24 January 2014

ಗೆಳೆಯ ಮುಕೇಶ

ವಣಕ್ಕಂ ನೇರ್ಗಳೈ, ಎಂದ ಮಾತ್ರಕ್ಕೆ ಯಾರೋಅಣ್ಣಾಚೀ (ತಮಿಳರನ್ನು ಸಲಿಗೆಯಲ್ಲಿ ಸಂಬೋಧಿಸುವ ಪರಿ; ಬೆಂಗಳೂರಿಗರುಕೊಂಗಾಟಿ ಎಂದ ಹಾಗೇ) ಗೆಳೆಯನ ಕುರಿತು ನಾನಾಡುತ್ತಿದ್ದೇನೆ ಎಂದು ಭಾವಿಸಬೇಡಿ. ಈತ ಮಹಾರಾಜ ಕಾಲೇಜಿನಲ್ಲಿ ನಾನು ಬೀಎ ಓದುತ್ತಿದ್ದಾಗ ನನಗಿದ್ದ ಏಕೈಕ ಆತ್ಮೀಯ ಗೆಳೆಯ ಶಂಕರಲಿಂಗೇಗೌಡ, ತುಮಕೂರಿನ ಮುತ್ತುಗದಳ್ಳಿಯ ಅಪ್ಪಟ ಕನ್ನಡಿಗ. (ಇವರಿಗೆ ತಮಿಳು ಸುಟ್ಟು ತಿನ್ನಲೂ ಬರುವುದಿಲ್ಲ ಬಿಡಿ.) ಇವರು ರೇಡಿಯೋದಲ್ಲಿ ಎಂದೋ ತಪ್ಪಿಸೆನ್ನೈ ವಾಣುಲಿನಿಲಯಂ ತಿರುಗಿಸಿ, ಕೇಳಿದಾಗ ನುಡಿಗಟ್ಟು ಮನಸ್ಸಿಗೆ ಮುದವುಂಟುಮಾಡಿತಂತೆ. ಮತ್ತಷ್ಟೇ ತಮಾಷೆಯಲ್ಲಿ ನಮ್ಮೊಳಗಿನ ಗೆಳೆತನದರಹದಾರಿ ಶಬ್ದದಂತೆ (ಪಾಸ್ ವರ್ಡ್) ಉಳಿದುಕೊಂಡೂ ಬಿಟ್ಟಿತು. ಕಾಲಾಂತರದಲ್ಲಿ ಎಂ.ಕೆ. ಶಂಕರಲಿಂಗೇಗೌಡ, ಐಯೇಯೆಸ್ಸು, ವಿಧಾನಸೌಧದ ಯಾವುದೋ ಹವಾಬಂಧಿತ ಕೊಠಡಿಯಲ್ಲಿ, ಹಿರಿಯ ಕಾರ್ಯದರ್ಶಿಯಾಗಿ ಯಾವುದೋ ಆಡಳಿತ ಗೋಠಾಳೆಯಲ್ಲಿ ತಲೆಕೆಡಿಸಿಕೊಂಡಿದ್ದಾಗಲೂ ಮಂಗಳೂರಿನಿಂದ ನಾನು ಆಕಳಿಸುತ್ತಾ ದೂರವಾಣಿಸಿ ವಣಕ್ಕಂ ನೇ. . ಜಪಿಸಿದರೆ ಸಾಕು, ‘ಮುಕೇಶನ ಲಹರಿಗೆ ಬರುತ್ತಿದ್ದರು! (ಅವರೇ ಕಂಡುಕೊಂಡ ಕಾವ್ಯನಾಮ ಮುಕೇಶ = ಮುತ್ತುಗದಳ್ಳಿ ಕೆಂಪೇಗೌಡರ ಶಂಲಿಂಗೌ)


ಶಂಕರಲಿಂಗೇಗೌಡ ಡಿಸೆಂಬರ್ ೩೧, ೨೦೧೩ರಂದು ಸರಕಾರೀ ಜವಾಬ್ದಾರಿಗಳಿಂದ ನಿವೃತ್ತರಾಗಿದ್ದಾರೆ. ತಿಂಗಳ ಮೊದಲೇ ಅವರ ಮಗಳು - ಸಪ್ನಾ, ನನ್ನನ್ನು ಸಂಪರ್ಕಿಸಿ, ಅಪ್ಪನ ಅಭಿನಂದನ ಸಮಿತಿಯೊಂದು ರೂಪುಗೊಂಡು, ನಿವೃತ್ತಿಯನ್ನು ಸಂಕೇತಿಸುವಂತೆ ಗೌರವ ಗ್ರಂಥವೊಂದನ್ನು ತರಲು ಯೋಚಿಸಿದೆ. ಅದಕ್ಕೆ ಸಮಿತಿಯ ಪರವಾಗಿ ನಿಮ್ಮ ಒಂದು ಲೇಖನ ಕೇಳುವ ಜವಾಬ್ದಾರಿ ನನ್ನ ಪಾಲಿಗೆ ಬಂದಿದೆ ಎಂದು ಬರೆದಳು. ನಾನು ಒಪ್ಪಿ, ಹರಿದ ಸಹಜ ಲಹರಿಗೆ ಇನ್ನಷ್ಟು ನೆನಪುಗಳನ್ನು ಸೇರಿಸಿ, ಇಲ್ಲಿ ಹೆಚ್ಚಿನ ಸಾರ್ವಜನಿಕದಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ನಾನು ಮಡಿಕೇರಿ ಮೂಲದವ. ತಂದೆಯೊಡನೆ ಬಳ್ಳಾರಿ, ಬೆಂಗಳೂರು ಸುತ್ತಿ ಕಾಲೇಜು ವಿದ್ಯಾಭ್ಯಾಸಕ್ಕಾಗುವಾಗ ಮೈಸೂರಿಗೆ ಬಂದವನಾದರು ಎಂದೂ ಮನೆ, ಕುಟುಂಬದ ಬಂಧ ಹರಿಯದವ. ಆದರೆ ಈತ ಮನೆ ಕುಟುಂಬ ಹಿಂದಿಟ್ಟು, ಓದಿನ ಅನಿವಾರ್ಯತೆಗಾಗಿ ಕಷ್ಟದಲ್ಲೇ ಮೈಸೂರಿಗೆ ಬಂದು, ಯಾವುದೋ ಉಚಿತ ವಿದ್ಯಾರ್ಥಿನಿಲಯಕ್ಕೆ ಶರಣಾದವ. ಕಾಲೇಜಿನ ವಿಭಾಗ ವಿಂಗಡಣೆಯಲ್ಲಿ ಹೆಸರಿನ ಅಕಾರಾದಿ ಅನುಸರಿಸುವುದರಿಂದ ನಾನು ಸದಾಮುಂದು (ಹಾಜರಿ ಪಟ್ಟಿಯಲ್ಲಿ ಮತ್ತು ವಿಭಾಗಕ್ರಮದಲ್ಲಿ ಮಾತ್ರ, ಕಲಿಕೆಯಲ್ಲಿ ಖಂಡಿತಾ ಅಲ್ಲ) ಆತಹಿಂದು! (ತಪ್ಪು ತಿಳಿಯಬೇಡಿ, ಜಾತಿ ಮತದ ವಿಚಾರ ನಮ್ಮೊಳಗೆ ಎಂದೂ ಬಂದದ್ದಿಲ್ಲ.) ಬೀಯೇಯಲ್ಲಿ ಐಚ್ಛಿಕ ಇಂಗ್ಲಿಷ್ ಮತ್ತು ಅಮುಖ್ಯ ಅರ್ಥಶಾಸ್ತ್ರಗಳಲ್ಲಿ ಮಾತ್ರ ನಾವು ಒಂದೇ ತರಗತಿಯಲ್ಲಿ ಸೇರುತ್ತಿದ್ದೆವು. ಆಗಲೂ ಅಕ್ಕಪಕ್ಕದಲ್ಲೇ ಕೂರಬೇಕೆಂಬ ಹಠವನ್ನೇನು ನಾವಿಟ್ಟುಕೊಂಡಿರಲಿಲ್ಲ. ಆದರೆ ಯಾವುದೇ ಕಾರಣಕ್ಕೆ ಮಧ್ಯ ಒಂದು ಗಂಟೆ ಬಿಡುವು ದೊರೆತರೆ ನಾವಿಬ್ಬರೂ ಲೊಟ್ಟೆ ಪಟ್ಟಾಂಗಕ್ಕೆ ಸೇರುತ್ತಿದ್ದ ಸ್ಥಳ ಕಾಲೇಜಿನ ಮುಖಮಂಟಪದ ಮೇಲಿನ ಕೊಠಡಿ.

