿಲ್ಲ. ಕಾಡು ನೆಲಸಮಮಾಡಿದ ಮೇಲೆ ಉಳಿಯುವ ಮೋಟುಗಳಂತೆ ಅವರಿದ್ದರು. ವೈರಿವನವು ನಾಶವಾಯಿತು. ಆದರೆ ಕಾಲಿಗೆ ಅಲ್ಲಲ್ಲಿ ತಗಲುವ ಗುತ್ತಿಗಳನ್ನು ತೆಗೆಯುವುದು ಅಷ್ಟೇ ಶ್ರಮಸಾಧ್ಯ ಕಾರ್ಯವಾಯಿತು. ಕುಟ್ಟರಸನು ಈ ರೀತಿಯ ಮೊಂಡು ಶತ್ರುಗಳನ್ನು ಹಿಡಿಸಿ ಕೊಲ್ಲಿಸುವ ಕಾರ್ಯಕ್ರಮವನ್ನು ಪ್ರಾರಂಭಿಸಿದನು. ದಕ್ಷಿಣ ಕನ್ನಡ ಜಿಲ್ಲೆಯಿಡೀ ಕುಟ್ಟರಸನ ಆಪ್ತರು ಅವರ ಹಿಂಬಾಲಕರು ವ್ಯಾಪಿಸಿದರು. ಗೂಢಚಾರರು ಎಲ್ಲ ಕಡೆಗಳಲ್ಲಿಯೂ ಗುಪ್ತವಾಗಿ ಹರಡಿದರು. ಅನೇಕ ಸಂಶಯಾಸ್ಪದವಾದ ಬೀಡುಗಳ ಮೇಲೆ ಬಲಾತ್ಕಾರದಿಂದ ಆಕ್ರಮಣ ಮಾಡಿ ಅಲ್ಲಿಯ ಪತ್ರ ಮುಂತಾದವುಗಳನ್ನು ಶೋಧಿಸಲಾಯಿತು. ರಾಜದ್ರೋಹ ಯಾವ ಯಾವ ಸ್ಥಳದಲ್ಲಿ ಹೇಗೆ ಹುದುಗಿರುವುದು ಎಂದು ಕಂಡುಹಿಡಿಯುವುದು  ಸಂಕೀರ್ಣ ಕಾರ್ಯ. ಹಳೆಯ ಪಾಳೇಗಾರರ ಪರವಾಗಿ ವಾದಿಸಿದವರ ಗುಟ್ಟು ಮಾತುಗಳನ್ನು ಗೂಢಚಾರರು ಮರೆಯಾಲಿಸಿ ಕೆಲವು ಸಲ ಎದುರಿನಿಂದಲೇ ವಂಚಿಸಿ ಪ್ರಶ್ನಿಸಿ ಅರಿತುಕೊಂಡು ಕುಟ್ಟರಸನಿಗೆ ಅರುಹಿದರು. ಗೃಹಶೋಧನೆಗಳಲ್ಲಿ ರಾಜದ್ರೋಹದ ಪತ್ರಗಳು ದೊರೆತು ಆ ಪತ್ರ ಬರೆದವರೂ ಅವರ ಬಂಧುಗಳೂ ವಿಚಾರಣೆಗೊಳಗಾದರು. ರಾಜದ್ರೋಹ ನಿರ್ಮೂಲನ ಕಾರ್ಯ ಪರಿಷ್ಕಾರವಾಗಿ ಮುಂದುವರಿಯಿತು.

ಹಳೆಯ ಪಾಳೆಯಗಾರನ ನಿಲಯವನ್ನು ಶೋಧಿಸುತ್ತಿದ್ದಾಗ ಅಲ್ಲಿ ಒಂದು ಪತ್ರವು ದೊರೆಯಿತು. ಅದರ ಒಕ್ಕಣೆ ಹೀಗಿತ್ತು:
ಮಹಾಪ್ರಭುಗಳ ಪಾದಾರವಿಂದಗಳಿಗೆ
ಲಿಂಗರಾಜನ ಒಂದು ಪಡೆ ಕಡಮಕಲ್ಲು ಮಾರ್ಗವಾಗಿ ಬರುವುದೆಂದು ತಿಳಿದಿದ್ದೇನೆ. ಪ್ರಭುಗಳವರು ಆ ದಾರಿಯಲ್ಲಿ ರಕ್ಷಣೋಪಾಯಗಳನ್ನು ಬಲಪಡಿಸಬೇಕಾಗಿ ಸೇವಕನ ನಮ್ರ ವಿನಂತಿ.
ಪ್ರಭುಗಳ ಪಾದಸೇವಕ
ಉಗ್ಗಪ್ಪಶೆಟ್ಟಿ

ಕುಟ್ಟರಸನು ಈ ಪತ್ರವನ್ನು ನೋಡಿ ಬಹುವಾಗಿ ಕೆರಳಿದನು. ಈ ಉಗ್ಗಪ್ಪ ಶೆಟ್ಟಿಯು ಸಾಮಾನ್ಯ ಬೇಹಿನವನಲ್ಲ. ತಾನು ಅತಿ ಗುಪ್ತವಾಗಿ ಸೈನ್ಯವನ್ನು ಕಡಮಕಲ್ಲು ಮಾರ್ಗವಾಗಿ ತಂದರೂ ಅವನಿದನ್ನು ಅರಿತು ತನ್ನ ಪಾಳೆಯಗಾರನಿಗೆ ವರದಿಮಾಡಿದ್ದಾನೆ. ಆದರೆ ಶತ್ರುವಿಗೆ ಸಮಯದ ಅಭಾವವೋ ತನ್ನ ಚಾಕಚಕ್ಯವೋ ತನಗೆ ದೈವದ ಸಹಾಯವೋ ತಾನು ಯಾವ ಪ್ರತಿರೋಧವನ್ನೂ ಎದುರಿಸದೇ ಆ ಪಾಳೆಯಗಾರನನ್ನು ನಾಶಪಡಿಸಲು ಶಕ್ತನಾದೆನು. ಉಗ್ಗಪ್ಪ ಶೆಟ್ಟಿಯ ದ್ರೋಹ ಗುರುತರವಾದುದು. ಪರಮನೀಚನಾದ ಆ ಸ್ವಾಮಿದ್ರೋಹಿಯನ್ನು ಈಗಲೇ ಸೆರೆಹಿಡಿದು ಚಿತ್ರಹಿಂಸೆಯಿಂದ ಸಂಹರಿಸಬೇಕು ಎಂದು ಕುಟ್ಟರಸನು ಆಲೋಚನೆಯನ್ನು ಮಥಿಸಿದನು. ಕ್ರೋಧದಿಂದ ಅವನ ಮನಸ್ಸು ಕುದಿಯಿತು. ಆ ಕ್ಷಣದಲ್ಲಿ ಶೆಟ್ಟಿಯು ಕುಟ್ಟರಸನ ಎದುರಿದ್ದಿದ್ದರೆ ಅವನು ಅರಸನ ಕ್ರೋಧಾಗ್ನಿಯಿಂದ ಭಸ್ಮೀಭೂತನಾಗಿ ಹೋಗುತ್ತಿದ್ದನು. ಅವನ ತೀಕ್ಷ್ಣ ವಾಕ್ಯಗಳಿಂದ ನುಚ್ಚುನೂರಾಗಿ ಹೋಗುತ್ತಿದ್ದನು. ಕುಟ್ಟರಸನು ತನ್ನ ಭದ್ರ ಮುಷ್ಟಿಯಿಂದ ಮೇಜಿಗೆ ಕುಟ್ಟಿ ಎದ್ದ ರಭಸದಲ್ಲಿ ಆ ಮೇಜಿನ ಹೊಸ ಹಲಗೆಯೂ ಒಡೆದುದರಲ್ಲಿ ಆಶ್ಚರ್ಯವಿಲ್ಲ.