(ಹೆಚ್ಚಿನ ವಿವರಗಳಿಗೆ ನನ್ನ ಮಹಾರಾಜಾ ಕಾಲೇಜು ನೆನಪುಗಳನ್ನು ನೋಡಿ.) ಕೋಣೆಗೆ ಕೆಳಗಿನಿಂದ ಮೇಲೇರಿ ಹಬ್ಬಿದ ಬಳ್ಳಿಮಾಡದ ಚೆಲುವು, ಮೂರೂ ದಿಕ್ಕುಗಳಲ್ಲಿ ಭಾರೀ ಕಿಟಕಿ, ಪುಟ್ಟ ಬಾಲ್ಕನಿಯೂ ಇತ್ತು. ಅಲ್ಲೇ ನಮ್ಮ ಬಹುತೇಕ ಇಂಗ್ಲಿಷ್ ಐಚ್ಛಿಕ ತರಗತಿಗಳೂ ನಡೆಯುತ್ತಿದ್ದುವು. ಅದರ ಕಿಟಕಿಯ ಸೆಜ್ಜಗಳಲ್ಲಿ ಹೆಜ್ಜೇನಿನ ಹಿಂಡು ಒಂದೆರಡಾದರೂ ನೇಲುತ್ತಿದ್ದುವು. ಬೇಸಗೆಯ ದಿನಗಳಲ್ಲಿ, ಭಾರೀ ಗಾಳಿಯ ಹೊಡೆತಕ್ಕೆ ಬಳ್ಳಿ ವಿಪರೀತ ಅಲುಗಿದರೆ ಕೆಲವೊಮ್ಮೆ ಹಿಂಡು ಗದ್ದಲ ಮಾಡತೊಡಗಿ ನಮ್ಮ ತರಗತಿ ರದ್ದಾಗುವುದೂ ಇತ್ತು. ಆದರೂ ತರಗತಿ ಇಲ್ಲದ ಬಿಡುವಿನ ವೇಳೆಯಲ್ಲಿ ನಮಗಿಬ್ಬರಿಗೆ ಅಲ್ಲಿ ಕುಳಿತು ಸಮಯ ಕಳೆಯುವುದು ಬಲು ಪ್ರಿಯ ಹಾಗೂ ರೋಮಾಂಚನಕಾರಿ ಹವ್ಯಾಸವೇ ಆಗಿತ್ತು. ನಮ್ಮೊಳಗೆ ಮಾತೇನೂ ಭಾರೀ ನಡೆಯುತ್ತಿರಲಿಲ್ಲ. ಆದರೆ ಇತರರು ನೊಣಕ್ಕೆ ಹೆದರಿ ಕಿಟಕಿಯತ್ತ ನೋಡುವುದಕ್ಕೂ ಹಿಂಜರಿಯುವಲ್ಲಿ ನಮಗೆ ವೇಳೆಗಳೆಯುವುದೇನೋ ಸಾಹಸ ಸಾಧನೆಯ ತೃಪ್ತಿ, ಸಮಾನತೆಯ ಭಾವ ಕೊಡುತ್ತಿದ್ದಿರಬೇಕು! ನಾವು ಹುಶಾರಾಗಿ ಬಳ್ಳಿ ಒತ್ತಿನಲ್ಲೋ ಬಾಲ್ಕನಿಯಲ್ಲೋ ಕುಳಿತು, ಹಸಿರು ಪರಿಮಳದ ಗಾಳಿಗೆ ಮೈಯೊಡ್ಡಿ, ಹೆಜ್ಜೇನು ಹಿಂಡಿನ ಗುಂಜನಕ್ಕೆ ನಮ್ಮ ಶಿಳ್ಳೆ ಶ್ರುತಿ ಹೊಂದಿಸಿ ಹಳಗಾಲದ ಸಿನಿ-ಹಾಡುಗಳನ್ನುಉದ್ಧಾರ ಮಾಡುತ್ತಿದ್ದೆವು. ಹಾಗೆಂದು ಕಾಲೇಜು ಸ್ಪರ್ಧೆಗಳು, ಬಹಿರಂಗ ವೇದಿಕೆ ಬಿಡಿ, ನಾಲ್ಕು ಜನ ಸೇರಿ ನೀನು ಚೆನ್ನಾಗಿ ಬಾರಿಸ್ತಿಯಾ. ಅದು ಹೇಳು, ಇದು ಹೇಳು ಎಂದರೆ ಮುಗಿದುಹೋಯ್ತು. ಗಂಟಲು ಕಟ್ಟುತ್ತಿತ್ತು, ತುಟಿ ಅದುರುತ್ತಿತ್ತು ಕೊನೆಯಲ್ಲಿ ಗೊತ್ತಲ್ಲಾ - ಸಭಾಕಂಪನ, ನಾನಲ್ಲ, ಸಭೆಯೇ ಕಂಪಿಸುತ್ತಿತ್ತು!

ನನ್ನ ಎನ್ಸಿಸಿ, ಬೆಟ್ಟ ಹತ್ತುವ, ಊರು ಸುತ್ತುವ ಚಟಗಳೆಲ್ಲವಕ್ಕೂ ಶಂಲಿಂಗೌ ದೂರ. ಇದು ಓದಿನ ಏಕಾಗ್ರತೆಗೆ ಭಂಗ ತಂದೀತೆಂಬ ಹೆದರಿಕೆಯೋ (ಭಾರೀ ಖರ್ಚಿನವೇನೂ ಅಲ್ಲದಿದ್ದರೂ) ಆರ್ಥಿಕ ಮಿತಿಯ ಅರಿವೋ ಅವರನ್ನು ದೂರವುಳಿಸಿದ್ದಿರಬೇಕು. ಇಬ್ಬರಿಗೂ ಕಾಲೇಜಲ್ಲದೇ ಪರಸ್ಪರರ ವಾಸಸ್ಥಳಕ್ಕೆ ಹೋಗಿ ಹರಟೆ ಕೊಚ್ಚುವ, ಸ್ನೇಹಾಚಾರ ಹೆಚ್ಚಿಸುವ ಭಾವಾವೇಶವೂ ಇರಲಿಲ್ಲ. (ಐದು ವರ್ಷಗಳ ಅವಧಿಯಲ್ಲಿ ನಾನು ಒಮ್ಮೆಯಷ್ಟೇ ಅವರ ವಿದ್ಯಾರ್ಥಿನಿಲಯ ನೋಡಿದ್ದೆ. ಅವರೂ ನಮ್ಮನೆಗೆ ಬಂದದ್ದು ತುಂಬಾ ಕಡಿಮೆ; ಮತ್ತೆ ಹಾಗೆ ಬಂದಾಗಲೂ ಗೇಟಿನ ಬುಡದಲ್ಲೇ ಭೇಟಿಯ ಅವಶ್ಯಕತೆಯನ್ನು ಮುಗಿಸಿ ಕಳಚಿಕೊಳ್ಳುತ್ತಿದ್ದೆವು. ಇಷ್ಟೆಲ್ಲಾ ಆದರೂ ಅದ್ಯಾವ ಮಾಯೆಯಲ್ಲೋ ನಮ್ಮ ಗೆಳೆತನ ಮಾತ್ರ ಗಾಢವಾಗಿತ್ತು. ಇದಕ್ಕೆ ಪೂರಕವಾಗಿ ಆತ ಅಂತಿಮ ವರ್ಷದ ಪರೀಕ್ಷೆ ಮುಗಿದಾಗ ನನ್ನ ಕರೆಗೆ ಓಗೊಟ್ಟು, ನನ್ನೊಡನೆ ನನ್ನೂರು ಕೊಡಗಿಗೆ ಸೈಕಲ್ ಯಾನಕ್ಕೆ ಬಂದದ್ದೇ ಸಾಕ್ಷಿ.