ಉಗ್ಗಪ್ಪ ಶೆಟ್ಟಿಯನು ಅರಸಲು ಚಾರರನ್ನೂ ಅಟ್ಟಲಾಯಿತು. ಯಾವ ಉಗ್ಗಪ್ಪ ಶೆಟ್ಟಿ? ಅವನ ವಾಸಸ್ಥಾನವೆಲ್ಲಿ? ಅವನನ್ನು ಹೇಗೆ ಅರಸುವುದು? ಚಾರರು ಎಲ್ಲೆಲ್ಲಿಯೋ ಅಲೆದು ಹಲವಾರು ಉಗ್ಗಪ್ಪಶೆಟ್ಟಿಗಳಿದ್ದುದರಿಂದ ಏನು ಮಾಡುವುದು ಯಾರನ್ನು ಸೆರೆ ಹಿಡಿದು ತರುವುದು ಎಂದು ತಿಳಿಯದೇ ಹತಾಶರಾಗಿ ಅರಸನಲ್ಲಿಗೆ ಬಂದು ತಮ್ಮ ಗೊಂದಲವನ್ನು ಅರುಹಿದರು.
ಈ ಪಾತಕಿ ಶೆಟ್ಟಿಯನ್ನು ನಾನು ಹಿಡಿದು ತರುವೆನು. ಅವನ ಕಾರಸ್ತಾನ ನನ್ನ ಮುಂದೆ ಪರಿಣಾಮಕಾರಿಯಾಗದು ಎಂದು ಸ್ಥಳಿಕ ಸ್ವಾಮಿನಿಷ್ಠನೊಬ್ಬನು ಅರುಹಿದನು.
ಬೇಗ ಹೋಗು ಎಂದು ಕುಟ್ಟರಸನು ಅವನನ್ನು ಅಟ್ಟಿದನು. ಅವನ ಹಿಂದೆಯೇ ನಾಲ್ಕು ಜನ ರಾಜದೂತರೂ ಹೋದರು, ಕೈದಿಯನ್ನು ಸೆರೆಹಿಡಿದು ತರಲೆಂದು. ಪುತ್ತೂರಿನಲ್ಲಿಯೇ ಇದ್ದ ಉಗ್ಗಪ್ಪ ಶೆಟ್ಟಿಯನ್ನು ಹಿಡಿದು ತರಲು ವಿಳಂಬವಾಗಲಿಲ್ಲ.
ಮಹಾರಾಜರೇ! ಈ ಕೃತ್ರಿಮ ಜೀವಿಯೇ ಈ ವಿಷ ಜಂತುವೇ ಆ ಕಾಗದ ಬರೆದವನು ಎಂದನು ಸ್ವಾಮಿನಿಷ್ಠ ಮಾಯಿಲ ರೈ.
ಏನಂತಿಯೋ? ಅರಸನ ಪ್ರಶ್ನೆ.
ಯಾವ ಕಾಗದ ಪ್ರಭುಗಳೇ? ಉಗ್ಗಪ್ಪ ಶೆಟ್ಟಿಯು ಹೆದರಿ ಪ್ರಶ್ನಿಸಿದನು, ನುಡಿ ನಡುಗುತ್ತಿತ್ತು.
ಕಾಗದ ಬರೆದೂ ಬರೆದೂ ಯಾವ ಕಾಗದವಂತೇ!
ಈ ದೀನನು ಯಾವ ಅಪರಾಧವನ್ನೂ ಮಾಡಲಿಲ್ಲ. . .
ಸುಳ್ಳು ಹೇಳಲು ಮೊಳದುದ್ದ ನಾಲಗೆಯುಂಟೇನೋ ನಿನಗೆ? ಮತ್ತೆ ಹೇಗೋ ಮಾಯಿಲ ರೈ ನಿನ್ನನ್ನು ಹಿಡಿದು ತಂದ? ಮಾಯಿಲ ರೈ ಮೇಲೆ ಅರಸನಿಗೆ ಅತುಲ ವಿಶ್ವಾಸ, ಅಭಿಮಾನ.
ನನಗೊಂದೂ ತಿಳಿದಿಲ್ಲ ಮಹಾಪ್ರಭುಗಳೇ! ಮಾಯಿಲ ರೈ ನಾನು ಮದುವೆಯಾಗಬೇಕೆಂದಿದ್ದ ಹುಡುಗಿಯನ್ನು. . .
ಪ್ರಭುಗಳೇ, ಅವನು ಕೃತ್ರಿಮ ಮನುಷ್ಯನೆಂದು ನಾನು ಮೊದಲೇ ಅರುಹಲಿಲ್ಲವೇ? ಈಗ ನನ್ನ ಮೇಲೆ ಮಿಥ್ಯಾರೋಪ. ಕುನ್ನಿಯ ಹುಡುಗಿಯನ್ನು ನಾನು ಬಯಸುತ್ತೇನೆಯೇ? ಮಾಯಿಲ ರೈ ಹೀಗೆ ಹೇಳದೆ ನಿರ್ವಾಹವಿರಲಿಲ್ಲ.
ಉಗ್ಗಪ್ಪ ನೀನು ಬಾಯಿಮುಚ್ಚು. ನಿನ್ನ ಮೇಲೆ ರಾಜದ್ರೋಹದ ಪ್ರಬಲಾರೋಪಣೆ ಹೇರಲ್ಪಟ್ಟಿದೆ. ಅದಕ್ಕೆ ನಮಗೆ ಆಧಾರವಿದೆ. ನೀನೇನನ್ನುವೆಯೋ?
ನಾನು ಬಡವ ಸ್ವಾಮಿ. ದ್ರೋಹವೆಂದರೇನೆಂದೇ ತಿಳಿಯದವನು.
ನಿನ್ನ ವಂಚನೆ ಆ ಮೋಸದ ಸೋಗು ಬೇಡ. ಕುಟ್ಟರಸನ ಮುಂದೆ ಅವು ನಡೆಯಲಾರವು. ಈಗ ನೋಡು ಈ ಕಾಗದ ಎಂದು ಅರಸನು ಆ ಕಾಗದವನ್ನು ಶೆಟ್ಟಿಗೆ ಕೊಟ್ಟನು.
ಶೆಟ್ಟಿಯು ಅದನ್ನು ಓದಿ ನಡುಗುವ ಕೈಗಳಿಂದ ಹಿಂದೆ ಕೊಟ್ಟನು. ಮುಗ್ದತೆಯನ್ನೇ ಮುಖವು ಪ್ರದರ್ಶಿಸುತ್ತಿದ್ದಿತ್ತು. ಅರಸನ ಮತ್ತು ಸ್ವಾಮಿನಿಷ್ಠನ ಮುಖಗಳು ಆ ಕ್ಷಣದಲ್ಲಿ ರಂಗಿನಲ್ಲಿ ಏರಿದುವು. ಶೆಟ್ಟಿಯ ವಿವರ್ಣ ಮುಖದ ಮೇಲೆಯೂ ಒಂದು ಮೃದುಲಾಸ್ಯ ಮೂಡಿತು.
ಏನು ಹೇಳುತ್ತೀಯೋ ದ್ರೋಹೀ? ಕಾಗದವನ್ನು ಬರೆದವನು ನೀನಲ್ಲವೇನೋ?
ನಾನಲ್ಲ ಮಹಾಸ್ವಾಮೀ ಕಿರು ನಗು ಶೆಟ್ಟಿಯ ತುಟಿಗಳಲ್ಲಿ ಮೂಡಿ ಅರಸನ ದೃಷ್ಟಿ ಪ್ರಖರತೆಯಿಂದ ಅಲ್ಲಿಯೇ ಹಿಂಗಿತು.
ನಿನ್ನ ಕ್ಷುದ್ರತೆಯ ನಗು ಈಗಲೇ ಆರುವುದು. ನೀನು ಬರೆದವನಲ್ಲವಂತೆ. ಮೇಲೆ ಮೋಸದ ನಗು. ನೀನು ಬರೆದವನಲ್ಲವೆನ್ನಲು ನಿನ್ನಲ್ಲೇನು ಆಧಾರವಿದೆಯೋ? ಅರಸನು ತೀಕ್ಷ್ಣ ದೃಷ್ಟಿಯನ್ನು ಬೀರಿದನು.
ಮಹಾಸ್ವಾಮೀ! ಇಲ್ಲಿ ಯುದ್ಧ ನಡೆದ ಸಮಯದಲ್ಲಿ ನಾನಿಲ್ಲಿ ಇರಲೇ ಇಲ್ಲ.
ಮತ್ತೆಲ್ಲಿ ಸತ್ತಿದ್ದಿಯೋ ಕತ್ತೆ?
ಆಗ ನನ್ನ ಮದುವೆಯು ನಡೆಯುತ್ತಿತ್ತು. ಪ್ರಭುಗಳಿಗೆ ನಾನು ಮಂಜೇಶ್ವರದಲ್ಲಿ ನನ್ನ ಮಾವನ ಮನೆಯಲ್ಲಿ ಇದ್ದೆನು. ನಾವು ಗಂಡಹೆಂಡತಿ ಪುತ್ತೂರಿಗೆ ಬಂದು ತಿಂಗಳೂ ಸಂದಿರುವುದಿಲ್ಲ.
ಕ್ರೂರಿಯಾದ ಅರಸನಲ್ಲಿ ಏನೋ ಕರುಣೆಯ ಕಿಡಿಯು ಬೆಳಗಿತು.
ನಿನ್ನ ಹೇಳಿಕೆಗೆ ರುಜುವಾತೇನು?
ನನ್ನ ಹೆಂಡತಿಯನ್ನು ನನ್ನ ಸಂಬಂಧಿಕರನ್ನು ಯಾರನ್ನು ಬೇಕಾದರೂ ಪ್ರಶ್ನಿಸಬಹುದು ಮಹಾಪ್ರಭುಗಳು. ನಾನು ಈ ಕಾಗದವನ್ನು ಬರೆದವನಲ್ಲ. ತೃಪ್ತಿಯ ಆತ್ಮವಿಶ್ವಾಸನ ಕಿರುನಗು ಶೆಟ್ಟಿಯ ತುಟಿಗಳಲ್ಲಿ ಮಿನುಗಿತು.
ನಾನು ವಿಚಾರಿಸುತ್ತೇನೆ. ಇವನನ್ನು ಈಗ ತುರಂಗಕ್ಕೆ ಹಿಡಿದುಕೊಂಡು ಹೋಗಿರೋ.
ಸ್ವಾಮಿನಿಷ್ಠನು ಮಾತಾಡಲು ಮುಂದಾದನು. ಅವನು ಬಾಯಿ ತೆರೆಯುವಾಗಲೇ ಕುಟ್ಟರಸನು ಮಾಯಿಲ ರೈ, ನೀನು ಈಗಿಂದೀಗಲೇ ಈ ಉಗ್ಗಪ್ಪ ಶೆಟ್ಟಿಯ ಹೆಂಡತಿಯನ್ನು ಇಲ್ಲಿಗೆ ವಿಚಾರಣೆಗೆ ಕರೆದುಕೊಂಡು ಬಾ ಎಂದು ಅಪ್ಪಣೆ ಮಾಡಿದನು.
ಸ್ವಾಮಿನಿಷ್ಠನು ತನ್ನ ಮಾತನ್ನು ಹೇಳಲು ಧೈರ್ಯವಿಲ್ಲದೆ, ಅತೃಪ್ತಿಯಿಂದ, ರಾಜಾಜ್ಞೆ ಪಾಲಿಸಲು ಸಾಗಿದನು.

ಗಂಡನು ರಾಜದೂತರೊಡನೆ ಹೋದಾಗಲೇ ಅಕ್ಕಬ್ಬೆಯ ಮನಸ್ಸು ಮುದುರಿ ಹೋಗಿದ್ದಿತ್ತು. ಆ ಎಳೆಯ ಜೀವ, ಸಂಸಾರದಲ್ಲಿ ಪ್ರಥಮವಾಗಿ ಕಾಲಿಟ್ಟಿದ್ದ ಆ ಸುಂದರ ಪುಷ್ಪ ಜರ್ಜರಿತವಾಗಿತ್ತು. ಗಂಡನಲ್ಲಿ ಯಾವ ದೋಷವನ್ನೂ ಯಾವ ರಾಜದ್ರೋಹ ಭಾವವನ್ನೂ ಅವಳು ಕಂಡಿರಲಿಲ್ಲ. ಹೀಗೆಲ್ಲ ಚಿಂತಿಸುತ್ತ ಪರಿಪರಿಯಾಗಿ ದುಃಖಿಸುತ್ತ ಗಂಡನ ಕ್ಷೇಮವರ್ಧನೆಗಾಗಿ ಎಲ್ಲಾ ದೇವರಲ್ಲಿಯೂ ಮೊರೆಯಿಡುತ್ತಿದ್ದಾಗಲೇ ಪುನಃ ದೂತರ ಆಗಮನವಾಯಿತು. ಅವರ ಮಧ್ಯೆ ತನ್ನ ಮನಸ್ಸಿನ ಪುತ್ತಳಿಯಿಲ್ಲದೆ ಕುಸಿದು ಹೋದಳು. ಆದರೆ ರಾಜಾಜ್ಞೆ. ಪತಿದೇವನ ರಕ್ಷಣೆ ತನ್ನಿಂದ ಆಗುವುದಾದರೆ ಆಗಲಿ ಎಂದು ಧೈರ್ಯ ಮನಸ್ಸು ಮಾಡಿ ದೂತರೊಡನೆ ಹೊರಟಳು. ದೂತರ ಜೊತೆ ಕಾಣಿಸಿಕೊಳ್ಳದೆ ಅನಂತರ ಹಿಂಬಾಲಿಸುತ್ತ ಬಂದ ಮಾಯಿಲ ರೈಯನ್ನು ನೋಡಿ ಮುಖ ಮುರಿದಳು. ಈ ಶನಿಯ ಕಾಟವೇ ಈ ಪಿತೂರಿ ಎಂದು ಬಗೆದಳು.

ದುಃಖದಿಂದ ಸೊರಗಿ ನಾಚಿಕೆಯಿಂದ ಕುಸಿದು ಮಧ್ಯಾಹ್ನದ ಬಿಸಿಲಿನ ಝಳದಿಂದ ಬಾಡಿ ಕಂಗಾಲಾದ ಅಕ್ಕಬ್ಬೆಯು ಕುಟ್ಟರಸನ ಮುಂದೆ ನಿಂತಾಗ ಇನ್ನಷ್ಟು ಕಂಗೆಟ್ಟಳು. ರಾಜದರ್ಪದ ಮುಂದೆ, ವೀರ ಸೈನಿಕನ ಗಂಡುದನಿಯ ಎದುರು ಈ ಮುಗ್ದೆ ಕೋಮಲೆ ಧೃತಿಗೆಟ್ಟಳು. ಅವಳಿಗೆ ಕಣ್ಣು ಕತ್ತಲೆಹೋಯಿತು. ಅಲ್ಲಿಯೇ ಕುಳಿತುಹೋದಳು. ಮರುನಿಮಿಷ ಸ್ಥಾನದ ಗಂಭೀರತೆಯ, ಪರಿಸ್ಥಿತಿಯ ಭಯಂಕರತೆಯ ಅರಿವಾಗಿ ಎದ್ದು ನಿಂತಳು.

ಸುಂದರ ವಸ್ತುವು ಹೇಗಿದ್ದರೂ ಚಂದ. ಅದರ ವಿವಿಧ ರೂಪಗಳು ಸೌಂದರ್ಯದ ವಿವಿಧ ಮುಖಗಳು. ಕೋಮಲೆ, ಸುರಸುಂದರಿ ಅಕ್ಕಬ್ಬೆಯ ಮೃದುತ್ವ, ಸೌಂದರ್ಯ ಅಂಗಸೌಷ್ಠವ ವೀಕ್ಷಿಸಿದ ಕುಟ್ಟರಸನು ಒಂದು ಕ್ಷಣ ತನ್ನನ್ನು ತಾನು ಮರೆತನು. ಆ ರಕ್ಷಣಾಹೀನ ಕರುಣಾಜನಕ ಪರಿಸ್ಥಿತಿ ಅವಳನ್ನು ಇನ್ನಷ್ಟು ಸುಂದರಿಯನ್ನಾಗಿ ಮಾಡಿದ್ದುವು. ಕುಟ್ಟರಸನು ರಾಜದಂಡದ ಮದದಿಂದ ಕೊಬ್ಬಿದವನು ಆ ನಿಮಿಷ ಸೇವಕರನ್ನೂ ಸ್ವಾಮಿನಿಷ್ಠನನ್ನೂ ಅಲ್ಲಿಂದ ಹೊರಟುಹೋಗಲು ಆಜ್ಞೆ ಗುಡುಗಿದನು. ಸಿಂಹವು ತನ್ನ ಕೊಳ್ಳೆಯನ್ನು ಹೊಡೆಯುವಾಗ ನರಿಗಾಗುವ ಹತಾಶೆಯ ಮುಖಭಂಗಿಯಿಂದ ಸ್ವಾಮಿನಿಷ್ಠನು ಅಲ್ಲಿಂದ ಕದಲಿದನು.
ನಿನ್ನ ಗಂಡನ ಮೇಲೆ ಗುರುತರವಾದ ರಾಜದ್ರೋಹದ ಆರೋಪಣೆಯನ್ನು ಹೊರಿಸಲಾಗಿದೆ. ಅದಕ್ಕೆ ನಮ್ಮೊಡನೆ ಬಲವಾದ ಪುರಾವೆಯಿದೆ. ನಾವು ಕೊಡಗು ದೇಶದಿಂದ ಇಲ್ಲಿಗೆ ಯುದ್ಧ ಮಾಡಲೂ ಬರುತ್ತಿದ್ದಾಗ ಅವನು ನಮ್ಮ ವಿರುದ್ದ ಸಂಚು ನಡೆಸುತ್ತಿದ್ದನು.
ಖಾವಂದರು ಕ್ಷಮಿಸಬೇಕು. ಇಲ್ಲಿ ಯುದ್ಧ ನಡೆಯುತ್ತಿದ್ದಾಗ ಮಂಜೇಶ್ವರದಲ್ಲಿ ನಮ್ಮ ಮದುವೆ ನಡೆಯುತ್ತಿದ್ದಿತು. ಅವರು ಎಂದೆಂದೂ ರಾಜದ್ರೋಹ ಬಗೆಯದವರು. ಅವರನ್ನು ಕ್ಷಮಿಸಬೇಕು ಮಹಾಸ್ವಾಮಿಯವರು.
ನೀನು ಗಂಡನ ಪರ ವಾದಿಸದೇ ಏನು ಮಾಡಿಯೇ? ಆದರೆ ನಮ್ಮಲ್ಲಿ ಅದಕ್ಕೆ ಬಲವಾದ ಕಾರಣವಿದೆ.
ಇರಲಾರದು ಪ್ರಭುಗಳೇ.
ಮುಚ್ಚು ಬಾಯಿ ಹುಚ್ಚು ಹೆಂಗಸೇ. ಈ ಪಾತಕಕ್ಕೆ ಶಿಕ್ಷೆಯಾಗಿ ನಾಳೆಯ ದಿನ ನಿನ್ನ ಗಂಡನನ್ನು ತೂಗಿ ಕೊಂದುಬಿಡಲಾಗುವುದು. ನೀನೇನನ್ನುತ್ತೀಯಾ? ಕುಟ್ಟರಸನು ಕಠಿಣನಾದನು.
ಅಕ್ಕಬ್ಬೆಯು ಹಲುಬಿದಳು. ನನ್ನ ಜೀವವನ್ನು ನನಗೆ ದಾನ ಮಾಡಿಬಿಡಿ ಪ್ರಭುಗಳೇ. ಅವರು ತಪ್ಪಿತಸ್ಥರಲ್ಲ ಹೆದರಿದ ಪಾರಿವಾಳದಂತೆ ನೋಡತೊಡಗಿದಳು.
ನಿನ್ನ ಜೀವ ನಿನಗೆ ದಾನ ಕ್ಷುದ್ರ ಹೆಂಗುಸೇ. . . ನಿನ್ನ ಗಂಡನನ್ನು ನಿನಗೆ ಕೊಡಬಹುದು. ಆದರೆ. . .
ಈ ಸಂತೋಷದ ಕಿರಣದಿಂದ ಅಕ್ಕಬ್ಬೆಯ ಮುಖಕಮಲ ಅಪೂರ್ವ ಸೌಂದರ್ಯ ತಾಳಿ ಥಳಥಳಿಸಿತು. ಆ ಕ್ರೂರ ವಾತಾವರಣದಲ್ಲಿ ಈ ದಿವ್ಯ ಪ್ರಭೆಯಿಂದ ಶಾಂತಿಯು ಮಿಂಚಿದಂತಾಯಿತು. ಇದರಿಂದ ಇನ್ನಷ್ಟು ಮೋಹಿತನಾಗಿ ಕಾಮಾಂಧನಾದ ಕುಟ್ಟರಸನು ಆದರೆ ಸುಂದರೀ. . .ಎಂದು ಅವಳೆಡೆಗೆ ಮುಗುಳ್ನಗೆಯಿಂದ ಮುಂದುವರಿದನು.
ಅಕ್ಕಬ್ಬೆಯು ಹೆದರಿ ನಾನು ಹೋಗುತ್ತೇನೆ. ನನ್ನನ್ನು ಕಳಿಸಿಬಿಡಿ ಎಂದು ರೋದಿಸುತ್ತ ಬಾಗಿಲಿನೆಡೆಗೆ ಧಾವಿಸಿದಳು.
ಮೂರ್ಖ ಹೆಂಗುಸೇ, ನಾಳೆ ಬೆಳಗಾಗುವುದನ್ನು ನಿನ್ನ ಗಂಡ ನೋಡಲಾರ ಎಂದು ಅಬ್ಬರಿಸಿದನು ಕುಟ್ಟರಸ. ಆ ಆರ್ಭಟೆಯ ತರಂಗವೊಂದು ಅಕ್ಕಬ್ಬೆಯನ್ನು ಕ್ರೂರವಾಗಿ ಬೀದಿಯೆಡೆಗೆ ದಬ್ಬಿತು.

ಮಧ್ಯಾಹ್ನದ ಸೂರ್ಯನ ತೀಕ್ಷ್ಣತೆ, ಮನಸ್ಸಿನ ಉದ್ವೇಗದ ತೀವ್ರತೆ, ಅಪಮಾನ, ಚಿಂತೆ, ದುಃಖಗಳ ಪರಮಾವಧಿ. ಅಕ್ಕಬ್ಬೆಯು ನಡೆದಳೋ ತೇಲಿದಳೋ ಓಡಿದಳೋ ಕಾಲುಗಳು ಅವಳನ್ನು ತುರಂಗದೆಡೆಗೆ ಒಯ್ದಿದ್ದುವು. ತುರಂಗಪಾಲಕನೊಡನೆ ತಾನು ಉಗ್ಗಪ್ಪಶೆಟ್ಟಿಯ ಪತ್ನಿಯೆಂದೂ ಅವನನ್ನು ನೋಡಲು ತನ್ನನ್ನು ಬಿಡಬೇಕೆಂದೂ ಅರಿಕೆ ಮಾಡಿದಳು. ಪಾಲಕನು ಅವಳನ್ನು ಒಳಗೆ ಹೋಗಲು ಬಿಟ್ಟು  ಹೊರಗೆ ಗಸ್ತು ತಿರುಗುತ್ತಿದ್ದನು.

ಯಾರು ಬಂದಾರು, ಹೇಗೆ ವಿಮೋಚನೆಯಾದೀತು, ಬೆಳಕನ್ನು ಕಂಡೇನೇ ಎಂದು ಅತಿ ಚಿಂತಾಗ್ನಿಯಿಂದ ದಗ್ಧನಾಗಿದ್ದ ಶೆಟ್ಟಿಯು ಈ ಹೊಸ ಸದ್ದನ್ನು ಕೇಳಿದೊಡನೆಯೇ ಬಾಗಿಲೆಡೆಗೆ ಧಾವಿಸಿ ಬಂದನು. ಅಕ್ಕಬ್ಬೆಯನ್ನು ಕಂಡಕೂಡಲೇ ಓ ದೇವೀ, ನನ್ನ ದೇವಿ ಬಂದೆಯಾ ಎಂದು ಉನ್ಮತ್ತನಂತೆ ಹಾರಿ ಬಂದು ಅವಳನ್ನು ಅಪ್ಪಿಕೊಂಡನು.
ಅಕ್ಕಬ್ಬೆ ಅಲ್ಲಿ ಕಂಡುದು ತನ್ನ ಪತಿಯನ್ನಲ್ಲ, ತನ್ನ ಮುದ್ದಿನ ಮನದನ್ನನಲ್ಲ. ಪ್ರೇತ ಕಳೆಯಿಂದ ಜೀವಚ್ಛವವಾಗಿದ್ದ ಒಂದು ಮನುಷ್ಯ ಸ್ವರೂಪವನ್ನು. ಆ ಕೆಲವು ಗಂಟೆಗಳಲ್ಲಿ ಮರಣದಂಡನೆಯ ಭಯ, ಸಾವಿನ ಅಸ್ಪಷ್ಟ, ಕರಾಳ ಸ್ಪರ್ಶ ಶೆಟ್ಟಿಯ ಪ್ರಾಯವನ್ನು ೮೦ ವರ್ಷಗಳಿಗೆ ಏರಿಸಿದ್ದುವು. ಸಂತೋಷದಿಂದ ನಲಿದುಲಿಯುವ ಉಗ್ಗಪ್ಪ ಅಲ್ಲಿರಲಿಲ್ಲ. ಜೀವದಾಸೆಗಾಗಿ ಹಾತೊರೆಯುವ ಪೆಟ್ಟು ತಿಂದ ಮುದಿ ನಾಯಿ ಅಲ್ಲಿದ್ದಿತು. ಮೃದು ಲಾಸ್ಯದಿಂದ ಮನೋಹರವಾಗಿ ತೋರುತ್ತಿದ್ದ ಅವನ ಅಧರಗಳು ಈಗ ಕಪ್ಪಾಗಿ ಆ ಮಬ್ಬು ಬೆಳಕಿನ ತುರಂಗದಲ್ಲಿ ವಿಕಾರವಾಗಿ ತೋರುತ್ತಿದ್ದುವು. ಕಣ್ಣುಗಳು ಗುಂಡಿಗಿಳಿದು ತಲೆಗೂದಲು ನರೆತು ಅವನಾಗಲೇ ಮೃತಿಹೊಂದಿದಂತಿದ್ದನು, ಮರಣದ ತಾಂಡವ.
ಓದೇವೀ ಓ ದೇವೀ ಎನ್ನುವ ಅವನ ಚಿರಪರಿಚಿತ, ಈಗ ಭಯವಿಹ್ವಲ ಮತ್ತು ಕರ್ಣ ಕಠೋರ ಕಂಠ ಆಲಿಸಿ ಅಕ್ಕಬ್ಬೆಯು ಅರ್ಧ ಜೀವಪಡೆದಳು. ಪತಿಯು ಬದುಕಿರುವನೆಂದು ತೃಪ್ತಿಯಾಯಿತು.
ನನ್ನನ್ನು ನಿಷ್ಕಾರಣವಾಗಿ ನಾಳೆ ಬೆಳಗ್ಗೆ ಕೊಂದುಬಿಡುತ್ತಾರೆ ದೇವೀ ಹೇಗೆ ಬದುಕಲಿ, ಹೇಗೆ ಉಳಿಯಲಿ?
ನೀವು ತಪ್ಪಿತಸ್ಥನಲ್ಲವೆಂದು ನಾನು ಹೇಳಿದೆ, ಆದರೆ. . .
ಅಯ್ಯೋ ನಾನು ನಿರ್ದೋಷಿ. ನಾಳೆ ಬೆಳಗ್ಗೆ ತೂಗಿ ಕೊಂದುಬಿಡುವರಂತೆ. ಈ ಕುತ್ತಿಗೆಯ ನರವನ್ನು ತುಂಡುಮಾಡಿ ಕೊಲ್ಲುವರಂತೆ. . . ನನಗೆ ಉಳಿಗಾಲವಿಲ್ಲವೇ ದೇವೀ?
ತುರಂಗದ ಬಾಗಿಲಿನವರೆಗೆ ಅಕ್ಕಬ್ಬೆಯನ್ನು ಪಾಲಕನು ಎಳೆದುಕೊಂಡು ಹೋದನು.
ಅಕ್ಕಬ್ಬೆಯ ಮನಸ್ಸಿನಲ್ಲಿ ಏನೋ ಹೊಳೆಯಿತು. ಇನ್ನೊಂದು ಕ್ಷಣ ತನ್ನ ಗಂಡನೊಡನೆ ಮಾತನಾಡಿ ಬರಲು ಅನುಮತಿಯನ್ನು ಯಾಚಿಸಿದಳು. ಅವಳ ದೈನ್ಯವನ್ನು ಕಂಡು ತುರಂಗಪಾಲಕನು ಕೂಡಲೇ ಮರಳಬೇಕೆಂದು ಆಜ್ಞಾಪಿಸಿ ಕಳಿಸಿದನು.
ಹಾಗಾದರೆ ನನಗೆ ಉಳಿಗಾಲವಿಲ್ಲವೇ ದೇವಿ?
ಉಂಟು ನನ್ನ ದೇವರೇ... ಆದರೆ...
ಅಯ್ಯೋ ಹಾಗಾದರೆ ನನ್ನನ್ನೇಕೆ ನೀನು ಬಿಡಿಸಲಿಲ್ಲ?
ಆದರೆ... ಆದರೆ...
ಅದು ಯಾವುದೇ ಆದರೂ ನಾನು ಬದುಕಬೇಡವೇ? ನಮ್ಮ ಆಸ್ತಿಯೆಲ್ಲವೂ ಹೋದರೂ ಪರವಾ ಇಲ್ಲ. ನಾನು ಹೊರ ಬಂದ ಮೇಲೆ ಸಂದಾಯಿಸಿಯೇನು!
ಆದರೆ...
ಮತ್ತೇನು ಆದರೆ? ನಮ್ಮ ಮನೆ ಅವನು ತೆಗೆದುಕೊಳ್ಳಲಿ, ನಮ್ಮ ಹಣವೆಲ್ಲವೂ ಅವನ ಬೊಕ್ಕಸ ಸೇರಲಿ. ನಾನು ಬದುಕಿದರೆ ಅವನ್ನು ಮತ್ತೆ ಸಂಪಾದಿಸಬಹುದು. ನನ್ನ ಜೀವಕ್ಕೆ ಮಿಗಿಲಾದುದು ಯಾವುದಿದೆ?
ಅದು ಗೊತ್ತಿದೆ ನನ್ನ ದೇವರೇ. ಆದರೆ ನಿಮ್ಮ ಪ್ರಾಣ ಉಳಿಯಲು ನಾನು ತೆರಬೇಕಾದುದು ಇವೆಲ್ಲವುಗಳಿಗಿಂತಲೂ ಹೆಚ್ಚಿನದು.
ಏನು ನಿನ್ನ ಜೀವವೇ?
ನೀವು ಉಳಿಯುವುದಾದರೆ ನಾನು ಅದನ್ನು ತೆರಲು ಸಂತೋಷದಿಂದ ಒಪ್ಪುತ್ತಿದ್ದೆ. ನನ್ನ ಜೀವಕ್ಕಿಂತಲೂ ಪ್ರಿಯವಾದ...
ನನ್ನ ಜೀವ ಉಳಿಯುವುದಾದರೆ ನಾವು ಏನನ್ನು ಬೇಕಾದರೂ ತ್ಯಾಗ ಮಾಡಲು ಸಿದ್ಧರಿರಬೇಕು. ನೀನೇಕೆ ಹಿಂಜರಿಯುತ್ತೀಯೆ? ಅದೇನು ಬೇಕಂತೆ ಆ ನರಶ್ವಾನಕ್ಕೆ?
ನನ್ನ ಪವಿತ್ರವಾದ ಶೀಲವನ್ನು ಆ ನರಾಧಮನಿಗೆ ಒಪ್ಪಿಸಿದರೆ... ಇಷ್ಟು ಹೇಳುವಾಗ ಅಕ್ಕಬ್ಬೆಗೆ ಮಾತುಹೊರಡಲಿಲ್ಲ, ಭಾವೋದ್ವೇಗದಿಂದ ಉಸಿರುಕಟ್ಟಿತು, ಸ್ವಲ್ಪ ಹೊತ್ತು ಮೌನ.
ಅದಕ್ಕಾದರೂ ಒಪ್ಪಿ ನೀನು ನನ್ನ ಹರಣವನ್ನೇಕೆ ಉಳಿಸಬಾರದು?
ತುಂಬಿದ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದವರು ಮರದ ಅಡರನ್ನು ಹಿಡಿಯುವಂತಹ ಮಾತು ಶೆಟ್ಟಿಯದು. ಕಾಲಪುರುಷನ ಕರಾಳ ದಂಷ್ಟ್ರದೊಳಗೆ ಸಿಕ್ಕಿ ಬದುಕಲು ಮಿಲಿಮಿಲಿಗುಟ್ಟುತ್ತಿರುವ ಪ್ರಾಣಿಗೆ ನೀತಿಯು ಹೇಗೆ ಅರ್ಥವಾದೀತು?
ತನ್ನ ಕೊನೆಯ ವಾಕ್ಯದಿಂದ ತನ್ನ ಪ್ರಿಯ ಪತಿಯು ಭಾವಪರವಶನಾಗಿ ಬೇಡ, ಬೇಡ. ಸಂಭಾವಿತರಿಗೆ  ಮಾನವೇ ದೊಡ್ಡದು. ನನ್ನ ಜೀವ ಹೋದರೂ ತೊಂದರೆಯಿಲ್ಲ. ನೀನು ನಿನ್ನನ್ನು ಮಾರಿಕೊಂಡು ನನ್ನನ್ನು ಉಳಿಸಬೇಕಾಗಿಲ್ಲ ಎಂದು ಮುಂತಾದ ಧೀರೋದ್ಗಾರಗಳು ಹೊರಡಬಹುದೆಂದು ನಿರೀಕ್ಷಿಸಿದ್ದ ಅಕ್ಕಬ್ಬೆಯು ಈಗ ನಿಜವಾಗಿಯೂ ಜರ್ಜರಿತಳಾಗಿದ್ದಳು. ಕುಟ್ಟರಸನ ಕಟು ಅವಮಾನಕರ ನುಡಿಗಳಿಂದಾಗದ ಗಾಸಿ ಅವಳಿಗೆ ಪತಿಯ ಈ ಮಾತುಗಳಿಂದಾಯಿತು. ಬದುಕಲು ಹಾತೊರೆಯುತ್ತಿದ್ದ ಜೀವದಾಸೆಯಲ್ಲಿ ಬೇರೆ ಎಲ್ಲವನ್ನೂ ಮರೆತಿದ್ದ ಉಗ್ಗಪ್ಪ ಶೆಟ್ಟಿಯಲ್ಲಿ ಅಂತಹ ನೈತಿಕೌನ್ನತ್ಯವನ್ನು ಅವಳು ನಿರೀಕ್ಷಿಸಿದುದು ಅಸ್ವಾಭಾವಿಕ?
ನನ್ನ ಪ್ರಾಣಪದಕವೇ ನಿಮ್ಮನ್ನು ಹೇಗಾದರೂ ಉಳಿಸುವುದು ನನ್ನ ಕರ್ತವ್ಯ. ನೀವು ಹಗುರವಾಗಿರಿ. ನಾಳೆ ನಿಮ್ಮನ್ನು ನೋಡುತ್ತೇನೆ ಎಂದು ಅಕ್ಕಬ್ಬೆಯು ಯಾಂತ್ರಿಕವಾಗಿ ನುಡಿದು ತುರಂಗದಿಂದ ಸಾಗಿದಳು.
ಹಾಗಾದರೆ ನಾನು ಬದುಕುತ್ತೇನೆಯೇ? ಎಂದು ಸಂತೋಷದಿಂದ ಪತಿಯು ಹೇಳಿದುದು ಆ ವಿಧೇಯ ಪತ್ನಿಯ ಕಿವಿಗಳಲ್ಲಿ ಅನುರಣಿತವಾಗುತ್ತಿತ್ತು.