ಅದು ಒಂಬತ್ತು ದಿನಗಳ ಸಾಹಸೀ ಸೈಕಲ್ ಪ್ರವಾಸ (ಮೇ ಎರಡರಿಂದ ಹತ್ತು, ೧೯೭೨. ಅನ್ಯ ವಿವರಗಳನ್ನು ಇಲ್ಲೂ ಓದಬಹುದು). ಹುಣಸೂರಿನಲ್ಲಿ ನನ್ನ ತಂದೆಯ ಶಿಷ್ಯ, ಕವಿ ಕಡೆಂಗೋಡ್ಲು ಶಂಕರಭಟ್ಟರ ಪುತ್ರ, ಅಂದು ಅಲ್ಲಿನ ನ್ಯಾಯಾಧೀಶ - ಈಶ್ವರ ಭಟ್ಟರ ಪ್ರೋತ್ಸಾಹಕರ ಉಪಚಾರ ಪಡೆದೆವು. ಪಿರಿಯಾಪಟ್ಟಣದಲ್ಲಿ ಒಯ್ದಿದ್ದ ಬುತ್ತಿಯೂಟ ಮುಗಿಸಿಕೊಂಡೆವು. ಮೊದಲ ರಾತ್ರಿಗೆ ಕುಶಾಲನಗರ. ಅಲ್ಲಿನ ಶ್ರೀಸತ್ಯ ಸಾಯಿ ದೈಹಿಕ ಶಿಕ್ಷಣ ವಿದ್ಯಾಲಯದ ಪ್ರಾಂಶುಪಾಲ ಶೇಷಾದ್ರಿಯವರು ನನ್ನ ತಂದೆಯ ಶಿಷ್ಯ. ರಾತ್ರಿಯೂ ಕೊನೆಯಲ್ಲಿ ಮೈಸೂರಿಗೆ ಮರಳುವಂದೂ ಶೇಷಾದ್ರಿಯವರು ಬಹಳ ಪ್ರೀತಿಯಿಂದ ಆತಿಥ್ಯವನ್ನು ಒದಗಿಸಿದರು. ಮರುದಿನ ಕುಶಾಲನಗರದಲ್ಲಿದ್ದ ಹಣ್ಣುಗಳ ಡಬ್ಬೀಕರಣ ಕಾರ್ಖಾನೆ ಸಂದರ್ಶಿಸಿ ಮಧ್ಯಾಹ್ನದೂಟಕ್ಕೆ ಶುಂಠಿಕೊಪ್ಪದ ಖ್ಯಾತ ಜಮೀನುದಾರ, ಸಾಹಿತ್ಯ ಕಲಾಸಕ್ತ ಗುಂಡುಕುಟ್ಟಿ ಮಂಜುನಾಥಯ್ಯನವರ ಮನೆ ಸೇರಿಕೊಂಡೆವು. ಮುಂದುವರಿದು ಸಂಜೆಗೆ ಮಡಿಕೇರಿ. ಅಲ್ಲಿನ ಆತಿಥ್ಯ ನನ್ನ ಚಿಕ್ಕಪ್ಪ ರಾಘವೇಂದ್ರ ಮತ್ತು ಆತನ ಮಾವ - ಹಿರಿಯ ವಕೀಲ ಸಿಎಸ್ ನಾರಾಯಣರ ಮನೆ, ದ್ವಾರಕದಲ್ಲಿತ್ತು. ಭಾರತದ ಸ್ವಾತಂತ್ರ್ಯಪೂರ್ವ ದಿನಗಳಲ್ಲಿ ಜನಿಸಿದ ಸಿಎಸ್ ನಾರಾಯಣರು ಬಾಲ್ಯದಲ್ಲೇ ದೃಷ್ಟಿಹೀನರಾದರೂ ಪ್ರಖರ ಮೇಧಾಶಕ್ತಿ ಹಾಗೂ ಛಲದಿಂದ ವಿದ್ಯಾಭ್ಯಾಸ ಪೂರೈಸಿ, ವಕೀಲ ವೃತ್ತಿಯಲ್ಲಿ ಅದ್ವಿತೀಯರಾಗಿ ಬೆಳೆದ ಪರಿ ಯಾರೂ ಬೆರಳು ಕಚ್ಚುವಂತದ್ದು. ಅವರು ರಾತ್ರಿ ನಮ್ಮೊಡನೆ ಲೋಕಾಭಿರಾಮದ ಮಾತಿನಲ್ಲಿ ನೀವು ಹುಣಸೂರ ಬಳಿ ದಾಟಿಬಂದ  ಲಕ್ಷ್ಮಣತೀರ್ಥದ ನೀರು ಹಸುರು ಕೆನೆಗಟ್ಟಿಕೊಂಡಿರಲಿಲ್ಲವೇ ಎಂದು ವಿಚಾರಿಸಿದಾಗ ನಮ್ಮ ವೀಕ್ಷಣೆಗೊಂದು ಆಶ್ಚರ್ಯಕರ ಹೊಸ ಹೊಳಹೇ ಒದಗಿದ್ದು ಸುಳ್ಳಲ್ಲ.

ಮೂರನೇ ದಿನವೂ ದ್ವಾರಕದಲ್ಲೇ ಉಳಿದುಕೊಂಡು ಮಡಿಕೇರಿ ನಗರ ಪ್ರದಕ್ಷಿಣೆ ಮುಗಿಸಿಕೊಂಡೆವು. ನಾಲ್ಕನೇ ದಿನ ಅಪರಾಹ್ನ ಭಾಗಮಂಡಲ ತಲಕಾವೇರಿ ಸುತ್ತಾಡಿ, ಅಲ್ಲಿನೊಬ್ಬ ಸಂಬಂಧಿ ಮತ್ತು ಬಾಲ್ಯದ ಗೆಳೆಯ- ಸೂರ್ಯನಾರಾಯಣ ವೈದ್ಯನ ಮನೆಯಲ್ಲೇ ಉಳಿದುಕೊಂಡೆವು. ಐದನೇ ದಿನ ಮಡಿಕೇರಿಗೆ ಮರಳಿ ಚಿಕ್ಕಜ್ಜನ ಮನೆ - ಜ್ಯೋತಿಯಲ್ಲಿ ಊಟ ತೀರಿಸಿಕೊಂಡು ನಮ್ಮ ಕುಟುಂಬದ ಮೂಲ ನೆಲೆಯಾದ ಹಳ್ಳಿ - ಮೋದೂರು ಸೇರಿಕೊಂಡೆವು. ಅಲ್ಲಿ ನನ್ನಜ್ಜಜ್ಜಿ ಹಾಗೂ ಚಿಕ್ಕಪ್ಪಂದಿರ ಹಳಗಾಲದ ಪ್ರೀತಿ ಆತಿಥ್ಯದಲ್ಲಿ ಎರಡು ದಿನ ಕಳೆದದ್ದೇ ಗೊತ್ತಾಗಲಿಲ್ಲ. ಅವರಿಗೂ ವಿದಾಯ ಹೇಳಿ, ಬೇರೊಂದೇ ದಾರಿಯಲ್ಲಿ ಕುಶಾಲನಗರಕ್ಕಾಗಿ ಮೈಸೂರಿಗೆ ಮರಳಿದ್ದೆವು.

ಕೊಡಗು ಸೈಕಲ್ ಯಾನಕ್ಕೆ ಹೊಸತಾಗಿ ನಾನೊಂದು ಡಬ್ಬಿ ಕ್ಯಾಮರಾ (ಅಗ್ಫಾ ಕ್ಲಿಕ್-) ಒಯ್ದಿದ್ದೆ. ನಮಗಿಬ್ಬರಿಗೂ ಚಿತ್ರ ತೆಗೆಯುವ, ಜೊತೆಗೆ ಮತ್ತು ಅದರಲ್ಲಿ ಕಾಣಿಸಿಕೊಳ್ಳುವ ಉತ್ಸಾಹ! ನಮ್ಮ ಮಂಗಾಟದಲ್ಲಿ ಕೆಲವು ಕ್ಷುಲ್ಲಕ ಮುನ್ನೆಲೆಯಲ್ಲಿ ಅನಾವಶ್ಯಕ ಎರಡೆರಡು ಚಿತ್ರ ತೆಗೆದು, ನಿಜ ಪ್ರೇಕ್ಷಣೀಯ ಸ್ಥಳದ, ಮುಖ್ಯ ವ್ಯಕ್ತಿಗಳ ದಾಖಲಾತಿ ಮರೆತದ್ದು ಇಂದು ನಗೆ ತರಿಸುತ್ತದೆ. (ಅವುಗಳಲ್ಲೇ ಕೆಲವನ್ನು ಇಲ್ಲಿ ಬಳಸಿದ್ದೇನೆ, ಗಮನಿಸಿ) ಕಾಲಾಂತರದಲ್ಲಿ ಪ್ರವಾಸದ ಎಷ್ಟೋ ವಿವರಗಳು ಮನಸ್ಸಿನಿಂದ ಮಾಯವಾಗಿರಬಹುದಾದರೂ ಒಟ್ಟು ಅನುಭವದೊಡನೆ ಶಂಲಿಂಗೌ ಸ್ನೇಹ ಸದಾ ಸ್ಮರಣೀಯ.