ವೇಳೆಯು ಸಂಜೆಯನ್ನು ಸಮೀಪಿಸಿತು. ಅಕ್ಕಬ್ಬೆಯು ಮನೆಗೆ ಹೋದಳು. ಅವಳ ಮನಸ್ಸು ಕದಡಿಹೋಗಿದ್ದಿತು. ಒಂದು ಕಡೆ ತನ್ನ ಮಾನಸಂರಕ್ಷಣೆಯ ಪವಿತ್ರವಾದ ಹೊಣೆ; ಮತ್ತೊಂದು ಕಡೆ ತನ್ನ ಪ್ರಾಣಸರ್ವಸ್ವನ ಜೀವರಕ್ಷಣೆಯ ಧರ್ಮ. ಯಾವುದು ಹೆಚ್ಚಿನ ಮಹತ್ತ್ವದ್ದು? ಎಷ್ಟೋ ಹೊತ್ತು ಅವಳು ಕ್ಷೋಭೆಯಿಂದ ಅತ್ತಿತ್ತ ಅಡ್ಡಾಡಿದಳು. ಕಾಲಮೀರುತ್ತಿತ್ತು. ಚಿಂತಿಸಿ ಚಿಂತಿಸಿ ಕೊನೆಗೆ ಪಾಳೆಯಗಾರನಲ್ಲಿಗೆ ಹೋಗುವುದೆಂದು ನಿರ್ಧರಿಸಿದಳು. ಇಷ್ಟು ಚಿಂತಿಸುವಾಗ ಅವಳ ಮನಸ್ಸಿನಲ್ಲಿ ಆಗಾಗ ಮಿಡಿಯುತ್ತಿದ್ದ ದುಃಖದ ಶ್ರುತಿ ಅವಳ ಪತಿದೇವನ ವಾಕ್ಯ ಅದಕ್ಕಾದರೂ ಒಪ್ಪಿ ನೀನು ನನ್ನ ಹರಣವನ್ನೇಕೆ ಉಳಿಸಬಾರದು?

ರಾತ್ರಿ ಚೆನ್ನಾಗಿ ಕವಿದಿತ್ತು. ಸುಂದರಿಯಲ್ಲ, ಮುಗ್ಧೆಯಲ್ಲ, ಅಭಿಸಾರಿಕೆಯಲ್ಲ, ಉದ್ದೇಶಪೂರ್ವಕವಾಗಿ ಪಾಪಕೂಪಕ್ಕೆ ದುಮುಕುವ ಸ್ತ್ರೀ. ಆದರೆ ಅದು ಪಾಪಕಾರ್ಯವಲ್ಲ. ಅವಳ ಮಂದಹಾಸ ಮಾಯವಾಗಿದ್ದಿತು. ಅವಳ ಕೋಮಲತೆ ಅಳಿದುಹೋಗಿದ್ದಿತು. ಅವಳು ಪ್ರಶಾಂತಳಾಗಿದ್ದಳು. ಅಕ್ಕಬ್ಬೆಯು ಕುಟ್ಟರಸನ ಪಾಪಕಲುಷಿತ ಮಂದಿರವನ್ನು ಪ್ರವೇಶಿಸಿದಳು. ದ್ವಾರಪಾಲಕನಿಂದ ವಿಷಯವರಿತ ಅರಸನು ಕೊಳ್ಳೆಯು ಅನಾಯಾಸವಾಗಿ ತನ್ನ ಬಲೆಗೆ ಬಿದ್ದಿತೆಂದು ಸಂತೋಷಪಟ್ಟನು. ಅಕ್ಕಬ್ಬೆಯು ಮೌನವಾಗಿ ಮಂದಗಮನದಿಂದ ದೃಢತೆಯಿಂದ ಬಂದಳು. ದೃಷ್ಟಿಯು ನೆಲವನ್ನು ಇರಿಯುತ್ತಿತ್ತು.
ಪುನಃ ಏಕೆ ಬಂದೆ? ಆಗ ಅನಾಗರಿಕಳ ಹಾಗೆ ನೇರ ಓಡಿಹೋಗಿದ್ದೆಯಲ್ಲ?
ಮಹಾಪ್ರಭುಗಳು ಆಗಲೇ ಅಪ್ಪಣೆಕೊಡಿಸಿದಿರಲ್ಲ - ಒಂದು ಷರತ್ತಿನ ಮೇಲೆ ನನ್ನ ಪತಿದೇವರ ಬಿಡುಗಡೆಯಾಗಬಹುದೆಂದು.
ಗುರುತರವಾದ ರಾಜಕಾರ್ಯವಿದೆ. ನೀವೆಲ್ಲ ಇಲ್ಲಿಂದ ಹೋಗಿ ಸೇವಕರು ಮರೆಯಾದರು. ಹೌದು ಸುಂದರೀ ಆ ಷರತ್ತಿಗೆ ಒಪ್ಪುವೆಯಾ?
ನನ್ನ ಗಂಡನನ್ನು ಉಳಿಸುವುದಾದರೆ...

ಮರುದಿನ ಮಂಗಳಾವಾರ. ಅಮಂಗಳಕರವಾಗಿ ಬೆಳಗಾಯಿತು - ಇಲ್ಲ, ಇನ್ನೂ ಮಬ್ಬುಗತ್ತಲೆ. ತೇಜೋವಿಹೀನ ಶವಸದೃಶ ಅಕ್ಕಬ್ಬೆಯು ಅರಸನ ನಿಲಯದಿಂದ ತುರಂಗದೆಡೆಗೆ ಒಂದು ಪತ್ರವನ್ನು ಹಿಡಿದುಕೊಂಡುದು ಧಾವಿಸಿದಳು. ಈ ಮಲಿನವದನೆಯ ಮುಖವನ್ನು ಸ್ಪರ್ಶಿಸಲು ನಾಚಿಯೋ ಏನೋ ಸೂರ್ಯನು ಮೋಡಗಳಿಂದ ಮುಖವನ್ನು ಮರೆಮಾಡಿಕೊಂಡಿದ್ದನು. ಶ್ಮಶಾನ ರುದ್ರತೆ ಭೀಕರವಾಗಿ ವ್ಯಾಪಿಸಿದ್ದಿತು. ಮರುಳಿನಂತೆ ಅಕ್ಕಬ್ಬೆಯು ಗಂಡನೆಡೆಗೆ ಸಾಗಿದಳು. ತುರಂಗಪಾಲಕರಿಗೆ ಈ ಕಾಗದವಿತ್ತಳು.
ಈ ಸ್ತ್ರೀಯ ಪತಿ ಉಗ್ಗಪ್ಪಶೆಟ್ಟಿಯನ್ನು ಅವಳ ವಶಕೊಡುವುದು - ಕುಟ್ಟರಸ.
ಅರಸನ ಅಕ್ಷರದ ಈ ಪತ್ರವನ್ನೋದಿ ತುರಂಗಪಾಲಕನು ನಿಡುಸುಯ್ದನು; ಮಾತನಾಡಲಿಲ್ಲ, ಪತ್ರವನ್ನು ಅವಳಿಗೆ ಹಿಂದೆ ಕೊಟ್ಟನು.
ಎಲ್ಲಿ ನನ್ನ ಪತಿ? ಅಕ್ಕಬ್ಬೆಗೆ ಕಣ್ಣೇ ಸರ್ವಸ್ವವಾಯಿತು.
ಆತ ನೀರವ.
ಎಲ್ಲಿ ನನ್ನ ಪತಿ? ಒಳಗಿಲ್ಲವೇ?
ಬಾಗಿಲು ಬೀಗ ತೆರೆದು ಅವಳನ್ನು ಒಳಗೆ ಹೋಗಲು ಆ ರಕ್ಷಕ ದಾರಿ ತೋರಿಸಿದನು. ವಿದ್ಯುದ್ವೇಗದಿಂದ ಅಕ್ಕಬ್ಬೆಯು ಪತಿಯಿದ್ದೆಡೆಗೆ ಚಿಮ್ಮಿದಳು. ಮಲಗಿದ್ದ ಅವನನ್ನು ಎತ್ತಿ ಕುಳ್ಳಿರಿಸಿದಳು. ಆದರೆ ಅವನು ಕುಸಿದು ಅಲ್ಲಿಗೆ ದೊಪ್ಪನೆ ಬಿದ್ದನು. ಅವನ ಗೋಣು ಮುರಿದಿತ್ತು.
ಇಗೋ ನಿಮಗಾಗಿ ಹತಭಾಗ್ಯೆ ಬಂದಿದ್ದೇನೆ. ಮಾತಾಡಿ ನನ್ನ ದೇವರೇ. ನಿಮ್ಮ ಬಿಡುಗಡೆಯ ಪತ್ರ ತಂದಿದ್ದೇನೆ. ಏಳಿ ನಗಾಡಿ ಅವನ ಕಳೇಬರ ಎತ್ತಿದಳು. ಆದರೆ ಅವನು ಶಾಶ್ವತವಾಗಿ ಬಿಡುಗಡೆಗೊಂಡು ಆಗ ಮೂರು ನಾಲ್ಕು ಗಂಟೆ ಸಂದಿದ್ದುವು. ಅಕ್ಕಬ್ಬೆಯು ಪರಿಪರಿಯಾಗಿ ಹಲುಬಿದಳು. ಅವಳ ಮನದನ್ನ ನೀರವ. ಅವನು ಅದೃಶ್ಯರೂಪದಿಂದ ಮೂಕಾಶ್ರು ಪ್ರವಾಹ ಹರಿಸುತ್ತಿದ್ದಿರಬೇಕು. ಹುಚ್ಚಿಯಂತೆ ಅಕ್ಕಬ್ಬೆಯು ಸೆರೆಮನೆಯಿಡೀ ತನ್ನ ವಲ್ಲಭನ ಜೀವವನ್ನು ಅರಸಿ ಅರಸಿ ಅವನಿಗಾಗಿ ಹಲುಬಿ ಹಲುಬಿ ನೊಂದುಹೋದಳು, ಸೊರಗಿಹೋದಳು.