ಇಂಗ್ಲಿಷ್ ಸ್ನಾತಕೋತ್ತರ ಪದವಿಗೂ ನಾವಿಬ್ಬರು ಸಹಪಾಠಿಗಳು. ಅಲ್ಲಿ ವಿದ್ಯಾರ್ಥಿ ಸಂಖ್ಯೆ ಕಡಿಮೆ. ಎಲ್ಲ ಒಂದು ದೊಡ್ಡ ಆಯತಾಕಾರದ ಮೇಜಿನ ಸುತ್ತ ಎರಡು ಸಾಲಿನಲ್ಲಿ ಕೂರುತ್ತಿದ್ದೆವು. ಮೇಜಿನ ಒಂದು ಕೊನೆಯಲ್ಲಿ ಕರಿಹಲಗೆ, ಅಧ್ಯಾಪಕರ ಸ್ಥಾನವಾದರೆ ನನ್ನದು ಸರಿಯಾಗಿ ಎದುರು ಪಕ್ಷ! ಇಲ್ಲಿಗಾಗುವಾಗ ನನ್ನ ಮತ್ತು ಶಂಲಿಂಗೌ ಬಂಧ ಬಿಗಿಯಾದ್ದಕ್ಕೋ ಏನೋ ಹೆಚ್ಚಾಗಿ ತರಗತಿಯಲ್ಲಿ ಅಕ್ಕಪಕ್ಕದಲ್ಲೇ ಕೂರುತ್ತಿದ್ದೆವು. ಶಂಲಿಂಗೌ ಗಂಭೀರ ವಿದ್ಯಾರ್ಥಿ, ನಾನು ಉಡಾಫೆ. ಅವರೇನೋ ಪಾಠ ವಿಶ್ಲೇಷಣೆಗಳಿಗೆ ಏಕಾಗ್ರ ಚಿತ್ತರಾಗುತ್ತಿದ್ದರು. ಆದರೆ ಕನ್ನಡಕಧಾರಿಯಾದ ನಾನು ಸ್ಥಾನ ಯಾಕೆ ಆರಿಸಿಕೊಳ್ತಿದ್ದೆ ಎನ್ನುವ ನಮ್ಮೊಳಗಿನ ಬ್ರಹ್ಮ ರಹಸ್ಯವನ್ನು ಇಲ್ಲಾದರೂ ಹೇಳಿಬಿಡ್ತೇನೆ. ಕೆಲವು ತರಗತಿಗಳಲ್ಲಿ ನನಗೆ ಪಾಠದ ಸೃಜನಶೀಲತೆಗಿಂತ ಸ್ವಂತದ ಕನವರಿಕೆ ಅದಮ್ಯವಾಗಿ ಬರುತ್ತಿತ್ತು. ತೂಕಡಿಸುವಲ್ಲಿ ನಾನು ದೃಢದೇಹಿ. ಆದರೆ ಕಣ್ಣು ಮುಚ್ಚಿದ್ದು ಕಾಣದಿರಲು ಸ್ಥಾನದಲ್ಲಿ ಕನ್ನಡಕದ ಪ್ರತಿಫಲನ ಸಹಕಾರಿಯಾಗಿತ್ತು! ಮತ್ತೆ ಅಧ್ಯಾಪಕರಿಗೆ ಸಂಶಯ ಬಂದು, ನೇರ ನನ್ನನ್ನೇ ಸಂಬೋಧಿಸಿದಲ್ಲಿ ಶಂಲಿಂಗೌ ಕೊಡುತ್ತಿದ್ದ ಮೇಜಿನ ಕೆಳಗಿನ ಪೆಟ್ಟು ಸಕಾಲಿಕವಾಗಿರುತ್ತಿತ್ತು!!


ಸ್ನಾತಕೋತ್ತರ ಶಿಕ್ಷಣದ ಒಂದು ಸ್ವಾರಸ್ಯವನ್ನು ಇಲ್ಲಿ ದಾಖಲಿಸಲೇಬೇಕು. ನಮ್ಮ ಒಬ್ಬ ಪ್ರೊಫೆಸರರು ಏವನ್ ನದಿ (ಇದರ ದಂಡೆಯಲ್ಲಿನ ಸ್ಟ್ರಾಟ್ಫರ್ಡ್ ಶೇಕ್ಸ್ ಪಿಯರಿನ ಹುಟ್ಟೂರು) ನೀರು ಕುಡಿದು ಬಂದು, ‘ಮೂರು ತುಂಡು ದಿರಿಸು ಧರಿಸಿ, ತಾನು ಶೇಕ್ಸ್ಪಿಯರ್ ಪರಿಣತ ಎಂದು ಬೊಗಳೆ ಬಿಡುತ್ತಿದ್ದರು. (ಕಾಲಾಂತರದಲ್ಲಿ ಒಮ್ಮೆ ಇದೇ ಪ್ರೊಫೆಸರ್ ಸಾಹೇಬರು ಮುಂಬೈಗೆ ಹೋಗಿ ಕುಳಿತು, ವಿವಿನಿಲಯದಿಂದ ಸ್ಟ್ರಾಟ್ಫರ್ಡಿನ ಯಾವುದೋ ಗೋಷ್ಠಿಗೆ ಭೇಟಿ ಕೊಟ್ಟ ಹಣ, ಸವಲತ್ತುಗಳನ್ನು ದಕ್ಕಿಸಿಕೊಂಡು ಸಿಕ್ಕಿಬಿದ್ದಿದ್ದರು!) ಅವರು ಕೆಲವೊಮ್ಮೆ ವೇಳೆಗಳೆಯಲು ತಮ್ಮ ಶೇಕ್ಸ್ಪಿಯರ್ ಅವಧಾನದ ಪರಿಣತಿ ಒರೆಗೆ ಹಚ್ಚುವಂತೆ ಐಸೇ, ಕೋಟ್ ಸಮ್ಥಿಂಗ್ ಫ್ರಂ ಶೇಕ್ಸ್ಪಿಯರ್ ಎನ್ನುವುದಿತ್ತು. ನಾನು ದಿಟ್ಟ ಪ್ರಾಮಾಣಿಕತೆಗೆ ಹೆಸರಾಗಿದ್ದೆ; ಗೊತ್ತಿಲ್ಲ ಎಂದು ಹೇಳಿ, ಅಪ್ಪಟ ದೇಸೀ ಆಶೀರ್ವಚನಗಳನ್ನು ಪಡೆದು ಕೃತಾರ್ಥನಾಗುತ್ತಿದ್ದೆ. ಆದರೆ ಇಲ್ಲಿ ಶಂಲಿಂಗೌ ಪ್ರಾಯೋಗಿಕ ಜಾಣತನ ಮೆರೆದದ್ದು (‘ತಿಲಕಾಷ್ಠಮಹಿಷಬಂಧನ ಎಂಬ ಹೆಬ್ಬೊತ್ತಗೆ ಇದ್ದಂತೇ), ಅನಂತರ ಅವರೇ ನನ್ನಲ್ಲಿ ಹೇಳಿದಾಗ (ಹಲವು ಸಹಪಾಠಿಗಳಿಗೆ ಇದು ಗೊತ್ತಿತ್ತು ಮತ್ತು ಪ್ರಯೋಗಿಸುವುದೂ ಇತ್ತು) ಉಕ್ಕಿದ ನಗೆಯಹೊನಲು ಇಂದೂ ನೆನಪಿನೊಡನೆ ಮತ್ತೆ ಉಕ್ಕುತ್ತದೆ. ಏನೋ ಎರಡು ವಾಕ್ಯ ಇಂಗ್ಲಿಷಿನಲ್ಲಿ ಬಡಬಡಿಸುತ್ತ ಹಳೆ ಇಂಗ್ಲಿಷಿನ ಛಾಯೆ ಬರುವಂತೆಕಮ್ಮತ್ತ್, ‘ಗೋಯತ್ತ್ ಸೇರಿಸಿಬಿಟ್ಟರೆ ಪ್ರೊಫೆಸರ್ ಸಾಹೇಬರಿಗೆ ವಿದ್ಯಾರ್ಥಿಗಳ ಪ್ರಾವೀಣ್ಯದ ಬಗ್ಗೆ ಇನ್ನಿಲ್ಲದ ಕೃತಾರ್ಥತೆ! (ಅದಲ್ಲ ಎನ್ನಲು ಅವರಲ್ಲಿ ಬಂಡವಾಳವಿದ್ದದ್ದೂ ಅಷ್ಟೇ!)
 
ವೃತ್ತಿರಂಗಕ್ಕಿಳಿದಾಗ ನಾನು ಸ್ವತಂತ್ರನಾದೆ, ಶಂಲಿಂಗೌ ಒಂದೋ ಎರಡೋ ವರ್ಷ ಕಾಳಮುದ್ದನದೊಡ್ಡಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಆದರೆ ಅದನ್ನು ಮೀರಿ ಕೆ..ಎಸ್ ಉತ್ತೀರ್ಣನಾಗಿ, ತರಬೇತಿನ ಅವಧಿಯಲ್ಲಿ ಮಂಗಳೂರಿಗೇ ಬಂದದ್ದು ಸಂತಸದ ಆಕಸ್ಮಿಕ. ನನ್ನ ಶಿಫಾರಸಿನಲ್ಲಿ ಜಿಲ್ಲಾ ಎಸಿ ಸಾಹೇಬರಿಗೆ ನಾನಿದ್ದ ಅಲೋಶಿಯಸ್ ಹಾಸ್ಟೆಲ್ಲಿನಲ್ಲೆ ವಸತಿ ಸೌಕರ್ಯವೂ ಸಿಕ್ಕಿತ್ತು. ಕಾಲದ ರಜಾದಿನಗಳಲ್ಲಿ, ಬಿಡುವೇಳೆಯಲ್ಲಿ ನಮ್ಮ ಒಡನಾಟಕ್ಕೆ ಹೆಚ್ಚಿನ ಬಾಧ್ಯತೆಗಳಿರಲಿಲ್ಲ. ಮಳೆಗಾಲದಲ್ಲಿ ಜಮಾಲಾಬಾದ್ ಏರಿದ್ದು, ಡಾ| ರಾಘವೇಂದ್ರ ಉರಾಳರ ಪುಟ್ಟ ಡಬ್ಬಿ ಕಾರಿನಲ್ಲಿ ಕುದುರೆಮುಖ ಗಣಿ ಯೋಜನಾ ಸ್ಥಾಪನ ವಿವರಗಳನ್ನು ದರ್ಶಿಸಿದ್ದೇ ಮುಂತಾದವು ಶಂಲಿಂಗೌದ್ದು ನನಗೆ ಜೊತೆಗೊಟ್ಟ ಮುಖ್ಯ ಕಲಾಪಗಳು.

ಅಲೋಶಿಯಸ್ ವಿದ್ಯಾರ್ಥಿ ನಿಲಯದಲ್ಲಿ ನಾವಿದ್ದಾಗ ನಾನು ಮಾಡಿದ ಕೀಟಲೆಯೊಂದು ಈಗ ನೆನಪಿಗೆ ಬರುತ್ತದೆ. ಅದೊಂದು ಆದಿತ್ಯವಾರ ಸಂಜೆ ಅಲೋಶಿಯಸ್ ಕಾಲೇಜಿನ ಇಂಗ್ಲಿಷ್ ಅಧ್ಯಾಪಕ ಸನ್ನಿ ತರಪ್ಪನ್ ನನ್ನ ಪೂರ್ವ ಪರಿಚಯ ಬಲದಲ್ಲಿ.ಸಿ ಸಾಹೇಬ್ರ ಭೇಟಿಯನ್ನು  ಕೋರಿ ಮಾಡಿದ್ದರು. ಸನ್ನಿಯವರು ನಗರದ ಹೊರವಲಯದಲ್ಲಿದ್ದ ಒಂದು ಘೋಷಿತ ಸ್ವಯಂಸೇವಾ ಸಂಸ್ಥೆಯ ಆಡಳಿತ ಮಂಡಳಿಯಲ್ಲಿದ್ದರು. ಆದರೆ ಅಲ್ಲಿನ ಸಾಂಸ್ಥಿಕ ಭ್ರಷ್ಟಾಚಾರ ಕಂಡು ರೋಸಿ, ಪ್ರತಿಭಟಿಸಿ ಹೊರ ಸಿಡಿದಿದ್ದರು. ಅದರ ವಿವರಗಳನ್ನೆಲ್ಲ ಶಂಲಿಂಗೌಗೆ ಹೇಳುತ್ತಾ ಸಂಸ್ಥೆಯ ಮುಖ್ಯಸ್ಥೆಯ ಹೆಸರು ಮತ್ತು () ಪಾತ್ರವನ್ನು ಬಹುವಿವರಗಳಲ್ಲಿ ಹೇಳಿ ಹೋದರು. ಇವುಗಳೆಲ್ಲ ಕಾನೂನಿನ ಪರಿಧಿಯೊಳಗೆ ಸಿದ್ಧವಾಗುವವರೆಗೆ ಗೋಪ್ಯತೆ ಕಾಯುವುದು ಆವಶ್ಯಕ ಎನ್ನುವುದು ಸನ್ನಿಯವರಿಗೂ ಶಂಲಿಂಗೌಗೂ ತಿಳಿದೇ ಇತ್ತು. ಮಾರಣೇ ದಿನ ಬೆಳಗ್ಗೆ ನನ್ನಂಗಡಿಯಲ್ಲಿ ವಿಶೇಷ ಕೆಲಸವೇನೂ ಇಲ್ಲದಾಗ ನನಗೆ ಸನ್ನಿಯವರು ಹೇಳಿದ್ದೆಲ್ಲಾ ನೆನಪಿಗೆ ಬಂದು ಜೊತೆಗೆ ಶಂಲಿಂಗೌ ಕಾಲೆಳೆಯುವ ಉತ್ಸಾಹ ಬಂತು. ಸರಿ, ಅವರ ವೈಯಕ್ತಿಕ ದೂರವಾಣಿ ಸಂಖ್ಯೆ ತಿರುಗಿಸಿದೆ. ಅತ್ತಣಿಂದ ಪರಿಚಿತ ಧ್ವನಿ ಕೇಳಿದ್ದೇ ನಾನು ಹೆಣ್ಣು ಧ್ವನಿಯಲ್ಲಿ (ಕಳ್ಳಸ್ವರ) ಗುಡ್ ಮಾರ್ನಿಂಗ್ ಮಿ. ಎಸಿ ಸಾರ್. ಆಮ್ - (ಸ್ವಯಂಸೇವಾಸಂಸ್ಥೆಯ ವರಿಷ್ಠೆಯ ಹೆಸರು ಹೇಳಿ) ಸ್ಪೀಕಿಂಗ್. ಹರ್ಡ್ ದಟ್ ಮಿ. ಸನ್ನಿ ತರಪ್ಪನ್ ಹ್ಯಾಡ್ ಮೆಟ್ ಯು ಎಸ್ಟರ್ಡೇ. ಅಂಡ್ ವಾಟ್ ಡಿಡ್ ಹೀ ಸೇ ಅಬೌಟ್ ಅವರ್ ಇನ್ಸ್ಟಿಟ್ಯೂಷನ್? ಅತ್ತ ವೃತ್ತಿರಂಗದಲ್ಲಿನ್ನೂ ಮೊದಲ ಹೆಜ್ಜೆಗಳನ್ನು ಇಡುತ್ತಿದ್ದ ಶಂಲಿಂಗೌ ಗಾಬರಿಗೆಟ್ಟದ್ದನ್ನು ನಾನು ಊಹಿಸಬಲ್ಲವನಾಗಿದ್ದೆ. ಅದರ ಸಮರ್ಥ ಅಭಿವ್ಯಕ್ತಿಯಾಗಿ ದೂರವಾಣಿಯಲ್ಲಿ ಅವರು ಏನೋ ತಡವರಿಸಿದರು. ನಾನು ಹುಡುಗಾಟಿಕೆಯನ್ನು ಮುಂದುವರಿಸದೆ ನಿಜಧ್ವನಿಯಲ್ಲಿ ಗಹಗಹಿಸಿ ನಕ್ಕು ಪರಿಚಯ ಹೇಳಿಕೊಂಡೆ. ಅತ್ತಣಿಂದ ಥೂ ನಿಮ್ಮಾ ಮಾತಿನೊಡನೆ ಚರವಾಣಿ ಕುಕ್ಕಿದ ಶಬ್ದ ಕೇಳಿತು. ರಾತ್ರಿ ಊಟದ ಸಮಯದಲ್ಲಿ ಸಿಕ್ಕಾಗ ಅವರ ಗಾಬರಿ, ಕೋಪ ಎಲ್ಲಾ ತಿಳಿಯಾಗಿತ್ತು. ಅವರು ಅನುಭವಿಸಿದ ಮುಜುಗರವನ್ನು ಮನಸ್ವೀ ನಗೆಯೊಡನೆ ಇಬ್ಬರೂ ಹಂಚಿಕೊಂಡು ಹಗುರಾದೆವು. (ಸನ್ನಿಯವರ ಆರೋಪ ಮತ್ತು ಭ್ರಷ್ಟಾಚಾರದ ತನಿಖೆ ಮುಂತಾದವು ನಮ್ಮ ಗೆಳೆತನದ ಆವರಣದೊಳಗಿರಲಿಲ್ಲ, ಮುಂದೆ ನಾನದನ್ನು ವಿಚಾರಿಸಲೂ ಇಲ್ಲ.)  