ಕ್ರಮೇಣ ಭಾವೋದ್ವೇಗದ ಮೇಲೆ ಪುನಃ ಬುದ್ಧಿಯ ಅಧಿಕಾರ ನಡೆಯಲಾರಂಭಿಸಿತು. ನನ್ನ ಸ್ವಾಮಿಯ ಬಿಡುಗಡೆಯ ಕಾಗದ ನಿಮಗೆ ಕೊಟ್ಟಿರುವಾಗ ಅವನನ್ನು ಹೇಗೆ ತೂಗಿಕೊಂದಿರಿ? ಆವೇಶದಿಂದ ಪ್ರಶ್ನಿಸಿದಳು.
ಇಲ್ಲ ತಾಯೀ. ನಮಗೆ ರಾಜಾಜ್ಞೆಯಿತ್ತು ಅವನನ್ನು ಮಧ್ಯರಾತ್ರಿಯಲ್ಲಿಯೇ ತೂಗಿ ಕೊಂದುಬಿಡಬೇಕೆಂದು ಪಾಲಕನಿಗೂ ದುಃಖವಾಗಿತ್ತು.
ಲಂಪಟ, ನೀಚ, ಪಾತಕಿ, ದ್ರೋಹಿ ಅಕ್ಕಬ್ಬೆಯು ಅರಸನನ್ನು - ಕೆಟ್ಟರಸನನ್ನು - ವಿಧವಿಧವಾಗಿ ಶಪಿಸಿ ಪುನಃ ಅವನಿದ್ದೆಡೆಗೆ ಓಡಿದಳು.
ಏನು ನಿನ್ನ ಗಂಡ ಸಿಕ್ಕಿದನೋ ಅಥವಾ ಆ ಗಂಡವೇ ನಿನಗೆ ತಪ್ಪಿಹೋಯಿತೋ ಸುಂದರೀ ಅರಸನ ಕೊಂಕುನುಡಿ.
ನೀನು ನಿನ್ನ ವಾಗ್ದಾನದಂತೆ ನಡೆಯಲಿಲ್ಲ.
ಓಹೋ ಹೋ ಏನು ನನ್ನ ಮಹಾ ವಾಗ್ದಾನ? ಆ ಕಾಗದಲ್ಲಿರುವಂತೆ ನಿನ್ನ ಗಂಡನನ್ನು ನಿನಗೆ ಕೊಡಿಸಿರುವೆನಲ್ಲ. ಇನ್ನು ಅವನ ತೊಂದರೆಯೇ ಇಲ್ಲ. ನನ್ನ ಅಂತಃಪುರ ಸೇರಿಬಿಡು ಅರಸನ ವಿಕಟಾಟ್ಟಹಾಸ.
ವಿಶ್ವಾಸಘಾತಕಿಗೆ ಪರಮಾತ್ಮನು ಯಾವ ವಿಧದಲ್ಲಿಯಾದರೂ ಶಿಕ್ಷೆ ವಿಧಿಸದೇ ಇರಲಾರನು ಎಂದು ಅಕ್ಕಬ್ಬೆಯು ಗರ್ಜಿಸಿ ಅಲ್ಲಿಂದ ಓಡಿಹೋದಳು. ಕುಟ್ಟರಸನು ಅಕ್ಕಬ್ಬೆಯನ್ನು ಆಗಲೇ ಮರೆತನು. ಮತ್ತೆ ರಾಜ್ಯದ ಕಾರ್ಯ ಎಂದಿನಂತೆ ಕ್ರೌರ್ಯದಿಂದ ದಕ್ಷತೆಯಿಂದ ಸಾಗಿತು.

*******

ಲಿಂಗರಾಜನು ವೈಭವಶಾಲಿಯಾದ ಅರಸು. ಮಡಿಕೇರಿಯಲ್ಲಿದ್ದಾಗ ಪ್ರತಿ ಸಾಯಂಕಾಲವೂ ಅವನು ರಾಜಠೀವಿಗೊಪ್ಪುವ ಉನ್ನತ ಅಶ್ವವನ್ನೇರಿ ವಾಯುವಿಹಾರಾರ್ಥ ಹೋಗುತ್ತಿದ್ದನು. ಆಪ್ತ ಜನಪರಿವೇಷ್ಟಿತನಾಗಿ ಸಾಗುತ್ತಿದ್ದ ಈ ಯುವಕ ಮಹಾರಾಜನ ಪರಿವಾರ, ಪಟ್ಟಣದ ಹಿರಿಯರಲ್ಲಿ ರಾಜನ ವಿಷಯ ಗೌರವಾಭಿಮಾನಗಳನ್ನೂ ಕಿರಿಯರಲ್ಲಿ ಭಯ ಮರ್ಯಾದೆಗಳನ್ನೂ ಬೀರುತ್ತಿದ್ದಿತು.

ಒಂದು ದಿನ ಸಾಯಂಕಾಲ ರಾಜನು ರಾಜಾಸೀಟಿನಲ್ಲಿ (ಈಗಿನ ನಾಮಧೇಯ) ಕುಳಿತು ದಿವ್ಯ ಸ್ವರ್ಗೀಯ ದೃಶ್ಯಾವಲೋಕನ ಮಾಡುತ್ತಿದ್ದನು. ಪಶ್ಚಿಮದಲ್ಲಿ ಬೆಟ್ಟಗಳ ಸಾಲಿನ ಮೇಲೆ ಸಂಜೆಯ ಸೂರ್ಯನು ಮಿರಮಿರನೆ ಮಿರುಗುತ್ತಿದ್ದನು, ಚೆಂಬೆಳಕಿನ ರಸವನ್ನು ಸುರಿಯುತ್ತಿದ್ದನು. ಮೇಘ ಸಮೂಹಗಳ ಮಧ್ಯೆ ಸೂರ್ಯಕಿರಣ ಕುಂಚಗಳು ಪ್ರವೇಶಿಸಿ ಅವುಗಳಿಗೆ ಪರಿಪರಿಯ ಸುಂದರ ವರ್ಣಗಳನ್ನೂ ಸ್ವರೂಪಗಳನ್ನೂ ಬಳಿದಿದ್ದುವು. ವನರಾಶಿ ಜ್ಯೋತಿಸಮುದ್ರದಲ್ಲಿ ಮುಳುಗಿ ಮೂಕಾನಂದವನ್ನು ಅನುಭವಿಸುತ್ತಿತ್ತು. ರಾಜನು ಪ್ರಕೃತಿಯ ಈ ದಿವ್ಯ ಸನ್ನಿಧಾನದಲ್ಲಿ ಈ ರಸಮಯ ಸನ್ನಿವೇಶದಲ್ಲಿ ತಾದಾತ್ಮ್ಯ ಹೊಂದಿ ಪಾರವಶ್ಯವನ್ನೈದಿದ್ದನು. ರಾಜಕಾರ್ಯವೆಲ್ಲವೂ ಆ ಕ್ಷಣ ಅವನಿಂದ ದೂರವಾಗಿದ್ದುವು. ಅನಂತವನ್ನು ಮನಸ್ಸು ಅರಸುತ್ತಿದ್ದಿತು. ಈ ಸೌಂದರ್ಯದ ನೆಲೆ ಎಂತಹುದು ಇಂತಹ ದೇದೀಪ್ಯಮಾನ ಚೈತನ್ಯವಿರುವ ಪ್ರಕೃತಿಯ ರಹಸ್ಯವೆಂತಹುದು ಎಂದು ಮನಸ್ಸು ಆಲೋಚಿಸುತ್ತಿದ್ದಿತು. ಇಲ್ಲ, ಆಲೋಚನೆಯೂ ಒಂದು ಕಾರ್ಯ. ಮನಸ್ಸು ತನ್ನಿಂದ ತಾನೇ ಹಾಗೆಯೇ ಮೋಡಗಳೆಡೆಯಲ್ಲಿ ತೇಲುತ್ತ ಕಾಂತಾರ ಸಮೂಹಗಳ ಮಧ್ಯೆ ವ್ಯಾಪಿಸುತ್ತ ಈ ರೀತಿಯ ಭಾವನೆಗಳನ್ನು ರೂಪಿಸುತ್ತಿದ್ದಿತು. ಮನಸ್ಸು ಸ್ವೇಚ್ಛೆಯಾಗಿ ವಿಹರಿಸುತ್ತಿದ್ದಂತೆಯೇ ಸೂರ್ಯನು ಮರೆಯಾಗಿ ಕೆಂಪು ಬಣ್ಣವು ಮಾಯವಾಯಿತು. ರಾಜನು ಭಾವಸಮಾಧಿಯಿಂದ ಮರಳಿದನು - ಅರಮನೆಗೆ ಹೊರಡಲು ಅನುವಾದನು. ಇನ್ನೇನು ಕುದುರೆಯನ್ನು ಚಬುಕಿಸಬೇಕು. ಆಗಲೇ ಪಶ್ಚಿಮ ದಿಕ್ಕಿನ ಬೆಟ್ಟದಂಚಿನಿಂದ ರಾಜಾ ಮಹಾಪ್ರಭೂ! ನ್ಯಾಯಪರಿಪಾಲನೆಯಾಗಬೇಕು ಎಂದು ಕೂಗು ಕೇಳಿತು.

ರಾಜನು ಕುದುರೆಯ ಲಗಾಮು ಜಗ್ಗಿ ಆ ಕಡೆಗೆ - ಎಡಗಡೆಗೆ, ತಿರುಗಿದನು. ಸಂಜೆಗತ್ತಲಿನ ಹಿನ್ನೆಲೆಯಲ್ಲಿ ದೇಹಪೂರ್ಣ ವಸ್ತ್ರಾಚ್ಛಾದಿತ ವ್ಯಕ್ತಿಯೊಂದು ರಾಜನ ಕುದುರೆಯ ಬುಡದಲ್ಲಿ ಬಂದು ಬಿದ್ದು ನ್ಯಾಯಪರಿಪಾಲನೆಯಾಗಬೇಕು ಎಂದು ಒರಲಿತು.
ಸ್ತ್ರೀಯ ಸ್ವರ, ಕರುಣಾಜನಕವಾಗಿದೆ.
ನ್ಯಾಯ ಕೇಳಿದವರಿಗೆ ಲಿಂಗರಾಜನು ಇಲ್ಲವೆಂದೆನ್ನುವುದಿಲ್ಲ. ಆದರೆ ದಾರಿಯಲ್ಲಿ ಅವನು ವಿಚಾರಣೆ ಮಾಡುವುದಿಲ್ಲ. ನಮ್ಮ ಹಿಂದೆಯೇ ಅರಮನೆಗೆ ನೀನು ಬಾ ರಾಜನ ನಿರ್ಧಾರಪೂರಿತ ಸ್ಪಷ್ಟವಾಣಿ. 