ಕಾಲಕ್ಕೇ ಶಂಲಿಂಗೌಗೆ ಇಲಾಖಾ ಪರಿಚಯಗಳಲ್ಲಿ ದಕ್ಕಿದ ಇನ್ನೋರ್ವ ಗೆಳೆಯ ವಾಣಿಜ್ಯ ಕರ ಇಲಾಖೆಯ ವಸಂತರಾವ್ ಕೂಡಾ ನಮ್ಮ ಜೊತೆ ಸೇರುವುದಿತ್ತು.  ವಸಂತರಾವ್ ಕೆಲವೊಮ್ಮೆ ಆದಿತ್ಯವಾರಗಳಂದೂ ಕರ-ತನಿಖಾ ಉದ್ದೇಶಕ್ಕೆ  ಜಿಲ್ಲೆಯೊಳಗೆ ಉದ್ದದ ಜೀಪ್ ಯಾನಕ್ಕೆ ಹೊರಟಾಗ ನಾವಿಬ್ಬರೂ ತಿರುಗುವ ಚಪಲಕ್ಕೆ ಜೊತೆಗೊಡುವುದಿತ್ತು. ಅಂದು ನಾವು ಮೂವರೂ ಮದುವೆಯಾಗದವರೇ. ಆಗೆಲ್ಲ ಪ್ರಾಯ ಸಹಜವಾದ ಶುದ್ಧ ಮಾತಿನ ಚಪಲಗಳಲ್ಲಿ ಶಂಲಿಂಗೌ ಮತ್ತು ವಸಂತರಾವ್ ಕಣ್ಣಿಗೆ ಬಿದ್ದ ತರುಣಿಯರ ಸೌಂದರ್ಯ ಅಳೆಯಲು ಒಂದು ಮಾನಕ ನಿಶ್ಚೈಸಿದ್ದರು. ಸಾಹಿತ್ಯ ವಿದ್ಯಾರ್ಥಿಗಳಿಗೆ ಗ್ರೀಕ್ ಪುರಾಣದಲ್ಲಿ ಹೆಲೆನಳನ್ನು ಗೆಲ್ಲಲು ಅದೆಷ್ಟೋ ಹಡಗುಗಳು ಮುಳುಗಿದ್ದು ಒಂದು ರೂಪಕವೇ ಆಗಿತ್ತು. ಇವರಿಬ್ಬರೂ ಕುಶಾಲು ಉಡಾಯಿಸುತ್ತಅವಳಿಗೆ ನಾನು ಹತ್ತು ಹಡಗು ಮುಳುಗಿಸಬಲ್ಲೆ, ಇವಳಿಗೆ ಎಂಟೇ ಸಾಕು ಎಂಬಿತ್ಯಾದಿ ಸಂಭಾಷಣೆಗಳನ್ನು ನಾನು (ಹೇಳುವ ಧೈರ್ಯಸಾಲದೇ) ಮೌನವಾಗಿಯೇ ಚಪ್ಪರಿಸುತ್ತಿದ್ದೆ!

ಶಂಲಿಂಗೌ ಯೋಗ್ಯತಾ ಹಂತದಲ್ಲಿ ಐಯೇಎಸ್ಸಿಗೇರಿದ್ದು, ವಿವಿಧ ಇಲಾಖೆಗಳ ವರಿಷ್ಠತನವನ್ನು ನಿಭಾಯಿಸಿದ್ದೆಲ್ಲವನ್ನು ನಾನು ಅಭಿಮಾನದಲ್ಲೇ ಗಮನಿಸುತ್ತಿದ್ದೆ. ಅವರು ವೃತ್ತಿ ಅಗತ್ಯಗಳಿಗೆ ಮಂಗಳೂರಿಗೆ ಬಂದಾಗ ಬಿಡುವು ಮಾಡಿಕೊಂಡು ಅಂಗಡಿಗೆ ಭೇಟಿಕೊಟ್ಟು ಗೆಳೆತನವನ್ನು ನವೀಕರಿಸುವುದು ಮರೆತವರಲ್ಲ. ಹಾಗೆಂದು ಅವರ ಅಧಿಕಾರದ ಲಾಭವನ್ನು ನಾವು ಗೆಳೆತನಕ್ಕೆ ಎಂದೂ ಬದಲಿಯಾಗಿ ಉಪಯೋಗಿಸಿಕೊಂಡದ್ದೂ ಇಲ್ಲ. ಇದಕ್ಕೊಂದು ಸಣ್ಣ ಉದಾಹರಣೆಯನ್ನು ಇಲ್ಲಿ ಉಲ್ಲೇಖಿಸುವುದು ಅವಶ್ಯ: ಶಂಲಿಂಗೌ ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆಯ ವರಿಷ್ಠರಾಗಿದ್ದಾಗ ಕರ್ತವ್ಯದ ಮೇಲೇ ಮಂಗಳೂರಿಗೆ ಬಂದಿದ್ದವರು ಬಿಡು ಸಮಯದಲ್ಲಿ ನನ್ನಂಗಡಿಗೆ ಬಂದಿದ್ದರು. ಆಗಷ್ಟೇ ನನ್ನ ಮೋಟಾರ್ ಸೈಕಲ್ ಸಾಹಸಯಾನಗಳ ಪ್ರವಾಸ ಕಥನ ಚಕ್ರವರ್ತಿಗಳು ಪ್ರಕಟವಾಗಿತ್ತು. ಗೆಳೆತನದ ವಿಶ್ವಾಸದಲ್ಲಿ ನಾನು ಒಂದು ಪ್ರತಿ ಅವರಿಗೆ ಕೊಟ್ಟೆ. ಅವರು ಅದರ ಉಪಯುಕ್ತತೆಯನ್ನು ಪ್ರವಾಸೋದ್ಯಮ ಇಲಾಖೆಯ ವರಿಷ್ಠನಾಗಿಯೂ ಗುರುತಿಸಿದರು. ಸಹಜವಾಗಿ ಇಲಾಖೆಯ ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ನೌಕರರ ತರಬೇತಿನ ಒಂದು ಸಂಪನ್ಮೂಲ ಗ್ರಂಥವಾಗಿಯೂ ದೊಡ್ಡ ಸಂಖ್ಯೆಯಲ್ಲಿ ಕೊಳ್ಳಲು ಉತ್ಸುಕರಾದರು. ಆದರೆ ವೇಳೆಗೆ ನಾನು ಸರಕಾರದ ಸಗಟು ಖರೀದಿ ತತ್ತ್ವದ (ಮುಖ್ಯವಾಗಿ ರಾಜ್ಯ ಗ್ರಂಥಾಲಯ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳಿಗೆ ಸಂಬಂಧಿಸಿದಂತೆ) ಕಟು ಟೀಕಾಕಾರನಾಗಿದ್ದೆ. ನಾವು ಮುಂದುವರಿದಿದ್ದರೆ ಉದ್ದೇಶ ಮತ್ತು ಕಲಾಪಗಳೆಲ್ಲ ಪ್ರಾಮಾಣಿಕ ಹಾಗೂ ಪಾರದರ್ಶಕವೇ ಇರುತ್ತಿತ್ತು. ಆದರೆ ಆಡಿಕೊಳ್ಳುವವರ ಬಾಯಿಗೆ ತಾಂಬೂಲವಾಗಲು ಇಚ್ಛಿಸದೇ ಬೇಡಿಕೆಯನ್ನು ನಿರಾಕರಿಸಿದೆ. ಗೆಳೆತನಕ್ಕೆ ವ್ಯಾವಹಾರಿಕ ಜಾಣ್ಮೆಯಕಳಂಕ ತಟ್ಟಲೇ ಇಲ್ಲ. 