ಅರಮನೆಯಲ್ಲಿ ಲಿಂಗರಾಜನು ಹತಭಾಗ್ಯೆಯ ಕತೆ ವಿಚಾರಿಸಿದನು. ಅಕ್ಕಬ್ಬೆಯು ನಡೆದ ಸಂಗತಿಯನ್ನು ಹೇಳಿದಳು. ಲಿಂಗರಾಜನ ಹೃದಯ ಕ್ಷೋಭೆಗೊಂಡಿತು. ಹುಬ್ಬು ಗಂಟಿಕ್ಕಿ ಇದು ಸಾಧ್ಯವೇ? ಕುಟ್ಟಪ್ಪನು ಹೀಗೆ ಮಾಡಿರಬಹುದೇ ಎಂದು ಪ್ರಶ್ನಿಸಿಕೊಂಡನು.
ನಿಜ ಮಹಾಪ್ರಭು. ಅನಾಥೆಯನ್ನು ರಕ್ಷಿಸಬೇಕು. ನನಗೆ ನ್ಯಾಯ ದೊರೆಯಬೇಕು.
ಅಕ್ಕಬ್ಬೆಯ ದೀನವದನ, ಅವಳ ಸ್ವರೂಪ, ಅವಳ ಕಥನರೀತಿ ಇವುಗಳಿಂದ ಲಿಂಗರಾಜನು ಅವಳ ಹೇಳಿಕೆಯ ಬಗೆಗೆ ಸಂಶಯಪಡಲಿಲ್ಲ. ಆದರೆ ಸ್ವಾಮಿ ಭಕ್ತ ಅತುಳ ಪರಾಕ್ರಮಿ ಕುಟ್ಟಪ್ಪನು ಒಂದು ಹೆಂಗುಸಿಗೆ ಈ ರೀತಿಯ ಅನ್ಯಾಯ ಮಾಡಿರಬಹುದೇ? ರಾಜನ ಅಂತರಾತ್ಮ ಕುಟ್ಟಪ್ಪನು ದೋಷಿಯಾಗಿರಲಾರ ಎಂದೆನ್ನುತ್ತಿದ್ದಿತು. ದೃಷ್ಟಿ ಅಂತರ್ಮುಖದೊಡನೆ ಕುಟ್ಟಪ್ಪನು ಹಾಗೆ ಮಾಡಿರಲಾರನೆಂದೂ ಅದು ಬಾಹ್ಯಮುಖಿಯಾಗಿ ಈ ಸಹಾಯಹೀನ ಸ್ತ್ರೀಯನ್ನು ನೋಡಿದಾಗ ಅವನು ಹಾಗೆ ಮಾಡಿರಲೂಬಹುದು ಎಂದೂ ರಾಜನಿಗ ಅನ್ನಿಸಿತು. ಈ ಸಂದಿಗ್ದ ಪರಿಸ್ಥಿತಿಯಿಂದ ವಿಮೋಚನೆ ಹೇಗೆ? ರಾಜನಿಗೆ ಮಾರ್ಗ ಹೊಳೆಯಿತು.
ಅದಿರಲಿ, ನಿನ್ನಲ್ಲಿ ಏನಾದರೂ ರುಜುವಾತಿದೆಯೇ?
ಕುಟ್ಟರಸನು ತುರಂಗಪಾಲನಿಗೆ ಸ್ವಹಸ್ತದಿಂದ ಬರೆದು ರಾಜಮುದ್ರೆ ಸಹಿತವಾಗಿ ಕೊಟ್ಟ ಪತ್ರವನ್ನು ಅಕ್ಕಬ್ಬೆಯು ರಾಜನಿಗೆ ಒಪ್ಪಿಸಿದಳು.
ಅದನ್ನು ಓದಿದಂತೆ ರಾಜನ ಆಕ್ರೋಶ ಮಿತಿಮೀರಿತು. ಆ ತಾರುಣ್ಯದ ದುಂಡುಮೊಗವು ಸಂಜೆಯ ಸೂರ್ಯನಂತೆ ಕೆಂಪಾಗಿ ಬಿರಿಯುವಂತಾಯಿತು.
ನೀಚಾ ಅಧಮಾ ನೀನೇನು ಮಾಡಿಬಿಟ್ಟೆಯೋ? ನಮ್ಮ ಕುಲಕ್ಕೆ ದೇಶಕ್ಕೆ ಅವಮಾನವಾಯಿತು. ನನ್ನ ಅಭಿಮಾನಕ್ಕೆ ಧಕ್ಕೆ ಬಂದಿತು ಎನ್ನುವ ಕೂರುನುಡಿಗಳು ರಾಜನ ಬಾಯಿಯಿಂದ ಭೋಂಕನೆ ಉದುರಿದುವು.
ಈ ಪತ್ರವು ನನ್ನಲ್ಲಿಯೇ ಇರಲಿ. ನಿನಗೆ ನ್ಯಾಯ ದೊರೆಯುವುದು, ಹೆದರಬೇಡ. ನಿನ್ನನ್ನು ಇನ್ನೊಮ್ಮೆ ಕರೆಯಿಸುವವರೆಗೆ ನಮ್ಮ ಪರಿವಾರದವರ ಜತೆಯಲ್ಲಿ ಅರಮನೆಯಲ್ಲಿಯೇ ಇರು ಎಂದು ರಾಜನು ಆಜ್ಞಾಪಿಸಿದನು.

ಪಾಳೆಯಗಾರ ಕುಟ್ಟರಸನಿಗೆ ಲಿಂಗರಾಜನ ಕರೆಬಂದಾಗ ಅವನಿಗೆ ಬಹಳ ಹೆಮ್ಮೆಯಾಯಿತು. ಇನ್ನೂ ಬಹುಮಾನ ರಾಜನಿಂದ ತನಗೆ ದೊರೆಯುವುದು. ತಾನು ದಕ್ಷತೆಯಿಂದ ರಾಜ್ಯಪರಿಪಾಲನೆ ಮಾಡುತ್ತಿರುವುದಕ್ಕೆ ಮೆಚ್ಚಿ ಅವನು ಪಾರಿತೋಷಿಕವನ್ನೀಯುವನು. ಅಂತಹ ಸುಸಂದರ್ಭವೇನೋ ಈಗ ಬಂದಿರಬೇಕೆಂದು ಅವನು ಸಂತೋಷೋತ್ಸಾಹಗಳಿಂದ ಕೊಡಗಿಗೆ ಹೊರಟು ಲಗುಬಗೆಯಿಂದ ಸಾಗಿದನು. ತನಗೇನೋ ನಿಧಿಯು ಕಾದಿದೆ ಎಂದು ತೀವ್ರಗತಿಯಿಂದ ಬಂದನು. ಮಡಿಕೇರಿಯನ್ನು ಯಾವಾಗ ಸೇರಿ ರಾಜನಿಗೆ ತನ್ನ ವಿನಯಪೂರ್ವಕ ಪ್ರಣಾಮಗಳನ್ನು ಅರ್ಪಿಸಿ, ತನ್ನ ಆಳ್ವಿಕೆಯ ಸಾರ್ಥಕ್ಯವನ್ನು ವಿವರಿಸಿ ಪ್ರಶಂಸೆಯನ್ನೂ ಉಡುಗೊರೆಯನ್ನೂ ಪಡೆದೇನು ಎಂದು ಅತ್ಯುತ್ಸುಕತೆಯಿಂದ ಧಾವಿಸಿಬಂದನು. ಆ ಜಂಬದ ಹುಂಜ ಗರ್ವದಿಂದ ತಲೆಯೆತ್ತಿ ಬೀಗುತ್ತ ಬಂದಿತು.