ನಾನು ಕಳೆದ ಆರು ವರ್ಷಗಳಿಂದ ನನ್ನದೇ ಜಾಲತಾಣ (www.athreebook.com) ನಡೆಸುತ್ತಿದ್ದೇನೆ ಮತ್ತು ನೆನಪುಗಳ ಯಾನದಲ್ಲಿ ಶಂಲಿಂಗೌ ಕೆಲವು ಸಲ ಉಲ್ಲೇಖಗೊಂಡದ್ದೂ ಇದೆ. ಅವುಗಳಲ್ಲಿ ಮುಖ್ಯವಾಗಿ ಕೊಡಗು ಸೈಕಲ್ ಯಾತ್ರೆ, ಮಳೆಗಾಲದ ಜಮಾಲಾಬಾದ್ ಭೇಟಿ ಮತ್ತು ಮಹಾರಾಜಾ ಕಾಲೇಜು ನೆನಪುಗಳು (ವಿವರಗಳಿಗೆ ಮೇಲಿನುಲ್ಲೇಖಗಳಲ್ಲಿ ಸೇತು ಕೊಟ್ಟಿದ್ದೇನೆ - ಗಮನಿಸಿ). ಅಂಥಲ್ಲೆಲ್ಲಾ ನಾನು ಸ್ವತಂತ್ರ ವೃತ್ತಿಪರನಾದ್ದರಿಂದ ಇವರನ್ನು ಕೆಣಕಿ ಕಾಡಿದ್ದುಂಟು. ಶಂಲಿಂಗೌ ಅಧಿಕಾರ ದೊಡ್ಡದೇ. ಆದರೆ ತಾಪೇದಾರಿಯ ನಿಬಂಧನೆಗಳೂ ಸೂಕ್ಷ್ಮ ಆದದ್ದಕ್ಕೋ ಏನೋ ಇವರು ಹೆಚ್ಚುಕಡಿಮೆ ಪ್ರತಿಕ್ರಿಯಿಸುತ್ತಲೇ ಇರಲಿಲ್ಲ. ಹಾಗೆಂದು ಗೆಳೆಯನನ್ನು, ಆತನ ಚಟುವಟಿಕೆಗಳನ್ನು ಅಲಕ್ಷಿಸಿದ್ದರೆಂದೂ ನನಗನ್ನಿಸಲಿಲ್ಲ! ಅವರ ಮಗಳ ಮದುವೆಯ ಒತ್ತಾಯದ ಆಮಂತ್ರಣ ಪತ್ರಿಕೆ ನನಗೆ ಬಂದಿತ್ತು. ನನ್ನ ವೃತ್ತಿಯ ನಿಬಂಧನೆಯಲ್ಲಿ ಕೇವಲ ಶುಭಾಶಯ ಪತ್ರ ಮಾತ್ರ ಕಳಿಸಿದ್ದೆ, ಒಳ್ಳೇ ಮನಸ್ಸಿನಿಂದ ಅವರು ಒಪ್ಪಿಕೊಂಡಿದ್ದರು. ಮೊನ್ನೆ ಮೊನ್ನೆ ನನ್ನ ಮಗನ (ಅಭಯಸಿಂಹ) ನಿರ್ದೇಶನದಸಕ್ಕರೆ ಸಿನಿಮಾ ಬಿಡುಗಡೆಯಾದಾಗ ವೈಯಕ್ತಿಕ ಅಭಿನಂದನೆ ಮತ್ತು ಸಿನಿಮಾ ನೋಡಿ ಪ್ರಶಂಸೆಯನ್ನೂ ಶಂಲಿಂಗೌ ಸ್ವಂತ ಉಮೇದಿನಲ್ಲಿ ಕೊಟ್ಟಿದ್ದರು. ನನ್ನ ಸೈಕಲ್ ಕುರಿತ ಜಾಲಲೇಖನದಲ್ಲಿ ಕೊಡಗಿನ ಸಾಹಸ ಯಾತ್ರೆಯ ಅನುಭವದ ವಿವರಗಳನ್ನು ಪ್ರತಿಕ್ರಿಯಾ ಅಂಕಣದಲ್ಲಿ ತುಂಬಲು ಶಂಲಿಂಗೌಗೆ ಸಾರ್ವಜನಿಕವಾಗಿಯೇ ಕರೆ ಕೊಟ್ಟಿದ್ದೆ. ನನ್ನ ಮಹಾರಾಜಾ ಕಾಲೇಜಿನ ನೆನಪುಗಳನ್ನು ಪೋಣಿಸುವಾಗಲೂ ಇವರಿಗೆ ನೆನಪುಗಳನ್ನು ದಾಖಲಿಸಲು ಹೊಸದಾಗಿ ಒತ್ತಡ ತಂದಿದ್ದೆ. ಕೆಲಸದ ಒತ್ತಡವೋ ಕಾಲಾಂತರದ ಮರೆವೋಸಾಯೇಬ್ರು ಉತ್ತರಿಸಲೇ ಇಲ್ಲ.

ಈಗ ಶಂಲಿಂಗೌ ನಿವೃತ್ತಿ ಮತ್ತು ಅಭಿನಂದನಗ್ರಂಥದ ಹೆಸರಿನಲ್ಲಿ ಮತ್ತೆ ನಾನೇ ಚಾರಣಾನುಭವಗಳನ್ನೂ ವೈಯಕ್ತಿಕ ಒಡನಾಟದ ರಸಪ್ರಸಂಗಗಳನ್ನೂ ಬರೆಯುವಂತಾಯ್ತು. --೨೦೧೪ರಂದು ಬೆಂಗಳೂರಿನಲ್ಲಿ ಅಭಿನಂದನ ಸಭೆ ನಡೆಯುವುದೆಂದು ನಿಗದಿಯಾಯ್ತು, ನನಗೆ ಒತ್ತಾಯದ ಆಮಂತ್ರಣವೂ ಬಂದಿತ್ತು. ಆದರೆ ಮಂಗಳೂರು ಬಿಡಲಾಗದ ಅನಾನುಕೂಲತೆಗೆ ಸಿಕ್ಕಿಕೊಂಡೆ, ಕೇವಲ ಪತ್ರಿಕಾ ವರದಿಗಳಿಂದ ಸಮಾಧಾನಪಟ್ಟುಕೊಂಡೆ.

ಈಗ ಬಂದ ಪುಟ್ಟ ಅಭಿನಂದನ ಗ್ರಂಥ - ನೆನಪು ಚಿತ್ತಾರ (ಇದು ಮಾರಾಟಕ್ಕಿಲ್ಲ. ಪ್ರತಿ ಬೇಕಾದವರು ನೇರ ಶಂಲಿಂಗೌ ಅಭಿನಂದನ ಸಮಿತಿಯನ್ನೇ ಸಂಪರ್ಕಿಸಬೇಕು. ಮಿಂಚಂಚೆ ವಿಳಾಸ: ) ಇದರ ಮುಖ್ಯ ಭಾಗ ಶಂಲಿಂಗೌ ವೃತ್ತಿ ಜೀವನದ ಸಂಕ್ಷಿಪ್ತ ಪರಿಚಯವನ್ನು ಅವರದೇ ಮಾತುಗಳಲ್ಲಿ ಹಿಡಿದುಕೊಡುತ್ತದೆ. ವ್ಯಕ್ತಿ ಕುಟುಂಬ ಬಿಟ್ಟು ಪೂರ್ಣನಲ್ಲ ಎಂಬ ಮಾತನ್ನು ನೆನಪಿನಲ್ಲಿಟ್ಟುಕೊಂಡು ನಾನು ಮಾತು ಬರೆದಿದ್ದೇನೆ. ಈಗ ಬಂದಿರುವ ಕಿರು ಆತ್ಮಕಥೆಯಲ್ಲಿ ಶಂಲಿಂಗೌ ತನ್ನ ಹಿನ್ನೆಲೆಯನ್ನು ಚಿತ್ರಿಸುವ ನೆಪದಲ್ಲಿ ತಂದೆ, ತಾಯಿ, ಒಡಹುಟ್ಟಿದವರ (ಓರ್ವ ಭಾವನ), ಸೋದರ ಮಾವನ, ಶಾಲಾ ಮೇಷ್ಟ್ರುಗಳ ಉಲ್ಲೇಖಗಳೇನೋ ಕೊಟ್ಟಿದ್ದಾರೆ. ಆದರೆ ನೇರ ಜೀವನ ಸಂಗಾತಿಯ, ಮಗಳು-ಅಳಿಯರ ಉಲ್ಲೇಖ ಒಂದು ವಾಕ್ಯದಲ್ಲಿ ಮಾತ್ರ ಹಾದುಹೋಗಿದೆ. ಆಗಬಾರದ ದುರಂತ ಇವರ ಮಗನ ಜೀವವನ್ನೇ ಬಲಿ ತೆಗೆದುಕೊಂಡಿತು. ಕಾರಣದಿಂದಷ್ಟೆ ಆತನ ಉಲ್ಲೇಖ ಇಲ್ಲಿ ತುಸು ಹೆಚ್ಚಿನ ವಿವರಗಳಲ್ಲಿದೆ. ಪುಸ್ತಕದ ಸಂಪಾದಕ - ಅಶೋಕ ಕೆಂಗೇರಿಯವರು, ಮುನ್ನುಡಿಯಲ್ಲಿ ಹೇಳಿಕೊಂಡಂತೆ ಈಗ ಬಂದಿರುವುದು ಕೇವಲ ಅನೌಪಚಾರಿಕ ಮಾತುಗಳ ದಾಖಲೀಕರಣ ಮಾತ್ರ. ಹಾಗಾಗಿ ಯಾವ ಉದ್ದೇಶವೂ ಇಲ್ಲದೆ ಇಂಥ ಕೊರತೆಗಳು ಸಹಜ. ಇನ್ನಾದರೂ ಶಂಲಿಂಗೌ ಕಥನದ ಹಂದರಕ್ಕೆ ರಕ್ತ, ಮಾಂಸಗಳನ್ನು ತುಂಬಿ, ಜೀವ ಊದಿ, ವಿಸ್ತೃತ ಆತ್ಮಕಥನವನ್ನು, ಇನ್ನೂ ಮುಖ್ಯವಾಗಿ ತನ್ನ ವ್ಯಕ್ತಿ ಜೀವನದ ವಿಕಾಸಪಥವನ್ನು ಬರೆಯಬೇಕೆಂದು ಆಶಿಸುತ್ತೇನೆ. ಮುದ್ರಿತ ಪುಸ್ತಕದ ದುಂದು ಮತ್ತು ಮಿತಿ (ಪುಟ, ಚಿತ್ರ, ಪ್ರತಿಗಳೆಷ್ಟು, ಉಚಿತವಾಗಿ ಆದರೂ ಆಸಕ್ತರಿಗೆ ಮುಟ್ಟಿಸುವುದು - ವಿತರಣೆ, ಇತ್ಯಾದಿ) ಅನುಲಕ್ಷಿಸಿ ಅಂತರ್ಜಾಲದ ಮೂಲಕ ವಿ-ಪುಸ್ತಕ ಮಾಡಿದರೆ ಸಾಕು. ಆಸಕ್ತರು ದೇಶ ಕಾಲಾತೀತವಾಗಿ ಓದಿಕೊಳ್ಳಬಲ್ಲರು, ಹಂಚಿಕೊಳ್ಳಬಲ್ಲರು.

ತಾಪೇದಾರಿಯಲ್ಲಿ ಯಾರುಯಾರದೋ ಟಿಪ್ಪಣಿಗಳಿಗೆ ಯಾವುಯಾವುದೋ ನಿಬಂಧನೆಗಳ ಕಟ್ಟುಪಾಡಿನಲ್ಲಿಸಹಿಸಿಕೊಳ್ಳುತ್ತಿದ್ದವರು ಶಂಲಿಂಗೌ ಐಯೇಎಸ್ಸು. ನಿವೃತ್ತಿಯೊಡನೆ ಒದಗುವ ಮುಕ್ತ ವಾತಾವರಣದಲ್ಲಾದರೂ ಶಂಲಿಂಗೌ (ಸ್ನಾತಕ ಪದವಿಯಲ್ಲಿ ಐಚ್ಛಿಕ ಕನ್ನಡ ಸೇರಿದಂತೆ) ತಾನು ಸಾಹಿತ್ಯ ಎಂ. ಎಂಬುದನ್ನು ನೆನಪಿಸಿಕೊಂಡು ಸ್ವತಂತ್ರ ಓದುವಣಿಗೆ, ಬರವಣಿಗೆಗಿಳಿಯಲಿ. ಎಲ್ಲಕ್ಕೂ ಮುಖ್ಯವಾಗಿ ಆಡಳಿತದ ಒಳಹೊರಗಿನ ಅನುಭವದಲ್ಲಿ ವಿಸ್ತೃತ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತಾಗಲಿ ಎಂದೂ ಹಾರೈಸುತ್ತೇನೆ.

5 comments:

 1. ಗೆಳತನವನ್ನು ದೀರ್ಘಕಾಲ ಉಳಿಸಿಕೊಳ್ಳುವುದು ಸುಲಭಸಾಧ್ಯವಲ್ಲ. ನಿಮ್ಮಿಬ್ಬರ ವಿಷಯದಲ್ಲಿ ಸ್ವಾರ್ಥರಹಿತ ಮನೋಭಾವವೇ ಇದಕ್ಕೆ ಕಾರಣ ಎಂಬುದನ್ನು 'ಗೆಳೆಯ ಮುಖೇಶ' ಲೇಖನ ತಿಳಿಸುತ್ತದೆ. ಬೆಳೆಯುವ ಪೈರನ್ನು ಮೊಳಕೆಯಲ್ಲೆ ನೋಡು ಎಂಬಂತೆ ಅಶೋಕವರ್ಧನರ ಕಿರಿಯ ವಯಸ್ಸಿನ ಸಾಹಸ ಪ್ರವೃತ್ತಿ ಬಗ್ಗೆಯೂ ತಿಳಿಯುತ್ತದೆ. ರಾಜ್ಯ ಸರ್ಕಾರದ ಕ್ರಿಯಾಶೀಲ ಅಧಿಕಾರಿಯಾಗಿದ್ದ ಶಂಕರಲೀಂಗೇಗೌಡ ಅವರ ನಿವೃತ್ತ ಜೀವನ ಸುಖಕರವಾಗಿರಲಿ, ತಮ್ಮ ಸರ್ಕಾರಿ ಸೇವೆಯ ಅನುಭಗಳನ್ನು ಬರಹರೂಪಕ್ಕಿಸಲಿ...

  ReplyDelete
 2. ಮೂರ್ತಿದೇರಾಜೆ24 January, 2014 15:20

  ಅಶೋಕ್ .... ಚಂದ ಆಗಿದೆ ಈ ಬರಹ .... ಕಾಲೇಜಿನಲ್ಲಿದ್ದಾಗ ನನಗೆ ಅವರ ಒಡನಾಟವೇನೂ ಹೆಚ್ಚಿರಲಿಲ್ಲ .... ಒಂದು ಮುಗುಳ್ನಗೆ ಅಥವಾ "ಹಲೋ" ಹೇಳುವ ತನಕ ಇದ್ದಿರಬಹುದು. ಅವರು ಮಂಗಳೂರಿನಲ್ಲಿದ್ದಾಗ ...ನೀವೇ ಒಮ್ಮೆ ಹೇಳಿದ್ದಿದೆ ... " .... ಅದೇ ನಮ್ಮ ಕ್ಲಾಸ್ ಮೇಟ್ ಶಂಕರಲಿಂಗೇ ಗೌಡರು .... ಒಂದ್ಸಾರಿ ಹೋಗಿ ಭೇಟಿಯಾಗಿ ...."ಅಂತ .... ದೊಡ್ಡ ಅಧಿಕಾರಿಯಾದ್ದರಿಂದ ನಾನೇ ಯಾಕೋ ಹಿಂಜರಿದಿದ್ದೆ ... ಇರಲಿ .... ಅವರು ಕಾಲೇಜಿನಲ್ಲೂ ನಿಮಗೆ ಇಷ್ಟು ಹತ್ತಿರದವರು ಅಂತ ಗೊತ್ತಿರಲಿಲ್ಲ .... ಅವರ ಬಗ್ಗೆಯೂ ಹೆಚ್ಚೇನೂ ಗೊತ್ತಿಲ್ಲ ...ಈಗ ಆ ಪುಸ್ತಕ ಓದಲೇ ಬೇಕೆನಿಸಿದ್ದು ಮಾತ್ರ ... ನಿಮ್ಮ ಈ ಆಪ್ತ ಬರಹದ ಕಾರಣ .... ವಂದನೆಗಳು ......
  --- ಮೂರ್ತಿ

  ReplyDelete
 3. ಶಂಲಿಂಗೌ ರು ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆಯ ವರಿಷ್ಠರಾಗಿದ್ದಾಗ ನಿಮ್ಮ ಪ್ರವಾಸ ಕಥನ ‘ಚಕ್ರವರ್ತಿಗಳು’ ಇದನ್ನು ಇಲಾಖೆಯ ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ನೌಕರರ ತರಬೇತಿನ ಒಂದು ಸಂಪನ್ಮೂಲ ಗ್ರಂಥವಾಗಿಯೂ ದೊಡ್ಡ ಸಂಖ್ಯೆಯಲ್ಲಿ ಕೊಳ್ಳಲು ಉತ್ಸುಕರಾದಾಗಲೂ ನೀವು ಅವರ ಬೇಡಿಕೆಯನ್ನು ನಿರಾಕರಿದ ಘಟನೆ ನಿಮ್ಮಿಬ್ಬರ ಗೆಳೆತನಕ್ಕೆ ಯಾವ ಚ್ಯುತಿಯೂ ಬಾರದೆ ಇರುವ ಹಾಗೆ ಮಾಡಿದ್ದಲ್ಲದೆ ನಿಮ್ಮಿಬ್ಬರ ಗೆಳೆತನದ ಆಳವನ್ನೂ ಎತ್ತಿ ತೋರಿಸುತ್ತದೆ. ಶಂಲಿಂಗೌ ಇವರ ಪರಿಚಯ ಹಾಗೂ ಅವರೊಡನೆ ನಿಮಗಿರುವ ಸಂಪರ್ಕ ಓದುಗರಿಗೆ ನೀಡಿದ್ದಕ್ಕೆ ಧನ್ಯವಾದಗಳು.

  ReplyDelete
 4. shamlimgowra bagge nanna onderadu matugalu.mangalurinalliddaga omme gowdarondige shataraj ke khiladi nodalu hogidde.aa cinemada nade tumba nidhana gatiyadu.awarige ii nidhana gati sahisalagalilla,eddu horateebittaru.kelasadallu ashte kelasadallu ashte kuudale adu aagabeku.nanna gelayana tamma eradane mahadiyinda biddu sattidda (maanasika rogi) aaga agatyaviruwa death certificate annu awaru kodisiddaru.ellello suttadi matte mangalurige banda gowdaru nanu canara collegina bali kaalnadigeyalliddaga carannu (sarakaari car) nillisi matanaadi hodaru.hammu-bimmu illada nirahankaari gowdaru.nimma vadanaatada bagge tilisiddakke dhanyavaadagalu.k l reddy

  ReplyDelete
 5. ಮುಕೇಶರ ವಿದಾಯ ಭಾಷಣಕ್ಕಾಗಿ ಇಲ್ಲಿ ಚಿಟಿಕೆ ಹೊಡೆಯಿರಿ: https://www.youtube.com/watch?v=gdykkVa42Uc

  ReplyDelete