ಕುಟ್ಟರಸನು ಅರಮನೆಯ ಮುಂದೆ ಬಂದೊಡನೆಯೇ ಅವನನ್ನು ರಾಜನೆಡೆಗೆ ಮರ್ಯಾದೆಸಹಿತ ಒಯ್ದರು. ಈ ಒಂದು ಉಪಚಾರದಿಂದ ಅವನಿಗೆ ಇನ್ನಷ್ಟು ಸಂತೋಷವಾಯಿತು. ರಾಜನಿಗೆ ಪ್ರಣಾಮವರ್ಪಿಸುವಾಗಲೇ ಕುಟ್ಟಪ್ಪಾ! ಈ ಹೆಂಗುಸನ್ನು ಕಂಡಿದ್ದೀಯಾ? ಎಂದು ಲಿಂಗರಾಜನು ಗರ್ಜಿಸಿದನು - ಘೋರ ಪರಿಸ್ಥಿತಿ!
ಇಂತಹ ಒಂದು ಪ್ರಸಂಗವನ್ನು ಎಲ್ಲೆಲ್ಲಿಯೂ ಎಂದೆಂದಿಗೂ ಕನಸಿನಲ್ಲಿಯೂ ನನಸಿನಲ್ಲಿಯೂ ನೆನೆಸಿರದ ಊಹಿಸಿರದ ಕುಟ್ಟರಸನು, ಗರ್ವಿಷ್ಠನು, ರಾಜನ ಪ್ರಶ್ನೆಯ ಠೀವಿಯಿಂದ ಧ್ವನಿಯಿಂದ ಬೆಚ್ಚಿ ಧಕ್ಕೆಗೊಂಡು ಸ್ತಂಭಿತನಾದನು, ಮೂಕನಾದನು. ಅವನ ದುರಭಿಮಾನಕ್ಕೆ ಭಯಂಕರಾಘಾತ ಬಿದ್ದಿತು. ರಾಜನ್ನನ್ನೇ ಅವನು ದಿಟ್ಟಿಸಿದನು.
ರಾಜನ ಕಣ್ಣುಗಳು ಗರಗರನೆ ತಿರುಗಿದುವು ಹೇಳು ನಾಯೀ! ನೀನು ಈ ಹೆಂಗುಸನ್ನು ಎಂದಾದರೂ ಕಂಡಿರುವೆಯಾ? ಆ ಕಡೆ ತಿರುಗಿ ನೋಡು ದ್ರೋಹೀ. ಅಪಮಾನದ ಗಾಯದ ಮೇಲೆ ನಿಂದನೋಕ್ತಿಯ ಬರೆ.
ಕುಟ್ಟಪ್ಪನು ಬಲಾತ್ಕಾರದಿಂದ ಹಿಂತಿರುಗಿ ಅಕ್ಕಬ್ಬೆಯನ್ನು ನೋಡಿ ಬೆಚ್ಚಿದನು. ಆದರೆ ಅದನ್ನು ತೋರ್ಪಡಿಸಲಿಲ್ಲ. ಅವನೇನು ಸಾಮಾನ್ಯ ವ್ಯಕ್ತಿಯಲ್ಲ. ಮಹಾ ಮಹಾ ಸಮರಗಳಲ್ಲಿ ಭಾಗಿಯಾಗಿ ಜಯಸಂಪಾದಿಸಿದವನು. ಪ್ರಸಂಗದ ಕಠಿಣತೆಯನ್ನು ಅರಿತು ಮನಸ್ಸಿಗೆ ಸಮಾಧಾನ ತಂದುಕೊಂಡು ತೊದಲಿದ ನಾಲಗೆಯನ್ನು ಸರಿಪಡಿಸಿಕೊಂಡು ಮಮಮಹಾಪ್ರಭುಗಳಿಗೆ ದೀನ ಸೇವಕನ ಮೇಲೆ ಏನೋ ಕೋಪ ಬಂದಿರುವ ಹಾಗಿದೆ. . .
ಮುಚ್ಚು ಬಾಯಿ. ನನ್ನ ಪ್ರಶ್ನೆಗೆ ನೇರ ಉತ್ತರಕೊಡು. ಈ ಹೆಂಗುಸನ್ನು ನೀನು ಈ ಮೊದಲು ನೋಡಿರುವೆಯಾ?
ಇಲ್ಲ ಪ್ರಭುಗಳೇ, ಖಂಡಿತವಾಗಿಯೂ ಇಲ್ಲ.
ನಿನ್ನಿಂದ ಆ ಉತ್ತರವನ್ನು ನಿರೀಕ್ಷಿಸಿದ್ದೆ. ನೋಡಲಿಲ್ಲವಂತೆ ವಂಚಕ ಈ ಕಾಗದ ನೋಡು ರಾಜನು ಅಕ್ಕಬ್ಬೆಯಿಂದ ಪಡೆದ್ದ ಕಾಗದವನ್ನು ಕುಟ್ಟಪ್ಪನಿಗೆ ಕೊಟ್ಟನು.
ಕುಟ್ಟಪ್ಪನು ದಿಙ್ಮೂಢನಾದನು. ನೀರವ.
ಹೇಳು ನಾಯೀ ಇವಳ ಪರಿಚಯ ನಿನಗೀಗಲಾದರೂ ಆಯಿತೇ? ಅರಸನು ಉಕ್ಕಿನ ದೃಷ್ಟಿಯಿಂದ ಕುಟ್ಟಪ್ಪನನ್ನು ಇರಿಯುತ್ತಿದ್ದನು.
ಹೌದು ಪ್ರಭುಗಳೇ. ಅವಳ ಸ್ವರೂಪ ಬದಲಾಗಿ ಹೋಗಿದೆ. ನನಗೆ ತಿಳಿಯಲಿಲ್ಲ.
ಕಾರಣ ಯಾರೋ ಮಡೆಯಾ? ನಿಷ್ಕಾರಣವಾಗಿ ಅವಳ ಜೀವನವನ್ನೇ ಹಾಳು ಮಾಡಿದೆ.
ರಾಜಕಾರಣದ ಮಹಾ ವಿಚಾರದ ಮುಂದೆ ಒಂದೆರಡು ವ್ಯಕ್ತಿಗಳು ನಾಶವಾದರೂ ರಾಜ್ಯದ ಹಿತದ ದೃಷ್ಟಿಯಲ್ಲಿ ಮಹಾಪ್ರಭುಗಳು ಅದನ್ನು ಪರಿಗಣಿಸಬಾರದು.
ಕುಟ್ಟಪ್ಪಾ! ನಿನ್ನ ನಾಲಗೆ ಬಹಳ ಹರಿತವಾಗಿದೆ. ನಿನ್ನನ್ನು ನ್ಯಾಯಪಾಲನೆ ಮಾಡಲು ಅಲ್ಲಿ ಬಿಟ್ಟು ಬಂದರೆ ಈ ರೀತಿ ನೀನು ನೀತಿನ್ಯಾಯಬಾಹಿರನಾಗಿ ವರ್ತಿಸುವುದೇ? ರಕ್ಷಣಾಹೀನರ ದುರವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವುದೇ? ನಿನ್ನ ಹೇಯ ಕಾಮಾಗ್ನಿಗೆ ಮುಗ್ಧ ಸ್ತ್ರೀಯರನ್ನು ಬಲಿಗೊಡುವುದೇ? ನೀನೇನು ಮನುಷ್ಯನೋ ಪಶುವೋ ಅಥವಾ ಶನಿಯೋ? ನಿನ್ನ ರಕ್ತದಲ್ಲೇನು ವಿಷ ಹರಿಯುತ್ತಿದೆಯೇ? ಪರಿಗಣಿಸಬಾರದಂತೆ ರಾಜ್ಯದ ಹಿತದೃಷ್ಟಿಯಲ್ಲಿ ಒಂದೆರಡು ವ್ಯಕ್ತಿಗಳ ನಾಶವನ್ನು. ನಿನ್ನಂತಹ ಅಧಮ ನರಕೀಟಗಳ ನಾಶದಿಂದ ರಾಜ್ಯದ ಹಿತವು ವರ್ಧಿಸುವುದು.
ಕುಟ್ಟರಸನು ನೆಲನೋಡುತ್ತ ಔಡುಗಚ್ಚಿದ್ದನು. ನೆಲವನ್ನು ಕೆರೆಯುತ್ತಿದ್ದನು, ಮೌನ.
ಈಕೆಯ ಪತಿಯು ಅಪರಾಧಿಯೋ ನಿರಪರಾಧಿಯೋ ಆ ಪ್ರಶ್ನೆ ಇಲ್ಲಿ ಅಸಮಂಜಸ. ಅವನ ಬಿಡುಗಡೆಗೆ ನೀನು ಅತ್ಯಂತ ಹೇಯವಾದ ಪಾಪಕರವಾದ ಪ್ರತಿಫಲವನ್ನು ಅಪೇಕ್ಷಿಸಿದೆ, ಅದೂ ನಿನಗೆ ದೊರೆಯಿತು. ಆದರೆ ನಿನ್ನ ಪಾಲಿನ ಕರ್ತವ್ಯ, ಆ ಷರತ್ತನ್ನು ನೀನು ಪಾಲಿಸಿದೆಯೋ?
ನಾ ನಾ ನಾ.  . ನು ಒಂದು ಮ ಮಾರ್ಗ. . .
ಬೊಗಳೋ ನಿನಗೆ ಜೀವದ ಮೇಲೆ ಆಸೆಯಿದ್ದರೆ ಇದಕ್ಕೆ ಪರಿಹಾರ ಉಂಟೇನೋ?
ರಾಜನ ಬಾಯಿಯಿಂದ ತಿಳಿದೋ ತಿಳಿಯದೆಯೋ ಪರಿಹಾರ ಎನ್ನುವ ಶಬ್ದ ಹೊರಟುಬಿಟ್ಟಿತು. ಕುಟ್ಟರಸನು ಮರುಕ್ಷಣದಲ್ಲಿ ಪರಿಹಾರವನ್ನು ಸೂಚಿಸಿದನು. ನೀತಿಯ ಸೂಕ್ಷ್ಮವನ್ನರಿಯದ ದಪ್ಪತಲೆಯ ಕುಟ್ಟಪ್ಪನು ಪರಿಹಾರ ಹೇಳಿದನು.
ನಾನು ಪರಿಹಾರ ಸೂಚಿಸಬಲ್ಲೆ ಮಹಾಪ್ರಭೂ.
ಓಹೋ ಪರಿಹಾರ, ಅದೇನೋ ಪರಿಹಾರ? ಅವಳ ಗಂಡನಿನ್ನು ಬದುಕುವನೇನೋ?
ನಾನೇ ಅವಳ ಗಂಡನಾಗುತ್ತೇನೆ. ನನ್ನಂತಹ. . .
ಬೇಡ ಬೇಡ ನಾನು ಆತ್ಮಹತ್ಯೆಯನ್ನಾದರೂ ಮಾಡಿಕೊಂಡು ಸಾಯುವೆನು ಅಕ್ಕಬ್ಬೆಯು ರೋದನ ಧ್ವನಿಯಲ್ಲಿ ಕೂಗಿದಳು.
ರಾಜನು ಅವಳಿಗೆ ಅಲ್ಲಿಂದ ಹೊರಟುಹೋಗಲು ಹೇಳಿದನು. ಸೇವಕರು ಅವಳನ್ನು ಕರೆದುಕೊಂಡು ಹೋದರು.
ನೀನು ಅವಳಿಗೆ ಗಂಡನಾದರೆ? ಲಿಂಗರಾಜನ ಕೆಂಡದಂತಹ ಮುಖ ಲಘುಹಾಸ್ಯದ ತುಸುನಗೆಯನ್ನು ತಳೆಯಿತು.
ಇದರಿಂದ ಧೈರ್ಯಗೊಂಡ ಕುಟ್ಟಪ್ಪನು ಮಹಾರಾಜರೇ! ನನಗೆ ಹೇಗೂ ಮದುವೆಯಾಗಿರುವುದಿಲ್ಲ. ಅವಳನ್ನೇ ನಾನು ವರಿಸುವೆನು. ಹೋದ ಗಂಡನಿಗಿಂತಲೂ ಯೋಗ್ಯ ಉತ್ತಮ ಪತಿ ಅವಳಿಗೆ ದೊರೆತಂತಾಯಿತು ಪ್ರಭುಗಳೇ! ಎಂದು ವಿಜ್ಞಾಪಿಸಿದನು.
ಲಿಂಗರಾಜನ ಮುಖಪರಿವರ್ತನೆ ಅತ್ಯದ್ಭುತವಾಗಿದ್ದಿತು. ಆ ಕ್ಷಣ ಅವನು ಹಸನ್ಮುಖದಿಂದ ಅದು ಒಳ್ಳೆಯ ಉಪಾಯ ಕುಟ್ಟಪ್ಪ. ನೀನು ಈ ದಿನ ಹೋಗಿ ವಿಶ್ರಾಂತಿ ಪಡೆದುಕೋ. ನಾಳೆಯ ದಿನ ನಮ್ಮ ಸಮಕ್ಷಮದಲ್ಲಿ ಮದುವೆಯು ನೆರವೇರಬೇಕು ಆಗಬಹುದೇ?
ಮಹಾರಾಜರ ಚಿತ್ತ. . . ಈ ಬಡವನು ಕನ್ನಡ ಜಿಲ್ಲೆಯಲ್ಲಿ ಪ್ರಭುಗಳ ಹೆಸರು ಸ್ಥಿರವಾಗುವಂತೆ ಏನೆಲ್ಲ ಕೆಲಸ ಮಾಡಿದ್ದಾನೆಂದು ತಾವು ಕೇಳಬೇಕು, ಬಿನ್ನವಿಸಲೇ?
ಶುಭ ಕಾರ್ಯ ಮೊದಲು ನೆರವೇರಲಿ. ಆ ಮೇಲೆ ಆ ವಿವರವನ್ನೂ ತಿಳಿಯೋಣ. ಈಗ ಹೋಗು ಎಂದು ರಾಜನು ಒಳ ನಡೆದನು.

ರಾಜನಿಗೆ ನಮಸ್ಕರಿಸಿ, ತನ್ನ ಬುದ್ಧಿವಂತಿಕೆಯಿಂದ ಪುನಃ ರಾಜನ ಕೃಪೆಯನ್ನು ಸಂಪಾದಿಸಿದೆನೆಂದು ಸಂತೋಷದಿಂದ ಕುಟ್ಟಪ್ಪನು ಮರಳಿದನು. ತನಗೆ ಇಂತಹ ವಿಪತ್ತನ್ನು ತಂದೊಡ್ಡಿದ ಆ ಯಃಕಶ್ಚಿತ್ ಸ್ತ್ರೀಯ ಮೇಲೆ ಮನಸ್ಸಿನೊಳಗೆ ಬಹಳವಾಗಿ ರೇಗಾಡಿದನು. ಹೆಸರಿಗೆ ಮದುವೆಯಾಗಲಿ. ಮುಂದೆ ಆ ಹೆಂಗುಸಿನ ನಾಶವನ್ನು ಸುಲಭವಾಗಿ ಗುಪ್ತವಾಗಿ ಸಾಧಿಸಬಹುದೆಂದು ಹಲ್ಕಡಿದು ನಿರ್ಧರಿಸಿದನು.

ಅಕ್ಕಬ್ಬೆಯು ಆ ನರಪಶು, ಘಾತಕಿ ಕುಟ್ಟರಸನನ್ನು ಮದುವೆಯಾಗಲು ಸಮ್ಮತಿಸುವಳೇ? ಎಂದೆಂದಿಗೂ ಇಲ್ಲ. ಲಿಂಗರಾಜನ ಆಶ್ವಾಸನೆ ಭರವಸೆಗಳ ಮೇಲೆ ಭಾರಹಾಕಿ ಭಾರವಾದ ಮನಸ್ಸಿನಿಂದ ದುಃಖಪೂರಿತವಾದ ಹೃದಯದಿಂದ ಈ ಕೃತ್ರಿಮ ವಿವಾಹಕ್ಕೆ ಸಮ್ಮತಿಯಿತ್ತಳು.

ಮರುದಿನ ರಾಜಧಾನಿ ಮಡಿಕೇರಿಯಲ್ಲಿ ಸಡಗರವೇ ಸಡಗರ. ಲಿಂಗರಾಜನ ಬಲಗೈ ಬಂಟ ಕುಟ್ಟಪ್ಪನಿಗೆ ರಾಜನೇ ಸ್ವತಃ ಅರಮನೆಯಲ್ಲಿ ಮದುವೆ ಮಾಡಿಸುವನಂತೆ. ಆಶ್ರಿತರಿಗೆ ದಾತಾರ, ರಾಜನಿಷ್ಠ ಸೇವಕರಿಗೆ ಸಾಕ್ಷಾಜ್ಜನಕ ಮಹಾರಾಜ ಈ ಲಿಂಗರಾಜ ಎಂದು ಪ್ರಜೆಗಳು ಅವನನ್ನು ಕೊಂಡಾಡಿದರು. ಮಹಾವಿವಾಹ ಸಂಭ್ರಮಕ್ಕೆ ಆಮಂತ್ರಿತರಾಗಿ ರಾಜನ ಅಧಿಕಾರೀ ವರ್ಗದವರೂ ಪುರದ ಇತರ ಆಢ್ಯ ಮಹನೀಯರೂ ಮಹಿಳೆಯರೂ ಬಂದು ಸೇರಿದ್ದರು. ಮಂಗಳಕರ ಪ್ರಾತಃಕಾಲ ಸುಂದರವಾದ ಅರಮನೆ. ವಾದ್ಯ ಘೋಷದ ವೈಭವ. ಸುಮಂಗಲೆಯರು ನಾನಾ ವಿಧವಾಗಿ ಸಿಂಗರಿಸಿಕೊಂಡು ಬಂದು ಸೇರಿದರು. ಅಧಿಕಾರಿಗಳು ದರ್ಬಾರು ಪೋಷಾಕಿನಿಂದ ಬಂದು ಸಭೆಯನ್ನಲಂಕರಿಸಿದರು. ಸೈನಿಕರು ಸಭೆಯ ಅಂಚಿನಲ್ಲಿ ಕೋಟೆಯ ಗೋಡೆಯಂತೆ ಸಾಲಾಗಿ ನಿಂತು ಸಭೆಗೆ ಕಳೆಗೊಟ್ಟರು.
ಕುಟ್ಟರಸನು ಅದೃಷ್ಟಶಾಲಿ. ರಾಜನ ಕೃಪೆ ಅವನ ಮೇಲೆ ಚೆನ್ನಾಗಿದೆ ಎಂದು ಮಹನೀಯರೂ ನವವಧು ಎಂತಹ ಸುರಸುಂದರಿಯೋ ಎಂದು ಮಹಿಳೆಯರೂ ಮಾತಾಡಿಕೊಂಡರು.
ಸಭಾಮಧ್ಯದಲ್ಲಿದ್ದುದು ಉನ್ನತವೇದಿಕೆ, ಶೃಂಗರಿಸಿದ ವಿವಾಹಮಂಟಪ. ವಾದ್ಯಘೋಷ ದಿಗ್ದಿಗಂತಗಳಲ್ಲಿ ಅನುರಣಿತವಾಗಿ ಬಾನೆಡೆಗೆ ಪ್ರವಹಿಸುವಾಗ ಕುಟ್ಟಪ್ಪ ಅಕ್ಕಬ್ಬೆಯರ ವಿವಾಹವು ನೆರವೇರಿತು. ರಾಜನೇ ವಧುವಿನ ಕಡೆಯಿಂದ ಅವಳಿಗೆ ತಂದೆಯೂ ತಾಯಿಯೂ ಹಿತೈಷಿಯೂ ಆಗಿ ಧಾರೆಯೆರೆದುಕೊಟ್ಟನು. 
ಸುಮುಹೂರ್ತಾ ಸಾವಧಾನ ಸುಲಗ್ನಾ ಸಾವಧಾನ ವೇದ ಮಂತ್ರವು ವಿವಾಹಬಂಧನವನ್ನು ಶಾಶ್ವತಗೊಳಿಸಿ ಹರಸಿತು.
ಪ್ರಶಾಂತ ಗಂಭೀರ ಸುಂದರವದನೆ ಅಕ್ಕಬ್ಬೆಯನ್ನು ಸಕಲ ಮಹಿಳೆಯರೂ ತ್ರಿಪುರ ಸುಂದರಿ ಎಂದು ಹೊಗಳಿದರು. ಕುಟ್ಟಪ್ಪನು ಆನಂದವಾರಿಧಿಯಲ್ಲಿ ತೇಲುತ್ತಿದ್ದನೋ ಸುಖಸಾಮ್ರಾಜ್ಯದ ಉದ್ಯಾನವನದಲ್ಲಿ ವಿಹರಿಸುತ್ತಿದ್ದನೋ ಇಂದ್ರಾಸನವನ್ನೇ ಅಲಂಕರಿಸಿದ ಸಂತೊಷವನ್ನು ಸವಿಯುತ್ತಿದ್ದನೋ ಹೇಳಲು ಸಾಧ್ಯವಿರಲಿಲ್ಲ.

ಮದುವೆಯ ವಿಧಿಗಳು ಸಾಂಗವಾಗಿ ಮುಗಿದುವು. ರಾಜನು ಮಂದಹಾಸದಿಂದ ಕುಟ್ಟಪ್ಪನ ಸಮೀಪ ಹೋಗಿ ಕುಟ್ಟಪ್ಪಾ! ಇಂದಿನಿಂದ ಈ ಸ್ತ್ರೀಯು ನಿನ್ನ ಮಡದಿ, ಧರ್ಮಪತ್ನಿ,
ಮಹಾಪ್ರಭುಗಳ ಕೃಪೆ.
ಇವಳೇ ನಿನ್ನ ಪಟ್ಟದರಸಿ.
ನಿಶ್ಚಯವಾಗಿಯೂ ಮಹಾಪ್ರಭುಗಳೇ.
ಇಂದಿನಿಂದ ನಿನ್ನ ಅತುಳೈಶ್ವರ್ಯಕ್ಕೂ ನಿನ್ನ ಸ್ಥಿರಚರ ಸೊತ್ತುಗಳಿಗೂ ಇವಳೇ ಉತ್ತರಾಧಿಕಾರಿಣಿ.
ಅದರಲ್ಲೇನೂ ಸಂದೇಹವಿಲ್ಲ ಮಹಾರಾಜರೆ.
ಅದೇ ವಿಷಯವನ್ನು ಈ ಕಾಗದದಲ್ಲಿ ಬರೆಯಲಾಗಿದೆ. ಅದರ ಅಡಿಯಲ್ಲಿ ಈ ಸಭೆಯ ಸಮಕ್ಷಮ ನೀನೊಂದು ರುಜುಹಾಕಬೇಕು.
ಹಾಗೆಂದರೆ? ಸಂಶಯ ದೃಷ್ಟಿಯಿಂದ ಕುಟ್ಟರಸನು ನೋಡಿದನು.
ಇದರಲ್ಲಿ ಏನೂ ಕೃತ್ರಿಮವಿಲ್ಲ ಕುಟ್ಟಪ್ಪಾ! ಮನುಷ್ಯ ಸ್ಥಿತಿ ಯಾವಗಲೂ ಅಸ್ಥಿರ, ನಂಬಿಕೆಯದಲ್ಲ. ಹಾಗಾಗಿ ಭದ್ರತೆಗಾಗಿ ಮಾತ್ರ ಈ ಪತ್ರ.
ಮನಸ್ಸಿಲ್ಲದಿದ್ದರೂ ಕುಟ್ಟಪ್ಪನು ರುಜುಹಾಕಿಯೇ ಬಿಟ್ಟನು.

ಆ ಒಂದುಕ್ಷಣದಲ್ಲಿ ಲಿಂಗರಾಜನ ಮುಖಛಾಯೆ ಮಾರ್ಪಾಡು ಹೊಂದಿದುದು ಅವರ್ಣನೀಯ. ವೈಶಾಖದ ನಡುಹಗಲು ಕಾರ್ಮೋಡ ಕವಿದು ಜಡಿಮಳೇ ಸುರಿದಂತಹ ಪರಿವರ್ತನೆ. ಹಿಮಾಲಯ ಶಿಖರದ ಔನ್ನತ್ಯದಿಂದ ಶಾಂತ ಸಾಗರದ ಗಭೀರ ಪ್ರಪಾತಕ್ಕೆ ನೆಗೆತ.
ಕುಟ್ಟಪ್ಪಾ, ನಿನ್ನ ಖಡ್ಗವನ್ನು ಈ ಕಡೆ ಕೊಡು ರಾಜನ ಸಿಡಿಲು ದನಿಯ ಕಠೋರಾಜ್ಞೆ. ಕುಟ್ಟಪ್ಪನು ಸ್ತಂಭಿತನಾದನು. ಎರಡು ಹೆಜ್ಜೆ ಹಿಂದಿಟ್ಟನು ಅವನ ಅಭಿಮಾನಕ್ಕೆ ಗಾಯವಾತ್ತು. ಸಭಿಕರೆಲ್ಲರೂ ಹೆದರಿ ನಿಶ್ಚಲವಾಗಿ ಎವೆಮುಚ್ಚದೆ ನೋಡುತ್ತಿದ್ದರು.
ಪಾಪಿಯೇ! ಆ ಖಡ್ಗ ನಿನ್ನಲ್ಲಿರಲು ಯೋಗ್ಯವಲ್ಲ. ಅದನ್ನು ಇಲ್ಲಿ ಕೊಡು ರಾಜನು ವಜ್ರ ಕಠೋರನಾದನು. ದಿಗ್ಭ್ರಾಂತನಾದ ಕುಟ್ಟಪ್ಪನು ಕ್ರೋಧದಿಂದ ನಡುಗಿದನು. ಖಡ್ಗ ಹಿರಿಯಲು ಕೈ ಸೆಳೆಯುವಾಗಲೇ ರಾಜದೂತರು ಅವನನ್ನು ಬಲವಾಗಿ ಹಿಡಿದಿದ್ದರು. ದೂತನೊಬ್ಬನು ಖಡ್ಗವನ್ನು ಒರೆಯಿಂದೆಳೆದು ರಾಜನಿಗೆ ಕೊಟ್ಟನು.
ದ್ರೋಹಿಯ ಪಾಪಿಯ ಕೃತ್ಯಗಳಿಂದ ಕಲುಷಿತವಾಗಿರುವ ಈ ಖಡ್ಗ ಉಳಿದಿರಲು ಯೋಗ್ಯವಲ್ಲ ಎಂದು ರಾಜನು ಅಬ್ಬರಿಸಿ, ಅದನ್ನು ಎರಡು ತುಂಡು ಮಾಡಿ ನೆಲದ ಮೇಲೆ ಎಸೆದನು. ಆ ಭಾಗಗಳು ಕಲ್ಲು ಹಾಸಿದ ನೆಲದ ಮೇಲೆ ಝಣಝಣತ್ಕಾರದಿಂದ ಬಿದ್ದು ಉರುಳಿದಾಗ ಕುಟ್ಟಪ್ಪನಿಗೆ ಪ್ರಾಣವೃಕ್ಷದ ತಾಯಿಬೇರು ಸಡಿಲಿದಂತೆ ಆಯಿತು.
ನಿನ್ನ ಪಾತಕಕ್ಕೆ ಮರಣದಂಡನೆಯೇ ಶಿಕ್ಷೆ ನಾಯೀ. ಅದೇ ಪರಿಹಾರ. ಇವನನ್ನು ಕಲ್ಲುಬಂಡೆಯಿಂದ ಕೆಳಗೆ ನೂಕಿ ಸಂಹರಿಸಿಬಿಡಿ ರಾಜಾಜ್ಞೆಯು ಭೀಕರವಾಗಿದ್ದಿತು. ಮಹಿಳೆಯರು ರಾಮಜಪ ಮಾಡಿದರು. ಮಹನೀಯರ ಎದೆಗಳಲ್ಲಿ ಹಿರಿ ಹೊಯ್ದಾಟ ಆರಂಭವಾಯಿತು. ಕುಟ್ಟರಸನು ಮುಂದೆ ನುಗ್ಗಬೇಕೆಂದು ಪ್ರಯತ್ನಿಸುವಾಗಲೇ ರಾಜದೂತರು ಅವನನ್ನು ಎಳೆದುಕೊಂಡು ಹೋಗಿಯೇ ಬಿಟ್ಟರು.

(ಆಧಾರ: By Order of the Duke by Rafael Sabatini)

(ಇನ್ನೂ ಕತೆಗಳಿವೆ)

5 comments:

 1. ಈ ಕತೆ ತುಂಬಾ ಮಾರ್ಮಿಕವಾಗಿದೆ. ಲಿಂಗರಾಜ ಹೊರಡಿಸಿದ ೫೨ ಹುಕುಮ್ ನಾಮೆಗಳನ್ನು ಸಂಗ್ರಹಿಸುವಾಗ ಲಿಂಗರಾಜನ ಬಗ್ಗೆ ಅನೇಕ ಕತೆಗಳನ್ನು ಕೇಳಿದ್ದೆ ನಿವೃತ್ತ ಪೋಲಿಸ್ ಅಧಿಕಾರಿಗಳಾಗಿದ್ದ ಕಾರ್ಯಪ್ಪನವರಲ್ಲಿ ಅಂಥಹ ಹಲವು ಕತೆಗಳಿದ್ದವು . ಇಂಥ ಕತೆಗಳ ಆಧಾರದ ಮೇಲೆ ಕೊಡಗಿನ ಇತಿಹಾಸವನ್ನು ಮತ್ತೆ ಬರೆಯಬೇಕಾದ್ದು ಇಂದಿನ ಅಗತ್ಯಗಲ್ಲಿ ಒನ್ದಾಗಿದೆ. ಜಿ ಟಿ ನಾ ಆವರು ಕತೆ ಕಟ್ಟಿದ ರೀತಿ ಅನುಪಮವಾದುದು

  ReplyDelete
 2. ITHIHASIKA KATHEGELU NANAGE YAVAGALUU ESTHA,CHENNAGIDE.

  ReplyDelete
 3. Duke Rafael Sabatini ಆಧಾರ ಎಂದು ಹೇಳಿದ್ದಿರಿ. ಅದು ಸಿಗುವುದು ಎಲ್ಲಿ ಎಂದು ತಿಳಿಸುವಿರಾ.

  ನಿಮ್ಮ story telling skill ಕುತೂಹಲ ಮೂಡಿಸುತ್ತೆ. ಲಿಂಗರಾಜನ ಬಗ್ಗೆ ನಾನು ಸಾಕಷ್ಟು ಮಾಹಿತಿ ಪಡೆದಿದ್ದರೂ ಈ ಬಗೆಯ narration ಕೇಳಿರಲಿಲ್ಲ. ಅವನು ಸತ್ತ ನಂತರ ಅವನ ಚಾರಿತ್ರ್ಯಹರಣ ಮಾಡುವ ಬರಹಗಳನ್ನು ಬ್ರಿಟಿಷರು ಮತ್ತು ಅವರ ಅನುಸರಣವಾದಿಗಳು ಮಾಡಿದ್ದರು. ಇದು exception ಆಗಿದೆ. ಅಭಿನಂದನೆಗಳು ನಿಮಗೆ

  ReplyDelete
  Replies
  1. ಇದು ವಿಜಯ್ ತಂಬಂಡ

   Delete
  2. https://www.amazon.in/Complete-Works-Rafael-Sabatini-Historical-ebook/dp/B08KQ4HCGB/ref=sr_1_5?qid=1663299239&refinements=p_27%3ARafael+Sabatini&rnid=976390031&s=books&sr=1-5

   Delete